1951-52ರ ನಡುವೆ ನಡೆದ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ದಿನದಂದು ಬೆಳಿಗ್ಗೆ ತಾನು ಧರಿಸಿದ್ದ ಗರಿಗರಿಯಾದ ಬಿಳಿ ಕುರ್ತಾವನ್ನು ಖ್ವಾಜಾ ಮೊಯೀನುದ್ದೀನ್ ಈಗಲೂ ನೆನಪಿಸಿಕೊಳ್ಳುತ್ತಾರೆ. ಆಗ ಅವರಿಗೆ 20 ವರ್ಷ. ಅವರ ಅಂದಿನ ಉತ್ಸಾಹ ನಿಯಂತ್ರಣವನ್ನು ಮೀರಿದ್ದಾಗಿತ್ತು. ತಮ್ಮ ಸಣ್ಣ ಪಟ್ಟಣವನ್ನು ದಾಟಿ ಮತದಾನ ಕೇಂದ್ರಕ್ಕೆ ಹೋದ ಅವರು ಅಲ್ಲಿ ಹೊಸದಾಗಿ ಸ್ವತಂತ್ರಗೊಂಡ ಪ್ರಜಾಪ್ರಭುತ್ವದ ಸಂಭ್ರಮದ ಗಾಳಿಯಲ್ಲಿ ಸಂಭ್ರಮಿಸಿದರು.
ಈಗ 72 ವರ್ಷಗಳ ನಂತರ, ಮೊಯೀನ್ ತಮ್ಮ ಬದುಕಿನ ಹತ್ತನೇ ದಶಕದಲ್ಲಿದ್ದಾರೆ. ಮೇ 13, 2024ರಂದು, ಅವರು ಮತ್ತೊಮ್ಮೆ ಗರಿಗರಿಯಾದ ಬಿಳಿ ಕುರ್ತಾ ಧರಿಸಿ ಬೆಳಿಗ್ಗೆ ಮನೆಯಿಂದ ಹೊರಬಂದರು. ಆದರೆ ಈ ಬಾರಿ ಅವರು ಬೆತ್ತದ ಊರುಗೋಲಿನ ಸಹಾಯದಿಂದ ಮತಗಟ್ಟೆಗೆ ನಡೆದರು. ಮತದಾನದ ದಿನದ ಸಂಭ್ರಮ ಅವರ ಯೌವನದಂತೆಯೇ ಕಳೆದುಹೋಗಿತ್ತು.
ಮಹಾರಾಷ್ಟ್ರದ ಬೀಡ್ ನಗರದಲ್ಲಿರುವ ತಮ್ಮ ಮನೆಯಲ್ಲಿ ಪರಿಯೊಂದಿಗೆ ಮಾತನಾಡಿದ ಅವರು, “ತಬ್ ದೇಶ್ ಬಚಾನೇ ಕೇ ಲಿಯೆ ವೋಟ್ ಕಿಯಾ ಥಾ, ಆಜ್ ದೇಶ್ ಬಚಾನೇ ಕೇ ಲಿಯೆ ವೋಟ್ ಕರ್ ರಹೇ ಹೈ [ಅಂದು ದೇಶವನ್ನು ಕಟ್ಟಲೆಂದು ಮತ ಚಲಾಯಿಸಿದ್ದೆ, ಇಂದು ದೇಶವನ್ನು ಉಳಿಸುವ ಸಲುವಾಗಿ ಮತ ಚಲಾಯಿಸುತ್ತಿದ್ದೇನೆ] ಎಂದು ಹೇಳಿದರು.
ಬೀಡ್ ಜಿಲ್ಲೆಯ ಶಿರೂರ್ ಕಸರ್ ತಹಸಿಲ್ 1932ರಲ್ಲಿ ಜನಿಸಿದ ಮೊಯೀನ್ ತಹಸಿಲ್ ಕಚೇರಿಯಲ್ಲಿ ಚೌಕಿದಾರ್ (ಕಾವಲುಗಾರ) ಆಗಿ ಕೆಲಸ ಮಾಡುತ್ತಿದ್ದರು. ಆದರೆ 1948 ರಲ್ಲಿ, ಆಗಿನ ರಾಜಾಡಳಿತದ ಹೈದರಾಬಾದ್ ರಾಜ್ಯವು ಭಾರತೀಯ ಒಕ್ಕೂಟಕ್ಕೆ ಸೇರ್ಪಡೆಯಾದಾಗ ನಡೆದ ಹಿಂಸಾಚಾರದಿಂದ ತಪ್ಪಿಸಿಕೊಳ್ಳಲು ಅವರು ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಬೀಡ್ ನಗರಕ್ಕೆ ಓಡಿಹೋಗಬೇಕಾಯಿತು.
1947ರ ರಕ್ತಸಿಕ್ತ ವಿಭಜನೆಯ ಒಂದು ವರ್ಷದ ನಂತರ, ಹೈದರಾಬಾದ್, ಕಾಶ್ಮೀರ ಮತ್ತು ತಿರುವಾಂಕೂರು - ಮೂರು ರಾಜಪ್ರಭುತ್ವದ ರಾಜ್ಯಗಳು ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದವು. ಹೈದರಾಬಾದಿನ ನಿಜಾಮನು ಭಾರತ ಅಥವಾ ಪಾಕಿಸ್ತಾನದ ಭಾಗವಲ್ಲದ ಸ್ವತಂತ್ರ ರಾಜ್ಯವನ್ನು ಬಯಸಿದನು. ಬೀಡ್ ಮರಾಠಾವಾಡಾದ ಕೃಷಿ ಪ್ರದೇಶವು ಹೈದರಾಬಾದ್ ಸಂಸ್ಥಾನದ ಭಾಗವಾಗಿತ್ತು.
ಭಾರತೀಯ ಸಶಸ್ತ್ರ ಪಡೆಗಳು ಸೆಪ್ಟೆಂಬರ್ 1948ರಲ್ಲಿ ಹೈದರಾಬಾದ್ ಗೆ ತೆರಳಿ ನಾಲ್ಕು ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಶರಣಾಗುವಂತೆ ನಿಜಾಮನನ್ನು ಒತ್ತಾಯಿಸಿದವು. ಆದರೆ ದಶಕಗಳ ನಂತರ ಬಹಿರಂಗಗೊಂಡ ಸರ್ಕಾರದ ಗೌಪ್ಯ ವರದಿಯಾದ ಸುಂದರ್ ಲಾಲ್ ಸಮಿತಿಯ ವರದಿಯ ಪ್ರಕಾರ, ಆಕ್ರಮಣದ ಸಮಯದಲ್ಲಿ ಮತ್ತು ನಂತರ ಕನಿಷ್ಠ 27,000ರಿಂದ 40,000 ಮುಸ್ಲಿಮರು ಪ್ರಾಣ ಕಳೆದುಕೊಂಡರು, ಇದರಿಂದಾಗಿ ಮೊಯೀನ್ ಅವರಂತಹ ಹದಿಹರೆಯದ ಯುವಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ಬೇರೆಡೆಗೆ ಓಡಿಹೋಗಬೇಕಾಯಿತು.
“ನಮ್ಮ ಊರಿನ ಬಾವಿ ಹೆಣಗಳಿಂದ ತುಂಬಿಹೋಗಿತ್ತು. ಆ ಸಂದರ್ಭದಲ್ಲಿ ನಾವು ಬೀಡ್ ನಗರಕ್ಕೆ ಓಢೆಇ ಹೋದೆವು. ಅಂದಿನಿಂದ ಬೀಡ್ ನನ್ನ ಮನೆಯಾಗಿದೆ” ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಅವರು ಬೀಡ್‌ನಲ್ಲಿಯೇ ಮದುವೆಯಾಗಿ ಮಕ್ಕಳನ್ನು ಪೋಷಿಸಿದರು ಈಗ ಅವರು ತನ್ನ ಮೊಮ್ಮಕ್ಕಳು ವಯಸ್ಕರಾಗುತ್ತಿರುವುದನ್ನು ನೋಡುತ್ತಿದ್ದಾರೆ. 30 ವರ್ಷಗಳ ಕಾಲ ಟೈಲರ್ ಆಗಿ ಕೆಲಸ ಮಾಡಿದ್ದ ಅವರು ಸ್ಥಳೀಯ ರಾಜಕೀಯದಲ್ಲೂ ಒಂದಷ್ಟು ತೊಡಗಿಸಿಕೊಂಡಿದ್ದರು.
ಶಿರೂರು ಕಸರ್ ಎನ್ನುವಲ್ಲಿಂದ ಓಡಿ ಬಂದ ಏಳು ದಶಕಗಳ ನಂತರ ಈಗ ಮತ್ತೆ ಅವರಲ್ಲಿ ತಮ್ಮ ಮುಸ್ಲಿಂ ಗುರುತು ಭಯ ಹುಟ್ಟಿಸತೊಡಗಿದೆ.
ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳನ್ನು ದಾಖಲಿಸುವ ವಾಷಿಂಗ್ಟನ್ ಡಿಸಿ ಮೂಲದ ಇಂಡಿಯಾ ಹೇಟ್ ಲ್ಯಾಬ್ ಸಂಸ್ಥೆಯ ಪ್ರಕಾರ 2023ರಲ್ಲಿ ಭಾರತದಲ್ಲಿ 668 ದ್ವೇಷ ಭಾಷಣ ಘಟನೆಗಳು ನಡೆದಿವೆ . ಮಹಾತ್ಮಾ ಫುಲೆ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತಹ ಪ್ರಗತಿಪರ ಚಿಂತಕರಿಗೆ ಹೆಸರುವಾಸಿಯಾದ ಮಹಾರಾಷ್ಟ್ರವು 118 ದ್ವೇಷ ಭಾಷಣಗಳಿಗೆ ಸಾಕ್ಷಿಯಾಗುವ ಮೂಲಕ ಅಗ್ರಸ್ಥಾನದಲ್ಲಿದೆ.
“ವಿಭಜನೆಯ ನಂತರದ ಭಾರತದಲ್ಲಿ ಮುಸ್ಲಿಮರ ಸ್ಥಾನದ ಕುರಿತು ಪ್ರಶ್ನೆಗಳಿದ್ದವು. ಆದರೆ ನನಗೆ ಭಯವೇನೂ ಆಗಿರಲಿಲ್ಲ. ಒಂದು ರಾಷ್ಟ್ರವಾಗಿ ಭಾರತದ ಮೇಲೆ ನನಗೆ ನಂಬಿಕೆಯಿತ್ತು. ಆದರೆ ಈಗ ಇಡೀ ಬದುಕನ್ನು ಇಲ್ಲಿ ಕಳೆದ ನಂತರ ಈಗ ನಾನು ಇಲ್ಲಿಗೆ ಸೇರಿದವನೆ ಎನ್ನುವ ಪ್ರಶ್ನೆ…” ಎಂದು ಅವರು ಹೇಳುತ್ತಾರೆ.
ಮೇಲಿನ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿ ಇಷ್ಟೆಲ್ಲಾ ವ್ಯತ್ಯಾಸಗಳನ್ನು ಉಂಟುಮಾಡಲು ಹೇಗೆ ಸಾಧ್ಯ ಎಂದು ಅವರು ಕೇಳುತ್ತಾರೆ.
"ಪಂಡಿತ್ ಜವಾಹರಲಾಲ್ ನೆಹರು ಎಲ್ಲರನ್ನೂ ನಿಜವಾಗಿಯೂ ಪ್ರೀತಿಸುತ್ತಿದ್ದರು, ಮತ್ತು ಜನರೂ ಅವರನ್ನು ಅದೇ ಪ್ರಮಾಣದಲ್ಲಿ ಪ್ರೀತಿಸುತ್ತಿದ್ದರು. ಹಿಂದೂಗಳು ಮತ್ತು ಮುಸ್ಲಿಮರು ಸಾಮರಸ್ಯದಿಂದ ಬದುಕಬಹುದು ಎಂದು ಅವರು ನಮ್ಮನ್ನು ನಂಬಿಸಿದರು. ಅವರು ಸಂವೇದನಾಶೀಲ ವ್ಯಕ್ತಿ ಮತ್ತು ನಿಜವಾದ ಜಾತ್ಯತೀತರಾಗಿದ್ದರು. ಪ್ರಧಾನಿಯಾಗಿ, ಅವರು ಭಾರತವನ್ನು ವಿಶೇಷ ದೇಶವನ್ನಾಗಿ ಮಾಡುವ ಭರವಸೆಯನ್ನು ನಮ್ಮಲ್ಲಿ ಹುಟ್ಟಿಸಿದ್ದರು.” ಎಂದು ಮೊಯೀನ್ ಹೇಳುತ್ತಾರೆ.
ಇದಕ್ಕೆ ವ್ಯತಿರಿಕ್ತವಾಗಿ, ಮುಸ್ಲಿಮರನ್ನು "ನುಸುಳುಕೋರರು" ಎಂದು ಉಲ್ಲೇಖಿಸಿ ಮತದಾರರನ್ನು ಕೋಮು ಆಧಾರದ ಮೇಲೆ ವಿಭಜಿಸಿ ಆ ಮೂಲಕ ಚುನಾವಣೆಗಳನ್ನು ಗೆಲ್ಲಲು ನೋಡುವ ಭಾರತದ ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನವು ಇನ್ನೊಬ್ಬರ ಹೊಟ್ಟೆಯ ಮೇಲೆ ಹೊಡೆಯುವಂತಿದೆ ಎಂದು ಮೊಯೀನ್ ಹೇಳುತ್ತಾರೆ.
ಏಪ್ರಿಲ್ 22, 2024ರಂದು, ಆಡಳಿತಾರೂಢ ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರೂ ಆಗಿರುವ ಮೋದಿ, ರಾಜಸ್ಥಾನದಲ್ಲಿಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷವು ಜನರ ಸಂಪತ್ತನ್ನು "ನುಸುಳುಕೋರರಿಗೆ" ವಿತರಿಸಲು ಯೋಜಿಸಿದೆ ಎಂದು ಸುಳ್ಳು ಹೇಳಿದ್ದಾರೆ.
ಮೊಯೀನ್ ಹೇಳುತ್ತಾರೆ, "ಇದು ನಿರಾಶಾದಾಯಕ. ತತ್ವಗಳು ಮತ್ತು ಸಮಗ್ರತೆ ಅತ್ಯಂತ ಮೌಲ್ಯಯುತವಾಗಿದ್ದ ಸಮಯ ನನಗೆ ನೆನಪಾಗುತ್ತಿದೆ. ಈಗ, ಹೇಗಾದರೂ ಮಾಡಿ ಅಧಿಕಾರ ಪಡೆಯುವುದಷ್ಟೇ ಗುರಿಯಾಗಿದೆ" ಎಂದು ಅವರು ಹೇಳಿದರು.
ಮೊಯೀನ್ ಅವರ ಒಂದು ಕೋಣೆಯ ಮನೆಯಿಂದ ಸುಮಾರು ಎರಡು ಅಥವಾ ಮೂರು ಕಿಲೋಮೀಟರ್ ದೂರದಲ್ಲಿ ಸೈಯದ್ ಫಖ್ರು ಉಜ್ ಜಾಮಾ ವಾಸಿಸುತ್ತಿದ್ದಾರೆ. ಅವರು ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ, ಆದರೆ ಅವರು 1962ರಲ್ಲಿ ಮೊದಲ ಪ್ರಧಾನಿ ನೆಹರೂ ಅವರನ್ನು ಮರು ಆಯ್ಕೆ ಮಾಡಲು ಮತ ಚಲಾಯಿಸಿದರು. "ಪ್ರಸ್ತುತ ಕಾಂಗ್ರೆಸ್ ಪಾಲಿಗೆ ಸಮಯ ಕೆಟ್ಟದಾಗಿದೆ ಎನ್ನುವುದು ನನಗೆ ತಿಳಿದಿದೆ ಆದರೆ ನಾನು ನೆಹರೂ ಅವರ ಸಿದ್ಧಾಂತವನ್ನು ತ್ಯಜಿಸುವುದಿಲ್ಲ" ಎಂದು ಅವರು ಹೇಳುತ್ತಾರೆ. "1970ರ ದಶಕದಲ್ಲಿ ಇಂದಿರಾ ಗಾಂಧಿ ಬೀಡ್ ನಗರಕ್ಕೆ ಬಂದದ್ದು ನನಗೆ ನೆನಪಿದೆ. ನಾನು ಅವರನ್ನು ನೋಡಲು ಹೋಗಿದ್ದೆ."
ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಸಿದ ಭಾರತ್ ಜೋಡೋ ಪಾದಯಾತ್ರೆ ಅವರನ್ನು ಪ್ರಭಾವಿತಗೊಳಿಸಿದೆ. ಮಹಾರಾಷ್ಟ್ರದಲ್ಲಿ, ಉದ್ಧವ್ ಠಾಕ್ರೆ ಅವರಿಗೆ ಕೃತಜ್ಞರಾಗಿರುವುದಾಗಿ ಹೇಳುವ ಅವರು ಇಂತಹದ್ದೊಂದು ದಿನ ಬರಬಹುದೆಂದು ತಾನು ಎಂದಿಗೂ ಭಾವಿಸಿರಲಿಲ್ಲ ಎನ್ನುತ್ತಾರೆ.
“ಶಿವಸೇನೆ ಉತ್ತಮ ಕಾರಣಗಳಿಗಾಗಿ ಬದಲಾಗಿದೆ. ಕೋವಿಡ್ ಸಮಯದಲ್ಲಿ ಉದ್ಧವ್ ಠಾಕ್ರೆ ಓರ್ವ ಮುಖ್ಯಮಂತ್ರಿಯಾಗಿ ನಡೆದುಕೊಂಡ ರೀತಿ ಪ್ರಭಾವಶಾಲಿಯಾಗಿತ್ತು. ಇತರ ರಾಜ್ಯಗಳಂತೆ ಮಹಾರಾಷ್ಟ್ರದಲ್ಲೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಗಲಭೆ ಇತ್ಯಾದಿ ನಡೆಯದಂತೆ ನೋಡಿಕೊಂಡರು. ಇದಕ್ಕಾಗಿ ಅವರು ತಮ್ಮ ಸಿದ್ಧಾಂತವನ್ನು ಮೀರಿ ನಿಂತರು” ಎಂದು ಅವರು ಹೇಳುತ್ತಾರೆ.
85 ವರ್ಷದವರಾಗಿರುವ ಜಾಮಾ ಭಾರತದಲ್ಲಿ ಕೋಮು ವಿಭಜನೆಯೆನ್ನುವುದು ಅಂತರ್ಗತವಾಗಿ ಇತ್ತು. ಆದರೆ, “ಅದನ್ನು ವಿರೋಧಿಸುವ ದನಿಗಳೂ ಅದಕ್ಕೆ ಸಮಾನಾಗಿ ದನಿಯೆತ್ತುತ್ತಿದ್ದವು” ಎನ್ನುತ್ತಾರೆ.
ಡಿಸೆಂಬರ್ 1992ರಲ್ಲಿ, ವಿಶ್ವ ಹಿಂದೂ ಪರಿಷತ್ ನೇತೃತ್ವದ ಹಿಂದೂ ತೀವ್ರಗಾಮಿ ಸಂಘಟನೆಗಳು ಉತ್ತರ ಪ್ರದೇಶದ ಅಯೋಧ್ಯೆ ನಗರದಲ್ಲಿ ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದವು. ಈ ಘಟನೆಯ ನಂತರ ಬಾಂಬ್ ಸ್ಫೋಟಗಳು ಮತ್ತು ಗಲಭೆಗಳಿಂದ ತತ್ತರಿಸಿದ್ದ ಮಹಾರಾಷ್ಟ್ರದ ರಾಜಧಾನಿ ಮುಂಬೈ ಸೇರಿದಂತೆ ದೇಶಾದ್ಯಂತ ಕೋಮು ಘರ್ಷಣೆಗಳು ಭುಗಿಲೆದ್ದವು.
1992-93ರ ಅಶಾಂತಿಯ ಸಮಯದಲ್ಲಿ ತನ್ನ ಬೀಡ್ ನಗರದಲ್ಲಿ ನಡೆದ ಉದ್ವಿಗ್ನತೆಯನ್ನು ಜಾಮಾ ನೆನಪಿಸಿಕೊಳ್ಳುತ್ತಾರೆ.
"ನಮ್ಮ ಸಹೋದರತ್ವವನ್ನು ಹಾಗೇ ಉಳಿಸಿಕೊಳ್ಳಲು ನನ್ನ ಮಗ ನಗರದಾದ್ಯಂತ ಶಾಂತಿ ಮೆರವಣಿಗೆಯನ್ನು ನಡೆಸಿದ. ಹಿಂದೂಗಳು ಮತ್ತು ಮುಸ್ಲಿಮರು ಇಬ್ಬರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಕೊಂಡರು. ಆ ಒಗ್ಗಟ್ಟು ಈಗ ಕಾಣೆಯಾಗಿದೆ" ಎಂದು ಅವರು ಹೇಳುತ್ತಾರೆ.
ಜಾಮಾ ಅವರು ಪ್ರಸ್ತುತ ತಾನು ವಾಸಿಸುತ್ತಿರುವ ಮನೆಯಲ್ಲಿಯೇ ಜನಿಸಿದರು. ಅವರ ಕುಟುಂಬವು ಬೀಡ್ ನಗರದ ಪ್ರಭಾವಿ ಮುಸ್ಲಿಂ ಕುಟುಂಬಗಳಲ್ಲಿ ಒಂದಾಗಿದೆ, ರಾಜಕೀಯ ನಾಯಕರು ಚುನಾವಣೆಗೆ ಮುಂಚಿತವಾಗಿ ಆಶೀರ್ವಾದ ಪಡೆಯಲು ಆಗಾಗ್ಗೆ ಕರೆ ಮಾಡುತ್ತಾರೆ. ಅವರ ತಂದೆ ಮತ್ತು ಅಜ್ಜ ಇಬ್ಬರೂ ಶಿಕ್ಷಕರಾಗಿದ್ದು, "ಪೊಲೀಸ್ ಕ್ರಮ" ದ ಸಮಯದಲ್ಲಿ ಜೈಲಿಗೆ ಹೋಗಿದ್ದರು. ಅವರ ತಂದೆ ತೀರಿಕೊಂಡಾಗ, ಸ್ಥಳೀಯ ನಾಯಕರು ಸೇರಿದಂತೆ ಧಾರ್ಮಿಕ ಭೇದವಿಲ್ಲದೆ ಸಾವಿರಾರು ಜನರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು ಎಂದು ಅವರು ಹೇಳುತ್ತಾರೆ.
“ಗೋಪಿನಾಥ್ ಮುಂಢೆಯವರೊಂದಿಗೆ ಅತ್ಯುತ್ತಮವಾದ ಸಂಬಂಧವನ್ನು ಹೊಂದಿದ್ದೆ" ಎಂದು ಜಾಮಾ ಬೀಡ್‌ನ ದೊಡ್ಡ ನಾಯಕನ ಹೆಸರನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ. ಅವರು ಬಿಜೆಪಿಗೆ ಸೇರಿದವರಾಗಿದ್ದರೂ ನನ್ನ ಇಡೀ ಕುಟುಂಬ 2009 ರಲ್ಲಿ ಅವರಿಗೆ ಮತ ಚಲಾಯಿಸಿತ್ತು. ಅವರು ಹಿಂದೂ ಮುಸ್ಲಿಮರ ನಡುವೆ ತಾರತಮ್ಯ ಮಾಡುವುದಿಲ್ಲವೆನ್ನುವುದು ನಮಗೆ ತಿಳಿದಿತ್ತು.”
ಪ್ರಸ್ತುತ ಬೀಡ್ ಕ್ಷೇತ್ರದಿಂದ ಸ್ಪರ್ಧಿಸಿರುವ ಪಂಕಜಾ ಮುಂಢೆ ಕೂಡಾ ತಮ್ಮೊಂದಿಗೆ ಆಪ್ತವಾಗಿರುವುದಾಗಿ ಅವರು ಹೇಳುತ್ತಾರೆ. ಆದರೆ ಆಕೆ ಮೋದಿಯವರ ಕೋಮುವಾದದ ವಿರುದ್ಧ ನಿಲ್ಲುವವರಲ್ಲ ಎನ್ನುತ್ತಾರೆ. “ಮೋದಿ ಬೀಡ್‌ನಲ್ಲಿ ನಡೆದ ಸಭೆಯಲ್ಲೂ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ" ಎಂದು ಜಾಮಾ ಹೇಳುತ್ತಾರೆ. “ಮೋದಿ ಭೇಟಿಯ ನಂತರ ಪಂಕಜಾ ಬಹಳಷ್ಟು ಮತಗಳನ್ನು ಕಳೆದುಕೊಂಡಿದ್ದಾರೆ. ನೀವು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.”
