ನಾವು ಆನೆಯ ಹೆಜ್ಜೆಗುರುತುಗಳನ್ನು ಹುಡುಕುತ್ತಾ ಬೆಟ್ಟಗುಡ್ಡಗಳು ಮತ್ತು ಗದ್ದೆಗಳ ಸುತ್ತಲೂ ನಡೆಯುತ್ತಿದ್ದೆವು.

ಅಲ್ಲಿ ರಾಶಿ ರಾಶಿ ಬಟ್ಟಲ ಗಾತ್ರದ ಹೆಜ್ಜೆ ಗುರುತುಗಳಿದ್ದವು. ಮೆದು ಮಣ್ಣಿನಲ್ಲಿ ಆ ಹೆಜ್ಜೆಗಳು ಆಳಕ್ಕಿಳಿದಿದ್ದವು. ಹಳೆಯ ಹೆಜ್ಜೆಗಳು ಗುರುತು ಕಳೆದುಕೊಳ್ಳತೊಡಗಿದ್ದರೆ, ಹೊಸ ಗುರುತುಗಳು ಆನೆಗಳು ಮಾಡಿ ಹೋದ ಕೆಲಸಗಳನ್ನು ವಿವರಿಸುತ್ತಿದ್ದವು. ಒಂದಷ್ಟು ತಿರುಗಾಟ, ಒಳ್ಳೆಯ ಆಹಾರ, ರಾಶಿ ರಾಶಿ ಸಗಣಿ. ಮತ್ತು ಧರೆಗುರುಳಿದ ಕಲ್ಲು ಕಂಬಗಳು, ಕಬ್ಬಿಣದ ಬೇಲಿ, ಮರ, ಗೇಟುಗಳು ಎಲ್ಲವೂ ಹೇಳಲೊಂದು ಕತೆ ಹೊಂದಿದ್ದವು.

ನಾವು ಅಲ್ಲಿದ್ದ ಎಲ್ಲವನ್ನೂ ಕೆಮೆರಾದಲ್ಲಿ ಸೆರೆಹಿಡಿದೆವು. ನಾನು ಆನೆಯ ಹೆಜ್ಜೆಗುರುತಿನ ಚಿತ್ರವನ್ನು ನಮ್ಮ ಸಂಪಾದಕರಿಗೆ ಕಳಿಸಿದರೆ ಅವರು, “ಅಲ್ಲಿ ಆನೆ ಪಕ್ಕದಲ್ಲಿ ಇದೆಯೇ?” ಎಂದು ರಿಪ್ಲೈ ಮಾಡಿದ್ದರು. ಅವರು ಹೇಳಿದ್ದು ಸುಳ್ಳಾಗಲಿ ಎಂದು ಪ್ರಾರ್ಥಿಸಿದೆ.

ಏಕೆಂದರೆ, ಕೃಷ್ಣಗಿರಿ ಜಿಲ್ಲೆಯ ಗಂಗನಹಳ್ಳಿಯಲ್ಲಿ ನಾನು ಕೇಳಿದಂತೆ, ಆನೆಗಳು ನಿಮ್ಮ ತಲೆಯ ಮೇಲೆ ಸೊಂಡಿಲಿಟ್ಟು ಆಶೀರ್ವದಿಸಿ ಬಾಳೆಹಣ್ಣನ್ನು ಕೇಳುವ ಸಾಧ್ಯತೆಗಳಿಲ್ಲ. ದೇವಾಲಯದ ಆನೆಗಳ ಮಟ್ಟಿಗೆ ಇದು ಅವುಗಳ ದಿನಚರಿಯಾಗಿರಬಹುದು. ಇವು ಅವುಗಳ ಕಾಡಿನ ಸೋದರಸಂಬಂಧಿಗಳು. ಮತ್ತು ಅವು ಸಾಮಾನ್ಯವಾಗಿ ಹಸಿವಿನಿಂದ ಬಳಲುತ್ತಿರುತ್ತವೆ.

ಡಿಸೆಂಬರ್ 2021ರಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ರಾಗಿ ಬೆಳೆಗಾರರನ್ನು ಭೇಟಿಯಾಗಲು ನಾನು ಮಾಡಿದ ಪ್ರವಾಸವು ನನ್ನನ್ನು ಅನಿರೀಕ್ಷಿತವಾಗಿ ಆನೆಗಳ ಹಾದಿಯಲ್ಲಿ ಕರೆದೊಯ್ಯಿತು. ಅಲ್ಲಿ ಕೃಷಿಯ ಅರ್ಥಶಾಸ್ತ್ರದ ಬಗ್ಗೆ ಚರ್ಚೆಗಳು ನಡೆಯುತ್ತವೆ ಎಂದು ನಾನು ಭಾವಿಸಿದ್ದು. ಖಂಡಿತವಾಗಿಯೂ, ಕೆಲವರು ಆ ಕುರಿತು ಚರ್ಚಿಸಿದರು. ಆದರೆ ಹೆಚ್ಚಾಗಿ, ಪ್ರತಿ ಹೊಲದಲ್ಲೂ, ಅವರು  ತಮ್ಮ ಮನೆಗಳಿಗೆ ಸಾಕಾಗುವಷ್ಟು ರಾಗಿಯನ್ನು (ರಾಗಿ) ಬೆಳೆಯಲು ಕಾರಣವೆಂದರೆ - ಆನೆಗಳು ಎಂದು ನಾನು ಕೇಳಿದ್ದೇನೆ. ಕಳಪೆ ಬೆಲೆಗಳು (ಕಿಲೋಗೆ 25 ರಿಂದ 27 ರೂಪಾಯಿಗಳು, 35ರಿಂದ 37 ರೂ.ಗಳ ಬದಲು, ಸಮತೋಲನವನ್ನು ಹೊಂದಿಸಲು ಸಹಾಯ ಮಾಡುತ್ತದೆ), ಹವಾಮಾನ ಬದಲಾವಣೆ ಮತ್ತು ಅದ್ಭುತವಾಗಿ ಭಾರಿ ಮಳೆಯ ನಡುವೆ, ರೈತರು ಅದನ್ನು ಒರಟಾಗಿ ಹೊಂದಿದ್ದಾರೆ. ಆನೆಗಳ ಸೊಂಡಿಲುಗಳು ಮತ್ತು ದಂತಗಳನ್ನು ಸೇರಿಸಿ, ರಾಗಿಯೆನ್ನುವುದು ರೈತನ ಬೆನ್ನನ್ನು ಮುರಿದಿರುವ ಬೃಹತ್ ಹುಲ್ಲು.

"ಆನೆಗಳು ತುಂಬಾ ಪ್ರತಿಭೆಯನ್ನು ಹೊಂದಿದ್ದು ಅವು ತಂತಿಯ ಹಗ್ಗಗಳನ್ನು ಮತ್ತು ತಂತಿ ಬೇಲಿಗಳನ್ನು ಹೇಗೆ ದಾಟುವುದು ಎಂಬುದನ್ನು ಕಲಿತಿವೆ. ಶಾರ್ಟ್ ಸರ್ಕ್ಯೂಟ್ ವಿದ್ಯುತ್ ಬೇಲಿಗಳಿಗೆ ಮರಗಳನ್ನು ಬಳಸಲು ಅವುಗಳಿಗೆ ತಿಳಿದಿದೆ" ಎಂದು ಆನಂದರಾಮು ರೆಡ್ಡಿ ವಿವರಿಸುತ್ತಾರೆ. "ಮತ್ತು ಅವು ಯಾವಾಗಲೂ ಹಿಂಡನ್ನು ಹುಡುಕುತ್ತವೆ." ಆನಂದ – ಎಂದು ಜನರಿಂದ ಕರೆಯಲ್ಪಡುವ ಇವರು ಡೆಂಕಣಿಕೋಟ್ಟೈ ತಾಲ್ಲೂಕಿನ ವಡ್ಡರ ಪಾಳ್ಯಂನಲ್ಲಿ ರೈತರಾಗಿದ್ದಾರೆ . ಅವರು ನಮ್ಮನ್ನು ಮೇಲಗಿರಿ ಮೀಸಲು ಅರಣ್ಯದ ಅಂಚಿಗೆ ಕರೆದೊಯ್ದರು. ಇದು ಕಾವೇರಿ ಉತ್ತರ ವನ್ಯಜೀವಿ ಅಭಯಾರಣ್ಯದ ಭಾಗವಾಗಿದೆ.

The large footprint of an elephant.
PHOTO • M. Palani Kumar
Damage left behind by elephants raiding the fields for food in Krishnagiri district
PHOTO • M. Palani Kumar

ಎಡ: ಆನೆಯ ದೊಡ್ಡ ಹೆಜ್ಜೆಗುರುತು. ಬಲ: ಕೃಷ್ಣಗಿರಿ ಜಿಲ್ಲೆಯಲ್ಲಿ ಆಹಾರಕ್ಕಾಗಿ ಹೊಲಗದ್ದೆಗಳ ಮೇಲೆ ದಾಳಿ ಮಾಡಿದ ಆನೆಗಳಿಂದ ಆಗಿರುವ ಹಾನಿ

ಹಲವಾರು ವರ್ಷಗಳಿಂದ, ಆನೆಗಳು ಕಾಡಿನಿಂದ ಹೊರಗೆ ಮತ್ತು ಹೊಲಗಳಿಗೆ ಅಲೆದಾಡುತ್ತಿವೆ. ಪ್ಯಾಚಿಡೆರ್ಮ್ಸ್‌ (pachyderms) ಎಂದೂ ಕರೆಯಲ್ಪಡುವ ಆನೆಗಳ ಗುಂಪುಗಳು ಹಳ್ಳಿಗಳ ಮೇಲೆ ಇಳಿದು, ರಾಗಿ ಬೆಳೆಯಲ್ಲಿ ಹೆಚ್ಚಿನದನ್ನು ತಿನ್ನುತ್ತಿದ್ದವು  ಮತ್ತು ಉಳಿದವುಗಳನ್ನು ತುಳಿಯುತ್ತಿದ್ದವು. ಇದು ಟೊಮ್ಯಾಟೊ, ಚೆಂಡುಹೂವು, ಗುಲಾಬಿಗಳಂತಹ ಪರ್ಯಾಯಗಳ ಬಗ್ಗೆ ಯೋಚಿಸಲು ರೈತರನ್ನು ಪ್ರೇರೇಪಿಸಿತು. ಅವರು ನಂಬುವ ಯಾವುದಕ್ಕೂ ಮಾರುಕಟ್ಟೆ ಇದೆ, ಮತ್ತು ಆನೆಗಳು ಅವುಗಳನ್ನು ತಿನ್ನಲು ಬಯಸುವುದಿಲ್ಲ. "2018-19ರಲ್ಲಿ ಇಲ್ಲಿ ವಿದ್ಯುತ್ ಬೇಲಿ ಬಂದ ನಂತರ, ಹಿಂಡು ಹೊರಬರುತ್ತಿಲ್ಲ, "ಆದರೆ ಗಂಡು ಆನೆಗಳನ್ನು ಈ ಬೇಲಿಗಳು ತಡೆದು ನಿಲ್ಲಿಸುವುದಿಲ್ಲ: ಮೊಟ್ಟೈ ವಾಲ್, ಮಖಾನಾ, ಗಿರಿ... ಅವುಗಳ ಹಸಿವು ಅವುಗಳನ್ನು ಹೊರಗೆ ಮತ್ತು ನಮ್ಮ ಹೊಲಗಳಿಗೆ ಓಡಿಸುತ್ತದೆ."

"ಅರಣ್ಯದ ಗುಣಮಟ್ಟವು ಮಾನವ-ಆನೆ ಸಂಘರ್ಷಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ" ಎಂದು ತಮಿಳುನಾಡಿನ ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ಗೌರವ ವನ್ಯಜೀವಿ ವಾರ್ಡನ್ ಎಸ್.ಆರ್. ಸಂಜೀವ್ ಕುಮಾರ್ ವಿವರಿಸುತ್ತಾರೆ. ಕೃಷ್ಣಗಿರಿ ಒಂದರಲ್ಲೇ 330 ಹಳ್ಳಿಗಳು ಈ ಸಮಸ್ಯೆಯಿಂದ ಬಾಧಿತವಾಗಿವೆ ಎಂದು ಅವರು ಅಂದಾಜಿಸುತ್ತಾರೆ.

ನಾನು ಈ ಪ್ರದೇಶಕ್ಕೆ ಭೇಟಿ ನೀಡಿದ ಸ್ವಲ್ಪ ಸಮಯದ ನಂತರ, ಝೂಮ್ ಕಾಲ್ ಮೂಲಕ, ವನ್ಯಜೀವಿ ಸಂರಕ್ಷಣಾ NGO ಕೆನ್ನೆತ್ ಆಂಡರ್ಸನ್ ನೇಚರ್ ಸೊಸೈಟಿ (ಕೆಎನ್ಎಸ್)ಯ ಸ್ಥಾಪಕ ಸದಸ್ಯ ಮತ್ತು ಮಾಜಿ ಅಧ್ಯಕ್ಷ ಸಂಜೀವ್ ಕುಮಾರ್ ಪ್ರೆಸೆಂಟೇಷನ್‌ ಒಂದನ್ನು ಹಂಚಿಕೊಂಡರು. ಆನೆ ಆಕಾರದ ಚುಕ್ಕೆಗಳೊಂದಿಗೆ ಕಪ್ಪು ಬಣ್ಣದಲ್ಲಿದ್ದ ಪರದೆಯ ಮೇಲಿನ ಚಿತ್ರವು ನೋಡುವವರನ್ನು ಬೆರಗುಗೊಳಿಸುತ್ತದೆ. "ಪ್ರತಿಯೊಂದೂ ಸಂಘರ್ಷ ನಡೆಯುವ ಹಳ್ಳಿಯನ್ನು ಪ್ರತಿನಿಧಿಸುತ್ತದೆ. ಮತ್ತು ಈ ದತ್ತಾಂಶವನ್ನು ಬೆಳೆ ಹಾನಿ ಕ್ಲೇಮುಗಳಿಂದ ತೆಗೆದುಕೊಳ್ಳಲಾಗಿದೆ" ಎಂದು ಅವರು ಹೇಳುತ್ತಾರೆ.

ಈಶಾನ್ಯ ಮಾನ್ಸೂನ್ ನಂತರ ಬೆಳೆಗಳು ಕೊಯ್ಲಿಗೆ ಸಿದ್ಧವಾದಾಗ ಆನೆಗಳು ದಾಳಿಯಿಡುತ್ತವೆ. “[ಕೃಷ್ಣಗಿರಿ ಜಿಲ್ಲೆಯಲ್ಲಿ] ಒಂದು ವರ್ಷದಲ್ಲಿ 12 ಅಥವಾ 13 ಮಾನವ ಸಾವುಗಳು ಸಂಭವಿಸುತ್ತವೆ, ಇದು ಡಿಸೆಂಬರ್ ಮತ್ತು ಜನವರಿ ನಡುವೆ ಹೆಚ್ಚು ಸಂಭವಿಸುತ್ತದೆ. ಅಂದರೆ ಸಾಮಾನ್ಯವಾಗಿ ರಾಗಿ ಕೊಯ್ಲಿನ ಸಮಯದಲ್ಲಿ. ಆನೆಗಳೂ ಸಾಯುತ್ತವೆ. “ಪ್ರತಿಕಾರದ ರೀತಯಲ್ಲಿ ಆನೆಗಳೂ ಸಾಯುತ್ತವೆ. ರೈಲು ಮಾರ್ಗಗಳಲ್ಲಿ, ಹೆದ್ದಾರಿಗಳಲ್ಲಿ ಅಥವಾ ತೆರೆದ ಬಾವಿಗಳಿಗೆ ಬಿದ್ದಾಗ ಸಂಭವಿಸುವ ಅಪಘಾತಗಳು. ಮತ್ತು ಕಾಡುಹಂದಿಗಳಿಗೆ ಹಾಕಲಾದ ತಂತಿಗಳಿಂದ ಅವು ವಿದ್ಯುತ್‌ ಶಾಕ್‌ಗೆ ಒಳಗಾಗುತ್ತವೆ."

ಆನೆಗಳು 100 ಕ್ಕೂ ಹೆಚ್ಚು ಜಾತಿಯ ಸಸ್ಯಗಳನ್ನು ತಿನ್ನುತ್ತವೆ ಎಂದು ಸಂಜೀವ್ ವಿವರಿಸುತ್ತಾರೆ. "ಅವು ಸಸ್ಯದ ಅನೇಕ ಭಾಗಗಳನ್ನು ತಿನ್ನುತ್ತವೆ. ಸೆರೆಯಾಳು ಆನೆಗಳ ಅವಲೋಕನದ ಆಧಾರದ ಮೇಲೆ, ಅವು 200 ಕಿಲೋಗಳಷ್ಟು ಹುಲ್ಲನ್ನು ತಿನ್ನುತ್ತವೆ ಮತ್ತು 200 ಲೀಟರ್ ನೀರನ್ನು ಕುಡಿಯುತ್ತವೆ ಎಂದು ನಮಗೆ ತಿಳಿದಿದೆ. "ಆದರೆ, ಕಾಡಿನಲ್ಲಿ, ಅದರ ಪ್ರಮಾಣವು ಋತುಮಾನದಿಂದ ಋತುವಿಗೆ ಬಹಳವಾಗಿ ಬದಲಾಗುತ್ತದೆ - ಹಾಗೆಯೇ ಅವುಗಳ ದೇಹದ ಸ್ಥಿತಿಯು ಸಹ ಬದಲಾಗಬಹುದು" ಎಂದು ಅವರು ಸೂಚಿಸುತ್ತಾರೆ.

In this photo from 2019, Mottai Vaal is seen crossing the elephant fence while the younger Makhna watches from behind
PHOTO • S.R. Sanjeev Kumar

201 ರ ಈ ಫೋಟೋದಲ್ಲಿ, ಮೊಟ್ಟೈ ವಾಲ್ ಆನೆಯ ಬೇಲಿ ದಾಟುವುದನ್ನು ಕಾಣಬಹುದು, ಕಿರಿಯ ಆನೆ ಮಖ್ನಾ ಹಿಂದಿನಿಂದ ನೋಡು ತ್ತಿದೆ

ಇದಲ್ಲದೆ, ಲಂಟಾನ ಕ್ಯಾಮಾರಾ ಎನ್ನುವ ಪರಿಚಯಿಸಲಾದ ಆಕ್ರಮಣಕಾರಿ ಹೂಬಿಡುವ ಸಸ್ಯದ ಪ್ರಭೇದ ಈಗ "ಹೊಸೂರು ಪ್ರದೇಶದ 85ರಿಂದ 90 ಪ್ರತಿಶತದಷ್ಟು ಅರಣ್ಯವನ್ನು" ಆವರಿಸಿದೆ. ಇದು ಒಂದು ಗಟ್ಟಿಮುಟ್ಟಾದ ಸಸ್ಯವಾಗಿದ್ದು, ಆಡುಗಳು ಮತ್ತು ಹಸುಗಳಿಂದ ಸ್ಪರ್ಶಿಸಲ್ಪಡುವುದಿಲ್ಲ, ಮತ್ತು ತ್ವರಿತವಾಗಿ ಹರಡುತ್ತದೆ. "ಬಂಡೀಪುರ ಮತ್ತು ನಾಗರಹೊಳೆಯಲ್ಲಿಯೂ ಇದೇ ಪರಿಸ್ಥಿತಿ ಇದೆ. ಸಫಾರಿಗಳಿಗೆಂದು ದಾರಿ ಮಾಡಲು ಲಂಟಾನ ತೆರವುಗೊಳಿಸಲಾಗಿದೆ, ಇದರಿಂದ ಆನೆಗಳು ಹುಲ್ಲು ತಿನ್ನಲು ಅಲ್ಲಿಗೆ ಬರುತ್ತವೆ ಮತ್ತು ಅವುಗಳನ್ನು ನೋಡಬಹುದು."

ಆನೆಗಳು ತಮ್ಮ ವಲಯದಿಂದ ಹೊರಬರಲು ಲಂಟಾನ ಮುಖ್ಯ ಕಾರಣ ಎಂದು ಸಂಜೀವ್ ವಾದಿಸುತ್ತಾರೆ. ಇದಲ್ಲದೆ, ಆನೆಗಳಿಗೆ, ರಾಗಿ ರಸಭರಿತ ಮತ್ತು ತುಂಬಾ ಪ್ರಲೋಭನಕಾರಿಯಾಗಿದೆ. "ನಾನು ಕೂಡ ಒಂದು ಆನೆಯಾಗಿದ್ದರೆ, ಅದನ್ನು ತಿನ್ನಲು ಬರುತ್ತಿದ್ದೆ." ಗಂಡುಗಳು, ವಿಶೇಷವಾಗಿ, ಬೆಳೆಗಳ ಮೇಲೆ ದಾಳಿ ಮಾಡುವ ಅನಿವಾರ್ಯತೆಗೆ ಒಳಗಾಗುತ್ತವೆ. ಏಕೆಂದರೆ, 25ರಿಂದ 35 ವರ್ಷ ವಯಸ್ಸಿನ ನಡುವೆ, ಅವು ಬೆಳವಣಿಗೆಯ ವೇಗಕ್ಕೆ ಒಳಗಾಗುತ್ತವೆ. ಇವು ದೊಡ್ಡ ಅಪಾಯಗಳನ್ನು ಎದುರುಹಾಕಿಕೊಳ್ಳುತ್ತವೆ.

ಆದರೆ ಮೊಟ್ಟೈ ವಾಲ್ ಅಲ್ಲ. ಅದು ವಯಸ್ಸಾದ ಆನೆ ಮತ್ತು ಅದಕ್ಕೆ ತನ್ನ ಮಿತಿಗಳ ಅರಿವಿದೆ. ಸಂಜೀವ್ ಆ ಆನೆ 45 ವರ್ಷ ದಾಟಿದೆ, 50ಕ್ಕೆ ಹತ್ತಿರದಲ್ಲಿದೆ ಎಂದು ಲೆಕ್ಕ ಹಾಕುತ್ತಾರೆ. ಅವರು ಅದನ್ನು “ಸ್ವೀಟೆಸ್ಟ್” ಆನೆ ಎಂದು ಕರೆಯುತ್ತಾರೆ. "ಅದು ಮಸ್ತ್ ನಲ್ಲಿದ್ದಾಗ ನಾನು ಒಂದು ವೀಡಿಯೊವನ್ನು ನೋಡಿದ್ದೇನೆ." ( ಮಶ್ ಎಂಬುದು ಗಂಡು ಆನೆಗಳಲ್ಲಿ ಜೈವಿಕ ಮತ್ತು ಹಾರ್ಮೋನುಗಳ ಬೆಳವಣಿಗೆಗೆ ಸಂಬಂಧಿಸಿದ ಸ್ಥಿತಿಯಾಗಿದ್ದು, ಇದನ್ನು ಸಾಮಾನ್ಯ ಮತ್ತು ಆರೋಗ್ಯಕರ ಎಂದು ಪರಿಗಣಿಸಲಾಗುತ್ತದೆ. ಆದರೆ ಇದರರ್ಥ ಅವು 2-3 ತಿಂಗಳುಗಳಲ್ಲಿ ಹೆಚ್ಚು ಆಕ್ರಮಣಕಾರಿಯಾಗಬಹುದು.) "ಸಾಮಾನ್ಯವಾಗಿ, ಅವು ಹಿಂಸಾತ್ಮಕವಾಗಿ ನಡೆದುಕೊಳ್ಳಬಹುದು, ಆದರೆ ಮೊಟ್ಟೈ ವಾಲ್ ತುಂಬಾ ಶಾಂತವಾಗಿದ್ದ. ಅವನು ವಿವಿಧ ವಯಸ್ಸಿನ ಆನೆಗಳ ಹಿಂಡಿನಲ್ಲಿದ್ದನು, ಮತ್ತು ಸದ್ದಿಲ್ಲದೆ ಒಂದು ಬದಿಗೆ ನಿಂತಿದ್ದನು. ಅವನು ಜಗತ್ತನ್ನು ನೋಡಿದ್ದಾನೆ."

ಸಂಜೀವ್ ಅವರ ಪ್ರಕಾರ ಈ ಆನೆ ಸುಮಾರು 9.5 ಅಡಿ ಎತ್ತರ, ಬಹುಶಃ 5 ಟನ್ ತೂಗುತ್ತಾರೆ. "ಅವನಿಗೆ ಸೈಡ್‌ಕಿಕ್ ಇದೆ, ಮಖಾನಾ ಮತ್ತು ಇತರ ಯುವ ಗಂಡಾನೆಗಳೊಂದಿಗೆ ಒಟ್ಟಿಗೆ ಸೇರುತ್ತದೆ." ಅವನಿಗೆ ಮಕ್ಕಳಿರಬಹುದೇ ಎಂದು ನಾನು ಕೇಳಿದರೆ, "ಅವನಿಗೆ ಬಹಳಷ್ಟು ಮಕ್ಕಳಿರಬಹುದು," ಎಂದು ಸಂಜೀವ್‌ ನಗುತ್ತಾರೆ.

ಅದು ತನ್ನ ಬೆಳವಣಿಗೆಯ ವೇಗವನ್ನು ಮೀರಿದ ನಂತರ ಹೊಲಗಳಿಗೆ ದಾಳಿಯಿಡುವುದಿಲ್ಲ. ಮೊಟ್ಟೈವಾಲ್‌ ತನ್ನ ತೂಕ ಕಾಪಾಡಿಕೊಳ್ಳುವ ಸಲುವಾಗಿ ಹೊಲಗಳಿಗೆ ದಾಳಿ ಮಾಡುತ್ತದೆ ಎನ್ನುತ್ತಾರೆ ಸಂಜೀವ್‌ ಕುಮಾರ್. “ಅವನಿಗೆ ಹೊರಗೆ ಬಹಳ ಒಳ್ಳೆಯ ಆಹಾರ ಸಿಗುತ್ತದೆ. ರಾಗಿ, ಹಲಸು, ಮಾವು ಹೀಗೆ. ಮತ್ತೆ ಇದನ್ನು ತಿಂದ ನಂತರ ಅವನು ತನ್ನ ಕಾಡನ್ನು ಸೇರಿಕೊಳ್ಳುತ್ತಾನೆ.” ಇನ್ನೂ ಕೆಲವು ಗಂಡು ಆನೆಗಳಿವೆ. ಅವು ಎಲೆಕೋಸು, ಹೂಕೋಸು‌ ಮತ್ತು ಬೀನ್ಸ್‌ನಂತಹ ತರಕಾರಿಗಳನ್ನು ತಿನ್ನುತ್ತವೆ. ಆದರೆ ವಿಷವೂಡಿಸಿ ಬೆಳೆಯಲಾಗುವ ಈ ತರಕಾರಿಗಳು ಅವುಗಳಿಗೆ ಅಪರಿಚಿತ ಆಹಾರ.

"ಮೂರು ವರ್ಷಗಳ ಹಿಂದೆ, ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು. ಟೊಮೆಟೊ ಮತ್ತು ಬೀನ್ಸ್ ನಲ್ಲಿ ಹೆಚ್ಚು ಹೂಡಿಕೆ ಮಾಡಿದ ರೈತರು ಸಾಕಷ್ಟು ಹಣವನ್ನು ಕಳೆದುಕೊಂಡರು. ಅಲ್ಲದೆ ಆನೆಯು ಒಂದು ಭಾಗವನ್ನು ತಿಂದರೆ, ಅದು ಐದು ಪಟ್ಟು ಹೆಚ್ಚು ಹಾನಿ ಮಾಡುತ್ತದೆ." ಆನೆಯನ್ನು ಪ್ರಚೋದಿಸದ ಬೆಳೆಗಳಿಗೆ ಹೆಚ್ಚು ಹೆಚ್ಚು ರೈತರು ಬದಲಾಗುತ್ತಿದ್ದಾರೆ. ಮೊಟ್ಟೈ ವಾಲ್ ಮತ್ತು ಅವನ ಗೆಳೆಯರು ಈ ಪ್ರದೇಶದ ಕೃಷಿ ಪದ್ಧತಿಗಳನ್ನು ಪರಿಣಾಮಕಾರಿಯಾಗಿ ಬದಲಾಯಿಸುತ್ತಿದ್ದಾರೆ.

A rare photo of Mottai Vaal, in the Melagiri hills
PHOTO • Nishant Srinivasaiah

ಮೆಲಗಿರಿ ಬೆಟ್ಟಗಳಲ್ಲಿ ಮೊಟ್ಟೈ ವಾಲ್ ಆನೆಯ ಅಪರೂಪದ ಫೋಟೋ

ಹಲವಾರು ವರ್ಷಗಳಿಂದ, ಆನೆಗಳು ಕಾಡಿನಿಂದ ಹೊರಗೆ ಮತ್ತು ಹೊಲಗಳಿಗೆ ಅಲೆದಾಡುತ್ತಿವೆ. ಆನೆಗಳ ಗುಂಪುಗಳು ಹಳ್ಳಿಗಳಿಗೆ ಇಳಿದು, ರಾಗಿ ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುತ್ತಿದ್ದವು

*****

'ಈ ಮೊದಲು ನಾವು ಸ್ವಲ್ಪ ಪರಿಹಾರವನ್ನು ಪಡೆದಿದ್ದೆವು. ಈಗ, ಅವರು [ಅಧಿಕಾರಿಗಳು] ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ನಮಗೆ ಯಾವುದೇ ಹಣ ಸಿಗುವುದಿಲ್ಲ.'
ವಿನೋದಮ್ಮ, ಗುಮ್ಲಾಪುರ ಗ್ರಾಮದ ಗಂಗನಹಳ್ಳಿಯ ರೈತ ಮಹಿಳೆ

ಗೋಪಿ ಶಂಕರಸುಬ್ರಮಣಿ ಅವರು ಮೊಟ್ಟೈ ವಾಲ್ ಆನೆಯನ್ನು ನಿಜವಾಗಿಯೂ ಹತ್ತಿರದಿಂದ ಭೇಟಿಯಾದ ಆಯ್ದ ಕೆಲವೇ ಕೆಲವರಲ್ಲಿ ಒಬ್ಬರು. ಒಂದು ಮುಂಜಾನೆ, ಗೊಲ್ಲಪಲ್ಲಿಯಿಂದ ಅರ್ಧಗಂಟೆಗಳ ಪ್ರಯಾಣದಲ್ಲಿ ಲಾಭರಹಿತ ಸಂಸ್ಥೆಯಾದ ನವದರ್ಶನಂನಲ್ಲಿರುವ ತಮ್ಮ ಕುಟೀರದ ಬಾಗಿಲನ್ನು ನಮಗಾಗಿ ತೆರೆದರು, ಅಲ್ಲಿ ನಾವು ನಮ್ಮ ಆತಿಥೇಯ ಗೋಪಕುಮಾರ್ ಮೆನನ್ ಅವರೊಂದಿಗೆ ತಂಗಿದ್ದೆವು.

ಗೆಳೆಯನನ್ನು ನೋಡುವ ನಿರೀಕ್ಷೆಯಲ್ಲಿದ್ದ ಗೋಪಿಗೆ ಅಂದು ಎದುರಾಗಿದ್ದು ಎತ್ತರದ ಮತ್ತು ಅಗಲವಾದ ಮತ್ತು ನಾಚಿಕೆ ಸ್ವಭಾವದ ಆನೆ ಇತ್ತು. ಮೊಟ್ಟೈ ವಾಲ್‌ ಆ ಕೂಡಲೇ ಅಲ್ಲಿಂದ ಸರಿದು ಹೋಗಿದ್ದ. ಬೆಟ್ಟದ ಇಳಿಜಾರಿನ ಸುಂದರ ಮನೆಯ ವರಾಂಡದಲ್ಲಿ ಕುಳಿತು ಗೋಪಿ ನಮಗೆ ಹಲವು ಕಥೆಗಳನ್ನು ಹೇಳಿದರು. ಕೆಲವು ರಾಗಿಯ ಕುರಿತಾದರೆ, ಉಳಿದವು ಆನೆಗಳ ಬಗ್ಗೆ.

ಓದಿನಿಂದ ಏರೋಸ್ಪೇಸ್ ಎಂಜಿನಿಯರ್ ಆಗಿದ್ದ ಗೋಪಿ, ತಂತ್ರಜ್ಞಾನ ಕ್ಷೇತ್ರದ ಬದಲು ಆಹಾರವನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡರು. ಗುಮ್ಲಾಪುರ ಗ್ರಾಮದ ಗಂಗನಹಳ್ಳಿ ಗ್ರಾಮದಲ್ಲಿ ನವದರ್ಶನಂ ಟ್ರಸ್ಟ್ ನಿರ್ವಹಿಸುವ 100 ಎಕರೆ ಭೂಮಿಯಲ್ಲಿ ಅವರು ಹಲವಾರು ವರ್ಷಗಳಿಂದ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಟ್ರಸ್ಟ್ ತನ್ನನ್ನು ತಾನು ಉಳಿಸಿಕೊಳ್ಳಲು ನಿವಾಸಿಗಳು, ಸಂದರ್ಶಕರು ಮತ್ತು ಕಾರ್ಯಾಗಾರಗಳ ಕೊಡುಗೆಗಳನ್ನು ಅವಲಂಬಿಸಿದೆ. "ನಾವು ದೊಡ್ಡ ಯೋಜನೆಗಳನ್ನು ಮಾಡುವುದಿಲ್ಲ, ನಮ್ಮಲ್ಲಿ ದೊಡ್ಡ ಬಜೆಟ್ಗಳಿಲ್ಲ, ನಾವು ನಮ್ಮ ಯೋಜನೆಗಳನ್ನು ಸರಳ ಮತ್ತು ಸಣ್ಣದಾಗಿಡಲು ಪ್ರಯತ್ನಿಸುತ್ತೇವೆ." ಹತ್ತಿರದ ಗ್ರಾಮಸ್ಥರನ್ನು ಒಳಗೊಂಡಿರುವ ಆಹಾರ ಸಹಕಾರವು ಅವರ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದೆ. ಸಣ್ಣ ಹಿಡುವಳಿಗಳು ಮತ್ತು ಕೃಷಿ ವರ್ಷದ ಕೆಲವೇ ತಿಂಗಳುಗಳನ್ನು ತೆಗೆದುಕೊಳ್ಳುವುದರಿಂದ, ಅವರು ಬದುಕು ನಡೆಸಲು ಅರಣ್ಯದ ಮೇಲೆ ಅವಲಂಬಿತರಾಗಬೇಕಿದೆ.

"ನಾವು ಗಂಗೇನಹಳ್ಳಿ ಗ್ರಾಮದ 30 ಕುಟುಂಬಗಳಿಗೆ ಮೌಲ್ಯವರ್ಧಿತ ಆಹಾರ ಉತ್ಪನ್ನಗಳನ್ನು ತಯಾರಿಸಲು ಸ್ಥಳಾವಕಾಶ ಮತ್ತು ಜ್ಞಾನವನ್ನು ಒದಗಿಸಿದ್ದೇವೆ ಮತ್ತು ಕಾಡಿಗೆ ಹೋಗುವ ಅವರ ಸಂಸ್ಕೃತಿಯನ್ನು ಇಲ್ಲವಾಗಿಸಿದ್ದೇವೆ" ಎಂದು ಗೋಪಿ ಹೇಳುತ್ತಾರೆ. ರಾಗಿಯನ್ನು ಈಗ ಮುಖ್ಯವಾಗಿ ಅವರ ಮನೆಗಳಿಗಾಗಿ ಬೆಳೆಯಲಾಗುತ್ತದೆ. ಮತ್ತು ಹೆಚ್ಚುವರಿಯನ್ನು ಮಾತ್ರ ಮಾರಾಟ ಮಾಡಲಾಗುತ್ತದೆ.

ಗೋಪಿ ನವದರ್ಶನಂನಲ್ಲಿ ಕಳೆದ 12 ವರ್ಷಗಳಲ್ಲಿ, ಕಂಡುಕೊಂಡ ಗಮನಾರ್ಹ ಬದಲಾವಣೆಯೆಂದರೆ, ರಾಗಿ ತಳಿಯಲ್ಲಿನ ಬದಲಾವಣೆ. ಜನರು ಈಗ 4 -5 ತಿಂಗಳಿಗೆ ಫಸಲು ನೀಡುವ ಸ್ಥಳೀಯ ತಳಿಗಳ ಬದಲಿಗೆ 3 ತಿಂಗಳಲ್ಲಿ ಬೆಳೆ ಬರುವ ಹಬ್ರೀಡ್‌ ತಳಿಗಳನ್ನು ಬೆಳೆಯಲು ಆರಂಭಿಸಿದ್ದಾರೆ. ಆದರೆ ಅವರು ಹೇಳುವಂತೆ, ಒಣ ಭೂಮಿಯ ಬೆಳೆಗಳು ನೆಲದ ಮೇಲೆ ಹೆಚ್ಚು ಕಾಲವಿದ್ದಷ್ಟೂ ಒಳ್ಳೆಯದು. “ಇದರಿಂದ ಬೆಳೆ ಹೆಚ್ಚು ಪೌಷ್ಟಿಕಾಂಶವನ್ನು ಸಂಗ್ರಹಿಸುತ್ತದೆ.”  ಅಲ್ಪಕಾಲೀನ ಬೆಳೆಗಳು ಇದನ್ನು ಮಾಡುವುದಿಲ್ಲ. ಇದರ ಪರಿಣಾಮವೆಂದರೆ ಜನರು ಒಂದು ಮುದ್ದೆಯ ಬದಲು ಎರಡು ಮುದ್ದೆಗಳನ್ನು ತಿನ್ನಲು ಆರಂಭಿಸಿದ್ದಾರೆ. “ಇದು ನಿಜಕ್ಕೂ ಒಂದು ಸಂಪೂರ್ಣ ವ್ಯತ್ಯಾಸ.”

Gopi Sankarasubramani at Navadarshanam's community farm in Ganganahalli hamlet of Gumlapuram village.
PHOTO • M. Palani Kumar
A damaged part of the farm
PHOTO • M. Palani Kumar

ಎಡ: ಗುಮ್ಲಾಪುರ ಗ್ರಾಮದ ಗಂಗನಹಳ್ಳಿ ಗ್ರಾಮದ ನವದರ್ಶನಂ ಸಮುದಾಯ ಜಮೀನಿನಲ್ಲಿ ಗೋಪಿ ಶಂಕರಸುಬ್ರಮಣಿ. ಬಲ: ಜಮೀನಿನ ಹಾನಿಗೊಳಗಾದ ಭಾಗ

ಆದರೆ ಹೊಲ ಕಾಯುವ ಕೆಲಸದ ಅವಧಿ ಕಡಿಮೆಯಾಗುತ್ತದೆಯೆನ್ನುವ ಕಾರಣಕ್ಕೆ ಜನರು ಅಲ್ಪಾವಧಿಯ ಬೆಳೆಯನ್ನೇ ಆರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಮಾರುಕಟ್ಟೆಯಲ್ಲಿ ಈ ಬೆಳೆಗಳಿಗೆ ಬೆಲೆಯಲ್ಲೂ ವ್ಯತ್ಯಾಸವಿಲ್ಲ. “ಅಲ್ಲದೆ ರೈತರು ಬೆಳೆಯ ಅವಧಿಯನ್ನು ಇತರರೊಡನೆ ಹೊಂದಿಸಿಕೊ‍ಳ್ಳಬೇಕಾದ ಅನಿವಾರ್ಯತೆಯೂ ಇರುತ್ತದೆ,” ಎನ್ನುವ ಗೋಪಿ “ಎಲ್ಲ ಹೊಲಗಳಲ್ಲಿ ಬೆಳೆಯಿದ್ದಾಗ ಆ ದಿಕ್ಕಿನಿಂದ ಆನೆಗಳು ಬರದಂತೆ ಒಬ್ಬರು ಕೂಗಿದರೆ ಇನ್ನೊಂದು ದಿಕ್ಕಿನಿಂದ ಬೇರೆಯವರು ಕೂಗುತ್ತಾರೆ. ಹೀಗೆ ಮಾಡಿದಾಗ ಆನೆಗಳು ದೂರದಲ್ಲಿ ಉಳಿಯುತ್ತವೆ. ಒಂದು ವೇಳೆ ಎಲ್ಲರೂ ಬೆಳೇ ಕಟಾವು ಮಾಡಿದ್ದು, ನಿಮ್ಮ ಹೊಲದಲ್ಲಿ ಮಾತ್ರ ಬೆಳೆಯಿದ್ದರೆ ಆನೆ ಬರುತ್ತದೆ…”

ನಮ್ಮ ಮಾತುಕತೆಗಳಿಗೆ ಆಗಾಗ ಸುಂದರ ಹಕ್ಕಿಗಳ ಚಿಲಿಪಿಲಿ ವಿರಾಮ ನೀಡುತ್ತಿತ್ತು. ಅವು ತಮಗೂ ಕಾಡಿನ ಸುದ್ದಿಯನ್ನು ನೀಡುವುದಕ್ಕಿದೆ ಎನ್ನುವಂತೆ ಆಗಾಗ ಹಾಡುವುದು, ನಗುವುದು ಇತ್ಯಾದಿ ಮಾಡುತ್ತಿದ್ದವು.

ಮಧ್ಯಾಹ್ನದ ಊಟದ ನಂತರ - ಪಾಲಕ್ ಗ್ರೇವಿಯೊಂದಿಗೆ ರಾಗಿ ಮುದ್ದೆ - ನಮಗೆ ಕುರುಕಲು ನೆಲಗಡಲೆ ಮಿಠಾಯಿ ಮತ್ತು ಪರಿಮಳಯುಕ್ತ ರಾಗಿ ಲಡ್ಡುಗಳನ್ನು ನೀಡಲಾಯಿತು. ವಿನೋದಮ್ಮ ಮತ್ತು ಬಿ. ಮಂಜುಳಾ ಅದನ್ನು ತಯಾರಿಸಿದ್ದರು. ಅವರ ಮನೆಮಾತು ಕನ್ನಡ (ಗೋಪಿ ಮತ್ತು ಅವರ ಸ್ನೇಹಿತರು ಅದನ್ನು ನನಗಾಗಿ ಭಾಷಾಂತರಿಸಿದರು). ಮಳೆ ಮತ್ತು ಆನೆಗಳ ನಡುವೆ, ಅವರ ರಾಗಿಯ ಹೆಚ್ಚಿನ ಭಾಗವು ಇಲ್ಲವಾಗಿದೆ ಎಂದು ಅವರು ಹೇಳುತ್ತಾರೆ.

ಅವರು ಪ್ರತಿದಿನ ರಾಗಿಯನ್ನು ತಿನ್ನುತ್ತಾರೆ ಮತ್ತು ತಮ್ಮ ಮಕ್ಕಳಿಗೂ ತಿನ್ನಿಸುತ್ತಾರೆ ಎಂದು ಅವರು ನಮಗೆ ಹೇಳುತ್ತಾರೆ - ಅವರು ದೊಡ್ಡವರಾಗಿ ಅನ್ನ ತಿನ್ನಲು ಪ್ರಾರಂಭಿಸುವವರೆಗೆ "ಮಧ್ಯಮ ದಪ್ಪದ ತರಿಯ" ರಾಗಿ ಗಂಜಿ. ಅವರು ವಾರ್ಷಿಕ ರಾಗಿ ಬೆಳೆಯನ್ನು ಮನೆಯಲ್ಲಿ ಚೀಲಗಳಲ್ಲಿ ಸಂಗ್ರಹಿಸಿಡುತ್ತಾರೆ, ಮತ್ತು ಅವರಿಗೆ ಅಗತ್ಯವಿರುವಾಗ ಅದನ್ನು ಹಿಟ್ಟು ಮಾಡಿಸುತ್ತಾರೆ. ಆದರೆ ಈ ವರ್ಷ, ಕಳಪೆ ಫಸಲಿನ ಕಾರಣ ವರ್ಷ ಕಳೆಯುವುದು ಕಷ್ಟವಾಯಿತು.

ಈ ಇಬ್ಬರೂ ಮಹಿಳೆಯರು ನವದರ್ಶನಂ ಸುತ್ತಮುತ್ತಲಿನ ಗಂಗೇನಹಳ್ಳಿಯವರು, ಮತ್ತು ಮಧ್ಯಾಹ್ನದ ಊಟ ಮುಗಿಸಿ ಈಗಷ್ಟೇ ಮರಳಿದ್ದಾರೆ. ತಮ್ಮ ಹೊಲಗಳಲ್ಲಿ - ವಿನೋದಮ್ಮ 4 ಎಕರೆ ಮತ್ತು ಮಂಜುಳಾ 1.5 ಎಕರೆ - ಅವರು ರಾಗಿ, ಭತ್ತ, ದ್ವಿದಳ ಧಾನ್ಯಗಳು ಮತ್ತು ಸಾಸಿವೆಯನ್ನು ಬೆಳೆಯುತ್ತಾರೆ. "ಅಕಾಲಿಕ ಮಳೆಯಾದಾಗ, ರಾಗಿ ಬೀಜಗಳು ಪೈರಿನಲ್ಲೇ ಮೊಳಕೆಯೊಡೆಯುತ್ತವೆ" ಎಂದು ಮಂಜುಳಾ ಹೇಳುತ್ತಾರೆ. ಮತ್ತು ನಂತರ ಬೆಳೆ ಹಾಳಾಗುತ್ತದೆ.

ಇದನ್ನು ತಪ್ಪಿಸಲು, ವಿನೋದಮ್ಮನ ಕುಟುಂಬವು ಬೇಗನೆ ಕಟಾವು ಮಾಡಲು ನಿರ್ಧರಿಸಿತು ಮತ್ತು ರಾಗಿ ಮತ್ತು ಪೈರನ್ನು ತ್ವರಿತವಾಗಿ ಬೇರ್ಪಡಿಸಲು ಯಂತ್ರವನ್ನು ಬಳಸಲು ನಿರ್ಧರಿಸಿತು. ಅವರು ತನ್ನ ಕೈಸನ್ನೆಯಿಂದ ಗಾಳಿಯಲ್ಲಿ ಅಚ್ಚುಕಟ್ಟಾದ ಸಾಲುಗಳನ್ನು ಬರೆಯುತ್ತಾ ಮಾತನಾಡುತ್ತಿರುವಾಗ, ಮತ್ತು ಅವರ ಕ್ರಿಯೆ ಭಾಷೆಯ ಅಂತರಗಳ ನಡುವೆ ಸೇತುವೆಯೊಂದನ್ನು ನಿರ್ಮಿಸುತ್ತಿತ್ತು.

ಮಾನವ-ಪ್ರಾಣಿ ಸಂಘರ್ಷದ ಬಗ್ಗೆ ಅವರ ಹತಾಶೆಯು ಭಾಷಾಂತರವಿಲ್ಲದೆಯೂ ಅರ್ಥವಾಗುವಂತಿತ್ತು. "ಈ ಹಿಂದೆ, ನಾವು ಸ್ವಲ್ಪ ಪರಿಹಾರವನ್ನು ಪಡೆಯುತ್ತಿದ್ದೆವು. ಈಗ, ಅವರು [ಅಧಿಕಾರಿಗಳು] ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ, ಆದರೆ ನಮಗೆ ಯಾವುದೇ ಹಣ ಸಿಗುವುದಿಲ್ಲ."

Manjula (left) and Vinodhamma from Ganganahalli say they lose much of their ragi to unseasonal rain and elephants
PHOTO • M. Palani Kumar
A rain-damaged ragi earhead
PHOTO • Aparna Karthikeyan

ಎಡ: ತಾವು ಬೆಳೆದ ರಾಗಿಯ ಹೆಚ್ಚಿನ ಭಾಗವನ್ನು ಅಕಾಲಿಕ ಮಳೆ ಮತ್ತು ಆನೆಗಳಿಗೆ ಬಲಿ ನೀಡಬೇಕಾಗುತ್ತದೆ ಎಂದು ಗಂಗನಹಳ್ಳಿಯ ಮಂಜುಳಾ (ಎಡ) ಮತ್ತು ವಿನೋದಮ್ಮ ಹೇಳುತ್ತಾರೆ. ಬಲ: ಮಳೆಯಿಂದ ಹಾನಿಗೀಡಾದ ರಾಗಿ ತೆನೆ

ಒಂದು ಆನೆ ಎಷ್ಟು ತಿನ್ನುತ್ತದೆ? ತುಂಬಾ, ಎನ್ನುತ್ತಾರೆ ಗೋಪಿ. ಒಂದು ಬಾರಿ, ಎರಡು ಆನೆಗಳು, ಎರಡು ರಾತ್ರಿಗಳಲ್ಲಿ, 20,000 ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ಸುಮಾರು 10 ಚೀಲ ರಾಗಿಯನ್ನು ತಿಂದವು ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಒಬ್ಬ ಆನೆ ಒಂದೇ ದಾಳಿಯಲ್ಲಿ 21 ಹಲಸಿನ ಹಣ್ಣುಗಳನ್ನು ತಿಂದಿದೆ. ಮತ್ತು ಎಲೆಕೋಸುಗಳು..."

ರೈತರು ತಮ್ಮ ಫಸಲನ್ನು ಉಳಿಸಿಕೊಳ್ಳಲು ನಿದ್ರೆಯನ್ನು ಕಳೆದುಕೊಳ್ಳುತ್ತಾರೆ. ಎರಡು ವರ್ಷಗಳ ಕಾಲ ರಾಗಿ ಋತುವಿನಲ್ಲಿ ರಾತ್ರಿ ಮಚ್ಚನ್ ಮೇಲೆ ಕುಳಿತು ಆನೆಗಳನ್ನು ಹುಡುಕುತ್ತಿದ್ದುದನ್ನು ಗೋಪಿ ನೆನಪಿಸಿಕೊಳ್ಳುತ್ತಾರೆ. ಇದು ಕಠಿಣ ಜೀವನ, ಮತ್ತು ಬೆಳಗಿನ ಹೊತ್ತಿಗೆ ನೀವು ಸೋತು ಹೋಗಿರುತ್ತೀರಿ  ಎಂದು ಅವರು ಹೇಳುತ್ತಾರೆ. ನವದರ್ಶನಂನ ಸುತ್ತಲಿನ ಕಿರಿದಾದ ಮತ್ತು ಸುತ್ತುವರಿದ ರಸ್ತೆಗಳ ಮೂಲಕ ಹೋಗುವಾಗ ನಾವು ಅನೇಕ ಮಚ್ಚನ್‌ಗಳನ್ನು ಕಂಡೆವು. ಕೆಲವು ಸುಸಜ್ಜಿತವಾಗಿದ್ದರೆ, ಮತ್ತೆ ಕೆಲವು ಒರಟೊರಟಾಗಿ ಸಿದ್ಧವಾಗಿವೆ. ಹೆಚ್ಚಿನವು ಒಂದು ರೀತಿಯ ಗಂಟೆಯನ್ನು ಹೊಂದಿರುತ್ತವೆ - ಒಂದು ತಗಡಿನ ಡಬ್ಬಿ ಮತ್ತು ಹಗ್ಗಕ್ಕೆ ಜೋಡಿಸಲಾದ ಕೋಲು – ಇದು ಆನೆ ಕಂಡಿದೆ ಎಂದು ಇತರರನ್ನು ಎಚ್ಚರಿಸುವ ಒಂದು ಮಾರ್ಗವಾಗಿದೆ.

ನಿಜವಾದ ದುರಂತವೆಂದರೆ ಆಗಾಗ್ಗೆ ಆನೆಗಳು ಹೇಗಾದರೂ ಮಾಡಿ ಬೆಳೆಗಳ ಮೇಲೆ ದಾಳಿ ಮಾಡುತ್ತವೆ. "ಯಾವುದಾದರೂ ಆನೆ ಬಂದಾಗ ನಾವು ಅದನ್ನು ನಿಲ್ಲಿಸಲು ಸಹ ಸಾಧ್ಯವಾಗುತ್ತಿರಲಿಲ್ಲ" ಎಂದು ಗೋಪಿ ನೆನಪಿಸಿಕೊಳ್ಳುತ್ತಾರೆ. "ನಾವು ಪಟಾಕಿಗಳನ್ನು ಸಿಡಿಸಿದೆವು, ಎಲ್ಲವನ್ನೂ ಪ್ರಯತ್ನಿಸಿದೆವು, ಆದರೆ ಅದು ತನಗೆ ಬೇಕಿರುವುದನ್ನೇ ಮಾಡಿತು."

ಗಂಗನಹಳ್ಳಿ ಪ್ರದೇಶವು ಈಗ ವಿಚಿತ್ರವಾದ ಸಮಸ್ಯೆಯೊಂದನ್ನು ಹೊಂದಿದೆ: ಅರಣ್ಯ ಇಲಾಖೆಯ ಆನೆ ಬೇಲಿಯು ನವದರ್ಶನದ ಸಮೀಪದಲ್ಲಿ ಕೊನೆಗೊಳ್ಳುತ್ತದೆ, ಇದು ಬಹುತೇಕ ಆನೆಗಳನ್ನು ಜನರ ಭೂಮಿಗೆ ಬರುವಂತೆ ಮಾಡುತ್ತದೆ. ಬೆಳೆ ಕೈಗೆ ಬರುವ ಸಮಯದಲ್ಲಿ, ವರ್ಷಕ್ಕೆ ನಡೆಯುವ 20 ದಾಳಿಗಳಲ್ಲಿ ಬಹುತೇಕ ಈ ಸಮಯದ ರಾತ್ರಿಗಳಲ್ಲಿ ನಡೆಯುತ್ತದೆ.

''ಬೇಲಿಯ ಎರಡೂ ಬದಿಯ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಒಮ್ಮೆ ಪ್ರಾರಂಭಿಸಿದಾಗ (ಆನೆಯ ಬೇಲಿ), ನೀವು ನಿಲ್ಲಿಸಲು ಸಾಧ್ಯವಿಲ್ಲ. ”ಗೋಪಿ ತಲೆ ಅಲ್ಲಾಡಿಸಿ ನಿರಾಕರಿಸಿದರು.

A makeshift machan built atop a tree at Navadarshanam, to keep a lookout for elephants at night.
PHOTO • M. Palani Kumar
A bell-like contraption in the farm that can be rung from the machan; it serves as an early warning system when elephants raid at night
PHOTO • M. Palani Kumar

ಎಡ: ನವದರ್ಶನಂನಲ್ಲಿ ರಾತ್ರಿಯಲ್ಲಿ ಆನೆಗಳನ್ನು ಗುರುತಿಸಲು ಮರದ ಮೇಲೆ ನಿರ್ಮಿಸಲಾದ ತಾತ್ಕಾಲಿಕ ಮಚ್ಚಾನ್. ಬಲ: ಮಾಚನ್ ನಿಂದ ಹೊಡೆಯಬಹುದಾದ ಫಾರ್ಮ್ ನಲ್ಲಿ ಗಂಟೆಯಂತಹ ಸಾಧನ; ಆನೆಗಳು ರಾತ್ರಿಯಲ್ಲಿ ದಾಳಿ ಮಾಡಿದಾಗ ಇದು ಆರಂಭಿಕ ಎಚ್ಚರಿಕೆ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ

*****

'ನನ್ನ ಹೆಂಡತಿ ನನ್ನನ್ನು ಹೆಚ್ಚು ಕಾಲ ಮನೆಯಲ್ಲಿ ನೋಡಲು ಬಯಸುತ್ತಾಳೆ.'
ಆನೆಗಳ ದಾಳಿಯಿಂದ ಬೆಳೆಗಳನ್ನು ರಕ್ಷಿಸುವಲ್ಲಿ ಸಿಲುಕಿದ 60 ವರ್ಷದ ರೈತ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನ್ಯಾಯಾಧೀಶರಿಗೆ ನೀಡಿದ ಹೇಳಿಕೆ

ಮಾನವ-ಆನೆ ಸಂಘರ್ಷಕ್ಕೆ ಅನೇಕ ಕಾರಣಗಳಿಗಾಗಿ ಸೂಕ್ಷ್ಮ ಮತ್ತು ಸುಸ್ಥಿರ ಪರಿಹಾರದ ಅಗತ್ಯವಿದೆ. ಮೊದಲನೆಯದಾಗಿ, ಸಮಸ್ಯೆಯ ಪ್ರಮಾಣವು ಆನೆಯಷ್ಟೇ ದೊಡ್ಡದಾಗಿದೆ. ಜಾಗತಿಕವಾಗಿ, ಫ್ರಂಟಿಯರ್ಸ್ ಇನ್ ಇಕಾಲಜಿ ಅಂಡ್ ಎವಲ್ಯೂಶನ್ ಎಂಬ ಪತ್ರಿಕೆಯು ಪ್ರಸ್ತುತ ನಿರ್ವಹಣಾ ಕಾರ್ಯತಂತ್ರಗಳನ್ನು ಪರಾಮರ್ಶಿಸುತ್ತಾ ಹೇಳುತ್ತದೆ: "ದಿನಕ್ಕೆ $ 1.25 ಕ್ಕಿಂತ ಕಡಿಮೆ ವೆಚ್ಚದಲ್ಲಿ ಬದುಕುವ ವಿಶ್ವದ 1.2 ಬಿಲಿಯನ್ ಜನರಲ್ಲಿ ಅನೇಕರು ಏಷ್ಯನ್ ಮತ್ತು ಆಫ್ರಿಕನ್ ಆನೆ ಶ್ರೇಣಿಯ ದೇಶಗಳಲ್ಲಿ ವಾಸಿಸುತ್ತಿದ್ದಾರೆ." ಮತ್ತು ಈ ಅಂಚಿನಲ್ಲಿರುವ ಸಮುದಾಯಗಳು "ಸ್ಥಳ ಮತ್ತು ಸಂಪನ್ಮೂಲಗಳಿಗಾಗಿ ಆನೆಗಳಂತಹ ಇತರ ಪ್ರಭೇದಗಳೊಂದಿಗೆ ಹೆಚ್ಚೆಚ್ಚು ಸ್ಪರ್ಧಿಸುವಂತೆ" ಒತ್ತಾಯಿಸಲ್ಪಡುತ್ತವೆ.

ಗೌರವ ವನ್ಯಜೀವಿ ಮೇಲ್ವಿಚಾರಕ ಸಂಜೀವ್ ಕುಮಾರ್, ಭಾರತದಲ್ಲಿ 22 ರಾಜ್ಯಗಳು ಆನೆ ದಾಳಿಯಿಂದ ಪ್ರಭಾವಿತವಾಗಿವೆ ಎಂದು ಹೇಳುತ್ತಾರೆ. ಹೆಚ್ಚಿನ ಪ್ರಕರಣಗಳು ತಮಿಳುನಾಡು, ಕರ್ನಾಟಕ, ಕೇರಳ, ಒಡಿಶಾ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಮತ್ತು ಅಸ್ಸಾಂನಲ್ಲಿವೆ.

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ರಾಜ್ಯಸಭೆಯಲ್ಲಿ ಸಲ್ಲಿಸಿದ ಅಧಿಕೃತ ಅಂಕಿಅಂಶಗಳು , ಏಪ್ರಿಲ್ 2018ರಿಂದ ಡಿಸೆಂಬರ್ 2020ರವರೆಗೆ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ - 1,401 ಮಾನವರು ಮತ್ತು 301 ಆನೆಗಳು ಈ ಕಾರಣದಿಂದಾಗಿ ಸಾವನ್ನಪ್ಪಿವೆ ಎಂದು ಬಹಿರಂಗಪಡಿಸಿದೆ.

ಕಾಗದದ ಮೇಲೆ, ರೈತ / ಅವನ ನಷ್ಟವನ್ನು ಸರಿದೂಗಿಸುವ ಎಲ್ಲಾ ಉದ್ದೇಶವಿದೆ. ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಆನೆ ಯೋಜನಾ ವಿಭಾಗವು 2017ರಲ್ಲಿ ಹೊರಡಿಸಿದ ಭಾರತ ಸರ್ಕಾರದ ದಾಖಲೆಯ ಪ್ರಕಾರ , ಶಿಫಾರಸು ಮಾಡಲಾದ ಪರಿಹಾರವು ಅಂದಾಜು ಬೆಳೆ ಹಾನಿಯ ಶೇಕಡಾ 60ರಷ್ಟಿರಬೇಕು. "ಪರಿಹಾರವು ಬೆಳೆ ಮೌಲ್ಯದ 100 ಪ್ರತಿಶತದಷ್ಟು ಇದ್ದರೆ, ರೈತನು ತನ್ನ ಬೆಳೆಗಳನ್ನು ರಕ್ಷಿಸಲು ಯಾವುದೇ ಪ್ರಯತ್ನವನ್ನು ಮಾಡುವುದಿಲ್ಲ" ಎಂದು ಅದು ಹೇಳುತ್ತದೆ.

ಭಾರತೀಯ ಅರಣ್ಯ ಸೇವೆ (ಐಎಫ್ಎಸ್) ಅಧಿಕಾರಿ ಮತ್ತು ಹೊಸೂರಿನ ವನ್ಯಜೀವಿ ವಾರ್ಡನ್ ಕಚೇರಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ. ಕಾರ್ತಿಕೇಯನಿ ಅವರು ಹೊಸೂರು ಅರಣ್ಯ ವಿಭಾಗದಲ್ಲಿ ವಾರ್ಷಿಕವಾಗಿ 200 ಹೆಕ್ಟೇರ್ ಗಿಂತಲೂ ಹೆಚ್ಚು ಬೆಳೆಗಳು ಹಾನಿಗೊಳಗಾಗುತ್ತವೆ ಎಂದು ಹೇಳುತ್ತಾರೆ. "ಅರಣ್ಯ ಇಲಾಖೆಯು ತಮ್ಮ ಬೆಳೆಗಳಿಗೆ ಪರಿಹಾರ ಕೋರಿ ರೈತರಿಂದ 800ರಿಂದ 1,000 ಅರ್ಜಿಗಳನ್ನು ಸ್ವೀಕರಿಸುತ್ತದೆ. ಮತ್ತು ವಾರ್ಷಿಕ ಪಾವತಿಯು [ರೂ.] 80 ಲಕ್ಷದಿಂದ 1 ಕೋಟಿಯವರೆಗೆ ಇರುತ್ತದೆ" ಎಂದು ಅವರು ಹೇಳುತ್ತಾರೆ. ಇದು ಪ್ರತಿ ಮಾನವ ಸಾವಿಗೆ ಪಾವತಿಸಿದ 5 ಲಕ್ಷ ರೂಪಾಯಿಗಳನ್ನು ಒಳಗೊಂಡಿದೆ - ಈ ಪ್ರದೇಶದಲ್ಲಿ ಆನೆಗಳಿಂದ ಪ್ರತಿ ವರ್ಷ 13 ಜನರು ಸಾವಿಗೀಡಾಗುತ್ತಾರೆ.

Tusker footprints on wet earth.
PHOTO • Aparna Karthikeyan
Elephant damaged bamboo plants in Navadarshanam
PHOTO • M. Palani Kumar

ಎಡಕ್ಕೆ: ಒದ್ದೆ ನೆಲದ ಮೇಲೆ ಆನೆ ಹೆಜ್ಜೆಗುರುತುಗಳು. ಬಲ: ನವದರ್ಶನಂನಲ್ಲಿ ಬಿದಿರು ಗಿಡಗಳಿಗೆ ಆನೆಯಿಂದ ಹಾನಿಯಾಗಿರುವುದು

"ಒಂದು ಎಕರೆಗೆ ಪಾವತಿಸಬೇಕಾದ ಗರಿಷ್ಠ ಪರಿಹಾರವು 25,000 ರೂಪಾಯಿಗಳು" ಎಂದು ಕಾರ್ತಿಕೇಯನಿ ವಿವರಿಸುತ್ತಾರೆ. "ದುರದೃಷ್ಟವಶಾತ್, ತೋಟಗಾರಿಕಾ ಬೆಳೆಗೆ ಇದು ಸಾಕಾಗುವುದಿಲ್ಲ, ಏಕೆಂದರೆ ರೈತರು ಎಕರೆಗೆ 70,000 ರೂ.ಗಳಿಗೂ ಹೆಚ್ಚು ನಷ್ಟವನ್ನು ಅನುಭವಿಸುತ್ತಾರೆ."

ಹೆಚ್ಚುವರಿಯಾಗಿ, ಪರಿಹಾರ ಪಡೆಯಲು, ರೈತರು ತುರ್ತು ದಾಖಲೆಗಳನ್ನು ಸಲ್ಲಿಸಬೇಕು, ಕೃಷಿ ಅಥವಾ ತೋಟಗಾರಿಕಾ ಅಧಿಕಾರಿ ಕೃಷಿ ಭೂಮಿಯನ್ನು ಪರಿಶೀಲಿಸುತ್ತಾರೆ, ನಂತರ ಗ್ರಾಮ ಆಡಳಿತ ಅಧಿಕಾರಿ (ವಿಎಒ) ಅವರ ಜಮೀನು ದಾಖಲೆಗಳನ್ನು ಪರಿಶೀಲಿಸುತ್ತಾರೆ ಮತ್ತು ಅಂತಿಮವಾಗಿ ಅರಣ್ಯ ಇಲಾಖೆ ಅಧಿಕಾರಿ (ಡಿಎಫ್‌ಒ) ಅನುಮೋದಿಸಿ. ಅರ್ಹವೆನ್ನಿಸಿದಲ್ಲಿ ಸ್ವಲ್ಪ ಪರಿಹಾರವನ್ನು ನೀಡುತ್ತಾರೆ.

3,000 ರಿಂದ 5,000 ರವರೆಗೆ ಪರಿಹಾರ ಪಡೆಯಲು ಕೆಲವೊಮ್ಮೆ ರೈತರು ಸುಮಾರು ಮೂರು ಹಂಗಾಮಿನವರೆಗೆ ಕಾಯಬೇಕಾದ ದುಃಸ್ಥಿತಿಯಿದೆ. "ಆವರ್ತ ನಿಧಿ ಬಳಸಿಕೊಂಡು ತಕ್ಷಣವೇ ಪರಿಹಾರವನ್ನು ಪಾವತಿಸುವುದು ಉತ್ತಮ" ಎಂದು ಕಾರ್ತಿಕೇಯನಿ ಹೇಳುತ್ತಾರೆ.

ವಿವಾದವನ್ನು ಪರಿಹರಿಸುವುದರಿಂದ ಜನರ ಜೀವನ ಮತ್ತು ರೈತರ ಜೀವನೋಪಾಯವನ್ನು ರಕ್ಷಿಸುವುದು ಮಾತ್ರವಲ್ಲದೆ ಅವರ ಜೀವನೋಪಾಯವನ್ನು ಸಹ ಸುಧಾರಿಸುತ್ತದೆ, ಇದು ರಾಜ್ಯ ಅರಣ್ಯ ಇಲಾಖೆಗೆ ಸಮಾನ ಒಳಿತನ್ನು ಸೃಷ್ಟಿಸುತ್ತದೆ ”ಎಂದು ಸಂಜೀವ್ ಕುಮಾರ್ ಹೇಳುತ್ತಾರೆ. ಇದೀಗ ರೈತರು ಆನೆ ಸಂರಕ್ಷಣೆಯ ಹೊಣೆ ಹೊರಬೇಕಾಗಿದೆ ಎಂದರು.

ಆನೆಗಳಿಂದ ಬೆಳೆಯನ್ನು ಉಳಿಸಿಕೊಳ್ಳಲು ರಾತ್ರಿಯಿಡೀ, ತಿಂಗಳುಗಳ ಕಾಲ ಕಾವಲು ಕಾಯುವುದು ಮೋಜಿನ ವಿಷಯವಲ್ಲ ಎಂದು ಸಂಜೀವ್ ಒಪ್ಪಿಕೊಳ್ಳುತ್ತಾರೆ. ಮತ್ತು ಇದು ರೈತರನ್ನು ಅನೇಕ ಗಂಟೆಗಳು ಮತ್ತು ದಿನಗಳನ್ನು ಕಟ್ಟಿಹಾಕುತ್ತದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ಸಭೆಯಲ್ಲಿ, 'ನನ್ನ ಹೆಂಡತಿ ನನ್ನನ್ನು ಮನೆಯಲ್ಲಿ ಹೆಚ್ಚು ಸಮಯ ನೋಡಲು ಬಯಸುತ್ತಾಳೆ' ಎಂದು ರೈತರೊಬ್ಬರು ನ್ಯಾಯಾಧೀಶರಿಗೆ ಹೇಳಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಆ ರೈತನಿಗೆ 60 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿತ್ತು ಎಂದು ಸಂಜೀವ್ ನೆನಪಿಸಿಕೊಳ್ಳುತ್ತಾರೆ, ಮತ್ತು ರೈತನ ಹೆಂಡತಿ ತನ್ನ ಗಂಡನಿಗೆ ಇನ್ನೊಂದು ಸಂಬಂಧವಿರಬಹುದೆಂದು ಅನುಮಾನಿಸುತ್ತಿದ್ದಳು.

ರೈತನ ಮೇಲಿನ ಒತ್ತಡವು ಅರಣ್ಯ ಇಲಾಖೆಗೆ ಸಮಸ್ಯೆಯಾಗಿ ಪರಿವರ್ತಿತವಾಗುತ್ತದೆ. "ಅವರು ಅದನ್ನು ಇಲಾಖೆಯ ಮೇಲೆ ಹೊರಿಸುತ್ತಾರೆ. ಅವರು ಕಚೇರಿಯನ್ನು ಒಡೆದಿದ್ದಾರೆ. ಅವರು ಹೆದ್ದಾರಿ ಬಂದ್‌ಗಳನ್ನು ಪ್ರದರ್ಶಿಸಿದ್ದಾರೆ, ಸಿಬ್ಬಂದಿಯನ್ನು ನಿಂದಿಸಿದ್ದಾರೆ ಮತ್ತು ಹಲ್ಲೆ ಮಾಡಿದ್ದಾರೆ. ಇದು ಅರಣ್ಯ ಇಲಾಖೆಯನ್ನು ಹಿಮ್ಮೆಟ್ಟಿಸುತ್ತದೆ ಮತ್ತು ರಕ್ಷಣಾ ಕರ್ತವ್ಯಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ" ಎಂದು ಸಂಜೀವ್ ಕುಮಾರ್ ಹೇಳುತ್ತಾರೆ.

Anandaramu Reddy explaining the elephants’ path from the forest to his farm in Vadra Palayam hamlet
PHOTO • M. Palani Kumar

ಆನಂದರಾಮು ರೆಡ್ಡಿ ಅವರು ಕಾಡಿನಿಂದ ವಡ್ಡರ ಪಾಳ್ಯಂನಲ್ಲಿರುವ ತಮ್ಮ ಜಮೀನಿಗೆ ಕಾಡಿನಿಂದ ಆನೆ ಬರುವ ದಾರಿಯನ್ನು ತೋರಿಸುತ್ತಿರುವುದು

ಆನೆಗಳ ವಿರುದ್ಧ ಹೋರಾಡುವುದು ಆರ್ಥಿಕ, ಪರಿಸರ ಮತ್ತು ಪರಿಸರದ ಪರಿಣಾಮಗಳನ್ನು ಹೊಂದಿದೆ. ಇದು ಮಾನಸಿಕ ಪರಿಣಾಮವನ್ನು ಸಹ ಹೊಂದಿದೆ. ಇದು ಹೇಗೆಂದರೆ ನೀವೊಂದು ವ್ಯಾಪಾರ ಆರಂಭಿಸುತ್ತೀರಿ ಆದರೆ ನಿಮ್ಮ ತಪ್ಪೇನೂ ಇಲ್ಲದಿದ್ದರೂ ಅದು ಒಂದು ಸರ್ವನಾಶವಾಗಿಬಿಡುವ ರೀತಿ

ಮತ್ತು ಇವೆಲ್ಲದರ ಜೊತೆಗೆ, ಆನೆಗಳ ಜೀವಕ್ಕೂ ಅಪಾಯವಿದೆ. 2017ರಲ್ಲಿ ನಡೆಸಿದ ಗಣತಿಯ ಪ್ರಕಾರ ತಮಿಳುನಾಡಿನಲ್ಲಿ ಆನೆಗಳ ಸಂಖ್ಯೆ 2,761 ಎಂದು ಹೇಳಿರುವುದರಿಂದ ಇದು ಒತ್ತಡದ ಮತ್ತು ತುರ್ತು ಸಂಗತಿಯಾಗಿದೆ. ಇದು ಭಾರತೀಯ ಆನೆಗಳ ಸಂಖ್ಯೆಯ ಕೇವಲ 10 ಪ್ರತಿಶತಕ್ಕಿಂತ ಕಡಿಮೆ, ಅಂದರೆ 29,964 .

ಪ್ರತೀಕಾರ, ವಿದ್ಯುದಾಘಾತ, ರಸ್ತೆ ಮತ್ತು ರೈಲು ಅಪಘಾತಗಳು, ಇವೆಲ್ಲವೂ ಸಣ್ಣ ಸಂಖ್ಯೆಯ ಪ್ರಾಣಿಗಳನ್ನು ಬಲಿಪಡೆಯುತ್ತವೆ. ಒಂದು ಹಂತದಲ್ಲಿ, ಇದು ಪರಿಹಾರವಿಲ್ಲದ ಸಮಸ್ಯೆ ಎಂದು ತೋರುತ್ತದೆ. ಇದನ್ನು ಹೊರತುಪಡಿಸಿ, ಸಂಜೀವ್ ಮತ್ತು ಇತರರು ಮೂರ್ತಿಯವರ ಸಹಾಯದಿಂದ ಪರಿಹಾರವೊಂದನ್ನು ಕಂಡುಕೊಂಡರು...

*****

'ವಾಸ್ತವವಾಗಿ, ನಮಗೆ ವಿದ್ಯುತ್ ಮೇಲೆ ಅವಲಂಬಿತರಾಗಲು ಆಸಕ್ತಿಯಿಲ್ಲ. ಸೌರಶಕ್ತಿ ಅವಲಂಬನಾರ್ಹವಲ್ಲ. ಜತೆಗೆ ಆನೆಗಳು ವಿದ್ಯುತ್ ಬೇಲಿಗಳನ್ನು ಗುರುತಿಸಬಲ್ಲವು.'
ಎಸ್. ಆರ್. ಸಂಜೀವ್ ಕುಮಾರ್, ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ವೇತನ ಪಡೆಯದ ವನ್ಯಜೀವಿ ಪಾಲಕ

ಕೃಷ್ಣಗಿರಿ ಜಿಲ್ಲೆಯ ಮೇಲಗಿರಿಯಲ್ಲಿನ ಆನೆ ಬೇಲಿಯ ಯೋಜನೆ ದಕ್ಷಿಣ ಆಫ್ರಿಕಾದ ಅಡ್ಡೋ ರಾಷ್ಟ್ರೀಯ ಆನೆ ಉದ್ಯಾನವನದಿಂದ ಪ್ರೇರಣೆಗೊಂಡಿದೆ ಎಂದು ಸಂಜೀವ್ ಕುಮಾರ್ ಹೇಳುತ್ತಾರೆ. "ರಮಣ್ ಸುಕುಮಾರ್, 'ಭಾರತದ ಆನೆ ಮನುಷ್ಯ' ಈ ಬಗ್ಗೆ ನನಗೆ ಹೇಳಿದರು. ಅಲ್ಲಿ ಅವರು ಬಿಸಾಡಿದ ರೈಲ್ವೆ ಪಟ್ಟಿಗಳು ಮತ್ತು ಎಲಿವೇಟರ್ ಕೇಬಲ್ ಗಳನ್ನು ಬಳಸಿದ್ದರು. ಮತ್ತು ಅವರು ಬೇಲಿಯನ್ನು ಹಾಕಿದ ನಂತರ, ಸಂಘರ್ಷವು ಕೊನೆಗೊಂಡಿತು." ಸಂಜೀವ್ ಅವರು ಅಡ್ಡೋ ಪಾರ್ಕ್ ಕಲ್ಪನೆಯನ್ನು ಅನುಸರಿಸಿದರು.

ಅಲ್ಲಿಯವರೆಗೆ, ಹೊಸೂರು ಅರಣ್ಯ ವಿಭಾಗದಲ್ಲಿ ಆನೆಗಳನ್ನು ಕಾಡಿನ ಒಳಗೆ ಮತ್ತು ಹೊಲದಿಂದ ಹೊರಗಿಡಲು ಅನೇಕ ಪ್ರಯತ್ನಗಳು ನಡೆದವು - ಆದರೆ ಯಾವುದೂ ಯಶಸ್ವಿಯಾಗಲಿಲ್ಲ. ಅವರು ಆನೆ ನಿರೋಧಕ ಕಂದಕಗಳನ್ನು ಪ್ರಯತ್ನಿಸಿದ್ದರು, ಎಂದರೆ ಅರಣ್ಯದ ಗಡಿಯ ಸುತ್ತಲೂ ಆಳವಾದ ಕಂದಕ ತೋಡುವುದು. ಸಾಂಪ್ರದಾಯಿಕ ಸೌರ ಬೇಲಿಗಳನ್ನು ಪ್ರಯತ್ನಿಸಿದರು, ತಡೆಗೋಡೆಗಳನ್ನು ಹೆಚ್ಚಿಸಿದರು ಮತ್ತು ಆಫ್ರಿಕಾದಿಂದ ಕೆಲವು ಮುಳ್ಳಿನ ಮರಗಳನ್ನು ಸಹ ಆಮದು ಮಾಡಿಕೊಂಡರು. ಯಾವುದೂ ಕೆಲಸ ಮಾಡಲಿಲ್ಲ.

ಹೊಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಐಎಫ್ಎಸ್ ದೀಪಕ್ ಬೀಳಗಿ ಅವರನ್ನು ನೇಮಿಸಿದಾಗ, ಒಂದು ಪ್ರಗತಿ ಸಂಭವಿಸಿತು. ಬೀಳಗಿ ಈ ವಿಚಾರದ ಬಗ್ಗೆ ಆಸಕ್ತಿ ವಹಿಸಿ, ಅದಕ್ಕಾಗಿ ಹಣವನ್ನು ಹೊಂದಿಸಿದರು, ಸಂಗ್ರಾಹಕನೊಂದಿಗೆ ಮಾತನಾಡಿದರು, ಮತ್ತು "ನಾವು ಪ್ರಾಯೋಗಿಕ ಬೇಲಿಯನ್ನು ಹಾಕಲು ನಿರ್ಧರಿಸಿದೆವು" ಎಂದು ಸಂಜೀವ್ ವಿವರಿಸುತ್ತಾರೆ.

A section of the Melagiri Elephant Fence, which is made of pre-cast, steel-reinforced concrete posts, and steel wire rope strands
PHOTO • M. Palani Kumar

ಮೇಳಗಿರಿ ಆನೆ ಬೇಲಿಯ ಒಂದು ವಿಭಾಗ, ಇದು ಪೂರ್ವ-ಎರಕಹೊಯ್ದ, ಉಕ್ಕಿನ-ಬಲವರ್ಧಿತ ಕಾಂಕ್ರೀಟ್ ಕಂಬಗಳು ಮತ್ತು ಉಕ್ಕಿನ ತಂತಿ ಹಗ್ಗದ ಎಳೆಗಳಿಂದ ಮಾಡಲ್ಪಟ್ಟಿದೆ

ಕುತೂಹಲಕಾರಿಯಾಗಿ, ಆನೆ ಎಷ್ಟು ಪ್ರಬಲವಾಗಿದೆ ಎಂಬುದರ ಕುರಿತು ಸಾಕಷ್ಟು ಅಂಕಿ-ಅಂಶ ಲಭ್ಯವಿಲ್ಲ. ಆನೆಯು ಎಷ್ಟು ತೂಕವನ್ನು ಎಳೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಆದ್ದರಿಂದ ಅವರು ಮಧುಮಲೈನಲ್ಲಿ ಮೂಲಮಾದರಿಯನ್ನು ಸಂಪರ್ಕಿಸಿದರು ಮತ್ತು ಕುಮ್ಕಿ (ತರಬೇತಿ ಪಡೆದ ಸಾಕು ಆನೆಗಳು) ಮೂಲಕ ಅದನ್ನು ಪರೀಕ್ಷಿಸಿದರು. ಆನೆಗಳಲ್ಲಿ ಒಂದು - ಮೂರ್ತಿ ಎಂಬ ದಂತವಿಲ್ಲದ ಐದು ಟನ್ ಭಾರದ ಆನೆ - ಒಮ್ಮೆ ಅನೇಕ ಜನರನ್ನು ಕೊಂದಿತ್ತು ಮತ್ತು ನಂತರ ಅರಣ್ಯ ಅದನ್ನು ಇಲಾಖೆಯಿಂದ ನಿಯಂತ್ರಣಕ್ಕೆ ತರಲಾಯಿತು. ವಿಪರ್ಯಾಸವೆಂದರೆ, ಬೇಲಿಗೆ ಆ ಕಾಡು ಆನೆ ಬೀಟಾ ಪರೀಕ್ಷಕನಾಗಿ ಬಂದಿತ್ತು, ಇದು ಆನೆ-ಮಾನವ ಸಂಘರ್ಷವನ್ನು ಕಡಿಮೆ ಮಾಡುತ್ತದೆ.

ಸಂಜೀವ್ ಹೇಳುತ್ತಾರೆ, "ನೀವು ಅದರ ಇತಿಹಾಸವನ್ನು ಊಹಿಸಲು ಸಾಧ್ಯವಿಲ್ಲ, ಏಕೆಂದರೆ ಅದು ತುಂಬಾ ಚೆನ್ನಾಗಿ ತರಬೇತಿ ಪಡೆದಿತ್ತು. ಅದು ಬಹಳ ವಿನಯಶೀಲನೂ ಸೌಮ್ಯನೂ ಆಗಿತ್ತು." ಈಗ, ಮೂರ್ತಿ ನಿವೃತ್ತ - ಆನೆಗಳ ನಿವೃತ್ತಿ ವಯಸ್ಸು 55 - ಮತ್ತು ಊಟ ಮತ್ತು ವಸತಿ ಸೇರಿದಂತೆ ಉತ್ತಮ ಜೀವನವನ್ನು ಆನಂದಿಸುತ್ತವೆ ಮತ್ತು ಸಾಂದರ್ಭಿಕ 'ಸ್ಟಡ್' ಸಹ ಆಗಿರುತ್ತದೆ, ಶಿಬಿರದ ಹೆಣ್ಣು ಆನೆಗಳೊಂದಿಗೆ ಮಿಲನ ನಡೆಸುತ್ತವೆ. ಕಾಡಿನಲ್ಲಿ, ಕಿರಿಯ ಗಂಡು ಆನೆಗಳು ಆ ಸುಯೋಗಕ್ಕಾಗಿ ಅದರೊಂದಿಗೆ ಸ್ಪರ್ಧಿಸುವುದರಿಂದ ಅದರ ಸೇವೆಗಳ ಅಗತ್ಯವಿರುವುದಿಲ್ಲ - ಅಥವಾ ಅನುಮತಿಸಲಾಗುವುದಿಲ್ಲ.

ಕೆಲವು ಪರಿಸ್ಥಿತಿಗಳಲ್ಲಿ ಆನೆಯು ಉತ್ಪಾದಿಸಬಹುದಾದ ಗರಿಷ್ಠ ಬಲವೆಂದರೆ 1,800 ಕಿಲೋಗ್ರಾಂ ಎಂದು ಮೂರ್ತಿಯಿಂದ ತಿಳಿದುಬಂತು. ಅವರು ನಿರ್ಮಿಸಿದ ಮೊದಲ ಎರಡು ಕಿಲೋಮೀಟರ್ ಬೇಲಿ - ಮೂರ್ತಿಯವರ ಅನುಭವದ ಆಧಾರದ ಮೇಲೆ ಕಂಬಗಳನ್ನು ವಿನ್ಯಾಸಗೊಳಿಸಲಾಯಿತು – ಬೇಲಿ ಆನಂದ ಅವರ ಮನೆಯಿಂದ ಅನತಿ ದೂರದಲ್ಲಿತ್ತು.

"ಆ ಪ್ರಯತ್ನದಿಂದ ನಾವು ಬಹಳಷ್ಟು ಕಲಿತಿದ್ದೇವೆ. ಕೇವಲ ಒಂದು ವಾರದಲ್ಲಿ, ಮಖಾನಾ - ಮೊಟ್ಟೈ ವಾಲ್ ಜೊತೆ ಸುತ್ತಾಡತೊಡಗಿತು – ಬೇಲಿಯನ್ನು ಮುರಿದವು. ನಾವು ಅದನ್ನು ಮರುವಿನ್ಯಾಸಗೊಳಿಸಬೇಕಾಗಿತ್ತು, ಮತ್ತು ಈಗ ಅದು ಮೂಲ ವಿನ್ಯಾಸಕ್ಕಿಂತ 3.5 ಪಟ್ಟು ಬಲಶಾಲಿಯಾಗಿತ್ತು. ತಂತಿ ಹಗ್ಗವು ಈಗಾಗಲೇ ಸಾಕಷ್ಟು ಬಲವಾಗಿದೆ, ಮತ್ತು 12 ಟನ್ ಭಾರವನ್ನು ಹೊರಬಲ್ಲದು. ಅಂದರೆ, ನೀವು ಆ ಹಗ್ಗದಿಂದ ಎರಡು ಆನೆಗಳನ್ನು ಎತ್ತಬಹುದು."

ಇತರ ಮಾದರಿಗಳಿಗೆ ಹೋಲಿಸಿದರೆ, ಅವರ ಬೇಲಿ ಬಹುತೇಕ ನಾಶವಾಗುವುದಿಲ್ಲ ಎಂದು ಸಂಜೀವ್ ಹೇಳುತ್ತಾರೆ. ಇದನ್ನು ಪ್ರಿ-ಕಾಸ್ಟ್, ಸ್ಟೀಲ್-ಬಲವರ್ಧಿತ ಕಾಂಕ್ರೀಟ್ ಕಂಬಗಳು ಮತ್ತು ಸ್ಟೀಲ್ ವೈರ್ ಹಗ್ಗದ ಎಳೆಗಳಿಂದ ಮಾಡಲಾಗಿದೆ. ಆನೆಗಳು ಕಂಬ ಅಥವಾ ತಂತಿಯನ್ನು ಮುರಿಯಲು ಸಾಧ್ಯವಿಲ್ಲ. ಅವು ಮೇಲೆ ಹತ್ತಬಹುದು ಅಥವಾ ಅದರ ಮೂಲಕ ಹತ್ತಬಹುದು. "ಇದು ಯಾವುದೇ ಸಮಸ್ಯೆಯ ಪ್ರದೇಶಗಳನ್ನು ಪರಿಹರಿಸಲು ನಿರ್ದಿಷ್ಟ ಪರಿಹಾರವನ್ನು ಕಂಡುಹಿಡಿಯಲು ನಮಗೆ ಒಂದು ಅವಕಾಶವನ್ನು ನೀಡುತ್ತದೆ. ಬೆಳೆಗಳ ಮೇಲೆ ದಾಳಿ ನಡೆಸಿದ ನಂತರ ಹೊರಗೆ ಬರುವ ಅಥವಾ ಹಿಂತಿರುಗುವ ನಮ್ಮ ಸ್ನೇಹಿತರನ್ನು ತಂಡವು ಕ್ಯಾಮೆರಾ-ಟ್ರ್ಯಾಪ್ ಮಾಡಿದೆ." ಮತ್ತು ಅವರು ನೋಡಿದ್ದನ್ನು ಆಧರಿಸಿ, ಅವರು ಸುಧಾರಣೆಗಳನ್ನು ಮಾಡಿದರು. "ಕೆಲವೊಮ್ಮೆ ಆನೆಯು ಬಂದು ಬೇಲಿಗೆ ಹೆಚ್ಚಿನ ಕೆಲಸದ ಅಗತ್ಯವೇನೆಂಬುದನ್ನು ತೋರಿಸುತ್ತದೆ" ಎಂದು ಸಂಜೀವ್ ನಗುತ್ತಾರೆ.

ಈ ವಿದ್ಯುತ್ ರಹಿತ ಉಕ್ಕಿನ ಬೇಲಿಗೆ ಪ್ರತಿ ಕಿಲೋಮೀಟರ್ ಗೆ 40 ಲಕ್ಷ ರೂ.ಗಳಿಂದ 45 ಲಕ್ಷ ರೂ.ಗಳವರೆಗೆ ವೆಚ್ಚವಾಗುತ್ತದೆ. ಕೆಲವು ಖಾಸಗಿ ವಲಯದ ನೆರವಿನೊಂದಿಗೆ ಮತ್ತು ರಾಜ್ಯ ಸರ್ಕಾರದ ತಮಿಳುನಾಡು ಇನ್ನೋವೇಟಿವ್ ಇನಿಶಿಯೇಟಿವ್ಸ್ ಯೋಜನೆಯ ಸಹಾಯದಿಂದ ಜಿಲ್ಲಾಧಿಕಾರಿಗಳು ಮೊದಲ ಎರಡು ಕಿಲೋಮೀಟರ್ ಮತ್ತು ನಂತರದ 10 ಕಿಲೋಮೀಟರ್ ಬೇಲಿಗೆ ಧನಸಹಾಯ ಮಾಡಿದರು.

Anandaramu walking along the elephant fence and describing how it works
PHOTO • M. Palani Kumar

ಆನಂದರಾಮು ಆನೆಯ ಬೇಲಿಯ ಉದ್ದಕ್ಕೂ ನಡೆದು ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸುತ್ತಿರುವುದು

ಈಗ ಬೇಲಿ ಹಾಕಲಾಗಿರುವ 25 ಕಿಲೋಮೀಟರ್ ಗಳಲ್ಲಿ, 15 ವಿದ್ಯುತ್ ರಹಿತವಾಗಿವೆ, ಮತ್ತು 10 ವಿದ್ಯುದ್ದೀಕರಣಗೊಂಡ (ಸೌರಶಕ್ತಿಯೊಂದಿಗೆ) ಆನೆ ನಿರೋಧಕ ಬೇಲಿಯನ್ನು ಹೊಂದಿವೆ. ವೋಲ್ಟೇಜ್ ಹೆಚ್ಚಾಗಿರುತ್ತದೆ - 10,000 ವೋಲ್ಟ್ ಗಳು - ಮತ್ತು ಇದು ಒಂದು ಸಣ್ಣ ಪ್ರಮಾಣದ ನೇರ ವಿದ್ಯುತ್ ಪ್ರವಾಹವಾಗಿದ್ದು, ಅದು ಪ್ರತಿ ಸೆಕೆಂಡಿಗೆ ಮಿಡಿಯುತ್ತದೆ. "ಸಾಮಾನ್ಯವಾಗಿ, ಆನೆಯನ್ನು ಸ್ಪರ್ಶಿಸಿದಾಗ ಅದು ಸಾಯುವುದಿಲ್ಲ" ಎಂದು ಸಂಜೀವ್ ವಿವರಿಸುತ್ತಾರೆ. "ನಾವು ಮನೆಗಳಲ್ಲಿ ಅಥವಾ ಹೊಲಗಳಲ್ಲಿ ಬಳಸುವ 230 ವೋಲ್ಟ್ ಎಸಿ ವಿದ್ಯುತ್ ಪ್ರವಾಹದಿಂದ ವಿದ್ಯುತ್ ಅವಘಡಗಳು ಸಂಭವಿಸುತ್ತವೆ. ಇಲ್ಲಿ ಬಳಸುವ ವಿದ್ಯುತ್‌ ಸಣ್ಣ ಪ್ರಮಾಣದ್ದು ಹಾಗಾಗಿ ಅವುಗಳ ಜೀವಕ್ಕೆ ಅಪಾಯವಿಲ್ಲ."

ಡಿಸಿ ವೋಲ್ಟೇಜ್ 6,000 ವೋಲ್ಟ್ ಇರುವಾಗ - ಯಾವುದಾದರೂ ಮರ ಅಥವಾ ಸಸ್ಯವು ಬೇಲಿಯ ಮೇಲೆ ಬಿದ್ದರೆ, ಉದಾಹರಣೆಗೆ - ಆನೆಗಳು ಸಂತೋಷದಿಂದ ಅಡ್ಡಲಾಗಿ ನಡೆಯುತ್ತವೆ. ಮತ್ತು ಕೆಲವು ಗಂಡುಗಳಿಗೆ, ತಿನ್ನುವ ಪ್ರಚೋದನೆ ಬಹಳ ಹೆಚ್ಚು ಇರುತ್ತದೆ, ಅವು ಸುಮ್ಮನೆ ನೆಲ ಅಗೆಯುತ್ತವೆ. "ಅವುಗಳ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟ" ಎಂದು ಸಂಜೀವ್ ಒಪ್ಪಿಕೊಳ್ಳುತ್ತಾರೆ.

"ವಾಸ್ತವವಗಿ, ನಾವು ವಿದ್ಯುಚ್ಛಕ್ತಿಯ ಮೇಲೆ ಅವಲಂಬಿತರಾಗಲು ಬಯಸುವುದಿಲ್ಲ. ಸೋಲಾರ್ ವಿಶ್ವಾಸಾರ್ಹವಲ್ಲ" ಎಂದು ಅವರು ಹೇಳುತ್ತಾರೆ. ಜೊತೆಗೆ, ಆನೆಗಳು ವಿದ್ಯುಚ್ಛಕ್ತಿಯನ್ನು ಕಂಡುಹಿಡಿಯಬಲ್ಲವು. ಅವು ನಿರೋಧನ ಮತ್ತು ವಾಹಕತೆಯ ಪರಿಕಲ್ಪನೆಯನ್ನು ತಿಳಿದಿವೆ. ಅವು ಒಂದು ಕೊಂಬೆ ಅಥವಾ ಮರವನ್ನು ತೆಗೆದುಕೊಂಡು ಬೇಲಿಯನ್ನು ಚಿಕ್ಕದಾಗಿಸುತ್ತವವೆ. ಅಥವಾ ಗಂಡು ದಂತವನ್ನು ಬಳಸುತ್ತದೆ - ಅದು ವಿದ್ಯುತ್ ನ ಕೆಟ್ಟ ವಾಹಕ ಎಂದು ಅವು ಕಲಿತಿವೆ. "ವಿದ್ಯುತ್ ಇದೆಯೇ ಎಂದು ನೋಡಲು ಆನೆಯೊಂದು ಸಣ್ಣ ಕೊಂಬೆಯಿಂದ ಬೇಲಿಯನ್ನು ಪರೀಕ್ಷಿಸುವ ಛಾಯಾಚಿತ್ರ ನನ್ನ ಬಳಿ ಇದೆ" ಎಂದು ಸಂಜೀವ್ ನಗುತ್ತಾರೆ.

*****

'ಮೇಲಗಿರಿ ಬೇಲಿಯಿಂದಾಗಿ ಆನೆಗಳು ದಕ್ಷಿಣಕ್ಕೆ ಸ್ಥಳಾಂತರಗೊಂಡಿವೆ. ಇದು ಒಂದು ಒಳ್ಳೆಯ ವಿಷಯ, ಏಕೆಂದರೆ ಅಲ್ಲಿ ನಿರಂತರ ಕಾಡು ಇದೆ, ಅದು ಎಲ್ಲಾ ರೀತಿಯಲ್ಲೂ ವಿಸ್ತರಿಸಿದೆ... ಮುಂದೆ ನೀಲಗಿರಿಗೆ. '
ಕೆ.ಕಾರ್ತಿಕೇಯನಿ, ಭಾರತೀಯ ಅರಣ್ಯ ಸೇವೆ ಅಧಿಕಾರಿ

ಆನೆ ಸಂಘರ್ಷವು ಆರ್ಥಿಕ ವೆಚ್ಚ, ಪರಿಸರ / ಪರಿಸರ ವೆಚ್ಚ ಮತ್ತು ಮಾನಸಿಕ ವೆಚ್ಚವನ್ನು ಸಹ ಹೊಂದಿದೆ. ನಿಮ್ಮ ಯಾವುದೇ ತಪ್ಪಿಲ್ಲದೆ ಒಂದು ದಿನ ಅದನ್ನು ಕಸದಂತೆ ಯಾರೋ ಎಸೆದುಬಿಡಬಹುದಾದ ಅಥವಾ ಕೆಳಕ್ಕೆ ಎಳೆದುಹಾಕಬಹುದೆಂದು ಮೊದಲೇ ತಿಳಿದಿರುವ ವ್ಯವಹಾರವನ್ನು ನಡೆಸುವುದನ್ನು ಕಲ್ಪಿಸಿಕೊಳ್ಳಿ. ಇದು ಕೃಷ್ಣಗಿರಿ ಜಿಲ್ಲೆಯಲ್ಲಿ ತಲೆತಲಾಂತರಗಳಿಂದ ವಾಸಿಸುತ್ತಿರುವ ಮತ್ತು ಸಾಗುವಳಿ ಮಾಡುತ್ತಿರುವ ಕೃಷಿಕರ ಜೀವನ.

ಸ್ಥಳೀಯ ಉತ್ಪನ್ನಗಳನ್ನು ತಿನ್ನುವುದರ ಜೊತೆಗೆ, ಬೆಳೆ ದಾಳಿ ಮಾಡುವ ಆನೆಗಳು ಹೆಚ್ಚಿನ ದೂರ ಚಲಿಸಲು ಕಲಿತಿವೆ, ಮತ್ತು ಇದು ಕಳೆದ ಒಂದೂವರೆ ದಶಕದಲ್ಲಿ ಸಂಭವಿಸಿದೆ ಎಂದು ಸಂಜೀವ್ ಕುಮಾರ್ ವಿವರಿಸುತ್ತಾರೆ. "ಮೀಸಲು ಅರಣ್ಯದಿಂದ ಒಂದು ಅಥವಾ ಎರಡು ಕಿಲೋಮೀಟರ್ ದೂರದಿಂದ, ಅವು ಈಗ ಆಂಧ್ರ ಮತ್ತು ಕರ್ನಾಟಕಕ್ಕೆ ಸುಮಾರು 70 ಅಥವಾ 80 ಕಿಲೋಮೀಟರ್ ಪ್ರಯಾಣಿಸುತ್ತವೆ, ಅಲ್ಲಿ ಒಂದೆರಡು ತಿಂಗಳುಗಳನ್ನು ಕಳೆದು ಹಿಂತಿರುಗುತ್ತವೆ." ಸಾಕಷ್ಟು ಬೆಳೆ ದಾಳಿಗಳು ನಡೆಯುವ ಹೊಸೂರು ಪ್ರದೇಶದಲ್ಲಿ, ಆನೆಗಳು ದಪ್ಪವಾಗಿರುತ್ತವೆ; ಅವು ಆರೋಗ್ಯಕರವಾಗಿ ಕಾಣುತ್ತವೆ ಮತ್ತು ಅನೇಕ ಮರಿಗಳನ್ನು ಹೊಂದಿವೆ.

ಎಳೆಯ ಆನೆಗಳು ಸಾಕಷ್ಟು ಅಪಾಯವನ್ನು ತೆಗೆದುಕೊಳ್ಳುತ್ತವೆ. ಸಂಜೀವ್ ಅವರು ಮೀಸಲು ಅರಣ್ಯಗಳ ಹೊರಗೆ ಆನೆಗಳ ಸಾವಿನ ಬಗ್ಗೆ ದತ್ತಾಂಶವನ್ನು ಸಂಗ್ರಹಿಸಿ, ಅವುಗಳನ್ನು ಸಂಸ್ಕರಿಸಿದರು. ಸುಮಾರು 60ರಿಂದ 70 ಪ್ರತಿಶತದಷ್ಟು ಸಾವುಗಳು ಎಳೆಯ ಗಂಡು ಆನೆಗಳದ್ದು ಎಂದು ಅವರು ಕಂಡುಹಿಡಿದರು.

Mango plantation damaged by elephants in Anandaramu’s field
PHOTO • Anandaramu Reddy
Ananda with more photographs showing crops ruined by elephant raids
PHOTO • Aparna Karthikeyan

ಎಡ: ಆನಂದರಾಮು ಅವರ ಹೊಲದಲ್ಲಿ ಆನೆಗಳಿಂದ ಮಾವಿನ ತೋಟಕ್ಕೆ ಹಾನಿಯಾಗಿರುವುದು. ಬಲ: ಆನೆಗಳ ದಾಳಿಯಿಂದ ನಾಶವಾದ ಬೆಳೆಗಳನ್ನು ತೋರಿಸುವ ಹೆಚ್ಚಿನ ಛಾಯಾಚಿತ್ರಗಳೊಂದಿಗೆ ಆನಂದ

ಈ ದಿನಗಳಲ್ಲಿ ಅವರು ಹಿಂಡನ್ನು ಅಪರೂಪವಾಗಿ ನೋಡುತ್ತೇನೆ ಎಂದು ಆನಂದ ನನಗೆ ಹೇಳಿದರು. ಕೇವಲ ಗಂಡಾನೆಗಳು: ಮೊಟ್ಟೈ ವಾಲ್, ಮಖಾನಾ ಮತ್ತು ಗಿರಿ. ಅವರು ಈಗಲೂ ವಾಟ್ಸಾಪ್‌ನಲ್ಲಿ ಆನೆ ದಾಳಿಗಳ ಚಿತ್ರಗಳನ್ನು ಹೊಂದಿದ್ದಾರೆ. ಬಿದ್ದ ಮಾವಿನ ಕೊಂಬೆಗಳು, ನುಜ್ಜುಗುಜ್ಜಾದ ಬಾಳೆ ಮರಗಳು, ತುಳಿದ ಹಣ್ಣುಗಳು ಮತ್ತು ಆನೆಗಳ ರಾಶಿಗಳು ಮತ್ತು ರಾಶಿ ಆನೆ ಲದ್ದಿಗಳಿವೆ. ಅವರು ಈ ಕುರಿತು ಮಾತನಾಡುವಾಗ ಕೋಪಗೊಳ್ಳುವುದಿಲ್ಲ. ಶಾಂತವಾಗಿರುತ್ತಾರೆ.

"ಏಕೆಂದರೆ, ಅವರ ಸಿಟ್ಟು ಸರ್ಕಾರ ಅಥವಾ ಅರಣ್ಯ ಇಲಾಖೆಯ ಕಡೆಗೆ ನಿರ್ದೇಶಿಸಲ್ಪಡುತ್ತದೆ" ಎಂದು ಸಂಜೀವ್ ಹೇಳುತ್ತಾರೆ. "ಪರಿಹಾರ ಬರುವುದು ತುಂಬಾ ತಡವಾಗುತ್ತದೆ ಅಥವಾ ಬರುವುದಿಲ್ಲ ಎಂದು ಅವರಿಗೆ ತಿಳಿದಿದೆ, ಆದ್ದರಿಂದ ಅವರು ಅದನ್ನು ಕ್ಲೇಮ್ ಮಾಡುವುದನ್ನು ನಿಲ್ಲಿಸಿದ್ದಾರೆ. ಮತ್ತು ಅದೇ ಸಮಸ್ಯೆ, ಏಕೆಂದರೆ ಆಗ ದತ್ತಾಂಶವು ಸಂಘರ್ಷದ ನಿಜವಾದ ತೀವ್ರತೆಯನ್ನು ತೋರಿಸುವುದಿಲ್ಲ."

ಸಂಘರ್ಷವನ್ನು ಕಡಿಮೆ ಮಾಡುವ ಏಕೈಕ ಮಾರ್ಗವೆಂದರೆ ಆನೆಗಳನ್ನು ಕಾಡಿನೊಳಗೆ ಇರಿಸುವುದು. ಅವುಗಳ ನೈಸರ್ಗಿಕ ಆವಾಸಸ್ಥಾನವನ್ನು ಪುನಃಸ್ಥಾಪಿಸಿದಾಗ ಮಾತ್ರ ಸಮಸ್ಯೆ ದೂರವಾಗುತ್ತದೆ. "ಇದು ಶೇಕಡಾ 80 ರಷ್ಟು ಪರಿಹಾರವಾಗಿದೆ. ಲಂಟಾನವನ್ನು ತೊಡೆದುಹಾಕುವುದು, ಅದೂ ಸಹ ಮುಖ್ಯವಾಗಿದೆ."

ಸದ್ಯಕ್ಕೆ, ಬೇಲಿ ಹಾಕಲಾಗಿರುವ 25 ಕಿಲೋಮೀಟರುಗಳಲ್ಲಿ - ಇದು ಆನೆ-ಮಾನವ ಸಂಪರ್ಕ ಗಡಿಯ 25 ಪ್ರತಿಶತ - ಸಂಘರ್ಷವು ಶೇಕಡಾ 95 ರಷ್ಟು ಕಡಿಮೆಯಾಗಿದೆ. ಕಾರ್ತಿಕೇಯನಿ ಹೇಳುತ್ತಾರೆ, "ಮೇಲಗಿರಿ ಬೇಲಿಯಿಂದಾಗಿ ಆನೆಗಳು ದಕ್ಷಿಣಕ್ಕೆ ಸ್ಥಳಾಂತರಗೊಂಡಿವೆ. ಸತ್ಯಮಂಗಲಂವರೆಗೆ ಮತ್ತು ನೀಲಗಿರಿಯವರೆಗೆ ವಿಸ್ತರಿಸಿ, ಅಲ್ಲಿ ನಿರಂತರ ಅರಣ್ಯವಿರುವುದರಿಂದ ಇದು ಒಂದು ಒಳ್ಳೆಯ ವಿಷಯ. ಇದು ಅವುಗಳಿಗೆ ಒಳ್ಳೆಯದು."

ಮೇಲಗಿರಿ ಬೇಲಿಯು ಬಹುಮಟ್ಟಿಗೆ ಒಂದು ಭೌತಿಕ ತಡೆಗೋಡೆಯಾಗಿದೆ. "ಎಲ್ಲಿ ಅದು ಸೌರಶಕ್ತಿಯಿಂದ ವಿದ್ಯುದ್ದೀಕರಣಗೊಂಡಿದೆಯೋ ಅಲ್ಲಿ ಅದು ಮಾನಸಿಕ ತಡೆಗೋಡೆಯಾಗಿದೆ - ಅದು ಅವುಗಳಿಗೆ ಒಂದು ಸಣ್ಣ ಆಘಾತವನ್ನು ಮಾತ್ರ ನೀಡುತ್ತದೆ ಮತ್ತು ಹೆದರುವಂತೆ ಮಾಡುತ್ತದೆ. ಆದರೆ ಆನೆಗಳು ಬುದ್ಧಿವಂತವಾಗಿವೆ. ಜೇನುಗೂಡು ಬೇಲಿಗಳು, ಹುಲಿ ಘರ್ಜನೆಗಳು ಅಥವಾ ಎಚ್ಚರಿಕೆಯ ಕರೆಗಳು ಕೆಲಸ ಮಾಡುವುದಿಲ್ಲ." ಮೂಲತಃ, ಸಂಜೀವ್ ಕುಮಾರ್ ಹೇಳುತ್ತಾರೆ, ನೀವು ಎಲ್ಲಾ ಆನೆಗಳನ್ನು ಎಲ್ಲಾ ಸಮಯದಲ್ಲೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ.

ಆದರೆ ಆನೆಗಳು ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುವಂತೆ ತೋರುತ್ತದೆ. ಅವು ಜನರನ್ನು ಹೇಗೆ ಮನೆಯೊಳಗೆ ಇರಿಸಬೇಕೆಂದು ಕಲಿತಿವೆ. ಕೆಮೆರಾ ಬಲೆಗಳನ್ನು ಒಡೆಯಲಾರಂಭಿಸಿವೆ.  ಸಂಜೀವ್ ಮಾತನಾಡುತ್ತಿರುವಾಗ, ನಾನು ನನ್ನ ಪರದೆಯ ಮೇಲಿನ ಚಿತ್ರವನ್ನು ದಿಟ್ಟಿಸಿ ನೋಡುತಿದ್ದೆ: ಎರಡು ಆನೆಗಳು ಬೇಲಿಯ ಮುಂದೆ ಒಟ್ಟಿಗೆ ಸೇರಿಕೊಂಡು ಹಗ್ಗಗಳನ್ನು ದಾಟುವುದು ಮತ್ತು ರಾಗಿಯನ್ನು ತಲುಪುವುದು ಹೇಗೆ ಎಂದು ಯೋಜಿಸುತ್ತಿದ್ದವು...

ಸ್ಟೋರಿ ಯನ್ನು ವರದಿ ಮಾಡುವಾಗ ಗೋಪಕುಮಾರ್ ಮೆನನ್ ಅವರ ಸಹಾಯ, ಆತಿಥ್ಯ ಮತ್ತು ಅಮೂಲ್ಯವಾದ ಒಳಸುರಿಗ ಳಿಗಾಗಿ ಲೇಖಕರು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಾರೆ.

ಈ ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಧನಸಹಾಯ ಕಾರ್ಯಕ್ರಮ 2020 ರ ಭಾಗವಾಗಿ ಧನಸಹಾಯ ನೀ ಡಿರು ತ್ತದೆ.

ಮುಖಪುಟ ಚಿತ್ರ (ಮೊಟ್ಟೈ ವಾಲ್): ನಿಶಾಂತ್ ಶ್ರೀನಿವಾಸಯ್ಯ.

ಅನುವಾದ : ಶಂಕರ . ಎನ್ . ಕೆಂಚನೂರು

Aparna Karthikeyan

ಅಪರ್ಣಾ ಕಾರ್ತಿಕೇಯನ್ ಓರ್ವ ಸ್ವತಂತ್ರ ಪತ್ರಕರ್ತೆ, ಲೇಖಕಿ ಮತ್ತು ʼಪರಿʼ ಸೀನಿಯರ್ ಫೆಲೋ. ಅವರ ವಸ್ತು ಕೃತಿ 'ನೈನ್ ರುಪೀಸ್ ಎನ್ ಅವರ್' ತಮಿಳುನಾಡಿನ ಕಣ್ಮರೆಯಾಗುತ್ತಿರುವ ಜೀವನೋಪಾಯಗಳ ಕುರಿತು ದಾಖಲಿಸಿದೆ. ಅವರು ಮಕ್ಕಳಿಗಾಗಿ ಐದು ಪುಸ್ತಕಗಳನ್ನು ಬರೆದಿದ್ದಾರೆ. ಅಪರ್ಣಾ ತನ್ನ ಕುಟುಂಬ ಮತ್ತು ನಾಯಿಗಳೊಂದಿಗೆ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ.

Other stories by Aparna Karthikeyan
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru