ವಿಡಿಯೋ ನೋಡಿ: ಬಟಾಟೆಗೊಂದು ಹಾಡು

ಅವರ ಇಷ್ಟದ ವಿಷಯ ಯಾವುದೆಂದು ಕೇಳಿದ್ದಕ್ಕೆ “ಇಂಗ್ಲಿಷ್” ಒಕ್ಕೊರಲಿನಿಂದ ಮಕ್ಕಳು ಉತ್ತರಿಸಿದ್ದರು. ಭಾರತದ ಯಾವುದೇ ತರಗತಿಯಲ್ಲಿ ಕೇಳಬಹುದಾದ ಒಳ್ಳೆಯ ಪ್ರಶ್ನೆಯಲ್ಲ ಇದು. ಮೊದಲೆರಡು ಮಕ್ಕಳು “ಇಂಗ್ಲಿಷ್” ಅಂದರೆ ಉಳಿದ ಅಷ್ಟೂ ಮಕ್ಕಳು ಅದನ್ನೇ ಹೇಳುವುದು ಸಾಮಾನ್ಯ. ಮೊದಲ ಇಬ್ಬರು ಉತ್ತರ ಕೊಟ್ಟು ಅವರನ್ನು ಶಿಕ್ಷಿಸದಿದ್ದಲ್ಲಿ ಉಳಿದವರೆಲ್ಲ ಅದನ್ನೇ ಹೇಳುವುದು ಶತಸ್ಸಿದ್ಧ.

ಇದು ಯಾವುದೋ ಒಂದು  ಸ್ಥಳವಲ್ಲ. ಏಕ-ಶಿಕ್ಷಕ ವ್ಯವಸ್ಥೆಯ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯಿಂದ ಅಸ್ತಿತ್ವಕ್ಕೆ ಬಂದ ಎಡಲಿಪ್ಪಾರದ ಈ ಶಾಲೆ ಕೇರಳದ ಕುಗ್ರಾಮ ಮತ್ತು ಏಕೈಕ ಬುಡಕಟ್ಟು ಪಂಚಾಯತ್ ಆಗಿರುವ ಎಡಮಲಕುಡಿ ವ್ಯಾಪ್ತಿಯಲ್ಲಿದೆ. ಶಾಲೆಯ ಹೊರಗೆಲ್ಲೂ ನಿಮಗೆ ಇಂಗ್ಲಿಷ್ ಮಾತಾಡುವುದು ಕೇಳಿಸುವುದಿಲ್ಲ. ಈ ಭಾಷೆಯಲ್ಲಿ ಒಂದೇ ಒಂದು ಬೋರ್ಡ್, ಪೋಸ್ಟರ್ ಅಥವಾ ಫಲಕ ಇಲ್ಲಿಲ್ಲ. ಆದರೂ ಮಕ್ಕಳು ಇಂಗ್ಲಿಷ್ ತಮ್ಮಿಷ್ಟದ ವಿಷಯ ಅಂತಾರೆ. ಬೇರೆ ಒಂದಷ್ಟು ಶಾಲೆಗಳ ಹಾಗೆಯೇ ಇಡುಕ್ಕಿ ಜಿಲ್ಲೆಯ ಈ ಶಾಲೆಯಲ್ಲೂ ಒಂದರಿಂದ ನಾಲ್ಕನೇ ತರಗತಿವರೆಗಿನ ಕ್ಲಾಸುಗಳನ್ನು ಒಂದು ಕೋಣೆಯಲ್ಲಿ ಒಟ್ಟಿಗೇ ನಡೆಸಲಾಗುತ್ತದೆ. ಉಸ್ತುವಾರಿ ಹೊಣೆ ಹೊತ್ತಿರುವಾಕೆ ಅಸಾಧ್ಯ ಪರಿಸ್ಥಿತಿಗಳ ಜತೆಗೆ ಏಗುತ್ತ, ಅತೀ ಕೆಲಸದೊತ್ತಡಗಳ ನಡುವೆ, ಕನಿಷ್ಟ ವೇತನ ಪಡೆಯುತ್ತಿದ್ದರೂ ತನ್ನ ಜನಗಳ ಒಳಿತೊಂದೇ ಧ್ಯೇಯವೆಂದು ನಂಬಿದ ಅದ್ಭುತ ಶಿಕ್ಷಕಿ.

ಅಲ್ಲೂ ಒಬ್ಬ ಭಿನ್ನಮತೀಯನಿದ್ದ!! “ಗಣಿತ” ಧೈರ್ಯವಾಗಿ ಎದ್ದು ನಿಂತು ಹೇಳಿದ. “ನಿನ್ನ ಗಣಿತ ಪ್ರದರ್ಶಿಸು” ಹುಡುಗನಿಗೆ ಸವಾಲೆಸೆಯುವಂತೆ ಕೇಳಿದ್ದೆವು. ತನ್ನ ಪುಟಾಣಿ ದೇಹವನ್ನ ಹುರಿಗೊಳಿಸುತ್ತ ಎದ್ದು ನಿಂತವನು ಒಂದರಿಂದ ಹನ್ನೆರಡರ ವರೆಗಿನ ಮಗ್ಗಿಯನ್ನು ಅಡೆತಡೆಯಿಲ್ಲದೇ ಒಂದೇ ಉಸಿರಿನಲ್ಲಿ ಹೇಳಿದ್ದ. ನಾವದನ್ನು ನಿಲ್ಲಿಸಲು ಹೇಳುವಷ್ಟರಲ್ಲಿ ಅವನಾಗಲೇ ಎರಡನೇ ಸುತ್ತು ತಲುಪಿದ್ದ.

The singing quintet – also clearly the ‘intellectual elite’ of classes 1-4
PHOTO • P. Sainath

೧ ರಿಂದ ೪ ನೆ ತರಗತಿಯವರೆಗಿನ ವಿದ್ಯಾರ್ಥಿಗಳು. ಇವರು ಬುದ್ದಿವಂತ ಹಾಡುವ ವಿದ್ಯಾರ್ಥಿಗಳು

ತರಗತಿಯ ಗಣ್ಯರಂತೆಯೂ ಬುದ್ಧಿವಂತರಂತೆಯೂ ಇದ್ದ ಐದು ಹೆಣ್ಣುಮಕ್ಕಳು ಕುಳಿತ ಶಿಕ್ಷಕಿಯ ಹತ್ತಿರ ಇದ್ದ ಪ್ರತ್ಯೇಕವಾದ ಬೆಂಚಿನ ಕಡೆ ನಮ್ಮ ಗಮನ ಹರಿದಿತ್ತು. ಅವರಿಗಾಗಿ ಮಾಡಲ್ಪಟ್ಟ ವಿಶೇಷ ಆಸನ ವ್ಯವಸ್ಥೆಯೇ ಇದನ್ನು ಹೇಳಿತ್ತು. ಹಿರಿಯವಳಿಗೆ ಸುಮಾರು 11 ವರ್ಷವಿರಬಹುದು. ಉಳಿದವರಿಗೆ ಒಂಭತ್ತು ಅಥವಾ ಅದಕ್ಕಿಂತ ಕಡಿಮೆ. ಆ ಹುಡುಗ ತನ್ನ ಮಾತನ್ನು ಸಮರ್ಥಿಸಿದ ಎಂದು ಒಪ್ಪಿಕೊಂಡೆವು.  ಈಗ ಇಂಗ್ಲಿಷ್ ತಮ್ಮಿಷ್ಟದ ವಿಷಯ ಅಂದಿದ್ದನ್ನ ಸಮರ್ಥಿಸಿಕೊಳ್ಳುವ ಸರದಿ ಇವರದು. ಈಗ ಇಂಗ್ಲಿಷನ್ನು, ಹೆಣ್ಣುಮಕ್ಕಳ ದನಿಯನ್ನೂ ಕೇಳೋಣ ಬನ್ನಿ.

ಎಂಟು ಜನ ಅಪರಿಚಿತರು ಅವರ ತರಗತಿಯನ್ನು ಆಕ್ರಮಿಸಿದ್ದಕ್ಕೇನೋ, ಅವರು ನಾಚಿಕೊಂಡರು. ಶಿಕ್ಷಕಿ ಎಸ್. ವಿಜಯಲಕ್ಷ್ಮಿ ಹೇಳಿದರು “ಮಕ್ಕಳೇ ಅವರಿಗೋಸ್ಕರ ಹಾಡಿ”. ಅವರು ಹಾಡಿದರು. ಆದಿವಾಸಿಗಳು ಹಾಡುತ್ತಾರೆಂದು ನಮಗೆಲ್ಲ ಗೊತ್ತಿತ್ತು. ಈ ಐವರು ಮುತ್ತವಾನ್ ಹೆಣ್ಣುಮಕ್ಕಳು ಸುಶ್ರಾವ್ಯವಾಗಿ ಹಾಡಿದರು. ಎಲ್ಲೂ ಉಚ್ಛಾರ ತಪ್ಪಿಲ್ಲದೇ ರಾಗಬದ್ಧವಾಗಿತ್ತು. ಆದರೂ ನಾಚಿಕೆ ಮಾತ್ರ ಹಾಗೇ ಇತ್ತು. ಪುಟಾಣಿ ವೈದೇಹಿ ಪ್ರೇಕ್ಷಕರನ್ನು ನೋಡುವ ಬದಲು ತಲೆ ಬಗ್ಗಿಸಿ ಮೇಜನ್ನೇ ನೋಡುತ್ತಿದ್ದಳು. ಆದರೂ ಸೊಗಸಾಗಿತ್ತು, ಸಾಹಿತ್ಯವಂತೂ ಬಿಡಿ, ವಿಶಿಷ್ಟವಾಗಿತ್ತು.

ಅದು ಆಲೂಗಡ್ಡೆಗೊಂದು ಪ್ರಗಾಥ. ಇಡುಕ್ಕಿ ಬೆಟ್ಟದ ಕೆಲವು ಕಡೆ ಅವರು ಮರಗೆಣಸು ಬೆಳೆಯುತ್ತಾರೆ. ಆದರೆ ಎಡಲಿಪ್ಪಾರದಿಂದ ನೂರು ಕಿಲೋಮೀಟರ್ ವ್ಯಾಪ್ತಿಯಲ್ಲೂ ಆಲೂಗಡ್ಡೆ ಬೆಳೆಯುವಂತೆ ಕಾಣೆ. ಇರಲಿ, ನೀವದನ್ನು ನಿಮ್ಮಷ್ಟಕ್ಕೆ ಆಲಿಸಬಹುದು.

ಆಲೂಗಡ್ಡೆ , ಆಲೂಗಡ್ಡೆ
ಓ ನನ್ನ ಪ್ರೀತಿಯ ಆಲೂಗಡ್ಡೆ
ನನಗೆ ಇಷ್ಟ ಆಲೂಗಡ್ಡೆ
ನಿನಗೆ ಇಷ್ಟ ಆಲೂಗಡ್ಡೆ
ನಮಗೆ ಇಷ್ಟ ಆಲೂಗಡ್ಡೆ
ಆಲೂಗಡ್ಡೆ, ಆಲೂಗಡ್ಡೆ, ಆಲೂಗಡ್ಡೆ

ವಿನೀತ ಗೆಡ್ಡೆಯೊಂದನ್ನ ಆಕಾಶಕ್ಕೇರಿಸುತ್ತ ಅದನ್ನು ಚೆಂದವಾಗಿ ಹಾಡಿದ್ದರೂ ಅವರು ಯಾವತ್ತಾದರೂ ತಿಂದಿರೋದು ಸಂಶಯವೇ. (ಒಂದು ವೇಳೆ ನಮ್ಮ ಎಣಿಕೆ ತಪ್ಪಿದ್ದರೂ ಇರಬಹುದು. ಮುನ್ನಾರ್ ಬಳಿಯ ಒಂದೆರಡು ಗ್ರಾಮಗಳಲ್ಲಿ ಆಲೂಗಡ್ಡೆ ಬೆಳೆಯಲು ಆರಂಭಿಸಿದ್ದರೆಂದು ಕೇಳಿದ ನೆನಪು. ಅವು ಸುಮಾರು 50 ಕಿಲೋಮೀಟರ್ ದೂರವಷ್ಟೇ) ಆದರೆ ಸಾಹಿತ್ಯ ನಮ್ಮೊಳಗಿಳಿದು ಉಳಿದಿತ್ತು. ವಾರಗಳ ನಂತರವೂ ನಾವೆಲ್ಲ ಅದನ್ನು ಗುನುಗುನಿಸುತ್ತಿದ್ದೆವು. ಆಲೂಗಡ್ಡೆ ನಮಗೆ ಎಂಟು ಮಂದಿಗೂ ಇಷ್ಟ ಅನ್ನೋ ಕಾರಣಕ್ಕೆ ನಾವದನ್ನು ಮೆಚ್ಚಿದ್ದಲ್ಲ, ವಿಲಕ್ಷಣವಾದ ಸಾಹಿತ್ಯವನ್ನವರು ಗಂಭೀರವಾಗಿ ಪ್ರಸ್ತುತಪಡಿಸಿ ನಮ್ಮನ್ನು ಮರುಳು ಮಾಡಿದ್ದರು. ಜತೆಗೇ ಅವರ ಆಕರ್ಷಕ ರೀತಿಗೆ ಮಾರು ಹೋಗಿದ್ದೆವು.

S. Vijaylaxmi – teacher extraordinary
PHOTO • P. Sainath
The students and teacher Vijaylaxmi just outside their single-classroom school
PHOTO • P. Sainath

ಶಾಲೆಯ ವಿಶೇಷ ಕಾಳಜಿಯ ಅಧ್ಯಾಪಕಿ- ಎಸ್ ವಿಜಯಲಕ್ಶ್ಮಿ. ತಮ್ಮ ಏಕ ಕೊಠಡಿ ಶಾಲೆಯ ಹೊರಗೆ ವಿದ್ಯಾರ್ಥಿಗಳೊಂದಿಗೆ ಅಧ್ಯಾಪಕಿ ವಿಜಯಲಕ್ಷ್ಮಿ

ಮತ್ತೆ ಕ್ಲಾಸ್ ರೂಮಿನ ಕಡೆ ಬರೋದಾದರೆ, ಸಾಕಷ್ಟು ಹೊಗಳಿ ವಿಡಿಯೋ ಕ್ಯಾಮರಾ ಮುಂದೆ ಮತ್ತೆ ಹಾಡಲು ಹುಡುಗಿಯರನ್ನು ಅನುನಯಿಸಿ ಹುಡುಗರ ಕಡೆ ತಿರುಗಿದೆವು. ಈ ಮಟ್ಟದ ಹಾಡುಗಾರಿಕೆ ನಿಮ್ಮಿಂದ ಸಾಧ್ಯವೇ ಅನ್ನೋ ರೀತಿಯಲ್ಲಿ ಹುಡುಗರತ್ತ ನೋಡಿದೆವು. ಅವರೂ ಸವಾಲು ಸ್ವೀಕರಿಸಿದರು. ಆದರೆ ಅವರದು ಹಾಡಿಗಿಂತಲೂ ಬಾಯಿಪಾಠದಂತಿತ್ತು. ಎಷ್ಟೇ ಉತ್ತಮವಾಗಿದ್ದರೂ ಪ್ರಸ್ತುತಿಯಲ್ಲಿ ಹುಡುಗಿಯರಿಗೆ ಸಮನಾಗಿರಲಿಲ್ಲ. ಆದರೆ ಅವರ ಶಬ್ದಗಳು ಬಹಳ ವಿಚಿತ್ರವಾಗಿದ್ದವು.

ಇದು ‘ವೈದ್ಯರಿಗೊಂದು ಪ್ರಾರ್ಥನೆ’ಯಾಗಿತ್ತು. ಇಂಥದ್ದನ್ನು ಭಾರತದಲ್ಲಿ ಮಾತ್ರ ಬರೆಯಲು ಉರು ಹೊಡೆಯಲು ಮತ್ತು ಹಾಡಲು ಸಾಧ್ಯ. ಅಷ್ಟೂ ಶಬ್ದಗಳನ್ನು ಹೇಳಿ ನಾನು ನಿಮ್ಮ ಭಾವನೆಗಳನ್ನು ಹಾಳು ಮಾಡುವುದಿಲ್ಲ – ಅವರ ಡಾಕ್ಟರ್ ವಿಡಿಯೋ ಕೂಡ ಈ ಬರಹದ ಜತೆ ಹಾಕುವುದಿಲ್ಲ. ಅದನ್ನೆಲ್ಲ ಹಾಕುವುದು ಹೆಚ್ಚಾದೀತು. ಮತ್ತಿದು ಈ ಪಂಚ ಕನ್ಯೆಯರಾದ ಅಂಶೀಲಾ ದೇವಿ, ಉಮಾ ದೇವಿ, ಕಲ್ಪನಾ, ವೈದೇಹಿ ಮತ್ತು ಜಾಸ್ಮಿನ್ ಇವರಿಗೆ. ಏನೇ ಇರಲಿ ಭಾರತದಲ್ಲಿ ಮಾತ್ರ ಇರಬಹುದಾದ ‘ವೈದ್ಯರಿಗೊಂದು ಪ್ರಾರ್ಥನೆ’ಯ ಸಾಲುಗಳನ್ನು ಹೇಳಿಯೇ ಬಿಡುತ್ತೇನೆ. “ನನ್ನ ಹೊಟ್ಟೆ ನೋಯುತ್ತಿದೆ ಡಾಕ್ಟರ್ , ನನಗೆ ಆಪರೇಷನ್ ಆಗಬೇಕು, ಆಪರೇಷನ್, ಆಪರೇಷನ್, ಆಪರೇಷನ್’ ಅದು ಬೇರೆಯದೇ ಹಾಡು. ಆ ವಿಡಿಯೋಗೆ ಇನ್ನೊಂದು ದಿನ ಕಾಯಬೇಕು.

ಸದ್ಯಕ್ಕೆ ಆಲೂಗಡ್ಡೆ ಹಾಡಿನ ಸಿಪ್ಪೆ ಬಿಡಿಸುತ್ತಿರಿ.

ಲೇಖನ ಮೊದಲು psainath.org ನಲ್ಲಿ ಜೂನ್ 26, 2014 ರಲ್ಲಿ ಪ್ರಕಟವಾಗಿತ್ತು.

ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.

Other stories by P. Sainath
Translator : Shama Nandibetta

This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services. ಪಿ.ಸಾಯಿನಾಥ್ ``ಪೀಪಲ್ಸ್ ಆರ್ಕೇವ್ ಆಫ್ ರೂರಲ್ ಇಂಡಿಯಾ''ದ ಸ್ಥಾಪಕ-ಸಂಪಾದಕರು. ಹಲವು ದಶಕಗಳಿಂದ ಗ್ರಾಮೀಣ ಭಾರತದ ವರದಿಗಾರಿಕೆಯನ್ನು ಮಾಡುತ್ತಾ ಬಂದಿರುವ ಹಿರಿಯ ಪತ್ರಕರ್ತರಾಗಿರುವ ಇವರು ಬಲುಚರ್ಚಿತ ‘ಎವೆರಿಬಡಿ ಲವ್ಸ್ ಗುಡ್ ಡ್ರಾಟ್' (ಕನ್ನಡಕ್ಕೆ ಜಿ ಎನ್ ಮೋಹನ್ ಅನುವಾದಿಸಿದ `ಬರ ಅಂದ್ರೆ ಎಲ್ಲರಿಗೂ ಇಷ್ಟ') ಪುಸ್ತಕದ ಲೇಖಕರೂ ಹೌದು.

Other stories by Shama Nandibetta