ಜಾಮಾ ತಾನು ಹುಟ್ಟುವ ಮೊದಲು ತಮ್ಮ ತಂದೆ ಹೇಳುತ್ತಿದ್ದ ಕಥೆಯನ್ನು ನೆನಪಿಸಿಕೊಳ್ಳುತ್ತಾರೆ. ಅವರ ಮನೆಯಿಂದ ಸ್ವಲ್ಪ ದೂರದಲ್ಲಿ 1930ರ ದಶಕದಲ್ಲಿ ಪರಿಶೀಲನೆಗೆ ಒಳಗಾದ ದೇವಾಲಯವಿದೆ. ಕೆಲವು ಸ್ಥಳೀಯ ಮುಸ್ಲಿಂ ಮುಖಂಡರು ಇದು ನಿಜವಾಗಿಯೂ ಮಸೀದಿ ಎಂದು ನಂಬಿದ್ದರು ಮತ್ತು ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸುವಂತೆ ಹೈದರಾಬಾದ್ ನಿಜಾಮನಿಗೆ ಮನವಿ ಮಾಡಿದ್ದರು. ಜಾಮಾ ಅವರ ತಂದೆ ಸೈಯದ್ ಮೆಹಬೂಬ್ ಅಲಿ ಷಾ ಸತ್ಯವಂತ ಎಂಬ ಖ್ಯಾತಿಯನ್ನು ಹೊಂದಿದ್ದರು.
"ಇದು ಮಸೀದಿಯೋ ಅಥವಾ ದೇವಾಲಯವೋ ಎಂದು ನಿರ್ಧರಿಸುವ ಅಧಿಕಾರ ಅವರಿಗೆ ದೊರೆಯಿತು. ಇದು ಮಸೀದಿ ಎಂಬುದಕ್ಕೆ ಪುರಾವೆಗಳನ್ನು ನೋಡಿಲ್ಲ ಎಂದು ನನ್ನ ತಂದೆ ಸಾಕ್ಷಿ ನೀಡಿದರು. ನಂತರ ಈ ವಿಷಯವನ್ನು ಇತ್ಯರ್ಥಪಡಿಸಿ ದೇವಾಲಯವನ್ನು ಉಳಿಸಲಾಯಿತು. ಇದು ಕೆಲವರನ್ನು ನಿರಾಶೆಗೊಳಿಸಿದರೂ, ನನ್ನ ತಂದೆ ಸುಳ್ಳು ಹೇಳಲಿಲ್ಲ. ನಾವು ಮಹಾತ್ಮ ಗಾಂಧಿಯವರ ಬೋಧನೆಗಳನ್ನು ನಂಬುತ್ತೇವೆ: 'ಸತ್ಯವು ಯಾವಾಗಲೂ ನಿಮ್ಮನ್ನು ಮುಕ್ತಗೊಳಿಸುತ್ತದೆ'” ಎಂದು ಜಾಮಾ ಹೇಳುತ್ತಾರೆ.
ಮೊಯೀನ್ ಅವರೊಂದಿಗಿನ ಮಾತುಕತೆಯ ಸಮಯದಲ್ಲಿಯೂ ಗಾಂಧಿಯ ಉಲ್ಲೇಖವು ನಿಯಮಿತವಾಗಿ ಬರುತ್ತದೆ. "ಅವರು ನಮ್ಮಲ್ಲಿ ಏಕತೆ ಮತ್ತು ಕೋಮು ಸೌಹಾರ್ದತೆಯ ಕಲ್ಪನೆಯನ್ನು ಹುಟ್ಟುಹಾಕಿದರು" ಎಂದು ಹೇಳಿದ ಅವರು ಹಳೆಯ ಹಿಂದಿ ಚಲನಚಿತ್ರ ಗೀತೆಯನ್ನು ಹಾಡಿದರು: ತು ನಾ ಹಿಂದೂ ಬನೇಗಾ, ನಾ ಮುಸಲ್ಮಾನ್ ಬನೇಗಾ. ಇನ್ಸಾನ್ ಕಿ ಔಲಾದ್ ಹೈ, ಇನ್ಸಾನ್ ಬನೇಗಾ.
1990ರಲ್ಲಿ ನಾನು ಕೌನ್ಸಿಲರ್ ಆಗಿದ್ದಾಗ ನಾನು ಇದೇ ತತ್ವವನ್ನು ಅನುಸರಿಸಿದ್ದೆ ಎಂದು ಮೊಯೀನ್ ಹೇಳುತ್ತಾರೆ. “ನನ್ನ ರಾಜಕೀಯ ಆಸಕ್ತಿಯ ಕಾರಣಕ್ಕಾಗಿ ನಾನು 30 ವರ್ಷಗಳ ಟೈಲರ್ ವೃತ್ತಿಯನ್ನು ತೊರೆದಿದ್ದೆ” ಎಂದು ನಗುವ ಅವರು, “"ಆದರೆ ನಾನು ರಾಜಕಾರಣಿಯಾಗಿ ಹೆಚ್ಚು ಕಾಲ ಉಳಿಯಲಿಲ್ಲ. ಸ್ಥಳೀಯ ಚುನಾವಣೆಗಳಲ್ಲಿಯೂ ಬಳಸಲಾಗುತ್ತಿರುವ ಭ್ರಷ್ಟಾಚಾರ ಮತ್ತು ಹಣವನ್ನು ನಿಭಾಯಿಸಲು ನನಗೆ ಸಾಧ್ಯವಾಗಲಿಲ್ಲ. ನಾನು ಈಗ 25 ವರ್ಷಗಳಿಂದ ನಿವೃತ್ತ ವ್ಯಕ್ತಿಯಾಗಿದ್ದೇನೆ” ಎಂದು ಹೇಳಿದರು.
ಜಾಮಾ ಅವರ ನಿವೃತ್ತಿಯ ನಿರ್ಧಾರದ ಹಿಂದೆ ಬದಲಾಗುತ್ತಿರುವ ಸಮಯ ಮತ್ತು ವ್ಯಾಪಕ ಭ್ರಷ್ಟಾಚಾರದ ಕಾರಣವಿದೆ. ಎಲ್ಲವೂ ಸರಿಯಿದ್ದ ಸಮಯದಲ್ಲಿ ಅವರು ಗುತ್ತಿಗೆದಾರನಾಗಿ ಕೆಲಸ ಮಾಡಿದ್ದರು. “1990ರ ದಶಕದ ನಂತರ ಪರಿಸ್ಥಿತಿ ಬದಲಾಯಿತು. ಕೆಲಸದ ಗುಣಮಟ್ಟವೆನ್ನುವುದು ನಗಣ್ಯವಾಗಿ ಲಂಚವೇ ಎಲ್ಲ ಎನ್ನುವಂತಾಯಿತು. ಆಗ ನನಗೆ ಮನೆಯಲ್ಲಿ ಇರುವುದೇ ಉತ್ತಮ ಎನ್ನಿಸಿತು.” ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ನಿವೃತ್ತಿಯ ನಂತರ, ಜಾಮಾ ಮತ್ತು ಮೊಯೀನ್ ಇಬ್ಬರೂ ಇನ್ನಷ್ಟು ಧಾರ್ಮಿಕರಾಗಿದ್ದಾರೆ. ಜಾಮಾ ಬೆಳಿಗ್ಗೆ 4:30ಕ್ಕೆ ಎದ್ದು ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಮೊಯೀನ್ ಶಾಂತಿಯನ್ನು ಹುಡುಕುತ್ತಾ ತನ್ನ ಮನೆ ಮತ್ತು ಬೀದಿಗೆ ಅಡ್ಡಲಾಗಿ ಇರುವ ಮಸೀದಿಯ ನಡುವೆ ಪ್ರಯಾಣಿಸುತ್ತಾರೆ. ಅವರ ಮಸೀದಿ ಬೀಡ್ ನ ಕಿರಿದಾದ ಓಣಿಯಲ್ಲಿರುವುದು ಅವರ ಅದೃಷ್ಟ.
ಕಳೆದ ಎರಡು ವರ್ಷಗಳಿಂದ, ಹಿಂದೂ ಬಲಪಂಥೀಯ ಗುಂಪುಗಳು ಮಸೀದಿಗಳ ಮುಂದೆ ಪ್ರಚೋದನಕಾರಿಯಾಗಿ ದ್ವೇಷ ಮತ್ತು ಪ್ರಚೋದನಕಾರಿ ಹಾಡುಗಳನ್ನು ನುಡಿಸುವ ಮೂಲಕ ರಾಮನವಮಿ ಹಬ್ಬವನ್ನು ಆಚರಿಸುತ್ತಿವೆ. ಬೀಡ್ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಅದೃಷ್ಟವಶಾತ್, ಮೊಯೀನ್ ಅವರ ಮಸೀದಿ ಇರುವ ಲೇನ್ ಆಕ್ರಮಣಕಾರಿ ಮೆರವಣಿಗೆ ನಡೆಸಲು ತುಂಬಾ ಚಿಕ್ಕದಾಗಿದೆ.
ಜಾಮಾ ತನ್ನ ಅದೃಷ್ಟದ ಕುರಿತು ವ್ಯಥೆಪಡುತ್ತಾರೆ. ಮುಸ್ಲಿಮರ ವಿರುದ್ಧ ಹಿಂಸೆಗೆ ಕರೆ ನೀಡುವ ಮತ್ತು ಅವರನ್ನು ನಿಂದಿಸುವ ಹಾಡುಗಳು ಅವರ ಕಿವಿಗೆ ಬೀಳುತ್ತಲೇ ಇರುತ್ತವೆ. ಹಾಡಿನ ಒಂದೊಂದು ಪದವೂ ಅವರಲ್ಲಿನ ಮನುಷ್ಯನನ್ನು ಇಂಚಿಂಚಾಗಿ ಕೊಲ್ಲುತ್ತವೆ.
"ನನ್ನ ಮೊಮ್ಮಕ್ಕಳು ಮತ್ತು ಅವರ ಮುಸ್ಲಿಂ ಸ್ನೇಹಿತರು ರಾಮನವಮಿ ಮತ್ತು ಗಣೇಶ ಹಬ್ಬಗಳ ಸಮಯದಲ್ಲಿ ಹಿಂದೂ ಯಾತ್ರಾರ್ಥಿಗಳಿಗೆ ನೀರು, ರಸ ಮತ್ತು ಬಾಳೆಹಣ್ಣುಗಳನ್ನು ನೀಡುತ್ತಿದ್ದ ದಿನಗಳು ನನಗೆ ನೆನಪಿದೆ" ಎಂದು ಜಾಮಾ ಹೇಳುತ್ತಾರೆ. "ಆದರೆ ಮುಸ್ಲಿಂ ದ್ವೇಷದ ಹಾಡುಗಳು ಬಂದ ನಂತರ ಆ ಸುಂದರ ಸಂಪ್ರದಾಯ ಕೊನೆಗೊಂಡಿತು."
ಅವರಿಗೆ ಭಗವಾನ್ ರಾಮನ ಬಗ್ಗೆ ಅಪಾರ ಗೌರವವಿದೆ, ಅವರು ಹೇಳುತ್ತಾರೆ, "ಇತರರನ್ನು ದ್ವೇಷಿಸುವಂತೆ ರಾಮ ಯಾರಿಗೂ ಕಲಿಸಲಿಲ್ಲ. ಯುವಕರು ತಮ್ಮದೇ ದೇವರನ್ನು ದೂಷಿಸುತ್ತಿದ್ದಾರೆ. ರಾಮ ಪ್ರತಿನಿಧಿಸಿದ್ದು ಅದನ್ನಲ್ಲ."
ಮಸೀದಿಗಳ ಮುಂದೆ ಬರುವ ಹಿಂದೂಗಳ ವಯೋಮಾನದವರಲ್ಲಿ ಯುವ ವಯಸ್ಕರು ಪ್ರಾಬಲ್ಯ ಹೊಂದಿದ್ದಾರೆ, ಮತ್ತು ಇದು ಜಾಮಾ ಅವರನ್ನು ಹೆಚ್ಚು ಚಿಂತೆಗೀಡುಮಾಡುತ್ತದೆ. "ನನ್ನ ತಂದೆ ತಮ್ಮ ಹಿಂದೂ ಸ್ನೇಹಿತರು ಬರುವವರೆಗೂ ಈದ್ ದಿನದಂದು ಊಟ ಮಾಡುತ್ತಿರಲಿಲ್ಲ" ಎಂದು ಅವರು ಹೇಳುತ್ತಾರೆ. "ನಾನೂ ಸಹ ಅದನ್ನು ಪಾಲಿಸಿದ್ದೆ. ಆದರೆ ಇದೆಲ್ಲವೂ ಕಣ್ಣ ಮುಂದೆಯೇ ಬದಲಾಗುತ್ತಿದೆ."
ನಾವು ಕೋಮು ಸೌಹಾರ್ದತೆಯಿಂದ ಕೂಡಿದ್ದ ದಿನಗಳನ್ನು ಮತ್ತೆ ನೋಡಬೇಕೆಂದರೆ, ಶಾಂತಿಯನ್ನು ಮರಳಿ ಸ್ಥಾಪಿಸಬೇಕೆಂದರೆ ಅದಕ್ಕೆ ಗಾಂಧಿಯ ದೃಢನಿಶ್ಚಯ ಮತ್ತು ಪ್ರಾಮಾಣಿಕತೆ ಹೊಂದಿರುವ ನಾಯಕ ಬೇಕು ಎಂದು ಮೊಯೀನ್ ಹೇಳುತ್ತಾರೆ.
ಗಾಂಧಿಯವರ ಪ್ರಯಾಣವು ಮಜ್ರೂಹ್ ಸುಲ್ತಾಮ್ ಪುರಿಯವರ ಒಂದು ದ್ವಿಪದಿಯನ್ನು ನೆನಪಿಸುತ್ತದೆ: "ಮೈ ಅಕೇಲಾ ಹಿ ಚಲಾ ಥಾ ಜಾನಿಬ್-ಎ-ಮಂಜಿಲ್ ಮಗರ್, ಲೋಗ್ ಸಾಥ್ ಆತೇ ಗಯೆ ಔರ್ ಕಾರವಾನ್ ಬನ್ತಾ ಗಯಾ [ನಾನು ಗುರಿಯತ್ತ ಏಕಾಂಗಿಯಾಗಿ ನಡೆದೆ; ಜನರು ಸೇರುತ್ತಲೇ ಇದ್ದರು ಮತ್ತು ಗುಂಪು ಬೆಳೆಯಿತು.]"
"ಇಲ್ಲದಿದ್ದರೆ, ಸಂವಿಧಾನವು ಬದಲಾಗುತ್ತದೆ ಮತ್ತು ಮುಂದಿನ ಪೀಳಿಗೆಯು ತೊಂದರೆ ಅನುಭವಿಸುತ್ತದೆ" ಎಂದು ಅವರು ಹೇಳುತ್ತಾರೆ.
ಅನುವಾದ: ಶಂಕರ. ಎನ್. ಕೆಂಚನೂರು