ಉತ್ತರ ಪ್ರದೇಶ ಶಿಕ್ಷಕರ ಒಕ್ಕೂಟ ಮತ್ತು ಅದಕ್ಕೆ ಸಂಬಂಧಿಸಿದ ಸಂಘಗಳ ನವೀಕೃತ ಪಟ್ಟಿಯ ಪ್ರಕಾರ, ಏಪ್ರಿಲ್ ತಿಂಗಳಲ್ಲಿ ನಡೆದ ಉತ್ತರಪ್ರದೇಶದ ಪಂಚಾಯತ್ ಚುನಾವಣೆಯಲ್ಲಿನ ಕಡ್ಡಾಯ ಕರ್ತವ್ಯದ ನಂತರ ಕೋವಿಡ್ -19 ರಿಂದ ಮೃತಪಟ್ಟ ಶಾಲಾ ಶಿಕ್ಷಕರ ಸಂಖ್ಯೆ ಈಗ 1,621 ಕ್ಕೆ ತಲುಪಿದೆ - ಅವರಲ್ಲಿ 1,181 ಪುರುಷರು ಮತ್ತು 440 ಮಹಿಳೆಯರು. ಪರಿ ಹಿಂದಿ ಮತ್ತು ಇಂಗ್ಲಿಷ್ ಎರಡರಲ್ಲೂ ಮೃತರ ವಿವರದ ಪೂರ್ಣ ಪಟ್ಟಿಯನ್ನು ಹೊಂದಿದೆ.

ಉತ್ತರಪ್ರದೇಶದ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗ (ಎಸ್‌ಇಸಿ) ಚುನಾವಣೆಗಳನ್ನು ಮುಂದೂಡಬೇಕೆಂದು ಶಿಕ್ಷಕರ ಸಂಘಗಳು ಮನವಿ ಮಾಡಿಕೊಂಡರೂ ಅದನ್ನು ನಿರ್ಲಕ್ಷಿಸಿ ಚುನಾವಣೆ ನಡೆಸುವ ಮೂಲಕ ಈ ಮಾನವ ನಿರ್ಮಿತ ದುರಂತಕ್ಕೆ ಕಾರಣವಾದವು. ಆ ಕುರಿತು ಪರಿ ಪ್ರಕಟಿಸಿದ ದುರಂತದ ಸಂಪೂರ್ಣ ವಿವರಗಳಿಂದ ಕೂಡಿದ ವರದಿಯು ಈ ಲೇಖನದ ಕೆಳಭಾಗದಲ್ಲಿದೆ. ಆ ಸಮಯದಲ್ಲಿ ಚುನಾವಣಾ ಕರ್ತವ್ಯಕ್ಕೆ ತೆರಳಿ ಕೋವಿಡ್-19‌ ಸೋಂಕಿಗೆ ಒಳಗಾಗಿ ಮೃತಪಟ್ಟ ಶಾಲಾ ಶಿಕ್ಷಕರ ಸಂಖ್ಯೆ 713ರಷ್ಟಿತ್ತು. ಅವರಲ್ಲಿ 540 ಪುರುಷರು ಮತ್ತು 173 ಮಹಿಳಾ ಶಿಕ್ಷಕರು.

ಇದು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 8 ಲಕ್ಷ ಶಿಕ್ಷಕರನ್ನು ಹೊಂದಿರುವ ರಾಜ್ಯವಾಗಿದೆ - ಚುನಾವಣಾ ಕರ್ತವ್ಯಕ್ಕಾಗಿ ಅವರಲ್ಲಿ ಸಾವಿರಾರು ಶಿಕ್ಷಕರನ್ನು ಕಳುಹಿಸಲಾಗಿದೆ. ಮತ್ತು ಚುನಾವಣೆ ಕೂಡ ಬಹಳ ದೊಡ್ಡ ಪ್ರಮಾಣದಲ್ಲಿ ನಡೆಯಿತು. 8 ಲಕ್ಷ ಸ್ಥಾನಗಳಿಗೆ 13 ಲಕ್ಷ ಅಭ್ಯರ್ಥಿಗಳು ಕಣದಲ್ಲಿದ್ದರೆ, ಮತದಾರರ ಸಂಖ್ಯೆ 13 ಕೋಟಿಗಳಷ್ಟಿತ್ತು. ಇದಕ್ಕಾಗಿ ಚುನಾವಣಾಧಿಕಾರಿಗಳು (ಶಿಕ್ಷಕರು ಮತ್ತು ಇತರರು) ಲಕ್ಷಾಂತರ ಜನರನ್ನು ಸ್ಪಷ್ಟವಾಗಿ ಸಂಪರ್ಕಿಸಬೇಕಾಗಿತ್ತು, ಆದರೆ ಸುರಕ್ಷತಾ ವ್ಯವಸ್ಥೆಗಳು ತೀರಾ ಕಡಿಮೆಯಿದ್ದವು.

