ಒಂದಿಡೀ ಬದುಕನ್ನು
ಹಗಲು ರಾತ್ರಿಯೆನ್ನದೆ
ತೀರ ಕಾಣದ ಕಡಲಿನಲ್ಲಿ
ದೋಣಿಗೆ ಹುಟ್ಟುಹಾಕುತ್ತಲೇ ಕಳೆದಿದ್ದೇನೆ.
ದೊಡ್ಡ ಕಡಲು, ಚಂಡಮಾರುತ
ಇವುಗಳೆಲ್ಲ ಇರುವುದೇ ಹಾಗೆ;
ಇಲ್ಲಿರುವ ಯಾವುದೂ
ನನಗೆ ಇನ್ನೊಂದು ತೀರ ತಲುಪುವ ಭರವಸೆಯನ್ನು ಹುಟ್ಟಿಸುತ್ತಿಲ್ಲ.
ಹಾಗೆಂದು ಈ ಹುಟ್ಟನ್ನು ಕೆಳಗಿರಿಸುವುದು ನನ್ನಿಂದ ಸಾಧ್ಯವಿಲ್ಲ
ನನ್ನಿಂದ ಸಾಧ್ಯವಿಲ್ಲ.

ಮತ್ತು ಅವರು ಕೊನೆವರೆಗೂ ತಮ್ಮ ಕೈಯಲ್ಲಿದ್ದ ಬದುಕಿನ ದೋಣಿಯ ಹುಟ್ಟನ್ನು ಎಂದಿಗೂ ಕೆಳಗಿರಿಸಲಿಲ್ಲ. ಸೋಲು ಖಚಿತವೆಂದು ಮೊದಲೇ ಗೊತ್ತಿದ್ದರೂ, ಶ್ವಾಸಕೋಶದ ಕ್ಯಾನ್ಸರ್‌ ಕಾಯಿಲೆಯೊಂದಿಗಿನ ಹೋರಾಟವನ್ನು ಕೊನೆಯವರೆಗೂ ಕೈಬಿಡಲಿಲ್ಲ.

ಈ ಹೋರಾಟ ಬಹಳ ನೋವಿನಿಂದ ಕೂಡಿತ್ತು. ಅವರಿಗೆ ಆಗಾಗ ಉಸಿರಾಡಲು ಕಷ್ಟವೆನ್ನಿಸುತ್ತಿತ್ತು. ಕೀಲುಗಳಲ್ಲಿ ನೋವಿತ್ತು. ರಕ್ತಹೀನತೆ, ತೂಕ ನಷ್ಟ ಮತ್ತು ಇನ್ನೂ ಹಲವು ಸಮಸ್ಯೆಗಳೊಡನೆ ಅವರು ಬಡಿದಾಡುತ್ತಿದ್ದರು. ಸ್ವಲ್ಪ ಹೊತ್ತು ಕುಳಿತರೂ ಅವರಿಗೆ ದಣಿದಂತೆ ಭಾಸವಾಗುತ್ತಿತ್ತು. ಇಷ್ಟೆಲ್ಲ ನೋವಿನ ನಡುವೆಯೂ ವಜೇಸಿಂಗ್‌ ಪಾರ್ಗಿ ತಮ್ಮ ಆಸ್ಪತ್ರೆಯ ಕೋಣೆಯಲ್ಲಿ ನಮ್ಮನ್ನು ಭೇಟಿಯಾಗಲು ಒಪ್ಪಿದ್ದರು. ಮತ್ತು ತಮ್ಮ ಬದುಕು ಮತ್ತು ಕಾವ್ಯದ ಕುರಿತು ಮಾತುಗಳನ್ನು ಹಂಚಿಕೊಂಡರು.

ಅವರ ಆಧಾರ್‌ ಕಾರ್ಡ್‌ ಹೇಳುವಂತೆ ವಜೇಸಿಂಗ್‌ ದಾಹೋದ್‌ ಜಿಲ್ಲೆಯ ಈಟಾವ ಗ್ರಾಮದಲ್ಲಿ ಬಡ ಬಡ ಭಿಲ್‌ ಆದಿವಾಸಿ ಕುಟುಂಬದಲ್ಲಿ 1963ನೇ ಇಸವಿಯಲ್ಲಿ ಜನಿಸಿದರು. ಅದರೆ ಅವರು ಹುಟ್ಟಿದ ದಿನದಿಂದಲೂ ಬದಕು ಅವರ ಪಾಲಿಗೆ ಕರುಣೆ ತೋರಿಲ್ಲ.

ಚಿಸ್ಕಾ ಭಾಯ್ ಮತ್ತು ಚತುರಾ ಬೆನ್ ಅವರ ಹಿರಿಯ ಮಗನಾಗಿ ಬೆಳೆದ ತಮ್ಮ ಅನುಭವಗಳನ್ನು ಸಂಕ್ಷಿಪ್ತವಾಗಿ ಹೇಳುವ ವಜೇಸಿಂಗ್‌ “ಬಡತನ… ಬರೀ ಬಡತನ” ಎಂದು ಕ್ಷಣ ಮೌನವಾಗಿ ತನ್ನ ಮುಖವನ್ನು ಬೇರೆಡೆಗೆ ತಿರುಗಿಸಿದರು. ತಮ್ಮ ಆಳಕ್ಕಿಳಿದ ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ. ತನ್ನ ಬಾಲ್ಯದ ನೆನಪುಗಳನ್ನು ಅಳಿಸಿ ಹಾಕುವ ವಿಫಲ ಪ್ರಯತ್ನವನ್ನೂ ನಡೆಸಿದರು. ಆದರೆ ಆ ನೆನಪುಗಳು ಹಟಮಾರಿಗಳಂತೆ ಮತ್ತೆ ಮತ್ತೆ ಮೇಲೆದ್ದು ಬರುತ್ತಿದ್ದವು. “ಆಗ ಮನೆಯಲ್ಲಿ ಅಕ್ಕಿ-ಗೋಧಿ ತರುವುದಕ್ಕೂ ಹಣವಿರುತ್ತಿರಲಿಲ್ಲ.”

ಬದುಕು ಒಂದು ದಿನ ಕೊನೆಯಾಗುತ್ತದೆ
ಆದರೆ ಈ ಜಂಜಾಟ ಉಳಿದು ಹೋಗುತ್ತದೆ.
ಒಂದು ರೊಟ್ಟಿಯ ವ್ಯಾಸ
ಇಡೀ ಭೂಮಿಗಿಂತಲೂ ದೊಡ್ಡದು.
ಈ ರೊಟ್ಟಿಯ ಬೆಲೆ
ಹಸಿದವರನ್ನು ಬಿಟ್ಟರೆ
ಉಳಿದವರಿಗೆ ಅರ್ಥವಾಗುವುದಿಲ್ಲ
ಒಮ್ಮೊಮ್ಮೆ ಒಂದು ರೊಟ್ಟಿ
ಜೀವವನ್ನೇ ಬೆಲೆಯಾಗಿ ಕೇಳುತ್ತದೆ.

ದಾಹೋದ್‌ನಲ್ಲಿರುವ ಕೈಸರ್ ಮೆಡಿಕಲ್ ನರ್ಸಿಂಗ್ ಹೋಂನ ಹಾಸಿಗೆಯಲ್ಲಿ ಮಲಗಿ ಚಿಕಿತ್ಸೆ ಪಡೆಯುತ್ತಿರುವ ಅವರು, ನಮಗಾಗಿ ಕೆಲವು ಕವಿತೆಗಳನ್ನು ಓದಿದರು

ವಜೇಸಿಂಗ್‌ ಅವರ ದನಿಯಲ್ಲಿ ಕವಿತೆಯನ್ನು ಆಲಿಸಿ

“ಹೀಗೆ ಹೇಳುವುದು ಸರಿಯಲ್ಲ, ಆದರೂ ನಾವು ಹೆಮ್ಮೆ ಪಡಬಹುದಾದ ಪೋಷಕರನ್ನು ಹೊಂದಿರಲಿಲ್ಲ” ಎಂದು ವಜೇಸಿಂಗ್‌ ಪಶ್ಚಾತ್ತಾಪದೊಡನೆ ಹೇಳುತ್ತಾರೆ. ಇದರೊಂದಿಗೆ ಮೊದಲೇ ಕುಗ್ಗಿ ಹಿಡಿಷ್ಟಾಗಿದ್ದ ದೇಹ ಇನ್ನಷ್ಟು ಕುಗ್ಗಿತು. “ಹೀಗೆ ಮಾತನಾಡುವುದು ಸರಿಯಲ್ಲವೆನ್ನುವುದು ನನಗೂ ಗೊತ್ತು, ಆದರೆ ಅದು ನನ್ನ ನಾಲಗೆಯಿಂದ ಹೊರಬಿದ್ದಾಗಿದೆ.” ಅಲ್ಲೇ ಆಸ್ಪತ್ರೆಯ ಮೂಲೆಯಲ್ಲಿ ಕಬ್ಬಿಣದ ಸ್ಟೂಲ್‌ ಮೇಲೆ ಕುಳಿತಿದ್ದ ಅವರ 85 ವರ್ಷದ ತಾಯಿಗೆ ಕಿವಿ ಅಷ್ಟು ಕೇಳುತ್ತಿರಲಿಲ್ಲ. “ನಾನು ನೋಡಿದ್ದು ನನ್ನ ತಂದೆ ತಾಯಿ ಕಷ್ಟಪಡುವುದನ್ನಷ್ಟೇ ನೋಡಿದ್ದೇನೆ. ಅವರಿಬ್ಬರೂ ಊರಿನ ಹೊಲಗಳಲ್ಲಿ ಕೂಲಿ ಮಾಡುತ್ತಿದ್ದರು.” ಅವರ ಇಬ್ಬರು ಸಹೋದರಿಯರು, ನಾಲ್ಕು ಸಹೋದರರು ಮತ್ತು ಪೋಷಕರು ಹಳ್ಳಿಯಲ್ಲಿ ಒಂದು ಕೋಣೆಯ, ಇಟ್ಟಿಗೆ ಮತ್ತು ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದರು. ವಜೇಸಿಂಗ್‌ ಈಟಾವ ತೊರೆದು ಉದ್ಯೋಗ ಅರಸಿ ಅಹಮದಾಬಾದ್‌ ತಲುಪಿದ ನಂತರ ಅಲ್ಲೂ ಅವರು ತಲ್ಟೇಜ್‌ ಚಾಳ್‌ನ ಸಣ್ಣ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಅಲ್ಲಿಗೆ ಅವರ ಆಪ್ತ ಸ್ನೇಹಿತರು ಸಹ ಅಪರೂಪಕ್ಕೊಮ್ಮೆ ಬರುತ್ತಿದ್ದರು.

ನಿಂತರೆ
ತಲೆಗೆ ಮಾಡು ತಾಕುತ್ತದೆ
ಕಾಲು ಚಾಚಿದರೆ
ಗೋಡೆ ತಡೆಯುತ್ತದೆ
ಹೇಗೋ ಈ ಮನೆಯಲ್ಲಿ
ಜೀವಮಾನ ಕಳೆದಿದ್ದೇನೆ.
ಇಲ್ಲಿ ಸಹಾಯಕ್ಕೆ ಒದಗಿದ್ದೆಂದರೆ
ತಾಯಿಯ ಗರ್ಭದೊಳಗಿದ್ದಾಗ
ಮುದುರಿ ಮಲಗಿದ್ದ ಅಭ್ಯಾಸ.

ಆದರೆ ಈ ಬಡತನದ ಕತೆ ಕೇವಲ ವಜೇಸಿಂಗ್‌ ಅವರೊಬ್ಬರದೇ ಅಲ್ಲ. ಈ ಕವಿಯ ಕುಟುಂಬವು ವಾಸಿಸುವ ಪ್ರದೇಶದಲ್ಲಿ ಬಡತನವೆನ್ನುವುದು ಈ ಪ್ರದೇಶದಷ್ಟೇ ಪುರಾತನ ಮತ್ತು ಸರ್ವೇಸಾಮಾನ್ಯ. ದಾಹೋಡ್ ಜಿಲ್ಲೆಯ ಜನಸಂಖ್ಯೆಯ ಸುಮಾರು 74 ಪ್ರತಿಶತದಷ್ಟು ಪರಿಶಿಷ್ಟ ಪಂಗಡಗಳನ್ನು ಒಳಗೊಂಡಿದೆ, ಅವರಲ್ಲಿ 90 ಪ್ರತಿಶತದಷ್ಟು ಜನರು ಕೃಷಿಯಲ್ಲಿ ತೊಡಗಿದ್ದಾರೆ. ಆದರೆ ಸಣ್ಣ ಪ್ರಮಾಣದ ಭೂಮಿ, ಕಡಿಮೆ ಉತ್ಪಾದಕತೆ, ಸದಾ ಬರಗಲಾದ ಸ್ಥಿತಿ ಅಲ್ಲಿನ ಜನರಿಗೆ ಕಡಿಮೆ ಆದಾಯವನ್ನು ತರುವುದರೊಂದಿಗೆ ಅವರನ್ನು ಬಡವರಾಗಿಯೇ ಉಳಿಸಿದೆ. ಮತ್ತು ಇತ್ತೀಚಿನ ಬಹು ಆಯಾಮದ ಬಡತನ ಸಮೀಕ್ಷೆಯ ಪ್ರಕಾರ ಈ ಪ್ರದೇಶದ ಬಡತನದ ಪ್ರಮಾಣವು ರಾಜ್ಯದಲ್ಲಿ ಶೇಕಡಾ 38.27ರಷ್ಟಿದೆ.

ತಮ್ಮ ಬುದಕಿನ ಕುರಿತು ಮಾತನಾಡುತ್ತಾ “ಘನಿ ತಕ್ಲಿ ಕರಿ ನೆ ಮೋಟಾ ಕರಿಯಾ ಸೆ ಈ ಲೋಕೊಣೆ ಧಂಧಾ ಕರಿ ಕರಿ ನೇ,” ಎನ್ನುತ್ತಾರೆ ವಜೇಸಿಂಗ್‌ ಅವರ ತಾಯಿ ಚತುರಾಬೆನ್‌, “ಮಝೂರಿ ಕರಿನೇಮ ಘೇರ್ನು ಕರಿನೇ, ಬಿಝಾನು ಕರಿನೇ ಖಾವಾದ್ಯು ಛ, [ನಾನು ಬಹಳ ಶ್ರಮದ ಕೆಲಸಗಳನ್ನು ಮಾಡಿದ್ದೇನೆ. ಮನೆಗೆಲಸದ ಜೊತೆಗೆ ಬೇರೆಯವರ ಬಳಿ ಕೆಲಸ ಮಾಡಿ ಅವರಿಗೆ ತಿನ್ನಲು ಏನಾದರೂ ತರುತ್ತಿದ್ದೆ.]” ಕೆಲವೊಮ್ಮೆ ಅವರು ಕೇವಲ ಜೋಳದ ಗಂಜಿ ಕುಡಿದು ದಿನ ದೂಡುತ್ತಿದ್ದರು. ಮಕ್ಕಳನ್ನು ಬೆಳೆಸುವುದು ಅಷ್ಟು ಸುಲಭವಿರಲಿಲ್ಲ ಎಂದು ಹೇಳುತ್ತಾರವರು.

ಗುಜರಾತಿನ ವಂಚಿತ ಸಮುದಾಯಗಳ ಧ್ವನಿಗಳಿಗೆ ಮೀಸಲಾಗಿರುವ ನಿರ್ಧರ್ ನಿಯತಕಾಲಿಕದ 2009ರ ಸಂಚಿಕೆಗಾಗಿ ಅವರು ಬರೆದ ಎರಡು ಭಾಗಗಳ ಆತ್ಮಚರಿತ್ರೆಯಲ್ಲಿ ವಜೇಸಿಂಗ್‌ ವಿಶಾಲ ಹೃದಯದ ಆದಿವಾಸಿ ಕುಟುಂಬವೊಂದರ ಕುರಿತು ಬರೆದಿದ್ದಾರೆ. ಜೋಖೊ ದಾಮೋರ್‌ ಮತ್ತು ಅವರ ಕುಟುಂಬವು ತಾವು ಉಪವಾಸವಿದ್ದು ಸಂಜೆ ಹೊತ್ತು ತಮ್ಮ ಮನೆಗೆ ಬಂದ ಮಕ್ಕಳಿಗೆ ಊಟ ಹಾಕುತ್ತಿದ್ದರು. ಅವರು ಮತ್ತು ಅವರ ಸ್ನೇಹಿತರು ಶಾಲೆಯಿಂದ ಮರಳುವಾಗ ಮಳೆಯ ಕಾರಣದಿಂದಾಗಿ ದಾರಿ ನಡುವೆ ಸಿಕ್ಕಿಕೊಂಡಿದ್ದರು. ಅಂದು ಅವರು ಜೋಖೊ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಆ ಸಂದರ್ಭದಲ್ಲಿ ಕುಟುಂಬವು ತಾನು ಉಪವಾಸವಿದ್ದು ಮಕ್ಕಳಿಗೆ ಊಟ ಹಾಕಿತ್ತು. ವಜೇಸಿಂಗ್‌ ಹೇಳುತ್ತಾರೆ, “ಭದಾರ್ವೋ ಯಾವಾಗಲೂ ನಮ್ಮ ಪಾಲಿಗೆ ಉಪವಾಸದ ತಿಂಗಳೇ ಆಗಿತ್ತು.” ಭದಾರ್ವೊ ಎನ್ನುವುದು ಗುಜರಾತಿನಲ್ಲಿ ಚಾಲ್ತಿಯಲ್ಲಿರುವ ವಿಕ್ರಮ್ ಸಂವತ್ ಹೆಸರಿನ ಹಿಂದೂ ಕ್ಯಾಲೆಂಡರಿನ ಹನ್ನೊಂದನೇ ತಿಂಗಳು, ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್ ತಿಂಗಳಿನಲ್ಲಿ ಸೆಪ್ಟೆಂಬರ್ ಮಾಸಕ್ಕೆ ಹೊಂದಿಕೆಯಾಗುತ್ತದೆ.

“ಆ ಸಂದರ್ಭದಲ್ಲಿ ಮನೆಯಲ್ಲಿನ ದವಸ ಧಾನ್ಯಗಳು ಖಾಲಿಯಾಗಿರುತ್ತವೆ. ಹೊಲದಲ್ಲಿನ ಬೆಳೆ ಇನ್ನೂ ಬಲಿತಿರುವುದಿಲ್ಲ. ಹೀಗಾಗಿ ಹೊಲ ಹಸಿರಾಗಿದ್ದರೂ ಹಸಿದು ಮಲಗಬೇಕಿದ್ದ ಹಣೆಬರಹ ನಮ್ಮದಾಗಿತ್ತು. ಆ ದಿನಗಳಲ್ಲಿ ಎಲ್ಲೋ ಕೆಲವು ಮನೆಗಳಲ್ಲಷ್ಟೇ ದಿನದ ಎರಡೂ ಹೊತ್ತು ಒಲೆ ಉರಿಯುವುದನ್ನು ನೀವು ಕಾಣಬಹುದಿತ್ತು. ಒಂದು ವೇಳೆ ಏನಾದರೂ ಹಿಂದಿನ ವರ್ಷ ಬರ ಬಂದಿದ್ದರೆ ಬೇಯಿಸಿದ ಅಥವಾ ಸುಟ್ಟ ಮಹುವಾ ಹೂವುಗಳೇ ಗತಿಯಾಗುತ್ತಿದ್ದವು. ಭೀಕರ ಬಡತನವೆನ್ನುವುದು ನಮ್ಮ ಸಮುದಾಯಕ್ಕೆ ಜನ್ಮಕ್ಕಂಟಿದ ಶಾಪವಾಗಿತ್ತು.”

Left: The poet’s house in his village Itawa, Dahod.
PHOTO • Umesh Solanki
Right: The poet in Kaizar Medical Nursing Home with his mother.
PHOTO • Umesh Solanki

ಎಡ: ದಾಹೋದ್‌ನ ಈಟಾವಾ ಗ್ರಾಮದಲ್ಲಿರುವ ಕವಿಯ ಮನೆ. ಬಲ: ಕೈಸರ್ ಮೆಡಿಕಲ್ ನರ್ಸಿಂಗ್ ಹೋಂನಲ್ಲಿ ಕವಿ ತನ್ನ ತಾಯಿಯೊಂದಿಗೆ

ಆಗಿನ ಕಾಲದ ಜನರು ಹಸಿವಿನಿಂದ ಸಾಯಲು ಸಿದ್ಧರಿರುತ್ತದ್ದರೇ ಹೊರತು ಈಗಿನಂತೆ ತಮ್ಮ ಮನೆ ಮತ್ತು ಹಳ್ಳಿಗಳನ್ನು ತೊರೆದು ಕೆಲಸ ಹುಡುಕಿಕೊಂಡು ಖೇಡಾ, ಬರೋಡಾ ಅಥವಾ ಅಹಮದಾಬಾದ್‌ ರೀತಿಯ ನಗರಗಳಿಗೆ ವಲಸೆ ಹೋಗುತ್ತಿರಲಿಲ್ಲ ಎನ್ನುತ್ತಾರೆ ವಜೇಸಿಂಗ್.‌ ಸಮುದಾಯದಲ್ಲಿ ಓದಿಗೆ ಹೆಚ್ಚು ಪ್ರಾಶಸ್ತ್ಯವಿದ್ದಿರಲಿಲ್ಲ. ಈ ವಿಷಯದಲ್ಲಿ ಶಿಕ್ಷಕರು ಮತ್ತು ಕುಟುಂಬದವರ ಧೋರಣೆ ಒಂದೇ ಆಗಿತ್ತು, “ಮಕ್ಕಳು ಓದಲು ಬರೆಯಲು ಕಲಿತರೆ ಸಾಕು. ಅದಕ್ಕಿಂತ ಹೆಚ್ಚು ಕಲಿತು ಅವರು ದೇಶವನ್ನು ಆಳಬೇಕಿದೆ?” ಎನ್ನುತ್ತಿದ್ದರು.

ವಜೇಸಿಂಗ್‌ ಅವರಿಗೆ ಮರದಿಂದ ಮರಕ್ಕೆ ಹಾರುವ, ಹಕ್ಕಿಗಳೊಡನೆ ಹರಟೆ ಹೊಡೆಯುವುದು, ದೇವತೆಗಳ ರೆಕ್ಕೆಯ ಮೇಲೆ ಕುಳಿತು ಕಡಲಿನಾಚೆಗೆ ಹಾರುವಂತಹ ಕನಸುಗಳಿದ್ದವು. ತನ್ನ ಅಜ್ಜ ಹೇಳುವ ಕತೆಗಳಲ್ಲಿನ ದೇವತೆಗಳಂತೆ ಈ ದೇವತೆಗಳೂ ಒಂದು ದಿನ ನನ್ನನ್ನು ಈ ಕಷ್ಟಗಳಿಂದ ಪಾರು ಮಾಡಿ ಸುಖದ ದಿನಗಳನ್ನು ತರಲಿದ್ದಾರೆ ಎಂದು ನಂಬಿದ್ದರು. ಆದರೆ ಬದುಕು ಕಾಲ್ಪನಿಕ ಕತೆಗಿಂತ ಪೂರ್ಣ ಭಿನ್ನ.

ನನ್ನಜ್ಜ ಬಾಲ್ಯದಲ್ಲಿ
ನನ್ನೊಳಗೊಂದು ಕನಸು ಬಿತ್ತಿದ್ದರು.
ಅದ್ಭುತವಾದ ಸಾಧ್ಯತೆಯೊಂದರ
ಕನಸಿನ ಬೀಜ ಬಿತ್ತಿದ್ದರು.
ನಾನು ಅದೇ ಭರವಸೆಯಿಂದ
ಈ ಅಸಹನೀಯ ಬದುಕನ್ನು
ದಿನವೂ ಬದುಕುತ್ತಿದ್ದೇನೆ
ಒಂದಲ್ಲ ಒಂದು ದಿನ
ಪವಾಡವೊಂದು ನಡೆಯಬಹುದೆನ್ನುವ ಆಸೆಯಲ್ಲಿ.

ಈ ಭರವಸೆಯೇ ಅವರನ್ನು ಬದುಕಿನುದ್ದಕ್ಕೂ ಶಿಕ್ಷಣಕ್ಕಾಗಿ ತುಡಿಯುವಂತೆ ಮಾಡಿತು. ಒಮ್ಮೆ ಅವರು ಆಕಸ್ಮಿಕವಾಗಿ ಶಿಕ್ಷಣದ ಹಾದಿ ತುಳಿದಿದ್ದರು. ಅದನ್ನು ಅವರು ಅತ್ಯಂತ ಉತ್ಸಾಹದಿಂದ ಆ ದಾರಿಯಲ್ಲಿ ಮುಂದುವರೆದರು. ಶಾಲೆಗೆ ಹೋಗುವುದು, ಹಾಸ್ಟೆಲ್ಲಿನಲ್ಲಿ ಉಳಿಯುವುದು, ಹಸಿದು ಮಲಗುವುದು ಅಥವಾ ತುತ್ತು ಅನ್ನಕ್ಕಾಗಿ ಮನೆ ಮನೆ ಅಲೆಯುವುದು ಅಥವಾ ಪ್ರಾಂಶುಪಾಲರಿಗೆ ಮದ್ಯದ ಬಾಟಲಿ ಖರೀದಿಸಿ ತರಲು ಆರೇಳು ಕಿಲೋಮೀಟರ್‌ ನಡೆಯುವುದು ಇವೆಲ್ಲವೂ ಅವರ ಈ ಓದಿನ ದಾರಿಯಲ್ಲಿತ್ತು. ಸೆಕೆಂಡರಿ ಶಾಲೆ ಊರಿನಲ್ಲಿಲ್ಲಿದ ಕಾರಣ ಅವರು ದಾಹೋದ್‌ನಲ್ಲಿ ಮನೆ ಮಾಡಿಕೊಂಡು ಉಳಿಯಲು ಸಹ ಸಿದ್ಧರಿದ್ದರು. ಒಟ್ಟಿನಲ್ಲಿ ಅವರಿಗೆ ತನ್ನ ಓದನ್ನು ಮುಂದುವರೆಸಬೇಕಿತ್ತು. ಓದಿನ ಖರ್ಚು ನಿಭಾಯಿಸುವ ಸಲುವಾಗಿ ಕಟ್ಟಡ ನಿರ್ಮಾಣ ಕೆಲಸಗಳನ್ನು ಮಾಡುವುದು, ರೈಲ್ವೆ ಪ್ಲಾಟ್‌ಫಾರ್ಮಿನಲ್ಲಿ ರಾತ್ರಿ ಕಳೆಯುವುದು, ರಾತ್ರಿಯಿಡಿ ಹಸಿವಿನಿಂದಾಗಿ ಎಚ್ಚರವಿರುವುದು, ಬೋರ್ಡ್‌ ಪರೀಕ್ಷೆಗಳಿಗೆ ಹಾಜರಾಗಲು ಸಾರ್ವಜನಿಕ ಸ್ನಾನದ ಮನೆಗಳನ್ನು ಬಳಸುವುದು. ಇವೆಲ್ಲವೂ ಅವರ ಶೈಕ್ಷಣಿಕ ಬದುಕಿನ ಹಾದಿಯಲ್ಲಿದ್ದವು. ಆದರೆ ಅವರು ಎಂದಿಗೂ ಆ ಹಾದಿಯಿಂದ ಮರಳಿರಲಿಲ್ಲ.

ವಜೇಸಿಂಗ್‌ ಬದುಕಿನೆದುರು ನಡು ಬಾಗಿಸದಿರಲು ತೀರ್ಮಾನಿಸಿದ್ದರು:

ಒಮ್ಮೊಮ್ಮೆ ತಲೆ ತಿರುಗುತ್ತಿತ್ತು
ಎದೆ ಬಡಿತ ತಪ್ಪುತ್ತಿತ್ತು
ನಾನು ಕುಸಿದು ಬೀಳುತ್ತಿದ್ದೆ.
ಆದರೆ ಪ್ರತಿ ಸಲವೂ
ನನ್ನೊಳಗಿದ್ದ ಸೋಲಬಾರದೆನ್ನುವ ಛಲ
ನನ್ನುನ್ನು ಎದ್ದು ನಿಲ್ಲುವಂತೆ ಮಾಡುತ್ತಿತ್ತು
ಮತ್ತೆ ದೃಢವಾಗಿ ನನ್ನ ಕಾಲಿನ ಮೇಲೆ ನಿಲ್ಲುತ್ತಿದ್ದೆ
ಮತ್ತೆ ಮತ್ತೆ ಬದುಕಿನ ಹಳಿಗೆ ಮರಳುತ್ತಿದ್ದೆ.

ನವಜೀವನ್ ಆರ್ಟ್ಸ್ ಅಂಡ್ ಕಾಮರ್ಸ್ ಕಾಲೇಜಿಗೆ ಗುಜರಾತಿ ಭಾಷೆಯಲ್ಲಿ ಬಿಎ ಮಾಡಲು ಸೇರಿದ್ದ ದಿನಗಳು ಅವರ ಬದುಕಿನ ಅತ್ಯಂತ ಆನಂದದ ದಿನಗಳಾಗಿದ್ದವು. ಅಲ್ಲಿ ಅವರು ತಮ್ಮ ಬ್ಯಾಚುಲರ್ ಪದವಿಯನ್ನು ಪೂರ್ಣಗೊಳಿಸಿ ಸ್ನಾತಕೋತ್ತರ ಪದವಿಗೆ ನೋಂದಾಯಿಸಿಕೊಂಡರು. ಆದರೆ ಎಂಎ ಕೋರ್ಸಿನ ಒಂದು ವರ್ಷದ ನಂತರ ಮನಸ್ಸು ಬದಲಾಯಿಸಿದ ವಜೇಸಿಂಗ್‌ ಅದರ ಬದಲಿಗೆ ಬಿ.ಎಡ್ ಮಾಡಲು ನಿರ್ಧರಿಸಿದರು. ಬಿಎಡ್‌ ಮುಗಿಸುತ್ತಿದ್ದಂತೆ ಒಂದು ಜಗಳದ ನಡುವೆ ಸಿಲುಕಿದ ಅವರು ಗುಂಡಿನ ದಾಳಿಗೆ ಒಳಗಾದರು. ಆ ಗುಂಡು ಅವರ ಕುತ್ತಿಗೆಗೆ ತಗುಲಿದ ಕಾರಣ ಅವರ ದನಿ ಶಾಶ್ವತವಾಗಿ ಹಾನಿಗೊಳಗಾಯಿತು. ಇದರಿಂದಾಗಿ ಅವರ ಬದುಕಿನ ಹಾದಿಯೇ ಬದಲಾಗಿದ್ದಲ್ಲದೆ, ಏಳು ವರ್ಷಗಳ ಚಿಕಿತ್ಸೆ, 14 ಸರ್ಜರಿ ಮತ್ತು ತೀರಿಸಲಾಗದಷ್ಟು ಸಾಲವನ್ನು ಸಹ ಭರಿಸಬೇಕಾಯಿತು.

Born in a poor Adivasi family, Vajesinh lived a life of struggle, his battle with lung cancer in the last two years being the latest.
PHOTO • Umesh Solanki
Born in a poor Adivasi family, Vajesinh lived a life of struggle, his battle with lung cancer in the last two years being the latest.
PHOTO • Umesh Solanki

ಬಡ ಆದಿವಾಸಿ ಕುಟುಂಬದಲ್ಲಿ ಜನಿಸಿದ ವಜೇಸಿಂಗ್ ಹೋರಾಟದ ಜೀವನವನ್ನು ನಡೆಸಿದರು, ಅವುಗಳಲ್ಲಿ ಇತ್ತೀಚಿನದೆಂದರೆ ಕಳೆದ ಎರಡು ವರ್ಷಗಳಿಂದ ನಡೆಸುತ್ತಿದ್ದ ಶ್ವಾಸಕೋಶದ ಕ್ಯಾನ್ಸರ್ ವಿರುದ್ಧದ ಅವರ ಹೋರಾಟ

ಇದು ಅವರಿಗೆ ಎರಡೆರಡು ಹೊಡೆತಗಳನ್ನು ನೀಡಿತು. ದನಿ ಇಲ್ಲದ ಸಮುದಾಯದಲ್ಲಿ ಜನಿಸಿದ್ದ ಅವರಿಗೆ ದೊಡ್ಡ ದನಿ ವೈಯಕ್ತಿಕ ವರವಾಗಿ ದೊರಕಿತ್ತು. ಆದರೆ ಅದು ಈಗ ಹಾನಿಗೊಳಗಾಗಿತ್ತು. ಇದರೊಂದಿಗೆ ಶಿಕ್ಷಕನಾಗುವ ಕನಸನ್ನು ತೊರೆದ ಅವರು ಸರ್ದಾರ್ ಪಟೇಲ್ ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಅಂಡ್ ಸೋಷಿಯಲ್ ರಿಸರ್ಚ್ನಲ್ಲಿ ಗುತ್ತಿಗೆ ಕೆಲಸ ಮತ್ತು ನಂತರ ಪ್ರೂಫ್ ರೀಡಿಂಗ್‌ ಕೆಲಸ ಮಾಡತೊಡಗಿದರು. ಪ್ರೂಫ್‌ ರೀಡರ್‌ ಕೆಲಸವು ಅವರನ್ನು ಅವರ ನೆಚ್ಚಿನ ಭಾಷಾದೊಂದಿಗೆ ಮತ್ತೆ ಸೇರುವಂತೆ ಮಾಡಿತು. ಅವರು ಎರಡು ದಶಕಗಳಲ್ಲಿ ಹೊರಬಂದ ಬಹಳಷ್ಟು ಪುಸ್ತಕಗಳನ್ನು ಈ ನೆಪದಲ್ಲಿ ಓದಿದರು.

ಇದರಿಂದ ಅವರು ಕಂಡುಕೊಂಡಿದ್ದೇನು?

"ಭಾಷೆಯ ಬಗ್ಗೆ ನನ್ನ ಅಭಿಪ್ರಾಯವನ್ನು ನಾನು ನಿಮಗೆ ಬಹಿರಂಗವಾಗಿ ಹೇಳುತ್ತೇನೆ" ಎಂದು ಅವರು ಉತ್ಸಾಹದಿಂದ ಹೇಳುತ್ತಾರೆ. "ಗುಜರಾತಿ ಸಾಕ್ಷರರು ಭಾಷೆಯ ಬಗ್ಗೆ ಸಂಪೂರ್ಣವಾಗಿ ಅಸಡ್ಡೆ ಹೊಂದಿದ್ದಾರೆ. ಕವಿಗಳು ಪದಗಳ ಬಳಕೆಯ ಬಗ್ಗೆ ಯಾವುದೇ ಸೂಕ್ಷ್ಮತೆಯನ್ನು ತೋರಿಸುವುದಿಲ್ಲ; ಅವರಲ್ಲಿ ಹೆಚ್ಚಿನವರು ಗಜಲ್‌ಗಳನ್ನು ಮಾತ್ರ ಬರೆಯುತ್ತಾರೆ ಮತ್ತು ಅವರು ಭಾವನೆಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಾರೆ. ಅದುವೇ ಮುಖ್ಯ ಎಂದು ಅವರು ಭಾವಿಸುತ್ತಾರೆ. ಪದಗಳು ಹೇಗಿದ್ದರೂ ನಡೆಯುತ್ತದೆನ್ನುವುದು ಅವರ ಧೋರಣೆ." ಪದಗಳ ವ್ಯಕ್ತಪಡಿಸುವ ಸೂಕ್ಷ್ಮ ತಿಳುವಳಿಕೆ, ಅವುಗಳ ವ್ಯವಸ್ಥೆಗಳು ಮತ್ತು ಕೆಲವು ಅನುಭವಗಳ  ಶಕ್ತಿಯನ್ನು ವಜೇಸಿಂಗ್ ತನ್ನ ಸ್ವಂತ ಕವಿತೆಗಳಲ್ಲಿ ತಂದರು. ಈ ಕವಿತೆಗಳು ಎರಡು ಸಂಪುಟಗಳಲ್ಲಿ ಬಂದವು. ಆದರೆ ಮುಖ್ಯವಾಹಿನಿಯ ಸಾಹಿತ್ಯದಿಂದ ಅವು ಗುರುತಿಸಲ್ಪಡಲಿಲ್ಲ ಮತ್ತು ಹೊಗಳಿಕೆಯನ್ನೂ ಪಡೆಯಲಿಲ್ಲ.

“ಬಹುಶಃ ನಿರಂತರವಾಗಿ ಬರೆದಿದ್ದರೆ ಗುರುತಿಸುತ್ತಿದ್ದರೋ ಏನೋ” ಎಂದು ಅವರು ತಮ್ಮನ್ನು ಗುರುತಿಸದಿರುವುದರ ಹಿಂದಿನ ಕಾರಣವನ್ನು ವಿಶ್ಲೇಷಿಸುತ್ತಾರೆ. ”ನಾನು ಒಂದೋ ಎರಡೋ ಕವಿತೆ ಬರೆದರೆ ಅವುಗಳ ಕುರಿತು ಯಾರು ತಲೆ ಕೆಡಿಸಿಕೊಳ್ಳುತ್ತಾರೆ? ಇವೆರಡು ಸಂಕಲನಗಳು ಇತ್ತೀಚಿನವುಗಳಲ್ಲ. ನಾನು ಹೆಸರಿಗಾಗಿ ಬರೆಯಲಿಲ್ಲ. ನನಗೆ ನಿರಂತರ ಬರೆಯುವುದೂ ಸಾಧ್ಯವಿರಲಿಲ್ಲ. ಹಾಗೆ ನೋಡಿದರೆ ನಾನು ಬರವಣಿಗೆಯನ್ನು ಗಂಭೀರವಾಗಿಯೂ ತೆಗೆದುಕೊಂಡಿರಲಿಲ್ಲ ಎನ್ನಿಸುತ್ತದೆ ನನಗೆ. ಹಸಿವೆನ್ನುವುದು ನಮ್ಮ ಬದುಕಿಗಂಟಿಕೊಂಡಿತ್ತು. ನಾನು ಅದರ ಕುರಿತಾಗಿಯೇ ಬರೆದೆ. ಅದೊಂದು ಸಹಜ ಅಭಿವ್ಯಕ್ತಿಯಾಗಿತ್ತು ಅಷ್ಟೇ.” ನಮ್ಮ ಮಾತುಕತೆಯುದ್ದಕ್ಕೂ ಅವರೂ ಉಲ್ಲಾಸದಲ್ಲೇ ಇದ್ದರು. ಯಾರನ್ನೂ ದೂರಲು ಸಿದ್ಧರಿರಲಿಲ್ಲ, ಹಳೆಯ ಗಾಯಗಳನ್ನು ಮತ್ತೆ ಕೆರೆಯುವುದು ಅವರಿಗೆ ಬೇಕಿರಲಿಲ್ಲ, ಅವರಿಗೆ ತನ್ನ ಪಾಲಿಗೆ ಸಿಗಬೇಕಿದ್ದ ಬೆಳಕಿನ ಪಾಲನ್ನು ಪಡೆಯಬೇಕೆಂಬ ಹಟವೂ ಇದ್ದಿರಲಿಲ್ಲ. ಆದರೆ ಅವರಿಗೆ ಇದೆಲ್ಲದರ ಅರಿವು ಇತ್ತು…

ಖಂಡಿತವಾಗಿಯೂ ಯಾರೋ ನುಂಗಿದ್ದಾರೆ
ನಮ್ಮ ಪಾಲಿನ ಬೆಳಕನ್ನು
ನಾವು ಬದಕಿಡೀ
ಸೂರ್ಯನ ಜೊತೆ ಜೊತೆಗೆ
ನಮ್ಮನ್ನು ನಾವು ಸುಟ್ಟುಕೊಂಡಿದ್ದೇವೆ
ಆದರೂ ನಮಗೆ ಏನೂ ಸಿಗಲಿಲ್ಲ
ಬದುಕಿನ ಯಾವ ಭಾಗವೂ
ಬೆಳಕಿನಿಂದ ಹೊಳೆಯಲಿಲ್ಲ.

ಪೂರ್ವಾಗ್ರಹ, ಅವರ ಕೌಶಲಗಳ ಕಡಿಮೆ ಅಂದಾಜು ಮತ್ತು ತಾರತಮ್ಯದ ನಡವಳಿಕೆ ಅವರ ವೃತ್ತಿಪರ ಜೀವನವನ್ನು ಪ್ರೂಫ್ ರೀಡರ್ ಆಗಿ ಗುರುತಿಸಿದೆ. ಒಮ್ಮೆ ವಜೇಸಿಂಗ್ ಮಾಧ್ಯಮ ಸಂಸ್ಥೆಯೊಂದರಲ್ಲಿ ‘ಎ’ ಗ್ರೇಡ್‌ನೊಂದಿಗೆ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಆದರೂ ಅವರಿಗೆ 'C' ಗ್ರೇಡ್‌ನೊಂದಿಗೆ ಉತ್ತೀರ್ಣರಾದವರಿಗೆ ನೀಡಲಾಗುವ ವೇತನಕ್ಕಿಂತ ಕಡಿಮೆ ವೇತನ ನೀಡುವುದಾಗಿ ತಿಳಿಸಲಾಯಿತು. ಇದರಿಂದ ಮುಜುಗರ ಹೊಂದಿ ವಜೇಸಿಂಗ್‌ ಇದರ ಹಿಂದಿನ ಕಾರಣಗಳನ್ನು ಪ್ರಶ್ನಿಸಿ ಕೆಲಸದ ಆಹ್ವಾನವನ್ನು ತಿರಸ್ಕರಿಸಿದರು.

Ocean deep as to drown this world, and these poems are paper boats'.
PHOTO • Umesh Solanki

ʼಈ ಕಡಲು ಜಗತ್ತನ್ನೇ ಮುಳುಗಿಸಬಲ್ಲಷ್ಟು ಆಳವಾಗಿದೆ, ಅಲ್ಲಿ ಈ ಕವಿತೆಗಳು ಕಾಗದದ ದೋಣಿಯಂತೆʼ

ಅಹಮದಾಬಾದಿನಲ್ಲಿ ಅವರು ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಸಣ್ಣ ಮೊತ್ತದ ಸಂಬಳಕ್ಕೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದರು. ಕಿರೀಟ್‌ ಪರ್ಮಾರ್‌ ಅವರು ವಜೇಸಿಂಗ್‌ ಅವರನ್ನು ಮೊದಲ ಸಲ ಭೇಟಿಯಾದಾಗ ಅವರು ಅಭಿಯಾನಕ್ಕಾಗಿ ಬರೆಯುತ್ತಿದ್ದರು. “2008ರಲ್ಲಿ ನಾನು ಅಭಿಯಾನ್‌ ಸೇರಿದಾಗ ವಜೇ ಸಿಂಗ್‌ ಸಂಭವ್ ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ಅಧಿಕೃತವಾಗಿ ಪ್ರೂಫ್‌ ರೀಡರ್‌ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಅವರು ಲೇಖನಗಳನ್ನು ಸಂಪಾದನೆ ಮಾಡಬಲ್ಲರು ಎನ್ನುವುದು ನಮಗೆ ತಿಳಿದಿತ್ತು. ಅವರು ಬರಹಕ್ಕೆ ಒಂದು ಆಕಾರ ಮತ್ತು ಕಟ್ಟೋಣ ನೀಡುವಲ್ಲಿ ಎತ್ತಿದ ಕೈ. ಅವರಿಗೆ ಭಾಷೆಯ ಮೇಲೆ ಅದ್ಭುತವಾದ ಹಿಡಿತವಿತ್ತು. ಆದರೆ ಆ ಮುನುಷ್ಯನಿಗೆ ಸಿಗಬೇಕಿದ್ದ ಅವಕಾಶಗಳು ಸಿಗಲೇ ಇಲ್ಲ, ಅವರಿಗೆ ಅರ್ಹ ಗೌರವವೂ ಸಿಗಲಿಲ್ಲ.”

ಅವರು ಸಂಭವ್‌ ಮೀಡಿಯಾದಲ್ಲಿ ತಿಂಗಳಿಗೆ 6,000 ರೂಪಾಯಿ ಸಂಪಾದಿಸುತ್ತಿದ್ದರು. ಅವರ ಈ ಸಂಪಾದನೆ ಅವರ ಒಡಹುಟ್ಟಿದವರ ವಿದ್ಯಬ್ಯಾಸದ ಖರ್ಚು, ಕುಟುಂಬ ಪೋಷಣೆ ಮತ್ತು ಅಹಮದಾವಾದಿನ ಜೀವನಕ್ಕೆ ಸಾಕಾಗುತ್ತಿರಲಿಲ್ಲ. ಅವರು ಬೇರೆ ಪ್ರಕಾಶನ ಸಂಸ್ಥೆಗಳಿಂದ ಸ್ವತಂತ್ರ ಕೆಲಸಗಳನ್ನು ತೆಗೆದುಕೊಳ್ಳಲು ಆರಂಭಿಸಿದರು. ತನ್ನ ಕಚೇರಿ ಕೆಲಸ ಮುಗಿದ ನಂಥರ ಈ ಕೆಲಸಗಳನ್ನು ಮಾಡುತ್ತಿದ್ದರು.

ಅವರ ಕಿರಿಯ ತಮ್ಮ 37 ವರ್ಷದ ಮುಖೇಶ್ ಪಾರ್ಗಿ ಹೇಳುತ್ತಾರೆ, "ನಾವು ನಮ್ಮ ತಂದೆಯನ್ನು ಕಳೆದುಕೊಂಡಾಗಿನಿಂದ ಅವರು ನಮ್ಮ ಪಾಲಿಗೆ ತಂದೆಯಂತೆಯೇ ಇದ್ದರು." ಅತ್ಯಂತ ಕಷ್ಟದ ಸಮಯದಲ್ಲೂ ವಜೇಸಿಂಗ್ ನನ್ನ ವಿದ್ಯಾಭ್ಯಾಸದ ಎಲ್ಲಾ ಖರ್ಚುಗಳನ್ನು ಭರಿಸಿದ್ದರು. ಅವರು ಥಾಲ್ತೇಜ್‌ನ ಒಂದು ಸಣ್ಣ ಮುರುಕು ಕೋಣೆಯಲ್ಲಿ ವಾಸಿಸುತ್ತಿದ್ದುದು ನನಗೆ ನೆನಪಿದೆ. ಅವರ ಕೋಣೆಗಳ ತಗಡಿನ ಛಾವಣಿಯ ಮೇಲೆ, ರಾತ್ರಿಯಿಡೀ ನಾಯಿಗಳು ಅಲ್ಲಿ ಇಲ್ಲಿ ಓಡುತ್ತಿರುವುದನ್ನುಕೇಳಬಹುದಿತ್ತು. ಅವರು ಗಳಿಸಿದ 5,000-6,000 ರೂ.ಗಳು ಅವರಿಗೇ ಸಾಲುತ್ತಿರಲಿಲ್ಲ. ಅವರು ಬೇರೆಡೆ ಕೆಲಸ ಮಾಡಿ ನಮ್ಮ ಓದಿನ ಖರ್ಚುಗಳನ್ನು ಭರಿಸುತ್ತಿದ್ದರು ಅದನ್ನು ನಾನು ಎಂದಿಗೂ ಮರೆಯಲಾರೆ."

ಕಳೆದ ಐದು-ಆರು ವರ್ಷಗಳ ಹಿಂದೆ, ವಜೇಸಿಂಗ್, ಪ್ರೂಫ್ ರೀಡಿಂಗ್ ಸೇವೆಗಳನ್ನು ಒದಗಿಸುವ ಅಹಮದಾಬಾದ್‌ನ ಖಾಸಗಿ ಕಂಪನಿಯೊಂದಕ್ಕೆ ಸೇರಿಕೊಂಡರು. ವಜೇಸಿಂಗ್, “ನಾನು ನನ್ನ ಜೀವನದ ಬಹುಪಾಲು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿದ್ದೇನೆ. ಅವುಗಳಲ್ಲಿ ಇತ್ತೀಚಿನ ಕಂಪನಿ ಸಿಗ್ನೆಟ್ ಇನ್ಫೋಟೆಕ್. ಗಾಂಧೀಜಿಯವರು ನವಜೀವನ್ ಪ್ರೆಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು, ಹಾಗಾಗಿ ಅವರು ಪ್ರಕಟಿಸಿದ ಪುಸ್ತಕಗಳ ಪ್ರೂಫ್‌ ರೀಡಿಂಗ್‌ ಮಾಡಲು ಅಲ್ಲಿ ಸೇರಿದೆ. ನವಜೀವನಕ್ಕಿಂತ ಮೊದಲು ನಾನು ಇತರ ಪ್ರಕಟಣೆಗಳೊಂದಿಗೆ ಕೆಲಸ ಮಾಡಿದ್ದೆ. ಆದರೆ ಗುಜರಾತ್‌ನಲ್ಲಿ ಯಾವುದೇ ಪ್ರಕಾಶಕರು ಪ್ರೂಫ್ ರೀಡರ್‌ ಕೆಲಸಕ್ಕೆ ಶಾಶ್ವತ ಹುದ್ದೆಯನ್ನು ಹೊಂದಿಲ್ಲ.”

ಸ್ನೇಹಿತ ಮತ್ತು ಬರಹಗಾರ ಕಿರೀಟ್ ಪರ್ಮಾರ್ ಅವರೊಂದಿಗಿನ ಮಾತುಕತೆಯಲ್ಲಿ , ಅವರು ಹೇಳುತ್ತಾರೆ, "ಗುಜರಾತಿಯಲ್ಲಿ ಉತ್ತಮ ಪ್ರೂಫ್ ರೀಡರ್‌ಗಳನ್ನು ಹುಡುಕುವುದು ಕಷ್ಟವಾಗಲು ಒಂದು ಕಾರಣವೆಂದರೆ ಕಡಿಮೆ ಸಂಭಾವನೆ. ಕರಡು ತಿದ್ದುವವನು ಭಾಷೆಯ ರಕ್ಷಕ ಮತ್ತು ಪ್ರತಿಪಾದಕ. ಆದರೆ ನಾವು ಅವನ ಕೆಲಸವನ್ನು ಗೌರವಿಸದಿರಲು ಮತ್ತು ಅವನಿಗೆ ನ್ಯಾಯಯುತವಾಗಿ ಹಣ ಕೊಡಲು ಹಿಂಜರಿಯುವುದೇಕೆ? ನಾವು ಅಳಿವಿನಂಚಿನಲ್ಲಿರುವ ಪ್ರಭೇದವಾಗುತ್ತಿದ್ದೇವೆ. ಭಾಷೆಯನ್ನು ಗೌರವಿಸದ ಗುಜರಾತಿ ಮಾಧ್ಯಮ ಸಂಸ್ಥೆಗಳ ಕರುಣಾಜನಕ ಸ್ಥಿತಿಯನ್ನು ವಜೇಸಿಂಗ್ ನೋಡಿದ್ದರು ಮತ್ತು ಈ ಸಂಸ್ಥೆಗಳು ಕರಡು ತಿದ್ದುವವನಿಗೆ ಓದಲು ಬಂದರೆ ಸಾಕು ಎನ್ನುವ ಮನೋಭಾವನೆಯನ್ನು ಹೊಂದಿವೆ.”

"ಪ್ರೂಫ್ ರೀಡರ್‌ಗೆ ಜ್ಞಾನ, ಸಾಮರ್ಥ್ಯ ಅಥವಾ ಸೃಜನಶೀಲತೆ ಇರುವುದಿಲ್ಲ ಎಂಬ ತಪ್ಪು ಆಲೋಚನೆ ಸಾಹಿತ್ಯ ಜಗತ್ತಿನಲ್ಲಿದೆ" ಎಂದು ವಜೇಸಿಂಗ್ ಹೇಳುತ್ತಾರೆ. ಕಿರೀಟ್ ‌ಪರ್ಮಾರ್ ನೆನಪಿಸಿಕೊಳ್ಳುತ್ತಾರೆ, "ಗುಜರಾತ್ ವಿದ್ಯಾಪೀಠವು 5,000 ಹೊಸ ಪದಗಳನ್ನು ಶಬ್ದಕೋಶಕ್ಕೆ ಸೇರಿಸಲು ಸಾರಥ್ ಜೋಡ್ನಿ ಕೋಶ್ [ಪ್ರಸಿದ್ಧ ನಿಘಂಟು] ಗೆ ಪೂರಕವನ್ನು ಮುದ್ರಿಸಿತ್ತು ಮತ್ತು ‌ಅದರಲ್ಲಿ ಕಾಗುಣಿತ ಮಾತ್ರವಲ್ಲದೆ, ವಾಸ್ತವಿಕ ದೋಷಗಳಿದ್ದವು ಮತ್ತು ಜೊತೆಗೆ ವಿವರಣೆಗಳು ತಪ್ಪಾಗಿದ್ದವು. ವಜೇಸಿಂಗ್ ಈ ಎಲ್ಲ ವಿಷಯಗಳನ್ನು ಎಚ್ಚರಿಕೆಯಿಂದ ದಾಖಲಿಸಿದರು ಮತ್ತು ಉತ್ತರದಾಯಿತ್ವಕ್ಕಾಗಿ ವಾದಿಸಿದರು. ವಜೇಸಿಂಗ್ ಅವರಂತೆ ಕೆಲಸವನ್ನು ಮಾಡಬಲ್ಲ ಒಬ್ಬರೂ ಇಂದು ಗುಜರಾತಿನಲ್ಲಿ ಕಾಣುತ್ತಿಲ್ಲ. ರಾಜ್ಯ ಮಂಡಳಿಯ 6, 7, 8 ನೇ ತರಗತಿ ಪಠ್ಯಪುಸ್ತಕಗಳಲ್ಲಿ ಕಂಡುಬರುವ ತಪ್ಪುಗಳ ಬಗ್ಗೆಯೂ ಅವರು ಬರೆದಿದ್ದಾರೆ.

Vajesinh's relatives in mourning
PHOTO • Umesh Solanki

ವಜೇಸಿಂಗ್‌ ಅವರ ಫೋಟೊ ಎದುರು ದುಃಖಿಸುತ್ತಿರುವ ಅವರ ಸಂಬಂಧಿಕರು

Vajesinh's youngest brother, Mukesh Bhai Pargi on the left and his mother Chatura Ben Pargi on the right
PHOTO • Umesh Solanki
Vajesinh's youngest brother, Mukesh Bhai Pargi on the left and his mother Chatura Ben Pargi on the right
PHOTO • Umesh Solanki

ಎಡ: ವಜೇಸಿನ್ಹ್ ಅವರ ಕೊನೆಯ ತಮ್ಮ ಮುಖೇಶ್ ಭಾಯ್ ಪಾರ್ಗಿ. ಬಲ: ಅವರ ತಾಯಿ ಚತುರಾ ಬೆನ್ ಪಾರ್ಗಿ

ಇಷ್ಟೆಲ್ಲಾ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಹೊಂದಿದ್ದರೂ, ಜಗತ್ತು ವಜೇಸಿಂಗ್ ಅವರ ಪಾಲಿಗೆ ಪ್ರತಿಕೂಲ ಸ್ಥಳವಾಗಿಯೇ ಉಳಿಯಿತು. ಆದಾಗ್ಯೂ, ಅವರು ಭರವಸೆ ಮತ್ತು ಸಹಿಷ್ಣುತೆಯಿಂದ ಬರೆಯುವುದನ್ನು ಮುಂದುವರಿಸಿದರು. ಅವರಿಗೆ ತಾನು ತನ್ನ ಸ್ವಂತ ಬಲದಿಂದಲೇ ಬದುಕಬೇಕಾಗುತ್ತದೆ ಎನ್ನುವುದು ತಿಳಿದಿತ್ತು. ಅವರು ಬಹಳ ಹಿಂದೆಯೇ ದೇವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದರು.

ನಾನು ಹುಟ್ಟುತ್ತಲೇ
ಒಂದು ಕೈಯಲ್ಲಿ ಹಸಿವು
ಇನ್ನೊಂದು ಕೈಯಲ್ಲಿ ಕೂಲಿ ಕೆಲಸವಿತ್ತು
ಓ ದೇವರೇ,
ನಿನಗೆ ಮುಗಿಯಲು ಇನ್ನೊಂದು ಕೈ ಎಲ್ಲಿಂದ ತರಲಿ?

ವಜೇಸಿಂಗ್‌ ಅವರ ಬದುಕಿನಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಕಾವ್ಯವೇ ದೇವರಂತೆ ಒದಗಿ ಬಂದಿದೆ. ಅವರ ಕವನ ಸಂಗ್ರಹಗಳಾದ ಅಜಿಯಾನು ಅಜ್ವಾಲು (ಮಿಂಚು ಹುಳುವಿನ ಬೆಳಕು) 2019ರಲ್ಲಿ ಮತ್ತು ಝಕಲ್ ನಾ ಮೋತಿ (ಇಬ್ಬನಿ ಹನಿಗಳ ಮುತ್ತುಗಳು) 2022ರಲ್ಲಿ ಪ್ರಕಟವಾದವು ಮತ್ತು ಅವರ ಕೆಲವು ಕವಿತೆಗಳು ಮಾತೃಭಾಷೆ ಪಂಚಮಹಾಲಿ ಭಿಲಿಯಲ್ಲಿ ಪ್ರಕಟವಾಗಿವೆ.

ಅನ್ಯಾಯ, ಶೋಷಣೆ, ತಾರತಮ್ಯ, ಅಭಾವದಿಂದ ಕೂಡಿದ ಬದುಕಿನ ಬಗ್ಗೆ ಬರೆದ ಅವರ ಕವಿತೆಗಳಲ್ಲಿ ಸಿಟ್ಟು, ಸೆಡವುಗಳ ಸುಳಿವೇ ಇಲ್ಲ. ದೂರುಗಳಿಲ್ಲ. ಅವರು ಹೇಳುತ್ತಾರೆ, “ನಾನು ಯಾರನ್ನು ದೂರಲಿ? ಸಮಾಜವನ್ನೇ? ನಾವು ಸಮಾಜವನ್ನು ದೂರಲು ಸಾಧ್ಯವಿಲ್ಲ. ಅದು ಇರುವುದೇ ನಮ್ಮ ಕುತ್ತಿಗೆ ಹಿಸುಕುವುದಕ್ಕೆ.”

ಕಾವ್ಯದ ಮೂಲಕ ವಜೇಸಿಂಗ್ ವೈಯಕ್ತಿಕ ಸಂದರ್ಭಗಳನ್ನು ಮೀರಿ ಮಾನವನ ಬದುಕಿನ ಸ್ಥಿತಿಯ ಬಗ್ಗೆ ನಿಜವಾದ ಸತ್ಯದೊಂದಿಗೆ ಸಂಪರ್ಕ ಸಾಧಿಸುವ ಸಾಧ್ಯತೆಯನ್ನು ಕಂಡುಕೊಂಡರು. ಅವರ ಪ್ರಕಾರ, ವರ್ತಮಾನದಲ್ಲಿ ಆದಿವಾಸಿ ಮತ್ತು ದಲಿತ ಸಾಹಿತ್ಯದ ವೈಫಲ್ಯವೆಂದರೆ ಅದರ ವಿಸ್ತಾರದ ಕೊರತೆ. "ನಾನು ಕೆಲವು ದಲಿತ ಸಾಹಿತ್ಯವನ್ನು ಓದಿದ್ದೇನೆ ಮತ್ತು ಅದಕ್ಕೆ ವಿಶಾಲ ಮಾನವ ಸಂಪರ್ಕದ ಕೊರತೆಯಿರುವುದು ನನ್ನ ಗಮನಕ್ಕೆ ಬಂದಿದೆ. ಅವು ನಮ್ಮ ಮೇಲೆ ನಡೆದ ದೌರ್ಜನ್ಯಗಳ ಕುರಿತಷ್ಟೇ ಮಾತನಾಡುತ್ತವೆ. ಆದರೆ ಅಲ್ಲಿಂದ ಹೊರ ಬಂದು ನಾವು ಎಲ್ಲಿಗೆ ಹೋಗಬೇಕು? ಆದಿವಾಸಿ ದನಿಗಳು ಈಗಷ್ಟೇ ಸದ್ದು ಮಾಡುತ್ತಿವೆ. ಅವರು ಕೂಡಾ ತಮ್ಮದೇ ಬದುಕಿನ ಕುರಿತು ಮಾತನಾಡುತ್ತಾರೆ. ಈ ಸಾಹಿತ್ಯಗಳು ದೊಡ್ಡ ಪ್ರಶ್ನೆಗಳನ್ನು ಇನ್ನಷ್ಟೇ ಎತ್ತಬೇಕಿದೆ” ಎನ್ನುತ್ತಾರವರು.

ಕವಿ ಮತ್ತು ಬರಹಗಾರರಾಗಿರುವ ದಾಹೋದ್‌ನ ಪ್ರವೀಣ್‌ ಭಾಯಿ ಜಾದವ್‌ ಹೇಳುತ್ತಾರೆ, “ನಾನು ಸಣ್ಣವನಿರುವಾಗ ಪುಸ್ತಕಗಳನ್ನು ಓದುತ್ತಿದ್ದೆ. ಆದರೆ ಅವುಗಳಲ್ಲಿ ನಮ್ಮ ಸಮುದಾಯದ, ಪ್ರದೇಶದ ಜನರ ಹೆಸರುಗಳೇ ಇಲ್ಲದಿರುವುದು ನನಗೆ ಆಶ್ಚರ್ಯ ತರಿಸುತ್ತಿತ್ತು. ವಜೇಸಿಂಗ್‌ ಅವರ ಕವನ ಸಂಕಲ ನನ್ನ ಗಮನಕ್ಕೆ ಬಂದಿದ್ದು 2008ರಲ್ಲಿ. ಅದರ ನಂತರ ಅವರನ್ನು ಹುಡುಕಲು ನನಗೆ ನಾಲ್ಕು ವರ್ಷ ಬೇಕಾಯಿತು! ಮತ್ತೆ ಅವರನ್ನು ಭೇಟಿಯಾಗಲು ಇನ್ನಷ್ಟು ಸಮಯ ಹಿಡಿಯಿತು. ಅವರು ಕವಿಗೋಷ್ಟಿಗಳಲ್ಲಿ ಕಾಣಿಸಿಕೊಳ್ಳುವ ಕವಿಯಾಗಿರಲಿಲ್ಲ. ಅವರು ನಮ್ಮ ಸಮುದಾಯದ ಜನರ ನೋವು, ಅಂಚಿನಲ್ಲಿನ ಜನರ ಬದುಕಿನ ಕುರಿತು ಬರೆದರು.”

ವಜೇ ಸಿಂಗ್‌ ಕವಿತೆ ಬರೆಯಲು ಆರಂಭಿಸಿದ್ದು ಅವರು ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ. ಆ ಸಮಯದಲ್ಲಿ ಅವರಿಗೆ ಯಾವುದೇ ಗಂಭೀರ ಹುಡುಕಾಟ ಅಥವಾ ತರಬೇತಿಗೆ ಸಮಯವಿರಲಿಲ್ಲ. “ಇಡೀ ದಿನ ನನ್ನ ಮನಸ್ಸಿನಲ್ಲಿ ಕವಿತೆಗಳು ಗಿರಕಿ ಹೊಡೆಯುತ್ತಿದ್ದವು. ಅವು ನನ್ನ ಅಸ್ತಿತ್ವದ ಅವಿಶ್ರಾಂತ ಅಭಿವ್ಯಕ್ತಿ. ಅವು ಕೆಲವೊಮ್ಮೆ ಪದಗಳಲ್ಲಿ ಬಂಧಿಯಾದರೆ, ಇನ್ನೂಕೆಲವೊಮ್ಮೆ ತಪ್ಪಿಸಿಕೊಳ್ಳುತ್ತಿದ್ದವು. ಬಹಳಷ್ಟು ಕವಿತೆಗಳು ಅಭಿವ್ಯಕ್ತಗೊಳ್ಳದೆ ಉಳಿದುಹೋಗಿವೆ. ನನಗೆ ತುಂಬಾ ಸಮಯದವರೆಗೆ ದೀರ್ಘ ಪ್ರಕ್ರಿಯೆಯನ್ನು ಇರಿಸಿಕೊಳ್ಳುವುದು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ಕಾವ್ಯವನ್ನು ಆಯ್ದುಕೊಂಡೆ. ಆದರೆ ಬರೆಯಬೇಕಿದ್ದ ಸಾಕಷ್ಟು ಕವಿತೆಗಳಿದ್ದವು.”

ಮಾರಣಾಂತಿಕ ಕಾಯಿಲೆ - ಶ್ವಾಸಕೋಶದ ಕ್ಯಾನ್ಸರ್ ಕಳೆದ ಎರಡು ವರ್ಷಗಳಲ್ಲಿ ಅಲಿಖಿತ ಕವಿತೆಗಳ ರಾಶಿಯನ್ನು ಇನ್ನಷ್ಟು ಹೆಚ್ಚಿಸಿದೆ. ವಜೇಸಿಂಗ್ ಅವರ ಜೀವನ ಮತ್ತು ಸಂಕಟಗಳ ಹೊರತಾಗಿಯೂ ಅವರ ಸಾಧನೆಗಳನ್ನು ನೋಡಿದರೆ, ಅಲಿಖಿತವಾಗಿ ಉಳಿದಿರುವುದನ್ನು ಜನರು ಓದಬಲ್ಲರು. ತನಗಾಗಿ ಮಾತ್ರವಲ್ಲದೆ, ತನ್ನ ಸಮುದಾಯಕ್ಕಾಗಿಯೂ ಅವರು ಸಂರಕ್ಷಿಸಿಟ್ಟುಕೊಂಡಿದ್ದ 'ಹೊಳೆಯುವ ಮಿಂಚು ಹುಳಗಳ ಬೆಳಕು' ಅಲಿಖಿತವಾಗಿ ಉಳಿದಿದೆ. ಯಾವುದೇ ರಕ್ಷಣಾತ್ಮಕ ಸಿಂಪಿಗಳಿಲ್ಲದೆ ಅರಳುವ ಅವರ 'ಇಬ್ಬನಿ ಹನಿ ಮುತ್ತುಗಳು' ಅಲಿಖಿತವಾಗಿ ಉಳಿದಿವೆ. ಕ್ರೂರ ಮತ್ತು ಕಠೋರ ಜಗತ್ತಿನಲ್ಲಿ, ಸಹಾನುಭೂತಿಯನ್ನು ಕಾಪಾಡಿಕೊಳ್ಳುವ ಧ್ವನಿಯ ಅದ್ಭುತ ಗುಣಗಳು ಅಲಿಖಿತವಾಗಿ ಉಳಿದಿವೆ. ನಮ್ಮ ಭಾಷೆಯ ಅತ್ಯುತ್ತಮ ಕವಿಗಳ ಪಟ್ಟಿಯಲ್ಲಿ, ವಜೇಸಿಂಗ್ ಪಾರ್ಗಿ ಅವರ ಹೆಸರು ಅಲಿಖಿತವಾಗಿ ಉಳಿದಿದೆ.

One of the finest proofreaders, and rather unappreciated Gujarati poets, Vajesinh fought his battles with life bravely and singlehandedly.
PHOTO • Umesh Solanki

ಅತ್ಯುತ್ತಮ ಪ್ರೂಫ್ ರೀಡರುಗಳಲ್ಲಿ ಒಬ್ಬರಾದ ಮತ್ತು ಗುರುತಿಸಲ್ಪಡದ ಗುಜರಾತಿ ಕವಿಗಳಲ್ಲಿ ಒಬ್ಬರಾದ ವಜೇಸಿಂಗ್ ಅವರು ಬದುಕೊನೊಡನೆ ಧೈರ್ಯದಿಂದ ಏಕಾಂಗಿಯಾಗಿ ಹೋರಾಡಿದರು

ಆದರೆ ವಜೇಸಿಂಗ್ ಎಂದಿಗೂ ಕ್ರಾಂತಿಯ ಕವಿಯಾಗಿರಲಿಲ್ಲ. ಅವರ ಪಾಲಿಗೆ ಪದಗಳು ಕಿಡಿಗಳಾಗಿರಲಿಲ್ಲ.

ಬೀಸಿ ಬರಬಹುದಾದ ಒಂದು ರಭಸದ ಗಾಳಿಗಾಗಿ
ನಾನು ಕಾಯುತ್ತಾ ಮಲಗಿದ್ದೇನೆ

ನೀವು ನನ್ನನ್ನು ಬೂದಿಯ ರಾಶಿಯೆಂದು
ಕರೆದರೆ ನನಗೆ ಬೇಸರವಿಲ್ಲ
ನನ್ನೊಳಗೆ ಕಿಚ್ಚಿಲ್ಲ
ಒಂದು ಗರಿಕೆಯನ್ನು ಸಹ ಸುಡಬಯಸುವುದಿಲ್ಲ ನಾನು.
ಆದರೆ ನಾನು ಕಣವಾಗಿ
ಅವರ ಕಣ್ಣುಗಳ ತಲುಪಿ
ಕಿರಿಕಿರಿ ಹುಟ್ಟಿಸುತ್ತೇನೆ,
ಕನಿಷ್ಟ ಒಬ್ಬರ ಕಣ್ಣುಗಳನ್ನಾದರೂ
ಕೆಂಪಗಾಗಿಸುತ್ತೇನೆ.

ಮತ್ತು ಈಗ ಅವರು ತಮ್ಮ ಸುಮಾರು 70 ಅಪ್ರಕಟಿತ ಕವಿತೆಗಳನ್ನು ನಮಗೆ ಬಿಟ್ಟು ಹೋಗಿದ್ದಾರೆ, ಅವು ನಮ್ಮ ಕಣ್ಣುಗಳನ್ನು ಕಲಕುವ ಮತ್ತು ನಮ್ಮ ಆತ್ಮಸಾಕ್ಷಿಯನ್ನು ಅಲುಗಾಡಿಸುವ ಸಾಮರ್ಥ್ಯವನ್ನು ಹೊಂದಿವೆ. ನಾವು ಕೂಡ ಬೂದಿಯನ್ನು ನಮ್ಮ ಕಣ್ಣುಗಳಿಗೆ ಎರಚಬಲ್ಲ ಗಾಳಿಗಾಗಿ ಕಾಯುತ್ತಿದ್ದೇವೆ.

ಜೂಲಾಡಿ*

ನಾನು ಸಣ್ಣವನಿರುವಾಗ
ಅಪ್ಪ ನನಗೊಂದು ಜೂಲಾಡಿ ತಂದಿದ್ದರು
ಅದು ಒಂದೇ ಒಗೆತಕ್ಕೆ ಕುಗ್ಗಿ ಹೋಯಿತು
ಬಣ್ಣ ಕಳೆದುಕೊಂಡಿತು
ದಾರ ಸಡಿಲಗೊಂಡಿತು
ಮತ್ತೆ ಅದು ನನಗೆ ಇಷ್ಟವಾಗಲಿಲ್ಲ.
ಹಟ ಮಾಡಿ ನಾನು
ಇನ್ನು ಇದನ್ನು ತೊಡುವುದಿಲ್ಲವೆಂದು
ಅಮ್ಮ ನನ್ನ ತಲೆ ನೇವರಿಸಿ ಮುದ್ದಿಸುತ್ತಾ,
“ಸದ್ಯಕ್ಕೆ ಇದನ್ನೇ ತೊಟ್ಟುಕೋ ಮಗೂ,
ಇದು ಹರಿದು ಹೋದ ಮೇಲೆ ಹೊಸದು ತರೋಣ”
ಎಂದು ಪುಸಲಾಯಿಸಿದಳು.
ಈಗ ಈ ದೇಹ
ನಾನು ತೊಡಲು ಬಯಸದ
ಅದೇ ಜೂಲಾಡಿಯಂತೆ ನೇತಾಡುತ್ತಿದೆ.
ಎಲ್ಲೆಡೆ ದೇಹ ಸುಕ್ಕುಗಟ್ಟಿದೆ
ಮೂಳೆಗಳು ಕರಗಲಾರಂಭಿಸಿವೆ
ಉಸಿರಾಡುವಾಗ ದೇಹ ನಡುಗುತ್ತದೆ
ಈಗ ನನಗೆ ಈ ದೇಹ ಬೇಡವೆನ್ನಿಸುತ್ತದೆ
ಈ ದೇಹದ ಹಿಡಿತದಿಂದ ಬಿಡಿಸಿಕೊಳ್ಳಬಯಸಿದಾಗಲೆಲ್ಲ.
“ಹರಿಯುವ ತನಕವಾದರೂ ಇದನ್ನು ತೊಡು ಮಗು!
ಇದು ಹರಿದರೆ…”
ಎನ್ನುವ ಅಮ್ಮನ ಮಾತು ನೆನಪಿಗೆ ಬರುತ್ತದೆ.

ಅವರ ಅಪ್ರಕಟಿತ ಗುಜರಾತಿ ಕವಿತೆಯಿಂದ ಅನುವಾದಿಸಲಾಗಿದೆ.
*ಜೂಲಾಡಿ ಎನ್ನುವುದು ಆದಿವಾಸಿ ಸಮುದಾಯಗಳಲ್ಲಿ ಮಕ್ಕಳು ತಮ್ಮದ ದೇಹದ ಮೇಲ್ಭಾಗದಲ್ಲಿ ಧರಿಸುವ ಸಾಂಪ್ರದಾಯಿಕ ಕಸೂತಿ ಉಡುಪು.


ಈ ಲೇಖನವನ್ನು ಸಾಧ್ಯವಾಗಿಸಲು ಸಹಾಯ ಮಾಡಿದ ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ಕಾಂಜಿ ಪಟೇಲ್, ನಿರ್ಧರ್ ಸಂಪಾದಕ ಉಮೇಶ್ ಸೋಲಂಕಿ, ವಜೆಸಿಂಗ್ ಅವರ ಸ್ನೇಹಿತ ಮತ್ತು ಬರಹಗಾರ ಕಿರಿಟ್ ಪರ್ಮಾರ್ ಮತ್ತು ಗಲ್ಲಿಯಾಡ್ ಪ್ರಾಥಮಿಕ ಶಾಲೆಯ ಶಿಕ್ಷಕ ಸತೀಶ್ ಪರ್ಮಾರ್ ಅವರಿಗೆ ಧನ್ಯವಾದಗಳು.

ಈ ಲೇಖನದಲ್ಲಿ ಬಳಸಲಾದ ಎಲ್ಲಾ ಕವಿತೆಗಳನ್ನು ವಜೇಸಿಂಗ್ ಪಾರ್ಗಿ ಗುಜರಾತಿ ಭಾಷೆಯಲ್ಲಿ ಬರೆದಿದ್ದಾರೆ ಮತ್ತು ಪ್ರತಿಷ್ಠಾ ಪಾಂಡ್ಯ ಅವರು ಅವುಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಈ ಕವಿತೆಗಳನ್ನು ಇಂಗ್ಲಿಷ್ ಭಾಷೆಯಿಂದ ಕನ್ನಡ ಅನುವಾದಿಸಲಾಗಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Pratishtha Pandya

प्रतिष्ठा पांड्या, पारी में बतौर वरिष्ठ संपादक कार्यरत हैं, और पारी के रचनात्मक लेखन अनुभाग का नेतृत्व करती हैं. वह पारी’भाषा टीम की सदस्य हैं और गुजराती में कहानियों का अनुवाद व संपादन करती हैं. प्रतिष्ठा गुजराती और अंग्रेज़ी भाषा की कवि भी हैं.

की अन्य स्टोरी Pratishtha Pandya
Photos and Video : Umesh Solanki

उमेश सोलंकी एक फोटोग्राफ़र, वृतचित्र निर्माता और लेखक हैं. उन्होंने पत्रकारिता में परास्नातक किया है और संप्रति अहमदाबाद में रहते हैं. उन्हें यात्रा करना पसंद है और उनके तीन कविता संग्रह, एक औपन्यासिक खंडकाव्य, एक उपन्यास और एक कथेतर आलेखों की पुस्तकें प्रकाशित हैं. उपरोक्त रपट भी उनके कथेतर आलेखों की पुस्तक माटी से ली गई है जो मूलतः गुजराती में लिखी गई है.

की अन्य स्टोरी Umesh Solanki
Editor : P. Sainath

पी. साईनाथ, पीपल्स ऑर्काइव ऑफ़ रूरल इंडिया के संस्थापक संपादक हैं. वह दशकों से ग्रामीण भारत की समस्याओं की रिपोर्टिंग करते रहे हैं और उन्होंने ‘एवरीबडी लव्स अ गुड ड्रॉट’ तथा 'द लास्ट हीरोज़: फ़ुट सोल्ज़र्स ऑफ़ इंडियन फ़्रीडम' नामक किताबें भी लिखी हैं.

की अन्य स्टोरी पी. साईनाथ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru