"ನನ್ನ ಜೀವನದಲ್ಲಿ ಈ ನದಿಯನ್ನು ಇಷ್ಟು ವ್ಯಗ್ರವಾಗಿ ಎಂದೂ ನೋಡಿಲ್ಲ," ಎಂದು 55 ವರ್ಷದ ಸಕುಬಾಯಿ ವಾಘ್ ಹೇಳುತ್ತಾರೆ. ಆ ದಿನ, ಆಗಸ್ಟ್ 4ರಂದು, ಅವರ 20 ವರ್ಷದ ಮಗ ಮನೋಜ್ ಮತ್ತು ಅವರು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯಲ್ಲಿದ್ದರು. "ಹೊರಗೆ ಸಾಕಷ್ಟು ಮಳೆ ಸುರಿಯುತ್ತಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ಇದ್ದಕ್ಕಿದ್ದಂತೆ ಬಲವಾದ ನೀರಿನ ಅಲೆಯು ನಮ್ಮ ಗುಡಿಸಲನ್ನು ಪ್ರವೇಶಿಸಿತು. ಸ್ವಲ್ಪ ಸಮಯದವರೆಗೆ ನಾವು ಪರಸ್ಪರರ ಕೈಗಳನ್ನು ಹಿಡಿದುಕೊಂಡು ಕುತ್ತಿಗೆಯ ಆಳದ ನೀರಿನಲ್ಲಿದ್ದೆವು. ಕಾಸಿಗೆ ಕಾಸು ಕೂಡಿಸಿ ಉಳಿಸಿ ಇಟ್ಟಿದ್ದ ಎಲ್ಲವನ್ನೂ ನೀರು ನಮ್ಮಿಂದ ಕಿತ್ತುಕೊಂಡಿತು."
ಸುಮಾರು 20 ನಿಮಿಷಗಳ ಆತಂಕದ ನಂತರ, ಸಕುಬಾಯಿ ಮತ್ತು ಮನೋಜ್ ಹತ್ತಿರದ ಎತ್ತರದ ಪ್ರದೇಶವನ್ನು ತಲುಪುವಲ್ಲಿ ಯಶಸ್ವಿಯಾದರು, ಅಲ್ಲಿಂದ ಅವರು ಕೆಳಗೆ ವಿನಾಶಕ್ಕೆ ಸಾಕ್ಷಿಯಾದರು. ಆ ದಿನ ಬೆಳಗ್ಗೆ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಾಡಾ ತಾಲ್ಲೂಕಿನ ಗೇಟ್ಸ್ ಖುರ್ದ್ ಗ್ರಾಮದಲ್ಲಿ ವೈತರಣಾ ನದಿಯ ನೀರು ಅವರ ಗುಡಿಸಲು ಸೇರಿದಂತೆ ಇತರ 24 ಗುಡಿಸಲುಗಳನ್ನು ನಾಶಪಡಿಸಿತು. ಹಲವಾರು ಗಂಟೆಗಳ ನಂತರ, ಸಂಜೆ ನೀರು ಇಳಿಯಿತು.
"ಇದು ನನ್ನ ಸಂಸಾರ್ [ಮನೆಯ ವಸ್ತುಗಳು]," ಸಕುಬಾಯಿ ನದಿಯ ಪಕ್ಕದಲ್ಲಿರುವ ತನ್ನ ಶಿಥಿಲವಾದ ಗುಡಿಸಲು ತೋರಿಸುತ್ತಾರೆ. ಒಡೆದ ಹೆಂಚುಗಳು, ಬಿದಿರಿನ ಮೇಲ್ಛಾವಣಿ ಮತ್ತು ಗೋಡೆಗಳ ಅವಶೇಷಗಳು ಮತ್ತು ಹರಿದ ಟಾರ್ಪಾಲಿನ್ ಮೇಲೆ ಕೆಸರು ಹರಡಿಕೊಂಡಿದೆ. ಕೆಸರಿನಲ್ಲಿ ದಿನಗಟ್ಟಲೆ ಬಿದ್ದಿರುವ ಕೊಳೆತ ಅಕ್ಕಿ, ಈರುಳ್ಳಿ, ಆಲೂಗಡ್ಡೆಗಳ ಕಟುವಾದ ವಾಸನೆ ಮೋಡದಂತೆ ಅಲ್ಲೇ ಅಲೆಯುತ್ತಿದೆ. "ನನಗೆ ವಾಸನೆಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ, ನನಗೆ ಅನಾರೋಗ್ಯವಿದೆ," ಎಂದು ಸಕುಬಾಯಿ ಹೇಳುತ್ತಾರೆ.
ಪ್ರವಾಹದ ಹತ್ತು ದಿನಗಳ ನಂತರ ಆಗಸ್ಟ್ 13ರಂದು, ಆಕೆಯ ಪತಿ, 58 ವರ್ಷದ ಪರಶುರಾಮ್, ಅಲ್ಯೂಮಿನಿಯಂ ಪಾತ್ರೆಯಲ್ಲಿದ್ದ ಸ್ವಲ್ಪ ಅಕ್ಕಿಯನ್ನು ನನಗೆ ತೋರಿಸಿದರು. “ಇದು ನನ್ನ ಕುಟುಂಬದ ಒಂದು ತಿಂಗಳ ಪಡಿತರವಾಗಿತ್ತು. ನಮ್ಮ ವೋಟಿಂಗ್ ಕಾರ್ಡ್‌ಗಳು, ಆಧಾರ್ ಕಾರ್ಡ್‌ಗಳು, ಪಡಿತರ ಚೀಟಿಗಳು, ಪಾತ್ರೆಗಳು, ಬಟ್ಟೆಗಳು - ಎಲ್ಲವೂ ಕಳೆದುಹೋಗಿವೆ,” ಎಂದು ಅವರು ಹೇಳುತ್ತಾರೆ. "ಈ ಮೂರು ಗೋಧಾಡಿಗಳು ಮಾತ್ರ ಉಳಿದವು."ಆ ಕೈಯಿಂದ ಹೊಲಿದ ವಲ್ಲಿಗಳು ಈಗ ದಯನೀಯ ಸ್ಥಿತಿಯಲ್ಲಿ ಹಗ್ಗದ ಮೇಲೆ ಒಣಗುತ್ತಿವೆ.
"ನಾವು ನದಿಯ ಬಳಿ ವಾಸಿಸುತ್ತಿದ್ದೇವೆ, ಮತ್ತು ಪ್ರತಿ ವರ್ಷ ಮಳೆಗಾಲದಲ್ಲಿ ನೀರಿನ ಮಟ್ಟವು ಏರುತ್ತದೆ," ಎಂದು ಪರಶುರಾಮ್ ಹೇಳುತ್ತಾರೆ. "ಅದು ನಮ್ಮ ಬಾಗಿಲನ್ನು ತಲುಪುತ್ತದೆ, ಆದರೆ ಎಂದಿಗೂ ಒಳಗೆ ಬರುವುದಿಲ್ಲ ಮತ್ತು ಕೆಲವೇ ಗಂಟೆಗಳಲ್ಲಿ ಹಿಂದೆ ಸರಿಯಲು ಪ್ರಾರಂಭಿಸುತ್ತದೆ. 2005ರಲ್ಲಿ ಒಮ್ಮೆ ಮಾತ್ರ ನಮ್ಮ ಗುಡಿಸಲುಗಳಿಗೆ ನೀರು ನುಗ್ಗಿತ್ತು, ಆದರೆ ಅದು ಕೇವಲ ಮೊಣಕಾಲು ಆಳವಾಗಿತ್ತು ಮತ್ತು ಅದು ನಮ್ಮ ಗುಡಿಸಲುಗಳನ್ನು ನಾಶಪಡಿಸಲಿಲ್ಲ. ಈ ವರ್ಷ ಪರಿಸ್ಥಿತಿ ತುಂಬಾ ಕೆಟ್ಟದಾಗಿತ್ತು."
ಪರಶುರಾಮ್ ಮತ್ತು ಸಕುಬಾಯಿ ಕತ್ಕರಿ ಆದಿವಾಸಿಗಳು - ಮಹಾರಾಷ್ಟ್ರದಲ್ಲಿ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು ಎಂದು ಪಟ್ಟಿ ಮಾಡಲಾದ ಸಮುದಾಯಗಳು - ಮತ್ತು 150 ರೂ.ಗಳ ದೈನಂದಿನ ವೇತನಕ್ಕೆ ಕೃಷಿ ಕಾರ್ಮಿಕರಾಗಿ ದುಡಿಯುತ್ತಾರೆ. ಅವರ ಗುಡಿಸಲು ಕುಸಿದಾಗ, ಅವರು ಅದೇ ಹಳ್ಳಿಯ ನದಿಯ ಇನ್ನೊಂದು ಬದಿಯಲ್ಲಿರುವ ಸಕುಬಾಯಿಯ ಸಹೋದರನ ಮನೆಗೆ ತೆರಳಿದರು. ದ್ವಾರ ಖುರ್ದ್ ಅನ್ನು ವೈತರಣಾ ನದಿ ಎರಡು ಭಾಗಗಳಾಗಿ ವಿಂಗಡಿಸುತ್ತದೆ, ಮತ್ತು ಪೂರ್ವ ದಂಡೆಯ ಹೆಚ್ಚಿನ ಕಾಂಕ್ರೀಟ್ ಮನೆಗಳು ಪ್ರವಾಹದಿಂದ ಬಾಧಿತವಾಗಿಲ್ಲ. ಇದು 881 ಜನಸಂಖ್ಯೆಯನ್ನು ಹೊಂದಿರುವ ಗ್ರಾಮವಾಗಿದೆ (2011 ರ ಜನಗಣತಿಯ ಪ್ರಕಾರ), ಇದರಲ್ಲಿ 227 ಜನರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ.
"ನಮಗೆ ಸ್ವಂತ ಭೂಮಿಯಿಲ್ಲ. ನಾವು ಗಳಿಸುವುದೆಲ್ಲವೂ ಕೃಷಿ ಕೆಲಸದಿಂದ ಬರುತ್ತದೆ," ಎಂದು 35 ವರ್ಷದ ಕವಿತಾ ಭೋಯಿರ್ ಹೇಳುತ್ತಾರೆ, ಅವರ ಗುಡಿಸಲು ಹತ್ತಿರದಲ್ಲಿದೆ. "ಜೂನ್-ಜುಲೈನಲ್ಲಿ ನಾವು ಸುಮಾರು 20,000 ರೂ.ಗಳನ್ನು ಗಳಿಸಿದ್ದೇವೆ. [ಆಕೆ ಮತ್ತು ಆಕೆಯ ಪತಿ ಕೇಶವ್ ತಲಾ 200 ರೂ., 50 ದಿನಗಳ ಕಾಲ]. ಬಿತ್ತನೆಯ ಋತುವಿನ ನಂತರ ನಾವು ಹೆಚ್ಚು ಸಂಪಾದಿಸುವುದಿಲ್ಲ. ನಾನು 10,000 ರೂ.ಗಳನ್ನು ದಾಲ್ ಪಾತ್ರೆಯಲ್ಲಿ ಸುರಕ್ಷಿತವಾಗಿ ಇಟ್ಟಿದ್ದೆ. ಕಷ್ಟದ ಸಮಯದಲ್ಲಿ ಬಳಸುವುದು ನಮ್ಮ ಉಳಿತಾಯವಾಗಿತ್ತು. ಈಗ ಏನೂ ಇಲ್ಲ..."
ಕವಿತಾ, ಕೇಶವ್ ಅವರೊಂದಿಗೆ, ತನ್ನ ಸಹೋದರನ ಹಳ್ಳಿಗೆ (ನದಿಯ ಇನ್ನೊಂದು ಬದಿಯಲ್ಲಿ) ತನ್ನ ಒಂದು ಎಕರೆ ಜಮೀನಿನಲ್ಲಿ ಸಹಾಯ ಮಾಡಲು ಹೋಗಿದ್ದರು. "ಇಲ್ಲಿ ಪ್ರವಾಹವಿದೆ ಎಂದು ನಮಗೆ ದೂರವಾಣಿಯಲ್ಲಿ ತಿಳಿಸಲಾಯಿತು," ಎಂದು ಅವರು ಹೇಳುತ್ತಾರೆ. "ಮರುದಿನ ನಾವು ಬಂದಾಗ, ಹುಲ್ಲು ಮತ್ತು ಮಣ್ಣಿನಿಂದ ಮಾಡಿದ ಗೋಡೆ ಮುರಿದುಹೋಗಿತ್ತು. ಪಾದದವರೆಗೂ ಮಣ್ಣು ಇತ್ತು. ಭೋಯಿರ್ ಕುಟುಂಬವು ಮುಂದಿನ ಎರಡು ದಿನಗಳನ್ನು ಬಕೆಟುಗಳಿಂದ ಮಣ್ಣನ್ನು ಖಾಲಿ ಮಾಡುವುದು ಮತ್ತು ಅವರ ಉಳಿಕೆ ವಸ್ತುಗಳನ್ನು ಮರುಹೊಂದಿಸುವುದರಲ್ಲಿ ಕಳೆದರು. ಬಟ್ಟೆ ತುಂಬಿದ ಚೀಲ, ಪ್ಲಾಸ್ಟಿಕ್ ಡಬ್ಬಿಗಳು, ಒಂದು ಸ್ಟೀಲ್ ಬಾಕ್ಸ್, 2-3 ಪ್ಲೇಟ್ ಸ್ಟೀಲ್, ಹಾಸಿಗೆಯ ಮೇಲೆ ಹಾಕಲಾದ ಕೆಲವು ವಲ್ಲಿಗಳು - ಎಲ್ಲವೂ ಮಣ್ಣಿನಿಂದ ಆವೃತವಾಗಿದ್ದವು. "ನಾವು ಉಳಿದದ್ದನ್ನು ತೊಳೆದು ಅದನ್ನು ಬಳಸಲು ಪ್ರಾರಂಭಿಸಿದೆವು. ನನ್ನ ಮಗನ ಪುಸ್ತಕಗಳು ಮತ್ತು ನೋಟ್ ಪುಸ್ತಕಗಳು ಒದ್ದೆಯಾಗಿದ್ದವು, ನಾನು ಅವುಗಳನ್ನು ಚುಲ್ (ಮಣ್ಣಿನ ಒಲೆ) ಮೇಲೆ ಒಣಗಿಸಿದೆ" ಎಂದು ಕವಿತಾ ತನ್ನ ಖಾಲಿ ಅಡುಗೆಮನೆಯ ಸ್ಟ್ಯಾಂಡ್ ಅನ್ನು ನೋಡುತ್ತಾ, ಅದರಲ್ಲಿ ಇರಿಸಲಾಗಿದ್ದ ಸಾಕಷ್ಟು ಪಾತ್ರೆಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋದವು ಎಂದು ಹೇಳುತ್ತಾರೆ.
"ಪಂಚಾಯತ್ ಜನರು ಮತ್ತು ಕೆಲವು ಸಾಮಾಜಿಕ ಕಾರ್ಯಕರ್ತರು ನಮಗೆ ಒಂದಷ್ಟು ಪಡಿತರವನ್ನು ನೀಡಿದರು. ಆದರೆ ತಾಲ್ಲೂಕು ಕಚೇರಿಯಿಂದ [ವಡಾ ತಹಶೀಲ್ದಾರರ ಕಚೇರಿ] ಪಂಚನಾಮಕ್ಕಾಗಿ [ತನಿಖಾ ದಾಖಲೆಗಳು] ಯಾರೂ ಇನ್ನೂ ಬಂದಿಲ್ಲ ಮತ್ತು ನಮಗೆ ಯಾವುದೇ ಹಣವನ್ನು ಸಹ ಪಾವತಿಸಲಾಗಿಲ್ಲ," ಎಂದು ಕೇಶವ್ ಹೇಳುತ್ತಾರೆ. "ನಮ್ಮ ಜನರು ತಲೆಮಾರುಗಳಿಂದ ಇಲ್ಲಿ ವಾಸಿಸುತ್ತಿದ್ದಾರೆ," ಎಂದು ಕವಿತಾ ಹೇಳುತ್ತಾರೆ. "ಸರ್ಕಾರವು ನಮಗೆ ವಾಸಿಸಲು ಸುರಕ್ಷಿತ ಸ್ಥಳವನ್ನು ನೀಡಬೇಕು. ನದಿ ಮತ್ತೆ ಪ್ರವಾಹಕ್ಕೆ ಸಿಲುಕಿದರೆ ನಮ್ಮ ಬದುಕು ಏನಾಗಬಹುದು,?"
ಪ್ರವಾಹದ ಒಂದು ದಿನದ ನಂತರ, ಆಗಸ್ಟ್ 5ರಂದು, ಗೇಟ್ ಖುರ್ದ್ ಗ್ರಾಮ ಪಂಚಾಯತ್ ಗೇಟ್ಸ್ ಖುರ್ದ್‌ನ 25 ಪ್ರವಾಹ ಪೀಡಿತ ಕುಟುಂಬಗಳಿಗೆ ಐದು ಕೆಜಿ ಅಕ್ಕಿ, ಐದು ಕಿಲೋ ಗೋಧಿ ಹಿಟ್ಟು, ಎರಡು ಕಿಲೋ ಬೇಳೆಕಾಳುಗಳು, ಎರಡು ಕಿಲೋ ಸಕ್ಕರೆ, 250 ಗ್ರಾಂ ಚಹಾ ಪುಡಿ, ತಲಾ ಅರ್ಧ ಕಿಲೋ ಎಣ್ಣೆಯ ಎರಡು ಪ್ಯಾಕೆಟ್ಗಳು, ಒಂದು ಪ್ಯಾಕೆಟ್ ಉಪ್ಪು ಮತ್ತು ಸ್ವಲ್ಪ ಕೆಂಪು ಮೆಣಸಿನ ಪುಡಿ ಮತ್ತು ಅರಿಶಿನ ಪುಡಿಯನ್ನು ವಿತರಿಸಿತು. "ಈಗ ನೀಡಲಾದ ಎಲ್ಲಾ ಪಡಿತರಗಳು ಖಾಲಿಯಾಗಲಿವೆ," ಎಂದು ಕವಿತಾ ಹೇಳುತ್ತಾರೆ.
ಆಗಸ್ಟ್ 4-5ರಂದು ಸುರಿದ ಭಾರಿ ಮಳೆಗೆ ವಡಾ ತಾಲ್ಲೂಕಿನ 57 ಹಳ್ಳಿಗಳು ಬಾಧಿತವಾಗಿವೆ ಎಂದು ತಹಶೀಲ್ದಾರ್ ದಿನೇಶ್ ಕುರ್ಹಾಡೆ ನನಗೆ ತಿಳಿಸಿದರು. ಅತಿ ಹೆಚ್ಚು ಹಾನಿಗೊಳಗಾದ ಹಳ್ಳಿಗಳಲ್ಲಿ, ಅವರು ಹೇಳುತ್ತಾರೆ, ಖುರ್ದ್, ಬೋರಾಂಡೆ, ಕರಂಜೆ, ನನೆ ಮತ್ತು ಗೋರ್ಹೆ - ಇವೆಲ್ಲವೂ ವೈತರಣಾ ನದಿಯ ದಡದಲ್ಲಿವೆ. ಆಗಸ್ಟ್ 1ರಿಂದ 7ರವರೆಗೆ, ಪಾಲ್ಘರ್‌ನಲ್ಲಿ 729.5 ಮಿ.ಮೀ ಮಳೆಯಾಗಿದೆ - ವಾರದಲ್ಲಿ ಇಲ್ಲಿ ವಾಡಿಕೆ ಮಳೆ 204 ಮಿ.ಮೀ.
ಆಗಸ್ಟ್ 4ರಂದು, ಗೇಟ್ ಖುರ್ದ್ನಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ 126 ಕುಟುಂಬಗಳು ಮತ್ತು 499 ಜನರನ್ನು ಹೊಂದಿರುವ ಬೋರಂಡೆ ಗ್ರಾಮವು (ಜನಗಣತಿ 2011) ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಛಾವಣಿಗಳು ಮತ್ತು ವಿದ್ಯುತ್ ಕಂಬಗಳು ಮಾತ್ರ ಗೋಚರಿಸುತ್ತಿದ್ದವು. ಇಲ್ಲಿನ ಪ್ರತಿಯೊಂದು ಕಾಂಕ್ರೀಟ್ ಮನೆಯ ಗೋಡೆಗಳವರೆಗೆ ಈಗ ನೀರು ಬಂದಿದೆ, ಆದರೆ ಹುಲ್ಲಿನ ಛಾವಣಿಗಳನ್ನು ಹೊಂದಿರುವ ಕಚ್ಚಾ ಮನೆಗಳು ಕುಸಿದಿವೆ.
"ಆಗ ಬೆಳಿಗ್ಗೆ 6 ಗಂಟೆಯಾಗಿತ್ತು. ನನ್ನ ಬೆಡ್ ಶೀಟ್ ಮೇಲೆ ಸ್ವಲ್ಪ ನೀರು ಬಂದಂತೆ ಭಾಸವಾದಾಗ ನಾವು ನಿದ್ರಿಸುತ್ತಿದ್ದೆವು. ಎದ್ದು ನೀರು ಮನೆಗೆ ಪ್ರವೇಶಿಸಿರುವುದನ್ನು ನೋಡಿದೆ. ನಾನು ಬೇಗನೆ ನನ್ನ ಮಕ್ಕಳು ಮತ್ತು ಹೆಂಡತಿಯನ್ನು ಎಬ್ಬಿಸಿದೆ ಮತ್ತು ನನ್ನ ಜೀವವನ್ನು ಉಳಿಸಿಕೊಳ್ಳಲು ಓಡಿದೆ. ನಂತರ ಒಂದು ದೊಡ್ಡ ಅಲೆಯು ಮನೆಯನ್ನು ಪ್ರವೇಶಿಸಿತು. ಅದು ಎಲ್ಲವನ್ನೂ ತೊಳೆದುಕೊಂಡು ಹೋಯಿತು, ಏನನ್ನೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ," ಎಂದು 45 ವರ್ಷದ ಅನಿಲ್ ರಾಜ್ಕಾವರ್ ಹೇಳುತ್ತಾರೆ. "ಎಲ್ಲೆಲ್ಲೂ ನೀರಿತ್ತು, ಎಲ್ಲರೂ ತಮ್ಮ ಮನೆಗಳ ಹೊರಗೆ ಸೊಂಟದ ಆಳದ ನೀರಿನಲ್ಲಿ ಕುಳಿತಿದ್ದರು. ಎಲ್ಲರೂ ಕಿರುಚುತ್ತಿದ್ದ ಕೂಗು ಕೇಳಿಸಿತು..."
ಅನಿಲ್, ಅವರ 32 ವರ್ಷದ ಪತ್ನಿ ಪಾರ್ವತಿ ಮತ್ತು ಅವರ ಮಕ್ಕಳು ಇತರ ಅನೇಕರೊಂದಿಗೆ ನೀರಿನಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ನಡೆದು, ನಂತರ ಗ್ರಾಮದ ಹೊರಗಿನ ತೆರೆದ ಮೈದಾನವನ್ನು ತಲುಪಿದರು. ನೀರಿನ ಮಟ್ಟ ಕುಸಿಯುವವರೆಗೆ ಅನೇಕ ಜನರು ಎರಡು ದಿನಗಳ ಕಾಲ ತಗಡಿನ ಗೋದಾಮಿನಲ್ಲಿ ಉಳಿದರು. ಅನಿಲ್ ಮತ್ತು ಪಾರ್ವತಿ ವರ್ಷದ ಎಂಟು ತಿಂಗಳುಗಳ ಕಾಲ ದಿನಕ್ಕೆ 150 ರೂ.ಗಳಂತೆ ಕೃಷಿ ಕಾರ್ಮಿಕರಾಗಿ ದುಡಿಯುತ್ತಾರೆ. ಗ್ರಾಮದ 102 ಕುಟುಂಬಗಳು ಸ್ವಲ್ಪ ಸಹಾಯವನ್ನು ಪಡೆದಿವೆ ಎಂದು ತಹಶೀಲ್ದಾರ್ ದಿನೇಶ್ ಕುರ್ಹಾಡೆ ಹೇಳಿದರೆ, ಅನಿಲ್ ಅವರ ಕುಟುಂಬವು ಇನ್ನೂ ಆ ಪಟ್ಟಿಯಲ್ಲಿ ಸೇರಿಲ್ಲ.
"ಅದೃಷ್ಟವಶಾತ್, ಬೋರಾಂಡೆಯಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ. ನಾವು ಆ ಗೋದಾಮಿನಲ್ಲಿ ಎರಡು ದಿನಗಳನ್ನು ಕಳೆದೆವು. ಕೆಲವು ಸಾಮಾಜಿಕ ಕಾರ್ಯಕರ್ತರು ನಮಗೆ ಆಹಾರ ಮತ್ತು ಕುಡಿಯಲು ನೀರನ್ನು ನೀಡಿದರು. ನೀರು ಕಡಿಮೆಯಾಗಲು ಪ್ರಾರಂಭಿಸಿದಾಗ, ನಾವು ನಮ್ಮ ಮನೆಗಳಿಗೆ ಹಿಂದಿರುಗಿದೆವು. ಎಲ್ಲೆಲ್ಲೂ ಕೆಸರು ತುಂಬಿತ್ತು. ಗೋಡೆ ಬಿದ್ದಿದೆ," ಎಂದು 32 ವರ್ಷದ ಮಯೂರಿ ಹಿಲಿಮ್ ಹೇಳುತ್ತಾರೆ. ಅವರು ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತನಕ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ, ದಿನಕ್ಕೆ 150 ರೂ.ಗಳನ್ನು ಗಳಿಸುತ್ತಾರೆ, ಮತ್ತು ನಂತರ ತಮ್ಮ ಕುಟುಂಬದೊಂದಿಗೆ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ದಹನು ತಾಲ್ಲೂಕಿಗೆ ಇಟ್ಟಿಗೆ ಗೂಡುಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ಹೋಗುತ್ತಾರೆ.
'ಆಗಸ್ಟ್ 3 ಮತ್ತು 4ರಂದು ವಡಾ ತಾಲೂಕಿನಲ್ಲಿ ಎರಡು ದಿನಗಳಲ್ಲಿ ಒಟ್ಟು 400 ಮಿ.ಮೀ ಮಳೆಯಾಗಿದೆ. ಇದರ ಪರಿಣಾಮವಾಗಿ, ವೈತರಣಾ ನದಿಯು ಪ್ರವಾಹಕ್ಕೆ ಒಳಗಾಯಿತು. ಆಗಸ್ಟ್ 4ರಂದು, ಹೆಚ್ಚಿನ ನೆರೆ ಬಂದಿತು, ಮತ್ತು ಸಮುದ್ರವು ವೈತರಣಾ ನದಿಯಿಂದ ಹೆಚ್ಚುವರಿ ನೀರನ್ನು ತೆಗೆದುಕೊಳ್ಳದ ಕಾರಣ, ಅದು ನದಿಯ ಹತ್ತಿರದ ಗ್ರಾಮಗಳನ್ನು ಪ್ರವೇಶಿಸಿತು," ಎಂದು ತಹಶೀಲ್ದಾರ್ ದಿನೇಶ್ ಕುರ್ಹಾಡೆ ಹೇಳುತ್ತಾರೆ. 'ಆ ದಿನಗಳಲ್ಲಿ ತಾಲ್ಲೂಕಿನಲ್ಲಿ ಯಾವುದೇ ಮಾನವ ಅಥವಾ ಪ್ರಾಣಿ ಜೀವಹಾನಿ ಸಂಭವಿಸಿಲ್ಲ. ಎಲ್ಲಾ ಗ್ರಾಮಗಳಿಗೆ ಪರಿಹಾರ ಒದಗಿಸುವ ನಮ್ಮ ಪ್ರಕ್ರಿಯೆ ನಡೆಯುತ್ತಿದೆ."
ವೈತರಣಾ ನದಿಯ ನೀರು ಈಗ ಶಾಂತಿಯುತವಾಗಿ ಹರಿಯುತ್ತಿದೆ. ಆದರೆ ಸಕುಬಾಯಿಯ ಆತಂಕ ಇನ್ನೂ ಕಡಿಮೆಯಾಗಿಲ್ಲ, ಮತ್ತು ಅವರು ಕೇಳುತ್ತಾರೆ: "ನದಿಯು ಮತ್ತೆ ಕೋಪಗೊಂಡರೆ ಏನು ಮಾಡುವುದು?"
ಅನುವಾದ: ಶಂಕರ. ಎನ್. ಕೆಂಚನೂರು