“ಕೂದಲು! ಕೂದಲು! ಪಾತ್ರೆ ಕೂದಲು”

ಸಾಕೇ ಸರಸ್ವತಿ ಮತ್ತಿಕೆರೆಯ ಬೀದಿಗಳಲ್ಲಿ ಮೇಲಿನಂತೆ ಕೂಗುತ್ತಾ ಅಲ್ಲಿನ ಮನೆಗಳಿಂದ ಕೂದಲು ಸಂಗ್ರಹಿಸುತ್ತಾರೆ. ಅವರು ಕೂದಲಿನ ಬದಲಿಗೆ ಸಣ್ಣ-ಹಗುರ ಅಲುಮಿನಿಯಮ್‌ ಪಾತ್ರಗಳನ್ನು ನೀಡುತ್ತಾರೆ. ಇವುಗಳಲ್ಲಿ ಸಣ್ಣ ನೀರಿನ ಪಾತ್ರೆಗಳು, ಮಡಕೆಗಳು ಮತ್ತು ಪಾತ್ರೆಗಳು, ಅಡುಗೆ ಚಮಚಗಳು, ದೊಡ್ಡ ಜರಡಿಗಳು ಸೇರಿವೆ.

“ನಾನು ಈ ಕೆಲಸವನ್ನು ನನ್ನ ಅತ್ತಿಗೆಯಿಂದ ಕಲಿತೆ. ಜೊತೆಗೆ ಅವರೇ ನನಗೆ ಗಿರಾಕಿಗಳನ್ನು ಸೆಳೆಯಲು ದನಿಯನ್ನು ಎತ್ತರಿಸಿ ಕೂಗುವುದನ್ನು ಸಹ ಹೇಳಿಕೊಟ್ಟರು” ಎನ್ನುತ್ತಾರೆ ಬೆಂಗಳೂರಿನ 23 ವರ್ಷದ ವ್ಯಾಪಾರಸ್ಥ ಮಹಿಳೆ.

"ನನ್ನಮ್ಮ ಗಂಗಮ್ಮ ಮದುವೆಗೆ ಮೊದಲಿನಿಂದಲೂ ಈ ಕೆಲಸವನ್ನು ಮಾಡುತ್ತಿದ್ದಾರೆ, ಆದರೆ ಬೆನ್ನು ಮತ್ತು ಮೊಣಕಾಲಿನ ತೀವ್ರ ಸಮಸ್ಯೆಗಳಿಂದಾಗಿ ಅವರು ತಮ್ಮ ಕೆಲಸವನ್ನು ಕಡಿಮೆ ಮಾಡಿದ್ದಾರೆ" ಎಂದು ಸರಸ್ವತಿ ಹೇಳುತ್ತಾರೆ. ತಂದೆ ಪುಲ್ಲನ್ನ ಮತ್ತು ತಾಯಿ ಗಂಗಮ್ಮ 30 ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ವಲಸೆ ಬಂದರು.

ಈ ಕುಟುಂಬವು ಕೊರಚ ಸಮುದಾಯಕ್ಕೆ ಸೇರಿದ್ದು, ಅವರನ್ನು ಆಂಧ್ರಪ್ರದೇಶದಲ್ಲಿ ಇತರ ಹಿಂದುಳಿದ ವರ್ಗದಡಿ (ಒಬಿಸಿ) ಪಟ್ಟಿ ಮಾಡಲಾಗಿದೆ. ಈಗ 80 ವರ್ಷದ ಪುಲ್ಲನ್ನ ಒಣಗಿದ ಈಚಲು ಎಲೆಗಳಿಂದ ಜಾಡುಗಳನ್ನು (ಪೊರಕೆ) ತಯಾರಿಸುತ್ತಾರೆ ಮತ್ತು ತಲಾ 20-50 ರೂ.ಗಳಿಗೆ ಮಾರಾಟ ಮಾಡುತ್ತಾರೆ.

PHOTO • Ria Shah

ಸರಸ್ವತಿ ತನ್ನ ಕುಟುಂಬದೊಂದಿಗೆ ಉತ್ತರ ಬೆಂಗಳೂರಿನ ಕೊಂಡಪ್ಪ ಲೇಔಟಿನಲ್ಲಿ ವಾಸಿಸುತ್ತಿದ್ದಾರೆ. ಅವರು 18 ವರ್ಷದವರಿದ್ದಾಗಿನಿಂದ ಮನೆಗಳಿಂದ ಕೂದಲನ್ನು ಸಂಗ್ರಹಿಸುತ್ತಿದ್ದಾರೆ

ತಂದೆಯ ಸಂಪಾದನೆ ಬದುಕು ನಡೆಸಲು ಸಾಕಾಗದ ಕಾರಣ ಐದು ವರ್ಷಗಳ ಹಿಂದೆ ಸರಸ್ವತಿ ಈ ವ್ಯವಹಾರಕ್ಕೆ ಬಂದರು. ಆಗ ಅವರಿಗೆ 18 ವರ್ಷ. ಬಿ.ಕಾಮ್‌ ಪದವಿಗೆ ಓದುತ್ತಲೇ ತನ್ನ ವ್ಯವಹಾರ ಆರಂಭಿಸಿದರು. ತಂದೆ, ತಾಯಿ, ಇಬ್ಬರು ಅಣ್ಣಂದಿರು, ಅವರ ಪತ್ನಿಯರು ಮತ್ತು ಮಕ್ಕಳು ಇರುವ ಸರಸ್ವತಿಯವರ ಕುಟುಂಬವು ಉತ್ತರ ಬೆಂಗಳೂರಿನ ಉತ್ತರಹಳ್ಳಿ ಕೊಂಡಪ್ಪ ಬಡಾವಣೆಯಯಲ್ಲಿ ವಾಸಿಸುತ್ತದೆ.

ಸೋಮವಾರದಿಂದ ಶನಿವಾರದವರೆಗೆ ಕಾಲೇಜಿಗೆ ಹೋಗುವ ಸರಸ್ವತಿ ಭಾನುವಾರದಂದು ವ್ಯಾಪಾರಕ್ಕೆ ಹೋಗುತ್ತಾರೆ. ಆ ದಿನ ಅವರು ಬೆಳಗ್ಗೆ ಬೇಗ 6 ಗಂಟೆಗೆ ಎದ್ದು ಮನೆಯವರೆಲ್ಲರಿಗೂ ತಿಂಡಿ ತಯಾರಿಸುತ್ತಾರೆ. “ನಾವು ಹೊರಗೆ ಇರುವಾಗ ಮಕ್ಕಳಿಗೆ ಹಸಿವಾಗುತ್ತದೆ. ಹೀಗಾಗಿ ಒಂದಷ್ಟು ಹೆಚ್ಚು ಅಡುಗೆ ಮಾಡಿಟ್ಟು ಹೊರಡುತ್ತೇನೆ” ಎನ್ನುತ್ತಾರವರು.

ಸರಸ್ವತಿ ಮತ್ತು ಅವಳ ಅತ್ತಿಗೆ ಶಿವಮ್ಮ ತಮಗೆ ಬೇಕಾದ ಸಲಕರಣೆಗಳೊಂದಿಗೆ ಕೆಲಸಕ್ಕೆ ಹೊರಡುತ್ತಾರೆ: ಅಲ್ಯೂಮಿನಿಯಂ ಪಾತ್ರೆಗಳು ಮತ್ತು ಸ್ಟೀಲ್ ಪಾತ್ರೆಗಳನ್ನು ಹೊತ್ತೊಯ್ಯುವ ಬೂದು ಬಣ್ಣದ ಹೆಗಲು ಚೀಲ, ಹಾಲು ಮಾರುವವರ ಪಾತ್ರೆಯನ್ನು ಹೋಲುವ ಅವರು ಕೂದಲನ್ನು ಸಂಗ್ರಹಿಸಲು ಬಳಸುವ ಪಾತ್ರೆ.

“ಹೊರಡುವ ಮೊದಲು ಏನಾದರೂ ಹೊಟ್ಟೆಗೆ ಹಾಕಿಕೊಳ್ಳುತ್ತೇವೆ” ಎನ್ನುತ್ತಾರೆ ಸರಸ್ವತಿ. ಸಾಮಾನ್ಯವಾಗಿ ಅವರು ಒಂದು ಪ್ಲೇಟ್‌ ಇಡ್ಲಿ-ವಡೆ, ಆಮ್ಲೇಟ್‌ ಅಥವಾ ಮಸಾಲೆ ರೈಸ್‌ ತಿನ್ನುತ್ತಾರೆ.

ಮತ್ತಿಕೆರೆ, ಯಲಹಂಕ ನ್ಯೂಟೌನ್, ಕಲ್ಯಾಣ್ ನಗರ, ಬಾಣಸವಾಡಿ ಮತ್ತು ವಿಜಯನಗರ ಪ್ರದೇಶಗಳಿಗೆ ಅವರು ಪ್ರತಿ ವಾರ ಭೇಟಿ ನೀಡಲು ಪ್ರಯತ್ನಿಸುತ್ತಾರೆ. ಸರಸ್ವತಿಯವರ ಮಾರ್ಗಗಳು ಕಡಿಮೆ ಮತ್ತು ಮಧ್ಯಮ ಆದಾಯದ ಪ್ರದೇಶಗಳ ಮೂಲಕ ಹಾದುಹೋಗುತ್ತವೆ.

PHOTO • Ria Shah

ಸರಸ್ವತಿ ಗ್ರಾಹಕರಿಗೆ ಕೂದಲಿಗೆ ಬದಲಾಗಿ ಹಗುರವಾದ ಅಲ್ಯೂಮಿನಿಯಂ ಪಾತ್ರೆಗಳನ್ನು ಒದಗಿಸುತ್ತಾರೆ. ಅವುಗಳಲ್ಲಿ ಸಣ್ಣ ನೀರಿನ ಪಾತ್ರೆಗಳು, ಪಾತ್ರೆಗಳು, ಅಡುಗೆ ಸೌಟುಗಳು, ಇತ್ಯಾದಿ ಸೇರಿವೆ. ನಂತರ ಅವುಗಳನ್ನು ವಿಗ್‌ ತಯಾರಕರಿಗೆ ಮಾರುತ್ತಾರೆ

ಇವರಿಬ್ಬರು ಸಾಮಾನ್ಯವಾಗಿ 10 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಮತ್ತು ಆ ಸಮಯದಲ್ಲಿ ಊಟ-ತಿಂಡಿ ಸಲುವಾಗಿ ಎರಡು ವಿರಾಮಗಳನ್ನು ತೆಗೆದುಕೊಳ್ಳುತ್ತಾರೆ.

ಸರಸ್ವತಿ ಭೇಟಿ ನೀಡುವ ಮನೆಗಳಲ್ಲಿ ಕೂದಲನ್ನು ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಆಹಾರ ಪಾತ್ರೆಗಳು, ಪ್ಲಾಸ್ಟಿಕ್ ಜಾಡಿಗಳು, ತಗಡಿನ ಡಬ್ಬಿಗಳು ಮತ್ತು ಹರಿದ ಹಾಲಿನ ಪ್ಯಾಕೇಟುಗಳಲ್ಲಿ ಸಂಗ್ರಹಿಸಿಡುತ್ತಾರೆ.

"ನಾನು ಕೂದಲನ್ನು ಬಿಡಿಸಿ ನೋಡುವ ಮೂಲಕ [ಗುಣಮಟ್ಟವನ್ನು] ಪರಿಶೀಲಿಸುತ್ತೇನೆ" ಎಂದು ಸರಸ್ವತಿ ಹೇಳುತ್ತಾರೆ, "ಬ್ಯೂಟಿ ಪಾರ್ಲರುಗಳಲ್ಲಿ ಕತ್ತರಿಸಿದ ಕೂದಲು ಸಿಗುತ್ತದೆ, ಮತ್ತು ಅದು ಕೆಲಸಕ್ಕೆ ಬರುವುದಿಲ್ಲ." ವ್ಯಾಪಾರದ ಗುಟ್ಟೆಂದರೆ 'ರೆಮಿ ಹೇರ್' ಅನ್ನು ಹುಡುಕುವುದು, ಹಾಗೆಂದರೆ "ಕ್ಯುಟಿಕಲ್ ಇನ್ನೂ ಹಾಗೇ ಇರುವ ಬೇರುಗಳಿರುವ ಕೂದಲು". ಕನಿಷ್ಠ ಉದ್ದದ ಮಾನದಂಡವೂ ಇದೆ, ಅದು ಆರು ಇಂಚುಗಳಿಗಿಂತ ಹೆಚ್ಚು ಉದ್ದವಿರಬೇಕು.

