ರುಖ್ಸಾನಾ ಖಾತೂನ್ ತನ್ನ ಕುಟುಂಬಕ್ಕೆ ಆಹಾರ ಹೊಂದಿಸುವ ಬಗ್ಗೆ ಇನ್ನು ಮುಂದೆ ಚಿಂತಿಸಬೇಕಾಗಿಲ್ಲ ಎಂದು ಭಾವಿಸಿದ್ದರು. ಅದು 2020ರ ನವೆಂಬರ್ ಮತ್ತು, ಎರಡು ವರ್ಷಗಳ ಕಾಲ ಎಳೆಯಲ್ಪಟ್ಟು ಮೂರನೇ ಪ್ರಯತ್ನದ ನಂತರ, ಆಗತಾನೆ ಪಡಿತರ ಚೀಟಿಯನ್ನು ಪಡೆದಿದ್ದರು. ಇದ್ದಕ್ಕಿದ್ದಂತೆ, ಸಾಂಕ್ರಾಮಿಕ ಪಿಡುಗಿನ ವರ್ಷದ ಕೆಟ್ಟ ತಿಂಗಳುಗಳು ಅವರ ಹಿಂದೆ ಇದ್ದಂತೆ ತೋರಿತು.

ಇದು 'ಆದ್ಯತಾ ಕುಟುಂಬ' ಕಾರ್ಡ್ ಆಗಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA), 2013ರ ಅಡಿಯಲ್ಲಿನ ಒಂದು ವರ್ಗವಾಗಿದೆ, ಇದಕ್ಕಾಗಿ ಅರ್ಹ ಫಲಾನುಭವಿಗಳನ್ನು ರಾಜ್ಯ ಸರ್ಕಾರಗಳು ಗುರುತಿಸುತ್ತವೆ.

ಅದರಲ್ಲಿ ಅವರು ಆ ಸಮಯದಲ್ಲಿ ವಾಸಿಸುತ್ತಿದ್ದ ಅವರ ಪೂರ್ವಜರ ಮನೆಯ ವಿಳಾಸವನ್ನು ಒಳಗೊಂಡಿತ್ತು - ಬಿಹಾರದ ದರ್ಭಾಂಗಾ ಜಿಲ್ಲೆಯ ಧೂಳಿನಿಂದ ಕೂಡಿದ ಮುನ್ಸಿಪಲ್ ಕೌನ್ಸಿಲ್ ಪ್ರದೇಶದೊಂದಿಗೆ ಇತ್ತೀಚೆಗೆ ವಿಲೀನಗೊಂಡ ಗ್ರಾಮ. ರುಖ್ಸಾನಾ ತನ್ನ ಏಳು ಜನರ ಕುಟುಂಬಕ್ಕೆ ಕೊನೆಗೂ ಸಬ್ಸಿಡಿ ಪಡಿತರವನ್ನು ಪಡೆದರು.

ನಂತರ ಅವರೆಲ್ಲರೂ ಆಗಸ್ಟ್ 2021 ರಲ್ಲಿ ದೆಹಲಿಗೆ ಮರಳಿದರು ಮತ್ತು ಅವರ ಕುಟುಂಬವು ಮತ್ತೊಮ್ಮೆ ಕಾನೂನುಬದ್ಧವಾಗಿ ಅರ್ಹವಾದ ಆಹಾರ ಧಾನ್ಯ ಪಡೆಯಲು ಸಾಧ್ಯವಾಗಲಿಲ್ಲ.

ಕೇಂದ್ರ ಸರ್ಕಾರದ ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್ (ONORC) ಯೋಜನೆಯಡಿ, NFSAಯ ಫಲಾನುಭವಿಗಳನ್ನು - 'ಆದ್ಯತಾ ಕುಟುಂಬಗಳು' ಮತ್ತು 'ಬಡವರಲ್ಲಿ ಬಡವರು' ಅಡಿಯಲ್ಲಿ ವರ್ಗೀಕರಿಸಲಾಗಿದೆ - ಇವರು ಯಾವುದೇ ನ್ಯಾಯಬೆಲೆ ಅಂಗಡಿಯಿಂದ ತಮ್ಮ ಆಹಾರ ಧಾನ್ಯಗಳ ಕೋಟಾವನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಆಧಾರ್ ಲಿಂಕ್ ಮಾಡಲಾಗಿರುವ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಿಕೊಂಡು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ವಸ್ತುಗಳನ್ನು ವಿತರಿಸಲು ಅಂಗಡಿಗಳಿಗೆ ಪರವಾನಗಿ ನೀಡಲಾಗಿದೆ. ಆದರೆ ಪ್ರತಿ ಬಾರಿಯೂ ರುಖ್ಸಾನಾ ತನ್ನ ಮಾಸಿಕ ಪಾಲಿಗಾಗಿ ಪಶ್ಚಿಮ ದೆಹಲಿಯ ಶಾದಿಪುರ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿನ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಹೋದಾಗ, ಎಲೆಕ್ಟ್ರಾನಿಕ್ ಪಾಯಿಂಟ್-ಆಫ್-ಸೇಲ್ (ePOS) ಯಂತ್ರವು ಹೀಗೆ ತೋರಿಸುತ್ತದೆ: 'IMPDS ದಾಖಲೆಯಲ್ಲಿ ಈ ಪಡಿತರ ಚೀಟಿ ಕಂಡುಬಂದಿಲ್ಲ'.

PDS ಅಡಿಯಲ್ಲಿ ವಿತರಿಸಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಿದರೆ, ಅರ್ಹ ವಲಸಿಗರು ONORC ಯೋಜನೆಯಡಿ ದೇಶದ ಯಾವುದೇ ಭಾಗದಿಂದ ತಮ್ಮ ಹಕ್ಕಿನ ಆಹಾರ ಧಾನ್ಯ ಪಡೆಯಲು ಅನುವು ಮಾಡಿಕೊಡಲು 2018ರಲ್ಲಿ ಇಂಟಿಗ್ರೇಟೆಡ್ ಮ್ಯಾನೇಜ್ಮೆಂಟ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ( IMPDS ) ಸ್ಥಾಪಿಸಲಾಯಿತು.

Rukhsana Khatoon and her eldest children Kapil and Chandni in their rented room in Shadipur Main Bazaar area of West Delhi.
PHOTO • Sanskriti Talwar
PHOTO • Sanskriti Talwar

ಎಡ: ರುಖ್ಸಾನಾ ಖಾತೂನ್ ಮತ್ತು ಅವರ ಹಿರಿಯ ಮಕ್ಕಳಾದ ಕಪಿಲ್ ಮತ್ತು ಚಾಂದಿನಿ ಪಶ್ಚಿಮ ದೆಹಲಿಯ ಶಾದಿಪುರ್ ಮೇನ್ ಬಜಾರ್ ಪ್ರದೇಶದ ತಮ್ಮ ಬಾಡಿಗೆ ಕೋಣೆಯಲ್ಲಿ. ಬಲ: ರುಖ್ಸಾನಾ ತನ್ನ ಕಿರಿಯ ಮಗಳು ಆಸಿಯಾಳನ್ನು ಎತ್ತಿಕೊಂಡಿದ್ದರೆ, ಅವಳ ಮೂರು ವರ್ಷದ ಮಗಳು ಜಮ್ಜಮ್ ತನ್ನ ಫೋನ್‌ ಜೊತೆ ಆಡುತ್ತಿದ್ದಾಳೆ

ಅಕ್ಟೋಬರ್ 2020ರಲ್ಲಿ, ದೆಹಲಿಯಲ್ಲಿ ಮನೆಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿರುವ ರುಖ್ಸಾನಾ ಅವರು ಕೋವಿಡ್ -19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದರಿಂದ ಪಡಿತರ ಚೀಟಿ ಪಡೆಯಲು ತೀವ್ರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು PARI ವರದಿ ಮಾಡಿತ್ತು. ಉಚಿತ ಆಹಾರ ವಿತರಿಸುವ ಸ್ಥಳಗಳಲ್ಲಿ ಅವರು ಸರದಿಯಲ್ಲಿ ನಿಲ್ಲಬೇಕಾಯಿತು. ಮಾಡಲು ಕೆಲಸ ಸಿಗದೆ, PDS ಅಡಿಯಲ್ಲಿ ಆಹಾರ ಧಾನ್ಯಗಳು ಸಹ ಲಭ್ಯವಿರಲಿಲ್ಲ, ಹೀಗಾಗಿ ಕೊನೆಗೆ ಅವರು ತನ್ನ ಮಕ್ಕಳನ್ನು ಕರೆದುಕೊಂಡು ದರ್ಭಾಂಗಕ್ಕೆ ಮರಳಿದರು.

PARI ರುಖ್ಸಾನಾ ಕುರಿತು ತನ್ನ ವರದಿಯನ್ನು ಪ್ರಕಟಿಸಿದ ಕೆಲವು ವಾರಗಳ ನಂತರ, ಅಧಿಕಾರಿಗಳು ಬಿಹಾರದಲ್ಲಿ ರುಖ್ಸಾನಾರನ್ನು ಭೇಟಿಯಾದರು. ಕುಟುಂಬದ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿದ ನಂತರ ಅವರಿಗೆ ಪಡಿತರ ಚೀಟಿ ನೀಡಲಾಯಿತು.

"ಬಿಹಾರದಲ್ಲಿ, ನಾವು ನಮ್ಮ ಹೆಬ್ಬೆರಳನ್ನು [ePOS-ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಲ್ಲಿ] ಇಟ್ಟ ತಕ್ಷಣ ನಮ್ಮ ಪಡಿತರ ಬರುತ್ತದೆ" ಎಂದು ಅವರು ಹೇಳಿದರು. ಆಕೆ ಅಲ್ಲಿನ ಪಡಿತರ ಅಂಗಡಿಗೆ ಹೋಗಲು ಸಾಧ್ಯವಾಗದಿದ್ದರೆ, ಅವರ11 ವರ್ಷದ ಮಗ ಅಥವಾ 13 ವರ್ಷದ ಮಗಳು ದಿನಸಿಗಳನ್ನು ಮನೆಗೆ ತರುತ್ತಿದ್ದರು. "ಜಬ್ ಸಬ್ ಆನ್‌ಲೈನ್ ಹುವಾ ಹೈ, ಫಿರ್ ಕ್ಯೋಂ ನಹೀ ಆ ರಹಾ ಯಹಾನ್ [ಈಗ ನಾವು ಆನ್‌ಲೈನ್‌ ಕಾಲದಲ್ಲಿದ್ದೇವೆ, ನಮ್ಮ ವಿವರಗಳನ್ನು ಇಲ್ಲಿ (ದೆಹಲಿಯಲ್ಲಿ) ಏಕೆ ನೋಡಲಾಗುವುದಿಲ್ಲ?"

ರುಖ್ಸಾನಾ, 31, ಮತ್ತು ಅವರ ಪತಿ ಮೊಹಮ್ಮದ್ ವಕೀಲ್, 35, ಆಗಸ್ಟ್ 25, 2021ರಂದು ತಮ್ಮ ಐದು ಮಕ್ಕಳೊಂದಿಗೆ ರೈಲಿನಲ್ಲಿ ದೆಹಲಿಗೆ ಮರಳಿದರು. ಪಶ್ಚಿಮ ದೆಹಲಿಯ ಪಟೇಲ್ ನಗರದಲ್ಲಿ ನಾಲ್ಕು ಮನೆಗಳಲ್ಲಿ ಮನೆಗೆಲಸದವರಾಗಿ ತನ್ನ ಕೆಲಸವನ್ನು ಮುಂದುವರೆಸಿದರು, ಈ ಕೆಲಸದಿಂದ ಅವರು ತಿಂಗಳಿಗೆ ರೂ. 6,000 ಗಳಿಸುತ್ತಿದ್ದಾರೆ. ಬಿಹಾರಕ್ಕೆ ಹಿಂದಿರುಗುವ ಮೊದಲು, ವಕೀಲ್ 2020ರ ನವೆಂಬರ್ ತಿಂಗಳಿನಲ್ಲಿ ತಮ್ಮ ಟೈಲರಿಂಗ್ ಅಂಗಡಿಯನ್ನು ಮುಚ್ಚಿದರು ಮತ್ತು ಅಂತಿಮವಾಗಿ ಮಾರ್ಚ್ 2022ರಲ್ಲಿ ಈಶಾನ್ಯ ದೆಹಲಿಯ ಗಾಂಧಿ ನಗರ ಮಾರುಕಟ್ಟೆಯಲ್ಲಿ ಟೈಲರ್ ಆಗಿ ಕೆಲಸ ಪಡೆದರು. ಪ್ರಸ್ತುತ ಅವರ ಮಾಸಿಕ ಗಳಿಕೆ ರೂ. 8,000.

ಮಾರ್ಚ್ 2020ರಲ್ಲಿ ಕೋವಿಡ್ -19 ಲಾಕ್ಡೌನ್‌ಗೂ ಮೊದಲು, ದಂಪತಿಗಳ ಸಂಯೋಜಿತ ಆದಾಯವು ತಿಂಗಳಿಗೆ ಸುಮಾರು 27,000 ರೂ.ಗಳಷ್ಟಿತ್ತು.

Rukhasana’s husband, Mohammed Wakil, and their children outside their rented room.
PHOTO • Sanskriti Talwar
He works in the same room, tailoring clothes on his sewing machine
PHOTO • Sanskriti Talwar

ಎಡ: ರುಖ್ಸಾನಾ ಅವರ ಪತಿ ಮೊಹಮ್ಮದ್ ವಕೀಲ್ ಮತ್ತು ಅವರ ಮಕ್ಕಳು ತಮ್ಮ ಬಾಡಿಗೆ ಕೋಣೆಯ ಹೊರಗೆ. ಬಲ: ಅವರು ಅದೇ ಕೋಣೆಯಲ್ಲಿ ತನ್ನ ಹೊಲಿಗೆ ಯಂತ್ರದಲ್ಲಿ ಬಟ್ಟೆಗಳನ್ನು ಹೊಲಿಯುತ್ತಿದ್ದಾರೆ

ಸೆಪ್ಟೆಂಬರ್ 2021ರಿಂದ ಪಡಿತರ ಅಂಗಡಿಗೆ ಎಷ್ಟು ಬಾರಿ ಅಲೆದಾಡಿದ್ದೇನೆ ಎಂಬುದು ರುಖ್ಸಾನಾರಿಗೆ ಮರೆತುಹೋಗಿದೆ.

"ಬಿಹಾರದಿಂದ ಪಡಿತರ ಚೀಟಿಯನ್ನು ಬ್ಲಾಕ್ ಮಾಡಲಾಗಿದೆ ಎಂದು ಇಲ್ಲಿನ ವಿತರಕರು ಹೇಳಿದರು. ಅವರು ಬಿಹಾರಕ್ಕೆ ಹೋಗಿ ನಮ್ಮ ಎಲ್ಲಾ ಆಧಾರ್ ಕಾರ್ಡ್‌ಗಳನ್ನು ನನ್ನ ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಲು ಹೇಳಿದರು. ನನ್ನ ಮಾವ ಬೇನಿಪುರದ ಪಡಿತರ ಕಚೇರಿಗೆ ಹೋದರು ಆದರೆ ಅಲ್ಲಿ ದೆಹಲಿಯ ಪಡಿತರ ಕಚೇರಿಯಲ್ಲಿ ನಮ್ಮ ಎಲ್ಲಾ ಆಧಾರ್ ಕಾರ್ಡ್‌ಗಳನ್ನು ಸಲ್ಲಿಸಲು ಹೇಳಿದರು. ದೆಹಲಿಯಲ್ಲಿ ಕೇಳಿದರೆ, ಬಿಹಾರದಲ್ಲಿ ಪರಿಶೀಲಿಸಲು ಹೇಳುತ್ತಾರೆ.” ಎಂದು ರುಖ್ಸಾನಾ ಹೇಳುತ್ತಾರೆ.

*****

ಈಗ ರುಖ್ಸಾನಾ ತನ್ನ ಗ್ರಾಮವಾದ ಮೋಹನ್ ಬಹೇರಾದಲ್ಲಿ ವಾಸಿಸಲು ಬಯಸುತ್ತಾರೆ, ಇದನ್ನು ಇತರ 23 ಊರುಗಳೊಂದಿಗೆ ವಿಲೀನಗೊಳಿಸಿ 2009ರಲ್ಲಿ ದರ್ಭಾಂಗಾದಲ್ಲಿ ಬೇನಿಪುರ್ ನಗರ ಪರಿಷತ್ ಸ್ಥಾಪಿಸಲಾಗಿದೆ. "ನಾನು ನಮ್ಮ ಹಳ್ಳಿಯಲ್ಲಿ ಆರಾಮಾಗಿದ್ದೆ ಎನ್ನಿಸುತ್ತದೆ. ಅಲ್ಲಿ ನಾನು ಅಡುಗೆ ಮಾಡಿ ಮಕ್ಕಳಿಗೆ ತಿನ್ನಿಸಿ ನಾನು ತಿನ್ನುವುದು ಮತ್ತು ಅವರನ್ನು ನೋಡಿಕೊಳ್ಳುವುದು ಇಷ್ಟು ಮಾಡಿದರೆ ಸಾಕಿತ್ತು." ದೆಹಲಿಯಲ್ಲಿ, ತನ್ನ ಸ್ವಂತ ಕುಟುಂಬಕ್ಕಾಗಿ ಅಡುಗೆ ಮಾಡಲು ಸಮಯಕ್ಕೆ ಸರಿಯಾಗಿ ಹಿಂದಿರುಗುವ ಮೊದಲು ತನ್ನ ಉದ್ಯೋಗದಾತರ ಮನೆಗಳಲ್ಲಿ ಕೆಲಸವನ್ನು ಮುಗಿಸಲು ಹೋರಾಡಬೇಕು.

ಶಾದಿಪುರ ಮುಖ್ಯ ಬಜಾರ್‌ನಲ್ಲಿರುವ ವಸತಿ ಮನೆಗಳು ತಗ್ಗು-ಎತ್ತರದ ರಚನೆಗಳಾಗಿದ್ದು, ಮುಖ್ಯ ಮಾರುಕಟ್ಟೆ ರಸ್ತೆಯ ಸುತ್ತಲೂ ಸಣ್ಣ ಮನೆಗಳು ಹರಡಿಕೊಂಡಿವೆ. ರುಖ್ಸಾನಾ ಸೆಪ್ಟೆಂಬರ್ 2021ರಿಂದ ಇಲ್ಲಿ ವಾಸಿಸುತ್ತಿದ್ದಾರೆ- ಒಂದು ಸಣ್ಣ, ಇಕ್ಕಟ್ಟಾದ ಕೋಣೆ. ಇದರ ಬಾಡಿಗೆ ರೂ. 5,000. ಒಂದು ಕಡೆ ಅಡುಗೆ ಮಾಡಲು ಎತ್ತರದ ಕಟ್ಟೆ, ಇನ್ನೊಂದು ಕಡೆ ಹಾಸಿಗೆ. ಇವುಗಳಲ್ಲದೆ ವಕೀಲ್ ಹೊಲಿಗೆ ಯಂತ್ರ, ಬಟ್ಟೆ ಅಳತೆಗೆ ಬಳಸುವ ದೊಡ್ಡ ಟೇಬಲ್. ಕೋಣೆಯ ಬಾಗಿಲಿಗೆ ತಾಕಿದಂತೆ ಬಾತ್‌ರೂಮ್‌ ಇದೆ.

ರುಖ್ಸಾನಾ, ಅವರ ಮೂವರು ಕಿರಿಯ ಪುತ್ರಿಯರಾದ ನಜ್ಮಿನ್ (9), ಜಮ್ಜಮ್ (3) ಮತ್ತು ಒಂದು ವರ್ಷದ ಆಸಿಯಾ - ಕಬ್ಬಿಣದ ಹಾಸಿಗೆಯ ಮೇಲೆ ಮಲಗುತ್ತಾರೆ. ವಕೀಲ್, ಕಪಿಲ್ (11), ಹಿರಿಯ ಮಗಳು ಚಾಂದಿನಿ (13) - ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗುತ್ತಾರೆ.

“ಹಳ್ಳಿಗಳಲ್ಲಿ ದನಗಳಿಗೆ ಇದಕ್ಕಿಂತ ದೊಡ್ಡ ಕೋಣೆಗಳಿರುತ್ತವೆ. ನಾನು ತಮಾಷೆ ಮಾಡುತ್ತಿಲ್ಲ. ನಿಜಕ್ಕೂ ಇದಕ್ಕಿಂತಲೂ ದೊಡ್ಡ ಕೋಣೆಗಳಿರುತ್ತವೆ ಜಾಣುವಾರುಗಳಿಗೆ. ಇಲ್ಲಿ ಜನರೇ ಪ್ರಾಣಿಗಳಂತೆ ಬದುಕುತ್ತಾರೆ,” ಎನ್ನುತ್ತಾರೆ ವಕೀಲ್.‌

PHOTO • Sanskriti Talwar
PHOTO • Sanskriti Talwar

ಸೆಪ್ಟೆಂಬರ್ 2021ರಿಂದ ಕುಟುಂಬವು ಈ ಇಕ್ಕಟ್ಟಾದ ಪುಟ್ಟ ಕೋಣೆಯಲ್ಲಿ ವಾಸಿಸಲು ತಿಂಗಳಿಗೆ ರೂ. 5,000 ಬಾಡಿಗೆ ಪಾವತಿಸುತ್ತಿದೆ

NFSA ಅಡಿಯಲ್ಲಿ, ಭಾರತದ ಗ್ರಾಮೀಣ ಜನಸಂಖ್ಯೆಯ ಶೇಕಡಾ 75ರಷ್ಟು ಮತ್ತು ನಗರ ಜನಸಂಖ್ಯೆಯ 50 ಪ್ರತಿಶತದಷ್ಟು ಜನರು ಸಬ್ಸಿಡಿ ಆಹಾರ ಧಾನ್ಯಗಳನ್ನು ಖರೀದಿಸಲು ಅರ್ಹರಾಗಿದ್ದಾರೆ - ಕಿಲೋಗೆ 3 ರೂ.ಗೆ ಅಕ್ಕಿ, 2 ರೂ.ಗೆ ಗೋಧಿ ಮತ್ತು 1 ರೂ.ಗೆ ಧಾನ್ಯಗಳನ್ನು (ಸಿರಿಧಾನ್ಯಗಳು) ನಿಗದಿತ ನ್ಯಾಯಬೆಲೆ ಅಂಗಡಿಗಳಿಂದ ಖರೀದಿಸಲು ಅರ್ಹರಾಗಿದ್ದಾರೆ. 'ಆದ್ಯತಾ ಕುಟುಂಬಗಳು' ತಿಂಗಳಿಗೆ 5 ಕಿಲೋ ಆಹಾರ ಧಾನ್ಯಗಳನ್ನು ಪಡೆಯಲು ಅರ್ಹವಾಗಿವೆ, 'ಆದ್ಯತಾ ಕುಟುಂಬಗಳು' ಕಾರ್ಡ್‌ನಲ್ಲಿ ಪಟ್ಟಿ ಮಾಡಲಾದ ಪ್ರತಿಯೊಬ್ಬರೂ ತಿಂಗಳಿಗೆ 5 ಕೆಜಿ ಆಹಾರ ಧಾನ್ಯಗಳಿಗೆ ಅರ್ಹರಾಗಿರುತ್ತಾರೆ. ಅತ್ಯಂತ ಬಡ ಕುಟುಂಬಗಳು ಅಥವಾ "ಕಡುಬಡವರು" ಅಂತ್ಯೋದಯ ಅನ್ನ ಯೋಜನೆ (AAY) ಅಡಿಯಲ್ಲಿ ತಿಂಗಳಿಗೆ 35 ಕೆಜಿ ಆಹಾರಧಾನ್ಯಗಳಿಗೆ ಅರ್ಹರಾಗಿದ್ದಾರೆ.

ರುಖ್ಸಾನಾ ಅವರ ಕುಟುಂಬದ ಆರು ಸದಸ್ಯರು ಆದ್ಯತೆಯ ಕುಟುಂಬ ಕಾರ್ಡ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ತಿಂಗಳಿಗೆ 3 ಕೆಜಿ ಅಕ್ಕಿ ಮತ್ತು 2 ಕೆಜಿ ಗೋಧಿ ಸಿಗುತ್ತದೆ.

ವಿವಿಧ ಬಳಕೆ ಮತ್ತು ಆದಾಯದ ಮಾನದಂಡಗಳ ಆಧಾರದ ಮೇಲೆ ರಾಜ್ಯ ಸರ್ಕಾರಗಳು ಈ ವರ್ಗಗಳ ಅರ್ಹತೆಯನ್ನು ನಿರ್ಧರಿಸುತ್ತವೆ. ಉದಾಹರಣೆಗೆ, ದೆಹಲಿಯಲ್ಲಿ ವಾರ್ಷಿಕ ಆದಾಯ ರೂ. ಒಂದು ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬಗಳು 'ಆದ್ಯತಾ ಕುಟುಂಬಗಳು, AAY ವರ್ಗ'ದಲ್ಲಿ ಸೇರ್ಪಡೆಗೊಳ್ಳಲು ಅರ್ಹರಾಗಿರುತ್ತಾರೆ . ಪ್ರತಿ ಕುಟುಂಬದ ಸಾಮಾಜಿಕ, ಔದ್ಯೋಗಿಕ ಮತ್ತು ವಸತಿ ದುರ್ಬಲತೆಗಳನ್ನು ಅವರ ಸ್ವಂತ ವರ್ಗವನ್ನು ಗಣನೆಗೆ ತೆಗೆದುಕೊಂಡು ನಿರ್ಧರಿಸಲಾಗುತ್ತದೆ. ಆದಾಗ್ಯೂ, ವೈಯಕ್ತಿಕ ಬಳಕೆಗಾಗಿ ನಾಲ್ಕು-ಚಕ್ರ ವಾಹನವನ್ನು ಹೊಂದಿರುವ ಕುಟುಂಬಗಳು ಅಥವಾ ರಾಜ್ಯದ ಕೆಲವು ಭಾಗಗಳಲ್ಲಿ ಕಟ್ಟಡ ಅಥವಾ ಭೂಮಿಯನ್ನು ಹೊಂದಿರುವವರು ಅಥವಾ ಬಳಕೆಯಲ್ಲಿರುವ 2 ಕಿಲೋವ್ಯಾಟ್‌ಗಳಿಗಿಂತ ಹೆಚ್ಚು ವಿದ್ಯುತ್ ಸಂಪರ್ಕವನ್ನು ಹೊಂದಿರುವ ಕುಟುಂಬಗಳನ್ನು ಆದಾಯವನ್ನು ಲೆಕ್ಕಿಸದೆ ಈ ವರ್ಗಗಳಿಂದ ಹೊರಗಿಡಲಾಗುತ್ತದೆ. ಅರ್ಹತೆ. ಬೇರೆ ಯೋಜನೆ ಅಡಿಯಲ್ಲಿ ಸಬ್ಸಿಡಿ ಆಹಾರ ಪಡೆಯುವ ಕುಟುಂಬಗಳು ಅಥವಾ ಆದಾಯ ತೆರಿಗೆ ಪಾವತಿಸುವ ಸದಸ್ಯರಿರುವ ಕುಟುಂಬ ಅಥವಾ ಸರ್ಕಾರಿ ನೌಕರ ಕೂಡ ಈ ಯೋಜನೆಗಳಿಗೆ ಅರ್ಹರಾಗಿರುವುದಿಲ್ಲ.

ಬಿಹಾರದಲ್ಲಿ, ಅರ್ಹತೆಯನ್ನು ಹೊರಗಿರಿಸುವ ಮಾನದಂಡಗಳಿಂದ ನಿರ್ಧರಿಸಲಾಗುತ್ತದೆ. ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ಮಾರ್ಗಸೂಚಿಗಳೆಂದರೆ ಮೋಟಾರು ವಾಹನ (ಮೂರು ಅಥವಾ ನಾಲ್ಕು ಚಕ್ರದ ವಾಹನ), ಅಥವಾ ಮೂರು ಅಥವಾ ಹೆಚ್ಚು ಪಕ್ಕಾ ಕೊಠಡಿಗಳನ್ನು ಹೊಂದಿರುವ ಮನೆ ಅಥವಾ 2.5 ಎಕರೆ ಅಥವಾ ಅದಕ್ಕಿಂತ ಹೆಚ್ಚಿನ ಜಮೀನನ್ನು ಹೊಂದಿರುವ ಯಾವುದೇ ಕುಟುಂಬವನ್ನು ಅನರ್ಹಗೊಳಿಸುತ್ತವೆ. ಕುಟುಂಬದ ಒಬ್ಬ ಸದಸ್ಯ ರೂ. 10,000 ಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಅಥವಾ ಸರ್ಕಾರಿ ಉದ್ಯೋಗಿಗಳನ್ನು ಯೋಜನೆಯಿಂದ ಹೊರಗಿಡಲಾಗುತ್ತದೆ.

ಮೇ 2020ರಲ್ಲಿ, ಕೇಂದ್ರವು 2019ರಲ್ಲಿ ಪ್ರಾಯೋಗಿಕ ಯೋಜನೆಯಾಗಿ ಪ್ರಾರಂಭಿಸಿದ 'ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್' ಯೋಜನೆಯನ್ನು ಜಾರಿಗೆ ತರುವುದಾಗಿ ಘೋಷಿಸಿತು. ಕಾರ್ಡ್ ಹೊಂದಿರುವವರ ಆಧಾರ್ ಸಂಖ್ಯೆಯನ್ನು 'ಲಿಂಕ್' ಮಾಡಿದ ನಂತರ, ಅದು ಪಡಿತರ ಚೀಟಿಯನ್ನು ಎಲ್ಲಿ ನೋಂದಾಯಿಸಿದರೂ ಅದರ 'ಪೋರ್ಟಬಿಲಿಟಿ'ಯನ್ನು ಅನುಮತಿಸುತ್ತದೆ. ಇದರಿಂದಾಗಿ ರುಖ್ಸಾನಾರಂತಹ ಬದುಕಿನ ಸ್ಥಿತಿಯನ್ನು ಹೊಂದಿರುವ ಯಾರಾದರೂ ದೇಶದ ಯಾವುದೇ ಔಟ್‌ಲೆಟ್‌ನಿಂದ PDS ಮೂಲಕ ಲಭ್ಯವಿರುವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ದೆಹಲಿ ಸರ್ಕಾರ ಜುಲೈ 2021ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿತು.

*****

PHOTO • Sanskriti Talwar
PHOTO • Sanskriti Talwar
PHOTO • Sanskriti Talwar

ಎಡಕ್ಕೆ: ರುಖ್ಸಾನಾ ಅವರ ಸಹೋದರಿ ರೂಬಿ ಖಾತೂನ್. ಕೇಂದ್ರ: ಮೇರಾ ರೇಷನ್ ಅಪ್ಲಿಕೇಶನ್ನಲ್ಲಿನ ದಾಖಲೆಯು ರುಖ್ಸಾನಾ ಅವರ ಕುಟುಂಬದ ಆಧಾರ್ ವಿವರಗಳನ್ನು 'ಲಿಂಕ್ ಆಗಿದೆ' ಎಂದು ತೋರಿಸುತ್ತದೆ. ಬಲ: ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಗಾಗಿ ರುಖ್ಸಾನಾ ಅವರ ವಲಸೆ ಸ್ಥಿತಿಯನ್ನು ನವೀಕರಿಸಲು ಪ್ರಯತ್ನಿಸುವಾಗ ಕಾಣಿಸುವ ಪಾಪ್-ಅಪ್ ಸಂದೇಶ

ರುಖ್ಸಾನಾ ಪ್ರತಿದಿನ ಬೆಳಿಗ್ಗೆ 8ರಿಂದ ಮಧ್ಯಾಹ್ನದವರೆಗೆ ಮತ್ತು ನಂತರ ಸಂಜೆ 4ರಿಂದ 7ರವರೆಗೆ ಮನೆಯನ್ನು ಸ್ವಚ್ಛಗೊಳಿಸುವುದು, ಮನೆಯನ್ನು ಗುಡಿಸಿ ಒರೆಸುವುದು ಮತ್ತು ಪಾತ್ರೆಗಳನ್ನು ಸ್ವಚ್ಛಗೊಳಿಸುವುದನ್ನು ಮಾಡುತ್ತಾರೆ. ರುಖ್ಸಾನಾರ ಸಹೋದರಿ ರೂಬಿ ಮತ್ತು ಈ PARI ವರದಿಗಾರರು ಡಿಸೆಂಬರ್ 1, 2021ರಂದು ಪಟೇಲ್ ನಗರದಲ್ಲಿರುವ ಆಹಾರ ಮತ್ತು ಸರಬರಾಜು ಇಲಾಖೆಯ ಸರ್ಕಲ್ ಕಚೇರಿಗೆ ಹೋಗಿ ದೆಹಲಿಯಲ್ಲಿ ರುಖ್ಸಾನಾ ಏಕೆ ಪಡಿತರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕೇಳಿದರು.

'ಮೇರಾ ರೇಷನ್' ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮತ್ತು ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್‌ಗಳು ಅದರಲ್ಲಿ ಲಿಂಕ್ ಆಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನಮಗೆ ಸೂಚಿಸಲಾಯಿತು. ಅಂದು ಅವರ ಕಚೇರಿಯಲ್ಲಿ ವೆಬ್ ಪೋರ್ಟಲ್ ಕೆಲಸ ಮಾಡುತ್ತಿರಲಿಲ್ಲ.

ಅಂದು ಮಧ್ಯಾಹ್ನ ಅರ್ಜಿಯಲ್ಲಿ ರುಖ್ಸಾನಾರ ರೇಷನ್ ಕಾರ್ಡ್ ಮತ್ತು ಆಧಾರ್ ವಿವರಗಳನ್ನು ನಮೂದಿಸಿದೆವು. ಒಂದು ವರ್ಷದ ಆಸಿಯಾಳನ್ನು ಹೊರತುಪಡಿಸಿ, ಕುಟುಂಬದ ಇತರ ಎಲ್ಲ ಸದಸ್ಯರು ತಮ್ಮ ಆಧಾರ್ ಕಾರ್ಡ್‌ಗಳನ್ನು 'ಲಿಂಕ್' ಮಾಡಿದ್ದಾರೆ. ಆದರೆ ONORC ನೋಂದಣಿಗಾಗಿ ರುಖ್ಸಾನಾ ಅವರ ವಲಸೆ ಮಾಹಿತಿಯನ್ನು ನವೀಕರಿಸಲು ಪ್ರಯತ್ನಿಸುವಾಗ, ಒಂದು ಪಾಪ್-ಅಪ್ ಸಂದೇಶವು ಕಾಣಿಸಿಕೊಂಡಿತು: 'ಡೇಟಾವನ್ನು ಪೋಸ್ಟ್ ಮಾಡಲು ಸಾಧ್ಯವಿಲ್ಲ. ದಯವಿಟ್ಟು ನಂತರ ಪ್ರಯತ್ನಿಸಿ.'

ನಾವು ಡಿಸೆಂಬರ್ 7ರಂದು ಮತ್ತೆ ಪ್ರಯತ್ನಿಸಿದೆವು, ಆದರೆ ಮತ್ತೆ ಅದೇ ಪಾಪ್-ಅಪ್ ಸಂದೇಶ ಎದುರಾಯಿತು.

ಏತನ್ಮಧ್ಯೆ, ದೆಹಲಿಯಲ್ಲಿ ವಾಸಿಸುವ ವಲಸಿಗರಿಗೆ ಅವರ ಸ್ಥಳೀಯ ಹಳ್ಳಿಗಳಲ್ಲಿ ಆಹಾರ ಧಾನ್ಯಗಳ ವಿತರಣೆ ಪ್ರಾರಂಭವಾದಾಗ IMPDS ಸರ್ವರ್ ಕೆಲವೊಮ್ಮೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಎಂದು PDS ಡೀಲರ್ ಗಮನಸೆಳೆದರು. ನವೆಂಬರ್ 31ರ ಸಂಜೆಯ ಮೊದಲು ದೆಹಲಿಯ ಫಲಾನುಭವಿಗಳು ತಮ್ಮ ಕೋಟಾವನ್ನು ಪಡೆದಿದ್ದಾರೆ, ಬಿಹಾರದಲ್ಲಿ ಮುಂದಿನ ಸುತ್ತಿನ ವಿತರಣೆ ಡಿಸೆಂಬರ್ 5 ರಿಂದ ಪ್ರಾರಂಭವಾಗಲಿದೆ ಎಂದು ಡೀಲರ್ ಹೇಳಿದರು.

ರುಖ್ಸಾನಾ ಈಗಲೂ ಪಡಿತರವನ್ನು ಪಡೆಯುವ ಭರವಸೆಯನ್ನು ಹೊಂದಿದ್ದರು. ಆದ್ದರಿಂದ ಅವರು ಡಿಸೆಂಬರ್ 5ರಂದು ಮತ್ತೆ ಪಡಿತರ ಅಂಗಡಿಗೆ ಹೋದರು. ಯಂತ್ರವು ಉತ್ತರಿಸಿತು: ' IMPDS ನಲ್ಲಿ ಪಡಿತರ ಚೀಟಿ ಕಂಡುಬಂದಿಲ್ಲ.'

ಸೆಪ್ಟೆಂಬರ್ 2021ರಿಂದ, ರುಖ್ಸಾನಾ ತನ್ನ ಕುಟುಂಬವನ್ನು ಪೋಷಿಸಲು ತಾನು ಕೆಲಸ ಮಾಡುವ ಮನೆಎಯವರ ಸಹಾಯವನ್ನು ಅವಲಂಬಿಸಬೇಕಾಯಿತು. ಅವರು ಹೇಳುತ್ತಾರೆ, “ಯಾರೋ ನನಗೆ ಒಂದಷ್ಟು ತರಕಾರಿಗಳನ್ನು ಕೊಟ್ಟರು. ಕೆಲವೊಮ್ಮೆ ಬೇರೆಯವರು ಸರ್ಕಾರಿ ಮಳಿಗೆಗಳಿಂದ ತಂದ ಪಡಿತರವನ್ನು ನೀಡಿದರು."

PHOTO • Sanskriti Talwar
PHOTO • Sanskriti Talwar

ಎಡ: ಶಾದಿಪುರ ಮುಖ್ಯ ಬಜಾರ್‌ನ ನ್ಯಾಯಬೆಲೆ ಅಂಗಡಿಯಲ್ಲಿ ನಿಂತಿರುವ ರುಖ್ಸಾನಾ ಖಾತೂನ್. ಅವರು ಎಣಿಸಲು ಸಾಧ್ಯವಿಲ್ಲದಷ್ಟು ಸಲ ಈ ಅಂಗಡಿಗೆ ಅಲೆದಿದ್ದಾರೆ. ಬಲ: ನ್ಯಾಯಬೆಲೆ ಅಂಗಡಿ ವಿತರಕರಾದ ಭಾರತ್ ಭೂಷಣ್ ePOS ಯಂತ್ರದಲ್ಲಿ ರುಖ್ಸಾನಾ ಅವರ ಆಧಾರ್ ಸಂಖ್ಯೆಯನ್ನು ನಮೂದಿಸಿದಾಗ ಸ್ವೀಕರಿಸಿದ ಸಂದೇಶವನ್ನು ತೋರಿಸುತ್ತಿರುವುದು

ತನ್ನ ಕೋಪವನ್ನು ವ್ಯಕ್ತಪಡಿಸುತ್ತಾ, "ನಾನು ಯಾವಾಗಿನಿಂದ ಪ್ರಯತ್ನಿಸುತ್ತಿದ್ದೇನೆ" ಎಂದು ರುಖ್ಸಾನಾ ಹೇಳುತ್ತಾರೆ. ಅವರೊಂದಿಗೆ ದೆಹಲಿಗೆ ಹಿಂದಿರುಗಿದ ಬಿಹಾರದ ಇತರ ಜನರು ಆಗಸ್ಟ್ ಮತ್ತು ಡಿಸೆಂಬರ್ 2021 ರ ನಡುವೆ ಕನಿಷ್ಠ ಮೂರು ಬಾರಿ ತಮ್ಮ ಪಡಿತರ ಕೋಟಾವನ್ನು ತೆಗೆದುಕೊಂಡಿದ್ದಾರೆ.

ಡಿಸೆಂಬರ್ 2020ರಿಂದ ದೆಹಲಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟಕ್ಕೆ ಬದಲಾಗಿ ಪಡಿತರ ಕಿಟ್‌ಗಳನ್ನು ವಿತರಿಸಿದ್ದು ಉಪಯುಕ್ತವಾಗಿ ಬಂದವು. ಅವರ ಇಬ್ಬರು ಹಿರಿಯ ಮಕ್ಕಳಾದ ಕಪಿಲ್ ಮತ್ತು ಚಾಂದಿನಿ ಪಟೇಲ್ ನಗರದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ. ಒಬ್ಬೊಬ್ಬರು 10 ಕೆಜಿ ಅಕ್ಕಿ, 2 ಕೆಜಿ ಬೇಳೆಕಾಳುಗಳು ಮತ್ತು ಒಂದು ಲೀಟರ್ ಸಂಸ್ಕರಿಸಿದ ಎಣ್ಣೆಯನ್ನು ಪಡೆದರು. ಮಾರ್ಚ್ 2022ರಲ್ಲಿ ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ಪುನರಾರಂಭಿಸಿದ ನಂತರ, ಕಿಟ್‌ಗಳನ್ನು ನಿಲ್ಲಿಸಲಾಯಿತು ಎಂದು ರುಖ್ಸಾನಾ ಹೇಳುತ್ತಾರೆ.

*****

ದೆಹಲಿ ಸರ್ಕಾರದ ONORC ಸಹಾಯವಾಣಿ ಸಂಖ್ಯೆಗೆ ಮಾಡಿದ ಹಲವಾರು ಕರೆಗಳು ಫಲಿತಾಂಶವನ್ನು ನೀಡಲಿಲ್ಲ. ನೆಟ್‌ವರ್ಕ್ ಯಾವಾಗಲೂ 'ಬ್ಯುಸಿ' ಆಗಿತ್ತು.

1991ರಿಂದ ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಪಡಿತರ ವಿತರಕ ಪರ್ವೇಜ್ ಆಲಂ, ದರ್ಭಂಗಾದ ಬೇನಿಪುರದಲ್ಲಿ ರುಖ್ಸಾನಾ ಮಾತ್ರ ಈ ಪರಿಸ್ಥಿತಿ ಎದುರಿಸಿಲ್ಲ ಎಂದು ದೂರವಾಣಿ ಮೂಲಕ ತಿಳಿಸಿದರು. "ದೆಹಲಿಯಿಂದ ಅನೇಕ ವಲಸೆ ಕಾರ್ಮಿಕರು ದೆಹಲಿಯಲ್ಲಿ ತಮ್ಮ ಪಡಿತರವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ಹೇಳಲು ನನಗೆ ಕರೆ ಮಾಡುತ್ತಾರೆ" ಎಂದು ಆಲಂ ಹೇಳಿದರು.

ದರ್ಭಂಗಾ ಜಿಲ್ಲಾ ಸರಬರಾಜು ಅಧಿಕಾರಿ (DSO) ಅಜಯ್ ಕುಮಾರ್ ಅವರು ತಮ್ಮ ಕಚೇರಿಯಲ್ಲಿ ಕೆಲಸ ಸುಗಮವಾಗಿ ನಡೆಯುತ್ತಿದೆ ಎಂದು ದೂರವಾಣಿಯಲ್ಲಿ ತಿಳಿಸಿದರು. ಅವರು ಹೇಳುವಂತೆ, “ಸಮಸ್ಯೆ ಏನು ಎಂದು ದೆಹಲಿ ಅಧಿಕಾರಿಗಳು ಮಾತ್ರ ನಿಮಗೆ ತಿಳಿಸಬಲ್ಲರು. ಬೇರೆ ಯಾವುದೇ ರಾಜ್ಯದಿಂದ [ದೆಹಲಿ ಹೊರತುಪಡಿಸಿ] ಯಾವುದೇ ಸಮಸ್ಯೆಯ ವರದಿಯಾಗಿಲ್ಲ.”

ದೆಹಲಿಯ ಆಹಾರ ಮತ್ತು ಸರಬರಾಜು ಇಲಾಖೆಯ ಹೆಚ್ಚುವರಿ ಆಯುಕ್ತ ಕುಲದೀಪ್ ಸಿಂಗ್ ಮಾತನಾಡಿ, ಬಿಹಾರದಿಂದ ವಲಸೆ ಬಂದವರಿಗೆ ಡಿಸೆಂಬರ್‌ನಲ್ಲಿ ಈಗಾಗಲೇ 43,000ಕ್ಕೂ ಹೆಚ್ಚು ವಹಿವಾಟುಗಳನ್ನು ನಡೆಸಲಾಗಿದೆ. "ಇದು ಬೇರೆ ಪ್ರಕರಣವಾಗಿರಬಹುದು, ಬಹುಶಃ ಬಿಹಾರದಲ್ಲಿ ಫಲಾನುಭವಿಯ ಹೆಸರನ್ನು ತೆಗೆದುಹಾಕಲಾಗಿದೆ" ಎಂದು ಅವರು ಹೇಳಿದರು.

PHOTO • Sanskriti Talwar

ರುಖ್ಸಾನಾ ಮತ್ತು ವಕೀಲ್ ಬಿಹಾರದ ದರ್ಭಾಂಗಾ ಜಿಲ್ಲೆಯ ತಮ್ಮ ಹಳ್ಳಿಯಿಂದ ಕೆಲಸ ಹುಡುಕಿಕೊಂಡು ದೆಹಲಿಗೆ ಬಂದಿದ್ದರು

ಮೇ 2020ರಲ್ಲಿ, ಕೇಂದ್ರ ಸರ್ಕಾರವು ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್ ರೂಪದಲ್ಲಿ ರಾಷ್ಟ್ರವ್ಯಾಪಿ ಯೋಜನೆಯನ್ನು ಪ್ರಾರಂಭಿಸಿತು. ಇದರಿಂದ ಪಡಿತರ ಚೀಟಿಯನ್ನು ‘ಪೋರ್ಟಬಲ್’ ಮಾಡುವ ಸೌಲಭ್ಯ ದೊರೆಯಿತು. ದೇಶದಲ್ಲಿ ಎಲ್ಲಿಯಾದರೂ ಪಡಿತರ ಚೀಟಿಯನ್ನು ರಚಿಸಿದಾಗ, ಅದನ್ನು ಬಳಕೆದಾರರ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗುತ್ತದೆ

ರುಖ್ಸಾನಾ ಮತ್ತು ಅವರ ಕುಟುಂಬ ಫೆಬ್ರವರಿ 24, 2022ರಂದು ತಮ್ಮ ಸ್ವಂತ ಕುಟುಂಬದ ವಿವಾಹದಲ್ಲಿ ಪಾಲ್ಗೊಳ್ಳಲು ದರ್ಭಾಂಗಾವನ್ನು ತಲುಪಿದ್ದರು. ಅವರು ಫೆಬ್ರವರಿ 26ರಂದು ಮೋಹನ್ ಬೆಹೆರಾದಲ್ಲಿರುವ ನ್ಯಾಯಬೆಲೆ ಅಂಗಡಿಗೆ ಮಗಳನ್ನು ಕಳುಹಿಸಿದ್ದರು.

ಆ ತಿಂಗಳು ರುಖ್ಸಾನಾ ಕುಟುಂಬಕ್ಕೆ ಪಡಿತರ ಚೀಟಿ ಸಿಕ್ಕಿತ್ತು.

ಆದಾಗ್ಯೂ, ಮಾರ್ಚ್ 21ರಂದು ದೆಹಲಿಗೆ ತೆರಳುವ ಮೊದಲು ರುಖ್ಸಾನಾ ಪಡಿತರ ಪಡೆಯಲು ಹೋದಾಗ, ಆಕೆಯ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗಿದೆ ಎಂದು ಗ್ರಾಮದ ವಿತರಕರು ಹೇಳಿದರು. ಡೀಲರ್ ರುಖ್ಸಾನಾಗೆ, "ಊಪರ್‌ ಸೇ ಬಂದ್‌ ಹೋ ಗಯಾ ಹೇ [ಮೇಲಿನವರು ಅದನ್ನು ಬಂದ್‌ ಮಾಡಿದ್ದಾರೆ]," ಎಂದು ಹೇಳಿದರು.

ರುಖ್ಸಾನಾ ಡೀಲರ್‌ಗೆ ಕೇಳಿದರು, "ಕಳೆದ ತಿಂಗಳು ಅದು ಕೆಲಸ ಮಾಡುತ್ತಿತ್ತು, ಈಗ ಅದು ಇದ್ದಕ್ಕಿದ್ದಂತೆ ಹೇಗೆ ರದ್ದುಗೊಂಡಿದೆ?"

ತನ್ನ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್‌ಗಳನ್ನು ತೆಗೆದುಕೊಂಡು ಬೇನಿಪುರದ ಬ್ಲಾಕ್ ಪಡಿತರ ಕಚೇರಿಗೆ ಹೋಗುವಂತೆ ವಿತರಕರು ಮತ್ತೊಮ್ಮೆ ಸಲಹೆ ನೀಡಿದರು. ಜೊತೆಗೆ ಡೀಲರ್ ಕೂಡ ಆಧಾರ್ ಕಾರ್ಡ್‌ನೊಂದಿಗೆ ದೆಹಲಿಯ ಕಚೇರಿಗೆ ಹೋಗುವಂತೆಯೂ ಹೇಳಿದರು.

ಈ ರೀತಿ ಪಡಿತರ ಚೀಟಿ ರದ್ದು ಮಾಡುವಂತಿಲ್ಲ ಎಂದು DSO ಅಜಯ್‌ಕುಮಾರ್‌ ತಿಳಿಸಿದ್ದಾರೆ. ಆದಾಗ್ಯೂ, ಈ ಪರಿಸ್ಥಿತಿಯಲ್ಲಿ ರುಖ್ಸಾನಾ ಮತ್ತು ಅವರ ಕುಟುಂಬ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು ಎಂದು ಅವರು ಸಲಹೆ ನೀಡಿದರು.

ದೆಹಲಿಗೆ ಹಿಂತಿರುಗಿದ ರುಖ್ಸಾನಾ, ಈ ಸಮಸ್ಯೆಗೆ ಪರಿಹಾರವು ಬೇಗನೆ ಸಿಗುವ ಸಾಧ್ಯತೆಯಿಲ್ಲದ ಕಾರಣ, ತಾನು ಪರಿಸ್ಥಿತಿಗಳ ವಿರುದ್ಧ ಹೋರಾಡುವುದನ್ನು ಬಿಟ್ಟುಕೊಟ್ಟಿರುವುದಾಗಿ ಹೇಳುತ್ತಾರೆ. “ರೇಷನ್‌ ತೋ ಮೇರಾ ಬಂದ್‌ ಹೋ ಗಯಾ ಹೇ [ನನಗೆ ರೇಷನ್ ಸಿಗುವುದಂತೂ ನಿಂತುಹೋಗಿದೆ],” ಎನ್ನುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Sanskriti Talwar

संस्कृति तलवार, नई दिल्ली स्थित स्वतंत्र पत्रकार हैं और साल 2023 की पारी एमएमएफ़ फेलो हैं.

की अन्य स्टोरी Sanskriti Talwar
Editor : Kavitha Iyer

कविता अय्यर, पिछले 20 सालों से पत्रकारिता कर रही हैं. उन्होंने 'लैंडस्केप्स ऑफ़ लॉस: द स्टोरी ऑफ़ ऐन इंडियन' नामक किताब भी लिखी है, जो 'हार्पर कॉलिन्स' पब्लिकेशन से साल 2021 में प्रकाशित हुई है.

की अन्य स्टोरी Kavitha Iyer
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru