ರಸ್ತೆ ತಡೆಯಲ್ಲಿ ಭಾಗವಹಿಸಿದ್ದ ತುಕಾರಾಂ ವಲವಿ "ಈ ಸರ್ಕಾರ ನಮ್ಮ ಮೇಲೆ ದಾಳಿ ಮಾಡುತ್ತಿದೆ, ಆದರೆ ಇಂದು ನಾವು ನಮ್ಮ ಹೆಜ್ಜೆಯನ್ನು ಹಿಂದಕ್ಕಿಡುವುದಿಲ್ಲ. ನಾವು 10 ಎಕರೆ ಭೂಮಿ ಬೇಕೆಂದು ಕೇಳಿದರೆ ಕೇವಲ 10 ಗುಂಟೆ ಮಾತ್ರ [ಕಾಲು ಎಕರೆ] ನೀಡುತ್ತಾರೆ. ಐದು ಎಕರೆ ಕೇಳಿದರೆ ಕೇವಲ ಮೂರು ಗುಂಟೆ ಕೊಡುತ್ತಾರೆ. ನಾವು ಭೂಮಿಯಿಲ್ಲದೆ ಬದುಕಲು ಆಹಾರಕ್ಕಾಗಿ ಬೆಳೆಯನ್ನು ಎಲ್ಲಿ ಬೆಳೆಯುವುದು? ಈಗ ನಮ್ಮ ಬಳಿ ಹಣವಿಲ್ಲ, ಕೆಲಸವಿಲ್ಲ ಮತ್ತು ಆಹಾರವೂ ಇಲ್ಲ"
ಪಾಲ್ಘಾರ್ ಜಿಲ್ಲೆಯ ವಾಡಾ ತಾಲ್ಲೂಕಿನ ಗಾರ್ಗಾಂವ್ ಗ್ರಾಮದ ಹಾಡಿಯೊಂದರ ನಿವಾಸಿಯಾದ ವರ್ಲಿ ಆದಿವಾಸಿ ಸಮುದಾಯದ 61 ವರ್ಷದ ವಲವಿ ವಿವಿಧ ಹಳ್ಳಿಗಳ 3,000 (ಅಂದಾಜು) ರೈತರು, ಕೃಷಿ ಕಾರ್ಮಿಕರು ಹಾಗೂ ವರ್ಲಿ ಸಮುದಾಯದ ಅನೇಕ ಮಂದಿಯೊಡನೆ ಪ್ರತಿಭಟನೆಯಲ್ಲಿ ಪಾಲಗೊಂಡಿದ್ದರು.
ಒಟ್ಟಾರೆ ನವೆಂಬರ್ 26ರಂದು ಅವರು ಸೆಪ್ಟಂಬರ್ 27ನೇ ತಾರಿಖಿನಂದು ಕೇಂದ್ರವು ಅಂಗೀಕರಿಸಿದ "ದೇಶದಲ್ಲಿ ಕೃಷಿಯ ಪರಿವರ್ತನೆ ಮತ್ತು ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ" ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ವಾಡಾದ ಖಂಡೇಶ್ವರಿ ನಾಕಾದಲ್ಲಿ ರಸ್ತೆ ತಡೆ ನಡೆಸಿದರು. ಈ ಕಾನೂನುಗಳು ಕೃಷಿ ಕ್ಷೇತ್ರವನ್ನು ಖಾಸಗಿ ಹೂಡಿಕೆದಾರರಿಗೆ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ತೆರೆದಿಡುತ್ತವೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಈ ಕಾನೂನುಗಳ ಅಂಗೀಕಾರವಾದಂದಿನಿಂದಲೂ ದೇಶದದಾದ್ಯಂತ ಅದರಲ್ಲೂ ವಿಶೇಷವಾಗಿ ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರಪ್ರದೇಶದಲ್ಲಿ ರೈತರ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ.
ಇತ್ತೀಚಿನ ದಿನಗಳಲ್ಲಿ ಹರಿಯಾಣ ಮತ್ತು ದೆಹಲಿ ಗಡಿಗಳಲ್ಲಿ ರೈತರು ನಡೆಸುತ್ತಿರುವ ಹೋರಾಟದ ಕಡೆಯೇ ಎಲ್ಲರ ಗಮನವೂ ಇದ್ದಿದ್ದರಿಂದಾಗಿ ಅನೇಕ ರಾಜ್ಯಗಳಲ್ಲಿ ಅಲ್ಲಿನ ಸ್ಥಳೀಯ ರೈತರು ಈ ರೈತರಿಗೆ ಬೆಂಬಲವಾಗಿ ಮತ್ತು ಕೆಲವು ಸ್ಥಳೀಯ ಬೇಡಿಕೆಗಳೊಂದಿಗೆ ಹೋರಾಟಕ್ಕಾಗಿ ರಸ್ತೆಗಿಳಿದಿರುವುದು ಅಷ್ಟಾಗಿ ಜನರ ಗಮನವನ್ನು ಸೆಳೆದಿಲ್ಲ. ಉದಾಹರಣೆಗೆ, ಮಹಾರಾಷ್ಟ್ರದಲ್ಲಿ, ನವೆಂಬರ್ 25-26ರಂದು ರಾಜ್ಯಾದ್ಯಂತ ನಡೆದ ಸರಣಿ ಪ್ರತಿಭಟನೆಗಳು. ಈ ಪ್ರತಿಭಟನೆಗಳಲ್ಲಿ ಒಟ್ಟಾರೆ ಕನಿಷ್ಟ 60,000 ಜನ ಪಾಲ್ಗೊಂಡಿದ್ದರು. ಈ ಪ್ರತಿಭಟನೆಗಳು ನಾಸಿಕ್ನಿಂದ ಪಾಲ್ಘಾರ್ ಮತ್ತು ರಾಯ್ಗಡ್ ತನಕ ಮತ್ತು ಈ ಜಿಲ್ಲೆಗಳ ತಾಲ್ಲೂಕುಗಳ ವಿವಿಧ ಕೇಂದ್ರಗಳಲ್ಲಿ ನಡೆದಿತ್ತು.
ಈ ವಾರ ವಾಡಾದಲ್ಲಿ, ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡ ವಲವಿ ಅವರ ಮುಖ್ಯ ಬೇಡಿಕೆ ಭೂಮಿಯ ಹಕ್ಕು. ಈ ಬೇಡಿಕೆಯು ಕೆಲವು ವರ್ಷಗಳಿಂದ ಮಹಾರಾಷ್ಟ್ರದ ಆದಿವಾಸಿ ರೈತರು ನಡೆಸಿದ ಹಲವಾರು ಪ್ರತಿಭಟನೆಗಳಲ್ಲಿ ಮುನ್ನೆಲೆಯಲ್ಲಿತ್ತು. ವಲವಿ ತನ್ನ ಭೂಮಿಯ ಹಕ್ಕುಪತ್ರಕ್ಕಾಗಿ ಕಳೆದ 15 ವರ್ಷಗಳಿಂದ ನ್ಯಾಯಾಲಗಳ ಮೆಟ್ಟಿಲನ್ನು ಹತ್ತಿಳಿಯುತ್ತಿದ್ದಾರೆ. "[ನಮ್ಮ] ಹಳ್ಳಿಯಲ್ಲಿ ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವವರು ಅರಣ್ಯ ಇಲಾಖೆಯಿಂದ ಅನ್ಯಾಯಕ್ಕೊಳಗಾಗಿದ್ದಾರೆ" ಎಂದು ಅವರು ಹೇಳುತ್ತಾರೆ. "ನಾವು ಈ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಎದುರಿಸಬೇಕಿದೆ. ನಮ್ಮ ಜಾಮೀನಿಗಾಗಿ ಪಾವತಿಸಲು ಅಗತ್ಯವಿರುವಷ್ಟು ಹಣವೂ ನಮ್ಮ ಬಳಿಯಿಲ್ಲ. ನಾವು ಬಡ ಜನರು ಅಷ್ಟೊಂದು ಹಣವನ್ನು ಎಲ್ಲಿಂದ ತರುವುದು?"
ನವೆಂಬರ್ 26ರ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು 21 ಬೇಡಿಕೆಗಳ ಆಗ್ರಹ ಪಟ್ಟಿಯನ್ನು ರೈತರು ವಾಡಾ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಿದರು. ಪ್ರತಿಭಟನೆಗೆ ಬಂದಿದ್ದ ಬಹುತೇಕ ಎಲ್ಲರೂ ಮಾಸ್ಕ್ ಧರಿಸಿದ್ದರು ಅಥವಾ ಸ್ಕಾರ್ಫ್/ಕರವಸ್ತ್ರದಿಂದ ಮುಖಗಳನ್ನು ಮುಚ್ಚಿಕೊಂಡಿದ್ದರು, ಮತ್ತು ಕೆಲವು ಎಐಕೆಎಸ್ ಸ್ವಯಂಸೇವಕರು ಪ್ರತಿಭಟನಾಕಾರರಿಗೆ ಮಾಸ್ಕ್ ಮತ್ತು ಸಾಬೂನುಗಳನ್ನು ವಿತರಿಸಿದರು.
21 ಬೇಡಿಕೆಗಳಲ್ಲಿ ಇತ್ತೀಚೆಗೆ ಜಾರಿಗೆ ಬಂದ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆನ್ನುವುದು ಸಹ ಸೇರಿದೆ. ಇತರ ಬೇಡಿಕೆಗಳೆಂದರೆ 2006ರ ಅರಣ್ಯ ಹಕ್ಕುಗಳ ಕಾಯ್ದೆ (ಎಫ್ಆರ್ಎ)ಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವುದು, ಅಕಾಲಿಕ ಮಳೆಯಿಂದಾಗುವ ಬೆಳೆ ನಷ್ಟಕ್ಕೆ ಸಾಕಷ್ಟು ಪರಿಹಾರ ಮಂಜೂರು ಮಾಡುವುದು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸುವುದು (ಕೋವಿಡ್ -19ರ ಹಿನ್ನೆಲೆಯಲ್ಲಿ), ಮತ್ತು ಆನ್ಲೈನ್ ತರಗತಿಗಳಿಗೆ ಅಂತ್ಯ ಹಾಡುವುದು.
ಬೇಡಿಕೆ ಪಟ್ಟಿಯಲ್ಲಿ ಈ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಆರು ತಿಂಗಳ ಕಾಲ ಪ್ರತಿ ಕುಟುಂಬಕ್ಕೆ 7,500 ರೂ., ಮತ್ತು ಪ್ರತಿ ಕುಟುಂಬದ ಸದಸ್ಯರಿಗೆ 10 ಕಿಲೋ ಪಡಿತರವನ್ನು ನೀಡಬೇಕೆನ್ನುವುದು ಸಹ ಸೇರಿದೆ. ಪ್ರತಿಭಟನೆಯಲ್ಲಿ ಸೇರಿದ ಸಾಕಷ್ಟು ರೈತರೂ ಈ ಬೇಡಿಕೆಯ ಕುರಿತಾಗಿ ಮಾತನಾಡಿದರು.
"ನಮ್ಮ ಪ್ರದೇಶದ ಕೆಲವು ಮಹಿಳೆಯರು ಒಂದಿಷ್ಟು ಆದಾಯ ಗಳಿಕೆಗಾಗಿ ಪ್ರತಿದಿನ ನಾಲ್ಕು ಗಂಟೆಗಳ ಕಾಲ ನಡೆಯಬೇಕಾಗಿದೆ" ಎಂದು ಎಐಕೆಎಸ್ ಕಾರ್ಯಕರ್ತ ಕಾಂಚಾದ್ ಗ್ರಾಮದ 54 ವರ್ಷದ ರಾಮ ತಾರ್ವಿ ಹೇಳಿದರು, ಅವರ ಕುಟುಂಬವು ಎರಡು ಎಕರೆ ಹೊಲದಲ್ಲಿ ಅಕ್ಕಿ, ಜೋಳ, ಸಜ್ಜೆ ಮತ್ತು ಗೋಧಿಯನ್ನು ಬೆಳೆಯುತ್ತದೆ. . "ಅವರು ತಮ್ಮ ಇಡೀ ದಿನದ ಶ್ರಮದ ಫಲವಾಗಿ 200 ರೂಪಾಯಿ ಗಳಿಸುತ್ತಾರೆ. ನಮಗೆ ಭೂಮಿಯಿದೆ ಆದರೆ ಆದರೆ ಅದರಲ್ಲಿ ಬೇಸಾಯ ಮಾಡಲು ಅರಣ್ಯ ಇಲಾಖೆ ಬಿಡುವುದಿಲ್ಲ. ಈ ಕೊವಿಡ್ನಿಂದಾಗಿ ಕೈಯಲ್ಲಿ ಕೆಲಸವೂ ಇಲ್ಲ..."
"[ ಎಫ್ಆರ್ಎ ] ಜಮೀನುಗಳು ನಮಗಿರುವ ಏಕೈಕ ಜೀವನೋಪಾಯ ಮಾರ್ಗವಾಗಿದೆ. ಆದರೂ ಅವರು ಈ ಕೊವಿಡ್ ಸಮಯದಲ್ಲಿ ನಮ್ಮ ಜೀವವನ್ನು ಪಣಕ್ಕಿಡುವಂತೆ ಮಾಡುತ್ತಿದ್ದಾರೆ ಮತ್ತು ನಾವು ಹಲವು ವರ್ಷಗಳಿಂದ ಬೇಸಾಯ ಮಾಡುತ್ತಿರುವ ಜಮೀನುಗಳಿಗಾಗಿ [ಭೂಮಿ ಹಕ್ಕಿಗಾಗಿ] ಒತ್ತಾಯಿಸಲು ಹೊರಟಿದ್ದೇವೆ." ಎಂದು ಸುಗಂದ ಜಾಧವ್ ಹೇಳಿದರು. ಅವರ ಕುಟುಂಬವು ಎರಡು ಎಕರೆ ಜಮೀನಿನಲ್ಲಿ ಅಕ್ಕಿ, ಸಜ್ಜೆ, ಉದ್ದು ಮತ್ತು ರಾಗಿಯನ್ನು ಬೆಳೆಯುತ್ತದೆ. “ನಾವು ಎಷ್ಟೋ ಬಾರಿ ಪ್ರತಿಭಟನೆ, ಪ್ರದರ್ಶನಗಳನ್ನು ನಡೆಸಿದ್ದೇವೆ ಆದರೆ ಸರಕಾರ ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತಿಲ್ಲ. ಅದು ನಮ್ಮನ್ನು ಮತ್ತೆ ಮತ್ತೆ ಬೀದಿಗಿಳಿಯುವ ಅನಿವಾರ್ಯತೆಗೆ ದೂಡುತ್ತಿದೆ.”
ಅನುವಾದ: ಶಂಕರ ಎನ್. ಕೆಂಚನೂರು