ಅವರು ಆ ಬಾವುಟವನ್ನು ಈಗಲೂ ತಹಸಿಲ್ ಕಚೇರಿಯಲ್ಲಿ ಜೋಪಾನ ಮಾಡಿ ಇರಿಸಿದ್ದಾರೆ. 1942ರ ಆಗಸ್ಟ್ 18ರಂದು ಈ ಬಾವುಟವನ್ನು ಹಾರಿಸುವ ಮೂಲಕ ಈ ದಿನ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆ ಬ್ರಿಟಿಷ್ ಸರ್ಕಾರದಿಂದ ಸ್ವತಂತ್ರ ಎಂದು ಘೋಷಿಸಿದ್ದರು. ಈ ಘಟನೆಯಲ್ಲಿ ಮುಹಮ್ಮದಾಬಾದ್‌ನ ತಹಶೀಲ್ದಾರ್ ಆ ಗುಂಪಿನ ಮೇಲೆ ಗುಂಡು ಹಾರಿಸಿದ ಕಾರಣ ಅಂದು ಶೇರ್‌ಪುರ್‌ ಗ್ರಾಮದ ಎಂಟು ಮಂದಿ ಮರಣ ಹೊಂದಿದ್ದರು. ಆ ಘಟನೆಯಲ್ಲಿ ಕೊಲ್ಲಲ್ಪಟ್ಟವರಲ್ಲಿ ಹೆಚ್ಚಿನವರು ಕಾಂಗ್ರೆಸ್ಸಿಗರಾಗಿದ್ದರು. ಶಿವಪೂಜನ್ ರಾಯ್ ನೇತೃತ್ವದಲ್ಲಿ‌ ಇವರೆಲ್ಲರೂ ಮಹಮ್ಮದಾಬಾದ್‌ನ ತಹಸಿಲ್ ಭವನದ ಮೇಲೆ ತ್ರಿವರ್ಣವನ್ನು ಹಾರಿಸಲು ಪ್ರಯತ್ನಿಸುತ್ತಿದ್ದಾಗ ಈ ವ್ಯಕ್ತಿಗಳಿಗೆ ಗುಂಡು ಹಾರಿಸಲಾಯಿತು.

ಈ ಘಟನೆಯು ಜಿಲ್ಲೆಯಲ್ಲಿ ಈಗಾಗಲೇ ಬ್ರಿಟಿಷರ ವಿರುದ್ಧ ಕುದಿಯುತ್ತಿದ್ದ ಆಕ್ರೋಶವನ್ನು ಭುಗಿಲೇಳುವಂತೆ ಮಾಡಿತು, ಈ ಘಟನೆ ಅವರನ್ನು ಮತ್ತಷ್ಟು ಕೆರಳಿಸಿತು. ಆಗಸ್ಟ್ 10ರಂದು ಬ್ರಿಟಿಷರು ಇಲ್ಲಿನ 129 ನಾಯಕರ ವಿರುದ್ಧ ಬಂಧನದ ವಾರಂಟ್ ಹೊರಡಿಸಿದ್ದರು. ಆಗಸ್ಟ್ 19ರ ಹೊತ್ತಿಗೆ, ಸ್ಥಳೀಯ ಜನರು ಬಹುತೇಕ ಸಂಪೂರ್ಣ ಗಾಜೀಪುರವನ್ನು ಆಕ್ರಮಿಸಿಕೊಂಡರು ಮತ್ತು ಮೂರು ದಿನಗಳ ಕಾಲ ಇಲ್ಲಿ ಸರ್ಕಾರವನ್ನು ನಡೆಸಿದರು.

ಬ್ರಿಟಿಷರು ಇದಕ್ಕೆ ಪ್ರತಿಕ್ರಿಯೆಯಾಗಿ ಜಿಲ್ಲಾ ಗೆಜೆಟಿನಲ್ಲಿ ಬರೆದಿರುವಂತೆ "ಇದೊಂದು ಭಯೋತ್ಪಾದಕರ ಆಡಳಿತವಾಗಿತ್ತು." ಶೀಘ್ರದಲ್ಲೇ, "ಹಳ್ಳಿಗಳು ನಾಶವಾದವು, ಲೂಟಿ ಮಾಡಲ್ಪಟ್ಟವು ಮತ್ತು ಅಗ್ನಿಸ್ಪರ್ಶ ಸಂಭವಿಸಿದವು". ಕ್ವಿಟ್ ಇಂಡಿಯಾ ಚಳವಳಿಯ ಪ್ರತಿಭಟನಾಕಾರರನ್ನು ಸೇನೆ ಮತ್ತು  ಕುದುರೆ ಮೇಲೇರಿ ಬಂದ ಪೊಲೀಸರು ಚೆಲ್ಲಾಪಿಲ್ಲಿ ಮಾಡಿದರು. ಮುಂದಿನ ಕೆಲವು ದಿನಗಳಲ್ಲಿ ಅವರು ಜಿಲ್ಲೆಯಾದ್ಯಂತ ಸುಮಾರು 150 ಜನರನ್ನು ಗುಂಡಿಕ್ಕಿ ಕೊಂದರು. ಅಧಿಕಾರಿಗಳು ಮತ್ತು ಪೊಲೀಸರು ಇಲ್ಲಿನ ನಾಗರಿಕರಿಂದ 35 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಸುಮಾರು 74 ಗ್ರಾಮಗಳು ಸುಟ್ಟುಹೋಗಿವೆ. ಗಾಜೀಪುರದ ಜನರ ಮೇಲೆ ಒಟ್ಟಾಗಿ 4.5 ಲಕ್ಷ ರೂ.ಗಳ ದಂಡವನ್ನು ವಿಧಿಸಲಾಗಿತ್ತು, ಅದು ಆ ಸಮಯಕ್ಕೆ ಬಹಳ ದೊಡ್ಡ ಮೊತ್ತವಾಗಿತ್ತು.

ಅಧಿಕಾರಿಗಳು ಶಿಕ್ಷೆಗಾಗಿ ಶೇರ್‌ಪುರವನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಿಕೊಂಡರು. ಇಲ್ಲಿನ ಅತ್ಯಂತ ಹಿರಿಯ ದಲಿತರಾದ ಹರಿ ಶರಣ್ ರಾಮ್ ಆ ದಿನ ನೆನಪಿಸಿಕೊಳ್ಳುತ್ತಾರೆ: “ಮನುಷ್ಯರನ್ನು ಬಿಡಿ, ಆ ದಿನ ಹಳ್ಳಿಯಲ್ಲಿ ಒಂದು ಹಕ್ಕಿ ಕೂಡ ಉಳಿದಿರಲಿಲ್ಲ. ಓಡಬಲ್ಲವರು ಓಡಿಹೋದರು. ಲೂಟಿ ಅಡೆತಡೆಯಿಲ್ಲದೆ ಮುಂದುವರಿಯಿತು.” ಆದರೂ, ಅವರಿಗೆ ಗಾಜೀಪುರಕ್ಕೆ ಒಟ್ಟಾರೆಯಾಗಿ ಪಾಠ ಕಲಿಸಲೇಬೇಕಾಗಿತ್ತು. 1850ರ ದಶಕದಲ್ಲಿ ಸ್ಥಳೀಯರು ಇಂಡಿಗೊ ಕೃಷಿಕರ ಮೇಲೆ ದಾಳಿ ಮಾಡಿದಾಗ ಬ್ರಿಟಿಷ್ ವಿರೋಧಿ ದಂಗೆಗಳ ದಾಖಲೆಯನ್ನು ಜಿಲ್ಲೆಯು ಹೊಂದಿತ್ತು. ಈ ಬಾರಿ ಲಾಠಿ ಮತ್ತು ಗುಂಡುಗಳ ಮೂಲಕ ಪಾಠ ಕಲಿಸಿ ಬ್ರಿಟಿಷರು ತಮ್ಮ ಹಳೇ ಬಾಕಿಯನ್ನೂ ತೀರಿಸಿಕೊಂಡರು .

PHOTO • P. Sainath

ಕೆಲವು ಹುತಾತ್ಮರ ಸಮಿತಿಗಳನ್ನು 'ಶಾಹೀದ್ ಪುತ್ರ' ನಿಯಂತ್ರಿಸುತ್ತದೆ

ಮುಹಮ್ಮದಾಬಾದ್‌ನ ತಹಸಿಲ್ ಕಚೇರಿ ಇಂದಿಗೂ ರಾಜಕೀಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿಗೆ ಬಂದವರ ಪಟ್ಟಿಯಲ್ಲಿ ಭಾರತದ ಪ್ರಧಾನ ಮಂತ್ರಿಯಾಗಿದ್ದ ಅಥವಾ ನಂತರ ಪ್ರಧಾನಿಯಾಗಿ ಆಯ್ಕೆಯಾದ ನಾಲ್ಕು ಜನರ ಹೆಸರುಗಳೂ ಸೇರಿವೆ. ಉತ್ತರ ಪ್ರದೇಶದ ಬಹುತೇಕ ಎಲ್ಲ ಮುಖ್ಯಮಂತ್ರಿಗಳು ಇಲ್ಲಿಗೆ ಬಂದಿದ್ದಾರೆ. ಈ ಜನರು ವಿಶೇಷವಾಗಿ ಆಗಸ್ಟ್ 18ರಂದು ಇಲ್ಲಿಗೆ ಬರುತ್ತಾರೆಂದು ಶಹೀದ್ ಸ್ಮಾರಕ ಸಮಿತಿಯ ಮುಖ್ಯಸ್ಥರಾಗಿರುವ ಲಕ್ಷ್ಮಣ್ ರಾಯ್ ನಮಗೆ ತಿಳಿಸಿದರು. ಈ ಸಮಿತಿಯು ತಹಸಿಲ್ ಕಚೇರಿಯಲ್ಲಿ ಎಂಟು ಹುತಾತ್ಮರ ಸ್ಮಾರಕವನ್ನು ನಡೆಸುತ್ತಿದೆ. ಪ್ರತಿಭಟನಾಕಾರರ ಧ್ವಜವನ್ನು ಅವರು ನಮಗೆ ತೋರಿಸುತ್ತಾರೆ, ಅದು ಸ್ವಲ್ಪ ಮಟ್ಟಿಗೆ ಹರಿದಿದೆಯಾದರೂ, ಅದನ್ನು ಜೋಪಾನ ಮಾಡಿ ಇಡಲಾಗಿದೆ. ಅವರು ಹೆಮ್ಮೆಯಿಂದ ವಿವರಿಸುತ್ತಾರೆ, “ವಿಐಪಿಗಳು ಇಲ್ಲಿಗೆ ಬಂದು ಧ್ವಜವನ್ನು ಪೂಜಿಸುತ್ತಾರೆ. ಇಲ್ಲಿಗೆ ಬರುವ ಯಾವುದೇ ವಿಐಪಿ ಖಂಡಿತವಾಗಿಯೂ ಅದನ್ನು ಪೂಜಿಸುತ್ತಾರೆ."

ಇಂತಹ ಪೂಜೆಯಿಂದ ಶೇರ್‌ಪುರಕ್ಕೆ ಹೆಚ್ಚಿನ ಲಾಭವೇನೂ ಆಗಿಲ್ಲ. ವರ್ಗ, ಜಾತಿ, ಕಾಲ ಮತ್ತು ವ್ಯವಹಾರವು ಅದರ ಸ್ವಾತಂತ್ರ್ಯ ಹೋರಾಟ ವೀರರ ತ್ಯಾಗದ ನೆನಪುಗಳನ್ನು ಬಣ್ಣಿಸುತ್ತದೆ. "ಎಂಟು ಹುತಾತ್ಮರಿದ್ದರು" ಎಂದು ಇಲ್ಲಿ ಒಂದು ಸರ್ಕಾರೇತರ ಸಂಸ್ಥೆಯ ಕೆಲಸಗಾರ ಹೇಳುತ್ತಾರೆ. "ಆದರೆ ಹುತಾತ್ಮರಿಗಾಗಿ 10 ಸ್ಮಾರಕ ಸಮಿತಿಗಳು ಇರಬಹುದು." ಇವುಗಳಲ್ಲಿ ಕೆಲವು ಅಧಿಕೃತ ಅನುದಾನದೊಂದಿಗೆ ವಿವಿಧ ರೀತಿಯ ಸಂಸ್ಥೆಗಳನ್ನು ನಡೆಸುತ್ತವೆ. ಈ ಸ್ಥಳಕ್ಕೆ ವಿಶಿಷ್ಟವಾದ ಪದದಿಂದ ಕರೆಯಲ್ಪಡುವ ಹೆಸರಿನ ಸಂಸ್ಥೆಯಾದ ಹುತಾತ್ಮರ ಮಕ್ಕಳು - ಶಾಹೀದ್ ಪುತ್ರ - ಅವುಗಳಲ್ಲಿ ಕೆಲವನ್ನು ನಿಯಂತ್ರಿಸುತ್ತದೆ.

ಪೂಜೆಯೊಂದಿಗೆ ಭರವಸೆಗಳನ್ನು ಸಹ ನೀಡಲಾಗುತ್ತದೆ. ಸುಮಾರು 21,000 ಜನಸಂಖ್ಯೆ ಹೊಂದಿರುವ ಈ ದೊಡ್ಡ ಹಳ್ಳಿಯಾದ ಶೇರ್‌ಪುರದಲ್ಲಿ ಬಾಲಕಿಯರ ಪದವಿ ಕಾಲೇಜು ತೆರೆಯಲಾಗುವುದು ಎಂಬುದು ಅಂತಹ ಭರವಸೆಗಳಲ್ಲಿ ಒಂದು. ಆದರೆ, ಇಲ್ಲಿರುವ ಪ್ರತಿ ಐದು ಮಹಿಳೆಯರಲ್ಲಿ ನಾಲ್ವರು ಅನಕ್ಷರಸ್ಥರಾಗಿರುವುದರಿಂದ, ಈ ಕಲ್ಪನೆಯು ಸ್ಥಳೀಯರನ್ನು ಹೆಚ್ಚು ರೋಮಾಂಚನಗೊಳಿಸದೆ ಹೋಗಿರಬಹುದು.

ಶೇರ್‌ಪುರದ ಜನರ ಬಲಿದಾನ ಯಾವ ಕುರಿತಾಗಿತ್ತು? ಇಲ್ಲಿನ ಜನರ ಬೇಡಿಕೆ ಏನು? ಈ ಪ್ರಶ್ನೆಗಳಿಗೆ ನೀವು ಹೇಗೆ ಉತ್ತರಿಸುತ್ತೀರಿ ಎಂಬುದು ನಿಮ್ಮ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಅಧಿಕೃತವಾಗಿ ಗುರುತಿಸಲ್ಪಟ್ಟ ಎಂಟು ಹುತಾತ್ಮರು ಭೂಮಿಹಾರ್ ಸಮುದಾಯದವರು. ಬ್ರಿಟಿಷರ ಭಯೋತ್ಪಾದನೆ ವಿರುದ್ಧ ಅವರ ಧೈರ್ಯ ಶ್ಲಾಘನೀಯ. ಆದರೆ, ಇವರಂತೆಯೇ ಕಡಿಮೆ ಶಕ್ತಿಶಾಲಿ ಸಮುದಾಯಗಳಿಗೆ ಸೇರಿದವರು ವಿವಿಧ ಸಮಯಗಳಲ್ಲಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಅವರನ್ನು ಈ ವಿಷಯದಲ್ಲಿ ಒಂದೇ ರೀತಿ ನೆನಪಿಸಿಕೊಳ್ಳಲಾಗುವುದಿಲ್ಲ. ಆಗಸ್ಟ್ 18ರ ಮೊದಲು ಮತ್ತು ನಂತರ ಅನೇಕ ಹೋರಾಟಗಳು ನಡೆದವು. ಉದಾಹರಣೆಗೆ, ಆಗಸ್ಟ್ 14ರಂದು ನಂದಗಂಜ್ ರೈಲ್ವೆ ನಿಲ್ದಾಣವನ್ನು ಆಕ್ರಮಿಸಿಕೊಂಡ 50 ಜನರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಇದಲ್ಲದೆ ಆಗಸ್ಟ್ 19 ಮತ್ತು 21ರ ನಡುವೆ ಪೊಲೀಸರು ಇದರ ಮೂರು ಪಟ್ಟು ಹೆಚ್ಚು ಜನರನ್ನು ಕೊಂದಿದ್ದಾರೆ.

PHOTO • P. Sainath

ಶೇರ್‌ಪುರದಲ್ಲಿನ (ಎಡ) ಹುತಾತ್ಮರ ಸ್ಮಾರಕ, ಶೇರ್‌ಪುರದಲ್ಲಿರುವ (ಬಲ) ಹುತಾತ್ಮರ ಸ್ಮಾರಕದ ಪ್ರವೇಶದ್ವಾರದಲ್ಲಿರುವ ಫಲಕ

ಹಾಗಿದ್ದರೆ ಜನರು ಯಾವ ವಿಷಯಕ್ಕಾಗಿ ಸತ್ತರು? "ಅವರಿಗೆ ಸ್ವಾತಂತ್ರ್ಯದ ಹೊರತಾಗಿ ಯಾವುದೇ ಬೇಡಿಕೆ ಇರಲಿಲ್ಲ" ಎಂದು ಮುಹಮ್ಮದಾಬಾದ್‌ನ ಇಂಟರ್ ಕಾಲೇಜಿನ ಪ್ರಾಂಶುಪಾಲ ಕೃಷ್ಣ ದೇವ ರಾಯ್ ಹೇಳುತ್ತಾರೆ. ಶೇರ್‌ಪುರ ಅಥವಾ ಇತರ ಸ್ಥಳಗಳ ಭೂಮಿಹಾರ್ ಜಮೀನ್ದಾರರಲ್ಲಿ ಹೆಚ್ಚಿನವರು ಇದನ್ನು ನಂಬುತ್ತಾರೆ. 1947ರಲ್ಲಿ ಬ್ರಿಟಿಷರು ನಿರ್ಗಮಿಸಿದ ನಂತರ ಈ ವಿಷಯವು ಕೊನೆಗೊಂಡಿತು.

ಪರಿಶಿಷ್ಟ ಜಾತಿಗೆ ಸೇರಿದವರಾದ ಶೇರ್‌ಪುರದ ನಿವಾಸಿ ಬಾಲ್ ಮುಕುಂದ್ ಇದನ್ನು ಇನ್ನೊಂದು ರೀತಿ ವಿವರಿಸುತ್ತಾರೆ. ಆ ಸಮಯದಲ್ಲಿ  ಅವರೊಬ್ಬ ಯುವಕನಾಗಿದ್ದರು. ಅವರು ಅವರ ಸಹವರ್ತಿ ಸಹವರ್ತಿ ದಲಿತರು ಮತ್ತೊಂದು ಕಾರ್ಯಸೂಚಿಯನ್ನು ಹೊಂದಿದ್ದರು. "ಆ ಸಮಯದಲ್ಲಿ ನಾವು ಬಹಳ ಉತ್ಸುಕರಾಗಿದ್ದೆವು" ಎಂದು ಅವರು ಹೇಳುತ್ತಾರೆ. "ನಮಗೆ ಜಮೀನು ದೊರೆಯುತ್ತದೆಂದು ಭಾವಿಸಿದ್ದೆವು" 1930ರ ದಶಕದಲ್ಲಿ ಸಕ್ರಿಯವಾದ ಕಿಸಾನ್ ಸಭಾ ಆಂದೋಲನ ‌ನಂತರ ಮತ್ತೆ ಆ ಭರವಸೆಗಳನ್ನು ಹುಟ್ಟುಹಾಕಿತು. 1952ರಲ್ಲಿ ಉತ್ತರ ಪ್ರದೇಶ ಜಮೀನ್ದಾರಿ ನಿರ್ಮೂಲನೆ ಮತ್ತು ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದಾಗ ಆ ಸಂಭ್ರಮ ಮತ್ತೆ ಚಿಗುರೊಡೆಯಿತು.

ಆದರೆ ಅದು ಹೆಚ್ಚು ದಿನ ಉಳಿಯಲಿಲ್ಲ

ಗ್ರಾಮದ ಎಲ್ಲಾ 3,500 ದಲಿತರೂ ಭೂರಹಿತರು. "ಕೃಷಿ ಮಾಡಲು ಭೂಮಿ?" ಎಂದು ಸ್ಥಳೀಯ ದಲಿತ ಸಮಿತಿಯ ರಾಧೇಶ್ಯಾಮ್ ಕೇಳುತ್ತಾರೆ. "ನಮ್ಮ ಮನೆಗಳು ಸಹ ನಮ್ಮ ಹೆಸರಿನಲ್ಲಿಲ್ಲ." ಭೂ ಹೊಂದಾಣಿಕೆ ಕಾಯ್ದೆಯ ಸಂಪೂರ್ಣ ಅನುಷ್ಠಾನದ 35 ವರ್ಷಗಳ ನಂತರವೂ ಇದೇ ಪರಿಸ್ಥಿತಿಯಿದೆ. ಸ್ವಾತಂತ್ರ್ಯ ಖಂಡಿತವಾಗಿಯೂ ವಿಭಿನ್ನ ರೀತಿಯ ಪ್ರಯೋಜನವನ್ನು ತಂದಿತು. ಆದರೆ ಕೆಲವು ಜನರಿಗೆ ಮಾತ್ರ. ಭೂಮಿಹಾರ್‌ಗಳು ತಾವು ಉಳುತ್ತಿದ್ದ ಭೂಮಿಯ ಹಕ್ಕುಗಳನ್ನು ಪಡೆದರು. ಭೂರಹಿತ ಕೆಳಜಾತಿಗಳು ಮೊದಲಿದ್ದ ರೀತಿಯಲ್ಲಿಯೇ ಉಳಿದಿವೆ. "ನಾವು ಸಹ ಇತರರಂತೆ ಬದುಕಬಹುದೆಂದು ಭಾವಿಸಿದ್ದೆವು, ಉಳಿದವರೊಂದಿಗೆ ನಮ್ಮ ಸ್ಥಾನವೂ ಸಮನಾಗಿರುತ್ತದೆಯೆಂದು ಭಾವಿಸಿದ್ದೆವು" ಎಂದು ಹರಿ ಶರಣ್ ರಾಮ್ ಹೇಳುತ್ತಾರೆ.

“We thought there would be some land for us,” says Bal Mukund, a Dalit who lives in Sherpur. His excitement was short-lived
PHOTO • P. Sainath

"ನಮಗೂ ಒಂದಷ್ಟು ಭೂಮಿ ಸಿಗಬಹುದೆಂದು ನಾವು ಭಾವಿಸಿದ್ದೆವು" ಎಂದುಶೇರ್‌ಪುರ ನಿವಾಸಿ ದಲಿತ ಬಾಲ್ ಮುಕುಂದ್ ಹೇಳುತ್ತಾರೆ. ಅವರ ಸಂಭ್ರಮ ಅಲ್ಪಾಯುಷಿಯಾಗಿತ್ತು

ಏಪ್ರಿಲ್ 1975ರಲ್ಲಿ, ಅವರಿಗೆ ಅವರ ಸ್ಥಾನವನ್ನು ತೋರಿಸಲಾಯಿತು. ಬ್ರಿಟಿಷರು ಈ ಹಳ್ಳಿಯನ್ನು ಸುಟ್ಟು 33 ವರ್ಷಗಳ ನಂತರ ದಲಿತ ಕೇರಿ ಮತ್ತೆ ಸುಟ್ಟುಹೋಯಿತು. ಈ ಬಾರಿ ಬೆಂಕಿ ಹಚ್ಚಿದವರು ಭೂಮಿಹಾರ್‌ಗಳು. "ಆಗ ಕೂಲಿ ದರದ ಕುರಿತು ವಿವಾದಗಳಿದ್ದವು" ಎಂದು ರಾಧೇಶ್ಯಾಮ್ ಹೇಳುತ್ತಾರೆ. "ಅವರ ಬಸ್ತಿ ಘಟನೆಯ ಬಗ್ಗೆ ನಮ್ಮ ಮೇಲೆ ಆರೋಪ‌ ಹೊರಿಸಲಾಗಿತ್ತು. ನನ್ನನ್ನು ನಂಬಿ, ನಾವು ಅತ್ತ ಅವರ ಮನೆ ಮತ್ತು ಹೊಲಗಳಲ್ಲಿ ಕೆಲಸ ಮಾಡುತ್ತಿರುವಾಗಲೇ ಅವರು ಇತ್ತ ನಮ್ಮ ಮನೆಗಳನ್ನು ಸುಡುವಲ್ಲಿ ನಿರತರಾಗಿದ್ದರು!” ಸುಮಾರು 100 ಮನೆಗಳು ಸುಟ್ಟುಹೋದವು. ಆದರೆ, ಶಹೀದ್ ಪುತ್ರರಲ್ಲಿ ಯಾರೊಬ್ಬರೂ ಇದರಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ.

"ಆಗ ಪಂಡಿತ್ ಬಹುಗುಣ ಮುಖ್ಯಮಂತ್ರಿಯಾಗಿದ್ದರು" ಎಂದು ದಲಿತ ಸಮಿತಿಯ ಮುಖ್ಯಸ್ಥ ಶಿವ ಜಗನ್ ರಾಮ್ ಹೇಳುತ್ತಾರೆ. "ಅವರು ಇಲ್ಲಿಗೆ ಬಂದು ಹೇಳಿದರು: 'ನಾವು ನಿಮಗಾಗಿ ನವದೆಹಲಿಯನ್ನು ಇಲ್ಲಿಯೇ ನಿರ್ಮಿಸುತ್ತೇವೆ'. ನಮ್ಮ ನವದೆಹಲಿಯನ್ನು ಚೆನ್ನಾಗಿ ನೋಡಿ. ಈ ಮುರಿದ ಗುಡಿಸಲಿನಲ್ಲನ್ನೂ ನಮ್ಮದೆಂದು ಹೇಳಿಕೊಳ್ಳಬಹುದಾದ ಯಾವುದೇ ಕಾಗದವನ್ನು ಕೂಡಾ ನಾವು ಹೊಂದಿಲ್ಲ. ಕೂಲಿ ಕುರಿತಾದ ಹೋರಾಟ ಈಗಲೂ ನಡೆಯುತ್ತಿದೆ. ಕೆಲಸಕ್ಕಾಗಿ ಬಿಹಾರಕ್ಕೆ ಹೋಗಬೇಕಾದಷ್ಟು ಕಡಿಮೆ ವೇತನವನ್ನು ಇಲ್ಲಿನ ಜನರು ಪಡೆಯುತ್ತಾರೆಂದು ನೀವು ಊಹಿಸಬಲ್ಲಿರಾ?

ಮೇಲ್ಜಾತಿಯವರೊಂದಿಗೆ ಅಥವಾ ಅಧಿಕಾರಿಗಳೊಂದಿಗೆ ಹೋರಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಉದಾಹರಣೆಗೆ, ಕಳೆದ 50 ವರ್ಷಗಳಲ್ಲಿ ಪೊಲೀಸರು ದಲಿತರನ್ನು ನಡೆಸಿಕೊಳ್ಳುವ ರೀತಿಯಲ್ಲಿ ಬದಲಾಗಿಲ್ಲ. ಕಾರ್ಕತ್‌ಪುರ ಗ್ರಾಮದ ಮುಸಹಾರ್ ದಲಿತ, ದೀನನಾಥ್ ವನವಾಸಿ ಈ ಎಲ್ಲವನ್ನು ಅನುಭವಿಸಿದ್ದಾರೆ. "ರಾಜಕೀಯ ಪಕ್ಷಗಳು ಜೈಲ್ ಭರೋ ಆಂದೋಲನ್ ಮಾಡಿದಾಗ ನಮ್ಮನ್ನು ಏನು ಮಾಡುತ್ತಾರೆನ್ನುವದು ನಿಮಗೆ ತಿಳಿದಿದೆಯೇ? ನೂರಾರು ಕಾರ್ಯಕರ್ತರನ್ನು ಬಂಧಿಸುತ್ತಾರೆ. ಗಾಜೀಪುರ ಜೈಲು ಸಂಪೂರ್ಣವಾಗಿ ತುಂಬುತ್ತದೆ. ನಂತರ ಪೊಲೀಸರು ಏನು ಮಾಡುತ್ತಾರೆ? ಅವರು ಕೈಗೆ ಸಿಕ್ಕ ಕೆಲವು ಮಸಹಾರ್‌ಗಳನ್ನು ಹಿಡಿಯುತ್ತಾರೆ. 'ದರೋಡೆಗಾಗಿ ಯೋಜಿಸುತ್ತಿದ್ದರು' ಎಂಬ ಆರೋಪ ಅವರ ಮೇಲೆ ಹೊರಿಸುತ್ತಾರೆ. ಈ ಮುಸಹಾರ್‌ಗಳನ್ನು ಜೈಲಿಗೆ ಕರೆದೊಯ್ಯಲಾಗುತ್ತದೆ, ಅಲ್ಲಿ ಅವರು ಜೈಲು ಭರೋ ಆಂದೋಲನದಲ್ಲಿ ಬಂಧಿಸಲ್ಪಟ್ಟವರ ಮಲ, ವಾಂತಿ ಮತ್ತು ಕಸವನ್ನು ಸ್ವಚ್ಛಗೊಳಿಸಬೇಕು. ಅದರ ನಂತರ ಅವರನ್ನು ಬಿಡುಗಡೆ ಮಾಡಲಾಗುತ್ತದೆ."

Fifty years into freedom, Sherpur reeks of poverty, deprivation and rigid caste hierarchies
PHOTO • P. Sainath

ಸ್ವಾತಂತ್ರ್ಯ ಬಂದು ಐವತ್ತು ವರ್ಷಗಳು ಕಳೆದಿವೆ, ಆದರೆ ಶೇರ್‌ಪುರ ಈಗಲೂ ಬಡತನ, ಅಭಾವ ಮತ್ತು ಜಾತಿ ತಾರತಮ್ಯವನ್ನು ಎದುರಿಸುತ್ತಿದೆ.

"ನಾವು 50 ವರ್ಷಗಳ ಹಿಂದಿನ ವಿಷಯ ಮಾತನಾಡುತ್ತಿಲ್ಲ" ಎಂದು ಗಗ್ರಾನ್ ಗ್ರಾಮದ ದಾಸುರಾಮ್ ವನವಾಸಿ ಹೇಳುತ್ತಾರೆ. ''ಇದು ಈಗಲೂ ನಡೆಯುತ್ತಿದೆ. ಕೆಲವು ಜನರು ಇದನ್ನು ಎರಡು ವರ್ಷಗಳ ಹಿಂದೆಯೂ ಅನುಭವಿಸಿದ್ದಾರೆ.” ಇತರ ರೀತಿಯ ಕಿರುಕುಳಗಳು ಸಹ ಅಲ್ಲಿವೆ. ದಾಸುರಾಮ್ ಹತ್ತನೇ ತರಗತಿಯನ್ನು ಮೊದಲ ಡಿವಿಷನ್‌ನಲ್ಲಿ ಪೂರ್ಣಗೊಳಿಸಿದ್ದರು, ಅಷ್ಟು ವಿದ್ಯೆ ಪಡೆದ ಕೆಲವೇ ಮುಸಾಹರ್‌ಗಳಲ್ಲಿ ಅವರೂ ಒಬ್ಬರಾಗಿದ್ದರು. ಅವರು ಉನ್ನತ ಜಾತಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಿಂದನೆಗಳನ್ನು ಸಹಿಸಲಾಗದೆ ಕಾಲೇಜನ್ನು ತೊರೆದರು. ವಿಪರ್ಯಾಸವೆಂದರೆ, ಆ ಇಂಟರ್ ಕಾಲೇಜು ಬಾಬು ಜಗಜೀವನ್ ರಾಮ್ ಅವರ ಹೆಸರನ್ನು ಹೊಂದಿದೆ.

ಶೇರ್‌ಪುರದಿಂದ ಹಿಂದಿರುಗುವಾಗ ನಮ್ಮ ಪಾದಗಳು ಕೆಸರಿನಲ್ಲಿ ಸಿಲುಕಿಕೊಂಡವು. ನಮಗೆ ಮುಂದುವರಿಯಲು ಸಾಧ್ಯವಾಗಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ದಲಿತ ಕೇರಿಯಿಂದ ಹೊರಬರುವುದು, ಹೋಗುವುದು ಬಹಳ ಕಷ್ಟಕರವಾಗುತ್ತದೆ. ಮಳೆಯಿಂದ ಮುಖ್ಯ ರಸ್ತೆಗೆ ಹಾನಿಯಾಗಿದೆ. ಬೀದಿಗಳಲ್ಲಿ ಮತ್ತು ಕಾಲುದಾರಿಗಳಲ್ಲಿ ಎಲ್ಲೆಡೆ ಕಸದ ರಾಶಿಗಳಿವೆ. "ಇದು  ನಮ್ಮ ನವದೆಹಲಿಗೆ ಹೆದ್ದಾರಿ" ಎಂದು ಶಿವ ಜಗನ್ ರಾಮ್ ಹೇಳುತ್ತಾರೆ.

"ಇಲ್ಲಿನ ದಲಿತರು ಸ್ವತಂತ್ರರಲ್ಲ" ಎಂದು ಅವರು ಹೇಳುತ್ತಾರೆ. "ಸ್ವಾತಂತ್ರ್ಯವಿಲ್ಲ, ಭೂಮಿಯಿಲ್ಲ, ಶಿಕ್ಷಣವಿಲ್ಲ, ಹಣವಿಲ್ಲ, ಉದ್ಯೋಗವಿಲ್ಲ, ಆರೋಗ್ಯವಿಲ್ಲ, ಭರವಸೆ ಇಲ್ಲ. ನಮಗಿರುವ ಸ್ವಾತಂತ್ರ್ಯವೆಂದರೆ ಗುಲಾಮಗಿರಿ."

ಇದೆಲ್ಲದರ ನಡುವೆ, ತಹಸಿಲ್ ಕಚೇರಿಯಲ್ಲಿ, ಪೂಜೆಗಳು ಮುಂದುವರಿಯುತ್ತವೆ.

ಈ ಲೇಖನವು ಮೂಲತಃ ಆಗಸ್ಟ್ 25, 1997ರಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿತ್ತು .

ಈ ಸರಣಿಯ ಇನ್ನಷ್ಟು ಲೇಖನಗಳು ಇಲ್ಲಿವೆ:

‘ಸಾಲಿಹಾನ್’ ಸರಕಾರದ ಮೇಲೆ ಎರಗಿದಾಗ

ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 1

ಪಾನಿಮಾರದಲ್ಲಿನ ಸ್ವಾತಂತ್ರ್ಯ ಹೋರಾಟದ ಕಾಲಾಳುಗಳು - 2

ಲಕ್ಷ್ಮಿ ಪಾಂಡಾರ ಕೊನೆಯ ಯುದ್ಧ

ಒಂಬತ್ತು ದಶಕಗಳ ಅಹಿಂಸೆ

ಗೋದಾವರಿ: ಮತ್ತು ಪೊಲೀಸರು ಈಗಲೂ ಆಕ್ರಮಣಕ್ಕಾಗಿ ಕಾಯುತ್ತಿದ್ದಾರೆ

ಸೋನಾಖಾನ್: ವೀರ್ ನಾರಾಯಣ್ ಎರಡು ಬಾರಿ ನಿಧನರಾದಾಗ

ಕಲ್ಲಿಯಶ್ಸೆರಿಯಲ್ಲಿ ಸುಮುಕನ್‌ ಅವರನ್ನು ಹುಡುಕುತ್ತಾ…

ಕಲ್ಲಿಯಶ್ಶೆರಿ: 50ನೇ ವರ್ಷದಲ್ಲೂ ಹೋರಾಟ

ಅನುವಾದ: ಶಂಕರ ಎನ್. ಕೆಂಚನೂರು

पी. साईनाथ, पीपल्स ऑर्काइव ऑफ़ रूरल इंडिया के संस्थापक संपादक हैं. वह दशकों से ग्रामीण भारत की समस्याओं की रिपोर्टिंग करते रहे हैं और उन्होंने ‘एवरीबडी लव्स अ गुड ड्रॉट’ तथा 'द लास्ट हीरोज़: फ़ुट सोल्ज़र्स ऑफ़ इंडियन फ़्रीडम' नामक किताबें भी लिखी हैं.

की अन्य स्टोरी पी. साईनाथ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru