ಹೆಚ್ಚೆಂದರೆ ಹದಿಮೂರು ವರ್ಷದ ವಿದ್ಯಾರ್ಥಿಗಳಿರಬಹುದು. ಇದ್ದ ಮಕ್ಕಳ ಗುಂಪಲ್ಲೇ ದೊಡ್ಡ ವಯಸ್ಸಿನ ಗುಂಪೆಂದರೆ ಹದಿಮೂರರದ್ದು. ಉಳಿದ ಮಕ್ಕಳ ಪ್ರಾಯ ಹತ್ತರಿಂದ ಹನ್ನೆರಡು. ಅತ್ಯಂತ ಬೋರ್ ಹೊಡೆಸುವ ಕಾರ್ಯಕ್ರಮಗಳು ಎಂದು ಒಂದಷ್ಟು ಅತ್ತಿ ಮಾಡುವುದಾದರೆ ಇಂಗ್ಲಿಷ್ ನ್ಯೂಸ್ ಚಾನೆಲ್ ಗಳ ಪೇನಲ್ ಡಿಸ್ಕಶನ್, ಅದನ್ನು ಬಿಟ್ಟರೆ ಶಾಲೆಗಳಲ್ಲಿ ನಡೆಸುವ ಚರ್ಚಾ ಸ್ಪರ್ಧೆ ಎಂದು ಸುಲಭವಾಗಿ ಹೇಳಿಬಿಡಬಹುದು. ಶಾಲಾ ಚರ್ಚಾ ಗೋಷ್ಠಿಗಳ ವಿಚಾರಕ್ಕೆ ಬಂದರೆ ಎಲ್ಲಾ ಕಡೆಯಲ್ಲೂ ಕಾಣಸಿಗುವುದು ಬಹುತೇಕ ಒಂದೇ ನೋಟ. ಹದಿನಾಲ್ಕರಿಂದ ಹದಿನಾರರ ವಯಸ್ಸಿನ ವಿದ್ಯಾರ್ಥಿಗಳು ``ಮಹಾತ್ಮಾಗಾಂಧಿ ಇಂದಿಗೂ ಪ್ರಸ್ತುತವೇ?'' ಎಂಬ ನೀರಸ ವಿಷಯವನ್ನು ಮುಂದಿಟ್ಟುಕೊಂಡು ಅದೇ ಹಳೆಯ, ಕ್ಲೀಷೆಯೆನಿಸಬಹುದಾದ, ಸತ್ವವಿಲ್ಲದ ಮಾತುಗಳನ್ನು ಯಾಂತ್ರಿಕವಾಗಿ ಆಡುತ್ತಾ ಕಾಟಾಚಾರದ ಚರ್ಚೆಯನ್ನು ಮಾಡುವುದು. ಅದರಲ್ಲೂ ಮುಖ್ಯ ಅತಿಥಿಯಾಗಿ ಇಂಥಾ ಗೋಷ್ಠಿಗೆ ಹೋದರಂತೂ ಭಾರವಾದ ನಿಟ್ಟುಸಿರಿಡುತ್ತಾ, ಈ ಡಿಬೇಟ್ ಮುಗಿಯುವವರೆಗೂ ಕೂರದೆ ಬೇರೆ ದಾರಿಯಿಲ್ಲ.

ಆದರೆ ಈ ಬಾರಿ ಮಾತ್ರ ನಾನು ಕುರ್ಚಿಯ ತುದಿಯಲ್ಲಿ ಕುಳಿತಿದ್ದೆ ಎಂದರೂ ಅತಿಶಯೋಕ್ತಿಯಾಗಲಿಕ್ಕಿಲ್ಲ. ಚರ್ಚೆಯು ಎಂದಿನಂತಿರದೆ ನಿಜಕ್ಕೂ ಆಸಕ್ತಿದಾಯಕವಾಗಿತ್ತು. ಸುಮಾರು ಹತ್ತರಿಂದ ಹದಿಮೂರರ ವಯಸ್ಸಿನ ವಿದ್ಯಾರ್ಥಿಗಳು ಸುಧಾರಿತ ತಳಿಯ ಬೆಳೆಗಳ ಬಗ್ಗೆ ಚರ್ಚಿಸುತ್ತಿದ್ದರು. ಪರ ಮತ್ತು ವಿರೋಧದ ಎರಡೂ ತಂಡಗಳಲ್ಲಿ ಉತ್ಸಾಹವು ಎದ್ದುಕಾಣುತ್ತಿತ್ತು. ತಮ್ಮ ನಿರರ್ಗಳವಾದ ಆಂಗ್ಲಭಾಷೆಯ ಮಾತುಗಳಲ್ಲಿ ಗಾಂಭೀರ್ಯ ಮತ್ತು ಉತ್ತಮ ಹಿಡಿತದ ಜೊತೆಗೇ ಆರಿಸಿಕೊಂಡ ವಿಷಯದ ಬಗ್ಗೆ ಈ ಚಿಣ್ಣರಲ್ಲಿ ಇದ್ದ ಜ್ಞಾನವು ಆಗಮಿಸಿದವರನ್ನು ಆಕರ್ಷಿಸುತ್ತಿತ್ತು. ಕೆಲವೊಮ್ಮೆ ವಾಗ್ವಾದಗಳ ಸರಣಿಯು ತೀವ್ರವಾದ ವಿಶ್ಲೇಷಣೆಯ ಕಡೆಗೆ ಬಾಗಿದರೆ, ಇನ್ನು ಹಲವು ಬಾರಿ ತೀಕ್ಷ್ಣ ಟೀಕೆಗಳೂ ಕಾಣಬರುತ್ತಿದ್ದವು. ಆದರೆ ಎಲ್ಲೂ ಚರ್ಚಾಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದ ವಿದ್ಯಾರ್ಥಿಗಳ ಮಾತುಗಳು ಸೌಜನ್ಯದ ಗೆರೆಯನ್ನು ದಾಟುತ್ತಿರಲಿಲ್ಲ ಎಂಬುದು ಗಮನಿಸಬೇಕಾದ ಅಂಶ. ಗೋಲ್ಡನ್ ರೈಸ್, ವಿಟಮಿನ್ ಕೊರತೆ, ಕಂಬಳಿಹುಳು ಮತ್ತು ಇತರ ಬೆಳೆ ಸಂಬಂಧಿ ಕೀಟ, ಪರಾಗಸ್ಪರ್ಶ, ಕಲುಷಿತ ಬೆಳೆ.. ಹೀಗೆ ಹಲವು ವಿಷಯಗಳನ್ನು ಹಲವು ಮಜಲುಗಳಲ್ಲಿ ಆರೋಗ್ಯಕರವಾಗಿ ವಿಶ್ಲೇಷಿಸುತ್ತಾ ಚರ್ಚೆಯು ಮುಂದುವರೆಯುತ್ತಿತ್ತು.


/static/media/uploads/Articles/P. Sainath/Vidya Vanam /rescaled/1024/01-p1030258.jpg

ವಾರ್ಷಿಕ ಪ್ರಾಜೆಕ್ಟ್ ದಿನದ ವಿಶೇಷ ಚರ್ಚಾಗೋಷ್ಠಿಯಲ್ಲಿ ಸುಧಾರಿತ ತಳಿಯ ಬೆಳೆಗಳ ಬಗ್ಗೆ ಚರ್ಚಿಸುತ್ತಿರುವ ವಿದ್ಯಾವನಂ ನ ವಿದ್ಯಾರ್ಥಿಗಳು


ಈ ಚರ್ಚೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಿದ್ದ ವಿದ್ಯಾರ್ಥಿನಿಯೂ ತನಗೆ ನೀಡಲಾಗಿದ್ದ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಳು. ಎರಡೂ ತಂಡಗಳ ಮಧ್ಯದಲ್ಲಿ ಕುಳಿತಿದ್ದ ಈಕೆಯ ಕೈ ಸ್ಟಾಪ್-ವಾಚ್ ಶೈಲಿಯ ಗಡಿಯಾರವನ್ನು ತಲುಪಿ ``ಟೈಂ'' ಎಂದು ಘೋಷಿಸುತ್ತಿದ್ದಂತೆಯೇ ವಾದಮಂಡನೆಗೆ ನೀಡಲಾಗಿದ್ದ ನಿಗದಿತ ಸಮಯದ ಅರಿವಿದ್ದ ತಂಡಗಳು ತಮ್ಮ ವಾದವನ್ನು ಅರ್ಧಕ್ಕೇ ನಿಲ್ಲಿಸುತ್ತಿದ್ದವು. ಒಟ್ಟಾರೆಯಾಗಿ ಈ ವಿದ್ಯಾರ್ಥಿಗಳ ಚರ್ಚೆಯು ಎಷ್ಟು ಸ್ವಾರಸ್ಯಕರವಾಗಿಯೂ, ಅಚ್ಚುಕಟ್ಟಾಗಿಯೂ ಮತ್ತು ಆರೋಗ್ಯಕರವಾಗಿಯೂ ಇದ್ದವೆಂದರೆ ನಾವೇ ನಂತರ ಪ್ರಿನ್ಸಿಪಾಲರ ಬಳಿ ತೆರಳಿ ಕೆಲವು ಟಿ.ವಿ. ನಿರೂಪಕರನ್ನು ಈ ವಿದ್ಯಾರ್ಥಿ ಶಿಬಿರಕ್ಕೆ ಕರೆಸಿ ಟ್ರೇನಿಂಗ್ ಕೊಡಿಸಿದರೆ ಒಳ್ಳೆಯದು ಎಂದೆವು.


/static/media/uploads/Articles/P. Sainath/Vidya Vanam /rescaled/1024/02-p1030262.jpg

ಚರ್ಚೆಯ ಸಮಯವನ್ನು ನಿಯಂತ್ರಿಸುತ್ತಿರುವ ವಿದ್ಯಾರ್ಥಿನಿ


ತಮಿಳುನಾಡಿನ ವಿದ್ಯಾವನಂ ಶಾಲೆಯ ವಾರ್ಷಿಕ `ಪ್ರಾಜೆಕ್ಟ್ ಡೇ' ಗೆ ಈ ಬಾರಿ ಆರಿಸಿಕೊಂಡಿದ್ದ ವಿಷಯ `ಅನ್ನ/ಭತ್ತ'. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬಂದು ನಾನು ಎಷ್ಟೋ ವಿಷಯಗಳನ್ನು ಕಲಿತುಕೊಂಡೆ. ೮ ರಿಂದ ೧೩ರ ವಯಸ್ಸಿನ ಮಕ್ಕಳು ಹಲವು ಹೊಸ ವಿಷಯಗಳನ್ನು ಬಿಡಿಸಿಟ್ಟರು. ಉದಾಹರಣೆಗೆ ಆಟೋಮೊಬೈಲ್ ಕ್ಷೇತ್ರದಲ್ಲಿ ಮನೆಮಾತಾಗಿರುವ `ಟೊಯೋಟಾ' ಎಂಬ ಶಬ್ದ ಕೃಷಿಯ ಮೂಲದಿಂದ ಬಂದ ವಿಚಾರವೇ ನನಗೆ ತಿಳಿದಿರಲಿಲ್ಲ. ಈ `ಟೊಯೋಟಾ' ದ ಮೂಲ ಶಬ್ದ `ಟೋಯೋಡಾ'ವಂತೆ. `ಟೊಯೋಡಾ' ಎಂದರೆ `ಫಲವತ್ತಾದ ಭತ್ತ ಗದ್ದೆ' ಅನ್ನೋ ಅರ್ಥವಿದೆಯಂತೆ. ಆಂಗ್ಲಭಾಷೆಯ ಅಕ್ಷರವಾದ `ಡಿ' ಯನ್ನು ತೆಗೆದು ಈ ಆಟೋಮೋಬೈಲ್ ದೈತ್ಯಕಂಪೆನಿಯು `ಟಿ'ಯನ್ನು ಅಂಟಿಸಿರಬಹುದು.


/static/media/uploads/Articles/P. Sainath/Vidya Vanam /rescaled/1024/03-poster_not_ps__toyota_img_0823.jpg

`ಟೊಯೋಟಾ' ಶಬ್ದದ ಅರ್ಥವನ್ನು ವಿವರಿಸುವ ಒಂದು ಕಲಾಕೃತಿ; ಪ್ರಾಜೆಕ್ಟ್ ದಿನದ ಪ್ರದರ್ಶನಗಳಲ್ಲಿಟ್ಟಿದ್ದ ಹಲವು ಚಿತ್ರಗಳಲ್ಲಿ ಇದೂ ಒಂದು


/static/media/uploads/Articles/P. Sainath/Vidya Vanam /rescaled/1024/04-poster_not_ps_honda_img_0822.jpg

`ಹೋಂಡಾ'' ಶಬ್ದವನ್ನು ವಿವರಿಸುವ ಇನ್ನೊಂದು ಕಲಾಕೃತಿ


ಕೃಷಿಯ ಹಿನ್ನೆಲೆಯಿಂದ ತಮ್ಮನ್ನು ಬೇರ್ಪಡಿಸಿಕೊಂಡು ವಿಭಿನ್ನವಾಗಿ ಕಾಣಲೂ ಹೀಗೆ ಮಾಡಿರಲೂಬಹುದು. ಹೀಗೆಯೇ ನನ್ನನ್ನು ಅಚ್ಚರಿಗೊಳಿಸಿದ ಮತ್ತೊಂದು ಪದವೆಂದರೆ- `ಹೋಂಡಾ'. `ಹೋಂಡಾ' ಎಂದರೆ `ಭತ್ತದ ಗದ್ದೆಯ ಮೂಲ' ಅನ್ನೋ ಅರ್ಥವೂ ಇದೆಯಂತೆ. ಇನ್ನು `ನಕಾಸೊನೆ' ಎಂಬ ಪದದ ಅರ್ಥ`ಮಧ್ಯಮ ಬೇರು', `ಫುಕುಡ' ಶಬ್ದದ ಅರ್ಥ `ಸಮೃದ್ಧ ಭತ್ತದ ಗದ್ದೆ' ಎಂದು ನಿಮಗೆ ಈ ಮೊದಲೇ ಗೊತ್ತಿದ್ದ ಪಕ್ಷದಲ್ಲಿ ನೀವು ಖಂಡಿತಾ ನನ್ನನ್ನು ಕ್ಷಮಿಸಬೇಕು. ಏಕೆಂದರೆ ನನಗಂತೂ ಈ ಮೊದಲು ಇದು ಗೊತ್ತಿರಲಿಲ್ಲ. ಆದರೆ ಈ ವಿಷಯಗಳೆಲ್ಲವೂ ಈ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಂಗೈ ಗೆರೆಯಷ್ಟೇ ಸ್ಪಷ್ಟವಿತ್ತು ಎನ್ನುವುದು ಪ್ರದರ್ಶನಕ್ಕಿಟ್ಟ ಚಿತ್ರ, ಭಿತ್ತಿಪತ್ರ ಮತ್ತು ಪ್ರತಿಕೃತಿಗಳಿಂದಲೇ ಗೊತ್ತಾಗಿ ಬಿಡುತ್ತಿತ್ತು.


/static/media/uploads/Articles/P. Sainath/Vidya Vanam /rescaled/1024/05-poster_not_ps_nakasone_img_0824.jpg

ಮಿಸ್ಟರ್ ನಕಾಸೊನೆ: ತನ್ನ ಹೆಸರಿನ ಅರ್ಥ `ಮಧ್ಯಮ ಬೇರು' ಎಂದು ಗೊತ್ತಿದ್ದ ಬುದ್ಧಿವಂತ, ವಿದ್ಯಾರ್ಥಿ- ಕಲಾವಿದನೊಬ್ಬನ ಕಲ್ಪನೆಯಲ್ಲಿ


ಹೀಗೆ ವಿದ್ಯಾರ್ಥಿಗಳೇ ತಮ್ಮ ಕೈಯಾರೆ ಬಿಡಿಸಿದ್ದ ಚಿತ್ರಗಳ ಪ್ರದರ್ಶನದ ಜೊತೆಗೇ, ವಾರ್ಷಿಕ ಪ್ರಾಜೆಕ್ಟ್ ದಿನದ ಅಂಗವಾಗಿ ನಡೆಸಲಾಗುತ್ತಿದ್ದ ಹಲವು ಕಾರ್ಯಕ್ರಮಗಳಲ್ಲಿ ವಿಶಿಷ್ಟವಾಗಿ ಕಂಡು ಬಂದ ಇನ್ನೊಂದು ಅಂಗವೆಂದರೆ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೇ ಬೆಳೆಸಿ, ಆರೈಕೆ ಮಾಡುತ್ತಿದ್ದ ಭತ್ತದ ಮಿನಿಗದ್ದೆ ವಿಹಾರ. ಪುಟಾಣಿ ಗೈಡ್ ಗಳ ನೆರವಿನಿಂದ ಈ ಮೈಕ್ರೋ ಗದ್ದೆಗಳಿಗೆ ಭೇಟಿ ನೀಡಿದ ನಾನು ಬೆರಗಾಗಿದ್ದೆ. ಈ ಪುಟ್ಟಗದ್ದೆಗಳಲ್ಲಿ ವಿದ್ಯಾರ್ಥಿಗಳೇ ವೈಜ್ಞಾನಿಕ ವಿಧಾನದಲ್ಲಿ ವಿವಿಧ ಬಗೆಯ ಭತ್ತಗಳನ್ನು ಬೆಳೆಯುತ್ತಿದ್ದರು. ಹಲವು ಬಗೆಯ ಭತ್ತದ ಬೆಳೆಯುವಿಕೆಯ ವಿವಿಧ ಹಂತಗಳನ್ನು ಶಿಕ್ಷಕರ ಉಪಸ್ಥಿತಿ ಮತ್ತು ಸಹಾಯವಿಲ್ಲದೆಯೇ ವಿವರಿಸುವ ಉತ್ಸಾಹಿ ಚಿಣ್ಣರ ಪರಿಯನ್ನು ಕಂಡು ನಾನು ಸಹಜವಾಗಿಯೇ ಉಲ್ಲಸಿತನಾಗಿದ್ದೆ.


/static/media/uploads/Articles/P. Sainath/Vidya Vanam /rescaled/1024/06-p1030354.jpg

ಶಾಲಾ ಆವರಣದ ಪುಟ್ಟ ಗದ್ದೆಗಳಲ್ಲಿ ಬೆಳೆಯಲಾಗುತ್ತಿರುವ ತರಹೇವಾರಿ ಭತ್ತಗಳ ಬಗ್ಗೆ ಮಾಹಿತಿಯನ್ನು ಕೊಡುತ್ತಿರುವ ವಿದ್ಯಾವನಂ ನ ಪುಟಾಣಿ ಗೈಡ್ ಗಳು


ವಿದ್ಯಾವನಂ ಶಾಲೆಗೆ `ಪ್ರಾಜೆಕ್ಟ್ ಡೇ' ಎಂದರೆ ಅದೊಂದು ಉತ್ಸವವೇ. ಬಡ ಆದಿವಾಸಿಗಳು ಮತ್ತು ದಲಿತರ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿರುವ ಈ ಶಾಲೆಯಲ್ಲಿ ಪ್ರಾಜೆಕ್ಟ್ ದಿನದಂದು ಮಕ್ಕಳ ಅನಕ್ಷರಸ್ಥ ಹೆತ್ತವರು, ಪೋಷಕರು ಪಠ್ಯಪುಸ್ತಕದ ಹಂಗಿಲ್ಲದೆ ವಿದ್ಯಾರ್ಜನೆ ಮಾಡುತ್ತಿರುವ ತಮ್ಮ ಮಕ್ಕಳ ಜ್ಞಾನವನ್ನು ಕಂಡು ಬೆರಗಾಗುತ್ತಾರೆ. ಹೆಸರಿಗೆ ತಕ್ಕಂತೆ `ವಿದ್ಯಾವನಂ' ಎಂದರೆ `ಕಲಿಕೆಯ ಕಾಡು / ಕಾಡಿನಲ್ಲಿ ಕಲಿಕೆ' ಮತ್ತು ಇಲ್ಲಿ ಅಕ್ಷರಶಃ ನಡೆಯುತ್ತಿರುವುದೂ ಇದೇ. ಪರ್ವತಶ್ರೇಣಿಯ ಆಚೆಗಿರುವ ತಮಿಳುನಾಡು-ಕೇರಳ ಸರಹದ್ದಿನ ಭಾಗದಲ್ಲಿ, ಕೊಯಮತ್ತೂರಿನಿಂದ ಸುಮಾರು ೩೦ ಕಿಲೋಮೀಟರ್ ದೂರದಲ್ಲಿರುವ ಅನೈಕಟ್ಟಿ ಎಂಬ ಪ್ರದೇಶದಲ್ಲಿ ಈ `ವಿದ್ಯಾವನಂ' ಶಾಲೆ ತಲೆ ಎತ್ತಿದೆ. ಶಾಲೆಗೆ ವಾಹನ ಇದೆ. ಆದರೂ ಸ್ಕೂಲ್ ಬಸ್ ಹಳ್ಳಿಯ ಮೂಲೆಮೂಲೆಗಳನ್ನು ತಲುಪುವುದಿಲ್ಲವಾದ್ದರಿಂದ ಹಲವು ಮಕ್ಕಳು ತಮ್ಮ ಸೈಕಲ್ಲಿನಲ್ಲೋ, ನಡೆದುಕೊಂಡೋ ವಿದ್ಯಾವನಂಗೆ ಬರುತ್ತಾರೆ. ಸುಮಾರು ಮುನ್ನೂರ ಐವತ್ತು ವಿದ್ಯಾರ್ಥಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಇರುಳ ಜನಾಂಗ, ಆದಿ ದ್ರಾವಿಡ ಮತ್ತು ಬಡ ಒ.ಬಿ.ಸಿ ಪಂಗಡದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಿದ್ಯಾವನಂ ಶಾಲೆಯ ಖ್ಯಾತಿ ಅಕ್ಕಪಕ್ಕದ ಹಳ್ಳಿಗಳಲ್ಲಿ ಯಾವ ಮಟ್ಟಿಗಿದೆಯೆಂದರೆ ಹಲವು ಇರುಳ ಜನಾಂಗದ ಕುಟುಂಬಗಳು ಆ ಶಾಲೆಯ ಅಕ್ಕಪಕ್ಕದ ಹಳ್ಳಿಗಳಿಗೇ ಬಂದು ನೆಲೆಸತೊಡಗಿದ್ದಾರಂತೆ.


/static/media/uploads/Articles/P. Sainath/Vidya Vanam /rescaled/1024/07-p1030235.jpg

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾದ ನೃತ್ಯಕಾರ್ಯಕ್ರಮಕ್ಕಾಗಿ ವೇದಿಕೆಗೆ ತೆರಳಲು ಸರದಿಯಲ್ಲಿ ಕಾಯುತ್ತಿರುವ ವಿದ್ಯಾರ್ಥಿನಿಯರು


ಕೆ.ಜಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಶಿಶುವಿಹಾರದಿಂದ ಮೊದಲುಗೊಂಡು ಎಂಟನೇ ತರಗತಿಯವರೆಗಿನ ಶಿಕ್ಷಣವನ್ನು ವಿದ್ಯಾವನಂ ಶಾಲೆಯು ದ್ವಿಭಾಷಾ ಮಾದರಿಯಲ್ಲಿ ನೀಡುತ್ತಿದೆ. ವಿದ್ಯಾವನಂ ಅನ್ನುವ ಈ ಕನಸಿನ ಶಾಲೆಯನ್ನು ಒಂಭತ್ತು ವರ್ಷಗಳ ಹಿಂದೆ ಸ್ಥಾಪಿಸಿದ ಪ್ರೇಮಾ ರಂಗಾಚಾರಿ ತಮ್ಮ ಶಾಲೆಯ ಬಗ್ಗೆ ಮಾತನಾಡುತ್ತಾ, ``ಸುಮಾರು ಎಂಟರ ವಯಸ್ಸಿನವರೆಗೂ ತಮಿಳು ಮತ್ತು ಆಂಗ್ಲಭಾಷೆಗಳೆರಡರಲ್ಲೂ ನಾವು ಶಿಕ್ಷಣವನ್ನು ನೀಡುತ್ತೇವೆ. ಆನಂತರ ಆಂಗ್ಲಭಾಷೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗುತ್ತದೆ. ಶಾಲೆಯನ್ನು ಆರಂಭಿಸುವ ದಿನಗಳಲ್ಲಿ ನಾನು ಇರುಳ ಜನಾಂಗದ ಕೆಲವು ಕುಟುಂಬಗಳ ಜೊತೆ ಮಾತನಾಡಿದೆ. ದುಬಾರಿ ಆಂಗ್ಲಮಾಧ್ಯಮದ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸಲಾಗದ ಕಾರಣ ಅವರು ಮೇಲ್ವರ್ಗದ ಮಕ್ಕಳಂತೆ  ಇಂಗ್ಲಿಷ್ ಕಲಿಯಲಾಗದೆ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂಬ ಮಾತು ಕೇಳಿ ಬಂತು. ಈ ಕಾರಣಕ್ಕಾಗಿಯೇ ಎಂಟರ ವಯಸ್ಸಿನ ನಂತರ ಇಂಗ್ಲಿಷ್ ಗೆ ವಿಶೇಷವಾದ ಪ್ರಾಧಾನ್ಯತೆಯನ್ನು ನೀಡಿದ್ದೇವೆ'' ಎನ್ನುತ್ತಾರೆ. ಇದು ಸತ್ಯವೂ ಹೌದು.  ತಮ್ಮ ಮಕ್ಕಳನ್ನು ದುಬಾರಿ ಕಾನ್ವೆಂಟುಗಳಿಗೆ ಕಳಿಸುವಷ್ಟು ಸ್ಥಿತಿವಂತರಲ್ಲ ಈ ಜನಾಂಗದ ಕುಟುಂಬಗಳು. ಸುಮಾರು ಶೇ ೫೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ದಲಿತ ಮತ್ತು ಆದಿವಾಸಿ ಜನಾಂಗದ ಮಕ್ಕಳಿಗೆ 'ವಿದ್ಯಾವನಂ' ಉಚಿತ ಶಿಕ್ಷಣವನ್ನು ನೀಡಿದರೆ, ಉಳಿದ ವರ್ಗದವರಿಂದ ಇನ್ನೂರು ರೂಪಾಯಿಗಳ ಅಲ್ಪಮೊತ್ತದ ಮಾಸಿಕ ಶುಲ್ಕವನ್ನು ತೆಗೆದುಕೊಂಡು ಅಕ್ಷರ ಯಜ್ಞವನ್ನು ನಡೆಸುತ್ತಿದೆ.

೭೩ ವರ್ಷದ ಪ್ರೇಮಾ ರಂಗಾಚಾರಿ ವಿದ್ಯಾವನಂ ಶಾಲೆಯ ಸ್ಥಾಪಕ ನಿರ್ದೇಶಕರು. ವಿದ್ಯಾರ್ಥಿಗಳಿಗೆಲ್ಲಾ ಈಕೆ ಪ್ರೀತಿಯ `ಪಾಟಿ' (ಅಜ್ಜಿ). ಇವರ ಮನೆಯ ನಾಮಫಲಕ ``ಪಾತಿವೀಡು'' (ಅಜ್ಜಿಮನೆ) ಎಂಬ ಹೆಸರಿನಲ್ಲಿದ್ದು ಬರುವವರಿಗೆ ಸ್ವಾಗತವನ್ನು ಕೋರುತ್ತದೆ. ಪ್ರೇಮಾ ರಂಗಾಚಾರಿಯವರು ನನ್ನನ್ನು ಶಾಲೆಯ ವಿಶೇಷ ವಾರ್ಷಿಕ ಉತ್ಸವವಾದ ಪ್ರಾಜೆಕ್ಟ್ ಡೇ ಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದರು. ಹಾಗೆಯೇ ವಿದ್ಯಾರ್ಥಿ, ಪೋಷಕರನ್ನು ಉದ್ದೇಶಿಸಿ ಒಂದೆರಡು ಮಾತುಗಳನ್ನಾಡಬೇಕೆಂದೂ, ಚಿತ್ರ ಪ್ರದರ್ಶನ ನೋಡಬೇಕೆಂದೂ ವಿನಂತಿಸಿದ್ದರು. ಆದರೆ ನಾನು ಮೊದಲಿಗೆ ಚಿತ್ರ ಪ್ರದರ್ಶನವನ್ನು ನೋಡಿ, ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳೇ ಆಯೋಜಿಸಿದ್ದ ವೈಜ್ಞಾನಿಕ ವಿಹಾರವನ್ನು ಮಾಡಿದ ನಂತರವೇ ಭಾಷಣ ಮಾಡುತ್ತೇನೆ ಎಂದು ಹಟ ಹಿಡಿದಿದ್ದೆ. ನನ್ನ ಅದೃಷ್ಟಕ್ಕೆ ಅವರು ಒಪ್ಪಿದ್ದರು ಕೂಡ. ಈ ವಿದ್ಯಾರ್ಥಿಗಳ ಬುದ್ಧಿಮಟ್ಟವನ್ನು ಮೊದಲೇ ಅರಿಯದೆ ಮೈಕು ಹಿಡಿದು ಭಾಷಣ ಮಾಡಹೊರಟಿದ್ದರೆ ಮುಖ್ಯ ಅತಿಥಿಯಾಗಿ ಬಂದಿದ್ದ ನಾನೇ ಖಂಡಿತಾ ಹಾಸ್ಯದ ವಸ್ತುವಾಗಿಬಿಡುತ್ತಿದ್ದೆ ಅನ್ನುವುದು ಒಪ್ಪಲೇಬೇಕಾದ ಸತ್ಯ.

ದೊಡ್ಡದಾದ ಹಾಲ್ ನ್ನು ಹದಿನೈದರಿಂದ ಇಪ್ಪತ್ತಕ್ಕೂ ಹೆಚ್ಚು ವಿಭಾಗಗಳಾಗಿ ವಿಂಗಡಿಸಿ ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದ ಪ್ರಾಜೆಕ್ಟ್ ದಿನದ ವಿಶೇಷ ಪ್ರದರ್ಶನವು ನನ್ನನ್ನು ನಿಜಕ್ಕೂ ಬದುಕಿಸಿತ್ತು. ಸಭಾಂಗಣದ ಮೇಜು, ಗೋಡೆ, ವೇದಿಕೆಗಳೆನ್ನದೆ ಮೂಲೆಮೂಲೆಯಲ್ಲೂ ತಮ್ಮ ವೈಜ್ಞಾನಿಕ ಪ್ರತಿಕೃತಿಗಳನ್ನು, ಕಲಾಕೃತಿಗಳನ್ನು ಹಿಡಿದುಕೊಂಡು, ಆಗಮಿಸಿದ ಜನಸಮೂಹವನ್ನು ಎದುರುಗೊಳ್ಳಲು ನಿಂತ ಉತ್ಸಾಹಿ ವಿದ್ಯಾರ್ಥಿಗಳ ಪುಟಾಣಿ ಸೈನ್ಯವೇ ಅಲ್ಲಿತ್ತು. ಆರಿಸಿಕೊಂಡ ಪ್ರತೀ ವಿಷಯದ ಬಗ್ಗೆ ಈ ಚಿಣ್ಣರಲ್ಲಿ ಕೇವಲ ಮಾಹಿತಿ ಮಾತ್ರವೇ ಅಲ್ಲ, ಜ್ಞಾನವೂ ತುಂಬಿಕೊಂಡಿತ್ತು ಎಂಬುದನ್ನು ಹೇಳಲೇಬೇಕು. ಒಂದು ಉದ್ದನೆಯ ಮೇಜಿನಲ್ಲಂತೂ ವಿವಿಧ ಮಾದರಿಯ ಭತ್ತಗಳನ್ನು ಆರಿಸಿ, ವಿವಿಧ ಬಗೆಗಳಲ್ಲಿ ಅವುಗಳನ್ನು ಕುದಿಸಿ, ಖಾದ್ಯವಾಗಿಸಿ ಬಂದವರಿಗೆಲ್ಲಾ ಬಾಯಿ ಚಪ್ಪರಿಸುವ ಅಪೂರ್ವ ಅವಕಾಶವನ್ನೂ ಸಮಾರಂಭವು ಒದಗಿಸಿಕೊಟ್ಟಿತ್ತು. ಈ ಬಗೆಬಗೆಯ ಭತ್ತದ ವಿಶಿಷ್ಟ ಖಾದ್ಯಗಳನ್ನು ತಯಾರಿಸಿದ್ದೂ ಈ ವಿದ್ಯಾರ್ಥಗಳೇ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೇ!


/static/media/uploads/Articles/P. Sainath/Vidya Vanam /rescaled/1024/08-p1030315.jpg

ಪ್ರಾಜೆಕ್ಟ್ ದಿನಕ್ಕಾಗಿ ವಿದ್ಯಾರ್ಥಿಗಳು ತಯಾರಿಸಿರುವ ಹಲವು ಪೋಸ್ಟರುಗಳಲ್ಲೊಂದು


ಈ ಪ್ರತಿಭಾವಂತ ಚಿಣ್ಣರನ್ನು ತಯಾರುಗೊಳಿಸಿದ ಅಪರೂಪದ ಶಿಕ್ಷಕರ ಬಗ್ಗೆಯೂ ಹೇಳಲೇಬೇಕು. ವಿದ್ಯಾವನಂ ಶಾಲೆಯಲ್ಲಿ ಅಧ್ಯಾಪನ ವೃತ್ತಿಯಲ್ಲಿ ತೊಡಗಿಸಿಕೊಂಡವರಲ್ಲಿ ಬಹುಪಾಲು ಸ್ಥಳೀಯರು ಮತ್ತು ಇರುಳ ಜನಾಂಗದವರು. ಪಶ್ಚಿಮ ಬಂಗಾಳದ ಖ್ಯಾತ ಶಾಂತಿನಿಕೇತನದ ಕೆಲ ಶಿಕ್ಷಕರು ಕಲೆಯ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ. ಅಲ್ಲದೆ ಇತರ ರಾಜ್ಯ ಮತ್ತು ದೇಶಗಳಿಂದ ಸ್ವಯಂಪ್ರೇರಿತರಾಗಿ ಬಂದು ಒಂದು ವರ್ಷದ ಮಟ್ಟಿಗೆ ಸ್ವಯಂಸೇವಕರಂತೆ ದುಡಿಯುತ್ತಿರುವ ಶಿಕ್ಷಕವರ್ಗವೂ ಇಲ್ಲಿದೆ. ಈ ಎಲ್ಲಾ ವಿಶಿಷ್ಟ ಪ್ರಯತ್ನಗಳು ವಿದ್ಯಾವನಂನ ವಿದ್ಯಾರ್ಥಿಗಳನ್ನು ಹೊಸ ಸಂಸ್ಕೃತಿಗೆ ಮೈಯೊಡ್ಡುವಂತೆ ಮಾಡುತ್ತಿವೆ. ಕೊಯಮತ್ತೂರಿನ ಆಚೆಗೆ ಕಾಲಿಡದ ಬಹುತೇಕ ವಿದ್ಯಾರ್ಥಿಗಳು ಭಾರತದ ವಿವಿಧ ಭಾಗದ ಜಾನಪದ ನೃತ್ಯಗಳನ್ನು ಮಾಡುತ್ತಾ ಕಣ್ಮನ ಸೆಳೆಯುವ ದೃಶ್ಯವನ್ನು ಇಲ್ಲಿ ಕಾಣಬಹುದು. ಮೊದಲ ನೋಟದಲ್ಲಿ ವಿದ್ಯಾವನಂ ನ ಈ ವಿಶಿಷ್ಟ ಪ್ರಾಜೆಕ್ಟ್ ದಿನವು ಸಾಮಾನ್ಯ ಶಾಲಾ ವಾರ್ಷಿಕೋತ್ಸವದಂತೆ ಕಂಡರೂ ಅದಕ್ಕಿಂತಲೂ ಹೆಚ್ಚಿನ ಹಲವು ಮಹತ್ವಗಳೂ ಇದಕ್ಕಿವೆ. ಈ ಪ್ರಾಜೆಕ್ಟ್  ದಿನದ ಸಮಾರಂಭದಲ್ಲಿ ಭಾಗವಹಿಸಿ, ತಮ್ಮ ಮಕ್ಕಳ ಪ್ರತಿಭೆಗಳನ್ನು ನೋಡಲು ಬಂದ ಹೆತ್ತವರು ಆ ದಿನ ಕೂಲಿಗೆ ಹೋಗದೆ ತಮ್ಮ ಒಂದು ದಿನದ ದಿನಗೂಲಿಯನ್ನು ಒತ್ತೆಯಿಟ್ಟು ಬಂದವರು. ಇವರನ್ನೇ ಜ್ಞಾಪಿಸಿಕೊಳ್ಳದಿದ್ದರೆ ಹೇಗೆ?


/static/media/uploads/Articles/P. Sainath/Vidya Vanam /rescaled/1024/09-p1030252.jpg

ವಾರ್ಷಿಕ ಪ್ರಾಜೆಕ್ಟ್ ದಿನದಂದು ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದ ಒಂದು ದೃಶ್ಯ


ವಿಚಿತ್ರ ಆದರೆ ನಂಬಲು ಖಂಡಿತಾ ಸಾಧ್ಯವಾಗದ ಸತ್ಯವೆಂದರೆ ಇಷ್ಟೆಲ್ಲಾ ಜನಪ್ರಿಯತೆಯನ್ನು ಪಡೆದುಕೊಂಡು, ಸದ್ದಿಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡುತ್ತಿರುವ ವಿದ್ಯಾವನಂ ಶಾಲೆಗೆ ಇನ್ನೂ ಶಿಕ್ಷಣ ಇಲಾಖೆಯಿಂದ ಯಾವ ಮಾನ್ಯತೆಯೂ ದೊರಕಿಲ್ಲ. ವಿದ್ಯಾವನಂ ಅನ್ನು ಸೆಂಟ್ರಲ್ ಬೋರ್ಡ್  ಆಫ್ ಸೆಕೆಂಡರಿ ಎಜುಕೇಷನ್ (ಸಿ.ಬಿ.ಎಸ್.ಸಿ) ಅಧೀನಕ್ಕೆ ತರಲು ಮಾಡಲಾದ ಪ್ರಯತ್ನಗಳೂ ಯಶಸ್ಸನ್ನು ಕಾಣಲಿಲ್ಲ. ವಿಪರ್ಯಾಸವೆಂದರೆ ವಿದ್ಯಾವನಂನ ಸ್ಥಾಪನೆಯಾಗಿ ಒಂಭತ್ತು ವರ್ಷಗಳೇ ಕಳೆದುಹೋದರೂ ತಮಿಳುನಾಡು ಸರ್ಕಾರದಿಂದ ವಿದ್ಯಾವನಂ ಸಂಸ್ಥೆಗೆ ಸಿಗಬೇಕಾಗಿರುವ ನೋ ಆಬ್ಜೆಕ್ಷನ್ ಸರ್ಟಿಫಿಕೇಟ್ (ಎನ್.ಒ.ಸಿ) ನ ಭಾಗ್ಯವು ಇನ್ನೂ ಒದಗಿ ಬಂದಿಲ್ಲ.

ಇದು ಕಾಡೊಂದರ ಮಡಿಲಿನಲ್ಲೇ ಇರುವ ಶಾಲೆಯೊಂದು ಸರ್ಕಾರದ ಬ್ಯುರಾಕ್ರೆಸಿ ಎನ್ನುವ ಗೊಂಡಾರಣ್ಯಕ್ಕೆ ತಲುಪಲು ಇನ್ನೂ ದಾರಿಯನ್ನು ಹುಡುಕುತ್ತಿರುವ ಪ್ರಹಸನದಂತೆ ಕಾಣುತ್ತದೆ.


/static/media/uploads/Articles/P. Sainath/Vidya Vanam /rescaled/1024/10-p1030233.jpg

ಭಾರತದ ವಿವಿಧ ಸಂಸ್ಕೃತಿಗಳನ್ನು ಬಿಂಬಿಸುತ್ತಿರುವ ಹಾಡೊಂದನ್ನು ಹಾಡುತ್ತಿರುವ ವಿದ್ಯಾರ್ಥಿಗಳು


ಅನುವಾದ : ಪ್ರಸ್ತುತ ರಿಪಬ್ಲಿಕ್ ಆಫ್ ಅಂಗೋಲಾದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು ಮತ್ತು ಅಂಕಣಕಾರರು.

ಲೇಖಕರ ಪರಿಚಯ : ಪಿ.ಸಾಯಿನಾಥ್ "ಪೀಪಲ್ಸ್ ಆರ್ಕೇವ್ ಆಫ್ ರೂರಲ್ ಇಂಡಿಯಾ''ದ ಸ್ಥಾಪಕ-ಸಂಪಾದಕರು. ಹಲವು ದಶಕಗಳಿಂದ ಗ್ರಾಮೀಣ ಭಾರತದ ವರದಿಗಾರಿಕೆಯನ್ನು ಮಾಡುತ್ತಾ ಬಂದಿದ್ದಾರೆ. ಇವರು ಬಹು ಚರ್ಚಿತ `ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' (ಕನ್ನಡಕ್ಕೆ ಜಿ.ಎನ್.ಮೋಹನ್ ಅನುವಾದಿಸಿರುವ ``ಬರ ಅಂದ್ರೆ ಎಲ್ಲರಿಗೂ ಇಷ್ಟ'') ಪುಸ್ತಕದ ಲೇಖಕರೂ ಹೌದು.

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath