"ನಮ್ಮ ಪೂರ್ವಜರ ಆತ್ಮಗಳು ಇಲ್ಲಿ ವಾಸಿಸುತ್ತವೆ" ಬಿದಿರಿನ ಛಾವಣಿ, ನೆಲ ಗೋಡೆಗಳ ನಡುವೆ ಜೇಡ್ ಮಣ್ಣಿನ ತಳವನ್ನು ಹೊಂದಿದ್ದ ಅಡುಗೆ ಮನೆಯನ್ನು ತೋರಿಸುತ್ತಾ ಮೊಂಜಿತ್ ರಿಸಾಂಗ್ ಹೇಳುತ್ತಾರೆ.

ಒಲೆಯು ಒಂದು ಅಡಿ ಎತ್ತರವಿದೆ. ಅದರಲ್ಲಿ ಸೌದೆ ಹಾಕಿ ಅಡುಗೆ ಮಾಡಲಾಗುತ್ತದೆ. "ಇದನ್ನು ಮಾರೋಮ್ ಎಂದು ಕರೆಯಲಾಗುತ್ತದೆ ಮತ್ತು ಇದು ನಮ್ಮ ದೇವರ ಕೋಣೆಯಿದ್ದಂತೆ. ಇದು ಮಿಸಿಂಗ್ ಸಮುದಾಯದ ಎಲ್ಲವೂ ಹೌದು” ಎಂದು ಅವರು ಹೇಳುತ್ತಾರೆ.

ಮೊಂಜಿತ್ ಮತ್ತು ಅವರ ಪತ್ನಿ, ನಯನ್ಮೋನಿ ರಿಸಾಂಗ್ ಅವರು ಇಂದು ರಾತ್ರಿಯ ಔತಣವನ್ನು ಆಯೋಜಿಸುತ್ತಿದ್ದಾರೆ, ಇದು ಸಾಂಪ್ರದಾಯಿಕ ಮಿಸಿಂಗ್ ತಿನಿಸುಗಳನ್ನು ಒಳಗೊಂಡಿದೆ. ದಂಪತಿಗಳು ಮಿಸಿಂಗ್ ಸಮುದಾಯಕ್ಕೆ ಸೇರಿದವರು (ಅಸ್ಸಾಂನಲ್ಲಿ ಪರಿಶಿಷ್ಟ ಪಂಗಡ ಎಂದು ಪಟ್ಟಿಮಾಡಲಾಗಿದೆ) ಮತ್ತು ಒಟ್ಟಿಗೆ ರಿಸಾಂಗ್ಸ್ ಕಿಚನ್ ನಡೆಸುತ್ತಾರೆ - ಅಸ್ಸಾಂನ ಮಜುಲಿ ನದಿ ದ್ವೀಪದಲ್ಲಿರುವ ಗರಮೂರ್‌ನಲ್ಲಿರುವ ಅವರ ಮನೆಯಲ್ಲಿ.

ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಸುಮಾರು 352 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿರುವ ಮಜುಲಿ ಭಾರತದ ಅತಿದೊಡ್ಡ ನದಿ ದ್ವೀಪವಾಗಿದೆ. ಇದರ ಭೌಗೋಳಿಕತೆಯು ಹಸಿರು ಭತ್ತ, ಸಣ್ಣ ಸರೋವರಗಳು, ಕಾಡು ಬಿದಿರು ಮತ್ತು ಜವುಗು ಸಸ್ಯವರ್ಗದಿಂದ ನಿರೂಪಿಸಲ್ಪಟ್ಟಿದೆ. ಭಾರಿ ಮಾನ್ಸೂನ್ ಮತ್ತು ನಂತರದ ಪ್ರವಾಹವನ್ನು ತಡೆದುಕೊಳ್ಳಲು ಮನೆಗಳನ್ನು ಊರುಗಂಬಗಳ ಮೇಲೆ ನಿರ್ಮಿಸಲಾಗುತ್ತದೆ. ಈ ದ್ವೀಪವು ಕೊಕ್ಕರೆಗಳು, ಕಿಂಗ್ ಫಿಶರ್ ಮತ್ತು ನೇರಳೆ ಬಣ್ಣದ ನೀರುಹಕ್ಕಿಯಂತಹ ವಲಸೆ ಹಕ್ಕಿಗಳ ವೀಕ್ಷಣೆಗೆ ಹೆಸರುವಾಸಿಯಾಗಿದೆ. ರಮಣೀಯ ಜಿಲ್ಲೆಯು ಪ್ರತಿವರ್ಷ ಪ್ರಪಂಚದಾದ್ಯಂತದ ಸ್ಥಿರ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿಸುತ್ತದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ.

Monjit and his wife, Nayanmoni Risong, sitting next to the marom . The parap is the scaffolding on top of the marom that is used to store wood and dried fish during the monsoons
PHOTO • Vishaka George

ಮೊಂಜಿತ್ ಮತ್ತು ಅವರ ಪತ್ನಿ ನಯನ್ಮೋನಿ ರಿಸಾಂಗ್ ಮರೋಮ್ ಪಕ್ಕದಲ್ಲಿ ಕುಳಿತಿರುವುದು. ಪ್ಯಾರಾಪ್ ಎಂಬುದು ಮರೋಮ್‌ನ ಮೇಲ್ಭಾಗದಲ್ಲಿರುವ ಅಟ್ಟಣಿಗೆಯಾಗಿದ್ದು, ಇದನ್ನು ಮಳೆಗಾಲದಲ್ಲಿ ಸೌದೆ ಮತ್ತು ಒಣಗಿದ ಮೀನುಗಳನ್ನು ಸಂಗ್ರಹಿಸಲು ಬಳಸಲಾಗುತ್ತದೆ

Majuli's paddy fields rely on the waters of the Brahmaputra
PHOTO • Vishaka George

ಮಜುಲಿಯ ಭತ್ತದ ಗದ್ದೆಗಳು ಬ್ರಹ್ಮಪುತ್ರ ನದಿಯ ನೀರಿನ ಮೇಲೆ ಅವಲಂಬಿತವಾಗಿವೆ

43 ವರ್ಷದ ಮೊಂಜಿತ್ ಮತ್ತು 35 ವರ್ಷದ ನಯನ್ಮೋನಿ ಜೀವನೋಪಾಯವು ಪ್ರವಾಸೋದ್ಯಮದ ಸುತ್ತ ಸುತ್ತುತ್ತದೆ. ಅವರು ಈ ಪ್ರದೇಶದಲ್ಲಿ ರೈಸಿಂಗ್, ಲಾ ಮೈಸನ್ ಡಿ ಆನಂದ ಮತ್ತು ಎನ್‌ಚಾಂಟೆಡ್ ಮಜುಲಿ ಎಂಬ ಮೂರು ಹೋಂಸ್ಟೇಗಳನ್ನು ನಡೆಸಲು ಸಹಾಯ ಮಾಡುತ್ತಾರೆ. 'ರಿಸಾಂಗ್ಸ್ ಕಿಚನ್'ನಲ್ಲಿರುವ ಬಿದಿರಿನ ಗೋಡೆಯ ಮೇಲಿನ ಫ್ರೇಮ್ ಪ್ರಪಂಚದಾದ್ಯಂತದ ಕರೆನ್ಸಿಗಳನ್ನು ಹೊಂದಿದೆ.

ರಿಸಾಂಗ್‌ ಕಿಚನ್ನಿನಲ್ಲಿ ತಿನ್ನುವುದೆಂದರೆ ಅದೊಂದು ಮೈಮರೆಸುವ ಅನುಭವ. ಅಡುಗೆ ಮನೆ ಮತ್ತು ಬಡಿಸುವ ಕೋಣೆಗಳ ನಡುವಿನ ಅಂತರ ಇಲ್ಲಿಲ್ಲ. ಇಲ್ಲಿ ಅಡುಗೆ ಮನೆಯಲ್ಲೇ ಮಾತುಕತೆಗಳ ನಡುವೆ ಊಟ . ಸೌದೆಯ ಹೊಗೆ ಇರುತ್ತದೆಯಾದರೂ ಜಾಗ ವಿಶಾಲವಾಗಿರುವುದರಿಂದಾಗಿ ಅದೊಂದು ತೊಂದರೆಯೆನ್ನಿಸುವುದಿಲ್ಲ.

ನಯನ್ಮೋನಿ ಮೀನು, ಕತ್ತರಿಸಿದ ಚಿಕನ್, ತಾಜಾ ಈಲ್, ಸೊಪ್ಪುಗಳು, ಬದನೆಕಾಯಿ, ಆಲೂಗಡ್ಡೆ ಮತ್ತು ಅನ್ನವನ್ನು ಊಟಕ್ಕೆ ಒಟ್ಟುಗೂಡಿಸುವಾಗ, "ಮಿಸಿಂಗ್ ಜನರು ನಮ್ಮ ಅಡುಗೆಯಲ್ಲಿ ಶುಂಠಿ, ಈರುಳ್ಳಿ ಮತ್ತು ಬೆಳ್ಳುಳ್ಳಿಯಂತಹ ಸಾಕಷ್ಟು ಕಚ್ಚಾ ಮಸಾಲೆಗಳನ್ನು ಬಳಸುತ್ತಾರೆ. ನಾವು ಹೆಚ್ಚು ಮಸಾಲೆ ತಿನ್ನುವುದಿಲ್ಲ. ನಾವು ನಮ್ಮ ಆಹಾರವನ್ನು ಸ್ಟೀಮ್ ಮಾಡಿ ಬೇಯಿಸುತ್ತೇವೆ."

ಕೆಲವೇ ನಿಮಿಷಗಳಲ್ಲಿ ಅವರು ಮಿಕ್ಸಿಯಲ್ಲಿ ಕೆಲವು ಪದಾರ್ಥಗಳನ್ನು ಬೆರೆಸುತ್ತಾರೆ. ನಂತರ ಸೌದೆ ಒಲೆಯ ಮೇಲೆ ಪಾತ್ರೆಯಿರಿಸಿ ಇತರ ವಸ್ತುಗಳನ್ನು ಬೆರೆಸಲು ಆರಂಭಿಸುತ್ತಾರೆ. ಅಡುಗೆ ಮನೆಯು ಸೊಪ್ಪುಗಳು ಮತ್ತು ಮಸಾಲೆ ಪದಾರ್ಥಗಳ ಪರಿಮಳ ಅಡುಗೆ ಕೋಣೆಯನ್ನು ತುಂಬಿಕೊಳ್ಳುತ್ತದೆ. ಅದನ್ನು ಅವರು ಎಚ್ಚರಿಕೆಯಿಂದ ನಿರ್ವಹಿಸುತ್ತಾರೆ.

ಅತ್ತ ಆಹಾರ ತಯಾರಾಗುತ್ತಿರುವಾಗ ಹಿತ್ತಾಳೆ ಲೋಟಗಳಲ್ಲಿ ಅಪಾಂಗ್‌ ಕಷಾಯವನ್ನು ಸರಬರಾಜು ಮಾಡಲಾಗುತ್ತದೆ. ಸಾಂಪ್ರದಾಯಿಕ ಮಿಸಿಂಗ್ ಪಾನೀಯವಾದ ಅಪಾಂಗ್‌ ಸ್ವಲ್ಪ ಮಸಾಲೆಯ ಅಮಲಿನೊಂದಿಗೆ ಒಂದಷ್ಟು ಸಿಹಿಯಾಗಿರುತ್ತದೆ. ಪ್ರತಿ ಮಿಸಿಂಗ್ ಮನೆಯೂ ತನ್ನದೇ ಆದ ಕಷಾಯವನ್ನು ಹೊಂದಿರುತ್ತದೆ. ಈ ಕಷಾಯ ತಯಾರಿಸಿದವರು ಮೊಂಜಿತ್ ಅವರ ಅತ್ತಿಗೆ ಜುನಾಲಿ ರಿಸಾಂಗ್. ಪಾನೀಯದ ಮಹತ್ವ ಮತ್ತು ಅದನ್ನು ಇಲ್ಲಿ ಹೇಗೆ ತಯಾರಿಸಲಾಗುತ್ತದೆ ಎಂಬುದರ ಬಗ್ಗೆ ನೀವು ಇನ್ನಷ್ಟು ಓದಬಹುದು: ಅಪಾಂಗ್: ಸಮುದಾಯದ ಸಾಂಪ್ರದಾಯಿಕ ಬಿಯರ್ .

Left: Chopped eel that will be steamed.
PHOTO • Riya Behl
Fish cut and cleaned for a ghetiya curry
PHOTO • Vishaka George

ಎಡ: ಕತ್ತರಿಸಿದ ಈಲ್ ಮೀನನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ. ಬಲ: ಘೇಟಿಯಾ ಪಲ್ಯಕ್ಕಾಗಿ ಮೀನು ಕತ್ತರಿಸಿ ಸ್ವಚ್ಛಗೊಳಿಸಲಾಗಿದೆ

Apong beer
PHOTO • Vishaka George
Nayanmoni cutting and cleaning
PHOTO • Vishaka George

ಎಡ: ಅಪಾಂಗ್ ಬಿಯರ್. ಬಲ: ನಯನ್ಮೋನಿ ದೈನಂದಿನ ಕೆಲಸದ ನಡುವೆ

ಸಿಪ್ಪೆ ಸುಲಿಯುವ, ಕತ್ತರಿಸುವ ಮತ್ತು ಕಲಕುವ ಕೆಲಸಗಳ ನಡುವೆ, ನಯನ್ಮೋನಿ ಒಲೆಯ ಬೆಂಕಿಯನ್ನು ಪರಿಶೀಲಿಸಿ ಮುಂದಿನ ತಿನಿಸಾದ ಕೋಳಿಯ ತುಂಡನ್ನು ಸುಡಲು ಅದರ ಉರಿಯನ್ನು ಸಿದ್ಧಗೊಳಿಸುತ್ತಾರೆ.

ನಯನ್ಮೋನಿ ನೋಡುತ್ತಿರುವ ಕಡೆಗೆ ನಮ್ಮ ದೃಷ್ಟಿಯೂ ಹರಿಯಿತು. ಅಲ್ಲಿ ಮಾರೊಮ್‌ ಮೇಲೆ ಪರಪ್‌ ಎಂದು ಕರೆಯಲ್ಪಡುವ ಮೀನುಗಳನ್ನು ಒಣಗಿಸಲು ಮತ್ತು ಸಂಗ್ರಹಿಸಲು ಬಳಸುವ ಸಾಧನ ಕಾಣಿಸಿತು. ಇದನ್ನು ಹೆಚ್ಚಾಗಿ ಮೀನಿನ ಸಂತಾನೋತ್ಪತ್ತಿ ಸಮಯದಲ್ಲಿ ಬಳಸಲಾಗುತ್ತದೆ.

"ಏಪ್ರಿಲ್, ಮೇ ಮತ್ತು ಜೂನ್ನಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಆಗ ಮೀನುಗಳು ಸಂತಾನೋತ್ಪತ್ತಿ ಮಾಡುತ್ತವೆ ಆ ಸಮಯಕ್ಕಾಗಿ ಮೀನು ಸಂಗ್ರಹ ಮಾಡಿಟ್ಟಿರುತ್ತೇವೆ"‍ಎಂದು ಮೊಂಜಿತ್ ಹೇಳುತ್ತಾರೆ.

ಅಡಿಗೆ-ಊಟದ ಕೋಣೆ ಸಾಂಪ್ರದಾಯಿಕ ಮಿಸಿಂಗ್ ಕಾಟೇಜಿನ ಒಂದು ಭಾಗವಾಗಿದೆ, ಇದನ್ನು ಚಾಂಗ್ ಘರ್ ಎಂದು ಕರೆಯಲಾಗುತ್ತದೆ. ಇದನ್ನು ಕಾಂಕ್ರೀಟ್ ಮತ್ತು ಬಿದಿರಿನ ಕಂಬ ಬಳಸಿ ನೆಲದಿಂದ ಎರಡು ಅಡಿಗಳಷ್ಟು ಎತ್ತರಿಸಲಾಗಿದೆ. ನೆಲಹಾಸು ನೆಲದಿಂದ ಅಂತರವನ್ನು ಹೊಂದಿದೆ, ಇದು ಹೆಚ್ಚಿನ ಮಜುಲಿ ಮನೆಗಳಲ್ಲಿ ಪ್ರವಾಹದ ನೀರು ಒಳ ಬಾರದಂತೆ ತಡೆಯಲು ಮಾಡಲಾಗಿರುತ್ತದೆ.

ಪ್ರವಾಹದ ಸಮಯದಲ್ಲಿ ಇಲ್ಲಿನ ಆಹಾರಕ್ರಮವು ಬದಲಾಗುತ್ತದೆ ಎಂದು ಮೊಂಜಿತ್ ಹೇಳುತ್ತಾರೆ, "ಪ್ರವಾಹದಿಂದಾಗಿ, ತರಕಾರಿಗಳು ಹೆಚ್ಚು ಸಿಗುವುದಿಲ್ಲ. ಚಳಿಗಾಲದಲ್ಲಿ ಅನೇಕ ತರಕಾರಿಗಳು ಸಿಗುತ್ತವೆ. ಆಗ ನಾವು ಸಾಕಷ್ಟು ತರಕಾರಿಗಳನ್ನು ತಿನ್ನುತ್ತೇವೆ."

ಒಲೆಯ ಸೌದೆ ಮುಗಿದು ಹೋಗುತ್ತಿದ್ದಂತೆ ಮತ್ತಷ್ಟು ಸೌದೆ ಹಾಕಿದ ಮೊಂಜಿತ್‌, "ನಾನು ಬೇಕಿದ್ದರೆ ಬೆಟ್ಟವನ್ನೇ ತಲೆಯ ಮೇಲೆ ಹೊರಬಲ್ಲೆ. ಆದರೆ ಅಡುಗೆ ಮಾಡುವುದು ನನ್ನಿಂದ ಸಾಧ್ಯವಿಲ್ಲ" ಎಂದರು. ಯಾಕೆ ಎಂದು ಕೇಳಿದಾಗ, ಅವರು ನಗುತ್ತಾ "ನನಗೆ ಅದು ಇಷ್ಟವಾಗುವುದಿಲ್ಲ" ಮಿಸಿಂಗ್‌ ಸಮುದಾಯದಲ್ಲಿ 99 ಪ್ರತಿಶತ ಅಡುಗೆ ಮಾಡುವುದು ಮಹಿಳೆಯರೇ ಆಗಿರುತ್ತಾರೆ.

ಮಿಸಿಂಗ್ ಸಮುದಾಯದ ಜಾನಪದ ಸಾಹಿತ್ಯದ ಪ್ರಕಾರ ಮಹಿಳೆಯರು ಸಾಮಾನ್ಯವಾಗಿ ಅಡುಗೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ, ಡಾ. ಜವಾಹರ ಜ್ಯೋತಿ ಕುಳಿಯವರ ಪುಸ್ತಕವು ಅವರ ಮೌಖಿಕ ಮತ್ತು ಲಿಖಿತ ಸಂಪ್ರದಾಯಗಳ ಸಹಾಯದಿಂದ ಸಮುದಾಯಗಳ ಅಭ್ಯಾಸಗಳನ್ನು ಅಧ್ಯಯನ ಮಾಡುತ್ತದೆ.[1] [2] ಇತರ ಚಟುವಟಿಕೆಗಳ ಹೊರತಾಗಿ, ಮಿಸಿಂಗ್ ಮಹಿಳೆಯರು ಅಡುಗೆ ಮತ್ತು ನೇಯ್ಗೆಯಲ್ಲಿ ಪರಿಣತಿ ಹೊಂದಿದ್ದಾರೆ. ಪರಿಸ್ಥಿತಿಯ ಅನಿವಾರ್ಯತೆಯಿಲ್ಲದ ಹೊರತು ಅಡುಗೆಗೆ ಆದ್ಯತೆ ನೀಡುವುದಿಲ್ಲ ಎಂದು ಪುರುಷರು ಒಪ್ಪಿಕೊಳ್ಳುತ್ತಾರೆ.

At Risong’s Kitchen, a frame on a bamboo wall holds currencies from across the world.
PHOTO • Vishaka George
I can carry a load on my head up a mountain, but I simply cannot cook!' says Monjit
PHOTO • Vishaka George

ಎಡ: 'ರಿಸಾಂಗ್ಸ್ ಕಿಚನ್' ನಲ್ಲಿ, ಬಿದಿರಿನ ಗೋಡೆಯ ಮೇಲಿನ ಚೌಕಟ್ಟೊಂದರಲ್ಲಿ ಪ್ರಪಂಚದಾದ್ಯಂತದ ಕರೆನ್ಸಿಗಳಿವೆ. ಬಲ: 'ನಾನು ಬೇಕಿದ್ದರೆ ಬೆಟ್ಟವನ್ನು ಹೊರಬಲ್ಲೆ ಆದರೆ ಅಡುಗೆ ಮಾಡಲಾರೆ!' ಎನ್ನುತ್ತಾರೆ ಮೊಂಜಿತ್

Smoked chicken skewers called kukura khorika
PHOTO • Vishaka George
Mising women like Nayanmoni are skilled in cooking and weaving
PHOTO • Vishaka George

ಎಡ: ಕುಕುರಾ ಖೋರಿಕಾ ಎಂದು ಕರೆಯಲ್ಪಡುವ ಸುಟ್ಟ ಕೋಳಿಯ ತುಂಡುಗಳು. ಬಲ: ನಯನ್ಮೋನಿಯವರಂತಹ ಮಿಸಿಂಗ್ ಮಹಿಳೆಯರು ಅಡುಗೆ ಮತ್ತು ನೇಯ್ಗೆಯಲ್ಲಿ ಪರಿಣತಿ ಹೊಂದಿದ್ದಾರೆ

ಅದೇನೇ ಇದ್ದರೂ ಮೊಂಜಿತ್ ಮತ್ತು ನಯನ್ಮೋನಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸಗಳನ್ನು ತಮ್ಮ ನಡುವೆ ಹಂಚಿಕೊಂಡಿದ್ದಾರೆ. ಮೊಂಜಿತ್‌ ಹೇಳುವಂತೆ ನಯನ್ಮೋನಿ ರಿಸಾಂಗ್ಸ್‌ ಕಿಚನ್‌ನ ಬಾಸ್.‌ ಮೊಂಜಿತ್‌ ತಮ್ಮನ್ನು ಹೋಮ್‌ಸ್ಟೇಗಳಲ್ಲಿ ಅತಿಥಿಗಳನ್ನು ನೋಡಿಕೊಳ್ಳುವಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಸಂಜೆಯಾಗುತ್ತಿದ್ದಂತೆ, ತಾವು ನಡೆಸುತ್ತಿರುವ ಹೋಂಸ್ಟೇಗಳಲ್ಲಿ ಅತಿಥಿಗಳ ಬೇಕು ಬೇಡಗಳನ್ನು ವಿಚಾರಿಸತೊಡಗುತ್ತಾರೆ.

*****

ವಿಸ್ತಾರವಾದ ಥಾಲಿಯನ್ನು ತಯಾರಿಸುವುದು ಕಷ್ಟದ ಕೆಲಸ. ನಯನ್ಮೋನಿ ಸುಮಾರು ಎರಡೂವರೆ ಗಂಟೆಗಳ ಕಾಲ ಒಲೆ, ಸೌದೆ ಮತ್ತು ಸಿಂಕ್ ಬಳಿ ಶ್ರಮಿಸುತ್ತಿದ್ದಾರೆ. ಮರೋಮ್‌ನಲ್ಲಿ ಅಡುಗೆ ಮಾಡುವುದು ಬಹಳ ನಿಧಾನದ ಪ್ರಕ್ರಿಯೆಯಾಗಿದೆ, ಆದರೆ ಹೊಗೆ ಭರಿತ ವಾತಾವರಣದಲ್ಲಿ ಅಡುಗೆ ತಯಾರಾಗುವುದನ್ನು ನೋಡುವುದು ಪ್ರವಾಸಿಗರ ಕಣ್ಣಿಗೆ ಹಬ್ಬ.

ಅವರು ಈ ಥಾಲಿ ತಯಾರಿಸುವ ಕೆಲಸವನ್ನು ಎಷ್ಟು ದಿನಗಳಿಗೊಮ್ಮೆ ಮಾಡುತ್ತಾರೆ? "ಕೆಲವೊಮ್ಮೆ ತಿಂಗಳಿಗೊಮ್ಮೆ. ಕೆಲವು ಸಲ ಅದೂ ಇರುವುದಿಲ್ಲ." ಕೊವಿಡ್‌ ಬರುವುದಕ್ಕೂ ಮೊದಲು ಹೆಚ್ಚು ಹೆಚ್ಚು ಮಾಡುತ್ತಿದ್ದೆ ಎನ್ನುತ್ತಾರೆ. ಅವರು 2007ರಲ್ಲಿ ವಿವಾಹವಾಗಿ ಇಲ್ಲಿಗೆ ಬಂದಿದ್ದು ಕಳೆದ 15 ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ.

“ನಮ್ಮದು ಮೊದಲ ನೋಟದಲ್ಲೇ ಮೊಳೆತ ಪ್ರೇಮವಾಗಿತ್ತು” ಎಂದರು ಮೊಂಜಿತ್‌ ಒಲೆಯತ್ತ ನೋಡುತ್ತಾ.

“ಅಥವಾ 30 ನಿಮಿಷ ತೆಗೆದುಕೊಂಡಿರಬಹುದು” ಎಂದರು ಮತ್ತೆ ನಗುತ್ತಾ.

"ಇದು ಸರಿ, ಬಹುಶಃ 30 ನಿಮಿಷ ತೆಗೆದುಕೊಂಡಿರಬಹುದು" ಎಂದು ಮೀನು ಕತ್ತರಿಸುತ್ತಿದ್ದ ನಯನ್ಮೋನಿ ನಗುತ್ತಾ ಪುನರುಚ್ಚರಿಸಿದರು.

"ಅವಳು ಹೇಳಿದ್ದು ಸರಿ" ಎಂದ ಮೊಂಜಿತ್ ಈ ಬಾರಿ ದೃಢನಿಶ್ಚಯದಿಂದ ಹೇಳಿದರು, "ಎರಡು ದಿನಗಳು ಬೇಕಾಯಿತು. ಅದರ ನಂತರ, ನಾವು ನದಿಯ ಬಳಿ ರಹಸ್ಯವಾಗಿ ಭೇಟಿಯಾಗುತ್ತಿದ್ದೆವು ಮತ್ತು ಒಟ್ಟಿಗೆ ಸಮಯ ಕಳೆಯುತ್ತಿದ್ದೆವು. ಅವು ಒಳ್ಳೆಯ ಹಳೆಯ ದಿನಗಳು." ದಂಪತಿಗಳು ಮೊದಲ ಬಾರಿಗೆ 20 ವರ್ಷಗಳ ಹಿಂದೆ ಭೇಟಿಯಾದರು. ಇಂದು, ಅವರಿಗೆ ಹದಿಹರೆಯದ ಮಗಳು ಬಬ್ಲಿ ಮತ್ತು ಬಾರ್ಬಿ ಎಂಬ ಪುಟ್ಟ ಮಗುವಿದೆ.

ಅಂದು ನಯನ್ಮೋನಿ ಕೊನೆಯದಾಗಿ ತಯಾರಿಸಿದ ತಿನಿಸು ದೇಶದ ಈ ಭಾಗದಲ್ಲಿ ರುಚಿಕರವಾದ ಈಲ್‌ ಮೀನು. “ನಾವು ಸಾಮಾನ್ಯವಾಗಿ ಈಲ್ ಅನ್ನು ಕಚ್ಚಾ ಬಿದಿರಿನಲ್ಲಿ ಬೇಯಿಸುತ್ತೇವೆ. ಹಾಗೆ ಬೇಯಿಸಿದರೆ ರುಚಿಯಿರುತ್ತದೆ. ಇಂದು ನಮ್ಮ ಬಳಿ ಹಸಿ ಬಿದಿರು ಇರಲಿಲ್ಲವಾದ್ದರಿಂದ ಅದನ್ನು ಬಾಳೆ ಎಲೆಯಲ್ಲಿ ಬೇಯಿಸಿದೆವು."

Nayamoni smoking the eel in a banana leaf
PHOTO • Riya Behl
Fish curry, or ghetiya
PHOTO • Vishaka George

ಎಡ: ನಯಾಮೋನಿ ಬಾಳೆ ಎಲೆಯಲ್ಲಿ ಈಲ್ ಸುಡುತ್ತಿರುವುದು. ಬಲ: ಮೀನಿನ ಸಾರು, ಅಥವಾ ಘೇಟಿಯಾ

Left: Nayanmoni prepping the thali that's almost ready to be served
PHOTO • Vishaka George
Right: A Mising thali being prepared
PHOTO • Vishaka George

ಎಡ: ನಯನ್ಮೋನಿ ಬಡಿಸಲು ಬಹುತೇಕ ಸಿದ್ಧವಾಗಿರುವ ಥಾಲಿಯನ್ನು ಸಿದ್ಧಪಡಿಸುತ್ತಿದ್ದಾರೆ. ಬಲ: ಮಿಸಿಂಗ್ ಥಾಲಿ ತಯಾರಿಸಲಾಗುತ್ತಿದೆ

ಅವರು ಅಡುಗೆ ಹೇಗೆ ಕಲಿತರು? "ಮೊಂಜಿತ್ ಕಿ ಮಾ, ದೀಪ್ತಿ, ನೇ ಮುಜೆ ಸಿಖಾಯಾ [ಮೊಂಜಿತ್ ತಾಯಿ ಅಡುಗೆ ಮಾಡುವುದು ಹೇಗೆಂದು ಕಲಿಸಿದರು] ಎಂದು ಅವರು ಹೇಳುತ್ತಾರೆ. ದೀಪ್ತಿ ರಿಸಾಂಗ್‌ನ ನೆರೆಯ ಹಳ್ಳಿಯಲ್ಲಿರುವ ತನ್ನ ಮಗಳನ್ನು ಭೇಟಿ ಮಾಡಲು ಹೋಗಿದ್ದರು.

ಕೊನೆಗೂ ಕಾಯುತ್ತಿದ್ದ ಕ್ಷಣ ಬಂದೇಬಿಟ್ಟಿತು. ಎಲ್ಲರೂ ತಮ್ಮ ಬಿದಿರಿನ ಸ್ಟೂಲ್‌ಗಳನ್ನು ಎತ್ತಿಕೊಂಡು ಮೂಲೆಯಲ್ಲಿದ್ದ ಉದ್ದನೆಯ ಡೈನಿಂಗ್‌ ಟೇಬಲ್‌ ಕಡೆ ನಡೆಯತೊಡಗಿದರು

ಮೆನುವಿನಲ್ಲಿ ಘೆಟಿಯಾ, ಸಿಹಿ ಮತ್ತು ಹುಳಿ ಮೀನು ಮತ್ತು ಆಲೂಗಡ್ಡೆ ಸಾರು, ಬಾಳೆ ಎಲೆಯಲ್ಲಿ ಬೇಯಿಸಿದ ಈಲ್, ಹುರಿದ ಸೊಪ್ಪನ್ನು ಬೆರೆಸಿ, ಕುಕುರ ಖೋರಿಕಾ ಎಂದು ಕರೆಯಲ್ಪಡುವ ಸುಟ್ಟ ಕೋಳಿ, ಬಿಳಿಬದನೆ ಅಥವಾ ಬೆಂಗೆನಾ ಭಾಜಾ ಮತ್ತು ಪುರಂಗ್ ಆಪಿನ್ ಎಂದು ಕರೆಯಲ್ಪಡುವ ಬಾಳೆ ಎಲೆಯಲ್ಲಿ ಸುತ್ತಿದ ಅನ್ನ. ಕಟುವಾದ ಸಾರುಗಳು, ಸೂಕ್ಷ್ಮವಾಗಿ ಸುಟ್ಟ ಮಾಂಸ ಮತ್ತು ಸುವಾಸನೆಯ ಅನ್ನವು ಈ ಊಟವನ್ನು ರುಚಿಕರವಾಗಿಸಿತ್ತು.

ಒಂದು ಊಟದ ಬೆಲೆ 500 ರೂಪಾಯಿಗಳು.

"ಈ ರೀತಿಯ ಥಾಲಿ ತಯಾರಿಸುವುದು ತುಂಬಾ ಕಷ್ಟ. ಕೆಲವೇ ದಿನಗಳಲ್ಲಿ ಇಲ್ಲಿಗೆ ಬರಲಿರುವ 35 ಜನರಿಗೆ ಅಡುಗೆ ಮಾಡಬೇಕಾಗಿದೆ." ಎಂದು ದಣಿದ ದನಿಯಲ್ಲಿ ನಯನ್ಮೋನಿ ಹೇಳಿದರು.

ಶ್ರಮದಾಯಕ ಅಡುಗೆಯ ಕೆಲಸ ಮುಗಿದ ನಂತರ ಅವರು ನದಿಯ ಇನ್ನೊಂದು ದಡದಲ್ಲಿರುವ ಜೋರ್ಹತ್‌ಗೆ ಹೋಗುವ ಬಯಕೆಯನ್ನು ಹೇಳಿದರು. ಅಲ್ಲಿಗೆ ತಲುಪಲು ದೋಣಿಯ ಮೂಲಕ ಹೋಗಬೇಕು. ಮಹಾಮಾರಿ ಬಂದಾಗಿನಿಂದ ಅವರು ಅಲ್ಲಿಗೆ ಹೋಗಿಲ್ಲ. "ಜೋರ್ಹತ್‌ನಲ್ಲಿ ಒಂದಷ್ಟು ಶಾಪಿಂಗ್‌ ಮಾಡಿ ಒಳ್ಳೆಯ ಹೋಟೆಲ್ಲಿನಲ್ಲಿ ಊಟ ಮಾಡುವುದು ನನಗೆ ಇಷ್ಟ. ಅಲ್ಲಿ ನಾನು ಅಡುಗೆ ಮಾಡಬೇಕಿಲ್ಲ!" ಎಂದು ನಕ್ಕರು.

ಅನುವಾದ: ಶಂಕರ. ಎನ್. ಕೆಂಚನೂರು

Vishaka George

विशाखा जॉर्ज, पीपल्स आर्काइव ऑफ़ रूरल इंडिया की सीनियर एडिटर हैं. वह आजीविका और पर्यावरण से जुड़े मुद्दों पर लिखती हैं. इसके अलावा, विशाखा पारी की सोशल मीडिया हेड हैं और पारी एजुकेशन टीम के साथ मिलकर पारी की कहानियों को कक्षाओं में पढ़ाई का हिस्सा बनाने और छात्रों को तमाम मुद्दों पर लिखने में मदद करती है.

की अन्य स्टोरी विशाखा जॉर्ज
Editor : Priti David

प्रीति डेविड, पारी की कार्यकारी संपादक हैं. वह मुख्यतः जंगलों, आदिवासियों और आजीविकाओं पर लिखती हैं. वह पारी के एजुकेशन सेक्शन का नेतृत्व भी करती हैं. वह स्कूलों और कॉलेजों के साथ जुड़कर, ग्रामीण इलाक़ों के मुद्दों को कक्षाओं और पाठ्यक्रम में जगह दिलाने की दिशा में काम करती हैं.

की अन्य स्टोरी Priti David
Photo Editor : Binaifer Bharucha

बिनाइफ़र भरूचा, मुंबई की फ़्रीलांस फ़ोटोग्राफ़र हैं, और पीपल्स आर्काइव ऑफ़ रूरल इंडिया में बतौर फ़ोटो एडिटर काम करती हैं.

की अन्य स्टोरी बिनायफ़र भरूचा
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru