ಸಂಪಾದಕರ ಟಿಪ್ಪಣಿ: ಇದು ‘Let Them Eat Rice’ (ಅವರೂ ಅನ್ನ ತಿನ್ನಲಿ) ಎನ್ನುವ ತಮಿಳುನಾಡಿನ ಏಳು ಬೆಳೆಗಳ ಕುರಿತ ಲೇಖನ-ವರದಿ ಸರಣಿಯ ಮೊದಲ ಲೇಖನ. ಪರಿ ಮುಂದಿನ ಎರಡು ವರ್ಷಗಳಲ್ಲಿ ಒಟ್ಟು 21 ಬಹುಮಾಧ್ಯಮ  ವರದಿಗಳನ್ನು ಈ ಸರಣಿಯಡಿ ಪ್ರಕಟಿಸಲಿದೆ. ಈ ಸರಣಿಯು ರೈತರ ಬದುಕನ್ನು ಅವರ ಬೆಳೆಗಳ ಜಗತ್ತಿನ ಮೂಲಕ ನೋಡಲು ಪ್ರಯತ್ನಿಸುತ್ತದೆ, ಬೆಂಗಳೂರಿನ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುದಾನ ಈ ಸರಣಿಗೆ ಬೆಂಬಲ ನೀಡಿದೆ .

ಹೊಂಬಣ್ಣದ ಸೂರ್ಯನು ತೂತುಕುಡಿಯನ್ನು ಬೆಳಗಲು ಆರಂಬಿಸುವ ಮೊದಲೇ ರಾಣಿ ತನ್ನ ಕೆಲಸದ ಸ್ಥಳದಲ್ಲಿರುತ್ತಾರೆ. ಅಲ್ಲಿ ಅವರು ಉದ್ದನೆಯ ಮರದ ಸಲಕರಣೆಯ ಸಹಾಯದಿಂದ ಪ್ರತಿ ಅಡುಗೆ ಮನೆಯಲ್ಲೂ ಸಾಮಾನ್ಯವಾದ ಆದರೆ ಅಷ್ಟೇ ಅಗತ್ಯವಾದ ಉಪ್ಪನ್ನು ಉಪ್ಪಿನ ಕೊಳಗಳಿಂದ ಮೇಲೆಳೆಯತೊಡಗುತ್ತಾರೆ.

ಅವರು ತಾನು ಕೆಲಸ ಮಾಡುವ ಆಯತಾಕಾರದ ಉಪ್ಪಿನ ಕೆರೆಯ ತಳದಲ್ಲಿ ಕುಳಿತ ಒದ್ದೆ ಉಪ್ಪನ್ನು ಎಳೆದು ಒಂದೆಡೆರಾಶಿ ಮಾಡುತ್ತಾರೆ. ಇದನ್ನು ಎಳೆಯಲು ಪದೇ ಪದೇ ಹಿಂದೆಮುಂದೆ ತಿರುಗಾಡಬೇಕಿರುತ್ತದೆ. ಅವರು ಹಾಗೆ ದಣಿಯುತ್ತಾ ಬಿಳಿಯ ಹರಳಿನಂತಹ ಉಪ್ಪನ್ನು ಎಳೆದು ದೊಡ್ಡ ರಾಶಿ ಮಾಡುತ್ತಾರೆ. ಅವರ ಕೆಲಸವು ಬಹಳ ದಣಿವು ತರಿಸುವಂತಹದ್ದು. 60 ವಯಸ್ಸಿನ ಅವರು ಸುಮಾರು 10 ಕೇಜಿಗಳಷ್ಟು ಉಪ್ಪನ್ನು ಎಳೆದು ತೀರದಲ್ಲಿ ಒಟ್ಟಬೇಕು. ಇದು ಅವರ ದೇಹ ತೂಕದ ನಾಲ್ಕನೇ ಒಂದು ಭಾಗಕ್ಕಿಂತ ಸ್ವಲ್ಪ ಮಾತ್ರವೇ ಕಡಿಮೆ.

120x 40- ಅಡಿ ಅಗಲದ ಕೆರೆಯ ತಳದಲ್ಲಿ ಬೆಳಗಿನ ನಸು ಹಳದಿ ಬೆಳಕಿನಲ್ಲಿ ಅವರ ಮತ್ತು ನೀರಿನ ನೆರಳನ್ನು ಬಿಟ್ಟು ಇನ್ನೇನೂ ಕಾಣದಂತೆ ಸ್ವಚ್ಛಗೊಳಿಸುತ್ತಾರೆ. ಇಷ್ಟು ಮುಗಿಯುವ ತನಕ ಅವರು ಒಂದಿಷ್ಟೂ ವಿರಮಿಸುವುದಿಲ್ಲ. ಈ ಉಪ್ಪು ನೀರಿನ ಕೆರೆಯೇ ಕಳೆದ 52 ವರ್ಷಗಳಿಂದ ಕೆಲಸ ಮಾಡುವ ಸ್ಥಳ. ಈ ಮೊದಲು ಇದು ಅವರ ಅಪ್ಪನ ಕೆಲಸದ ಸ್ಥಳವಾಗಿತ್ತು. ಈಗ ಮಗನೂ ಅಲ್ಲೇ ಕೆಲಸ ಮಾಡುತ್ತಾರೆ. ಈ ಅದೇ ಸ್ಥಳದಲ್ಲಿ ಕುಳಿತು ರಾಣಿ ತನ್ನ ಬದುಕಿನ ಕಥೆಯನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ಕಥೆ ಅಲ್ಲಿನ 25,000 ಎಕರೆ ಪ್ರದೇಶದಲ್ಲಿ ಹರಡಿರುವ ಉಪ್ಪಿನ ಆಗರಗಳ ಕಾರ್ಮಿಕರ ಕಥೆಯೂ ಹೌದು.

ಪ್ರತಿ ವರ್ಷದ ಮಾರ್ಚ್‌ ತಿಂಗಳಿನಿಂದ ಅಕ್ಟೋಬರ್‌ ತನಕ ಈ ಕರಾವಳಿ ಜಿಲ್ಲೆಯಲ್ಲಿ ಒಳ್ಳೆಯ ಬಿಸಿಲು ಇರುತ್ತದೆಯಾದ್ದರಿಂದ ಅದು ಉಪ್ಪು ತಯಾರಿಸಲು ಸಕಾಲ. ಜೊತೆಗೆ ಆರು ತಿಂಗಳ ಕಾಲ ನಿರಂತರವಾಗಿ ಉಪ್ಪು ತಯಾರಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ಇದು ತಮಿಳುನಾಡಿನ ಅತಿದೊಡ್ಡ ಉತ್ಪಾದಕ ಜಿಲ್ಲೆಯಾಗಿ, ಮತ್ತು ರಾಜ್ಯವು ಕೂಡಾ 2.4 ದಶಲಕ್ಷ ಟನ್ ಅಥವಾ ಭಾರತದ ಉಪ್ಪಿನ ಸುಮಾರು ಶೇಕಡಾ 11ರಷ್ಟನ್ನು ಉತ್ಪಾದಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ. 16 ದಶಲಕ್ಷ ಟನ್‌ಗಳಿಗಿಂತ ಹೆಚ್ಚು ಅಥವಾ ದೇಶದ ವಾರ್ಷಿಕ ಸರಾಸರಿ 22 ದಶಲಕ್ಷ ಟನ್ ಉಪ್ಪಿನ ಉತ್ಪಾದನೆಯ ಶೇಕಡಾ 76ರಷ್ಟು ಉತ್ಪಾದಿಸುವ ಗುಜರಾತ್ ಮೊದಲ ಸ್ಥಾನದಲ್ಲಿದೆ. ಆ ರಾಷ್ಟ್ರೀಯ ಅಂಕಿಅಂಶವು 1947ಲ್ಲಿ ಉತ್ಪಾದಿಸಿದ 1.9 ಮೆಟ್ರಿಕ್ ಟನ್ ಉತ್ಪಾದನೆಗೆ ಹೋಲಿಸಿದರೆ ಒಂದು ದೊಡ್ಡ ಜಿಗಿತವಾಗಿದೆ.

ಅದು 2021ರ ಸೆಪ್ಟೆಂಬರ್‌ ತಿಂಗಳಿನ ಮಧ್ಯಭಾಗವಾಗಿತ್ತು. ಅಂದು ತೂತುಕುಡಿಯ ರಾಜಪಾಂಡಿ ನಗರದ ಉಪ್ಪಿನ ಆಗರಗಳಿಗೆ ʼಪರಿʼಯ ಮೊದಲ ಭೇಟಿಯಾಗಿತ್ತು. ರಾಣಿ ಮತ್ತು ಅವರ ಸಹೋದ್ಯೋಗಿಗಳು ಸಂಜೆಯ ಮಾತುಕತೆಗಾಗಿ ನಮ್ಮನ್ನು ಕೂಡಿಕೊಳ್ಳುವವರಿದ್ದರು. ಅವರೆಲ್ಲೂ ಬೇವಿನ ಮರವೊಂದರ ಕೆಳಗೆ ವೃತ್ತಾಕಾರದಲ್ಲಿ ಜೋಡಿಸಲಾದ ಕುರ್ಚಿಗಳ ಮೇಲೆ ಕುಳಿತು ನಮ್ಮೊಡನೆ ಮಾತನಾಡಲು ತಯಾರಾಗಿದ್ದರು. ಅವರಲ್ಲಿ ಕೆಲವರ ಮನೆಗಳು ಇಟ್ಟಿಗೆಯ ಗೋಡೆ ಮತ್ತು ಸಿಮೆಂಟು ಶೀಟುಗಳ ಛಾವಣಿ ಹೊಂದಿದ್ದರೆ ಉಳಿದವು ಹುಲ್ಲಿನ ಮಾಡನ್ನು ಹೊಂದಿದ್ದವು. ನಮ್ಮ ಹಿಂದೆ ಉಪ್ಪಿನ ಆಗರಗಳು ಅಥವಾ ʼಉಪ್ಪನ್ನು ತಯಾರಿಸುವ ಕೊಳಗಳಿದ್ದವುʼ. ಆ ಕೊಳಗಳ ಉದ್ದಕ್ಕೂ ರಸ್ತೆಗಳಿದ್ದವು. ಇದೇ ಜಗತ್ತು ಅವರ ಹಲವು ತಲೆಮಾರುಗಳ ದುಡಿಮೆಯ ಸ್ಥಳವಾಗಿ ಉಳಿದಿದೆ. ಸೂರ್ಯ ಅತ್ತ ತನ್ನ ಕೆಲಸ ಮುಗಿಸಿ ಮನೆಯತ್ತ ಹೊರಡುತ್ತಿದ್ದಂತೆ ಇತ್ತ ನಮ್ಮ ಮಾತುಕತೆ ಆರಂಭಗೊಂಡಿತು. ಈ ಮಾತುಕತೆಯಲ್ಲಿ ಉಪ್ಪಿನ ರಾಸಾಯನಿಕ ಹೆಸರಾದ ಸೋಡಿಯಂ ಕ್ಲೋರೈಡ್ (NaCl)ನ ತಯಾರಿಕೆಯ ಒಳಹೊರಗಿನ ಕುರಿತು ಪಾಠ ನಡೆಯಲಿತ್ತು.

At dawn, Thoothukudi's salt pan workers walk to their workplace, and get ready for the long hard hours ahead (Rani is on the extreme right in a brown shirt)
PHOTO • M. Palani Kumar
At dawn, Thoothukudi's salt pan workers walk to their workplace, and get ready for the long hard hours ahead (Rani is on the extreme right in a brown shirt)
PHOTO • M. Palani Kumar

ಹೊತ್ತು ಹುಟ್ಟುವ ಮೊದಲೇ ತೂತುಕುಡಿಯ ʼಉಪ್ಪಿನ ಆಗರದʼ ಕೆಲಸಗಾರರು ದೀರ್ಘ ಶ್ರಮದಾಯಕ ದಿನದ ದುಡಿಮೆಗಾಗಿ ತಮ್ಮ ಕೆಲಸದ ಸ್ಥಳದತ್ತ ಹೊರಟಿರುವುದು. (ಬಲ ತುದಿಯಲ್ಲಿ ಕಂದು ಬಣ್ಣದ ಅಂಗಿ ತೊಟ್ಟಿರುವವರೇ ರಾಣಿ )

ತೂತುಕುಡಿಯಲ್ಲಿ ಬೆಳೆಯಲಾಗುವ ಈ ʼಬೆಳೆʼಯನ್ನು ಕಡಲಿನಂಚಿನ ಮಣ್ಣಿನಡಿಯ ಉಪ್ಪುನೀರಿನಿಂದ ಕೊಯ್ಲು ಮಾಡಲಾಗುತ್ತದೆ. ಇದು ಹೆಚ್ಚು ಸಾಂದ್ರತೆಯಿರುವ ಉಪ್ಪಿನಂಶವನ್ನು ಹೊಂದಿರುತ್ತದೆ. ಈ ನೀರನ್ನು ಕೊಳವೆಬಾವಿಗಳಿಂದ ಎತ್ತಲಾಗುತ್ತದೆ. ರಾಣಿ ಮತ್ತು ಅವರ ಜೊತೆಗಾರರು ಕೆಲಸ ಮಾಡುವ 85 ಎಕರೆ ಉಪ್ಪಿನ ಆಗರಗಳಲ್ಲಿ ಏಳು ಬೋರ್‌ವೆಲ್‌ಗಳು ನಾಲ್ಕು ಇಂಚುಗಳಷ್ಟು ನೀರೆತ್ತುತ್ತಾ ಆ ಕೊಳಗಳನ್ನು ತುಂಬಿಸುತ್ತವೆ. (ಪ್ರತಿ ಎಕರೆ ಭೂಮಿಯನ್ನು ಸರಿಸುಮಾರು ಒಂಬತ್ತು ಕೊಳಗಳಾಗಿ ವಿಂಗಡಿಸಲಾಗಿದೆ ಮತ್ತು ಅವು ಸರಿಸುಮಾರು ನಾಲ್ಕು ಲಕ್ಷ ಲೀಟರ್‌ಗಳಷ್ಟು ನೀರನ್ನು ಹೊಂದಿವೆ. ಅಂದರೆ 40 ದೊಡ್ಡ, 10,000-ಲೀಟರ್ ನೀರಿನ ಟ್ಯಾಂಕರ್‌ಗಳು ಹಿಡಿದಿಟ್ಟುಕೊಳ್ಳುವಷ್ಟು ನೀರನ್ನು ಹಿಡಿದಿಟ್ಟುಕೊಳ್ಳುತ್ತವೆ.)

ತಮ್ಮ ಬದುಕಿನ 56 ವರ್ಷಗಳನ್ನು ಉಪ್ಪಿನ ಆಗರಗಳಲ್ಲಿ ಕೆಲಸ ಮಾಡುತ್ತಾ ಕಳೆದಿರುವ ಬಿ. ಆಂತೋಣಿ ಸಾಮಿ ಅವರಿಗಿಂತಲೂ ಚೆನ್ನಾಗಿ ಉಪ್ಪಾಳಂಗಳ(ಉಪ್ಪಿನ ಕೊಳಗಳು/ಉಪ್ಪಿನ ಗಣಿಗಳು) ವಿನ್ಯಾಸವನ್ನು ಅರ್ಥಮಾಡಿಕೊಳ್ಳಲು ಅಥವಾ ಆ ಕುರಿತು ವಿವರಿಸಲು ಕೆಲವರಿಗಷ್ಟೇ ಸಾಧ್ಯ. ಅಲ್ಲಿನ ಉಪ್ಪಿನ ಕೊಳಗಳ ನೀರನ್ನು ನಿರ್ವಹಿಸುವುದು ಅವರ ಕೆಲಸ. ಸಾಮಿ ಕೊಳಗಳನ್ನು ಗಂಡು, ಹೆಣ್ಣೆಂದು ವಿಂಗಡಿಸುತ್ತಾರೆ. ಅವುಗಳಲ್ಲಿ ಆಣ್‌ ಪಾದಿಗಳು (ಗಂಡು ಕೊಳಗಳು) 'ಬಾಷ್ಪೀಕರಣ' ಅಥವಾ ಕೃತಕ ಉಪ್ಪಿನ ಕೊಳವಾಗಿ ಕೆಲಸ ಮಾಡುತ್ತವೆ. ಇಲ್ಲಿ ನೀರನ್ನು ನೈಸರ್ಗಿಕವಾಗಿ ಆವಿಯಾಗಿಸಲಾಗುತ್ತದೆ. ಮತ್ತು ಪೆಣ್‌ ಪಾದಿಗಳು (ಹೆಣ್ಣು ಕೊಳಗಳು) ಉಪ್ಪನ್ನು ಹುಟ್ಟಿಸಿ ಹರಳುಗಟ್ಟಿಸುತ್ತವೆ.

“ಉಪ್ಪು ನೀರನ್ನು ಮೊದಲು 'ಬಾಷ್ಪೀಕರಣ' ನಡೆಸುವ ಕೊಳಗಳಿಗೆ ತುಂಬಿಸಲಾಗುತ್ತದೆ.” ಎನ್ನುತ್ತಾರೆ ಸಾಮಿ.

ಮುಂದಿನದೆಲ್ಲ ತಾಂತ್ರಿಕ ವಿಷಯಗಳು

ದ್ರವಗಳ ನಿರ್ದಿಷ್ಟ ಲವಣತ್ವವನ್ನು ಅಳೆಯುವ ಸಾಧನವಾದ ಬೌಮ್ ಹೈಡ್ರೋಮೀಟರ್‌ನಿಂದ ಉಪ್ಪಿನಂಶವನ್ನು ಡಿಗ್ರಿಗಳಲ್ಲಿ ಅಳೆಯಲಾಗುತ್ತದೆ. ಬಟ್ಟಿ ಇಳಿಸಿದ ನೀರಿನ 'ಬೌಮ್ ಡಿಗ್ರಿ' ಶೂನ್ಯವಾಗಿರುತ್ತದೆ. ಸಮುದ್ರದ ನೀರಿನಲ್ಲಿ, ಇದು 2ರಿಂದ 3 ಬಾಮ್ ಡಿಗ್ರಿಗಳವರೆಗೆ ಇರುತ್ತದೆ. ಬೋರ್‌ವೆಲ್ ನೀರಿನಲ್ಲಿ 5ರಿಂದ 10 ಡಿಗ್ರಿಯವರೆಗೆ ಇರುತ್ತದೆ. ಉಪ್ಪು ರೂಪುಗೊಳ್ಳಲು 24 ಡಿಗ್ರಿಗಳಷ್ಟಿರಬೇಕು. "ನೀರು ಆವಿಯಾದಂತೆಲ್ಲ ಅದರಲ್ಲಿನ ಉಪ್ಪಿನಂಶ ಹೆಚ್ಚಾಗುತ್ತದೆ, ನಂತರ ಅದನ್ನು ಹರಳುಗಟ್ಟುವ ಕೊಳಗಳಿಗೆ ಬಿಡಲಾಗುತ್ತದೆ" ಎಂದು ಸಾಮಿ ಹೇಳುತ್ತಾರೆ.

The salinity is measured in degrees by a Baume hydrometer.
PHOTO • M. Palani Kumar
Carrying headloads from the varappu
PHOTO • M. Palani Kumar

ಎಡಕ್ಕೆ: ಲವಣಾಂಶವನ್ನು ಬೌಮ್ ಹೈಡ್ರೋಮೀಟರ್ ಮೂಲಕ ಡಿಗ್ರಿಗಳಲ್ಲಿ ಅಳೆಯಲಾಗುತ್ತದೆ ಎಂದು ಬಿ. ಆಂಥೋಣಿ ಸಾಮಿ ವಿವರಿಸುತ್ತಾರೆ. ಬಲಕ್ಕೆ: ವರಪ್ಪುವಿನಿಂದ ಉಪ್ಪನ್ನು ತಲೆಯ ಮೇಲೆ ಹೊತ್ತು ಸಾಗಿಸುತ್ತಿರುವುದು

ಮುಂದಿನ ಎರಡು ವಾರಗಳ ಕಾಲ ಇಲ್ಲಿನ ಮಹಿಳೆಯರು ದೊಡ್ಡ ಮತ್ತು ಭಾರದ ಕಬ್ಬಿಣದ ಬಾಚಣಿಗೆ ರೀತಿಯ ರೇಕಿನ ಸಹಾಯದಿಂದ ನೀರಿನಲ್ಲಿ ಚಲಿಸುತ್ತಾ ಅದನ್ನು ಕಲಕುತ್ತಾರೆ. ಒಂದು ದಿನ ಉದ್ದಕ್ಕೆ ಕಲಕಿದರೆ ಇನ್ನೊಂದು ದಿನ ಕೊಳಕ್ಕೆ ಅಡ್ಡಲಾಗಿ ಕಲಕುತ್ತಾರೆ. ಹೀಗೆ ಮಾಡಿದಾಗ ಉಪ್ಪು ಕೊಳದ ಕೆಳಭಾಗದಲ್ಲಿ ಹರಳುಗಟ್ಟುವುದಿಲ್ಲ. 15 ದಿನಗಳ ನಂತರ ಪುರುಷ ಮಹಿಳೆಯರಿಬ್ಬರೂ ಸೇರಿ ದೊಡ್ಡ ಮರದ ಹುಟ್ಟಿನಂತಹ ಉಪಕರಣ ಬಳಸಿ ಉಪ್ಪನ್ನು ಸಂಗ್ರಹಿಸುತ್ತಾರೆ. ನಂತರ ಅದನ್ನು ವರಪ್ಪುವಿನ (ಕೊಳಗಳ ನಡುವಿನ ದಾರಿ) ಮೇಲೆ ಒಟ್ಟು ಮಾಡುತ್ತಾರೆ.

ಇದರ ನಂತರ ನಿಜವಾದ ಭಾರ ಹೊರುವ ಹಂತ ಬರುತ್ತದೆ. ಹೆಂಗಸರು ಮತ್ತು ಗಂಡಸರು ವರಪ್ಪುವಿನಲ್ಲಿ ಒಟ್ಟುಗೂಡಿಸಿದ ಉಪ್ಪನ್ನು ತಲೆಯ ಮೇಲೆ ಹೊತ್ತುಕೊಂಡು ಎತ್ತರದ ಜಾಗದಲ್ಲಿ ಖಾಲಿ ಮಾಡುತ್ತಾರೆ. ಒಬ್ಬೊಬ್ಬರಿಗೂ ಕೆಲವು ವರಪ್ಪು ಸಾಲುಗಳಗಳನ್ನು ನೀಡಲಾಗುತ್ತದೆ. ಇದರ ಮೂಲಕ ಅವರು ದಿನವೊಂದಕ್ಕೆ 5-7 ಏಳು ಟನ್‌ ಉಪ್ಪನ್ನು ತುಂಬಿ ಹೊರುತ್ತಾರೆ. ಅಂದರೆ ದಿನಕ್ಕೆ 150 ಬಾರಿ 150ರಿಂದ 250 ಅಡಿಗಳಷ್ಟು ದೂರ 35 ಕಿಲೋಗ್ರಾಂಗಳಷ್ಟು ಉಪ್ಪನ್ನು ಹೊತ್ತು ತಿರುಗುತ್ತಾರೆ. ಅವರ ಈ ಉರಿ ಬಿಸಿಲಿನ ತಿರುಗಾಟವು ಪುಟ್ಟ ಗುಡ್ಡೆಯನ್ನು ಕ್ಷಣ ಮಾತ್ರದಲ್ಲೇ ಸೂರ್ಯನ ಬೆಳಕಿನಡಿ ಕಂದು ಮಣ್ಣಿನ ಮೇಲೆ ​ಹೊಳೆವ ವಜ್ರದಂತಹ ​ಉಪ್ಪಿನ ​ಬೆಟ್ಟವನ್ನಾಗಿ ಪರಿವರ್ತಿಸುತ್ತವ

*****

“ಪ್ರೇಮಿಯ ಕೋಪವು ಊಟದಲ್ಲಿ ಉಪ್ಪಿದ್ದಂತೆ. ಅದು ಅಗತ್ಯಕ್ಕಿಂತ ಹೆಚ್ಚಾದರೆ ಊಟ ರುಚಿಗೆಡುತ್ತದೆ .”

ಇದೊಂದು ಚೆಂದಿಲ್ ನಾಥನ್ ಅವರು ಮಾಡಿದ ತಿರುಕ್ಕುರಳ್ (ಪವಿತ್ರ ದ್ವಿಪದಿಗಳು)ನ ದ್ವಿಪದಿಯ ಅನುವಾದ (ಮತ್ತು ವ್ಯಾಖ್ಯಾನ). ಇದು ತಮಿಳು ಕವಿ-ಸಂತ ತಿರುವಳ್ಳುವರ್ ಅವರು ಬರೆದ 1,330 ದ್ವಿಪದಿಗಳಲ್ಲಿ ಒಂದಾಗಿದೆ , ಅವರು ಕ್ರಿ.ಪೂ. 4ನೇ ಶತಮಾನ ಮತ್ತು 5ನೇ ಶತಮಾನದ ನಡುವೆ ಬದುಕಿದ್ದರು ಎನ್ನುವುದು ವಿವಿಧ ಇತಿಹಾಸಕಾರರ ನಂಬಿಕೆ.

ಸರಳವಾಗಿ ಹೇಳುವುದಾದರೆ: ಎರಡು ಸಹಸ್ರಮಾನಗಳ ಹಿಂದೆಯೇ ಉಪ್ಪು ತಮಿಳು ಸಾಹಿತ್ಯದಲ್ಲಿ ಉಪಮೆ ಮತ್ತು ರೂಪಕವಾಗಿ ಬಂದಿತ್ತು. ಮತ್ತು ಬಹುಶಃ ಇದಕ್ಕೂ ಮೊದಲೇ ತಮಿಳುನಾಡಿನ ಕರಾವಳಿಯ ಸುತ್ತಲೂ ಉಪ್ಪಿನ ಕೊಯ್ಲನ್ನು ಮಾಡಲಾಗುತ್ತಿತ್ತು.

ಚೆಂದಿಲ್ ನಾಥನ್ ಅವರು 2,000 ವರ್ಷಗಳಷ್ಟು ಹಳೆಯದಾದ ಸಂಗಮ್ ಯುಗದ ಒಂದು ಕವಿತೆಯನ್ನು ಅನುವಾದಿಸಿದ್ದಾರೆ, ಅದು ಉಪ್ಪು ವಿನಿಮಯವನ್ನು ಉಲ್ಲೇಖಿಸುತ್ತದೆ. ಆದರೂ, ಈ ಉಲ್ಲೇಖವು ಪ್ರೇಮಿಗಳನ್ನು ಕುರಿತ ಪದ್ಯದಲ್ಲಿ ಬರುತ್ತದೆ.

ಕ್ರೂರ ಹುಲಿ ಮೀನಿನ ಬೇಟೆಯಲ್ಲಿ
ಗಾಯಗೊಂಡ ಅಪ್ಪ ಗುಣಮುಖರಾಗಿ
ಮತ್ತೆ ಮರಳಿದ್ದಾರೆ ನೀಲಿ ಕಡಲಿನ ಮಡಿಲಿಗೆ.
ಅಮ್ಮನೂ ತೆರಳಿದ್ದಾರೆ
ಅಕ್ಕಿಯ ಕೊಟ್ಟು ಉಪ್ಪು ತರಲೆಂದು
ಉಪ್ಪಿನ ಆಗರಗಳಿಗೆ.
ದಣಿವು ತರಿಸುವ ದೂರ ದಾರಿಯ ನಡೆಯಬಲ್ಲ
ಒಬ್ಬ ಗೆಳೆಯನ ಹೊಂದುವುದು ಚಂದವೆನ್ನಿಸುತ್ತಿದೆ ನನಗೆ
ಹೋಗಿ ಹೇಳಬೇಕು ಶಾಂತ ಕಡಲ ತೀರದಲ್ಲಿರುವ ಚೆನ್ನಿಗನಿಗೆ
ನನ್ನ ನೋಡಲು ಬರುವೆಯಾದರೆ ಇದೇ ಸರಿಯಾದ ಸಮಯವೆಂದು!

PHOTO • M. Palani Kumar

ಉದ್ದವಾದ ಮರದ ಬಾಚಿ ಬಳಸಿ, ರಾಣಿ ಅಡುಗೆಮನೆಯಲ್ಲಿರುವ ಮುಖ್ಯ ವಸ್ತುಗಳಲ್ಲಿ ಅತ್ಯಂತ ಸಾಮಾನ್ಯವಾದ, ಆದರೆ ಅತ್ಯಂತ ಮುಖ್ಯವಾದ ಉಪ್ಪನ್ನು ಸಂಗ್ರಹಿಸುತ್ತಾರೆ

ಜನಪದ ಗೀತೆಗಳು ಮತ್ತು ಗಾದೆಗಳು ಉಪ್ಪಿನ ಕುರಿತ ಮಾತುಗಳ ಬೇಟೆಯಲ್ಲಿರುವವರಿಗೆ ಸಮೃದ್ಧ ಕಾಡು. ರಾಣಿ ಅಂತಹದ್ದೇ ಒಂದು ಗಾದೆ ಮಾತನ್ನು ಹೇಳುತ್ತಾರೆ, ಉಪ್ಪಿಲ್ಲಾಮ್‌ ಪಂಡಾಮ್‌ ಕುಪ್ಪಯಿಲೇ: ಉಪ್ಪಿಲ್ಲದ ಅಡುಗೆ ಕಸದಂತೆ ಎಂದು ಇದರ ನೇರ ಅರ್ಥ. ಉಪ್ಪನ್ನು ಹಿಂದೂ ಧರ್ಮದಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿಯೆಂದು ಪರಿಗಣಿಸಲಾಗುತ್ತದೆ. “ಯಾರಾದರೂ ಮನೆ ಬದಲಾಯಿಸಿದಾಗ, ನಾವು ಉಪ್ಪು, ಅರಿಶಿನ ಮತ್ತು ನೀರನ್ನು ತೆಗೆದುಕೊಂಡು ಅವರ ಹೊಸ ಮನೆಯಲ್ಲಿ ಇಟ್ಟು ಬರುತ್ತೇವೆ. ಇದು ಮಂಗಳಕರವಾದುದು' ಎಂದು ರಾಣಿ ಹೇಳುತ್ತಾರೆ.

ಜನಪ್ರಿಯ ಸಂಸ್ಕೃತಿಯಲ್ಲಿ, ಉಪ್ಪು ನಿಷ್ಠೆಯನ್ನು ಸಂಕೇತಿಸುತ್ತದೆ. ಹಾಗೆಯೇ, ಲೇಖಕ ಎ. ಶಿವಸುಬ್ರಮಣಿಯನ್ ಗಮನಿಸಿದಂತೆ: 'ಸಂಬಳ' ಎಂಬ ತಮಿಳು ಪದವು - ಸಾಂಬಾ (ಇದು ಭತ್ತವನ್ನು ಸೂಚಿಸುತ್ತದೆ) ಮತ್ತು ಉಪ್ಪಾಳಂ(ಉಪ್ಪು ಸಂಗ್ರಹಿಸುವ ಸ್ಥಳ) ಪದದ ಸಂಯೋಜನೆಯಾಗಿದೆ. ತಮ್ಮ ಆಕರ್ಷಕ ಪುಸ್ತಕ ಉಪ್ಪಿಟ್ಟವರೈ (ತಮಿಳು ಸಂಸ್ಕೃತಿಯಲ್ಲಿ ಉಪ್ಪು: ಒಂದು ಏಕವಿಷಯ ಪ್ರಬಂಧ), ಅವರು ವ್ಯಾಪಕವಾಗಿ ಬಳಸಲಾಗುವ ತಮಿಳು ಗಾದೆ – ಉಪ್ಪಿಟ್ಟವರೈ ಉಳ್ಳಾಳವುಮ್‌ ನೆನೈ – ಎಂದರೆ ನಿಮ್ಮ ಅನ್ನಕ್ಕೆ ಉಪ್ಪು ಕೊಟ್ಟವರ (ನಿಮಗೆ ಸಂಬಳ ಕೊಡುವವರ) ಸದಾ ನೆನೆಯುವಂತೆ ಹೇಳುತ್ತದೆ.

ಮಾರ್ಕ್ ಕುರ್ಲಾನ್ಸ್ಕಿ ಅವರ ಉಪ್ಪಿನ ಕುರಿತು ಅದ್ಭುತ ಮಾಹಿತಿಯನ್ನು ಹೊಂದಿರುವ ಪುಸ್ತಕ ಸಾಲ್ಟ್: ಎ ವರ್ಲ್ಡ್ ಹಿಸ್ಟರಿ, ಇದರಲ್ಲಿ ಅವರು ಹೀಗೆ ಹೇಳುತ್ತಾರೆ. "ಉಪ್ಪು ಮೊದಲ ಅಂತರರಾಷ್ಟ್ರೀಯ ವ್ಯಾಪಾರದ ಸರಕುಗಳಲ್ಲಿ ಒಂದಾಗಿದೆ. ಮೊದಲು ಸ್ಥಾಪಿತಗೊಂಡ ಉದ್ಯಮಗಳಲ್ಲೂ ಒಂದಾಗಿತ್ತು. ಮತ್ತು ಸರ್ಕಾರದ ಮೊದಲ ಏಕಸ್ವಾಮ್ಯದ ಉದ್ಯಮವಾಗಿತ್ತು."

ಮಾರ್ಚ್-ಏಪ್ರಿಲ್ 1930ರಲ್ಲಿ ಮಹಾತ್ಮ ಗಾಂಧಿಯವರು ಉಪ್ಪಿನ ಮೇಲಿನ ದಮನಕಾರಿ ಬ್ರಿಟಿಷ್ ರಾಜ್ ತೆರಿಗೆಯನ್ನು ಧಿಕ್ಕರಿಸಿ ಗುಜರಾತ್‌ನ ದಂಡಿ ಆಗರಗಳಿಂದ ಅದನ್ನು ಸಂಗ್ರಹಿಸಲು ಮೆರವಣಿಗೆ ನಡೆಸಿದ ಸಂದರ್ಭದಲ್ಲಿ ಈ ದಿನಬಳಕೆಯ ವಸ್ತು ಭಾರತದ ಇತಿಹಾಸದ ದಿಕ್ಕನ್ನು ಬದಲಿಸುವಲ್ಲಿ ಸಹಾಯ ಮಾಡಿತು. ಆ ವರ್ಷದ ಏಪ್ರಿಲ್‌ನಲ್ಲಿ, ಅವರ ರಾಜಕೀಯ ಲೆಫ್ಟಿನೆಂಟ್ ಸಿ. ರಾಜಗೋಪಾಲಾಚಾರಿ ಅವರು ತಮಿಳುನಾಡಿನಲ್ಲಿ ತಿರುಚಿರಾಪಳ್ಳಿಯಿಂದ ವೇದಾರಣ್ಯಂವರೆಗೆ ಉಪ್ಪಿನ ಸತ್ಯಾಗ್ರಹವನ್ನು ನಡೆಸಿದರು. ದಂಡಿ ಮೆರವಣಿಗೆಯು ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯವಾಗಿ ಉಳಿದಿದೆ.

*****

"ಅತಿ ಕಠಿಣ ಶ್ರಮದ ಕೆಲಸಕ್ಕೆ ಅತಿ ಕಡಿಮೆ ಸಂಬಳ”
– ಆಂಥೋಣಿ ಸಾಮಿ, ಉಪ್ಪಿನ ಆಗರದ ಕಾರ್ಮಿಕ

ರಾಣಿಯವರು ಈ ಕೆಲಸದಲ್ಲಿ ಮೊದಲು ಪಡೆದ ಸಂಬಳ 1.25 ರೂ. ದಿನಕ್ಕೆ. ಇದು ಸುಮಾರು 52 ವರ್ಷಗಳ ಹಿಂದಿನ ಮಾತು. ಆಗ ಅವರಿಗೆ ಪ್ರಾಯ 8ವರ್ಷ. ಉದ್ದನೆಯ ಲಂಗ ತೊಟ್ಟು ತನ್ನ ಬದುಕನ್ನು ಉಪ್ಪಿನ ಕೊಳಗಳಲ್ಲಿ ಕರಗಿಸುತ್ತಿದ್ದರು. ಆಂತೋಣಿ ಸಾಮಿಯವರಿಗೂ ತಾನು ಪಡೆದ ಮೊದಲ ಸಂಬಳದ ಮೊತ್ತ ನೆನಪಿದೆ. ಅವರಿಗೆ ಮೊದಲಿಗೆ 1.75 ರೂಪಾಯಿಗಳ ದಿನಗೂಲಿ ನೀಡಲಾಗಿತ್ತು. ಅದು ಕಾಲಕ್ರಮೇಣ ಹೆಚ್ಚಾಗುತ್ತಾ 21 ರೂಪಾಯಿಗಳಿಗೆ ತಲುಪಿತ್ತು. ಈ ಹಲವು ದಶಕಗಳ ಕಾಲ ಉಪ್ಪಿನ ಕೆರೆಗಳಲ್ಲಿ ದುಡಿದು ದಣಿದ ನಂತರ ಅವರ ಸಂಬಳವು ಮಹಿಳೆಯರಿಗೆ 395 ಮತ್ತು ಪುರುಷರಿಗೆ 405 ರೂಪಾಯಿಗಳಿಗೆ ತಲುಪಿದೆ.

ವೀಡಿಯೋ ನೋಡಿ: ಭೂಮಿಯ ಉಪ್ಪು

“ನೇರಂ ಆಯಿಟ್ಟು” ಎಂದು ಬೆಳಗಿನ 6 ಗಂಟೆಗೆ ರಾಣಿಯವರ ಮಗ ಬೇಗ ಹೊರಡುವಂತೆ ತೂತುಕುಡಿಯ ವಿಶಿಷ್ಟ ತಮಿಳಿನಲ್ಲಿ ಎಲ್ಲರನ್ನೂ ಹೊರಡಿಸುತ್ತಿದ್ದರು. ನಾವೆಲ್ಲರೂ ಆಗಲೇ ಆಗರದಲ್ಲಿದ್ದೆವು, ಆದರೆ ಅವರು ಕೆಲಸಕ್ಕೆ ತೊಡಗುವುದು ತಡವಾಗುತ್ತದೆಂದು ಚಡಪಡಿಸುತ್ತಿದ್ದರು. ಆಗರವು ಬೆಳಗಿನ ಸೂರ್ಯನ ಬೆಳಕಿಗೆ ಬಣ್ಣ ಎರಚಿದ ಚಿತ್ರಗಳಂತೆ ಕಾಣುತ್ತಿದ್ದವು. ಆಕಾಶವು ನೇರಳೆ, ಕೆಂಪು ಮತ್ತು ಚಿನ್ನದ ಬಣ್ಣದಲ್ಲಿತ್ತು. ಕೊಳಗಳು ಮಿನುಗುತ್ತಿದ್ದವು. ದೂರದಲ್ಲಿನ ಕಾರ್ಖಾನೆಗಳೂ ನಿರುಪದ್ರವಿಗಳಂತೆ ಸುಂದರವಾಗಿ ಕಾಣುತ್ತಿದ್ದವು. ಒಟ್ಟಾರೆ ಅದೊಂದು ಸುಂದರ ಬೆಳಗಿನ ಭೂದೃಶ್ಯವಾಗಿತ್ತು. ಅದಾದ ಅರ್ಧ ಗಂಟೆಯಲ್ಲೇ ಅಲ್ಲಿನ ಚಟುವಟಿಕೆಗಳು ಆರಂಭಗೊಂಡು ಆ ಸೌಂದರ್ಯದೊಳಗಿನ ಕ್ರೌರ್ಯ ಕಣ್ಮುಂದೆ ತೆರೆಯುತ್ತಾ ಹೋಯಿತು.

ಈ ಉಪ್ಪಿನ ಅಗರದ ನಡುವೆ ಶಿಥಿಲಾವಸ್ಥೆಯಲ್ಲಿರುವ ತೆಂಗಿನ ಗರಿಗಳ ಶೆಡ್‌ ಒಂದರಲ್ಲಿ ಇರಿಸಲಾದ ತಮ್ಮ ವಸ್ತುಗಳನ್ನು ಎತ್ತಿಕೊಂಡು ಅಲ್ಲೇ ಪುರುಷ, ಮಹಿಳೆಯಲ್ಲರೂ ಕೆಲಸಕ್ಕೆ ತಯಾರಾಗುತ್ತಾರೆ. ಹೆಂಗಸರು ತಮ್ಮ ಸೀರೆಯ ಮೇಲೆ ಹಳೆಯ ಶರ್ಟುಗಳನ್ನು ತೊಟ್ಟುಕೊಂಡು ತಲೆಗೆ ಹೊರೆ ಹೊರಲು ಸುಲಭವಾಗುವಂತೆ ಹಳೆಯ ಕಾಟನ್‌ ಬಟ್ಟೆಯ ಸಿಂಬಿಯನ್ನು ಕಟ್ಟಿಕೊಳ್ಳುತ್ತಾರೆ. ನಂತರ ಕೆಲಸಗಾರರು ಅಲ್ಯೂಮಿನಿಯಂ ಸಟ್ಟಿಗಳು (ಬುಟ್ಟಿಗಳು) ಮತ್ತು ಬಕೆಟ್‌ಗಳನ್ನು ಒಳಗೊಂಡ ತಮ್ಮ ಕೆಲಸದ ಸಲಕರಣೆಗಳನ್ನು ಎತ್ತಿಕೊಂಡರು. ನೀರಿನ ಬಾಟಲಿ, ಊಟಕ್ಕೆ ಅಕ್ಕಿ ಗಂಜಿಯ ಸ್ಟೀಲ್‌ ತೂಕು (ಊಟದ ಕ್ಯಾರಿಯರ್)‌ ಕೂಡಾ ಅವುಗಳಲ್ಲಿ ಸೇರಿದ್ದವು. "ನಾವು ಇಂದು ಉತ್ತರ ದಿಕ್ಕಿಗೆ ಹೋಗಲಿದ್ದೇವೆ" ಎಂದು ಕುಮಾರ್‌ ತನ್ನ ಎಡಕ್ಕೆ ತೋರಿಸುತ್ತಾ ಹೇಳುತ್ತಿದ್ದಂತೆ, ಗುಂಪು ಅವರ ಹಿಂದೆ ನಡೆಯತೊಡಗಿತು. ತಾವು ಖಾಲಿ ಮಾಡಬೇಕಿರುವ ಎರಡು ಸಾಲು ಉಪ್ಪಿನ ರಾಶಿಯ ಬಳಿ ಬರುತ್ತಿದ್ದಂತೆ ಕೆಲಸಕ್ಕೆ ತೊಡಗುತ್ತಿದ್ದರು.

ಕೂಡಲೇ ಗಂಡಸರು ಮತ್ತು ಹೆಂಗಸರು ಬಟ್ಟೆಗಳನ್ನು ಮೊಣಕಾಲಿನ ತನಕ ಮಡಚಿಕೊಂಡು ಅವರು ಕೆಲಸದಲ್ಲಿ ತೊಡಗುತ್ತಾರೆ.  ಅಗರದ ದಾರಿಯಲ್ಲಿ ನಡೆಯುತ್ತಾ ತಾಳೆಮರದ ಸಂಕ (ಸೇತುವೆ) ದಾಟಿಕೊಂಡು ಉಪ್ಪಿನ ಏರಿಯ ಬಳಿ ಬಂದು ತಮ್ಮ ಬಕೇಟುಗಳಿಂದ ಉಪ್ಪನ್ನು ಸಟ್ಟಿಗೆ ತುಂಬುತ್ತಾರೆ. ಆ ಬುಟ್ಟಿಗಳು ತುಂಬಿದ ನಂತರ ಪರಸ್ಪರ ತಲೆಗಳ ಮೇಲೆ ಬುಟ್ಟಿಯನ್ನು ಹೊರಿಸಿಕೊಂಡು ನಡೆಯತೊಡಗುತ್ತಾರೆ. ಅವರ ನಡಿಗೆಯ ಕೌಶಲ ಯಾವ ಹಗ್ಗದ ಮೇಲಿನ ನಡಿಗೆದಾರರಿಗೂ ಕಡಿಮೆಯಿಲ್ಲ. ತಲೆಯ ಮೇಲೆ 35 ಕೇಜಿ ತೂಕದ ಉಪ್ಪನ್ನು ಹೊತ್ತುಕೊಂಡು ತಾಳೆ ಮರದ ಸಂಕವನ್ನು ಒಂದು, ಎರಡು, ಮೂರು ... ಆರು ಎಂದು ಹೆಜ್ಜೆಗಳನ್ನು ಚಾಕಚಕ್ಯೆತೆಯಿಂದ ನಡೆಯುತ್ತಾರೆ.

ಅವರ ಈ ಪ್ರಯಾಣದ ಕೊನೆಯಲ್ಲಿ ಒಂದು ಆಕರ್ಷಕವಾದ ಚಲನೆಯೊಂದಿಗೆ ಸಟ್ಟಿಯನ್ನು ತಲೆಯ ಮೇಲಿಂದ ಬಾಗಿಸಿ ಉಪ್ಪಿನ ರಾಶಿಯ ಮೇಲೆ ಸುರಿಯುತ್ತಾರೆ. ಬಿಳಿಯ ಮಳೆ ಧಾರೆಯಾದಂತೆ ಉಪ್ಪು ಉರಿಯುತ್ತದೆ. ಹೀಗೆ ಮತ್ತೆ ಮತ್ತೆ ಹೋಗಿ ತರುತ್ತಲೇ ಇರುತ್ತಾರೆ. ಪ್ರತಿಯೊಬ್ಬರೂ ದಿನಕ್ಕೆ 150, 200 ಬಾರಿ ಹೀಗೆ ತಿರುಗಾಡುತ್ತಾರೆ. ಒಂದು ಉಪ್ಪಿನ ಗುಡ್ಡೆಯು 10 ಅಡಿ ಎತ್ತರ, 15 ಅಡಿಗಿಂತ ಹೆಚ್ಚು ಅಗಲವಿರುತ್ತದೆ, ಈ ಅಂಬಾರಮ್ (ರಾಶಿ), ಸಮುದ್ರ ಮತ್ತು ಸೂರ್ಯನ ಉಡುಗೊರೆ ಮತ್ತು ರಾಣಿ ಮತ್ತವರ ಸಹಕೆಲಸಗಾರರ ಬೆವರಿನ ಫಲವೂ ಹೌದು.

ಉಪ್ಪಿನ ಕೊಳಗಳ ಇನ್ನೊಂದು ಬದಿಯಲ್ಲಿ, 53 ವರ್ಷದ ಝಾನ್ಸಿ ರಾಣಿ ಮತ್ತು ಆಂತೋಣಿ ಸಾಮಿ ಕೆಲಸದಲ್ಲಿ ನಿರತರಾಗಿದ್ದಾರೆ. ಝಾನ್ಸಿ ರಾಣಿ ನೀರನ್ನು ಕಲಕಲು ಕುಂಟೆಯನ್ನು ಕೊಳದಲ್ಲಿ ಎಳೆಯುತ್ತಿದ್ದರೆ, ಅಂತೋಣಿ ಸಾಮಿ ಮರದ ಬಾಚಿಯ ಸಹಾಯದಿಂದ ಉಪ್ಪನ್ನು ಸಂಗ್ರಹಿಸಲು ತೊಡಗಿದ್ದರು. ನೀರು ಮೆಲ್ಲನೆ ಜುಳು ಜುಳು ಶಬ್ದ ಹೊರಡಿಸುತ್ತಿತ್ತು. ಉಪ್ಪು ಕರಕರ ಸದ್ದು ಮಾಡುತ್ತದೆ. ಬಿಸಿಲು ಏರುತ್ತಾ ಹೋದಂತೆಲ್ಲಾ, ನೆರಳುಗಳು ಗಾಢವಾಗುತ್ತ ಹೋದವು. ಆದರೆ ಯಾರೂ ಕೆಲಸ ನಿಲ್ಲಿಸಲಿಲ್ಲ. ತಮ್ಮ ಬೆನ್ನು ನೆಟ್ಟಗೆ ಮಾಡಿಕೊಳ್ಳಲೆಂದೋ ಅಥವಾ ಜೋರಾಗಿ ಉಸಿರುಬಿಡಲೆಂದೋ ಸಹ ಯಾರೂ ವಿರಮಿಸುವುದಿಲ್ಲ. ಅಂತೋಣಿಯವರಿಂದ ಬಾಚಿಯನ್ನು ಪಡೆದು ನಾನೂ ಉಪ್ಪನ್ನು ಏರಿಯ ಕಡೆಗೆ ಎಳೆಯಲು ಪ್ರಯತ್ನಿಸಿದೆ ಆದರೆ ಐದನೇ ಬಾರಿ ಎಳೆಯುತ್ತಿದ್ದಂತೆ ನನ್ನ ರಟ್ಟೆಗಳು ನೋಯಲಾರಂಭಿಸಿದವು. ಬೆನ್ನು ಕೂಡಾ ನೋಯಲಾರಂಭಿಸಿತು. ಬೆವರು ಹಣೆಯಿಂದ ಕಣ್ಣುಗಳಿಗೆ ಇಳಿಯತೊಡಗಿದವು. ಇದು ನಿಜಕ್ಕೂ ಮನುಷ್ಯ ಮಾತ್ರರು ಮಾಡಬಹುದಾದ ಕೆಲಸವಲ್ಲ.

PHOTO • M. Palani Kumar

ಉಪ್ಪಿನ ಕೊಳಗಳ ಇನ್ನೊಂದು ಬದಿಯಲ್ಲಿ, 53 ವರ್ಷದ ಝಾನ್ಸಿ ರಾಣಿ ಮತ್ತು ಆಂತೋಣಿ ಸಾಮಿ ಕೆಲಸದಲ್ಲಿ ನಿರತರಾಗಿದ್ದಾರೆ. ಝಾನ್ಸಿ ರಾಣಿ ನೀರನ್ನು ಕಲಕಲು ಕುಂಟೆಯನ್ನು ಕೊಳದಲ್ಲಿ ಎಳೆಯುತ್ತಿದ್ದರೆ, ಆಂತೋಣಿ ಸಾಮಿ ಮರದ ಬಾಚಿಯ ಸಹಾಯದಿಂದ ಉಪ್ಪನ್ನು ಸಂಗ್ರಹಿಸಲು ತೊಡಗಿದ್ದರು

ಆಂತೋಣಿಯವರು ಶಾಂತಚಿತ್ತದಿಂದಲೇ ಬಾಚಿಯನ್ನು ನನ್ನ ಕೈಯಿಂದ ಪಡೆದು ಉಪ್ಪು ಎಳೆಯತೊಡಗಿದರು. ನಾನು ರಾಣಿಯವರಿದ್ದ ಕೊಳಗಳತ್ತ ನಡೆದೆ. ಅವರು ತನ್ನ ತನ್ನ ಕೊನೆಯ ಕೊಳದ ಉಪ್ಪನ್ನು ಎಳೆಯುವುದರಲ್ಲಿದ್ದರು. ರಾಣಿಯವರ ತೋಳುಗಳು ಹಿಂದಕ್ಕೂ ಮುಂದಕ್ಕೂ ಎಳೆಯುತ್ತಾ ಕೊಳದಲ್ಲಿನ ಎಲ್ಲ ಉಪ್ಪನ್ನೂ ಖಾಲಿ ಮಾಡುತ್ತಿದ್ದವು. ಈ ಪ್ರಕ್ರಿಯೆ ಕೊಳದ ಕಂದು ಬಣ್ಣದ ತಳ ಕಾಣುವವರೆಗೂ ಸಾಗುತ್ತಲೇ ಇತ್ತು. ಅವರ ಬಹಳ ಹೊತ್ತಿನ ಕಠಿಣ ಶ್ರಮದ ನಂತರ ಕೊಳ ಇನ್ನೊಂದು ಬ್ಯಾಚ್ ಹೊಸ‌ ನೀರಿಗೆ ತಯಾರಾಗಿ ಹೊಸ ಉಪ್ಪಿನ ಕೊಯ್ಲಿಗೆ ತಯಾರಾಗುತ್ತಿತ್ತು.

ರಾಣಿ ತನ್ನ ಕೈಯಲ್ಲಿದ್ದ ಮರದ ಅಲಗಿನಿಂದ ಏರಿಯ ಮೇಲಿನ ಉಪ್ಪನ್ನು ಸಮಗೊಳಿಸಿ, ಅವರೊಂದಿಗೆ ಕುಳಿತುಕೊಳ್ಳಲು ಕರೆದರು. ನಾವಿಬ್ಬರೂ ಅಲ್ಲೇ ಇದ್ದ ಉದ್ದದ ಉಪ್ಪಿನ ಏರಿಯ ಪಕ್ಕದಲ್ಲಿ ಕುಳಿತುಕೊಂಡೆವು. ದೂರದಿಂದ ನೋಡಿದರೆ ಈ ಉಪ್ಪಿನ ಏರಿ ಗೂಡ್ಸ್‌ ರೈಲಿನಂತೆ ಕಾಣುತ್ತಿತ್ತು.

ಗಾಳಿಯಲ್ಲಿ ಕೈಯಾಡಿಸುತ್ತಾ ಹಳೆಯ ರೈಳಿಯನ್ನು ತೋರಿಸಿ, “ಒಂದು ಕಾಲದಲ್ಲಿ ಈ ಅಗರದರಿಂದ ಉಪ್ಪು ಕೊಂಡು ಹೋಗಲು ಗೂಡ್ಸ್‌ ರೈಲುಗಳು ಬರುತ್ತಿದ್ದವು,” ಎನ್ನುತ್ತಾರೆ ರಾಣಿ. “ಕೆಲವು ಬೋಗಿಗಳನ್ನು ರೈಲು ಹಳಿಗಳ ಮೇಲೆ ಬಿಟ್ಟು ಹೋಗುತ್ತಿದ್ದರು. ನಂತರ ಇಂಜಿನ್‌ ಬಂದು ಅವುಗಳನ್ನು ಎಳೆದುಕೊಂಡು ಹೋಗುತ್ತಿದ್ದವು. ಅವರು ಇಲ್ಲಿ ಮೊದಲಿದ್ದ ಉಪ್ಪಿನ ಕಾರ್ಖಾನೆ, ಎತ್ತು, ಕುದುರೆಗಳ ಗಾಡಿಗಳ ಕುರಿತಾಗಿಯೂ ಮಾತನಾಡಿದರು. ಈಗ ಬರೀ ಉಪ್ಪು, ಸೂರ್ಯ, ಕೆಲಸ ಬಿಟ್ಟು ಇನ್ನೇನು ಉಳಿದಿಲ್ಲವೆನ್ನುತ್ತಾರವರು. ಹೀಗೆ ಹೇಳುತ್ತಾ ತನ್ನ ಸೊಂಟದಲ್ಲಿದ್ದ ಸಂಚಿಯನ್ನು ತೆಗೆದರು. ಅದರಲ್ಲಿ ವಿಕ್ಸ್‌ ಇನ್ಹೇಲರ್‌ ಮತ್ತು ಎರಡು ರೂಪಾಯಿಯ ಸಣ್ಣ ಅಮೃತಾಂಜನ್‌ ಡಬ್ಬಿಯಿತ್ತು. “ಇದೇ [ಡಯಾಬಿಟೀಸ್‌ ಮಾತ್ರೆಗಳು] ಇನ್ನೂ ನನ್ನನ್ನು ದುಡಿಯುವ ಹಾಗೆ ಇರಿಸಿರುವುದು.” ಎಂದು ಹೇಳುತ್ತಾ ನಗುತ್ತಾರೆ.

*****

“ಅಪ್ಪಿತಪ್ಪಿ ಒಂದು ದಿನ ಮಳೆ ಬಂದರೆ, ನಮಗೆ ಒಂದು ವಾರ ಕೆಲಸವಿರುವುದಿಲ್ಲ.”
– ತೂತುಕುಡಿಯ ಉಪ್ಪಿನ ಅಗರದ ಕೆಲಸಗಾರರು

ಕಾಲದೊಂದಿಗೆ ಕೆಲಸದ ಸಮಯವೂ ಬದಲಾಗಿದೆ. ಮೊದಲಿದ್ದ ಒಂದು ಗಂಟೆಯ ಊಟದ ವಿರಾಮದ ಜೊತೆ ಬೆಳಗ್ಗೆ 8 ಗಂಟೆಯಿಂದ ಸಂಜೆ 5ರ ತನಕದ ಬದಲು ಈಗ ತಡರಾತ್ರಿ ಎರಡು ಗಂಟೆಯಿಂದ ಬೆಳಗಿನ 8 ಗಂಟೆಯ ತನಕ ಒಂದು ಪಾಳಿಯಲ್ಲಿ ಒಂದಷ್ಟು ಜನರು ಕೆಲಸ ಮಾಡಿದರೆ ಇನ್ನಷ್ಟು ಜನರು ಬೆಳಗಿನ 5ರಿಂದ ಹಗಲಿನ ಹನ್ನೊಂದು ಗಂಟೆಯ ತನಕ ದುಡಿಯುತ್ತಾರೆ. ಈ ಪಾಳಿಗಳಲ್ಲಿ ಹೆಚ್ಚು ಶ್ರಮದಾಯಕ ಕೆಲಸಗಳನ್ನು ಮಾಡಲಾಗುತ್ತದೆ. ಈ ಸಮಯವಲ್ಲದೆ ಬೇರೆ ಸಮಯಗಳಲ್ಲೂ ಮಾಡಬೇಕಿರುತ್ತದೆ. ಅವುಗಳನ್ನು ಉಳಿದ ಕೆಲಸಗಾರರು ನಿರ್ವಹಿಸುತ್ತಾರೆ.

“ಇಲ್ಲಿ ಬೆಳಗಿನ ಹತ್ತು ಗಂಟೆಯ ಬಿಸಿಲಿನಲ್ಲೇ ನಿಲ್ಲಲಾಗುವುದಿಲ್ಲ. ಅಷ್ಟು ಬಿಸಿಲಿರುತ್ತದೆ.” ಎನ್ನುತ್ತಾರೆ ಅಂತೋಣಿ ಸಾಮಿ. ಅವರು ತಾಪಮಾನ ಮತ್ತು ಹವಮಾನ ಬದಲಾವಣೆಯ ಪ್ರತ್ಯಕ್ಷ ಅನುಭವವನ್ನು ಕಂಡುಂಡಿದ್ದಾರೆ. ನ್ಯೂಯಾರ್ಕ್ ಟೈಮ್ಸ್‌ನ ಜಾಗತಿಕ ತಾಪಮಾನ ಏರಿಕೆಯ ಕುರಿತ ಸಂವಾದಾತ್ಮಕ ಪೋರ್ಟಲ್‌ನ ದತ್ತಾಂಶವು ಹವಾಮಾನವು ಹೇಗೆ ಬದಲಾಗುತ್ತಿದೆಯೆನ್ನುವ ಕುರಿತು ಹೇಳುವ ಮಾತುಗಳು ಅವರ ವೈಯಕ್ತಿಕ ಅನುಭವವನ್ನೇ ಪ್ರತಿನಿಧಿಸುತ್ತವೆ.

For two weeks, the women drag behind them a very heavy iron rake with which they stir the water every morning. After about 15 days, both men and women gather the salt using a huge wooden paddle
PHOTO • M. Palani Kumar
For two weeks, the women drag behind them a very heavy iron rake with which they stir the water every morning. After about 15 days, both men and women gather the salt using a huge wooden paddle
PHOTO • M. Palani Kumar

ಎರಡು ವಾರಗಳ ಕಾಲ ಹೆಂಗಸರು ಪ್ರತಿದಿನ ಬೆಳಗ್ಗೆ ತಮ್ಮ ಹಿಂದೆಯಿಂದ ಬಾಚಿ ಹಲ್ಲುಗಳಿರುವ ಕಬ್ಬಿಣದ ರೇಕನ್ನು ಎಳೆದು ನೀರನ್ನು ಕಲಕುತ್ತಾರೆ. 15 ದಿನಗಳ ನಂತರ ಹೆಂಗಸರು, ಗಂಡಸರು ಸೇರಿ ದೊಡ್ಡ ಮರದ ಹುಟ್ಟಿನಂತಹ ಬಾಚಿಯ ಸಹಾಯದಿಂದ ಕೊಳದ ಉಪ್ಪನ್ನು ಎಳೆದು ಏರಿಯಲ್ಲಿ ಸಂಗ್ರಹಿಸುತ್ತಾರೆ

ಆಂಥೋಣಿಯಯವರು ಜನಿಸಿದ ವರ್ಷವಾದ 1965ರ ಸಮಯದಲ್ಲಿ ತೂತುಕುಡಿ (ಆಗ ಟ್ಯುಟಿಕೊರಿನ್‌ ಎಂದು ಕರೆಯಲಾಗುತ್ತಿತ್ತು.) ವರ್ಷಕ್ಕೆ 136 ದಿನಗಳ ಕಾಲ 32 ಡಿಗ್ರಿಯ ಬಿಸಿಲಿನ ದಿನಗಳಿರುತ್ತಿದ್ದವು. ಇಂದು ಅಂಕಿ-ಅಂಶಗಳು ಹೇಳುವಂತೆ ಅಂತಹ ಬಿರುಬಿಸಿಲಿನ ದಿನಗಳ ಸಂಖ್ಯೆ 258ಕ್ಕೇರಿದೆ . ಒಟ್ಟಾರೆ ಅವರ ಬದುಕಿನ ಅವಧಿಯಲ್ಲಿ 90 ಶೇಕಾಡದಷ್ಟು ಈ ದಿನಗಳ ಏರಿಕೆಯಾಗಿದೆ.

ಅದರೊಂದಿಗೆ ಅಕಾಲಿಕ ಮಳೆಯೂ ಸೇರಿಕೊಂಡಿದೆ.

"ಒಂದು ದಿನ ಮಳೆ ಬಂದರೆ, ನಾವು ಒಂದು ವಾರ ಕೆಲಸವಿಲ್ಲದೆ ಕೂರುತ್ತೇವೆ" ಎಂದು ಕಾರ್ಮಿಕರು ಒಂದೇ ಧ್ವನಿಯಲ್ಲಿ ಹೇಳುತ್ತಾರೆ. ಮಳೆ ಉಪ್ಪನ್ನು ತೊಳೆದುಕೊಂಡು ಹೋಗುವುದು, ಕೊಳಗಳ ರಚನೆಯ ಹಾನಿ, ಹಣವಿಲ್ಲದೆ ನಿಷ್ಕ್ರಿಯವಾಗಿ ಕುಳಿತುಕೊಳ್ಳುವ ದಿನಗಳ ಕುರಿತಾಗಿಯೂ ಅವರು ಮಾತನಾಡುತ್ತಾರೆ.

ಅನೇಕ ಸ್ಥಳೀಯ ರೂಪಾಂತರಗಳು ಸಹ ಅನಿಯಮಿತ ಅನಿಯಮಿತ ಹವಾಗುಣ ಮತ್ತು ವಾತಾವರಣ ಸಮಸ್ಯೆಗೆ ತಮ್ಮದೇ ಕೊಡುಗೆಗಳನ್ನು ನೀಡಿವೆ. ಅಲ್ಲಲ್ಲಿ ನೆರಳು ನೀಡುತ್ತಿದ್ದ ಮರಗಳನ್ನೂ ಈಗ ಕಡಿದು ಹಾಕಲಾಗಿದೆ. ಈ ಸ್ಥಳವು ಫೋಟೊಗ್ರಫಿಗೆ ಅದ್ಭುತವಾಗಿ ಕಾಣುತ್ತದೆಯಾದರೂ ಕೆಲಸ ಮಾಡಲು ಯಾತನದಾಯಕ ಸ್ಥಳವಾಗಿದೆ. ಉಪ್ಪಿನ ಆಗರಗಳು ಈಗ ಕನಿಷ್ಟ ಸೌಲಭ್ಯಗಳನ್ನೂ ನೀಡದ ಸ್ಥಳಗಳಾಗಿ ಮಾರ್ಪಟ್ಟಿವೆ. “ಮೊದಲು ಮಾಲಿಕರು ಇಲ್ಲಿ ನಮಗೆ ಕುಡಿಯುವ ನೀರನ್ನಿರಿಸುತ್ತಿದ್ದರು. ಆದರೆ ಈಗ ಅದನ್ನೂ ನಾವೇ ಬಾಟಲಿಗಳಲ್ಲಿ ತರಬೇಕು.”ಎನ್ನುತ್ತಾರೆ ಝಾನ್ಸಿ. ನಾನು ಶೌಚಾಲಯದ ಕುರಿತು ಕೇಳಿದರೆ ಮಹಿಳೆರು ವ್ಯಂಗ್ಯವಾಗಿ ನಗುತ್ತಾ, “ಕೊಳಗಳ ಹಿಂದಿನ ಬಯಲನ್ನು ಬಳಸುತ್ತೇವೆ,” ಎನ್ನುತ್ತಾರೆ. ಯಾಕೆಂದರೆ ಅಲ್ಲಿ ಶೌಚಾಲಯ ಇದೆಯಾದರೂ ಅದರಲ್ಲಿ ನೀರಿನ ಲಭ್ಯತೆಯಿರುವುದಿಲ್ಲ.

ಇಲ್ಲಿನ ಮಹಿಳೆಯರು ಮನೆಯಲ್ಲಯೂ ಹಲವು ಸಮಸ್ಯೆಗಳನ್ನೆದುರಿಸುತ್ತಾರೆ. ಅದರಲ್ಲೂ ಮಕ್ಕಳು ಚಿಕ್ಕವರಿರುವಾಗ ಬಹಳ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ರಾಣಿ. ಅವರು ಅವರ ಮಕ್ಕಳನ್ನು ಕೆಲಸದ ಸ್ತಳಕ್ಕೆ ಕರೆತಂದು ಶೆಡ್ಡಿನಲ್ಲಿ ತೂಲಿ (ಬಟ್ಟೆಯ ಜೋಲಿ) ಕಟ್ಟಿ ಮಗುವನ್ನು ಅದರಲ್ಲಿ ಮಲಗಿಸಿ ಕೆಲಸಕ್ಕೆ ತೆರಳುತ್ತಿದ್ದರು. “ಆದರೆ ಈಗ ನನ್ನ ಮೊಮ್ಮಕ್ಕಳನ್ನು ಇಲ್ಲಿಗೆ ಕರೆತರುವಂತಿಲ್ಲ. ಉಪ್ಪಿನ ಆಗರಕ್ಕೆ ಮಕ್ಕಳನ್ನು ಕರೆತರುವಂತಿಲ್ಲ ಎನ್ನುತ್ತಾರೆ.” ಅದೇನೋ ಸರಿ, ಆದರೆ ಇದರ ಅರ್ಥ ಅವರು ತಮ್ಮ ಮಕ್ಕಳನ್ನು ಅಕ್ಕಪಕ್ಕದ ಮನೆಯವರ ಬಳಿ, ಅಥವಾ ಸಂಬಂಧಿಕರ ಬಿಟ್ಟು ಕೆಲಸಕ್ಕೆ ಹೋಗಬೇಕು. ಅಥವಾ ಮನೆಯಲ್ಲೇ ನೋಡಿಕೊಳ್ಳುವವರಿಲ್ಲದೆ ಬಿಟ್ಟುಹೋಗಬೇಕು.

*****

“ಇಲ್ನೋಡಿ, ನನ್ನ ಕೈಗಳನ್ನ ಒಮ್ಮೆ ಮುಟ್ಟಿ ನೋಡಿ, ಅವು ಗಂಡಸರ ಕೈಗಳಂತೆ ಗಡುಸಾಗಿಲ್ಲವೆ?”
– ಉಪ್ಪಿನ ಆಗರದ ಮಹಿಳಾ ಕೆಲಸಗಾರರು

ಮಾತನಾಡುತ್ತಾ ದೇಹಕ್ಕೆ ಕೆಲಸದಿಂದಾಗುವ ಹಾನಿಯ ವಿಷಯ ಬಂದಾಗ ಮಹಿಳೆಯರು ಒಂದಷ್ಟು ಹೆಚ್ಚೇ ಚುರುಕಾದರು. ಈ ಕೆಲಸಕ್ಕಾಗಿ ಅವರು ತಮ್ಮ ದೇಹವನ್ನು ಎಷ್ಟರಮಟ್ಟಿಗೆ ದಂಡಿಸಿದ್ದಾರೆನ್ನುವುದನ್ನು ಅಂದಾಜಿಸುವುದು ಕಷ್ಟ. ಮೊದಲಿಗೆ ರಾಣಿ ತನ್ನ ಕಣ್ಣುಗಳ ಕುರಿತು ಮಾತನಾಡತೊಡಗಿದರು. ಸುತ್ತಲೂ ಇರುವ ಬಿಸಿಲಿಗೆ ಹೊಳೆಯುವ ಉಪ್ಪಿನ ರಾಶಿಯುನ್ನು ನಿರಂತರ ನೋಡುವುದರಿಂದಾಗಿ ತನ್ನ ಕಣ್ಣುಗಳನ್ನು ಬಿಡುವುದಕ್ಕಾಗವುದಿಲ್ಲ. ಅಲ್ಲದೇ ಕಣ್ಣುಗಳಿ ನೀರು ಸುರಿಯುತ್ತದೆ ಎನ್ನುತ್ತಾರವರು. “ಅವರು ಮೊದಲು ನಮಗೆ ಕಪ್ಪು ಕನ್ನಡಕಗಳನ್ನು ಕೊಡುತ್ತಿದ್ದರು. ಆದರೆ ಈಗ ಒಂದಿಷ್ಟು ಹಣ ಕೊಟ್ಟು ಸುಮ್ಮನಾಗುತ್ತಾರೆ”  ಸಾಮಾನ್ಯವಾಗಿ ವರ್ಷಕ್ಕೆ 300 ರೂಪಾಯಿಗಳನ್ನು ಕನ್ನಡಕ ಮತ್ತು ಚಪ್ಪಲಿಗಳಿಗೆಂದು ಕೊಡುತ್ತಾರೆ.

PHOTO • M. Palani Kumar

ಬಿಳಿಯ ಉಪ್ಪಿನ ರಾಶಿಯಿಂದ ಪ್ರತಿಫಲಿಸುವ ಕಣ್ಣು ಕುರುಡಾಗಿಸುವ ಬಿಸಿಲಿನಿಂದ ತಮ್ಮ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಒಬ್ಬರೂ ಕಪ್ಪು ಕನ್ನಡಕಗಳನ್ನು ಧರಿಸುವುದಿಲ್ಲ

ಕೆಲವು ಮಹಿಳೆಯರು ತಳದಲ್ಲಿ ರಬ್ಬರ್‌ ಸೇರಿಸಿ ಹೊಲಿದ ಕಪ್ಪು ಸಾಕ್ಸುಗಳನ್ನು ಧರಿಸುತ್ತಾರೆ. ಆದರೆ ಇಡೀ ಉಪ್ಪಿನ ಆಗರದ ಕೆಲಸಗಾರರಲ್ಲಿ ಒಬ್ಬರೂ ಕಪ್ಪು ಕನ್ನಡಕ ಧರಿಸುವುದಿಲ್ಲ. “ಒಳ್ಳೆಯ ಗುಣಮಟ್ಟದ ಶೂ ತಗೋಬೇಕು ಅಂದ್ರೆ ಕನಿಷ್ಟ 1,000 ರೂಪಾಯಿ ಬೇಕು. ಅಗ್ಗದ ಬೆಲೆಯ ಶೂಗಳು ಕೆಲಸಕ್ಕೆ ಬರುವುದಿಲ್ಲ, ಬದಲಿಗೆ ಕೆಲಸಕ್ಕೆ ಇನ್ನಷ್ಟು ತೊಡಕು ಮಾಡುತ್ತವೆ.” ಎನ್ನುವುದು ಅಲ್ಲಿನ ಪ್ರತಿಯೊಬ್ಬರ ಅಭಿಪ್ರಾಯ. ಅಲ್ಲದೆ 40 ವರ್ಷವಾಗುತ್ತಿದ್ದಂತೆ ದೃಷ್ಟಿ ದೋಷದಿಂದ ಬಳಲುವುದಾಗಿ ಹೇಳುತ್ತಾರೆ.

ರಾಣಿಯವರ ಜೊತೆ ಇನ್ನಷ್ಟು ಮಹಿಳೆಯರು ಕೂಡಿಕೊಂಡರು. ಅವರೆಲ್ಲರೂ ಒಂದು ಕ್ಷಣವೂ ವಿರಾಮ ಸಿಗದಿರುವುದು, ಕುಡಿಯಲು ನೀರಿಲ್ಲದಿರುವುದು, ಸುಡುವ ಬಿಸಿಲು, ಸೆಕೆ, ಮತ್ತು ಚರ್ಮಕ್ಕೆ ಹಾನಿಯೆಸಗುವ ಉಪ್ಪುನೀರಿನ ಕುರಿತು ಒಕ್ಕೊರೊಳಿನಿಂದ ದೂರಿದರು. “ಇಲ್ನೋಡಿ ನನ್ನ ಕೈಗಳನ್ನ ಇವುಗಳನ್ನ ಮುಟ್ಟಿದ್ರೆ ಗಂಡಸರ ಕೈಗಳನ್ನ ಮುಟ್ಟಿದ ಹಾಗನ್ಸಲ್ವೇ?” ಎನ್ನುತ್ತಾ ತಮ್ಮ, ಕೈಕಾಲುಗಳನ್ನು ನನಗೆ ತೋರಿಸಿದರು. ಕಾಲಿನ ಬೆರಳುಗಳು ಕಪ್ಪಾಗಿ ಮುರುಟಿಕೊಂಡಿದ್ದರೆ, ಕೈಗಳು ಬಾಡಿ ಒರಟಾಗಿದ್ದವು. ಅಲ್ಲದೇ ಕಾಲಿನಲ್ಲಿ ಗಾಯಗಳಿದ್ದವು, ಅವು ಪ್ರತಿ ಬಾರಿ ಉಪ್ಪು ನೀರಿಗಿಳಿದಾಗಲೂ ಉರಿಯತೊಡಗುತ್ತವೆ.

ನಮ್ಮ ಆಹಾರವನ್ನು ರುಚಿಯಾಗಿಸುವ ಈ ಉಪ್ಪು, ಅವರ ದೇಹದ ಮಾಂಸವನ್ನು ತಿನ್ನುತ್ತದೆ.

ಈ ಹಾನಿಯ ಪಟ್ಟಿ ದೇಹದ ಹೊರಗಲ್ಲದೆ ದೇಹದ ಒಳಗೂ ಸಾಗುತ್ತದೆ. ಗರ್ಭಕೋಶ ತೆಗೆಸುವುದು (Hysterectomy̧̧)̧̧, ಕಿಡ್ನಿಕಲ್ಲುಗಳು, ಹರ್ನಿಯಾ ಅವುಗಳಲ್ಲಿ ಕೆಲವು. ರಾಣಿಯವರ ಮಗ 29 ವರ್ಷದ ಗಟ್ಟಿಮುಟ್ಟಾದ ಬಲಶಾಲಿ ವ್ಯಕ್ತಿ. ಅತಿಯಾದ ಭಾರ ಎತ್ತುವಿಕೆಯಿಂದಾಗಿ ಅವರು ಹರ್ನಿಯಾ ತೊಂದರೆಗೀಡಾಗಿದ್ದಾರೆ. ಅವರು ಅದರ ಆಪರೇಷನ್‌ ಮಾಡಿಸಿ ಮೂರು ತಿಂಗಳು ಮನೆಯಲ್ಲಿದ್ದರು. ಹಾಗಿದ್ದರೆ ಅವರು ಈಗೇನು ಮಾಡುತ್ತಿದ್ದಾರೆ? “ನಾನು ಮೊದಲಿನಂತೆಯೇ ಭಾರ ಹೊರುವ ಕೆಲಸವನ್ನು ಮುಂದುವರೆಸಿದ್ದೇನೆ.” ಎನ್ನುತ್ತಾರವರು. ಅವರಿಗೆ ಇದಲ್ಲದೆ ಬೇರೆ ದಾರಿಯಿಲ್ಲ. ಸುತ್ತಿನ ಪಟ್ಟಣಗಳಲ್ಲೂ ಅಷ್ಟೇನೂ ಬೇರೆ ಕೆಲಸಗಳು ಸಿಗುವುದಿಲ್ಲ.

ಸುತ್ತಮುತ್ತಲಿನ ಕೆಲವು ಯುವಕರು ಸೀಗಡಿ ಆಗರಗಳು ಹೂವಿನ ಫ್ಯಾಕ್ಟರಿಗಳಲ್ಲಿ ಕೆಲಸ ಕಂಡುಕೊಳ್ಳುತ್ತಾರೆ. ಆದರೆ ಉಪ್ಪಿನ ಆಗರಗಳಲ್ಲಿ ಕೆಲಸ ಮಾಡುವ 30 ವರ್ಷಕ್ಕೂ ಮೇಲ್ಪಟ್ಟವರು ಈಗಾಗಲೇ ಇಲ್ಲಿ ದಶಕಗಳನ್ನು ಕಳೆದಿದ್ದಾರೆ. ಸಂಬಳದ ಕುರಿತು ಕುಮಾರ್‌ ಅವರಿಗೂ ಅಸಮಧಾನವಿದೆ. "ನಾವು ಪ್ಯಾಕರ್‌ಗಳು ಗುತ್ತಿಗೆ ಕಾರ್ಮಿಕರು. ನಮಗೆ ಬೋನಸ್‌ ಕೂಡಾ ಸಿಗುವುದಿಲ್ಲ. ಮಹಿಳೆಯೊಬ್ಬರು 1 ಕಿಲೋ ತೂಕದ ಇಪ್ಪತೈದು ಪಾಕೀಟುಗಳನ್ನು ಕೈಯಿಂದ ಪ್ಯಾಕ್‌ ಮಾಡಿದರೆ 1.70 ರೂಪಾಯಿ ನೀಡಲಾಗುತ್ತದೆ. [ಒಂದು ಪೊಟ್ಟಣಕ್ಕೆ 7 ಪೈಸೆಗಿಂತ ಕಡಿಮೆ]. ಅದೇ ಉಪ್ಪಿನ ಪೊಟ್ಟಣಗಳನ್ನು ಸೀಲ್‌ ಮಾಡುವ ಮಹಿಳೆಗೆ 25 ಪೊಟ್ಟಣಗಳಿಗೆ 2 ರೂಪಾಯಿ ನೀಡಲಾಗುತ್ತದೆ. ಹಾಗೆ ಸೀಲ್‌ ಮಾಡಲಾದ 25 ಪೊಟ್ಟಣಗಳನ್ನು ಚೀಲವೊಂದರೊಳಗೆ ಜೋಡಿಸಿ, ಅದನ್ನು ಕೈಯಿಂದ ಹೊಲಿದು, ಜೋಡಿಸಿದರೆ ಚೀಲವೊಂದಕ್ಕೆ ಪುರುಷರಿಗೆ 2 ರೂಪಾಯಿ ನೀಡಲಾಗುತ್ತದೆ. ಚೀಲಗಳನ್ನು ಜೋಡಿಸುತ್ತಾ ಹೋದಂತೆಲ್ಲ ಅಟ್ಟಿಯ ಎತ್ತರ ಹೆಚ್ಚಾಗುತ್ತದೆ. ಅದರ ಮೇಲೆ ಜೋಡಿಸಲು ಅವರ ದೈಹಿಕ ಶ್ರಮವೂ ಹೆಚ್ಚಾಗಿರುತ್ತದೆಯಾದರೂ ಅದಕ್ಕೂ ಅವರಿಗೆ ಸಿಗುವುದು 2 ರೂಪಾಯಿಗಳು ಮಾತ್ರ.

The women speak of hardly ever getting a break, never enough drinking water, the brutal heat, the brine that ruins their skin. As well as hysterectomies, kidney stones, hernias. Rani’s son Kumar (right) is stocky and strong. But the heavy lifting he did at work gave him a hernia that needed surgery
PHOTO • M. Palani Kumar
The women speak of hardly ever getting a break, never enough drinking water, the brutal heat, the brine that ruins their skin. As well as hysterectomies, kidney stones, hernias. Rani’s son Kumar (right) is stocky and strong. But the heavy lifting he did at work gave him a hernia that needed surgery
PHOTO • M. Palani Kumar

ಮಹಿಳೆಯರು ಒಂದು ಕ್ಷಣವೂ ವಿರಾಮ ಸಿಗದಿರುವುದು, ಕುಡಿಯಲು ನೀರಿಲ್ಲದಿರುವುದು, ಸುಡುವ ಬಿಸಿಲು, ಸೆಕೆ, ಮತ್ತು ಚರ್ಮಕ್ಕೆ ಹಾನಿಯೆಸಗುವ ಉಪ್ಪುನೀರಿನ ಕುರಿತು ಕುರಿತು ಹೇಳುತ್ತಾರೆ. ಗರ್ಭಕೋಶ ತೆಗೆಸುವುದು (Hysterectomy̧̧)̧̧, ಕಿಡ್ನಿಕಲ್ಲುಗಳು, ಹರ್ನಿಯಾದಂತಹ ಆರೋಗ್ಯಸಂಬಂಧಿ ತೊಂದರೆಗಳೂ ಇವೆ. ರಾಣಿಯವರ ಮಗ 29 ವರ್ಷದ ಗಟ್ಟಿಮುಟ್ಟಾದ ಬಲಶಾಲಿ ವ್ಯಕ್ತಿ. ಅತಿಯಾದ ಭಾರ ಎತ್ತುವಿಕೆಯಿಂದಾಗಿ ಅವರು ಹರ್ನಿಯಾ ತೊಂದರೆಗೀಡಾಗಿ ಆಪರೇಷನ್‌ ಮಾಡಿಸಿಕೊಳ್ಳಬೇಕಾಯಿತು

ತಮಿಳುನಾಡು ರಾಜ್ಯ ಯೋಜನಾ ಆಯೋಗದ ಸದಸ್ಯರೂ ಮತ್ತು ನಾಳೀಯ ಶಸ್ತ್ರಚಿಕಿತ್ಸಕರಾದ (vascular surgeon) ಡಾ. ಅಮಲೋರ್‌ಪವನಾಥನ್ ಜೋಸೆಫ್ ಹೇಳುವಂತೆ, "ವೈದ್ಯಕೀಯವಾಗಿ, ಅವರು ಯಾವುದೇ ಪಾದರಕ್ಷೆಗಳನ್ನು ರಕ್ಷಣೆಗಾಗಿ ಧರಿಸಿದರೂ ಅದು ಸೋರಿಕೆ-ನಿರೋಧಕ ಅಥವಾ ವಿಷ-ನಿರೋಧಕವಾಗಿರುವುದಿಲ್ಲ. ಒಂದು ಅಥವಾ ಎರಡು ದಿನ ಕೆಲಸ ಮಾಡುವುದು ಈ ರೀತಿ ಕೆಲಸಮಾಡಿದರೆ ಪರವಾಗಿಲ್ಲ. ಆದರೆ ಇದು ನಿಮ್ಮ ಜೀವಮಾನದ ಉದ್ಯೋಗವಾಗಿದ್ದರೆ, ಆಗಾಗ್ಗೆ ಬದಲಾಯಿಸಲ್ಪಡುವ, ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ಬೂಟುಗಳು ನಿಮಗೆ ಬೇಕಾಗುತ್ತವೆ. ಇದನ್ನು ಮಾಡದೇ ಹೋದರೆ ನಿಮ್ಮ ಪಾದಗಳ ಆರೋಗ್ಯದ ಕುರಿತು ಖಾತರಿ ನೀಡಲು ಯಾರಿಂದಲೂ ಸಾಧ್ಯವಿಲ್ಲ."

ಉಪ್ಪಿನಿಂದ ಪ್ರತಿಫಲಿಸುವ ಹೊಳಪಿನ ಬಿಸಿಲು ಕಣ್ಣು ಮಬ್ಬಾಗಿಸುವುದ್ಲಲದೆ, “ಇಂತಹ ಪರಿಸರದಲ್ಲಿ ಕನ್ನಡಕಗಳಿಲ್ಲದೆ ಕೆಲಸ ಮಾಡುವುದರಿಂದಾಗಿ ಕಣ್ಣುಗಳಿಗೆ ಹಲವು ಬಗೆಯ ಕಿರಿಕಿರಿಗಳೂ ಉಂಟಾಗಬಹುದು.” ಅವರು ಆಗಾಗ ಕೆಲಸದ ಸ್ಥಳದಲ್ಲಿ ನಿಯಮಿತ ಆರೋಗ್ಯ ಶಿಬಿರಗಳನ್ನು ನಡೆಸುವುದು ಮತ್ತು ಆಗಾಗ ಕೆಲಸಗಾರರ ರಕ್ತದೊತ್ತಡದ ಮಟ್ಟವನ್ನು ಪರಿಶೀಲಿಸುವುದು ಒ‍ಳ್ಳೆಯದೆಂದು ಅವರು ಹೇಳುತ್ತಾರೆ. ರಕ್ತದೊತ್ತಡದ ಮಟ್ಟ 130/90ಕ್ಕಿಂತಲೂ ಹೆಚ್ಚಿದ್ದರೆ ಅಂತಹವರನ್ನು ಕೆಲಸ ಮಾಡಲು ಬಿಡಬಾರದೆನ್ನುವುದು ನನ್ನ ಅಭಿಪ್ರಾಯ.” ಇಲ್ಲಿನ ಕೆಲಸಗಾರರು ಈ ಪರಿಸರದಲ್ಲಿ ಕೆಲಸ ಮಾಡುತ್ತಾ ಸವೆಯುವಾಗ ತಮ್ಮ ದೇಹದೊಳಕ್ಕೆ ಉಪ್ಪಿನಂಶವನ್ನು ಹೀರಿಕೊಳ್ಳುವ ಸಾಧ್ಯತೆಯೂ ಇರುತ್ತದೆ ಎನ್ನುತ್ತಾರವರು. ಅವರು ದಿನವೂ ಹೊರುವ ಉಪ್ಪಿನ ತೂಕವನ್ನು ಹೊರಲು ಐದಾರು ದೈಹಿಕ ಕೌಶಲಗಳು ಬೇಕು. ”ಅವರು ಕೆಲಸದಲ್ಲಿ ವ್ಯಯಿಸುವ ಶಕ್ತಿಯನ್ನು ಲೆಕ್ಕಹಾಕಿದರೆ ನಿಮಗೆ ಅಚ್ಚರಿಯಾಗಬಹುದು.”

ಈ ಕಾರ್ಮಿಕರು ನಾಲ್ಕೈದು ದಶಕಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದರಬಹುದು. ಆದರೆ ಅವರಿಗೆ ಯಾವುದೇ ಸಾಮಾಜಿಕ ಭದ್ರತೆ, ವೇತನ ಸಹಿತ ರಜೆ, ಶಿಶುಪಾಲನಾ ಅಥವಾ ಗರ್ಭಾವಸ್ಥೆಯ ಸಮಯದ ಪ್ರಯೋಜನಗಳಿಲ್ಲದಿರುವುದನ್ನು, ಉಪ್ಪಿನ ಆಗರದ ಕೆಲಸಗಾರರು ಒತ್ತಿ ಹೇಳುತ್ತಾರೆ, ಅವರು ಯಾವ ರೀತಿಯಲ್ಲೂ 'ಕೂಲಿ'ಗಳಿಗಿಂತ (ಕಡಿಮೆ ವೇತನದ ಕೆಲಸಗಾರರು) ಉತ್ತಮ ಸ್ಥಿತಿಯಲ್ಲಿಲ್ಲ.

*****

“ಉಪ್ಪನ್ನು 15.000ಕ್ಕಿಂತಲೂ ಹೆಚ್ಚು ಬಗೆಯಲ್ಲಿ ಬಳಸಲಾಗುತ್ತದೆ.”
– ಎಂ.ಕೃಷ್ಣಮೂರ್ತಿ, ಜಿಲ್ಲಾ ಸಂಯೋಜಕ, ತೂತುಕುಡಿ, ಅಸಂಘಟಿತ ಕಾರ್ಮಿಕರ ಒಕ್ಕೂಟ

"ಯುಎಸ್ಎ ಮತ್ತು ಚೀನಾದ ನಂತರ ಭಾರತವು ಮೂರನೇ ಅತಿದೊಡ್ಡ ತಯಾರಕ ರಾಷ್ಟ್ರವಾಗಿದೆ" ಎಂದು ಕೃಷ್ಣಮೂರ್ತಿ ಹೇಳುತ್ತಾರೆ. "ಉಪ್ಪು ಇಲ್ಲದೆ ಬದುಕುವುದು ಅಸಾಧ್ಯ, ಆದರೂ, ಈ ಕಾರ್ಮಿಕರ ಜೀವನವು ಅವರ ಬೆಳೆಯಂತೆಯೇ ಉಪ್ಪಿನ ಕಹಿ!"

ಕೃಷ್ಣಮೂರ್ತಿ ಅವರು ತೂತುಕುಡಿ ಜಿಲ್ಲೆಯಲ್ಲಿ ಸುಮಾರು 50,000 ಉಪ್ಪಿನ ಕಾರ್ಮಿಕರಿದ್ದಾರೆ ಎಂದು ಅಂದಾಜಿಸುತ್ತಾರೆ. ಜಿಲ್ಲೆಯಲ್ಲಿ ಒಟ್ಟು 7.48 ಲಕ್ಷ ಕಾರ್ಮಿಕರಿದ್ದು , ಪ್ರತಿ 15 ಕಾರ್ಮಿಕರಲ್ಲಿ ಒಬ್ಬರು ಉಪ್ಪಿನ ಆಗರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಫೆಬ್ರವರಿಯಿಂದ ಸೆಪ್ಟೆಂಬರ್ ತನಕ ಬೇಸಿಗೆಯ 6-7 ತಿಂಗಳುಗಳಲ್ಲಿ ಮಾತ್ರವೇ ಕೆಲಸವಿರುತ್ತದೆ. ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ ತಮಿಳುನಾಡಿನಲ್ಲಿ ಕೇವಲ 21,528 ಉಪ್ಪಿನ ಕಾರ್ಮಿಕರಿದ್ದಾರೆ. ಕೃಷ್ಣಮೂರ್ತಿಯವರ ಅಸಂಘಟಿತ ಕಾರ್ಮಿಕರ ಒಕ್ಕೂಟ ಇಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯೂನಿಯನ್ ಅಧಿಕೃತ ಅಂಕಿಅಂಶಗಳಿಂದ ಹೊರಗಿಡಲಾದ ಹೆಚ್ಚಿನ ಸಂಖ್ಯೆಯ ಕಾರ್ಮಿಕರ ದಾಖಲೆಯನ್ನು ದಾಖಲಿಸುತ್ತದೆ.

Rani’s drawstring pouch with her Amrutanjan and inhaler.
PHOTO • M. Palani Kumar
A few women wear black socks with a rudimentary refurbished base
PHOTO • M. Palani Kumar

ಎಡ: ಅಮೃತಾಂಜನ್‌ ಮತ್ತು ವಿಕ್ಸ್‌ ಇನ್ಹೇಲರ್‌ ಜೊತೆಯಲ್ಲಿ ರಾಣಿಯವರ ಸಂಚಿ. ಬಲ: ಕೆಲವೇ ಕೆಲವು ಮಹಿಳೆಯರು ಅಡಿಯಲ್ಲಿ ರಬ್ಬರ್‌ ಇಟ್ಟು ಹೊಲಿಯಲಾದ ಕಪ್ಪು ಕಾಲುಚೀಲಗಳನ್ನು ಧರಿಸುತ್ತಾರೆ

ಉಪ್ಪನ್ನು ಒಟ್ಟುಮಾಡುವುದು, ಅಲ್ಲಿಂದ ಹೊತ್ತು ಸಾಗಿಸುವುದು ಹೀಗೆ ಯಾವುದೇ ಕೆಲಸದ ಮೂಲಕ ದಿನಕ್ಕೆ ಒಬ್ಬ ಕೆಲಸಗಾರರು 5ರಿಂದ 7 ಟನ್‌ ಉಪ್ಪನ್ನು ನಿರ್ವಹಿಸುತ್ತಾರೆ. ಪ್ರಸ್ತುತ ಒಂದು ಟನ್‌ ಉಪ್ಪು 1,600ರಿಂದ 8,000 ರೂಪಾಯಿಗಳ ಬೆಲೆ ಬಾಳುತ್ತದೆ. ಆದರೆ ಒತ್ತಿ ಹೇಳುವಂತೆ ಒಂದು ದಿನದ ಮಳೆ ಒಂದು ವಾರದ ದುಡಿಮೆಗೆ ಕಲ್ಲು ಹಾಕಬಲ್ಲದು.

ಆದರೆ, ಇದೆಲ್ಲದರ ನಡುವೆ ಅವವರಿಗೆ ಹೆಚ್ಚು ನೋವುಂಟುಮಾಡುತ್ತಿರುವ ವಿಷಯವೆಂದರೆ, ಇನ್ನಷ್ಟು ತೀವ್ರಗೊಳ್ಳುತ್ತಿರುವ 1991ರ ನಂತರದ ಉದಾರೀಕರಣದ ನೀತಿಗಳಡಿ "ದೊಡ್ಡ, ಖಾಸಗಿ ಕಂಪನಿಗಳಿಗೆ ಮಾರುಕಟ್ಟೆಯನ್ನು ಪ್ರವೇಶಿಸಲು ಅನುಮತಿಸಿದ್ದು." ಕೃಷ್ಣಮೂರ್ತಿ ಹೇಳುತ್ತಾರೆ, "ಹಲವು ತಲೆಮಾರುಗಳಿಂದ ಈ ಕಠಿಣ ನೆಲದಲ್ಲಿ ನಿಂತು ಉಪ್ಪನ್ನು ಬೆಳೆದವರು ದಲಿತರು ಮತ್ತು ಮಹಿಳೆಯರು.  ಇಲ್ಲಿರುವ 70ರಿಂದ 80 ಶೇಕಡಾದಷ್ಟು ಕಾರ್ಮಿಕರು ಈ ಸಾಮಾಜಿಕ ಹಿನ್ನೆಲೆಯಿಂದ ಬಂದವರು. ಇಂತಹ ಜನರಿಗೆ ನೇರವಾಗಿ ಉಪ್ಪಿನ ಆಗರಗಳನ್ನು ಯಾಕೆ ಗುತ್ತಿಗೆ ನೀಡುತ್ತಿಲ್ಲ? ಈ ಆಗರಗಳಿಗಾಗಿ ಇವರು ಬಹಿರಂಗ ಹರಾಜಿನಲ್ಲಿ ದೊಡ್ಡ ಕಾರ್ಪೊರೇಟ್‌ಗಳೊಂದಿಗೆ ಸ್ಪರ್ಧಿಸಲು ಸಾಧ್ಯವೆ?"

ಇನ್ನು ಕಾರ್ಪೊರೇಷನ್‌ಗಳು ರಂಗಕ್ಕೆ ಪ್ರವೇಶಿಸಿದರೆ ಆಗರಗಳ ಗಾತ್ರವು ಹತ್ತು ಎಕರೆಗಳಿಂದ ಸಾವಿರಾರು ಎಕರೆಗಳವರೆಗೆ ವಿಸ್ತರಿಸುತ್ತದೆ. ಆಗರ ಬಹಳ ದೊಡ್ಡದಾಗುವಾಗ ಕಾರ್ಯಾಚರಣೆ ಯಾಂತ್ರಿಕವಾಗುತ್ತದೆನ್ನುವುದು ಕೃಷ್ಣಮೂರ್ತಿಯವರ ಖಚಿತ ನಂಬಿಕೆ. "ಹಾಗಾದರೆ ಈ 50,000 ಉಪ್ಪಿನ ಆಗರದ ಕೆಲಸಗಾರರ ಗತಿಯೇನು?"

ಪ್ರತಿ ವರ್ಷ ಈಶಾನ್ಯ ಮಾನ್ಸೂನ್ ಸಾಮಾನ್ಯವಾಗಿ ಪ್ರಾರಂಭವಾಗುವ  ಅಕ್ಟೋಬರ್ ತಿಂಗಳ15ರಿಂದ - ಜನವರಿ 15ರವರೆಗೆ ಯಾವುದೇ ಕೆಲಸವಿರುವುದಿಲ್ಲ. ಈ ಮೂರು ತಿಂಗಳುಗಳನ್ನು ಕಳೆಯವುದು ಬಹಳ ಕಷ್ಟ ಮತ್ತು ಈ ಸಮಯದಲ್ಲಿ ಮನೆಗಳು ಸಾಲದ ಹಣ, ಕನಸುಗಳ ಸಮಾಧಿಯ ಮೇಲೆ ನಡೆಯುತ್ತವೆ. ಉಪ್ಪಿನ ಆಗರದ ಕೆಲಸಗಾರರಾದ 57 ವರ್ಷದ ಎಂ.ವೇಲುಸಾಮಿ, ಉಪ್ಪು ತಯಾರಿಕೆಯ ಬದಲಾಗುತ್ತಿರುವ ಲಕ್ಷಣಗಳ ಕುರಿತು ಇನ್ನಷ್ಟು ಮಾತನಾಡುತ್ತಾರೆ. "ನನ್ನ ಹೆತ್ತವರ ಕಾಲದಲ್ಲಿ, ಸಣ್ಣ ಉತ್ಪಾದಕರು ಉಪ್ಪನ್ನು ಬೆಳೆದು ಮಾರಾಟ ಮಾಡಬಹುದಿತ್ತು."

ಎರಡು ನೀತಿ ಬದಲಾವಣೆಗಳಿಂದ ಅದೆಲ್ಲವೂ ಅಂತ್ಯಗೊಂಡಿತು. ಕೇಂದ್ರ ಸರ್ಕಾರ 2011ರಲ್ಲಿ ಉಪ್ಪನ್ನು ಅಯೋಡಿಕರಿಸಬೇಕು ಎಂದು ಘೋಷಿಸಿತ್ತು. ಸ್ವಲ್ಪ ಸಮಯದ ನಂತರ, ಸರ್ಕಾರವು ಉಪ್ಪು ಅಗರದ ಗುತ್ತಿಗೆ ಒಪ್ಪಂದಗಳನ್ನು ಬದಲಾಯಿಸಿತು. ಸಂವಿಧಾನವು ಉಪ್ಪನ್ನು ಒಕ್ಕೂಟ ಸರ್ಕಾರದಡಿ ಪಟ್ಟಿ ಮಾಡಿರುವುದರಿಂದ ಸರ್ಕಾರವು ಹಾಗೆ ಮಾಡುವ ಅಧಿಕಾರವನ್ನು ಹೊಂದಿತ್ತು.

The sale pan workers may have been in this line for four or five decades, but still have no social security, no paid leave, no childcare or pregnancy benefits
PHOTO • M. Palani Kumar
The sale pan workers may have been in this line for four or five decades, but still have no social security, no paid leave, no childcare or pregnancy benefits
PHOTO • M. Palani Kumar

ಈ ಕಾರ್ಮಿಕರು ನಾಲ್ಕೈದು ದಶಕಗಳಿಂದ ಇದೇ ಕೆಲಸ ಮಾಡುತ್ತಿದ್ದರಬಹುದು. ಆದರೆ ಇನ್ನೂ ಯಾವುದೇ ಸಾಮಾಜಿಕ ಭದ್ರತೆ, ಯಾವುದೇ ವೇತನ ಸಹಿತ ರಜೆ, ಶಿಶುಪಾಲನಾ ಅಥವಾ ಗರ್ಭಧಾರಣೆಯ ಸಮಯದಲ್ಲಿ ದೊರೆಯಬೇಕಿರುವ ಪ್ರಯೋಜನಗಳು ದೊರೆತಿಲ್ಲ

2011ರ ಭಾರತ ಸರ್ಕಾರದ ನಿಯಮಾವಳಿಯು "ಯಾವುದೇ ವ್ಯಕ್ತಿಯು ಅಯೋಡಿನ್ ಬೆರೆಸಿರದ , ಸಾಮಾನ್ಯ ಉಪ್ಪನ್ನು ನೇರವಾಗಿ ಮಾನವ ಬಳಕೆಗಾಗಿ ಮಾರಾಟ ಮಾಡುವಂತಿಲ್ಲ, ನೀಡುವಂತಿಲ್ಲ ಅಥವಾ ಮಾರಾಟದ ಉದ್ದೇಶಕ್ಕಾಗಿ ತನ್ನ ಆವರಣದಲ್ಲಿ ಇಟ್ಟುಕೊಳ್ಳುವಂತಿಲ್ಲ ಅಥವಾ ಪ್ರದರ್ಶಿಸುವಂತಿಲ್ಲ." ಇದರರ್ಥ ಸಾಮಾನ್ಯ ಉಪ್ಪು ಕಾರ್ಖಾನೆಯ ಉತ್ಪನ್ನವಷ್ಟೇ ಆಗಿರುತ್ತದೆ. (ಕಲ್ಲು ಉಪ್ಪು, ಕಪ್ಪು ಉಪ್ಪು ಮತ್ತು ಹಿಮಾಲಯನ್ ಗುಲಾಬಿಯಂತಹ ಕೆಲವು ವರ್ಗಗಳಿಗೆ ವಿನಾಯಿತಿ ನೀಡಲಾಗಿದೆ.) ಇದರರ್ಥ ಈ ಸಾಂಪ್ರದಾಯಿಕ ಉಪ್ಪು ಬೆಳೆ ಕೊಯ್ಲು ಮಾಡುವವರು ತಮ್ಮ ಅಧಿಕಾರ ಕಳೆದುಕೊಂಡರು. ಇದನ್ನು ಕಾನೂನುಬದ್ಧವಾಗಿ ಪ್ರಶ್ನಿಸಲಾಯಿತು ಮತ್ತು ಸುಪ್ರೀಂ ಕೋರ್ಟ್ ನಿಬಂಧನೆಯನ್ನು ಬಲವಾಗಿ ಟೀಕಿಸಿತು ಸಹ- ಆದರೆ ನಿಷೇಧವು ಪರಿಣಾಮಕಾರಿಯಾಗಿ ಜಾರಿಯಲ್ಲಿದೆ . ಆಹಾರಕ್ಕಾಗಿ ಬಳಸುವ ಸಾಮಾನ್ಯ ಉಪ್ಪನ್ನು ಅಯೋಡೈಸ್ ಮಾಡದ ಹೊರತು ಮಾರಾಟ ಮಾಡಲು ಸಾಧ್ಯವಿಲ್ಲ.

ಆ ಬದಲಾವಣೆಗಳಲ್ಲಿ ಎರಡನೆಯದು ಅಕ್ಟೋಬರ್ 2013ರಲ್ಲಿ ಸಂಭವಿಸಿತು. "ಟೆಂಡರ್ ಆಹ್ವಾನದ ಮೂಲಕ ಕೇಂದ್ರ ಸರ್ಕಾರದ ಭೂಮಿಯನ್ನು ಉಪ್ಪು ತಯಾರಿಕೆಗೆ ಗುತ್ತಿಗೆ ನೀಡಲಾಗುವುದು" ಎಂದು ಕೇಂದ್ರ ಅಧಿಸೂಚನೆಯೊಂದು ಹೇಳಿತ್ತು. ಇದಲ್ಲದೆ, ಅಸ್ತಿತ್ವದಲ್ಲಿರುವ ಯಾವುದೇ ಗುತ್ತಿಗೆಯನ್ನು ನವೀಕರಿಸಲಾಗುವುದಿಲ್ಲ. ಹೊಸ ಟೆಂಡರ್ ಗಳನ್ನು ಕರೆಯಲಾಗುವುದು, ಮತ್ತು ಗುತ್ತಿಗೆ ಅವಧಿ ಮುಗಿದಲ್ಲಿ, ಪ್ರಸ್ತುತ ಭೋಗ್ಯದಾರರು "ಹೊಸ ಆಕಾಂಕ್ಷಿಗಳೊಂದಿಗೆ ಭಾಗವಹಿಸಬಹುದು." ಇದು ದೊಡ್ಡ ಉತ್ಪಾದಕರಿಗೆ ಮಾತ್ರ ಅನುಕೂಲಕರವಾಗಿದೆ ಎಂದು ಕೃಷ್ಣಮೂರ್ತಿ ಹೇಳುತ್ತಾರೆ.

ನಾಲ್ಕು ದಶಕಗಳ ಹಿಂದೆ, ಝಾನ್ಸಿ ನೆನಪಿಸಿಕೊಳ್ಳುತ್ತಾರೆ, ಅವರ ಹೆತ್ತವರು ಉಪ-ಗುತ್ತಿಗೆಗೆ ಭೂಮಿಯನ್ನು ಹೊಂದಿದ್ದರು, ಅಗೆದ ಬಾವಿಯಿಂದ ಕೈ ರಾಟೆ (ಮತ್ತು ತಾಳೆ ಗರಿಬುಟ್ಟಿಯನ್ನು ಬಕೆಟ್ ರೀತಿ) ಎತ್ತಿ 10 ಸಣ್ಣ ಕೊಳಗಳಲ್ಲಿ ಉಪ್ಪನ್ನು ಬೆಳೆಯುತ್ತಿದ್ದರು. ಪ್ರತಿದಿನ, ಅವರ ತಾಯಿ ತನ್ನ ತಲೆಯ ಮೇಲೆ ತಾಳೆ ಗರಿಬುಟ್ಟಿಯಲ್ಲಿ 40 ಕಿಲೋ ಉಪ್ಪನ್ನು ಹೊತ್ತು ಅದನ್ನು ಮಾರಲು ಪಟ್ಟಣಕ್ಕೆ ನಡೆದುಕೊಂಡು ಹೋಗುತ್ತಿದ್ದರು. "ಐಸ್ ಕಂಪನಿಗಳು ಅಷ್ಟೂ ಉಪ್ಪನ್ನು 25 ಅಥವಾ 30 ರೂಪಾಯಿಗಳಿಗೆ ಖರೀದಿಸುತ್ತಿದ್ದವು" ಎಂದು ಅವರು ಹೇಳುತ್ತಾರೆ. ಮತ್ತು ಅವರ ತಾಯಿ ಹೋಗಲು ಸಾಧ್ಯವಾಗದಿದ್ದಾಗ, ಝಾನ್ಸಿಯವರನ್ನು ಸಣ್ಣ ಬುಟ್ಟಿಯೊಂದಿಗೆ ಕಳುಹಿಸುತ್ತಿದ್ದರು. ಅವರು ಒಂದು ಅಳತೆ ಉಪ್ಪನ್ನು 10 ಪೈಸೆಗೆ ಮಾರಾಟ ಮಾಡಿದ್ದನ್ನು ಸಹ ನೆನಪಿಸಿಕೊಳ್ಳುತ್ತಾರೆ. "ನಮ್ಮ ಆಗರಗಳಿದ್ದ ನೆಲದಲ್ಲಿ ಈಗ ಕಟ್ಟಡಗಳು - ವಸತಿ ಗೃಹಗಳಿವೆ" ಎಂದು ಝಾನ್ಸಿ ಹೇಳುತ್ತಾರೆ. "ಭೂಮಿ ನಮ್ಮ ಕೈಗಳಿಂದ ಹೇಗೆ ಜಾರಿಹೋಯಿತೆನ್ನುವುದು ನನಗೆ ಗೊತ್ತಿಲ್ಲ," ಎಂದು ಅವರು ಬಹಳ ನೋವಿನ ದನಿಯಲ್ಲಿ ಹೇಳುತ್ತಾರೆ. ಆ ಕ್ಷಣ ಬೀಸುವ ಗಾಳಿಯಲ್ಲೂ ಉಪ್ಪಿನ ಕಹಿಯಿದ್ದಂತೆನಿಸಿತು.

ಬದುಕು ಎಲ್ಲ ಕಾಲದಲ್ಲೂ ಕಷ್ಟದಲ್ಲೇ ನಡೆಯುತ್ತಿತ್ತೆಂದು ಆಗರದ ಕೆಲಸಗಾರರು ಹೇಳುತ್ತಾರೆ. ಹಲವು ದಶಕಗಳವರೆಗೆ ಮರಗೆಣಸು, ಕಿರುಧಾನ್ಯಗಳ (ಅಪರೂಪಕ್ಕೆ ಅನ್ನ) ಜೊತೆ ಮೀನ್‌ ಕೊಳಂಬು (ಮೀನಿನ ಸಾರು) ಅವರ ದಿನದ ಊಟವಾಗಿರುತ್ತಿತ್ತು. ಈಗ ದೈನಂದಿನ ಆಹಾರವಾಗಿರುವ ಇಡ್ಲಿ ಅಂದು ದೀಪಾವಳಿಯಂದು ಮಾಡುವ ವಿಶೇಷ ತಿನಿಸಾಗಿತ್ತು. ಹಬ್ಬದ ದಿನದ ಬೆಳಗಿನ ತಿಂಡಿಯನ್ನು ನೆನೆಯುತ್ತಾ ಕಾತರದಿಂದ ಮಲಗುತ್ತಿದ್ದ ದಿನಗಳನ್ನು ಝಾನ್ಸಿ ನೆನಪಿಸಿಕೊಳ್ಳುತ್ತಾರೆ.

ಎರಡು ದೊಡ್ಡ ಹಬ್ಬಗಳಾದ ದೀಪಾವಳಿ ಮತ್ತು ಪೊಂಗಲ್ ಮಾತ್ರ ಹೊಸ ಬಟ್ಟೆಗಳನ್ನು ಧರಿಸುವ ಸಂದರ್ಭಗಳು. ಅಲ್ಲಿಯವರೆಗೆ ಅವರು ಹಳೆಯ, ಹರಿದ ಬಟ್ಟೆಗಳನ್ನೇ ತೊಡುತ್ತಿದ್ದರು, ವಿಶೇಷವಾಗಿ ಹುಡುಗರು, "ಅವರ ಪ್ಯಾಂಟುಗಳು ಹರಿದು16 ತೂತುಗಳಾಗಿರುತ್ತಿದ್ದವು, ಎಲ್ಲ ತೂತುಗಳನ್ನೂ ಸೂಜಿ ದಾರ ಬಳಸಿ ಹೊಲಿದಿರಲಾಗಿರುತ್ತಿತ್ತು" ಎಂದು ಝಾನ್ಸಿ ಹೇಳುತ್ತಾ ಗಾಳಿಯಲ್ಲಿ ಕೈಯಾಡಿಸುತ್ತಾ ಹೊಲಿಯುವುದನ್ನು ನಟಿಸಿದರು. ಆಗೆಲ್ಲ ಅವರು ತಾಳೆಯ ಎಲೆಯನ್ನು ಬೂಟಿನಂತೆ ಗೋಣಿ ದಾರ ಬಳಸಿ ಕಟ್ಟಿಕೊಳ್ಳುತ್ತಿದ್ದರು. ಆಗ ನೀರು ಇಷ್ಟು ಲವಣಾಂಶವನ್ನು ಹೊಂದಿರುತ್ತಿರಲಿಲ್ಲವಾದ್ದರಿಂದ ಅದು ಸಾಕಷ್ಟು ರಕ್ಷಣೆಯನ್ನು ನೀಡುತ್ತಿತ್ತು.  ಇಂದು ಉಪ್ಪು ಕೈಗಾರಿಕಾ ಸರಕು ಮತ್ತು ಮನೆ ಬಳಕೆಯ ಪ್ರಮಾಣ ಒಟ್ಟು ಬಳಕೆಯ ಒಂದು ಸಣ್ಣ ಭಾಗ ಮಾತ್ರವೇ.

Life has always been hard, the salt workers say. They only get a brief break between work, to sip some tea, in their shadeless workplace
PHOTO • M. Palani Kumar
Life has always been hard, the salt workers say. They only get a brief break between work, to sip some tea, in their shadeless workplace
PHOTO • M. Palani Kumar

ಬದುಕು ಎಲ್ಲ ಕಾಲದಲ್ಲೂ ಕಷ್ಟದಲ್ಲೇ ನಡೆಯುತ್ತಿತ್ತೆಂದು ಆಗರದ ಕೆಲಸಗಾರರು ಹೇಳುತ್ತಾರೆ. ನೆರಳಿಲ್ಲದ ಕೆಲಸದ ಸ್ಥಳದಲ್ಲಿ ಟೀ ಕುಡಿಯಲು ಮಾತ್ರವೇ ಒಂದೆರಡು ಕ್ಷಣದ ವಿರಾಮವನ್ನು ಪಡೆಯುತ್ತಾರೆ

*****

“ನಾನು ನನ್ನ ಹೆಸರನ್ನು ಬರೆಯಬಲ್ಲೆ, ಬಸ್‌ ಮಾರ್ಗಗಳನ್ನು ಓದಬಲ್ಲೆ ಮತ್ತು ಎಮ್‌ಜಿಆರ್‌ ಸಿನೆಮಾಗಳ ಹಾಡುಗಳನ್ನು ಹಾಡಬಲ್ಲೆ.”
– ಎಸ್.‌ ರಾಣಿ,  ಉಪ್ಪಿನ ಆಗರದ ಕೆಲಸಗಾರ್ತಿ ಮತ್ತು ನಾಯಕಿ

ಸಂಜೆ ಕೆಲಸ ಮುಗಿದ ನಂತರ ರಾಣಿ ನಮ್ಮನ್ನು ಅವರ ಮನೆಗೆ ಕರೆದುಕೊಂಡು ಹೋದರು. ಅವರ ಒಂದು ಕೋಣೆಯ ಮನೆಗೆ ಕಾಂಕ್ರೀಟ್ ಗೋಡೆಗಳಿದ್ದವು, ಒಂದು ಮೂಲೆಯಲ್ಲಿ ಸೋಫಾ, ಅದರ ಹಿಂದೆ ಸೈಕಲ್ ಮತ್ತು ಅಲ್ಲೇ ಕಟ್ಟಿದ್ದ ಹಗ್ಗದಲ್ಲಿ ಒಂದಷ್ಟು ಬಟ್ಟೆಗಳು ನೇತಾಡುತ್ತಿದ್ದವು. ನಮಗೆ ಒಂದು ಕಪ್‌ ಬಿಸಿಯಾದ ಚಹಾ ನೀಡಿದ ಅವರು, ತಾನು 29 ವರ್ಷದವಳಾಗಿದ್ದಾಗ ರಿಜಿಸ್ಟ್ರಾರ್ ಕಛೇರಿಯಲ್ಲಿ ನಡೆದ ತನ್ನ ಮದುವೆಯ ಕುರಿತು ವಿವವರಿಸ ತೊಡಗಿದರು. ಹಳ್ಳಿಗಳಲ್ಲಿ ಹೆಣ್ಣು ಮಕ್ಕಳ ಮದುವೆ ಇಷ್ಟೊಂದು ವಿಳಂಬವಾಗುವುದು ಸಾಮಾನ್ಯ ಸಂಗತಿಯಲ್ಲ. ಬಹುಶಃ ಈ ವಿಳಂಬಕ್ಕೆ ಅವರ ಕುಟುಂಬದ ಬಡತನವೇ ದೊಡ್ಡ ಕಾರಣ. ರಾಣಿಯವರಿಗೆ ಮೂವರು ಹೆಣ್ಣುಮಕ್ಕಳು (ತಂಗಮ್ಮಾಳ್, ಸಂಗೀತಾ ಮತ್ತು ಕಮಲಾ) ಮತ್ತು ಒಬ್ಬ ಮಗನಿದ್ದು (ಕುಮಾರ್) ಅವರೊಡನೆ ವಾಸಿಸುತ್ತಿದ್ದಾರೆ.

ಮದುವೆಯ ಸಮಯದಲ್ಲೂ ನಮ್ಮ ಬಳಿ “ಮದುವೆ ಸಮಾರಂಭಗಳಿಗೆ ಹಣವಿರಲಿಲ್ಲ” ಎನ್ನುತ್ತಾರವರು. ನಂತರ ನಮಗೆ ಅವರ ಮನೆಯಲ್ಲಿದ್ದ ಫೋಟೊ ಆಲ್ಬಮ್‌ಗಳನ್ನು ತೋರಿಸಿದರು. ಒಂದು ಅವರ ಮಗಳ ಒಸಗೆಯ ಸಂದರ್ಭದ ಆಲ್ಬಮ್‌ ಆದರೆ, ಇನ್ನೊಂದು ಇನ್ನೊಬ್ಬ ಮಗಳ ಮದುವೆಯದು. ಫೋಟೊಗಳಲ್ಲಿ ಕುಟುಂಬ ಕುಟುಂಬ ಉತ್ತಮ ಬಟ್ಟೆಗಳನ್ನು ಧರಿಸಿತ್ತು. ಮಗ ಕುಮಾರ್‌ ನರ್ತಿಸುತ್ತಿರುವುದು, ಹಾಡಿ ನಲಿಯುತ್ತಿರುವುದನ್ನೆಲ್ಲ ನೋಡಿದೆವು... ಇದೆಲ್ಲದಕ್ಕೆ ಹಣ ಹೊಂದಿಸಲು ಅವರು ಉಪ್ಪಿನ ಆಗರದಲ್ಲಿ ದುಡಿದು ಸವೆದಿದ್ದಾರೆ.

ನಾವು ಫೋಟೊಗಳನ್ನು ನೋಡುತ್ತಾ, ನಗುತ್ತಾ ಇರುವಾಗ ರಾಣಿಯವರು ತಮ್ಮ ಕೈಯಿಂದ ತಯಾರಿಸಿದ ವೈರಿನ ಬುಟ್ಟಿಯ ಕೆಲಸವನ್ನು ಮುಗಿಸಿ ಅದರ ಹಿಡಿಕೆಗಳನ್ನು ಬಿಗಿಗೊಳಿಸುತ್ತಿದ್ದರು. ಯೂಟ್ಯೂಬ್‌ ಮೂಲಕ ನೆಲ್ಲಿಕಾಯಿಯ ಮೇಲಿನ ಗೆರೆಗಳ ರೀತಿಯಲ್ಲಿ ಬುಟ್ಟಿ ಹೆಣೆಯುವುದನ್ನು ಕಲಿತು ಕುಮಾರ್‌ ಬುಟ್ಟಿಯನ್ನು ಅದರ ತಳದಿಂದ ನೇಯ್ದಿದ್ದರು. ಕೆಲವು ದಿನ ಅವರಿಗೆ ಇಂತಹ ಕೆಲಸಗಳಿಗೆ ಸಮಯ ಸಿಗುವುದಿಲ್ಲ. ಅವರು ಬೇರೆ ಉಪ್ಪಿನ ಅಗರಗಳಿಗೆ ಒಂದಿಷ್ಟು ಹೆಚ್ಚು ಸಂಪಾದಿಸಲೆಂದು ಎರಡನೇ ಪಾಳಿಯ ಕೆಲಸಕ್ಕೆ ಹೋಗುತ್ತಾರೆ. ಹೆಂಗಸರ ಎರಡನೇ ಪಾಳಿಯ ಕೆಲಸ ಕೆಲಸ ಮನೆಯಲ್ಲಿರುತ್ತದೆ. “ಅವರಿಗೆ ಪುರುಸೊತ್ತು ಸಿಗುವುದು ಬಹಳ ಅಪರೂಪ” ಎಂದು ಒತ್ತಿ ಹೇಳುತ್ತಾರೆ ಕುಮಾರ್

ರಾಣಿಯವರಿಗೆ ವಿಶ್ರಾಂತಿ ಎನ್ನುವುದೇ ಸಿಕ್ಕಿಲ್ಲ. ಬಾಲ್ಯದಲ್ಲಿಯೂ. ಅವರು ಕೇವಲ ಮೂರು ವರ್ಷದವರಿದ್ದಾಗ,ಅವರ ತಾಯಿ ಮತ್ತು ಸಹೋದರಿಯೊಂದಿಗೆ ಸರ್ಕಸ್‌ನಲ್ಲಿ ಕೆಲಸ ಮಾಡಲು ಕಳುಹಿಸಲಾಯಿತು. "ಅದರ ಹೆಸರು ಟುಟಿಕೋರಿನ್ ಸೊಲೊಮನ್ ಸರ್ಕಸ್, ಮತ್ತು ನನ್ನ ತಾಯಿ 'ಹೈ-ವೀಲ್' [ಒಂದು ಚಕ್ರದ] ಸೈಕ್ಲಿಂಗ್‌ನಲ್ಲಿ ಪರಿಣತಿ ಹೊಂದಿದ್ದರು." ರಾಣಿ ಚಮತ್ಕಾರಿಕ ಪ್ರದರ್ಶನದಲ್ಲಿ ನಿಪುಣರಾಗಿದ್ದರು, ಅವರ ಅಕ್ಕ ಚೆಂಡಿನ ಚಮತ್ಕಾರದಲ್ಲಿ ಪಳಗಿದ್ದರು. "ನನ್ನ ಅಕ್ಕ ಬಿಗಿಯಾದ ಹಗ್ಗದ ಮೇಲೆ ನಡೆಯುವುದರಲ್ಲಿ ನಿಪುಣಳಾಗಿದ್ದಳು. ನಾನು ಬೆನ್ನನ್ನು ಹಿಂದಿನಿಂದ ಬಾಗಿಸಿ ನನ್ನ ಬಾಯಿಂದ ಕಪ್ ಎತ್ತುತ್ತಿದ್ದೆ." ಅವರು ಸರ್ಕಸ್ ತಂಡದೊಂದಿಗೆ ಮಧುರೈ, ಮನಪ್ಪರೈ, ನಾಗರ್‌ಕೋಯಿಲ್, ಪೊಲ್ಲಾಚಿ ಮುಂತಾದ ನಗರಗಳಿಗೆ ಪ್ರಯಾಣಿಸುತ್ತಿದ್ದರು.

ರಾಣಿ ಎಂಟು ವರ್ಷದವರಿರುವಾಗ, ಸರ್ಕಸ್ ಅವರ ಊರಾದ ಟ್ಯುಟಿಕೊರಿನ್‌ಗೆ ಬಂದಾಗಲೆಲ್ಲ ರಾಣಿಯವರನ್ನು ಉಪ್ಪಿನ ಅಗರದಲ್ಲಿ ಕೆಲಸಕ್ಕೆ ಕಳುಹಿಸಲಾಗುತ್ತಿತ್ತು. ಅಂದಿನಿಂದ ಉಪ್ಪಿನ ಅಗರವೇ ರಾಣಿಯವರ ಜಗತ್ತಾಯಿತು. ಓದೂ ಅಲ್ಲಿಗೆ ಕೊನೆಯಾಯಿತು. “ನಾನು ಮೂರನೇ ತರಗತಿಯವರೆಗೆ ಓದಿದ್ದೇನೆ. ನನ್ನ ಹೆಸರನ್ನು ಬರೆಯಬಲ್ಲೆ. ಬಸ್ಸಿನ ರೂಟಿನ ಬೋರ್ಡುಗಳನ್ನು ಓದಬಲ್ಲೆ. ಎಮ್‌ಜಿಆರ್‌ ಸಿನೆಮಾದ ಹಾಡುಗಳನ್ನು ಕೂಡಾ ಹಾಡಬಲ್ಲೆ.” ಅಂದಿನ ದಿನ ಬೆಳಗ್ಗೆ ರೇಡಿಯೋದಲ್ಲಿ ಬರುತ್ತಿದ್ದ ಎಮ್‌ಜಿಆರ್‌ ಸಿನೆಮಾದ ಹಾಡೊಂದಕ್ಕೆ ಅವರೂ ದನಿಗೂಡಿಸಿದ್ದರು. ಅದು ಒಳಿತು ಮಾಡುವುದರ ಕುರಿತಾದ ಹಾಡಾಗಿತ್ತು.

Rani and Jhansi with their heavy tools: just another day of backbreaking labour
PHOTO • M. Palani Kumar
Rani and Jhansi with their heavy tools: just another day of backbreaking labour
PHOTO • M. Palani Kumar

ತಾವು ಬಳಸುವ ಭಾರವಾದ ಉಪಕರಣಗಳೊಂದಿಗೆ ರಾಣಿ ಮತ್ತು ಝಾನ್ಸಿ: ಎಂದಿನಂತೆ ಬೆನ್ನಿನ ಕೋಲು ಮುರಿಯುವಂತೆ ದುಡಿಯುವ ಶ್ರಮದಾಯಕ ದಿನವೊಂದರ ನೋಟ

ರಾಣಿ ನೃತ್ಯದಲ್ಲೂ ಅದ್ಭುತ ಎಂದು ಅವರ ಜೊತೆ ಕೆಲಸ ಮಾಡುವ ಮಹಿಳೆಯರು ಕೀಟಲೆ ಮಾಡಿದರು. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ (ತೂತುಕುಡಿ ಸಂಸದೆ ಕನಿಮೊಳಿ ಕರುಣಾನಿಧಿ ಮುಖ್ಯ ಅತಿಥಿಯಾಗಿದ್ದರು) ರಾಣಿ ಕರಗಾಟ್ಟಂ ನೃತ್ಯವನ್ನು ಪ್ರದರ್ಶಿಸಿದ ಬಗ್ಗೆ ಮಹಿಳೆಯರು ಹೇಳಿದಾಗ ಅವರು ತುಸು ನಾಚಿಕೊಂಡರು. ರಾಣಿಯು ವೇದಿಕೆಯ ಮೇಲೆ ಮಾತನಾಡಲು ಕಲಿಯುತ್ತಿದ್ದಾರೆ ಮತ್ತು ತನ್ನ ಕುಳು, ಸ್ವ-ಸಹಾಯ ಸಂಘದ ಮಹಿಳೆಯರು ಮತ್ತು ಉಪ್ಪಿನ ಕಾರ್ಮಿಕರ ನಾಯಕಿಯಾಗಿ, ಸರ್ಕಾರದ ಮುಂದೆ ಅವರನ್ನು ಪ್ರತಿನಿಧಿಸಲು ಪ್ರಯಾಣಗಳನ್ನೂ ಮಾಡುತ್ತಾರೆ. ಅವರ ಜೊತೆಗಾರ ಹೆಂಗಸರು "ಅವಳು ನಮ್ಮ ಉಪ್ಪಿನ ಅಗರದ ರಾಣಿ" ಎಂದು ಹೇಳಿದಾಗ ಅವರು ಸಂಕೋಚದಿಂದ ಮುಗುಳ್ನಕ್ಕರು.

ಕೃಷ್ಣಮೂರ್ತಿಯವರು ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲೆಂದು 2017ರಲ್ಲಿ ಚೆನ್ನೈಗೆ ತೆರಳಿದ್ದರು. "ನಮ್ಮಲ್ಲಿ ಅನೇಕರು ಮೂರು ದಿನ ಅಲ್ಲಿಗೆ ಹೋಗಿದ್ದೆವು. ಅದೊಂದು ಸಂಭ್ರಮದ ಪ್ರವಾಸವಾಗಿತ್ತು! ಅಂದು ನಾವು ಹೋಟೆಲ್‌ನಲ್ಲಿ ಉಳಿದುಕೊಂಡಿದ್ದೆವು ಮತ್ತು ಅಲ್ಲಿಂದ ಎಂಜಿಆರ್ ಅವರ ಸಮಾಧಿ, ಅಣ್ಣಾ ಸಮಾಧಿ ನೋಡಲು ಹೋದೆವು. ಊಟವಾಗಿ ನೂಡಲ್ಸ್, ಚಿಕನ್, ಇಡ್ಲಿ, ಮತ್ತು ಪೊಂಗಲ್ ತಿಂದಿದ್ದೆವು. ಮರೀನಾ ಬೀಚ್‌ಗೆ ಹೋಗುವ ಹೊತ್ತಿಗೆ ಕತ್ತಲೆಯಾಗಿತ್ತಾದರೂ ಅದೊಂದು ಅವಿಸ್ಮರಣೀಯ ಅನುಭವವಾಗಿತ್ತು!"

ಮನೆಯಲ್ಲಿ ಅವರ ಅಡುಗೆ ಬಹಳ ಸರಳವಾಗಿರುತ್ತದೆ. ಅನ್ನ ಮತ್ತು ತರಕಾರಿ, ಈರುಳ್ಳಿ ಅಥವಾ ಮೀನು ಹಾಕಿ ಕೊಳಂಬು (ಸಾರು) ಮಾಡುತ್ತಾರೆ). ಜೊತೆಗೆ ನೆಂಚಿಕೊಳ್ಳಲೆಂದು ಒಣ ಮೀನನ್ನು ಸುಟ್ಟುಕೊಳ್ಳುತ್ತಾರೆ. ಅಥವಾ ಏನಾದರೂ ತರಕಾರಿಯ ಪಲ್ಯ ಮಾಡುತ್ತಾರೆ. ಸಾಮಾನ್ಯವಾಗಿ ಎಲೆಕೋಸು ಮತ್ತು ಬೀಟ್ರೂಟ್‌ ಪಲ್ಯ ಮಾಡುತ್ತಾರೆ. “ಕೈಯಲ್ಲಿ ದುಡ್ಡಿಲ್ಲದಿದ್ದಾಗ ಕರಿ ಕಾಫಿ ಕುಡಿಯುತ್ತೇವೆ.” ಎನ್ನುವ ಅವರಲ್ಲಿ ಆ ಕುರಿತು ಯಾವುದೇ ಬೇಸರವಿಲ್ಲ. ಕ್ರಿಶ್ಚಿಯನ್‌ ಧರ್ಮೀಯರಾದ ಅವರು ಚರ್ಚಿಗೆ ಹೋಗುತ್ತಾರೆ ಮತ್ತು ಸ್ತೋತ್ರಗಳನ್ನು ಪಠಿಸುತ್ತಾರೆ. ಅವರ ಪತಿ ಸೇಸು ಅಪಘಾತವೊಂದರಲ್ಲಿ ಮರಣ ಹೊಂದಿದ ನಂತರ ಮಕ್ಕಳು ಅವರೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಅದರಲ್ಲೂ ಮಗನು ತನಗೆ ಒದಗಿಬರುವುದನ್ನು ಅವರು ವಿಶೇಷವಾಗಿ ಹೇಳುತ್ತಾರೆ. “ಒಣ್ಣುಮ್‌ ಕುರೈ ಸೊಲ್ಲ ಮುಡಿಯಾದು,” ಯಾವುದರ ಕುರಿತಾಗಿಯೂ ನನಗೆ ದೂರುಗಳಿಲ್ಲ. “ದೇವರು ನನಗೆ ‍ಒ‍ಳ್ಳೆಯ ಮಕ್ಕಳನ್ನು ಕೊಟ್ಟಿದ್ದಾನೆ.”

ರಾಣಿ ತಮ್ಮ ಮಕ್ಕಳ ಬಸುರಿಯಿದ್ದಾಗಲೂ ಉಪ್ಪಿನ ಅಗರದ ಕೆಲಸಕ್ಕೆ ಹೋಗುತ್ತಿದ್ದರು. ಅಗರದಿಂದಲೇ ಹೆರಿಗೆ ಆಸ್ಪತ್ರೆಗೆ ನಡೆದಕೊಂಡು ಹೋಗಿದ್ದಾಗಿ ಹೇಳುತ್ತಾರವರು. “ನನ್ನ ಹೊಟ್ಟೆ ಇಲ್ಲಿ ವಿಶ್ರಾಂತಿ ಪಡೆಯುತ್ತಿತ್ತು," ಎಂದು ತನ್ನ ತೊಡೆಯನ್ನು ಮೊಣಕಾಲಿನ ಬಳಿ ತಟ್ಟುತ್ತಾ ತೋರಿಸುತ್ತಾರೆ. ನಂತರ ಹೆರಿಗೆಯಾದ ಹದಿಮೂರನೇ ದಿನಕ್ಕೆ ಮತ್ತೆ ಕೆಲಸಕ್ಕೆ ಮರಳಿದ್ದರು. ಮತ್ತು ಮಗು ಹಸಿವಿನಿಂದ ಅಳದಂತೆ ತಡೆಯಲು, ಮರಗೆಣಸಿನ ಹಿಟ್ಟಿನಿಂದ ತೆಳುವಾದ ಪುಡಿ ತಯಾರಿಸಿ ಅದರಲ್ಲಿ ಎರಡ ಚಮಚದಷ್ಟು ಹಿಟ್ಟನ್ನು ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿ ಮುಳುಗಿಸಿ ಬೇಯಿಸಿದ ನೀರನ್ನು ಗ್ರೈಪ್‌ ವಾಟರ್‌ ಬಾಟಲಿಗೆ ತುಂಬಿ ನಿಪ್ಪಲ್‌ ಹಾಕಿ ಇಟ್ಟುಹೋಗುತ್ತಿದ್ದರು. ಮಗು ಅತ್ತಾಗಲೆಲ್ಲ ತಾಯಿ ಹಾಲು ಕುಡಿಸಲು ಬರುವ ತನಕವೂ ಯಾರಾದರೂ ಅದನ್ನು ಕುಡಿಸುತ್ತಿದ್ದರು.

ಮುಟ್ಟಿನ ದಿನಗಳೂ ಅಷ್ಟೇ ಕಷ್ಟಕರವಾಗಿರುತ್ತಿದ್ದವು, ದಿನವಿಡೀ ಉರಿ ಮತ್ತು ನೋವು ಕಾಡುತ್ತಿತ್ತು. "ಸಂಜೆ ಬೆಚ್ಚಗಿನ ನೀರಿನ ಸ್ನಾನದ ನಂತರ ನಾನು ನನ್ನ ತೊಡೆಗಳಿಗೆ ತೆಂಗಿನಣ್ಣೆಯನ್ನು ಹಚ್ಚಿಕೊ‍ಳ್ಳುತ್ತಿದ್ದೆ. ಹಾಗೆ ಮಾಡಿದರಷ್ಟೇ ಮರುದಿನ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿತ್ತು..."

ತನ್ನ ಹಲವು ವರ್ಷಗಳ ಅನುಭವದಿಂದ, ರಾಣಿ - ಉಪ್ಪನ್ನು ಕೇವಲ ಮುಟ್ಟಿ ನೋಡುವ ಮೂಲಕ ಅದು ಆಹಾರ ದರ್ಜೆಯದ್ದೋ ಅಲ್ಲವೋ ಎನ್ನುವುದನ್ನು ಹೇಳಬಲ್ಲರು. ಉತ್ತಮ ಕಲ್ಲುಪ್ಪು ಸಮಗಾತ್ರದ ಹರಳುಗಳನ್ನು ಹೊಂದಿರುತ್ತದೆ ಮತ್ತು ಅಂಟುವುದಿಲ್ಲ. "ಅದು ಪಿಸು-ಪಿಸು (ಅಂಟು ಅಂಟಾಗಿ) ಆಗಿದ್ದರೆ - ಅದು ರುಚಿಯಾಗಿರುವುದಿಲ್ಲ." ವೈಜ್ಞಾನಿಕ ಉಪ್ಪು ಉತ್ಪಾದನೆಯಲ್ಲಿ ಉತ್ತಮ ಗುಣಮಟ್ಟದ ಉಪ್ಪಿನ ಬೆಳೆಯನ್ನು ಉತ್ಪಾದಿಸಲು ಬೌಮ್ ಥರ್ಮಾಮೀಟರ್‌ಗಳು ಮತ್ತು ವ್ಯಾಪಕವಾದ ನೀರಾವರಿ ಮಾರ್ಗಗಳನ್ನು ಬಳಸಲಾಗುತ್ತದೆ. ಈ ಅವಶ್ಯಕತೆಗಳನ್ನು ಪೂರೈಸಿದರೂ, ಈ ಉಪ್ಪಿನ ಹೆಚ್ಚಿನ ಭಾಗ ಕೈಗಾರಿಕಾ ಬಳಕೆಗೆ ಹೆಚ್ಚು ಸೂಕ್ತವಾಗಿದೆ ಎಂದು ನನ್ನೊಡನೆ ಹೇಳಿದರು.

Rani at home, and with her son Kumar (right). During each pregnancy, she worked till the day of delivery – then walked to the hospital directly from the salt pans
PHOTO • M. Palani Kumar
During each pregnancy, she worked till the day of delivery – then walked to the hospital directly from the salt pans
PHOTO • M. Palani Kumar

ರಾಣಿ ತನ್ನ ಮಗ ಕುಮಾರ್ (ಬಲ) ಜೊತೆ ಅವರ ಮನೆಯಲ್ಲಿ ಕುಳಿತಿರುವುದು. ಅವರ ಪ್ರತಿ ಗರ್ಭಧಾರಣೆಯಲ್ಲೂ ಹೆರಿಗೆಯ ದಿನದವರೆಗೂ ಕೆಲಸಕ್ಕೆ ಹೋಗಿದ್ದರು

*****

"ಉಪ್ಪಿನ ಅಗರಗಳನ್ನು ಉದ್ಯಮವಾಗಿ ನೋಡದೆ ಕೃಷಿಯಾಗಿ ನೋಡಬೇಕು’’
– ಜಿ. ಗ್ರಹದುರೈ, ಅಧ್ಯಕ್ಷರು, ತೂತುಕುಡಿ ಸಣ್ಣ ಪ್ರಮಾಣದ ಉಪ್ಪು ಉತ್ಪಾದಕರ ಸಂಘ

ಜಿ. ಗ್ರಹದುರೈ ತೂತುಕುಡಿಯ ನ್ಯೂ ಕಾಲೋನಿಯಲ್ಲಿರುವ ಅವರ ಹವಾನಿಯಂತ್ರಿತ ಕಛೇರಿಯಲ್ಲಿ ಕುಳಿತು ಜಿಲ್ಲೆಯ ಉಪ್ಪು-ಉದ್ಯಮಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ನನ್ನೊಂದಿಗೆ ಚರ್ಚಿಸಿದರು. ಈ ಕಚೇರಿಯು ಉಪ್ಪಿನ ಆಗರಗಳಿಂದ ಸ್ವಲ್ಪ ದೂರದಲ್ಲಿದ್ದು, ಮಧ್ಯಾಹ್ನದ ಸಮಯದಲ್ಲಿ ಅವರ ಕಚೇರಿಯಿಂದ ಆ ಕೊಳಗಳ ಬಯಲಿನ ಮೇಲೆ ಕಾಗೆಗಳು ಹಾರುವುದನ್ನು ಕಾಣಬಹುದಿತ್ತು.   ಅವರ ಸಂಘದಲ್ಲಿ ಸುಮಾರು 175 ಸದಸ್ಯರಿದ್ದು, ಪ್ರತಿಯೊಬ್ಬ ಸದಸ್ಯನಿಗೆ ಹತ್ತು ಎಕರೆ ಜಮೀನು ಇದೆ. ಜಿಲ್ಲೆಯಾದ್ಯಂತ, 25,000 ಎಕರೆಗಳಲ್ಲಿ ಹರಡಿರುವ ಈ ಅಗರಗಳು ವಾರ್ಷಿಕವಾಗಿ 2.5 ಮಿಲಿಯನ್ ಟನ್ ಉಪ್ಪನ್ನು ಉತ್ಪಾದಿಸುತ್ತವೆ.

ಸರಾಸರಿಯಾಗಿ, ಪ್ರತಿ ಎಕರೆ ಭೂಮಿಯು ವಾರ್ಷಿಕವಾಗಿ ನೂರು ಟನ್ ಉಪ್ಪನ್ನು ಉತ್ಪಾದಿಸುತ್ತದೆ. ಕೆಟ್ಟ ಪರಿಸ್ಥಿತಿಯಲ್ಲಿ, ಹೆಚ್ಚು ಮಳೆಯಾದಾಗ, ಉತ್ಪಾದನೆಯು 60 ಟನ್‌ಗಳಿಗೆ ಇಳಿಯುತ್ತದೆ. ಗ್ರಹದುರೈ, ಏರುತ್ತಿರುವ ಕೂಲಿ ವೆಚ್ಚದ ಬಗ್ಗೆ ಮಾತನಾಡುತ್ತಾ, “ಉಪ್ಪಿನ ಮಣ್ಣಿನ ಹೊರತಾಗಿ, ನೀರು ಎತ್ತಲು ವಿದ್ಯುತ್ ಬೇಕು, ಉಪ್ಪನ್ನು ತಯಾರಿಸಲು ನಮಗೆ ಕೆಲಸಗಾರರು ಬೇಕು, ಕೂಲಿ ವೆಚ್ಚವು ಏರುತ್ತಲೇ ಇದೆ ಮತ್ತು ಈಗ ಕೆಲಸದ ಸಮಯ ಕೂಡ ಕಡಿಮೆಯಾಗಿದೆ.ಮೊದಲು ಎಂಟು ಗಂಟೆ ಕೆಲಸವಿತ್ತು, ಈಗ ಕೇವಲ ನಾಲ್ಕು ಗಂಟೆ ಕೆಲಸ, ಬೆಳಗ್ಗೆ ಐದಕ್ಕೆ ಬಂದು 9 ಗಂಟೆಗೆ ಹೋಗುತ್ತಾರೆ. ಮಾಲೀಕರು ಅಲ್ಲಿಗೆ ಹೋಗಿ ನೋಡಿದರೂ ಅಲ್ಲಿ ಕೆಲಸಗಾರ ಕಾಣುವುದಿಲ್ಲ." ಕೆಲಸಗಾರರು ಅವರಿಗಿಂತ ಭಿನ್ನವಾಗಿ ಕೆಲಸದ ಸಮಯವನ್ನು ಲೆಕ್ಕ ಹಾಕುತ್ತಾರೆ.

ಕೆಲಸದ ಪರಿಸರದ ದೃಷ್ಟಿಯಿಂದ ಉಪ್ಪಿನ ಅಗರಗಳಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟವೆನ್ನುವುದನ್ನು ಗ್ರಹದುರೈ ಕೂಡಾ ಒಪ್ಪುತ್ತಾರೆ. "ನೀರು ಮತ್ತು ಶೌಚಾಲಯ ಸೌಲಭ್ಯಗಳನ್ನು ಒದಗಿಸುವುದು ಮುಖ್ಯ, ಆದರೆ ಇದು ಸಾಗಣೆಯ ವಿಷಯದಲ್ಲಿ ಸುಲಭವಲ್ಲ, ಏಕೆಂದರೆ ಉಪ್ಪಿನ ಕೊಳಗಳು ನೂರು ಕಿಲೋಮೀಟರ್ ದೂರದವರೆಗೂ ಹರಡಿಕೊಂಡಿವೆ."

ತೂತುಕುಡಿ ಉಪ್ಪಿಗೆ ಬೇಡಿಕೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಗ್ರಹದುರೈ. "ಮೊದಲು, ಇಲ್ಲಿನ ಉಪ್ಪನ್ನು ಅತ್ಯುತ್ತಮ ಆಹಾರ ಯೋಗ್ಯ ಉಪ್ಪು ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಅದು ದಕ್ಷಿಣದ ನಾಲ್ಕು ರಾಜ್ಯಗಳಿಗೆ ಮಾತ್ರ ಪೂರೈಕೆಯಾಗುತ್ತದೆ. ಮತ್ತು ಜೊತೆಗೆ ಸ್ವಲ್ಪಮಟ್ಟಿಗೆ ಸಿಂಗಾಪುರ ಮತ್ತು ಮಲೇಷ್ಯಾಕ್ಕೆ ರಫ್ತು ಮಾಡಲಾಗುತ್ತದೆ. ಹೆಚ್ಚಿನದನ್ನು ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಹೌದು, ಸ್ವಲ್ಪ ಲಾಭ ಮಾನ್ಸೂನ್ ನಂತರ ಅಗರಗಳಿಂದ ಹೊರತೆಗೆಯಲಾದ ಜಿಪ್ಸಮ್ನಿಂದ ಸಿಗುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳುಗಳ ಮಳೆ ಮತ್ತು ಹವಾಮಾನ ಬದಲಾವಣೆಯು ಉಪ್ಪಿನ ಉತ್ಪಾದನೆಯ ಮೇಲೂ ಪರಿಣಾಮ ಬೀರುತ್ತಿದೆ."

ಜೊತೆಗೆ, ಗುಜರಾತ್‌ನಿಂದ ತೀವ್ರ ಪೈಪೋಟಿ ಇದೆ: "ಪಶ್ಚಿಮ ರಾಜ್ಯ (ಗುಜರಾತ್) ಈಗ ದೇಶದ ಒಟ್ಟು ಉಪ್ಪು ಉತ್ಪಾದನೆಯಲ್ಲಿ 76% ಪಾಲನ್ನು ಹೊಂದಿದೆ, ತೂತುಕುಡಿಗಿಂತಲೂ ಅಲ್ಲಿ ಬಿಸಿಲು ಮತ್ತು ಒಣ ಹವೆ ಹೆಚ್ಚಿದೆ. ಅವರ ಉಪ್ಪು ಹಿಡುವಳಿಗಳು ದೊಡ್ಡದಾಗಿವೆ ಮತ್ತು ಉತ್ಪಾದನೆಯು ಭಾಗಶಃ ಯಾಂತ್ರೀಕೃತವಾಗಿದೆ. ಅಲ್ಲದೆ ಬಿಹಾರದ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ [ಅಗ್ಗದ ಕೂಲಿಗೆ ದುಡಿಯುವವರು] ಅವರ ಕೊಳಗಳು ಕಡಲಿನ ಉಬ್ಬರದ ನೀರಿನಿಂದ ತುಂಬುತ್ತವೆ, ಇದರಿಂದಾಗಿ ಅವರಿಗೆ ವಿದ್ಯುತ್ ವೆಚ್ಚವೂ ಉಳಿತಾಯವಾಗುತ್ತದೆ."

PHOTO • M. Palani Kumar

ಸಣ್ಣ ಯಶಸ್ಸು – ಸಣ್ಣ ವೇತನ ಹೆಚ್ಚಳ ಮತ್ತು ಬೋನಸ್‌ - ಇವೆಲ್ಲವೂ ಕಾರ್ಮಿಕರ ಹೋರಾಟದ ಫಲವಾಗಿ ದೊರಕಿದೆ

ತೂತುಕುಡಿಯಲ್ಲಿ ಒಂದು ಟನ್ ಉಪ್ಪು ಉತ್ಪಾದನೆಗೆ 600ರಿಂದ 700 ರೂ. ತಗಲುತ್ತದೆ "ಗುಜರಾತ್‌ನಲ್ಲಿ ಇದು ಕೇವಲ 300 ರೂ. ಆದರೆ, 2019ರಲ್ಲಿ ಆದಂತೆ ಒಂದು ಟನ್ ಉಪ್ಪಿನ ಬೆಲೆ ಹಠಾತ್ 600 ರೂ.ಗೆ ಇಳಿದರೆ ನಾವು ಅವರೊಂದಿಗೆ ಹೇಗೆ ಸ್ಪರ್ಧಿಸಲು ಸಾಧ್ಯ?" ಎಂದು ಅವರು ಕೇಳುತ್ತಾರೆ. ಇದನ್ನು ಸರಿದೂಗಿಸಲು, ಗ್ರಹದುರೈ ಮತ್ತು ಇತರರು ಉಪ್ಪಿನ ಉತ್ಪಾದನೆಯನ್ನು "ಉದ್ಯಮವಾಗಿ ನೋಡದೆ ಕೃಷಿ ಉತ್ಪನ್ನವನ್ನಾಗಿ" ನೋಡಬೇಕೆಂದು ಬಯಸುತ್ತಾರೆ. [ಇದುವೇ ಉಪ್ಪನ್ನು 'ಬೆಳೆ' ಎಂದು ಕರೆಯಲು ಕಾರಣ.] ಸಣ್ಣ ಉಪ್ಪು ಉತ್ಪಾದಕ ಘಟಕಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, ಸಬ್ಸಿಡಿ ವಿದ್ಯುತ್ ಮತ್ತು ಕಾರ್ಖಾನೆಗಳು ಮತ್ತು ಕಾರ್ಮಿಕ ಕಾಯಿದೆಗಳಿಂದ ವಿನಾಯಿತಿಗಳ ಅಗತ್ಯವಿದೆ.

"ಈ ವರ್ಷ, ಈಗಾಗಲೇ ಗುಜರಾತ್‌ನಿಂದ ಬಂದ ಹಡಗುಗಳು ತೂತುಕುಡಿಯಲ್ಲಿ ಉಪ್ಪನ್ನು ಮಾರಾಟ ಮಾಡಿವೆ."

*****

“ಏನಾದರೂ ಆಪತ್ತು ಸಂಭವಿಸಿದಾಗಲಷ್ಟೇ ಅವರು ನಮ್ಮ ಕುರಿತು ಬರೆಯುತ್ತಾರೆ.”
– ಉಪ್ಪಿನ ಅಗರದ ಮಹಿಳಾ ಕಾರ್ಮಿಕರು

ಅಸಂಘಟಿತ ಕಾರ್ಮಿಕರ ಸಂಘದ ಕೃಷ್ಣಮೂರ್ತಿ ಉಪ್ಪಿನ ಅಗರಗಳ ಕಾರ್ಮಿಕರ ಜೀವನ ಭದ್ರತೆಗಾಗಿ ಹಲವು ಬೇಡಿಕೆಗಳನ್ನು ಮುಂದಿಡುತ್ತಾರೆ. ಮೂಲಭೂತ ಸೌಕರ್ಯಗಳ ಜೊತೆಗೆ (ಉದಾಹರಣೆಗೆ ನೀರು, ಶೌಚಾಲಯಗಳು ಮತ್ತು ವಿಶ್ರಾಂತಿ ಕೊಠಡಿಗಳು), ಅವರು ಬಾಕಿಯಿರುವ ವಿಷಯಗಳನ್ನು ತ್ವರಿತವಾಗಿ ಪರಿಹರಿಸಲು, ಕಾರ್ಮಿಕರು, ಮಾಲೀ ಕರು ಮತ್ತು ಸರ್ಕಾರದ ಪ್ರತಿನಿಧಿಗಳನ್ನು ಒಳಗೊಂಡಿರುವ ಸಮಿತಿಯನ್ನು ರಚಿಸಬೇಕೆಂದು ಹೇಳುತ್ತಾರೆ.

"ನಮಗೆ ತುರ್ತಾಗಿ ಶಿಶುಪಾಲನಾ ಸೌಲಭ್ಯಗಳ ಅಗತ್ಯವಿದೆ. ಸದ್ಯಕ್ಕೆ, ಅಂಗನವಾಡಿಗಳು ಕಚೇರಿ ಸಮಯದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತವೆ (9 ರಿಂದ 5). ಉಪ್ಪಿನ ಅಗರದ ಕೆಲಸಗಾರರು ಬೆಳಗಿನ ಜಾವ 5 ಮತ್ತು ಕೆಲವು ಪ್ರದೇಶಗಳಲ್ಲಿ ಅದಕ್ಕೂ ಮೊದಲೇ ಮನೆಯಿಂದ ಹೊರಡುತ್ತಾರೆ. ಅತ್ಯಂತ ಹಿರಿಯ ಮಗು - ವಿಶೇಷವಾಗಿ ಅವಳು ಹೆಣ್ಣಾಗಿದ್ದರೆ - ನಂತರ ತಾಯಿಗಾಗಿ ಮನೆಯಲ್ಲಿರಬೇಕಾಗುತ್ತದೆ, ಮತ್ತು ಅವಳ ಶಿಕ್ಷಣವು ಹಾಳಾಗುತ್ತದೆ. ಈ ಮಕ್ಕಳನ್ನು ನೋಡಿಕೊಳ್ಳಲು ಅಂಗನವಾಡಿಗಳು ಬೆಳಗಿನ ಜಾವ 5ರಿಂದ 10 ಗಂಟೆಯ ತನಕ ಕಾರ್ಯನಿರ್ವಹಿಸಬಹುದಲ್ಲವೇ?"

ಕಾರ್ಮಿಕರು ಒಟ್ಟುಗೂಡಿ ತಮ್ಮ ಹಕ್ಕುಗಳಿಗಾಗಿ ಹೋರಾಡಿದಾಗ ಮಾತ್ರವೇ ಇದೆಲ್ಲವೂ ಸಾಧ್ಯ ಎಂದು ಕೃಷ್ಣಮೂರ್ತಿ ತಮ್ಮ ಸಣ್ಣ ಯಶಸ್ಸಿನ ಕುರಿತು (ವೇತನ ಮತ್ತು ಬೋನಸ್‌ಗಳಲ್ಲಿನ ಭಾಗಶಃ ಹೆಚ್ಚಳದಂತಹ) ಹೇಳುತ್ತಾರೆ. ತಮಿಳುನಾಡಿನ ಹೊಸ ಡಿಎಮ್‌ಕೆ ಸರ್ಕಾರವು 2021ರ ಬಜೆಟ್‌ನಲ್ಲಿ ಅವರ ಹಳೆಯ ಬೇಡಿಕೆಯಾದ ಮಾನ್ಸೂನ್ ಸಮಯದಲ್ಲಿ 5,000 ರೂಪಾಯಿಗಳ ಪರಿಹಾರ ನೆರವನ್ನು ಸೇರಿಸಿಕೊಂಡಿದೆ. ಕೃಷ್ಣಮೂರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಉಮಾ ಮಹೇಶ್ವರಿಯವರು ಅಸಂಘಟಿತ ವಲಯವನ್ನು ಸುಲಭವಾಗಿ ಸಂಘಟಿತ ಕ್ಷೇತ್ರವಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ. ಈ ವ್ಯವಹಾರವು ತನ್ನದೇ ಆದ ಆರೋಗ್ಯ ಸಂಬಂಧಿ ಅಪಾಯಗಳನ್ನು ಸಹ ಹೊಂದಿದೆ. ಅವರು ದೃಢವಾಗಿ ಕೇಳುತ್ತಾರೆ, "ಆದರೆ ಸಾಮಾಜಿಕ ಭದ್ರತೆಯ ಕೆಲವು ಮೂಲ ಸೌಲಭ್ಯಗಳನ್ನಾದರೂ ಒದಗಿಸಬಹುದಲ್ಲವೆ?”

ಎಲ್ಲಕ್ಕಿಂತ ಹೆಚ್ಚಾಗಿ ಮಹಿಳಾ ಕಾರ್ಮಿಕರು ಹೇಳುವಂತೆ, ಮಾಲಿಕರು ಯಾವಾಗಲೂ ಲಾಭದಲ್ಲಿರುತ್ತಾರೆ. ಝಾನ್ಸಿ ಉಪ್ಪಿನ ಕೊಳಗಳನ್ನು ತಾಳೆ ಮರಕ್ಕೆ ಹೋಲಿಸುತ್ತಾರೆ. ಎರಡೂ ಗಟ್ಟಿಮುಟ್ಟಾದವು, ಸುಡುವ ಸೂರ್ಯನನ್ನು ತಾಳಿಕೊಳ್ಳಬಲ್ಲವು ಮತ್ತು ಯಾವಾಗಲೂ ಉಪಯುಕ್ತವಾದುವು. ʼದುಡ್ಡುʼ ಎನ್ನುವ ಪದವನ್ನು ಅವರ ಮತ್ತೆ ಹೇಳುತ್ತಾ ಉಪ್ಪಿನ ಕೊಳಗಳು ಯಾವಾಗಲೂ ಮಾಲೀಕರಿಗೆ ಲಾಭವನ್ನೇ ತಂದುಕೊಡುತ್ತವೆ.

“ಆದರೆ ನಮಗಲ್ಲ. ನಮ್ಮ ಬದುಕಿನ ಕುರಿತು ಯಾರಿಗೂ ತಿಳಿದಿಲ್ಲ,” ಎಂದು ತನ್ನ ಕೆಲಸ ಮುಗಿಸಿಕೊಂಡು ಚಿಕ್ಕ ಪೇಪರ್‌ ಗ್ಲಾಸಿನಲ್ಲಿ ಟೀ ಕುಡಿಯುತ್ತಿದ್ದ ಮಹಿಳಯೊಬ್ಬರು ಹೇಳಿದರು. “ನೀವು ಎಲ್ಲೆಡೆ ರೈತರ ಕುರಿತು ಓದುತ್ತೀರಿ, ಆದರೆ ನಮ್ಮ ಕುರಿತು ಮೀಡಿಯಾ ಬರೆಯುವುದು ನಾವು ಪ್ರತಿಭಟಿಸಿದಾಗಲಷ್ಟೇ.” ಅವರು ತೀಕ್ಷ್ಣ ದನಿಯಲ್ಲಿ ಸಿಟ್ಟಿನಿಂದ ನನ್ನನ್ನು ಕೇಳಿದರು, “ಅವರು ಇಲ್ಲಿ ನಮಗೆ ಏನಾದರೂ ವಿಪತ್ತು ಸಂಭವಿಸದಾಗಲಷ್ಟೇ ನಮ್ಮ ಕುರಿತು ಒಂದಿಷ್ಟು ಬರೆಯುತ್ತಾರೆ, ಹಾಗಿದ್ದರೆ ಅವರು ಉಪ್ಪು ತಿನ್ನುವುದಿಲ್ಲವೆ?”

ಈ ಸಂಶೋಧನಾ ಅಧ್ಯಯನಕ್ಕೆ ಬೆಂಗಳೂರಿನ ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯವು ತಮ್ಮ ಸಂಶೋಧನಾ ನಿಧಿ ಕಾರ್ಯಕ್ರಮ 2020ರ ಭಾಗವಾಗಿ ಧನಸಹಾಯ ನೀಡಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Reporting : Aparna Karthikeyan

ಅಪರ್ಣಾ ಕಾರ್ತಿಕೇಯನ್ ಓರ್ವ ಸ್ವತಂತ್ರ ಪತ್ರಕರ್ತೆ, ಲೇಖಕಿ ಮತ್ತು ʼಪರಿʼ ಸೀನಿಯರ್ ಫೆಲೋ. ಅವರ ವಸ್ತು ಕೃತಿ 'ನೈನ್ ರುಪೀಸ್ ಎನ್ ಅವರ್' ತಮಿಳುನಾಡಿನ ಕಣ್ಮರೆಯಾಗುತ್ತಿರುವ ಜೀವನೋಪಾಯಗಳ ಕುರಿತು ದಾಖಲಿಸಿದೆ. ಅವರು ಮಕ್ಕಳಿಗಾಗಿ ಐದು ಪುಸ್ತಕಗಳನ್ನು ಬರೆದಿದ್ದಾರೆ. ಅಪರ್ಣಾ ತನ್ನ ಕುಟುಂಬ ಮತ್ತು ನಾಯಿಗಳೊಂದಿಗೆ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ.

Other stories by Aparna Karthikeyan
Photos and Video : M. Palani Kumar

ಪಳನಿ ಕುಮಾರ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಟಾಫ್ ಫೋಟೋಗ್ರಾಫರ್. ದುಡಿಯುವ ವರ್ಗದ ಮಹಿಳೆಯರು ಮತ್ತು ಅಂಚಿನಲ್ಲಿರುವ ಜನರ ಬದುಕನ್ನು ದಾಖಲಿಸುವುದರಲ್ಲಿ ಅವರಿಗೆ ಆಸಕ್ತಿ. ಪಳನಿ 2021ರಲ್ಲಿ ಆಂಪ್ಲಿಫೈ ಅನುದಾನವನ್ನು ಮತ್ತು 2020ರಲ್ಲಿ ಸಮ್ಯಕ್ ದೃಷ್ಟಿ ಮತ್ತು ಫೋಟೋ ದಕ್ಷಿಣ ಏಷ್ಯಾ ಅನುದಾನವನ್ನು ಪಡೆದಿದ್ದಾರೆ. ಅವರು 2022ರಲ್ಲಿ ಮೊದಲ ದಯನಿತಾ ಸಿಂಗ್-ಪರಿ ಡಾಕ್ಯುಮೆಂಟರಿ ಫೋಟೋಗ್ರಫಿ ಪ್ರಶಸ್ತಿಯನ್ನು ಪಡೆದರು. ಪಳನಿ ತಮಿಳುನಾಡಿನ ಮ್ಯಾನ್ಯುವಲ್‌ ಸ್ಕ್ಯಾವೆಂಜಿಗ್‌ ಪದ್ಧತಿ ಕುರಿತು ಜಗತ್ತಿಗೆ ತಿಳಿಸಿ ಹೇಳಿದ "ಕಕ್ಕೂಸ್‌" ಎನ್ನುವ ತಮಿಳು ಸಾಕ್ಷ್ಯಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.

Other stories by M. Palani Kumar
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru