ತೆಳ್ಳನೆಯ ದಾರವನ್ನು ಬಳಸಿ, ತಮ್ಮ ಗ್ರಾಹಕರ ಹುಬ್ಬುಗಳನ್ನು ಕೀಳುವುದರಲ್ಲಿ ಮಗ್ನರಾಗಿದ್ದ ರೇಣು ಠಾಕುರ್, ಶ್ರಮವಹಿಸಿ ದುಡಿಯುತ್ತಾರೆ. ಕಮ್‌ಲೆಹರ್ ಹಳ್ಳಿಯ ಈ ಸೌಂದರ್ಯ ಕ್ಷೇತ್ರದ ಉದ್ಯಮಿ, “ಕಮ್‌ಲೆಹರ್‌ನ ಎಲ್ಲ ಕಾಲೇಜು ಹುಡುಗಿಯರೂ ನನ್ನಿಂದ ಅವರ ಹುಬ್ಬುಗಳ ಆಕಾರವನ್ನು ರೂಪುಗೊಳಿಸುತ್ತಾರೆ” ಎಂದು ತಿಳಿಸಿದರು.
ತಮ್ಮ ಗ್ರಾಹಕಿ ಜ್ಯೋತಿಯವರ ಕಣ್ಣಿನ ಸುತ್ತ ಬ್ರಶ್‌ನ್ನು ಆಡಿಸುತ್ತಾ, ಫೌಂಡೇಶನ್‌ನ ತೆಳ್ಳನೆಯ ಪದರವನ್ನು ಆಕೆಯ ಮುಖಕ್ಕೆ ಲೇಪಿಸುತ್ತಿದ್ದ 32ರ ವಯಸ್ಸಿನ ರೇಣು, ಹೀಗೆಂದರು: “ಮೇಕಪ್‌ನಲ್ಲಿ (ಅಂದಗಾಣಿಕೆ) ಇದು ಬಹಳ ಕಷ್ಟದ ಕೆಲಸ. ಈ ಕ್ರೀಮಿನಿಂದಾಗಿ ಚರ್ಮವು ಮೃದುವಾಗುತ್ತದೆಯಲ್ಲದೆ, ಮೇಕಪ್ ಉತ್ತಮ ಹೊಳಪನ್ನು ಪಡೆಯುತ್ತದೆ.”
ತಮ್ಮ 21ನೇ ವಯಸ್ಸಿನಲ್ಲಿ ಸೌಂದರ್ಯ ಕ್ಷೇತ್ರದ ಉದ್ಯಮವನ್ನು ಆರಂಭಿಸಿದ ರೇಣು, 11 ವರ್ಷಗಳಿಂದಲೂ ಈ ಉದ್ಯಮದಲ್ಲಿದ್ದಾರೆ. “ನಾನು ಚಿಕ್ಕಂದಿನಿಂದಲೂ ಬ್ಯೂಟಿ ಪಾರ್ಲರ್ ಕೆಲಸವನ್ನು ಕಲಿಯುವ ಆಲೋಚನೆಯಲ್ಲಿದ್ದೆ. ನಾನು ಈ ಕ್ಷೇತ್ರವನ್ನು ಇಷ್ಟಪಡುತ್ತೇನೆ. ನಾನು ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ಇದನ್ನು ಕಲಿಯಲು ಬಯಸಿದ್ದೆ” ಎಂದರವರು. ಇವರು 16 ವರ್ಷದವರಿದ್ದಾಗ, ರಜೆಯನ್ನು ಕಳೆಯಲು ತಮ್ಮ ತಂದೆಯು ಕೆಲಸಮಾಡುತ್ತಿದ್ದ ದೆಹಲಿಗೆ ತೆರಳಿದ್ದರು. ಅಲ್ಲಿ ಅವರು ಮೂರು ಸಾವಿರ ರೂ.ಗಳ 6 ತಿಂಗಳ ಅಲಂಕರಣಿಕೆಯ (make-up) ಕೋರ್ಸ್ ಬಗ್ಗೆ ತಿಳಿದುಕೊಂಡರು. “ನಮ್ಮ ಹಳ್ಳಿಯಲ್ಲಿ ಯಾರೂ ಆ ಕೋರ್ಸ್‌ನ್ನು ಕಲಿತಿರದ ಕಾರಣ, ನಾನು ಅದನ್ನು ಕಲಿಯಲು ನಿರ್ಧರಿಸಿದೆ” ಎಂದು ಅವರು ತಿಳಿಸಿದರು.
21ನೇ ವಯಸ್ಸಿನಲ್ಲಿ ರೇಣು ಅವರ ವಿವಾಹದ ನಂತರ ಪತಿಗೆ, ಬ್ಯೂಟಿಪಾರ್ಲರ್‌ನ್ನು ತೆರೆಯಬೇಕೆಂಬ ತಮ್ಮ ಇಚ್ಛೆಯನ್ನು ತಿಳಿಸಿದಾಗ ತಕ್ಷಣವೇ ಅವರ ಒಪ್ಪಿಗೆ ದೊರೆಯಿತು. ಆದರೆ ಆಕೆಯ ಅತ್ತೆ, ಮಾವ ಇದನ್ನು ವಿರೋಧಿಸಿದರು. ಜನರ ದೃಷ್ಟಿಯು ತಮ್ಮ ಮೇಲೆ ಬೀಳದಂತೆ ಯುವ ವಧುವು ತನ್ನ ತಲೆಯನ್ನು ಮರೆಮಾಡಿಕೊಂಡಿರತಕ್ಕದ್ದು ಎಂಬ ಸಂಪ್ರದಾಯವನ್ನು ಉಲ್ಲೇಖಿಸುತ್ತ ಅವರು, “ಹಳ್ಳಿಯಲ್ಲಿ ನಿನ್ನ ಸೆರಗನ್ನು ನಿಭಾಯಿಸುತ್ತೀಯೋ ಅಥವಾ ನಿನ್ನ ಕೆಲಸ ಮಾಡುತ್ತೀಯೋ” ಎನ್ನುತ್ತಿದ್ದರು. ಆದರೆ ರೇಣು ಅವರಿಗೆ ತಮ್ಮ ಅನುಕೂಲಕ್ಕೆ ತಕ್ಕಂತೆ ತಮ್ಮ ಕೌಶಲವನ್ನು ಪ್ರದರ್ಶಿಸುವುದು ಮುಖ್ಯವಾಗಿತ್ತು.
ತಮ್ಮ ಅಂಗಡಿಯನ್ನು ಪ್ರಾರಂಭಿಸಲು ಒಂಭತ್ತು ವರ್ಷಗಳ ಹಿಂದೆ ಅವರು ಕಂಗ್ರ ಜಿಲ್ಲೆಯ ಡ್ರಮನ್ ಹಳ್ಳಿಯ ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ಶೇ. 1ರಷ್ಟು ಬಡ್ಡಿಗೆ ನಲವತ್ತೈದು ಸಾವಿರ ರೂ.ಗಳ ಸಾಲವನ್ನು ಪಡೆದರು. ಆದರೂ, ಅವರ ಸಾಕಷ್ಟು ಪರಿಶ್ರಮದ ಹೊರತಾಗಿಯೂ “ಸಾಲವನ್ನು ತೀರಿಸಲು ಸಾಧ್ಯವಾಗದೆ, ಅದು ಅರವತ್ತು ಸಾವಿರ ರೂ.ಗಳವರೆಗೆ ಏರಿಕೆಯಾಗಿದೆ” ಎಂದು ಅವರು ತಿಳಿಸಿದರು.
ರೇಣು ಅವರು ದಿನಂಪ್ರತಿ ಇನ್ನೂರರಿಂದ ಮುನ್ನೂರು ರೂ.ಗಳವರೆಗೆ ಸಂಪಾದಿಸುತ್ತಾರಾದರೂ, ಇದು ಗ್ರಾಹಕರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. “ಹುಬ್ಬುಗಳ ಥ್ರೆಡಿಂಗ್‌ಗಾಗಿ ನಾನು ಮೂವತ್ತು ರೂ.ಗಳನ್ನು ಹಾಗೂ ಹುಬ್ಬುಗಳ ಥ್ರೆಡಿಂಗ್ ಮತ್ತು ಮೇಲ್ತುಟಿಯ ಕೂದಲನ್ನು ತೆಗೆಯಲು ಒಟ್ಟಾರೆ ನಲವತ್ತು ರೂ.ಗಳನ್ನು ಪಡೆಯುತ್ತೇನೆ” ಎಂದು ಅವರು ತಿಳಿಸಿದರು. ರೇಣು ಅವರಿಗೆ ಮದುಮಗಳನ್ನು ಸಿಂಗರಿಸಲು ಕರೆ ಬಂದಾಗ ಅವರ ಸಂಪಾದನೆಯು ಗಮನಾರ್ಹ ಹೆಚ್ಚುತ್ತದೆ. ಮದುಮಗಳ ಬಳಿ ಅಂದಗಾಣಿಕೆಯ ವಸ್ತುಗಳಿದ್ದಲ್ಲಿ, ರೇಣು ಸಾವಿರ ರೂ.ಗಳನ್ನು ಮಾತ್ರ ಪಡೆಯುತ್ತಾರೆ. “ಕೆಲವು ದಿನಗಳಲ್ಲಿ ನನಗೆ ಯಾವುದೇ ಸಂಪಾದನೆಯಿರುವುದಿಲ್ಲ” ಎಂದು ಸಹ ಅವರು ತಿಳಿಸಿದರು.
393ರಷ್ಟು ಜನಸಂಖ್ಯೆಯಿರುವ (2011ರ ಜನಗಣತಿ) ಹಳ್ಳಿಯಲ್ಲಿನ ಆಕೆಯ ಅಂಗಡಿಯು ಸದಾ ಗ್ರಾಹಕರ ಸಡಗರದಿಂದ ತುಂಬಿರುತ್ತಿತ್ತು. “ಕೋವಿಡ್ 19 ವ್ಯಾಧಿಯು ಕಾಣಿಸಿಕೊಳ್ಳುವವರೆಗೂ ಉದ್ಯಮವು ಉತ್ತಮವಾಗಿತ್ತು. ನಾವು ವೈರಸ್‌ನ ಸೋಂಕಿಗೆ ಒಳಗಾಗಬಹುದೆಂಬ ಭಯದಿಂದ ನನ್ನ ಪತಿಯು ಅಂಗಡಿಯನ್ನು ಮುಚ್ಚಿದರು” ಎಂದು ಆಕೆ ತಿಳಿಸಿದರು. ಆಗಿನಿಂದಲೂ ಅವರು ಮನೆಯಲ್ಲಿಯೇ ತಮ್ಮ ಕೆಲಸವನ್ನು ಸಾಗಿಸುತ್ತಿದ್ದಾರೆ.
ನೆರೆಹೊರೆಯಲ್ಲಿ ಅನೇಕ ಪಾರ್ಲರ್‌ಗಳು ತಲೆಯೆತ್ತುತ್ತಿದ್ದು, ರೇಣುವಿನ ಗ್ರಾಹಕರು ಕಡಿಮೆಯಾಗಿದ್ದಾರೆ. ಎಂಟು ವರ್ಷಗಳ ಹಿಂದೆ, ರೇಣು ಅವರು ತಮ್ಮ ಉದ್ಯಮವನ್ನು ಆರಂಭಿಸಿದಾಗ, ಕಮ್‌ಲೆಹರ್‌ನಲ್ಲಿ ಒಂದು ಬ್ಯೂಟಿ ಪಾರ್ಲರ್ ಸಹ ಲಭ್ಯವಿರಲಿಲ್ಲ. “ಈಗ ಹಳ್ಳಿಯಲ್ಲಿ ಅನೇಕ ಬ್ಯೂಟಿ ಪಾರ್ಲರ್‌ಗಳಿವೆ” ಎಂದರವರು.
ಕಮ್‌ಲೆಹರ್‌ನ ನೆರೆಹೊರೆಯೆಲ್ಲವೂ ಪುರುಷರಿಂದ ನಿರ್ವಹಿಸಲ್ಪಡುವ ಅಂಗಡಿಗಳಿಂದ ತುಂಬಿದ್ದು, ರೇಣು ಅವರ ಉದ್ಯಮವು ಈ ಪ್ರದೇಶದಲ್ಲಿ, ಮಹಿಳೆಯಿಂದ ನಿರ್ವಹಿಸಲ್ಪಡುವ ಏಕೈಕ ಉದ್ಯಮವಾಗಿದ್ದು, ಕೂದಲನ್ನು ಕತ್ತರಿಸುವುದರಿಂದ ಮೊದಲ್ಗೊಂಡು ಮೆಹಂದಿ, ವ್ಯಾಕ್ಸಿಂಗ್, ಮುಖದ ಸೌಂದರ್ಯ ಉಪಚಾರ ಮತ್ತು ಮೇಕಪ್‌ವರೆಗೆ ಅವಶ್ಯವಿರುವ ಎಲ್ಲ ಸಾಮಗ್ರಿಗಳನ್ನು ಒಳಗೊಂಡ ಅದು ಸುಸಜ್ಜಿತವಾಗಿದೆ. ತನ್ನ ಪಾರ್ಲರಿಗೆ ಬೇಕಾದ ಮೇಕಪ್ ಸಾಮಗ್ರಿಗಳನ್ನು ಖರೀದಿಸಲು ಅವರು ಪಾಲಮ್ಪುರ್‌ಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಸಾಮಗ್ರಿಗಳನ್ನು ಅಗ್ಗದ ದರದಲ್ಲಿ ಕೊಳ್ಳಲು ಸಗಟು ವ್ಯಾಪಾರಿಯಿಂದ ಸಗಟಿನಲ್ಲಿ ಅವನ್ನು ಖರೀದಿಸುತ್ತಾರೆ.
ಅಕ್ಕಪಕ್ಕದ ಹಳ್ಳಿಗಳಲ್ಲಿ ಮಾತನಾಡುವ ಹಿಂದಿ ಹಾಗೂ ಪಹರಿ ಭಾಷೆಗಳಲ್ಲಿ ಸುಲಲಿತವಾಗಿ ಸಂಭಾಷಿಸುವ ರೇಣು, ತನ್ನ ಹಳ್ಳಿಯಿಂದ ಬಹುತೇಕ ಒಂದು ಕಿ.ಮೀ. ದೂರದಲ್ಲಿರುವ ನನಹರ್ ಮತ್ತು ರಚ್ಚಿಅರ ಹಳ್ಳಿಗಳಿಂದ ಬರುವ ಗ್ರಾಹಕರೊಂದಿಗೆ ಸರಾಗವಾಗಿ ಹರಟುತ್ತಾರೆ.
ರೇಣು ಅವರ ಪತಿ, ಅಮಿತ್, ಕೋಳಿಯ ಅಂಗಡಿಯನ್ನು ನಡೆಸುತ್ತಾರಲ್ಲದೆ, ಡ್ರೈವರ್ ಕೆಲಸವನ್ನೂ ಮಾಡುತ್ತಾರೆ. ರೇಣುವಿನ ಹಿರಿಯ ಮಗಳು 10 ವರ್ಷದ ರಿದ್ಧಿಮ 6ನೇ ತರಗತಿಯಲ್ಲಿದ್ದು, ಕಿರಿಯ ಮಗಳು 3 ವರ್ಷದ ಸಮೈರ, ತನ್ನ ತಾಯಿಯೊಂದಿಗೆ ಮನೆಯಲ್ಲಿರುತ್ತಾಳೆ. ತನ್ನ ಬ್ಯೂಟಿ ಪಾರ್ಲರ್ ಉದ್ಯಮದಿಂದ ಸಂಪಾದಿಸುವ ಹಣದಿಂದ ರೇಣು, ರಿದ್ಧಿಮಾಳ ಶಾಲಾ ಶುಲ್ಕವನ್ನು ಪಾವತಿಸುತ್ತಾರೆ.
ತನ್ನ ಹಳ್ಳಿಯ ಮಹಿಳೆಯರು ಮನೆಯ ಕೆಲಸಕಾರ್ಯಗಳಲ್ಲಿ ನಿರ್ಬಂಧಿತರಾಗದಿರುವುದು ರೇಣು ಅವರಿಗೆ ಸಂತೋಷದ ವಿಷಯ. “ಇಲ್ಲಿನ ಮಹಿಳೆಯರು ತಮ್ಮ ನೆಲೆಯನ್ನು ರೂಪಿಸಿಕೊಳ್ಳುತ್ತಿದ್ದು, ಅವರ ಕುಟುಂಬವೂ ಅವರನ್ನು ಬೆಂಬಲಿಸುತ್ತಿದೆ. ಹೆಚ್ಚಿನ ಮಹಿಳೆಯರು ಈ ನಿಟ್ಟಿನಲ್ಲಿ ತೊಡಗುತ್ತಾರೆಂಬುದು ನನ್ನ ನಿರೀಕ್ಷೆ” ಎಂದರವರು. ಈ ಮಹಿಳೆಯರು ಹೆಣಿಗೆ, ಕೃಷಿ ಹಾಗೂ ಸಣ್ಣ ಉದ್ಯಮಗಳಲ್ಲಿ ತೊಡಗಿದ್ದಾರೆ.
‘ಪರಿ’ಯ ಹಿಂದಿನ ಇಂಟರ್ನ್‌ಗಳಾದ ಪ್ರಮೀಣ್ ಕುಮಾರ್, ಅಮ್ರಿತ ರಜ್‌ಪೂತ್ ಮತ್ತು ನವೋಮಿ ಫರ್ಗೋಸ್ ಅವರುಗಳು ಈ ಕಥಾನಕದ ನಿಟ್ಟಿನಲ್ಲಿ ನೀಡಿದ ನೆರವಿಗೆ ನಮ್ಮ ಧನ್ಯವಾದಗಳು.
ಅನುವಾದ: ಶೈಲಜಾ ಜಿ.ಪಿ.