“ಭಾದೋಹಿ ಹಾಸುಗಂಬಳಿಗೆ ಹೆಸರಾದ ಜಿಲ್ಲೆ. ಆದರೆ, ಇಲ್ಲಿ ಕೆಲಸ ಇಲ್ಲ” ಎಂದು ನಲವತ್ತರ ಹರೆಯದ ನೇಕರ ಅಖ್ತರ್ ಅಲಿ ಹೇಳಿದರು. “ನನ್ನ ಬಾಲ್ಯ ಕಳೆದುದು ಇಲ್ಲಿಯೇ. ಹಾಗಾಗಿಯೇ ನಾನು ಹಾಸುಗಂಬಳಿ ನೇಯುವುದನ್ನು ಕಲಿತೆ”. ಆದರೆ, ನೇಕಾರಿಕೆಯಲ್ಲಿ ಆದಾಯ ಕುಂಟಿತವಾದ ಕಾರಣ ಅಲಿ ಈಗ ಟೈಲರಿಂಗ್ ಮಾಡುತ್ತಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರ್ ವಿಭಾಗದ ಭಾದೊಹಿ ಜಿಲ್ಲೆ ದೇಶದ ಅತಿ ದೊಡ್ಡ ಹಾಸುಗಂಬಳಿ ನೇಕಾರಿಕೆಯ ಕ್ಲಸ್ಟರ್ನ ಕೇಂದ್ರ ಸ್ಥಾನ. ಈ ಕ್ಲಸ್ಟರ್ ನೊಳಗೆ ಮಿಜಾಪುರ, ವಾರಣಾಸಿ, ಗಾಝಿಪುರ, ಸೋನಭದ್ರಾ, ಕೌಶಂಭಿ, ಅಲ್ಲಹಾಬಾದ್, ಜಾನ್ಪುರ್, ಚಂದೌಲಿ ಸೇರುತ್ತವೆ. ಈ ಉದ್ಯಮವು ಅಪಾರ ಸಂಖ್ಯೆಯ ಮಹಿಳೆಯರೂ ಸೇರಿದಂತೆ ಸುಮಾರು ಎರಡು ಮಿಲಿಯನ್ ಗ್ರಾಮೀಣ ಕರಕುಶಲ ಕಾರ್ಮಿಕರಿಗೆ ಉದ್ಯೋಗಾವಕಾಶ ಒದಗಿಸುತ್ತದೆ.
ಇಲ್ಲಿನ ನೇಯುವ ವಿಧಾನ ಕೂಡ ವಿಶಿಷ್ಟವಾದುದು. ಕೈಯಿಂದ ಹೆಣೆಯುವ ಈ ಹಾಸುಗಂಬಳಿಗಳನ್ನು ಲಂಬಾಕೃತಿಯ ಮಗ್ಗಗಳನ್ನು ಬಳಸಿ ನೇಯಲಾಗುತ್ತದೆ. ಒಂದು ಚದರ ಇಂಚಿಗೆ 30 ರಿಂದ 300 ಹೆಣಿಕೆ ಹಾಕಲಾಗುತ್ತದೆ. ನೇಯುವ ಪ್ರಕ್ರಿಯೆ ಮತ್ತು ಬಳಸುವ ಕಚ್ಚಾ ವಸ್ತು- ಉಣ್ಣೆ, ಹತ್ತಿ ಮತ್ತು ರೇಶ್ಮೆ ನೂಲು- ಕಳೆದ ಇನ್ನೂರು ವರ್ಷಗಳಿಂದ ಬದಲಾಗಿಲ್ಲ. ಮಗ್ಗದ ಮೇಲೆ ನೂಲು ಹೆಣೆಯುವ ಕಲೆಯನ್ನು ಕಾರ್ಮಿಕರು ತಮ್ಮ ಮಕ್ಕಳಿಗೆ ಕಲಿಸಿಕೊಡುತ್ತಾರೆ.
ವಿಶಿಷ್ಟ ನೇಯ್ಗೆ ವಿಧಾನ ಇಲ್ಲಿ ಅನುಸರಿಸುವ ಕಾರಣ ಭಾದೊಹಿ ಹಾಸುಗಂಬಳಿಗಳಿಗೆ 2010ರಲ್ಲಿ ಜಿಯಾಗ್ರಫಿಕಲ್ ಇಂಡಿಕೇಶನ್ ಪ್ರಮಾಣಪತ್ರ ಲಭಿಸಿದೆ. ಜಿಐ ಟ್ಯಾಗ್ ದೊರೆತ ಬಳಿಕ ಈ ಉದ್ಯಮ ಬೆಳೆಯುತ್ತದೆ ಎಂದು ಆಶಿಸಲಾಗಿತ್ತು. ಆದರೆ, ಅದರಿಂದ ಹಾಸುಗಂಬಳಿ ನೇಕಾರರ ವ್ಯಾಪಾರದಲ್ಲಿ ವೃದ್ಧಿಯೇನೂ ಕಂಡುಬAದಿಲ್ಲ.
ಉದಾಹರಣೆಗೆ, 1935ರಲ್ಲಿ ಅಸ್ಥಿತ್ವಕ್ಕೆ ಬಂದಿದ್ದ ಮುಬಾರಕ್ ಅಲಿ ಎಂಡ್ ಸನ್ಸ್ ಮಳಿಗೆ 2016ರಲ್ಲಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸುವ ತನಕ ಇಂಗ್ಲೆAಡ್, ಅಮೇರಿಕಾ ಸಂಯುಕ್ತ ಸಂಸ್ಥಾನ, ಐರೋಪ್ಯ ಒಕ್ಕೂಟ ಮತ್ತು ಜಪಾನ್ ದೇಶಗಳಿಗೆ ಹಾಸುಗಂಬಳಿಗಳನ್ನು ರಫ್ತು ಮಾಡುತ್ತಿತ್ತು. ಮಳಿಗೆಯ ಮಾಜಿ ಮಾಲಕ ಮತ್ತು ಸಂಸ್ಥಾಪಕ ಮುಬಾರಕ್ ಅವರ ಮೊಮ್ಮಗ 67 ವರ್ಷ ಪ್ರಾಯದ ಖಾಲಿದ್ ಖಾನ್ ಹೇಳುವಂತೆ, “ನನ್ನ ಅಜ್ಜ ಮತ್ತು ಅಪ್ಪ ಇದೇ ವ್ಯವಹಾರ ಮಾಡಿಕೊಂಡಿದ್ದರು. ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ ನಮ್ಮ ವ್ಯಾಪಾರ ಶುರುವಾಗಿತ್ತು ಮತ್ತು ಆಗ ‘ಮೇಡ್ ಇನ್ ಬ್ರಿಟಿಷ್ ಇಂಡಿಯಾ’ ಎಂಬ ಲೇಬಲ್ ಹೊಂದಿದ್ದ ಹಾಸುಗಂಬಳಿಗಳು ಇಲ್ಲಿಂದ ರಫ್ತಾಗುತ್ತಿದ್ದವು.
ಭಾರತದ ಹಾಸುಗಂಬಳಿ ಉದ್ಯಮ ಶತಮಾನಗಳಷ್ಟು ಹಳೆಯದು. ಐತಿಹಾಸಿಕ ಶಾಖಲೆಗಳ ಪ್ರಕಾರ ಈ ಉದ್ಯಮ ಮೊಘಲ್ ಕಾಲದಲ್ಲಿ, ಅದರಲ್ಲೂ ಮುಖ್ಯವಾಗಿ 16ನೇ ಶತಮಾನದಲ್ಲಿ ಅಕ್ಬರನ ಆಳ್ವಿಕೆಯಡಿ ಉಚ್ಛ್ರಾಯ ಸ್ಥಿತಿ ತಲುಪಿತ್ತು. ಭದೋಹಿ ಪ್ರದೇಶದಲ್ಲಿ ಕೈಮಗ್ಗದ ಹಾಸುಗಂಬಳಿಗಳ ದೊಡ್ಡ ಪ್ರಮಾಣದ ಉತ್ಪಾದನೆ 19ನೇ ಶತಮಾನದಿಂದ ಆರಂಭವಾಯಿತು.
ಈಗ ಇಲ್ಲಿ ಉತ್ಪಾನೆಗೊಳ್ಳುವ ಹಾಸುಗಂಬಳಿಗಳು ಜಗತ್ತಿನಾದ್ಯಂತ ರಫ್ತಾಗುತ್ತವೆ. ಭಾರತದಲ್ಲಿ ಉತ್ಪಾದನೆಯಾಗುವ ಒಟ್ಟೂ ಹಾಸುಗಂಬಳಿಗಳ ಪೈಕಿ ಶೇ. 90ರಷ್ಟು ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ರಫ್ತಾಗುತ್ತದೆ. ಇದು ಆ ದೇಶದ ಜೊತೆಗಿನ ಒಟ್ಟು ರಫ್ತು ವ್ಯಾಪಾರದ ಅರ್ಧ ಭಾಗಕ್ಕಿಂತಲೂ ಹೆಚ್ಚು, ಎಂದು ಕಾರ್ಪೆಟ್ ಎಕ್ಸ್ಪೋರ್ಟ್ ಪ್ರೊಮೊಶನ್ ಕೌನ್ಸಿಲ್ ಅಧಿಕಾರಿಗಳು ಹೇಳುತ್ತಾರೆ. 2021-22ರ ಸಾಲಿನಲ್ಲಿ ಭಾರತದಿಂದ ಒಟ್ಟು 2.23 ಬಿಲಿಯನ್ ಡಾಲರ್ (ರೂ. 16,640 ಕೋಟಿ) ಮೌಲ್ಯದ ಹಾಸುಗಂಬಳಿಗಳು ರಫ್ತಾಗಿವೆ . ಇವುಗಳ ಪೈಕಿ ಕೈಮಗ್ಗದ ಹಾಸುಗಂಬಳಿಗಳ ಪಾಲು 1.51 ಮಿಲಿಯನ್ ಡಾಲರ್ (ರೂ. 11,231 ಕೋಟಿ).
ಆದರೆ, ಭದೋಹಿಯ ಹಾಸುಗಂಬಳಿಗಳಿಗೆ ಚೀನಾದ ಅಗ್ಗದ ಬೆಲೆಯ ಹಾಸುಗಂಬಳಿಗಳಿAದ ಅದರಲ್ಲೂ ಮುಖ್ಯವಾಗಿ ಚೀನಾದಂತಹ ದೇಶಗಳಲ್ಲಿ ಯಂತ್ರಗಳನ್ನು ಬಳಸಿ ಉತ್ಪಾದಿಸುವ ತುರುಸಿನ ಸ್ಪರ್ಧೆ ಎದುರಾಗಿದೆ. “ನಕಲಿ ಹಾಸುಗಂಬಳಿಗಳು ಈಗ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯ. ವ್ಯಾಪಾರಿಗಳು ಮತ್ತು ಹಣವಂತರು ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಚೀನಾದ ಹಾಸುಗಂಬಳಿಗಳ ಬಗ್ಗೆ ಮಾತನಾಡುತ್ತ ಅಲಿ ಹೇಳಿದರು.
ಭದೋಹಿಯ ಇನ್ನೋರ್ವ ನಿವಾಸಿ 45 ವರ್ಷ ಪ್ರಾಯದ ಉರ್ಮಿಳಾ ಪ್ರಜಾಪತಿ ಅವರಿಗೆ ನೇಯುವ ಕಲೆ ಹೆತ್ತವರ ಬಳುವಳಿ. ಆದರೆ, ಆದಾಯದಲಿ ಆಗಿರುವ ಕಡಿತ ಮತ್ತು ಆರೋಗ್ಯ ಸಮಸ್ಯೆಗಳ ಕಾರಣ ಆಕೆ ನೇಯ್ಗೆ ನಿಲ್ಲಿಸಿದ್ದಾರೆ. “ನನಗೆ ನೇಯ್ಗೆ ಕಲಿಸಿದ್ದು ನಮ್ಮ ಅಪ್ಪ. ನಮ್ಮ ಮನೆಯಲ್ಲೇ. ನಾವೆಲ್ಲ ದುಡಿದು ಸಂಪಾದಿಸಬೇಕು ಮತ್ತು ಸ್ವತಂತ್ರ ಬದುಕು ನಡೆಸಬೇಕು ಎಂಬುದು ಅವರ ಇಚ್ಛೆಯಾಗಿತ್ತು. ನನಗೆ ಕಣ್ಣು ಮಂಜಾಗುವ ಸಮಸ್ಯೆ ಕಾಣಿಸಿತು. ನೇಯ್ಗೆ ನಿಲ್ಲಿಸಿದರೆ, ಕಣ್ಣಿನ ಸಮಸ್ಯೆ ಸರಿಹೋಗಬಹುದು ಎಂದಿದ್ದಾರೆ. ಹಾಗಾಗಿ, ನೇಯ್ಗೆ ನಿಲ್ಲಿಸಿದ್ದೇನೆ” ಎಂದರು.
ಕನ್ನಡಕ ಧರಿಸುವ ಉರ್ಮಿಳಾಗೆ ಮತ್ತೊಮ್ಮೆ ನೇಯ್ಗೆ ಆರಂಭಿಸುವ ಯೋಚನೆ ಇದೆ. ಭದೋಹಿಯ ಇತರ ಎಲ್ಲರ ಹಾಗೆ ತಾನು ಬಳುವಳಿಯಾಗಿ ಪಡೆದಿರುವ ನೇಯ್ಗೆ ಕಲೆಯ ಬಗ್ಗೆ ಆಕೆಗೆ ಕೂಡ ಹೆಮ್ಮೆಯಿದೆ. ಆದರೆ, ಈ ವಿಡಿಯೋದಲ್ಲಿ ಕಾಣಿಸಿರುವ ಹಾಗೆ ಕುಂದುತ್ತಿರುವ ರಫ್ತು ವ್ಯಾಪಾರ, ಅನಿಶ್ಚಿತ ಮಾರುಕಟ್ಟೆ ಮತ್ತು ಇದರ ಫಲಸ್ವರೂಪವಾಗಿ ನೇಕಾರರು ತಮ್ಮ ಕುಲ ಕಸುಬು ತೊರೆಯುತ್ತಿರುವ ಕಾರಣ ಹಲವು ಶತಮಾನಗಳಿಂದ “ಹಾಸುಗಂಬಳಿ ಜಿಲ್ಲೆ” ಎಂಬ ಹೆಗ್ಗಳಿಕೆಗೆ ಪಾತ್ರವಾಘಿರುವ ಭದೋಹಿ ಜಿಲ್ಲೆ ತನ್ನ ಹಿರಿಮೆ ಕಳೆದುಕೊಳ್ಳುವ ಅಪಾಯ ಎದುರಿಸುತ್ತಿದೆ.
ಅನುವಾದ: ದಿನೇಶ ನಾಯಕ್