ಆ ವರ್ಕ್ಶಾಪಿನ ಮೇಲೆ ಯಾವುದೇ ಬೋರ್ಡುಗಳಿದ್ದಿರಲಿಲ್ಲ."ಯೇ ತೋ ಏಕ್ ಗುಮನಾಮ್ ದುಖಾನ್ ಹೈ” [ಇದೊಂದು ಯಾವುದೇ ಹೆಸರಿಲ್ಲದಿರುವ ಅನಾಮಧೇಯ ಅಂಗಡಿ]," ಎಂದು ಮೊಹಮ್ಮದ್ ಅಜೀಮ್ ಹೇಳುತ್ತಾರೆ. ಈಗ ಒಳಭಾಗದ 8x8 ಅಡಿ ಕಲ್ನಾರಿನ ಗೋಡೆಗಳು ಮಸಿ ಮತ್ತು ಜೇಡರ ಬಲೆಗಳಿಂದ ಮುಚ್ಚಲ್ಪಟ್ಟಿವೆ. ಮೂಲೆಯಲ್ಲಿ ಸಣ್ಣ ಪ್ರಮಾಣದ ಕಬ್ಬಿಣದ ಕುಲುಮೆಯಿದೆ, ಮಧ್ಯದಲ್ಲಿ ನೀಲಿ ತಾಡಪತ್ರಿಯಿಂದ ಹೊದಿಸಿದ ಸುಟ್ಟ ಕಪ್ಪು ಮಣ್ಣಿನ ರಾಶಿಯಿದೆ.
ಅಜೀಂ ಪ್ರತಿದಿನ ಬೆಳಿಗ್ಗೆ ಸುಮಾರು 7 ಗಂಟೆ ಎನ್ನುವಷ್ಟರಲ್ಲಿ ಹೈದರಾಬಾದ್ನ ಪಶ್ಚಿಮದಲ್ಲಿರುವ ದೂಧ್ಬೌಲಿಯ ಕಿರಿದಾದ ರಸ್ತೆ ಮಾರ್ಗದಲ್ಲಿ ಸೈಕಲ್ ಮೂಲಕ ಸಾಗುತ್ತಾರೆ ಮತ್ತು ಈ ಕಾರ್ಯಾಗಾರದ ಹತ್ತಿರದಲ್ಲಿಯೇ ತಮ್ಮ ಸೈಕಲ್ ನಿಲ್ಲಿಸುತ್ತಾರೆ, ಅದರ ಹಿಂಭಾಗದ ಗೋಡೆ ಹಕೀಮ್ ಮೀರ್ ವಜೀರ್ ಅಲಿ ಸ್ಮಶಾನದ ಕಂಪೌಂಡ್ ಗೋಡೆ.
ಇಲ್ಲಿ, ಧೂಳು ಹಿಡಿದಿರುವ ಪ್ಲಾಸ್ಟಿಕ್ ತೊಟ್ಟಿಗಳು, ತುಕ್ಕು ಹಿಡಿದ ಲೋಹದ ಪೆಟ್ಟಿಗೆಗಳು, ಮುರಿದಿರುವ ಬಕೆಟ್ಗಳು ಮತ್ತು ನೆಲದ ಮೇಲೆ ಅಲ್ಲಲ್ಲಿ ಚದುರಿರುವ ಉಪಕರಣಗಳು ಮತ್ತು ಪಂಚ್ಗಳ ಮಧ್ಯದಲ್ಲಿ ಕೆಲಸ ಮಾಡಲು ಯಾವುದೇ ಸ್ಥಳಾವಕಾಶ ಇಲ್ಲದೆ ಇರುವಂತಹ ಸ್ಥಳದಲ್ಲಿ ಅವರು ತಮ್ಮ ಕೆಲಸದ ದಿನಚರಿಯನ್ನು ಪ್ರಾರಂಭಿಸುತ್ತಾರೆ. ಅಲ್ಲಿಯೇ ಮಣ್ಣೆಚ್ಚರಕದ ಪ್ರಕ್ರಿಯೆ ಮೂಲಕ ಲೋಹದ ಟೋಕನ್ ಗಳನ್ನು ಸಿದ್ದಪಡಿಸುತ್ತಾರೆ.
ಈಗಲೂ ಕೂಡ ಹೈದರಾಬಾದ್ನ ಕೆಲವು ಹಳೆಯ ಟೀ ಅಂಗಡಿಗಳು ಮತ್ತು ಉಪಹಾರ ಗೃಹಗಳು 28 ವರ್ಷದ ಅಜೀಮ್ ತಯಾರಿಸುವ ಈ ಟೋಕನ್ಗಳನ್ನು (ಅಥವಾ ನಾಣ್ಯಗಳನ್ನು) ಬಳಸುತ್ತವೆ. ಈ ಹಿಂದೆ, ಇದೇ ರೀತಿಯ ಕ್ಯಾಂಟೀನ್ ಟೋಕನ್ಗಳನ್ನು ಗಿರಣಿಗಳು, ಮಿಲಿಟರಿ ಮಳಿಗೆಗಳು, ರೈಲ್ವೆಗಳು, ಬ್ಯಾಂಕ್ಗಳು, ಕ್ಲಬ್ಗಳು, ಸಹಕಾರಿ ಸಂಸ್ಥೆಗಳು ಮತ್ತು ಇತರ ಹಲವಾರು ಸಂಸ್ಥೆಗಳು ಬಳಸುತ್ತಿದ್ದವು. ಆದರೆ ಕಾಲಾನಂತರದಲ್ಲಿ ಜನರು ಪ್ಲಾಸ್ಟಿಕ್ ಟೋಕನ್ಗಳು ಅಥವಾ ಪೇಪರ್ ರಸೀದಿಗಳಿಗೆ ಒಡ್ಡಿಕೊಂಡ ನಂತರ ಈ ಟೋಕನ್ಗಳ ಬೇಡಿಕೆಯು ತೀವ್ರ ಪ್ರಮಾಣದಲ್ಲಿ ಕುಸಿಯಿತು. ಇನ್ನು ಲೋಹದ ಟೋಕನ್ಗಳನ್ನು ಅವಲಂಬಿಸಿರುವ ಕೆಲವು ಹೈದರಾಬಾದ್ ರೆಸ್ಟೋರೆಂಟ್ಗಳು ದಿನದ ಗಳಿಕೆಯನ್ನು ಲೆಕ್ಕಹಾಕಲು ಅವುಗಳನ್ನು ಬಳಸುತ್ತವೆ: ಒಮ್ಮೆ ಗ್ರಾಹಕರು ಆಹಾರ ಪದಾರ್ಥವನ್ನು ಆರ್ಡರ್ ಮಾಡಿದಾಗ, ಅವರಿಗೆ ಆ ಭಕ್ಷ್ಯಭೋಜಕ್ಕೆ ಅನುಗುಣವಾಗಿ ಟೋಕನ್ಗಳನ್ನು ನೀಡಲಾಗುತ್ತದೆ.
ಅಜೀಮ್ ಅವರನ್ನು ಅವರ ಕುಟುಂಬದ ಸದಸ್ಯರು ಮತ್ತು ಇನ್ನುಳಿದ ಅಂಗಡಿಯವರು ಪ್ರೀತಿಯಿಂದ ಅಜ್ಜು ಎಂದು ಕರೆಯುತ್ತಾರೆ, ಈ ನಾಣ್ಯಗಳನ್ನು ರೂಪಿಸುವಲ್ಲಿ ವಿಶೇಷ ಪರಿಣತಿಯನ್ನು ಹೊಂದಿರುವ ಶೇ 10ಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ ಹೈದರಾಬಾದ್ ಕುಶಲಕರ್ಮಿಗಳಲ್ಲಿ ತಾವು ಕೂಡ ಒಬ್ಬರು ಎಂದು ಅವರು ಅಂದಾಜಿಸುತ್ತಾರೆ.
ಬಾಕ್ಸ್ ಒಂದರಿಂದ ಅವರು ಬೆರಳೆಣಿಕೆಯಷ್ಟು ತೆಗೆದುಕೊಂಡು ಅವುಗಳನ್ನು ನೆಲದ ಮೇಲೆ ಹರಡಿದರು, ಅವರ ನಾಣ್ಯಗಳ ಮೇಲೆ ಇಂಗ್ಲೀಷ್ ಅಕ್ಷರ ಮುದ್ರಿಕೆಗಳು ಇರುತ್ತವೆ- ಚಹಾ, ಅಕ್ಕಿ, ಇಡ್ಲಿ, ಪಾಯ, ಮೀನು, ಸಿಬಿಎಸ್ (ಚಿಕನ್ ಬಿರಿಯಾನಿ ಸಿಂಗಲ್), ಸಿಬಿಜೆ (ಚಿಕನ್ ಬಿರಿಯಾನಿ ಜಂಬೋ), ಎಂಬಿಎಸ್ (ಮಟನ್ ಬಿರಿಯಾನಿ ಸಿಂಗಲ್), ಎಂಬಿಜೆ (ಮಟನ್ ಬಿರಿಯಾನಿ ಜಂಬೋ), ಇತ್ಯಾದಿ ಹೆಸರಿನಲ್ಲಿ ಅನೇಕ ಟೋಕನ್ಗಳು ಚಹಾದ ಕೆಟಲ್, ಮೀನು, ಕೋಳಿ, ಮೇಕೆ, ದೋಸೆ ಮತ್ತು ಇತ್ಯಾದಿ ಭಕ್ಷ್ಯಗಳ ಆಕಾರದಲ್ಲಿರುತ್ತವೆ.
“ನಾವು ಈ ನಾಣ್ಯಗಳನ್ನು ತಯಾರಿಸುವಲ್ಲಿ ಪರಿಣಿತಿಯನ್ನು ಹೊಂದಿದ್ದೇವೆ ಮತ್ತು ಹೈದರಾಬಾದ್ನಾದ್ಯಂತ ಬಹುತೇಕ ಅಂಗಡಿದಾರರು ಅವುಗಳನ್ನು ಖರೀದಿಸಲು ಇಲ್ಲಿಗೆ ಬರುತ್ತಿದ್ದರು. ಆದರೆ ಈಗ ಸ್ವಲ್ಪ ಪ್ರಮಾಣದಲ್ಲಿ ವ್ಯಾಪಾರವಿದೆ,” ಎಂದು ಸಾಂಪ್ರದಾಯಿಕವಾಗಿ ಈ ಹಿಂದಿನಿಂದಲೂ ನಾಣ್ಯಗಳನ್ನು ನಿರ್ಮಿಸುತ್ತಾ ಬಂದಿರುವ ಅಜೀಂ ಅವರ 60ರ ಹರೆಯದ ಚಿಕ್ಕಪ್ಪ ಮೊಹಮ್ಮದ್ ರಹೀಂ ಹೇಳುತ್ತಾರೆ.
ಅಜೀಂ ಅವರ ಅಜ್ಜ-ಅಜ್ಜಿಯಂದಿರು ಈ ಎರಕಹೊಯ್ಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಹೈದರಾಬಾದ್ನ ಕೊನೆಯ ನಿಜಾಮನ ಆಳ್ವಿಕೆಯಲ್ಲಿ (1911-1948) ಅರಮನೆಗೆ ಟೋಕನ್ಗಳನ್ನು ಮತ್ತು ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದರು ಎಂದು ಅವರು ಹೇಳುತ್ತಾರೆ. ಮತ್ತು ಅವರು ಮನೆ ಮನೆಗಳಿಗೆ ಲೋಹದ ಆಕೃತಿಗಳನ್ನು ಕೂಡ ನಿರ್ಮಿಸುತ್ತಿದ್ದರು. ಈಗ ರಹೀಂ ಅವರು ಸೈಕಲ್ ಮಾಲಿಕರ ಹೆಸರಿನಲ್ಲಿ ನಾಣ್ಯಗಳನ್ನು ತಯಾರಿಸುತ್ತಿರುವುದಾಗಿ ಹೇಳುತ್ತಾರೆ, ಅದನ್ನು ಅವರು ತಮ್ಮ ಸೈಕಲ್ಗಳಿಗೆ ಅಂಟಿಸುತ್ತಾರೆ. ಅಜೀಮ್ ಅವರು ತಮ್ಮ ತಂದೆ ವರ್ಷಗಳ ಹಿಂದೆ ಸೈಕಲ್ ಗಾಗಿ ನಿರ್ಮಿಸಿದ ಲೋಹದ ಪಟ್ಟಿಯನ್ನು ನಮಗೆ ತೋರಿಸುತ್ತಿದ್ದರು.
ಅಜೀಮ್ ಅವರ ತಂದೆ ಮೊಹಮ್ಮದ್ ಮುರ್ತುಜಾ ಅವರು ನಾಣ್ಯ ತಯಾರಿಕೆಯಲ್ಲಿ ಪ್ರಾವಿಣ್ಯತೆಯನ್ನು ಹೊಂದಿದ್ದರು, ಸ್ಥಳೀಯವಾಗಿ ಎಲ್ಲರೂ ಅವರನ್ನು ಈ ಕೆಲಸಕ್ಕಾಗಿ ಹುಡುಕುತ್ತಿದ್ದರು. ಆದರೆ ದಶಕಗಳ ಹಿಂದೆ, ಅಂದರೆ ಅಜ್ಜು ಹುಟ್ಟುವ ಮೊದಲು, ಕುಲುಮೆಯ ಸ್ಫೋಟದಲ್ಲಿ ಮುರ್ತುಜಾ ಅವರ ಬಲಗೈಗೆ ಗಾಯವಾಗಿದ್ದರಿಂದಾಗಿ ಅದನ್ನು ಕತ್ತರಿಸಬೇಕಾಯಿತು.
ಇನ್ನು, ಮುರ್ತಾಜಾ ಮತ್ತು ರಹೀಮ್ ತಮ್ಮ ಪೋಷಕರ ಈ ಹಿಂದಿನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಅಜೀಮ್ ಅವರಿಗೆ ತಾವು ಮೊದಲ ಬಾರಿಗೆ ಎರಕಹೊಯ್ಯುವ ಕೆಲಸ ಮಾಡಿದಾಗಿನ ವಯಸ್ಸಿನ ಬಗ್ಗೆ ಅಷ್ಟೊಂದು ನೆನಪಿಲ್ಲ; ಅವರು ಕೇವಲ 4 ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸವನ್ನು ಮಾಡಿದ್ದಾರೆ, ತಮ್ಮ ಸ್ನೇಹಿತನೊಂದಿಗೆ ಜಗಳವಾಡಿದ ನಂತರ ಅವರ ತಂದೆ ಶಾಲೆಯನ್ನು ಬಿಡಿಸಿದರು ಎಂದು ಅವರು ಹೇಳುತ್ತಾರೆ.ಈಗ ಅವರಿಗೆ ಗೊತ್ತಿರುವ ಏಕೈಕ ಕೆಲಸವೆಂದರೆ ನಾಣ್ಯಗಳನ್ನು ತಯಾರಿಸುವುದು.
ಅವರ ಕುಟುಂಬವು ದಶಕಗಳಿಂದ ಹಲವಾರು ಬಾರಿ ಅಂಗಡಿಯನ್ನು ನಾಶಗೊಳಿಸುವಿಕೆ, ಕುಲುಮೆಯ ಹೊಗೆಯಿಂದಾಗಿ ಬರುವ ದೂರುಗಳು, ಹಾಗೂ ಸ್ಥಳಾವಕಾಶದ ನಿರ್ಬಂಧಗಳಿಂದ ಸ್ಥಳಾಂತರಿಸಲಾಗಿದೆ. ಹೀಗಾಗಿ ಅವರು ಚಾರ್ಮಿನಾರ್ ಬಳಿಯ ಶೆಡ್ನಿಂದ, ಅದೇ ಚಾರ್ಮಿನಾರ್ ಪ್ರದೇಶದ ಸಣ್ಣ ಮಸೀದಿಯ ಬಳಿಯ ಮತ್ತೊಂದು ಅಂಗಡಿಯಿಂದ ಮತ್ತು ಕೆಲವೊಮ್ಮೆ ತಮ್ಮ ಸಣ್ಣ ಮೂರು ಕೊಠಡಿಗಳ ಮನೆಯಲ್ಲಿನ ಕೋಣೆಯಿಂದ ಕುಲುಮೆ ನಡೆಸುವ ಕೆಲಸ ಮಾಡಿದ್ದಾರೆ. ಇಲ್ಲಿ, ಅಜೀಂ ಅವರ ಪತ್ನಿ ನಜೀಮಾ ಬೇಗಂ ಅವರು ಸಮೀಪದ ಮೈದಾನದಿಂದ ಮಣ್ಣನ್ನು ಸಂಗ್ರಹಿಸಿ ಅದನ್ನು ಜರಡಿ ಹಿಡಿದು ಅಚ್ಚುಗಳಲ್ಲಿ ತುಂಬುವ ಕೆಲಸ ಮಾಡುತ್ತಿದ್ದರು.
ಮಾರ್ಚ್ 2020ರಲ್ಲಿ ಪ್ರಾರಂಭವಾದ ಲಾಕ್ಡೌನ್ ಸಮಯದಲ್ಲಿ, ಮುರ್ತುಜಾ ಅವರಿಗೆ ಅಂಗವಿಕಲರಿಗಾಗಿ ನೀಡುವ ಮಾಸಿಕ 2,000 ರೂ.ವೇತನವು ಅವರ ಕುಟುಂಬದ ನಿರ್ವಹಣೆಗೆ ನೆರವಾಗುತ್ತಿತ್ತು. ಅಜೀಂ ಅವರ ಮೂವರು ಸಹೋದರಿಯರು ವಿವಾಹಿತರು ಮತ್ತು ಗೃಹಿಣಿಯರಾಗಿದ್ದಾರೆ, ಮತ್ತು ಕಿರಿಯ ಸಹೋದರ ದ್ವಿಚಕ್ರ ವಾಹನ ಶೋ ರೂಮ್ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾರೆ.
ಮುರ್ತುಜಾ ಏಪ್ರಿಲ್ 2020 ರಲ್ಲಿ ನಿಧನರಾದರು (ಅಜೀಮ್ ಅವರ ತಾಯಿ ಖಾಜಾ 2007ರಲ್ಲಿ ನಿಧನರಾದರು), ಹೀಗಾಗಿ ಪಿಂಚಣಿ ಬರುವುದು ಸ್ಥಗಿತಗೊಂಡಿತು. ಆದ್ದರಿಂದ ನವೆಂಬರ್ 2020ರಲ್ಲಿ, ಅಜೀಮ್ ಅವರು ಈಗ ಕೆಲಸ ಮಾಡುತ್ತಿರುವ ಸ್ಮಶಾನದ ಪಕ್ಕದಲ್ಲಿರುವ ಅಂಗಡಿಯನ್ನು ಬಾಡಿಗೆಗೆ ಪಡೆದರು, ಇದರಿಂದ ಅವರು ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಮೂಲಕ ಉತ್ತಮ ಆದಾಯದ ನಿರೀಕ್ಷೆಯನ್ನು ಹೊಂದಿದ್ದರು.ಆದರೆ ಈಗ ಈ ಶೆಡ್ ಪಾದಚಾರಿ ಮಾರ್ಗದಲ್ಲಿರುವುದರಿಂದಾಗಿ ನಗರದ ಅಧಿಕಾರಿಗಳು ಯಾವುದೇ ಸಮಯದಲ್ಲಿ ಅದನ್ನು ತೆಗೆಯಬಹುದು’ ಎಂದು ಅವರು ಹೇಳುತ್ತಾರೆ.
ನಾನು ಇಲ್ಲಿಗೆ ಭೇಟಿ ನೀಡಿದಾಗ, ಹಿಂದಿನ ದಿನ ಬೇಗಂಪೇಟೆಯ ಹೋಟೆಲ್ ಒಂದರಿಂದ ಅವರಿಗೆ ಆರ್ಡರ್ ಬಂದಿತ್ತು.
ಉಪಾಹಾರ ಗೃಹದ ನಿರ್ದಿಷ್ಟ ಕ್ರಮವನ್ನು ಅವಲಂಬಿಸಿ ಸೂಕ್ತವಾದ ಆಕೃತಿಯನ್ನು ಆಯ್ಕೆ ಮಾಡುವುದು -ಉದಾಹರಣೆಗೆ ಟೀ ಕಪ್ ಅಥವಾ ಮೀನಿನ ಆಕೃತಿಯ ಹಾಗೆ ನಿರ್ಮಿಸುವುದು ಮೊದಲ ಹಂತವಾಗಿದೆ ಎಂದು ಅವರು ಹೇಳುತ್ತಾರೆ. ಅವರ ಬಳಿ ಯಾವಾಗಲೂ, ಈ ಹಿಂದೆಯೇ ಬಿಳಿ ಲೋಹದಲ್ಲಿ ನಿರ್ಮಿಸಲಾದ ಈ ಟೋಕನ್ಗಳ ಮಾಸ್ಟರ್ ಆಕೃತಿಯನ್ನು ಹೊಂದಿರುತ್ತಾರೆ. ನಂತರ ಪ್ರತಿಕೃತಿಗಳನ್ನು ರಚಿಸುವ ನಿಖರವಾದ ಬಹು-ಪದರದ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.
ಅಜೀಂ ಅವರು ಮರದ ಹಲಗೆಯ ಮೇಲೆ ಪೇಟಿ ಯನ್ನು (ಲೋಹದ ಚೌಕಟ್ಟು ಅಥವಾ ಅಚ್ಚು) ಇರಿಸುತ್ತಾರೆ ಮತ್ತು ಅದರ ಮೇಲೆ ಸ್ವಲ್ಪ ಸಂಜೀರವನ್ನು (ಎರಕದ ಪುಡಿ) ಚಿಮುಕಿಸುತ್ತಾರೆ.“ನಾಣ್ಯಗಳು ಮರಳಿನ ಕಣಗಳಿಗೆ ಸಿಲುಕಿಕೊಳ್ಳುವುದನ್ನು ಪುಡಿ ತಡೆಯುತ್ತದೆ" ಎಂದು ಅವರು ಹೇಳುತ್ತಾರೆ. ನಂತರ ಅವರು ಬಯಸಿದ ಆಕೃತಿಯ ಟೋಕನ್ಗಳನ್ನು ಒಂದೊಂದಾಗಿ ಬೋರ್ಡ್ನಲ್ಲಿ ಇರಿಸುತ್ತಾರೆ.
ಅವರು ಮತ್ತೆ ನಾಲ್ಕನೇ ಒಂದು ಭಾಗದಷ್ಟು ಪೇಟಿ ಯನ್ನು ಬೆಲ್ಲದ ದ್ರವದ ಜೊತೆಗೆ ಉತ್ತಮ ಗುಣಮಟ್ಟದ ಮಣ್ಣನ್ನು ಬೆರೆಸುತ್ತಾರೆ. ಇದಕ್ಕಾಗಿ ಜರಡಿ ಹಿಡಿದ ಯಾವುದೇ ಮಣ್ಣು ಅಥವಾ ಮರಳಾದರು ನಡೆಯುತ್ತದೆ ಎಂದು ಅವರು ಹೇಳುತ್ತಾರೆ. ಈ ಜಿಗುಟಾದ ಮಿಶ್ರಣವನ್ನು ಅಸ್ತರ್ ಮಿಟ್ಟಿಗೆ (ಮೂಲ ಮಣ್ಣು) ಸೇರಿಸಲಾಗುತ್ತದೆ. ಇದಾದ ನಂತರ ನೀಲಿ ತಾಡಪತ್ರೆಯಿಂದ ಮುಚ್ಚಿರುವ ಈ ಹಿಂದಿನ ಎರಕದ ಕಾರ್ಯದಲ್ಲಿ ಉಳಿದಿದ್ದ ಸುಟ್ಟ ಕಪ್ಪು ಮಣ್ಣನ್ನು ಅದರ ಮೇಲೆ ಸೇರಿಸುತ್ತಾರೆ.
ಒಮ್ಮೆ ಇಡೀ ಪೇಟಿ ತುಂಬಿದ ನಂತರ ಅಜೀಂ ಅವರು ಮಣ್ಣನ್ನು ಹದಗೊಳಿಸಲು ತುಳಿಯುತ್ತಾರೆ.ನಂತರ ಚೌಕಟ್ಟನ್ನು ತಿರುಗಿಸಿ ಇಡುವುದರ ಮೂಲಕ ನಾಣ್ಯಗಳ ಆಕೃತಿಯನ್ನು ಮಿಶ್ರಣದ ಜೊತೆಗೆ ಹುದುಗಿಸಿಡಲಾಗುತ್ತದೆ. ಇದಾದ ನಂತರ ಅದರ ಅಚ್ಚನ್ನು ಮುಚ್ಚಳದಿಂದ ಮುಚ್ಚಲಾಗುತ್ತದೆ. ಅದರ ಮೇಲೆ ಸ್ವಲ್ಪ ಸಂಜೀರ ಪುಡಿಯನ್ನು ಚಿಮುಕಿಸಿ ಕೊನೆಗೆ ಅಸ್ತರ್ ಮಿಟ್ಟಿ ಮತ್ತು ಸುಟ್ಟ ಕಪ್ಪು ಮಣ್ಣಿನಿಂದ ಹೆಚ್ಚಿನ ಪದರಗಳನ್ನು ಹಾಕುತ್ತಾರೆ. ಆಗ ಅದನ್ನು ಮತ್ತೆ ತುಳಿಯಲು ಅಣಿಯಾಗುತ್ತಾರೆ. ಇದರಿಂದಾಗಿ ಈಗ ಅವರ ಪಾದಗಳೆಲ್ಲಾ ಮಣ್ಣು ಮತ್ತು ಮಸಿಯಿಂದ ಆವೃತವಾಗಿರುತ್ತವೆ.
ನಂತರ ಹೆಚ್ಚುವರಿ ಮಣ್ಣನ್ನು ಒರೆಸಲಾಗುತ್ತದೆ ಮತ್ತು ಪೆಟಿ ಯನ್ನು ತೆರೆಯಲಾಗುತ್ತದೆ. ನಿಧಾನವಾಗಿ, ಅವರು ಮಾಸ್ಟರ್ ಆಕೃತಿಗಳನ್ನು ತೆಗೆದುಹಾಕುತ್ತಾರೆ. ನಂತರ ಅವರು ಮಣ್ಣಿನ ಮಿಶ್ರಣದಲ್ಲಿ ಹುದುಗಿರುವ ಕೆತ್ತನೆಗಳೊಂದಿಗೆ ಕುಳಿಗಳನ್ನು ಹಾಗೆ ಬಿಡುತ್ತಾರೆ.
ಒಂದು ಸಣ್ಣ ಕೋಲಿನಿಂದ, ಕರಗಿದ ಅಲ್ಯೂಮಿನಿಯಂ ಅನ್ನು ಹಾದುಹೋಗಲು ಅಜೀಮ್ ದ್ಯುತಿರಂಧ್ರಗಳನ್ನು ಮಾಡುತ್ತಾರೆ. ಈ ಹಿಂದಿನ ಆರ್ಡರ್ಗಳ ಕೆತ್ತನೆಗಳನ್ನು ತೆಗೆದುಹಾಕಲು ಅವರು ಕೋಲಿನಿಂದ ಕುಳಿಗಳೊಳಗಿನ ಮಣ್ಣನ್ನು ಸಮಗೊಳಿಸುತ್ತಾರೆ - ಉದಾಹರಣೆಗೆ, ಇನ್ನೊಂದು ಉಪಾಹಾರ ಗೃಹದ ಆರ್ಡರ್ ಗಾಗಿ ಅವರು ಪೇಟಿಯನ್ನು ಮುಚ್ಚುತ್ತಾರೆ ಮತ್ತು ಅದನ್ನು ದೃಢವಾಗಿ ಅಂಟಿಸಿ, ಅದರ ಮೇಲೆ ಮರದ ಹಲಗೆಯನ್ನು ಇರಿಸಿ ಮತ್ತು ನಂತರ ಎರಕವನ್ನು ಹೊಯ್ಯಲಾಗುತ್ತದೆ.
ಕೈ ಊದು ಕುಲುಮೆಯನ್ನು ಬಳಸಿ ಕಲ್ಲಿದ್ದಲ್ಲನ್ನು ಭಟ್ಟಿಗೆ ತುಂಬಿಸಲಾಗುತ್ತದೆ. ಕಲ್ಲಿದ್ದಲು ಬಿಸಿಯಾದ ನಂತರ, ಅಜೀಮ್ ಹಳೆಯ ಬಳಕೆಯಾಗದ ಅಲ್ಯೂಮಿನಿಯಂ ನಾಣ್ಯಗಳು ಅಥವಾ ಘನ ತುಂಡುಗಳೊಂದಿಗೆ ಲೋಹದ ಪಾತ್ರೆಯನ್ನು ಇರಿಸುತ್ತಾರೆ.ಇವು ಕರಗಿದಾಗ ಹಿಡಿಕೆಯನ್ನು ಬಳಸಿ ಬಿಸಿ ದ್ರವವನ್ನು ಪೇಟಿಗೆ ಸುರಿಯುತ್ತಾರೆ.ಯಾವುದೇ ರಕ್ಷಣಾ ಸಾಧನಗಳಿಲ್ಲದೆ ಅವರು ಇದೆಲ್ಲವನ್ನೂ ಮಾಡುತ್ತಾರೆ. "ನಾನು ಈ ರೀತಿಯಲ್ಲಿ ಕೆಲಸ ಮಾಡುತ್ತಾ ಬಂದಿದ್ದೇನೆ ಮತ್ತು ಆದರೆ ಈಗ ಎಲ್ಲಾ ಉಪಕರಣಗಳು ದುಬಾರಿಯಾಗಿದೆ" ಎಂದು ಅವರು ಹೇಳುತ್ತಾರೆ.
ದ್ರವ ಲೋಹವು ಶೀಘ್ರದಲ್ಲೇ ಗಟ್ಟಿಯಾಗುತ್ತದೆ ಮತ್ತು ಒಳಗೆ ರೂಪುಗೊಂಡ ಹೊಸ ಟೋಕನ್ಗಳನ್ನು ಹೊರತೆಗೆಯಲು ಕೆಲವೇ ನಿಮಿಷಗಳಲ್ಲಿ ಅವುಗಳನ್ನು ತೆರೆಯಲಾಗುತ್ತದೆ.ಅವರು ಅವುಗಳನ್ನು ಹೊರತೆಗೆದು ಫೈಲ್ನೊಂದಿಗೆ ಅಂಚುಗಳನ್ನು ತೀಕ್ಷ್ಣಗೊಳಿಸುತ್ತಾರೆ. ನಂತರ ‘ಯೆ ರಹಾ ಹಮಾರಾ ಕಾಯಿನ್’ ಎಂದು ಅವರು ತಮ್ಮ ಅಂಗೈಯಲ್ಲಿ ಸಣ್ಣ ಲೋಹದ ವಸ್ತುವನ್ನು ಹಿಡಿದುಕೊಂಡು ತೋರಿಸುತ್ತಾರೆ.
ಟೋಕನ್ಗಳಲ್ಲಿ ಖಾದ್ಯ ಮತ್ತು ಉಪಾಹಾರ ಗೃಹದ ಹೆಸರನ್ನು ಇಂಗ್ಲಿಷ್ನಲ್ಲಿ ಮುದ್ರಿಸುವುದು ಮುಂದಿನ ಹಂತವಾಗಿದೆ. ಇದಕ್ಕಾಗಿ, ಹೊಸದಾಗಿ ಮುದ್ರಿಸಲಾದ ಅಲ್ಯೂಮಿನಿಯಂ ಟೋಕನ್ಗಳಲ್ಲಿ ಅಕ್ಷರ ಮತ್ತು ಸಂಖ್ಯೆಯ ಪಂಚ್ಗಳನ್ನು ಹೊಡೆಯಬೇಕು. ಒಂದು ಬ್ಯಾಚ್ ಸಿದ್ಧವಾದ ನಂತರ, ಎರಕಹೊಯ್ಯುವ ಪ್ರಕ್ರಿಯೆಯನ್ನು ಪುನರಾವರ್ತಿಸಲು ಅವರು ಆ ಹೊಸ ಟೋಕನ್ಗಳನ್ನು ನವೀಕರಿಸುತ್ತಾರೆ.
“ಪ್ರತಿ ಬ್ಯಾಚ್ ನ ನಾಣ್ಯಗಳ ಸಂಖ್ಯೆಯು ಪೇಟಿಯನ್ನು ಅವಲಂಬಿಸಿರುತ್ತದೆ. ನನ್ನ ಬಳಿ 12 ವಿವಿಧ ಗಾತ್ರಗಳಿವೆ,” ಎಂದು ಅವರು ಚೌಕಟ್ಟುಗಳ ರಾಶಿಯನ್ನು ತೋರಿಸುತ್ತಾರೆ. ಮಧ್ಯಮ ಗಾತ್ರದ 15x9 ಇಂಚಿನ ಪೆಟ್ಟಿಗೆಯಲ್ಲಿ ಅವರು ಸುಮಾರು 40 ಟೋಕನ್ಗಳನ್ನು ಒಂದೇ ಬಾರಿಗೆ ಸಿದ್ದಪಡಿಸಬಹುದು. ಒಂದು ವೇಳೆ ಅಧಿಕ ಸಂಖ್ಯೆಯಲ್ಲಿ ಆರ್ಡರ್ಗಳಿದ್ದರೆ,10 ಗಂಟೆಗಳ ಕಾಲ ಕೆಲಸ ಮಾಡುವುದರ ಮೂಲಕ ಅವರು ದಿನಕ್ಕೆ 600 ನಾಣ್ಯಗಳವರೆಗೆ ತಯಾರಿಸಬಹುದು.
ಒಂದು ವೇಳೆ ಅಪರೂಪದ ಸಂದರ್ಭಗಳಲ್ಲಿ, ಬಿಳಿ ಲೋಹದಲ್ಲಿ ಮಾಸ್ಟರ್ ಕಾಯಿನ್ ಇಲ್ಲದ ಹೊಸ ವಿನ್ಯಾಸವನ್ನು ಮಾಡಬೇಕಾದರೆ, ಅಜೀಮ್ ಗ್ರಾಹಕರಿಗೆ 3D ಪ್ಲಾಸ್ಟಿಕ್ ಪ್ರತಿಕೃತಿಯನ್ನು ತರುವಂತೆ ಕೋರುತ್ತಾರೆ. ಆದರೆ ಇವುಗಳು ದುಬಾರಿಯಾಗಿರುವುದರಿಂದ ಹೆಚ್ಚಿನ ಗ್ರಾಹಕರು ಹಳೆಯ ವಿನ್ಯಾಸಗಳನ್ನು ಪುನರಾವರ್ತಿಸಲು ಬಯಸುತ್ತಾರೆ.(ಅಜೀಂ ಅವರ ತಂದೆ ಮುರ್ತುಜಾ ಈ ಎರಕಹೊಯ್ಯುವ ಕೆಲಸವನ್ನು ಮಾಡುತ್ತಿದ್ದಾಗ, ಅವರು ಹೊಸ ಆಕೃತಿ ಮತ್ತು ವಿನ್ಯಾಸಗಳನ್ನು ಕೈಯಿಂದ ರೂಪಿಸುತ್ತಿದ್ದರು.)
ಲೋಹದ ನಾಣ್ಯಗಳು ಪ್ಲಾಸ್ಟಿಕ್ ನಾಣ್ಯಗಳಿಗಿಂತ ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಕಡಿಮೆ ವೆಚ್ಚದಲ್ಲಿರುತ್ತವೆ ಎಂದು ಅಜೀಂ ಅವರ ಕಾರ್ಯಾಗಾರದಿಂದ ಸುಮಾರು 13 ಕಿಲೋಮೀಟರ್ ದೂರದಲ್ಲಿರುವ ಬೇಗಂಪೇಟೆಯ ಹೋಟೆಲ್ನಲ್ಲಿ ಮಾಣಿಯಾಗಿ ಕೆಲಸ ಮಾಡುವ ಮುಹಮ್ಮದ್ ಮೊಹೀನ್ ಹೇಳುತ್ತಾರೆ. ಈಗ ಅವರು ಇಲ್ಲಿಗೆ ಆರ್ಡರ್ ಕೊಡಲು ಬಂದಿದ್ದಾರೆ. "ಇದು ಕೈಯಿಂದ ಎಣಿಸುವ ಸಹಜ ವ್ಯವಸ್ಥೆಯಾಗಿದೆ ಮತ್ತು ನಮ್ಮ ಗ್ರಾಹಕರು ಸಹ ಇದನ್ನು ಬಯಸುತ್ತಾರೆ" ಎಂದು ಅವರು ಹೇಳುತ್ತಾರೆ. “ನಾವು ಪ್ರತಿ ಖಾದ್ಯಕ್ಕೆ 100 ನಾಣ್ಯಗಳನ್ನು ಇಡುತ್ತೇವೆ. ಇವುಗಳನ್ನು ಬಳಸಿದ ನಂತರ, ಆ ಖಾದ್ಯದ 100 ಸೇವೆಗಳು ಮಾರಾಟವಾಗಿವೆ ಎಂದು ನಮಗೆ ತಿಳಿಯುತ್ತದೆ. ಇದರ ಆಧಾರದ ಮೇಲೆ ನಾವು ದಿನದ ಗಳಿಕೆಯನ್ನು ಲೆಕ್ಕ ಹಾಕುತ್ತೇವೆ. ಮೇಲಾಗಿ ನಾವು ಅವಿದ್ಯಾವಂತರಾಗಿರುವುದರಿಂದ, ನಮಗೆ ಈ ವ್ಯವಸ್ಥೆಯು ಹೆಚ್ಚು ಅನುಕೂಲಕರವಾಗಿದೆ.” ಎನ್ನುತ್ತಾರೆ.
ಅಜೀಂ ಅವರು ಒಂದು ನಾಣ್ಯವನ್ನು ತಯಾರಿಸಲು 3 ರೂ. ತೆಗೆದುಕೊಳ್ಳುತ್ತಾರೆ, ಆದರೆ ಪ್ರಮಾಣವು 1,000 ತುಣುಕುಗಳಿಗಿಂತ ಕಡಿಮೆಯಿದ್ದರೆ, ಅವರು 4 ರೂ.ನ್ನು ನಿಗದಿಪಡಿಸುತ್ತಾರೆ.“ನನಗೆ ಪ್ರತಿದಿನ ಆರ್ಡರ್ ಸಿಗುವುದಿಲ್ಲ, ವಾರದಲ್ಲಿ ಎರಡು ಅಥವಾ ಮೂರು ದಿನ ಕೆಲವು ಗ್ರಾಹಕರು ಬರುತ್ತಾರೆ. ಅವರಿಗೆ ನನ್ನ ಮತ್ತು ನನ್ನ ಅಂಗಡಿಯ ಸ್ಥಳದ ಬಗ್ಗೆ ಗೊತ್ತಿದೆ. ಅಥವಾ ಅವರು ನನ್ನ ಮೊಬೈಲ್ ಸಂಖ್ಯೆಯನ್ನು ಇಟ್ಟುಕೊಂಡಿರುತ್ತಾರೆ, ಹಾಗಾಗಿ ಅವರು ನನಗೆ ಕರೆ ಮಾಡಿ ಆರ್ಡರ್ ಮಾಡುತ್ತಾರೆ. ಒಬ್ಬರಿಗೆ 300 ನಾಣ್ಯಗಳು, ಇನ್ನೊಬ್ಬರಿಗೆ 1000 ನಾಣ್ಯಗಳು ಬೇಕಾಗುತ್ತದೆ. ಹೀಗಾಗಿ ನನಗೆ ಸ್ಥಿರವಾದ ಆದಾಯವಿಲ್ಲ. ಕೆಲವೊಮ್ಮೆ ವಾರಕ್ಕೆ ಕೇವಲ 1000 ರೂ, ಇನ್ನು ಕೆಲವೊಮ್ಮೆ 2,500 ರೂಪಾಯಿಗಳನ್ನು ಗಳಿಸುತ್ತೇನೆ.” ಎಂದು ಅವರು ಹೇಳುತ್ತಾರೆ.
ಮತ್ತು ಕೆಲವೊಮ್ಮೆ, ಜನರು ಆರ್ಡರ್ ಗಳನ್ನು ನೀಡುತ್ತಾರೆ ಮತ್ತು ಟೋಕನ್ಗಳನ್ನು ಸಂಗ್ರಹಿಸಲು ಹಿಂತಿರುಗುವುದಿಲ್ಲ ಎಂದು ಮೇಲಿನ ಕಪಾಟಿನಲ್ಲಿ ಇರಿಸಲಾಗಿರುವ ಬ್ಯಾಚ್ ಅನ್ನು ಅಜೀಮ್ ನಮಗೆ ತೋರಿಸುತ್ತಿದ್ದರು. "ನಾನು ಈ 1,000 ನಾಣ್ಯಗಳನ್ನು ತಯಾರಿಸಿದ್ದೇನೆ, ಆದರೆ ಗ್ರಾಹಕರು ಮತ್ತೆ ವಾಪಸ್ ಇಲ್ಲಿಗೆ ಬಂದಿಲ್ಲ” ಎಂದು ಅವರು ಹೇಳುತ್ತಾರೆ. ಸ್ವಲ್ಪ ಸಮಯದ ನಂತರ, ಅವರು ಈ ಮಾರಾಟವಾಗದ ಟೋಕನ್ಗಳನ್ನು ಕರಗಿಸಿ ಇತರ ನಾಣ್ಯಗಳನ್ನು ತಯಾರಿಸಲು ಅವುಗಳನ್ನು ಮರುಬಳಕೆ ಮಾಡುತ್ತಾರೆ.
ತಮ್ಮ ಗಳಿಕೆಯ ಹೆಚ್ಚಿನ ಭಾಗವು ಎರಡು ಅಂಗಡಿಗಳ ಬಾಡಿಗೆಗೆ ಹೋಗುತ್ತದೆ ಎಂದು ಅಜೀಂ ಹೇಳುತ್ತಾರೆ.ಮಸೀದಿಯ ಸಮೀಪವಿರುವ ಹಳೆಯ ಅಂಗಡಿಗೆ 800 ರೂ (ಅದನ್ನು ಅವರು ಇನ್ನೂ ಉಳಿಸಿಕೊಂಡಿದ್ದಾರೆ ಗ್ರಾಹಕರನ್ನು ಕರೆತರುವ ಮಾರ್ಗವಾಗಿದೆ ಮತ್ತು ಪ್ರಮುಖ ಪ್ರದೇಶದಲ್ಲಿ ಕಡಿಮೆ ಬಾಡಿಗೆಗೆ ಸಿಗುವುದು ಇದಕ್ಕೆ ಪ್ರಮುಖ ಕಾರಣ) ಮತ್ತು ಸ್ಮಶಾನದ ಬಳಿ ಇರುವ ಕಲ್ನಾರಿನ ಕಾರ್ಯಾಗಾರಕ್ಕೆ 2,000 ರೂ. ನೀಡುತ್ತಾರೆ. "ಪ್ರತಿ ತಿಂಗಳು, ನಾನು ಶಾಲೆಯ ಶುಲ್ಕ, ದಿನಸಿ ಮತ್ತು ಇತರ ಮನೆಯ ಅಗತ್ಯಗಳಿಗಾಗಿ ಸುಮಾರು 6,000ರಿಂದ 7,000 ರೂಪಾಯಿಗಳನ್ನು ಖರ್ಚು ಮಾಡುತ್ತೇನೆ" ಎಂದು ಅವರು ಹೇಳುತ್ತಾರೆ. ಇನ್ನು ಅವರ ಕಿರಿಯ ಸಹೋದರ ಕುಟುಂಬದ ಖರ್ಚುಗಳನ್ನು ನೋಡಿಕೊಳ್ಳುತ್ತಾರೆ.
ಮಧ್ಯಾಹ್ನದ ವೇಳೆಗೆ, ಅಜೀಮ್ ಅವರು ಸಾಮಾನ್ಯವಾಗಿ ತನ್ನ ಅಂಗಡಿಯಿಂದ ಒಂದು ಕಿಲೋಮೀಟರ್ನಲ್ಲಿರುವ ಮೊಯಿನ್ಪುರಕ್ಕೆ ಮನೆಗೆ ಹಿಂದಿರುಗುತ್ತಾರೆ. ಮನೆಯಲ್ಲಿ ಅಷ್ಟೇನೂ ಪೀಠೋಪಕರಣಗಳಿಲ್ಲ, ಸಿಮೆಂಟ್ ನೆಲಹಾಸುಗಳನ್ನು ಪ್ಲಾಸ್ಟಿಕ್ ಚಾಪೆಗಳಿಂದ ಮುಚ್ಚಲಾಗಿದೆ. “ನನ್ನ ಮಕ್ಕಳು ಈ ಕೆಲಸವನ್ನು ಮಾಡಬೇಕೆಂದು ನಾನು ಬಯಸುವುದಿಲ್ಲ, ಕುಲುಮೆ ಮತ್ತು ಬಿಸಿ ಲೋಹಗಳೊಂದಿಗೆ ಕಾರ್ಯನಿರ್ವಹಿಸುವುದು ನಿಜಕ್ಕೂ ಅಪಾಯಕಾರಿ ಕೆಲಸ” ಎಂದು ಅವರು ಹೇಳುತ್ತಾರೆ.
"ನನಗೆ ನನ್ನ ಮಕ್ಕಳಿಗೆ ಸುರಕ್ಷಿತ ಭವಿಷ್ಯ ಬೇಕು, ಅವರಿಗೆ ಸಾಧ್ಯವಾದಷ್ಟು ಉತ್ತಮ ಶಿಕ್ಷಣವನ್ನು ನೀಡಲು ನಾನು ಬಯಸುತ್ತೇನೆ" ಎಂದು ಅವರ ಪತ್ನಿ ನಜೀಮಾ ಹೇಳುತ್ತಾರೆ, ಅವರ ಮೂರು ವರ್ಷದ ಮಗಳು ಸಮೀರಾ ಅವರಿಗೆ ಅಂಟಿಕೊಂಡಿದ್ದರೆ, ಆರು ವರ್ಷದ ಮಗ ತಾಹಿರ್ ಒಂದು ಮೂಲೆಯಲ್ಲಿ ಆಟವಾಡುತ್ತಿದ್ದ. ಹಲವಾರು ನಾಣ್ಯಗಳು ಮತ್ತು ಅವರ ಅಜ್ಜ ಮೊಮ್ಮಗನಿಗಾಗಿ ತಯಾರಿಸಿದ ಸಣ್ಣ ಕಬ್ಬಿಣದ ಸುತ್ತಿಗೆ ಅವನ ಕೈಯಲ್ಲಿತ್ತು.
ಅನುವಾದ: ಎನ್ . ಮಂಜುನಾಥ್