ದೌರ್ಜನ್ಯಗಳು, ಯುದ್ಧಗಳು ಮತ್ತು ರಕ್ತಪಾತದ ನಮ್ಮ ಕಾಲದಲ್ಲಿ, ನಾವು ಆಗಾಗ್ಗೆ ವಿಶ್ವ ಶಾಂತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿರುತ್ತೇವೆ. ಆದರೆ ಸ್ಪರ್ಧೆ, ದುರಾಸೆ, ಪೈಪೋಟಿ, ದ್ವೇಷ ಮತ್ತು ಹಿಂಸೆಯನ್ನು ಆಧರಿಸಿದ ನಾಗರಿಕತೆಗಳು ಅದನ್ನು ಹೇಗೆ ಕಲ್ಪಿಸಿಕೊಳ್ಳಬಲ್ಲವು? ಈ ರೀತಿಯ ಸಂಸ್ಕೃತಿಯನ್ನು ನಾನು ಬೆಳೆದು ಬಂದ ಸ್ಥಳಗಳಲ್ಲಿ ನಾನು ನೋಡಿಲ್ಲ. ನಾವು ಆದಿವಾಸಿಗಳು ನಾಗರಿಕತೆಯ ಬಗ್ಗೆ ನಮ್ಮದೇ ಆದ ತಿಳುವಳಿಕೆಯನ್ನು ಹೊಂದಿದ್ದೇವೆ. ಸುಶಿಕ್ಷಿತ ಜನರು ರಾತ್ರಿಯಲ್ಲಿ ಸದ್ದಿಲ್ಲದೆ ಈ ಸ್ಥಳವನ್ನು ಕಸ ಹಾಕುವುದನ್ನು ಮತ್ತು ಅವಿದ್ಯಾವಂತ ವ್ಯಕ್ತಿಯು ಬೆಳಿಗ್ಗೆ ಅದನ್ನು ಸ್ವಚ್ಛಗೊಳಿಸುವುದನ್ನು ನಾವು ನಂಬುವುದಿಲ್ಲ. ನಾವು ಅದನ್ನು ನಾಗರಿಕತೆ ಎಂದು ಕರೆಯುವುದಿಲ್ಲ ಮತ್ತು ಅಂತಹ ಒಂದು ನಾಗರಿಕತೆಗೆ ಸೇರಲು ನಿರಾಕರಿಸುತ್ತೇವೆ. ನಾವು ನದಿಯ ದಡದಲ್ಲಿ ಮಲವಿಸರ್ಜನೆ ಮಾಡುವುದಿಲ್ಲ. ನಾವು ಮರಗಳಿಂದ ಅಕಾಲಿಕವಾಗಿ ಹಣ್ಣುಗಳನ್ನು ಕೀಳುವುದಿಲ್ಲ. ಹೋಲಿ ಹತ್ತಿರ ಬಂದಾಗ, ನಾವು ಭೂಮಿಯನ್ನು ಉಳುಮೆ ಮಾಡುವುದನ್ನು ನಿಲ್ಲಿಸುತ್ತೇವೆ. ನಾವು ನಮ್ಮ ಭೂಮಿಯನ್ನು ಶೋಷಿಸುವುದಿಲ್ಲ, ವರ್ಷವಿಡೀ ಭೂಮಿಯಿಂದ ನಿರಂತರ ಉತ್ಪಾದನೆಯನ್ನು ನಿರೀಕ್ಷಿಸುವುದಿಲ್ಲ. ನಾವು ಅದನ್ನು ಉಸಿರಾಡಲು ಬಿಡುತ್ತೇವೆ, ಪುನರುಜ್ಜೀವನಗೊಳ್ಳಲು ಸಮಯವನ್ನು ನೀಡುತ್ತೇವೆ. ನಾವು ಮಾನವ ಜೀವನವನ್ನು ಗೌರವಿಸುವಷ್ಟೇ ಪ್ರಕೃತಿಯನ್ನು ಗೌರವಿಸುವ ಮೂಲಕ ಬದುಕುತ್ತೇವೆ.

ಜಿತೇಂದ್ರ ವಾಸವ ದೆ ಹ್ವಾಲಿ ಭಿಲಿಯ ಭಾಷೆಯ ಲ್ಲಿ ತಮ್ಮ ಕವಿತೆ ಓದುವುದ ನ್ನು ಆಲಿಸಿ

ಪ್ರತಿಷ್ಠಾ ಪಾಂಡ್ಯ ಅವರು ಇಂಗ್ಲಿಷ್ ಭಾಷಾಂತರದಲ್ಲಿ ಕವಿತೆ ಓದುವುದನ್ನು ಆಲಿಸಿ

ಕಾರಣದಿಂದಲೇ ನಾವು ಕಾಡಿನಲ್ಲಿ ಉಳಿದುಬಿಟ್ಟೆವು

ಲಕ್ಷಗೃಹದಲ್ಲಿ ನೀವು ನಮ್ಮ ಪೂರ್ವಜರನ್ನು ಜೀವಂತವಾಗಿ ಸುಟ್ಟಿರಿ.
ನೀವು ಅವರ ಹೆಬ್ಬೆರಳುಗಳನ್ನು ಕತ್ತರಿಸಿದಿರಿ.
ಅವರನ್ನು ಅವರ ಸ್ವಂತ ಅಣ್ಣತಮ್ಮಂದಿರ ವಿರುದ್ಧ ನಿಲ್ಲಿಸಿದಿರಿ
ಬಡಿದಾಡಲು ಮತ್ತು ಕೊಲ್ಲಲು.
ನೀವು ಅವರು ತಮ್ಮದೇ ಮನೆಗಳನ್ನು ಸ್ಫೋಟಿಸುವಂತೆ ಮಾಡಿದಿರಿ.
ಇದಕ್ಕೆ ಕಾರಣ ನಿಮ್ಮ ಈ ರಕ್ತಸಿಕ್ತ ನಾಗರಿಕತೆ
ಮತ್ತು ಅದರ ಅನಾಗರಿಕ ಮುಖ
ನಾವು ಕಾಡಿನಿಂದ ನಾಡಿಗೆ ಬರಲಿಲ್ಲ.
ಯಾಕೆಂದರೆ,
ಎಲೆಯೊಂದು ಸರಾಗ ಕಳಚಿ
ಮಣ್ಣಿನೊಡನೆ ಬೆರೆಯುತ್ತದೆ
- ಇದು ಸಾವಿನ ಕುರಿತಾದ ನಮ್ಮ ಕಲ್ಪನೆ.
ನಾವು ಸ್ವರ್ಗದಲ್ಲಿ ದೇವತೆಗಳನ್ನು ಹುಡುಕುವುದಿಲ್ಲ,
ನಾವು ಅವರನ್ನು ಪ್ರಕೃತಿಯಲ್ಲಿ ಕಾಣುತ್ತೇವೆ.
ಸತ್ತವರ ಕುರಿತು ನಮಗೆ ಯಾವುದೇ ಕಲ್ಪನೆಯಿಲ್ಲ
ನಮ್ಮ ಜೀವನದಲ್ಲಿ. ಪ್ರಕೃತಿಯೇ ನಮ್ಮ ಸ್ವರ್ಗ.
ಅದರ ವಿರುದ್ಧ ಹೋಗುವುದು ನರಕ.
ಸ್ವಾತಂತ್ರ್ಯವೇ ನಮ್ಮ ಧರ್ಮ.
ನೀವು ಇದನ್ನು ಬಲೆಯೆಂದು ಕರೆಯುತ್ತೀರಿ, ಈ ಬಂಧನವನ್ನು ನಿಮ್ಮ ಧರ್ಮ ಎಂದು ಕರೆಯುತ್ತೀರಿ.
ಇದುವೇ ನಿಮ್ಮ ಸೋಗಲಾಡಿ ನಾಗರಿಕತೆ ಮತ್ತು ಅದರ ಅನಾಗರಿಕ ಮುಖ, ಸಾಹೇಬರೇ,
ಇದೆಲ್ಲ ತಿಳಿದಿದ್ದರಿಂದಲೇ ನಾವು ಕಾಡಿನಿಂದ ನಾಡಿಗೆ ಬರಲಿಲ್ಲ.

ಸಾಹೇಬರೇ, ನಮ್ಮದು ಭೂಮಿಯ ಸೇನೆ.
ನಮ್ಮ ಜೀವನವು ಕೇವಲ ನಮ್ಮ ಉಳಿವಿಗಾಗಿ ಅಲ್ಲ.
ನೀರು, ಕಾಡುಗಳು, ಭೂಮಿ, ಜನರು, ಪ್ರಾಣಿಗಳು,
ಅವುಗಳಿಂದಾಗಿ ನಾವು ಅಸ್ತಿತ್ವದಲ್ಲಿದ್ದೇವೆ.
ನೀವು ನಮ್ಮ ಪೂರ್ವಜರನ್ನು ಫಿರಂಗಿಗಳ ಬಾಯಿಗೆ ಕಟ್ಟಿದಿರಿ
ನೀವು ಅವರುಗಳನ್ನು ಮರಗಳಿಗೆ ನೇತುಹಾಕಿ ಕೆಳಗೆ ಬೆಂಕಿಯನ್ನು ಹಚ್ಚಿದಿರಿ
ಅವರ ಹತ್ಯಾಕಾಂಡ ನಡೆಸಲು ನೀವು ಅವರ ಸ್ವಂತ ಸೈನ್ಯಗಳನ್ನು ರಚಿಸಿದಿರಿ
ನೀವು ನಮ್ಮ ಸ್ವಾಭಾವಿಕ ಶಕ್ತಿಯನ್ನು ಕೊಂದು
ನಮ್ಮನ್ನು ಕಳ್ಳರು ಎಂದು ಕರೆದಿರಿ,
ದರೋಡೆಕೋರರು, ಹಂದಿಗಳು, ದಂಗೆಕೋರರು ಮತ್ತು ಇನ್ನೂ ಏನೇನೊ ಅಂದಿರಿ.
ನೀವು ಒಂದು ಕಾಗದದ ತುಂಡಿನಿಂದ ನಮ್ಮೆಲ್ಲರನ್ನೂ ಕೊಲ್ಲಬಹುದು
ಇದುವೇ ನಿಮ್ಮ ಸೋಗಲಾಡಿ ನಾಗರಿಕತೆ ಮತ್ತು ಅದರ ಅನಾಗರಿಕ ಮುಖ, ಸಾಹೇಬರೇ,
ಇದೆಲ್ಲ ತಿಳಿದಿದ್ದರಿಂದಲೇ ನಾವು ಕಾಡಿನಿಂದ ನಾಡಿಗೆ ಬರಲಿಲ್ಲ.

ನೀವು ನಿಮ್ಮ ಜೀವಂತ ಜಗತ್ತನ್ನು ಮಾರುಕಟ್ಟೆಯನ್ನಾಗಿ ಪರಿವರ್ತಿಸಿದ್ದೀರಿ.
ವಿದ್ಯಾವಂತರಾದ ನೀವು ನಿಮ್ಮ ಕಣ್ಣುಗಳನ್ನು ಕಳೆದುಕೊಂಡಿದ್ದೀರಿ, ಸಾಹೇಬರೇ...
ನಿಮ್ಮ ಶಿಕ್ಷಣವು ನಿಮ್ಮ ಆತ್ಮವನ್ನು ಮಾರಾಟ ಮಾಡಲು ಹೊರಟಿದೆ.
ಇದು ನಮ್ಮೆಲ್ಲರನ್ನೂ ಮಾರುಕಟ್ಟೆ ಚೌಕದಲ್ಲಿ ನಿಲ್ಲುವಂತೆ ಮಾಡುತ್ತಿದೆ
ಸಂಸ್ಕೃತಿ ಮತ್ತು ನಾಗರಿಕತೆಯ ಹೆಸರಿನಲ್ಲಿ.
ನೀವು ಹಿಂಸೆಯ ರಾಶಿಗಳನ್ನು ರಾಶಿ ಹಾಕಿದ್ದೀರಿ.
ಇದನ್ನೇ ನೀವು ಹೊಸ ಯುಗಕ್ಕೆ ನಾಂದಿ ಹಾಡುವಿರಿ ಎಂದು ಕರೆಯುತ್ತೀರಾ?
ಒಬ್ಬ ಮನುಷ್ಯ ಇನ್ನೊಬ್ಬನನ್ನು ದ್ವೇಷಿಸುವಲ್ಲಿ
ನೀವು ವಿಶ್ವ ಶಾಂತಿಯನ್ನು ತರುತ್ತೀರೆಂದು ಭಾವಿಸುತ್ತೀರಿ
ನಿಮ್ಮ ಬಂದೂಕುಗಳು ಮತ್ತು ಕ್ಷಿಪಣಿಗೆಳ ಬಳಸಿ ತರುವಿರಾ ಶಾಂತಿ?
ಇದುವೇ ನಿಮ್ಮ ಸೋಗಲಾಡಿ ನಾಗರಿಕತೆ ಮತ್ತು ಅದರ ಅನಾಗರಿಕ ಮುಖ, ಸಾಹೇಬರೇ,
ಇದೆಲ್ಲ ತಿಳಿದಿದ್ದರಿಂದಲೇ ನಾವು ಕಾಡಿನಿಂದ ನಾಡಿಗೆ ಬರಲಿಲ್ಲ.

ಅನುವಾದ : ಶಂಕರ. ಎನ್. ಕೆಂಚನೂರು

Poem and Text : Jitendra Vasava

ಜಿತೇಂದ್ರ ವಾಸವ ಗುಜರಾತಿನ ನರ್ಮದಾ ಜಿಲ್ಲೆಯ ಮಹುಪಾದ ಗ್ರಾಮದ ಕವಿಯಾಗಿದ್ದು, ಅವರು ದೆಹ್ವಾಲಿ ಭಿಲಿ ಭಾಷೆಯಲ್ಲಿ ಬರೆಯುತ್ತಾರೆ. ಅವರು ಆದಿವಾಸಿ ಸಾಹಿತ್ಯ ಅಕಾಡೆಮಿಯ (2014) ಸ್ಥಾಪಕ ಅಧ್ಯಕ್ಷರು ಮತ್ತು ಬುಡಕಟ್ಟು ಧ್ವನಿಗಳಿಗೆ ಮೀಸಲಾದ ಲಖರಾ ಎಂಬ ಕಾವ್ಯ ನಿಯತಕಾಲಿಕದ ಸಂಪಾದಕರಾಗಿದ್ದಾರೆ. ಆದಿವಾಸಿ ಮೌಖಿಕ ಸಾಹಿತ್ಯದ ಬಗ್ಗೆ ನಾಲ್ಕು ಪುಸ್ತಕಗಳನ್ನು ಸಹ ಪ್ರಕಟಿಸಿದ್ದಾರೆ. ಇವರ ಡಾಕ್ಟರೇಟ್ ಸಂಶೋಧನೆಯು ನರ್ಮದಾ ಜಿಲ್ಲೆಯ ಭಿಲ್ಲ ಜನರ ಮೌಖಿಕ ಜಾನಪದ ಕಥೆಗಳ ಸಾಂಸ್ಕೃತಿಕ ಮತ್ತು ಪೌರಾಣಿಕ ಅಂಶಗಳ ಮೇಲೆ ಕೇಂದ್ರೀಕರಿಸಿದೆ. ಪರಿಯಲ್ಲಿ ಪ್ರಕಟವಾಗುತ್ತಿರುವ ಅವರ ಕವಿತೆಗಳು ಅವರ ಮುಂಬರುವ ಮತ್ತು ಮೊದಲ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ.

Other stories by Jitendra Vasava
Painting : Labani Jangi

ಲಬಾನಿ ಜಂಗಿ 2020ರ ಪರಿ ಫೆಲೋ ಆಗಿದ್ದು, ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆ ಮೂಲದ ಅಭಿಜಾತ ಚಿತ್ರಕಲಾವಿದರು. ಅವರು ಕೋಲ್ಕತ್ತಾದ ಸಾಮಾಜಿಕ ವಿಜ್ಞಾನಗಳ ಅಧ್ಯಯನ ಕೇಂದ್ರದಲ್ಲಿ ಕಾರ್ಮಿಕ ವಲಸೆಯ ಕುರಿತು ಸಂಶೋಧನಾ ಅಧ್ಯಯನ ಮಾಡುತ್ತಿದ್ದಾರೆ.

Other stories by Labani Jangi
Editor : Pratishtha Pandya

ಪ್ರತಿಷ್ಠಾ ಪಾಂಡ್ಯ ಅವರು ಪರಿಯ ಹಿರಿಯ ಸಂಪಾದಕರು, ಇಲ್ಲಿ ಅವರು ಪರಿಯ ಸೃಜನಶೀಲ ಬರವಣಿಗೆ ವಿಭಾಗವನ್ನು ಮುನ್ನಡೆಸುತ್ತಾರೆ. ಅವರು ಪರಿಭಾಷಾ ತಂಡದ ಸದಸ್ಯರೂ ಹೌದು ಮತ್ತು ಗುಜರಾತಿ ಭಾಷೆಯಲ್ಲಿ ಲೇಖನಗಳನ್ನು ಅನುವಾದಿಸುತ್ತಾರೆ ಮತ್ತು ಸಂಪಾದಿಸುತ್ತಾರೆ. ಪ್ರತಿಷ್ಠಾ ಗುಜರಾತಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕೆಲಸ ಮಾಡುವ ಕವಿಯಾಗಿಯೂ ಗುರುತಿಸಿಕೊಂಡಿದ್ದು ಅವರ ಹಲವು ಕವಿತೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

Other stories by Pratishtha Pandya
Translator : Shankar N. Kenchanuru

ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N. Kenchanuru