ದಾದರ್ ನ ಜನನಿಬಿಡ ಬ್ಯುಸಿನೆಸ್ ಸ್ಟ್ರೀಟ್ ನಲ್ಲಿ ಪ್ರತೀ ಮುಂಜಾನೆಯೂ ಬಂದು ಕೆಂಪಗಿನ ಕಾರ್ಪೆಟ್ ಒಂದನ್ನು ಹಾಸುತ್ತಾನೆ ಶಿವಮ್ ಸಿಂಗ್. ಹಾಗೆಯೇ ಐದು ಪ್ಲಾಸ್ಟಿಕ್ ಸ್ಟೂಲ್ ಗಳನ್ನು ಈ ನಾಲ್ಕಡಿ ಉದ್ದ-ಐದಡಿ ಅಗಲದ ಕಾರ್ಪೆಟ್ಟಿನ ಮೇಲೆ ಆತ ಮಟ್ಟಸವಾಗಿ ಇಡುತ್ತಾನೆ. ನಂತರ ಲಕ್ಷ್ಮೀದೇವಿಯ ಫ್ರೇಮ್ ಹಾಕಿದ ಚಿತ್ರವನ್ನು ಸ್ಟೂಲ್ ಒಂದರ ಕೆಳಗಿರಿಸಿ ಧೂಪದ ಕಡ್ಡಿಯೊಂದನ್ನು ಹಚ್ಚುತ್ತಾನೆ.

ಈತ ತನ್ನ ಪುಟ್ಟ ಅಂಗಡಿಯನ್ನು ಆಲದ ಮರವೊಂದರ ಕೆಳಗೆ ಸಜ್ಜುಗೊಳಿಸಿದ್ದಾನೆ. ಈ ಮರದ ಕೊಂಬೆಯೊಂದರಿಂದ ಕೆಳಗೆ ಜೋತಾಡುತ್ತಿರುವ ಬ್ಯಾನರ್ ನಲ್ಲಿ `ಶಿವಮ್ ಮೆಹಂದಿ ಆರ್ಟಿಸ್ಟ್' ಎಂದು ಬರೆದಿದೆ. ಈ ಬ್ಯಾನರ್ ಮತ್ತು ಸ್ಟೂಲಿನ ಮೇಲೆ ಇರಿಸಲಾಗಿರುವ ಫೋಟೋ ಆಲ್ಬಮ್ ಗಳಲ್ಲಿ ಮೆಹಂದಿಯಿಂದ ಅಲಂಕೃತವಾದ ಸುಂದರ ಕೈ ಮತ್ತು ಕಾಲುಗಳ ಚಿತ್ರಗಳಿವೆ. ಹೀಗೆ ಶಿವಮ್ ದಿನದ ತನ್ನ ಮೊದಲ ಗ್ರಾಹಕನಿಗಾಗಿ ಕಾಯುತ್ತಿದ್ದಾನೆ. ಅವರ ಆಯ್ಕೆಗಾಗಿ ಹೂವು, ಪೈಸ್ಲೇ, ಸುರುಳಿ... ಹೀಗೆ ಹಲವು ವಿನ್ಯಾಸಗಳು ತಯಾರಾಗಿವೆ. ಕೆಲವೊಮ್ಮೆ ಗ್ರಾಹಕನ ಕೈಗಳನ್ನು ಕಂಡು ಸ್ಫೂರ್ತಿಗೊಂಡು ತನ್ನದೇ ಹೊಸ ವಿನ್ಯಾಸಗಳನ್ನು ಅವರಿಗಾಗಿ ಮಾಡಿಕೊಡುತ್ತಾನೆ ಶಿವಮ್. ``ಯಾರಾದರೂ ಬಂದೇ ಬರುತ್ತಾರೆ...'', ತನ್ನ ದಿನವು ಚೆನ್ನಾಗಿಯೇ ಆರಂಭವಾಗಲಿದೆಯೆಂಬ ಆಶಾಭಾವದೊಂದಿಗೆ ಹೇಳುತ್ತಿದ್ದಾನೆ ಶಿವಮ್.

ಸೆಂಟ್ರಲ್ ಮುಂಬೈಯಲ್ಲಿ ದಾದರ್ ಸಬ್ ಅರ್ಬನ್ ರೈಲು ನಿಲ್ದಾಣದಿಂದ ಕೊಂಚವೇ ದೂರ, ಅಂದರೆ ಸುಮಾರು 200 ಮೀಟರ್ ದೂರದಲ್ಲಿರುವ ರಾನಡೆ ರಸ್ತೆಯಲ್ಲಿ ಶಿವ ನಾಯ್ಕ್ ಕೂಡ ತನ್ನ ಪುಟ್ಟ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾನೆ. ಅವನೂ ಕೂಡ ತನ್ನಲ್ಲಿರುವ ಕೆಲ ಪ್ಲಾಸ್ಟಿಕ್ ಲೋಟಗಳಲ್ಲಿ ಹೆನ್ನಾ ಪೇಸ್ಟ್ ಅನ್ನು ತುಂಬಿ ತನ್ನ ದಿನದ ಆರಂಭಕ್ಕಾಗಿ ಸಜ್ಜಾಗುತ್ತಿದ್ದಾನೆ. ಇವರಿಬ್ಬರೂ ತಮ್ಮ ತಮ್ಮ ಅಂಗಡಿಗಳನ್ನು ಹಾಕಿಕೊಂಡಿರುವ ರಸ್ತೆಯಲ್ಲಂತೂ ಜನದಟ್ಟಣೆ, ಚಟುವಟಿಕೆಗಳು ಹೆಚ್ಚಾಗತೊಡಗಿವೆ. ಇವರಿಬ್ಬರಲ್ಲದೆ ಸೋಲಾಪುರದ ಹೂವಿನ ವ್ಯಾಪಾರಿ, ಚಿನ್ನದ ಕೆಲಸ ಮಾಡುವ ಲಕ್ನೋದವನು, ಕಲ್ಕತ್ತಾದಿಂದ ಬಂದಿರುವ ಚಪ್ಪಲಿ ಹೊಲಿಯುವವನು, ಐಸ್ ಕ್ರೀಂ ಮಾರುತ್ತಿರುವ ರಾಜಸ್ಥಾನದವನು... ಹೀಗೆ ಎಲ್ಲೆಲ್ಲಿಂದಲೋ ವಲಸೆ ಬಂದಿರುವ ಬಹಳಷ್ಟು ಜನರೂ ಕೂಡ ಈ ಬೀದಿಯಲ್ಲಿ ವಿವಿಧ ವಸ್ತುಗಳನ್ನು ಮತ್ತು ಸೇವೆಗಳನ್ನು ಮಾರಾಟ ಮಾಡುತ್ತಾ ಬದುಕುತ್ತಿದ್ದಾರೆ.

PHOTO • Samyukta Shastri

ಸೆಂಟ್ರಲ್ ಮುಂಬೈಯ ರಾನಡೆ ರಸ್ತೆಯ ಬದಿಯಲ್ಲಿ ಸಜ್ಜುಗೊಳಿಸಿರುವ ಮೆಹಂದಿ ಸ್ಟಾಲ್ ನಲ್ಲಿ ಕುಳಿತುಕೊಂಡು ಗ್ರಾಹಕರಿಗಾಗಿ ಕಾಯುತ್ತಿರುವ ಶಿವ ನಾಯ್ಕ್

ಇಲ್ಲಿರುವ ಬಹಳಷ್ಟು ಮೆಹಂದಿ ಕಲಾವಿದರಂತೆ ಶಿವ ಮತ್ತು ಶಿವಮ್ ಕೂಡ ಪ್ರತಿನಿತ್ಯವೂ ಸುಮಾರು ಹತ್ತು ತಾಸುಗಳ ಕಾಲ ಇಲ್ಲಿದ್ದು ದುಡಿಯುತ್ತಾರೆ. ಈ ಪ್ರದೇಶದಲ್ಲಿ ಸುಮಾರು 30 ಮೆಹಂದಿ ವಿನ್ಯಾಸಕಾರರು ಇರಬಹುದು ಎಂದು ಹೇಳುತ್ತಿದ್ದಾನೆ ಶಿವ. ಇವರೆಲ್ಲರೂ ಕೂಡ ಪುರುಷರೇ. ``ಮೆಹಂದಿ ವಿನ್ಯಾಸಗಳನ್ನು ಮಾಡುವುದರಲ್ಲಿ ಹುಡುಗಿಯರಿಗಿಂತ ಹುಡುಗರ ವೇಗವೇ ಹೆಚ್ಚು. ಹುಡುಗಿಯರು (ಬ್ಯೂಟಿ) ಪಾರ್ಲರುಗಳಲ್ಲಿರುತ್ತಾರೆ (ಹೆನ್ನಾ ಬಳಸುತ್ತಾ). ಹುಡುಗರು ಇಂಥಾ ವ್ಯಾಪಾರಗಳನ್ನು ಶುರುಮಾಡುತ್ತಾರೆ. ಹುಡುಗಿಯರು ಹೀಗೆ ಫುಟ್-ಪಾತ್ ಗಳಲ್ಲಿ ಕುಳಿತುಕೊಳ್ಳುವುದು ಅಸಾಧ್ಯ...'', ಅನ್ನುತ್ತಿದ್ದಾನೆ ಶಿವಮ್.

ಶಹರದಾದ್ಯಂತ ಇರುವ ಸಬ್ ಅರ್ಬನ್ ಸ್ಟೇಷನ್ ಗಳ ಬಳಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿರುವ ಹಲವು ಮೆಹಂದಿವಾಲಾ ಅಥವಾ ಹೆನ್ನಾ ಕಲಾವಿದರಂತೆ ಶಿವ ಮತ್ತು ಶಿವಮ್ ಕೂಡ ವಲಸೆ ಬಂದವರೇ. ಇಬ್ಬರೂ ಕೂಡ ಉತ್ತರಪ್ರದೇಶದವರು. ಅಲಿಗಢ್ ಜಿಲ್ಲೆಯ ಗವಾನಾ ತೆಹಸೀಲ್ ನ ಜಾಮಾ ಹಳ್ಳಿಯ ಮೂಲದವನಾಗಿರುವ, ಹತ್ತೊಂಭತ್ತರ ಹರೆಯದ ಶಿವಮ್ ಆರು ವರ್ಷಗಳ ಹಿಂದೆ ಮುಂಬೈಗೆ ಬಂದಿಳಿದಿದ್ದ. ``ಹಳ್ಳಿಯನ್ನು ಬಿಟ್ಟು ಬಂದಾಗ ನನಗೆ ಎಂಟೋ, ಒಂಭತ್ತೋ ಆಗಿತ್ತು. ಆಗ ಮನೆಯಲ್ಲಿ ದುಡಿದು ಸಂಪಾದಿಸುವ ಕೈಗಳೇ ಇರಲಿಲ್ಲ. ನನ್ನ ಇಬ್ಬರು ಅಣ್ಣಂದಿರು ವಿವಾಹಿತರಾಗಿದ್ದರು ಮತ್ತು ಪ್ರತ್ಯೇಕವಾಗಿ ವಾಸಿಸುತ್ತಿದ್ದರು'', ಎನ್ನುತ್ತಾನೆ ಆತ.

ಆದರೆ ಮುಂಬೈಗೆ ಬರುವ ಮುನ್ನ ಶಿವಮ್ ದೆಹಲಿಯಲ್ಲಿರುವ ತನ್ನ ತಾಯಿಯ ಕಡೆಯ ಸಂಬಂಧಿಯೊಬ್ಬರ ಮನೆಗೆ ಮೆಹಂದಿಯ ವಿನ್ಯಾಸಗಳನ್ನು ಚಿತ್ರಿಸುವ ಕಲೆಯನ್ನು ಕಲಿತುಕೊಳ್ಳಲು ಹೋಗಿದ್ದ. ``ಸುಮಾರು 2-3 ತಿಂಗಳವರೆಗೆ ನಾನು ಕಾರ್ಡ್‍ಬೋರ್ಡಿನ ಮೇಲೆ ಅಚ್ಚೊತ್ತುತ್ತಾ ದಿನವಿಡೀ ಅಭ್ಯಾಸ ಮಾಡುತ್ತಿದ್ದೆ. ಇದರಲ್ಲಿ ಒಮ್ಮೆ ನನಗೆ ಚೆನ್ನಾಗಿ ಅಭ್ಯಾಸವಾದ ನಂತರವಷ್ಟೇ ಗ್ರಾಹಕರ ಕೈಗಳನ್ನು ನನಗೆ ನೀಡಲಾಯಿತು'', ಎನ್ನುತ್ತಾನೆ ಶಿವಮ್. ಒಂದಿಷ್ಟು ಕಾಸು ಸಂಪಾದನೆಗಾಗಿ ಚಿಕ್ಕ ಪುಟ್ಟ ರೆಸ್ಟೊರೆಂಟುಗಳಲ್ಲಿ, ಕಾರು ಮತ್ತು ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡಿದ್ದ ಶಿವಮ್ ನಂತರ ಮುಂಬೈ ಸೇರಿದ್ದ.

ಇತ್ತ 20 ರ ಹರೆಯದ ಶಿವ ಫಿರೋಝಾಬಾದ್ ಜಿಲ್ಲೆಯ ಟುಂಡ್ಲಾ ತೆಹಸೀಲ್ ನಿಂದ ಹತ್ತು ವರ್ಷಗಳ ಹಿಂದೆ ಮುಂಬೈಗೆ ಬಂದಿದ್ದ. ಮೆಹಂದಿ ವ್ಯಾಪಾರಕ್ಕಿಳಿಯುವ ಯೋಚನೆ ಅವನಿಗೆ ಸಹಜವಾಗಿಯೇ ಬಂದಿತ್ತು. ``ನಮ್ಮ ಇಡೀ ಹಳ್ಳಿ ಮಾಡುವುದೇ ಇದನ್ನು. ನಾನಿಲ್ಲಿಗೆ ಬಂದಾಗ ನನ್ನ ಅಣ್ಣನಿಂದ ಇದನ್ನು ಕಲಿತುಕೊಂಡೆ. ಅಣ್ಣ ಎಂದರೆ ಭಾವನ ಕಡೆಯವನು. ಇದು ನಮ್ಮ ಕುಟುಂಬದ ಸಾಂಪ್ರದಾಯಿಕ ವೃತ್ತಿ. ಎಲ್ಲರೂ ಇದನ್ನೇ ಮಾಡುತ್ತಾರೆ'', ಎನ್ನುತ್ತಾನೆ ಶಿವ.

``ಉಳಿದ ಮಕ್ಕಳು ಹೇಗೆ ಶಾಲೆಗೆ ಹೋಗುತ್ತಾರೋ ನಮ್ಮ ಹಳ್ಳಿಯ ಎಲ್ಲಾ ಮಕ್ಕಳು ಇದನ್ನೇ ಕಲಿಯುತ್ತಾರೆ. ಗ್ರಾಹಕರ ಇಚ್ಛೆಗನುಸಾರವಾಗಿ ನಾವು ಏನನ್ನು ಬೇಕಾದರೂ ಚಿತ್ರಿಸಬಲ್ಲೆವು'', ಅನ್ನುತ್ತಿದ್ದಾನೆ ಶಿವನ ಸೋದರಸಂಬಂಧಿಯಾಗಿರುವ ಕುಲ್ದೀಪ್ ನಾಯ್ಕ್. ಮುಂಬೈಯಲ್ಲಿ ಅವನದ್ದೂ ಕೂಡ ಒಂದು ಮೆಹಂದಿ ಸ್ಟಾಲ್ ಇದೆ. ``ಅರೇಬಿಕ್, ಬಾಂಬೆ ಶೈಲಿ, ಮಾರ್ವಾಡಿ, ಇಂಡೋ-ಅರೇಬಿಕ್, ಇಂಡೋ-ವೆಸ್ಟರ್ನ್, ದುಬೈ... ಹೀಗೆ ಅದ್ಯಾವ ಶೈಲಿಯಾದರೂ ಕೂಡ ನಾವು ಮಾಡಬಲ್ಲೆವು'', ಎಂದು ಬಡಬಡಿಸುತ್ತಿದ್ದಾನೆ ಕುಲ್ದೀಪ್.

ಮೆಹಂದಿ ಕಲಾವಿದರಾಗಿ ಮುಂಬೈಗೆ ಬಂದ ನಂತರ ಇವರೆಲ್ಲರಿಗೂ ಲಾಭವೇ ಆಗಿದೆ. ``ಈ ಹಿಂದೆ ಕಾಸಾದರೂ ಎಲ್ಲಿತ್ತು?'', ಎನ್ನುತ್ತಿದ್ದಾನೆ ಶಿವಮ್. ``ನಾವು ನಮ್ಮ ಹಳ್ಳಿಗಳನ್ನು ಬಿಟ್ಟು ಎಲ್ಲಿಗಾದರೂ ಹೋಗಿ ದುಡಿಯಲು ಶುರುಮಾಡಿದ ನಂತರವಷ್ಟೇ ಕಾಸನ್ನು ನೋಡೋ ಭಾಗ್ಯವು ನಮಗೆ ಸಿಕ್ಕಿದ್ದು. ಹಳ್ಳಿಯಲ್ಲಾದರೆ ದಿನವಿಡೀ ಕೂಲಿ ಮಾಡಿದರೂ 200-300 ರೂಪಾಯಿಗಳಷ್ಟೇ ದಕ್ಕುತ್ತದೆ. ದೆಹಲಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ನನಗೆ ತಿಂಗಳಿಗೆ 6000-9000 ದಕ್ಕುತ್ತಿತ್ತು.  ಸದ್ಯ 30,000-50,000 ರೂಪಾಯಿಗಳವರೆಗೆ ಸಂಪಾದಿಸುತ್ತಿದ್ದೇನೆ'', ಎನ್ನುತ್ತಾನೆ ಆತ.
PHOTO • Samyukta Shastri

ಶಿವಂ ಸಿಂಗ್ ನ ಮೆಹಂದಿ ಸ್ಟಾಲ್ ನಲ್ಲಿ (ಎಡ) ಇರಿಸಲಾಗಿರುವ ಸ್ಟೂಲ್ ಗಳ ಮೇಲೆ ಮೆಹಂದಿಯ ವಿವಿಧ ವಿನ್ಯಾಸಗಳನ್ನೊಳಗೊಂಡ ಫೋಟೋ ಆಲ್ಬಮ್ ಗಳನ್ನು ಇರಿಸಲಾಗಿದೆ. ಸ್ಟೂಲ್ ಒಂದರ ಕೆಳಗೆ ಇಟ್ಟಿರುವ ಲಕ್ಷ್ಮೀದೇವಿಯ ಚಿತ್ರವೊಂದನ್ನು ಚಿತ್ರದಲ್ಲಿ ಕಾಣಬಹುದು.

ಶಿವಮ್ ನ ಬಹುಪಾಲು ಆದಾಯ ಹರಿದು ಬರುವುದು ಮದುವೆ ಸಮಾರಂಭಗಳಲ್ಲಿ ಮೆಹಂದಿ ಹಾಕುವುದರಿಂದ. ``ಇಲ್ಲಿ (ರಸ್ತೆ ಬದಿಗಳಲ್ಲಿ) 5-10 ಗ್ರಾಹಕರಿಂದಾಗಿ 800-2000 ರೂಪಾಯಿಗಳಷ್ಟು ದಿನವೊಂದಕ್ಕೆ ಸಂಪಾದನೆಯಾಗುತ್ತದೆ. ಐದೇ ಜನ ಬಂದರೂ ನಮಗೆ (ಕನಿಷ್ಠ) 1000-1500 ರಷ್ಟಾದರೂ ದಕ್ಕುತ್ತದೆ. ಜನರು ಮೆಹಂದಿ ಹಾಕಲು ನಮ್ಮನ್ನು ಮನೆಗೆ ಕರೆದರೆ ಸಾಮಾನ್ಯವಾಗಿ ಅಲ್ಲಿ ಕನಿಷ್ಠ ಬೆಲೆಯೇ 1000 ಆಗಿರುತ್ತದೆ'', ಎನ್ನುತ್ತಿದ್ದಾನೆ ಶಿವಮ್.

``ಪ್ರತಿಯೊಬ್ಬ ಗ್ರಾಹಕರೂ ಒಂದು ಕೈಗೆ 500 ರಷ್ಟನ್ನು ಕೊಡುತ್ತಾರೆ. ದರಗಳು 100 ರೂಪಾಯಿಗಳಿಂದ ಶುರುವಾಗುತ್ತದೆ. ಆದರೆ ಆ ವಿನ್ಯಾಸಗಳು ಯಾರಿಗೂ ಬೇಡ. ಎಲ್ಲರೂ ಸಾಮಾನ್ಯವಾಗಿ 300-400 ರ ವಿನ್ಯಾಸಗಳನ್ನು ಆರಿಸಿಕೊಳ್ಳುತ್ತಾರೆ. ಮದುವಣಗಿತ್ತಿಯ ಮೆಹಂದಿ ವಿನ್ಯಾಸಗಳು 5000 ರೂಪಾಯಿಗಳಿಂದ ಶುರುವಾಗುತ್ತವೆ'', ಎನ್ನುತ್ತಿದ್ದಾನೆ ಶ್ಯಾಮ್ ನನ್ನು ಭೇಟಿಯಾಗಲು ಬಂದಿರುವ ಮನೋಜ್. ಮನೋಜನ ಸಂಬಂಧಿಯೊಬ್ಬರು ಪೂರ್ವ ದಾದರ್ ನಲ್ಲಿ ಮೆಹಂದಿಯ ಸ್ಟಾಲ್ ಒಂದನ್ನು ಇಟ್ಟುಕೊಂಡಿದ್ದಾರೆ.

ಹೆನ್ನಾ ಕಲಾವಿದರನ್ನು ಈ ವ್ಯಾಪಾರಕ್ಕೆ ಸೆಳೆಯುವುದು ಒಳ್ಳೆಯ ಲಾಭವಷ್ಟೇ ಅಲ್ಲ. ತಾನು ಯಾರಿಗೂ ಏನೂ ಉತ್ತರ ಕೊಡಬೇಕಿಲ್ಲ ಎಂಬ ಸ್ವಾತಂತ್ರ್ಯವೇ ನನಗಿಷ್ಟ ಎನ್ನುತ್ತಾನೆ ಶಿವಮ್. ಮನಬಂದಂತೆ ಸುತ್ತಾಡಲೂ ಆಗುವುದರಿಂದ ಶಿವಮ್ ನಿಗೆ ಇದು ಇಷ್ಟ. ಆತ ತನ್ನ ಅಂಗಡಿಯಲ್ಲಿ ಕುಳಿತುಕೊಳ್ಳುವುದೇ ಅಪರೂಪ. ಯಾವಾಗಲೂ ಅತ್ತಿತ್ತ ಅಡ್ಡಾಡುತ್ತಾ ತನ್ನ ಗೆಳೆಯರನ್ನು ಭೇಟಿಯಾಗುತ್ತಾ ಕಾಲ ಕಳೆಯುತ್ತಾನೆ ಶಿವಮ್. ``ಮುಂಬೈಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಇದ್ದೇನೆ. ಇಲ್ಲಿ ಬರುವ ಮುಂಚೆ ತಮಿಳುನಾಡಿನಲ್ಲಿ ಅಂಗಡಿಯೊಂದನ್ನು ಇಟ್ಟುಕೊಂಡಿದ್ದೆ. ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ... ಹೀಗೆ ದೇಶವಿಡೀ ಸುತ್ತಾಡಿದ್ದೇವೆ ನಾವು. ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಎದ್ದು ಹೊರಡಬಹುದು. ಇವತ್ತು ನನಗೆ ಸಮುದ್ರತೀರವನ್ನು ನೋಡುವ ಮನಸ್ಸಾಗುತ್ತಿದೆ. ಹೀಗಾಗಿ ಅತ್ತ ಹೊರಡಲಿದ್ದೇನೆ...'', ಎನ್ನುತ್ತಿದ್ದಾನೆ ಈತ.

ಶಿವಮ್ ಮತ್ತು ಮನೋಜ್ ಸಹಾಯಕರನ್ನು ಬೇರೆ ಇಟ್ಟುಕೊಂಡಿದ್ದಾರೆ. ``ಹಳ್ಳಿಯ ಇತರರು ಈ ವ್ಯಾಪಾರದಲ್ಲಿ ಲಾಭ ಮಾಡಿ ಹಣ ಸಂಪಾದಿಸುವುದನ್ನು ಕಂಡು ಉಳಿದವರೂ ಕೂಡ ಇಲ್ಲಿಗೆ ಬರುತ್ತಾರೆ'', ಎನ್ನುತ್ತಾನೆ ಶಿವಮ್. ಮನೋಜ್ ನ ಅಂಗಡಿಯನ್ನು ಆತನ ಸಹಾಯಕರೇ ನೋಡಿಕೊಳ್ಳುತ್ತಿದ್ದಾರೆ. ಯಾವಾಗಲಾದರೂ ಗ್ರಾಹಕರು ದೊಡ್ಡ ಸಂಖ್ಯೆಯಲ್ಲಿ ಬಂದರೆ ಅಥವಾ ಮನೆಗೆ ಹೋಗಿ ಮೆಹಂದಿ ಹಾಕುವ ಆರ್ಡರುಗಳಿದ್ದರೆ ಮಾತ್ರ ಆತ ತನ್ನ ಅಂಗಡಿಯತ್ತ ಬರುವುದು.

ಈ ಸ್ವಾತಂತ್ರ್ಯವು ಶಿವಮ್ ನಿಗೆ ಬೇಕೆಂದಾಗಲೆಲ್ಲಾ ತನ್ನ ಹಳ್ಳಿಯಾದ ಜಾಮಾಗೆ ಹೋಗಿ ತನ್ನ ಮನೆಗೆ ಹೋಗಿ ಭೇಟಿಕೊಡಲು ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅಂದಹಾಗೆ ಜಾಮಾದಲ್ಲಿ ಆತನ ಕುಟುಂಬಕ್ಕೆ ಸೇರಿದ 20 ಬೀಘಾ ಜಮೀನಿದೆ (ಸುಮಾರು ನಾಲ್ಕು ಎಕರೆ). ತಾನು ಕೆಲಸಕ್ಕೆಂದು ಇಟ್ಟುಕೊಂಡಿರುವ ಹುಡುಗರಿಗೆ ತಿಂಗಳಿಗೆ 5000-7000 ದಷ್ಟು ಸಂಬಳವನ್ನು ಕೊಡುತ್ತಾನೆ ಈತ. ಆತನ ಆದಾಯದ ಒಂದು ಭಾಗವು ರಕ್ಷಣಾ ಶುಲ್ಕದ ಹೆಸರಿನಲ್ಲಿ ಸ್ಥಳೀಯ ಪೈಲ್ವಾನರಿಗೆ ಹೋದರೆ ಮತ್ತೊಂದು ಭಾಗವು ಮನೆಯ ಬಾಡಿಗೆಗೆ ಸರಿಹೊಂದುತ್ತದೆ. ಶಿವಮ್ ಮನೋಜ್ ನ ಜೊತೆಯಲ್ಲಿ ಜಾಯಿಂಟ್ ಕ್ವಾರ್ಟರ್ಸ್ ನಲ್ಲಿ ನೆಲೆಸುತ್ತಿದ್ದಾನೆ. ಉಳಿದವರು ಈಶಾನ್ಯ ಮುಂಬೈನ ಘಾಟ್ಕೋಪರ್ ನಲ್ಲಿ ಬೀಡುಬಿಟ್ಟಿದ್ದಾರೆ.

ತನ್ನ ಸಂಪಾದನೆಯಲ್ಲಿ ಎಷ್ಟು ಉಳಿಯುತ್ತೋ ಅದೆಲ್ಲವನ್ನೂ ಶಿವಮ್ ತನ್ನ ಮನೆಗೆ ಕಳಿಸುತ್ತಾನೆ. ``ಇಲ್ಲಿ (ಮುಂಬೈ) ಹಣವಿಟ್ಟುಕೊಂಡು ಏನು ಮಾಡಲಿ ನಾನು? ಅಷ್ಟಕ್ಕೂ ನಾವು ದುಡಿಯುತ್ತಿರುವುದು ಕುಟುಂಬಕ್ಕಾಗಿ. ನಾವು ಸಂಪಾದಿಸುವುದಾದರೂ ಯಾತಕ್ಕೆ? ಇಲ್ಲಿಗಾಗಿಯೋ ಅಥವಾ ಮನೆಯವರಿಗಾಗಿಯೋ?'', ಎಂಬ ಪ್ರಶ್ನೆ ಆತನದ್ದು.

PHOTO • Samyukta Shastri

ಆಲದ ಮರದ ಕೆಳಗೆ ಕುಳಿತು ಗ್ರಾಹಕರಿಗಾಗಿ ಕಾಯುತ್ತಿದ್ದಾನೆ ಶಿವಮ್. ``ಯಾರಾದರೂ ಬಂದೇ ಬರುತ್ತಾರೆ...'', ಎಂದು ತನ್ನ ದಿನದ ಬಗ್ಗೆ ಆಶಾವಾದಿಯಾಗಿ ಹೇಳುತ್ತಿದ್ದಾನೆ ಆತ

ಜಾಮಾದ ಮನೆಯಲ್ಲಿರುವ ಶಿವಮ್ ನ ತಾಯಿ ಮತ್ತು ಆತನ 15 ರ ಹರೆಯದ ತಂಗಿ ಅಂಜು ಶಿವಮ್ ನನ್ನೇ ಅವಲಂಬಿಸಿದ್ದಾರೆ. ಅಂಜು 10 ನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮುಗಿಸಿ ಸದ್ಯ ಮನೆಯಲ್ಲಿ ತಾಯಿಗೆ ನೆರವಾಗುತ್ತಿದ್ದಾಳೆ. ಅಂಜು ಮದುವೆಯಾಗಿ ಹೋಗುವಾಗ ಅವಳಿಗೆ ಮೆಹಂದಿ ಹಾಕೋರ್ಯಾರು ಎಂದು ಕೇಳಿದರೆ ನಾನೇ ಎಂದು ಭ್ರಾತೃತ್ವದ ಹೆಮ್ಮೆಯಿಂದ ಹೇಳುತ್ತಾನೆ ಶಿವಮ್. ``ಅಥವಾ ನನ್ನ ಅಣ್ಣ ಹಾಕುತ್ತಾನೋ ಏನೋ. ಇನ್ಯಾರಿದ್ದಾರೆ ಹಾಕುವವರು?'', ಎನ್ನುವ ಮನೋಜ್ ಗೆ ಈ ಬಗ್ಗೆ ಕೊಂಚ ಭಿನ್ನ ಎಂಬಂತಹ ಯೋಚನೆಯಿದೆ. ``ನಾನು ಮನೆಯಲ್ಲಿದ್ದಾಗ (ಜೈಪುರ) ಮೆಹಂದಿ ಹಾಕುವುದೆಂದರೆ ನನಗಿಷ್ಟವಿಲ್ಲ. ಆದರೆ ಕೆಲವೊಮ್ಮೆ ಜನರು ಒತ್ತಾಯ ಮಾಡಿದರೆ ನಾನು ಮಾಡುವುದೂ ಉಂಟು'', ಎನ್ನುತ್ತಿದ್ದಾನೆ ಮನೋಜ್.

ಈ ಮಧ್ಯೆ ಶಿವನ ಸ್ಟಾಲ್ ಗೆ ಗ್ರಾಹಕರೊಬ್ಬರು ಬಂದಿದ್ದಾರೆ. ಆಕೆಯ ಸೋದರಿಯ ಮಗಳ ಮದುವೆಯ ಮೊದಲಿನ ಮೆಹಂದಿ ಸಮಾರಂಭಕ್ಕೆ ಮನೆಗೆ ಬಂದು ಮೆಹಂದಿ ಹಾಕಿಕೊಡಬೇಕಾಗಿ ಆಕೆ ಶಿವನಲ್ಲಿ ಕೇಳಿಕೊಳ್ಳುತ್ತಿದ್ದಾಳೆ. ``ಮೆಹಂದಿಗಾಗಿ ಮುಂಬೈಯ ಯಾವ ಮೂಲೆಗಾದರೂ ನೀವು ನಮ್ಮನ್ನು ಕರೆಯಬಹುದು. ಆದರೆ ಮುಂಬೈಯಿಂದ ಹೊರಹೋಗುವುದಾದರೆ ಹೆಚ್ಚುವರಿ ದರವನ್ನು ನೀವು ನಮಗೆ ಕೊಡಬೇಕಾಗುತ್ತದೆ'', ಎನ್ನುವ ಶಿವ ``ನಾವು ಎಲ್ಲಿಗೆ ಬೇಕಾದರೂ ಹೋಗುತ್ತೇವೆ'', ಎಂದು ಆಕೆಗೆ ಭರವಸೆಯನ್ನು ಕೊಡುತ್ತಿದ್ದಾನೆ.

Samyukta Shastri

ಸಂಯುಕ್ತಾ ಶಾಸ್ತ್ರಿ ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದಲ್ಲಿ ಕಂಟೆಂಟ್ ಕೊ-ಆರ್ಡಿನೇಟರ್ ಆಗಿದ್ದಾರೆ. ಇವರು ಸಿಂಬಯಾಸಿಸ್ ಸೆಂಟರ್ ಆಫ್ ಮೀಡಿಯಾ ಆಂಡ್ ಕಮ್ಯೂನಿಕೇಷನ್, ಪುಣೆಯಿಂದ ಮಾಧ್ಯಮ ವಿಷಯದಲ್ಲಿ ಪದವಿಯನ್ನೂ, ಎಸ್.ಎನ್.ಡಿ.ಟಿ ವಿಮೆನ್ಸ್ ಯೂನಿವರ್ಸಿಟಿ, ಮುಂಬೈಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದವರಾಗಿರುತ್ತಾರೆ.

Other stories by Samyukta Shastri
Translator : Prasad Naik

ಅನುವಾದಕರು: ಪ್ರಸ್ತುತ ಹರಿಯಾಣಾದ ಗುರುಗ್ರಾಮದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ರಿಪಬ್ಲಿಕ್ ಆಫ್ ಅಂಗೋಲಾ (ಆಫ್ರಿಕಾ) ದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯೊಂದರಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು, ಅಂಕಣಕಾರರು ಮತ್ತು "ಹಾಯ್ ಅಂಗೋಲಾ!" ಕೃತಿಯ ಲೇಖಕರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಇವರು ಬರೆದಿರುವ ಲೇಖನಗಳು ಜನಪ್ರಿಯ. ಇವರನ್ನು [email protected] ಇ-ಮೈಲ್ ಮೂಲಕ ಸಂಪರ್ಕಿಸಬಹುದು.

Other stories by Prasad Naik