“ನಿಮ್ಮ ಗಂಡ ಕ್ವಿಟ್‌ ಇಂಡಿಯಾ ಚಳವಳಿ ಸಮಯದಲ್ಲಿ 13 ತಿಂಗಳು ಜೈಲಿಗೆ ಹೋಗಿದ್ದಾಗ ನಿಮಗೆ ಬದುಕು ನಡೆಸುವುದು ಕಷ್ಟವಾಗಿರಬಹುದು ಅಲ್ಲವೇ?” ಎಂದು ನಾನು ಭವಾನಿ ಮಹತೊ ಅವರನ್ನು ಪುರುಲಿಯಾದಲ್ಲಿ ಕೇಳಿದೆ. “ಅಷ್ಟು ದೊಡ್ಡ ಕೂಡುಕುಟುಂಬವನ್ನು ನಡೆಸುವುದು ಮತ್ತು…”

ಅವರು ಸಮಾಧಾನದಿಂದ ಆದರೆ ಬಹಳ ದೃಢವಾಗಿ “ಅವರು ಮನೆಗೆ ಬಂದ ನಂತರ ಪರಿಸ್ಥಿತಿ ಇನ್ನಷ್ಟು ಕಷ್ಟಕರವಾಗಿತ್ತು,” ಎಂದರು. “ಅಂದ್ರೆ ಅವರು ತನ್ನ ಸ್ನೇಹಿತರನ್ನೆಲ್ಲ ಕರೆದು ತರುತ್ತಿದ್ದರು. ಅವರಿಗೆ ಅಡುಗೆ ಬೇಯಿಸಿ ಹಾಕಬೇಕಿತ್ತು. ಅಥವಾ ಅವರು ಆಹಾರ ತೆಗೆದುಕೊಂಡು ಹೋಗುತ್ತಿದ್ದರು. ಕೆಲವೊಮ್ಮೆ 5, 10, 20 ಅಥವಾ ಅದಕ್ಕಿಂತಲೂ ಹೆಚ್ಚು ಜನರು ಇರುತ್ತಿದ್ದರು. ನನಗೆ ಒಂದು ಕ್ಷಣವೂ ವಿರಾಮ ಸಿಗುತ್ತಿರಲಿಲ್ಲ,”

“ಅಂದ ಹಾಗೆ, ಕ್ವಿಟ್‌ ಇಂಡಿಯಾ ಚಳವಳಿಯೊಂದಿಗಿನ ನಿಮ್ಮ ಸಹಯೋಗ…”

“ಅದರ ಜೊತೆ ನನಗೇನು ಸಂಬಂಧವಿದೆ, ಅಥವಾ ಅಂತಹ ಹೋರಾಟದ ಜೊತೆ?” ಎಂದು ಕೇಳುತ್ತಾರಾಕೆ. “ಹೋರಾಟದ ವಿಷಯದಲ್ಲಿ ನಾನು ಏನೂ ಮಾಡಿಲ್ಲ. ಎಲ್ಲವೂ ನನ್ನ ಗಂಡ ಬೈದ್ಯನಾಥ್‌ ಮಹತೊ ಮಾಡಿದ್ದು. ನಾನು ಕೇವಲ ನಮ್ಮ ದೊಡ್ಡ ಕುಟುಂಬ, ಆ ಜನರು, ನಾನು ಮಾಡಬೇಕಿರುವ ಅಡುಗೆ – ದಿನವೂ ಊಟಕ್ಕಿರುವ ಜನರ ಸಂಖ್ಯೆ ಹೆಚ್ಚುತ್ತಲೇ ಇತ್ತು!” ಎನ್ನುತ್ತಾರೆ ಭವಾನಿ. “ನೆನಪಿರಲಿ, ಇದೆಲ್ಲದರ ಜೊತೆಗೆ ಬೇಸಾಯವನ್ನು ಸಹ ನೋಡಿಕೊ‍ಳ್ಳುತ್ತಿದ್ದೆ.”

ನಾವು ದಂಗಾಗಿ ಹೋಗಿದ್ದೆವು. ನಮ್ಮ ಮುಖದಲ್ಲಿ ನಿರಾಶೆಯ ಗೆರೆಗಳು ಮೂಡುತ್ತಿದ್ದವು. ನಾವು ಬಂಗಾಳದ ಈ ಮೂಲೆಗೆ ನಮ್ಮ ನಡುವೆ ಜೀವಂತವಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಹುಡುಕಿಕೊಂಡು ಬಹಳ ದೂರದಿಂದ ಬಂದಿದ್ದೆವು. ಆದರೆ ಈ ಮಹಾನ್‌ ನಾಯಕಿ ಈ ಪಾತ್ರದಲ್ಲಿ ತನ್ನನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಚೆಪುವಾ ಗ್ರಾಮದ 1ನೇ ಬ್ಲಾಕ್‌ನ ಮನ್‌ ಬಜಾರ್‌ನ ನಿವಾಸಿಯಾದ ಈ ಮಹಿಳೆ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹೋರಾಟದಲ್ಲಿ ತನ್ನದೇನೂ ಪಾಲಿಲ್ಲವೆಂದು ನಿರಾಕರಿಸಿಬಿಟ್ಟಿದ್ದರು.

ಸುಮಾರು 101ರಿಂದ 104 ವರ್ಷಗಳ ನಡುವಿನ ವಯಸ್ಸಿನವರಿರಬಹುದಾದ ಭವಾನಿ ಮಹತೋ ಬಹಳ ಸ್ಪಷ್ಟತೆ ಮತ್ತು ನಿರ್ಣಾಯಕವಾಗಿ ಮಾತನಾಡುತ್ತಾರೆ. ಹಳ್ಳಿಗಳಲ್ಲಿನ ಬಡಜನರ ಹುಟ್ಟಿದ ದಿನವನ್ನು ದಾಖಲಿಸುವುದು ಬಹಳ ಕಷ್ಟದ ಕೆಲಸ. ಸುಮಾರು ನೂರು ವರ್ಷಗಳ ಹಿಂದೆ, ಅವರು ಹುಟ್ಟಿದ ಸಮಯದಲ್ಲಿ ಅದೆಲ್ಲ ಅಸ್ತಿತ್ವದಲ್ಲಿರಲಿಲ್ಲ. ಆದರೆ ನಾವು ಅವರ ದಿವಂಗತ ಪತಿಯ ದಾಖಲೆಯ ಮೂಲಕ ಅವರ ವಯಸ್ಸನ್ನು ಅಂದಾಜಿಸಿದೆವು. ಜೊತೆಗೆ ಅವರ ದೊಡ್ಡ ಕುಟುಂಬದ ಸದಸ್ಯರ ವಯಸ್ಸುಗಳನ್ನೂ ಪರಿಗಣಿಸಿದೆವು. ಅವರಲ್ಲಿ 70 ವರ್ಷದ ಭವಾನಿಯವರ ಮಗನೂ ಒಬ್ಬರು. ಜೊತೆಗೆ ನಾವು ಭೇಟಿ ನೀಡಿದ ಪುರುಲಿಯಾದ ಕೆಲವು ಹಳ್ಳಿಗಳ ಅವರ ಕೆಲವು ಸಮಕಾಲೀನ ಕಿರಿಯರ ವಯಸ್ಸನ್ನೂ ನಮ್ಮ ಊಹೆಗೆ ಪರಿಗಣಿಸಿದೆವು.

ಅದೇನೇ ಇರಲಿ, ಇದು ಇಲ್ಲಿನ ನಿಷ್ಕ್ರಿಯ ಆಧಾರ್‌ ವ್ಯವಸ್ಥೆಯು ಅವರ ಪೀಳಿಗೆಯ ಜನರಿಗೆ ನೀಡಲಾಗಿರುವ ವಯಸ್ಸಿಗಿಂತಲೂ ನಾವು ಅಂದಾಜಿಸಿದ ವಯಸ್ಸು ಹೆಚ್ಚು ವಿಶ್ವಾಸಾರ್ಹವಾಗಿದೆ. ಅದರಲ್ಲಿ ಭವಾನಿಯವರಿಗೆ 1925ನೇ ಇಸವಿಯನ್ನು ಹುಟ್ಟಿದ ವರ್ಷವನ್ನಾಗಿ ದಾಖಲಿಸಲಾಗಿದೆ. ಅದರ ಪ್ರಕಾರ ಅವರ ವಯಸ್ಸು 97.

ಅವರ ಕುಟುಂಬ ಆಕೆಗೆ 104 ವರ್ಷವೆನ್ನುತ್ತಾರೆ.

Bhabani’s age is somewhere between 101 and 104. Here she is with her son Shyam Sundar Mahato who is in his 70s
PHOTO • P. Sainath

ವಾ ನಿಯ ವರ ವಯಸ್ಸು 101 ಮತ್ತು 104 ರ ನಡು ವಿನಲ್ಲಿದೆ . ಈ ಚಿತ್ರದಲ್ಲಿ ಅವ ರನ್ನು ಅವರ 70ರ ಹರೆಯದ ಮಗ ಶ್ಯಾಮ್ ಸುಂದರ್ ಮಹ ತೊ ಅವರೊಂದಿಗೆ ಕಾಣಬಹುದು

"ನಮ್ಮದು ದೊಡ್ಡ ಅವಿಭಕ್ತ ಕುಟುಂಬವಾಗಿತ್ತು, ಎಲ್ಲಾ ಜವಾಬ್ದಾರಿಗಳೂ ನನ್ನದೇ ಆಗಿದ್ದವು. ಎಲ್ಲಾ ಕೆಲಸಗಳನ್ನು ಮಾಡಿದ್ದೇನೆ. ನಾನು ಎಲ್ಲವನ್ನೂ ನೋಡಿಕೊಳ್ಳುತ್ತಿದ್ದೆ. ಎಲ್ಲವೂ . ನಾನೇ ಕುಟುಂಬವನ್ನು ನಡೆಸುತ್ತಿದ್ದೆ. 1942-43ರಲ್ಲಿ ನಡೆದ ಎಲ್ಲಾ ಘಟನೆಗಳು ಸಂಭವಿಸಿದಾಗ ನಾನು ಎಲ್ಲರನ್ನೂ ನೋಡಿಕೊಳ್ಳುತ್ತಿದ್ದೆ." ಭವಾನಿ 'ಘಟನೆಗಳನ್ನು' ಹೆಸರಿಸುವುದಿಲ್ಲ. ಆದರೆ ಅವುಗಳಲ್ಲಿ ಕ್ವಿಟ್ ಇಂಡಿಯಾ ಚಳವಳಿಯೂ ಸೇರಿತ್ತು. ಮತ್ತು ಸೆಪ್ಟೆಂಬರ್ 30, 1942ರಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಬಂಗಾಳದ ಅತ್ಯಂತ ಅಭಿವೃದ್ಧಿ ವಂಚಿತ ಪ್ರದೇಶಗಳಲ್ಲಿನ 12 ಪೊಲೀಸ್ ಠಾಣೆಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಪ್ರಯತ್ನಿಸಿದರು.

ಇಂದಿಗೂ ಸಹ, ಎಲ್ಲಾ ಕುಟುಂಬಗಳಲ್ಲಿ ಮೂರನೇ ಒಂದು ಭಾಗದಷ್ಟು ಸಂಪೂರ್ಣವಾಗಿ ಬಡತನ ರೇಖೆಗಿಂತ ಕೆಳಗಿರುವ ಜಿಲ್ಲೆಯಾಗಿದೆ. ಮತ್ತು ಪಶ್ಚಿಮ ಬಂಗಾಳದಲ್ಲಿಯೇ ಅತಿ ಹೆಚ್ಚಿನ ಮಟ್ಟದ ಬಡತನವನ್ನು ಇದು ವರದಿ ಮಾಡಿದೆ. ಭವಾನಿಯವರ ದೊಡ್ಡ ಕುಟುಂಬವು ಕೆಲವು ಎಕರೆ ಭೂಮಿಯನ್ನು ಹೊಂದಿತ್ತು - ಮತ್ತು ಅದು ಈಗಲೂ ಇದೆ. ಇದರಿಂದಾಗಿ ಅವರು ಅಲ್ಲಿನ ಇತರ ಕುಟುಂಬಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಉತ್ತಮ ಸ್ಥಿತಿಯಲ್ಲಿದ್ದಾರೆ.

ಅವರ ಪತಿ ಬೈದ್ಯನಾಥ್ ಮಹತೋ ಸ್ಥಳೀಯ ನಾಯಕರಾಗಿದ್ದರು. ಅವರು ಬ್ರಿಟಿಷ್ ರಾಜ್ ವಿರೋಧಿ ಕೃತ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಪುರುಲಿಯಾದಲ್ಲಿ ಇನ್ನೂ ಜೀವಂತವಾಗಿರುವ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಠೇಲೂ ಮಹತೋ ಮತ್ತು 'ಲೋಕಿ' ಮಹತೋ, ಪಿರ್ರಾ ಗ್ರಾಮದಲ್ಲಿ ನಮಗೆ ಹೇಳಿದಂತೆ, ಆಗೆಲ್ಲ ಯಾವುದೇ ರೀತಿಯ ಸುದ್ದಿ ದೂರದ ಪ್ರದೇಶಗಳನ್ನು ತಲುಪಲು ಬಹಳ ಸಮಯ ಹಿಡಿಯುತ್ತಿತ್ತು. "ಅಂದು, ಕ್ವಿಟ್ ಇಂಡಿಯಾ ಚಳವಳಿಗೆ ಕರೆ ನೀಡಿದ ಒಂದು ತಿಂಗಳ ನಂತರ ಅದರ ಮಾಹಿತಿ ನಮಗೆ ತಿಳಿಯಿತು" ಎಂದು ಠೇಲೂ ಮಹತೊ ಹೇಳುತ್ತಾರೆ.

ಕೊನೆಗೆ ಅದಕ್ಕೆ ಪ್ರತಿಕ್ರಿಯೆಯಾಗಿ ಯೋಜಿಸಲಾದ ನಮ್ಮ ಹೋರಾಟವು ಸೆಪ್ಟೆಂಬರ್ 30, 1942ರಂದು ನಡೆಯಿತು. ಎಂದರೆ ಆಗಸ್ಟ್ 8, 1942ರಂದು ಮುಂಬೈನ ಗೋವಾಲಿಯಾ ಟ್ಯಾಂಕ್ ಮೈದಾನದಲ್ಲಿ ಬ್ರಿಟಿಷರು 'ಭಾರತ ಬಿಟ್ಟು ತೊಲಗಿ' ಎಂದು ಮಹಾತ್ಮಾ ಗಾಂಧಿಯವರು ಕರೆ ನೀಡಿದ 53 ದಿನಗಳ ನಂತರ. ಅಂದು ನಡೆದ ದಾಳಿಯಲ್ಲಿ ಬೈದ್ಯನಾಥರನ್ನು ಬಂಧಿಸಲಾಯಿತು ಮತ್ತು ನಂತರ ಅವರು ಸರಕಾರದ ದಬ್ಬಾಳಿಕೆಯಲ್ಲಿ ನಲುಗಿದರು. ಸ್ವಾತಂತ್ರ್ಯಾನಂತರ ಅವರು ಶಾಲಾ ಶಿಕ್ಷಕರಾಗಬೇಕಾಗಿತ್ತು. ಆಗ ಶಿಕ್ಷಕರು ರಾಜಕೀಯ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂದಿಗೆ ಸ್ವತಂತ್ರ ಭಾರತವನ್ನು ಮುನ್ನಡೆಸುವ ಕಾರ್ಯವಾಗಿತ್ತದು.

*****

Bhabani ran the family’s farm for decades right from preparing the soil for sowing, to supervising the labour and the harvesting. She even transported the produce back home herself
PHOTO • P. Sainath

ಮಣ್ಣನ್ನು ಸಿದ್ಧಪಡಿಸುವುದರಿಂದ ಹಿಡಿದು ಬಿತ್ತನೆಯವರೆಗೆ, ದುಡಿಮೆ ಮತ್ತು ಕೊಯ್ಲಿನ ಮೇಲ್ವಿಚಾರಣೆಯವರೆಗೆ ಅವರು ದಶಕಗಳ ಕಾಲ ಕುಟುಂಬದ ಜಮೀನನ್ನು ನೋಡಿಕೊಳ್ಳು ತ್ತಿದ್ದರು. ಜೊತೆಗೆ ಧಾನ್ಯಗಳನ್ನು ಹೊಲದಿಂದ ಸಾಗಿಸುತ್ತಿದ್ದರು

ಪೊಲೀಸ್ ಠಾಣೆಗಳನ್ನು ಆಕ್ರಮಿಸಿ ಅವುಗಳ ಮೇಲೆ ಧ್ವಜವನ್ನು ಹಾರಿಸುವ ಪ್ರಯತ್ನದಲ್ಲಿ ವಿವಿಧ ಪಡೆಗಳು ಭಾಗಿಯಾಗಿದ್ದವು. ಶೋಷಕ ಬ್ರಿಟಿಷ್ ಆಡಳಿತದಿಂದ ಬೇಸತ್ತಿದ್ದ ಸಾರ್ವಜನಿಕರೂ ಇದ್ದರು. ಬೇರೆ ಬೇರೆ ಹಿನ್ನೆಲೆಯ ಇತರರೊಡನೆ, ಎಡಪಂಥೀಯ ಕ್ರಾಂತಿಕಾರಿಗಳು ಮತ್ತು ಗಾಂಧಿವಾದಿಗಳು ಇದ್ದರು. ನಾವು ಭೇಟಿಗೆ ಹೋಗಿದ್ದ ಠೇಲೂ ಮತ್ತು 'ಲೋಕಿ' ಮಹತೋ ಅವರಂತಹ ಜನರು ಸಹ ಸೇರಿದ್ದರು, ಅಂದಿನ ಇತರ ಅನೇಕರಂತೆ, ಇವರೂ ಮನಸ್ಸಿನಿಂದ ಎಡಪಂಥೀಯರು ಮತ್ತು ವ್ಯಕ್ತಿತ್ವದಿಂದ ಗಾಂಧಿವಾದಿಗಳಾಗಿದ್ದರು.

ಅವರ ರಾಜಕೀಯ, ಅವರ ಸೈದ್ಧಾಂತಿಕ ಒಲವು ಎಡಪಕ್ಷಗಳೊಂದಿಗಿದ್ದರೆ, ಅವರ ನೈತಿಕ ಸಂಹಿತೆಗಳು ಮತ್ತು ಜೀವನಶೈಲಿಯನ್ನು ಗಾಂಧಿ ನಿರ್ದೇಶಿಸಿದರು. ಅವರು ಆಗಾಗ್ಗೆ ಈ ಎರಡು ಮಾರ್ಗಗಳ ನಡುವೆ ಹರಿದುಹೋಗುತ್ತಿದ್ದರು. ಅವರು ಅಹಿಂಸೆಯಲ್ಲಿ ನಂಬಿಕೆಯಿಟ್ಟರು, ಆದರೆ ಕೆಲವೊಮ್ಮೆ ಹಿಂಸಾಚಾರದಲ್ಲಿ ಬ್ರಿಟಿಷರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಿದ್ದರು. ಅವರು ಹೇಳುವುದು: "ನೋಡಿ, ಅವರು ನಮ್ಮ ಮೇಲೆ ಗುಂಡು ಹಾರಿಸುತ್ತಿದ್ದರು. ತಮ್ಮ ಸ್ನೇಹಿತರು, ಕುಟುಂಬ ಅಥವಾ ಸಂಗಡಿಗರನ್ನು ಪೊಲೀಸರು ತಮ್ಮ ಕಣ್ಣಮುಂದೆಯೇ ಗುಂಡಿಕ್ಕಿ ಕೊಂದಾಗ ಜನರು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದರು." ಠೇಲೂ ಮತ್ತು 'ಲೋಕಿ' ಇಬ್ಬರೂ ಕುರ್ಮಿ ಸಮುದಾಯದವರು.

ಭವಾನಿ ಅವರ ಕುಟುಂಬವು ಪಶ್ಚಿಮ ಬಂಗಾಳದ ಜಂಗಲ್ಮಹಲ್ ಪ್ರದೇಶದ ಅತಿದೊಡ್ಡ ಸಮುದಾಯವಾದ ಕುರ್ಮಿ ಸಮುದಾಯಕ್ಕೆ ಸೇರಿದೆ.

ಬ್ರಿಟಿಷ್ ರಾಜ್ 1913ರಲ್ಲಿ ಅವರನ್ನು ಪರಿಶಿಷ್ಟ ಪಂಗಡವೆಂದು ಪಟ್ಟಿ ಮಾಡಿತು. ಆದಾಗ್ಯೂ 1913ರ ಜನಗಣತಿಯಲ್ಲಿ ಅದು ಅವರನ್ನು ಆ ಗುಂಪಿನಿಂದ ಕೈಬಿಟ್ಟಿತು. 1950ರ ಭಾರತದಲ್ಲಿ ಅವರನ್ನು ಒಬಿಸಿ ಎಂದು ಪಟ್ಟಿ ಮಾಡಲಾಗಿತ್ತು. ಅವರ ಬುಡಕಟ್ಟು ಸ್ಥಾನಮಾನವನ್ನು ಮರಳಿ ನೀಡಬೇಕೆನ್ನುವುದು ಈ ರಾಜ್ಯದ ಕುರ್ಮಿ ಸಮುದಾಯದವರ ಪ್ರಮುಖ ಬೇಡಿಕೆಯಾಗಿ ಉಳಿದಿದೆ.

ಈ ಕುರ್ಮಿ ಸಮುದಾಯದ ಜನರು ಇಲ್ಲಿನ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಅವರಲ್ಲಿ ಅನೇಕರು 1942ರ ಸೆಪ್ಟೆಂಬರ್ ಕೊನೆಯ ಎರಡು ದಿನಗಳಲ್ಲಿ 12 ಪೊಲೀಸ್ ಠಾಣೆಗಳಲ್ಲಿ ನಡೆದ ಪಥಸಂಚಲನದಲ್ಲಿ ಭಾಗವಹಿಸಿದ್ದರು.

Baidyanath Mahato was jailed 13 months for his role in the Quit India stir
PHOTO • Courtesy: the Mahato family

ಭವಾನಿಯವರ ಪತಿ ಬೈದ್ಯನಾಥ ಮಹತೊ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಕಾರಣಕ್ಕಾಗಿ13 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದರು

"ಬೈದ್ಯನಾಥ ಅವರು ಮುಂದಿನ 13 ತಿಂಗಳುಗಳನ್ನು ಸೆರೆಮನೆಯಲ್ಲಿ ಕಳೆದರು" ಎಂದು 70ರ ಪ್ರಾಯದ ಅವರ ಮಗ ಶ್ಯಾಮ್ ಸುಂದರ್ ಮಹತೊ ಹೇಳುತ್ತಾರೆ. "ಅವರನ್ನು ಭಾಗಲ್ ಪುರ್ ಕ್ಯಾಂಪ್ ಜೈಲಿನಲ್ಲಿ ಇರಿಸಲಾಗಿತ್ತು." ಪತಿ ಜೈಲಿಗೆ ಹೋಗಿದ್ದಾಗ ನಿಮ್ಮ ಬದುಕು ಕಷ್ಟವಾಗಿತ್ತೇ ಎಂದು ನಾವು ಕೇಳಿದಾಗ, ಅವರು ಗಂಡ ಮನೆಗೆ ಮರಳಿದ ನಂತರವೇ ಕಷ್ಟವಾಗಿತ್ತು ಎಂದು ಚಕಿತಗೊಳಿಸುವ ಉತ್ತರ ನೀಡಿದ್ದರು.

"ಇದರರ್ಥ ಹೆಚ್ಚು ಜನರು ಮನೆಗೆ ಬರುತ್ತಿದ್ದರು. ಹೆಚ್ಚು ಹೆಚ್ಚು ಜನರಿಗೆ ಆಹಾರ ನೀಡಬೇಕು. ಹೆಚ್ಚಿನ ಜನರನ್ನು ನೋಡಿಕೊಳ್ಳಬೇಕು. ಅವರು ಹಿಂದಿರುಗಿ ಬಂದಾಗ ನಾನು ತುಂಬಾ ಅಳುತ್ತಿದ್ದೆ ಮತ್ತು ನಿಮ್ಮ ಸಾಹಸಗಳಿಗೆ ನಾನು ಬೆಲೆ ತೆರುತ್ತಿದ್ದೇನೆ ಎಂದು ಜೋರಾಗಿ ಅಳುತ್ತಿದ್ದೆ. ಅವರು ಜೈಲಿನಿಂದ ಬಂದ ನಂತರ ನನ್ನ ಕೆಲಸಗಳು ಹೆಚ್ಚಾದವು.”

ನಾವು ನಮ್ಮ ಗಮನವನ್ನು ಭವಾನಿಯವರ ಮೇಲೆ ಕೇಂದ್ರೀಕರಿಸಿದೆವು. ಗಾಂಧಿ ಅವರ ಚಿಂತನೆಯ ಮೇಲೆ ಪ್ರಭಾವ ಬೀರಿದ್ದರೇ? ಸತ್ಯಾಗ್ರಹ ಮತ್ತು ಅಹಿಂಸೆಯ ಬಗ್ಗೆ ಅವ ರಿ ಗೆ ಹೇಗನಿಸಿತು ?

ಭವಾನಿ ನೋಡಲು ಶಾಂತವಾಗಿ ಕುಳಿತಿದ್ದರೂ ಸಾಕಷ್ಟು ಅಭಿವ್ಯಕ್ತಿಶೀಲರೂ ಮತ್ತು ಸ್ಪಷ್ಟತೆಯುಳ್ಳವರೂ ಆಗಿದ್ದರು. ಅವರು ನಮ್ಮೆಡೆಗೆ ಒಂದು ಸೌಮ್ಯ ನೋಟವನ್ನು ಬೀರಿ ದಡ್ಡ ಮಕ್ಕಳಿಗೆ ತನ್ನ ಕತೆಯನ್ನು ಹೇಳುವಂತೆ ನಮ್ಮತ್ತ ನೋಡುತ್ತಿದ್ದರು.

“ಗಾಂಧಿಯೇ…ಏನು ಹೇಳ್ತಿದ್ದೀರಿ ನೀವು?” ಎಂದು ಅವರು ಕೇಳುತ್ತಾರೆ. “ಏನನ್ಸತ್ತೆ ನಿಮ್ಗೆ? ಆಗ ನಾನು ಸುಮ್ನೆ ಕೂತಿರ್ತಿದ್ದೆ ಮತ್ತೆ ಇದೆಲ್ಲ ಯೋಚಿಸ್ತಾ ಇರ್ತಿದ್ದೆ ಎಂದೇ? ದಿನವೂ ಅಡುಗೆ ಮಾಡಿ ಬಡಿಸಬೇಕಿದ್ದ ಜನರ ಸಂಖ್ಯೆ ಏರುತ್ತಲೇ ಇತ್ತು. ಅವರೆಲ್ಲರಿಗೂ ಹೊತ್ತು ಹೊತ್ತಿಗೆ ಬೇಯಿಸಿ ಹಾಕಬೇಕಿತ್ತು,” ಎಂದು ನಮ್ಮತ್ತ ಕೈಬೀಸುತ್ತಾ ಹೇಳಿದರು.

"ದಯವಿಟ್ಟು ಅರ್ಥಮಾಡಿಕೊಳ್ಳಿ, ನಗೆ ಮದುವೆಯಾದಾಗ ಒಂಬತ್ತು ವರ್ಷ ವಯಸ್ಸಾಗಿತ್ತು . ಆಗ ನಾನು ಅಂತಹ ಮಹಾನ್ ವಿಷಯಗಳ ಬಗ್ಗೆ ಎಲ್ಲಿ ಯೋಚಿಸುತ್ತಿದ್ದೆ? ಅದರ ನಂತರ ನಾನು ದಶಕಗಳ ಕಾಲ ದೊಡ್ಡ ಅವಿಭಕ್ತ ಕುಟುಂಬವನ್ನು ಏಕಾಂಗಿಯಾಗಿ ನೋಡಿಕೊಳ್ಳುತ್ತಿದ್ದೆ. ಅದರ ಜೊತೆಗೆ ಬೇಸಾಯವನ್ನು ಕೂಡಾ ನೋಡಿಕೊಳ್ಳಬೇಕಿತ್ತೆನ್ನುವುದು ನೆಎನಪಿರಲಿ. ಮಣ್ಣನ್ನು ಸಿದ್ಧಪಡಿಸುವುದರಿಂದ ಹಿಡಿದು, ಬಿತ್ತನೆ ಮಾಡುವವರೆಗೆ, ಮುನಿಷ್ (ದುಡಿಮೆ), ಕಳೆ ಕೀಳುವುದು, ಕೊಯ್ಲು..."  ನಂತರ ಅವರು ಕೃಷಿ ಕಾರ್ಮಿಕರಿಗೆ ಊಟವನ್ನು ತಯಾರಿಸಿ ಬಡಿಸಬೇಕಿತ್ತು.

ಇದೆಲ್ಲದರ ಜೊತೆಗೆ ಅವರು ಕಾಡಿನಂಚಿನಲ್ಲಿದ್ದ ಹೊಲದಿಂದ ಬೆಳೆಗಳನ್ನು ಮನೆಗೆ ಸಾಗಿಸಬೇಕಿತ್ತು.

ಮತ್ತು ಅವರು ಇದೆಲ್ಲವನ್ನೂ ಅವರು ಯಾಂತ್ರಿಕ ವಸ್ತುಗಳು ಲಭ್ಯವಿಲ್ಲದ ಕಾಲದಲ್ಲಿ ಮಾಡುತ್ತಿದ್ದರು ಎನ್ನುವುದು ಗಮನಾರ್ಹ. ವಿದ್ಯುತ್‌ ಉಪಕರಣಗಳಂತೂ ಆ ಕಾಲದಲ್ಲಿ ಯಾರಿಗೂ ಕೇಳಿಯೇ ಗೊತ್ತಿರಲಿಲ್ಲ. ಹಾಗೂ ಅವರು ಹೊಲದಲ್ಲಿ ಬಳಸುತ್ತಿದ್ದ ಉಪಕರಗಳೆಲ್ಲವೂ ಹಳೆಯವು ಮತ್ತು ಅವೆಲ್ಲ ದೊಡ್ಡ ಮತ್ತು ಪುರುಷರ ಕೈಗಳಿಗೆ ಅನುಕೂಲಕರವಾಗಿದ್ದವು. ಈ ದೊಡ್ಡ ಬರಪೀಡಿತ ಪ್ರದೇಶವು ಹಸಿವಿನಿಂದಲೂ ಬಳಲುತ್ತಿತ್ತು.

ಬೈದ್ಯನಾಥರನ್ನು ಮದುವೆಯಾದ ಸುಮಾರು ಮೂರು ದಶಕಗಳ ನಂತರ, ಅವರು ಮತ್ತೆ ಮದುವೆಯಾದರು. ಈ ಬಾರಿ ಅವರು ಭವಾನಿಯ ಸ್ವಂತ ಸಹೋದರಿ ಊರ್ಮಿಳಾ ಅವರನ್ನು ವಿವಾಹವಾದರು, ಅವರು ಭವಾನಿಯವರಿಗಿಂತ ಸುಮಾರು 20 ವರ್ಷಗಳಷ್ಟು ಕಿರಿಯರು. ಅವರ ಸಂಬಂಧಿಕರು ಹೇಳುವಂತೆ ಕೌಟುಂಬಿಕ ಬಿಕ್ಕಟ್ಟಿನ ಘಟನೆಯೊಂದು ಇದಕ್ಕೆ ಕಾರಣವಾಯಿತು. ಇಬ್ಬರಿಗೂ ಮೂವರು ಮಕ್ಕಳಿದ್ದರು.

PHOTO • P. Sainath
PHOTO • P. Sainath

ಭವಾನಿ ಮಹತೊ, ಪುರುಲಿಯಾ ಜಿಲ್ಲೆಯ ಚೆಪುವಾ ಗ್ರಾಮದಲ್ಲಿನ ತಮ್ಮ ಮನೆಯಲ್ಲಿ

ದಿನ ಕಳೆದಂತೆ ಭವಾನಿ ಮಹತೊ ಬೆಳೆದರುಉ, ಬೇಸಾಯ ಮಾಡಿದರು, ಅದನ್ನು ಸಾಗಿಸಿದರು ನಂತರ ಅದನ್ನು ಕುಟುಂಬಕ್ಕಾಗಿ ಬೇಯಿಸಿದರು, ಜೊತೆಗೆ ಇತರಿಗಾಗಿಯೂ. ಇದೆಲ್ಲವನ್ನೂ ಅವರು 1920, 1930 ಮತ್ತು 1940ರ ದಶಕಗಳಲ್ಲೂ ಮಾಡುತ್ತಿದ್ದರು,

ಅವರು ಎಷ್ಟು ಎಕರೆ ಭೂಮಿಯಲ್ಲಿ ದುಡಿಯುತ್ತಿದ್ದರು ಎಂಬ ವಿವರಗಳು ಸ್ವಲ್ಪ ಅಸ್ಪಷ್ಟವಾಗಿವೆ. ಈ ಕುಟುಂಬವು ತಮ್ಮದೆಂದು ಭಾವಿಸಿದ ಭೂಮಿಯನ್ನು ಸಾಗುವಳಿ ಮಾಡುತ್ತಿತ್ತು, ಆದರೆ ಅದಕ್ಕೆ ಯಾವುದೇ ಹಕ್ಕುಪತ್ರಗಳನ್ನು ಹೊಂದಿರಲಿಲ್ಲ. ಜಮೀನ್ದಾರನ ಇಷ್ಟದ ಮೇರೆಗೆ ಅವರು ಅದರಲ್ಲಿ ಕೆಲಸ ಮಾಡಿದರು. 20ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಅವರ ಬೃಹತ್ ಕುಟುಂಬವು ಜಾನ್ರಾದಲ್ಲಿ ಭವಾನಿ ಅವರ ಸ್ವಂತ ಕುಟುಂಬ ಮತ್ತು ಚೆಪುವಾದಲ್ಲಿನ ಅವರ ವೈವಾಹಿಕ ಜೀವನ ಸಾಗಿಸಿದ ಮನೆಯ ಎರಡೂ ಹಳ್ಳಿಗಳಲ್ಲಿ ಒಟ್ಟು ಸುಮಾರು 30 ಎಕರೆ ಜಮೀನು ಇತ್ತು.

ಅವರ ಮೇಲಿನ ಕೆಲಸದ ಹೊರೆ ದಿನದಿಂದ ದಿನಕ್ಕೆ ಏರುತ್ತಲೇ ಇತ್ತು. ಮತ್ತು ಅಂತಹ ಹೊರೆಗಳು ಹಲವಾರಿದ್ದವು.

ಹಾಗಿದ್ದರೆ ಅವರು ಬೆಳಗ್ಗೆ 4 ಗಂಟೆಗೆ ಏಳುತ್ತಿದ್ದರೇ? “ಅದಕ್ಕೂ ಮೊದಲು,” ಎಂದು ಅವರು ವ್ಯಂಗ್ಯವಾಗಿ ನಗುತ್ತಾರೆ. “ಅದಕ್ಕಿಂತಲೂ ಎಷ್ಟೋ ಮೊದಲು.” ಅವರು ಹೇಳುವುದನ್ನು ಕೇಳಿದರೆ ಅವರು ಬೆಳಗಿನ ಜಾವ 2 ಗಂಟೆಗೆ ಏಳುವಂತೆ ಕಾಣುತ್ತಿತ್ತು. “ಅಲ್ಲದೆ ಒಮ್ಮೆಯೂ 10 ಗಂಟೆಗೂ ಮೊದಲು ಮಲಗಿದ್ದಿಲ್ಲ. ಕೆಲವೊಮ್ಮೆ ಇನ್ನೂ ತಡವಾಗುತ್ತಿತ್ತು.”

ಅವರ ಮೊದಲ ಮಗು ತೀವ್ರ ಅತಿಸಾರ ಭೇದಿಯ ನಂತರ ಸತ್ತುಹೋಯಿತು. "ನಾವು ಕವಿರಾಜ್ ಎಂಬ ಫಕೀರನ ಬಳಿಗೆ ಹೋದೆವು. ಆದರೆ ಅದು ಸಹಾಯ ಮಾಡಲಿಲ್ಲ. ಅವಳು ಸತ್ತಾಗ ಅವಳಿಗೆ ಕೇವಲ ಒಂದು ವರ್ಷ ವಯಸ್ಸಾಗಿತ್ತು."

ನಾನು ಗಾಂಧಿ ಮತ್ತು ಚಳುವಳಿಯ ಬಗ್ಗೆ ಮತ್ತೆ ಅವಳನ್ನು ಕೇಳಲು ಪ್ರಯತ್ನಿಸಿದೆ. "ನಾನು ತಾಯಿಯಾದ ನಂತರ, ಚರಕವನ್ನು ಮತ್ತು ನಾನು ಮಾಡುತ್ತಿದ್ದ ಎಲ್ಲಾ ರೀತಿಯ ಕೆಲಸಗಳನ್ನು ಮಾಡಲು ಸಮಯ ಸಿಗಲಿಲ್ಲ" ಎಂದು ಅವರು ಹೇಳುತ್ತಾರೆ. ಅವರು ನಮಗೆ ಮತ್ತೊಮ್ಮೆ ನೆನಪಿಸುತ್ತಾರೆ - "ಮದುವೆಯಾದಾಗ ನನಗೆ 9 ವರ್ಷ ವಯಸ್ಸಾಗಿತ್ತು."

ಅದರ ನಂತರ ಆಕೆ ಬದುಕಿದ ಕಾಲದ ಕುರಿತು, ಆಕೆ ಎದುರಿಸಿದ ಕಷ್ಟಗಳು, ಆ ಕಾಲದಲ್ಲಿ ಎದುರಿಸಿದ ಅದ್ಭುತ ಮೂರು ಅನುಭವಗಳ ಕುರಿತು ನಮ್ಮೆದುರು ಮಾತನಾಡಬಹುದೆನ್ನಿಸಿತು.

“ನನಗೆ ಪುರುಸೊತ್ತೇ ಸಿಗುತ್ತಿರಲಿಲ್ಲ. ಆಗ ನನ್ನ ಬದುಕು ಹೇಗಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ಏನನ್ನಿಸುತ್ತದೆ? ನಾನು ಒಂದೆಡೆ ಕುಳಿತು ಇದನ್ನೆಲ್ಲ ಯೋಚಿಸುತ್ತಿದ್ದೆ ಎಂದೇ? ನಾನು ಆಗ ಇಷ್ಟು ದೊಡ್ಡ ಮನೆಯನ್ನು ಹೇಗೆ ನಡೆಸುವುದು, ಇದೆಲ್ಲವನ್ನು ಸಂಭಾಳಿಸುವುದು ಎಂದು ಚಿಂತಿಸುತ್ತಿರುತ್ತಿದ್ದೆ. ಬೈದ್ಯನಾಥ್‌ ಮತ್ತು ಅವರ ಜೊತೆಗಾರರು ಹೋರಾಟ ನಡೆಸುತ್ತಿದ್ದರು. ನಾನು ಎಲ್ಲರಿಗೂ ಆಹಾರ ಬಡಿಸುತ್ತಿದ್ದೆ.”

ಕುಸಿಯುವಂತೆ ಮಾಡುವ ಹೊರೆ ಮತ್ತು ಉಸಿರುಗಟ್ಟಿಸುವ ಒತ್ತಡವು ಅವರನ್ನು ಕಾಡತೊಡಗಿದಾಗ ಅವರು ಏನು ಮಾಡಿದರು? "ನಾನು ನನ್ನ ತಾಯಿಯೊಂದಿಗೆ ಕುಳಿತು ಅಲ್ಲಿ ಅಳುತ್ತಿದ್ದೆ. ಬೈದ್ಯನಾಥ ತನ್ನೊಂದಿಗೆ ಕರೆತಂದಿದ್ದ ಹೆಚ್ಚು ಹೆಚ್ಚು ಜನರಿಗೆ ನಾನು ಅಡುಗೆ ಮಾಡಿ ಬಡಿಸಬೇಕಿತ್ತು- ನನಗೆ ಕಿರಿಕಿರಿಯಾಗಲಿಲ್ಲ. ನನಗೆ ಅಳು ಬರುತ್ತಿತ್ತು."

ಅವರು ಆ ಮಾತುಗಳನ್ನು ಪುನರಾವರ್ತಿಸುತ್ತಾರೆ, ನಾವು ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕೆನ್ನುವುದು ಅವರ ಬಯಕೆಯಾಗಿತ್ತು - "ನನಗೆ ಕಿರಿಕಿರಿಯಾಗಲಿಲ್ಲ, ನನಗೆ ಅಳಬೇಕೆನ್ನಿಸುತ್ತಿತ್ತು."

*****

1940ರ ದಶಕದಲ್ಲಿ, ವಿಶಾಲ ಬಂಗಾಳವನ್ನು ಕಾಡುತ್ತಿದ್ದ ಕ್ಷಾಮದ ವರ್ಷಗಳಲ್ಲಿ ಭವಾನಿಯವರ ಮೇಲಿದ್ದ ಹೊರೆಯು ಅತ್ಯಂತ ಭಾರದ್ದಾಗಿತ್ತು.  ಆ ಅವಧಿಯಲ್ಲಿ ಅವರು ಅನುಭವಿಸಿದ ಕಷ್ಟಗಳು ಕಲ್ಪನೆಗೂ ಮೀರಿದ್ದು

ವಿಡಿಯೋ ನೋಡಿ: ಭವಾನಿ ಮಹತೊ - ಪುರುಲಿಯಾದ ನಿರ್ಲಿಪ್ತ ಸ್ವಾತಂತ್ರ್ಯ ಹೋರಾಟಗಾರ್ತಿ

ನಾವು ಇನ್ನೇನು ಹೊರಡಲೆಂದು ಕುರ್ಚಿಯಿಂದ ಏಳುತ್ತಿರುವಾಗ, ಅವರ ಮೊಮ್ಮಗನಾದ ಪಾರ್ಥಸಾರಥಿ ಮಹತೊ ಕುಳಿತುಕೊಳ್ಳುವಂತೆ ಹೇಳಿದರು. ಇವರೂ ತನ್ನ ತಾತನಂತೆಯೇ ಶಿಕ್ಷಕರು. ʼಪಾರ್ಥ ದಾʼ ಅವರಿಗೆ ನಮ್ಮೊಡನೆ ಕೆಲವು ಮಾತುಗಳನ್ನು ಹಂಚಿಕೊಳ್ಳುವುದಿತ್ತು.

ಇದರೊಂದಿಗೆ ಕೊನೆಗೂ ಮಾತುಕತೆಗೆ ಒಂದು ತಿರುವು ಸಿಕ್ಕಿದಂತಾಯಿತು.

ಅವರು ತನ್ನ ಕುಟುಂಬಕ್ಕಲ್ಲದೆ ಇತರರಿಗೆ ಅಡುಗೆ ಮಾಡುತ್ತಿದ್ದರಲ್ಲ ಅವರೆಲ್ಲ ಯಾರು? ಬೈದ್ಯನಾಥ ತನ್ನೊಡನೆ ಕರೆದುಕೊಂಡು ಬರುತ್ತಿದ್ದ ಈ ಐದು-ಹತ್ತು-ಇಪ್ಪತ್ತು ಜನರು ಯಾರಾಗಿದ್ದರು?

“ಅವರು ಅಡುಗೆ ಮಾಡುತ್ತಿದ್ದದ್ದು ಕ್ರಾಂತಿಕಾರಿಗಳಿಗೆ,” ಎಂದು ಪಾರ್ಥ ದಾ ಹೇಳಿದರು. “ಅವರು ಭೂಗತ ಹೋರಾಟ ನಡೆಸುತ್ತಿದ್ದರು. ಅವರುಗಳು ಕೆಲವೊಮ್ಮೆ ಓಡಿಹೋಗಿರುತ್ತಿದ್ದರು ಅಥವಾ ಕಾಡಿನಲ್ಲಿ ಅಡಗಿರುತ್ತಿದ್ದರು.”

ನಾವು ಕೆಲವು ಕ್ಷಣ ಮೌನವಾಗಿ ಕುಳಿತೆವು. 9ನೇ ವಯಸ್ಸಿನಿಂದ ತನ್ನ ಇಡೀ ಜೀವನದಲ್ಲಿ ತನಗಾಗಿ, ಒಂದು ಕ್ಷಣವೂ ಹೊಂದಿರದ ಈ ಹೆಂಗಸಿನ ತ್ಯಾಗಮಯ ಜೀವನದ ಕುರಿತು ಕೇಳಿ ನಾವು ಮೂಕವಿಸ್ಮಿತರಾಗಿದ್ದೆವು.

1930 ಮತ್ತು 40ರಲ್ಲಿ ಇವರು ಮಾಡಿದ ಈ ತ್ಯಾಗವು ಸ್ವಾತಂತ್ರ್ಯ ಹೋರಾಟದ ಭಾಗವಲ್ಲದೆ ಇನ್ನೇನು?

ಅವರ ಮಗ ಮತ್ತು ಇತರರು ಇಷ್ಟು ಹೊತ್ತಿನ ತನಕ ನಮಗೆ ಇದು ಅರ್ಥವಾಗದೇ ಹೋಗಿದ್ದಕ್ಕೆ ನಮ್ಮತ್ತ ಆಶ್ಚರ್ಯದಿಂದ ನೋಡುತ್ತಿದ್ದರು. ಅವರು ನಮಗೆ ತಿಳಿದಿದ್ದ ವಿಷಯವನ್ನು ಲಘುವಾಗಿ ತೆಗೆದುಕೊಂಡಿದ್ದರು

ತಾನು ಏನು ಮಾಡುತ್ತಿದ್ದೇನೆ ಮತ್ತು ಯಾರಿಗಾಗಿ ಮಾಡುತ್ತಿದ್ದೇನೆ ಎಂದು ಭವಾನಿಯವರಿಗೆ ತಿಳಿದಿತ್ತೆ?

ಹೌದು, ಅವರಿಗೆ ಅವರೆಲ್ಲರೂ ಯಾರೆಂದು ತಿಳಿದಿತ್ತು. ಆದರೆ ವೈಯಕ್ತಿಕವಾಗಿ ಅವರೆಲ್ಲರ ಹೆಸರು ಅಥವಾ ಗುರುತು ತಿಳಿದಿರಲಿಲ್ಲ. ಬೈದ್ಯನಾಥ ಮತ್ತು ಅವರ ಸಹಚರ ಕ್ರಾಂತಿಕಾರಿಗಳು ಹಳ್ಳಿಯ ಹೆಂಗಸರು ತಯಾರಿಸಿಕೊಟ್ಟ ಆಹಾರವನ್ನು ತಲೆಮರೆಸಿಕೊಂಡಿದ್ದ ಕ್ರಾಂತಿಕಾರಿಗಳಿಗೆ ತಲುಪಿಸುತ್ತಿದ್ದರು. ಒಂದು ರೀತಿಯಲ್ಲಿ ಅವರು ಇಬ್ಬರನ್ನೂ ಸುರಕ್ಷಿತವಾಗಿರಿಸುವ ಗುರಿಯನ್ನಿರಿಸಿಕೊಂಡಿರುತ್ತಿದ್ದರು.

ಆ ಕಾಲದ ಪುರುಲಿಯದ ಪರಿಸ್ಥಿತಿಯನ್ನು ಸಂಶೋಧಿಸಿರುವ ಪಾರ್ಥದ, ನಂತರ ನಮಗೆ ಹೀಗೆ ವಿವರಿಸಿದರು: "ಹಳ್ಳಿಯ ಕೆಲವು ಶ್ರೀಮಂತ ಕುಟುಂಬಗಳು ಮಾತ್ರವೇ ಒಂದು ನಿರ್ದಿಷ್ಟ ದಿನದಂದು ಅಲ್ಲಿ ಅಡಗಿ ಕುಳಿತಿರುವ ಅನೇಕ ಕಾರ್ಯಕರ್ತರಿಗೆ ಊಟವನ್ನು ತಯಾರಿಸಬೇಕಾಗಿತ್ತು. ಮತ್ತು ಇದನ್ನು ಮಾಡುವ ಮಹಿಳೆಯರಿಗೆ ತಾವು ತಯಾರಿಸಿದ ಆಹಾರವನ್ನು ಅವರ ಅಡುಗೆಮನೆಯಲ್ಲಿಯೇ ಇಡುವಂತೆ ಹೇಳಲಾಗಿತ್ತು.

“ಆಹಾರವನ್ನು ಯಾರು ಬಂದು ಕೊಂಡು ಹೋಗುತ್ತಿದ್ದರು, ತಾವು ಯಾರ್ಯಾರಿಗೆಲ್ಲ ಅಡುಗೆ ಮಾಡುತ್ತಿದ್ದೆವು ಎನ್ನುವ ಮಾಹಿತಿ ಆ ಮಹಿಳೆಯರಿಗೆ ತಿಳಿದಿರುತ್ತಿರಲಿಲ್ಲ. ಹೋರಾಟವು ಯಾವತ್ತೂ ಆಹಾರವನ್ನು ಸಾಗಿಸಲು ಹಳ್ಳಿಯ ಜನರನ್ನು ಬಳಸಿಕೊಳ್ಳುತ್ತಿರಲಿಲ್ಲ. ಏಕೆಂದರೆ ಬ್ರಿಟಿಷರು ಹಳ್ಳಿಯಲ್ಲಿ ಗೂಢಚಾರರು ಮತ್ತು ಮಾಹಿತಿದಾರರನ್ನು ಹೊಂದಿದ್ದರು. ಜೊತೆಗೆ ಬ್ರಿಟಿಷರ ಸಹವರ್ತಿಗಳಾಗಿದ್ದ ಊರಿನ ಊಳಿಗಮಾನ್ಯ ಜಮೀನುದಾರರು ಇಂತಹ ಜನರನ್ನು ಹೊಂದಿರುತ್ತಿದ್ದರು. ಇಂತಹ ಮಾಹಿತಿದಾರರು ಆಹಾರ ಕೊಂಡುಹೋಗುವ ಊರಿನ ಜನರನ್ನು ಗುರುತಿಸುವ ಸಾಧ್ಯತೆಯಿತ್ತು. ಇದರಿಂದಾಗಿ ಊರಿನ ಮಹಿಳೆಯರು ಮತ್ತು ಕ್ರಾಂತಿಕಾರಿಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿತ್ತು. ಅಪರಿಚಿತರು ಅದರಲ್ಲೂ ರಾತ್ರಿಯ ಕತ್ತಲಿನಲ್ಲಿ ಆಹಾರ ಸಂಗ್ರಹಿಸಲು ಬರುತ್ತಿದ್ದ ಕಾರಣ ಅಲ್ಲಿನ ಮಹಿಳೆಯರಿಗೆ ಮತ್ತು ಗೂಢಚಾರರಿಗೆ ಬರುತ್ತಿದ್ದವರು ಯಾರೆನ್ನವುದು ತಿಳಿಯುವುದು ಸಾಧ್ಯವಿರಲಿಲ್ಲ.

"ಆ ರೀತಿಯಲ್ಲಿ, ಎರಡೂ ಕಡೆಯವರ ಗುರುತು ಹೊರಗೆ ಬಾರದಂತೆ ಕಾಪಾಡಲಾಗುತ್ತಿತ್ತು. ಆದರೆ ಏನಾಗುತ್ತಿದೆ ಎನ್ನುವುದು ಮಹಿಳೆಯರಿಗೆ ತಿಳಿದಿತ್ತು. ಹೆಚ್ಚಿನ ಹಳ್ಳಿಯ ಮಹಿಳೆಯರು ಪ್ರತಿದಿನ ಬೆಳಿಗ್ಗೆ ಕೊಳಗಳು ಮತ್ತು ತೊರೆಗಳು, ಕೆರೆಗಳ ಬಳಿ ಅದರಲ್ಲಿ ಭಾಗಿಯಾಗಿದ್ದವರು ಟಿಪ್ಪಣಿಗಳು ಮತ್ತು ಅನುಭವಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಅವರು ಅದನ್ನು ಏಕೆ ಮತ್ತು ಯಾವ ಕಾರಣಕ್ಕಾಗಿ ಮಾಡುತ್ತಿದ್ದಾರೆಂದು ಅವರಿಗೆ ತಿಳಿದಿತ್ತು - ಆದರೆ ನಿರ್ದಿಷ್ಟವಾಗಿ ಯಾರಿಗಾಗಿ ಎಂದು ಎಂದಿಗೂ ಹೇಳಲಾಗಿರಲಿಲ್ಲ."

*****

PHOTO • P. Sainath

ವಾ ನಿ ಯವರು ಮೊಮ್ಮಗ ಪಾರ್ಥ ಸಾರಥಿ ಮಹ ತೊ ಸೇರಿದಂತೆ ತನ್ನ ಪ್ರಸ್ತುತ ಮನೆಯ ಇತರ 13 ಸದಸ್ಯರೊಂದಿಗೆ. ಫೋಟೋ ತೆಗೆದಾಗ ಕೆಲವು ಕುಟುಂಬ ಸದಸ್ಯರು ಹಾಜರಿರಲಿಲ್ಲ

ಇಲ್ಲಿ ʼಮಹಿಳೆಯರೆಂದರೆʼ ಹೆಚ್ಚಿನವರು ಮಹಿಳೆಯರೇ ತುಂಬಿದ್ದರು. ಅವರೆಲ್ಲರೂ ಸಿಕ್ಕಿಬಿದ್ದಿದ್ದರೆ ಘೋರ ಪರಿಣಾಮಗಳನ್ನು ಎದುರಿಸಬೇಕಾಗುತ್ತಿತ್ತು. ಒಂದು ಭವಾನಿಯವರ ಮನೆಗೆ ಪೊಲೀಸರು ಬಂದಿದ್ದರೆ ಏನಾಗಬಹುದಿತ್ತು? ಅವರು ಹೇಳುವಂತೆ ʼಎಲ್ಲದಕ್ಕೂʼ ಅವರ ಮೇಲೆಯೇ ಅವಲಂಬಿತವಾಗಿದ್ದ ಅವರ ಕುಟುಂಬ ಮತ್ತು ಅವರ ಗತಿ ಏನಾಗಬಹುದಿತ್ತು? ಅದೇನೇ ಇದ್ದರೂ ಭೂಗತ ಶಿಷ್ಟಾಚಾರಗಳು ಸರಿಯಾಗಿ ಕೆಲಸ ಮಾಡುತ್ತಿದ್ದವು.

ಆದಾಗ್ಯೂ, ಸ್ವದೇಶಿ, ಚರಕ ಮತ್ತು ಬ್ರಿಟಿಷರಿಗೆ ಪ್ರತಿರೋಧ ಒಡ್ಡುವಂತಹ ಇತರ ಸಂಕೇತಗಳನ್ನು ಅಪ್ಪಿಕೊಳ್ಳುವ ಕುಟುಂಬಗಳು ಯಾವಾಗಲೂ ಕಣ್ಗಾವಲಿನಲ್ಲಿರುತ್ತಿದ್ದವು. ಅಪಾಯಗಳು ನಿಜವಾಗಿದ್ದವು.

ಹಾಗಿದ್ದರೆ ಭವಾನಿ ಹೋರಾಟಗಾರರಿಗಾಗಿ ಯಾವ ಅಡುಗೆ ಮಾಡುತ್ತಿದ್ದರು? ಪಾರ್ಥ ದಾ ನಮಗೆ ಅದನ್ನು ನಮ್ಮ ಭೇಟಿಯ ನಂತರ ವಿವರಿಸಿದರು. ಜೋನಾರ್‌ (ಜೋಳ), ಕೋಡೊ (ಹಾರಕ ಅಕ್ಕಿ) ಮಾಡೋಯಾ (ರಾಗಿ) ಮತ್ತು ಆ ದಿನ ಮಹಿಳೆಯರಿಗೆ ದೊರಕಿದ ತರಕಾರಿಯ ಪಲ್ಯ. ಭವಾನಿ ಮತ್ತು ಇತ್ಯಾದಿ ಮಹಿಳೆಯರಿಂದಾಗಿ ಅವರು ಮನೆಯಲ್ಲಿ ಸೇವಿಸುತ್ತಿದ್ದ ಆಹಾರವನ್ನೇ ಸೇವಿಸಬಹುದಿತ್ತು.

ಕೆಲವು ಸಂದರ್ಭಗಳಲ್ಲಿ, ಅವರು ಬಂಗಾಳಿ ಭಾಷೆಯಲ್ಲಿ ಚಿ ಂಡೆ (ಅವಲಕ್ಕಿ) ಅಕ್ಕಿಯ ಉಬ್ಬಿದ ಅಥವಾ ಚಪ್ಪಟೆ ಅವಲಕ್ಕಿ ತಿಂಡಿಯನ್ನು ಮಾಡುತ್ತಿದ್ದರು. ಮಹಿಳೆಯರು ಕೆಲವೊಮ್ಮೆ ಅವರಿಗೆ ಹಣ್ಣುಗಳನ್ನು ಸಹ ಕಳುಹಿಸುತ್ತಿದ್ದರು. ಇದಲ್ಲದೆ ಅವರು ಕಾಡು ಹಣ್ಣುಗಳು ಮತ್ತು ಇತರ ಹಣ್ಣುಗಳನ್ನು ತಿನ್ನುತ್ತಿದ್ದರು.  ಹಿಂದಿನವರು ನೆನಪಿಸಿಕೊಳ್ಳುವ ಒಂದು ವಸ್ತುವೆಂದರೆ ಕ್ಯಾಂಡ್ (ಅಥವಾ ತಿರಿಲ್ ). ಒಂದಕ್ಕಿಂತ ಹೆಚ್ಚು ಬುಡಕಟ್ಟು ಭಾಷೆಗಳಲ್ಲಿ, ಅದರರ್ಥ ಕಾಡಿನ ಹಣ್ಣು‌ ಎಂದು.

ಮದುವೆಯಾಗಿ ಹೆಚ್ಚು ವರ್ಷವಾಗಿಲ್ಲದ ಸಮಯದಲ್ಲಿ ತಾತ ಆಗಾಗ ಕಾಣಿಸಿಕೊಂಡು ಭವಾನಿಯವರ ಬಳಿ ಆರ್ಡರ್‌ ಹೋಗಿಬಿಡುತ್ತಿದ್ದರು. ಇದರರ್ಥ ಅವರು ಅನಿವಾರ್ಯವಾಗಿ ಕಾಡಿನಲ್ಲಿರುವ ಅನೇಕ ಜನರಿಗೆ ಅಡುಗೆ ತಯಾರಿಸುವುದು.

ಮತ್ತು ಇದು ಕೇವಲ ಬ್ರಿಟಿಷರಿಗೆ ಮಾತ್ರ ಸಮಸ್ಯೆಯಾಗಿರಲಿಲ್ಲ.  1940ರ ದಶಕದಲ್ಲಿ, ವಿಶಾಲ ಬಂಗಾಳವನ್ನು ಕಾಡುತ್ತಿದ್ದ ಕ್ಷಾಮದ ವರ್ಷಗಳಲ್ಲಿ ಭವಾನಿಯವರ ಮೇಲಿದ್ದ ಹೊರೆಯು ಅತ್ಯಂತ ಭಾರದ್ದಾಗಿತ್ತು.  ಆ ಅವಧಿಯಲ್ಲಿ ಅವರು ಅನುಭವಿಸಿದ ಕಷ್ಟಗಳು ಕಲ್ಪನೆಗೂ ಮೀರಿದ್ದು.

ಅವರ ಸಾಹಸಗಳು ಸ್ವಾತಂತ್ರ್ಯಾನಂತರವೂ ಮುಂದುವರಿದವು. 1950ರ ದಶಕದಲ್ಲಿ, ಕುಟುಂಬವು ಪ್ರಸ್ತುತ ವಾಸಿಸುತ್ತಿರುವ ಇಡೀ ಮೊಹಲ್ಲಾವನ್ನು ದೊಡ್ಡ ಬೆಂಕಿ ಧ್ವಂಸಗೊಳಿಸಿತು. ಇದು ಅಲ್ಲಿನ ಜನರು ಹೊಂದಿದ್ದ ಎಲ್ಲಾ ಧಾನ್ಯದ ದಾಸ್ತಾನನ್ನು ನಾಶಪಡಿಸಿತು. ಭವಾನಿ ಜನ್ರಾ ಗ್ರಾಮದಲ್ಲಿರುವ ತನ್ನ ಸ್ವಂತ ಕುಟುಂಬದ ಜಮೀನುಗಳಿಂದ ಧಾನ್ಯ ಮತ್ತು ಉತ್ಪನ್ನಗಳನ್ನು ತರುತ್ತಿದ್ದರು. ಮತ್ತು ಮುಂದಿನ ಸುಗ್ಗಿಯವರೆಗೆ ಈ ಆಹಾರದ ಮೂಲಕ ತನ್ನ ಸಮುದಾಯವನ್ನು ಉಳಿಸಿಕೊಂಡರು.

1964ರಲ್ಲಿ, ಆಗಿನ ಬಿಹಾರದ ಜೆಮ್ಷೆಡ್ಪುರದಲ್ಲಿ ಒಂದು ದೊಡ್ಡ ಕೋಮುಗಲಭೆ ಭುಗಿಲೆದ್ದು, ಅದರ ಜ್ವಾಲೆಗಳು ಪುರುಲಿಯಾದಲ್ಲಿನ ಕೆಲವು ಹಳ್ಳಿಗಳನ್ನು ಸುಟ್ಟುಹಾಕಿದವು. ಆಗ ಭವಾನಿ ತನ್ನ ಹಳ್ಳಿಯ ಅನೇಕ ಮುಸ್ಲಿಮರಿಗೆ ತನ್ನ ಸ್ವಂತ ಮನೆ ಯಲ್ಲಿ ಆಶ್ರಯ ನೀಡಿದ್ದರು.

ಎರಡು ದಶಕಗಳ ನಂತರ, ಆಗಲೇ ಹಿರಿಯರಾಗಿದ್ದ ಭವಾನಿ ಸ್ಥಳೀಯರ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಕಾಡು ಬೆಕ್ಕನ್ನು ಕೊಂದಿದ್ದರು. ಅವರು ಕೋಲೊಂದರಿಂದ ಆ ಬೆಕ್ಕನ್ನು ಹೊಡೆದು ಕೊಂದುದಾಗಿ ಪಾರ್ಥ ದಾ ಹೇಳುತ್ತಾರೆ. ಇದು ಖಟಾಸ್ ಅಥವಾ ಕಾಡಿನಿಂದ ಹೊರಬರುವ ಸಣ್ಣ ಭಾರತೀಯ ಸಿವೆಟ್ (Civet) ಎಂದು ನಂತರ ತಿಳಿಯಿತು.

*****

PHOTO • Courtesy: the Mahato family

1980ರ ದಶಕದಲ್ಲಿ ಭ ವಾ ನಿ ಮಹ ತೊ ( ನಡುವೆ ) ತನ್ನ ಪತಿ ಬೈದ್ಯನಾಥ್ ಮತ್ತು ಸಹೋದರಿ ಊರ್ಮಿಳಾ ಅವರೊಂದಿಗೆ. ಇದರ ಹಿಂದಿನ ಅವಧಿಗಳಿಂದ ಕುಟುಂಬ ಯಾವುದೇ ಚಿತ್ರಗಳು ಲಭ್ಯವಿ ಲ್ಲ

ಈಗ ನಾವು ಭವಾನಿ ಮಹತೊ ಅವರ ಕಡೆಗೆ ಹೊಸಬಗೆಯ ಗೌರವದಿಂದ ನೋಡಿದೆವು. ನನಗೆ ಗಣಪತಿ ಯಾದವ್‌ ಎನ್ನುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಕುರಿತು ಮಾಡಿದ್ದ ವರದಿಯ ನೆನಪಾಯಿತು. ಅವರು ಸತರಾದಲ್ಲಿ ಭೂಗತ ಸಂದೇಶವಾಹಕನಾಗಿ ಕೆಲಸ ಮಾಡುತ್ತಿದ್ದರು. ಅವರು ಕಾಡಿನಲ್ಲಿದ್ದ ಹೋರಾಟಗಾರ ಸಂಗಾತಿಗಳಿಗಾಗಿ ಆಹಾರವನ್ನು ಒಯ್ಯುತ್ತಿದ್ದರು. ಅವರನ್ನು ನಾನು ಭೇಟಿಯಾದಾಗ ಅವರಿಗೆ 98 ವರ್ಷಗಳಾಗಿತ್ತು. ಆಗಲೂ ಅವರು ದಿನಕ್ಕೆ 20 ಕಿಲೋಮೀಟರುಗಳಷ್ಟು ದೂರ ಸೈಕಲ್‌ ತುಳಿಯುತ್ತಿದ್ದರು. ಆ ಅದ್ಭುತ ವ್ಯಕ್ತಿಯ ಕತೆಯನ್ನು ನಾನು ಬಹಳ ಪ್ರೀತಿಯಿಂದ ಮಾಡುತ್ತಿದ್ದೆ. ಆದರೆ ನಾನು ಅವರು ಅಷ್ಟೊಂದು ಊಟ ಕೊಂಡು ಹೋಗಲು ಅಡುಗೆ ಮಾಡಿಕೊಡುತ್ತಿದ್ದ ಅವರ ಪತ್ನಿಯ ಕುರಿತು ಕೇಳಲು ಮರೆತೇಬಿಟ್ಟಿದ್ದೆ. ಈಗ ನಾನು ಎಂತಹ ದೊಡ್ಡ ತಪ್ಪು ಮಾಡಿದೆ ಎನ್ನಿಸುತ್ತಿದೆ.

ನಾನು ಅವರನ್ನು ಭೇಟಿಯಾದ ಸಂದರ್ಭದಲ್ಲಿ ಆಕೆ ಸಂಬಂಧಿಕರ ಜೊತೆ ದೂರದ ಊರಿನಲ್ಲಿದ್ದರು.

ಗಣಪತಿಯವರು ತೀರಿಕೊಂಡಿದ್ದಾರೆ, ಆದರೆ ಭವಾನಿಯವರ ಭೇಟಿಯ ನಂತರ ಒಂದಂತೂ ನನಗೆ ತೀವ್ರವಾಗಿ ಅನ್ನಿಸುತ್ತಿದೆ. ನಾನು ಮರಳಿ ಅವರ ಊರಿಗೆ ಹೋಗಿ ವತ್ಸಲಾ ಗಣಪತಿ ಯಾದವ್‌ ಅವರೊಡನೆ ಮಾತನಾಡಬೇಕು ಮತ್ತು ಅವರ ಕತೆಯನ್ನು ಅವರಿಂದಲೇ ಹೇಳಿಸಬೇಕು.

ನೇತಾಜಿ ಬೋಸ್ ಅವರ ಭಾರತೀಯ ರಾಷ್ಟ್ರೀಯ ಸೇನೆಗೆ ಸೇರಿದ ಮತ್ತು  ಬರ್ಮಾ (ಈಗಿನ ಮ್ಯಾನ್ಮಾರ್) ಕಾಡುಗಳಲ್ಲಿ ಮತ್ತು ಸಿಂಗಾಪುರದಲ್ಲಿನ ಶಿಬಿರಗಳಲ್ಲಿದ್ದ ಒಡಿಯಾ ಸ್ವಾತಂತ್ರ್ಯ ಹೋರಾಟಗಾರ್ತಿ ಲಕ್ಷ್ಮಿ ಪಾಂಡಾ ಅವರ ಆ ಶಕ್ತಿಯುತ ಮಾತುಗಳನ್ನು ಭವಾನಿ ನನಗೆ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದರು.

"ನಾನು ಜೈಲಿಗೆ ಹೋಗಿಲ್ಲ, ರೈಫಲ್ ತರಬೇತಿ ಪಡೆದಿದ್ದೇನೆಃ ಆದರೆ ಎಂದಿಗೂ ಯಾರ ಮೇಲೂ ಗುಂಡು ಹಾರಿಸಿಲ್ಲ, ಇದರರ್ಥ ನಾನು ಸ್ವಾತಂತ್ರ್ಯ ಹೋರಾಟಗಾರಳಲ್ಲ ಎಂದಾಗುತ್ತದೆಯೇ? ನಾನು ಐ.ಎನ್.ಎ. ಅರಣ್ಯ ಶಿಬಿರಗಳಲ್ಲಿ ಮಾತ್ರ ಕೆಲಸ ಮಾಡುತ್ತಿದ್ದೆ, ಅದು ಬ್ರಿಟಿಷ್ ಬಾಂಬ್ ದಾಳಿಯ ಗುರಿಯಾಗಿತ್ತು. ಇದರರ್ಥ ನಾನು ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಅರ್ಥವೇ? 13ನೇ ವಯಸ್ಸಿನಲ್ಲಿ, ನಾನು ಹೊರಗೆ ಹೋಗಿ ಹೋರಾಡುತ್ತಿದ್ದ ಎಲ್ಲರಿಗೂ ಶಿಬಿರದ ಅಡಿಗೆಮನೆಗಳಲ್ಲಿ ಅಡುಗೆ ಮಾಡುತ್ತಿದ್ದೆ, ನಾನು ಅದರ ಭಾಗವಲ್ಲವೇ?"

ಲಕ್ಷ್ಮಿ ಪಾಂಡಾ, ಸಾಲಿಹಾನ್, ಹೌಸಾಬಾಯಿ ಪಾಟೀಲ್ ಮತ್ತು ವತ್ಸಲಾ ಯಾದವ್ ಅವರಂತೆ ಭವಾನಿಯವರು ಕೂಡಾ ನಿಜವಾಗಿಯೂ ಅರ್ಹವಾದ ಗೌರವಗಳು ಮತ್ತು ಮನ್ನಣೆಯನ್ನು ಎಂದಿಗೂ ಪಡೆಯಲಿಲ್ಲ. ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದಲ್ಲಿ, ಅವರೆಲ್ಲರೂ ಇತರರಂತೆ ಗೌರವಾನ್ವಿತವಾಗಿ ಹೋರಾಡಿದರು ಮತ್ತು ತಮ್ಮನ್ನು ಅರ್ಪಿಸಿಕೊಂಡರು. ಆದರೆ ಅವರು ಮಹಿಳೆಯರಾಗಿದ್ದರು. ಸಮಾಜಗಳಲ್ಲಿ ಮಹಿಳೆಯರ ವಿರುದ್ಧದ ಪೂರ್ವಾಗ್ರಹಗಳು ಮತ್ತು ಸ್ಟೀರಿಯೊಟೈಪ್ ನಂಬಿಕೆಗಳಿಂದಾಗಿ, ಅವರ ಪಾತ್ರವನ್ನು ವಿರಳವಾಗಿ ಗೌರವಿಸಲಾಗುತ್ತಿತ್ತು.

ಆದಾಗ್ಯೂ, ಇದು ಭವಾನಿ ಮಹತೋ ಅವರನ್ನು ಕಾಡುವಂತೆ ಕಾಣುತ್ತಿಲ್ಲ. ಪ್ರಾಯಶಃ ಅವರು ಆ ಮೌಲ್ಯಗಳನ್ನು ಅಂತರ್ಗತಗೊಳಿಸಿಕೊಂಡಿರಬಹುದೇ? ಪ್ರಾಯಶಃ ಇದೇ ಅವರು ತನ್ನ ಸ್ವಂತ ಅನನ್ಯ ಕೊಡುಗೆಯ ಮೌಲ್ಯವನ್ನು ಕಡೆಗಣಿಸುವಂತೆ ಮಾಡಿರಬಹುದೇ?

ಆದರೆ ನಾವು ಹೊರಡುವಾಗ ಅವರು ನಮಗೆ ಹೇಳಿದ ಕೊನೆಯ ವಿಷಯವೆಂದರೆ: "ನಾನು ಏನನ್ನು ಪೋಷಿಸಿದೆ ಎನ್ನುವುದನ್ನು ನೋಡಿ. ಈ ದೊಡ್ಡ ಕುಟುಂಬ, ಈ ಎಲ್ಲಾ ತಲೆಮಾರುಗಳು, ನಮ್ಮ ಹೊಲ, ಎಲ್ಲವೂ. ಆದರೆ ಈ ಯುವ ಜನರು...” ನಮ್ಮ ಸುತ್ತಲೂ ಅವರ ಹಲವಾರು ಮೊಮ್ಮಕ್ಕಳು ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಿರುವಂತೆ ಕಾಣುತ್ತಿತ್ತು. ಅವರು ನಿಸ್ಸಂಶಯವಾಗಿ ತಮ್ಮಿಂದ ಸಾಧ್ಯವಿರುವಷ್ಟು ಶ್ರಮವಹಿಸಿ ಮಾಡುತ್ತಿದ್ದರು. ಆದರೆ ಒಂದು ಕಾಲದಲ್ಲಿ ಇದೆಲ್ಲ ಕೆಲಸವನ್ನೂ ಅವರೊಬ್ಬರೇ ಮಾಡುತ್ತಿದ್ದರು.

ಅವರು ನಿಜವಾಗಿಯೂ ಅವರನ್ನು ಅಥವಾ ಬೇರೆ ಯಾರನ್ನೂ ದೂಷಿಸುತ್ತಿಲ್ಲ. ಈಗೀಗ 'ಎಲ್ಲವನ್ನೂ' ಮಾಡಬಲ್ಲವರು ಕಡಿಮೆ ಜನರಿದ್ದಾರೆ ಎಂದು ಅವರು ವಿಷಾದಿಸುತ್ತಾರೆ.


ಈ ಕಥೆಗೆ ಅಮೂಲ್ಯವಾದ ಇನ್‌ಪುಟ್‌ಗಳನ್ನು ನೀಡಿದ್ದಕ್ಕಾಗಿ ಮತ್ತು ಭವಾನಿ ಮಹ್ತೊ ಅವರ ಮಾತುಗಳ ಅತ್ಯುತ್ತಮ ಅನುವಾದಕ್ಕಾಗಿ ಸ್ಮಿತಾ ಖಟೋರ್ ಅವರಿಗೆ ನನ್ನ ಧನ್ಯವಾದಗಳು ಮತ್ತು ಕೃತಜ್ಞತೆಗಳು. ಅಲ್ಲದೆ, ಜೋಶುವಾ ಬೋಧಿನೇತ್ರ ಅವರ ಅಮೂಲ್ಯವಾದ ಇನ್‌ಪುಟ್‌ಗಾಗಿ ಮತ್ತು ಅವರ ಹಲವು ಭೇಟಿಗಳಿಗಾಗಿ ಧನ್ಯವಾದಗಳು, ಇದು ನಮ್ಮ ನಂತರದ ಸಭೆಗಳು ಮತ್ತು ಸಂದರ್ಶನಗಳನ್ನು ಸಾಧ್ಯವಾಗಿಸಿತು. ಸ್ಮಿತಾ ಮತ್ತು ಜೋಶುವಾ ಇಲ್ಲದಿದ್ದರೆ ಈ ಕಥಾ ವರದಿಯನ್ನು ಮಾಡಲು ಸಾಧ್ಯವೇ ಇರಲಿಲ್ಲ.

ಅನುವಾದ: ಶಂಕರ. ಎನ್. ಕೆಂಚನೂರು

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru