ನಾವು ಕುರುಚಲು ಕಾಡೊಂದರಲ್ಲಿ ʼದೆವ್ವದ ಬೆನ್ನೆಲುಬುʼ ಹುಡುಕುತ್ತ ನಡೆದಿದ್ದೆವು. ಅದನ್ನು ಪಿರಾಂಡೈ (ಮಂಗರಬಳ್ಳಿ) ಎಂದೂ ಕರೆಯಲಾಗುತ್ತದೆ. ಚೌಕಾಕಾರದ ಬಳ್ಳಿಯು ಬಹಳಷ್ಟು ಉತ್ತಮ ಗುಣಗಳನ್ನು ಹೊಂದಿದೆ. ರತಿ ಮತ್ತು ನಾನು ಈ ಬಳ್ಳಿಯ ಹುಡುಕಾಟದಲ್ಲಿದ್ದೆವು. ಸಾಮಾನ್ಯವಾಗಿ ಇದರ ಮೃದುವಾದ ಎಳೆಯ ಕಾಂಡಗಳನ್ನು ಚೊಕ್ಕಗೊಳಿಸಿ ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಎಳ್ಳೆಣ್ಣೆ ಬಳಸಿ ಸಂರಕ್ಷಿಸಲಾಗುತ್ತದೆ. ಸರಿಯಾದ ವಿಧಾನ ಬಳಸಿ ಈ ಉಪ್ಪಿನಕಾಯಿಯನ್ನು ತಯಾರಿಸಿಟ್ಟರೆ ಇದು ಒಂದು ವರ್ಷದವರೆಗೆ ಬಳಿಕೆ ಬರುತ್ತದೆ.

ಅದು ಜನವರಿ ತಿಂಗಳ ಚಳಿಗಾಲದ ಬಿಸಿಲು ಹೊಳೆಯುತ್ತಿದ್ದ ಮಟಮಟ ಮಧ್ಯಾಹ್ನ. ನಾವು ಒಂದು ಬತ್ತಿದ ಹಳ್ಳದ ಮೂಲಕ ನಡೆಯುತ್ತಿದ್ದೆವು. ಆ ಹಳ್ಳದ ಹೆಸರು ಎಲೈಯತಮ್ಮನ್ ಓಡೈ. ಈ ತಮಿಳು ಹೆಸರನ್ನು ಕನ್ನಡದಲ್ಲಿ ಹೇಳುವುದಾದರೆ ಗಡಿಗಳಿಲ್ಲದ ದೇವಿಯ ಹೊಳೆ ಎಂದು. ಹೆಸರು ಕೇಳಿದರೆ ರೋಮಾಂಚನವಾಗುವಂತಿದೆ. ಕಲ್ಲು ಮತ್ತು ಮರಳಿನಿಂದ ಕೂಡಿದ ಹಾದಿಯ ಪ್ರಯಾಣ ನಮ್ಮ ಪಾಲಿಗೆ ಇನಷ್ಟು ರೋಮಾಂಚಕವಾಗಿತ್ತು.

ನಾವು ನಡೆದು ಹೋಗುವಾಗ ರತಿ ಕತೆಗಳನ್ನು ಹೇಳುತ್ತಿದ್ದರು. ಅವುಗಳಲ್ಲಿ ಕೆಲವು ಕಾಲ್ಪನಿಕವಾಗಿದ್ದರೆ, ಇನ್ನೂ ಕೆಲವು ತಮಾಷೆಯಾಗಿದ್ದವು. ತೊಂಬತ್ತರ ದಶಕದಲ್ಲಿ ಅವರು ಹೈಸ್ಕೂಲಿನಲ್ಲಿದ್ದಾಗ ಉಲ್ಬಣಗೊಂಡ ಆಹಾರ ಮತ್ತು ಜಾತಿ ಘರ್ಷಣೆಗಳ ರಾಜಕೀಯದ ಬಗ್ಗೆ ಅನೇಕ ನೈಜ ಮತ್ತು ತಲ್ಲಣಗೊಳಿಸುವ ಸಂಗತಿಗಳನ್ನು ಅವರು ತಿಳಿಸಿದರು. “ಆ ಸಮಯದಲ್ಲಿ ನಮ್ಮ ಕುಟುಂಬ ತೂತುಕುಡಿಗೆ ಪಲಾಯನ ಮಾಡಿತು…”

ಇದೆಲ್ಲ ನಡೆದು ಎರಡು ದಶಕಗಳ ನಂತರ ವೃತ್ತಿಪರ ಕತೆಗಾರರು, ಲೈಬ್ರರಿ ಸಲಹಾಗಾರರು ಮತ್ತು ಬೊಂಬೆಯಾಡಿಸುವವರಾಗಿ ರತಿ ತಮ್ಮ ಊರಿಗೆ ಮರಳಿದ್ದಾರೆ. ಮೆಲುದನಿಯಲ್ಲಿ ಮಾತನಾಡುವ ಅವರು ವೇಗವಾಗಿ ಓದಬಲ್ಲರು. “ಕೋವಿಡ್ ಪಿಡುಗಿನ ಸಮಯದ ಏಳು ತಿಂಗಳಲ್ಲಿ, ನಾನು 22,000 ದೊಡ್ಡ ಮತ್ತು ಸಣ್ಣ ಮಕ್ಕಳ ಪುಸ್ತಕಗಳನ್ನು ಓದಿದೆ. ಒಂದು ಹಂತದಲ್ಲಿ, ನನ್ನ ಸಹಾಯಕರು ಪ್ರತಿದಿನ ಹೀಗೆ ಓದುವುದನ್ನು ನಿಲ್ಲಿಸುವಂತೆ ಕೇಳಿಕೊಂಡರು. ಅವರು ನಾನು ಪುಸ್ತಕಗಳಲ್ಲಿ ಸಂಭಾಷಣೆಗಳನ್ನು ಮಾತನಾಡಬಹುದೆನ್ನುವುದು ಅವರ ಭಯವಾಗಿತ್ತು” ಎಂದು ಅವರು ನಕ್ಕರು.

ಅವರ ನಗು ಅವರ ಹೆಸರು ನೀಡಿರುವ ಭಾಗೀರತಿ ನದಿಯ ಕಲರವದಂತೆಯೇ ಇತ್ತು. ಅವರು ಎಲ್ಲೆಡೆ ರತಿ ಎನ್ನುವದ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಾರೆ. ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಸುಮಾರು 3,000 ಕಿಲೋಮೀಟರ್ ದೂರದಲ್ಲಿ ವಾಸಿಸುತ್ತಾರೆ, ಅಲ್ಲಿ ಅವರ ಹೆಸರು ಗಂಗಾ ಎಂದು ಬದಲಾಗುತ್ತದೆ. ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ತೆಂಕಲಂ ಎಂಬ ಅವರ ಊರು ಬೆಟ್ಟಗಳು ಮತ್ತು ಕುರುಚಲು ಕಾಡುಗಳಿಂದ ಆವೃತವಾಗಿದೆ. ಹಳ್ಳಿಯ ಪ್ರತಿಯೊಬ್ಬರೂ ಅವರನ್ನು ಬಲ್ಲರು ಮತ್ತತು ಅವರು ಊರಿನ ಜನರನ್ನು ಚೆನ್ನಾಗಿ ಬಲ್ಲರು.

“ನೀವು ಕಾಡಿಗೆ ಯಾಕೆ ಹೋಗುತ್ತಿದ್ದರೀರಿ?” ಎಂದು ಕಾರ್ಮಿಕ ಮಹಿಳೆಯೊಬ್ಬರು ಕೇಳಿದರು. “ನಾವು ಪಿರಾಂಡೈ ಹುಡುಕುತ್ತಿದ್ದೇವೆ” ಎಂದು ರತಿ ಉತ್ತರಿಸಿದರು. “ಇವರ್ಯಾರು? ನಿಮ್ಮ ಸ್ನೇಹಿತರೆ?” ಎಂದು ಮತ್ತೆ ಕೇಳಿದರು. “ಹೌದು, ಹೌದು” ಎಂದು ರತಿ ತಲೆಯಾಡಿಸಿದರು, ನಾನು ಅವರತ್ತ ಕೈ ಆಡಿಸಿದೆ.