ಅವರ ಬಳಿ ನಿಖರ ಮಾಪನ ಸಾಧನವಿಲ್ಲದ ಕಾರಣ ಕೂದಲನ್ನು ತಮ್ಮ ಮುಷ್ಟಿಗೆ ಎರಡು ಸುತ್ತು ಸುತ್ತಿ ಅಳತೆ ನೋಡುತ್ತಾರೆ. ನಂತರ ಅದನ್ನು ಚೆಂಡಿನ ಆಕಾರದಲ್ಲಿ ಸುತ್ತುತ್ತಾರೆ.

ಕೂದಲನ್ನು ಅಳೆದ ನಂತರ, ಸರಸ್ವತಿ ಅಥವಾ ಅವರ ಅತ್ತಿಗೆ ಹಗುರವಾದ ಅಲ್ಯೂಮಿನಿಯಂ ಪಾತ್ರೆಗಳನ್ನು ಹೊರತೆಗೆದು ಕೂದಲನ್ನು ಖರೀದಿಸುವ ವ್ಯಕ್ತಿಗೆ ಎರಡು ಆಯ್ಕೆಗಳನ್ನು ನೀಡುತ್ತಾರೆ. "ಗ್ರಾಹಕರು ಚುರುಕಾಗಿದ್ದರೆ, ಅವರು ನಮ್ಮೊಂದಿಗೆ ವಾದಿಸುತ್ತಾರೆ ಮತ್ತು ಬಹಳ ಕಡಿಮೆ ಪ್ರಮಾಣದ ಕೂದಲಿಗೆ ದೊಡ್ಡ ಪಾತ್ರೆಯನ್ನು ಪಡೆಯಲು ಚೌಕಾಶಿ ನಡೆಸುತ್ತಾರೆ" ಎಂದು ಅವರು ವಿವರಿಸುತ್ತಾರೆ.

PHOTO • Ria Shah
PHOTO • Ria Shah

ಸರಸ್ವತಿ ಸಂಗ್ರಹಿಸುವ ಕೂದಲು ಆರು ಇಂಚು ಅಥವಾ ಅದಕ್ಕಿಂತ ಹೆಚ್ಚು ಉದ್ದವಾಗಿರಬೇಕು. ತಮ್ಮ ಬಳಿ ನಿಖರ ಮಾಪನ ಸಾಧನವಿಲ್ಲದ ಕಾರಣ ಕೂದಲನ್ನು ತಮ್ಮ ಮುಷ್ಟಿಗೆ ಎರಡು ಸುತ್ತು ಸುತ್ತಿ ಅಳತೆ ನೋಡುತ್ತಾರೆ

PHOTO • Ria Shah
PHOTO • Ria Shah

ಅಗತ್ಯದಷ್ಟು ಅಳತೆಯಿದ್ದಲ್ಲಿ ಅದನ್ನು ತುರುಬಿನಂತೆ ಸುತ್ತುತ್ತಾರೆ

ಎಲ್ಲಾ ಕುಟುಂಬಗಳು ಪಾತ್ರೆಗಳನ್ನು ಬಳಸುವುದರಿಂದ, ಅವು ವಿನಿಮಯಕ್ಕೆ ಉತ್ತಮ ಕರೆನ್ಸಿಯಾಗಿ ಬಳಕೆಯಾಗುತ್ತದೆ. ಆದರೆ ಕೆಲವು ಗ್ರಾಹಕರು ಹಣ ಕೊಡುವಂತೆ ಒತ್ತಾಯಿಸುತ್ತಾರೆ ಎಂದು ಅವರು ಹೇಳುತ್ತಾರೆ. "ಆದರೆ ಅವರಿಗೆ ಹಣ ಕೊಡುವುದು ಕಷ್ಟ. ಕೇವಲ 10ರಿಂದ 20 ಗ್ರಾಂ ಕೂದಲಿಗೆ ಅವರು 100 ರೂಪಾಯಿಗಳಿಗಿಂತ ಹೆಚ್ಚು ಕೇಳುತ್ತಾರೆ!

ಒಂದು ದಿನದಲ್ಲಿ, ಅವರಿಗೆ ಹಿಡಿಯಷ್ಟು ಕೂದಲಷ್ಟೇ ಸಿಗುತ್ತದೆ, ಕೆಲವೊಮ್ಮೆ 300 ಗ್ರಾಂಗಿಂತಲೂ ಕಡಿಮೆ. "ನಾನು ಕೂದಲನ್ನು ಕೇಳಲು ಮನೆಗಳಿಗೆ ಹೋದಾಗ 'ಕೂದಲು ಖಾಲಿಯಾಗಿದೆ' ಎಂಬ ಉತ್ತರಗಳು ಸಿಗುತ್ತವೆ" ಎಂದು ಅವರು ಹೇಳುತ್ತಾರೆ. "ಅವರು [ಕೂದಲು ಸಂಗ್ರಹಿಸುವ ಇತರರು] ಈಗಾಗಲೇ ಎಲ್ಲಿ ವ್ಯಾಪಾರ ಮಾಡಿ ಹೋಗಿರುತ್ತಾರೆನ್ನುವುದು ನಮಗೆ ತಿಳಿದಿರುವುದಿಲ್ಲ."

ಸರಸ್ವತಿ ತಾನು ಸಂಗ್ರಹಿಸಿದ ಕೂದಲನ್ನು ಪಾರ್ವತಿ ಅಮ್ಮ ಎಂಬ ಡೀಲರ್ ಒಬ್ಬರಿಗೆ ಮಾರಾಟ ಮಾಡುತ್ತಾರೆ.

“ಕೂದಲಿನ ಬೆಲೆ ಕಾಲದಿಂದ ಕಾಲಕ್ಕೆ ಬದಲಾಗುವ ಕಾರಣ ಕುಟುಂಬಕ್ಕೆ ಇದರಿಂದ ಸ್ಥಿರವಾದ ಆದಾಯ ಖಾತರಿಯಿಲ್ಲ. ಸಾಮಾನ್ಯವಾಗಿ, ಒಂದು ಕಿಲೋ ಕಪ್ಪು ಕೂದಲಿಗೆ 5,000ರಿಂದ 6,000 ರೂಪಾಯಿಗಳವರೆಗೆ ಮಾರಾಟವಾಗುತ್ತದೆ. ಆದರೆ ಮಳೆಗಾಲದಲ್ಲಿ ದರಗಳು ಪ್ರತಿ ಕೆ.ಜಿ.ಗೆ 3,000 ಅಥವಾ 4,000 ರೂ.ಗೆ ಇಳಿಯುತ್ತವೆ.

ಪಾರ್ವತಿ ಅಮ್ಮ ಡಿಜಿಟಲ್ ತೂಕದ ಯಂತ್ರದಲ್ಲಿ ಕೂದಲನ್ನು ತೂಕ ಮಾಡುತ್ತಾರೆ.

PHOTO • Ria Shah
PHOTO • Ria Shah

ಎಡ: ಸರಸ್ವತಿ ಬೆಂಗಳೂರಿನ ವಿವಿಧ ಸಗಟು ಮಾರುಕಟ್ಟೆಗಳಿಂದ ಅಲ್ಯೂಮಿನಿಯಂ ಪಾತ್ರೆಗಳನ್ನು ಖರೀದಿಸುತ್ತಾರೆ. ಪಾರ್ವತಿ ಅಮ್ಮ ತನ್ನ ತೂಕದ ಯಂತ್ರದ ಮೇಲೆ ಕೂದಲನ್ನು ತೂಗುತ್ತಾರೆ

ಕಂಪನಿಗಳು ಪಾರ್ವತಿ ಅಮ್ಮನಿಂದ ಕೂದಲನ್ನು ಖರೀದಿಸಿ ಅವುಗಳಿಂದ ವಿಗ್‌ಗಳನ್ನು ತಯಾರಿಸುತ್ತವೆ. "ಸುಮಾರು 5,000 ಮಹಿಳೆಯರು ಕೂದಲನ್ನು ಬೇರ್ಪಡಿಸುವ ಮತ್ತು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಾರೆ" ಎಂದು 50 ವರ್ಷದ ಪಾರ್ವತಿ ಹೇಳುತ್ತಾರೆ. "ಅವರು ಸಾಬೂನು, ಎಣ್ಣೆ, ಶಾಂಪೂವನ್ನು ಬಳಸುತ್ತಾರೆ ಮತ್ತು ಅದು ಸ್ವಚ್ಛಗೊಂಡು ಒಣಗುವವರೆಗೆ ರಾತ್ರಿಯಿಡೀ ಒಣಗಿಸಿಡುತ್ತಾರೆ. ನಂತರ ಪುರುಷರು ಮಾರಾಟ ಮಾಡುವ ಮೊದಲು ಕೂದಲಿನ ಉದ್ದವನ್ನು ಪರಿಶೀಲಿಸುತ್ತಾರೆ.”

ಸರಸ್ವತಿ ತನ್ನ ಯೋಜನೆಯನ್ನು ವಿವರಿಸುತ್ತಾರೆ. “ನನಗೆ ಇಂದು ಪಾತ್ರೆ ಖರೀದಿಸುವುದಿದ್ದರೆ ಪಾರ್ವತಿ ಅಮ್ಮನಿಂದ ನಿನ್ನೆಯ ಕೂದಲಿಗೆ ಹಣ ಪಡೆದಿರಬೇಕು. ನಾನು ಕೂದಲು ಮಾರಲು ತಿಂಗಳು ಮುಗಿಯುವ ತನಕ ಕಾಯುವುದಿಲ್ಲ. ಕೂದಲು ಸಿಕ್ಕ ತಕ್ಷಣ ಮಾರಿಬಿಡುತ್ತೇನೆ.”

ದಿನಕ್ಕೆ 12ರಿಂದ 15 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುವುದಾಗಿ ಹೇಳುವ ಈ ಕೂದಲು ಸಂಗ್ರಾಹಕಿ “ಬಸ್ ಕಂಡಕ್ಟರ್‌ಗಳು ನಮಗೆ KSRTC [ಸರ್ಕಾರಿ] ಬಸ್ಸು ಹತ್ತಲು ಬಿಡುವುದಿಲ್ಲ" ಎಂದು ಹೇಳುತ್ತಾರೆ.

“ಈ ಕೆಲಸ ನನ್ನ ಮೇಲೆ ದೈಹಿಕ ಪರಿಣಾಮ ಉಂಟುಮಾಡುತ್ತದೆ. ಇದರಿಂದ ಮೈ-ಕೈ ನೋವು ಕುತ್ತಿಗೆ ನೋವು ಬರುತ್ತದೆ” ಎಂದು ಹೆಗಲಿನಲ್ಲಿದ್ದ ಪಾತ್ರೆಗಳ ಭಾರವನ್ನು ಒಂದು ಹೆಗಲಿನಿಂದ ಇನ್ನೊಂದು ಹೆಗಲಿಗೆ ವರ್ಗಾಯಿಸುತ್ತಾ ಹೇಳುತ್ತಾರೆ.

“ಈ ವ್ಯಾಪಾರದಿಂದ ನಮ್ಮ ಜೇಬು ತುಂಬುವುದು ಅಷ್ಟರಲ್ಲೇ ಇದೆ” ಎನ್ನುತ್ತಾರವರು.

ಅನುವಾದ: ಶಂಕರ. ಎನ್. ಕೆಂಚನೂರು

Student Reporter : Ria Shah

रिया शाह ने आर्ट, डिजाइन और टेक्नोलॉजी, सृष्टि मनिपाल इंस्टीट्यूट से इन्फोर्मेशन आर्ट्स और इन्फोर्मेशन डिजाइन प्रैक्टिसेज में अंडरग्रेजुएट की डिग्री प्राप्त की है.

की अन्य स्टोरी Ria Shah
Editor : Sanviti Iyer

संविति अय्यर, पीपल्स आर्काइव ऑफ़ रूरल इंडिया में बतौर कंटेंट कोऑर्डिनेटर कार्यरत हैं. वह छात्रों के साथ भी काम करती हैं, और ग्रामीण भारत की समस्याओं को दर्ज करने में उनकी मदद करती हैं.

की अन्य स्टोरी Sanviti Iyer
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru