ಈ ಪ್ರದೇಶದ ಇತರೆಡೆ 47 ಡಿಗ್ರಿ ತಾಪಮಾನ ಇರುವಾಗಲೂ ಇದೊಂದು ಜಾಗ ತಣ್ಣಗಿರುತ್ತದೆ. ನಮ್ಮಿಂದ ಸ್ವಲ್ಪ ದೂರದಲ್ಲಿದ್ದ ಸ್ಥಳದಲ್ಲಿ ಮೈನಸ್‌ 13 ಡಿಗ್ರಿ ತಾಪಮಾನವಿತ್ತು. ಈ ಸ್ಥಳ ಭಾರತದ “ಮೊದಲ ಸ್ನೋ ಡ್ರೋಮ್”‌ ಇದು ಇರುವುದು ಸುಡುವ ಬೆಂಕಿಯಂತಹ ಊರಾದ ವಿದರ್ಭದಲ್ಲಿ. ಈ ಹಿಮಚ್ಛಾದಿತ ಪ್ರದೇಶದ ಹಿಮವನ್ನು ಕರಗದಂತೆ ಕಾಪಾಡಿಕೊಳ್ಳಲು ದಿನವೊಂದಕ್ಕೆ 4,000 ರೂಪಾಯಿಗಳ ಖರ್ಚು ಬೀಳುತ್ತದೆ.

ನಾಗಪುರ (ಗ್ರಾಮೀಣ) ಜಿಲ್ಲೆಯ ಬಜಾರ್‌ಗಾಂವ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ‌ ಫನ್‌ ಎಂಡ್‌ ಪುಡ್‌ ವಿಲೇಜ್‌ ವಾಟರ್‌ ಎಂಡ್‌ ಅಮ್ಯೂಸ್‌ಮೆಂಟ್‌ ಪಾರ್ಕಿಗೆ ನಿಮಗೆ ಸ್ವಾಗತ. ಈ ಬೃಹತ್ ಸಂಕೀರ್ಣದ ಕಚೇರಿಯಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರವು ಇಲ್ಲಿಗೆ ಬರುವ ಸಂದರ್ಶಕರನ್ನು ಸ್ವಾಗತಿಸುತ್ತದೆ. ಮತ್ತು ನಿಮಗೆ ಪ್ರತಿದಿನ ಡಿಸ್ಕೋ, ಐಸ್ ಸ್ಕೇಟಿಂಗ್, ಐಸ್ ಸ್ಲೈಡಿಂಗ್ ಮತ್ತು 'ಸಾಕಷ್ಟು ಮದ್ಯ ಸಂಗ್ರಹದೊಡನೆ ಕಾಕ್ಟೇಲ್‌ ಲಭ್ಯವಿರುವ ಬಾರ್‌ ಸೌಲಭ್ಯವಿದೆʼ ಎಂದು ನಿಮಗೆ ಭರವಸೆ ನೀಡಲಾಗುತ್ತದೆ. 40 ಎಕರೆ ವಿಸ್ತೀರ್ಣದ ಈ ಉದ್ಯಾನವನವು 18 ರೀತಿಯ ವಾಟರ್ ಸ್ಲೈಡ್‌ಗಳು ಮತ್ತು ಆಟಗಳ ಸೌಲಭ್ಯವನ್ನು ಹೊಂದಿದೆ. ಇಲ್ಲಿ ಕಾನ್ಫರೆನ್ಸ್‌ಗಳಿಂದ ಹಿಡಿದು ಕಿಟ್ಟಿ ಪಾರ್ಟಿಗಳವರೆಗಿನ ಕಾರ್ಯಕ್ರಮಗಳಿಗೆ ಸೇವೆ ನೀಡಲಾಗುತ್ತದೆ.

3,000 ಜನಸಂಖ್ಯೆಯ ಬಜಾರ್‌ ಗಾಂವ್‌ ಸ್ವತಃ ದೊಡ್ಡ ದೊಡ್ಡ ಮಟ್ಟದ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ. “ಹಲವು ಬಾರಿ ಹೋಗಬೇಕಾಗಿ ಬರುವುದರಿಂದ ಇಲ್ಲಿನ ಮಹಿಳೆಯರು ದಿನ 15 ಕಿಲೋಮೀಟರ್‌ ತನಕ ಕೇವಲ ನೀರು ತರುವ ಸಲುವಾಗಿ ನಡೆಯುತ್ತಾರೆ. ಇಡೀ ಊರು ಕೇವಲ ಒಂದು ಸರ್ಕಾರಿ ಬಾವಿಯನ್ನು ಹೊಂದಿದೆ. ಕೆಲವೊಮ್ಮೆ ನಮಗೆ ನಾಲ್ಕು ಅಥವಾ ಐದು ದಿನಕ್ಕೊಮ್ಮೆ ನೀರು ಸಿಗುತ್ತದೆ. ಇನ್ನೂ ಕೆಲವು ಸಲ ಹತ್ತು ದಿವಸಕ್ಕೊಮ್ಮೆ ಸಿಗುವುದೂ ಇರುತ್ತದೆ” ಎನ್ನುತ್ತಾರೆ ಸರಪಂಚರಾದ ಯಮುನಾ ಬಾಯಿ ಉಯ್ಕೆ.

ಬಜಾರ್‌ ಗಾಂವ್‌ ಬರಪೀಡಿತವೆಂದು ಘೋಷಿಸಲ್ಪಟ್ಟ ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತದೆ. ಇದು ಈ ಮೊದಲು ಇಂತಹ ಪರಿಸ್ಥಿತಿ ಎದುರಿಸಿರಲಿಲ್ಲ. ಈ ಊರು ಮೇ ತಿಂಗಳ ತನಕ ಆರು ಗಂಟೆಗಳ ಹಾಗೂ ಕೆಲವೊಮ್ಮೆ ಅದಕ್ಕೂ ಹೆಚ್ಚಿನ ಸಮಯದ ವಿದ್ಯುತ್‌ ಕಡಿತಕ್ಕೂ ಸಾಕ್ಷಿಯಾಗಿತ್ತು. ಇದು ಜನರ ಆರೋಗ್ಯ ಸೇರಿದಂತೆ ದೈನಂದಿನ ಜೀವನದ ಪ್ರತಿಯೊಂದು ವಿಷಯದ ಮೇಲೂ ಪರಿಣಾಮ ಬೀರುತ್ತದೆ. ಪರೀಕ್ಷೆ ಬರೆಯುವ ಮಕ್ಕಳಿಗಂತೂ ಇದು ಬಹಳ ದೊಡ್ಡ ಹೊಡೆತ. ಬೇಸಗೆಯ ತಾಪಮಾನ 47 ಡಿಗ್ರಿ ತಲುಪುವ ಮೂಲಕ ಮೊದಲೇ ಕಂಗೆಟ್ಟಿದ್ದ ಜನರು ಬೆದರಿ ಬಸವಳಿಯುವಂತಾಯಿತು.

ಆದರೆ ಈ ಎಲ್ಲಾ ಕಠೋರ ಕಾನೂನುಗಳು ಫನ್‌ ಎಂಡ್‌ ಫುಡ್‌ ವಿಲೇಜಿಗೆ ಅನ್ವಯಿಸುವುದಿಲ್ಲ. ಈ ಖಾಸಗಿ ಓಯಸಿಸ್‌ನಲ್ಲಿ ಬಜಾರ್‌ ಗಾಂವ್‌ ಜನರು ಕನಸಬಹುದಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರಿದ. ಮತ್ತು ದಿನದ ಒಂದು ಕ್ಷಣವೂ ಇಲ್ಲಿ ಕರೆಂಟ್‌ ಹೋಗುವುದಿಲ್ಲ. “ನಾವು ತಿಂಗಳಿಗೆ ಸರಾಸರಿ 4 ಲಕ್ಷ ರೂಪಾಯಿಗಳಷ್ಟು ವಿದ್ಯುತ್‌ ಬಿಲ್‌ ಕಟ್ಟುತ್ತೇವೆ” ಪಾರ್ಕ್‌ನ ಜನರಲ್‌ ಮ್ಯಾನೇಜರ್‌ ಆಗಿರುವ ಜಸ್‌ಜೀತ್‌ ಸಿಂಗ್

The snowdome at the Fun & Food Village Water & Amusement Park in Bazargaon in Nagpur (Rural) district
PHOTO • P. Sainath
PHOTO • P. Sainath

ಎಡ: ನಾಗಪುರ (ಗ್ರಾಮೀಣ) ಜಿಲ್ಲೆಯ ಬಜಾರ್ ಗಾಂವ್‌ನಲ್ಲಿರುವ ಫನ್‌ ಎಂಡ್‌ ಫುಡ್‌ ವಿಲೇಜ್‌ ವಾಟರ್‌ ಎಂಡ್‌ ಅಮ್ಯೂಸ್ಮೆಂಟ್‌ ಪಾರ್ಕಿನ ಹಿಮ ಗೋಪುರ. ಬಲ: ಹಿಮ ಗೋಪುರದ ಒಳಗೆ

ಪಾರ್ಕಿನ ತಿಂಗಳ ಕರೆಂಟ್‌ ಬಿಲ್‌ ಯಮುನಾಬಾಯಿಯವರ ಪಂಚಾಯತಿಯ ಒಂದು ವರ್ಷದ ಆದಾಯಕ್ಕೆ ಸಮನಾಗುತ್ತದೆ. ತಮಾಷೆಯೆಂದರೆ ಈ ಪಾರ್ಕಿನ ದೆಸೆಯಿಂದಾಗಿ ಈ ಊರಿನ ವಿದ್ಯುತ್‌ ಸಮಸ್ಯೆಗೆ ಒಂದಷ್ಟು ಪರಿಹಾರ ಸಿಕ್ಕಿದೆ. ಏಕೆಂದರೆ ಎರಡಕ್ಕೂ ವಿದ್ಯುತ್‌ ಸರಬರಾಜು ಒಂದೇ ಸಬ್‌-ಸ್ಟೇಷನ್ನಿನಿಂದ ಆಗುತ್ತದೆ. ಪಾರ್ಕಿನಲ್ಲಿ ವ್ಯಾಪಾರದ ಉತ್ತುಂಗ ಮೇ ತಿಂಗಳಿನಲ್ಲಿರುತ್ತದೆ. ಹೀಗಾಗಿ ಅಲ್ಲಿಯವರೆಗೆ ಇಲ್ಲಿ ಪರಿಸ್ಥಿತಿ ಉತ್ತಮವಾಗಿರುತ್ತದೆ. ಪಾರ್ಕಿನಿಂದ ಗ್ರಾಮ ಪಂಚಾಯತಿಗೆ ಸಿಗುವ ವಾರ್ಷಿಕ ಆದಾಯ 50,000 ರೂಪಾಯಿಗಳು. ಇದು ಫನ್‌ ಎಂಡ್‌ ಫುಡ್‌ ವಿಲೇಜ್‌ ದಿನಕ್ಕೆ ಬರುವ 700 ಸಂದರ್ಶಕರಿಂದ ಪ್ರವೇಶ ಶುಲ್ಕವಾಗಿ ಒಂದು ದಿನಕ್ಕೆ ಸಂಗ್ರಹಿಸುವ ಮೊತ್ತದ ಅರ್ಧ ಭಾಗ. ಇಲ್ಲಿನ 110 ಜನ ಕೆಲಸಗಾರರಲ್ಲಿ ಕೇವಲ ಹನ್ನೆರಡು ಜನರಷ್ಟೇ ಸ್ಥಳೀಯರು.

ತೀವ್ರ ನೀರಿನ ಕೊರತೆ ಎದುರಿಸುತ್ತಿರುವ ವಿದರ್ಭ ಇಂತಹ ಹಲವು ವಾಟರ್‌ ಪಾರ್ಕ್‌ ಮತ್ತು ಅಮ್ಯೂಸ್‌ಮೆಂಟ್‌ ಪಾರ್ಕುಗಳನ್ನು ಹೊಂದಿದೆ. ಬುಲ್ದಾನದ ಶೆಗಾಂವ್‌ನಲ್ಲಿ ದೈತ್ಯ ಧಾರ್ಮಿಕ ಸಂಸ್ಥೆಯೊಂದು “ಧ್ಯಾನ ಕೇಂದ್ರ ಮತ್ತು ಅಮ್ಯೂಸ್ಮೆಂಟ್‌ ಪಾರ್ಕನ್ನು” ನಡೆಸುತ್ತಿದೆ. ಅದರೊಳಗೆ 30 ಎಕರೆ ವಿಸ್ತಾರದ ಕೃತಕ ಕೆರೆಯೊಂದನ್ನು ನಿರ್ವಹಿಸುವ ಪ್ರಯತ್ನವು ಈ ಬೇಸಗೆಯಲ್ಲಿ ವಿಫಲವಾಯಿತು.ಆದರೆ ಇದಕ್ಕೂ ಮೊದಲು ಇಂತಹ ಹಲವು ಪ್ರಯತ್ನಗಳಲ್ಲಿ ಹೇಳಲಾರದಷ್ಟು ನೀರು ವ್ಯರ್ಥವಾಗಿತ್ತು. ಇಲ್ಲಿ ಪ್ರವೇಶ ಶುಲ್ಕವನ್ನು “ದೇಣಿಗೆ” ಎಂದು ಕರೆಯಲಾಗುತ್ತದೆ. ಯವತ್ಮಲ್‌ನಲ್ಲಿ ಖಾಸಗಿ ಸಂಸ್ಥೆಯೊಂದು ಸಾರ್ವಜನಿಕ ಕೆರೆಯೊಂದನ್ನು ಸಾರ್ವಜನಿಕ ಪ್ರವಾಸಿ ತಾಣವನ್ನಾಗಿ ನಿರ್ವಹಿಸುತ್ತಿದೆ. ಅಮರಾವತಿಯಲ್ಲಿ ಇಂತಹ ಎರಡು ಅಥವಾ ಅದಕ್ಕೂ ಹೆಚ್ಚಿನ ಸ್ಥಳಗಳಿವೆ. ಆದರೆ ಅವು ಈಗ ಒಣಗಿವೆ. ನಾಗಪುರ ಮತ್ತು ಸುತ್ತಮುತ್ತ ಕೂಡಾ ಇಂತಹ ಸ್ಥಳಗಳಿವೆ.

ಹಳ್ಳಿಗಳಲ್ಲಿ ಕೆಲವೊಮ್ಮೆ 15 ದಿನಗಳಿಗೊಮ್ಮೆ ನೀರು ಸಿಗುತ್ತಿದೆ. ಮತ್ತು ಪ್ರಸ್ತುತ ಕೃಷಿ ಬಿಕ್ಕಟ್ಟಿನಿಂದಾಗಿ ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ರೈತರ ಆತ್ಮಹತ್ಯೆಗಳು ಸಂಭವಿಸಿವೆ. "ದಶಕಗಳಿಂದ ವಿದರ್ಭದಲ್ಲಿ ಕುಡಿಯುವ ನೀರು ಅಥವಾ ನೀರಾವರಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಯೋಜನೆ ಪೂರ್ಣಗೊಂಡಿಲ್ಲ" ಎಂದು ನಾಗ್ಪುರ ಮೂಲದ ಪತ್ರಕರ್ತ ಜೈದೀಪ್ ಹರ್ಡಿಕರ್ ಹೇಳುತ್ತಾರೆ. ಅವರು ಹಲವು ವರ್ಷಗಳಿಂದ ಈ ಪ್ರದೇಶದಿಂದ ವರದಿ ಮಾಡುತ್ತಿದ್ದಾರೆ.

A religious trust runs a large Meditation Centre and Entertainment Park in Shegaon, Buldhana.  It tried to maintain a 30-acre artificial lake within its grounds. The water body soon ran dry but not before untold amounts of water were wasted on it
PHOTO • P. Sainath
A religious trust runs a large Meditation Centre and Entertainment Park in Shegaon, Buldhana.  It tried to maintain a 30-acre artificial lake within its grounds. The water body soon ran dry but not before untold amounts of water were wasted on it
PHOTO • P. Sainath

ಧಾರ್ಮಿಕ ಸಂಸ್ಥೆಯೊಂದು ದೊಡ್ಡ ಧ್ಯಾನ ಕೇಂದ್ರ ಮತ್ತು ಅಮ್ಯೂಸ್ಮೆಂಟ್‌ ಪಾರ್ಕ್‌ ಒಂದನ್ನು ನಡೆಸುತ್ತಿದೆ. ಇದು 30 ಎಕರೆ ವಿಸ್ತಾರದ ಕೃತಕ ಕೆರೆಯೊಂದನ್ನು ನಿರ್ವಹಿಸಲ ಪ್ರಯತ್ನಿಸಿತ್ತು. ಆದರೆ ಬಹಳಷ್ಟು ನೀರು ವ್ಯರ್ಥವಾದ ನಂತರ ಅದರ ಜಲ ಮೂಲಗಳು ಬತ್ತಿ ಹೋದವು

ಫನ್‌ ಎಂಡ್‌ ಫುಡ್‌ ವಿಲೇಜ್‌ ನೀರನ್ನು ಸಂರಕ್ಷಿಸುತ್ತದೆ ಎಂದು ಜಸ್ಜೀತ್ ಸಿಂಗ್ ಒತ್ತಿ ಹೇಳುತ್ತಾರೆ. "ಅದೇ ನೀರನ್ನು ಮರುಬಳಕೆ ಮಾಡಲು ನಾವು ಅತ್ಯಾಧುನಿಕ ಫಿಲ್ಟರ್ ಪ್ಲಾಂಟ್‌ಗಳನ್ನು ಬಳಸುತ್ತೇವೆ." ಆದರೆ ಈ ಬಿಸಿಲಿನಲ್ಲಿ ಬಾಷ್ಪೀಕರಣದ ಮಟ್ಟವು ತುಂಬಾ ಹೆಚ್ಚಾಗಿರುತ್ತದೆ. ಮತ್ತು ಇಲ್ಲಿ ನೀರನ್ನು ಕೇವಲ ಕ್ರೀಡೆಗಳಿಗೆ ಮಾತ್ರ ಬಳಸಲಾಗುವುದಿಲ್ಲ. ಇದರ ಪಾರ್ಕಿನೊಳಗಿನ ತೋಟಗಳನ್ನು ನಿರ್ವಹಿಸಲು, ನೈರ್ಮಲ್ಯಕ್ಕಾಗಿ ಮತ್ತು ತಮ್ಮ ಗ್ರಾಹಕರಿಗೆ ದೊಡ್ಡ ಪ್ರಮಾಣದಲ್ಲಿ ಬಳಸುತ್ತವೆ.

"ಇದು ದೊಡ್ಡ ಮಟ್ಟದ ನೀರು ಮತ್ತು ಹಣದ ವ್ಯರ್ಥವಾಗಿದೆ" ಎಂದು ಬುಲ್ಧಾನಾದ ವಿನಾಯಕ ಗಾಯಕ್ವಾಡ್ ಹೇಳುತ್ತಾರೆ. ಅವರು ಅದೇ ಜಿಲ್ಲೆಯ ರೈತ ಮತ್ತು ಕಿಸಾನ್ ಸಭಾ ನಾಯಕ. ಈ ಪ್ರಕ್ರಿಯೆಯಲ್ಲಿ, ಖಾಸಗಿ ಲಾಭವನ್ನು ಹೆಚ್ಚಿಸಲು ಸಾರ್ವಜನಿಕ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ ಎಂದು ಗಾಯಕ್ವಾಡ್ ಕೋಪಗೊಳ್ಳುತ್ತಾರೆ. ಹಾಗೆ ಮಾಡುವ ಬದಲು ಸರ್ಕಾರ ಜನರ ಮೂಲಭೂತ ನೀರಿನ ಅಗತ್ಯಗಳನ್ನು ಪೂರೈಸಬೇಕು ಎನ್ನುತ್ತಾರೆ.

ಬಜಾರ್‌ ಗಾಂವ್‌ನ ಯಮುನಾ ಬಾಯಿ ಉಯ್ಕೆ ಕೂಡಾ ಇದೆಲ್ಲದರ ಕುರಿತು ಅಸಮಧಾನ ಹೊಂದಿದ್ದಾರೆ. ಅವರು ಇಲ್ಲಿನ ಫನ್‌ ಎಂಡ್‌ ಫುಡ್‌ ವಿಲೇಜ್‌, ಇಲ್ಲಿಂದ ಸಾಕಷ್ಟು ಸಂಪನ್ಮೂಲ ಪಡೆದು ತೀರಾ ಕನಿಷ್ಟವಾದುದನ್ನು ಮರಳಿ ನೀಡಿರುವ ದೊಡ್ಡ ದೊಡ್ಡ ಕಂಪನಿಗಳ ಕುರಿತೂ ಬೇಜಾರಿದೆ. “ಇದೆಲ್ಲದರಿಂದ ನಮಗೇನು ಪ್ರಯೋಜನ?” ಎನ್ನುವುದನ್ನು ಅವರು ತಿಳಿಯಬಯಸುತ್ತಾರೆ. ಗುಣಮಟ್ಟದ ನೀರಿನ ಯೋಜನೆ ಪಡೆಯಬೇಕೆಂದರೆ ಅವರ ಗ್ರಾಮ ಪಂಚಾಯತ್‌ ಯೋಜನೆ ಮೊತ್ತದ ಹತ್ತು ಪ್ರತಿಶತವನ್ನು ಭರಿಸಬೇಕಾಗುತ್ತದೆ. ಯೋಜನಾ ಮೊತ್ತ 4.5 ಲಕ್ಷ. “ನಾವು 45,000 ರೂಪಾಯಿಗಳನ್ನು ಎಲ್ಲಿಂದ ತರಬೇಕು? ನಮ್ಮ ಪರಿಸ್ಥಿತಿಯೇನು?” ಹೀಗಾಗಿ ಯೋಜನೆಯನ್ನು ಹೇಗೆಂದರೆ ಹಾಗೆ ಕಾಂಟ್ರಾಕ್ಟರ್‌ ಒಬ್ಬರಿಗೆ ನೀಡಲಾಗಿದೆ. ಪರಿಣಾಮವಾಗಿ ಯೋಜನೆ ಕಾರ್ಯಗತಗೊಳ್ಳಬಹುದು ಆದರೆ ಬಹಳ ವಿಳಂಬವಾಗುತ್ತದೆ ಜೊತೆಗೆ ಯೋಜನಾ ವೆಚ್ಚವೂ ಹೆಚ್ಚುತ್ತದೆ.ಮತ್ತು ಈ ಯೋಜನೆಯ ಮೇಲೆ ಅನೇಕ ಬಡ ಜನರು ಮತ್ತು ಭೂಹೀನ ಜನರಿಗೆ ಕನಿಷ್ಟ ನಿಯಂತ್ರಣ ಇರುತ್ತದೆ.

ಇತ್ತ ಪಾರ್ಕಿನಲ್ಲಿ ನಾವು ಆಫೀಸಿನಿಂದ ಹೊರಡುವುದನ್ನು ನೋಡಿ ಚಿತ್ರದಲ್ಲಿದ್ದ ಗಾಂಧಿ ಮುಗುಳ್ನಗುತ್ತಿದ್ದರು. “ಸರಳವಾಗಿ ಬದುಕಿ, ನಿಮ್ಮನ್ನು ನೋಡಿ ಇತರರೂ ಸರಳವಾಗಿ ಬದುಕಬಹುದು” ಎಂದ ಗಾಂಧಿ ನಾವು ʼಹಿಮಗೋಪುರʼ ದಾಟಿ ಪಾರ್ಕಿಂಗ್‌ ಲಾಟ್‌ ಕಡೆ ಬಂದಾಗಲೂ ಹಾಗೇ ನಗುತ್ತಿದ್ದರಬಹುದು. ತನ್ನ ಕೆಟ್ಟ ಹಣೆಬರಹವನ್ನು ಶಪಿಸುತ್ತಾ.

ಈ ಲೇಖನವನ್ನು ಮೂಲತಃ ಜೂನ್ 22, 2005ರಂದು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಪಿ. ಸಾಯಿನಾಥ್ ಆಗ ಪತ್ರಿಕೆಯ ಗ್ರಾಮೀಣ ವಿಷಯ ಸಂಪಾದಕರಾಗಿದ್ದರು.

ಅನುವಾದ: ಶಂಕರ. ಎನ್. ಕೆಂಚನೂರು

P. Sainath
psainath@gmail.com

पी. साईनाथ, पीपल्स ऑर्काइव ऑफ़ रूरल इंडिया के संस्थापक संपादक हैं. वह दशकों से ग्रामीण भारत की समस्याओं की रिपोर्टिंग करते रहे हैं और उन्होंने ‘एवरीबडी लव्स अ गुड ड्रॉट’ तथा 'द लास्ट हीरोज़: फ़ुट सोल्ज़र्स ऑफ़ इंडियन फ़्रीडम' नामक किताबें भी लिखी हैं.

की अन्य स्टोरी पी. साईनाथ
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

की अन्य स्टोरी Shankar N. Kenchanuru