ಸೆಪ್ಟೆಂಬರ್‌ನಲ್ಲಿ ಸಂಸತ್ತಿನ ಮೂಲಕ ಕೇಂದ್ರವು (ಕೃಷಿಯು ರಾಜ್ಯ ವಿಷಯವಾಗಿದ್ದರೂ) ಬಲವಂತವಾಗಿ ಹೇರಿದ ಶಾಸನಗಳ ವಿರುದ್ಧ ಕೋಪಗೊಂಡ ರೈತರ ಪ್ರತಿಭಟನೆಗಳು ದೇಶಾದ್ಯಂತ ಕವಿಗಳು ಮತ್ತು ಕಲಾವಿದರನ್ನು ತಟ್ಟಿತು. ಈ ಸುಂದರವಾದ ಕವಿತೆಯು ಪಂಜಾಬ್‌ನಿಂದ ಬಂದಿದೆ, ಇದು ಸಣ್ಣ ಕೃಷಿಕನೊಬ್ಬನ ದೈನಂದಿನ ಹೋರಾಟಗಳ ಬಗ್ಗೆ ಕವಿಯ ದುಃಖದ ಪ್ರತಿಸ್ಪಂದನೆಯಾಗಿ ಹುಟ್ಟಿದೆ. ಕವಿತೆಯಿಂದ ಪ್ರೇರಿತವಾದ ಸುಂದರವಾದ ಚಿತ್ರಗಳು ಬೆಂಗಳೂರಿನ ಅತ್ಯಂತ ಸಣ್ಣ ವಯಸ್ಸಿನ ಕಲಾವಿದೆಯೊಬ್ಬರಿಂದ ಚಿತ್ರಿತಗೊಂಡಿವೆ.

ಸುಧನ್ವ ದೇಶಪಾಂಡೆಯವರ ದನಿಯಲ್ಲಿ ಈ ಕವಿತೆಯ ಇಂಗ್ಲೀಷ್‌ ವಾಚನವನ್ನು ಆಲಿಸಿ

ಇಲ್ಲಸ್ಟ್ರೇಷನ್:‌ ಅಂತರಾ ರಾಮನ್

ರೈತನೊಬ್ಬನ ಕತೆ

ಉತ್ತು, ಬಿತ್ತು, ಕಟಾವು ಮಾಡುವುದೇ
ನಾ ನಿಂತಿರುವ ನೆಲಕ್ಕೆ ಕೊಡುವ ವಚನ;
ಇದುವೇ ನನ್ನ ಬದುಕು…
ಈ ದೇಹದಲಿ ಉಸಿರೆನ್ನುವುದಿರುವ ತನಕ

ಈ ಮಣ್ಣಿಗೆ ನೀರಾಗಿ ಹರಿದು ಬಿದ್ದ ಬೆವರು
ಈ ಎದೆಯು ಎದುರಿಸಿದ ಮಳೆಮಾರುತಗಳು
ಕೊರೆಯುವ ಚಳಿ ಅಥವಾ ಬೇಸಗೆಯ ಬಿಸಿ
ನನ್ನ ಆತ್ಮಬಲವನೆಂದೂ ಕುಗ್ಗಿಸುವುದಿಲ್ಲ;
ನನ್ನ ಬದುಕೆಂದರೆ ಹೀಗೆಯೇ…
ಈ ದೇಹದಲಿ ಕೊನೆಯುಸಿರಿರುವ ತನಕ

ಸೃಷ್ಟಿ ಗೆಲ್ಲದ್ದನ್ನು ಆಳುವನು ಗೆದ್ದ
ಅವನ‌ ಖುಷಿಗೆ, ಕೀಟಲೆಗೆ
ನನ್ನ ಚೈತನ್ಯವ ಅದೆಷ್ಟೊ ಹೊಲಗಳಲ್ಲಿ
ಬೆದರುಗೊಂಬೆಯಾಗಿಸಿದ;
ಇದುವೇ ನನ್ನ ಬದುಕು
ಈ ದೇಹದಲಿ ಕೊನೆಯುಸಿರಿರುವ ತನಕ

ಆ ಕಾಲವೊಂದಿತ್ತು, ನನ್ನ ಹೊಲ
ಭೂಮಿಯಾಕಾಶ ಒಂದಾಗುವಲ್ಲಿಯವರೆಗೂ ಹರಡಿತ್ತು
ಅಯ್ಯೋ! ಈಗ ನಾನು ಮಾತ್ರ ಉಳಿದಿದ್ದೇನೆ
ಉಳಿದ ಒಂದೆರಡು ಎಕರೆಯೊಂದಿಗೆ
ಸಾಲದ ಬಾಕಿ ತೀರಿಸಲೆಂದು ;
ಇದುವೇ ನನ್ನ ಬದುಕು
ಈ ದೇಹದಲಿ ಕೊನೆಯುಸಿರಿರುವ ತನಕ

ಹಳದಿ,  ಬಿಳಿ ಮತ್ತು ಹಸಿರು ಫಸಲುಗಳೇ
ಅಪಾರ ಭರವಸೆ ಮತ್ತು ಅಮಿತ ಕನಸುಗಳ
ತರುವೆ ಸಂತೆಗೆ, ಆದರೆ ಬರಿಗೈ ನಿರಾಸೆಯೇ
ಹೊಲದಿಂದ ದೊರೆವ ಉಡುಗೊರೆ;
ಇದುವೇ ನನ್ನ ಬದುಕು… ಸಾವು ಒಪ್ಪುವರೆಗೂ
ಈ ನೋವಿನಿಂದಾಚೆಗೆ ಹೊರದಬ್ಬುವರೆಗೂ

ಮಕ್ಕಳ ಗೋಳಾಟ  ಊಟವಿಲ್ಲ, ಪಾಠವಿಲ್ಲ
ಅವರ ಕನಸುಗಳೆಲ್ಲ ಚದುರಿಹೋಗಿವೆ
ಸೂರಿನ ಕೆಳಗೆ, ಅವಶೇಷಗಳಡಿಯಲ್ಲಿ
ದೇಹಗಳು ಮುರಿದುಕೊಂಡು, ಆತ್ಮ ಛಿದ್ರಗೊಂಡು
ಇದುವೇ ನನ್ನ ಬದುಕು…
ಈ ದೇಹದಲಿ ಕೊನೆಯುಸಿರುವ ತನಕ

ರನ್ನ ರತ್ನದ ರಾಶಿ ಎಲ್ಲ ಹೋದುವು
ಹತಾಶ ಆತ್ಮ, ಖಾಲಿ ಹೊಟ್ಟೆಯಷ್ಟೇ ಉಳಿದವು
ಆದರೂ ಹಸಿವು, ದುರಾಸೆಗಳ ಕೊನೆಗಾಣಿಸುವ
ಮಾತನು ಉಳಿಸಿಕೊಳ್ಳುವೆನು;
ಇದುವೇ ನನಗೆ ಬದುಕು…
ಈ ದೇಹದಲಿ ಕೊನೆಯುಸಿರುವ ತನಕ

ಚಿನ್ನದ ಫಸಲನೇನೋ ಕಟಾವು ಮಾಡುವೆ
ಕೊಳ್ಳುವ ವ್ಯಾಪಾರಿಗಳೇ ಇಲ್ಲವಿಲ್ಲಿ
ಸಾಲ ಏರುತ್ತಿದೆ, ಸಂಕಷ್ಟ ಮೀರುತ್ತಿದೆ
ಭಾರಗೊಂಡ ಎದೆ ಮಿಡಿತವನ್ನೇ ಮರೆಯುತ್ತಿದೆ
ಹೀಗೇ ಇರಲಿದೆ ಬದುಕು…
ಈ ದೇಹದಲಿ ಕೊನೆಯುಸಿರುವ ತನಕ

ಕುಣಿಕೆ ಅಥವಾ ಕ್ರಾಂತಿ
ಇರಬಹುದೇ ಇದಲ್ಲದೆ ಇನ್ನೊಂದು ಪರಿಹಾರ?
ಕುಡುಗೋಲು, ಕತ್ತಿಗಳಿಂದು ಕೇವಲ ಪರಿಕರಗಳಲ್ಲ
ಆದರೀಗ ಅವುಗಳೇ ಶಸ್ತ್ರಾಸ್ತ್ರಗಳು ದಿಟ;
ಇದುವೇ ನನ್ನ ಪಾಲಿಗೆ ಬದುಕು
ಈ ದೇಹದಲಿ ಕೊನೆಯುಸಿರುವ ತನಕ

ಕವಿಯ ದನಿಯಲ್ಲಿ ಕವಿತೆಯ ಪಂಜಾಬಿ ಅವತರಣಿಕೆಯನ್ನು ಆಲಿಸಿ

ಪಂಜಾಬಿಯಿಂದ ಇಂಗ್ಲಿಷ್‌ಗೆ ಭಾಷಾಂತರಿಸಿದವರು – ಜೀನಾ ಸಿಂಗ್‌, ಇವರು ಅಮೃತಸರ್‌ ಮೂಲದ ಒಬ್ಬ ವಾಸ್ತುಶಿಲ್ಪಿ

ಕವರ್‌ ಇಲ್ಲಸ್ಟ್ರೇಷನ್: ಅಂತರಾ ರಾಮನ್. ಅವರು ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಅಂಡ್ ಟೆಕ್ನಾಲಜಿ ಸಂಸ್ಥೆಯಿಂದ ವಿಷುಯಲ್ ಕಮ್ಯುನಿಕೇಷನ್‌ನಲ್ಲಿ ಇತ್ತೀಚಿಗೆ ಪದವಿಯನ್ನು ಪಡೆದಿದ್ದಾರೆ. ಪರಿಕಲ್ಪನಾ ಕಲೆ ಮತ್ತು ಅದರ ಎಲ್ಲಾ ಪ್ರಕಾರಗಳಲ್ಲಿ ಕಥೆ ಹೇಳುವಿಕೆಯು ಅವರ ಇಲ್ಲಸ್ಟ್ರೇಷನ್ ಮತ್ತು ಡಿಸೈನ್ ಪ್ರಾಕ್ಟೀಸ್ ಮೇಲೆ ದೊಡ್ಡ ಪ್ರಭಾವ ಬೀರಿದೆ.

ಆಡಿಯೋ: ಸುಧನ್ವ ದೇಶಪಾಂಡೆ ಜನ ನಾಟ್ಯ ಮಂಚ್‌ನೊಂದಿಗೆ ಗುರುತಿಸಿಕೊಂಡಿರುವ  ನಟ ಮತ್ತು ನಿರ್ದೇಶಕ, ಹಾಗೂ ಲೆಫ್ಟ್ ವರ್ಡ್ ಬುಕ್ಸ್ ನ ಸಂಪಾದಕರು

ಅನುವಾದ: ಶಂಕರ ಎನ್. ಕೆಂಚನೂರು

Prof. Sarbjot Singh Behl

ಪ್ರೊ. ಸರಬ್ಜೋತ್ ಸಿಂಗ್ ಬೆಹ್ಲ್ ಅಮೃತಸರದ ಗುರುನಾನಕ್ ದೇವ್ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕ ವ್ಯವಹಾರಗಳ ಡೀನ್ ಆಗಿದ್ದಾರೆ. ವಾಸ್ತುಶಿಲ್ಪಿಯಾಗಿರುವ ಅವರು ಸ್ಕೂಲ್ ಆಫ್ ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್‌ನಲ್ಲಿ ಕಲಿಸುತ್ತಾರೆ ಜೊತೆಗೆ ಶಕ್ತಿಶಾಲಿ ಕವನಗಳನ್ನೂ ಬರೆಯುತ್ತಾರೆ.

Other stories by Prof. Sarbjot Singh Behl
Translator : Shankar N Kenchanuru

ಅನುವಾದಕರು: ಶಂಕರ ಎನ್ ಕೆಂಚನೂರು ಕವಿ ಮತ್ತು ಹವ್ಯಾಸಿ ಭಾಷಾಂತರಕಾರರಾಗಿದ್ದು ಇವರನ್ನು [email protected] ಈ ಇ-ಮೇಲ್ ವಿಳಾಸದ ಮೂಲಕ ಸಂಪರ್ಕಿಸಬಹುದು.

Other stories by Shankar N Kenchanuru