“ಪ್ರತಿದಿನ ದುಡಿದರೆ ಮಾತ್ರ ನಮ್ಮ ಹೊಟ್ಟೆ ತುಂಬುತ್ತದೆ,” ಎನ್ನುತ್ತಾರೆ, ನವೆಂಬರ್ 4 ರಂದು ಬೆಂಗಳೂರಿನಿಂದ ತನ್ನೂರು ಬುಚ್ಚಾರ್ಲಕ್ಕೆ ಹಿಂದಿರುಗಿದ್ದ ಡಿ. ನಾರಾಯಣಪ್ಪ.  ಊರಲ್ಲಿರುವ ತನ್ನ ಸರೀಕ ದಲಿತರ ರೀತಿಯಲ್ಲೇ ವರ್ಷದ ಬಹಳಷ್ಟು ಭಾಗ ನಗರಗಳಿಗೆ ವಲಸೆ ಹೋಗಿ ಅಲ್ಲಿನ ನಿರ್ಮಾಣ ಕಾಮಗಾರಿಗಳಲ್ಲಿ ದುಡಿಯುವ ನಾರಾಯಣಪ್ಪ, ಆಗೊಮ್ಮೆ ಈಗೊಮ್ಮೆ ಕೆಲವು ದಿನಗಳಿಗಾಗಿ ಊರಿಗೆ ಬಂದು ಹೋಗುತ್ತಾರೆ.

ಆದರೆ ಈ ಬಾರಿ ಮಾತ್ರ, ನವೆಂಬರಿನಲ್ಲಿ ತಮ್ಮೂರಿಗೆ ಬಂದ ಈ ವಲಸೆ ಕಾರ್ಮಿಕರಿಗೆ ತಿಂಗಳು ದಾಟಿದರೂ ದುಡಿಮೆಗೆ ವಾಪಸ್ ತೆರಳುವ ಅವಕಾಶ ದೊರೆತಿರಲಿಲ್ಲ.  ಕರ್ನಾಟಕ – ಆಂಧ್ರ ಗಡಿ ಭಾಗದಲ್ಲಿರುವ ಅನಂತಪುರ ಜಿಲ್ಲೆಯ ರೊದ್ಧಾಂ ಮಂಡಲದ ಹಳ್ಳಿಗೆ ಸೇರಿದ ಅವರೆಲ್ಲ, ಊರಿಗೆ ಬಂದಾಗ ಪ್ರತೀ ಬಾರಿ ಊರಿನ ಗದ್ದೆಗಳಲ್ಲಿ ಕೂಲಿಗಳಾಗಿ ದುಡಿಯುತ್ತಿದ್ದರು.  ಏಕೆಂದರೆ, ಕೆಲವು ದಿನಗಳಿಗಿಂತ ಹೆಚ್ಚು ಕಾಲ ದುಡಿಯದೇ ಕೂತುಣ್ಣುವ ಆಯ್ಕೆಯೇ ಅವರಿಗಿರಲಿಲ್ಲ.


02-Narayanappa-Bucharla-0520-RM-Staying half-hungry due to the demonetisation ‘drought’.jpg

‘ನಾವು ಅಂಬೇಡ್ಕರ್ ಜನ’, ಹಾಗಾಗಿ ನಮಗೆ ಕೈಸಾಲ ಪಡೆಯುವುದು ಕಷ್ಟ ಎಂದು ಬುಚ್ಚಾರ್ಲದ ತನ್ನ ಮನೆಯಲ್ಲಿ ಕುಳಿತು ವಿವರಿಸಿದ ಡಿ. ನಾರಾಯಣಪ್ಪ

ಈ ವಲಸೆ ಕಾರ್ಮಿಕರಿಗೆ ನವೆಂಬರ್ ತಿಂಗಳಲ್ಲಿ ಮನೆಗೆ ಹಿಂದಿರುಗುವುದು ಸಂಭ್ರಮದ ಸಂಗತಿ.  ಅವರು ತಮ್ಮ ಅಲ್ಪಸ್ವಲ್ಪ ಉಳಿಕೆ ಹಣವನ್ನು ಈ ಶಾಂತಿ ಹಬ್ಬ ಎಂಬ ಪೂರ್ವಿಕರ ಆಚರಣೆಯ ಸಂಭ್ರಮಕ್ಕಾಗಿ ತಂದಿರುತ್ತಾರೆ. ಹಬ್ಬದ ವೇಳೆ ಬುಚ್ಚಾರ್ಲದ ಅಂದಾಜು 150 ದಲಿತ ಕುಟುಂಬಗಳು ತಮ್ಮ ಪರಿಶಿಷ್ಟ ಜಾತಿಗಳ ಕಾಲನಿಯಲ್ಲಿ ತಮ್ಮನ್ನು ಸಾಂಕ್ರಾಮಿಕ ರೋಗಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ, ತಾವು ನಂಬಿಕೊಂಡು ಬಂದ ಕೆಲವು ಆಚರಣೆಗಳನ್ನು ಮಾಡುತ್ತಾರೆ,  ಪೆದ್ದಮ್ಮ

ದೇವಿಗೆ ಕೋಣ, ಕುರಿ ಬಲಿ ನೀಡುತ್ತಾರೆ.  ಆಚರಣೆಗಳ ಬಳಿಕ ಬಲಿ ನೀಡಲಾದ ಪ್ರಾಣಿಯ ಮಾಂಸಾಹಾರ ಅಡುಗೆ ಮಾಡಿ ಉಂಡು, ಹಬ್ಬ ಆಚರಿಸಲಾಗುತ್ತದೆ.

ಈ ವರ್ಷ ಈ ಹಬ್ಬ ನವೆಂಬರ್ 29ಕ್ಕೆ ನಡೆಯುವುದೆಂದು ಏರ್ಪಾಡಾಗಿತ್ತು.  ವಲಸೆ ಕಾರ್ಮಿಕರು ತಮ್ಮ ಚೂರು ಪಾರು ಉಳಿಕೆ ಕಾಸಿನೊಂದಿಗೆ ಹಬ್ಬಕ್ಕೆಂದು ಊರಿಗೆ ಬಂದಿಳಿಯಲಾರಂಭಿಸಿದ್ದರು.  ಆದರೆ ಅಷ್ಟರಲ್ಲಿ ನೋಟು ರದ್ಧತಿ ಸಂಭವಿಸಿತು.

ಹಳ್ಳಿಯಲ್ಲಿ ಕಾಸಿನ ತೀವ್ರ ಕೊರತೆಯ ಜೊತೆಗೆ, ನೆಲಗಡಲೆ ಮತ್ತು ಮಲ್ಬರಿ ಬೆಳೆ ಈ ಬಾರಿ ಮಳೆಯ ಕೊರತೆಯಿಂದಾಗಿ ಚೆನ್ನಾಗಿ ಅಗಿರದಿದ್ದದ್ದು, ಬೆಳೆಗೆ ಬೆಲೆಯಲ್ಲಿ ಏರಿಳಿತ ಕೂಡ ರೊದ್ಧಾಂ ಹಳ್ಳಿಯ ರೈತರ ಕಿಸೆಗೆ ಕತ್ತರಿ ಹಾಕಿತ್ತು.  ಹಾಗಾಗಿ ಅವರಿಗೆ ತಮ್ಮ ಗದ್ದೆಗಳಲ್ಲಿ ಕೃಷಿ ಕಾರ್ಮಿಕರನ್ನು ನಿರಂತರವಾಗಿ ದುಡಿಸಿಕೊಳ್ಳುವುದು ಕಷ್ಟವಾಗಿತ್ತು.  ನವೆಂಬರ್ ನಲ್ಲಿ 15 ದಿನಗಳ ಕಾಲ ಅಲ್ಲಿನ ವಿವಿಧ ಜಾತಿಗಳ ಕೃಷಿ ಕಾರ್ಮಿಕರಿಗೆ ಅವರ ದೈನಂದಿನ ಸಂಬಳ – ಗಂಡಾಳಿಗೆ 150 ರೂ. ಹೆಣ್ಣಾಳಿಗೆ 100 ರೂ – ಕೂಡ ಸಿಕ್ಕಿರಲಿಲ್ಲ.


03-unemployed-sc-man-rests-at-ration-shop-and-unemployment-helpline-number-of-egmm-scheme-on-the-wall-Bucharla-0572-RM-Staying half-hungry due to the demonetisation ‘drought’.jpg

ಗೋಡೆ ಬರಹ: ಕೆಲಸ ಇಲ್ಲದೆ ಕಂಗೆಟ್ಟು, ಬುಚ್ಚಾರ್ಲದ ಪಡಿತರ ಅಂಗಡಿಯೆದುರು ವಿಶ್ರಾಂತಿ ಪಡೆಯುತ್ತಿರುವ ದಲಿತ ವ್ಯಕ್ತಿ. ತಮಾಷೆಯೆಂದರೆ, ಅಲ್ಲೇ ಮೇಲೆ ಗೋಡೆಯಲ್ಲಿ ಕೆಲಸವಿಲ್ಲದವರಿಗೆ ಸರ್ಕಾರದ ಹೆಲ್ಪ್ ಲೈನ್ ನಂಬರ್ ಪೈಂಟ್ ಮಾಡಲಾಗಿದೆ

ನವೆಂಬರ್ ತಿಂಗಳಲ್ಲಿ ಕೆಲಸ ಇಲ್ಲದೆ ಶಾಂತಿ ಹಬ್ಬ ಮಾಡಬೇಕಿದ್ದರೆ, ದಲಿತರು ಕಡಿಮೆ ಊಟ ಮಾಡಬೇಕಿತ್ತು.“ ನಮ್ಮಲ್ಲಿರುವ ಅಕ್ಕಿಯನ್ನು ಇನ್ನೂ ಕೆಲವು ದಿನಗಳ ಬಳಕೆಗಾಗಿ ಉದ್ದಕ್ಕೆಳೆಯಬೇಕಿತ್ತು” ಎನ್ನುತ್ತಾರೆ, ಕೃಷಿ ಕೂಲಿ ಕಾರ್ಮಿಕೆ ಹನುಮಕ್ಕ. ನವೆಂಬರ್ ತಿಂಗಳಿನಲ್ಲಿ ಆಕೆಯ ಕುಟುಂಬ ಆ ಪರಿಶಿಷ್ಟ ಜಾತಿಗಳ ಕಾಲನಿಯಲ್ಲಿದ್ದ ಇತರ ಸುಮಾರು 600 ಮಂದಿ ದಲಿತರಂತೆಯೇ ದಿನದ ಊಟಗಳ ಸಂಖ್ಯೆಯಲ್ಲಿ ಕಡಿತ ಮಾಡಿಕೊಳ್ಳಬೇಕಾಯಿತು ಮತ್ತು ವಾರಕ್ಕೊಮ್ಮೆ ಮಾಡುತ್ತಿದ್ದ ಮಾಂಸಾಹಾರದ ಅಡುಗೆಯನ್ನೂ ನಿಲ್ಲಿಸಬೇಕಾಯಿತು.

ಏಳು ಮಂದಿ ಸದಸ್ಯರಿರುವ ನಾರಾಯಣಪ್ಪ ಕುಟುಂಬಕ್ಕೆ – ಅಂದರೆ ನಾರಾಯಣಪ್ಪ, ಅವರ ಪತ್ನಿ, ಇಬ್ಬರು ಮಕ್ಕಳು ಮತ್ತು ಅವರ ಹೆಂಡಿರು ಹಾಗೂ ಎರಡು ವರ್ಷದ ಒಬ್ಬಳು ಮೊಮ್ಮಗಳು- ಹೊಟ್ಟೆ ತುಂಬಲು ಒಂದು ತಿಂಗಳಿಗೆ 90 ಕೇಜಿ ಅಕ್ಕಿ ಮತ್ತು 30 ಸೇರು ರಾಗಿ ಬೇಕಾಗುತ್ತದೆ. ಆದರೆ “ನವೆಂಬರ್ ತಿಂಗಳಿನಲ್ಲಿ ಬರೀ 60 ಕೇಜಿ ಅಕ್ಕಿ ಮತ್ತು 10 ಸೇರು ರಾಗಿಯೊಳಗೆ ನಾವು ಹಸಿವು ನೀಗಿಕೊಳ್ಳಬೇಕಾಯಿತು” ಎನ್ನುತ್ತಾರೆ ನಾರಾಯಣಪ್ಪ. ನಾರಾಯಣಪ್ಪ ತನ್ನೂರು ಬುಚ್ಚಾರ್ಲದಿಂದ ಮೂರು ಕಿಲೋಮೀಟರ್ ದೂರದಲ್ಲಿರುವ ರೊದ್ದಾಂನಲ್ಲಿ ಜಿ. ಆರ್ ರಾಘವೇಂದ್ರ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಅಕ್ಕಿ ಖರೀದಿಸುತ್ತಾರೆ. 50 ಕೇಜಿಯ ಅಕ್ಕಿ ಚೀಲದ ಬೆಲೆ 1200 ರೂ. ಗಳು. ರಾಘವೇಂದ್ರ ಅವರ ಅಂಗಡಿಯಲ್ಲೂ ವ್ಯಾಪಾರ ತಗ್ಗಿದೆ. “ಅಕ್ಟೋಬರಿನಲ್ಲಿ ನಾವು 25 ಕೇಜಿ ತೂಕದ 20 ಚೀಲ ಅಕ್ಕಿ ಮಾರಿದ್ದೆವು ಆದರೆ ನವೆಂಬರಿನಲ್ಲಿ ವ್ಯಾಪಾರ ಅದದ್ದು ಬರೀ 8-10 ಚೀಲ ಅಕ್ಕಿ” ಎನ್ನುತ್ತಾರೆ ಅಂಗಡಿ ಮಾಲಕ ರಾಘವೇಂದ್ರ.


04-Hanumakka-on-right-with-the-rice-from-ration-shop-which-will-collect-its-december-payments-later-0571-RM-Staying half-hungry due to the demonetisation ‘drought’.jpg

ಜಿ.  ಆರ್. ರಾಘವೇಂದ್ರ (ಎಡ) ರೊದ್ದಾಂನಲ್ಲಿರುವ ತನ್ನ ಕಿರಾಣಿ ಅಂಗಡಿಯಲ್ಲಿ. ತನ್ನ ಗಿರಾಕಿಗಳು ನಗದಿನ ಕೊರತೆ ಅನುಭವಿಸುತ್ತಿರುವುದರಿಂದ ಅವರು ಹಿಂದಿನ ತಿಂಗಳಿಗೆ ಹೋಲಿಸಿದರೆ ಈ ಬಾರಿ ಅರ್ಧಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಅಕ್ಕಿ ಮಾರಾಟ ಮಾಡಿದ್ದಾರೆ

ರೊದ್ದಾಂ ಮಂಡಲದಲ್ಲಿ 21 ಹಳ್ಳಿಗಳಿದ್ದು, ಅಲ್ಲಿಗೆಲ್ಲ ಕಿರಾಣಿ ಸರಬರಾಜು ಮಾಡುವ ರೊದ್ದಾಂನ ಬೇರೆ ಅಂಗಡಿಗಳಲ್ಲೂ ವ್ಯಾಪಾರ ಮಾಡಲಾಗಿದೆ. “ಅಗತ್ಯ ವಸ್ತುಗಳ ಖರೀದಿಯಲ್ಲೂ ಇಳಿಕೆ ಕಂಡುಬಂದಿದೆ.  ನಾವು ವಾರಕ್ಕೆ ಮೂರು ಪೆಟ್ಟಿಗೆ ಸಾಬೂನು ಮಾರುತ್ತೇವೆ.  ಆದರೆ, ಡಿಸೆಂಬರ್ ಮೊದಲ ವಾರದಲ್ಲಿ ಒಂದು ಪೆಟ್ಟಿಗೆ ಸಾಬೂನು ಕೂಡ ಪೂರ್ಣ ಮಾರಲಾಗಲಿಲ್ಲ” ಎನ್ನುತ್ತಾರೆ, ರೊದ್ದಾಂನ ಅಂಗಡಿಯೊಂದರ ಮಾಲಕಿ ಪಿ. ಅಶ್ವತ್ಥಲಕ್ಷ್ಮಿ.

ಬುಚ್ಚಾರ್ಲದ ಪರಿಶಿಷ್ಟ ಜಾತಿಗಳ ಕಾಲನಿಯವರು ತಮ್ಮ ಅಗತ್ಯ ಧಾನ್ಯಗಳಲ್ಲಿ ಒಂದು ಭಾಗವನ್ನು ಮಾತ್ರ ಪಡಿತರ ಅಂಗಡಿಯಿಂದ ಪಡೆಯುತ್ತಾರೆ, ಉಳಿದದ್ದನ್ನು ತಿಂಗಳಿಗೊಮ್ಮೆ ನಿಯಮಿತ ಪ್ರಮಾಣದಲ್ಲಿ ಖಾಸಗಿ ಕಿರಾಣಿ ಅಂಗಡಿಗಳಿಂದ ಖರೀದಿಸುತ್ತಾರೆ- ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುವ ತಾಕತ್ತು ಅವರಲ್ಲಿಲ್ಲ.  “ಈ ಬಾರಿ ದುಡ್ಡಿಲ್ಲದ್ದರಿಂದಾಗಿ ನಾವು ಖರೀದಿ ಮಾಡಿಲ್ಲ” ಎನ್ನುವ ಹನುಮಕ್ಕ, ತಾನೂ ಸ್ವತಃ ದುಡಿಮೆ ಇಲ್ಲದಿರುವುದರಿಂದಾಗಿ ಮನೆಯಲ್ಲೇ ಉಳಿದಿದ್ದಾರೆ. ಮನೆಯೊಳಗೆ ಬೇಳೆಕಾಳು ಇಲ್ಲದಿರುವುದು ದಲಿತ ಕಾಲನಿಯವರಿಗೆ ಹೊಸದೇನಲ್ಲ.


05-Raghavendra-in-his-grocery-shop--Roddam-0533-RM-Staying half-hungry due to the demonetisation ‘drought’.jpg

ಪಡಿತರ ಅಂಗಡಿಯಿಂದ ಕಡದಲ್ಲಿ ತಂದ ಅಕ್ಕಿಯೊಂದಿಗೆ ಹನುಮಕ್ಕ (ಎಡ) ಮತ್ತು ಆಕೆಯ ಮಗಳು

1990ಕ್ಕೆ ಮೊದಲು ಇಲ್ಲಿನ ಹೆಚ್ಚಿನ ಗಂಡಸರು ಆ ಪ್ರದೇಶದ ವಿವಿಧ ಹಳ್ಳಿಗಳಲ್ಲಿ ಜೀತದ ಆಳುಗಳಾಗಿದ್ದರು. ಈಗ ಬಂದೊದಗಿರುವ ಸ್ಥಿತಿ ಅವರಿಗೆ ಆ ಹಳೆಯ ದಿನಗಳನ್ನು ನೆನಪಿಸುತ್ತಿದೆ. ಆದರೆ ಈ ಬಾರಿ ಅಷ್ಟೊಂದು ಕಷ್ಟ ಇಲ್ಲ ಎನ್ನುತ್ತಾರವರು.  “ಈ ಬಾರಿ ಕೈಯಲ್ಲಿ ಕಾಸಿಲ್ಲದಿರುವುದು [ನೋಟು ರದ್ಧತಿಯಿಂದಾಗಿ] 30 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಬರದ ಪರಿಸ್ಥಿತಿಗೆ ಹೋಲಿಸಿದರೆ ಕಷ್ಟದ್ದೆನ್ನಿಸುವುದಿಲ್ಲ”, ಎನ್ನುವ ನಾರಾಯಣಪ್ಪನಿಗೆ ಈಗ 49. “ನಾನು 20 ವರ್ಷದವನಿದ್ದಾಗ ಸತತ ಮೂರು ನಾಲ್ಕು ದಿನ ಹೊಟ್ಟೆಗೇನೂ ಇಲ್ಲದೆ ಇರಬೇಕಾಗುತ್ತಿತ್ತು.  ಆಗೆಲ್ಲ ನಾವು ಹುಣಸೆ ಬೀಜವನ್ನು ನೀರಲ್ಲಿ ನೆನೆಸಿಟ್ಟು ತಿಂದದ್ದಿತ್ತು, ಅಥವಾ ತಾಳೆಯ ಗಡ್ಡೆ ತಿಂದು ಜೀವ ಉಳಿಸಿಕೊಂಡಿದ್ದೆವು.  ಆ ಸಮಯದಲ್ಲಿ ನಾನು 14 ವರ್ಷ ಜೀತದಾಳಾಗಿ ಕೆಲಸ ಮಾಡಿದ್ದೆ” ಎನ್ನುತ್ತಾರೆ ನಾರಾಯಣಪ್ಪ.

ಹಿಂದೆಲ್ಲ ಜೀತದಾಳುಗಳಾಗಿ ದುಡಿಯುತ್ತಿದ್ದವರು ಈಗೀಗ ಹಳ್ಳಿಯಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿರುವಂತೆಯೇ ಕೆಲಸವನ್ನರಸಿಕೊಂಡು ಪರವೂರುಗಳಿಗೆ ತಿಂಗಳುಗಟ್ಟಲೆ ವಲಸೆ ಹೋಗುತ್ತಾರೆ.  ನಾರಾಯಣಪ್ಪನ ಕುಟುಂಬದಲ್ಲಿ ಹೆಚ್ಚಿನವರು ಬೆಂಗಳೂರು ಕಡೆ ಹೋಗುತ್ತಾರೆ, 3-4 ತಿಂಗಳುಗಳಿಗೊಮ್ಮೆ ಕೆಲವು ದಿನಗಳ ಮಟ್ಟಿಗೆ ಊರಿಗೆ ಬಂದು ಹೋಗುತ್ತಾರೆ.  ನಗರದಲ್ಲಿ ಕಟ್ಟಡ ಕಾಮಗಾರಿಗಳಲ್ಲಿ ದುಡಿಯುವ ಅವರು ನಿರ್ಮಾಣ ಹಂತದಲ್ಲಿರುವ ಕಟ್ಟಡದ ತಾರಸಿಗಳಲ್ಲೇ ಉಳಿಯುತ್ತಾರೆ ಇಲ್ಲವೇ ರಸ್ತೆ ಬದಿಯ ಕೋಣೆಗಳಲ್ಲಿ ಕಿಕ್ಕಿರಿದು ತುಂಬಿಕೊಂಡು ಬದುಕುತ್ತಾರೆ. ಆದರೆ ತಮ್ಮ ಕಠಿಣ ಶ್ರಮಕ್ಕೆ ಸಿಗುವ ಪ್ರತಿಫಲ ಬಳಸಿಕೊಂಡು ಹೊಟ್ಟತುಂಬ ಉಣ್ಣುವುದಕ್ಕೆ ಅವರೆಂದೂ ಕೊರತೆ ಮಾಡಿಕೊಂಡಿಲ್ಲ. “ನಾವು ವಾರಕ್ಕೆರಡು ಬಾರಿ ಮಾಂಸದೂಟ ಮಾಡುತ್ತೇವೆ” ಎನ್ನುತ್ತಾರೆ ನಾರಾಯಣಪ್ಪ.  ನೋಟು ರದ್ಧತಿಯ ಬಳಿಕ ಈಗ ಇದಕ್ಕೂ ಕುತ್ತು ಬಂದಿದೆ.

ನವೆಂಬರ್ ಮೊದಲ ವಾರದಲ್ಲಿ ನಾರಾಯಣಪ್ಪ ಕುಟುಂಬ ಬುಚ್ಚಾರ್ಲಕ್ಕೆ ಹಿಂದಿರುಗಿದ. ಮೇಲೆ ಗದ್ದೆಗಳಲ್ಲಿ ಕೆಲಸ ಸಿಗದ್ದರಿಂದಾಗಿ, ಇರುವ ಹಣದಲ್ಲೇ ತಮ್ಮ ಎಲ್ಲ ಖರ್ಚುಗಳನ್ನು ಹೊಂದಿಸಿಕೊಳ್ಳಬೇಕಾಗಿದೆ. ಹಳ್ಳಿಯಲ್ಲಿರುವ ಬೇರೆ ಜಾತಿಗಳ ಜನರು ತಮ್ಮಲ್ಲಿ ಉಳಿಸಿಟ್ಟಿದ್ದ ಧಾನ್ಯಗಳನ್ನು ಬಳಸುತ್ತಿದ್ದು, ಸಾಲ ಸೋಲ ಕೇಳಿ ಪಡೆದು, ನಾರಾಯಣಪ್ಪ ಅವರ ಕುಟುಂಬಕ್ಕಿಂತ ಸ್ವಲ್ಪ ಒಳ್ಳೆಯ ದಿನಗಳನ್ನೇ ಕಾಣುತ್ತಿದ್ದಾರೆ. ಆದರೆ ನಾರಾಯಣಪ್ಪ ಅವರ ಜಾತಿಯವರಿಗೆ ಇದು ಸಾಧ್ಯವಾಗಿಲ್ಲ, ಏಕೆಂದರೆ, ಅವರಲ್ಲಿ ಸಂಗ್ರಹಿಸಿಟ್ಟುಕೊಂಡ ಧಾನ್ಯಗಳೂ ಇಲ್ಲ ಮತ್ತು ಅವರು ಕೇಳಿದರೆ ಅವರಿಗೆ ಸಾಲವೂ ಸುಲಭವಾಗಿ ಸಿಗುವುದಿಲ್ಲ. ತಮಗೆ ಸಾಲ ಏಕೆ ಸುಲಭವಾಗಿ ಸಿಗುವುದಿಲ್ಲ ಮತ್ತು ಜನ ಆಹಾರ ಧಾನ್ಯಗಳನ್ನು ತಮ್ಮ ಜಾತಿಯವರೊಂದಿಗೆ ಏಕೆ ಹಂಚಿಕೊಳ್ಳುವುದಿಲ್ಲವೆಂಬುದನ್ನು ವಿವರಿಸುತ್ತಾ, ನಾರಾಯಣಪ್ಪ “ನಾವು ಅಂಬೇಡ್ಕರ್ ಜನ” ಎಂದರು. ತೆಲುಗಿನಲ್ಲಿ ಕೆಲವೊಮ್ಮೆ ತುಚ್ಫೀಕರಿಸಲು ಬಳಸಲಾಗುವ ತಮ್ಮ ಜಾತಿಯ ಹೆಸರನ್ನು (ಮಾದಿಗ) ಬಾಯಿಬಿಟ್ಟು ಹೇಳದಿರಲು ಅವರು ಪ್ರಯತ್ನಿಸುತ್ತಿದ್ದರು.  ಜೊತೆಗೆ, ತಾವು ಆರ್ತರೆಂಬುದನ್ನು ತೋರಿಸುವುದಕ್ಕೂ ಅವರಿಗೆ ಹಿಂಜರಿಕೆ ಇತ್ತು. “ನಮಗೂ ಆತ್ಮಗೌರವ ಇದೆ. ನಮಗೆ ಯಾರಾದರೂ ಆಹಾರ ಕೊಡಲು ಮುಂದೆ ಬಂದರೂ ನಾವು ತಗೊಳ್ಳುವುದಿಲ್ಲ.  ನಾವು ಕಡಿಮೆ ಉಣ್ಣಬೇಕಾಗಬಹುದು.  ಆದರೂ ಕೇಳಿದವರಿಗೆ ನಾವು ಚೆನ್ನಾಗಿ ಉಂಡಿದ್ದೇವೆ ಎಂದೇ ಹೇಳುತ್ತೇವೆ” ಎಂದಾತ ಹೇಳಿದರು.

ನಾರಾಯಣಪ್ಪ ಜಾತಿಯವರು ಕಡಿಮೆ ಊಟ ಮಾಡುವ ಮೂಲಕ ನೋಟು ರದ್ಧತಿಗೆ ಹೊಂದಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೆನರಾ ಬ್ಯಾಂಕಿನ ರೊದ್ದಾಂ ಶಾಖೆಯಲ್ಲಿ ನಗದಿನ ಕೊರತೆ ಇರುವುದು ಊರಿನ ಹಲವು ಕುಟುಂಬಗಳನ್ನು ಕಂಗೆಡಿಸಿ ಬಿಟ್ಟಿದೆಯಾದರೂ, ಪರಿಶಿಷ್ಟಜಾತಿ ಕಾಲನಿಯಲ್ಲಿ ಅದೇನೂ ದೊಡ್ಡ ಸಂಗತಿಯಾಗಿ ಉಳಿದಿಲ್ಲ. “ನಮಗೀಗ ಆದ್ಯತೆ ಇರುವುದು ಕೆಲಸದ್ದು. ನಮ್ಮ ಬಳಿ ತುಂಬಾ ದುಡ್ಡೇನಿಲ್ಲ” ಎನ್ನುತ್ತಾರೆ ನಾರಾಯಣಪ್ಪ.


06-Narayanappa's-home-after-they-have-left-Bucharla-0557-RM-Staying half-hungry due to the demonetisation ‘drought’.jpg

ಬೀಗ ಹಾಕಲಾಗಿರುವ ನಾರಾಯಣಪ್ಪ ಮನೆ. ಅವರು ನಿಗದಿತ ಸಮಯಕ್ಕಿಂತ ಮುಂಚೆಯೇಕುಟುಂಬ ಸಮೇತ ಬೆಂಗಳೂರಿಗೆ ಹೊರಟುಹೋಗಿದ್ದಾರೆ

ಮುಂದೇನಾಯಿತು: ಒಂದು ತಿಂಗಳ ಕಾಲ ಅರೆಹೊಟ್ಟೆ ಉಳಿದಿದ್ದ ನಾರಾಯಣಪ್ಪ ಟುಂಬವು ತಾನು ಯೋಜಿಸಿಕೊಂಡದ್ದಕ್ಕಿಂತ ಮೂರು ವಾರಗಳ ಮೊದಲೇ, ಡಿಸೆಂಬರ್ 4ರಂದು ಬೆಂಗಳೂರಿಗೆ ವಾಪಸಾಯಿತು.  ಬೇರೆ ಹಲವು ದಲಿತ ಕುಟುಂಬಗಳೂ ತಮ್ಮ ಎಳೆಯ ಮಕ್ಕಳನ್ನು ಹಿರಿಯರ ಸುಪರ್ದಿಗೆ ಬಿಟ್ಟು, ಕೆಲಸ ಅರಸಿಕೊಂಡು ವಲಸೆ ಹೊರಟಿವೆ.  ಕಳೆದ ತಿಂಗಳಿಡೀ ಜನದುಂಬಿ, ಹಬ್ಬದ ಸಡಗರದಲ್ಲಿರಲು ಪ್ರಯತ್ನಿಸಿದ್ದ ಬುಚ್ಚಾರ್ಲದ ಪರಿಶಿಷ್ಟ ಜಾತಿ ಕಾಲನಿ ಹಬ್ಬ ಕಳೆದು ವಾರದೊಳಗೇ ಥಂಡಾ ಆಗಿ ಬಿಟ್ಟಿದೆ.

Rahul M.

राहुल एम, आंध्र प्रदेश के अनंतपुर के रहने वाले एक स्वतंत्र पत्रकार हैं और साल 2017 में पारी के फ़ेलो रह चुके हैं.

की अन्य स्टोरी Rahul M.
Translator : Rajaram Tallur

Rajaram Tallur is a freelance journalist and a translator by profession. He has over 25 years of work experience in print and web media. Healthcare, science and developmental journalism are among his areas of interest.

की अन्य स्टोरी राजाराम तल्लूर