Pirandai grows in the scrub forests of Tirunelveli, Tamil Nadu
PHOTO • Courtesy: Bhagirathy
The tender new stem is picked, cleaned and preserved with red chilli powder, salt and sesame oil and will remain unspoilt for a year
PHOTO • Courtesy: Bhagirathy

ಪಿರಾಂಡೈ ತಮಿಳುನಾಡಿನ ತಿರುನೆಲ್ವೇಲಿಯ ಕುರುಚಲು ಕಾಡುಗಳಲ್ಲಿ ಬೆಳೆಯುತ್ತದೆ. ರತಿಯವರಿಗೆ ಪಿರಂಡೈ ಸಸ್ಯ ಹುಡುಕಿದರು (ಬಲ). ಮೃದುವಾದ ಎಳೆ ಕಾಂಡವನ್ನು ತೆಗೆದುಕೊಂಡು, ಸ್ವಚ್ಛಗೊಳಿಸಿ ಕೆಂಪು ಮೆಣಸಿನ ಪುಡಿ, ಉಪ್ಪು ಮತ್ತು ಎಳ್ಳೆಣ್ಣೆಯಿಂದ ಸಂರಕ್ಷಿಸಲಾಗುತ್ತದೆ. ಇದು ಒಂದು ವರ್ಷದವರೆಗೆ ಹಾಳಾಗದೆ ಉಳಿಯುತ್ತದೆ

*****

ಸಸ್ಯಗಳನ್ನು ಆಹಾರವಾಗಿ ಬಳಸುವುದನ್ನು ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲೂ ಕಾಣಬಹುದು. ಇದು ಜನ ಸಾಮಾನ್ಯರ ಬದುಕಿನ ಒಂದು ಭಾಗವಾಗಿದೆ. ಇದು ಸಮಾಜದ ಎಲ್ಲಾ ಸದಸ್ಯರಿಗೆ ಲಭ್ಯವಿರುವ ಭೌತಿಕ, ನೈಸರ್ಗಿಕ ಮತ್ತು ಇತರ ಸಂಪನ್ಮೂಲ. ಆಯಾ ಪ್ರದೇಶಗಳಲ್ಲಿ ಲಭ್ಯವಿರುವ ಕಾಡುತ್ಪತ್ತಿಗಳನ್ನು ಅವುಗಳ ಲಭ್ಯತೆಗೆ ಅನುಗುಣವಾಗಿ ನಿರಂತರವಾಗಿ ಸೇವಿಸಲಾಗುತ್ತಿದೆ.

ಬೆಂಗಳೂರು ನಗರದಲ್ಲಿ ನಗರ ಅರಣ್ಯೀಕರಣದ ಕುರಿತು ಮಾತನಾಡುವ ಚೇಸಿಂಗ್ ಸೊಪ್ಪು ಎಂಬ ಪುಸ್ತಕದಲ್ಲಿ, ಲೇಖಕರು ಹೀಗೆ ಬರೆಯುತ್ತಾರೆ, "ಕಾಡು ಸಸ್ಯಗಳನ್ನು ಸಂಗ್ರಹಿಸುವುದು ಮತ್ತು ಬಳಸುವುದು ಸ್ಥಳೀಯ ಜನಾಂಗೀಯ-ಪರಿಸರ ಮತ್ತು ಜನಾಂಗೀಯ-ಸಸ್ಯಶಾಸ್ತ್ರೀಯ ಜ್ಞಾನವನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ." ತೆಂಕಾಳಂನಲ್ಲಿ ಮಹಿಳೆಯರು ಸಾಮಾನ್ಯವಾಗಿ ಕಾಡು ಸಸ್ಯಗಳನ್ನು ಸಂಗ್ರಹಿಸುತ್ತಾರೆ ಎಂದು ಅವರು ಹೇಳುತ್ತಾರೆ. "ಅವರು ತಮ್ಮ ಸುತ್ತಲಿನ ಸ್ಥಳೀಯ ಕಾಡು ಸಸ್ಯಗಳ ಬಗ್ಗೆ ಪ್ರಮುಖ ಜ್ಞಾನ ಹೊಂದಿರುವವರು ಮತ್ತು ತಜ್ಞರು. ಸಸ್ಯಗಳ ಯಾವ ಭಾಗಗಳನ್ನು ಆಹಾರ, ಔಷಧಿ ಅಥವಾ ಸಾಂಸ್ಕೃತಿಕ ಬಳಕೆಗಳಿಗಾಗಿ ಬಳಸಲಾಗುತ್ತದೆ ಮತ್ತು ಯಾವ ಕಾಲದಲ್ಲಿ ಅವುಗಳನ್ನು ತಿನ್ನಬೇಕು ಎನ್ನುವುದು ಅವರಿಗೆ ತಿಳಿದಿದೆ.

ಅವರ ಬಳಿ ತಲೆಮಾರುಗಳಿಂದ ಮುಂದುವರೆಸಿಕೊಂಡು ಬರಲಾಗಿರುವ ಹಲವು ಬಗೆಯ ಅಡುಗೆಯ ಕುರಿತಾದ ಜ್ಞಾನವೂ ಇದೆ.”

ವರ್ಷದಲ್ಲಿ ಕೆಲವು ಸಮಯವಷ್ಟೇ ಸಿಗುವ ಇಂತಹ ಉತ್ಪನ್ನಗಳನ್ನು ವರ್ಷವಿಡೀ ಸೇವಿಸಲು ಇರುವ ಸುಲಭ ಮತ್ತು ಆಕರ್ಷಕ ಮಾರ್ಗವೆಂದರೆ ಅವುಗಳನ್ನು ಸಂರಕ್ಷಿಸುವುದು. ಅಂತಹ ಜನಪ್ರಿಯ ಸಂರಕ್ಷಣಾ ವಿಧಾನಗಳಲ್ಲಿ ವಸ್ತುಗಳಿಗೆ ಉಪ್ಪು ಹಚ್ಚಿ ಒಣಗಿಸುವುದು ಮತ್ತು ಉಪ್ಪುನೀರಿನಲ್ಲಿ ಸಂಗ್ರಹಿಸುವುದು ಸೇರಿದೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ತಮಿಳುನಾಡಿನಲ್ಲಿ ಸಾಮಾನ್ಯವಾಗಿ ಈ ಸಂಸ್ಕರಣೆಯಲ್ಲಿ ವಿನೆಗರ್‌ ಬದಲು ಎಳ್ಳೆಣ್ಣೆಯನ್ನು ಬಳಸಲಾಗುತ್ತದೆ.

"ಎಳ್ಳೆಣ್ಣೆಯಲ್ಲಿ ಸೆಸಮಿನ್ ಮತ್ತು ಸೆಸಮಾಲ್ ಎನ್ನುವ ಅಂಶಗಳಿರುತ್ತವೆ. ಈ ಸಂಯುಕ್ತಗಳು ನೈಸರ್ಗಿಕ ಉತ್ಕರ್ಷಣ ನಿರೋಧಕಗಳಾಗಿವೆ ಮತ್ತು ಸಂರಕ್ಷಕವಾಗಿ ಕಾರ್ಯನಿರ್ವಹಿಸುತ್ತವೆ" ಎಂದು ಆಹಾರ ತಂತ್ರಜ್ಞಾನದಲ್ಲಿ M.Tech ಹೊಂದಿರುವ ಮೇರಿ ಸಂಧ್ಯಾ ಜೆ ಹೇಳುತ್ತಾರೆ. ಸಂಧ್ಯಾ ತನ್ನ ʼಆಳಿʼ (ಸಮುದ್ರ) ಎನ್ನುವ ಮೀನಿನ ಆಮ್ಲೋಪಚಾರದಲ್ಲಿ ಕೋಲ್ಡ್‌ ಪ್ರೆಸ್ಡ್ ಎಳ್ಳೆಣ್ಣೆಯನ್ನು ಬಯಸುತ್ತಾರೆ, “ಇದು ಮುಖ್ಯವಾಗಿ ಬಾಳಿಕೆ, ಪೌಷ್ಠಿಕಾಂಶದ ಪ್ರಯೋಜನಗಳು, ರುಚಿ ಮತ್ತು ಬಣ್ಣವನ್ನು ನೀಡುತ್ತದೆ."

PHOTO • Aparna Karthikeyan

ಸಸ್ಯಗಳನ್ನು ಆಹಾರವಾಗಿ ಬಳಸುವುದನ್ನು ನಾವು ಜಗತ್ತಿನ ಎಲ್ಲಾ ಸಂಸ್ಕೃತಿಗಳಲ್ಲೂ ಕಾಣಬಹುದು. ಇಂತಹ ಕಾಡುತ್ಪನ್ನಗಳನ್ನು ಅವುಗಳ ಹಂಗಾಮಿಗೆ ಸರಿಯಾಗಿ ಆಹಾರವಾಗಿ ಸೇವಿಸಲಾಗುತ್ತದೆ. ರತಿ ಒಮ್ಮೆ ಬಳ್ಳಿಗಳನ್ನು ಹುಡುಕಿಕೊಂಡು ಹೋದರೆ ನಾಲ್ಕು ಗಂಟೆಗಳ ಕಾಲ ತಿರುಗಾಡುತ್ತಾರೆ. ಇದು ಸುಮಾರು 10 ಕಿಲೋಮೀಟರ್‌ ದೂರದ ಪ್ರಯಾಣವನ್ನು ಒಳಗೊಂಡಿರುತ್ತದೆ

ರತಿಯವರ ಕುಟುಂಬವು ಎಳ್ಳೆಣ್ಣೆಯನ್ನು ಹಲವು ಅಡುಗೆಗಳಲ್ಲಿ ಬಳಸುತ್ತದೆ – ಅವುಗಳಲ್ಲಿ ಉಪ್ಪು ಊಡಿದ ಮಾಂಸ, ತರಕಾರಿ ಮತ್ತು ಕೆಲವು ಸಾರುಗಳೂ ಸೇರಿವೆ. ಆದರೆ ಹಳ್ಳಿಗಳಲ್ಲಿ ಆಹಾರದಲ್ಲೂ ಶ್ರೇಣಿಕರಣವಿದೆ. “ಹಳ್ಳಿಯಲ್ಲಿ ಒಂದು ಪ್ರಾಣಿಯನ್ನು ಕೊಂದರೆ ಅದರ ಒಳ್ಳೆಯ ಭಾಗಗಳು ಮೇಲ್ಜಾತಿಯ ಜನರಿಗೆ ಸೇರುತ್ತಿದ್ದವು. ಮತ್ತು ಅವುಗಳ ಒಳಭಾಗದ ಅವಯವಗಳು ನಮಗೆ ಸಿಗುತ್ತಿದ್ದವು. ನಮ್ಮ ಜಾತಿಗಳಲ್ಲಿ ಮಾಂಸಾಹಾರಿ ಪದಾರ್ಥಗಳ ಅಡುಗೆ ವಿಧಾನಗಳು ಲಭ್ಯವಿಲ್ಲ. ಇದಕ್ಕೆ ಕಾರಣ ನಮಗೆ ಒಳ್ಳೆಯ ಮಾಂಸ ಎಂದೂ ಸಿಗುತ್ತಿರಲಿಲ್ಲ. ನಮಗೆ ಕೇವಲ ರಕ್ತವನ್ನಷ್ಟೇ ನೀಡಲಾಗುತ್ತಿತ್ತು” ಎಂದು ಅವರು ಹೇಳುತ್ತಾರೆ.

"ದಬ್ಬಾಳಿಕೆ, ಭೌಗೋಳಿಕತೆ, ಸ್ಥಳೀಯ ಜಾತಿಯ ಸಸ್ಯ, ಪ್ರಾಣಿ ಮತ್ತು ಪ್ರಾಣಿಗಳು ಮತ್ತು ಜಾತಿ ಶ್ರೇಣೀಕರಣವು ದಲಿತ, ಬಹುಜನ ಮತ್ತು ಆದಿವಾಸಿ ಸಮುದಾಯಗಳ ಆಹಾರ ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ, ಈ ಕುರಿತು ಸಮಾಜ ವಿಜ್ಞಾನಿಗಳು ಸಂಶೋಧನೆ ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ವಿನಯ್ ಕುಮಾರ್ ನನ್ನ ಬಾಲ್ಯ ಕಾಲದ ಬ್ಲಡ್ ಫ್ರೈ ಮತ್ತು ಇತರ ದಲಿತ ಪಾಕವಿಧಾನಗಳು v ಎಂಬ ಪ್ರಬಂಧದಲ್ಲಿ ಬರೆಯುತ್ತಾರೆ.

ರತಿಯ ತಾಯಿ ವಡಿವಮ್ಮಾಳ್ ಅವರಿಗೆ "ರಕ್ತ, ಕರುಳು ಮತ್ತು ಇತರ ಅಂಗಗಳನ್ನು ಶುದ್ಧೀಕರಿಸುವ ಅದ್ಭುತ ವಿಧಾನ" ತಿಳಿದಿದೆ ಎಂದು ಅವರು ಹೇಳುತ್ತಾರೆ. “ಕಳೆದ ಭಾನುವಾರ ಅಮ್ಮ ಬ್ಲಡ್‌ ಫ್ರೈ ಮಾಡಿದ್ದರು. ಇದು ಈ ಊರಿನ ಒಂದು ಅದ್ಭುತ ಅಡುಗೆ: ಬ್ಲಡ್ ಸಾಸೇಜ್ ಮತ್ತು ಬ್ಲಡ್ ಪುಡಿಂಗ್. 'ಬ್ರೈನ್ ಫ್ರೈ' ಅನ್ನು ಅತ್ಯಂತ ಉತ್ತಮ ಆಹಾರವೆಂದು ಪರಿಗಣಿಸಲಾಗಿದೆ. ನಗರಕ್ಕೆ ಹೋದಾಗ, ಅದಕ್ಕೆ ಬಹಳ ಬೆಲೆಯಿರುವುದು ತಿಳಿಯಿತು. ಹಳ್ಳಿಯಲ್ಲಿ 20 ರೂಪಾಯಿಗೆ ಸಿಗುವುದನ್ನು ನಗರದಲ್ಲಿ ದುಬಾರಿ ಬೆಲೆ ತೆತ್ತು ಕೊಳ್ಳಬೇಕು.”

ಅವರ ತಾಯಿಗೆ ಸಸ್ಯಗಳ ಬಗ್ಗೆ ಆಳವಾದ ಜ್ಞಾನವಿದೆ. "ತಿರುಗಿ ನೋಡಿದರೆ, ಆ ಎಲ್ಲಾ ಬಾಟಲಿಗಳಲ್ಲಿ ಔಷಧೀಯ ಗಿಡಮೂಲಿಕೆಗಳು ಮತ್ತು ಎಣ್ಣೆ ಇದೆ" ಎಂದು ರತಿ ತನ್ನ ಕೋಣೆಯಲ್ಲಿ ಕುಳಿತಿದ್ದ ನನಗೆ ಹೇಳುತ್ತಾರೆ, "ನನ್ನ ತಾಯಿಗೆ ಅವುಗಳ ಹೆಸರು ಮತ್ತು ಬಳಕೆಯ ಬಗ್ಗೆ ತಿಳಿದಿದೆ. ಪಿರಾಂಡೈ ಉತ್ತಮ ಜೀರ್ಣಕಾರಿ ಅಂಶಗಳನ್ನು ಹೊಂದಿದೆ ಎಂದು ಪರಿಗಣಿಸಲಾಗಿದೆ. ಅಮ್ಮ ತನಗೆ ಬೇಕಾದ ಸಸ್ಯಗಳು ಅಥವಾ ಬೇರುಗಳನ್ನು ತೋರಿಸುತ್ತಾರೆ. ನಾನು ಕಾಡಿಗೆ ಹೋಗಿ ಹುಡುಕಿ ಅದನ್ನು ಸ್ವಚ್ಚಗೊಳಿಸಿ ಅವರಿಗೆ ನೀಡುತ್ತೇನೆ. "

ಇವು ಒಂದು ನಿರ್ದಿಷ್ಟ ಋತುವಿನಲ್ಲಿ ಲಭ್ಯವಿರುವ ಉತ್ಪನ್ನಗಳು ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. "ಒಮ್ಮೆ ಅವರು ಮರಗಳನ್ನು ಹುಡುಕುತ್ತಾ ಮನೆಯಿಂದ ಹೊರಟರೆ, ಅವರು ಸುಮಾರು ನಾಲ್ಕು ಗಂಟೆಗಳ ಕಾಲ 10 ಕಿಲೋಮೀಟರ್ ನಡೆಯುತ್ತಾರೆ. "ಆದರೆ ನಾನು ಅವುಗಳನ್ನು ಮನೆಗೆ ತಂದ ನಂತರ, ಏನಾಗುತ್ತದೆ ಎನ್ನುವುದು ನನಗೆ ತಿಳಿದಿಲ್ಲ" ಎಂದು ರತಿ ನಗುತ್ತಾರೆ. "

*****

Rathy in the forest plucking tamarind.
PHOTO • Aparna Karthikeyan
tamarind pods used in foods across the country
PHOTO • Aparna Karthikeyan

ರತಿ (ಎಡ) ಕಾಡಿನಲ್ಲಿ ಹುಣಸೆಕಾಯಿ ಕೀಳುತ್ತಿದ್ದಾರೆ. ಹಣಸೆಯನ್ನು (ಬಲ) ದೇಶಾದ್ಯಂತ ಆಹಾರವಾಗಿ ಬಳಸಲಾಗುತ್ತದೆ

ಕಾಡಿನೊಳಗೆ ನಡೆಯುವುದು ಮೋಜಿನ ಸಂಗತಿಯಾಗಿತ್ತು. ಚಿಕ್ಕ ಮಕ್ಕಳ ಕೈಗೆ ಚಿತ್ರವಿರುವ ಪುಸ್ತಕ ಸಿಕ್ಕಂತೆ. ಅದರ ಪ್ರತಿ ಪುಟವೂ ವಿಸ್ಮಯಕಾರಿ: ಇಲ್ಲಿ ಚಿಟ್ಟೆಗಳು, ಪಕ್ಷಿಗಳು ಮತ್ತು ದೊಡ್ಡ ಮತ್ತು ಆಕರ್ಷಕವಾದ ನೆರಳು ನೀಡುವ ಅನೇಕ ಮರಗಳಿವೆ. ರತಿ ನನಗೆ ಒಂದು ರೀತಿಯ ಹಣ್ಣನ್ನು ತೋರಿಸಿದರು. ಅವು ಕೊಯ್ಯುವಷ್ಟು ಪಕ್ವವಾಗಿರಲಿಲ್ಲ. "ಇನ್ನೂ ಕೆಲವು ದಿನಗಳಲ್ಲಿ, ಅವು ತುಂಬಾ ರುಚಿಕರವಾಗಿರುತ್ತವೆ" ಎಂದು ಅವರು ಹೇಳಿದರು. ನಾವು ಪಿರಾಂಡೈ ಗಿಡವನ್ನು ಹುಡುಕಲು ಹೊರಟೆವು, ಆದರೆ  ಅದು ಸಿಗಲಿಲ್ಲ.

“ಯಾರೋ ನಮಗೂ ಮೊದಲೇ ಬಂದು ಕಿತ್ತುಕೊಂಡು ಹೋಗಿದ್ದಾರೆ. ಚಿಂತೆಯಿಲ್ಲ ಮುಂದೆ ಎಲ್ಲಾದರೂ ಸಿಗುತ್ತದೆ” ಎಂದು ರತಿ ಧೈರ್ಯ ಹೇಳಿದರು.

ಆ ಕ್ಷಣದ ನಷ್ಟವನ್ನು ಸರಿದೂಗಿಸಲು, ಅವರು ದೊಡ್ಡ ಹುಣಸೆ ಮರದ ಕೆಳಗೆ ನಿಂತು, ಭಾರವಾದ ಕೊಂಬೆಯನ್ನು ಬಾಗಿಸಿ ಅದರಲ್ಲಿದ್ದ ಕೆಲವು ಕೊಂಬುಗಳನ್ನು ಕಿತ್ತರು. ಅದರೊಳಗಿದ್ದ ಹುಣಸೇ ಹಣ್ಣನ್ನು ಒಡೆದು ತಿಂದೆವು. ಅವರ ಓದಿನ ನೆನಪಿನಲ್ಲಿ ಹುಣಸೇಹಣ್ಣು ಸಹ ಸೇರಿದೆ. “ನಾನು ಒಂದೆಡೆ ಮುದುರಿ ಕುಳಿತು ಹುಣಸೆ ಹಣ್ಣನ್ನು ತಿನ್ನುತ್ತಾ ಕುಳಿತಿರುತ್ತಿದ್ದೆ.”

ಅವರು ಸ್ವಲ್ಪ ದೊಡ್ಡವರಾದ ನಂತರ, ಅವರು ತಮ್ಮ ಕಬ್ಬಿನ ಅಂಗಳದಲ್ಲಿ ಕೊಡುಕ್ಕಪುಳಿ ಮರಮ್ (ಹಿಪ್ಪುನೇರಳೆ ಮರ) ಮೇಲೆ ಕುಳಿತು ಪುಸ್ತಕವನ್ನು ಓದುತ್ತಿದ್ದರು. "ನಂತರ ಅಮ್ಮ ಅದನ್ನು ಕತ್ತರಿಸಿದರು, ಏಕೆಂದರೆ ನಾನು ಹದಿನಾಲ್ಕು ಅಥವಾ ಹದಿನೈದು ವರ್ಷದವಳಗಿದ್ದಾಗಲೂ ಆ ಮರವನ್ನು ಹತ್ತುತ್ತಿದ್ದೆ!" ಎಂದು ಜೋರಾಗಿ ನಗುತ್ತಾರೆ.

ಮಧ್ಯಾಹ್ನದ ಸೂರ್ಯ ನೆತ್ತಿ ಸುಡುತ್ತಿದ್ದ. ಜನವರಿ ತಿಂಗಳಿನಲ್ಲಿ ಇಷ್ಟು ತೀವ್ರ ಬಿಸಿಲು ಅನಿರೀಕ್ಷಿತವೆನ್ನಬಹುದು. "ಇನ್ನು ಸ್ವಲ್ಪ ದೂರ ಅಷ್ಟೇ, ನಾವು ಹಳ್ಳಿಯ ನೀರಿನ ಮೂಲವಾದ ಪುಲಿಯುದುವನ್ನು ತಲುಪುತ್ತೇವೆ" ಎಂದು ರತಿ ಹೇಳಿದರು. ಅಲ್ಲಿ ಒಣಗಿದ ತೊರೆಯ ನಡುವೆ ಸ್ವಲ್ಪ ನೀರು ಇತ್ತು. ಚಿಟ್ಟೆಗಳು ಮೆಂಚಾ ಮೆಂಚಾದ ಮಣ್ಣಿನ ಮೇಲೆ ನೃತ್ಯ ಮಾಡುತ್ತಿದ್ದವು. ಅವು ತಮ್ಮ ರೆಕ್ಕೆಗಳನ್ನು ತೆರೆಯುತ್ತಾ ಮುಚ್ಚುತ್ತಾ ಕುಣಿಯುತ್ತಿದ್ದವು. ಇದಕ್ಕಿಂತ ಆಸಕ್ತಿದಾಯಕವಾದುದು ಬೇರೊಂದಿಲ್ಲ ಎಂದು ನಾನು ಭಾವಿಸುವ ಹೊತ್ತಿಗೆ, ಅದು ಇನ್ನಷ್ಟು ಮಾಂತ್ರಿಕವಾಗುತ್ತಿತ್ತು.

ಗ್ರಾಮ ದೇವತೆಯ ಹಳೆಯ ದೇವಾಲಯದ ಪಕ್ಕದಲ್ಲಿ ಪುಲಿಯುತ್ತು ಎಂಬ ಕೊಳವಿತ್ತು. ಮತ್ತೊಂದೆಡೆ, ಗಣೇಶನ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ರತಿ ತೋರಿಸಿದರು. ನಾವು ದೊಡ್ಡ ಆಲದ ಮರದ ಕೆಳಗೆ ಕುಳಿತು ಕಿತ್ತಳೆ ಹಣ್ಣು ತಿಂದೆವು. ನಮ್ಮ ಸುತ್ತಲಿನ ಎಲ್ಲವೂ ಸುಂದರವಾಗಿತ್ತು - ಮಧ್ಯಾಹ್ನದ ಬೆಳಕು ಗಾಢ ಮರದ ಕೊಂಬೆಗಳ ನಡುವೆ ತೂರಿ ಬರುತ್ತಿತ್ತು; ಕಿತ್ತಳೆ ಹಣ್ಣಿನ ಪರಿಮಳ, ಕಿತ್ತಳೆ ಮತ್ತು ಕಪ್ಪು ಬಣ್ಣದ ಮೀನು ಎಲ್ಲವೂ ಇದ್ದವು. ಮತ್ತು ರತಿ ನನಗೆ ಮೃದುವಾದ ಧ್ವನಿಯಲ್ಲಿ ಕಥೆಯನ್ನು ವಿವರಿಸಿದರು. 'ಈ ಕಥೆಯ ಶೀರ್ಷಿಕೆ 'ಕತ್ತರಿಸಿ, ಬೀಜಗಳನ್ನು ನೋಡಿ ಮತ್ತು ಸಿಪ್ಪೆ ಸುಲಿಯಿರಿ' ಎಂದು ಅವರು ಪ್ರಾರಂಭಿಸಿದರು. ನಾನು ಗಮನವಿಟ್ಟು ಕೇಳತೊಡಗಿದೆ.

Rathy tells me stories as we sit under a big banyan tree near the temple
PHOTO • Aparna Karthikeyan
Rathy tells me stories as we sit under a big banyan tree near the temple
PHOTO • Aparna Karthikeyan

ದೇವಾಲಯದ ಬಳಿ ಆಲದ ಮರದ ಕೆಳಗೆ (ಬಲಕ್ಕೆ) ಕುಳಿತು ರತಿ ನನಗೆ ಕತೆಗಳನ್ನು ಹೇಳಿದರು

ರತಿ ಕಥೆಗಳನ್ನು ಪ್ರೀತಿಸುತ್ತಾರೆ. ಅವರ ನೆನಪಿನಲ್ಲಿ ಹಳೆಯ ದಿನಗಳು, ಬ್ಯಾಂಕ್ ಮ್ಯಾನೇಜರ್ ಆಗಿದ್ದ ಅವರ ತಂದೆ ಸಮುದ್ರಂ ಮಿಕ್ಕಿ ಮೌಸ್ ಅವರ ಕಾಮಿಕ್ ಪುಸ್ತಕಗಳನ್ನು ಅವರಿಗೆಂದ ತರುತ್ತಿದ್ದರು. "ನನಗೆ ಸ್ಪಷ್ಟವಾಗಿ ನೆನಪಿದೆ: ಅವರು ನನ್ನ ತಮ್ಮ ಗಂಗನಿಗೆ ವಿಡಿಯೋ ಗೇಮ್, ತಂಗಿ ನರ್ಮದಾಳಿಗೆ ಗೊಂಬೆ ಮತ್ತು ನನಗಾಗಿ ಪುಸ್ತಕವನ್ನು ತರುತ್ತಿದ್ದರು!"

ರತಿ ತನ್ನ ತಂದೆಯಿಂದ ಓದುವ ಅಭ್ಯಾಸವನ್ನು ಕಲಿತರು. ಅವರ ಬಳಿ ಸಾಕಷ್ಟು ಪುಸ್ತಕಗಳಿದ್ದವು. ಇದಲ್ಲದೆ, ರತಿ ಓದುತ್ತಿದ್ದ ಪ್ರಾಥಮಿಕ ಶಾಲೆಯಲ್ಲಿ ದೊಡ್ಡ ಗ್ರಂಥಾಲಯವಿತ್ತು. "ಅವರು ಪುಸ್ತಕಗಳನ್ನು ಬೀಗ ಹಾಕಿ ಇಡುತ್ತಿರಲಿಲ್ಲ ಮತ್ತು ನನಗಾಗಿ ಅಪರೂಪದ ಪುಸ್ತಕಗಳ ವಿಭಾಗಗಳನ್ನು ಸಹ ತೆರೆದಿಟ್ಟಿದ್ದರು. ಏಕೆಂದರೆ ನಾನು ಪುಸ್ತಕಗಳನ್ನು ಇಷ್ಟಡುತ್ತಿದ್ದೆ! ಸಾಮಾನ್ಯವಾಗಿ, ನ್ಯಾಷನಲ್ ಜಿಯಾಗ್ರಫಿಕ್ ಮತ್ತು ಎನ್ಸೈಕ್ಲೋಪೀಡಿಯಾದಂತಹ ಇಲಾಖೆಗಳಿಗೆ ಬೀಗ ಹಾಕಿಡಲಾಗುತ್ತಿತ್ತು."

ರತಿ ಪುಸ್ತಕಗಳನ್ನು ಬಹಳವಾಗಿ ಪ್ರೀತಿಸುತ್ತಿದ್ದರು, ತನ್ನ ಬಾಲ್ಯವನ್ನು ಅವರು ಪುಸ್ತಕಗಳನ್ನು ಓದುವುದರಲ್ಲಿ ಕಳೆದರು. "ರಷ್ಯನ್ ಭಾಷೆಯಿಂದ ಭಾಷಾಂತರಿಸಲಾದ ಈ ಪುಸ್ತಕವನ್ನು ನಾವು ಕಳೆದುಕೊಂಡಿದ್ದೇವೆ ಎಂದು ನಾನು ಭಾವಿಸಿದ್ದೆ. ನನಗೆ ಪುಸ್ತಕದ ಹೆಸರು ನೆನಪಿಲ್ಲ, ಚಿತ್ರಗಳು ಮತ್ತು ಕಥೆಗಳು ಮಾತ್ರ. ನಾನು ಅದನ್ನು ಕಳೆದ ವರ್ಷ ಅಮೆಜಾನ್‌ನಲ್ಲಿ ನೋಡಿದೆ. ಇದು ಸಮುದ್ರ ಸಿಂಹ ಅಥವಾ ಸೀಲ್ ಮತ್ತು ಸಮುದ್ರದ ಪ್ರಯಾಣದ ಕುರಿತ ಪುಸ್ತಕವಾಗಿತ್ತು. ನೀವು ಕೇಳಲು ಬಯಸುವಿರಾ?" ಮತ್ತು ಅವರು ಆ ಪುಸ್ತಕದ ಕಥೆಯನ್ನು ಹೇಳಲು ಪ್ರಾರಂಭಿಸಿದರು. ಕತೆಯ ಓಘಕ್ಕೆ ತಕ್ಕಂತೆ ಕತೆಯಲ್ಲಿನ ಸಮುದ್ರಂತೆ ಅವರ ದನಿ ಏರಿಳಿಯುತ್ತಿತ್ತು.

ಸಮುದ್ರದಂತೆ, ಅವರ ಬಾಲ್ಯವೂ ಪ್ರಕ್ಷುಬ್ಧವಾಗಿತ್ತು. ಅವರು ಹೈಸ್ಕೂಲಿನಲ್ಲಿದ್ದಾಗ ನಡೆದ ಸುತ್ತಮುತ್ತಲಿನ ಹಿಂಸಾಚಾರದ ಬಗ್ಗೆ ಮಾತನಾಡುತ್ತಾರೆ. "ಚೂರಿ ಇರಿತ. ಬಸ್ಸಿಗೆ ಬೆಂಕಿ ಹಚ್ಚುವುದು ಇವುಗಳ ಬಗ್ಗೆ ನಿರಂತರವಾಗಿ ಕೇಳುತ್ತಿದ್ದೆವು. ನಮ್ಮ ಹಳ್ಳಿಯ ಸಂಸ್ಕೃತಿಯಲ್ಲಿ ಒಂದು ವಿಷಯವಿದೆ. ಹಬ್ಬ ಮತ್ತು ಕಾರ್ಯಕ್ರಮಗಳು ಇದ್ದಾಗಲೆಲ್ಲಾ ಚಲನಚಿತ್ರವನ್ನು ತೋರಿಸುತ್ತಿದ್ದರು. ಅದು ಹಿಂಸೆಗೆ ಮೂಲ ಕಾರಣವಾಗಿತ್ತು. ಅಲ್ಲಿ ಯಾರೋ ಒಬ್ಬರಿಗೆ ಚಾಕುವಿನಿಂದ ಇರಿಯಲಾಗಿತ್ತು. ನಾನು 8ನೇ ತರಗತಿಯಲ್ಲಿದ್ದಾಗ ಗಲಾಟೆಯು ಹಿಂಸಾತ್ಮಕ ತಿರುವು ಪಡೆಯಿತು. ಕರ್ಣನ್ ಸಿನಿಮಾ ನೋಡಿದ್ದೀರಾ? ನಮ್ಮ ಜೀವನ ಹಾಗೇ ಇತ್ತು. ಕರ್ಣನ್ 1995ರಲ್ಲಿ ಕೊಡಿಯಾಂಕುಲಂನಲ್ಲಿ ನಡೆದ ಜಾತಿ ಹಿಂಸಾಚಾರದ ಬಗ್ಗೆ ಕಾಲ್ಪನಿಕ ಚಿತ್ರವಾಗಿದ್ದು, ನಟ ಧನುಷ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. "ಶೋಷಣೆಯ ವಿರುದ್ಧದ ಹೋರಾಟದ ಸಂಕೇತವಾಗಿ ಹೊರಹೊಮ್ಮಿದ ದಲಿತ ಸಮುದಾಯದ ನಿರ್ಭೀತ ಮತ್ತು ಸಹಾನುಭೂತಿಯುಳ್ಳ ಕರ್ಣನ್ ಎನ್ನುವ ಯುವಕನ ಕಥೆ ಇದು. "ಗ್ರಾಮದಲ್ಲಿ, ಮೇಲ್ಜಾತಿಯವರು ಎಲ್ಲಾ ರೀತಿಯ ಸೌಲಭ್ಯಗಳನ್ನು ಅನುಭವಿಸುತ್ತಾರೆ ಆದರೆ ಮತ್ತು ದಲಿತರಿಗೆ ತಾರತಮ್ಯ ಮಾಡಲಾಗುತ್ತದೆ. '

1990ರ ದಶಕದ ಉತ್ತರಾರ್ಧದಲ್ಲಿ, ಜಾತಿ ಹಿಂಸಾಚಾರ ತೀವ್ರಗೊಳ್ಳುತ್ತಿದ್ದಾಗ, ರತಿಯ ತಂದೆ ಬೇರೆ ನಗರದಲ್ಲಿ ವಾಸಿಸುತ್ತಿದ್ದರು. ಅವರು ಅಲ್ಲಿ ಕೆಲಸ ಮಾಡುತ್ತಿದ್ದರು. ರತಿ ಮತ್ತು ಅವರ ಒಡಹುಟ್ಟಿದವರು ತಮ್ಮ ತಾಯಿಯೊಂದಿಗೆ ಹಳ್ಳಿಯಲ್ಲಿ ವಾಸಿಸುತ್ತಿದ್ದರು. ಆದರೆ ಅವರು 9, 10, 11 ಮತ್ತು 12ನೇ ತರಗತಿಗಳ ಓದಿಗೆ ಪ್ರತಿವರ್ಷ ವಿವಿಧ ಶಾಲೆಗಳಿಗೆ ಹೋಗಬೇಕಾಗಿತ್ತು.

ಅವರ ಜೀವನ ಮತ್ತು ಅನುಭವಗಳು ಅವರ ಭವಿಷ್ಯದ ಆಯ್ಕೆಯ ಮೇಲೆ ಪರಿಣಾಮ ಬೀರಿದವು. "ನೋಡಿ, 30 ವರ್ಷಗಳ ಹಿಂದೆ, ತಿರುನೆಲ್ವೇಲಿಯಲ್ಲಿ, ನಾನು ಓದುಗಳಾಗಿದ್ದೆ, ಅಲ್ಲಿ ಯಾರೂ ನನಗೆ ಪುಸ್ತಕಗಳನ್ನು ವ್ಯವಸ್ಥೆ ಮಾಡುತ್ತಿರಲಿಲ್ಲ. ಪ್ರಾಥಮಿಕ ಶಾಲೆಯಲ್ಲಿ ಷೇಕ್ಸ್ ಪಿಯರ್ ಕೃತಿಗಳನ್ನು ಓದಿದ್ದೆ. ನನ್ನ ನೆಚ್ಚಿನ ಪುಸ್ತಕಗಳಲ್ಲಿ ಒಂದು (ಜಾರ್ಜ್ ಎಲಿಯಟ್ ಅವರ) ಮಿಲ್ ಆನ್ ದಿ ಫ್ಲೋಸ್. ಇದು ವರ್ಣಭೇದ ನೀತಿ ಮತ್ತು ವರ್ಗವಾದದ ಕುರಿತು ಬರೆಯಲಾಗಿರುವ ಪುಸ್ತಕ. ಈ ಪುಸ್ತಕದ ಮುಖ್ಯ ಪಾತ್ರ ಕಪ್ಪು ಮಹಿಳೆ. ಇದು ಪದವಿಪೂರ್ವ ತರಗತಿಯ ಪಠ್ಯಕ್ರಮದಲ್ಲಿತ್ತು. ಆದರೆ ಯಾರೋ ಪುಸ್ತಕವನ್ನು ಶಾಲೆಗೆ ದಾನ ಮಾಡಿದ್ದರಿಂದ, ನಾನು ಅದನ್ನು 4ನೇ ತರಗತಿಯಲ್ಲಿ ಓದಿದೆ. ಅದರ ಮುಖ್ಯ ಪಾತ್ರ ನನ್ನಂತೆಯೇ ಅನ್ನಿಸಿತು. ಆಕೆಯ ಬದುಕಿನ ಕಥೆ ನನಗೂ ನೋವುಂಟು ಮಾಡಿತು."

Rathy shows one of her favourite books
PHOTO • Aparna Karthikeyan
Rathy shows her puppets
PHOTO • Varun Vasudevan

ತನ್ನ ನೆಚ್ಚಿನ ಪುಸ್ತಕ (ಎಡ) ಮತ್ತು ಬೊಂಬೆಗಳ ಜೊತೆ ರತಿ

ವರ್ಷಗಳ ನಂತರ, ರತಿಗೆ ಮಕ್ಕಳ ಪುಸ್ತಕಗಳ ಬಗ್ಗೆ ಅರಿವಾಯಿತು, ಮತ್ತು ಅದು ಅವರ ಭವಿಷ್ಯವನ್ನು ನಿರ್ಧರಿಸಿತು. "ಮಕ್ಕಳ ಪುಸ್ತಕಗಳಿವೆ ಎಂದು ನನಗೆ ತಿಳಿದಿರಲಿಲ್ಲ. ವೇರ್ ದಿ ವೈಲ್ಡ್ ಥಿಂಗ್ಸ್ ಆರ್ ಮತ್ತು ಫರ್ಡಿನಾಂಡ್‌ನಂತಹ ಪುಸ್ತಕಗಳಿವೆ ಎಂದು ನನಗೆ ತಿಳಿದಿರಲಿಲ್ಲ. ಸುಮಾರು 80 ಅಥವಾ 90 ವರ್ಷಗಳಿಂದ ಈ ಪುಸ್ತಕಗಳಿವೆ, ಮತ್ತು ಈ ಪಟ್ಟಣದ ಮಕ್ಕಳು ಅವುಗಳನ್ನು ಓದಿದ್ದಾರೆನ್ನುವುದು ನನ್ನಲ್ಲಿ ಆಶ್ಚರ್ಯ ಹುಟ್ಟಿಸಿತ್ತು - ನಾನು ಸಣ್ಣವಳಾಗಿದ್ದ ಸಮಯದಲ್ಲಿ ಈ ಪುಸ್ತಕ ದೊರೆತಿದ್ದರೆ? ಬಹುಶಃ ನನ್ನ ಜೀವನದ ಹಾದಿ ಭಿನ್ನವಾಗಿರುತ್ತಿತ್ತು. ಉತ್ತಮವಾಗಿರುತ್ತಿತ್ತು ಎಂದು ನಾನು ಹೇಳುತ್ತಿಲ್ಲ, ಆದರೆ ಭಿನ್ನವಾಗಿರುತ್ತಿತ್ತು ಎಂದು ನಾನು ಹೇಳಬಲ್ಲೆ."

ಆದರೆ ಪುಸ್ತಕಗಳನ್ನು ಓದುವುದು ಎಂದರೆ ಶಿಕ್ಷಣದಿಂದ ದೂರ ಸರಿಯುವುದು ಎನ್ನುವ ಭಾವನೆಯಿದೆ. "ಇದನ್ನು ಮನರಂಜನೆ ಎಂದು ಭಾವಿಸಲಾಗಿದೆ," ಅವರು ತಲೆ ಅಲ್ಲಾಡಿಸಿದರು, "ಸಾಮರ್ಥ್ಯವರ್ಧನೆಯ ಪ್ರಕ್ರಿಯೆಯಲ್ಲ. ಪೋಷಕರು ಸಹ ಓದು ಮತ್ತು ಚಟುವಟಿಕೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿಸುತ್ತಿದ್ದಾರೆ. ಮಕ್ಕಳು ಕತೆ ಪುಸ್ತಕಗಳನ್ನು ಓದುವುದನ್ನು ಆನಂದಿಸಬಹುದು ಮತ್ತು ಅದರಿಂದ ಕಲಿಯಬಹುದು ಎಂದು ಅವರು ಭಾವಿಸುವುದಿಲ್ಲ. ಅದರೊಂದಿಗೆ, ಹಳ್ಳಿ ಮತ್ತು ನಗರದ ನಡುವೆ ದೊಡ್ಡ ನಿರ್ವಾತವಿದೆ. ನಗರ ಪ್ರದೇಶದ ಮಕ್ಕಳಿಗೆ ಹೋಲಿಸಿದರೆ, ಹಳ್ಳಿಯ ಮಕ್ಕಳು (ಓದಿನ ದೃಷ್ಟಿಯಿಂದ) ಕನಿಷ್ಠ ಎರಡರಿಂದ ಮೂರು ಹೆಜ್ಜೆ ಹಿಂದೆ ಇದ್ದಾರೆ."

ಈ ಕಾರಣಕ್ಕಾಗಿಯೇ ರತಿ ಹಳ್ಳಿಯ ಮಕ್ಕಳೊಂದಿಗೆ ಕೆಲಸ ಮಾಡಲು ಇಷ್ಟಪಡುತ್ತಾರೆ. ಹಳ್ಳಿಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ವ್ಯವಸ್ಥೆ ಮಾಡುವುದು ಮತ್ತು ನಿರ್ವಹಿಸುವುದರ ಹೊರತಾಗಿ, ಅವರು ಈಗ ಆರು ವರ್ಷಗಳಿಂದ ವಿವಿಧ ಸ್ಥಳಗಳಲ್ಲಿ 'ಲಿಟ್-ಫೆಸ್ಟ್' ಮಾಡುತ್ತಿದ್ದಾರೆ; ಮತ್ತು 'ಪುಸ್ತಕ ಉತ್ಸವಗಳು' ಅಥವಾ ಸಾಹಿತ್ಯ ಉತ್ಸವಗಳು ಮತ್ತು ಪುಸ್ತಕ ಮೇಳಗಳನ್ನು ಆಯೋಜಿಸುತ್ತಿದ್ದಾರೆ. ಅನೇಕ ಬಾರಿ ವಿದ್ಯಾವಂತ ಗ್ರಂಥಪಾಲಕರು ಪುಸ್ತಕಗಳ ಉತ್ತಮ ಪಟ್ಟಿಯನ್ನು ಇಟ್ಟುಕೊಳ್ಳುವುದನ್ನು ನೀವು ಕಾಣಬಹುದು, ಆದರೆ ಕೆಲವೊಮ್ಮೆ ಅವರಿಗೆ ಪುಸ್ತಕದ ಒಳಗೆ ಏನಿದೆ ಎಂದು ತಿಳಿದಿರುವುದಿಲ್ಲ. "ಯಾವ ಪುಸ್ತಕವನ್ನು ಓದಬೇಕೆಂದು ಹೇಳಲು ಅವರಿಗೆ ಸಾಧ್ಯವಾಗದಿದ್ದರೆ, ಅವರು ಮಾಡುವ ಕೆಲಸಕ್ಕೆ ಏನೂ ಅರ್ಥವಿಲ್ಲ!"

ರತಿ ಸಣ್ಣ ದನಿಯಲ್ಲಿ ಮಾತನಾಡುತ್ತಾ, “ಒಂದು ಒಬ್ರು ಲೈಬ್ರರಿಯನ್‌ ನನ್ನ ಹತ್ರ ಮಕ್ಕಳನ್ನೆಲ್ಲ ಯಾಕೆ ಒಳಗೆ ಬಿಡ್ತೀಯಾ? ಎಂದು ಕೇಳಿದ್ದರು. ಅದಕ್ಕೆ ನನ್ನ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ನೀವು ನೋಡಬೇಕಿತ್ತು” ಎಂದು ಜೋರಾಗಿ ನಕ್ಕರು. ಆ ನಗುವಿನಲ್ಲಿ ಮಧ್ಯಾಹ್ನದ ಬಿಸಿಲಿನಷ್ಟೇ ಹೊಳಪಿತ್ತು.

*****

ಮನೆಗೆ ಹಿಂದಿರುಗುವಾಗ, ದಾರಿಯಲ್ಲಿ ನಮಗೆ ಪಿರಾಂಡೈ ಸಿಕ್ಕಿತು. ಈ ಬಳ್ಳಿ ಬಹಳ ಗಟ್ಟಿಯಿತ್ತು ಮತ್ತು ಮರಗಳಿಗೆ ಸುತ್ತಿಕೊಂಡಿತ್ತು. ರತಿ ನಾವು ಕೀಳಬೇಕಿರುವ ತಿಳಿ ಹಸಿರು ಬಣ್ಣದ ಬಳ್ಳಿಗಳನ್ನು ನನಗೆ ತೋರಿಸಿದರು. ಬಳ್ಳಿಯನ್ನು ಕಿತ್ತುಕೊಂಡ ರತಿ ಅದನ್ನು ತನ್ನ ಕೈಗೆ ಸುತ್ತಿಕೊಂಡರು. ʼದೆವ್ವದ ಬೆನ್ನೆಲುಬುʼ ಎನ್ನುವ ಅದರ ಹೆಸರನ್ನು ಕೇಳಿ ಮತ್ತೆ ನಗು ಬಂತು ನಮಗೆ.

Foraging and harvesting pirandai (Cissus quadrangularis), the creeper twisted over plants and shrubs
PHOTO • Aparna Karthikeyan
Foraging and harvesting pirandai (Cissus quadrangularis), the creeper twisted over plants and shrubs
PHOTO • Aparna Karthikeyan

ಪಿರಾಂಡೈ ಬಳ್ಳಿಯನ್ನು ಕೊಯ್ಯುತ್ತಿರುವುದು. ಇದು ಸಸ್ಯಗಳು ಮತ್ತು ಪೊದೆಗಳ ಮೇಲೆ ಹಬ್ಬಿಕೊಂಡಿರುತ್ತದೆ

ಒಂದು ಮಳೆ ಸುರಿದರೆ ‍ಬಳ್ಳಿ ಮತ್ತೆ ಚಿಗುರುತ್ತದೆ ಎಂದು ರತಿ ಭರವಸೆ ಕೊಟ್ಟರು. “ನಾವು ಬಳ್ಳಿಯ ಗಾಢ ಹಸಿರು ಭಾಗವನ್ನು ಕೀಳುವುದಿಲ್ಲ. ಹಾಗೆ ಮಾಡುವುದೆಂದರೆ ತಾಯಿ ಮೀನನ್ನು ಹಿಡಿದಂತೆ. ಅದನ್ನೇ ಕೊಂದರೆ ಮತ್ತೆ ಮರಿ ಮೀನುಗಳು ಎಲ್ಲಿಂದ ಸಿಗುತ್ತವೆ?”

ಊರಿಗೆ ಹಿಂತಿರುಗುವಾಗ ತಲೆಗೆ ಬೆಂಕಿ ಬಿದ್ದಂತೆ ಭಾಸವಾಯಿತು. ಮಳೆಯಿಲ್ಲದೆ ತಾಳೆ ಮರಗಳು ಮತ್ತು ಕುರುಚಲು ಕಾಡುಗಳು ಒಣಗಿ ಕಂದುಬಣ್ಣಕ್ಕೆ ತಿರುಗಿದ್ದವು. ಬಿಸಿಲಿಗೆ ಮಣ್ಣು ಬಿರುಕು ಬಿಡುತ್ತಿತ್ತು. ನಾವು ಸಮೀಪಿಸುತ್ತಿದ್ದಂತೆ, ವಿಲಕ್ಷಣ ಪಕ್ಷಿಗಳ ಹಿಂಡುಗಳು ಹಾರಿಹೋಯಿತು. ಅವು ದೇಹದೊಳಗೆ ಕಾಲುಗಳನ್ನು ಬಿಗಿದುಕೊಂಡು, ರೆಕ್ಕೆಗಳನ್ನು ಮಡಚಿ ಹಾರಾಡುತ್ತಿದ್ದ ದೃಶ್ಯ ಮನಸೂರೆಗೊಂಡಿತು. ನಾವು ಹಳ್ಳಿಯ ಚೌಕವನ್ನು ತಲುಪಿದೆವು, ಅಲ್ಲಿ ಡಾ. ಅಂಬೇಡ್ಕರ್ ತಲೆ ಎತ್ತಿ ನಿಂತಿದ್ದರು, ಸಂವಿಧಾನ ಅವರ ಕೈಯಲ್ಲಿತ್ತು. "ಹಿಂಸಾಚಾರದ ನಂತರ ಪ್ರತಿಮೆಯನ್ನು ರಕ್ಷಿಸಲು ಬೇಲಿ ಹಾಕಲಾಯಿತು ಎನ್ನಿಸುತ್ತದೆ."

ರತಿಯವರ ಮನೆ ಪ್ರತಿಮೆಯಿಂದ ಕೆಲವು ನಿಮಿಷಗಳ ದೂರದಲ್ಲಿದೆ. ತನ್ನ ಲಿವಿಂಗ್ ರೂಮಿನಲ್ಲಿ ಕುಳಿತು ಮಾತನಾಡುತ್ತಾ, ಕಥೆಗಳನ್ನು ಭಾವನಾತ್ಮಕವಾಗಿ ಕಾಣುತ್ತೇನೆ ಎಂದು ಅವರು ನನಗೆ ಹೇಳಿದರು. "ವೇದಿಕೆಯಲ್ಲಿ ಮಾತನಾಡುವ ಪಾತ್ರವನ್ನು ನಿರ್ವಹಿಸಿದಾಗ, ಭಾವನೆಗಳಿಂದ ತುಂಬಿರುತ್ತದೆ. ಇತರ ಸಮಯಗಳಲ್ಲಿ ಹಾಗಿರುವುದಿಲ್ಲ. ಹತಾಶೆ ಮತ್ತು ದಣಿವಿನ ಸಾಮಾನ್ಯ ಭಾವನೆಗಳನ್ನು ಸಹ ಮನಸ್ಸಿನಲ್ಲಿ ನಿಗ್ರಹಿಸಬೇಕು ಮತ್ತು ಮುಂದೆ ಸಾಗಬೇಕು. ಆದರೆ ನಾನು ಈ ಎಲ್ಲಾ ಭಾವನೆಗಳನ್ನು ವೇದಿಕೆಯಲ್ಲಿ ವ್ಯಕ್ತಪಡಿಸಬಲ್ಲೆ. "

"ಪ್ರೇಕ್ಷಕರು ರತಿಯನ್ನು ನೋಡುವುದಿಲ್ಲ, ಅವರು ತಾನು ನಿರ್ವಹಿಸುವ ಪಾತ್ರವನ್ನು ನೋಡುವುದಿಲ್ಲ" ಎಂದು ಅವರು ಹೇಳುತ್ತಾರೆ. ದುಃಖವು ರಂಗದ ಮೇಲೆ ಹಾದುಹೋಗಲು ಒಂದು ಮಾರ್ಗವೂ ಇದೆ. "ನನಗೆ ಹಾಗೆ ಸುಮ್ಮನೆ ಅಳುವುದು ಕಷ್ಟವಲ್ಲ. ಬಹಳ ಚೆನ್ನಾಗಿ ಅಳಬಲ್ಲೆ. ಅಕ್ಕಪಕ್ಕದ ಮನೆಯವರು ಯಾರೋ ಅಳುತ್ತಿದ್ದಾರೆಂದುಕೊಂಡು ಮನೆಗೆ ಓಡಿ ಬರುವಂತೆ ಅಳಬಲ್ಲೆ” ಎಂದು ರತಿ ಹೇಳಿದರು. ನಾನು ನನಗಾಗಿ ಒಮ್ಮೆ ಅತ್ತು ತೋರಿಸಲು ಸಾಧ್ಯವೇ ಎಂದು ಕೇಳಿದೆ. “ಇಲ್ಲ, ಇಲ್ಲಿ ಸಾಧ್ಯವಿಲ್ಲ. ಇಲ್ಲಿ ಅತ್ತರೆ ಕನಿಷ್ಟ ಮೂರ್ನಾಲ್ಕು ಜನ ಸಂಬಂಧಿಕರು ಓಡಿ ಬರುತ್ತಾರೆ, ಮತ್ತೆ ಅವರಿಗೆ ಏನಾಯಿತೆಂದು ವಿವರಿಸಬೇಕಾಗುತ್ತದೆ…”

ನಾನು ಹೊರಡುವ ಸಮಯ ಬಂದಿತು. ರತಿ ಪೂರ್ಣ ಹೃದಯದಿಂದ, ನನಗಾಗಿ ಒಂದಷ್ಟು ಪಿರಾಂಡೈ ಉಪ್ಪಿನಕಾಯಿ ಪ್ಯಾಕ್ ಮಾಡಿಕೊಟ್ಟರು. ಇದನ್ನು ಎಣ್ಣೆಯಲ್ಲಿ ಹುರಿದಿರಲಾಗುತ್ತದೆ ಮತ್ತು ಅದರಲ್ಲಿ ಬೆಳ್ಳುಳ್ಳಿ ತುಂಬಿರುತ್ತದೆ. ಜೊತೆಗೆ ಇದು ಸ್ವರ್ಗದ ಪಾರಿಜಾತದ ವಾಸನೆಯನ್ನು ಹೊಂದಿರುತ್ತದೆ, ಇದರೊಂದಿಗೆ ಈ ಉಪ್ಪಿನಕಾಯಿ ನನಗೆ ನಾವು ಬಳ್ಳಿಯನ್ನು ಹುಡುಕಿಕೊಂಡು ನಡೆದ ಹಸಿರು ದಾರಿಯನ್ನು ಸಹ ಮುಂದೆ ನೆನಪಿಸಲಿದೆ…

Cleaning and cutting up the shoots for making pirandai pickle
PHOTO • Bhagirathy
Cleaning and cutting up the shoots for making pirandai pickle
PHOTO • Bhagirathy

ಪಿರಾಂಡೈ ಸೊಪ್ಪನ್ನು ಸ್ವಚ್ಛಗೊಳಿಸಿ ಉಪ್ಪಿನಕಾಯಿಗೆ ಕತ್ತರಿಸಲಾಗುತ್ತದೆ

Cooking with garlic
PHOTO • Bhagirathy
final dish: pirandai pickle
PHOTO • Bhagirathy

ಬೆಳ್ಳುಳ್ಳಿಯಲ್ಲಿ ಬೇಯಿಸಿ (ಎಡ) ಮತ್ತು ಅಂತಿಮ ತಯಾರಿಕೆ ಮುಗಿಸಲಾಗುತ್ತದೆ: ಪಿರಾಂಡೈ ಉಪ್ಪಿನಕಾಯಿ (ಬಲ); ತಯಾರಿ ವಿಧಾನ ಕೆಳಗಿದೆ

ರತಿಯವರ ತಾಯಿ ವಡಿವಮ್ಮಾಳ್ ಅವರ ಪಿರಾಂಡೈ ಉಪ್ಪಿನಕಾಯಿ ತಯಾರಿಸುವ ಪದ್ಧತಿ:

ಪಿರಾಂಡೈ ಬಳ್ಳಿಯನ್ನು ಸ್ವಚ್ಛಗೊಳಿಸಿ ಮತ್ತು ಅದನ್ನು ಕತ್ತರಿಸಿಕೊಂಡು, ಚೆನ್ನಾಗಿ ತೊಳೆದು, ಒಂದು ಬಟ್ಟಲಿನಲ್ಲಿ ಹಾಕಿ ತೊಳೆದು ನೀರನ್ನು ಹೊರಹಾಕಿ. ನೀರು ಸ್ವಲ್ಪವೂ ಇರಬಾರದು. ಒಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಪಿರಾಂಡೈ ಅಳತೆಗೆ ಸಾಕಷ್ಟು ಎಣ್ಣೆಯನ್ನು ಹಾಕಿ. ಇದು ಬಿಸಿಯಾದ ನಂತರ, ಸಾಸಿವೆ ಬೆರೆಸಿ. ಬೇಕಿದ್ದಲ್ಲಿ ಮೆಂತ್ಯ ಮತ್ತು ಬೆಳ್ಳುಳ್ಳಿ ಕೂಡಾ ಸೇರಿಸಬಹುದು. ಸೊಪ್ಪು ತಾಮ್ರದ ಬಣ್ಣಕ್ಕೆ ತಿರುಗುವವರೆಗೆ ಚೆನ್ನಾಗಿ ಬೇಯಿಸಿ. ಅದಕ್ಕೂ ಮೊದಲು ಹುಣಸೆ ಹಣ್ಣನ್ನು ನೀರಿನಲ್ಲಿ ನೆನೆಸಿ ತಿರುಳನ್ನು ಹಿಂಡಿ - ಹುಣಸೆ ಹಣ್ಣು ಬಳ್ಳಿಯಿಂದ ಹೊರಬರುವ ಕಿರಿಕಿರಿಯ ವಾಸನೆಯನ್ನು ಕಡಿಮೆ ಮಾಡುತ್ತದೆ. (ಕೆಲವೊಮ್ಮೆ, ಅದನ್ನು ತೊಳೆಯುವಾಗ ಮತ್ತು ಸ್ವಚ್ಛಗೊಳಿಸುವಾಗಲೂ ನಿಮ್ಮ ಕೈಗಳಲ್ಲಿ ತುರಿಕೆ ಉಂಟಾಗಬಹುದು.)

ಹುಣಸೆ ನೀರು, ನಂತರ ಉಪ್ಪು, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಇಂಗನ್ನು ಸೇರಿಸಿ. ಪಿರಾಂಡೈ ಚೆನ್ನಾಗಿ ಬೆಂದು ಮಿಶ್ರಣ ಕೂಡಿಕೊಳ್ಳುವವರೆಗೂ ಹಾಗೂ ಎಳ್ಳೆಣ್ಣೆ ಮೇಲ್ಭಾಗದಲ್ಲಿ ತೇಲುವವರೆಗೂ ಕಲಕುತ್ತಲೇ ಇರಿ. ಉಪ್ಪಿನಕಾಯಿಯನ್ನು ತಣ್ಣಗಾಗಲು ಬಿಡಿ, ನಂತರ ಅದನ್ನು ಬಾಟಲಿಯಲ್ಲಿ ಹಾಕಿ ಇಡಿ. ಇದು ಒಂದು ವರ್ಷ ಬಾಳಿಕೆ ಬರಬಲ್ಲದು.


ಈ ಸಂಶೋಧನಾ ಅಧ್ಯಯನಕ್ಕೆ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ತನ್ನ ಸಂಶೋಧನಾ ಧನಸಹಾಯ ಕಾರ್ಯಕ್ರಮ 2020ರ ಭಾಗವಾಗಿ ಧನಸಹಾಯ ನೀಡಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Aparna Karthikeyan

अपर्णा कार्तिकेयन एक स्वतंत्र पत्रकार, लेखक, और पारी की सीनियर फ़ेलो हैं. उनकी नॉन-फिक्शन श्रेणी की किताब 'नाइन रुपीज़ एन आवर', तमिलनाडु में लुप्त होती आजीविकाओं का दस्तावेज़ है. उन्होंने बच्चों के लिए पांच किताबें लिखी हैं. अपर्णा, चेन्नई में परिवार और अपने कुत्तों के साथ रहती हैं.

की अन्य स्टोरी अपर्णा कार्तिकेयन
Editor : P. Sainath

पी. साईनाथ, पीपल्स ऑर्काइव ऑफ़ रूरल इंडिया के संस्थापक संपादक हैं. वह दशकों से ग्रामीण भारत की समस्याओं की रिपोर्टिंग करते रहे हैं और उन्होंने ‘एवरीबडी लव्स अ गुड ड्रॉट’ तथा 'द लास्ट हीरोज़: फ़ुट सोल्ज़र्स ऑफ़ इंडियन फ़्रीडम' नामक किताबें भी लिखी हैं.

की अन्य स्टोरी पी. साईनाथ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru