1968ರ ಡಿಸೆಂಬರ್ ಕೊನೆಯ ವಾರದಲ್ಲಿ, ವೆನ್ಮಣಿ ಗ್ರಾಮದ ಕೀಳ್‌ವೆನ್ಮಣಿಯೆನ್ನುವ ದಲಿತ ಕೇರಿಯಲ್ಲಿ ಭೂಮಾಲಿಕರ ದಬ್ಬಾಳಿಕೆಯ ವಿರುದ್ಧ ಸಂಘಟಿತ ಕಾರ್ಮಿಕರ ದೀರ್ಘಕಾಲದ ಹೋರಾಟವೊಂದು ಆಸ್ಫೋಟಿಸಿತು. ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಈ ಗ್ರಾಮದ ದಲಿತ ಭೂಹೀನ ಕಾರ್ಮಿಕರು ಹೆಚ್ಚಿನ ವೇತನ, ಕೃಷಿ ಭೂಮಿಯ ಮಾಲಕತ್ವಕ್ಕಾಗಿ ಮತ್ತು ಊಳಿಗಮಾನ್ಯ ದಬ್ಬಾಳಿಕೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ಮುಷ್ಕರ ನಡೆಸಿದರು. ಇದಕ್ಕೆ ಭೂಮಾಲಿಕರ ಪ್ರತಿಕ್ರಿಯೆ ಹೇಗಿತ್ತು? ಅವರು ದಲಿತ ಕೇರಿಯ 44 ದಲಿತ ಕಾರ್ಮಿಕರನ್ನು ಜೀವಂತ ದಹಿಸಿದರು. ಶ್ರೀಮಂತ ಮತ್ತು ಬಲಿಷ್ಟ ಭೂಮಾಲೀಕರು, ಪರಿಶಿಷ್ಟ ಜಾತಿಗಳಲ್ಲಿನ ಹೊಸ ರಾಜಕೀಯ ಜಾಗೃತಿಯನ್ನು ಎದುರಿಸಲು, ನೆರೆಹೊರೆಯ ಗ್ರಾಮಗಳಿಂದ ಕಾರ್ಮಿಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದರು ಜೊತೆಗೆ ಭಾರಿ ಪ್ರತೀಕಾರವನ್ನೂ ಯೋಜಿಸಿದರು.
ಡಿಸೆಂಬರ್ 25ರ ರಾತ್ರಿ, ಭೂಮಾಲೀಕರು ಊರನ್ನು ಸುತ್ತವರೆದು ಹೊರಹೋಗುವ ಎಲ್ಲ ದಾರಿಗಳನ್ನು ಮುಚ್ಚಿ ಊರಿನ ಮೇಲೆ ದಾಳಿಯೆಸಗಿದರು. ಗುಡಿಸಲುಗಳ ಒಳಗೆ ಓಡಿ ಹೋದ ಕಾರ್ಮಿಕರನ್ನು ಅವರ ಗುಡಿಸಲಿನಿಂದ ಹೊರಬರದಂತೆ ಚಿಲಕ ಹಾಕಿ ಭೂಮಾಲಿಕರ ಕಡೆಯ ದಾಳಿಕೋರರು ಗುಡಿಸಲುಗಳಿಗೆ ಬೆಂಕಿಯಿಟ್ಟರು. ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಸತ್ತವರಲ್ಲಿ ಅರ್ಧದಷ್ಟು ಸಂಖ್ಯೆಯಲ್ಲಿ ಮಕ್ಕಳೇ ಇದ್ದರು ಅವರಲ್ಲಿ 11 ಹುಡುಗಿಯರು ಮತ್ತು 11 ಹುಡುಗರು - 16 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇಬ್ಬರು 70 ವರ್ಷ ಮೇಲ್ಪಟ್ಟವರು. ಒಟ್ಟಾರೆಯಾಗಿ, 29 ಮಹಿಳೆಯರು ಮತ್ತು 15 ಪುರುಷರು ಅಂದು ಮರಣ ಹೊಂದಿದ್ದರು. ಇವರೆಲ್ಲರೂ ದಲಿತರು ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) ಬೆಂಬಲಿಗರಾಗಿದ್ದರು.
1975ರಲ್ಲಿ ಮದ್ರಾಸ್ ಹೈಕೋರ್ಟ್ ಕೊಲೆ ಪ್ರಕರಣದ ಎಲ್ಲ 25 ಆರೋಪಿಗಳನ್ನು ಖುಲಾಸೆಗೊಳಿಸಿತು. ಆದರೆ ಈ ನಂಬಲಾಗದ ದೌರ್ಜನ್ಯದ ಕುರಿತು ದಾಖಲಿಸಿದ ಮಹಾನ್ ಚರಿತ್ರಕಾರರಲ್ಲಿ ಒಬ್ಬರಾದ ಮೈಥಿಲಿ ಶಿವರಾಮನ್, ಹತ್ಯಾಕಾಂಡವನ್ನು ಬೆಳಕಿಗೆ ತಂದಿದ್ದಲ್ಲದೆ, ವರ್ಗ ಮತ್ತು ಜಾತಿ ದಬ್ಬಾಳಿಕೆಗೆ ಆಧಾರವಾಗಿರುವ ಸಮಸ್ಯೆಗಳ ಕುರಿತಾಗಿಯೂ ಸಹ ಪ್ರಬಲ ಮತ್ತು ವ್ಯಾಪಕ ವಿಶ್ಲೇಷಣೆಯನ್ನು ಬರೆಯುತ್ತಲೇ ಇದ್ದರು. ವಾರದ ಹಿಂದೆ ತನ್ನ 81ನೇ ವಯಸ್ಸಿನಲ್ಲಿ ಕೋವಿಡ್ -19ಕ್ಕೆ ಬಲಿಯಾದ ಮೈಥಿಲಿ ಶಿವರಾಮನ್ ಅವರ ನೆನಪಿನಲ್ಲಿ ನಾವು ಈ ಕವಿತೆಯನ್ನು ಪ್ರಕಟಿಸುತ್ತಿದ್ದೇವೆ.
ನಲವತ್ತನಾಲ್ಕು ಕಲ್ಲಿನ ಮುಷ್ಟಿಗಳು
ಛಾವಣಿಯಿಲ್ಲದ
ಗುಡಿಸಲುಗಳು
ಗೋಡೆಗಳಿಲ್ಲದ
ಗುಡಿಸಲುಗಳು
ಸುಟ್ಟು ಬೂದಿಯಾದವು
ಗುಡಿಸಲುಗಳು
ಬೂದಿಯಾದವು
ನಲತ್ನಾಲ್ಕು
ಬಿಗಿದ ಮುಷ್ಟಿಗಳು
ಚೇರಿಯಲ್ಲಿ ಸಾಲಾದವು
ಆಕ್ರೋಶದ ಸ್ಮರಣಿಕೆಯಂತೆ,
ಯುದ್ಧದ ಶೋಕಾಚರಣೆಯಂತೆ,
ಕಣ್ಣೀರು ತಣ್ಣಗಿನ
ಬೆಂಕಿಯಾದಂತೆ
1968ರ ಡಿಸೆಂಬರ್
25ರ ಕರಾಳ ರಾತ್ರಿಯ ಸಾಕ್ಷಿಗಳಾಗಿ.
ಅಂದಿನ ಕ್ರಿಸ್ಮಸ್
ಸಂತಸ ತರಲಿಲ್ಲ.
44 ಜನರ ಕಥೆಯನ್ನು
ಕೇಳಿ,
ಅವರಲ್ಲಿ ಒಬ್ಬೊಬ್ಬರ
ಕತೆಯನ್ನೂ ಕೇಳಿ
ಗೋಡೆಗಳಿಲ್ಲದ ಗುಡಿಸಲುಗಳು
ಸುಟ್ಟು ಬೂದಿಯಾದವು ಗುಡಿಸಲುಗಳು
ಬೂದಿಯಾದವು
ನಾಲ್ಕು ಪಾವು ಭತ್ತದ ಹಿಂದಿನ ಕತೆನಾಲ್ಕು ಪಾವು ಸಾಲುವುದಿಲ್ಲ, ಸಾಲುವುದಿಲ್ಲವೆಂದರು
ನಾಲ್ಕು ಪಾವು ಸಾಲದು ಭೂರಹಿತ ಹಸಿದ ಜನರಿಗೆ.
ಅವರು ಅನ್ನಕ್ಕಾಗಿ ಹಸಿದಿದ್ದರು, ಭೂಮಿಗಾಗಿ ಹಸಿದಿದ್ದರು,
ಬೀಜಗಳಿಗಾಗಿ ಹಸಿದಿದ್ದರು, ತಮ್ಮ ಬೇರುಗಳಿಗಾಗಿ ಹಸಿದಿದ್ದರು,
ತಮ್ಮ ಮುರಿದ ಬೆನ್ನು ಮೂಳೆಗಳ ಮರಳಿ ಪಡೆಯಲು ಹಸಿದಿದ್ದರು.
ತಮ್ಮ ಶ್ರಮ, ತಮ್ಮ ಬೆವರು, ತಮ್ಮ ಕೆಲಸದ ಫಲಕ್ಕಾಗಿ ಹಸಿದಿದ್ದರು.
ತಮ್ಮ ನೆರೆಯ ಭೂಮಾಲಿಕರಿಗೆ ಸತ್ಯವನ್ನು ತೋರಿಸಲೆಂದು ಹಸಿದಿದ್ದರು.
ಛಾವಣಿಯಿಲ್ಲದ ಗುಡಿಸಲುಗಳುಗೋಡೆಗಳಿಲ್ಲದ ಗುಡಿಸಲುಗಳು
ಸುಟ್ಟು ಬೂದಿಯಾದವು ಗುಡಿಸಲುಗಳು
ಬೂದಿಯಾದವು
ಅವರಲ್ಲಿ ಕೆಲವರು ಕೆಂಬಣ್ಣ ತೊಟ್ಟುಕತ್ತಿ ಸುತ್ತಿಗೆ ಹಿಡಿದಿದ್ದರು
ಮತ್ತು ತಮ್ಮ ತಲೆಯಲ್ಲಿ ಹಲವು ಯೋಜನೆಗಳನ್ನು.
ಎಲ್ಲರೂ ಬಡವರಾಗಿದ್ದರು, ಆಕ್ರೋಶಿತ ದಲಿತ ಮಹಿಳೆ ಪುರುಷರಾಗಿದ್ದರು,
ಬಂಡಾಯವೆದ್ದಿದ್ದ ಕಾರ್ಮಿಕರ ಮಕ್ಕಳಾಗಿದ್ದರು ಅವರು.
ನಾವು ಸಂಘಟಿತರಾಗಿದ್ದೇವೆ, ನಾವೆಲ್ಲರೂ ಸಂಘಟಿತರಾಗಿದ್ದೇವೆನ್ನುವುದು ಅವರ ಘೋಷಣೆಯಾಗಿತ್ತು.
ನಾವು ಮಾಲಿಕರ ಗದ್ದೆಗಳ ಕೊಯಿಲು ಮಾಡುವುದಿಲ್ಲ.
ತಮಗೆ ತಿಳಿದ ಬಗೆಯಲ್ಲೇ ತಮ್ಮ ನೋವನ್ನು ಹಾಡಾಗಿಸುತ್ತಿದ್ದರವರು
ಅವರ ಬೆಳೆಯನ್ನು ಯಾರಿಗಾಗಿಯೋ ಕೊಯಿಲು ಮಾಡಬೇಕಿತ್ತು
ಛಾವಣಿಯಿಲ್ಲದ ಗುಡಿಸಲುಗಳುಗೋಡೆಗಳಿಲ್ಲದ ಗುಡಿಸಲುಗಳು
ಸುಟ್ಟು ಬೂದಿಯಾದವು ಗುಡಿಸಲುಗಳು
ಬೂದಿಯಾದವು
ಮಾಲಿಕರು ಎಂದರೆ ಕರುಣೆಯಿಲ್ಲದವರು,ಬುದ್ಧಿವಂತಿಕೆಯ ಲೆಕ್ಕಾಚಾರ ಹಾಕಬಲ್ಲವರು.
ನೆರೆಯ ಊರಿನ ಆಳುಗಳ ತಂದರು
ಊರಿನ ಆಳುಗಳಲ್ಲಿ “ಕ್ಷಮೆ ಕೇಳಿ”ಯೆಂದು ಜೋರು ಮಾಡಿದರು.
ತಿರುಗಿ ಬಿದ್ದ ಆಳುಗಳು ಕೇಳಿದರು “ಏಕೆ ಕ್ಷಮೆ ಯಾಚನೆ?”
ಅಷ್ಟೇ ಸಾಕಾಯಿತು ಭೂಮಾಲಿಕರಿಗೆ
ಊರಿನೊಳಗೆ ಅವರ ಬಂಧಿಸಿ ಸುಟ್ಟು ಬೂದಿಯಾಗಿಸಲು
ಗಂಡಸರು, ಹೆಂಗಸರು, ಮಕ್ಕಳು, ಮುದುಕರು ಎಲ್ಲರೂ ಸೇರಿದರು ಗುಡಿಸಲಿನೊಳಗೆ
ಹೊತ್ತಿ ಉರಿಯಿತು ಊರು ಉರಿ ಜ್ವಾಲೆಯೊಳಗೆ.
22 ಮಕ್ಕಳು, 18 ಹೆಂಗಸರು ಮತ್ತು ನಾಲ್ಕು ಗಂಡಸರು
ಎಲ್ಲರನೂ ಕೊಂದರು ಗುಂಡಿಕ್ಕಿ, ಬೆಂಕಿಯಿಕ್ಕಿ.
ಕೀಳ್‌ವೆನ್ಮಣಿಯೆನ್ನುವುದು ಕಗ್ಗೊಲೆಗೆ ಸಾಕ್ಷಿಯಾಯಿತು
ಎಲ್ಲರೂ ಇತಿಹಾಸದ ಪುಟ ಸೇರಿ ಹೋದರು
ಅವರೆಲ್ಲ ಬದುಕಿದ್ದಾರೆ ಈಗ ಇತಿಹಾಸದ ಪತ್ರಿಕೆಯ ಪುಟಗಳಲ್ಲಿ,
ಕಾದಂಬರಿಗಳಲ್ಲಿ ಮತ್ತು ಪ್ರಬಂಧಗಳಲ್ಲಿ
ಛಾವಣಿಯಿಲ್ಲದ ಗುಡಿಸಲುಗಳುಗೋಡೆಗಳಿಲ್ಲದ ಗುಡಿಸಲುಗಳು
ಸುಟ್ಟು ಬೂದಿಯಾದವು ಗುಡಿಸಲುಗಳು
ಬೂದಿಯಾದವು
* ಚೇರಿ: ಸಾಂಪ್ರದಾಯಿಕವಾಗಿ, ತಮಿಳುನಾಡಿನ ಹಳ್ಳಿಗಳನ್ನು ಊರುಗಳೆಂದು ವಿಂಗಡಿಸಲಾಗಿದೆ, ಅಲ್ಲಿ ಪ್ರಬಲ ಜಾತಿಗಳು ವಾಸಿಸುತ್ತವೆ, ಮತ್ತು ದಲಿತರು ವಾಸಿಸುವ ಸ್ಥಳವನ್ನು ಚೇರಿ (ಕೇರಿ) ಎನ್ನುತ್ತಾರೆ.
* ಕವಿತೆಯಲ್ಲಿ ಬಳಸಲಾದ ಪಲ್ಲವಿ - ಛಾವಣಿಯಿಲ್ಲದ ಗುಡಿಸಲುಗಳು / ಗೋಡೆಗಳಿಲ್ಲದ ಗುಡಿಸಲುಗಳು / ಗುಡಿಸಲುಗಳು ನೆಲಕ್ಕುರುಳಿವೆ ಬೂದಿಯಾಗಿ - 1968ರಲ್ಲಿ ಮೈಥಿಲಿ ಶಿವರಾಮನ್ ಅವರು ಬರೆದ ಜಂಟಲ್‌ಮೆನ್ ಕಿಲ್ಲರ್ಸ್ ಆಫ್ ಕೀಳ್‌ವೆನ್ಮಣಿ ಎಂಬ ಶೀರ್ಷಿಕೆಯ ಪ್ರಬಂಧದ ಆರಂಭಿಕ ಸಾಲುಗಳಿಂದ ಎತ್ತಿಕೊಳ್ಳಲಾಗಿದೆ. ಇದು ಪೊಲಿಟಿಕಲ್ ವೀಕ್ಲಿಯಲ್ಲಿ ಪ್ರಕಟವಾಗಿದೆ, (ಮೇ 26, 1973, ಸಂಪುಟ. 8, ಸಂಖ್ಯೆ 23, ಪಿಪಿ. 926-928.)
* ಈ ಸಾಲುಗಳು ಮೈಥಿಲಿ ಶಿವರಾಮನ್ ಅವರ ಪುಸ್ತಕ ಹಾಂಟೆಡ್ ಬೈ ಫೈರ್: ಎಸ್ಸೇಸ್ ಆನ್ ಕ್ಯಾಸ್ಟ್, ಕ್ಲಾಸ್, ಎಕ್ಸ್ಪ್ಲಾಯ್ಟೇಷನ್ ಎಂಡ್ ಇಮ್ಯಾನ್ಸಿಪೇಷನ್, ಲೆಫ್ಟ್ ವರ್ಡ್ ಬುಕ್ಸ್, 2016 ಇದರಲ್ಲೂ ಇವೆ.
ಆಡಿಯೋ:
ಸುಧನ್ವ ದೇಶಪಾಂಡೆ ಅವರು ನಟ ಮತ್ತು
ನಿರ್ದೇಶಕರಾಗಿ ದ್ದು, ಜನ ನಾಟ್ಯ ಮಂಚ್
ವೇದಿಕೆಯೊಂದಿಗೆ ಗುರುತಿಸಿಕೊಂಡಿದ್ದಾರೆ, ಮತ್ತು
ಲೆಫ್ಟ್ ವರ್ಡ್ ಬುಕ್ಸ್ ನಲ್ಲಿ ಸಂಪಾದಕರಾಗಿದ್ದಾರೆ.
ಅನುವಾದ: ಶಂಕರ ಎನ್. ಕೆಂಚನೂರು