ಜಗದೀಶ್ ಸೋನಿ ಮತ್ತು ಅವರ ಮೂವರು ಪುತ್ರರು ಸುಮಾರು 15 ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದರು. ಇದು ಅವರ ಆದಾಯದ ಮೂಲವಾಗಿತ್ತು. ಆದರೆ, ಬರಗಾಲದಿಂದ ತತ್ತರಿಸಿದ ಅವರಿಗೆ ಒಂದು ಕಾಳು ಭತ್ತವನ್ನೂ ಬೆಳೆಯಲು ಸಾಧ್ಯವಾಗಲಿಲ್ಲ. ಕುಟುಂಬ ಈಗ 1 ಲಕ್ಷದ ಸಾಲದ ಸುಳಿಯಲ್ಲಿ ಸಿಲುಕಿದೆ.

ರಾಜ್ಯ ಸರ್ಕಾರವು 2016 ರ ಜನವರಿಯಲ್ಲಿ ಬರಪೀಡಿತ ರೈತರಿಗೆ ಪರಿಹಾರವನ್ನು ಘೋಷಿಸಿತು. ಒಂದು ಭರವಸೆಯ ಕಿರಣ ಕಂಡಿತಾದರೂ ಸೋನಿಯವರ ಹೆಸರು ಪಟ್ಟಿಯಲ್ಲಿ ಇರಲೇ ಇಲ್ಲ.

"ಆ ಊರಿನ ಪಟ್ವಾರಿ (ಗ್ರಾಮದ ದಾಖಲೆಗಳನ್ನು ಇಡುವವ) ಪರಿಹಾರ ಕೊಡಲು ಜಾಗವನ್ನು ಪರಿಶೀಲಿಸಲು ತಲೆಕೆಡಿಸಿಕೊಳ್ಳಲಿಲ್ಲ ಮತ್ತು ಅರ್ಹರಲ್ಲದವರಿಗೆ ಪರಿಹಾರದ ಹಣವನ್ನು ವಿತರಿಸಿದರು. ಅವಕಾಶ ನೀಡಿದರೆ ನಾನು ಅವನನ್ನು ಗುಂಡಿಕ್ಕಿ ಕೊಲ್ಲುತ್ತೇನೆ. ನಾವು ಹೇಗಿದ್ದರೂ ಬದುಕುವುದಿಲ್ಲ," ಎಂದು 80 ವರ್ಷದ- ರೈತ ತಮ್ಮ ಅಳಲನ್ನು ತೋಡಿಕೊಂಡರು.

PHOTO • Shirish Khare

ಅಚೋಟಿ ಗ್ರಾಮದಲ್ಲಿ 80 ವರ್ಷದ ಜಗದೀಶ್ ಸೋನಿ ಮತ್ತು ಅವರ ಕುಟುಂಬವು ಬರದಿಂದಾಗಿ ತಮ್ಮ ಸಂಪೂರ್ಣ ಭತ್ತದ ಬೆಳೆಯನ್ನು ಕಳೆದುಕೊಂಡಿತು. ಒಂದು ಲಕ್ಷ ಸಾಲದ ಜೊತೆಗೆ ಅವರು ಸರ್ಕಾರದಿಂದ ಸ್ವಲ್ಪ ಪರಿಹಾರವನ್ನು ಪಡೆಯುವ ಭರವಸೆ ಹೊಂದಿದ್ದರು, ಆದರೆ ಅವರ ಹೆಸರುಗಳು ಸಮೀಕ್ಷೆಯ ಪಟ್ಟಿಯಲ್ಲಿ ಕಾಣೆಯಾಗಿವೆ. ಚಿತ್ರ: ಶಿರೀಶ್ ಖರೆ

ಸರ್ಕಾರದ ನಿರಾಸಕ್ತಿಯಿಂದ ಅನ್ಯಾಯಕ್ಕೊಳಗಾದ ಅಚೋಟಿ ಗ್ರಾಮದ ಅನೇಕ ರೈತರಲ್ಲಿ ಸೋನಿ ಕೂಡ ಒಬ್ಬಳಾಗಿದ್ದಾಳೆ. ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಿಂದ ಕೇವಲ 25 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ದುರ್ಗ್ ಜಿಲ್ಲೆಯ ಅಚೋಟಿಯು ಸುಮಾರು 200 ಕುಟುಂಬಗಳಿಗೆ ನೆಲೆಯಾಗಿದೆ. ಇವುಗಳಲ್ಲಿ ಅರ್ಧದಷ್ಟು ಮಾತ್ರ ಬರ ಪೀಡಿತ ಎಂದು ರಾಜ್ಯ ಸರ್ಕಾರ ಪರಿಗಣಿಸಿದೆ.

‘ನಮ್ಮ ಗ್ರಾಮ ನೀರಾವರಿಗಾಗಿ ತಾಂಡೂಲ ನಾಲೆಯನ್ನೇ ಅವಲಂಬಿಸಿದೆ. ಆದರೆ ಈ ವರ್ಷದಲ್ಲಿ ಕಾಲುವೆಗೆ ನೀರು ಹರಿಸಿಲ್ಲ. ಇದರಿಂದ ಆಚೋಟಿ ಹಾಗೂ ಅಕ್ಕಪಕ್ಕದ ಗ್ರಾಮಗಳಾದ ನಾರದ, ಚೇತ್ವ, ಮುರ್ಮುಂಡ, ಓಟೆಬಂದ್, ಗೋಡಿ ಮತ್ತು ಮಾಲ್ಪುರಿಯಲ್ಲಿ ಶೇ.75ರಷ್ಟು ಬೆಳೆ ನಾಶವಾಗಿದೆ. ಎಲ್ಲರ ಜೊತೆಗೆ ಅಚೋಟಿಯ ಸರಪಂಚ್ ಆದ ಹೇಮ್ ಸಾಹು ಕೂಡ ದೂರುತ್ತಾರೆ.

ಆದರೆ ದುರ್ಗದ ಜಿಲ್ಲಾಧಿಕಾರಿಯಾದ ಆರ್.ಸಂಗೀತಾರವರು ಇದನ್ನು ಒಪ್ಪುವುದಿಲ್ಲ. "ನಾವು ಕೆಲವು ಹೆಸರುಗಳನ್ನು ಬಿಟ್ಟಿರಬಹುದು, ಆದರೆ ಸಮೀಕ್ಷೆಗಾಗಿ ಅಳವಡಿಸಿಕೊಂಡ ವಿಧಾನವು ಸಂಪೂರ್ಣವಾಗಿ ಸರಿಯಾಗಿದೆ" ಎಂದು ಅವರು ಹೇಳುತ್ತಾರೆ.

ಕಲೆಕ್ಟರ್‌ ಅವರ ಅರ್ಜಿಗಳು ಇದ್ದೂ ಕೂಡ, ಪರಿಹಾರದ ನಿಗದಿ ಮತ್ತು ವಿತರಣೆಯು ಛತ್ತೀಸ್‌ಗಢದ ರೈತರ ಬೆನ್ನುಮೂಳೆಯನ್ನು ಮುರಿದಿದೆ. ಪರಿಹಾರದ ಹಣ ಅತ್ಯಲ್ಪವಾಗಿದ್ದು, ವಿತರಣಾ ಪ್ರಕ್ರಿಯೆಯಲ್ಲಿನ ದೊಡ್ಡ ಪ್ರಮಾಣದ ಅಕ್ರಮಗಳು ಗಾಯದ ಮೇಲೆ ಉಪ್ಪು ಸುರಿದಂತೆ ಆಗಿದೆ. ಅಧಿಕಾರಿಗಳ ವಿರುದ್ಧ ದಿನದಿಂದ ದಿನಕ್ಕೆ ಹೆಚ್ಚು ದೂರುಗಳು ಬರುತ್ತಿವೆ.

PHOTO • Shirish Khare

ಕೊರಬಿ ಗ್ರಾಮದ ರೈತರು ಕಂಗಾಲಾಗಿದ್ದಾರೆ. ಉಮೇದ್ ರಾಮ್ ಅವರು ಸಹಾಯಕ್ಕಾಗಿ ಅನೇಕ ಸರ್ಕಾರಿ ಕಚೇರಿಗಳಿಗೆ ಹೋಗಿದ್ದಾರೆ, ಆದರೆ ಅವರ ದುಃಖಗಳನ್ನು ಕೇಳಲು ಯಾರೂ ಆಸಕ್ತಿ ಹೊಂದಿಲ್ಲ. ಚಿತ್ರ: ರಾಜೇಂದ್ರ ರಾಥೋಡ್

ಪರಿಹಾರ ಕೊಡಲು ಹಾಕಿದ್ದ ಮಾನದಂಡಗಳು ದೋಷಪೂರಿತವೆಂದು ತೋರುತ್ತದೆ ಮತ್ತು ಅವುಗಳನ್ನು ಅನ್ವಯಿಸುವ ಪ್ರಕ್ರಿಯೆಯು ಇನ್ನೂ ಹೆಚ್ಚು. 25 ಎಕರೆಗಿಂತ ಕಡಿಮೆ ಇರುವ ಜಂಟಿ ಹಿಡುವಳಿ ಹೊಂದಿರುವ ಮತ್ತು ಶೇ.70 ಅಥವಾ ಅದಕ್ಕಿಂತ ಹೆಚ್ಚಿನ ಬೆಳೆ ಹಾನಿಗೊಳಗಾದ ಕುಟುಂಬಗಳು ಮಾತ್ರ ಪರಿಹಾರವನ್ನು ಪಡೆಯಬಹುದು. ಆದ್ದರಿಂದ ಶೇಕಡ 20 ರಿಂದ 30 ರಷ್ಟು ಬೆಳೆ ಹಾನಿ ಅನುಭವಿಸಿದ ಮಿತಿಗಿಂತ ಕೆಳಗಿನ ಕುಟುಂಬಗಳನ್ನು ಹೊರಗಿಡಲಾಗಿದೆ. ವಾಸ್ತವವಾಗಿ, ಐದು ಎಕರೆಗಿಂತ ಕಡಿಮೆ ಇರುವವರನ್ನೂ ಸಹ ಕೈಬಿಡಲಾಗಿದೆ ಎಂದು ದೂರಿದ್ದಾರೆ. ಇದರ ಮಧ್ಯೆ ಪಟ್ಟಿಯಲ್ಲಿ ಸೇರ್ಪಡೆಗೊಂಡವರು ಪರಿಹಾರದ ಪಾವತಿಯ ವಿಳಂಬದಿಂದ ಕಂಗಾಲಾಗಿದ್ದಾರೆ. ಈ ರಾಜ್ಯದಲ್ಲಿ, 20 ಎಕರೆ ಜಮೀನು ಹೊಂದಿರುವವರೂ ಸಹ ಬಡವರೇ ಆಗಿರುತ್ತಾರೆ. ಏಕೆಂದರೆ ಇವು ಹಲವಾರು ಸದಸ್ಯರನ್ನು ಹೊಂದಿರುವ ದೊಡ್ಡ ಕುಟುಂಬಗಳ ಜಂಟಿ ಹಿಡುವಳಿಗಳಾಗಿವೆ.

ರಾಜ್ಯ ಸರ್ಕಾರದ ಪ್ರಕಾರ, ಛತ್ತೀಸ್‌ಗಢದಲ್ಲಿ 37.46 ಲಕ್ಷ ರೈತರಿದ್ದು, ಅವರಲ್ಲಿ ಶೇಕಡಾ 80 ರಷ್ಟು ಸಣ್ಣ ಕೃಷಿಕರು ಇದ್ದಾರೆ. ಮತ್ತು ರಾಜ್ಯದ 46.85 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಸುಮಾರು ಶೇಕಡ 70ರಷ್ಟು ನೀರಾವರಿಗೆ ಒಳಪಟ್ಟಿಲ್ಲ. ನೀರಾವರಿಗೆ ಒಳಪಟ್ಟಿರುವ ಶೇಕಡ 30ರಲ್ಲಿ ಹೆಚ್ಚಿನವರ ಸ್ಥಿತಿ ಉತ್ತಮವಾಗಿದೆ ಎನ್ನುವ ಕಾರಣಕ್ಕೆ ಕೈಬಿಡಲಾಗಿದೆ. ಆದರೆ ಅಂತರ್ಜಲದ ಬಿಕ್ಕಟ್ಟು ಮತ್ತು ವಿದ್ಯುತ್ ಶಕ್ತಿಯ ಸ್ಥಗಿತವು ಅವರಿಗೂ ಅತಿಯಾದ ಹಾನಿಯನ್ನು ಮಾಡಿದೆ.

ಪರಿಹಾರ ಕಾರ್ಯಾಚರಣೆಗಳಿಂದ ಬೃಹತ್ ಸಂಖ್ಯೆಯ ರೈತರ ಹೊರಗಿಡುವಿಕೆಯು ಅನೇಕ ಪ್ರದೇಶಗಳಲ್ಲಿ ಜನರು ವಲಸೆ ಹೋಗುವ ಅಸಹಾಯಕ ಪರಿಸ್ಥಿತಿಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ತಮ್ಮ ನಷ್ಟವನ್ನು ತುಂಬುವ ಸಾಧ್ಯತೆ ಕಡಿಮೆ ಎಂದು ರೈತರು ಭಾವಿಸುತ್ತಾರೆ.

"ನಮ್ಮ ಗ್ರಾಮದ ಪ್ರತಿಯೊಬ್ಬ ರೈತರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಹೆಚ್ಚಿನವರಿಗೆ ಮುಂದಿನ ಹಂಗಾಮಿಗೆ ಉಪಯೋಗಿಸಲು ಬೀಜಗಳು ಇಲ್ಲವಾಗಿವೆ. ಹಾಗಾಗಿ ಮುಂದಿನ ವರ್ಷ ಅವರು ತಮ್ಮ ಹೊಲಗಳನ್ನು ಖಾಲಿ ಬಿಡಬೇಕಾಗುತ್ತದೆ" ಎಂದು ಅಚೋಟಿ ನಿವಾಸಿ ರಿಖಿರಾಮ್ ಸಾಹು ಹೇಳುತ್ತಾರೆ.

PHOTO • Shirish Khare

ದುರ್ಗದ ಬರಪೀಡಿತ ಅಚೋಟಿ ಗ್ರಾಮದ ರಿಖಿರಾಮ್ ಸಾಹು ಮತ್ತು ಇತರ ಸಣ್ಣ ರೈತರು ಸರ್ಕಾರವು ಪರಿಹಾರವನ್ನು ಪಾವತಿಸುವ ಬದಲು ಅವರ ಸಾಲವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸುತ್ತಾರೆ. ಚಿತ್ರ: ಶಿರೀಶ್ ಖರೆ

ಸರ್ಕಾರದ ಅರ್ಜಿಗಳ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು, ರಾಜನಂದಗಾಂವ್, ಮಹಾಸಮುಂಡ್, ಜಾಂಜ್ಗೀರ್-ಚಂಪಾ ಮತ್ತು ದುರ್ಗ್ ಜಿಲ್ಲೆಗಳ ಒಳನಾಡುಗಳಿಗೆ ಭೇಟಿ ನೀಡಿದರೆ ಸಾಕಾಗುತ್ತದೆ. ಈ ಭಾಗದ ರೈತರಿಗೆ ಹೇಳಿಕೊಳ್ಳಲು ಕೇವಲ ಚಿಂತೆ, ದುಃಖ, ಅತೃಪ್ತಿ ಮತ್ತು ಯಾತನೆ ಮಾತ್ರ ಉಳಿದಿವೆ.

ರಮಣ್ ಸಿಂಗ್ ನೇತೃತ್ವದ ರಾಜ್ಯ ಸರ್ಕಾರವು ಈ ಬಿಕ್ಕಟ್ಟನ್ನು ನಿಭಾಯಿಸಲು ಕೇಂದ್ರದಿಂದ 6,000 ಕೋಟಿ ರೂ. ಸಹಾಯಧನವನ್ನು ಪಡೆದುಕೊಂಡಿದೆ. ನರೇಂದ್ರ ಮೋದಿ ಸರ್ಕಾರವು 1200 ಕೋಟಿ ರೂ.ಗಳ ಪರಿಹಾರದ ಪ್ಯಾಕೇಜ್ʼನ್ನು ಬಿಡುಗಡೆ ಮಾಡಿದೆ. 800 ಕೋಟಿ ರೂಗಳನ್ನು ಬರಪೀಡಿತ ರೈತರಿಗೆ ವಿತರಿಸಲು ಮೀಸಲಿಡಲಾಗಿದೆ.

ರಾಜ್ಯದ ಕಂದಾಯ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಪ್ರಕಾರ, ಪರಿಹಾರ ಧನ ವಿತರಣೆ ಈಗಾಗಲೇ ಪೂರ್ಣಗೊಂಡಿದೆ. ಹೆಚ್ಚಿನ ನೆರವು ಅಗತ್ಯವಿಲ್ಲ ಎಂದು ರಾಜ್ಯ ನಿರ್ಧರಿಸಿದೆ.

PHOTO • Shirish Khare

ಮಹಾಸಮುಂಡ್ ಜಿಲ್ಲೆಯ ನರ್ರಾ ಗ್ರಾಮದಲ್ಲಿ ದಿನೇಶ್ ಯಾದವ್ ಮತ್ತು ಅವರ ಕುಟುಂಬ: ಸರ್ಕಾರಿ ಅಧಿಕಾರಿಗಳು ತಮ್ಮ ಕಚೇರಿಗಳಿಂದ ಕದಲದೆ ಸಮೀಕ್ಷೆ ನಡೆಸಿದ್ದರಿಂದ ಅವರಂತಹ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರದ ಬಾಕಿ ಹಣ ಬಂದಿಲ್ಲ ಎಂದು ಅವರು ಆರೋಪಿಸಿದ್ದಾರೆ. ಫೋಟೋ: ಲಲಿತ್ ಪಟೇಲ್

ಯಾವುದೇ ಜಿಲ್ಲೆಯವರು ಹೆಚ್ಚಿನ ಹಣಕ್ಕೆ ಬೇಡಿಕೆ ಇಡದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನುತ್ತಾರೆ ಇಲಾಖೆ ಕಾರ್ಯದರ್ಶಿ ಕೆ.ಆರ್.ಪಿಸ್ಡಾ. ಈವರೆಗೆ  ಕೇವಲ 380 ಕೋಟಿ ನೀಡಲಾಗಿದೆ. ಮತ್ತು ಎಲ್ಲಾ ರೈತರಿಗೆ ಪರಿಹಾರ ನೀಡಲು ಈ ಮೊತ್ತವು ಸಾಕಾಗುವುದಿಲ್ಲ ಎಂದು ತಜ್ಞರು ವಾದಿಸುತ್ತಾರೆ.

ಅನೇಕ ಪ್ರದೇಶಗಳಲ್ಲಿ, ರೈತರು ತಾವು ಬೆಳೆದಿರುವ  ಬೆಳೆಗಳು ತಮ್ಮ ಸ್ವಂತ ಅಗತ್ಯಗಳನ್ನು ಪೂರೈಸುವುದಿಲ್ಲ ಎನ್ನುವ ಕಾರಣಕ್ಕಾಗಿ,  ಜಾನುವಾರುಗಳಿಗೆ ಆಹಾರವಾಗಿ ಕೊಡಲು ನಿರ್ಧಾರ ಮಾಡಿದ್ದಾರೆ. ಇಂತಹ ರೈತರು ಸರ್ಕಾರದ ಪ್ರಕಾರ ಪರಿಹಾರಕ್ಕೆ ಅರ್ಹರಾಗಿರುವುದಿಲ್ಲ.

ರೈತರು ತಮ್ಮೊಳಗೆ  ಕುದಿಯುತ್ತಿರುವ ಅಸಮಾಧಾನವನ್ನು ಬೀದಿಗಳಲ್ಲಿ ಹೊರಹಾಕುತ್ತಿದ್ದಾರೆ. ಹಲವು ಜಿಲ್ಲೆಗಳಲ್ಲಿ ಪರಿಹಾರ ಧನವನ್ನು ಮನಬಂದಂತೆ ಹಂಚುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿವೆ.

"ಕೇಂದ್ರದ 1,200 ಕೋಟಿ ಪರಿಹಾರ ಪ್ಯಾಕೇಜ್‌ನ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಹಣವನ್ನು ರೈತರು ಪಡೆದಿದ್ದಾರೆ. ಬರ ಪೀಡಿತರು ಯಾರೆಂದು ನಿರ್ಧರಿಸಲು ಹಲವಾರು ನ್ಯಾಯಸಮ್ಮತವಲ್ಲದ ಪೂರ್ವಾಪೇಕ್ಷಿತಗಳನ್ನು ಸೇರಿಸುವ ಮೂಲಕ ರಾಜ್ಯ ಸರ್ಕಾರವು ಅತ್ಯಂತ ಅಗತ್ಯವಿರುವ ರೈತರನ್ನು ಪರಿಹಾರದಿಂದ ಹೊರಗಿಟ್ಟಿದೆ. ಇದರರ್ಥ ಏನೆಂದರೆ ರಾಜ್ಯ ಸರ್ಕಾರ 820 ಕೋಟಿ ರೂಗಳನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಬಯಸುತ್ತದೆ", ಎಂದು ರೈತ ನಾಯಕನಾದ ರಾಜ್‌ʼಕುಮಾರ್‌ ಗುಪ್ತ ಆರೋಪಿಸುತ್ತಾರೆ.

PHOTO • Shirish Khare

ಛತ್ತೀಸ್‌ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ತವರು ಜಿಲ್ಲೆ ರಾಜನಂದಗಾಂವ್‌ನ ಸುಕುಲ್ ದೈಹಾನ್ ಗ್ರಾಮದಲ್ಲಿ ಅತೃಪ್ತ ರೈತರು ದೊಡ್ಡ ಆಂದೋಲನಕ್ಕೆ ಸಿದ್ಧತೆ ನಡೆಸಿದ್ದಾರೆ. ಸರ್ಕಾರ ವಿತರಿಸುತ್ತಿರುವ 7-8,000 ರೂಪಾಯಿ ನಮಗಾಗಿರುವ ಬೆಳೆ ನಷ್ಟಕ್ಕೆ ಅತಿ ಕಡಿಮೆ ಪರಿಹಾರವಾಗಿದೆ ಎಂದು ಅವರು ಹೇಳುತ್ತಾರೆ. ಚಿತ್ರ: ಮನೋಜ್ ದೇವಾಂಗನ್

ಸುಮಾರು 10 ಲಕ್ಷ ರೈತರು ಈ ಹಂಗಾಮಿನಲ್ಲಿ ಭತ್ತ ಮಾರಾಟ ಮಾಡಿಲ್ಲ ಎಂಬುದಕ್ಕೆ ಬರ ಪೀಡಿತ ರೈತರ ಕುರಿತ ಸರ್ಕಾರದ ಅಂಕಿ-ಅಂಶಗಳು ಹೇಳುತ್ತವೆ.

ಸರ್ಕಾರದ ನಿರಾಸಕ್ತಿ ಈ ರೈತರನ್ನು ಜೀವನೋಪಾಯದ ಗಂಭೀರ ಬಿಕ್ಕಟ್ಟಿಗೆ ಸಿಲುಕಿಸಿದೆ. ಅವರಲ್ಲಿ ಅನೇಕರಿಗೆ ಬೇರೆಡೆ ಹಸಿರು ಹುಲ್ಲುಗಾವಲುಗಳನ್ನು ಹುಡುಕುವುದನ್ನು ಬಿಟ್ಟು ಬೇರೆ ದಾರಿಯಿಲ್ಲ.

ಮಹಾಸಮುಂಡ್ ಜಿಲ್ಲೆಯ ಬಾಗ್‌ಬಹ್ರಾ, ಪಿಥೋರಾ, ಬಸ್ನಾ, ಜಲಪ್, ಸರೈಪಾಲಿ ಮತ್ತು ಭನ್ವಾರ್‌ಪುರ ಪ್ರದೇಶಗಳ ನೂರಾರು ಕುಟುಂಬಗಳು ತಮ್ಮ ಗ್ರಾಮಗಳನ್ನು ತೊರೆದಿದ್ದಾರೆ. ಜಾಂಜ್‌ಗೀರ್-ಚಂಪಾ ಪ್ರದೇಶದ ಬಲೋಡಾ ಪ್ರದೇಶದಲ್ಲಿಯೂ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬರುವ (MNREGA) ಕಾರ್ಮಿಕರು ಮೂರು ತಿಂಗಳಿನಿಂದ ವೇತನ ತೆಗೆದುಕೊಂಡಿಲ್ಲ.

PHOTO • Shirish Khare

ಜಾಂಜ್ಗೀರ್-ಚಂಪಾ ಜಿಲ್ಲೆಯ ಕೊರ್ಬಿ ಗ್ರಾಮದ ಹಲವು ಮನೆಗಳಿಗೆ ಬೀಗ ಹಾಕಲಾಗಿದೆ ಮತ್ತು ಬರಗಾಲದಿಂದ ಬಳಲುತ್ತಿರುವ ಕುಟುಂಬಗಳು, ಅವರಲ್ಲಿ ಅನೇಕ ಆದಿವಾಸಿಗಳು, ಕೆಲಸ ಹುಡುಕಿಕೊಂಡು ನಾಗ್ಪುರ, ಮುಂಬೈ ಅಥವಾ ಪುಣೆಗೆ ಹೋಗಿದ್ದಾರೆ. ಫೋಟೋ: ರಾಜೇಂದ್ರ ರಾಥೋಡ್ / ಮಹಾಸಮುಂಡ್ ಜಿಲ್ಲೆಯ ಬಾಗ್ಬಹರಾ ಗ್ರಾಮದಲ್ಲಿ, ಕುಟುಂಬದ ಸದಸ್ಯರು ಪ್ರತಿ ಮೂರನೇ ಮನೆಯಿಂದ ಕೆಲಸ ಹುಡುಕಲು ಹೊರಟಿದ್ದಾರೆ. ಫೋಟೋ: ಲಲಿತ್ ಪಟೇಲ್

ಇತ್ತೀಚಿನ ವಾರಗಳಲ್ಲಿ ಈ ಪ್ರದೇಶದ ಶೇಕಡ 30 ರಿಂದ 40  ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂಬ ಊಹಾಪೋಹವಿದೆ.

ಆದರೆ ಪಿಸ್ಡಾ ಅಂತಹ ವರದಿಗಳನ್ನು ನಿರಾಕರಿಸುತ್ತಾರೆ. "ನಾವು ಪ್ರತಿ ವರ್ಷ ಅತಿ ಕಡಿಮೆ ಪ್ರಮಾಣದಲ್ಲಿ ವಲಸೆಯನ್ನು ನೋಡುತ್ತೇವೆ. ಆದರೆ, ಈ ವರ್ಷ 13 ಲಕ್ಷ ಜನರು MNREGA ಅಡಿಯಲ್ಲಿ ಕೆಲಸ ಮಾಡಲು ಬೇಡಿಕೆ ಇಟ್ಟಿದ್ದಾರೆ.. ಇದಲ್ಲದೆ, ಹಲವಾರು ಯೋಜನೆಗಳು ಬರ-ಪರಿಹಾರ ಕ್ರಮಗಳ ಅಡಿಯಲ್ಲಿ ಬಾಕಿ ಉಳಿದಿವೆ. ನಾವು ಕುಡಿಯುವ ನೀರು ಮತ್ತು ನೀರಾವರಿಯ ಕೆಲಸಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದೇವೆ" ಎಂದು ಅವರು ವಿವರಿಸುತ್ತಾರೆ.

PHOTO • Shirish Khare

ಒಂದು ಎಕರೆಗಿಂತ ಕಡಿಮೆ ಮಾಲೀಕತ್ವ ಹೊಂದಿರುವ ಕೊರಬಿ ಗ್ರಾಮದ ಬಿಸಾಹಿಂಬಾಯಿ ಯಾದವ್ ಅವರಿಗೆ ಪರಿಹಾರ ನೀಡಿಲ್ಲ, ಅವರ ಮಗ ವಿನೋದ್‌ಗೆ 'ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ (MNRGEA) ಬರಬೇಕಾದ ಕಾಮಗಾರಿಯ ಮೂರು ತಿಂಗಳ ವೇತನವೂ ಬಂದಿಲ್ಲ. ಚಿತ್ರ: ರಾಜೇಂದ್ರ ರಾಥೋಡ್

ಪಿಸ್ಡಾ ಅವರು ತಯಾರು ಮಾಡಿರುವ ಅರ್ಜಿಗಳ ಹೊರತಾಗಿಯೂ, ರೈತರಿಗೆ ಸಹಾಯ ಮಾಡುವ ಸರ್ಕಾರದ ಪ್ರಯತ್ನಗಳು ಹೆಚ್ಚಾಗಿ ಕಾಗದದ ಮೇಲೆಯೇ ಉಳಿಯುತ್ತವೆ.

"ಸರ್ಕಾರದ ನೀತಿಯಂತೆ ಆಡಳಿತವು ಪ್ರತಿಯೊಬ್ಬ ಅರ್ಹ ರೈತರಿಗೆ ಸಾಕಷ್ಟು ಹೆಚ್ಚಿನ ಪರಿಹಾರವನ್ನು ವಿತರಿಸಿದೆ. ಕೆಲವು ಜಿಲ್ಲೆಗಳಿಂದ ನಮಗೆ ದೂರುಗಳು ಬಂದಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ" ಎಂದು ಅವರು ಹೇಳುತ್ತಾರೆ.

ಆದರೆ, ಪರಿಹಾರ ನೀತಿಯಲ್ಲೇ ಸಮಸ್ಯೆ ಇದ್ದರೆ?

ಈಗಾಗಲೇ ಬೆಳೆ ಕಟಾವು ಆಗಿರುವುದರಿಂದ ಖಾಲಿ ಜಾಗದಿಂದ ಹಾನಿಯನ್ನು ಕಂಡುಹಿಡಿಯಲಾಗುವುದಿಲ್ಲ. ಅಧಿಕಾರಿಗಳು ಮಳೆಯ ಮಾಹಿತಿ ಮತ್ತು ಭತ್ತದ ಬೆಳೆ ಮಾರಾಟದ ಮೂಲಕ ನಷ್ಟವನ್ನು ಅಂದಾಜು ಮಾಡಿದ್ದಾರೆ.

ರಾಜ್ಯ ಕೃಷಿ ಸಚಿವ ಬ್ರಿಜ್ಮೋಹನ್ ಅಗರ್ವಾಲ್ ಪ್ರಕಾರ, "ಪರಿಹಾರ ಧನ ವಿತರಿಸುವ ಕಾರ್ಯವನ್ನು ಅಧಿಕಾರಿಗಳಿಗೆ ವಹಿಸಲಾಗಿದೆ. ಸ್ವಲ್ಪ ಮಟ್ಟಿಗೆ ದೂರುಗಳು ಸಹಜ. ಆದರೆ ರೈತರಲ್ಲಿ ವ್ಯಾಪಕ ಕೋಪವಿದೆ ಎಂದು ಹೇಳುವುದು ತಪ್ಪು."

ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಮತ್ತು ಕೃಷಿ ತಜ್ಞ ಸಂಕೇತ್ ಠಾಕೂರ್ ಈ ಅರ್ಜಿಗಳನ್ನು ವಿರೋಧಿಸಿದ್ದಾರೆ.

"ಸರ್ಕಾರವು ಕೇವಲ ರೈತರಿಗೆ ಸಹಾಯ ಮಾಡುವ ನಾಟಕವಾಡುತ್ತಿದೆ. ಇದು ಅಧಿಕಾರಶಾಹಿಗೆ ಹಣವನ್ನು ರವಾನಿಸಿದೆ. ಪರಿಹಾರದ ಹಣವು ಮೊದಲ ಸ್ಥಾನದಲ್ಲಿ ಸಾಕಾಗುವುದಿಲ್ಲ ಮತ್ತು ವಿತರಣೆಯಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು" ಎಂದು ಅವರು ಆರೋಪಿಸಿದರು.

"ಪರಿಸ್ಥಿತಿ ಸುಧಾರಿಸದಿದ್ದರೆ ಇನ್ನೂ ಅನೇಕ ರೈತರು ಆತ್ಮಹತ್ಯೆಗೆ ಒಳಗಾಗಬೇಕಾಗುತ್ತದೆ. ಅವರನ್ನು ಕೇವಲ MNREGA ಯೋಜನೆ ಒಂದರ ಕಾರಣ ಕೊಟ್ಟು ಕೈ ಬಿಡಲಾಗುವುದಿಲ್ಲ" ಎಂದು ಅವರು ಹೇಳುತ್ತಾರೆ.

ಈ ಕಥೆಯ ಮೂಲ ಆವೃತ್ತಿಯನ್ನು ಫೆಬ್ರವರಿ 29, 2016 ರಂದು ರಾಜಸ್ಥಾನ ಪತ್ರಿಕಾ ರಾಯ್‌ಪುರ ಆವೃತ್ತಿಯಲ್ಲಿ ಪ್ರಕಟಿಸಲಾಗಿದೆ.

ಅನುವಾದ: ಅಶ್ವಿನಿ ಬಿ ವಡ್ಡಿನಗದ್ದೆ

Shirish Khare

शिरीष खरे बतौर विशेष संवाददाता राजस्थान पत्रिका, रायपुर (हिन्दी समाचार-पत्र) में कार्यरत हैं। यह ग्रामीण भारत में बढ़ती पलायन, विस्थापन, भूमि अधिग्रहण, खेती और बेकारी जैसे समस्याओं पर बीते डेढ़ दशक से पत्रकारिता कर रहे हैं।

की अन्य स्टोरी शिरीष खरे
Translator : Ashwini B. Vaddinagadde

Ashwini B. is a Bengaluru based accountant and translator and writer by passion.

की अन्य स्टोरी Ashwini B. Vaddinagadde