ಅದು ಕೊಲ್ಹಾಪುರ ಜಿಲ್ಲೆಯ ರಾಜಾರಾಮ್ ಸಕ್ಕರೆ ಕಾರ್ಖಾನೆ ಪ್ರದೇಶ. ಆ ದಿನ ಫೆಬ್ರವರಿ ತಿಂಗಳ ಸೆಕೆಯಿಂದ ಕೂಡಿದ್ದ ಮಧ್ಯಾಹ್ನವಾಗಿತ್ತು. ಕಾರ್ಖಾನೆಯ ಆವರಣದಲ್ಲಿರುವ ನೂರಾರು ಖೋಪ್ಯಾಗಳು (ಕಬ್ಬಿನ ಕಾರ್ಮಿಕರ ಗುಡಿಸಲುಗಳು) ಬಹುತೇಕ ಖಾಲಿಯಿದ್ದವು. ಇಲ್ಲಿಂದ ಒಂದು ಗಂಟೆಯ ಕಾಲ್ನಡಿಗೆಯ ವಡನಗೆ ಗ್ರಾಮದ ಬಳಿ ವಲಸೆ ಕಾರ್ಮಿಕರು ಕಬ್ಬು ಕತ್ತರಿಸುತ್ತಿದ್ದರು.

ಗುಡಿಸಲುಗಳ ಒಳಗಿನಿಂದ ಬರುತ್ತಿದ್ದ ಸದ್ದು ಮನೆಯೊಳಗೆ ಯಾರೋ ಇದ್ದಾರೆನ್ನುವುದನ್ನು ಸೂಚಿಸುತ್ತಿತ್ತು. ಆ ಸದ್ದನ್ನು ಅನುಸರಿಸಿ ಹೋದಾಗ ಅಲ್ಲಿ ಎದುರಾಗಿದ್ದು 12 ವರ್ಷದ ಸ್ವಾತಿ ಮಹಾರ್ನೋರ್‌ ಎನ್ನುವ ಬಾಲಕಿ. ಅವಳು ತನ್ನ ಕುಟುಂಬಕ್ಕಾಗಿ ಅಡುಗೆ ತಯಾರಿಸುವುದರಲ್ಲಿ ತೊಡಗಿಸಿಕೊಂಡಿದ್ದಳು. ದಣಿದಂತೆ ಕಾಣುತ್ತಿದ್ದ ಅವಳು ತನ್ನ ಕುಟುಂಬದ ಗುಡಿಸಲಿನಲ್ಲಿ ಕುಳಿತಿದ್ದಳು. ಅವಳ ಸುತ್ತ ಪಾತ್ರೆ ಪಡಗಗಳಿದ್ದವು.

“ನಾನು ಬೆಳಗ್ಗೆ 3 ಗಂಟೆಗೆ ಎದ್ದಿದ್ದೇನೆ” ಎನ್ನುತ್ತಾ ಆಕಳಿಸಿದಳು.

ಈ ಪುಟ್ಟ ಹುಡುಗಿ ಬೆಳಗಿನ ಜಾವ ಎದ್ದು ಎತ್ತಿನ ಗಾಡಿಯಲ್ಲಿ ತನ್ನ ಅಜ್ಜ ಮತ್ತು ಅಣ್ಣನೊಡನೆ ಕಬ್ಬಿನ ಹೊಲಕ್ಕೆ ಹೋಗಿದ್ದಳು.  ಮಹಾರಾಷ್ಟ್ರದ ಬಾವ್ಡಾ ತಾಲ್ಲೂಕಿನಲ್ಲಿ ಕಬ್ಬು ಕತ್ತರಿಸುವ ಕೆಲಸದಲ್ಲಿರುವ ತನ್ನ ಕುಟುಂಬಕ್ಕೆ ಸಹಾಯ ಮಾಡುವ ಸಲುವಾಗಿ ಅವಳು ಹೋಗಿದ್ದಳು. ಅವರ ಐದು ಸದಸ್ಯರ ಕುಟುಂಬಕ್ಕೆ ದಿನಕ್ಕೆ ಇಪ್ಪತೈದು ಮೊಲಿ (ಕಟ್ಟು) ಕಬ್ಬು ಕತ್ತರಿಸುವ ಗುರಿಯನ್ನು ನಿಗದಿಪಡಿಸಲಾಗಿದ್ದು ಈ ಗುರಿಯನ್ನು ತಲುಪಲು ಈ ಪುಟ್ಟ ಹುಡುಗಿ ಕೂಡಾ ಕುಟುಂಬದೊಡನೆ ಕೈಜೋಡಿಸಬೇಕಿದೆ. ಅವರು ಊಟಕ್ಕಾಗಿ ಹಿಂದಿನ ದಿನದ ರೊಟ್ಟಿ ಮತ್ತು ಬದನೆಕಾಯಿ ಪಲ್ಯವನ್ನು ಕಟ್ಟಿಕೊಂಡು ಹೋಗಿದ್ದರು.

ಅವರಲ್ಲಿ ಸ್ವಾತಿಯೊಬ್ಬಳು ಮಾತ್ರವೇ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಕಾರ್ಖಾನೆಯ ಆವರಣದಲ್ಲಿರುವ ತಮ್ಮ ಮನೆಗೆ ಆರು ಕಿಲೋಮೀಟರ್ ದೂರವನ್ನು ನಡೆದು ತಲುಪಿದ್ದಳು. “ಬಾಬಾ [ಅಜ್ಜ] ನನ್ನನ್ನು ಮನೆಗೆ ಬಿಟ್ಟು ಹೋದರು.” 15 ಗಂಟೆಗಳ ಕಾಲ ಕಬ್ಬು ಕಟಾವು ಮಾಡಿ ದಣಿದು ಹಸಿದಿರುವ ಕುಟುಂಬದ ಉಳಿದವರಿಗೆ ಊಟವನ್ನು ತಯಾರಿಸಲು ಅವಳು ಇತರರಿಗಿಂತ ಮುಂಚಿತವಾಗಿ ಮನೆಗೆ ಬಂದಿದ್ದಾಳೆ. "ನಾವು [ಕುಟುಂಬ] ಬೆಳಿಗ್ಗೆಯಿಂದ ಬರೀ ಒಂದು ಲೋಟ ಟೀ ಕುಡಿದಿದ್ದೇವೆ ಅಷ್ಟೇ" ಎನ್ನುತ್ತಾಳೆ ಸ್ವಾತಿ.

2022ರ ನವೆಂಬರ್‌ ತಿಂಗಳಿನಲ್ಲಿ ಬೀಡ್ ಜಿಲ್ಲೆಯ ಸಕುಂದವಾಡಿ ಗ್ರಾಮದಿಂದ ಕೊಲ್ಹಾಪುರಕ್ಕೆ ಬಂದ ಸ್ವಾತಿ ಅಂದಿನಿಂದಲೂ ಈ ಅಡುಗೆ ಕೆಲಸ ಮತ್ತು ಕಬ್ಬಿನ ಹೊಲದ ಕೆಲಸ ಮಾಡುತ್ತಿದ್ದಾಳೆ. ಅವರ ಕುಟುಂಬವು ಇಲ್ಲಿನ ಕಾರ್ಖಾನೆ ಆವರಣದಲ್ಲಿ ತಂಗಿದೆ. ಆಕ್ಸ್‌ ಫಾಮ್‌ ಹೊರತಂದ ಹ್ಯುಮನ್‌ ಕಾಸ್ಟ್‌ ಆಫ್‌ ಶುಗರ್‌ ಎನ್ನುವ 2020ರ ವರದಿಯ ಪ್ರಕಾರ ಮಹಾರಾಷ್ಟ್ರದ ಬಹುತೇಕ ವಲಸೆ ಕಾರ್ಮಿಕರು ಟಾರ್ಪಲಿನ್‌ ಹೊದಿಕೆಯ ಗುಡಿಸಲುಗಳಿರುವ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಇಂತಹ ಕಾಲೋನಿಗಳಲ್ಲಿ ಸಾಮಾನ್ಯವಾಗಿ ನೀರು, ವಿದ್ಯುತ್‌ ಮತ್ತು ಶೌಚಾಲಯದ ವ್ಯವಸ್ಥೆಯನ್ನು ಹೊಂದಿರುವುದಿಲ್ಲ.

Khopyas (thatched huts) of migrant sugarcane workers of Rajaram Sugar Factory in Kolhapur district
PHOTO • Jyoti

ಕೊಲ್ಹಾಪುರ ಜಿಲ್ಲೆಯ ರಾಜಾರಾಮ್ ಸಕ್ಕರೆ ಕಾರ್ಖಾನೆಯ ವಲಸೆ ಕಬ್ಬಿನ ಕಾರ್ಮಿಕರ ಖೋಪ್ಯಾಗಳು (ಗುಡಿಸಲುಗಳು)

“ನನಗೆ ಕಬ್ಬು ಕತ್ತರಿಸುವ ಕೆಲಸ ಇಷ್ಟವಿಲ್ಲ. ನನಗೆ ಊರಿನಲ್ಲಿರುವುದು ಇಷ್ಟ. ಅಲ್ಲಿದ್ದರೆ ನಾನು ಶಾಲೆಗೆ ಹೋಗಬಹುದು” ಎನ್ನುವ ಸ್ವಾತಿ ಪಟೋಡಾ ತಾಲ್ಲೂಕಿನ ಸಕುಂದ್ವಾಡಿ ಗ್ರಾಮದ ಜಿಲ್ಲಾ ಪರಿಷತ್ ಮಾಧ್ಯಮಿಕ ಶಾಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿ. ಆಕೆಯ ತಮ್ಮ ಕೃಷ್ಣ ಅದೇ ಶಾಲೆಯಲ್ಲಿ 3ನೇ ತರಗತಿಯಲ್ಲಿ ಓದುತ್ತಿದ್ದಾನೆ.

ಸ್ವಾತಿಯ ಪೋಷಕರು ಮತ್ತು ಅಜ್ಜನಂತೆ, ಸುಮಾರು 500 ವಲಸೆ ಕಾರ್ಮಿಕರು ಕಬ್ಬು ಕಡಿಯುವ ಹಂಗಾಮಿನ ಕೆಲಸಕ್ಕಾಗಿ ರಾಜಾರಾಮ್ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡಲು ಗುತ್ತಿಗೆಗೆ ನೇಮಕಗೊಂಡಿದ್ದಾರೆ. ಅವರೊಂದಿಗೆ ಅವರ ಚಿಕ್ಕ ಮಕ್ಕಳೂ ಇದ್ದಾರೆ. "ಮಾರ್ಚ್‌ ತಿಂಗಳಿನಲ್ಲಿ [2022] ನಾವು ಸಾಂಗ್ಲಿಯಲ್ಲಿದ್ದೆವು" ಎಂದು ಸ್ವಾತಿ ಹೇಳುತ್ತಾಳೆ. ಅವಳು ಮತ್ತು ಕೃಷ್ಣ ಇಬ್ಬರೂ ವರ್ಷದಲ್ಲಿ ಸುಮಾರು ಐದು ತಿಂಗಳು ಶಾಲೆಯಿಂದ ಹೊರಗುಳಿಯುತ್ತಾರೆ.

“ಬಾಬಾ [ಅಜ್ಜ] ಪ್ರತಿ ವರ್ಷ ಮಾರ್ಚ್‌ ತಿಂಗಳಿನಲ್ಲಿ ನಮ್ಮನ್ನು ಊರಿಗೆ ಕರೆದೊಯ್ಯುತ್ತಾರೆ. ಅಲ್ಲಿ ಪರೀಕ್ಷೆ ಬರೆದು ಮತ್ತೆ ನಮ್ಮ ಹೆತ್ತವರಿಗೆ ಸಹಾಯ ಮಾಡಲು ಮರಳುತ್ತೇವೆ” ಎನ್ನುತ್ತಾ ಸ್ವಾತಿ ತಾನು ಮತ್ತು ತನ್ನ ತಮ್ಮ ಶಾಲೆಯಿಂದ ಹೊರಗುಳಿಯದಿರಲು ಮಾಡುವ ಪ್ರಯತ್ನಗಳನ್ನು ವಿವರಿಸುತ್ತಾಳೆ.

ನವೆಂಬರ್‌ ತಿಂಗಳಿನಿಂದ ಮಾರ್ಚ್‌ ತನಕ ಶಾಲೆ ರಜೆ ಹಾಕುವುದರಿಂದಾಗಿ ಕೊನೆಯ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವುದು ಅವರಿಗೆ ಕಷ್ಟವಾಗುತ್ತದೆ. “ಮರಾಠಿ, ಇತಿಹಾಸದಂತಹ ವಿಷಯಗಳನ್ನು ನಾವು ಚೆನ್ನಾಗಿ ಬರೆಯುತ್ತೇವೆ. ಆದರೆ ಗಣಿತವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ” ಎನ್ನುತ್ತಾಳೆ ಸ್ವಾತಿ. ಊರಿನಲ್ಲೇ ಉಳಿದ ಆಕೆಯ ಸ್ನೇಹಿತರು ಸಹಾಯ ಮಾಡುತ್ತಾರಾದರೂ ತಪ್ಪಿಸಿಕೊಂಡ ತರಗತಿಗಳನ್ನು ಸರಿದೂಗಿಸಲು ಅದು ಸಾಕಾಗುವುದಿಲ್ಲ.

“ಏನು ಮಾಡೋಕೆ ಸಾಧ್ಯ? ನಮ್ಮ ಅಪ್ಪ ಅಮ್ಮ ಕೆಲಸ ಮಾಡಲೇಬೇಕು” ಎನ್ನುತ್ತಾಳೆ ಸ್ವಾತಿ.

ಸ್ವಾತಿಯ ಪೋಷಕರಾದ 35 ವರ್ಷದ ವರ್ಷಾ ಮತ್ತು 45 ವರ್ಷದ ಭಾವುಸಾಹೇಬ್ ಊರಿನಲ್ಲಿರುವ ತಿಂಗಳುಗಳಲ್ಲಿ (ಜೂನ್-ಅಕ್ಟೋಬರ್), ಸಕುಂದ್‌ವಾಡಿ ಸುತ್ತಮುತ್ತಲಿನ ಹೊಲಗಳಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. "ಮಳೆಗಾಲದಲ್ಲಿ ಕಪಾನಿ [ಕೊಯ್ಲು] ಯವರೆಗೆ, ವಾರದಲ್ಲಿ 4-5 ದಿನಗಳ ಕಾಲ ಹೊಲಗಳಲ್ಲಿ ಕೆಲಸ ಸಿಗುತ್ತದೆ" ಎಂದು ವರ್ಷಾ ಹೇಳುತ್ತಾರೆ.

ಕುಟುಂಬವು ಧಂಗರ್ ಸಮುದಾಯಕ್ಕೆ ಸೇರಿದ್ದು, ಮಹಾರಾಷ್ಟ್ರದಲ್ಲಿ ಇದನ್ನು ಅಲೆಮಾರಿ ಬುಡಕಟ್ಟಿನಡಿ ಸೇರಿಸಲಾಗಿದೆ. ದಂಪತಿಗಳು ದಿನಕ್ಕೆ 350 ರೂ.ಗಳನ್ನು ಸಂಪಾದಿಸುತ್ತಾರೆ - ವರ್ಷಾ 150 ರೂ., ಭಾವುಸಾಹೇಬ್ 200 ರೂ. ತಮ್ಮ ಹಳ್ಳಿಯ ಕೆಲಸಗಳು ಅಲಭ್ಯವಾದಾಗ ಅವರು ಕಬ್ಬು ಕತ್ತರಿಸುವ ಕೆಲಸ ಹುಡುಕಿಕೊಂಡು ಗುಳೇ ಹೋಗುತ್ತಾರೆ.

Sugarcane workers transporting harvested sugarcane in a bullock cart
PHOTO • Jyoti

ಕಟಾವು ಮಾಡಿದ ಕಬ್ಬನ್ನು ಎತ್ತಿನ ಗಾಡಿಯಲ್ಲಿ ಸಾಗಿಸುತ್ತಿರುವ ಕಬ್ಬು ಕಾರ್ಮಿಕರು

*****

"6ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ" ' ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ಕಾಯ್ದೆ (ಆರ್‌ಟಿಇ) 2009 ಅನ್ನು ಕಡ್ಡಾಯಗೊಳಿಸುತ್ತದೆ. ಆದರೆ, ಸ್ವಾತಿ ಮತ್ತು ಕೃಷ್ಣ ಅವರಂತಹ ವಲಸೆ ಕಬ್ಬು ಕಾರ್ಮಿಕರ ಸುಮಾರು 0.13 ಮಿಲಿಯನ್ ಮಕ್ಕಳಿಗೆ (6-14 ವರ್ಷ ವಯಸ್ಸಿನವರು) ತಮ್ಮ ಹೆತ್ತವರೊಂದಿಗೆ ಇರುವಾಗ ಶಾಲಾ ಶಿಕ್ಷಣವನ್ನು ಪಡೆಯಲು ಸಾಧ್ಯವಿಲ್ಲ.

ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ, ಮಹಾರಾಷ್ಟ್ರ ಸರ್ಕಾರವು 'ಶಿಕ್ಷಣ ಖಾತರಿ ಕಾರ್ಡ್' (ಇಜಿಸಿ) ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಿತು. ಶಿಕ್ಷಣ ಹಕ್ಕು ಕಾಯ್ದೆ, 2009ಕ್ಕೆ 2015ರಲ್ಲಿ ಅಂಗೀಕರಿಸಿದ ನಿರ್ಣಯದ ಫಲಿತಾಂಶವಾಗಿ ಇಜಿಸಿ ಬಂದಿದೆ. ಮಕ್ಕಳು ಯಾವುದೇ ಅಡೆತಡೆಯಿಲ್ಲದೆ ತಾವಿರುವ ಹೊಸ ಸ್ಥಳದಲ್ಲಿ ಶಾಲಾ ಶಿಕ್ಷಣವನ್ನು ಮುಂದುವರಿಸಬಹುದು ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಕಾರ್ಡ್ ಹೊಂದಿದೆ. ಇದು ವಿದ್ಯಾರ್ಥಿಯ ಎಲ್ಲಾ ಶೈಕ್ಷಣಿಕ ವಿವರಗಳನ್ನು ಒಳಗೊಂಡಿದೆ ಮತ್ತು ಇದನ್ನು ಶಿಕ್ಷಕರು ಮಕ್ಕಳ ಹಳ್ಳಿಯ ಶಾಲೆಗಳಲ್ಲಿ ನೀಡುತ್ತಾರೆ.

ಬೀಡ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಅಶೋಕ್ ತಾಂಗ್ಡೆ, "ಮಗು ತಾನು ವಲಸೆ ಹೋಗುತ್ತಿರುವ ಜಿಲ್ಲೆಗೆ ಕಾರ್ಡನ್ನು ತನ್ನೊಂದಿಗೆ ಕೊಂಡೊಯ್ಯಬೇಕು" ಎಂದು ವಿವರಿಸುತ್ತಾರೆ. ಹೊಸ ಶಾಲೆಯ ಅಧಿಕಾರಿಗಳಿಗೆ ಕಾರ್ಡ್ ತೋರಿಸಿದರೆ ಸಾಕು, "ಪೋಷಕರು ಮತ್ತೆ ಪ್ರವೇಶ ಪ್ರಕ್ರಿಯೆ ಮಾಡಿಸುವ ಅಗತ್ಯವಿಲ್ಲ. ಮಗು ತನ್ನ ತರಗತಿಯಲ್ಲೇ ಮುಂದುವರೆಯಬಹುದು" ಎಂದು ಅವರು ಹೇಳುತ್ತಾರೆ.

ಅದರೆ, ವಾಸ್ತವದಲ್ಲಿ "ಇಲ್ಲಿಯವರೆಗೆ ಒಂದೇ ಒಂದು ಮಗುವಿಗೆ ಇಜಿಸಿ ಕಾರ್ಡ್ ನೀಡಲಾಗಿಲ್ಲ" ಎಂದು ಅಶೋಕ್ ಹೇಳುತ್ತಾರೆ. ಈ ಕಾರ್ಡನ್ನು ತನ್ನ ಊರಿನಲ್ಲಿ ಮಗು ದಾಖಲಾಗಿರುವ ಮತ್ತು ಒಂದು ಅವಧಿಗೆ ಹೋಗುವ ಶಾಲೆಯು ನೀಡಬೇಕು.

" ಜಿಲ್ಲಾ ಪರಿಷತ್ (ಜಿಪ) ಮಾಧ್ಯಮಿಕ ಶಾಲೆಯಲ್ಲಿನ ನಮ್ಮ ಶಿಕ್ಷಕರು ನನಗೆ ಅಥವಾ ನನ್ನ ಯಾವುದೇ ಸ್ನೇಹಿತರಿಗೆ ಅಂತಹ ಕಾರ್ಡುಗಳನ್ನು ನೀಡಿಲ್ಲ" ಎಂದು ಸ್ವಾತಿ ಹೇಳುತ್ತಾಳೆ.

ವಾಸ್ತವದಲ್ಲಿ, ಸ್ಥಳೀಯ ಜಿಲ್ಲಾ ಪಂಚಾಯತ್ ಮಾಧ್ಯಮಿಕ ಶಾಲೆ ಸಕ್ಕರೆ ಕಾರ್ಖಾನೆಯ ಬಳಿಯ ಸ್ಥಳದಿಂದ ಮೂರು ಕಿಲೋಮೀಟರ್ ದೂರದಲ್ಲಿದೆ, ಆದರೆ ಕೈಯಲ್ಲಿ ಕಾರ್ಡ್ ಇಲ್ಲದ ಕಾರಣ, ಸ್ವಾತಿ ಮತ್ತು ಕೃಷ್ಣ ಅಲ್ಲಿನ ತರಗತಿಗಳಿಗೆ ಹಾಜರಾಗಲು ಸಾಧ್ಯವಿಲ್ಲ.

ಆರ್ ಟಿ ಇ 2009ರ ಆದೇಶದ ಹೊರತಾಗಿಯೂ ವಲಸೆ ಕಬ್ಬು ಕಾರ್ಮಿಕರ ಸುಮಾರು 0.13 ಮಿಲಿಯನ್ ಮಕ್ಕಳಿಗೆ ತಮ್ಮ ಹೆತ್ತವರೊಂದಿಗೆ ಹೋದಾಗ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ

ವೀಡಿಯೊ ನೋಡಿ: ಶಾಲೆಯಿಂದ ವಂಚಿತರಾಗುತ್ತಿರುವ ವಲಸಿಗರ ಮಕ್ಕಳು

ಪುಣೆಯ ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಯೊಬ್ಬರು, "ಈ ಯೋಜನೆಯನ್ನು ಸಕ್ರಿಯವಾಗಿ ನಡೆಸಲಾಗುತ್ತಿದೆ. ವಲಸೆ ಹೋಗುವ ವಿದ್ಯಾರ್ಥಿಗಳಿಗೆ ಶಾಲಾ ಅಧಿಕಾರಿಗಳು ಕಾರ್ಡುಗಳನ್ನು ನೀಡುತ್ತಾರೆ." ಆದರೆ ಇಲ್ಲಿಯವರೆಗೆ ಕಾರ್ಡುಗಳನ್ನು ಪಡೆದ ಒಟ್ಟು ಮಕ್ಕಳ ಸಂಖ್ಯೆಯ ವಿವರವನ್ನು ಹಂಚಿಕೊಳ್ಳಲು ಕೇಳಿದಾಗ, "ಇದು ಪ್ರಸ್ತುತ ನಡೆಯುತ್ತಿರುವ ಸಮೀಕ್ಷೆ. ನಾವು ಇಜಿಸಿ ವಿವರಗಳನ್ನು ಕಲೆಹಾಕುತ್ತಿದ್ದೇವೆ ಇನ್ನಷ್ಟೇ ಅದನ್ನು ಒಟ್ಟುಗೂಡಿಸಬೇಕಿದೆ” ಎಂದರು. ‌

*****

“ನನಗೆ ಇಲ್ಲಿರುವುದು ಇಷ್ಟವಿಲ್ಲ” ಎನ್ನುತ್ತಾನೆ ಅರ್ಜುನ್‌ ರಜಪೂತ್.‌ ಹದಿನಾಲ್ಕು ವರ್ಷದ ಈ ಬಾಲಕ ಕೊಲ್ಹಾಪುರ ಜಿಲ್ಲೆಯ ಜಾದವವಾಡಿ ಪ್ರದೇಶದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ತನ್ನ ಕುಟುಂಬದೊಡನೆ ತಂಗಿದ್ದಾನೆ.

ಈತನ ಏಳು ಸದಸ್ಯರ ಕುಟುಂಬವು ಔರಂಗಾಬಾದ್ ಜಿಲ್ಲೆಯ ವಡ್ಗಾಂವ್ ಗ್ರಾಮದಿಂದ ಕೊಲ್ಹಾಪುರ-ಬೆಂಗಳೂರು ಹೆದ್ದಾರಿಯಲ್ಲಿರುವ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ವಲಸೆ ಬಂದಿದೆ. ಚಟುವಟಿಕೆಯಿಂದ ಕೂಡಿರುವ ಇಟ್ಟಿಗೆ ಗೂಡು ದಿನಕ್ಕೆ ಸರಾಸರಿ 25,000 ಇಟ್ಟಿಗೆಗಳನ್ನು ತಯಾರಿಸುತ್ತದೆ. ಹೆಚ್ಚಿನ ತಾಪಮಾನ ಮತ್ತು ದೈಹಿಕವಾಗಿ ಪ್ರಯಾಸಕರ ಕೆಲಸಗಳನ್ನು ಹೊಂದಿರುವ ಅತ್ಯಂತ ಅಸುರಕ್ಷಿತ ಕೆಲಸದ ವಾತಾವರಣವಿರುವ ದೇಶಗಳಲ್ಲಿ ಒಂದಾದ ಭಾರತದಲ್ಲಿ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ 10-23 ಮಿಲಿಯನ್ ಜನರಲ್ಲಿ ಅರ್ಜುನ್ ಕುಟುಂಬವೂ ಒಂದು. ಕೆಲಸದ ಹುಡುಕಾಟದಲ್ಲಿರುವವರ ಕೊನೆಯ ಆಶ್ರಯತಾಣವಾದ ಇಟ್ಟಿಗೆ ಗೂಡುಗಳು ಶೋಷಕ ವೇತನಕ್ಕೂ ಕುಖ್ಯಾತಿಯನ್ನು ಹೊಂದಿವೆ.

ತನ್ನ ಪೋಷಕರೊಡನೆ ವಲಸೆ ಬಂದ ಅರ್ಜುನ್‌ ನವೆಂಬರ್‌ ತಿಂಗಳಿನಿಂದ ಮೇ ತನಕ ಶಾಲೆಯಿಂದ ಹೊರಗುಳಿಯಬೇಕಾಯಿತು. "ನಾನು ನನ್ನ ಊರಿನ ಜಿ ಪ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿದ್ದೇನೆ" ಎಂದು ಅರ್ಜುನ್ ಹೇಳುತ್ತಾನೆ. ಅವನು ನಮ್ಮೊಂದಿಗೆ ಮಾತನಾಡುತ್ತಿರುವಾಗ ಹಿನ್ನೆಲೆಯಲ್ಲಿ ಜೆಸಿಬಿ ಯಂತ್ರಗಳು ಧೂಳಿನ ಮೋಡಗಳನ್ನು ನಿರ್ಮಿಸುತ್ತಾ ಓಡಾಡುತ್ತಿದ್ದವು.

Left: Arjun, with his mother Suman and cousin Anita.
PHOTO • Jyoti
Right: A brick kiln site in Jadhavwadi. The high temperatures and physically arduous tasks for exploitative wages make brick kilns the last resort of those seeking work
PHOTO • Jyoti

ಎಡ: ಅರ್ಜುನ್, ಅವನ ತಾಯಿ ಸುಮನ್ ಮತ್ತು ಸೋದರಸಂಬಂಧಿ ಅನಿತಾ. ಬಲ: ಜಾಧವವಾಡಿಯಲ್ಲಿನ ಇಟ್ಟಿಗೆ ಗೂಡು ಪ್ರದೇಶ. ಕೆಲಸದ ಹುಡುಕಾಟದಲ್ಲಿರುವವರ ಕೊನೆಯ ಆಶ್ರಯತಾಣವಾದ ಇಟ್ಟಿಗೆ ಗೂಡುಗಳು ಶೋಷಕ ವೇತನಕ್ಕೂ ಕುಖ್ಯಾತಿಯನ್ನು ಹೊಂದಿವೆ. ಇಲ್ಲಿ ಸದಾ ಸುಡುವ ಬೆಂಕಿಯಂತಹ ಶಾಖದ ವಾತಾವರವಿರುತ್ತದೆ

ವಡಗಾಂವಿನಲ್ಲಿ ಅರ್ಜುನನ ಪೋಷಕರಾದ ಸುಮನ್ ಮತ್ತು ಅಬಾಸಾಹೇಬ್ ಗಂಗಾಪುರ ತಾಲೂಕಿನ ಹಳ್ಳಿ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಕೃಷಿ ಕೂಲಿಗಳಾಗಿ ಕೆಲಸ ಮಾಡುತ್ತಾರೆ. ಬೇಸಾಯ ಮತ್ತು ಕೊಯ್ಲು ಕಾಲದಲ್ಲಿ ಅವರು ತಿಂಗಳಿಗೆ ಸರಿಸುಮಾರು 20 ದಿನಗಳ ಕೆಲಸ ಪಡೆಯುತ್ತಾರೆ ಮತ್ತು ಸುಮಾರು ಒಂದು ದಿನದ ದುಡಿಮೆಗೆ ತಲಾ 250-300 ರೂ. ಕೂಲಿ ದೊರೆಯುತ್ತದೆ. ಪೋಷಕರು ಊರಿನಲ್ಲಿರುವ ಈ ಸಮಯದಲ್ಲಿ ಅರ್ಜುನ್‌ ಶಾಲೆಗೆ ಹೋಗುತ್ತಾನೆ.

ಕಳೆದ ವರ್ಷ, ಅವರ ಪೋಷಕರು ತಮ್ಮ ಹುಲ್ಲಿನ ಗುಡಿಸಲಿನ ಪಕ್ಕದಲ್ಲಿ ಪಕ್ಕಾ ಮನೆ ನಿರ್ಮಿಸುವ ಸಲುವಾಗಿ ಉಚಲ್ - ಮುಂಗಡವನ್ನು ತೆಗೆದುಕೊಂಡರು. “ನಾವು ಮುಂಗಡವಾಗಿ ಪಡೆದ 1.5 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ ನಮ್ಮ ಮನೆಯ ತಳಪಾಯವನ್ನು ನಿರ್ಮಿಸಿದೆವು" ಎಂದು ಸುಮನ್ ಹೇಳುತ್ತಾರೆ. "ಈ ವರ್ಷ, ಗೋಡೆಗಳನ್ನು ನಿರ್ಮಿಸಲೆಂದು ಮತ್ತೊಂದು ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ತೆಗೆದುಕೊಂಡಿದ್ದೇವೆ."

ಅವರ ವಲಸೆಯನ್ನು ವಿವರಿಸುತ್ತಾ, “ನಮ್ಮಿಂದ ಬೇರೆ ಯಾವುದೇ ವಿಧಾನದಿಂದ ವರ್ಷದಲ್ಲಿ ಒಂದು ಲಕ್ಷ [ರೂಪಾಯಿ] ಗಳಿಸಲು ಸಾಧ್ಯವಿಲ್ಲ. ಇರುವುದು [ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ವಲಸೆ] ಇದೊಂದೇ ಮಾರ್ಗವಾಗಿದೆ. ಮನೆಯ ಗಾರೆಗಾಗಿ ಮತ್ತೆ ಮುಂದಿನ ವರ್ಷ ಕೆಲಸಕ್ಕೆ ಬರಬೇಕು" ಅವರು ಮುಂದಿನ ವರ್ಷವೂ ಇಲ್ಲಿಗೆ ಬರುವ ಕುರಿತು ಸೂಚನೆ ನೀಡುತ್ತಾರೆ.

ಈಗಾಗಲೇ ಎರಡು ವರ್ಷ ಕಳೆದು ಹೋಗಿದೆ ಮತ್ತು ಇನ್ನೆರಡು ವರ್ಷದ ವಲಸೆ ಬಾಕಿಯಿದೆ. ಅಲ್ಲಿಯವರೆಗೆ ಅರ್ಜುನನ ಶಿಕ್ಷಣಕ್ಕೆ ತಡೆಯಾಗಲಿದೆ. ಸುಮನ್ ಅವರ ಐದು ಮಕ್ಕಳಲ್ಲಿ ನಾಲ್ವರು ಶಾಲೆಯಿಂದ ಹೊರಗುಳಿದು 20 ವರ್ಷ ತುಂಬುವ ಮೊದಲೇ ಮದುವೆಯಾದರು. ತನ್ನ ಮಗನ ಭವಿಷ್ಯದ ಕುರಿತು ಅತೃಪ್ತಿಯಿಂದ ಮಾತನಾಡುವ ಅವರು "ನಮ್ಮ ಹಿರಿಯರ ಕಾಲದಿಂದಲೂ ಹೀಗೆ ಇಟ್ಟಿಗೆ ಗೂಡುಗಳಿಗೆ ಹೋಗುತ್ತಿದ್ದರು. ಈಗ ನಾನೂ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈ ವಲಸೆಯ ಚಕ್ರವನ್ನು ಹೇಗೆ ನಿಲ್ಲಿಸುವುದೆಂದು ನನಗೆ ತಿಳಿಯುತ್ತಿಲ್ಲ."

ಸದ್ಯಕ್ಕೆ ಶಾಲೆಗೆ ಹೋಗುತ್ತಿರುವುದು ಅರ್ಜುನ್‌ ಒಬ್ಬನೇ. ಆದರೆ ಅವನು ಕೂಡಾ “ಆರು ತಿಂಗಳು ಶಾಲೆಗೆ ಹೋಘದ ಕಾರಣ ಉಳಿದ ದಿನಗಳಲ್ಲೂ ಶಾಲೆಗೆ ಹೋಗಬೇಕೆನ್ನಿಸುವುದಿಲ್ಲ” ಎನ್ನುತ್ತಾನೆ.

ಪ್ರತಿದಿನ ಆರು ಗಂಟೆಗಳ ಕಾಲ, ಅರ್ಜುನ್ ಮತ್ತು ಅನಿತಾ (ಚಿಕ್ಕಮ್ಮನ ಮಗಳು) ಇಟ್ಟಿಗೆ ಗೂಡಿರುವ ಸ್ಥಳದಲ್ಲಿ ಸ್ಥಾಪಿಸಲಾದ ಅವನಿ ಎಂಬ ಸರ್ಕಾರೇತರ ಸಂಸ್ಥೆಯಿಂದ ನಡೆಸಲ್ಪಡುವ ಡೇ-ಕೇರ್ ಸೆಂಟರ್‌ನಲ್ಲಿರುತ್ತಾರೆ. ಅವನಿ 20ಕ್ಕೂ ಹೆಚ್ಚು ಇಟ್ಟಿಗೆ ಗೂಡುಗಳಲ್ಲಿ ಡೇ-ಕೇರ್ ಸೆಂಟರ್‌ಗಳನ್ನು ಮತ್ತು ಕೊಲ್ಹಾಪುರ ಮತ್ತು ಸಾಂಗ್ಲಿಯಲ್ಲಿ ಕೆಲವು ಕಬ್ಬಿನ ಹೊಲಗಳ ಬಳಿ ತನ್ನ ಕೇಂದ್ರಗಳನ್ನು ನಡೆಸುತ್ತಿದೆ. ಅವನಿಯಲ್ಲಿರುವ ಅನೇಕ ವಿದ್ಯಾರ್ಥಿಗಳು, ನಿರ್ದಿಷ್ಟವಾಗಿ ದುರ್ಬಲ ಬುಡಕಟ್ಟು ಗುಂಪುಗಳಡಿ (PVTGs) ಪಟ್ಟಿ ಮಾಡಲಾಗಿರುವ ಕಾತ್ಕರಿ  ಅಥವಾ ಬೆಲ್ದಾರ್ ಎನ್ನುವ ಅಲೆಮಾರಿ ಬುಡಕಟ್ಟಿಗೆ ಸೇರಿದವರು. ಸುಮಾರು 800 ನೋಂದಾಯಿತ ಇಟ್ಟಿಗೆ ಭಟ್ಟಿಗಳನ್ನು ಹೊಂದಿರುವ ಕೊಲ್ಹಾಪುರವು ಕೆಲಸ ಹುಡುಕುವ ವಲಸಿಗರಿಗೆ ಪ್ರಮುಖ ಆಕರ್ಷಣೆಯಾಗಿದೆ ಎಂದು ಅವನಿ ಕಾರ್ಯಕ್ರಮದ ಸಂಯೋಜಕ ಸತ್ತಪ್ಪ ಮೋಹಿತೆ ವಿವರಿಸುತ್ತಾರೆ.

Avani's day-care school in Jadhavwadi brick kiln and (right) inside their centre where children learn and play
PHOTO • Jyoti
Avani's day-care school in Jadhavwadi brick kiln and (right) inside their centre where children learn and play
PHOTO • Jyoti

ಜಾಧವವಾಡಿ ಇಟ್ಟಿಗೆ ಗೂಡು ಮತ್ತು (ಬಲ) ಅವನಿಯ ಡೇ-ಕೇರ್ ಶಾಲೆಯಲ್ಲಿ ಮಕ್ಕಳು ಕಲಿಯುತ್ತಾರೆ ಮತ್ತು ಆಡುತ್ತಾರೆ

"ಇಲ್ಲಿ [ಡೇ ಕೇರ್ ಕೇಂದ್ರದಲ್ಲಿ] ನಾನು 4ನೇ ತರಗತಿಯ ಪುಸ್ತಕಗಳನ್ನು ಓದುವುದಿಲ್ಲ. ಆದರೆ ಇಲ್ಲಿ ಆಡುವುದು ಮತ್ತು ತಿನ್ನುವುದನ್ನು ಮಾಡುತ್ತೇವೆ" ಎಂದು ಅನಿತಾ ನಗುತ್ತಾ ಹೇಳುತ್ತಾಳೆ. 3ರಿಂದ 14 ವರ್ಷದೊಳಗಿನ ಸುಮಾರು 25 ವಲಸೆ ಮಕ್ಕಳು ಕೇಂದ್ರದಲ್ಲಿ ತಮ್ಮ ದಿನವನ್ನು ಕಳೆಯುತ್ತಾರೆ. ಇಲ್ಲಿ ಮಧ್ಯಾಹ್ನದ ಊಟದ ಜೊತೆಗೆ, ಮಕ್ಕಳು ಆಟಗಳನ್ನು ಆಡುತ್ತಾರೆ ಮತ್ತು ಕಥೆಗಳನ್ನು ಕೇಳುತ್ತಾರೆ.

ಡೇ ಕೇರ್‌ ಸೆಂಟರ್‌ ಮುಗಿಯುತ್ತಿದ್ದಂತೆ “ನಾವು ಆಯಿ- ಬಾಪಾರಿಗೆ [ಇಟ್ಟಿಗೆ ತಯಾರಿಕೆಗೆ] ಸಹಾಯ ಮಾಡಲು ಹೋಗುತ್ತೇವೆ” ಎಂದು ಅರ್ಜುನ್‌ ಬೇಸರದಿಂದ ಹೇಳುತ್ತಾನೆ.

ನಯ್ನೇಗೇಲಿ ಕೇಂದ್ರದಲ್ಲಿ ಓದುತ್ತಿರುವ ಮಕ್ಕಳಲ್ಲಿ ಏಳು ವರ್ಷದ ರಾಜೇಶ್ವರಿ ಕೂಡಾ ಒಬ್ಬಳು. "ನಾನು ಕೆಲವೊಮ್ಮೆ ಅಮ್ಮನ ಜೊತೆ ಸೇರಿಕೊಂಡು ಇಟ್ಟಿಗೆ ತಯಾರಿಸುತ್ತೇನೆ" ಎನ್ನುತ್ತಾಳೆ. ತನ್ನ ಊರಿನ ಶಾಲೆಯಲ್ಲಿ 2ನೇ ತರಗತಿ ವಿದ್ಯಾರ್ಥಿಯಾಗಿರುವ ರಾಜೇಶ್ವರಿ ಇಟ್ಟಿಗೆ ತಯಾರಿಕೆಯಲ್ಲಿ ಪಳಗಿದ್ದಾಳೆ. "ಆಯಿ ಮತ್ತು ಬಾಬಾ ಮಧ್ಯಾಹ್ನ ಜೇಡಿ ಮಣ್ಣನ್ನು ಹದಗೊಳಿಸಿ ಇಟ್ಟು ರಾತ್ರಿ ಇಟ್ಟಿಗೆ ತಯಾರಿಸುತ್ತಾರೆ. ಅವರೊಡನೆ ನಾನೂ ಸೇರಿಕೊಳ್ಳುತ್ತೇನೆ." ಅವಳು ಇಟ್ಟಿಗೆ ಅಚ್ಚಿನಲ್ಲಿ ಮಣ್ಣು ತುಂಬಿ ಅದನ್ನು ತಟ್ಟಿ ಹೊಂದಿಸುತ್ತಾಳೆ. ಸಣ್ಣ ಹುಡುಗಿಗೆ ಅಚ್ಚನ್ನು ಎತ್ತಲು ಕಷ್ಟವಾಗುವ ಕಾರಣ ಆಕೆಯ ಅಪ್ಪ ಅಥವಾ ಅಮ್ಮ ಅದನ್ನು ತೆರೆಯುತ್ತಾರೆ.

"ಎಷ್ಟು ಇಟ್ಟಿಗೆಗಳನ್ನು ತಯಾರಿಸುತ್ತೇನೆಂದು ಗೊತ್ತಿಲ್ಲ, ಆದರೆ ದಣಿವೆನ್ನಿಸಿದಾಗ ಮಲಗುತ್ತೇನೆ ಮತ್ತು ಆಯಿ-ಬಾಬಾ ಕೆಲಸ ಮುಂದುವರೆಸುತ್ತಾರೆ" ಎಂದು ರಾಜೇಶ್ವರಿ ಹೇಳುತ್ತಾಳೆ.

ಅವನಿಯಲ್ಲಿರುವ 25 ಮಕ್ಕಳಲ್ಲಿ – ಬಹುತೇಕ ಮಹಾರಾಷ್ಟ್ರ ಮೂಲದವರು – ವಲಸೆ ಸಮಯದಲ್ಲಿ ಕೊಲ್ಹಾಪುರದಲ್ಲಿ ಓದು ಮುಂದುವರೆಸಲು ಅಗತ್ಯವಿರುವ ಇಜಿಸಿ ಕಾರ್ಡ್‌ ಒಬ್ಬರ ಬಳಿಯೂ ಇಲ್ಲ. ಅಲ್ಲದೆ ಇಲ್ಲಿನ ಇಟ್ಟಿಗೆ ಗೂಡಿಗೆ ಹತ್ತಿರದ ಶಾಲೆಯಿರುವುದು ಐದು ಕಿಲೋಮೀಟರ್‌ ದೂರದಲ್ಲಿ.

"ಅದು [ಶಾಲೆ] ತುಂಬಾ ದೂರದಲ್ಲಿದೆ. ನಮ್ಮನ್ನು ಅಲ್ಲಿಗೆ ಕರೆದೊಯ್ಯುವವರು ಯಾರು?" ಅರ್ಜುನ್ ತಿಳಿಯಲು ಬಯಸುತ್ತಾನೆ.

ಅಂದಹಾಗೆ ಹತ್ತಿರದ ಶಾಲೆ ಒಂದು ಕಿ.ಮೀ.ಗಿಂತ ಹೆಚ್ಚು ದೂರದಲ್ಲಿದ್ದಾಗ, "ಸ್ಥಳೀಯ ಶಿಕ್ಷಣ ಇಲಾಖೆ, ಜಿಲ್ಲಾ ಪರಿಷತ್ ಅಥವಾ ಮುನ್ಸಿಪಲ್ ಕಾರ್ಪೊರೇಷನ್ ವಲಸೆ ಮಕ್ಕಳ ಶಿಕ್ಷಣಕ್ಕಾಗಿ ತರಗತಿ ಕೊಠಡಿಗಳು ಮತ್ತು ಸಾರಿಗೆ ಸೌಲಭ್ಯಗಳನ್ನು ಒದಗಿಸಬೇಕು" ಎಂದು ಕಾರ್ಡ್ ಹೇಳುತ್ತದೆ.

ಆದರೆ 20 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ ಅವನಿ ಎನ್‌ಜಿಒ ಸ್ಥಾಪಕಿ ಮತ್ತು ನಿರ್ದೇಶಕಿ ಅನುರಾಧಾ ಭೋಸಲೆ ಹೇಳುವಂತೆ, "ಈ ನಿಬಂಧನೆಗಳು ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿವೆ."

Left: Jadhavwadi Jakatnaka, a brick kiln site in Kolhapur.
PHOTO • Jyoti
Right: The nearest state school is five kms from the site in Sarnobatwadi
PHOTO • Jyoti

ಎಡ: ಕೊಲ್ಹಾಪುರದ ಇಟ್ಟಿಗೆ ಭಟ್ಟಿ ತಾಣವಾದ ಜಾಧವವಾಡಿ ಜಕತ್‌ನಾಕಾ. ಬಲ: ಹತ್ತಿರದ ಸರ್ಕಾರಿ ಶಾಲೆ ಸರ್ನೊಬತ್‌ ವಾಡಿಯ ಸೈಟಿನಿಂದ ಐದು ಕಿ.ಮೀ ದೂರದಲ್ಲಿದೆ

ಅಹ್ಮದ್ ನಗರ ಜಿಲ್ಲೆಯವರಾದ ಆರತಿ ಪವಾರ್ ಕೊಲ್ಹಾಪುರ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಾರೆ. "ನನ್ನ ಪೋಷಕರು 2018ರಲ್ಲಿ ಮದುವೆ ಮಾಡಿಸಿದರು" ಎಂದು 7ನೇ ತರಗತಿಯ ನಂತರ ಶಾಲೆಯಿಂದ ಹೊರಗುಳಿದ 23 ವರ್ಷದ ಯುವತಿ ಹೇಳುತ್ತಾರೆ.

“ನಾನು ಒಂದು ಕಾಲದಲ್ಲಿ ಶಾಲೆಗೆ ಹೋಗುತ್ತಿದ್ದೆ. ಈಗ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದೇನೆ” ಎನ್ನುತ್ತಾರೆ ಆರತಿ.

*****

"ನಾನು ಎರಡು ವರ್ಷಗಳ ಕಾಲ ಏನನ್ನೂ ಓದಿಲ್ಲ. ನಮ್ಮಲ್ಲಿ ಸ್ಮಾರ್ಟ್‌ ಫೋನ್ ಇಲ್ಲ" ಎಂದು ಮಾರ್ಚ್ 2020ರಿಂದ ಜೂನ್ 2021ರ ಅವಧಿಯನ್ನು ಉಲ್ಲೇಖಿಸಿ ಅರ್ಜುನ್ ಹೇಳುತ್ತಾನೆ.

"ಸಾಂಕ್ರಾಮಿಕ ಪಿಡುಗು ಹರಡುವ ಮೊದಲು ಕೂಡಾ ಅನೇಕ ತಿಂಗಳುಗಳ ಕಾಲ ಶಾಲೆಯಿಂದ ಹೊರಗಿರುತ್ತಿದ್ದ ಕಾರಣ ನನಗೆ ಶಾಲೆಯಲ್ಲಿ ತೇರ್ಗಡೆ ಹೊಂದುವುದು ಕಷ್ಟವಾಗುತ್ತಿತ್ತು. ನಾನು 5ನೇ ತರಗತಿ ಮತ್ತೆ ಓದಬೇಕಾಯಿತು" ಎಂದು ಈಗ 8ನೇ ತರಗತಿಯಲ್ಲಿ ಓದುತ್ತಿರುವ ಅರ್ಜುನ್ ಹೇಳುತ್ತಾನೆ. ಮಹಾರಾಷ್ಟ್ರದಾದ್ಯಂತದ ಅನೇಕ ವಿದ್ಯಾರ್ಥಿಗಳಂತೆ, ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ, ಸರ್ಕಾರದ ಆದೇಶಗಳ ಪ್ರಕಾರ, ಶಾಲೆಗೆ ಹಾಜರಾಗದಿದ್ದರೂ ಅರ್ಜುನನ್ನು ಎರಡು ಬಾರಿ (6 ಮತ್ತು 7ನೇ ತರಗತಿ) ಪಾಸ್ ಮಾಡಲಾಯಿತು.

ದೇಶದೊಳಗೆ ವಲಸೆ ಹೋಗುವ ಜನರ ಸಂಖ್ಯೆ ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 37ರಷ್ಟು (450 ಮಿಲಿಯನ್) (ಜನಗಣತಿ 2011), ಮತ್ತು ಅವರಲ್ಲಿ ಅನೇಕರು ಮಕ್ಕಳು ಎಂದು ಅಂದಾಜಿಸಲಾಗಿದೆ. ಈ ದೊಡ್ಡ ಸಂಖ್ಯೆಯು ಪರಿಣಾಮಕಾರಿ ನೀತಿಗಳನ್ನು ಮತ್ತು ಅವುಗಳ ಸರಿಯಾದ ಅನುಷ್ಠಾನವನ್ನು ತುರ್ತು ಅಗತ್ಯವನ್ನಾಗಿ ಮಾಡುತ್ತದೆ. ವಲಸೆ ಕಾರ್ಮಿಕರ ಮಕ್ಕಳು ತಮ್ಮ ಶಿಕ್ಷಣವನ್ನು ತಡೆಯಿಲ್ಲದೆ ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳುವುದು 2020ರಲ್ಲಿ ಪ್ರಕಟವಾದ ಐ ಎಲ್‌ ಒ ವರದಿ ಶಿಫಾರಸು ಮಾಡಿರುವ ನಿರ್ಣಾಯಕ ನೀತಿ ಕ್ರಮವಾಗಿದೆ.

"ರಾಜ್ಯ ಅಥವಾ ಕೇಂದ್ರ ಮಟ್ಟದಲ್ಲಿ, ವಲಸೆ ಹೋಗುವ ಮಕ್ಕಳಿಗೆ ಶಿಕ್ಷಣವನ್ನು ಖಾತರಿಪಡಿಸುವ ನೀತಿಗಳನ್ನು ಜಾರಿಗೆ ತರುವಲ್ಲಿ ಸರ್ಕಾರ ಗಂಭೀರವಾಗಿಲ್ಲ" ಎಂದು ಅಶೋಕ್ ತಾಂಗ್ಡೆ ಹೇಳುತ್ತಾರೆ. ಹೀಗಾಗಿ ವಲಸೆ ಕಾರ್ಮಿಕರ ಮಕ್ಕಳು ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುವುದಲ್ಲದೆ, ಅವರು ಅತ್ಯಂತ ಅಸುರಕ್ಷಿತ ವಾತಾವರಣದಲ್ಲಿ ವಾಸಿಸುವ ಅನಿವಾರ್ಯತೆಯನ್ನೂ ಸೃಷ್ಟಿ ಮಾಡುತ್ತದೆ.

ಒಡಿಶಾದ ಬಾರ್ಗಢ್ ಜಿಲ್ಲೆಯ ಸುನಲಾರಂಭ ಗ್ರಾಮದ ಗೀತಾಂಜಲಿ ಸುನಾ ಎಂಬ ಬಾಲಕಿ 2022ರ ನವೆಂಬರ್‌ ತಿಂಗಳಿನಲ್ಲಿ ತನ್ನ ಹೆತ್ತವರು ಮತ್ತು ಸಹೋದರಿಯೊಂದಿಗೆ ಕೊಲ್ಹಾಪುರ ಇಟ್ಟಿಗೆ ಗೂಡುಗಳಿಗೆ ಬಂದಿಳಿದಳು. ಗದ್ದಲದ ಯಂತ್ರಗಳ ನಡುವೆ, 10 ವರ್ಷದ ಗೀತಾಂಜಲಿ ಅವನಿಯಲ್ಲಿ ಇತರ ಮಕ್ಕಳೊಂದಿಗೆ ಆಡುತ್ತಿದ್ದಳು ಮತ್ತು ಕೆಲವು ಕ್ಷಣಗಳವರೆಗೆ, ಮಕ್ಕಳು ನಗುವ ಸದ್ದು ಕೊಲ್ಹಾಪುರ ಧೂಳಿನಿಂದ ಕೂಡಿದ ಗಾಳಿಯಲ್ಲಿ ತೇಲುತ್ತಿತ್ತು.

ಅನುವಾದ: ಶಂಕರ. ಎನ್. ಕೆಂಚನೂರು

Jyoti

ज्योति, पीपल्स आर्काइव ऑफ़ रूरल इंडिया की एक रिपोर्टर हैं; वह पहले ‘मी मराठी’ और ‘महाराष्ट्र1’ जैसे न्यूज़ चैनलों के साथ काम कर चुकी हैं.

की अन्य स्टोरी Jyoti
Illustration : Priyanka Borar

प्रियंका बोरार न्यू मीडिया की कलाकार हैं, जो अर्थ और अभिव्यक्ति के नए रूपों की खोज करने के लिए तकनीक के साथ प्रयोग कर रही हैं. वह सीखने और खेलने के लिए, अनुभवों को डिज़ाइन करती हैं. साथ ही, इंटरैक्टिव मीडिया के साथ अपना हाथ आज़माती हैं, और क़लम तथा कागज़ के पारंपरिक माध्यम के साथ भी सहज महसूस करती हैं व अपनी कला दिखाती हैं.

की अन्य स्टोरी Priyanka Borar
Editors : Dipanjali Singh

दीपांजलि सिंह, पीपल्स आर्काइव ऑफ़ रूरल इंडिया में सहायक संपादक हैं. वह पारी लाइब्रेरी के लिए दस्तावेज़ों का शोध करती हैं और उन्हें सहेजने का काम भी करती हैं.

की अन्य स्टोरी Dipanjali Singh
Editors : Vishaka George

विशाखा जॉर्ज, पीपल्स आर्काइव ऑफ़ रूरल इंडिया की सीनियर एडिटर हैं. वह आजीविका और पर्यावरण से जुड़े मुद्दों पर लिखती हैं. इसके अलावा, विशाखा पारी की सोशल मीडिया हेड हैं और पारी एजुकेशन टीम के साथ मिलकर पारी की कहानियों को कक्षाओं में पढ़ाई का हिस्सा बनाने और छात्रों को तमाम मुद्दों पर लिखने में मदद करती है.

की अन्य स्टोरी विशाखा जॉर्ज
Video Editor : Sinchita Parbat

सिंचिता पर्बत, पीपल्स आर्काइव ऑफ़ रूरल इंडिया में बतौर सीनियर वीडियो एडिटर कार्यरत हैं. वह एक स्वतंत्र फ़ोटोग्राफ़र और डाक्यूमेंट्री फ़िल्ममेकर भी हैं. उनकी पिछली कहानियां सिंचिता माजी के नाम से प्रकाशित की गई थीं.

की अन्य स्टोरी Sinchita Parbat
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru