ಸಧ್ಯದಲೇ, ಅವು ಅಹಮದಾಬಾದ್ ಒಂದರಲ್ಲೇ ಸಾವಿರ ರನ್ ವೇಗಳಿಂದ ಟೇಕ್ ಆಫ್ ಆಗುತ್ತವೆ. ಇದು ನೋಡಲು ಯಾವುದೇ ಹೆಸರಾಂತ ಏರ್‌ ಪರೇಗಿಂತಲೂ ಹೆಚ್ಚು ವರ್ಣರಂಜಿತ ಮತ್ತು ಅದ್ಭುತ ದೃಶ್ಯವಾಗಿರುತ್ತದೆ. ಅವುಗಳ ಹೆಮ್ಮೆಯ ಪೈಲಟ್‌ಗಳು ಮತ್ತು ಮಾಲೀಕರು ಇಬ್ಬರೂ ನೆಲದಲ್ಲೇ ಇರುತ್ತಾರೆ. ಈ ವಿಮಾನಗಳ ಹಾರಾಟದ ಹಿಂದೆ ಎಷ್ಟು ಜನರ ಶ್ರಮವಿದೆಯೆನ್ನುವುದು ಆ ಇಬ್ಬರಿಗೂ ತಿಳಿದಿಲ್ಲ. ಅವುಗಳ ತಯಾರಿಕೆಯಲ್ಲಿ ಪಾಲ್ಗೊಳ್ಳುವವರಲ್ಲಿ ಹೆಚ್ಚಿನವರು ಮಹಿಳೆಯರು. ಮತ್ತು ಅವರಲ್ಲಿ ಕೆಲವರು ಗ್ರಾಮೀಣ ಅಥವಾ ಸಣ್ಣಪುಟ್ಟ ಪಟ್ಟಣಗಳ ವಾಸಿಗಳು. ಇವರು ತಮ್ಮ ಸೂಕ್ಷ್ಮ, ಸಂಕೀರ್ಣ ಮತ್ತು ಕಠಿಣವಾದ ಕೆಲಸಕ್ಕೆ ಪಡೆಯುವ ಪ್ರತಿಫಲ ಮಾತ್ರ ಬಹಳ ಸಣ್ಣದಿರುತ್ತದೆ. ಮತ್ತು ಅವರು ಎಂದೂ ಇವುಗಳನ್ನು ಹಾರಿಸುವುದಿಲ್ಲ.

ಇದು ಮಕರ ಸಂಕ್ರಾಂತಿ ಸಮಯ, ಮತ್ತು ಈ ಹಿಂದೂ ಹಬ್ಬದ ಆಚರಣೆಯಲ್ಲಿ ನಗರದಲ್ಲಿ ಹಾರಲಿರುವ ಅನೇಕ ಬಣ್ಣಗಳ ಕೆಲಿಡೋಸ್ಕೋಪಿಕ್ ಗಾಳಿಪಟಗಳನ್ನು ಅಹ್ಮದಾಬಾದಿನಲ್ಲಿ ಮತ್ತು ಗುಜರಾತಿನ ಆನಂದ್ ಜಿಲ್ಲೆಯ  ಖಂಭಾತ್  ತಾಲ್ಲೂಕಿನಲ್ಲಿ - ಮುಸ್ಲಿಂ ಮತ್ತು ಹಿಂದೂ  ಚುನಾರಾ ಸಮುದಾಯಗಳ ಮಹಿಳೆಯರು  ತಯಾರಿಸಿದ್ದಾರೆ. ಸಹಜವಾಗಿಯೇ ಗಾಳಿಪಟ ಹಾರಿಸುವವರಲ್ಲಿ ಹೆಚ್ಚಿನವರು ಹಿಂದೂಗಳೇ ಆಗಿರಲಿದ್ದಾರೆ.

ಈ ಮಹಿಳೆಯರು ವಿಶೇಷವಾಗಿ ಜನವರಿ 14ರಂದು ಆಕಾಶವನ್ನು ಅಲಂಕರಿಸಿ ವರ್ಣರಂಜಿತವಾಗಿಸುವ ಗಾಳಿಪಟಗಳನ್ನು ವರ್ಷಕ್ಕೆ 10 ತಿಂಗಳಿಗೂ ಹೆಚ್ಚು ಕಾಲ ತಯಾರಿಸುವ ಕೆಲಸ ಮಾಡುತ್ತಾರೆ. ಆದರೆ ಬಹಳ ಕಡಿಮೆ ಆದಾಯ ಗಳಿಸುತ್ತಾರೆ. ಈ ವಲಯದಲ್ಲಿ ಕೆಲಸ ಮಾಡುವ 1.28 ಲಕ್ಷ ಜನರಲ್ಲಿ ಪ್ರತಿ 10 ಜನರಲ್ಲಿ ಮಹಿಳೆಯರು 7ರಷ್ಟಿದ್ದಾರೆ. ಗುಜರಾತಿನಲ್ಲಿದು 625 ಕೋಟಿ ಬೆಲೆ ಬಾಳುವ ಉದ್ಯಮ.

"ಒಂದು ಪತಂಗ್  (ಗಾಳಿಪಟ) ಸಿದ್ಧಗೊಳ್ಳುವ ಮೊದಲು ಏಳು ಜೋಡಿ ಕೈಗಳ ಮೂಲಕ ಹಾದುಹೋಗಬೇಕಾಗುತ್ತದೆ" ಎಂದು 40 ವರ್ಷದ ಸಬಿನ್ ಅಬ್ಬಾಸ್ ನಿಯಾಜ್ ಹುಸೇನ್ ಮಲಿಕ್ ಹೇಳುತ್ತಾರೆ. ನಾವು ಖಂಭಟ್‌ನ ಲಾಲ್ ಮಹಲ್ ಪ್ರದೇಶದ ಸಣ್ಣ ಓಣಿಯಲ್ಲಿ ಅವರ 20X12 ಅಡಿಯ ಮನೆ ಹಾಗೂ ಅಂಗಡಿಯೊಳಗೆ ಕುಳಿತಿದ್ದೆವು. ಮತ್ತು ಅವರು ಈ ಹೊರಗಿನಿಂದ ಸುಂದರವಾಗಿ ಕಾಣುವ ಉದ್ಯಮದ ಕಡಿಮೆ ತಿಳಿದಿರುವ ಬದಿಯ ಕುರಿತು ನಮಗೆ ಜ್ಞಾನೋದಯ ಮಾಡುತ್ತಿದ್ದರು, ಗಾಳಿಪಟಗಳನ್ನು ಸುತ್ತಿ ಮಾರಾಟಗಾರರಿಗೆ ಕಳುಹಿಸಲು ಸಿದ್ಧವಾಗಿರುವ ಪೊಟ್ಟಣಗಳ ಹೊಳೆಯುವ ಬೆಳ್ಳಿಯ ಹಿನ್ನೆಲೆಯ ಎದುರು ಕುಳಿತು ನಮ್ಮೊಡನೆ ಅವರು ಮಾತನಾಡುತ್ತಿದ್ದರು.

Sabin Abbas Niyaz Hussein Malik, at his home-cum-shop in Khambhat’s Lal Mahal area.
PHOTO • Umesh Solanki
A lone boy flying a lone kite in the town's Akbarpur locality
PHOTO • Pratishtha Pandya

ಎಡ: ಸಬಿನ್ ಅಬ್ಬಾಸ್ ನಿಯಾಜ್ ಹುಸೇನ್ ಮಲಿಕ್ ಅವರ ಮನೆಯಲ್ಲಿ (ಅವರು ಖಂಭಾತ್‌ನ ಲಾಲ್ ಮಹಲ್ ಪ್ರದೇಶದಲ್ಲಿ ಅಂಗಡಿಯನ್ನು ಸಹ ನಡೆಸುತ್ತಿದ್ದಾರೆ). ಬಲ: ನಗರದ ಅಕ್ಬರ್ ಪುರ ಪ್ರದೇಶದಲ್ಲಿ ಬಾಲಕನೊಬ್ಬ ಗಾಳಿಪಟ ಹಾರಿಸುತ್ತಿರುವುದು

olourful kites decorate the sky on Uttarayan day in Gujarat. Illustration by Anushree Ramanathan and Rahul Ramanathan

ಗುಜರಾತಿನಲ್ಲಿ ಉತ್ತರಾಯಣ ದಿನದಂದು ಆಕಾಶವನ್ನು ಬಣ್ಣಬಣ್ಣದ ಗಾಳಿಪಟಗಳಿಂದ ಅಲಂಕರಿಸಲಾಗುತ್ತದೆ. ಚಿತ್ರಗಳು: ಅನುಶ್ರೀ ರಾಮನಾಥನ್ ಮತ್ತು ರಾಹುಲ್ ರಾಮನಾಥನ್

ಬಿಚ್ಚಿಟ್ಟಿದ್ದ ವರ್ಣರಂಜಿತ ಗಾಳಿಪಟಗಳು ಅವರ ಒಂದು ಕೋಣೆಯ ಮನೆಯ ಅರ್ಧಕ್ಕಿಂತ ಹೆಚ್ಚು ನೆಲವನ್ನು ಆವರಿಸಿದ್ದವು. ಅವರು ಈ ಪರಂಪರೆಯ ಮೂರನೇ ತಲೆಮಾರಿನ ಗುತ್ತಿಗೆ ತಯಾರಕರು, ಮಕರ ಸಂಕ್ರಾಂತಿಗೆ ಸರಬರಾಜುಗಳನ್ನು ಸಿದ್ಧಗೊಳಿಸಲು 70 ಕುಶಲಕರ್ಮಿಗಳ ಸೈನ್ಯದೊಂದಿಗೆ ವರ್ಷವಿಡೀ ಕೆಲಸ ಮಾಡುತ್ತಾರೆ. ಆ ಗಾಳಿಪಟಗಳನ್ನು ನಿರ್ವಹಿಸುವ ಎಂಟನೇ ಜೋಡಿ ಕೈಗಳು ಅವರದು ಎಂದು ಹೇಳಬಹುದು.

ಧಾರ್ಮಿಕರಿಗೆ, ಮಕರ ಸಂಕ್ರಾಂತಿಯು ಮಕರ ರಾಶಿಚಕ್ರದ ಚಿಹ್ನೆಗೆ ಸೂರ್ಯನ ಚಲನೆಯನ್ನು ಸೂಚಿಸುತ್ತದೆ. ಇದು ಅಸ್ಸಾಂನ ಮಾಘ್ ಬಿಹು, ಬಂಗಾಳದ ಪೂಶ್ ಪರ್ಬನ್  ಮತ್ತು ತಮಿಳುನಾಡಿನ ಪೊಂಗಲ್‌ನಂತಹ ವಿಭಿನ್ನ ಸಂಪ್ರದಾಯಗಳು ಮತ್ತು ಹೆಸರುಗಳೊಂದಿಗೆ ಭಾರತದಾದ್ಯಂತ ಆಚರಿಸಲಾಗುವ ಸುಗ್ಗಿ ಹಬ್ಬವಾಗಿದೆ.  ಗುಜರಾತಿನಲ್ಲಿ ಇದನ್ನು ಉತ್ತರಾಯಣ ಎಂದು ಕರೆಯಲಾಗುತ್ತದೆ, ಇದು ಚಳಿಗಾಲದ ಅಯನಸಂಕ್ರಾಂತಿಯ ಸಮಯದಲ್ಲಿ ಸೂರ್ಯನ ಉತ್ತರದಿಕ್ಕಿನ ಪ್ರಯಾಣವನ್ನು ಸಂಕೇತಿಸುತ್ತದೆ. ಉತ್ತರಾಯಣ  ಇಂದು ಗಾಳಿಪಟ ಹಾರಿಸುವ ಉತ್ಸವಕ್ಕೆ ಸಮಾನಾರ್ಥಕ ಪದವಾಗಿದೆ.

ಎರಡನೆಯ ಜೋಡಿ ಕೈಗಳು ನನ್ನ ತಾಯಿಯದು, ಇದು ಬಹಳ ತಾಳ್ಮೆ ಬೇಡುವ ಕೆಲಸ. ಅವರು ಯಾವಾಗಲೂ ಫಿರ್ಕಿಗೆ  (ದಾರ)  ಮಾಂಜಾ  (ಬಣ್ಣದ ದಾರ) ಹಚ್ಚುತ್ತಿದ್ದರು. ಮತ್ತು ಕೊನೆಯ ಎರಡು ಕೈಗಳು ಪಕ್ಕದ ಕಟ್ಟಡದ ಮೇಲಿರುವ ಅಪರಿಚಿತ ಉದಾರಿಯ ಕೈಗಳು, ನನ್ನ ಗಾಳಿಪಟವನ್ನು ಎರಡೂ ಅಡ್ಡತುದಿಗಳಲ್ಲಿ ಹಿಡಿದು, ಅವರ ಟೆರೇಸ್‌ನ ದೂರದ ಮೂಲೆಗೆ ನಡೆಯುತ್ತಿದ್ದರು. ಕೈಗಳನ್ನು ಆಕಾಶದ ಕಡೆಗೆ ಚಾಚಿ ಗಾಳಿಯು ತೆಳುವಾದ, ಬಣ್ಣದ ಕಾಗದವನ್ನು ಆವರಿಸುವವರೆಗೆ ಕಾಯುತ್ತಿದ್ದವು, ಮತ್ತುಅಲ್ಲಿಗೆ ನನ್ನ ಗಾಳಿಪಟ ಗಾಳಿಯಲ್ಲಿ ತೇಲುತ್ತಿತ್ತು.

ಹಳೆಯ ನಗರವಾದ ಅಹ್ಮದಾಬಾದಿನಲ್ಲಿ ಬೆಳೆದವರು ಯಾವಾಗಲೂ ಗಾಳಿಪಟಗಳನ್ನು ಲಘುವಾಗಿ ತೆಗೆದುಕೊಳ್ಳುತ್ತಿದ್ದರು ಸಾಮಾನ್ಯವಾಗಿ ಆಗೆಲ್ಲ ಜನರು ತಮ್ಮ ಮನೆಯ ಟ್ರಂಕಿನಲ್ಲಿರು ಹಳೆಯ ಕಾಗದಗಳಿಂದ ತಯಾರಿಸುತ್ತಿದ್ದರು, ಕಿಕ್ಕಿರಿದ ಮಾರುಕಟ್ಟೆಯಲ್ಲಿನ ಅಂಗಡಿಯಿಂದ ಖರೀದಿಸಿ ತರುತ್ತಿದ್ದರು. ಉತ್ತರಾಯಣದ ದಿನ ಆಗಸದಲ್ಲಿ ಪುಟ್ಟ ಹಕ್ಕಿಗಳಂತೆ ಹಾರುತ್ತಿದ್ದವು. ಆದರೆ ಯಾರೂ ಅದರ ಇತಿಹಾಸದ ಕುರಿತು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇನ್ನು ಅದು ತಯಾರಾಗುವ ಅದೃಶ್ಯ ಲೋಕದ ಕುರಿತು ಯಾರೂ ಯೋಚಿಸುತ್ತಿರಲ್ಲ.

ಗಾಳಿಪಟಗಳನ್ನು ಹಾರಿಸುವುದು ಮಕ್ಕಳಿಗೆ ಈ ಋತುವಿನಲ್ಲಿ ಗೀಳು ಹತ್ತಿಸುವಷ್ಟು ಇಷ್ಟದ ಕ್ರೀಡೆಯಾಗಿದೆ. ಗಾಳಿಪಟಗಳ ತಯಾರಿಕೆಯು ಕೂಡಾ ಮಕ್ಕಳಾಟವಲ್ಲದೆ ಬೇರೇನೂ ಅಲ್ಲ.

*****

Sketch of the parts of a kite.
PHOTO • Antara Raman
In Ahmedabad, Shahabia makes the borders by sticking a dori .
PHOTO • Pratishtha Pandya
Chipa and mor being fixed on a kite in Khambhat
PHOTO • Pratishtha Pandya

ಎಡ: ಗಾಳಿಪಟದ ಎಲ್ಲಾ ಭಾಗಗಳ ರೇಖಾಚಿತ್ರ. ಮಧ್ಯ: ಅಹಮದಾಬಾದ್‌ನಲ್ಲಿ, ಶಹಾಬಿಯಾ ದಾರವನ್ನು ಅಂಟಿಸಿ ಅಂಚನ್ನು ತಯಾರಿಸುತ್ತಿರುವುದು. ಬಲ: ಖಂಭಾತ್‌ನಲ್ಲಿ ಚಿಪ್ಪಾ ಮತ್ತು ಮೊರ್‌ ಅನ್ನು ಗಾಳಿಪಟದಲ್ಲಿ ಅಂಟಿಸಲಾಗುತ್ತಿದೆ

"ಪ್ರತಿಯೊಂದು ಕೆಲಸವನ್ನು ಬೇರೆಬೇರೆ ಕಾರಿಗಾರ್ (ಕುಶಲಕರ್ಮಿ) ಮಾಡುತ್ತಾರೆ" ಎಂದು ಸಬಿನ್ ಮಲಿಕ್ ವಿವರಿಸುತ್ತಾರೆ. "ಒಬ್ಬ ವ್ಯಕ್ತಿಯು ಕಾಗದವನ್ನು ಕತ್ತರಿಸುತ್ತಾನೆ, ಇನ್ನೊಬ್ಬನು  ಪಾನ್  ಅನ್ನು (ಹೃದಯದ ಆಕಾರದ ಕಟ್-ಔಟ್) ಅಂಟಿಸುತ್ತಾನೆ, ಮೂರನೆಯವನು  ಡೋರಿಯನ್ನು  (ಗಾಳಿಪಟಕ್ಕೆ ಅಂಟಿಸಲಾದ ದಾರದ ಗಡಿ) ಮಾಡುತ್ತಾನೆ, ಮತ್ತು ನಾಲ್ಕನೆಯವನು  ಧದ್ಧೋ  (ನಡುವಿನ ಕಡ್ಡಿ) ಜೋಡಿಸುತ್ತಾನೆ. ಮುಂದೆ, ಇನ್ನೊಬ್ಬ  ಕಾರಿಗಾರ್ ಕಮ್ಮನ್  [ಕ್ರಾಸ್ ಮಾದರಿಯ ಕಡ್ಡಿ] ಸರಿಪಡಿಸುತ್ತಾನೆ, ಮತ್ತೊಬ್ಬ ಮೊರ್, ಚಿಪಾ, ಮಥಜೋಡಿ,  ನೀಚಿ  ಜೋಡಿ [ವಿವಿಧ ಭಾಗಗಳಿಗೆ ಅಂಟಿಕೊಂಡಿರುವ ವಸ್ತುಗಳು], ಮತ್ತು ಒಬ್ಬರು ಗಾಳಿಪಟಕ್ಕೆ ಜೋಡಿಸಲಾಗುವ ಫುಧಾಡಿ  [ಬಾಲಂಗೋಚಿ] ತಯಾರಿಸುತ್ತಾರೆ."

ಮಲಿಕ್ ನನ್ನ ಮುಂದೆ ಗಾಳಿಪಟವನ್ನು ಹಿಡಿದು ವಿವರಿಸಿದರು, ಪ್ರತಿ ಭಾಗವನ್ನು ತನ್ನ ಬೆರಳಿನಿಂದ ತೋರಿಸಿದರು. ಅರ್ಥಮಾಡಿಕೊಳ್ಳಲು ನಾನು ನನ್ನ ನೋಟ್ ಬುಕ್ಕಿನಲ್ಲಿ ಸ್ಕೆಚ್ ಮಾಡಿಕೊಂಡೆ. ವಾಸ್ತವವಾಗಿ ಈ ಸರಳ ಸಂಕೀರ್ಣ ಕೆಲಸವು ಖಂಬಟ್‌ನ ಅನೇಕ ಪ್ರದೇಶಗಳಲ್ಲಿ ನಡೆಯುತ್ತದೆ.

"ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಶಕರ್‌ಪುರದಲ್ಲಿ, ನಾವು ಕೇವಲ ಒಂದು ಕೆಲಸವನ್ನು ಮಾತ್ರ ಮಾಡುತ್ತೇವೆ, ಡೋರಿ ಬಾರ್ಡರ್ (ಪಟದ ಬಾರ್ಡರ್)" ಎಂದು ಸಬಿನ್ ಮಲಿಕ್ ತನ್ನ ಜಾಲದ ಕುರಿತು ವಿವರಿಸುತ್ತಾರೆ. "ಅಕ್ಬರಪುರದಲ್ಲಿ  ಪಾನ್/ಸಂಧ  (ವಿನ್ಯಾಸದ ಜಾಯಿಂಟ್‌ಗಳು) ಮಾತ್ರ ಮಾಡುತ್ತಾರೆ. ಹತ್ತಿರದ ದಾದಿಬಾದಲ್ಲಿ ಧಧ್ಧವನ್ನು ಅಂಟಿಸುತ್ತಾರೆ. ಮೂರು ಕಿಲೋಮೀಟರ್ ದೂರದಲ್ಲಿರುವ ನಾಗರ ಗ್ರಾಮದಲ್ಲಿರುವವರು  ಕಮ್ಮನ್ ಅನ್ನು ಅಂಟಿಸುತ್ತಾರೆ, ಮಟನ್ ಮಾರುಕಟ್ಟೆಯಲ್ಲಿ ಅವರು ಪಟ್ಟಿ ಕಾಮ್  (ಬಲವರ್ಧನೆಗಾಗಿ ಇರುವ ಬದಿ ಟೇಪ್ ಗಳನ್ನು ಹಾಕುವುದು) ಮಾಡುತ್ತಾರೆ. ಅಲ್ಲಿ ಫುಧಾಡಿಗಳನ್ನು ಸಹ ಮಾಡುತ್ತಾರೆ."

ಖಂಭಾತ್, ಅಹಮದಾಬಾದ್, ನಾಡಿಯಾಡ್, ಸೂರತ್ ಮತ್ತು ಗುಜರಾತ್ ನ ಇತರ ಕಡೆಗಳಲ್ಲಿಯ ಗಾಳಿಪಟ ತಯಾರಿಕೆಯ ಕಥೆಯೂ ಇದೇ ಆಗಿದೆ.

Munawar Khan at his workshop in Ahmedabad's Jamalpur area.
PHOTO • Umesh Solanki
Raj Patangwala in Khambhat cuts the papers into shapes, to affix them to the kites
PHOTO • Umesh Solanki

ಎಡ: ಮುನಾವರ್ ಖಾನ್ ಅವರು ಅಹಮದಾಬಾದ್‌ನ ಜಮಾಲ್‌ಪುರ ಪ್ರದೇಶದಲ್ಲಿರುವ ತಮ್ಮ ವರ್ಕ್‌ಶಾಪಿನಲ್ಲಿ. ಬಲ: ಖಂಭಾತ್‌ನ ರಾಜ್ ಪತಂಗ್‌ವಾಲಾ ಕಾಗದಗಳನ್ನು ಗಾಳಿಪಟಗಳಿಗೆ ಜೋಡಿಸಲು ಆಕಾರಗಳಾಗಿ ಕತ್ತರಿಸುತ್ತಾರೆ

60 ವರ್ಷದ ಮುನಾವರ್ ಖಾನ್ ಅಹಮದಾಬಾದಿನಲ್ಲಿ ಇದೇ ವ್ಯವಹಾರದಲ್ಲಿರುವ ನಾಲ್ಕನೇ ತಲೆಮಾರಿನವರು. ಅವರ ಕೆಲಸವು ಗಾಳಿಪಟದ ಕಾಗದ ಬೆಲ್ಲರ್ ಪುರ್ ಅಥವಾ ತ್ರಿಬೇಣಿಯನ್ನು ಸಂಗ್ರಹಿಸುವ ಮೂಲಕ ಪ್ರಾರಂಭವಾಗುತ್ತದೆ, ಇವೆರಡೂ ತಯಾರಕರ ಹೆಸರುಗಳು; ಅಹಮದಾಬಾದಿನ ಬೆಲ್ಲರ್ಪುರ್ ಇಂಡಸ್ಟ್ರೀಸ್ ಮತ್ತು ಕೋಲ್ಕತ್ತಾದ ತ್ರಿಬೇಣಿ ಟಿಶ್ಯೂಸ್. ಬಿದಿರಿನ ಕಡ್ಡಿಗಳನ್ನು ಅಸ್ಸಾಂನಿಂದ ತರಿಸಿ ಕೋಲ್ಕತ್ತಾದಲ್ಲಿ ವಿವಿಧ ಗಾತ್ರಗಳಲ್ಲಿ ಕತ್ತರಿಸಲಾಗುತ್ತದೆ. ಅವರು ಖರೀದಿಸುವ ಕಾಗದದ ರೀಮ್ ಗಳು ವಿಂಗಡಿಸಲಾದ ಗಾತ್ರಗಳು ಮತ್ತು ಆಕಾರಗಳಲ್ಲಿ ಕತ್ತರಿಸಲು ವರ್ಕ್‌ ಶಾಪಿಗೆ ಹೋಗುತ್ತವೆ.

ಅವುಗಳನ್ನು ತಲಾ ಸುಮಾರು 20 ಹಾಳೆಗಳ ಅಚ್ಚುಕಟ್ಟಾದ ಕಟ್ಟುಗಳಲ್ಲಿ ಇರಿಸಿ, ಅಗಲವಾದ ಚಾಕುವನ್ನು ಬಳಸಿ ಗಾಳಿಪಟಕ್ಕೆಗೆ ಅಗತ್ಯವಿರುವ ಗಾತ್ರಗಳಲ್ಲಿ ರಾಶಿಯನ್ನು ಸೀಳಲು ಪ್ರಾರಂಭಿಸುತ್ತಾರೆ. ನಂತರ ಅವುಗಳನ್ನು ಜೋಡಿಸಿ ಮುಂದಿನ ಕೆಲಸಗಾರನಿಗೆ ತಲುಪಿಸುತ್ತಾರೆ.

ಖಂಭಟ್‌ನ, 41 ವರ್ಷದ ರಾಜ್ ಪತಂಗ್ ವಾಲಾ ಕೂಡಾಅದೇ ಕೆಲಸವನ್ನು ಮಾಡುತ್ತಾರೆ. "ನನಗೆ ಎಲ್ಲಾ ಕೆಲಸಗಳು ತಿಳಿದಿವೆ," ಎಂದು ಅವರು ಮಾತನಾಡುತ್ತಲೇ ಲೀಲಾಜಾಲವಾಗಿ ಪಟಕ್ಕೆ ಬೇಕಾದ ಆಕಾರದಲ್ಲಿ ಕಾಗದ ಕತ್ತರಿಸುತ್ತಿದ್ದರು. "ಆದರೆ ನಾನೊಬ್ಬನೇ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲ. ಖಂಭಟ್‌ನಲ್ಲಿ ನಾವು ಅನೇಕ ಕೆಲಸಗಾರರನ್ನು ಹೊಂದಿದ್ದೇವೆ, ಕೆಲವರು ದೊಡ್ಡ ಗಾಳಿಪಟಗಳ ಕೆಲಸ ಮಾಡುತ್ತಾರೆ, ಕೆಲವರು ಸಣ್ಣ ಗಾಳಿಪಟಗಳಕೆಲಸ ಮಾಡುತ್ತಾರೆ. ಮತ್ತು ಪ್ರತಿ ಗಾತ್ರದ 50 ವಿಧದ ಗಾಳಿಪಟಗಳು ಸಿಗುತ್ತವೆ."

ನನ್ನ ಪರಿಣತವಲ್ಲದ ಕೈಗಳು ಘೆನ್ಶಿಯೋ (ಕೆಳಭಾಗದಲ್ಲಿ ಬಾಲಂಗೋಚಿ ಹೊಂದಿರುವ ಗಾಳಿಪಟ) ಅನ್ನು ನಮ್ಮ ಟೆರೇಸ್ ನಿಂದ ಸುಮಾರು ಮೂರು ಮೀಟರ್ ದೂರದಲ್ಲಿ ಕ್ರಮಿಸಲು ಪಡೆಯುವ ಹೊತ್ತಿಗೆ, ಅನೇಕ ಆಕಾರಗಳ ವಿವಿಧ ಬಣ್ಣದ ಗಾಳಿಪಟಗಳು ಆಕಾಶದಲ್ಲಿ ಅದ್ಭುತ ಹೋರಾಟಗಳನ್ನು ಮಾಡುತ್ತಿದ್ದವು. ಆಕಾಶವು ಚೆಲ್ಸ್  (ಉದ್ದವಾದ ರೆಕ್ಕೆಗಳನ್ನು ಹೊಂದಿರುವ ಪಕ್ಷಿಯ ಆಕಾರದ ಫೈಟರ್ ಗಾಳಿಪಟಗಳು),  ಚಂದೇದಾರ್ ಗಳು  (ಮಧ್ಯದಲ್ಲಿ ಒಂದು ಅಥವಾ ಹೆಚ್ಚು ಏಕಕೇಂದ್ರಿತ ವೃತ್ತಗಳಿರುವವು),ಪಟ್ಟೇದಾರ್‌ಗಳು  (ಒಂದಕ್ಕಿಂತ ಹೆಚ್ಚು ಬಣ್ಣದಲ್ಲಿ ಕಮಾನು ಮಾದರಿಯ ಅಥವಾ ಅಡ್ಡಪಟ್ಟಿಗಳೊಂದಿಗೆ), ಮತ್ತು ಇನ್ನೂ ಅನೇಕ ವಿಧಗಳ ಗಾಳಿಪಟದಿಂದ ಕೂಡಿರುತ್ತದೆ.

In Khambhat, Kausar Banu Saleembhai gets ready to paste the cut-outs
PHOTO • Pratishtha Pandya
Kausar, Farheen, Mehzabi and Manhinoor (from left to right), all do this work
PHOTO • Pratishtha Pandya

ಎಡ: ಖಂಭಾತ್‌ನಲ್ಲಿ, ಕೌಸರ್ ಬಾನು ಸಲಿಂಭಾಯ್ ಕಟ್-ಔಟ್‌ಗಳನ್ನು ಅಂಟಿಸಲು ತಯಾರಿ ನಡೆಸುತ್ತಿದ್ದಾರೆ. ಬಲ: ಕೌಸರ್, ಫರ್ಹೀನ್, ಮೆಹಜಬೀನ್ ಮತ್ತು ಮನ್ಹಿನೂರ್ (ಎಡದಿಂದ ಬಲಕ್ಕೆ), ಎಲ್ಲರೂ ಈ ಕೆಲಸಗಳನ್ನು ಮಾಡುತ್ತಾರೆ

ಗಾಳಿಪಟದ ವಿನ್ಯಾಸ, ಬಣ್ಣ ಮತ್ತು ಆಕಾರವು ಹೆಚ್ಚು ಸಂಕೀರ್ಣವಾದಷ್ಟೂ, ಕೆಲಸದಲ್ಲಿ ಅದರ ಅನೇಕ ತುಣುಕುಗಳನ್ನು ಒಟ್ಟಿಗೆ ಸರಿಪಡಿಸಲು ನುರಿತ ಶ್ರಮದ ಹೆಚ್ಚಿನ ಅಗತ್ಯವಿರುತ್ತದೆ. ಕೌಸರ್ ಬಾನು ಸಲೀಂಭಾಯಿ, (40) ಖಂಭಟ್‌ನ ಅಕ್ಬರ್ ಪುರ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಕಳೆದ 30 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ.

ಅವರು ವರ್ಣರಂಜಿತ ಆಕಾರಗಳನ್ನು ಗಾಳಿಪಟದ ಹೊದಿಕೆಗಳಿಗೆ ಮಿಶ್ರಣ ಮಾಡಿ ಹೊಂದಿಸುತ್ತಾರೆ ಮತ್ತು ವಿನ್ಯಾಸವನ್ನು ಪೂರ್ಣಗೊಳಿಸಲು ಅದರ ಅಂಚುಗಳಲ್ಲಿ ಒಟ್ಟಿಗೆ ಅಂಟಿಸುತ್ತಾರೆ. "ನಾವೆಲ್ಲರೂ ಇಲ್ಲಿ ಈ ಕೆಲಸವನ್ನು ಮಾಡುತ್ತಿರುವ ಮಹಿಳೆಯರು" ಎಂದು ಕೌಸರ್ ಬಾನು ನೆರೆದಿದ್ದವರತ್ತ ಬೆರಳು ಮಾಡಿ ಹೇಳಿದರು. "ಗಂಡಸರು ಕಾರ್ಖಾನೆಗಳಲ್ಲಿ ಕಾಗದವನ್ನು ಕತ್ತರಿಸುವುದು ಅಥವಾ ಗಾಳಿಪಟಗಳನ್ನು ಮಾರಾಟ ಮಾಡುವುದು ಮುಂತಾದ ಇತರ ಕೆಲಸಗಳನ್ನು ಮಾಡುತ್ತಾರೆ."

ಕೌಸರ್ ಬಾನು ಬೆಳಿಗ್ಗೆ, ಮಧ್ಯಾಹ್ನ ಮತ್ತು ಕೆಲವೊಮ್ಮೆ ರಾತ್ರಿಯೂ ಕೆಲಸ ಮಾಡುತ್ತಾರೆ. "ಹೆಚ್ಚಿನ ಸಲ ಸಾವಿರ ಗಾಳಿಪಟಗಳಿಗೆ 150 ರೂಪಾಯಿಗಳನ್ನು ಕೊಡುತ್ತಾರೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಬೇಡಿಕೆ ಉತ್ತುಂಗದಲ್ಲಿದ್ದಾಗ, 250 ರೂಪಾಯಿಗಳವರೆಗಿರುತ್ತದೆ" ಎಂದು ಅವರು ವಿವರಿಸುತ್ತಾರೆ. "ನಾವು ಹೆಂಗಸರು ಮನೆಯಲ್ಲಿ ಕೆಲಸ ಮಾಡಿಕೊಂಡು ಅಡುಗೆಯನ್ನೂ ಮಾಡುತ್ತೇವೆ."

ಸ್ವ-ಉದ್ಯೋಗಿ ಮಹಿಳೆಯರ ಸಂಘದ 2013ರ ಅಧ್ಯಯನವು ಉದ್ಯಮದಲ್ಲಿ ಶೇಕಡಾ 23ರಷ್ಟು ಮಹಿಳೆಯರು ತಿಂಗಳಿಗೆ ರೂ. 400ಕ್ಕಿಂತ ಕಡಿಮೆ ಸಂಪಾದಿಸುತ್ತಿದ್ದಾರೆ ಎಂದು  ದೃಢಪಡಿಸಿದೆ. ಅವರಲ್ಲಿ ಹೆಚ್ಚಿನವರು 400ರಿಂದ 800 ರೂ. ಗಳಿಸುತ್ತಾರೆ. ಶೇಕಡಾ 4ರಷ್ಟು ಮಹಿಳೆಯರು ಮಾತ್ರವೇ ತಿಂಗಳಿಗೆ 1,200 ರೂ.ಗಿಂತ ಹೆಚ್ಚು ಗಳಿಸುತ್ತಾರೆ.

ಇದರರ್ಥ ಅವರಲ್ಲಿ ಹೆಚ್ಚಿನವರು ಒಂದು ದೊಡ್ಡ, ಡಿಸೈನರ್ ಗಾಳಿಪಟದ ಮಾರಾಟದ ಬೆಲೆಗಿಂತಲೂ ಕಡಿಮೆ ಹಣವನ್ನು ಒಂದು ತಿಂಗಳಲ್ಲಿ ಸಂಪಾದಿಸುತ್ತಾರೆ, ಅದರ ಬೆಲೆ ರೂ. 1,000. ಅಗ್ಗದ ಗಾಳಿಪಟ ಖರೀದಿಸಲು ಬಯಸಿದರೆ ಸುಮಾರು 150 ರೂ.ಗೆ ಐದರ ಪ್ಯಾಕ್ ತೆಗೆದುಕೊಳ್ಳಬೇಕಾಗುತ್ತದೆ. ಉತ್ತಮ ಗುಣಮಟ್ಟದವುಗಳಿಗೆ ರೂ. 1,000 ಅಥವಾ ಅದಕ್ಕಿಂತ ಹೆಚ್ಚು ವೆಚ್ಚವಾಗಬಹುದು. ಇದರ ನಡುವೆ, ಬೆಲೆಗಳ ವ್ಯಾಪ್ತಿಯು ವೆರೈಟಿಗಳು, ಆಕಾರಗಳು ಮತ್ತು ಗಾತ್ರಗಳ ಸಂಖ್ಯೆಯಷ್ಟೇ ದಿಗ್ಭ್ರಮೆಗೊಳಿಸುತ್ತದೆ. ಇಲ್ಲಿರುವ ಅತಿ ಚಿಕ್ಕ ಗಾಳಿಪಟಗಳು 21.5 X 25 ಇಂಚುಗಳಷ್ಟಿರುತ್ತವೆ. ದೊಡ್ಡದು ಆ ಗಾತ್ರಕ್ಕಿಂತ ಎರಡರಿಂದ ಮೂರು ಪಟ್ಟು ದೊಡ್ಡದಾಗಿರಬಹುದು.

Aashaben, in Khambhat's Chunarvad area, peels and shapes the bamboo sticks.
PHOTO • Umesh Solanki
Jayaben glues the dhaddho (spine) to a kite
PHOTO • Pratishtha Pandya

ಎಡ: ಖಂಭಾತ್‌ನ ಚುನರ್‌ವಾಡ್ ಪ್ರದೇಶದಲ್ಲಿ ಆಶಾಬೆನ್ ಬಿದಿರಿನ ಕಡ್ಡಿಗಳನ್ನು ಸುಲಿದು ಆಕಾರಕ್ಕೆ ತರುತ್ತಾರೆ. ಬಲ: ಜಯಾಬೆನ್ ಗಾಳಿಪಟದ ಮೇಲೆ ಕಡ್ಡಿಯನ್ನು ಅಂಟಿಸುತ್ತಿದ್ದಾರೆ

ನನ್ನ ಗಾಳಿಪಟವು ಕನಿಷ್ಟ ದೂರವನ್ನು ಕ್ರಮಿಸಿ ಟೆರೇಸ್‌ಗೆ ಮರಳಿದಾಗ, ನೋಡುಗರಲ್ಲೊಬ್ಬರು "ಧದ್ಧೋ ಮಚಾದ್!" ("ಪಟದ ಮಧ್ಯದ ಬಿದಿರನ್ನು ತಿರುಗಿಸು") ಎಂದು ಕೂಗಿದ ನೆನಪಿದೆ. ಆಗ ನಾನು ನನ್ನ ಸಣ್ಣ ಕೈಗಳಿಂದ ಮೇಲಿನ ಮತ್ತು ಕೆಳಗಿನ ತುದಿಯಿಂದ ಗಾಳಿಪಟವನ್ನು ಹಿಡಿದು ಅದರ ನಡುವಿನ ಕಡ್ಡಿಯನ್ನು ತಿರುಗಿಸುತ್ತಿದ್ದೆ. ನಡುವಿನ ಕಡ್ಡಿಯು ಮೃದುವಾಗಿರಬೇಕು ಆದರೆ ತಿರುಚಿದಾಗ  ಮುರಿಯುವಷ್ಟು ದುರ್ಬಲವಾಗಿರಬಾರದು.

ದಶಕಗಳ ನಂತರ, ನಾನು ಖಂಭಾತ್ ನ ಚುನಾರವಾಡ್‌ನಲ್ಲಿ25 ವರ್ಷದ ಜಯಬೆನ್ ಅವರು ಕೆಲಸ ಮಾಡುವುದನ್ನು ನೋಡುತ್ತಿದ್ದೇನೆ, ಅವರು ಗಾಳಿಪಟಕ್ಕೆ ಮಧ್ಯದ ಬಿದಿರಿನ ಕಡ್ಡಿಯನ್ನು ಅಂಟಿಸುತ್ತಾರೆ. ಅವರು ಬಳಸುವ ಅಂಟನ್ನು ಮನೆಯಲ್ಲಿಯೇ ತಯಾರಿಸಲಾಗುತ್ತದೆ, ಬೇಯಿಸಿದ  ಸಾಬುದಾನ  (ಸಾಬಕ್ಕಿ)ದಿಂದ ತಯಾರಿಸಲಾಗುತ್ತದೆ. ಅವರಂತಹ ಕುಶಲಕರ್ಮಿಗಳಿಗೆ ಸಾವಿರ ಕಡ್ಡಿಗಳನ್ನು ಅಂಟಿಸಿದರೆ 65 ರೂ. ಸಿಗುತ್ತದೆ. ಪ್ರೊಡಕ್ಷನ್ ಚೈನ್ ಲೈನ್ ನಲ್ಲಿರುವ ಮುಂದಿನ ಕೆಲಸಗಾರ ಗಾಳಿಪಟದ  ಕಮ್ಮನ್  (ಕಮಾನು ಕಡ್ಡಿ) ಸರಿಪಡಿಸಬೇಕಿರುತ್ತದೆ.

ಆದರೆ ಅದಕ್ಕೂ ಮೊದಲು, ಕಮ್ಮನ್ ಅನ್ನು ಹೊಳಪು ಮತ್ತು ನಯಗೊಳಿಸಬೇಕಾಗಿದೆ. ಚುನಾರವಾಡ್‌ನ 36 ವರ್ಷದ ಆಶಾಬೆನ್ ಬಹಳ ವರ್ಷಗಳಿಂದ ಆ ಬಿದಿರಿನ ಕೋಲುಗಳನ್ನು ಸುಲಿಯುತ್ತಿದ್ದಾರೆ ಮತ್ತು ರೂಪಿಸುತ್ತಿದ್ದಾರೆ. ತನ್ನ ಮನೆಯಲ್ಲಿ ಕೋಲುಗಳ ಕಟ್ಟು, ತೋರು ಬೆರಳಿಗೆ ಬೈಸಿಕಲ್ ಟ್ಯೂಬ್ ರಬ್ಬರ್ ತುಂಡನ್ನು ಸುತ್ತಿಕೊಂಡು ಕುಳಿತು, ಹರಿತವಾದ ರೇಜರ್ ಚಾಕುವಿನಿಂದ ಅವುಗಳನ್ನು ಸುಲಿಯುತ್ತಾರೆ. "ಅಂತಹ ಸಾವಿರ ಕೋಲುಗಳನ್ನು ಸುಲಿದರೆ ನನಗೆ ಸುಮಾರು 60ರಿಂದ 65 ರೂಪಾಯಿಗಳು ಸಿಗುತ್ತದೆ" ಎಂದು ಆಶಾಬೆನ್ ಹೇಳುತ್ತಾರೆ. "ಈ ಕೆಲಸವನ್ನು ಮಾಡುವುದರಿಂದ ನಮ್ಮ ಬೆರಳುಗಳು ತುಂಬಾ ಒರಟಾಗುತ್ತವೆ. ದೊಡ ಗಾತ್ರದವುಗಳನ್ನು ಮಾಡುವಾಗ ರಕ್ತ ಸುರಿಯುವುದೂ ಇರುತ್ತದೆ."

ಈಗ ಕಮ್ಮನ್  ನಯವಾಗಿದೆ, ಮತ್ತು ಅದು ಬಾಗಿಸುವ ಪ್ರಕ್ರಿಯೆಯ ಮೂಲಕ ಹೋಗಬೇಕು. 60 ವರ್ಷದ ಜಮೀಲ್ ಅಹ್ಮದ್ ಅಹಮದಾಬಾದ್‌ನ ಜಮಾಲ್ ಪುರ್ ಪ್ರದೇಶದಲ್ಲಿ ಒಂದು ಸಣ್ಣ ಅಂಗಡಿಯನ್ನು ಹೊಂದಿದ್ದಾರೆ ಮತ್ತು ಈಗಲೂ  ಕಮ್ಮನ್ಗಳಿಗೆ ಕೆಲವು ರೀತಿಯ ಬ್ಯಾಂಡಿಂಗ್ ಮಾಡುತ್ತಾರೆ. ತನ್ನ ಹಲವು ಬರ್ನರ್ ಹೊಂದಿರುವ ಸೀಮೆಎಣ್ಣೆ ದೀಪದ ಪೆಟ್ಟಿಗೆಯ ಮೇಲೆ ಬಿದಿರಿನ ಕೋಲುಗಳ ಕಟ್ಟನ್ನು ಎಂಟು ಜ್ವಾಲೆಗಳಿಂದ ಸುಡುತ್ತಾರೆ. ಈ ಪ್ರಕ್ರಿಯೆಯು ಬಿದಿರಿನ ಕೋಲುಗಳ ಮೇಲೆ ಕಪ್ಪು ಕಡಗದಂತಹ ಗುರುತುಗಳನ್ನು ಕಾಣಿಸಿಕೊಳ್ಳುವಂತೆ ಮಾಡುತ್ತದೆ.

At his shop in Ahmedabad's Jamalpur area, Jameel Ahmed fixes the kamman (cross par) onto kites
PHOTO • Umesh Solanki
He runs the bamboo sticks over his kerosene lamp first
PHOTO • Umesh Solanki

ಎಡ: ಜಮೀಲ್ ಅಹ್ಮದ್ ಅಹಮದಾಬಾದ್‌ನ ಜಮಾಲ್‌ಪುರ ಪ್ರದೇಶದಲ್ಲಿನ ತನ್ನ ಅಂಗಡಿಯಲ್ಲಿ ಗಾಳಿಪಟದ ಕಮಾನನ್ನು ಹದಗೊಳಿಸುತ್ತಾರೆ. ಬಲ: ತನ್ನ ಸೀಮೆಎಣ್ಣೆ ದೀಪದ ಬೆಳಕಿನಲ್ಲಿ ಬಿದಿರಿನ ತುಂಡುಗಳನ್ನು ಬಾಗಿಸುವ ಮೊದಲು

Shahabia seals the edge after attaching the string.
PHOTO • Umesh Solanki
Firdos Banu (in orange salwar kameez), her daughters Mahera (left) and Dilshad making the kite tails
PHOTO • Umesh Solanki

ಎಡ: ಶಹಾಬಿಯಾ ದಾರವನ್ನು ಕಟ್ಟಿದ ನಂತರ ಅಂಚನ್ನು ಮುಚ್ಚುತ್ತಾರೆ. ಬಲ: ಫಿರ್ದೌಸ್ ಬಾನು (ಕಿತ್ತಳೆ ಬಣ್ಣದ ಸಲ್ವಾರ್-ಕಮೀಜ್‌ನಲ್ಲಿ), ಮತ್ತು ಅವರ ಪುತ್ರಿಯರಾದ ಮಹೇರಾ (ಎಡ) ಮತ್ತು ದಿಲ್ಶಾದ್, ಗಾಳಿಪಟದ ಬಾಲಂಗೋಚಿಗಳನ್ನು ತಯಾರಿಸುತ್ತಿದ್ದಾರೆ

ಜಮೀಲ್ ಕಮನ್‌ಗಳನ್ನು ಸರಿಪಡಿಸಲು ವಿಶೇಷ ಅಂಟನ್ನು ಬಳಸುತ್ತಾರೆ. "ಗಾಳಿಪಟವನ್ನು ತಯಾರಿಸುವಾಗ ನಿಮಗೆ ಮೂರರಿಂದ ನಾಲ್ಕು ರೀತಿಯ ಅಂಟುಗಳು ಬೇಕಾಗುತ್ತವೆ, ಪ್ರತಿಯೊಂದೂ ವಿಭಿನ್ನ ಪದಾರ್ಥಗಳು ಮತ್ತು ದ್ರವ್ಯತೆಯನ್ನು ಹೊಂದಿರುತ್ತವೆ." ಅವರು ತಿಳಿ ನೀಲಿ ಬಣ್ಣವನ್ನು ಬಳಸುತ್ತಿದ್ದಾರೆ, ಮೈದಾದಿಂದ ತಯಾರಿಸಲಾಗುವ ಇದನ್ನು ಮೊರ್ ಥು ಥು ಎಂದು ಕರೆಯಲಾಗುತ್ತದೆ. ಕಮನ್ ಗಳನ್ನು ಆಳವಡಿಸಲು ಪ್ರತಿ ಸಾವಿರಕ್ಕೆ 100 ರೂ ನೀಡಲಾಗುತ್ತದೆ.

ಅಹಮದಾಬಾದ್‌ನ ಜುಹಾಪುರದಲ್ಲಿರುವ 35 ವರ್ಷದ ಶಹಾಬಿಯಾ ಡೋರಿ ಬಾರ್ಡರ್ ಕೆಲಸಕ್ಕೆ ಬಳಸುವ ಅಂಟು ಜಮೀಲ್‌ ಬಳಸುವ ಅಂಟಿಗಿಂತ ಭಿನ್ನವಾಗಿದೆ. ಅವರು ಮನೆಯಲ್ಲಿ ಬೇಯಿಸಿದ ಅನ್ನದಿಂದ ಅದನ್ನು ತಯಾರಿಸುತ್ತಾರೆ. ಅವರು ಅದನ್ನು ಅನೇಕ ವರ್ಷಗಳಿಂದ ತಯಾರಿಸುತ್ತಿದ್ದಾರೆ, ತನ್ನ ತಲೆಯ ಮೇಲೆ ನೇತಾಡುತ್ತಿರುವ ದಾರದ ದಪ್ಪ ಗೊಂಚಲಿನಿಂದ ತುಂಬಾ ಉತ್ತಮವಾದ ಎಳೆಯನ್ನು ಮಾಡಿನಿಂದ ಎಳೆಯುವುದಾಗಿ ಹೇಳುತ್ತಾರೆ. ಗಾಳಿಪಟದ ಸುತ್ತಳತೆಯ ಸುತ್ತಲೂ ದಾರವನ್ನು ವೇಗವಾಗಿ ಓಡಿಸುತ್ತಾ, ತನ್ನ ಬೆರಳುಗಳಿಗೆ ಅಂಟಿಕೊಂಡಿರುವ ಅಂಟಿನ ಪದರವನ್ನು ದಾರದ ಮೇಲೆ ವರ್ಗಾಯಿಸುತ್ತಾರೆ.   ಲೈ  (ಅಕ್ಕಿ ಅಂಟು) ತುಂಬಿದ ಬಟ್ಟಲು ಅವರ ಸಣ್ಣ ಮೇಜಿನ ಕೆಳಗೆ ಅಡಗಿರುತ್ತದೆ.

"ನನ್ನ ಗಂಡ ಮನೆಗೆ ಬಂದ ನಂತರ ನಾನು ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ನಾನು ಇದನ್ನೆಲ್ಲ ಮಾಡುತ್ತಿದ್ದರೆ ಅವರಿಗೆ ಸಿಟ್ಟು ಬರುತ್ತದೆ." ಅವರ ಕೆಲಸವು ಗಾಳಿಪಟಕ್ಕೆ ಬಲವನ್ನು ನೀಡುತ್ತದೆ ಮತ್ತು ಅದು ಹರಿಯದಂತೆ ತಡೆಯುತ್ತದೆ. ಅವರು ತಯಾರಿಸುವ ಪ್ರತಿ ಸಾವಿರ ಗಾಳಿಪಟದ ಬಾರ್ಡರುಗಳಿಗೆ ರೂ. 200ರಿಂದ 300ರ ತನಕ ಸಂಪಾದಿಸುತ್ತಾರೆ.

ಇದೆಲ್ಲ ಮುಗಿದ ನಂತರ, ಇತರ ಮಹಿಳೆಯರು ಪ್ರತಿ ಗಾಳಿಪಟಕ್ಕೆ ಅದರ ನಡುವಿನ ಕಡ್ಡಿಯನ್ನು ಬಲಪಡಿಸಲು ಮತ್ತು ಕಮಾನು ಕಡ್ಡಿಯ ಅಂಚನ್ನು ಸ್ಥಳದಲ್ಲಿ ಹಿಡಿದಿಡಲು ಸಣ್ಣ ಕಾಗದದ ತುಂಡುಗಳನ್ನು ಅಂಟಿಸುತ್ತಾರೆ. ಅವರು ಮುಗಿಸುವ ಪ್ರತಿ ಸಾವಿರ ಗಾಳಿಪಟಗಳಿಗೆ 85 ರೂ. ಗಳಿಸುತ್ತಾರೆ.

ಫಿರ್ದೋಸ್ ಬಾನು, 42, ನಮ್ಮ ಮುಂದೆ ಅವಳ ಕೈಯಲ್ಲಿ ಸುತ್ತಿಕೊಂಡಿದ್ದ  ಪ್ರಕಾಶಮಾನವಾದ ಮತ್ತು ವರ್ಣರಂಜಿತ ಗಾಳಿಪಟದ ಕಾಗದ-ತುಣುಕುಗಳು (ಅಥವಾ ಬಾಲಂಗೋಚಿಗಳು) ಒಟ್ಟಿಗೆ ಜೋಡಿಸಲ್ಪಟ್ಟ ಮಳೆಬಿಲ್ಲುಗಳಂತಹ ಕಾಗದದ ತುಣುಕುಗಳನ್ನು ನೇತುಹಾಕಲು ಅನುವು ಮಾಡಿಕೊಟ್ಟರು. ಒಂದು ಕಟ್ಟಿನಲ್ಲಿ 100 ತುಣುಕುಗಳಿದ್ದವು. ಅಕ್ಬರ್‌ಪುರದ ಆಟೋ ಚಾಲಕನ ಪತ್ನಿಯಾಗಿರುವ ಅವರು ಈ ಹಿಂದೆ ಆರ್ಡರ್ ತೆಗದುಕೊಂಡು ಪಾಪಡ್ ಮಾಡುತ್ತಿದ್ದರು. “ಆದರೆ ಅದು ತುಂಬಾ ಕಠಿಣವಾಗಿತ್ತು, ಪಾಪಡ್‌ಗಳನ್ನು ಒಣಗಿಸಲು ನಮ್ಮದೇ ಆದ ಟೆರೇಸ್ ಇಲ್ಲ. ಇದು ಸುಲಭದ ಕೆಲಸವಲ್ಲ ಮತ್ತು ನನಗೆ ತೀರಾ ಕಡಿಮೆ ದುಡಿಮೆ ತಂದುಕೊಡುತ್ತದೆ," ಎಂದು ಫಿರ್ದೋಸ್ ಬಾನು ಹೇಳುತ್ತಾರೆ, "ಆದರೆ ನನಗೆ ಬೇರೆ ಒಳ್ಳೆಯ ಕೆಲಸ ತಿಳಿದಿಲ್ಲ."

ಗಾಳಿಪಟದ ವಿನ್ಯಾಸ, ಬಣ್ಣ ಮತ್ತು ಆಕಾರವು ಹೆಚ್ಚು ಸಂಕೀರ್ಣವಾದಷ್ಟೂ ಅದರ ಎಲ್ಲಾ ತುಣುಕುಗಳು ಅಥವಾ ಭಾಗಗಳನ್ನು ಒಟ್ಟಿಗೆ ಸೇರಿಸಲು ಹೆಚ್ಚು ನುರಿತ ಕಾರ್ಮಿಕರ ಅಗತ್ಯವಿರುತ್ತದೆ .

ವೀಡಿಯೊ ವೀಕ್ಷಿಸಿ: ಗಾಳಿಪಟದ ಬಾಲಂಗೋಚಿ

ಉದ್ದವಾದ ಹರಿತ ಕತ್ತರಿಯಿಂದ, ಅವರು ತಯಾರಿಸುತ್ತಿರುವ ಬಾಲಂಗೋಚಿಗಳ ಗಾತ್ರವನ್ನು ಅವಲಂಬಿಸಿ ಕಾಗದವನ್ನು ಒಂದು ಬದಿಯಿಂದ ಪಟ್ಟಿಗಳಾಗಿ ಕತ್ತರಿಸುತ್ತಾರೆ. ನಂತರ ಕತ್ತರಿಸಿದ ಕಾಗದವನ್ನು ತನ್ನ ಪುತ್ರಿಯರಾದ 17 ವರ್ಷದ ದಿಲ್ಶಾದ್ ಬಾನು ಮತ್ತು 19 ವರ್ಷದ ಮಹೆರಾ ಬಾನುಗೆ ಹಸ್ತಾಂತರಿಸುತ್ತಾರೆ. ಅವರು ಒಂದೇ ಬಾರಿಗೆ ಒಂದು ಕತ್ತರಿಸಿದ ಪೇಪರ್ ತೆಗೆದುಕೊಂಡು ಕಾಗದದ ಮಧ್ಯಕ್ಕೆ ಸ್ವಲ್ಪ ಮೊದಲೇ ತಯಾರಿಸಿಟ್ಟಿರುವ ಲೈ ಹಚ್ಚುತ್ತಾರೆ. ಪ್ರತಿಯೊಂದನ್ನೂ ತನ್ನ ಕಾಲಿನ ಬೆರಳಿಗೆ ಸುತ್ತಿಕೊಂಡು ತಿರುಚುತ್ತಾರೆ. ಅದು ಸುರುಳಿಯಾದ ಬಾಲಂಗೋಚಿಯಾಗುತ್ತದೆ. ಈ ಕೆಲಸದ ಸರಪಳಿಯಲ್ಲಿರುವ ಮುಂದಿನ ಕಾರಿಗಾರ್  ಗಾಳಿಪಟಕ್ಕೆ ಬಾಲಂಗೋಚಿಯನ್ನು ಕಟ್ಟಿದಾಗ ಅದು ಹಾರಾಟಕ್ಕೆ ಯೋಗ್ಯವಾಗಿರುತ್ತದೆ. ಮತ್ತು ಮೂವರು ಮಹಿಳೆಯರು ಸೇರಿ ಸಾವಿರ ಬಾಲಂಗೋಚಿ ತಯಾರಿಸಿದರೆ 60 ರೂಪಾಯಿ ಗಳಿಸುತ್ತಾರೆ.

"ಲಪ್ಪೇಟ್ಟ್ ... !!" ["ದಾರ ಸುತ್ತು"]  -ಈ ಬಾರಿ ದನಿಯಲ್ಲಿ ಆಕ್ರೋಶವಿತ್ತು. ಆಕಾಶದಿಂದ ಬಂದ ಮಾಂಜಾ ಹಾಕಿದ ದಾರ ಟೆರೇಸುಗಳಿಗೆ ಅಡ್ಡಲಾಗಿ ಭಾರವಾಗಿ ಮತ್ತು ಕುಂಟುತ್ತಾ ಬಿದ್ದಿತ್ತು. ಹೌದು, ದಶಕಗಳ ನಂತರವೂ, ನಾನು ಪ್ರೀತಿಸಿದ ಗಾಳಿಪಟವನ್ನು ಕಳೆದುಕೊಂಡದ್ದು ನನಗೆ ಇನ್ನೂ ನೆನಪಿದೆ.

ನಾನು ಈಗ ಗಾಳಿಪಟ ಹಾರಿಸುವುದಿಲ್ಲ. ಆದರೆ ಈ ವಾರ ನಾನು ಮುಂದಿನ ಪೀಳಿಗೆಯ ಮಕ್ಕಳಿಗೆ ಈ ಉನ್ನತ ಹಾರಾಟವನ್ನು ಸಾಧ್ಯವಾಗಿಸುವ ಜನರನ್ನು ಭೇಟಿ ಮಾಡುತ್ತಿದ್ದೇನೆ. ಇವರ ಶ್ರಮವೇ ನಮ್ಮ ಮಕರ ಸಂಕ್ರಾಂತಿಗೆ ರಂಗು ತುಂಬುವುದು.

ಈ ಸ್ಟೋರಿಯನ್ನು ವರದಿ ಮಾಡುವಲ್ಲಿ ಸಹಾಯ ಮಾಡಿದ ಹೊಜೆಫಾ ಉಜ್ಜೈನಿ, ಸಮೀನಾ ಮಲಿಕ್ ಮತ್ತು ಜನಿಸಾರ್ ಶೇಖ್ ಅವರಿಗೆ ಲೇಖಕರು ಧನ್ಯವಾದಗಳನ್ನು ಅರ್ಪಿಸುತ್ತಾರೆ.

ಕವರ್ ಫೋಟೋ: ಖಮ್ರೂಮ್ ನಿಸಾ ಬಾನು ಪ್ಲಾಸ್ಟಿಕ್ ಗಾಳಿಪಟಗಳ ತಯಾರಿಯ ಕೆಲಸ ಮಾಡುತ್ತಾರೆ, ಅದು ಈಗ ಜನಪ್ರಿಯ ಮಾದರಿಗಿದೆ. ಈ ಫೋಟೊ ಪ್ರತಿಷ್ಠಾ ಪಾಂಡ್ಯರ ಕ್ಲಿಕ್.

ಅನುವಾದ: ಶಂಕರ. ಎನ್. ಕೆಂಚನೂರು

Pratishtha Pandya

प्रतिष्ठा पांड्या, पारी में बतौर वरिष्ठ संपादक कार्यरत हैं, और पारी के रचनात्मक लेखन अनुभाग का नेतृत्व करती हैं. वह पारी’भाषा टीम की सदस्य हैं और गुजराती में कहानियों का अनुवाद व संपादन करती हैं. प्रतिष्ठा गुजराती और अंग्रेज़ी भाषा की कवि भी हैं.

की अन्य स्टोरी Pratishtha Pandya
Photographs : Umesh Solanki

उमेश सोलंकी एक फोटोग्राफ़र, वृतचित्र निर्माता और लेखक हैं. उन्होंने पत्रकारिता में परास्नातक किया है और संप्रति अहमदाबाद में रहते हैं. उन्हें यात्रा करना पसंद है और उनके तीन कविता संग्रह, एक औपन्यासिक खंडकाव्य, एक उपन्यास और एक कथेतर आलेखों की पुस्तकें प्रकाशित हैं. उपरोक्त रपट भी उनके कथेतर आलेखों की पुस्तक माटी से ली गई है जो मूलतः गुजराती में लिखी गई है.

की अन्य स्टोरी Umesh Solanki
Illustration : Anushree Ramanathan and Rahul Ramanathan

अनुश्री रामनाथन और राहुल रामनाथन, अहमदाबाद के आनंद निकेतन स्कूल (सैटेलाइट) में पढ़ते हैं. अनुश्री कक्षा 7 की छात्रा हैं और राहुल कक्षा 10 में हैं. उन्हें पारी की तमाम स्टोरी का इलस्ट्रेशन करना बहुत पसंद है.

की अन्य स्टोरी Anushree Ramanathan and Rahul Ramanathan
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru