ಆಗ ಬೆಳಗಿನ ಜಾವದ 2 ಗಂಟೆ. ಎಲ್ಲೆಡೆ ಕತ್ತಲೆ ಕವಿದಿತ್ತು. ಮತ್ತು ನಾವು ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕರಾವಳಿಯ (ಹೆಚ್ಚಾಗಿ ಆಡುಮಾತಿನಲ್ಲಿ ರಾಮ್ನಾಡ್ ಎಂದು ಕರೆಯಲಾಗುತ್ತದೆ) 'ಯಾಂತ್ರೀಕೃತ ದೋಣಿ' ಎಂಬ ಹೆಮ್ಮೆಯ ಹೆಸರಿರುವ ಪುರಾತನ ದೋಣಿಯಲ್ಲಿದ್ದೆವು.

ಆ 'ಯಾಂತ್ರೀಕೃತ ದೋಣಿ' ವಾಸ್ತವದಲ್ಲಿ ಒಂದು ಶಿಥಿಲಗೊಂಡ, ಲೇಲ್ಯಾಂಡ್ ಬಸ್ ಎಂಜಿನ್ ಅಳವಡಿಸಲಾಗಿರುವ ಒಂದು ಬಹುತೇಕ ಹಳೆಯದಾಗಿರುವ ದೋಣಿ (1964ರಲ್ಲಿ ಈ ಬಸ್ಸನ್ನು ಬದಿಗೆ ಹಾಕಲಾಗಿತ್ತು, ನಂತರ ಅದನ್ನು ಈ ದೋಣಿಗೆ ಆಳವಡಿಸಲೆಂದು ನವೀಕರಿಸಲಾಯಿತು- ಮತ್ತು ನಾನು ಈ ಪ್ರವಾಸ ಹೋಗಿದ್ದು 1993ರಲ್ಲಿ ಆಗಲೂ ಅದು ಚೆನ್ನಾಗಿ ಕೆಲಸ ಮಾಡುತ್ತಿತ್ತು). ಎಲ್ಲರೂ ಸ್ಥಳೀಯ ಮೀನುಗಾರರೇ ಇದ್ದ ಆ ದೋಣಿಯಲ್ಲಿ ನಾನೊಬ್ಬ ದಾರಿಹೋಕನಾಗಿದ್ದೆ. ನಾವೆಲ್ಲಿದ್ದೆವು ಎನ್ನುವುದರ ಕುರಿತು ನನಗೆ ಕಿಂಚಿತ್ತೂ ಸುಳಿವಿರಲಿಲ್ಲ. ಹೆಚ್ಚೆಂದರೆ ಆಗ ನಾನು ಬಂಗಾಳಕೊಲ್ಲಿಯ ಯಾವುದೋ ಒಂದು ತೀರದಲ್ಲಿದ್ದೆ ಎಂದು ಹೇಳಬಲ್ಲೆ.

ನಾವು ಈಗಾಗಲೇ ಸಮುದ್ರದಲ್ಲಿ ಸುಮಾರು 16 ಗಂಟೆಗಳ ಕಾಲ ಈ ಶ್ರಮದಾಯಕ ಪ್ರಯಾಣವನ್ನು ಮುಗಿಸಿದ್ದೆವು ಆದರೆ ದೋಣಿಯಲ್ಲಿದ್ದ ಐದು ಸಿಬ್ಬಂದಿಯಲ್ಲಿ ಒಬ್ಬರ ಮುಖದ ಮೇಲಿನ ನಗುವಿನಲ್ಲೂ ದಣಿವಿನ ಗೆರೆಗಳಿರಲಿಲ್ಲ. ಅವರೆಲ್ಲರೂ ಫರ್ನಾಂಡೋ ಎನ್ನುವ ಉಪನಾಮವನ್ನು ಹೊಂದಿದ್ದರು. ಇದು ಇಲ್ಲಿನ ಮೀನುಗಾರ ಸಮುದಾಯದಲ್ಲಿ ಬಹಳ ಸಾಮಾನ್ಯ ಹೆಸರಾಗಿದೆ.

ಅಲ್ಲಿದ್ದ ಫರ್ನಾಂಡೊಗಳಲ್ಲಿ ಒಬ್ಬರು ಹಿಡಿದಿದ್ದ ಕೋಲಿನ ಕೊನೆಯಲ್ಲಿ ಉರಿಯುತ್ತಿದ್ದ ಸೀಮೆಎಣ್ಣೆ ದೊಂದಿಯ ಹೊರತಾಗಿ ಈ 'ಯಾಂತ್ರೀಕೃತ ದೋಣಿ'ಗೆ ಬೇರೆ ಬೆಳಕಿನ ಮೂಲವಿರಲಿಲ್ಲ. ಅದು ನನ್ನನ್ನು ಚಿಂತೆಗೀಡು ಮಾಡಿತು. ಈ ಕತ್ತಲೆಯಲ್ಲಿ ನಾನು ಫೋಟೊಗಳನ್ನು ಹೇಗೆ ತೆಗೆಯೋದು?

ಮೀನು ಆ ಸಮಸ್ಯೆಯನ್ನು ಪರಿಹರಿಸಿತು

ಅವು ಬಲೆಗಳಲ್ಲಿ ತಮ್ಮ ಮೈಯಲ್ಲಿದ್ದ ರಂಜಕದಿಂದ ಹೊಳೆಯುತ್ತಿದ್ದವು (ಅದಕ್ಕೆ ಏನು ಹೇಳುತ್ತಾರೆಂದು ಖಚಿತವಾಗಿ ಗೊತ್ತಿಲ್ಲ) ಅವುಗಳ ಚಡಪಡಿಕೆಯ ಕುಣಿಯುವಿಕೆ ದೋಣಿಯ ಇತರ ಭಾಗಗಳನ್ನು ಬೆಳಗಿಸುತ್ತಿತ್ತು. ಇದು ನಾನು ಫ್ಲ್ಯಾಶ್ ಬಳಸದೆ ಒಂದೆರಡು ಫೋಟೋಗಳನ್ನು ತೆಗೆದುಕೊಳ್ಳಲು ಅನುಕೂಲ ಮಾಡಿಕೊಟ್ಟಿತು. (ಫ್ಲಾಶ್‌ ಎನ್ನುವುದು ನಾನು ಎಂದೂ ಬಳಸಲು ಬಯಸದ ಉಪಕರಣ)

ಇದಾದ ಒಂದು ಗಂಟೆಯ ನಂತರ, ನನಗೆ ತಾಜಾ ಮೀನುಗಳನ್ನು ಹುರಿದು ಆತಿಥ್ಯ ನೀಡಲಾಯಿತು. ಅದನ್ನು ದೊಡ್ಡದೊಂದು ಹಳೆಯ ಎಣ್ಣೆಯ ಟಿನ್ನನ್ನು ಕತ್ತರಿಸಿ ಅದನ್ನು ಬೋರಲು ಹಾಕಿ ಅದರ ಮೇಲೆ ಸುಡಲಾಗಿತ್ತು. ನಾವು ಎರಡು ದಿನಗಳ ಕಾಲ ಕಡಲಿನಲ್ಲಿದ್ದೆವು. 1993ರಲ್ಲಿ ನಾನು ಇಂತಹ ಮೂರು ತಿರುಗಾಟಗಳನನ್ನು ನಡೆಸಿದ್ದೆ. ಪ್ರತಿ ಬಾರಿಯೂ ಮೀನುಗಾರರು ಪುರಾತನ ಉಪಕರಣಗಳೊಂದಿಗೆ ಕಠಿಣ ಪರಿಸ್ಥಿತಿಗಳಲ್ಲಿ ಸಂತೋಷದಿಂದ ಮತ್ತು ಹೆಚ್ಚಿನ ದಕ್ಷತೆಯಿಂದ ಕೆಲಸ ಮಾಡಿದ್ದರು.

Out on a two-night trip with fishermen off the coast of Ramnad district in Tamil Nadu, who toil, as they put it, 'to make someone else a millionaire'
PHOTO • P. Sainath

ಕೋಸ್ಟ್ ಗಾರ್ಡ್ ನಮ್ಮನ್ನು ಎರಡು ಬಾರಿ ಪರೀಕ್ಷಿಸಿತ್ತು-ಅದು ಎಲ್ ಟಿಟಿಇ ಯುಗ ಮತ್ತು ಶ್ರೀಲಂಕಾ ಅಲ್ಲಿಗೆ ಕೆಲವೇ ಕಿಲೋಮೀಟರ್ ದೂರದಲ್ಲಿತ್ತು. ಕೋಸ್ಟ್ ಗಾರ್ಡ್ ಅಂದು ನನ್ನ ರುಜುವಾತುಗಳನ್ನು ಸಿಡುಕಿನಿಂದಲೇ  ಒಪ್ಪಿಕೊಂಡರು - ಅದು ಕೇವಲ ರಾಮನಾಡ್ ಕಲೆಕ್ಟರ್ ಬರೆದ ಪತ್ರವನ್ನು ಒಳಗೊಂಡಿತ್ತು, ಅದನ್ನು ನಾನು ನಿಜವಾದ ಪತ್ರಕರ್ತ ಎಂದು ತೃಪ್ತಿಹೊಂದಿದ್ದೇನೆ ಎಂದು ಹೇಳಿದರು.

ಈ ಕರಾವಳಿಯ ಹೆಚ್ಚಿನ ಮೀನುಗಾರರು ಸಾಲದಲ್ಲಿಯೇ ಇರುತ್ತಾರೆ ಮತ್ತು ನಗದು ಮತ್ತು ಉತ್ಪನ್ನಗಳ ಸಂಯೋಜನೆಯ ಆಧಾರದ ಮೇಲೆ ಅತ್ಯಂತ ಕಡಿಮೆ ಕೂಲಿಗೆ ಕೆಲಸ ಮಾಡುತ್ತಾರೆ. ನಾನು ಭೇಟಿಯಾದವರಲ್ಲಿ ಅತ್ಯಂತ ವಿದ್ಯಾವಂತರೆಂದರೆ 6ನೇ ತರಗತಿಯವರೆಗೆ ಓದಿದ್ದರು. ಅವರು ಎದುರಿಸುವ ಅಗಾಧ ಅಪಾಯಗಳಿಗೆ ಹೋಲಿಸಿದರೆ ಅವರಿಗೆ ಸಿಗುವ ಪ್ರತಿಫಲಗಳು ತೀರಾ ಕಡಿಮೆ, ಆದರೆ ಅವರು ಹಿಡಿಯುವ ಸೀಗಡಿ (ಉದಾಹರಣೆಗೆ) ಜಪಾನಿನಲ್ಲಿ ಅದೃಷ್ಟ ತರಬಲ್ಲದು.  ವಿಚಿತ್ರವೆಂದರೆ, ಈ ರೀತಿಯ ಕರಕುಶಲ ಕೆಲಸದಲ್ಲಿರುವ ಕೆಲಸಗಾರರು ಮತ್ತು ಸಾಂಪ್ರದಾಯಿಕ ಯಾಂತ್ರೀಕೃತವಲ್ಲದ ಮೀನುಗಾರಿಕೆ ದೋಣಿಗಳು ಅಥವಾ ನಾಡದೋಣಿಗಳ ಕೆಲಸಗಾರ ನಡುವೆ ವರ್ಗ ಹಿನ್ನೆಲೆಯಲ್ಲಿ ಅಷ್ಟೊಂದು ವ್ಯತ್ಯಾಸವಿಲ್ಲ.

ಇಬ್ಬರೂ ಬಡತನದಲ್ಲಿದ್ದಾರೆ ಮತ್ತು ಕೆಲವರು ದೋಣಿಗಳನ್ನು ಹೊಂದಿದ್ದಾರೆ. ಹಾಗೆ ನೋಡಿದರೆ, ಕರಕುಶಲತೆಯ ವಿಷಯದಲ್ಲಿ ಬಹುತೇಕ ಯಾವುದೂ 'ಯಾಂತ್ರೀಕೃತ'ವಲ್ಲ. ನಾವು ಮುಂಜಾವಿನಲ್ಲಿ ಸಮುದ್ರದಿಂದ ಇನ್ನೂ ಒಂದು ಪ್ರಯಾಣ ಮಾಡಿದೆವು - ಮತ್ತು ನಂತರ ತೀರಕ್ಕೆ ಬಂದೆವು. ಫರ್ನಾಂಡೊಗಳು ಈಗಲೂ ನಗುತ್ತಿದ್ದರು. ಈ ಬಾರಿ ಅವರ ನಗುವಿಗೆ ಕಾರಣವಾಗಿದ್ದು, ಅವರ ಅಸ್ತಿತ್ವದ ಅರ್ಥಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ನನ್ನ ತಬ್ಬಿಬ್ಬಾದ ಮುಖವಾಗಿತ್ತು, ಅದೂ ಹೆಚ್ಚು ತಮಾಷೆಯಾಗಿ ನಗುತ್ತಿದ್ದರು.

ಅದರಲ್ಲಿ ಅರ್ಥವಾಗದಿರುವುದು ಏನೂ ಇಲ್ಲ, ಅವರಲ್ಲಿ ಒಬ್ಬರು ಹೇಳಿದರು: "ಇನ್ನೊಬ್ಬರನ್ನು ಕೋಟ್ಯಾಧಿಪತಿಗಳನ್ನಾಗಿಸಲು ನಾವು ಕೆಲಸ ಮಾಡುತ್ತೇವೆ."


ಈ  ಲೇಖನದ ಸಣ್ಣ ಆವೃತ್ತಿಯು ಜನವರಿ 19, 1996ರಂದು ದಿ ಹಿಂದೂ ಬಿಸಿನೆಸ್ ಲೈನ್ ಪತ್ರಿಕೆಯಲ್ಲಿ ಕಾಣಿಸಿಕೊಂಡಿತ್ತು.

ಅನುವಾದ: ಶಂಕರ. ಎನ್. ಕೆಂಚನೂರು

पी. साईनाथ, पीपल्स ऑर्काइव ऑफ़ रूरल इंडिया के संस्थापक संपादक हैं. वह दशकों से ग्रामीण भारत की समस्याओं की रिपोर्टिंग करते रहे हैं और उन्होंने ‘एवरीबडी लव्स अ गुड ड्रॉट’ तथा 'द लास्ट हीरोज़: फ़ुट सोल्ज़र्स ऑफ़ इंडियन फ़्रीडम' नामक किताबें भी लिखी हैं.

की अन्य स्टोरी पी. साईनाथ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru