'ಕ್ಯಾಪ್ಟನ್ ಭಾವ್' (ರಾಮಚಂದ್ರ ಶ್ರೀಪತಿ ಲಾಡ್)
ಸ್ವಾತಂತ್ರ್ಯ
ಹೋರಾಟಗಾರ ಮತ್ತು ತೂಫಾನ್ ಸೇನಾದ
ಮುಖ್ಯಸ್ಥರು
ಜೂನ್ 22,
1922- ಫೆಬ್ರವರಿ 5, 2022
ಕೊನೆಗೆ ಅವರು ತಾನು ಯಾವ ದೇಶಕ್ಕಾಗಿ ಹೋರಾಡಿದರೋ ಅದರಿಂದ ಗೌರವಿಸಲ್ಪಡದೆ ಹಾಗೂ ಹಾಡಿ ಹೊಗಳಿಸಿಕೊಳ್ಳದೆ ಇಲ್ಲಿಂದ ನಿರ್ಗಮಿಸಿದರು. ಆದರೆ 1940ರಲ್ಲಿ ತನ್ನ ಸಂಗಾತಿಗಳೊಡನೆ ಸೇರಿ ವಿಶ್ವದ ಪ್ರಬಲ ಪಭುತ್ವದ ವಿರುದ್ಧ ಹೋರಾಡಿದ್ದ ಈ ಮಹಾನ್ ವ್ಯಕ್ತಿಯ ಕುರಿತು ತಿಳಿದಿದ್ದ ಸಾವಿರಾರು ಜನರು ಸೇರಿ ಅವರಿಗೆ ತಮ್ಮ ಗೌರವವನ್ನು ಸಲ್ಲಿಸಿದರು. ರಾಮಚಂದ್ರ ಶ್ರೀಪತಿ ಲಾಡ್ ಅವರು 1943ರಲ್ಲಿ ಭೂಗತ ಪ್ರಾಂತೀಯ ಸರಕಾರವನ್ನು ರಚಿಸಿಕೊಂಡು ಬಲಾಢ್ಯ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದ ಐತಿಹಾಸಿಕ ಹೋರಾಟಗಾರ ನಾನಾ ಪಾಟೀಲರ ʼಪ್ರತಿ ಸರ್ಕಾರ್ʼನ ಭಾಗವಾಗಿದ್ದರು
ಆದರೆ ಕ್ಯಾಪ್ಟನ್ ಭಾವ್ (ಅವರ ಭೂಗತ ಅಡ್ಡಹೆಸರು) ಮತ್ತು ಅವರ ಯೋಧರು ಅಲ್ಲಿಗೇ ತಮ್ಮ ಹೋರಾಟವನ್ನು ನಿಲ್ಲಿಸಿರಲಿಲ್ಲ. 1946ರವರೆಗೆ ಮೂರು ವರ್ಷಗಳ ಕಾಲ ಅವರು ಬ್ರಿಟಿಷರನ್ನು ತಡೆದು ನಿಲ್ಲಿಸಿದರು ಮತ್ತು ಸುಮಾರು 600 ಹಳ್ಳಿಗಳಲ್ಲಿ ಪ್ರತಿ ಸರ್ಕಾರ್ ತನ್ನ ಸಮಾನಾಂತರ ಸರ್ಕಾರವನ್ನು ನಡೆಸುತ್ತಿತ್ತು. ಒಂದು ಅರ್ಥದಲ್ಲಿ, ಫೆಬ್ರವರಿ 5ರಂದು ಅವರ ಸಾವಿನೊಂದಿಗೆ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸ್ಥಾಪಿಸಿದ್ದ ಅವರ ಪ್ರತಿ ಸರ್ಕಾರ ಕೊನೆಗೊಂಡಿತು.
ಕ್ಯಾಪ್ಟನ್ 'ಭಾವ್' (ಹಿರಿಯಣ್ಣ) ಪ್ರತಿ ಸರ್ಕಾರ ದ ಭೂಗತ ಸಶಸ್ತ್ರ ಪಡೆಯ 'ತಫಾನ್ ಸೇನಾ' ಅಥವಾ ಸುಂಟರಗಾಳಿ ಸೈನ್ಯದ ದಾಳಿ ಘಟಕದ ಮುಖ್ಯಸ್ಥರಾಗಿದ್ದರು. ತಮ್ಮ ವೈಯಕ್ತಿಕ ಬದುಕಿನ ನಾಯಕ ಜಿ.ಡಿ. ಬಾಪು ಲಾಡ್ ಅವರೊಂದಿಗೆ 1943ರ ಜೂನ್ 7ರಂದು ಮಹಾರಾಷ್ಟ್ರದ ಶೆನೋಲಿಯಲ್ಲಿ ಬ್ರಿಟಿಷ್ ರಾಜ್‌ನ ಅಧಿಕಾರಿಗಳ ಸಂಬಳವನ್ನು ಹೊತ್ತ ಪುಣೆ-ಮೀರಜ್ ವಿಶೇಷ ಸರಕುಗಳ ರೈಲಿನ ಮೇಲಿನ ದಾಳಿಯ ನೇತೃತ್ವ ವಹಿಸಿದ್ದರು.
ದಶಕಗಳ ನಂತರ, ಅವರು ಮತ್ತು ಪ್ರತಿ ಸರ್ಕಾರ್ ಸಮಾಜದ ಕಣ್ಣೆದುರಿನಿಂದ ಕಣ್ಮರೆಯಾದಾಗ, ಪರಿ ಕ್ಯಾಪ್ಟನ್ ಹಿರಿಯಣ್ಣನನ್ನು ಪುನಃ ಜನರೆದುರು ಪರಿಚಯಿಸಿ ಅವರ ಕತೆಯನ್ನು ನಮ್ಮೊಡನೆ ಹಂಚಿಕೊಳ್ಳುವಂತೆ ಮಾಡಿದೆವು. ಆ ಸಮಯದಲ್ಲೇ ಅವರು ಸ್ವಾತಂತ್ರ ಮತ್ತು ವಿಮೋಚನೆಯ ನಡುವಿನ ವ್ಯತ್ಯಾಸವನ್ನು ತಿಳಿಸಿದ್ದು. ಭಾರತ ಸ್ವತಂತ್ರವಾಗಿದೆ. ಆದರೆ ಆ ಸ್ವಾತಂತ್ರ್ಯವು ಇಂದಿಗೂ ಕೆಲವರ ಏಕಸ್ವಾಮ್ಯದಲ್ಲಿದೆ ಎಂದು ಅವರು ಹೇಳಿದರು. ಮತ್ತು "ಇಂದು, ಹಣವನ್ನು ಹೊಂದಿರುವ ವ್ಯಕ್ತಿ ಆಡಳಿತ ನಡೆಸುತ್ತಾನೆ... ಮೊಲ ಯಾರ ಕೈಯಲ್ಲಿದೆಯೋ ಅವನೇ ಬೇಟೆಗಾರ - ಇದು ನಮ್ಮ ಸ್ವಾತಂತ್ರ್ಯದ ಸ್ಥಿತಿ."
ನವೆಂಬರ್ 2018ರಲ್ಲಿ, 100,000ಕ್ಕೂ ಹೆಚ್ಚು ರೈತರು ಸಂಸತ್ತಿನತ್ತ ಮೆರವಣಿಗೆ ಮಾಡುತ್ತಿದ್ದಂತೆ, ಅವರು ಪರಿಯ ಭರತ್ ಪಾಟೀಲ್ ಮೂಲಕ ವೀಡಿಯೊ ಸಂದೇಶವನ್ನು ಕಳುಹಿಸಿದರು. "ನಾನು ಆರೋಗ್ಯವಾಗಿದ್ದಿದ್ದರೆ, ನಿಮ್ಮೊಂದಿಗೆ ಮೆರವಣಿಗೆ ಬರುತ್ತಿದ್ದೆ" ಎಂದು ಹಿರಿಯ ಯೋಧ ತನ್ನ 96ನೇ ವಯಸ್ಸಿನಲ್ಲಿ ರೈತರ ಪರವಾಗಿ ಗುಡುಗಿದ್ದರು.
ಜೂನ್ 2021ರಲ್ಲಿ, ಒಮ್ಮೆ ಅವರನ್ನು ಭೇಟಿಯಾಗಿ ಬರುವುದು ಒಳ್ಳೆಯದೆನಿಸಿತು. ನನಗೆ ಈ ಮಹಾಮಾರಿಯಿಂದ ಅವರು ಸುರಕ್ಷಿತವಾಗಿದ್ದಾರೆನ್ನುವುದನ್ನು ತಿಳಿದುಕೊಳ್ಳಬೇಕಿತ್ತು. ಅಂದು ನನ್ನ ಸಹೋದ್ಯೋಗಿ ಮೇಧಾ ಕಾಳೆ ಅವರೊಂದಿಗೆ ನಾನು ಅವರ ಜನ್ಮದಿನದಂದು ಅವರಿಗೆ ಶುಭಾಶಯ ತಿಳಿಸಲೆಂದು ಹೋದೆ. ಪರಿ ಪರವಾಗಿ, ನಾವು ಅವರಿಗೆಂದು ಹುಟ್ಟುಹಬ್ಬದ ಉಡುಗೊರೆಗಳನ್ನು ತೆಗೆದುಕೊಂಡೆವು: ಸುಂದರವಾದ ನೆಹರು ಜಾಕೆಟ್ (ಅವರು ಯಾವಾಗಲೂ ಅವುಗಳನ್ನು ಇಷ್ಟಪಡುತ್ತಿದ್ದರು) ಕೈಯಿಂದ ಕೆತ್ತಿದ ಊರುಗೋಲು ಮತ್ತು ನಾವು ಸೆರೆಹಿಡಿದಿದ್ದ ಅವರ ಫೋಟೋಗಳ ಆಲ್ಬಂ. ನಾನು ಕೊನೆಯಬಾರಿಗೆ 2018ರಲ್ಲಿ ಅವರನ್ನು ಭೇಟಿಯಾದಾಗಿನ ಸಂದರ್ಭಕ್ಕಿಂತಲೂ ಈಗ ಅವರು ಕುಗ್ಗಿ ಹೋಗಿರುವುದನ್ನು ನೋಡಿ ನನಗೆ ಆಘಾತವಾಯಿತು. ಹಿರಿಯ ಯೋಧ ದುರ್ಬಲನಾಗಿದ್ದರು, ದಣಿದಿದ್ದರು ಹಾಗೂ ಅವರಿಂದ ಮಾತನಾಡುವುದು ಕೂಡಾ ಕಷ್ಟವಾಗುತ್ತಿತ್ತು - ಆದರೆ ಅವರು ಉಡುಗೊರೆಗಳನ್ನು ಇಷ್ಟಪಟ್ಟರು. ಅಂದು ತಕ್ಷಣವೇ ಜಾಕೆಟ್ ಧರಿಸಿದ್ದರು - ಸಾಂಗ್ಲಿ ಬಿಸಿಲಿಗೆ ಸೆಕೆ ಸುಡುತ್ತಿದ್ದರೂ. ಮತ್ತು ಊರುಗೋಲನ್ನು ಮೊಣಕಾಲುಗಳ ಮೇಲೆ ಇರಿಸಿಕೊಂಡು, ಫೋಟೋ ಆಲ್ಬಂನಲ್ಲಿ ಮುಳುಗಿಹೋಗಿದ್ದರು.
ಅವರು ಏಳು ದಶಕಗಳ ತಮ್ಮ ಸಂಗಾತಿ ಕಲ್ಪನಾ ಲಾಡ್ ಅವರನ್ನು ಒಂದು ವರ್ಷದ ಹಿಂದೆ ಕಳೆದುಕೊಂಡಿದ್ದಾರೆನ್ನುವುದು ಆಗ ತಾನೆ ನಮ್ಮ ಅರಿವಿಗೆ ಬಂದಿತು. ಮತ್ತು ಆ ಅಸಹನೀಯ ನಷ್ಟವು ಈ ಹಿರಿಯ ವ್ಯಕ್ತಿಯನ್ನು ಘಾಸಿಗೊಳಿಸಿತ್ತು. ಇವರೂ ಸದ್ಯದಲ್ಲೇ ನಮ್ಮನ್ನು ಅಗಲಲಿದ್ದಾರೆಂದು ನನಗೆ ಆಗಲೇ ಅನ್ನಿಸಿತ್ತು.
ದೀಪಕ್ ಲಾಡ್ ನನಗೆ ಫೋನ್ ಮಾಡಿ ಹೀಗೆ ಹೇಳಿದರು: "ಅವರು ತನ್ನ ಕೊನೆಗಳಿಗೆಯಲ್ಲಿ ಅದೇ ನೆಹರು ಜಾಕೆಟ್ ಧರಿಸಿದ್ದರು." ಕೆತ್ತನೆಯಿರುವ ಊರುಗೋಲು ಕೂಡ ಅವರ ಪಕ್ಕದಲ್ಲಿತ್ತು. ಅಧಿಕಾರಿಗಳು ಭಾವ್ ಅವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸುವ ಭರವಸೆ ನೀಡಿದ್ದರು, ಆದರೆ ಅದು ಕೊನೆಗೂ ಕಾರ್ಯರೂಪಕ್ಕೆ ಬರಲಿಲ್ಲ ಎಂದು ದೀಪಕ್ ಹೇಳುತ್ತಾರೆ. ಆದರೆ, ಕ್ಯಾಪ್ಟನ್ ಅವರ ಕೊನೆಯ ಪ್ರಯಾಣಕ್ಕಾಗಿ ಬಹಳ ದೊಡ್ಡ ಸಂಖ್ಯೆಯ ಜನರು ಸೇರಿದ್ದರು.
ನಮ್ಮ ಈ 85 ತಿಂಗಳ ಅಸ್ತಿತ್ವದಲ್ಲಿ ಪರಿ 44 ರಾಷ್ಟ್ರೀಯ ಮತ್ತು ಜಾಗತಿಕ ಪ್ರಶಸ್ತಿಗಳನ್ನು ಗೆದ್ದಿದೆ. ಆದರೆ ಕ್ಯಾಪ್ಟನ್ ಭಾವ್ ಕುರಿತು ನಾವು ಮಾಡಿದ ಚಿತ್ರವನ್ನು ಅವರ ಊರಾದ ಕುಂಡಲ್‌ನಲ್ಲಿ ತೋರಿಸಿದ ನಂತರ ಅವರು ನಮಗೆ ತೋರಿಸಿದ ಪ್ರೀತ್ಯಾದಾರದ ಮುಂದೆ ಉಳಿದ ಪ್ರಶಸ್ತಿಗಳೆಲ್ಲ ಸಣ್ಣವು ಎನ್ನುವುದು ನನ್ನ ನಂಬಿಕೆ. 2017ರಲ್ಲಿ ದೀಪಕ್ ಲಾಡ್ ಮೂಲಕ ಅವರು ನಮಗೆ ಕಳುಹಿಸಿದ ಸಂದೇಶ ಇದು:
“ಪಿ. ಸಾಯಿನಾಥ್ ಮತ್ತು ಪರಿ ಪ್ರತಿ ಸರ್ಕಾರದ ಕಥೆಗೆ ಮರುಹುಟ್ಟು ನೀಡುವವರೆಗೂ ಅದನ್ನು ಇತಿಹಾಸದ ಪುಟಗಳಿಂದ ಕಾಣೆಯಾಗಿತ್ತು. ನಮ್ಮ ಇತಿಹಾಸದಲ್ಲಿ ಆ ಮಹಾನ್ ಅಧ್ಯಾಯವನ್ನು ಅಳಿಸಿಹಾಕಲಾಗಿತ್ತು. ನಾವು ಸ್ವಾತಂತ್ರ್ಯ ಮತ್ತು ವಿಮೋಚನೆಗಾಗಿ ಹೋರಾಡಿದ್ದೆವು. ವರ್ಷಗಳು ಕಳೆದಂತೆ ನಮ್ಮ ಕೊಡುಗೆಯನ್ನು ಮರೆಯಲಾಯಿತು. ನಮ್ಮನ್ನು ಸ್ವಾತಂತ್ರ್ಯದ ಕತೆಯಿಂದ ಹೊರಗಿಡಲಾಯಿತು. ಕಳೆದ ವರ್ಷ ಸಾಯಿನಾಥ್ ನನ್ನ ಕತೆ ಕೇಳಲೆಂದು ನಮ್ಮ ಊರಿಗೆ ಬಂದಿದ್ದರು. ನನ್ನೊಡನೆ ಶೆನೊಲಿಯಲ್ಲಿ ನಾವು ಬ್ರಿಟಿಷರ ರೈಲಿನ ಮೇಲೆ ದಾಳಿ ಮಾಡಿದ್ದ ಹಳಿಗಳ ಬಳಿಗೂ ಬಂದಿದ್ದರು.”
“ಈ ಚಿತ್ರ ಮತ್ತು ಲೇಖನದ ಮೂಲಕ ಸಾಯಿನಾಥ್ ಮತ್ತು ಪರಿ ನನ್ನ ಹಾಗೂ ನನ್ನ ಸಹ ಹೋರಾಟಗಾರರ ಕತೆಗೆ ಮತ್ತು ಪ್ರತಿಸರ್ಕಾರದ ನೆನಪಿಗೆ ಮರುಹುಟ್ಟು ನೀಡಿದ್ದಾರೆ. ನಾವು ಜನರಿಗಾಗಿ ಮಾಡಿದ ಹೋರಾಟವನ್ನು ಮತ್ತೆ ಜನರ ಮುಂದಿರಿಸಿದ್ದಾರೆ. ಅವರು ನಮ್ಮ ಹೆಮ್ಮೆ ಮತ್ತು ಗೌರವವನ್ನು ಮರಳಿಸಿದ್ದಾರೆ. ಅವರು ನಮ್ಮನ್ನ ಜನರ ಪ್ರಜ್ಞೆಯಲ್ಲಿ ಮತ್ತೆ ಜೀವಂತಗೊಳಿಸಿದ್ದಾರೆ. ಇದು ನಮ್ಮ ನೈಜ ಕಥೆಯಾಗಿತ್ತು.
“ಆ ಸಿನೆಮಾ ನೋಡುತ್ತಾ ನಾನು ಭಾವುಕನಾಗಿದ್ದೆ. ಇದಕ್ಕೂ ಮೊದಲು ನನ್ನ ಊರಿನ ಯುವ ಪೀಳಿಗೆಗೆ ನಾನು ಯಾರು, ಹೋರಾಟದಲ್ಲಿ ನನ್ನ ಪಾತ್ರವೇನು ಎನ್ನುವುದು ತಿಳಿದಿರಲಿಲ್ಲ. ಆದರೆ ಇಂದು ಈ ಚಿತ್ರ ಮತ್ತು ಲೇಖನವನ್ನು ನೋಡಿದ ನಂತರ ಈ ಯುವ ಪೀಳಿಗೆಯೂ ನನ್ನನ್ನು ಗೌರವಿಸತೊಡಗಿತು ಹಾಗೂ ಸ್ವಾತಂತ್ರದ ಹೋರಾಟದಲ್ಲಿ ನನ್ನ ಮತ್ತು ಸಹ ಹೋರಾಟಗಾರರ ಪಾತ್ರವೇನು ಎನ್ನುವುದನ್ನು ತಿಳಿದುಕೊಂಡರು. ಇದು, ನನ್ನ ಕೊನೆಯ ದಿನಗಳಲ್ಲಿ ನನ್ನ ಗೌರವಕ್ಕೆ ಮರುಹುಟ್ಟು ನೀಡಿದೆ.
ಅವರ ನಿರ್ಗಮನದೊಡನೆ ಭಾರತವು ತನ್ನ ಸ್ವಾತಂತ್ರ್ಯದ ಮಹಾನ್ ಕಾಲಾಳುಗಳಲ್ಲಿ ಒಬ್ಬರನ್ನು ಕಳೆದುಕೊಂಡಿದೆ - ಇವರು ವೈಯಕ್ತಿಕ ಲಾಭದ ಬಗ್ಗೆ ಯೋಚಿಸದೆ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು ಮತ್ತು ಅವರು ತೆಗೆದುಕೊಳ್ಳುತ್ತಿರುವ ಅಪಾಯಗಳ ಬಗ್ಗೆ ಸಂಪೂರ್ಣವಾಗಿ ಅರಿವುಳ್ಳವರಾಗಿದ್ದರು.
2017ರಲ್ಲಿ, ಆ ಮೊದಲ ಸಂದರ್ಶನದ ಒಂದು ವರ್ಷದ ನಂತರ, ಭರತ್ ಪಾಟೀಲ್ ಅವರು ಕುಂಡಲಿಯಲ್ಲಿ ರೈತರ ಮುಷ್ಕರದಲ್ಲಿ ಕ್ಯಾಪ್ಟನ್ ಮೆರವಣಿಗೆ ನಡೆಸುತ್ತಿರುವ ಛಾಯಾಚಿತ್ರವನ್ನು ನನಗೆ ಕಳುಹಿಸಿದರು. ನಾನು ಕ್ಯಾಪ್ಟನ್ ಭಾವ್ ಅವರನ್ನು ಮುಂದೆ ಭೇಟಿಯಾದಾಗ, ಅವರು ಆ ಉರಿಬಿಸಿಲಿನಲ್ಲಿ ಏನು ಮಾಡುತ್ತಿದ್ದರು ಹಾಗೂ ಅಂದು ಯಾವುದಕ್ಕಾಗಿ ಹೋರಾಟ ನಡೆಸಿದ್ದೀರಿ ಮತ್ತು ಇಂದು ಯಾವುದಕ್ಕಾಗಿ ಹೋರಾಟ ಮಾಡುತ್ತಿದ್ದೀರಿ? ಎಂದು ಕೇಳಿದಾಗ, ತನ್ನ ಹೋರಾಟದ ದಿನಗಳನ್ನು ನೆನೆಯುತ್ತಾ ಅವರು ಹೇಳಿದ ಮಾತು:
“ಆಗಲೂ ರೈತರು ಮತ್ತು ಕಾರ್ಮಿಕರಿಗಾಗಿ ಹೋರಾಡಿದ್ದೆವು, ಸಾಯಿನಾಥ್. ಇಂದು ಕೂಡಾ ರೈತರು ಮತ್ತು ಕಾರ್ಮಿಕರಿಗಾಗಿ ಹೋರಾಡುತ್ತಿದ್ದೇವೆ.”
ಇ ವುಗಳ ನ್ನೂ ಓದಿ: ' ಕ್ಯಾಪ್ಟನ್ ಹಿರಿಯ ಣ್ಣ ' ಮತ್ತು ಸುಂಟರಗಾಳಿ ಸೈನ್ಯ ಮತ್ತು ಪ್ರತಿ ಸರ್ಕಾರ್ ನ ಕೊನೆಯ ಹು ರ‍್ರಾ
ಅನುವಾದ: ಶಂಕರ. ಎನ್. ಕೆಂಚನೂರು