ಹಿಮಾಚಲ ಪ್ರದೇಶವು ಹಿಮಾವೃತವಾದ ಪರ್ವತಗಳಿಗೆ ಹೆಸರುವಾಸಿ. ಆದರೆ ಕಾಂಗ್ರಾ ಜಿಲ್ಲೆಯ ಪಾಲಂಪುರ್ ಪಟ್ಟಣದಲ್ಲಿ, ಬೇರೆಯದೇ ಪರ್ವತಗಳು ತಲೆಯೆತ್ತುತ್ತಿವೆ – ಅವುಗಳಲ್ಲಿ ಕಸದ ಪರ್ವತವೂ ಒಂದು.

ಈ ರಾಜ್ಯವು ಜನಪ್ರಿಯ ಪ್ರವಾಸಿ ತಾಣವಾಗಿದ್ದು, 2019ರಲ್ಲಿ, ಇದು 17.2.5 ಕೋಟಿ ಜನರ ಒಳಹರಿವನ್ನು ಹೊಂದಿತ್ತು, ಈ ಸಂಖ್ಯೆ 2011ರಲ್ಲಿ 14.9.5 ಕೋಟಿಯಷ್ಟಿತ್ತು. ಪ್ರವಾಸೋದ್ಯಮವು ಇಲ್ಲಿನ ಆರ್ಥಿಕತೆಯ ಒಂದು ದೊಡ್ಡ ಭಾಗವಾಗಿದೆ, ಮತ್ತು ಕಾಂಗ್ರಾ ಜಿಲ್ಲೆಯಲ್ಲಿಯೇ ಸುಮಾರು 1,000 ಹೋಟೆಲ್ಲುಗಳು ಮತ್ತು ಹೋಮ್ ಸ್ಟೇಗಳಿವೆ. ಪ್ರವಾಸಿಗರ ಒಳಹರಿವು ಭೂಮಿ ಮತ್ತು ನದಿ ತೀರಗಳಲ್ಲಿ ಸಾಕಷ್ಟು ತ್ಯಾಜ್ಯವನ್ನು ಸಂಗ್ರಹವಾಗಲು ಕಾರಣವಾಗಿದೆ, ಇದು ಈ ಪರ್ವತ ಪಟ್ಟಣದ ಪರಿಸರ ವ್ಯವಸ್ಥೆಯನ್ನು ತೀವ್ರವಾಗಿ ಹಾನಿಗೊಳಿಸುತ್ತಿದೆ.

“ಇದು ಮೊದಲು ಖಾಲಿ ಮೈದಾನವಾಗಿತ್ತು. ಇಲ್ಲಿ ಮಕ್ಕಳು ಆಡುತ್ತಿದ್ದರು” ಡಂಪಿಂಗ್‌ ಯಾರ್ಡಿನಿಂದ ಕೆಲವು ನಿಮಿಷಗಳ ದಾರಿಯ ದೂರದಲ್ಲಿ ವಾಸಿಸುವ 72 ವರ್ಷದ ಗಲೋರಾ ರಾಮ್ ನೆನಪಿಸಿಕೊಳ್ಳುತ್ತಾರೆ.

"ಈ ಜಾಗ ಪೂರ್ತಿ ಹಸಿರು ಮತ್ತು ಮರಗಳಿಂದ ತುಂಬಿತ್ತು" ಎಂದು ಶಿಶು ಭಾರದ್ವಾಜ್ (32) (ಹೆಸರು ಬದಲಾಯಿಸಲಾಗಿದೆ) ಹೇಳುತ್ತಾರೆ. ಅವರ ಚಹಾದ ಅಂಗಡಿಯೆದುರು ಕಾಣು ಕಸ ಸುರಿಯುವ ಜಾಗವನ್ನು ತೋರಿಸುತ್ತಾ, “ಕಸ ಬರುವುದು ಹೆಚ್ಚಾದಂತೆ ಅದಕ್ಕೆ ಜಾಗ ಮಾಡಿಕೊಡುವ ಸಲುವಾಗಿ ಅವರು [ಪುರಸಭೆ] ಮರಗಳನ್ನು ಕಡಿಯತೊಡಗಿದರು” ಎನ್ನುವ ಅವರು “ಕಸದ ವಾಸನೆ ಮತ್ತು ನೊಣದ ಕಾಟವನ್ನು ನಮಗೆ ತಡೆಯಲು ಸಾಧ್ಯವಾಗುತ್ತಿಲ್ಲ” ಎನ್ನುತ್ತಾರೆ

ಅವರ ಭೂಮಿ ಪಾಲಂಪುರದ ಕಸದ ಯಾರ್ಡಿನ ಬಳಿಯಲ್ಲೇ ಇದೆ. ಈ ಯಾರ್ಡು ಸುಮಾರು ಐದು ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಬಟ್ಟೆಯ ವ್ಯರ್ಥ ಭಾಗ, ಪ್ಲಾಸ್ಟಿಕ್ ಚೀಲಗಳು, ಮುರಿದ ಆಟಿಕೆಗಳು, ಬಿಸಾಡಲಾದ ಬಟ್ಟೆಗಳು ಮತ್ತು ಗೃಹೋಪಯೋಗಿ ವಸ್ತುಗಳು, ಅಡುಗೆ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ, ಅಪಾಯಕಾರಿ ವೈದ್ಯಕೀಯ ತ್ಯಾಜ್ಯ ಮತ್ತು ಹೆಚ್ಚಿನವು ರಾಶಿಯಲ್ಲಿ ಬಿದ್ದಿವೆ;‌ ಅಂದು ಅಲ್ಲಿ ಸುರಿವ ಮಳೆಯ ನಡುವೆಯೂ ನೊಣದ ಹಿಂಡು ಬಹಳಷ್ಟಿದ್ದವು.

2019ರಲ್ಲಿ ಈ ಸ್ಥಳದಲ್ಲಿ ಶಿಶು ಭಾರಾದ್ವಾಜ್‌ ಅವರು ಅಂಗಡಿ ಆರಂಭಿಸಿದ ಸಂದರ್ಭದಲ್ಲಿ ಇಲ್ಲಿ ತ್ಯಾಜ್ಯ ಮರುಬಳಕೆ ಘಟಕವಿತ್ತು. ಅದರಲ್ಲಿ ಮೂರು ಪಂಚಾಯತುಗಳ ಕಸವನ್ನು ವಿಗಂಡಿಸಿ ಮರುಬಳಕೆ ಮಾಡಲಾಗುತ್ತಿತ್ತು. ಆದರೆ ಕೊರೋನಾ ಪಿಡುಗು ಆರಂಭಗೊಳ್ಳುತ್ತಿದ್ದಂತೆ, ಮತ್ತು ಅದರ ನಂತರ ಎಲ್ಲಾ ವಾರ್ಡುಗಳ ಎಲ್ಲಾ ರೀತಿಯ ಕಸಗಳು ಈ ಕಸದ ಯಾರ್ಡಿಗೆ ಬರಲಾರಂಭಿಸಿತು. ಮತ್ತು ಪ್ರಸ್ತುತ ಕಸ ವಿಂಗಡಿಸುವ ಸಲುವಾಗಿ ಕೇವಲ ಮಾನವ ಶಕ್ತಿಯನ್ನಷ್ಟೇ ಬಳಸಲಾಗುತ್ತಿದೆ.

Left : Waste dump as visible from Shishu Bhardwaj's tea shop in Palampur, Kangra.
PHOTO • Sweta Daga
Right: (In the background) Ashish Sharma, the Municipal Commissioner of Palampur and Saurabh Jassal, Deputy Commissioner Kangra, surveying the dumpsite
PHOTO • Sweta Daga

ಎಡ: ಕಾಂಗ್ರಾ ಜಿಲ್ಲೆಯ ಪಾಲಂಪುರದ ಶಿಶು ಭಾರದ್ವಾಜ್ ಅವರ ಚಹಾ ಅಂಗಡಿಯಿಂದ ಗೋಚರಿಸುವ ಕಸದ ರಾಶಿ. ಬಲ: (ಹಿನ್ನೆಲೆಯಲ್ಲಿ) ಪಾಲಂಪುರದ ಮುನ್ಸಿಪಲ್ ಕಮಿಷನರ್ ಆಶಿಶ್ ಶರ್ಮಾ ಮತ್ತು ಕಾಂಗ್ರಾ ಜಿಲ್ಲಾಧಿಕಾರಿ ಸೌರಭ್ ಜಸ್ಸಾಲ್ ಕಸ ವಿಲೇವಾರಿ ಮಾಡುವ ಸ್ಥಳವನ್ನು ಸಮೀಕ್ಷೆ ಮಾಡುತ್ತಿದ್ದಾರೆ

ಇತ್ತೀಚೆಗೆ ಪುರಸಭೆ ಹೊಸ ತ್ಯಾಜ್ಯ ವಿಂಗಡಣೆ ಯಂತ್ರಗಳನ್ನು ಸ್ಥಾಪಿಸಿದ್ದು, ಮರುಬಳಕೆ ಪ್ರಕ್ರಿಯೆ ಮತ್ತೆ ಆರಂಭಗೊಳ್ಳಲಿದೆ ಎಂದು ಪುರಸಭೆ ಆಯುಕ್ತರು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಸದ ಉತ್ಪತ್ತಿಯನ್ನು ನಿರ್ವಹಣೆ ಮಾಡುವಲ್ಲಿ ಸ್ಥಳೀಯ ಆಡಳಿತ ಸೋತಿದೆ. ಮತ್ತು ಉತ್ಪತ್ತಿಯಾಗುತ್ತಿರುವ ಕಸದ ಗಾತ್ರಕ್ಕೆ ತಕ್ಕಂತೆ ಡಂಪಿಂಗ್‌ ಯಾರ್ಡ್‌ಗಳನ್ನು ಯೋಜಿಸುವಲ್ಲಿಯೂ ಅದು ಸೋತಿದೆ ಎನ್ನುತ್ತಾರೆ ಸ್ಥಳೀಯರು. ಪ್ರಸ್ತುತ ಡಂಪ್‌ ಯಾರ್ಡ್‌ ನ್ಯೂಗಲ್‌ ನದಿಯ ಪಕ್ಕದಲ್ಲಿದ್ದು ಅದು ಈ ನದಿಯನ್ನು ಕಲುಷಿತಗೊಳಿಸುವ ಸಾಧ್ಯತೆಯಿದೆ. ಈ ಪ್ರದೇಶ ಮತ್ತು ಇಲ್ಲಿನ ಕೆಳ ಹಂತದ ಪ್ರದೇಶಗಳ ಜನರ ಪಾಲಿಗೆ ಪ್ರಮುಖ ಕುಡಿಯುವ ನೀರಿನ ಮೂಲವಾಗಿರುವ ನ್ಯೂಗಲ್‌ ನದಿ ಮುಂದೆ ಹೋಗಿ ಬಿಯಾಸ್‌ ನದಿಯನ್ನು ಸೇರುತ್ತದೆ.

ಪಾಲಂಪುರವು ಸಮುದ್ರ ಮಟ್ಟದಿಂದ 1,000ದಿಂದ 1500 ಮೀಟರ್ ಎತ್ತರದಲ್ಲಿರುವ ಸಣ್ಣ ಬೆಟ್ಟದ ಪಟ್ಟಣ. 2023ರ ಆಗಸ್ಟ್ ತಿಂಗಳಲ್ಲಿ ಹಿಮಾಚಲ ಪ್ರದೇಶದಲ್ಲಿ 720 ಮಿ.ಮೀಗಳಷ್ಟು ಧಾರಾಕಾರ ಮಳೆಯಾಗಿತ್ತಾದರೂ ಈ ಪಟ್ಟಣದಲ್ಲಿ ಅಷ್ಟು ಬಿರುಸಾದ ಮಳೆಯೇನೂ ಬಂದಿರಲಿಲ್ಲ. ಆದರೆ ಕಾಲ ಹೀಗೇ ಇರುತ್ತದೆ ಎನ್ನಲು ಸಾಧ್ಯವಿಲ್ಲ ಎನ್ನುತ್ತಾರೆ ಸ್ಥಳೀಯರು.

“ಇಂತಹ ಭಾರೀ ಮಳೆ ನದಿ ಮತ್ತು ಮಣ್ಣಿನ ಮಾಲಿನ್ಯದ ಪ್ರಮಾಣವನ್ನು ಹೆಚ್ಚಿಸುತ್ತದೆ” ಎನ್ನುತ್ತಾರೆ ಫತೆಮಾ ಚಪ್ಪಲ್‌ವಾಲಾ. ಕಾಂಗ್ರಾ ಸಿಟಿಜನ್ಸ್ ರೈಟ್ಸ್ ಫೋರಂನ ಸದಸ್ಯರಾಗಿರುವ ಅವರು ಮುಂಬೈನಿಂದ ಇಲ್ಲಿಗೆ ಬಂದು ಈಗ 12 ಕಿ.ಮೀ ದೂರದಲ್ಲಿರುವ ಕಾಂಡ್ಬಾರಿ ಎಂಬ ಸಣ್ಣ ಕುಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಫತೇಮಾ ಮತ್ತು ಅವರ ಪತಿ ಮೊಹಮ್ಮದ್ ಹಲವು ವರ್ಷಗಳಿಂದ ಕಸದ ಸಮಸ್ಯೆಯ ವಿಚಾರವಾಗಿ ಸ್ಥಳೀಯ ನಾಗರಿಕರೊಂದಿಗೆ ಕೆಲಸ ಮಾಡುತ್ತಿದ್ದಾರೆ.

“ಎಲ್ಲ ಮಣ್ಣು ಮತ್ತು ಕಸವನ್ನು ಇಲ್ಲಿ ತಂದು ಸುರಿಯಲಾಗುತ್ತದೆ. ಸುಮಾರು ಎರಡು ಮೂರು ವರ್ಷಗಳ ಹಿಂದೆ ಅವರು ದೊಡ್ಡ ಪ್ರಮಾಣದಲ್ಲಿ ಕಸ ತಂದು ಸುರಿಯತೊಡಗಿದರು” ಎಂದು ಡಂಪ್ ಯಾರ್ಡಿನಿಂದ ಸುಮಾರು 350 ಮೀಟರ್ ದೂರದಲ್ಲಿರುವ ಉವರ್ನಾ ಎಂಬ ಕುಗ್ರಾಮದ ನಿವಾಸಿ ಗಲೋರಾ ರಾಮ್ ಹೇಳುತ್ತಾರೆ. “ನಮಗೆ ಅನಾರೋಗ್ಯ ಕಾಡುತ್ತಿದೆ. ವಾಸನೆಗೆ ಮಕ್ಕಳು ವಾಂತಿ ಮಾಡಿಕೊಳ್ಳುತ್ತಿದ್ದಾರೆ” ಎಂದು ಅವರು ಹೇಳುತ್ತಾರೆ. ಈ ಕಸದ ಯಾರ್ಡ್‌ ವಿಸ್ತರಣೆಯಾದಾಗಿನಿಂದ ಜನರು ಕಾಯಿಲೆ ಬೀಳುವುದು ಹೆಚ್ಚಾಗಿದೆ ಎಂದು 72 ವರ್ಷದ ಅವರು ಹೇಳುತ್ತಾರೆ. “ಶಾಲೆಗೆ ಹೋಗಬೇಕೆಂದರೆ ಇದೇ ಡಂಪಿಂಗ್‌ ಯಾರ್ಡ್‌ ಮೂಲಕವೇ ಹೋಗಬೇಕೆನ್ನುವ ಕಾರಣಕ್ಕಾಗಿ ಮಕ್ಕಳು ಈಗ ಬೇರೆ ಶಾಲೆಗೆ ಹೋಗಲು ಆರಂಭಿಸಿದ್ದಾರೆ.”

Cloth waste, kitchen waste, industrial waste, hazardous medical waste and more lie in heaps at the garbage site
PHOTO • Sweta Daga

ಬಟ್ಟೆ ತ್ಯಾಜ್ಯ, ಅಡುಗೆ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ, ಅಪಾಯಕಾರಿ ವೈದ್ಯಕೀಯ ತ್ಯಾಜ್ಯ ಮತ್ತು ಇನ್ನೂ ಹೆಚ್ಚಿನವು ಡಂಪಿಂಗ್‌ ಯಾರ್ಡಿನಲ್ಲಿ ರಾಶಿಯಾಗಿ ಬಿದ್ದಿವೆ

*****

ದೊಡ್ಡ ವಿಪತ್ತುಗಳಾದರೆ ಕೂಡಲೇ ನಮ್ಮ ಗಮನಕ್ಕೆ ಬರುತ್ತವೆ ಆದರೆ ದಿನವೂ ಕಣ್ಣೆದುರೇ ಇರುವ ವಿಪತ್ತಿನ ಕುರಿತು ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಇಲ್ಲಿ ಕಸದ ರಾಶಿ ನದಿಯ ಪಕ್ಕದಲ್ಲಿದೆ. ಇದು ನಮಗೆ ಏನೂ ಅನ್ನಿಸುವುದಿಲ್ಲ ಎನ್ನುತ್ತಾರೆ ಮಾನ್ಶಿ ಅಶರ್.‌ ಸ್ಥಳೀಯ ಪರಿಸರ ಸಂಶೋಧನಾ ಸಂಸ್ಥೆಯಾದ ಹಿಮಧಾರದಲ್ಲಿ ಸಂಶೋಧಕರಾಗಿರುವ ಅವರು, “ನದಿಗಳ ಪಕ್ಕದಲ್ಲಿ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಿದರೆ ಅದು ನದಿಯಲ್ಲಿನ ಕೆಸರನ್ನು ಹೆಚ್ಚಿಸುವುದರ ಜೊತೆಗೆ ನದಿಯ ಆರೋಗ್ಯವನ್ನೂ ಹದಗೆಡಿಸುತ್ತದೆ.”

"ಪ್ರಧಾನವಾಗಿ ಗ್ರಾಮೀಣ ಪರ್ವತ ಪ್ರದೇಶದಲ್ಲಿ, ನಗರ ತ್ಯಾಜ್ಯವು ನದಿಪಾತ್ರಗಳು, ಕಾಡುಗಳು ಮತ್ತು ಮೇವುಮಾಳಗಳನ್ನು ಅತಿಕ್ರಮಿಸುತ್ತಿವೆ" ಎಂದು ಅವರು ಹೇಳುತ್ತಾರೆ. ಕಲುಷಿತ ಮತ್ತು ಮಿಶ್ರಿತ ತ್ಯಾಜ್ಯವು ಮಣ್ಣಿನಲ್ಲಿ ಹರಿದು ನೀರು ಸರಬರಾಜಿಗೆ ಸೇರುತ್ತದೆ, ಹೆಚ್ಚಿನ ಜನರು ತಮ್ಮ ಕುಡಿಯುವ ನೀರನ್ನು ಅಂತರ್ಜಲದಿಂದ ಪಡೆಯುತ್ತಾರೆ. ಈ ನೀರನ್ನು ಕೆಳಭಾಗದಲ್ಲಿ ಪಂಜಾಬ್ ತನಕ ಬೆಳೆಗಳಿಗೆ ಸಹ ಬಳಸಲಾಗುತ್ತದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ 2021ರ ವರದಿಯು ಹಿಮಾಚಲ ಪ್ರದೇಶದಲ್ಲಿ 57 ಡಂಪಿಂಗ್ ಕೇಂದ್ರಗಳಿವೆ, ಆದರೆ ಒಂದೇ ಒಂದು ಸ್ಯಾನಿಟರಿ ಭೂಭರ್ತಿ ಕೇಂದ್ರವಿಲ್ಲ ಎನ್ನುತ್ತದೆ. ಸ್ಯಾನಿಟರಿ ಭೂಭರ್ತಿಗಳು ಮೇಲ್ಭಾಗದಲ್ಲಿ ಮುಚ್ಚಲ್ಪಟ್ಟಿರುತ್ತವೆ ಮತ್ತು ಅಂತರ್ಜಲ ಮಾಲಿನ್ಯವನ್ನು ತಡೆಗಟ್ಟಲು ಲೈನರ್ ಮತ್ತು ಬಸಿ ನೀರು ಸಂಗ್ರಹ ವ್ಯವಸ್ಥೆಯನ್ನು ಹೊಂದಿರುತ್ತವೆ. ಜೊತೆಗೆ ಇತರ ಸುರಕ್ಷತಾ ಕ್ರಮಗಳನ್ನೂ ಹೊಂದಿರುತ್ತವೆ. ಈ ವ್ಯವಸ್ಥೆಯಲ್ಲಿ ಅದರ ಮುಚ್ಚುವಿಕೆ ಮತ್ತು ಮುಚ್ಚುವಿಕೆ ನಂತರದ ನಿರ್ವಹಣೆಯನ್ನೂ ಸೇರಿಸಲಾಗಿರುತ್ತದೆ. ಅದೇ ವರದಿಯು ರಾಜ್ಯವು ಕಸ ನಿರ್ವಹಣೆಯ ಮೌಲ್ಯಮಾಪನದಲ್ಲಿ 35ರಲ್ಲಿ 18ನೇ ಕ್ರಮಾಂಕದಲ್ಲಿದೆ ಎನ್ನುತ್ತದೆ. ಅಕ್ಟೋಬರ್ 2020ರಲ್ಲಿ, 14 ಪಂಚಾಯತುಗಳನ್ನು ಒಳಗೊಂಡ 15 ವಾರ್ಡುಗಳ ಹೊಸ ಪಾಲಂಪುರ್ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿ) ಸ್ಥಾಪಿಸಲಾಯಿತು. ಕಾಂಗ್ರಾ ನಾಗರಿಕ ಹಕ್ಕುಗಳ ವೇದಿಕೆಯ ಸದಸ್ಯರಾಗಿರುವ ಮೊಹಮ್ಮದ್‌ ಚಪ್ಪಲ್‌ವಾಲಾ ಹೇಳುವಂತೆ, “ಪಾಲಂಪುರ್‌ ಎಂಸಿಯಾಗಿ ಪರಿವರ್ತನೆ ಹೊಂದುವ ಮೊದಲು ಹೆಚ್ಚಿನ ಪಂಚಾಯತುಗಳು ಕಸವನ್ನು ಸ್ವತಃ ತಾವೇ ನಿರ್ವಹಿಸುತ್ತಿದ್ದವು. ಆದರೆ ಈ ಎಂಸಿ ಸ್ಥಾಪನೆಯಾದಾಗಿನಿಂದ ಆಸ್ಪತ್ರೆ ಕಸವೂ ಸೇರಿದಂತೆ ಒಟ್ಟಾರೆ ಕಸದ ಪ್ರಮಾಣದಲ್ಲಿ ಭಾರಿ ಏರಿಕೆ ಕಂಡು ಬಂದಿದೆ.”

ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿ ಬರುವ 2016ರ ಘನತ್ಯಾಜ್ಯ ನಿರ್ವಹಣಾ ಕೈಪಿಡಿಯ ಪ್ರಕಾರ, ನಗರ ಸ್ಥಳೀಯ ಸಂಸ್ಥೆ ಅಥವಾ ಯುಎಲ್‌ಬಿ ಭೂಭರ್ತಿ ಸ್ಥಳವನ್ನು ಹೊಂದಲು, ಈ ಕೆಳಗಿನ ಮಾರ್ಗಸೂಚಿಗಳನ್ನು ಪಾಲಿಸಬೇಕು: "ಭಾರತ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯ ಮತ್ತು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ಪ್ರಕಾರ ಭೂಭರ್ತಿ ಸ್ಥಳಗಳನ್ನು ಸ್ಥಾಪಿಸಬೇಕು. ಭೂಭರ್ತಿ ಸ್ಥಳವು ನದಿಯಿಂದ 100 ಮೀಟರ್ ದೂರದಲ್ಲಿ, ಕೊಳದಿಂದ 200 ಮೀಟರ್, ಹೆದ್ದಾರಿಗಳು, ಜನವಸತಿಗಳು, ಸಾರ್ವಜನಿಕ ಉದ್ಯಾನವನಗಳು ಮತ್ತು ನೀರು ಸರಬರಾಜು ಬಾವಿಗಳಿಂದ 200 ಮೀಟರ್ ದೂರದಲ್ಲಿರಬೇಕು…”

The landfill sprawls across an estimated five hectares of land
PHOTO • Sweta Daga

ಈ ಭೂಭರ್ತಿ ಅಂದಾಜು ಐದು ಹೆಕ್ಟೇರ್ ಭೂಮಿಯಲ್ಲಿ ವ್ಯಾಪಿಸಿದೆ

Left: Waste being unloaded at the dump site.
PHOTO • Sweta Daga
Right: Women waste workers sorting through trash for recyclable items
PHOTO • Sweta Daga

ಎಡ: ಡಂಪ್‌ ಯಾರ್ಡಿನಲ್ಲಿ ಕಸವನ್ನು ಇಳಿಸಲಾಗುತ್ತಿದೆ. ಬಲ: ಕಸದಲ್ಲಿರಬಹುದಾದ ಮರುಬಳಕೆ ವಸ್ತುಗಳನ್ನು ವಿಂಗಡಿಸುತ್ತಿರುವ ಮಹಿಳಾ ಕಾರ್ಮಿಕರು

ಕಳೆದ ವರ್ಷ ಸ್ಥಳೀಯ ನಾಗರಿಕರು ಅವರ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ನಮ್ಮನ್ನು ಆಹ್ವಾನಿಸಿದರು. ಹೀಗಾಗಿ ನಾವು ಆರ್‌ಟಿಐ (ಮಾಹಿತಿ ಹಕ್ಕು) ಕಾಯ್ದೆಯಡಿ ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇವೆ. ಮೊಹಮ್ಮದ್ ಅವರ ಪ್ರಕಾರ, ಆಯುಕ್ತರ ಕಚೇರಿಯು ಮಾರ್ಚ್ 14, 2023ರಂದು ಅವರು ಸಲ್ಲಿಸಿದ ಆರ್‌ಟಿಐ ಅರ್ಜಿಯನ್ನು ಸ್ವೀಕರಿಸಿತು ಮತ್ತು ಏಪ್ರಿಲ್ 19ರಂದು ಅದಕ್ಕೆ ಉತ್ತರಿಸಿತು. ಆದರೆ ಅದರಲ್ಲಿ ಒಂದಕ್ಕೂ ಸ್ಪಷ್ಟ ಉತ್ತರ ಇರಲಿಲ್ಲ. "ನಮ್ಮ ಅನೇಕ ಪ್ರಶ್ನೆಗಳ ಪಕ್ಕದಲ್ಲಿ ಖಾಲಿ ಜಾಗಗಳಿದ್ದವು" ಎಂದು ಅವರು ಮುಂದುವರೆದು ಹೇಳುತ್ತಾರೆ.

ಇಲ್ಲಿ ಎಷ್ಟು ಕಸ ಉತ್ಪತ್ತಿಯಾಗುತ್ತಿದೆಯೆನ್ನುವ ಮಾಹಿತಿ ಯಾರಿಗೂ ಇಲ್ಲ. “ಪ್ರತಿ ಬಾರಿ ಇಲ್ಲಿಗೆ ಬಂದಾಗಲೂ ಕಸದ ರಾಶಿ ಇನ್ನಷ್ಟು ಎತ್ತರಕ್ಕೆ ಬೆಳೆದಿರುತ್ತದೆ. ಈಗ ಅದು ನ್ಯೂಗಲ್‌ ನದಿಯ ಹತ್ತಿರ ಬಂದಿದ್ದು, ನದಿಗೂ ಕಸ ಸೇರುತ್ತಿದೆ” ಎನ್ನುತ್ತಾರೆ ಮೊಹಮ್ಮದ್.‌

ಇತ್ತೀಚೆಗೆ ಕಸ ವಿಲೇವಾರಿ ಕೇಂದ್ರದಲ್ಲಿ ಏಳು ತ್ಯಾಜ್ಯ ವಿಂಗಡಣೆ ಯಂತ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ಸ್ಥಳೀಯ ಪತ್ರಕರ್ತ ರವೀಂದರ್ ಸೂದ್ ಅವರ ಪ್ರಕಾರ, ಅವುಗಳಲ್ಲಿ ಒಣ ತ್ಯಾಜ್ಯವನ್ನು ಕಡಿಮೆ ಮಾಡಲು ಬಳಸುವ ಶ್ರೇಡರ್ ಸೇರಿದಂತೆ ಐದು ಕಾರ್ಯನಿರ್ವಹಿಸುತ್ತಿವೆ.

ಆದರೆ ಈ ಕಸ ವಿಲೇವಾರಿ ಕೇಂದ್ರವನ್ನು ಹತ್ತಿರದಿಂದ ಗಮನಿಸುತ್ತಿರುವ ಚಹಾ ವ್ಯಾಪಾರಿ ಭಾರಾದ್ವಾಜ್‌ ಅವರು ಹೇಳುವಂತೆ “"ಯಂತ್ರಗಳು ಬಂದಿವೆ, ಆದರೆ ಮಳೆಯ ಕಾರಣದಿಂದಾಗಿ, ಅವುಗಳಲ್ಲಿ ಯಾವುದೂ ಕೆಲಸ ಮಾಡುತ್ತಿಲ್ಲ. ಮತ್ತು ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ವಾಸನೆ ಮತ್ತು ಕಸದ ರಾಶಿಯ ಪರಿಣಾಮ ಇಂದಿಗೂ ಹಾಗೇ ಉಳಿದಿದೆ.” ಜೊತೆಗೆ ಅವರ ಊರಿನವರಾದ ರಾಮ್‌ ಅವರ ಪ್ರಾರ್ಥನೆಯೆಂದರೆ “ಈ ಕಸ ವಿಲೇವಾರಿ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಿ ನಮ್ಮ ಮತ್ತು ನಮ್ಮ ಮಕ್ಕಳ ಬದುಕನ್ನು ಉಳಿಸಿಕೊಡಿ.”

ಅನುವಾದ: ಶಂಕರ. ಎನ್. ಕೆಂಚನೂರು

Sweta Daga

स्वेता डागा, बेंगलुरु स्थित लेखक और फ़ोटोग्राफ़र हैं और साल 2015 की पारी फ़ेलो भी रह चुकी हैं. वह मल्टीमीडिया प्लैटफ़ॉर्म के साथ काम करती हैं, और जलवायु परिवर्तन, जेंडर, और सामाजिक असमानता के मुद्दों पर लिखती हैं.

की अन्य स्टोरी श्वेता डागा
Editors : PARI Desk

पारी डेस्क हमारे संपादकीय कामकाज की धुरी है. यह टीम देश भर में सक्रिय पत्रकारों, शोधकर्ताओं, फ़ोटोग्राफ़रों, फ़िल्म निर्माताओं और अनुवादकों के साथ काम करती है. पारी पर प्रकाशित किए जाने वाले लेख, वीडियो, ऑडियो और शोध रपटों के उत्पादन और प्रकाशन का काम पारी डेस्क ही संभालता है.

की अन्य स्टोरी PARI Desk
Editors : Shaoni Sarkar

शावनी सरकार, कोलकाता की स्वतंत्र पत्रकार हैं.

की अन्य स्टोरी Shaoni Sarkar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru