“ಆವೋ ಸುನೋ ಅಪ್ನಾ ಭವಿಷ್ಯವಾಣಿ, ಸುನೀ ಅಪ್ನಿ ಆಗೇ ಕಿ ಕಹಾನಿ…” ಎನ್ನುವ ಅವರ ದನಿ ಜುಹು ಬೀಚಿನ ಗದ್ದಲದಲ್ಲಿ ದಿನಾಲು ಸಂಜೆ ಯಾವುದೋ ನಿಗೂಢ ಮಂತ್ರದಂತೆ ಪ್ರತಿಧ್ವನಿಸುತ್ತಿರುತ್ತದೆ. ಮುಂಬಯಿ ಉಪನಗರದ ಈ ಸುಂದರ ಕಡಲ ತೀರದಲ್ಲಿ ಸೂರ್ಯ ಮುಳುಗುವ ಹೊತ್ತಿಗೆ ಸುಮಾರು 27 ವರ್ಷ ಪ್ರಾಯದ ಉದಯ ಕುಮಾರ್‌ ಅಲ್ಲಿ ಓಡಾಡುವ ಜನರನ್ನು ಭವಿಷ್ಯ ಕೇಳುವಂತೆ ಆಹ್ವಾನಿಸುತ್ತಾರೆ.

ಅವರೊಬ್ಬ ಅಭಿಜಾತ ಜ್ಯೋತಿಷಿ, ಹಸ್ತ ಸಾಮುದ್ರಿಕದವರೋ ಅಥವಾ ಗಿಳಿ ಇಟ್ಟುಕೊಂಡು ಭವಿಷ್ಯ ಹೇಳುವವರೋ ಅಲ್ಲ. ಅವರು ತನ್ನ ಜೊತೆಗೆ ಒಂದು ಸುಮಾರು ಒಂದು ಅಡಿ ಎತ್ತರದ ಬೆಳಕಿನಿಂದ ಅಲಂಕರಿಸಿದ ರೋಬೊ ಇಟ್ಟುಕೊಂಡಿದ್ದಾರೆ. ಆ ರೋಬೊದ ಕೆಳಗೆ ನಾಲ್ಕು ಅಡಿ ಎತ್ತರದ ಒಂದು ಮಡಚಬಹುದಾದ ಟೇಬಲ್‌ ಇದೆ. ಆ ಟೇಬಲ್‌ ಸ್ಟ್ಯಾಂಡಿನ ಒಳಗೆ ಒಂದು ನಿಗೂಢ ಕಪ್ಪು ಪೆಟ್ಟಿಗೆಯಿದೆ. “ಇದನ್ನು ಲೈವ್‌ ಜ್ಯೋತಿಷ್‌ ಕಂಪ್ಯೂಟರ್‌ ಲೈವ್‌ ಸ್ಟೋರಿ” ಎಂದು ಕರೆಯಲಾಗುತ್ತದೆ ಎಂದು ತನ್ನ ರೋಬೊವನ್ನು ಈ ವರದಿಗಾರರಿಗೆ ಅವರು ಪರಿಚಯಿಸಿದರು.

ಈ ಯಂತ್ರವು ಮನುಷ್ಯರ ಭವಿಷ್ಯವನ್ನು ಗ್ರಹಿಸಬಲ್ಲದು ಎಂದು ಅವರು ಹೇಳುತ್ತಾರೆ. ತನ್ನ ಬಳಿಗೆ ಬಂದ ಗ್ರಾಹಕರಿಗೆ ಅವರು ಹೆಡ್‌ ಫೋನ್‌ ಒಂದನ್ನು ಹಸ್ತಾಂತರಿಸುತ್ತಾರೆ. ಒಂದು ಸಣ್ಣ ಮೌನದ ನಂತರ ಮಹಿಳಾ ದನಿಯೊಂದು ಹಿಂದಿಯಲ್ಲಿ ಆ ವ್ಯಕ್ತಿಯ ಭವಿಷ್ಯದಲ್ಲಿ ಅಡಗಿರುವ ಸಂಗತಿಗಳನ್ನು ಹೇಳತೊಡಗುತ್ತದೆ. ಇದಕ್ಕೆ 30 ರೂಪಾಯಿ ಪಾವತಿಸಬೇಕು.

ಕೆಲವು ದಶಕಗಳ ಹಿಂದೆ ಬಿಹಾರದ ಗೆಂದಾ ಎನ್ನುವ ಕುಗ್ರಾಮದಿಂದ ಮುಂಬೈಗೆ ಸ್ಥಳಾಂತರಗೊಂಡ ತನ್ನ ಚಿಕ್ಕಪ್ಪ ರಾಮ್ ಚಂದರ್ (ಮತ್ತು ಅವರನ್ನು ನಗರದಲ್ಲಿ ರಾಜು ಎಂದು ಗುರುತಿಸಲಾಗುತ್ತಿತ್ತು) ಅವರಿಂದ ಆನುವಂಶಿಕವಾಗಿ ತನ್ನದಾಗಿಸಿಕೊಂಡ ಈ ತಾಂತ್ರಿಕ ಅದ್ಭುತದ ಏಕೈಕ ರಕ್ಷಕ ಉದಯ್. ಪ್ರತಿ ಬಾರಿ ಚಿಕ್ಕಪ್ಪ ಊರಿಗೆ ಬರುವಾಗ ತನ್ನೊಂದಿಗೆ ನಗರದ ಕಥೆಗಳನ್ನು ಸಹ ತರುತ್ತಿದ್ದರು. "ಚಾಚಾ ತಾನು [ತಂದೆಯ ತಮ್ಮ] ಭವಿಷ್ಯವನ್ನು ಹೇಳಬಲ್ಲ ಅಜೂಬಾ [ವಿಚಿತ್ರ ವಸ್ತು] ಹೊಂದಿದ್ದು ಅದರ ಮೂಲಕ ಹಣವನ್ನು ಸಂಪಾದಿಸುತ್ತಿರುವುದಾಗಿ ಹೇಳಿದರು. ಇದನ್ನು ಕೇಳಿ ಅನೇಕರು ನಕ್ಕು ತಮಾಷೆಗೆ ಹೇಳುತ್ತಿರಬಹುದು ಎಂದುಕೊಂಡರು. ಆದರೆ ನಾನು ಅವರ ಮಾತಿನಿಂದ ಆಕರ್ಷಿತನಾಗಿದ್ದೆ!" ಎಂದು ಉದಯ್ ನೆನಪಿಸಿಕೊಳ್ಳುತ್ತಾರೆ. ರಾಜು ತನ್ನ 11 ವರ್ಷದ ಅಣ್ಣನ ಮಗನಿಗೆ ನಗರ ಜೀವನದ ಅದ್ಭುತಗಳನ್ನು ಮತ್ತು ಯಂತ್ರದ ಅದ್ಭುತಗಳನ್ನು ಪರಿಚಯಿಸಿದ್ದರು.

PHOTO • Aakanksha
PHOTO • Aakanksha

ಉದಯ್ ಕುಮಾರ್ ಅವರು 'ಜ್ಯೋತಿಷ್ ಕಂಪ್ಯೂಟರ್ ಲೈವ್ ಸ್ಟೋರಿ' ಎಂದು ಕರೆಯಲ್ಪಡುವ ಭವಿಷ್ಯದ ರೋಬೋಟ್ ಜೊತೆ ಬೀಚ್‌ ಬಳಿ

ಉದಯ್ ಅವರ ಪೋಷಕರು, ತಮ್ಮ ಕೆಲವು ಬಿಘಾ ಭೂಮಿಯಲ್ಲಿ ದುಡಿಯುವ ರೈತ ದಂಪತಿಗಳಾಗಿದ್ದರು. ಅವರು ಪದೇ ಪದೇ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರು, ಪರಿಣಾಮವಾಗಿ ಉದಯ್‌ 4ನೇ ತರಗತಿಯ ನಂತರ ಶಿಕ್ಷಣವನ್ನು ತೊರೆದರು. ನಂತರ ಅವರು ಬಿಹಾರದ ವೈಶಾಲಿ ಜಿಲ್ಲೆಯಲ್ಲಿದ್ದ ತನ್ನ ಊರನ್ನು ತೊರೆದು ತನ್ನ ಚಿಕ್ಕಪ್ಪ ರಾಜು ಅವರೊಡನೆ ಮುಂಬಯಿ ಸೇರಿಕೊಂಡರು. ಹಾಗೆ ಮುಂಬಯಿ ಹೋಗುವ ನಿರ್ಧಾರದ ಹಿಂದೆ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡುವ ಆಲೋಚನೆಯೂ ಇತ್ತು. ಬಹುಶಃ ಆಗ ನನಗೆ ಹದಿಹರೆಯ ಎಂದು ಅವರು ಹೇಳುತ್ತಾರೆ. “ವೋ ಮೆಷಿನ್ ದೇಖ್ನಾ ಥಾ ಔರ್ ಮುಂಬೈ ಭಿ [ಆ ಯಂತ್ರವನ್ನು ನೋಡಬೇಕಿತ್ತು, ಜೊತೆಗೆ ಮುಂಬಯಿ ನೋಡುವ ಆಸೆಯೂ ಇತ್ತು]!" ಎಂದ ಉದಯ್‌ ನೆನಪುಗಳಲ್ಲಿ ಮುಳುಗತೊಡಗಿದ್ದರು.

ಅವರ ಚಿಕ್ಕಪ್ಪ ಬಳಸುತ್ತಿದ್ದ ಈ ಯಂತ್ರವನ್ನು ಚೆನ್ನೈ ಮತ್ತು ಕೇರಳದ ಕುಶಲಕರ್ಮಿಗಳು ತಯಾರಿಸಿದ್ದು. 90ರ ದಶಕದ ಕೊನೆಯಲ್ಲಿ ಈ ಯಂತ್ರ ಮುಂಬೈ ನಗರಕ್ಕೆ ಪಾದಾರ್ಪಣೆ ಮಾಡಿತು ಎಂದು ಉದಯ್ ನೆನಪಿಸಿಕೊಳ್ಳುತ್ತಾರೆ. ರಾಜು ಚಾಚಾ ಕಲಾವಿದರೊಬ್ಬರನ್ನು ಭೇಟಿಯಾಗಿ ಈ ವ್ಯವಹಾರದಲ್ಲಿ ಒಂದು ಕೈ ನೋಡಲೆಂದು ಯಂತ್ರವನ್ನು ಬಾಡಿಗೆಗೆ ಪಡೆದಿದ್ದರು.

"ಆಗ ಈ ಕೆಲಸದಲ್ಲಿ ಸುಮಾರು 20-25 ಜನರಿದ್ದರು" ಎಂದು ಉದಯ್ ಹೇಳುತ್ತಾರೆ. "ಅವರಲ್ಲಿ ಹೆಚ್ಚಿನವರು ದಕ್ಷಿಣದ ರಾಜ್ಯಗಳಿಂದ ಬಂದವರು, ಕೆಲವರು ಬಿಹಾರ ಮತ್ತು ಉತ್ತರ ಪ್ರದೇಶದವರು. ಅವರೆಲ್ಲರೂ ಒಂದೇ ರೀತಿಯ ಯಂತ್ರವನ್ನು ಹೊಂದಿದ್ದರು."

ರಾಜು ಅವರಂತೆಯೇ ಉಳಿದವರೂ ತಮ್ಮ ಯಂತ್ರ ಹಿಡಿದುಕೊಂಡು ನಗರದ ಎಲ್ಲ ಕಡೆ ಅಲೆಯುತ್ತಿದ್ದರು. ಆದರೆ ಜುಹು ಕಡಲ ತೀರದಲ್ಲಿ ಈ ಭವಿಷ್ಯ ಹೇಳುವವರಿಗೆ ವಿಶೇಷ ಸ್ಥಾನವಿತ್ತು.  ಮೊದಲಿಗೆ ಉದಯ್‌ ತನ್ನ ಚಿಕ್ಕಪ್ಪನ ಹಿಂದೆ ಬಾಲದಂತೆ ಅವರು ಹೋದಲೆಲ್ಲ ಹೋಗುತ್ತಿದ್ದರು. ಚಿಕ್ಕಪ್ಪ ಗಳಿಸಿದ್ದರಲ್ಲಿ ನಾಲ್ಕನೇ ಒಂದು ಭಾಗ ಯಂತ್ರದ ಬಾಡಿಗೆಗೆ ಹೋಗುತ್ತಿತ್ತು. ಸ್ವಂತಕ್ಕೆ ಯಂತ್ರ ಕೊಂಡುಕೊಳ್ಳಲು ಆಗ ಅದು ದುಬಾರಿಯಾಗಿತ್ತು. ಸುಮಾರು 40,000 ರೂಪಾಯಿಯಷ್ಟಿತ್ತು. ಮುಂದೆ ದಿನ ಕಳೆದಂತೆ ಅವರು ಯಂತ್ರವೊಂದನ್ನು ಖರೀದಿಸುವಲ್ಲಿ ಯಶಸ್ವಿಯಾದರು.

PHOTO • Aakanksha
PHOTO • Aakanksha

ಉದಯ್ ತನ್ನ ಕುತೂಹಲಕಾರಿ ಉಪಕರಣದೊಂದಿಗೆ ಮುಂಬೈ ನಗರದ ಎಲ್ಲೆಡೆ ಸುತ್ತುತ್ತಾರೆ ಆದರೆ ಜುಹು ಬೀಚ್ ಅವರಿಗಾಗಿ ವಿಶೇಷ ಸ್ಥಾನವೊಂದನ್ನು ಹೊಂದಿತ್ತು

ಅನೇಕ ಪ್ರಯತ್ನಗಳ ಹೊರತಾಗಿಯೂ ಉದಯ್ ಅವರಿಗೆ ಈ ರೋಬೋಟ್ ತಯಾರಿಸುವ ತಂತ್ರಗಳನ್ನು ಕಲಿಯಲು ಸಾಧ್ಯವಾಗಲಿಲ್ಲ. ಕೆಲವು ವರ್ಷಗಳ ಹಿಂದೆ ರಾಜು ನಿಧನರಾದ ನಂತರವೇ ಅವರ ಪಾಲಿಗೆ ಈ ಭವಿಷ್ಯ ಹೇಳುವ ಯಂತ್ರ ಪಿತ್ರಾರ್ಜಿತ ಆಸ್ತಿಯಾಗಿ ಕೈಸೇರಿತು. ಒಂದು ಕಾಲದಲ್ಲಿ ತನ್ನ ಕಲ್ಪನೆಯನ್ನು ಆಕರ್ಷಿಸಿದ್ದ ಸಂಪ್ರದಾಯವನ್ನು ತಾನು ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಉದಯ್‌ ಭಾವಿಸಿದರು.

ದಶಕದ ಹಿಂದೆ ಜನರು ತಮ್ಮ ಮುಂದಿನ ಹಣೆಬರಹವನ್ನು ಮುಂಚಿತವಾಗಿ ತಿಳಿದುಕೊಳ್ಳಲು 20 ರೂಪಾಯಿ ಕೊಡುತ್ತಿದ್ದರು. ಈಗ ನಾಲ್ಕು ವರ್ಷಗಳಿಂದ ಈ ಮೊತ್ತ ರೂಪಾಯಿ 30ಕ್ಕೆ ಏರಿದೆ. ಕೋವಿಡ್‌ - 19 ಸಾಂಕ್ರಾಮಿಕ ಪಿಡುಗು ಅವರ ವ್ಯವಹಾರಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. “ದಿನ ಕಳೆದಂತೆ ಅನೇಕರು ಈ ವ್ಯವಹಾರದಿಂದ ಹಿಂದಕ್ಕೆ ಸರಿದರು” ಎಂದು ಉದಯ್‌ ಹೇಳುತ್ತಾರೆ. ಕೊರೋನಾ ಪಿಡುಗಿನ ನಂತರವೂ ಈ ನಿಗೂಢ ಯಂತ್ರದೊಂದಿಗೆ ತಮ್ಮ ಬದುಕನ್ನು ಮುಂದುವರೆಸಿರುವುದು ಉದಯ್‌ ಮಾತ್ರ.

ಉದಯ್‌ ಅವರಿಗೂ ಈಗ ಈ ಯಂತ್ರವನ್ನೇ ನಂಬಿಕೊಂಡು ಬದುಕಲು ಕಷ್ಟವಾಗುತ್ತಿದೆ. ಅವರ ಹೆಂಡತಿ ಮತ್ತು ಮಗ ಊರಿನಲ್ಲಿದ್ದಾರೆ. ಅವರಿಗೆ ತಮ್ಮ ಮಗನನ್ನು ಮುಂಬಯಿಯಲ್ಲೇ ಓದಿಸುವ ಆಸೆಯಿದೆ. ಪ್ರಸ್ತುತ ಅವರು ಬೆಳಗಿನ ಹೊತ್ತು ಗುಮಾಸ್ತನ ಕೆಲಸ, ಕರಪತ್ರಗಳನ್ನು ಮಾರುವುದು ಮೊದಲಾದ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾರೆ. ಅವರು ತನಗೆ ಸಿಗುವ ಯಾವ ಕೆಲಸವನ್ನೂ ಮಾಡಲು ಸಿದ್ಧರಿದ್ದಾರೆ. “ಬೆಳಗಿನ ಹೊತ್ತು ಕೆಲಸ ಸಿಗದಿದ್ದಾಗ, ಈ ರೋಬೊ ಜೊತೆ ನಿಂತು ಒಂದಷ್ಟು ಸಂಪಾದಿಸಿ ಆ ಹಣವನ್ನು ಊರಿಗೆ ಕಳುಹಿಸುತ್ತೇನೆ” ಎಂದು ಹೇಳುತ್ತಾರೆ.

ಉದಯ್ ಸಂಜೆ 4 ಗಂಟೆಯಿಂದ ಮಧ್ಯರಾತ್ರಿಯವರೆಗೆ ಜುಹು ಕಡಲ ತೀರದಲ್ಲಿ ನಿಲ್ಲುತ್ತಾರೆ. ಬೇರೆ ಎಲ್ಲಾದರೂ ನಿಲ್ಲೋಣವೆಂದರೆ ದಂಡ ವಿಧಿಸಬಹುದು ಎನ್ನುವ ಭಯ ಅವರನ್ನು ಕಾಡುತ್ತದೆ. ಜೊತೆಗೆ ಯಂತ್ರವನ್ನು ಸಾಗಿಸುವುದು ಸಹ ಕಷ್ಟವಾಗುತ್ತದೆ. ವಾರದ ಕೊನೆಯಲ್ಲಿ ಸಂಪಾದನೆ ಒಂದಷ್ಟು ಚೆನ್ನಾಗಿರುತ್ತದೆ. ಆ ದಿನಗಳಲ್ಲಿ ಸಾಮಾನ್ಯಕ್ಕಿಂತಲೂ ಹೆಚ್ಚು ಉತ್ಸಾಹಿ ಭವಿಷ್ಯ ಅನ್ವೇಷಕರು ಅವರ ಬಳಿ ಬರುತ್ತಾರೆ. ಆ ದಿನಗಳಲ್ಲಿ ಅವರ ಸಂಪಾದನೆ 300 - 500 ರೂ.ಗಳ ನಡುವೆ ಇರುತ್ತದೆ. ಎಲ್ಲ ಒಟ್ಟು ಸೇರಿಗೆ ತಿಂಗಳಿಗೆ ಅವರ ಸಂಪಾದನೆ 7,000-10,000 ರೂ.

PHOTO • Aakanksha
PHOTO • Aakanksha

ಉದಯ್ ಕುಮಾರ್ ತನ್ನ ಚಿಕ್ಕಪ್ಪನಿಂದ ಯಂತ್ರವನ್ನು ಪಿತ್ರಾರ್ಜಿತವಾಗಿ  ಪಡೆದರು. ಮುಂಬಯಿಯ ಮೋಡಿ ಹಾಗೂ ಯಂತ್ರದ ಕುರಿತಾದ ಕುತೂಹಲವು ಅವರನ್ನು ಹದಿಹರೆಯದಲ್ಲಿ ಇಲ್ಲಿಗೆ ಬರುವಂತೆ ಮಾಡಿತು

“ಹಳ್ಳಿಯ ಜನರು ಜ್ಯೋತಿಷಿಗಳನ್ನು ನಂಬುತ್ತಾರೆ, ಅವರು ಯಂತ್ರಗಳನ್ನು ನಂಬುವುದಿಲ್ಲ. ಹೀಗಾಗಿ ಊರಿನಲ್ಲಿ ಒಳ್ಳೆಯ ಸಂಪಾದನೆಯಿಲ್ಲ” ಎಂದು ಉದಯ್ ಹೇಳುತ್ತಾರೆ, ಯಂತ್ರದ ನಿಗೂಢ ಶಕ್ತಿಯನ್ನು ಹಳ್ಳಿಯ ತನ್ನ ಸಹ ಬಿಹಾರಿಗಳಿಗೆ ಮನವರಿಕೆ ಮಾಡುವಲ್ಲಿ ತನ್ನ ವಿಫಲ ಪ್ರಯೋಗಗಳ ಬಗ್ಗೆ ಮಾತನಾಡುತ್ತಾ ಮುಂಬೈ ತನ್ನ ವ್ಯವಹಾರದ ಸ್ಥಳ ಎಂದು ಅವರು ಹೇಳುತ್ತಾರೆ, ಆದರೂ ಭವಿಷ್ಯ ಹೇಳುವ ಉಪಕರಣವು ಮನರಂಜನೆಯ ಮೂಲವಾಗಿದೆ ಮತ್ತು ಕಡಲತೀರದ ಜನರು ಅದನ್ನು ಅನುಮಾನದಿಂದ ನೋಡುತ್ತಾರೆ.

"ಕೆಲವರು ಇದನ್ನು ತಮಾಷೆಯಾಗಿ ಕಾಣುತ್ತಾರೆ ಮತ್ತು ಯಂತ್ರವನ್ನು ನೋಡಿ ನಗುತ್ತಾರೆ; ಕೆಲವರು ಆಘಾತಕ್ಕೊಳಗಾಗುತ್ತಾರೆ. ಇತ್ತೀಚೆಗೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತ ಈ ಭವಿಷ್ಯ ಕೇಳುವಂತೆ ಒತ್ತಾಯ ಮಾಡಿದಾಗ ಅಪಹಾಸ್ಯ ಮಾಡಿ ನಕ್ಕಿದ್ದ. ಕೇಳಿದ ನಂತರ ಅವನು ಪ್ರಭಾವಿತನಾಗಿದ್ದ. ಅವನಿಗೆ ಹೊಟ್ಟೆಯ ಸಮಸ್ಯೆಯಿರುವುದನ್ನು ರೋಬೋಟ್‌ ತಿಳಿಸಿತ್ತು. ಮತ್ತು ಅದು ಆ ಕುರಿತು ಹೆಚ್ಚು ಚಿಂತಿಸುವುದು ಬೇಡ ಎಂದೂ ಅದು ಹೇಳಿತ್ತು. ನಾನು ಇಂತಹ ಹಲವರನ್ನು ಭೇಟಿಯಾಗಿದ್ದೇನೆ. ನಂಬುವವರು ನಂಬುತ್ತಾರೆ” ಎಂದು ಉದಯ್ ಹೇಳುತ್ತಾರೆ.

"ಯಂತ್ರವು ಎಂದಿಗೂ ಎಡವಿದ್ದಿಲ್ಲ" ಎಂದು ಉದಯ್ ಹೆಮ್ಮೆಯಿಂದ ಹೇಳುತ್ತಾರೆ, ಇದು ಅದರ ನಿಗೂಢ ಸ್ಥಿತಿಸ್ಥಾಪಕತ್ವಕ್ಕೆ ಸಾಕ್ಷಿಯಾಗಿದೆ.

ಇದು ಎಂದಾದರೂ ಕೆಲಸ ಮಾಡುವುದನ್ನು ನಿಲ್ಲಿಸಿದೆಯೇ?

ಒಂದು ವೇಳೆ ಕೆಟ್ಟರೆ ವೈರಿಂಗ್ ಸರಿಪಡಿಸಲು ಪಟ್ಟಣದಲ್ಲಿ ಮೆಕ್ಯಾನಿಕ್ ಇದ್ದಾರೆ ಎಂದು ಉದಯ್ ಮಾಹಿತಿ ನೀಡುತ್ತಾರೆ.

"ಇದು ಏನು ಹೇಳುತ್ತದೆಯೋ ಅದನ್ನು ನಾನು ನಂಬುತ್ತೇನೆ. ಇದು ನನ್ನ ಕೆಲಸವನ್ನು ಮುಂದುವರಿಸುವಂತೆ ಭರವಸೆ ನೀಡುತ್ತದೆ" ಎಂದು ಉದಯ್ ಹೇಳುತ್ತಾರೆ. ಅವರು ಯಂತ್ರವು ತನ್ನ ಕುರಿತು ಹೇಳಿದ್ದನ್ನು ಕೂಡಾ ಮುಚ್ಚಿಡಲಿಲ್ಲ. “ಈ ಯಂತ್ರದ ಒಳಗೆ ಒಂದು ಮ್ಯಾಜಿಕ್‌ ಇದೆ. ಇದೇ ಕಾರಣಕ್ಕೆ ಯಂತ್ರವು ನನ್ನ ಬಗ್ಗೆ ಏನು ಹೇಳುತ್ತದೆ ಎನ್ನುವುದರ ಬಗ್ಗೆ ನನಗೆ ಸದಾ ಕುತೂಹಲ. ಅದನ್ನು ನಂಬಿ ಎಂದು ನಿಮಗೆ ಹೇಳುವುದಿಲ್ಲ. ಒಮ್ಮೆ ಕೇಳಿ ನಂತರ ನೀವೇ ನಿರ್ಧರಿಸಿ” ಎಂದು ಅವರು ನಗುತ್ತಾ ಹೇಳುತ್ತಾರೆ.

PHOTO • Aakanksha

ಭವಿಷ್ಯ ಹೇಳುವ ಯಂತ್ರವು ಜನರಿಗೆ ಮನರಂಜನೆಯ ಮೂಲವಾಗಿದೆ ಮತ್ತು ಕೆಲವೊಮ್ಮೆ ಇದನ್ನು ಅನುಮಾನದಿಂದ ನೋಡಲಾಗುತ್ತದೆ

PHOTO • Aakanksha

" ಹಳ್ಳಿಯಲ್ಲಿ ಜನರು ಜ್ಯೋತಿಷಿಗಳನ್ನು ನಂಬುತ್ತಾರೆ ಯೇ ಹೊರತು ಯಂತ್ರಗಳ ನ್ನ ಲ್ಲ , ಹೀಗಾಗಿ ಅಲ್ಲಿ ಉತ್ತಮ ಸಂಪಾದನೆ ಆಗುವುದಿ ಲ್ಲ" ಎಂದು ಉದಯ್ ಹೇಳುತ್ತಾರೆ. ಮುಂಬೈ ಅವರ ಪಾಲಿನ ಅವರ ವ್ಯವಹಾರದ ಸ್ಥಳ

PHOTO • Aakanksha

ಯಂತ್ರ ಹೇಳುವ ಮಾತುಗಳು ಕೆಲವರಿಗೆ ತಮಾಷೆಯೆನ್ನಿಸಬಹುದು, ಅದನ್ನು ನೋಡಿ ಒಬ್ಬರು ನಗಬಹುದು, ಆದರೆ ಯಂತ್ರ ಇದುವರೆಗೂ ಎಡವಿದ್ದಿಲ್ಲ ಎಂದು ಉದಯ್ ಹೇಳುತ್ತಾರೆ

PHOTO • Aakanksha

ಈ ಭವಿಷ್ಯ ಹೇಳುವ ಯಂತ್ರವೊಂದನ್ನೇ ನಂಬಿ ಬದುಕು ಸಾಗಿಸಲು ಸಾಧ್ಯವಾಗದ ಕಾರಣ ಉದಯ್‌ ಬೆಳಗಿನ ಹೊತ್ತು ಬೇರೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿ ಸಂಜೆಯ ನಂತರ ಬೀಚ್‌ ಕಡೆ ಹೋಗುತ್ತಾರೆ

PHOTO • Aakanksha

30 ರೂಪಾಯಿ ನೀಡಿ ತನ್ನ ಭವಿಷ್ಯದ ಕುರಿತು ಮುನ್ನೋಟವನ್ನು ಪಡೆಯುತ್ತಿರುವ ಗ್ರಾಹಕ

PHOTO • Aakanksha

ಕೋವಿಡ್ - 19 ಸಾಂಕ್ರಾಮಿಕ ಸಮಯದಲ್ಲಿ ಅವರ ವ್ಯವಹಾರಕ್ಕೆ ಹೊಡೆತ ಬಿದ್ದಿದೆ. ಆದರೆ ನಂತರವೂ ಅವರು ತಮ್ಮ ವ್ಯವಹಾರವನ್ನು ಮುಂದುವರಿಸಿದ್ದಾರೆ

PHOTO • Aakanksha

ಯಂತ್ರವು ತನ್ನ ಕುರಿತು ಹೇಳುವುದನ್ನು ಕೇಳಲು ಅವರಿಗೆ ಸದಾ ಕುತೂಹಲ ಮತ್ತು ಅವರಿಗೆ ಅದು ಹೇಳುವುದರ ಮೇಲೆ ನಂಬಿಕೆಯಿದೆ

ಅನುವಾದ: ಶಂಕರ. ಎನ್. ಕೆಂಚನೂರು

Aakanksha

आकांक्षा, पीपल्स आर्काइव ऑफ़ रूरल इंडिया के लिए बतौर रिपोर्टर और फ़ोटोग्राफ़र कार्यरत हैं. एजुकेशन टीम की कॉन्टेंट एडिटर के रूप में, वह ग्रामीण क्षेत्रों के छात्रों को उनकी आसपास की दुनिया का दस्तावेज़ीकरण करने के लिए प्रशिक्षित करती हैं.

की अन्य स्टोरी Aakanksha
Editor : Pratishtha Pandya

प्रतिष्ठा पांड्या, पारी में बतौर वरिष्ठ संपादक कार्यरत हैं, और पारी के रचनात्मक लेखन अनुभाग का नेतृत्व करती हैं. वह पारी’भाषा टीम की सदस्य हैं और गुजराती में कहानियों का अनुवाद व संपादन करती हैं. प्रतिष्ठा गुजराती और अंग्रेज़ी भाषा की कवि भी हैं.

की अन्य स्टोरी Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru