ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕುರಿ ಮಾಂಸದ ಅಂಗಡಿಗಳು ಮತ್ತು ಮಾರುಕಟ್ಟೆಗಳಿಗೆ ನಿಯಮಿತವಾಗಿ ಮೇಕೆಗಳು ಮತ್ತು ಕುರಿಗಳನ್ನು ವಾಹನಗಳಲ್ಲಿ ಸಾಗಿಸಲಾಗುತ್ತದೆ. ಪ್ರಾಣಿಗಳನ್ನು ಕುರುಬರಿಂದ ವ್ಯಾಪಾರಿಗಳು ಖರೀದಿಸುತ್ತಾರೆ, ನಂತರ ದರಗಳ ಆಧಾರದ ಮೇಲೆ ಮಾರುಕಟ್ಟೆಯಿಂದ ಮಾರುಕಟ್ಟೆಗೆ ಅವರೊಂದಿಗೆ ಚಲಿಸುತ್ತಾರೆ. ನಾನು ಕದಿರಿ ಕಡೆಯಿಂದ ಅನಂತಪುರ ಕಡೆಗೆ ಟೆಂಪೋ ಹೋಗುತ್ತಿದ್ದಾಗ ಈ ಛಾಯಾಚಿತ್ರವನ್ನು ತೆಗೆದಿದ್ದೆ.
ಮೇಲೆ ಕುಳಿತಿರುವ ವ್ಯಕ್ತಿ (ಇಲ್ಲಿ ಅವರ ಹೆಸರನ್ನು ನಾನು ಪ್ರಕಟಿಸಲು ಆಗುವುದಿಲ್ಲ) ಮಾಲೀಕರಿರಬೇಕು ಎಂದು ನಾನು ಅಂದುಕೊಂಡೆ. ಹಾಗಾಗಿ ಅನಂತಪುರ ಪೇಟೆಯಲ್ಲಿ ಪ್ರತಿ ಶನಿವಾರ ನಡೆಯುವ ಮೇಕೆದಾಟು ಸಂತೆಗೆ ಹೋಗಿ ಅಲ್ಲಿ ಛಾಯಾಚಿತ್ರ ತೋರಿಸುತ್ತಿದ್ದೆ. ಕೆಲವು ವ್ಯಾಪಾರಿಗಳು ಅವನು ಕೂಡ ವ್ಯಾಪಾರಿಯಾಗಿರಬಹುದು ಅಥವಾ ವ್ಯಾಪಾರಿ ಕಳುಹಿಸಿದ ಕಾವಲುದಾರನಾಗಿರಬಹುದು ಎಂದು ಹೇಳಿದರು, ಆದರೆ ಅವರಿಗೆ ಖಚಿತವಿರಲಿಲ್ಲ. ನಾನು ಮಾರುಕಟ್ಟೆಯಲ್ಲಿ ಭೇಟಿಯಾದ ಕುರುಬ ಪಿ.ನಾರಾಯಣಸ್ವಾಮಿ, ಚಿತ್ರದಲ್ಲಿರುವ ಮನುಷ್ಯ ಪ್ರಾಣಿಗಳ ಮಾಲೀಕರಲ್ಲ ಎಂದು ನನಗೆ ಹೇಳಿದರು. "ಅವನು ಬಹುಷಃ ಕೂಲಿಯಾಗಿರಬಹುದು. ಒಬ್ಬ ಕಾರ್ಮಿಕ ಮಾತ್ರ ಮೇಲ್ಭಾಗದಲ್ಲಿ ಕುಳಿತುಕೊಳ್ಳುತ್ತಾನೆ [ತೋರಿಕೆ ಇಲ್ಲದ ಮನೋಭಾವದಿಂದ]. ಮೇಕೆಗಳ ಮಾಲೀಕರು ಅವುಗಳನ್ನು ತೆಗೆದುಕೊಂಡು ಹೋಗುವ ಮೊದಲು ಅವುಗಳ ಕಾಲುಗಳನ್ನು ಎಚ್ಚರಿಕೆಯಿಂದ ಒಳಗೆ ಹಾಕುತ್ತಿದ್ದರು. ಪ್ರತಿ ಮೇಕೆಗೆ ಸುಮಾರು 6,000 ರೂಪಾಯಿಗಳನ್ನು ಖರ್ಚು ಮಾಡುವ ವ್ಯಕ್ತಿ ಅವುಗಳ ಕಾಲುಗಳಿಗೆ ಹಾನಿಯಾಗಲು ಬಿಡುವ ಹಾಗಿಲ್ಲ.
ಅನುವಾದ: ಅಶ್ವಿನಿ ಬಿ.