ಇದು ಮೇ 1, ಕಾರ್ಮಿಕರ ದಿನ, ಆದರೆ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ದುಡಿಯುತ್ತಿರುವ ಕಾರ್ಮಿಕರು ಮಾರ್ಚ್ ತಿಂಗಳಿಂದ ತಮ್ಮ ವೇತನವನ್ನು ಸ್ವೀಕರಿಸಿಲ್ಲ ಮತ್ತು ಭಯದ ನೆರಳಿನಲ್ಲಿಯೇ ಬದುಕುತ್ತಿದ್ದಾರೆ. ಇಂದು ಬಿಡುಗಡೆಯಾಗುತ್ತಿರುವ 13 ನಿಮಿಷಗಳ ಸಾಕ್ಷ್ಯಚಿತ್ರ ‘ ಸಬೂತ್ / ಪುರಾವೆ’ , ಲಾಕ್ ಡೌನ್ ಸಂದರ್ಭದಲ್ಲಿನ ನಗರದ ಮೆಟ್ರೋ ಕಾರ್ಮಿಕರ ಪಯಣದ ಬಗ್ಗೆ ವಿವರಿಸುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಇದು ವಲಸೆ ಕಾರ್ಮಿಕರ ಜೀವನ ಮತ್ತು ಅವರ ಕೆಲಸದ ಪರಿಸ್ಥಿತಿಗಳ ಮೇಲೆ ಬೆಳಕು ಚೆಲ್ಲುತ್ತದೆ.

“ನನಗೆ ಹೆದರಿಕೆಯಾಗುತ್ತಿದೆ. ನಾವು ಮನೆಯಲ್ಲಿಯೇ ಸತ್ತರೆ ನಮಗೆ ಯಾವುದೇ ಸಮಸ್ಯೆ ಇಲ್ಲ. ಅದೇ ನಾವು ಇಲ್ಲಿಯೇ ಸತ್ತರೆ, ನಮ್ಮನ್ನು ನೋಡಿಕೊಳ್ಳಲು ಯಾರು ಇರುವುದಿಲ್ಲ" ಎಂದು ಕಾರ್ಮಿಕರೊಬ್ಬರು ಮಾರ್ಮಿಕವಾಗಿ ಹೇಳುತ್ತಾರೆ. ಅವರು ತಮ್ಮ ಹಳ್ಳಿಯನ್ನು ತೊರೆದು ಏಳು ತಿಂಗಳಾಗಿದೆ. ಲಾಕ್ ಡೌನ್‌ನಿಂದಾಗಿ ಅವರು ತಮ್ಮ ಕುಟುಂಬವನ್ನು ನೋಡಲು ಹಾತೊರೆಯುತ್ತಿದ್ದಾರೆ. ಅವರ ಬಹುತೇಕ ಸಹ ಕಾರ್ಮಿಕರು ಕೂಡ ಇದೇ ರೀತಿಯ ಯೋಚನೆಯಲ್ಲಿದ್ದಾರೆ. ಈಗ ತೆಳ್ಳನೆಯ ಟಿನ್‌ ಶೀಟ್‌ನಿಂದ ನಿರ್ಮಿಸಿರುವ ಮನೆಯಲ್ಲಿಯೇ 10-15 ಜನರು ಕೋಣೆಗಳನ್ನು ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರು ಅದರಲ್ಲಿ ದೈಹಿಕ ಅಂತರವನ್ನು ಸಹ ಪಾಲಿಸುವ ಪ್ರಯತ್ನ ಮಾಡುತ್ತಿದ್ದಾರೆ.

‘ಸಬೂತ್ / ಪುರಾವೆ’ ಸಾಕ್ಷ್ಯಚಿತ್ರವನ್ನು ವೀಕ್ಷಿಸಿ

ಕೊರೊನಾ ಸಾಂಕ್ರಾಮಿಕ ರೋಗ ಕೇವಲ ಕಾರ್ಮಿಕರ ಜೀವನದಲ್ಲಿ ಪ್ರವೇಶ ಮಾಡಿರುವುದಷ್ಟೇ ಅಲ್ಲ. ಅವರ ಮಾಲೀಕರ ಬೆಂಬಲದ ಕೊರತೆ, ಗುತ್ತಿಗೆದಾರರ ಶೋಷಣೆ ಮತ್ತು ಅಧಿಕಾರಿಗಳ ಸಂಪೂರ್ಣ ನಿರ್ಲಕ್ಷ್ಯರಿಂದಾಗಿ ಈಗ ಕಾರ್ಮಿಕರು ಅತಂತ್ರ ಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ.

ಮಾರ್ಚ್ 24ರಂದು ಕರ್ನಾಟಕದಲ್ಲಿ ಲಾಕ್ ಡೌನ್ ಘೋಷಿಸಿದಾಗ ಮೆಟ್ರೋ ರೈಲಿನ ಹಳದಿ ಮಾರ್ಗದ ನಿರ್ಮಾಣ (ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್) ರಾತ್ರೋರಾತ್ರಿ ಸ್ಥಗಿತಗೊಂಡಿತು.

ಗುತ್ತಿಗೆ ಕಾರ್ಮಿಕರಿಗೆ ಯಾವುದೇ ಮುನ್ಸೂಚನೆಯಿಲ್ಲದೆ ನಿರ್ಮಾಣ ಸ್ಥಳವನ್ನು ತೊರೆಯಲು ಆದೇಶಿಸಲಾಯಿತು. ಲಾಕ್‌ಡೌನ್‌ ಇದ್ದಿದ್ದರಿಂದಾಗಿ ಅವರಿಗೆ ತಮ್ಮ ಗ್ರಾಮಕ್ಕೆ ಮರಳಲು ಯಾವುದೇ ಮಾರ್ಗವಿಲ್ಲ. "ಈಗ 15 ದಿನಗಳು ಆಗುತ್ತಾ ಬಂದಿದೆ, ಆದರೆ ಒಮ್ಮೆಯೂ ಸಹ ಮಾಲಕರು ನಮ್ಮನ್ನು ವಿಚಾರಿಸಲು ಬಂದಿಲ್ಲ" ಎಂದು ಕಾರ್ಮಿಕರೊಬ್ಬರು ಹೇಳುತ್ತಾರೆ.

ಅತಂತ್ರ ಸ್ಥಿತಿಯಲ್ಲಿರುವ ವಲಸೆ ಕಾರ್ಮಿಕರಿಗೆ ತಮ್ಮ ಊರುಗಳಿಗೆ ಪ್ರಯಾಣಿಸಲು ಏಪ್ರಿಲ್ 29ರಂದು ಗೃಹ ಸಚಿವಾಲಯದ ಆದೇಶವನ್ನು ಹೊರಡಿಸಿತ್ತು, ಇದರನ್ವಯ ಕರ್ನಾಟಕ ರಾಜ್ಯ ಸರ್ಕಾರವು ಏಪ್ರಿಲ್ 30 ರಂದು ವಲಸೆ ಕಾರ್ಮಿಕರಿಗೆ ವ್ಯವಸ್ಥೆ ಮಾಡುವುದಾಗಿ ಘೋಷಿಸಿತು. ಆದರೆ ಇದುವರೆಗೂ ಯಾರು ಕೂಡ ಮೆಟ್ರೋ ಕಾರ್ಮಿಕರನ್ನು ಸಂಪರ್ಕಿಸಿಲ್ಲ.

ಈ ಸಾಕ್ಷ್ಯಚಿತ್ರವು ಕಾರ್ಮಿಕರಿಂದ ನಿರೂಪಿಸಲ್ಪಟ್ಟಿದೆ. ಕೊರೂನಾ ವೈರಸ್ ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅವರು ತಮ್ಮ ಮುಖಗಳನ್ನು ಮಾಸ್ಕ್‌ಗಳಿಂದ ಮುಚ್ಚುತ್ತಾರೆ. ಆದರೆ ಅವರ ಸಾಮಾಜಿಕ, ಆರ್ಥಿಕ ಮತ್ತು ಅವರ ವೈಯಕ್ತಿಕ ಬಿಕ್ಕಟ್ಟಿನ ಸ್ಥಿತಿ ಏನು ? ಅದರಿಂದ ಅವರನ್ನು ಯಾರು ರಕ್ಷಿಸುತ್ತಾರೆ? ಹೇಗೆ ಎನ್ನುವ ಪ್ರಶ್ನೆಯನ್ನು ಈ ಸಾಕ್ಷ್ಯಚಿತ್ರ ಎತ್ತುತ್ತದೆ.

ಯಶಸ್ವಿನಿ ಮತ್ತು ಏಕ್ತಾ ಇದನ್ನು ಬರೆದು ನಿರ್ದೇಶಿಸಿದ್ದಾರೆ.
ಸಾಕ್ಷ್ಯಚಿತ್ರದಲ್ಲಿ ಕಾಣಿಸಿಕೊಂಡವರು: ಬೆಂಗಳೂರು ಮೆಟ್ರೊದ ಕಾರ್ಮಿಕರು
ಛಾಯಾಗ್ರಹಣ ಮತ್ತು ಸಂಕಲನ: ಯಶಸ್ವಿನಿ


ಅನುವಾದ - ಎನ್ . ಮಂಜುನಾಥ್

Yashashwini & Ekta

ಯಶಸ್ವಿನಿಯವರು 2017ರ ಪರಿ ಫೆಲೋ ಮತ್ತು ಚಲನಚಿತ್ರ ನಿರ್ಮಾಪಕರು, ಅವರು ಇತ್ತೀಚೆಗೆ ಆಮ್ಸ್ಟರ್‌ಡ್ಯಾಮ್‌ನ ರಿಜ್‌ಕಾಕಾಡೆಮಿ ವ್ಯಾನ್ ಬೀಲ್ಡೆಂಡೆ ಕುನ್‌ಸ್ಟನ್‌ನಲ್ಲಿ ಆರ್ಟಿಸ್ಟ್‌ -ಇನ್-ರೆಸಿಡೆನ್ಸ್ ಪೂರ್ಣಗೊಳಿಸಿದ್ದಾರೆ. ಏಕ್ತಾ ಬೆಂಗಳೂರಿನ‌ ಚಿತ್ರ ತಯಾರಕರು ಮತ್ತು ಮಾರಾ ಎನ್ನುವ ಮಾಧ್ಯಮ ಮತ್ತು ಕಲಾ ಮಾಧ್ಯಮದ ಸಹ ಸಂಸ್ಥಾಪಕರು.

Other stories by Yashashwini & Ekta
Translator : N. Manjunath