“ಬಾಪು ತೂ ಆಜಾ [ತಾತಾ ಮನೆಗೆ ಬನ್ನಿ] “ ಎಂದು ತನ್ನಾ ಸಿಂಗ್ ಅವರ ಮೊಮ್ಮಗ ಫೋನ್ ಮಾಡಿದಾಗಲೆಲ್ಲ ಕರೆಯುತ್ತಿರುತ್ತಾನೆ. “ಆದ್ರೆ ನಾನು ಹೇಗೆ ಹೋಗೋದು? ಅಷ್ಟಕ್ಕೂ ಇದನ್ನೆಲ್ಲ ಮಾಡುತ್ತಿರುವುದೇ ಅವನ ಭವಿಷ್ಯ ಸಲುವಾಗಿ.” ಎಂದು ಟೆಂಟಿನ ಬಳಿ ಸ್ಟೂಲ್ ಒಂದರ ಮೇಲೆ ಕುಳಿತಿದ್ದ ಸಿಂಗ್ ಹೇಳುತ್ತಾರೆ.
“ಒಮ್ಮೊಮ್ಮೆ ಅವನ [ನನ್ನ ಮಗನ 15 ವರ್ಷದ ಮಗ] ಮಾತು ಕೇಳಿ ನನಗೆ ಅಳುವೇ ಬಂದುಬಿಡುತ್ತದೆ. ಯಾರು ತಾನೆ ಹೀಗೆ ಮೊಮ್ಮಗನನ್ನು ಬಿಟ್ಟಿರುತ್ತಾರೆ? ಯಾರು ಹೀಗೆ ಮಗ, ಮಗಳನ್ನು ಬಿಟ್ಟು ದೂರವಿರುತ್ತಾರೆ?” ಎಂದು ಕಣ್ತುಂಬಿಕೊಂಡು ಕೇಳುತ್ತಾರೆ.
ಆದರೆ ತನ್ನಾ ಸಿಂಗ್ ಯಾವುದೇ ಪರಿಸ್ಥಿತಿಯಲ್ಲೂ ಊರಿಗೆ ಮರಳದಿರಲು ತೀರ್ಮಾನಿಸಿದ್ದಾರೆ. ಅವರು 2020ರ ನವೆಂಬರ್ 26ರಿಂದ ಪ್ರತಿಭಟನಾ ಸ್ಥಳದಲ್ಲಿದ್ದು ಅವರು ಒಂದು ದಿನವೂ ಅಲ್ಲಿಂದ ಕದಲಿಲ್ಲ. ನವೆಂಬರ್ 19 2021ರಂದು ಮೂರು ವಿವಾದಸ್ಪದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ್ದರೂ, ಅದಕ್ಕೆ ಅಧಿಕೃತ ಮುದ್ರೆ ಬೀಳುವ ತನಕವೂ ತಾನು ಟಿಕ್ರಿಯಲ್ಲೇ ಇರುವುದಾಗಿ ಹೇಳುತ್ತಾರೆ. ಎಪ್ಪತ್ತು ವರ್ಷದ ವಿಧುರರಾಗಿರುವ ಅವರು “ನಾವು ಈ ಮೂರು ಕಾಯಿದೆಗಳ ವಾಪಸಾತಿ ಘೋಷಿಸಿ ರಾಷ್ಟ್ರಪತಿಯವರ ಅಧಿಕೃತ ಮುದ್ರೆ ಬೀಳುವುದನ್ನು ಕಾಯುತ್ತಿದ್ದೇವೆ. ಈ ದಿನವನ್ನು ನೋಡಲೆಂದೇ ನಾವು ವರ್ಷದ ಕೆಳಗೆ ಮನೆ ಬಿಟ್ಟು ಬಂದು ಇಲ್ಲಿ ಕುಳಿತಿದ್ದು” ಎನ್ನುತ್ತಾರೆ.
ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಒಂದು ವರ್ಷದ ಹಿಂದೆ ರಾಜಧಾನಿಯ ಗಡಿಗೆ ಬಂದ ಲಕ್ಷಾಂತರ ರೈತರಲ್ಲಿ ಅವರೂ ಒಬ್ಬರು. ಮತ್ತು ಟಿಕ್ರಿ (ಪಶ್ಚಿಮ ದೆಹಲಿ), ಸಿಂಘು (ರಾಜಧಾನಿಯ ವಾಯುವ್ಯ) ಮತ್ತು ಗಾಜಿಪುರ ( ಪೂರ್ವ) ದಾಟಿ ಮುಂದೆ ಹೋಗಲು ಅನುಮತಿಸದಿದ್ದಾಗ ಅಲ್ಲೇ ನೆಲೆನಿಂತಿದ್ದರು.
ಸಿಂಗ್ ಅವರು ಪಂಜಾಬ್ನ ಮುಕ್ತಸರ್ ಜಿಲ್ಲೆಯ ಭಂಗ್ಚಾರಿ ಗ್ರಾಮದಿಂದ ತಮ್ಮ ಟ್ರ್ಯಾಕ್ಟರ್ನಲ್ಲಿ ಇತರ ಕೆಲವು ರೈತರೊಂದಿಗೆ ಇಲ್ಲಿಗೆ ಬಂದರು, ಆ ಟ್ರ್ಯಾಕ್ಟರ್ ಪ್ರತಿಭಟನಾ ಸ್ಥಳದ ಬಳಿ ಎಲ್ಲೋ ನಿಂತಿದೆ. ಅವರ ಗ್ರಾಮದಲ್ಲಿ, ಅವರ ಕುಟುಂಬವು ತಮ್ಮ ಎಂಟು ಎಕರೆ ಭೂಮಿಯಲ್ಲಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಾರೆ. "ನನ್ನ ಮಗನ ಜೊತೆ ನಮ್ಮ ಖೇತ್ [ಕೃಷಿಭೂಮಿ] ಜವಾಬ್ದಾರಿಯನ್ನು ಬಿಟ್ಟು ನಾನು ಇಲ್ಲಿಗೆ ಬಂದಿದ್ದೇನೆ" ಎಂದು ಅವರು ಹೇಳುತ್ತಾರೆ.
ಇದು ಅವರ ಪಾಲಿಗೆ ಬಹಳ ಕಷ್ಟದ ವರ್ಷವಾಗಿತ್ತು, ಜೊತೆಗೆ ನಷ್ಟದ ವರ್ಷವೂ ಹೌದು. ಈ ಒಂದು ವರ್ಷದಲ್ಲಿ ಅವರು ತನ್ನ ಇಬ್ಬರು ಹತ್ತಿರದ ಸಂಬಂಧಿಗಳನ್ನು ಕಳೆದುಕೊಂಡಿದ್ದಾರೆ. ಅವರಲ್ಲಿ ಒಬ್ಬರು ಚಿಕ್ಕಪ್ಪನ ಮಗ ಮತ್ತೊಬ್ಬರು ಅವರ ಅತ್ತಿಗೆಯ ಮೊಮ್ಮಗ. “ಅವನು ಆಗಷ್ಟೇ ತನ್ನ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದ. ತುಂಬಾ ಚಿಕ್ಕವನು ... ಆದರೆ ನಾನು ಹೋಗಲಿಲ್ಲ,” ಎಂದು ಅವರು ಹೇಳುತ್ತಾರೆ. “ಕಳೆದ ಒಂದು ವರ್ಷದಲ್ಲಿ ಅನೇಕ ಸಂಗತಿಗಳು ನಡೆದಿವೆ, ಆದರೆ ನಾನು ಮನೆಗೆ ಹಿಂತಿರುಗಲಿಲ್ಲ. ನಾನು ಮೋರ್ಚಾವನ್ನು ತೊರೆಯಲು ಬಯಸದ ಕಾರಣ ನಾನು ಹೋಗಲಿಲ್ಲ."
ಅವರು ತಮ್ಮ ಬದುಕಿನ ಕೆಲವು ಸಂತಸದ ಕ್ಷಣಗಳನ್ನೂ ಹೋರಾಟದ ಕಣದಲ್ಲಿರುವ ಮೂಲಕ ಕಳೆದುಕೊಂಡಿದ್ದಾರೆ. “ನನ್ನ ಮಗಳು 15 ವರ್ಷಗಳ ನಂತರ ಮಗುವಿಗೆ ಜನ್ಮ ನೀಡಿದಳು, ಆದರೆ ನನಗೆ ಮಗುವನ್ನು ನೋಡುವುದಕ್ಕೆಂದು ಹೋಗಲು ಸಾಧ್ಯವಾಗಲಿಲ್ಲ. ನಾನು ನನ್ನ ಮೊಮ್ಮಗನನ್ನು ನೋಡಲು ಹೋಗಲಿಲ್ಲ... ನಾನು ಊರಿಗೆ ಮರಳಿದ ನಂತರ ಮೊದಲು ಮಾಡಲಿರುವ ಕೆಲಸವೆಂದರೆ ಮೊಮ್ಮಗನನ್ನು ನೋಡಲು ಹೋಗುವುದು ನಾನು ಅವನನ್ನು [ಈಗ 10 ತಿಂಗಳು] ಫೋನ್ನಲ್ಲಿರುವ ಫೋಟೋಗಳಲ್ಲಿ ಮಾತ್ರ ನೋಡಿದ್ದೇನೆ. ಅವನು ತುಂಬಾ ಸುಂದರವಾದ ಮಗು!”
ಅಲ್ಲೇ ಸ್ವಲ್ಪ ಮುಂದೆ ಮೇಲೆ ಮೆಟ್ರೋ ಹಳಿ ಹೊಂದಿದ್ದ ರಸ್ತೆಯ ವಿಭಜಕದ ಬಳಿಯ ಟೆಂಟಿನಲ್ಲಿದ್ದ ಜಸ್ಕರಣ್ ಸಿಂಗ್ ನನ್ನೊಡನೆ ಮಾತನಾಡುತ್ತ, "ಮನೆಯ ಎಲ್ಲ ಸುಖವನ್ನು ಬಿಟ್ಟು ಇಲ್ಲಿ ಹೋರಾಟದ ಸಲುವಾಗಿ ಬೀದಿ ಬದಿಯಲ್ಲಿ ಮಲಗುತ್ತಿದ್ದೇವೆ. ತಲೆಯ ಮೇಲೊಂದು ಸರಿಯಾದ ಸೂರಿಲ್ಲದೆ ಬದುಕುವುದು ಅಷ್ಟು ಸುಲಭವಲ್ಲ." ಎಂದು ಹೇಳಿದರು.
ಈ ಒಂದು ವರ್ಷದಲ್ಲಿ ಬಿಸಿಲು ಮತ್ತು ಮಳೆ ಎರಡೂ ಕೆಟ್ಟ ಪ್ರಮಾಣದಲ್ಲಿದ್ದವು. ಆದರೆ ಅದಕ್ಕಿಂತಲೂ ಕೆಟ್ಟದಾಗಿದ್ದ ದಿನಗಳೆಂದರೆ ಮಳೆ ಸುರಿದ ವಾರಗಳು. "ಆ ಸಮಯದಲ್ಲಿ ಯಾರಿಗೂ ಮಲಗಲು ಸಾಧ್ಯವಿರಲಿಲ್ಲ. ಹಲವು ಬಾರಿ ಗಾಳಿಗೆ ಛಾವಣಿ ಹಾರಿ ಹೋಗುತ್ತಿತ್ತು. ಆಗೆಲ್ಲ ಅದನ್ನು ಮತ್ತೆ ಮತ್ತೆ ಸರಿಪಡಿಸಿದ್ದೇವೆ.”
ಜಸ್ಕರಣ್ (ಮೇಲಿನ ಕವರ್ ಫೋಟೋದಲ್ಲಿರುವವರು) ಮಾನ್ಸಾ ಜಿಲ್ಲೆಯ ಭಿಖಿಯಿಂದ ಇತರರೊಂದಿಗೆ ಸರದಿಯಲ್ಲಿ ಪ್ರತಿಭಟನೆಯ ಸ್ಥಳಗಳಿಗೆ ಹೋಗಿ ಬರುತ್ತಿದ್ದಾರೆ. ಮನೆಯಲ್ಲಿ, ಅವರು ತಮ್ಮ ಕುಟುಂಬದ 12 ಎಕರೆ ಜಮೀನಿನಲ್ಲಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಾರೆ. ಅವರ ಮಗ ವಿದ್ಯುದಾಘಾತದಿಂದ ತೀರಿಕೊಂಡಿದ್ದಾರೆ, ಅವರ ಪತ್ನಿ ಆ ಘಟನೆಯ ಸುಮಾರು 18 ತಿಂಗಳ ನಂತರ ನಿಧನರಾದರು. ಅವರು ಈಗ ತಮ್ಮ 80 ವರ್ಷದ ತಾಯಿ, ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.
ಅವರು ಪ್ರಧಾನಿ ರದ್ದತಿಯನ್ನು ಘೋಷಿಸಿದ ದಿನವಾದ ಕಳೆದ ಶುಕ್ರವಾರದಂದು ತನ್ನ ಊರಿನ ಇನ್ನಿತರ ನಾಲ್ಕು ರೈತರೊಡನೆ ಟಿಕ್ರಿಗೆ ಪಯಣಿಸುತ್ತಿದ್ದರು. "ಘೋಷಣೆಯಾಗುವ ಸಮಯದಲ್ಲಿ ನಾವು ಹಳ್ಳಿಯಲ್ಲಿಯೂ ಇರಲಿಲ್ಲ - ಹೋರಾಟದ ಸ್ಥಳದಲ್ಲಿಯೂ ಇರಲಿಲ್ಲ ಎಲ್ಲರೊಂದಿಗೂ ಸಂಭ್ರಮಿಸಲು" ಎಂದು 55 ವರ್ಷದ ಜಸ್ಕರಣ್ ಹೇಳಿದರು. ಹೋರಾಟಗಾರರ ಬೇಡಿಕೆಗಳನ್ನು ಈಡೇರಿಸಿರುವುದರಿಂದ ಊರಿಗೆ ಮರಳುವಂತೆ ಅವರ ತಾಯಿ ಅವರಿಗೆ ಕರೆ ಮಾಡಿದ್ದರು. ಆದರೆ, ನವೆಂಬರ್ 29 ರಂದು ಪ್ರಾರಂಭವಾಗಲಿರುವ ಚಳಿಗಾಲದ ಅಧಿವೇಶನವನ್ನು ಉಲ್ಲೇಖಿಸಿ, "ಸಂಸತ್ತಿನಲ್ಲಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೆ ನಾವು ಕಾಯುತ್ತೇವೆ" ಎಂದು ಅವರು ಹೇಳುತ್ತಾರೆ. "ನಾವು ರೈತರು [ಈ ಪ್ರತಿಭಟನೆಯಲ್ಲಿ] ಉಪಯೋಗಕ್ಕೆ ಬಂದಿದ್ದಕ್ಕಾಗಿ ನಮಗೆ ಸಂತೋಷವಾಗಿದೆ. ಆದರೆ ಈ ಕಾನೂನುಗಳನ್ನುಅಧಿಕೃತವಾಗಿ ರದ್ದುಪಡಿಸಿದಾಗ ಮತ್ತು ನಾವು ಮನೆಗೆ ಹಿಂದಿರುಗಿದ ನಂತರವೇ ನಮಗೆ ನಿಜವಾದ ಸಂತೋಷ ಸಿಗುವುದು."
ನಾವು ನಮ್ಮ ಮನೆಗಳಿಗೆ ಮರಳುವುದು ಸುಲಭವಲ್ಲ ಎಂದು ಬಟಿಂಡಾ ಜಿಲ್ಲೆಯ ಕೊಟ್ರಾ ಕೊರಿಯನ್ವಾಲಾ ಗ್ರಾಮದ ಪರಮ್ಜಿತ್ ಕೌರ್ ಹೇಳುತ್ತಾರೆ. “ಅಂತಹ ಕಷ್ಟದ ಸಮಯದಲ್ಲಿ ನಾವು ನಮ್ಮ ಸ್ವಂತ ಕೈಗಳಿಂದ ಇಲ್ಲಿ ನಿರ್ಮಿಸಿದ ನಮ್ಮ ಮನೆಗಳನ್ನು ನಾವು ನೆನಪಿಸಿಕೊಳ್ಳುತ್ತಿರುತ್ತೇವೆ. ನಾವು ಪಂಜಾಬ್ನಲ್ಲಿರುವ ನಮ್ಮ ಮನೆಗಳಂತೆ ಇಲ್ಲಿ ಪ್ರತಿಯೊಂದು ಸೌಲಭ್ಯ ಲಭ್ಯವಿರುವಂತೆ ನೋಡಿಕೊಂಡಿದ್ದೇವೆ ಮತ್ತು ಎಲ್ಲರಿಗೂ ಸಮಾನ ಸೌಲಭ್ಯಗಳನ್ನು ಒದಗಿಸಿದ್ದೇವೆ,” ಎಂದು ಅವರು ಹೇಳಿದರು.
ಹರಿಯಾಣದ ಬಹದ್ದೂರ್ ಘಡ್ ಬಳಿಯ ಹೆದ್ದಾರಿಯ ವಿಭಜಕದಲ್ಲಿ, ಅವರು ಮತ್ತು ಇತರ ಮಹಿಳಾ ರೈತರು ಹಸಿರು ತರಕಾರಿಗಳು, ಟೊಮ್ಯಾಟೊ, ಸಾಸಿವೆ, ಕ್ಯಾರೆಟ್ ಮತ್ತು ಆಲೂಗಡ್ಡೆಗಳನ್ನು ಬೆಳೆಯುತ್ತಿದ್ದಾರೆ. ನಾನು ಅವರನ್ನು ಭೇಟಿಯಾದ ದಿನ, ಈ 'ಕೃಷಿಭೂಮಿ'ಯಿಂದ ಕೊಯ್ಲು ಮಾಡಿದ ಪಾಲಕ್ ಅನ್ನು ಮಧ್ಯಾಹ್ನದ ಊಟಕ್ಕೆ ದೊಡ್ಡ ಪಾತ್ರೆಗಳಲ್ಲಿ ಬೇಯಿಸುತ್ತಿದ್ದರು.
ಹಲವಾರು ನೆನಪುಗಳು ಮತ್ತು ನಷ್ಟಗಳಿಂದಾಗಿ ನೊಂದ ಹೃದಯಗಳನ್ನು ಸರಿಪಡಿಸುವ ಹೋರಾಟವೂ ಹೌದು, ಪರಮ್ಜಿತ್ ಮುಂದುವರೆದು ಹೇಳುತ್ತೇನೆ. “ಪ್ರತಿಭಟನೆಯಲ್ಲಿ ಮಡಿದ ನಮ್ಮ 700 ಜನರನ್ನು ನಾವು ನೆನಪಿಸಿಕೊಳ್ಳುತ್ತೇವೆ. ಟ್ರಕ್ ಹರಿದು ಮೂವರು ಮಹಿಳಾ ಪ್ರತಿಭಟನಾಕಾರರು ಸಾವನ್ನಪ್ಪಿದಾಗ ನಮಗೆ ತುಂಬಾ ದುಃಖವಾಯಿತು. ಸುಮಾರು 10 ದಿನಗಳನ್ನು ಕಳೆದ ನಂತರ ಅವರು ದೀಪಾವಳಿಗೆ ಮನೆಗೆ ಮರಳುತ್ತಿದ್ದರು. ಅವರೆಲ್ಲರೂ ತುಂಬಾ ಸಂತೋಷದಲ್ಲಿದ್ದರು ಮತ್ತು ಆ ಘಟನೆ ಸಂಭವಿಸಿದಾಗ ಡಿವೈಡರ್ ಮೇಲೆ ಆಟೋರಿಕ್ಷಾಕ್ಕಾಗಿ ಕಾಯುತ್ತಿದ್ದರು. ಆ ರಾತ್ರಿ ನಮಗೆ ಊಟ ಮಾಡಲೂ ಸಾಧ್ಯವಾಗಲಿಲ್ಲ. ಮೋದಿ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಭಾರತೀಯ ಕಿಸಾನ್ ಯೂನಿಯನ್ (ಏಕ್ತಾ) (ಉಗ್ರಹನ್) ಭಟಿಂಡಾ ಜಿಲ್ಲೆಯ ಮಹಿಳಾ ನಾಯಕಿ ಪರಮ್ಜಿತ್ ಕೌರ್ (60) ಹೇಳುತ್ತಾರೆ, “ಜನವರಿ 26 ರ ಪರೇಡ್ನಲ್ಲಿ ಲಾಠಿ ಚಾರ್ಜ್ ಮಾಡಿದಾಗ ನಮ್ಮ ಅನೇಕ ಸಹಚರರು ಗಾಯಗೊಂಡಿದ್ದಾರೆ. ಅವರು ನಮ್ಮ ಮೇಲೆ ಅಶ್ರುವಾಯು ಶೆಲ್ಗಳನ್ನು ಹಾರಿಸಿದರು ... ಅಷ್ಟೇ ಅಲ್ಲ ಅವರು ತಮ್ಮ ಶಕ್ತಿ ತೋರಿಸಲು ನಮ್ಮ ವಿರುದ್ಧ ಹಲವಾರು ಎಫ್ಐಆರ್ಗಳನ್ನು ದಾಖಲಿಸಿದರು. ಇದೆಲ್ಲಾ ಕಿರುಕುಳಗಳನ್ನು ನಾವು ಬದುಕು ಪೂರ್ತಿ ನೆನಪಿಟ್ಟುಕೊಳ್ಳಲಿದ್ದೇವೆ.
“ಕೃಷಿ ಕಾನೂನುಗಳನ್ನು ರದ್ದುಪಡಿಸಿದ್ದರೂ, ಧರಣಿ ಮುಗಿದಿದೆಯೆಂದು ಅರ್ಥವಲ್ಲ. ಯಾವ ಸರಕಾರವೂ (ಮತದಾನದ ಮೂಲಕ ಅಧಿಕಾರಕ್ಕೆ ತಂದ) ರೈತ ಸಮುದಾಯದ ಬಗ್ಗೆ ಯೋಚಿಸಿಲ್ಲ. ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ಮನೆಗೆ ಹಿಂದಿರುಗಿ ನಾವು ನಮ್ಮ ಮಕ್ಕಳನ್ನು ಭೇಟಿಯಾಗುತ್ತೇವೆ ಮತ್ತು ನಮ್ಮ ಮೊಮ್ಮಕ್ಕಳೊಂದಿಗೆ ಆಟವಾಡುತ್ತೇವೆ. ಆದರೆ ನಂತರ ನಾವು ಕೃಷಿಗೆ ಸಂಬಂಧಿಸಿದ ಹೊಸ ಸಮಸ್ಯೆಗಳನ್ನು ಎದುರಿಸುತ್ತೇವೆ.”
"ಅವರ [ಮೋದಿಯವರ] ಉದ್ದೇಶಗಳ ಕುರಿತು ಈಗಲೂ ಅನುಮಾನವಿದೆ" ಎಂದು ಮಾನ್ಸಾ ಜಿಲ್ಲೆಯ ಪಂಜಾಬ್ ಕಿಸಾನ್ ಯೂನಿಯನ್ನ ರಾಜ್ಯ ಸಮಿತಿಯ ಸದಸ್ಯರಾದ 60 ವರ್ಷದ ಜಸ್ಬೀರ್ ಕೌರ್ ನಟ್ ಹೇಳುತ್ತಾರೆ, ಅವರು ಕೂಡ ಟಿಕ್ರಿಯಲ್ಲಿ ಬೀಡುಬಿಟ್ಟಿದ್ದಾರೆ. "ಅವರ ಪ್ರಕಟಣೆಯಲ್ಲಿ ಅವರು ತಮ್ಮ ಪ್ರಯತ್ನಗಳ ಹೊರತಾಗಿಯೂ ರೈತರ ಒಂದು ವಿಭಾಗವನ್ನು ಮನವೊಲಿಸಲು ವಿಫಲರಾಗಿದ್ದಾಗಿ ಹೇಳಿದ್ದಾರೆ, ಅಂದರೆ ಈ ಕೃಷಿ ಕಾನೂನುಗಳನ್ನು ತರುವುದು ಸರಿಯಾದ ನಿರ್ಧಾರವೆನ್ನುವ ನಂಬಿಕೆ ಅವರಲ್ಲಿ ಈಗಲೂ ಇದೆ. ಲಿಖಿತವಾಗಿ ಏನು ಘೋಷಿಸಲಾಗುತ್ತದೆಯೆನ್ನುವುದನ್ನು ನಾವು ಕಾಯುತ್ತಿದ್ದೇವೆ. ನಂತರ ನಾವು ಏನು ಬರೆಯಲಾಗಿದೆಯೆನ್ನುವದನ್ನೂ ನೋಡುತ್ತೇವೆ, ಏಕೆಂದರೆ ಅವರಿಗೆ ಆಗಾಗ್ಗೆ ಪದಗಳೊಂದಿಗೆ ಆಡುವ ಅಭ್ಯಾಸವಿದೆ."
ಜಸ್ಬೀರ್ ಅವರು ವಿದ್ಯುತ್ (ತಿದ್ದುಪಡಿ) ಮಸೂದೆ, 2020 ಮತ್ತು ಕೂಳೆ ಸುಡುವ ಸುಗ್ರೀವಾಜ್ಞೆಯನ್ನು ಹಿಂಪಡೆಯುವುದು ಸೇರಿದಂತೆ ಬಾಕಿ ಉಳಿದಿರುವ ಬೇಡಿಕೆಗಳನ್ನು ಪಟ್ಟಿ ಮಾಡುತ್ತಾರೆ. "ಸರ್ಕಾರವು ಈ ಬೇಡಿಕೆಗಳನ್ನು ಒಪ್ಪಿಕೊಳ್ಳಬಹುದು ಎಂದು ನಮಗೆ ತಿಳಿದಿದೆ, ಆದರೆ ಅವರು ಎಮ್ಎಸ್ಪಿ [ಕನಿಷ್ಠ ಬೆಂಬಲ ಬೆಲೆ] ಮೇಲೆ ಗ್ಯಾರಂಟಿ ನೀಡುವ ವಿಷಯದಲ್ಲಿ ಮುಂದುವರಿಯುವುದಿಲ್ಲ. ನಂತರ ನಾವು ಒತ್ತಾಯಿಸುವ ಇನ್ನೂ ಕೆಲವು ವಿಷಯಗಳಿವೆ: ಪ್ರತಿಭಟನಾನಿರತ ರೈತರ ವಿರುದ್ಧ ದಾಖಲಾಗಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು, ರೈತರ ಟ್ರ್ಯಾಕ್ಟರ್ಗಳಿಗೆ ಆಗಿರುವ ಹಾನಿಗೆ ಪರಿಹಾರವನ್ನು ನೀಡಬೇಕು. ಇದೆಲ್ಲ ಸಮಸ್ಯೆಗಳು ಪರಿಹಾರವಾಗದೇ ನಾವು ಇಲ್ಲಿಂದ ಹೊರಡುವುದಿಲ್ಲ.”
ನವೆಂಬರ್ 21, ಭಾನುವಾರ, ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ಸುಮಾರು 40 ರೈತ ಸಂಘಗಳ ಸಂಯೋಜಿತ ಸಂಸ್ಥೆಯಾದ ಸಂಯುಕ್ತ ಕಿಸಾನ್ ಮೋರ್ಚಾ, ತಮ್ಮ ಆಂದೋಲನವು ಯೋಜಿಸಿದಂತೆ ಮುಂದುವರಿಯುತ್ತದೆ ಎಂದು ದೃಢಪಡಿಸಿತು. ಅದರ ಮುಂದಿನ ಕಾರ್ಯಕ್ರಮಗಳಾದ ನವೆಂಬರ್ 22ರ ಲಕ್ನೋದಲ್ಲಿ ಕಿಸಾನ್ ಪಂಚಾಯತ್ ಸೇರಿದಂತೆ ನವೆಂಬರ್ 26ರಂದು ಎಲ್ಲಾ ದೆಹಲಿ ಗಡಿಗಳಲ್ಲಿನ ಸಭೆಗಳು. ಮತ್ತು ನವೆಂಬರ್ 29ರಂದು ಸಂಸತ್ತಿಗೆ ಮೆರವಣಿಗೆ ಹೀಗೆ ಎಲ್ಲವೂ ನಡೆಯಲಿವೆ.
ಅನುವಾದ: ಶಂಕರ. ಎನ್. ಕೆಂಚನೂರು