"ಮೈನೇ ಕಭಿ ದೋ ಬೋರ್ಡ್ ಏಕ್ ಜೈಸಾ ನಹೀ ಬನಾಯಾ [ನಾನು ಯಾವತ್ತೂ ಒಂದು ಬೋರ್ಡನ್ನು ಇನ್ನೊಂದು ಬೋರ್ಡಿನಂತೆ ಬರೆದವನಲ್ಲ]" ಎಂದು ಅಹಮದಾಬಾದ್ ನಗರದ ಸೈನ್ ಬೋರ್ಡ್ ಪೇಂಟರ್ ಶೇಖ್ ಜಲಾಲುದ್ದೀನ್ ಕಮರುದ್ದೀನ್ ಹೇಳುತ್ತಾರೆ. ಕತ್ತರಿ ತಯಾರಕರಿಗೆ ಹೆಸರುವಾಸಿಯಾದ ಜನನಿಬಿಡ ಪ್ರದೇಶವಾದ ಗೀಕಾಂತದಲ್ಲಿನ ಎಲ್ಲಾ ಅಂಗಡಿಗೂ ಬೋರ್ಡ್‌ ತಯಾರಿಸಿ ಕೊಟ್ಟವರು ಅವರೊಬ್ಬರೇ. ಎಲ್ಲಾ ಅಂಗಡಿಗಳೂ ಕತ್ತರಿ ವ್ಯಾಪಾರವನ್ನೇ ಮಾಡುತ್ತವೆಯಾದರೂ, ತಾನು ತಯಾರಿಸಿಕೊಟ್ಟಿರುವ ಬೋರ್ಡುಗಳಲ್ಲಿ ಒಂದೊಂದೂ ತನ್ನದೇ ಆದ ವೈಶಿಷ್ಠ್ಯತೆಯನ್ನು ಹೊಂದಿವೆ ಎನ್ನುತ್ತಾರೆ.

ಈ ಹಿರಿಯ ಕಲಾಕಾರನ ಕೈಚಳಕವನ್ನು ನೀವು “ದೀವಾರ್‌, ದುಖಾನ್‌ ಔರ್‌ ಶಟರ್‌ [ಗೋಡೆ, ಅಂಗಡಿ ಮತ್ತು ಬಾಗಿಲು] ಮೇಲೆ ನೋಡಬಹುದು.” ಹಾಗೆಯೇ ಸಿನೆಮಾಗಳ ಹಿನ್ನೆಲೆಯಲ್ಲಿ ಸಹ ನೋಡಬಹುದು. ಓರ್ವ ಸೈನ್‌ ಬೋರ್ಡ್‌ ಕಲಾವಿದನಿಗೆ ಹಲವು ಭಾಷೆಯ ಅಕ್ಷರಗಳನ್ನು ಹೇಗೆ ಚಿತ್ರಿಸಬೇಕು ಮತ್ತು ಬರೆಯಬೇಕು ಎನ್ನುವ ಜ್ಞಾನವಿರಬೇಕಾಗುತ್ತದೆ. ಗುಜರಾತಿನ ಮಾನೆಕ್‌ ಚೌಕದಲ್ಲಿರುವ ಆಭರಣದ ಅಂಗಡಿಯ ಜಾಹೀರಾತು ಫಲಕವನ್ನು ಬರೆದು ಅರ್ಧ ಶತಮಾನ ಕಳೆದಿದೆ ಮತ್ತು ಅದು ಇಂದಿಗೂ ಅಲ್ಲಿ ರಾರಾಜಿಸುತ್ತಿದೆ. ಆ ಫಲಕದಲ್ಲಿ ಗುಜರಾತಿ, ಉರ್ದು, ಇಂಗ್ಲಿಷ್‌ ಮತ್ತು ಹಿಂದಿ ಭಾಷೆಗಳನ್ನು ಬಳಸಲಾಗಿದೆ.

ಚಿತ್ರಕಲೆ ತನಗೆ ಸ್ವಾಭಾವಿಕವಾಗಿ ಸಿದ್ಧಿಸಿತು ಎಂದು ಜಲಾಲುದ್ದೀನ್ ಹೇಳುತ್ತಾರೆ. 71 ವರ್ಷ ಪ್ರಾಯದ ಅವರು ಅಹಮದಾಬಾದ್ ನಗರದ ಅತ್ಯಂತ ಹಿರಿಯ ಸೈನ್ ಬೋರ್ಡ್ ಪೇಂಟರುಗಳಲ್ಲಿ ಒಬ್ಬರು, ಅವರನ್ನು ಸ್ಥಳೀಯವಾಗಿ 'ಜೆಕೆ ಪೇಂಟರ್' ಎಂದು ಗುರುತಿಸಲಾಗುತ್ತದೆ. ಪ್ರಸ್ತುತ 50 ವರ್ಷಗಳ ಹಿಂದೆ ಕೆಲಸ ಆರಂಭಿಸಿದ ದಿನಗಳಲ್ಲಿ ಸಿಗುತ್ತಿದ್ದಷ್ಟು ಕೆಲಸ ಸಿಗುತ್ತಿಲ್ಲ ಎಂದು ಅವರು ಹೇಳುತ್ತಾರೆ.

ಈ ಹಿರಿಯ ಚಿತ್ರ ಕಲಾವಿದ 7ನೇ ತರಗತಿಯ ಓದಿದ್ದು, ಗುಜರಾತಿ, ಇಂಗ್ಲಿಷ್, ಹಿಂದಿ, ಉರ್ದು ಮತ್ತು ಅರೇಬಿಕ್ ಭಾಷೆಗಳಲ್ಲಿ ಸೈನ್‌ ಬೋರ್ಡ್‌ ಬರೆಯುತ್ತಾರೆ. ಶಾಲೆಯನ್ನು ತೊರೆದ ನಂತರ ಅವರು ದಲ್ಘರ್ವಾಡ್ ಮಾರುಕಟ್ಟೆಯಲ್ಲಿರುವ ರಹೀಮ್ ಅವರ ಅಂಗಡಿಯಲ್ಲಿ ಚಿತ್ರಕಲೆಯನ್ನು ಕಲಿಯುವ ಮೊದಲು, ಮೊದಲು ಹಗ್ಗ ತಯಾರಕ, ಬುಕ್ ಬೈಂಡರ್ ಮತ್ತು ಗ್ಯಾರೇಜ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿದ್ದರು.

ಎಪ್ಪತ್ತು ವರ್ಷ ದಾಟಿದ್ದರೂ ಅವರು ಈಗಲೂ 20 ಕೇಜಿ ಭಾರದ ಘೋಡಾ (ಏಣಿ)ಯನ್ನು ಕೆಲಸದ ಸ್ಥಳಗಳಿಗೆ ಹೊತ್ತೊಯ್ಯಬಲ್ಲರು. ಆದರೆ ಬೈಪಾಸ್ ಶಸ್ತ್ರಚಿಕಿತ್ಸೆಯ ನಂತರ ಅವರಿಗೆ ವೈದ್ಯರು ಹೆಚ್ಚಿನ ತೂಕವನ್ನು ಹೊರದಂತೆ ಸಲಹೆ ನೀಡಿದ್ದಾರೆ. ಹೀಗಾಗಿ ಅವರು ಹೊರಗಿನ ಸ್ಥಳಗಳಲ್ಲಿ ಕೆಲಸ ಮಾಡುವುದನ್ನು ಕಡಿಮೆ ಮಾಡಿ, ಅಂಗಡಿಯಲ್ಲೇ ಬೋರ್ಡುಗಳನ್ನು ಬರೆಯುತ್ತಾರೆ. “ಬಹಳ ಹೊತ್ತು ಏಣಿಯ ಮೇಲೆ ನಿಂತರೆ ಮೊಣಕಾಲು ನೋವು ಸಹ ಬರುತ್ತದೆ. ಕೈಕಾಲಿನಲ್ಲಿ ಶಕ್ತಿ ಇರುವ ತನಕ ಈ ಕೆಲಸ ಮಾಡಬೇಕೆಂದು ಎಂದುಕೊಂಡಿದ್ದೇನೆ” ಎಂದು ಅವರು ಹೇಳುತ್ತಾರೆ.

PHOTO • Atharva Vankundre
PHOTO • Atharva Vankundre

ಎಡ: ತಾನು ಚಿತ್ರಿಸಿದ ಸೈನ್‌ ಬೋರ್ಡುಗಳ ಮುಂದೆ ನಿಂತಿರುವ ಜಲಾಲುದ್ದೀನ್. ಬಲ: ಮನೇಕ್ ಚೌಕದಲ್ಲಿರುವ ಬೋರ್ಡಿನಲ್ಲಿ ಅಂಗಡಿಯ ಹೆಸರನ್ನು ಗುಜರಾತಿ, ಹಿಂದಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರದರ್ಶಿಸಲಾಗುತ್ತದೆ

PHOTO • Atharva Vankundre
PHOTO • Atharva Vankundre

ಗೀಕಾಂತದಲ್ಲಿ ಕತ್ತರಿ ತಯಾರಕರಿಗಾಗಿ (ಎಡ) ಮತ್ತು ಸ್ಟೇಷನರಿ ಅಂಗಡಿಗಾಗಿ (ಬಲ) ಜಲಾಲುದ್ದೀನ್ ಚಿತ್ರಿಸಿ ಕೊಟ್ಟ ಸೈನ್‌ ಬೋರ್ಡುಗಳು

ಅವರು ಇತ್ತೀಚೆಗೆ ಅಹಮದಾಬಾದ್ ನಗರದ ತೀನ್ ದರ್ವಾಜಾ ಪ್ರದೇಶದಲ್ಲಿ ಪಾತ್ರೆಗಳ ಅಂಗಡಿಯನ್ನು ಹೊಂದಿರುವ ಮುಂತಾಜಿರ್ ಪಿಸುವಾಲಾ ಎಂಬ ಗ್ರಾಹಕರಿಗಾಗಿ ಸೈನ್‌ ಬೋರ್ಡ್‌ ಒಂದನ್ನು ಬರೆದು ಕೊಟ್ಟಿದ್ದಾರೆ. ಈ ಕೆಲಸಕ್ಕೆ ಅವರಿಗೆ 3,200 ರೂ.ಗಳನ್ನು ನೀಡಲಾಯಿತು ಮತ್ತು ಪಿಸುವಾಲಾ ಈ ಬೋರ್ಡ್‌ ಬರೆಯುವ ಪ್ರಕ್ರಿಯೆಯಲ್ಲಿ ಇಬ್ಬರೂ ತೊಡಗಿಕೊಂಡಿದ್ದೆವು. ಬಣ್ಣ ಇತ್ಯಾದಿಯನ್ನು ಇಬ್ಬರೂ ಸೇರಿ ನಿರ್ಧರಿಸಿದೆವು" ಎಂದು ಅವರು ಖುಷಿಯಿಂದ ಹೇಳುತ್ತಾರೆ.

ಜಲಾಲುದ್ದೀನ್ ಅವರ ಅಂಗಡಿಯನ್ನು ಪೀರ್ ಕುತುಬ್ ಮಸೀದಿಯ ಕಾಂಪೌಂಡಿನಲ್ಲಿರುವ ತನ್ನ ಮನೆಯ ಮುಂದೆ ಸ್ಥಾಪಿಸಿದ್ದಾರೆ. ಬಿಸಿಲಿನಿಂದ ಕೂಡಿದ ಆರ್ದ್ರ ಮಧ್ಯಾಹ್ನದ ಹೊತ್ತಿಗೆ, ಅವರು ಊಟ ಮತ್ತು ಸಣ್ಣ ನಿದ್ರೆಯನ್ನು ಮುಗಿಸಿ ಅಂಗಡಿಗೆ ಮರಳಿದ್ದರು. ಬಣ್ಣದ ಕಲೆಯಾಗಿದ್ದ ಅಂಗಿಯೊಂದನ್ನು ತೊಟ್ಟಿದ್ದ ಅವರು ಬೋರ್ಡ್‌ ಒಂದರ ಕೆಲಸವನ್ನು ಆರಂಭಿಸಿದರು. ಅದೊಂದು ಲಾಡ್ಜಿಂಗ್‌ ಹೋಟೆಲ್ಲಿನ ರೂಮ್‌ ಬಾಡಿಗೆಗಳ ವಿವರನ್ನು ತಿಳಿಸುವ ಫಲಕವಾಗಿತ್ತು. ಅವರು ತಮ್ಮ ಕೆಲಸದಲ್ಲಿ ಒಂದು ಹಗ್ಗ ಮತ್ತು ಗಾಲಿ ಇರುವ ತಿರುಗು ಕುರ್ಚಿ ಬಳಸುತ್ತಾರೆ. ಕೈಗಳಲ್ಲಿದ ಈ ಕುರ್ಚಿ ಅವರಿಗೆ ಬೇಕಾದ ಕಡೆ ಸುಲಭವಾಗಿ ತಿರುಗಲು ಅನುವು ಮಾಡಿಕೊಡುತ್ತದೆ.

ಮೊದಲಿಗೆ ಅವರು ಹ್ಯಾಂಡ್‌ ಮೇಡ್‌ ಪೇಂಟಿಂಗ್‌ ಸ್ಟ್ಯಾಂಡನ್ನು ಸರಿಯಾದ ಎತ್ತರಕ್ಕೆ ಹೊಂದಿಸಿಕೊಳ್ಳುತ್ತಾರೆ. ನಂತರ ಅದರ ಮೇಲೆ ಖಾಲಿ ಬೋರ್ಡ್‌ ಇರಿಸುತ್ತಾರೆ. ಹೋಟೆಲ್ಲಿನಲ್ಲಿದ್ದ 25 ವರ್ಷಗಳಷ್ಟು ಹಳೆಯ ಬೋರ್ಡ್‌ ಒಂದನ್ನು ಅವರಿಗೆ ಮಾದರಿಗಾಗಿ ನೀಡಲಾಗಿದ್ದು ಹೋಟೆಲ್‌ ಮಾಲಿಕರು ಹೊಸ ಬೋರ್ಡನ್ನು ಹಳೆಯ ಬೋರ್ಡಿನ ಮಾದರಿಯಲ್ಲೇ ತಯಾರಿಸಲು ಹೇಳಿದ್ದಾರೆ.

“ಮೊದಲಿಗೆ ಮೂರು ಬಾರಿ ಬಣ್ಣ ಬಳಯುತ್ತೇನೆ” ಎಂದ ಅವರು ಬೋರ್ಡಿಗೆ ಬಿಳಿ ಬಣ್ಣವನ್ನು ಹಚ್ಚಿದ್ದರು. ಅವರ ಪ್ರಕಾರ ಇದರಿಂದ “ಬಿಲ್ಕುಲ್‌ ಫಿನಿಷಿಂಗ್‌ ವಾಲಾ ಕಲರ್‌ ಆಯೇಗಾ [ಕೆಲಸ ಮುಗಿದಾಗ ಬೋರ್ಡ್‌ ಪರಿಪೂರ್ಣವಾಗಿ ಕಾಣುತ್ತದೆ].” ಒಂದು ಬಾರಿ ಪೇಂಟ್‌ ಮಾಡಿದರೆ ಅದು ಒಣಗಲು ಒಂದು ದಿನ ಬೇಕಾಗುತ್ತದೆ.

ಬೋರ್ಡ್‌ ಬರೆಯುವ ವಿವಿಧ ವರ್ಣಚಿತ್ರಕಾರರ ಶೈಲಿಗಳು ಗಮನಾರ್ಹವಾಗಿವೆ. "ಅವರ ಶೈಲಿಯು ನಮ್ಮ ಶಿಲ್ಪಗಳು, ದೇವಾಲಯಗಳು ಮತ್ತು ಮುದ್ರಣಗಳಲ್ಲಿ ಕಂಡುಬರುವ ಅಲಂಕಾರಿಕ ಮತ್ತು ಹಲವು ಪದರಗಳ ಭಾರತೀಯ ದೃಶ್ಯ ಭಾಷೆಯನ್ನು ಪ್ರತಿಧ್ವನಿಸುತ್ತದೆ" ಎಂದು ಅಹಮದಾಬಾದ್ ನಗರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ (ಎನ್ಐಡಿ) ನ ಗ್ರಾಫಿಕ್ ವಿನ್ಯಾಸದ ಪ್ರಾಧ್ಯಾಪಕ ತರುಣ್ ದೀಪ್ ಗಿರ್ಧರ್ ಹೇಳುತ್ತಾರೆ.

PHOTO • Atharva Vankundre
PHOTO • Atharva Vankundre

ಜಲಾಲುದ್ದೀನ್ 30 ವರ್ಷದ ಅಳಿಲಿನ ಕೂದಲಿನ ಬ್ರಶ್ (ಬಲ) ಬಳಸಿಕೊಂಡು ಸೈನ್ ಬೋರ್ಡ್ ಮೇಲೆ (ಎಡಕ್ಕೆ) ಬಿಳಿ ಬಣ್ಣವನ್ನು ಹಚ್ಚುವ ಮೂಲಕ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ

PHOTO • Atharva Vankundre
PHOTO • Atharva Vankundre

ಅನುಭವಿ ಚಿತ್ರಕಾರ ಸರಳ ರೇಖೆಗಳನ್ನು (ಎಡ) ಖಚಿತಪಡಿಸಿಕೊಳ್ಳಲು ಮರದ ರೂಲರ್ ಬಳಸುತ್ತಾರೆ ಮತ್ತು ನಂತರ ನೇರವಾಗಿ ಬಣ್ಣದಿಂದ (ಬಲ) ಅಕ್ಷರಗಳನ್ನು ಚಿತ್ರಿಸಲು ಪ್ರಾರಂಭಿಸುತ್ತಾರೆ

ಜಲಾಲುದ್ದೀನ್‌ ಮೊದಲು ಒಮ್ಮೆ ಹಳೆಯ ಬೋರ್ಡನ್ನು ನೋಡುತ್ತಾರೆ. “ಅಕ್ಷರಗಳು ಯಾವ ಗಾತ್ರದಲ್ಲಿರುಬೇಕು ಎನ್ನುವುದನ್ನು ನೋಡುತ್ತಿದ್ದೇನೆ” ಎಂದು ಅವರು ಹೇಳಿದರು. “ಕುಚ್‌ ಡ್ರಾಯಿಂಗ್‌ ನಹೀ ಕರ್ತಾ ಹೂಂ ಲೈನ್‌ ಬನಾಕೆ ಲಿಖ್ನಾ ಚಾಲೂ, ಕಲಮ್‌ ಸೇ [ನಾನು ಯಾವುದನ್ನೂ ಬಿಡಿಸುವುದಿಲ್ಲ. ಸರಳವಾದ ಗೆರೆಗಳನ್ನು ಎಳೆದು ಬ್ರಶ್‌ ಹಿಡಿದು ಬರೆಯತೊಡಗುತ್ತೇನೆ].” ಪರಿಣಿತ ಪೇಂಟರ್‌ ಮೊದಲಿಗೆ ಪೆನ್ಸಿಲ್‌ ಬಳಸಿ ಅಕ್ಷರಗಳನ್ನು ಬರೆದುಕೊಳ್ಳುವುದಿಲ್ಲ. ಅಕ್ಷರಗಳು ಒದೇ ಗೆರೆಯಲ್ಲಿ ಬರುವಂತೆ ರೂಲರ್‌ ಬಳಸುತ್ತಾರೆ.

ಪೇಂಟ್‌ ಬಾಕ್ಸಿನಿಂದ ಬ್ರಶ್‌ ಹೊರಗೆ ತೆಗೆದು “ನಾನು ಸ್ವತಃ ಪೇಂಟ್‌ ಬಾಕ್ಸ್‌ ತಯಾರಿಸಿಕೊಂಡಿದ್ದೇನೆ” ಎಂದು ಹೆಮ್ಮೆಯಿಂದ ಹೇಳುತ್ತಾರೆ. ಬಡಗಿಯಾಗಿಯೂ ಕೆಲಸ ಮಾಡಿದ್ದ ಜಲಾಲುದ್ದೀನ್ ಮತ್ತು 1996ರಲ್ಲಿ ಈ ಪೆಟ್ಟಿಗೆಯನ್ನು ತಯಾರಿಸಿದರು. ಅವರಿಗೆ ಈಗ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಪ್ಲಾಸ್ಟಿಕ್‌ ಬ್ರಶ್ಶುಗಳು ಇಷ್ಟವಿಲ್ಲ. ಅವರು ತಾನೇ ಕೈಯಾರೆ ತಯಾರಿಸಿದ ಬಾಕ್ಸಿನಲ್ಲಿರುವ 30 ವರ್ಷಗಳ ಹಿಂದಿನ ಬ್ರಶ್ಶುಗಳನ್ನೇ ಬಳಸುತ್ತಿದ್ದಾರೆ.

ಎರಡು ಬ್ರಶ್ಶುಗಳನ್ನು ಆಯ್ಕೆ ಮಾಡಿ, ಅವುಗಳನ್ನು ಟರ್ಪೆಂಟೈನ್ ಬಳಸಿ ಸ್ವಚ್ಛಗೊಳಿಸುತ್ತಾರೆ. ನಂತರ ಕೆಂಪು ಬಣ್ಣದ ಕ್ಯಾನ್ ತೆರೆಯುತ್ತಾರೆ. ಈ ಬಾಟಲಿಗೆ 19 ವರ್ಷ ವಯಸ್ಸಾಗಿದೆ. ತನ್ನ ಸ್ಕೂಟರ್ ಕೀ ಬಳಸಿಕೊಂಡು, ಅವನು ಟರ್ಪೆಂಟೈನ್ ಅನ್ನು ಸರಿಯಾದ ಅಳತೆಗೆ ಬೆರೆಸುತ್ತಾರೆ. ನಂತರ ಬ್ರಶ್ಶನ್ನು ಚಪ್ಪಟೆಗೊಳಿಸಿ ಅದರಲ್ಲಿ ಹೊರಗೆ ಬಂದಿರುವ ಕೂದಲುಗಳನ್ನು ಕಿತ್ತು ತೆಗೆಯುತ್ತಾರೆ.

ಈ ವಯಸ್ಸಿನಲ್ಲೂ ಕೈ ನಡುಗದಿರುವುದು ನನ್ನ ಭಾಗ್ಯ ಎನ್ನುತ್ತಾರೆ ಜಲಾಲುದ್ದೀನ್.‌ ಕೈಗಳ ಸ್ಥಿರತೆಯೆನ್ನುವುದು ಅವರ ಕೆಲಸಕ್ಕೆ ಬಹಳ ಮುಖ್ಯ. ಅವರಿಗೆ ಮೊದಲ ಅಕ್ಷರವನ್ನು ಬರೆಯಲು ಐದು ನಿಮಿಷ ಬೇಕಾಯಿತು ಆದರೆ ಅದು ಸರಿಯಾದ ಅಳತೆಯಲ್ಲಿರಲಿಲ್ಲ. ಪೇಂಟ್‌ ಹಸಿಯಿದ್ದ ಕಾರಣ ಅವರು ಅದನ್ನು ಅಳಿಸಿ ಅಕ್ಷರವನ್ನು ಸರಿಯಾದ ಗಾತ್ರಕ್ಕೆ ಹೊಂದಿಸಿದರು. “ಹಮ್ಕೋ ಜರಾಸಾ ಭೀ ಬಾಹರ್‌ ನಿಕ್ಲೋ ತೋ ನಹಿ ಚಲೆಗಾ [ಪೇಂಟ್‌ ಚೂರು ಆಚೀಚೆ ಆದರೂ ನನಗೆ ಹಿಡಿಸುವುದಿಲ್ಲ]” ಎಂದು ಅವರು ಹೇಳುತ್ತಾರೆ.

ತನ್ನ ಕೆಲಸದ ಅಚ್ಚುಕಟ್ಟುತನ ಮತ್ತು ನಿಖರತೆ ಕಾರಣಕ್ಕಾಗಿ ಗ್ರಾಹಕರು ತಮ್ಮ ಬಳಿಗೆ ಮರಳಿ ಬರುತ್ತಾರೆ ಎಂದು ಅವರು ಹೇಳುತ್ತಾರೆ. ಅವರ ಪಾಂಡಿತ್ಯ ವಜ್ರದ ಆಕಾರದ ಅಕ್ಷರಗಳನ್ನು ರಚಿಸುವಲ್ಲಿದೆ, ಇದು 3D ಮಾದರಿಯ ಅಕ್ಷರಗಳನ್ನು ಒಳಗೊಂಡಿರುತ್ತದೆ, ಇದು ಹೊಳೆಯುವ, ವಜ್ರದಂತಹ ಎಫೆಕ್ಟ್ ನೀಡುತ್ತದೆ, ಇದು ಅದರ ಹೊಳೆಯುವ, ವಜ್ರದಂತಹ ಪರಿಣಾಮವನ್ನು ನೀಡುತ್ತದೆ. ಈ ಕೆಲಸ ಸಾಕಷ್ಟು ಸಂಕೀರ್ಣ, ಮತ್ತು ಇದಕ್ಕಾಗಿ ಬೆಳಕು, ನೆರಳು ಮತ್ತು ಮಿಡ್‌ ಟೋನ್ ಸರಿಯಾಗಿ ಬರಬೇಕು ಎಂದು ಜಲಾಲ್ ವಿವರಿಸುತ್ತಾರೆ.

ಈ ಸೈನ್ ಬೋರ್ಡ್ ಮುಗಿಸಲು ಅವರಿಗೆ ಇನ್ನೊಂದು ದಿನ ಬೇಕಾಗುತ್ತದೆ, ಮತ್ತು ಎರಡು ದಿನಗಳ ಕೆಲಸಕ್ಕೆ, ಅವರು ಕೆಲಸಕ್ಕೆ 800-1,000 ರೂಪಾಯಿಗಳ ಶುಲ್ಕವನ್ನು ವಿಧಿಸುತ್ತಾರೆ. ಜಲಾಲುದ್ದೀನ್ ಪ್ರತಿ ಚದರ ಅಡಿಗೆ 120-150/- ವರೆಗೆ ಶುಲ್ಕ ವಿಧಿಸುತ್ತಾರೆ, ಇದು ಪ್ರಮಾಣಿತ ದರದೆ. ಆದರೆ ಅವರು ಮಾಸಿಕ ವ್ಯವಹಾರದ ಅಂದಾಜನ್ನು ನೀಡುವುದಿಲ್ಲ: "ಹಿಸಾಬ್ ಲಿಖೋಗೆ ತೋ ಘಟಾ ಹಿ ಹೋಗಾ, ಇಸ್ಲಿಯೇ ಬೇಹಿಸಸಾಬ್ ರೆಹ್ತಾ ಹು [ಲೆಕ್ಕ ಬರೆಯಲು ಹೋದರೆ ಬರೀ ನಷ್ಟವೇ ಕಾಣುತ್ತದೆ. ಹೀಗಾಗಿ ನಾನು ಬರೆಯುವುದಿಲ್ಲ].”

PHOTO • Atharva Vankundre
PHOTO • Atharva Vankundre

ಜಲಾಲುದ್ದೀನ್‌ ಅವರ ಪಾಂಡಿತ್ಯ ವಜ್ರದ ಆಕಾರದ ಅಕ್ಷರಗಳನ್ನು ರಚಿಸುವಲ್ಲಿದೆ, ಇದು 3D ಮಾದರಿಯ ಅಕ್ಷರಗಳನ್ನು ಒಳಗೊಂಡಿರುತ್ತದೆ, ಇದು ಹೊಳೆಯುವ ವಜ್ರದಂತಹ ಎಫೆಕ್ಟ್ ನೀಡುತ್ತದೆ.  ಬೋರ್ಡ್‌ ಬರೆಯುವ ವಿವಿಧ ವರ್ಣಚಿತ್ರಕಾರರ ಶೈಲಿಗಳು ಗಮನಾರ್ಹವಾಗಿವೆ. "ಅವರ ಶೈಲಿಯು ನಮ್ಮ ಶಿಲ್ಪಗಳು, ದೇವಾಲಯಗಳು ಮತ್ತು ಮುದ್ರಣಗಳಲ್ಲಿ ಕಂಡುಬರುವ ಅಲಂಕಾರಿಕ ಮತ್ತು ಹಲವು ಪದರಗಳ ಭಾರತೀಯ ದೃಶ್ಯ ಭಾಷೆಯನ್ನು ಪ್ರತಿಧ್ವನಿಸುತ್ತದೆ" ಎಂದು ಗ್ರಾಫಿಕ್ ವಿನ್ಯಾಸದ ಪ್ರಾಧ್ಯಾಪಕರಾದ ತರುಣ್ ದೀಪ್ ಗಿರ್ಧರ್ ಹೇಳುತ್ತಾರೆ

PHOTO • Atharva Vankundre
PHOTO • Atharva Vankundre

ಎಡ: ಅಹಮದಾಬಾದ್ ನಗರ ಮಾನೆಕ್ ಚೌಕ್ದಲ್ಲಿರುವ ಡಿಜಿಟಲ್ ಪ್ರಿಂಟಿಂಗ್ ಅಂಗಡಿಗೆಂದು ಕೈಯಿಂದ ಬರೆದ ಸೈನ್ ಬೋರ್ಡ್. ಬಲ: 'ಕೈಯಿಂದ ತಯಾರಿಸಿದ ಸೈನ್‌ ಬೋರ್ಡುಗಳು ಜೀವಿತಾವಧಿಯ ಬಾಳಿಕೆ ಬರುತ್ತವೆ, ಡಿಜಿಟಲ್ ಬೋರ್ಡುಗಳು ಬಾಳಿಕೆ ಬರುವುದಿಲ್ಲ' ಎಂದು ಡಿಜಿಟಲ್ ಪ್ರಿಂಟಿಂಗ್ ಅಂಗಡಿಯ ಮಾಲೀಕ ಗೋಪಾಲ್ ಭಾಯ್ ಠಕ್ಕರ್ ಹೇಳುತ್ತಾರೆ

ಜಲಾಲುದ್ದೀನ್ ಅವರಿಗೆ ಮೂವರು ಮಕ್ಕಳಿದ್ದಾರೆ, ಇಬ್ಬರು ಗಂಡು ಮತ್ತು ಒಂದು ಹೆಣ್ಣು. ಅವರ ಹಿರಿಯ ಮಗ ಮೊದಲಿಗೆ ಬೋರ್ಡ್‌ ಬರೆಯುವ ಕೆಲಸ ಮಾಡುತ್ತಿದ್ದರು, ಆದರೆ ಸ್ವಲ್ಪ ಸಮಯದ ನಂತರ ಈ ವೃತ್ತಿಯನ್ನು ತೊರೆದ ಅವರು ಈಗ ಟೈಲರಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಜಲಾಲುದ್ದೀನ್ ಅವರ ಮಕ್ಕಳಂತೆ, ಅನೇಕ ಯುವಕರು ವೃತ್ತಿಯನ್ನು ಈ ತೊರೆಯುತ್ತಿದ್ದಾರೆ. ಇಂದು, ಕೈಯಿಂದ ಸೈನ್‌ ಬೋರ್ಡ್‌ ಬರೆಯುವ ಕಲೆ ಸಾಯುತ್ತಿದೆ. 35 ವರ್ಷಗಳ ಹಿಂದೆ ಸೈನ್ ಬೋರ್ಡುಗಳನ್ನು ಬರೆಯಲು ಪ್ರಾರಂಭಿಸಿದ ಆಶಿಕ್ ಹುಸೇನ್ ಹೇಳುತ್ತಾರೆ, "ಕಂಪ್ಯೂಟರ್‌ ನೇ ಹಾತ್‌ ಕಾಟ್‌ ದಿಯೇ ಪೇಂಟರ್‌ ಕೇ [ಕಂಪ್ಯೂಟರುಗಳು ಪೇಂಟ್‌ ಬಳಸಿ ಬರೆಯುವವರ ಕೆಲಸವನ್ನು ಕಿತ್ತುಕೊಂಡವು]. ಎರಡನೇ ತಲೆಮಾರಿನ ಪೇಂಟರ್ ಧೀರೂಭಾಯಿ ಅವರ ಅಂದಾಜಿನ ಪ್ರಕಾರ ಅಹಮದಾಬಾದ್‌ ನಗರದಲ್ಲಿ ಕೇವಲ 50 ಸೈನ್ ಬೋರ್ಡ್ ಬರಹಗಾರರು ಮಾತ್ರವೇ ಉಳಿದಿದ್ದಾರೆ.

ಡಿಜಿಟಲ್ ಪ್ರಿಂಟ್ ಫ್ಲೆಕ್ಸ್ ಈಗ ವ್ಯಾಪಕವಾಗಿ ಲಭ್ಯವಿದೆ. ಈಗ ಯಾರೂ ಕೈಯಿಂದ ಬರೆಯಲಾದ ಬೋರ್ಡುಗಳನ್ನು ಮಾಡಿಸಲು ಬಯಸುವುದಿಲ್ಲ. ಇದೇ ಕಾರಣಕ್ಕಾಗಿ ಪೇಂಟರ್ ಆಶಿಕ್ ಅವರೀಗ ತಮ್ಮ ಆದಾಯಕ್ಕೆ ಪೂರಕವಾಗಿ, ಆಟೋರಿಕ್ಷಾವನ್ನು ಸಹ ಓಡಿಸುತ್ತಾರೆ.

ತಮಾಷೆಯೆಂದರೆ ಸುಲಭವಾಗಿ ತಮಗೆ ಬೇಕಾದಂತೆ ಬೋರ್ಡ್‌ ಮಾಡಿಕೊಳ್ಳಬಹುದಾದ ಡಿಜಿಟಲ್‌ ಪ್ರಿಂಟಿಂಗ್‌ ಶಾಪ್‌ ಹೊಂದಿರುವ ಗೋಪಾಲಭಾಯ್ ಠಕ್ಕರ್ ಅವರಂತಹವರು ಈ ಕೈಯಿಂದ ಬರೆಯಲಾಗುವ ಸೈನ್‌ ಬೋರ್ಡುಗಳ ಮಹತ್ವವನ್ನು ಅರಿತಿದ್ದಾರೆ. ಕೈಯಿಂದ ಬರೆದ ಸೈನ್‌ ಬೋರ್ಡುಗಳಿಗೆ ಹೆಚ್ಚು ಹಣ ಬೇಕಾಗುತ್ತದೆಯಾದರೂ ಅವರು ಇಂತಹ ಬೋರ್ಡುಗಳನ್ನೇ ಬಯಸುತ್ತಾರೆ. “ಯೇ ಲೈಫ್‌ ಟೈಮ್‌ ಚಲ್ತಾ ಹೈ, ವೋಹ್‌ ನಹಿ ಚಲೇಗಾ [ಕೈಯಿಂದ ಬರೆಯಿಸಿದ ಸೈನ್‌ ಬೋರ್ಡುಗಳು ದೀರ್ಘಕಾಲ ಬಾಳಿಕೆ ಬರುತ್ತವೆ, ಡಿಜಿಟಲ್‌ ಬೋರ್ಡುಗಳು ಅಷ್ಟು ಬಾಳಿಕೆ ಬರುವುದಿಲ್ಲ].”

PHOTO • Atharva Vankundre
PHOTO • Atharva Vankundre

ಎಡ: ಆಶಿಕ್ ಹುಸೇನ್ ಈಗ ತನ್ನ ಆದಾಯಕ್ಕೆ ಪೂರಕವಾಗಿ ಆಟೋರಿಕ್ಷಾ ಓಡಿಸುತ್ತಾರೆ. ಬಲ: ಅದಲಾಜ್ ಪ್ರದೇಶದ ಹಿರಿಯ ಸೈನ್ ಬೋರ್ಡ್ ಬರಹಗಾರ ಅರವಿಂದ್ ಭಾಯ್ ಪರ್ಮಾರ್ ಅವರು ಪ್ಲೆಕ್ಸಿ ಕಟ್ಟರ್ ಯಂತ್ರವನ್ನು ಸೈನ್‌ ಬೋರ್ಡ್‌ ಪ್ರಿಂಟಿಂಗ್‌ ವ್ಯವಹಾರ ಮಾಡುತ್ತಿದ್ದಾರೆ

PHOTO • Atharva Vankundre
PHOTO • Atharva Vankundre

ಎಡಕ್ಕೆ: ತಮ್ಮ ಡಿಜಿಟಲ್ ಫ್ಲೆಕ್ಸ್ ಮತ್ತು ಸ್ಟಿಕ್ಕರ್ ಪ್ರಿಂಟಿಂಗ್ ಅಂಗಡಿಯಲ್ಲಿ  75 ವರ್ಷದ ಹುಸೇನ್ ಭಾಯ್ ಹಡಾ ತಮ್ಮ ಮಗ ಮತ್ತು ಮೊಮ್ಮಗನೊಂದಿಗೆ. ಬಲ: ವಾಲಿ ಮೊಹಮ್ಮದ್ ಮಿರ್ ಖುರೇಷಿ ಡಿಜಿಟಲ್ ಸೈನ್‌ ಬೋರ್ಡ್ ಕೆಲಸ ಮಾಡುತ್ತಾರೆ ಮತ್ತು ಅಪರೂಪಕ್ಕೊಮ್ಮೆ ಅವರಿಗೆ ಕೈಯಿಂದ ಸೈನ್‌ ಬೋರ್ಡ್‌ ಬಿಡಿಸುವ ಕೆಲಸ ದೊರೆಯುತ್ತದೆ

ಅನೇಕ ಕಲಾವಿದರು ಈಗ ಹೊಸ ತಂತ್ರಜ್ಞಾನಕ್ಕೂ ಹೊಂದಿಕೊಂಡಿದ್ದಾರೆ. ಅರವಿಂದ್ ಭಾಯ್ ಪರ್ಮಾರ್ ಅವರು ಗಾಂಧಿನಗರದಿಂದ 10 ಕಿ.ಮೀ ದೂರದಲ್ಲಿರುವ ಅದಲಾಜ್ ಎನ್ನುವಲ್ಲಿ 30 ವರ್ಷಗಳಿಂದ ಸೈನ್‌ ಬೋರ್ಡ್‌ ಬರೆಯುವ ಕೆಲಸ ಮಾಡುತ್ತಿದ್ದಾರೆ. ಏಳು ವರ್ಷಗಳ ಹಿಂದೆ ಅವರು ಸ್ಟಿಕ್ಕರ್ ಪ್ರಿಂಟ್‌ ಮಾಡುವ ಪ್ಲೆಕ್ಸಿ ಕಟ್ಟರ್ ಯಂತ್ರವನ್ನು ಖರೀದಿಸಿದರು. ಇದು ದೊಡ್ಡ ಹೂಡಿಕೆಯಾಗಿತ್ತು, ಯಂತ್ರಕ್ಕೆ 25,000 ರೂಪಾಯಿಗಳು ಮತ್ತು ಕಂಪ್ಯೂಟರಿಗೆ 20,000 ರೂಪಾಯಿಗಳು ಖರ್ಚಾಗಿತ್ತು. ಅವರು ತಮ್ಮ ಸ್ನೇಹಿತರಿಂದ ಕಂಪ್ಯೂಟರ್ ಬಳಸುವುದನ್ನು ಕಲಿತರು.

ಯಂತ್ರವು ರೇಡಿಯಂ ಕಾಗದದ ಮೇಲೆ ಸ್ಟಿಕ್ಕರ್ ಮತ್ತು ವರ್ಣಮಾಲೆಗಳನ್ನು ಮುದ್ರಿಸಿ ಕತ್ತರಿಸುತ್ತದೆ, ನಂತರ ಅದನ್ನು ಲೋಹದ ಮೇಲೆ ಅಂಟಿಸಲಾಗುತ್ತದೆ. ಆದರೆ ಕಂಪ್ಯೂಟರ್ ಅಥವಾ ಯಂತ್ರವು ಹಾಳಾಗುತ್ತಲೇ ಇರುವುದರಿಂದ ಮತ್ತು ಪದೇ ಪದೇ ರಿಪೇರಿಗೆ ಕೊಡಬೇಕಾಗುವ ಕಾರಣ ಹೆಚ್ಚು ಹೆಚ್ಚು ಕೈಯಿಂದ ಬರೆಯುವುದಕ್ಕೇ ಪ್ರಾಶಸ್ತ್ಯ ಕೊಡುವುದಾಗಿ ಅರವಿಂದ್‌ ಭಾಯ್ ಹೇಳುತ್ತಾರೆ.

41 ವರ್ಷದ ಸೈನ್ ಬೋರ್ಡ್ ಪೇಂಟರ್ ವಾಲಿ ಮೊಹಮ್ಮದ್ ಮಿರ್ ಖುರೇಷಿ ಕೂಡ ಈಗ ಡಿಜಿಟಲ್ ಸೈನ್‌ ಬೋರ್ಡ್ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಅಪರೂಪಕ್ಕೊಮ್ಮೆ ಸೈನ್ ಬೋರ್ಡ್ ಬರೆಯುವ ಕೆಲಸ ಬರುತ್ತದೆ.

ಇತರ ಅನೇಕ ಪೇಂಟರುಗಳಂತೆ ವಾಲಿ ಕೂಡಾ ಹುಸೇನ್ ಭಾಯ್ ಹಡಾ ಅವರಿಂದ ಕೆಲಸ ಕಲಿತರು. ಆದರೆ 75 ವರ್ಷದ ಅವರು ತಮ್ಮ ಸ್ವಂತ ಮಕ್ಕಳಿಗೆ ಈ ಕಲೆ ತಿಳಿದಿಲ್ಲ ಎಂದು ಹೇಳುತ್ತಾರೆ. ಅವರ ಮಗ ಹನೀಫ್ ಮತ್ತು ಮೊಮ್ಮಕ್ಕಳಾದ ಹಜೀರ್ ಮತ್ತು ಅಮೀರ್ ಗಾಂಧಿನಗರದ ಸೆಕ್ಟರ್ 17ರಲ್ಲಿರುವ ತಮ್ಮ ಅಂಗಡಿಯಲ್ಲಿ ಸ್ಟಿಕ್ಕರ್ ಕಟ್ಟಿಂಗ್, ಸೈನ್‌ ಬೋರ್ಡ್ ಮತ್ತು ಫ್ಲೆಕ್ಸ್ ವಿನ್ಯಾಸಗೊಳಿಸುವ ಮತ್ತು ಮುದ್ರಿಸುವ ವ್ಯವಹಾರವನ್ನು ನಡೆಸುತ್ತಿದ್ದಾರೆ.

"ಔರ್ ಲೋಗೋ ಕೋ ಕರ್ನಾ ಚಾಹಿಯೆ [ಹೆಚ್ಚು ಹೆಚ್ಚು ಜನರು ಬೋರ್ಡ್‌ ಬರೆಯುವ ಕೆಲಸ ಕಲಿಯಬೇಕು]" ಎಂದು ಹುಸೇನ್ ಭಾಯ್ ಹೇಳುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Student Reporter : Atharva Vankundre

अथर्व वानकुंद्रे, मुंबई के क़िस्सागो और चित्रकार हैं. वह 2023 में जुलाई से अगस्त माह तक पारी के साथ इंटर्नशिप कर चुके हैं.

की अन्य स्टोरी Atharva Vankundre
Editor : Sanviti Iyer

संविति अय्यर, पीपल्स आर्काइव ऑफ़ रूरल इंडिया में बतौर कंटेंट कोऑर्डिनेटर कार्यरत हैं. वह छात्रों के साथ भी काम करती हैं, और ग्रामीण भारत की समस्याओं को दर्ज करने में उनकी मदद करती हैं.

की अन्य स्टोरी Sanviti Iyer
Photo Editor : Binaifer Bharucha

बिनाइफ़र भरूचा, मुंबई की फ़्रीलांस फ़ोटोग्राफ़र हैं, और पीपल्स आर्काइव ऑफ़ रूरल इंडिया में बतौर फ़ोटो एडिटर काम करती हैं.

की अन्य स्टोरी बिनायफ़र भरूचा
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru