ಚಮ್ನೀ ಮೀನಾ ಎಂಬ ಈ ಮಹಿಳೆಗೆ ತನ್ನ ವಯಸ್ಸಿನ ಬಗ್ಗೆ ನಿಖರವಾಗಿ ತಿಳಿದಂತಿಲ್ಲ. ಆದರೆ ತನ್ನ ಯೌವನದ ದಿನಗಳಲ್ಲಿ ಆಹಾರವೆಂಬುದು ಇಂದಿಗಿಂತ ಎಷ್ಟು ರುಚಿಕರವಾಗಿತ್ತುಎಂಬುದು ಅವಳಿಗೆ ಚೆನ್ನಾಗಿ ನೆನಪಿದೆ. ಆ ಕಾಲದ ಭೋಜನದ ಸವಿಯನ್ನು ನೆನಪಿಸುತ್ತಾ, ``ಈಗಿನ ಆಹಾರಗಳಲ್ಲಿ ಅಸಲಿ ರುಚಿಯು ಕಳೆದುಹೋಗಿ ಬೇರೆಯೇ ರುಚಿಯೊಂದು ಬಂದುಬಿಟ್ಟಿದೆ. ಮೊದಲಿನ ಸುವಾಸನೆಯೂಈಗಿಲ್ಲ. `ದೇಸಿ' ಎಂದು ಕರೆಯಲ್ಪಡುವ ಸ್ಥಳೀಯ ತಳಿಯ ಬೀಜಗಳೇ ಈಗ ಇಲ್ಲವಾಗಿವೆ. ಬಗೆಬಗೆಯ ಸ್ಥಳೀಯ ಬೀಜತಳಿಗಳು ಸಿಗುವುದೇ ಕಷ್ಟವೆಂಬ ಪರಿಸ್ಥಿತಿಯುಂಟಾಗಿದೆ'' ಎನ್ನುತ್ತಾರೆ ಈಕೆ.

ರಾಜಸ್ಥಾನದ ಉದಯಪುರ ಪಟ್ಟಣದ ಆಚೆಗಿರುವ `ಘಾಟಿ' ಎಂಬ ಹಳ್ಳಿಯಲ್ಲಿ ನೆಲೆಸಿರುವ ಚಮ್ನೀ ಬಾಯಿಗೆ ಎಂಭತ್ತರ ಪ್ರಾಯ ಎಂಬುದು ಅವರದ್ದೇ ಅಂದಾಜು. ಚಮ್ನೀಬಾಯಿ ಬಾಲ್ಯದಿಂದಲೂ ಬಗೆಬಗೆಯ ಸ್ಥಳೀಯ ತಳಿಯ ಬೀಜಗಳನ್ನು ಸಂಗ್ರಹಿಸುವ ಮತ್ತು ಸಂರಕ್ಷಿಸುವ ಅಭ್ಯಾಸವಿಟ್ಟುಕೊಂಡು ಬೆಳೆದವರು. ಬದುಕು ಕಟ್ಟಿಕೊಳ್ಳಲು ಗಂಡನೊಂದಿಗೆ ತನ್ನ ಮನೆ ಮತ್ತು ಜಮೀನಿಗಾಗಿ ಪಟ್ಟ ಪಾಡು ಆಕೆಗೆ ಇನ್ನೂ ನೆನಪಿದೆ. ಆದರೂ ಬದುಕು ಮತ್ತು ಆಹಾರಗಳು ಆ ಕಾಲದಲ್ಲೇ ಚೆನ್ನಾಗಿದ್ದವು ಎಂದು ಆಕೆ ಹೇಳುತ್ತಾರೆ.

PHOTO • Sweta Daga

ಸಾಸಿವೆಯ ದೇಸಿ ಬೀಜತಳಿಗಳು

ಚಮ್ನೀಬಾಯಿ ಮತ್ತು ಆಕೆಯ ಕುಟುಂಬವು ಮರೆಯಾಗುತ್ತಿರುವ ಬಗೆಬಗೆಯ ಸ್ಥಳೀಯ ಬೀಜ ತಳಿಗಳನ್ನು ಹಲವು ವರ್ಷಗಳಿಂದ ಸಂರಕ್ಷಿಸುತ್ತಾ ಬಂದಿದೆ. ಚಮ್ನೀಬಾಯಿಯ ಶ್ರದ್ಧೆಯಿಂದಾಗಿ ಈ ವಿದ್ಯೆಯು ಆಕೆಯ ಸೊಸೆಯರಿಗೂ ಕರಗತವಾಗಿದೆ. ``ಬೀಜಗಳನ್ನು ಸಂರಕ್ಷಿಸುವುದರಲ್ಲಿ ಮಹಿಳೆಯರೇ ಮೇಲು. ಅವುಗಳನ್ನು ಸಂರಕ್ಷಿಸಿ, ಆರೈಕೆ ಮಾಡುತ್ತಾ, ಕಾಲಕಾಲಕ್ಕೆ ಮಾಡಬೇಕಾದ ಎಲ್ಲಾ ಅಗತ್ಯ ಪ್ರಕ್ರಿಯೆಗಳನ್ನು ಮಹಿಳೆಯರು ಉತ್ತಮವಾಗಿ ಮಾಡಬಲ್ಲರು'', ಎಂಬುದು ಚಮ್ನೀಬಾಯಿಯ ಅಭಿಪ್ರಾಯ.

PHOTO • Sweta Daga

ರೈತನ ಜೀವನದಲ್ಲಿ ಬೀಜಗಳ ಪ್ರಾಮುಖ್ಯತೆಗಳ ಬಗ್ಗೆ ಹೇಳುತ್ತಿರುವ ಚಮ್ನೀಬಾಯಿ

PHOTO • Sweta Daga

ಸಾವಯವ ಕೃಷಿಗೊಳಪಡಿಸಲಾಗುವ ದೇಸಿತಳಿಯ ಹುರುಳಿಕಾಳುಗಳು

ವಿವಾಹವಾಗಿ ಗಂಡನ ಮನೆಗೆ ಬಂದ ಹೊಸದರಲ್ಲಿ ಚಮ್ನೀಬಾಯಿಯ ಸೊಸೆಯರಾದ ಚಂಪಾಬಾಯಿ ಮತ್ತು ಡಾಲಿಬಾಯಿಯರಿಗೆ ಬೀಜಗಳನ್ನು ಸಂರಕ್ಷಿಸುವುದರ ಬಗ್ಗೆಯಾಗಲೀ, ಅವುಗಳ ನಿರ್ವಹಣೆಯ ವಿಧಾನಗಳಾಗಲೀ ತಿಳಿದಿರಲಿಲ್ಲ. ಆದರೆ ವರ್ಷಗಳು ಕಳೆದಂತೆ ಅತ್ತೆಯಾದ ಚಮ್ನೀಬಾಯಿಯನ್ನು, ಬೀಜಗಳೊಂದಿಗೆ ಆಕೆಗಿದ್ದ ನಂಟನ್ನು ನೋಡುತ್ತಾ ಸೊಸೆಯರಿಬ್ಬರೂ ಈ ಕಲೆಯನ್ನೂ ಸಿದ್ಧಿಸಿಕೊಂಡರು. ದಶಕಗಳ ತರಬೇತಿಯ ಮತ್ತು ಅನುಭವದ ನಂತರ ಚಮ್ನೀಬಾಯಿಯ ಸೊಸೆಯರಿಬ್ಬರೂ ಬೀಜಗಳ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಾ ತಮ್ಮ ಕುಶಲತೆಯನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೆ.

PHOTO • Sweta Daga

ಚಮ್ನೀಬಾಯಿ ತನ್ನ ಮುದ್ದಿನ ಸೊಸೆಯರೊಂದಿಗೆ

ಮರೆಯಾಗುತ್ತಿರುವ `ದೇಸಿ' ಬೀಜಗಳನ್ನು ಇವರುಗಳು ಸಂರಕ್ಷಿಸುತ್ತಿರುವ ವಿಶಿಷ್ಟ ವಿಧಾನಗಳ ಬಗ್ಗೆ ಹೇಳಲೇಬೇಕು. ದೊಡ್ಡದಾದ ಮಣ್ಣಿನಿಂದ ಅಥವಾ ಜೇಡಿಮಣ್ಣಿನಿಂದ ಮಾಡಲ್ಪಟ್ಟ ಬ್ಯಾರೆಲ್ ನಂತಿರುವ ಪಾತ್ರೆಗಳಲ್ಲಿ ಬೀಜಗಳನ್ನು ಇಡಲಾಗುತ್ತದೆ. ನೈಸರ್ಗಿಕವಾದ ವಸ್ತುಗಳು ಮತ್ತು  ಆ ವಿಧಾನಗಳಿಂದ ಸಂರಕ್ಷಿಸಲ್ಪಡುವ ಈ ಬೀಜಗಳು ಇಂಥಾ ಪಾತ್ರೆಗಳಲ್ಲಿ ತಂಪಾಗಿರುತ್ತವಂತೆ.

PHOTO • Sweta Daga

ಬೀಜಗಳ ಗುಣಮಟ್ಟವನ್ನು ಕಾಯ್ದುಕೊಳ್ಳಲು ಬಳಸಲಾಗುವ ಮಣ್ಣಿನ ಪಾತ್ರೆಗಳು


ತಂಪಿನ ಜೊತೆಗೇ ಬೀಜಗಳು ಗರಿಗರಿಯಾಗಿ ಒಣಗಿದ ಸ್ಥಿತಿಯಲ್ಲಿಡಲು ಈ ಪಾತ್ರೆಗಳಲ್ಲಿ ತೂತೊಂದನ್ನು ಮಾಡಿ, ಈ ತೂತನ್ನು ಒಣಗಿದ ಜೋಳದ ಕೋಡುಗಳಿಂದ ತುರುಕಿ ಮುಚ್ಚಲಾಗುತ್ತದೆ. ಕ್ರಿಮಿಕೀಟಗಳಿಂದ  ದೂರವಿಡಲು ಸೀಮೆಎಣ್ಣೆ, ಬೇವು ಮತ್ತು ಬೂದಿಯ ಲೇಪವನ್ನೂ ಮಣ್ಣಿನ ಪಾತ್ರೆಯ ಹೊರಭಾಗಕ್ಕೆಕೊಡುವುದುಂಟು.

PHOTO • Sweta Daga

ಬೀಜಗಳನ್ನು ಗರಿಗರಿಯಾಗಿ ಉಳಿಸಲು ಮಣ್ಣಿನ ಪಾತ್ರೆಗಳಲ್ಲಿ ಇರಿಸಲಾಗುವ ಒಣಗಿದ ಜೋಳದ ಕೋಡುಗಳು


PHOTO • Sweta Daga

ಮುಂದಿನ ಕೊಯ್ಲಿಗಾಗಿ ತೆಗೆದಿರಿಸಿದ ಉತ್ತಮ ಸೋರೆಕಾಯಿಯೊಂದರ ಬೀಜಗಳು

ಇಂಥದ್ದೇ ಇನ್ನೊಂದು ವಿಧಾನದಲ್ಲಿ ``ಕೋಥಿ'' ಎಂದುಕರೆಯಲಾಗುವ ಗೋಡೆಗಳಲ್ಲಿ ಉದ್ದನೆಯತೂತೊಂದನ್ನುಕೊರೆದು ಬೀಜಗಳನ್ನು ಈ ಕೊರೆದ ಮೂಲೆಗಳಲ್ಲಿ ಇಡಲಾಗುತ್ತದೆ. ದೊಡ್ಡದಾಗಿಯೂ, ಆರೋಗ್ಯವಾಗಿಯೂ ಬೆಳೆದ ತಾಜಾ ಸೋರೆಕಾಯಿಯ ಬೀಜಗಳನ್ನೂ ಮುಂದಿನ ಋತುವಿಗಾಗಿ ಇವರು ಸಂರಕ್ಷಿಸಿಡುವುದನ್ನು ಇಲ್ಲಿ ಕಾಣಬಹುದು.

PHOTO • Sweta Daga

``ಕೋಥಿ'' ಗೋಡೆಗಳಲ್ಲಿಟ್ಟ ಬೀಜಗಳ ಸಂಗ್ರಹಣಾ ವಿಧಾನವನ್ನು ಪರೀಕ್ಷಿಸುತ್ತಿರುವ ಸ್ಥಳೀಯ ಕಾರ್ಯಕರ್ತ, ಕೃಷಿಕ ಪನ್ನಾಲಾಲ್ ಪಟೇಲ್

``ಬೀಜಗಳೆಂದರೆ ಅವು ಸಾಮಾನ್ಯ ಬೀಜಗಳಲ್ಲ. ಬೀಜಗಳು ಎಂದಿಗೂ ರೈತನ ಜೀವನದ ಜೀವನಾಡಿಗಳು. 1973 ರಲ್ಲಿ ಅಪ್ಪಳಿಸಿದ ಪ್ರವಾಹದಲ್ಲಿ ನಮ್ಮ ಹಳ್ಳಿಯ ಹಲವು ಮನೆಗಳು ನಾಶವಾದವು. ಎಲ್ಲರಂತೆಯೇ ನಮ್ಮ ಬಹುತೇಕ ವಸ್ತುಗಳೂ ಕೂಡ ನೀರಿನಲ್ಲಿ ಕೊಚ್ಚಿಹೋದವು. ಆದರೆ ನನಗೆ ಚಿಂತೆಯಿದ್ದಿದ್ದು ಸಂಗ್ರಹಿಸಿಟ್ಟಿದ್ದ ಬೀಜಗಳ ಬಗ್ಗೆ. ನನ್ನ ಮಟ್ಟಿಗಂತೂಇತರ ವಸ್ತುಗಳಿಗಿಂತ ಮೊದಲ ಆದ್ಯತೆ ಇದ್ದಿದ್ದು ಬೀಜಗಳಿಗೇ. ಆ ಕಾಲದ ಬೀಜಗಳು ಇಂದಿಗೂ ನಮ್ಮಲ್ಲಿ ಸುರಕ್ಷಿತವಾಗಿವೆ'', ಎಂದು ಚಮ್ನೀಬಾಯಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಚಮ್ನೀಬಾಯಿ ಮತ್ತು ಆಕೆಯಕುಟುಂಬವು ಹಲವು ವರ್ಷಗಳಿಂದ ಮರೆಯಾಗುತ್ತಿರುವ ಸ್ಥಳೀಯ ತಳಿಯ ಬೀಜಗಳನ್ನು ರಕ್ಷಿಸಿ, ಸುತ್ತಮುತ್ತಲ ರೈತರಿಗೆ ಹಂಚುತ್ತಾ ಸಹಬಾಳ್ವೆಯ ಸೌಹಾರ್ದ ಜೀವನವನ್ನು ನಡೆಸುತ್ತಾ ಬಂದಿದೆ. ಈ ಬೀಜಗಳನ್ನು ಪಡೆದುಕೊಂಡ ಗ್ರಾಮಸ್ಥರು ಬಿತ್ತು ಬೆಳೆದು ಬಂದ ಫಲಗಳಿಂದಲೇ, ಪಡೆದುಕೊಂಡ ಬೀಜಗಳ ಒಂದೂವರೆ ಪಟ್ಟಿನಷ್ಟು ಬೀಜಗಳನ್ನು ಈ ಕುಟುಂಬಕ್ಕೆ ಕೊಟ್ಟು ಋಣಮುಕ್ತರಾಗುತ್ತಿದ್ದಾರೆ.

PHOTO • Sweta Daga

ದೇಸಿ ಹೆಸರುಕಾಳಿನ ಬೀಜಗಳು

ಇತ್ತ ಸಾವಯವ ಕೃಷಿಯನ್ನೇ ಮಾಡುತ್ತಾ ಚಮ್ನೀಬಾಯಿ ಮತ್ತು ಆಕೆಯ ಕುಟುಂಬವು ತಮ್ಮ ಜೀವನವನ್ನು ಸಾಗಿಸುತ್ತಿರುವಂತೆಯೇ ದುಬಾರಿ ಮಾರುಕಟ್ಟೆಯ ಒತ್ತಡವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. `` ಸರ್ಕಾರದಿಂದ ಉಚಿತವಾಗಿ ಕೊಡಲ್ಪಡುವ ಬೀಜಗಳನ್ನು ಮತ್ತು ರಾಸಾಯನಿಕ ಗೊಬ್ಬರಗಳನ್ನು ನಾವ್ಯಾಕೆ  ಕೊಂಡುಕೊಳ್ಳುತ್ತಿಲ್ಲವೆಂದು ಹಲವು ಸ್ಥಳೀಯ ರೈತರು ನನ್ನಲ್ಲಿ ಆಗಾಗ ಕೇಳುತ್ತಾರೆ. ಈ ವಿಚಾರದಲ್ಲಿ ನಾನೊಬ್ಬ ಮೂರ್ಖನೆಂದು ವ್ಯಂಗ್ಯವಾಡುವವರೂ ಇದ್ದಾರೆ. ಆದರೆ ಈ ಬೀಜಗಳಿಂದ ಬೆಳೆಯಲಾಗುವ ಬೆಳೆಗಳು ಸಾವಯವ ಕೃಷಿಯ ಬೆಳೆಗಳಿಗಿಂತ ಭಿನ್ನವಾದವುಗಳು. ನಾವಂತೂ ಆಹಾರವಾಗಿ ಇವುಗಳನ್ನು ಬಳಸುವುದಿಲ್ಲ'' ಎಂದು ಚಮ್ನೀಬಾಯಿಯ ಮಗ ಕೇಸಾರಾಮ್ ಮೀನಾ ಅಭಿಪ್ರಾಯಪಡುತ್ತಾರೆ.

PHOTO • Sweta Daga

ತನ್ನ ಪುಟ್ಟ ಜಮೀನಿನ ಬಗ್ಗೆ ಹೆಮ್ಮೆಯಿಂದ  ಹೇಳುತ್ತಿರುವ ಚಮ್ನೀಬಾಯಿಯ ಮಗ ಕೇಸಾರಾಮ್

ದಶಕಗಳಿಂದ ಚಮ್ನೀಬಾಯಿಯ ಕುಟುಂಬದ ಸದಸ್ಯರು `ಮಲ್ಟಿ-ಕ್ರಾಪಿಂಗ್' ಎಂದು ಕರೆಯಲಾಗುವ ಬಹು ಬೆಳೆಗಳ ಕೊಯ್ಲನ್ನೇ ಮಾಡುತ್ತಾ  ಬಂದಿದ್ದಾರೆ. ಇಂದಿಗೂ ಪ್ರತೀ ಮೂರು ತಿಂಗಳುಗಳ ಅವಧಿಯಲ್ಲಿ ಕೊಯ್ಲನ್ನು ಋತುವಿಗನುಗುಣವಾಗಿ ಬದಲಿಸಲಾಗುತ್ತದೆ. ಈ ಮಧ್ಯೆ ಮಾರುಕಟ್ಟೆಯ ಮೇಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಅವಲಂಬನೆಯು ಹಳ್ಳಿಯ ರೈತರನ್ನು ಹೈರಾಣಾಗಿಸುತ್ತಿರುವುದನ್ನು ಕಡೆಗಣಿಸಲು ಸಾಧ್ಯವಿಲ್ಲ. ತನ್ನ ಕುಟುಂಬದ ಆಹಾರಕ್ಕೆ ಸಾಕಾಗುವಷ್ಟು ಬೆಳೆಯನ್ನು ಬೆಳೆಯಲೂ ರೈತನು ಅಶಕ್ತನಾಗಿದ್ದಾನೆ. ದೈನಂದಿನ ಆಹಾರದ ಪೂರೈಕೆಗಾಗಿ ರೈತನು ಮಾರುಕಟ್ಟೆಯ ಕಡೆಗೆ ಮುಖಮಾಡಿದ್ದಾನೆ. ಚಮ್ನೀಬಾಯಿಯ ಪ್ರಕಾರ ಹಿಂದಿನ ದಿನಗಳಲ್ಲಿ ಅಹಾರಕ್ಕಾಗಿ ಮನೆಯಲ್ಲಿ ಬಳಸಲಾಗುವ ಎಲ್ಲವನ್ನೂತಮ್ಮಜಮೀನಿನಲ್ಲೇ ಬೆಳೆಯುತ್ತಿದ್ದರಂತೆ. ಉಪ್ಪಿನ ಖರೀದಿಗಷ್ಟೇ ಇವರು ಮಾರುಕಟ್ಟೆಗೆ ಹೋಗಬೇಕಾಗಿ ಬರುತ್ತಿತ್ತು.

PHOTO • Sweta Daga

ಕುಟುಂಬದ ಗೃಹಬಳಕೆಗಾಗಿ ಸಂಗ್ರಹಿಸಿಟ್ಟ ದೇಸಿ ಮೆಕ್ಕೆಜೋಳ

``ನನ್ನ ಗಂಡ ಬದುಕಿದ್ದಾಗ ಪರಿಸ್ಥಿತಿಗಳು ಬೇರೆಯದೇ ಆಗಿದ್ದವು. ಕಾಲಕಾಲಕ್ಕೆ  ಮಳೆಯಾಗುತ್ತಿತ್ತು. ಹೀಗಾಗಿ ನೀರಿನ ಅಭಾವವೆಂಬುದಿರಲಿಲ್ಲ. ಈಗಂತೂ ಕೃಷಿಯೆಂಬುದು ಹೆಜ್ಜೆಹೆಜ್ಜೆಗೂ ಕಷ್ಟಗಳಿಂದ ತುಂಬಿಕೊಂಡು ಸಾಹಸವೆಂಬಂತಾಗಿದೆ. ಇದಕ್ಕೆ ತಕ್ಕಂತೆ ಮಳೆಯೂ ಕಮ್ಮಿಯಾಗುತ್ತಾ, ಉಷ್ಣತೆಯು ಸಿಕ್ಕಾಪಟ್ಟೆ ಏರಿದೆ'', ಎಂದು ಚಮ್ನೀಬಾಯಿ ಕಳೆದುಹೋದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಅಸಲಿಗೆ ಭಾರತದ ಬಹುಪಾಲು ಕೃಷಿಕರಲ್ಲಿ ಮಹಿಳೆಯರ ಸಂಖ್ಯೆಯೇಅಧಿಕ. ಆದರೆ ದುರಾದೃಷ್ಟವಶಾತ್ ಇವರ ಕೊಡುಗೆಯನ್ನು ಎಲ್ಲೂ ಗುರುತಿಸಲಾಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ಬೀಜಗಳ ಆರ್ಥಿಕ  ಮೌಲ್ಯವನ್ನು ಆಧರಿಸಿ ಅವುಗಳನ್ನು ``ಗಂಡು'' ಮತ್ತು ``ಹೆಣ್ಣು'' ಎಂದು ವಿಂಗಡಣೆ ಮಾಡುವುದುಂಟು. `ಗಂಡು' ಬೀಜಗಳ ಕೆಟಗರಿಗೆ ಬರುವ ಹತ್ತಿ, ತಂಬಾಕು ಮತ್ತು ಕಾಫಿ ಲಾಭದಾಯಕ ಬೆಳೆಗಳು ಮತ್ತು ಮಾರುಕಟ್ಟೆಯಲ್ಲಿ ಹೆಚ್ಚಿನ ಮೌಲ್ಯವುಳ್ಳವುಗಳು. ತರಕಾರಿ ಮತ್ತು ಧಾನ್ಯಗಳ ಬೀಜಗಳು ಆಹಾರದ ರೂಪದಲ್ಲಿ ಕುಟುಂಬದ ಪೋಷಣೆಗಾಗಿ ಬಳಸಲಾಗುತ್ತದೆಯಾದ್ದರಿಂದ ಇವುಗಳನ್ನು `ಹೆಣ್ಣು' ಎಂದು ವಿಂಗಡಿಸಲಾಗಿದೆ.

PHOTO • Sweta Daga

ರೈತ ಮಹಿಳೆಯರು: ತಮ್ಮ ಕೊಡುಗೆಯ ಹೊರತಾಗಿಯೂ ತೆರೆಮರೆಯಲ್ಲೇ ಉಳಿಯುವ ಶ್ರಮಜೀವಿಗಳು

ಮೇವಾರ್ ಪ್ರದೇಶದಲ್ಲಿ ಸ್ಥಳೀಯ ರೈತ ಮಹಿಳೆಯರೊಂದಿಗೆ ಬೀಜಗಳ ಸಂರಕ್ಷಣಾ ವಿಧಾನಗಳು ಮತ್ತು ಸಂಬಂಧಿ ಕಾರ್ಯಗಳಲ್ಲಿ ನಿರತರಾಗಿರುವ ಪನ್ನಾಲಾಲ್ ಪಟೇಲ್ ಕೃಷಿಕರಲ್ಲದೆ ಸಾಮಾಜಿಕ ಕಾರ್ಯಕರ್ತರೂ ಹೌದು. ಸಾವಯವ ಕೃಷಿಯನ್ನೇ ಜೀವನಕ್ಕಾಗಿ ಅವಲಂಬಿಸಿಕೊಂಡಿರುವುದು ಎಷ್ಟು ಕಷ್ಟ ಎಂಬುದನ್ನುಅವರ ಮಾತುಗಳಲ್ಲೇ ಕೇಳಬೇಕು. ``ಮೇವಾರ್  ಪ್ರದೇಶದಲ್ಲಿ ಕೃಷಿಯೊಂದಿಗೆ ಮೌಲ್ಯಾಧಾರಿತ ಉತ್ಪನ್ನಗಳನ್ನು ಮಾರಾಟಕ್ಕಾಗಿ ಮಾರುಕಟ್ಟೆಗೆ ಬಿಡಲು ಸಿದ್ಧಪಡಿಸಿದ ಹಲವು ಮಹಿಳಾ ಗುಂಪುಗಳಿಗೆ ನಾವು ಅಗತ್ಯ ಬೆಂಬಲವನ್ನು ನೀಡಿದ್ದೆವು. ಆದರೆ ಉತ್ಪಾದನೆ ಮತ್ತು ನಿರ್ವಹಣೆಗಳು ಸವಾಲಾಗಿದ್ದವು. ಬೆಳೆದ ಬೆಳೆಯ ಪ್ರಮಾಣ ಮತ್ತು ದೊರೆತ ಲಾಭಗಳು ನಮ್ಮನ್ನು ನಿರಾಸೆಗೊಳಿಸಿದ್ದವು. ಹಲವು ಮಹಿಳೆಯರಿಗೆ ತಮ್ಮ ಕುಟುಂಬದಿಂದಲೇ ಬೆಂಬಲವಿರದಿದ್ದ ಪರಿಣಾಮವಾಗಿ ವ್ಯಾಪಾರಗಳು ನೆಲಕಚ್ಚಿದವು. ಕುಟುಂಬ ಮತ್ತು ವ್ಯಾಪಾರಗಳೆರಡನ್ನೂ ಜೊತೆಜೊತೆಯಾಗಿ ನೋಡಿಕೊಳ್ಳುವುದು ಸಹಜವಾಗಿಯೇ ಈ ಮಹಿಳೆಯರಿಗೆ ಸವಾಲಾಗಿತ್ತು. ಮೇಲಾಗಿ ಸ್ಥಳೀಯ ಬೀಜತಳಿಗಳು ಮರೆಯಾಗತೊಡಗಿದ್ದವು'', ಎಂದು ಪನ್ನಾಲಾಲ್ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ.

PHOTO • Sweta Daga

ಪನ್ನಾಲಾಲ್ ಪಟೇಲರೊಂದಿಗೆ ಗಹನವಾದ ಚರ್ಚೆಯಲ್ಲಿ ತೊಡಗಿರುವ ಮೀನಾ ಕುಟುಂಬದ ಸದಸ್ಯರು

ಅಚ್ಚರಿಯ ಮತ್ತು ಸಂತೋಷದ ವಿಷಯವೆಂದರೆ ಚಮ್ನೀಬಾಯಿಯ ಮೊಮ್ಮಕ್ಕಳು ಅಜ್ಜಿಯಂತೆಯೇ ಸಾವಯವ ಕೃಷಿಯ ಪದ್ಧತಿಯನ್ನೇ ಮುಂದುವರಿಸಲು ಉತ್ಸುಕರಾಗಿದ್ದಾರೆ. ಅಜ್ಜಿ ಚಮ್ನೀಬಾಯಿಯ ದಶಕಗಳ ಜ್ಞಾನದ ಮತ್ತು ಅನುಭವದ ಮೌಲ್ಯಗಳು ಅವರಿಗೆ ಚೆನ್ನಾಗಿ ತಿಳಿದಂತಿದೆ. ಕಾಲದೊಂದಿಗೆ ಮರೆಯಾಗುತ್ತಿರುವ ಮತ್ತು ನೈಜವಾಗಿ ಸವಾಲಾಗಿ ಪರಿಣಮಿಸುತ್ತಿರುವ ಸಾವಯವ ಕೃಷಿ ವಿಧಾನದ ಪರಿಸ್ಥಿತಿಗಳ ಅರಿವಿದ್ದೂ, ಈ ದಿಕ್ಕಿನಡೆಗೆ ಆಕರ್ಷಿತರಾದ ಚಮ್ನೀಬಾಯಿಯ ಮೊಮ್ಮಕ್ಕಳ ಪೀಳಿಗೆಯ ಧೈರ್ಯ ಮತ್ತು ಉತ್ಸಾಹವು ಮೆಚ್ಚುವಂಥದ್ದು.

PHOTO • Sweta Daga

ಚಮ್ನೀಬಾಯಿಯ ಜಮೀನು: ಗೃಹಬಳಕೆಗಾಗಿ ಮತ್ತು ವ್ಯಾಪಾರಕ್ಕಾಗಿ ಬೆಳೆಯುವ ಬೆಳೆಗಳ ಭೂಮಿ

ಈ ಮಧ್ಯೆ ಜೈವಿಕ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾದ ಬೀಜತಳಿಗಳನ್ನು ರೈತರ ಮುಂದಿರಿಸುವ ಪ್ರಯತ್ನಗಳೂ ಮುಂದುವರಿಯುತ್ತಿವೆ. ಈಗಾಗಲೇ ಹತ್ತುಹಲವು ಸಮಸ್ಯೆಗಳಿಂದ ಕಂಗಾಲಾಗಿರುವ ರೈತರನ್ನು, ಅವರ ಸಾಂಪ್ರದಾಯಿಕ ಶೈಲಿಯ ಕೃಷಿ ವಿಧಾನಗಳನ್ನು ಉಳಿಸುವ ನಿಟ್ಟಿನಲ್ಲಿ ರೈತರು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಹೊಸ ಮಾದರಿಯ ಬೀಜಗಳ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದ್ದಾರೆ. ತಮ್ಮ ಬೆಳೆಗಳನ್ನು ಮತ್ತು ಕುಟುಂಬಗಳನ್ನು ಇಕ್ಕಟ್ಟಿಗೆ ಸಿಲುಕಿಸುವಂಥಾ ಇಂತಹಾ ಯೋಜನೆಗಳನ್ನು ಮುಂದೆ ಒತ್ತಾಯಪೂರ್ವಕವಾಗಿ ಸರ್ಕಾರವು ರೈತರ ತಲೆಯ ಮೇಲೆ ಹಾಕಿ ಕೈತೊಳೆದುಕೊಳ್ಳುವ  ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ.

ಅನುವಾದ : 'ಕ್ರೇಜಿ ಫ್ರಾಗ್ ಮೀಡಿಯಾ ಫೀಚರ್ಸ್' ಈ ಅನುವಾದದ ರೂವಾರಿ. ಪ್ರಸ್ತುತ ರಿಪಬ್ಲಿಕ್ ಆಫ್ ಅಂಗೋಲಾದಲ್ಲಿ ನೆಲೆಸಿರುವ ಪ್ರಸಾದ್ ನಾಯ್ಕ್ ಹವ್ಯಾಸಿ ಬರಹಗಾರರು ಮತ್ತು ಅಂಕಣಕಾರರು. 'ಅವಧಿ' ಅಂತರ್ಜಾಲ ಪತ್ರಿಕೆಯಲ್ಲಿ ಬರೆದಿರುವ ಲೇಖನಗಳು ಜನಪ್ರಿಯ.

ಶ್ವೇತಾ ದಗಾ  ಬೆಂಗಳೂರು ಮೂಲದ ಲೇಖಕಿ ಮತ್ತು ಛಾಯಾಗ್ರಾಹಕಿ. ಪೀಪಲ್ಸ್ ಆರ್ಕೇವ್  ಆಫ್ ಇಂಡಿಯಾ ಮತ್ತು ಸೆಂಟರ್ ಆಫ್ ಸೈನ್ಸ್ ಆಂಡ್ ಎನ್ವಿರಾನ್ಮೆಂಟ್  ಫೆಲೋಷಿಪ್  ಜೊತೆಗೇ ಹಲವು ಮಲ್ಟಿ-ಮೀಡಿಯಾ ಪ್ರಾಜೆಕ್ಟುಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Sweta Daga

स्वेता डागा, बेंगलुरु स्थित लेखक और फ़ोटोग्राफ़र हैं और साल 2015 की पारी फ़ेलो भी रह चुकी हैं. वह मल्टीमीडिया प्लैटफ़ॉर्म के साथ काम करती हैं, और जलवायु परिवर्तन, जेंडर, और सामाजिक असमानता के मुद्दों पर लिखती हैं.

की अन्य स्टोरी श्वेता डागा
Translator : Prasad Naik

Currently working as a Senior Engineer at Gurugram (Haryana), Prasad Naik has served in Uige of Republic of Angola (Africa) for a drinking water supply project. Prasad Naik is a freelance writer and columnist. He can be contacted at [email protected]. This translation was coordinated by Crazy Frog Media Features. Crazy Frog Media is a congregation of likeminded Journalists. A Bangalore-based online news media hub that offers news, creative content, business solutions and consultancy services.

की अन्य स्टोरी प्रसाद नायक