ನಿಜವಾದ ಪ್ರಶ್ನೆ ಮೌಲ್ಯಗಳ ಕುರಿತಾಗಿದೆ. ಮತ್ತು ಈ ಮೌಲ್ಯಗಳು ನಮ್ಮ ಜೀವನದ ಒಂದು ಭಾಗ. ನಾವು ನಮ್ಮನ್ನು ಪ್ರಕೃತಿಯೊಂದಿಗೆ ಒಂದಾಗಿ ನೋಡುತ್ತೇವೆ. ಆದಿವಾಸಿಗಳು ಹೋರಾಡುವಾಗ, ಸರ್ಕಾರ ಅಥವಾ ನಿಗಮದ ವಿರುದ್ಧ ಹೋರಾಡುವುದಿಲ್ಲ. ಅವರು ತಮ್ಮದೇ ʼ ಭೂಮಿ ಸೇನಾ'ವನ್ನು ಹೊಂದಿದ್ದಾರೆ, ಮತ್ತು ಅವರು ದುರಾಸೆ ಮತ್ತು ಸ್ವಾರ್ಥದಲ್ಲಿ ಬೇರೂರಿರುವ ಮೌಲ್ಯಗಳ ವಿರುದ್ಧ ಹೋರಾಡುತ್ತಾರೆ.
ಇದು ನಾಗರಿಕತೆಯ ಬೆಳವಣಿಗೆಯೊಂದಿಗೆ ಪ್ರಾರಂಭವಾಯಿತು - ನಾವು ವ್ಯಕ್ತಿವಾದದ ಉದಯವನ್ನು ನೋಡಲು ಪ್ರಾರಂಭಿಸಿದಾಗ, ಮನುಷ್ಯನನ್ನು ಪ್ರಕೃತಿಯಿಂದ ಪ್ರತ್ಯೇಕ ಘಟಕವಾಗಿ ನೋಡಲು ಪ್ರಾರಂಭಿಸಿದೆವು. ಅಲ್ಲಿಂದಲೇ ಸಂಘರ್ಷ ಪ್ರಾರಂಭವಾಯಿತು. ಒಮ್ಮೆ ನಾವು ನದಿಯಿಂದ ಬೇರ್ಪಟ್ಟ ನಂತರ, ನಮ್ಮ ಒಳಚರಂಡಿ ತ್ಯಾಜ್ಯ, ರಾಸಾಯನಿಕ ಮತ್ತು ಕೈಗಾರಿಕಾ ತ್ಯಾಜ್ಯವನ್ನು ನೀರಿನಲ್ಲಿ ಸೇರಿಸಲು ನಾವು ಹಿಂಜರಿಯುವುದಿಲ್ಲ. ನಾವು ನದಿಯನ್ನು ಸಂಪನ್ಮೂಲವಾಗಿ ಹೊಂದಲು ಪ್ರಾರಂಭಿಸುತ್ತೇವೆ. ಒಮ್ಮೆ ನಾವು ನಮ್ಮನ್ನು ಪ್ರಕೃತಿಯಿಂದ ಪ್ರತ್ಯೇಕ ಮತ್ತು ಶ್ರೇಷ್ಠ ಎಂದು ಭಾವಿಸಿದರೆ, ಅದನ್ನು ಕೊಳ್ಳೆ ಹೊಡೆಯುವುದು ಮತ್ತು ಶೋಷಿಸುವುದು ಸುಲಭ. ಮತ್ತೊಂದೆಡೆ, ಆದಿವಾಸಿ ಸಮುದಾಯದ ಮೌಲ್ಯಗಳು ಕೇವಲ ಕೇವಲ ಕಾಗದದ ಮೇಲೆ ಬರೆಯಲಾದ ಮೌಲ್ಯಗಳಲ್ಲ. ನಮ್ಮ ಮೌಲ್ಯಗಳು ನಮ್ಮ ಜೀವನ ವಿಧಾನ.
ನಾನೊಂದು ಭೂಮಿಯ ಭ್ರೂಣ
ನಾನು ಭೂಮಿಯ ಬೇರು-ಬೀಜ-ಭ್ರೂಣ
ನಾನು ಸೂರ್ಯ, ಭಾವ, ಶಾಖದ ಪ್ರಜ್ಞೆ, ಅನಂತ
ನನ್ನ ಹೆಸರು ಭಿಲ್, ಮುಂಡಾ, ಬೋಡೋ, ಗೊಂಡ್, ಸಂತಾಲ್.
ನಾನು ಯುಗಯುಗಗಳ ಹಿಂದೆ ಜನಿಸಿದ ಮೊದಲ ಮಾನವ
ನೀವು ನನ್ನನ್ನು ಬದುಕುತ್ತೀರಿ,
ನನ್ನನ್ನು ಪೂರ್ಣವಾಗಿ ಬದುಕಿ
ನಾನು ಈ ಭೂಮಿಯ ಮೇಲಿನ ಸ್ವರ್ಗ
ನಾನು ಭೂಮಿಯ ಬೇರು-ಬೀಜ-ಭ್ರೂಣ
ನಾನು ಸೂರ್ಯ, ಭಾವ, ಶಾಖದ ಪ್ರಜ್ಞೆ, ಅನಂತ
ನನ್ನ ಹೆಸರು ಸಹ್ಯಾದ್ರಿ, ಸತ್ಪುರ, ವಿಂಧ್ಯ, ಅರಾವಳಿ
ನಾನು ಹಿಮಾಲಯದ ಶಿಖರ, ದಕ್ಷಿಣ ಸಮುದ್ರದ ಅಂಚು
ಮತ್ತು ಈಶಾನ್ಯದ ಪ್ರಕಾಶಮಾನವಾದ ಹಸಿರು ನಾನು.
ನೀವು ಎಲ್ಲಿ ಮರವನ್ನು ಕತ್ತರಿಸಿದರೂ, ನೀವು ಪರ್ವತವನ್ನು ಮಾರಾಟ ಮಾಡಿದರೂ
ನನ್ನನ್ನು ಹರಾಜು ಹಾಕುತ್ತಿರುತ್ತೀರಿ
ನೀವು ನದಿಯನ್ನು ಕೊಂದಾಗ ನಾನು ಸಾಯುತ್ತೇನೆ
ನಿಮ್ಮ ಉಸಿರಿನಲ್ಲಿಯೇ ನೀವು ನನ್ನನ್ನು ಉಸಿರಾಡುವಿರಿ.
ನಾನು ಜೀವಾಮೃತ.
ನಾನು ಭೂಮಿಯ ಬೇರು-ಬೀಜ-ಭ್ರೂಣವಾ
ನಾನು ಸೂರ್ಯ, ಭಾವ, ಶಾಖದ ಪ್ರಜ್ಞೆ, ಅನಂತ
ಅಷ್ಟಕ್ಕೂ, ನೀವು ನನ್ನ ಸಂತತಿ
ಮತ್ತು ನನ್ನ ರಕ್ತವೂ ಕೂಡ.
ಪ್ರಲೋಭನೆಗಳು, ದುರಾಸೆ ಮತ್ತು ಅಧಿಕಾರದ ಕರಾಳತೆ
ನಿಜವಾದ ಜಗತ್ತನ್ನು ನೋಡಲು ನಿಮಗೆ ಅವಕಾಶ ನೀಡುವುದಿಲ್ಲ.
ನೀವು ಭೂಮಿಯನ್ನು, ಭೂಮಿ ಎಂದು ಕರೆಯುತ್ತೀರಿ,
ನಾವು ಅವಳನ್ನು ತಾಯಿ ಎಂದು ಕರೆಯುತ್ತೇವೆ
ನೀವು ನದಿಯನ್ನು, ನದಿ ಎಂದು ಕರೆಯುತ್ತೀರಿ
ನಮಗೆ ಅವಳು ಸಹೋದರಿ
ಪರ್ವತಗಳು ನಿಮಗೆ ಕೇವಲ ಪರ್ವತಗಳು ಮಾತ್ರ
ನಾವು ಅವುಗಳನ್ನು ಸಹೋದರರೆನ್ನುತ್ತೇವೆ
ಸೂರ್ಯ ನಮ್ಮ ತಾತ.
ಮತ್ತು ಚಂದ್ರ ನಮ್ಮ ಸೋದರಮಾವ.
ಈ ಸಂಬಂಧಕ್ಕಾಗಿ
ನಾನು ಒಂದು ಗೆರೆಯನ್ನು ಎಳೆಯಬೇಕು
ನಿಮ್ಮ ಮತ್ತು ನನ್ನ ನಡುವೆ, ಎಂದು
ಅವರು ಹೇಳುತ್ತಾರೆ.
ಆದರೆ ನಾನು ಅದನ್ನು ನಿರಾಕರಿಸುತ್ತೇನೆ. ನಾನು ನಂಬುತ್ತೇನೆ
ನಿಮ್ಮಷ್ಟಕ್ಕೆ ನೀವೇ ಕರಗಿಹೋಗುವಿರಿ.
ನಾನು ಹಿಮವನ್ನು ಹೀರಿಕೊಳ್ಳುವ ಶಾಖ
ನಾನು ಭೂಮಿಯ ಬೇರು-ಬೀಜ-ಭ್ರೂಣ
ನಾನು ಸೂರ್ಯ, ನಾನು ಭಾವ,
ಮತ್ತು ನಾನು ಅನಂತ ಶಾಖದ ಪ್ರಜ್ಞೆ
ಅನುವಾದ: ಶಂಕರ. ಎನ್. ಕೆಂಚನೂರು