ಉತ್ತರಪ್ರದೇಶದ ಪಂಚಾಯತ್ ಚುನಾವಣೆಗಳನ್ನು ಈ ಹಿಂದೆಯೂ ಮುಂದೂಡಲಾಗಿತ್ತು - ಉದಾಹರಣೆಗೆ, 1994ರ ಸೆಪ್ಟೆಂಬರ್ ತಿಂಗಳಿನಿಂದ 1995ರ ಏಪ್ರಿಲ್ವರೆಗೆ. ಹೀಗಿರುವಾಗ “ಹಿಂದೆಂದೂ ಕಾಣದಷ್ಟು ದೊಡ್ಡ ಸಾಂಕ್ರಾಮಿಕ ಪಿಡುಗು ಮತ್ತು ಮಾನವೀಯ ಬಿಕ್ಕಟ್ಟಿನ ನಡುವೆ ಈ ಅವಸರ ಏಕೆ ಬೇಕಿತ್ತು ?” ಎಂದು ಮಾಜಿ ರಾಜ್ಯ ಚುನಾವಣಾ ಆಯುಕ್ತ ಸತೀಶ್ ಕುಮಾರ್ ಅಗರ್ವಾಲ್ ಕೇಳುತ್ತಾರೆ.

ಚುನಾವಣೆ ನಡೆದಿದ್ದಕ್ಕೂ ಮತ್ತು ಶಾಲಾ ಶಿಕ್ಷಕರು ಹಾಗೂ ಇತರ ಸರ್ಕಾರಿ ನೌಕರರ ಸಾವಿನ ನಡುವೆ ಸಂಬಂಧವಿದೆಯೆನ್ನುವದನ್ನು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಳ್ಳಿ ಹಾಕಿದ್ದಾರೆ. "ದೆಹಲಿಯಲ್ಲಿ ಚುನಾವಣೆ ನಡೆದಿದೆಯೇ? ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದಿದೆಯೇ?" ಅವರು ಮೇ 12ರಂದು ನೋಯ್ಡಾದಲ್ಲಿ ಸುದ್ದಿಗಾರರನ್ನು ಕೇಳಿದರು . ಈ ದುರಂತದ ಜವಾಬ್ದಾರಿಯನ್ನು ಅಲಹಾಬಾದ್ ಹೈಕೋರ್ಟ್‌ ಮೇಲೆ ಹೊರಿಸಲು ಪ್ರಯತ್ನಿಸಲಾಗಿದೆ. ಸಿಎಂ ಆದಿತ್ಯನಾಥ್ ಸುದ್ದಿಗಾರರಿಗೆ ಹೇಳಿದಂತೆ: "ಹೈಕೋರ್ಟ್‌ನ ನಿರ್ದೇಶನದಂತೆ ಪಂಚಾಯತ್ ಚುನಾವಣೆಗಳು ನಡೆದವು."

ಆದರೆ ಇದು ಭಾಗಶಃ ಸತ್ಯ ಮಾತ್ರ. ಚುನಾವಣೆಯನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ಅದು ಖಾಸಗಿ ಅರ್ಜಿಯಾಗಿದ್ದು, ರಾಜ್ಯವು ಸಲ್ಲಿಸಿದ ಅರ್ಜಿಯಾಗಿರಲಿಲ್ಲ. (ಸಾಂವಿಧಾನಿಕ ಅಗತ್ಯದ ಪ್ರಕಾರ, 2021ರ ಜನವರಿ 21ರ ಮೊದಲು ಪಂಚಾಯತ್ ಚುನಾವಣೆಗಳು ಪೂರ್ಣಗೊಂಡಿರಬೇಕಿತ್ತು). ಆದರೆ ಕೋವಿಡ್ -19 ಪ್ರೋಟೋಕಾಲ್‌ಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನ್ಯಾಯಾಲಯ ಆದೇಶಿಸಿತ್ತು.

ಏಪ್ರಿಲ್ 6ರಂದು ಅಲಹಾಬಾದ್ ಹೈಕೋರ್ಟ್ ರಾಜ್ಯವು ಎಲ್ಲಾ ಸುರಕ್ಷಾ ನಿಯಮಾವಳಿಗಳನ್ನು ಅನುಸರಿಸುತ್ತದೆ ಎಂಬ ವಿಶ್ವಾಸವಿದೆ ಮತ್ತು ಯುಪಿ ಸರ್ಕಾರವು " ಚುನಾವಣಾ ಪ್ರಚಾರದ ಸಮಯದಲ್ಲಿ ಅನುಸರಿಸಬೇಕಾದ ಶಿಷ್ಟಾಚಾರಗಳನ್ನು " ಘೋಷಿಸಿದೆ ಎಂದು ಹೇಳಿತ್ತು. "ಪಂಚಾಯತ್ ರಾಜ್ ಚುನಾವಣೆಗಳನ್ನು ಸಹ ಜನಸಮೂಹವಿಲ್ಲದ ರೀತಿಯಲ್ಲಿ ನಡೆಸಬೇಕು" ಎಂದು ಅದು ಆದೇಶಿಸಿತ್ತು. ಅದು ನಾಮನಿರ್ದೇಶನ, ಪ್ರಚಾರ ಅಥವಾ ನಿಜವಾದ ಮತದಾನವಾಗಿದ್ದರೂ, ಎಲ್ಲಾ ಕೋವಿಡ್ -19 ಶಿಷ್ಟಾಚಾರಗಳನ್ನು ಅನುಸರಿಸಲಾಗುತ್ತಿದೆಯೆನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.” ಬೇರೆ ರೀತಿಯಲ್ಲಿ ಹೇಳುವುದಾದರೆ, "ಹೈಕೋರ್ಟ್‌ನ ನಿರ್ದೇಶನದಂತೆ" ಚುನಾವಣೆಗಳು ನಡೆದಿಲ್ಲ. ನ್ಯಾಯಾಲಯದ ಸೂಚನೆಗಳ ಉಲ್ಲಂಘನೆಯು ಅವರ ಒಕ್ಕೂಟಗಳ ಪ್ರಕಾರ ಶಿಕ್ಷಕರಿಗೆ ಹಾನಿಕಾರಕವೆನ್ನುವುದು ಸಾಬೀತಾಯಿತು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬರೆದ ಶಿಕ್ಷಕರ ಸಂಘಗಳ ಇತ್ತೀಚಿನ ಪತ್ರವು ಹೀಗೆ ಹೇಳುತ್ತದೆ, “ಗೌರವಾನ್ವಿತ ಸುಪ್ರೀಂ ಕೋರ್ಟ್ ವಿಚಾರಣೆಯ ಸಮಯದಲ್ಲಿ ಸಹ, ಒಕ್ಕೂಟವು ತನ್ನ ಸಲಹೆಯ ಮೂಲಕ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಆದಾಗ್ಯೂ, ಮತ ಎಣಿಕೆಯ ಸಮಯದಲ್ಲಿ ಕೋವಿಡ್ ಸೋಂಕಿನಿಂದ ಜನರನ್ನು ರಕ್ಷಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದು ಸರ್ಕಾರಿ ವಕೀಲರು ಮಾನ್ಯ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದ್ದರು."

ಬಹಳ ಭಾವನಾತ್ಮಕ ವಾಕ್ಯವೊಂದರಲ್ಲಿ, ಪತ್ರವು ಹೀಗೆ ಹೇಳುತ್ತದೆ: "ಇಷ್ಟು ದೊಡ್ಡ ಸಂಖ್ಯೆಯ ಶಿಕ್ಷಕರ ಸಾವಿನ ಬಗ್ಗೆ ಪ್ರಾಥಮಿಕ ಶಿಕ್ಷಣ ಇಲಾಖೆ ಅಥವಾ ಉತ್ತರ ಪ್ರದೇಶ ಸರ್ಕಾರ ಯಾವುದೇ ದುಃಖವನ್ನು ವ್ಯಕ್ತಪಡಿಸಿಲ್ಲ."

ಏಪ್ರಿಲ್ 26ರಂದು, ನ್ಯಾಯಾಲಯವು ಎಸ್‌ಇಸಿಗೆ ಮಾಸ್ಕ್‌ ಧರಿಸುವುದನ್ನು ಸೇರಿದಂತೆ ಕೋವಿಡ್‌ ಸಂಬಂಧಿ ಸುರಕ್ಷಾ ಶಿಷ್ಟಾಚಾರಗಳನ್ನು "ಅನುಸರಿಸದಿರುವುದು" ಮತ್ತು "ಧಾರ್ಮಿಕವಾಗಿ ಪಾಲಿಸಬೇಕಾದ" ಸಾಮಾಜಿಕ ಅಂತರವನ್ನು ಅಳವಡಿಸಿಕೊಳ್ಳದಿರುವುದಕ್ಕಾಗಿ ನೋಟಿಸ್ ನೀಡಿತ್ತು. ನ್ಯಾಯಾಲಯದ ಆದೇಶದ ಬಗ್ಗೆ ಸರ್ಕಾರ ಅಥವಾ ಎಸ್‌ಇಸಿ ಅಸಮಾಧಾನ ಹೊಂದಿದ್ದರೆ, ಅವರು ಆ ಕುರಿತು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಇದಕ್ಕೂ ಮುಂಚೆಯೇ, ಮಾರ್ಚ್ ಕೊನೆಯ ವಾರದಲ್ಲಿ, ಉತ್ತರಪ್ರದೇಶದಲ್ಲಿ ನಡೆದ ಸಾಮೂಹಿಕ ಹೋಳಿ ಆಚರಣೆಯ ಸಂದರ್ಭದಲ್ಲಿಯೂ ಕೋವಿಡ್ -19 ಶಿಷ್ಟಾಚಾರಗಳನ್ನು ಜಾರಿಗೆ ತರಲು ರಾಜ್ಯವು ನಿಜವಾದ ಪ್ರಯತ್ನ ಮಾಡಲಿಲ್ಲ.

ಮುಖ್ಯ ವಿಷಯವೆಂದರೆ, ಮೇ 12ರಂದು ಅಲಹಾಬಾದ್ ಹೈಕೋರ್ಟ್ ರಾಜ್ಯ ಪಂಚಾಯತ್ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಕೋವಿಡ್ -19ರ ಕಾರಣದಿಂದ ಮೃತಪಟ್ಟ ಚುನಾವಣಾ ಅಧಿಕಾರಿಗಳ (ಶಿಕ್ಷಕರು ಮತ್ತು ಇತರ ಸರ್ಕಾರಿ ನೌಕರರ) ಕುಟುಂಬಗಳಿಗೆ ಕನಿಷ್ಠ 1 ಕೋಟಿ ರೂ.ಗಳ ಪರಿಹಾರ ಧನವನ್ನು ನೀಡಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ವರ್ಮಾ ಮತ್ತು ಅಜಿತ್ ಕುಮಾರ್ ಅವರ ನ್ಯಾಯಪೀಠದ ಮಾತುಗಳಲ್ಲಿ: "ಚುನಾವಣೆಯ ಸಮಯದಲ್ಲಿ ಯಾರೂ ಸ್ವಯಂಪ್ರೇರಣೆಯಿಂದ ತಮ್ಮ ಸೇವೆಗಳನ್ನು ಸಲ್ಲಿಸಿಲ್ಲ, ಬದಲಿಗೆ ಚುನಾವಣಾ ಕರ್ತವ್ಯದಲ್ಲಿದ್ದ ಎಲ್ಲರಿಗೂ ಇದನ್ನು ಕಡ್ಡಾಯಗೊಳಿಸಲಾಗಿತ್ತು. ಅವರು ತಮ್ಮ ಹಿಂಜರಿಕೆಯನ್ನು ತೋರಿಸಿದ್ದರೂ ಸಹ."

ಗಮನಿಸಬೇಕಾದ ಸಂಗತಿಯೆಂದರೆ: ಕುಂಭಮೇಳವನ್ನು ಇನ್ನೂ ಒಂದು ವರ್ಷ ವಿಸ್ತರಿಸುವಂತೆ ದೇಶದ ಯಾವುದೇ ನ್ಯಾಯಾಲಯವು ಉತ್ತರಾಖಂಡ ಅಥವಾ ಉತ್ತರ ಪ್ರದೇಶದ ಸರ್ಕಾರಗಳಿಗೆ ಆದೇಶಿಸಿಲ್ಲ. ಹರಿದ್ವಾರದಲ್ಲಿ ಕುಂಭಮೇಳವು ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತದೆ ಮತ್ತು ಮುಂದಿನದು 2022ರಲ್ಲಿ ನಡೆಯಬೇಕಿತ್ತು. ಅದೇನೇ ಇದ್ದರೂ, ಕುಂಭವು ಒಂದು ಪ್ರಮುಖ ಸಾಮೂಹಿಕ ಆಚರಣೆಯಾಗಿದ್ದು, ಈ ವರ್ಷ ನಡೆದ ಪಂಚಾಯತ್ ಚುನಾವಣೆಗಳ ಸಂದರ್ಭದಲ್ಲೇ ಹಲವು ದಿನಗಳು ನಡೆದವು. 2022ರ ಬದಲು 2021ರಲ್ಲೇ ಕುಂಭಮೇಳವನ್ನು ನಡೆಸುವ ಅಗತ್ಯದ ಬಗ್ಗೆ ತೀವ್ರವಾದ ಜ್ಯೋತಿಷ್ಯ ಮತ್ತು ಧಾರ್ಮಿಕ ಚರ್ಚೆಗಳು ನಡೆದವು . ಆದರೆ ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ - ಕುಂಭಮೇಳ ಮತ್ತು ಪಂಚಾಯತ್ ಚುನಾವಣೆಗಳನ್ನು 'ಯಶಸ್ವಿಯಾಗಿ' ನಡೆಸುವ ರಾಜಕೀಯ ಅಗತ್ಯತೆಯ ಬಗ್ಗೆ ಕಡಿಮೆ ಚರ್ಚೆಗಳು ನಡೆದಿವೆ, ಆ ಚುನಾವಣೆಯಲ್ಲಿ ಈ ಘಟನೆಗಳು ಸಂಪೂರ್ಣವಾಗಿ ವಿನಾಶಕಾರಿಯಾಗಿ ನಡೆಯದೆ ಹೋಗಿದ್ದರೆ ಈ ಯಶಸ್ಸನ್ನು ಸಾಧನೆಯಾಗಿ ವರ್ಣಿಸಿಕೊಳ್ಳುವ ಆಲೋಚನೆಯಿತ್ತು.

ಈ ದುರಂತದ ಕುರಿತು ʼಪರಿʼ ಪ್ರಕಟಿಸಿದ್ದ (ಮೇ 10) ಮುಖ್ಯ ವರದಿ:

ಉತ್ತರ ಪ್ರದೇಶ: ಪಂಚಾಯತ್‌ ಚುನಾವಣೆಗಳು ಮತ್ತು ಸಾವಿನ ಎಣಿಕೆ

ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದ್ದ 700ಕ್ಕೂ ಹೆಚ್ಚು ಶಾಲಾ ಶಿಕ್ಷಕರು ಕೋವಿಡ್ -19ರಿಂದ ಸಾವನ್ನಪ್ಪಿದ್ದಾರೆ ಮತ್ತು ಇನ್ನಷ್ಟು ಜನರ ಬದುಕು ಅಪಾಯದಲ್ಲಿದೆ, ಅಲ್ಲಿ ಕೇವಲ 30 ದಿನಗಳಲ್ಲಿ 8 ಲಕ್ಷ ಹೊಸ ಪ್ರಕರಣಗಳು ವರದಿಯಾಗಿವೆ

ಜಿಗ್ಯಾಸ ಮಿಶ್ರಾ | ಮುಖ್ಯ ಚಿತ್ರ: ಅಂತರಾ ರಾಮನ್‌

ಸೀತಾಪುರದ ಆಸ್ಪತ್ರೆಯ ಆಕ್ಸಿಜನ್‌ ಬೆಡ್‌ ಮೇಲೆ ಮಲಗಿ ಸಾವು ಬದುಕಿನ ನಡುವೆ ಹೋರಾಡುತ್ತಿರುವಾಗಲೂ ರಿತೇಶ್ ಮಿಶ್ರಾ ಅವರ ಸೆಲ್ ಫೋನ್ ರಿಂಗಣಿಸುತ್ತಲೇ ಇತ್ತು. ಮೇ 2ರಂದು ನಡೆಯಲಿರುವ ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಗಳ ಮತ ಎಣಿಕೆಯಂದು ಕರ್ತವ್ಯಕ್ಕೆ ತಮ್ಮ ಹಾಜರಿಯನ್ನು ಖಾತರಿಗೊಳಿಸಬೇಕೆನ್ನುವುದು ಆ ಕರೆಗಳ ಆಗ್ರಹವಾಗಿತ್ತು. ಹೀಗೆ ಸಾವಿನ ಮನೆಯ ಬಾಗಿಲಿನಲ್ಲಿದ್ದ ರಿತೇಶ್ ಮಿಶ್ರಾ ಅವರಿಗೆ ಒಂದರ ಹಿಂದೆ ಒಂದರಂತೆ ಕರೆ ಮಾಡುತ್ತಿದ್ದವರು ರಾಜ್ಯ ಚುನಾವಣಾ ಆಯೋಗ ಮತ್ತು ಸರ್ಕಾರಿ ಅಧಿಕಾರಿಗಳು.

"ಆ ಫೋನ್‌ ರಿಂಗ್‌ ನಿಲ್ಲುವುದೇ ಇಲ್ಲ" ಎಂದ ಅವರ ಪತ್ನಿ ಅಪರ್ಣಾ "ನಾನು ಕರೆ ಸ್ವೀಕರಿಸಿ ಮಾತನಾಡಿ, ರಿತೇಶ್‌ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲ ಅವರು ಆಸ್ಪತ್ರೆ ಸೇರಿದ್ದಾರೆಂದು ಹೇಳಿದಾಗ ಆ ಕಡೆಯಿಂದ ಮಾತನಾಡುತ್ತಿದ್ದ ವ್ಯಕ್ತಿ ಪುರಾವೆಯಾಗಿ ರಿತೇಶ್‌ ಹಾಸಿಗೆಯ ಮೇಲೆ ಮಲಗಿರುವ ಫೋಟೊ ತೆಗೆದು ಕಳಿಸುವಂತೆ ಕೇಳಿದರು. ನಂತರ ನಾನು ಫೋಟೊ ತೆಗೆದು ಕಳಿಸಿದೆ. ಆ ಫೋಟೊವನ್ನು ನಿಮಗೂ ಕಳಿಸುತ್ತೇನೆ" ಎಂದು ʼಪರಿʼಗೆ ತಿಳಿಸಿದ ಅವರು ನಂತರ ಆ ಫೋಟೊ ನಮಗೆ ಕಳಿಸಿದರು.

ಅಪರ್ಣಾ ಮಿಶ್ರಾ, (34) ಹೆಚ್ಚು ಒತ್ತಿ ಹೇಳುವುದು ತಾನು ತನ್ನ ಗಂಡನಿಗೆ ಚುನಾವಣಾ ಕರ್ತವ್ಯಕ್ಕೆ ಹೋಗದಂತೆ ಎಷ್ಟು ಬಲವಾಗಿ ಒತ್ತಾಯಿಸಿದ್ದೆನೆನ್ನುವ ಕುರಿತು. "ಅವರ ಡ್ಯೂಟಿ ರೋಸ್ಟರ್‌ ಬಂದ ಕ್ಷಣದಿಂದ ಕೆಲಸಕ್ಕೆ ಹೋಗುವುದು ಬೇಡವೆಂದು ಅವರನ್ನು ಒತ್ತಾಯಿಸುತ್ತಿದ್ದೆ" ಎಂದು ಅವರು ಹೇಳುತ್ತಾರೆ. "ಆದರೆ ಅವರು, ಚುನಾವಣಾ ಕರ್ತವ್ಯವನ್ನು ಕ್ಯಾನ್ಸಲ್‌ ಮಾಡಿಸಲು ಆಗುವುದಿಲ್ಲವೆಂದು ಮತ್ತೆ ಮತ್ತೆ ಹೇಳುತ್ತಿದ್ದರು. ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ ಅಧಿಕಾರಿಗಳು ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಬಹುದೆಂದೂ ಹೇಳುತ್ತಿದ್ದರು."

ರಿತೇಶ್‌ ಏಪ್ರಿಲ್ 29ರಂದು ಕೋವಿಡ್ -19 ಸೋಂಕಿನಿಂದ ಮೃತರಾದರು. ಪಂಚಾಯತ್‌ ಚುನಾವಣೆಯ ಕರ್ತವ್ಯಕ್ಕೆಂದು ತೆರಳಿ ಕೊವಿಡ್‌ನಿಂದ ನಿಧನರಾದ 700 ಕ್ಕೂ ಹೆಚ್ಚು ಯುಪಿ ಶಾಲಾ ಶಿಕ್ಷಕರಲ್ಲಿ ಇವರೂ ಒಬ್ಬರು. ʼಪರಿʼಯು ಮೃತ ಶಿಕ್ಷಕರ ಸಂಪೂರ್ಣ ಪಟ್ಟಿಯನ್ನು ಹೊಂದಿದ್ದು , ಪ್ರಸ್ತುತ ಒಟ್ಟು 713 ಮಂದಿ ಮೃತಪಟ್ಟಿದ್ದು ಅವರಲ್ಲಿ  540 ಪುರುಷರು ಮತ್ತು 173 ಮಹಿಳಾ ಶಿಕ್ಷಕರು. ಈ ಸಂಖ್ಯೆ ಇನ್ನೂ ಹೆಚ್ಚುತ್ತಿದೆ. ಉತ್ತರ ಪ್ರದೇಶವು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 8 ಲಕ್ಷ ಶಿಕ್ಷಕರನ್ನು ಹೊಂದಿರುವ ರಾಜ್ಯವಾಗಿದೆ - ಅವರಲ್ಲಿ ಹತ್ತಾರು ಸಾವಿರ ಜನರನ್ನು ಚುನಾವಣಾ ಕರ್ತವ್ಯಕ್ಕೆ ಕಳುಹಿಸಲಾಗಿದೆ.

ಸಹಾಯಕ ಶಿಕ್ಷಕರಾದ ರಿತೇಶ್ ತನ್ನ ಕುಟುಂಬದೊಡನೆ ಸೀತಾಪುರ ಜಿಲ್ಲಾ ಕೇಂದ್ರದಲ್ಲಿ ವಾಸಿಸುತ್ತಿದ್ದರು ಆದರೆ ಲಕ್ನೋದ ಗೋಸಾಯಿ ಗಂಜ್ ಬ್ಲಾಕ್‌ನ ಪ್ರಾಥಮಿಕ ಶಾಲೆಯಲ್ಲಿ ಕಲಿಸುತ್ತಿದ್ದರು. ಏಪ್ರಿಲ್ 15, 19, 26 ಮತ್ತು 29ರಂದು ನಡೆದ ನಾಲ್ಕು ಹಂತದ ಪಂಚಾಯತ್ ಚುನಾವಣೆಯಲ್ಲಿ ಹತ್ತಿರದ ಹಳ್ಳಿಯ ಶಾಲೆಯಲ್ಲಿ ಮತಗಟ್ಟೆ ಅಧಿಕಾರಿಯಾಗಿ ಕೆಲಸ ಮಾಡಲು ಅವರನ್ನು ನಿಯೋಜಿಸಲಾಗಿತ್ತು.

'When I said Ritesh is hospitalised and could not accept the duty – they demanded I send them a photograph of him on his hospital bed – as proof. I did so. I will send you that photograph', says his wife Aparna. Right: Ritesh had received this letter asking him to join for election duty.
PHOTO • Aparna Mishra
'When I said Ritesh is hospitalised and could not accept the duty – they demanded I send them a photograph of him on his hospital bed – as proof. I did so. I will send you that photograph', says his wife Aparna. Right: Ritesh had received this letter asking him to join for election duty.
PHOTO • Aparna Mishra

ʼರಿತೇಶ್‌ ಆಸ್ಪತ್ರೆಗೆ ದಾಖಲಾಗಿದ್ದು ಅವರು ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಿಲ್ಲವೆಂದು ಹೇಳಿದಾಗ ಅವರು ರಿತೇಶ್ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ಫೋಟೋವನ್ನು‌ ಕಳುಹಿಸಲು ಹೇಳಿದರು. ಈಗ ನಿಮಗೆ ಅದೇ ಫೋಟೊವನ್ನು ಕಳಿಸಿದ್ದೇನೆʼ ಎಂದು ಅವರ ಪತ್ನಿ ಅಪರ್ಣಾ ಮಿಶ್ರಾ ಹೇಳಿದರು. ಬಲ: ತಮ್ಮ ಚುನಾವಣಾ ಕಾರ್ಯಕ್ಕೆ ಹಾಜರಾಗುವಂತೆ ಆದೇಶಿಸಿ ರಿತೀಶ್ ಅವರಿಗೆ ಈ ಪತ್ರ ಬಂದಿತ್ತು

ಉತ್ತರಪ್ರದೇಶದ ಪಂಚಾಯತ್ ಚುನಾವಣೆ ಬಹಳ ದೊಡ್ಡ ಮಟ್ಟದ್ದು. ಮತ್ತು ಈ ವರ್ಷ 8 ಲಕ್ಷಕ್ಕೂ ಹೆಚ್ಚು ಸ್ಥಾನಗಳಿಗೆ 13 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರು. 13 ಕೋಟಿ ಅರ್ಹ ಮತದಾರರು ನಾಲ್ಕು ವಿಭಿನ್ನ ನೇರ ಚುನಾವಣೆಗಳಿಗೆ ಮತ ಚಲಾಯಿಸಬೇಕಿತ್ತು. ಒಟ್ಟು 52 ಕೋಟಿ ಮತಪತ್ರಗಳು ಸಿದ್ಧವಾಗಿದ್ದವು. ಈ ಸಮಯದಲ್ಲಿ ಇಷ್ಟು ದೊಡ್ಡ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಚುನಾವಣಾ ಅಧಿಕಾರಿಗಳ ಪಾಲಿಗೆ ದೊಡ್ಡ ಅಪಾಯದ ಕಂದಕವಾಗಿತ್ತು.

ಕರೋನಾ ಅಲೆ ಕಾಳ್ಗಿಚ್ಚಿನಂತೆ ಹರಡುತ್ತಿರುವಾಗ ಶಿಕ್ಷಕರು ಮತ್ತು ಶಿಕ್ಷಕರ ಸಂಘಟನೆಗಳು ಈ ಚುನಾವಣಾ ಕರ್ತವ್ಯದ ನಿಯೋಜನೆಯನ್ನು ವಿರೋಧಿಸಿದ್ದವು. ಆದರೆ ಅದನ್ನು ನಿರ್ಲಕ್ಷಿಸಲಾಗಿತ್ತು. ಯುಪಿ ಶಿಕ್ಷಕರ ಒಕ್ಕೂಟವು ಏಪ್ರಿಲ್ 12ರಂದು ರಾಜ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಈ ವಿಷಯದ ಬಗ್ಗೆ ಗಮನ ಸೆಳೆದಿತ್ತು. ವಾಸ್ತವವಾಗಿ, ಶಿಕ್ಷಕರನ್ನು ವೈರಸ್‌ನಿಂದ ರಕ್ಷಿಸಲು ಯಾವುದೇ ಮುನ್ನೆಚ್ಚರಿಕೆ ಕ್ರಮಗಳು ಅಥವಾ ನಿಯಮಗಳು ಇದ್ದಿರಲಿಲ್ಲ. ಅಧಿಕಾರಿಗಳಿಗೆ ತರಬೇತಿ ನೀಡುವುದು, ಮತಪೆಟ್ಟಿಗೆಗಳನ್ನು ನಿರ್ವಹಿಸುವುದು ಮತ್ತು ಸಾವಿರಾರು ಜನರೊಂದಿಗೆ ಸಂವಹನ ನಡೆಸುವ ಅಪಾಯಗಳನ್ನು ಇದು ಎತ್ತಿ ತೋರಿಸಿತ್ತು. ಇಂತಹ ಅಪಾಯದ ಸಂದರ್ಭದಲ್ಲಿ ಚುನಾವಣೆಯನ್ನು ಮುಂದೂಡಬೇಕೆಂದು ಫೆಡರೇಶನ್ ಒತ್ತಾಯಿಸಿತ್ತು. ಏಪ್ರಿಲ್ 28 ಮತ್ತು 29ರಂದು ಬರೆದ ಪತ್ರಗಳಲ್ಲಿ ಎಣಿಕೆಯ ದಿನಾಂಕವನ್ನು ಮುಂದೂಡಲು ಕೋರಲಾಗಿತ್ತು.

"ನಾವು ರಾಜ್ಯ ಚುನಾವಣಾ ಆಯುಕ್ತರಿಗೆ ಮೇಲ್ ಮೂಲಕ ಮತ್ತು ವೈಯುಕ್ತಿವಾಗಿಯೂ ಪತ್ರಗಳನ್ನು ಕಳಿಸಿದ್ದೆವು. ಆದರೆ ಒಂದಕ್ಕೂ ಉತ್ತರ ಅಥವಾ ಸ್ವೀಕೃತಿ ಬಂದಿರಲಿಲ್ಲ.‌" ಎಂದು ಯುಪಿ ಶಿಕ್ಷಕ ಮಹಾಸಂಘದ ಅಧ್ಯಕ್ಷ ದಿನೇಶ್ ಚಂದ್ರ ಶರ್ಮಾ ʼಪರಿʼಗೆ ತಿಳಿಸಿದರು. "ನಾವು ಮುಖ್ಯಮಂತ್ರಿಯವರಿಗೂ ಪತ್ರಗಳನ್ನು ಬರೆದಿದ್ದೆವು ಆದರೆ ಯಾವುದೇ ಪ್ರತಿಕ್ರಿಯೆ ದೊರೆತಿರಲಿಲ್ಲ."

ಮೊದಲಿಗೆ ಶಿಕ್ಷಕರು ಒಂದು ದಿನದ ತರಬೇತಿಗಾಗಿ ಹೋಗಿ ನಂತರ ಎರಡು ದಿನಗಳ ಮತದಾನದ ಕರ್ತವ್ಯಕ್ಕಾಗಿ ತೆರಳಿದರು. ನಂತರ ಮತ್ತೆ ಮತ ಎಣಿಕೆಗಾಗಿ ಸಾವಿರಾರು ಶಿಕ್ಷಕರು ವರದಿ ಮಾಡಿಕೊಳ್ಳಬೇಕಾಯಿತು. ಈ ಕರ್ತವ್ಯಗಳನ್ನು ನಿರ್ವಹಿಸವುದು ಶಿಕ್ಷಕರ ಪಾಲಿಗೆ ಕಡ್ಡಾಯವಾಗಿದ್ದು, ಈಗಾಗಲೇ ತಮ್ಮ ತರಬೇತಿಯ ದಿನವನ್ನು ಪೂರೈಸಿದ್ದ ರಿತೇಶ್ ಅವರು ಏಪ್ರಿಲ್ 18ರಂದು ಚುನಾವಣಾ ಕರ್ತವ್ಯಕ್ಕಾಗಿ ವರದಿ ಮಾಡಿಕೊಂಡರು. "ಅಲ್ಲಿ ವಿವಿಧ ಇಲಾಖೆಗಳ ಇತರ ಸರ್ಕಾರಿ ಸಿಬ್ಬಂದಿಯೊಂದಿಗೆ ಕೆಲಸ ಮಾಡಿದ ಅವರಿಗೆ ಅವರಲ್ಲಿ ಯಾರೊಬ್ಬರೂ ಈ ಮೊದಲು ಪರಿಚಿತರಲ್ಲ" ಎಂದು ಅಪರ್ಣಾ ಹೇಳುತ್ತಾರೆ.

"ಅವರು ತನ್ನ ಕರ್ತವ್ಯ ಕೇಂದ್ರಕ್ಕೆ ಹೋಗುವ ಮೊದಲು ಕಳಿಸಿದ್ದ ಸೆಲ್ಫಿಯನ್ನು ನಿಮಗೆ ತೋರಿಸುತ್ತೇನೆ ನೋಡಿ. ಅದು ಸುಮೋ ಅಥವಾ ಬೊಲೆರೊ ಗಾಡಿಯಾಗಿತ್ತು, ಅದರಲ್ಲಿ ಅವರು ಇತರ ಇನ್ನಿಬ್ಬರು ಪುರುಷರ ಜೊತೆ ಕುಳಿತಿದ್ದರು. ಚುನಾವಣಾ ಕರ್ತವ್ಯಕ್ಕಾಗಿ ಸುಮಾರು 10 ಜನರನ್ನು ಕರೆದೊಯ್ಯುತ್ತಿದ್ದ ಫೋಟೋವೊಂದನ್ನು ಕಳಿಸಿದ್ದಾಗ ನಾನು ಭಯಭೀತಳಾಗಿದ್ದೆ" ಎಂದು ಅಪರ್ಣ ಹೇಳುತ್ತಾರೆ. ಅದಾದ ನಂತರ ಮತದಾನ ಕೇಂದ್ರದಲ್ಲಿಯೂ ಅನೇಕ ಜನರ ಸಂಪರ್ಕಕ್ಕೆ ಬಂದಿದ್ದರು."

ಚಿತ್ರ: ಜಿಗ್ಯಾಸ ಮಿಶ್ರಾ

ಶಿಕ್ಷಕರು ಆರಂಭದಲ್ಲಿ ಒಂದು ದಿನದ ತರಬೇತಿಗಾಗಿ ಹೋದರು, ನಂತರ ಎರಡು ದಿನಗಳ ಚುನಾವಣಾ ಕೆಲಸ - ತಯಾರಿಯ ಮೊದಲ ದಿನ ಮತ್ತು ನೇರ ಮತದಾನದ ಎರಡು ದಿನ. ನಂತರ ಮತ್ತೆ, ಮತಗಳನ್ನು ಎಣಿಸಲು ಸಾವಿರಾರು ಜನರ ಅಗತ್ಯವಿತ್ತು. ಈ ಎಲ್ಲಾ ಕೆಲಸಗಳಿಗೂ ಹಾಜರಿರುವುದು ಕಡ್ಡಾಯವಾಗಿತ್ತು

"ಏಪ್ರಿಲ್ 19ರಂದು ನಡೆದ ಮತದಾನದ ಕರ್ತವ್ಯದಿಂದ ಹಿಂದಿರುಗಿದಾಗ ಅವರಿಗೆ 103 ಡಿಗ್ರಿ ಜ್ವರ ಬಂದಿತ್ತು. ತಾನು ಅನಾರೋಗ್ಯ ಹೊಂದಿರುವುದಾಗಿ ನನಗೆ ಫೋನ್‌ ಮೂಲಕ ತಿಳಿಸಿದ್ದರು. ನಾನು ತಕ್ಷಣ ಮನೆಗೆ ಮರಳುವಂತೆ ಅವರಿಗೆ ಹೇಳಿದ್ದೆ. ಎರಡು ದಿನಗಳ ಆಯಾಸದ ಕಾರಣ ಜ್ವರ ಬಂದಿರಬಹುದೆಂದು ಭಾವಿಸಿ ನಾವು ಸರಳವಾದ ಚಿಕಿತ್ಸೆಯನ್ನು ಮಾಡಿದೆವು. ಆದರೆ ಮೂರು ದಿನ ಕಳೆದರೂ ಜ್ವರ ಕಡಿಮೆಯಾಗಲಿಲ್ಲ ನಂತರ ನಾವು ವೈದ್ಯರ ಬಳಿಗೆ ಹೋದೆವು. ಅವರು ತಕ್ಷಣವೇ ಕೋವಿಡ್ ಟೆಸ್ಟ್ ಮತ್ತು ಸಿಟಿ ಸ್ಕ್ಯಾನ್ ಮಾಡಿಸಲು ಹೇಳಿದರು.”

"ನಾವು ಎರಡೂ ಟೆಸ್ಟ್‌ ಮಾಡಿಸಿದೆವು - ವರದಿ ಪಾಸಿಟಿವ್‌ ಎಂದು ತೋರಿಸಿತು. ಅಂದು ಇಡೀ ದಿನ ಆಸ್ಪತ್ರೆಗಾಗಿ ಅಲೆದಾಡಿದೆವು. ಲಕ್ನೋದಲ್ಲಿ ಕನಿಷ್ಟ 10 ಆಸ್ಪತ್ರೆಗಳಲ್ಲಿ ಬೆಡ್‌ಗಾಗಿ ಹುಡುಕಿದ್ದೆವು. ಕೊನೆಗೆ ಸಾಕಷ್ಟು ಅಲೆದಾಟದ ನಂತರ ಸೀತಾಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ರಾತ್ರಿಯ ಹೊತ್ತಿಗೆ ಬೆಡ್‌ ಸಿಕ್ಕಿತು. ಅಷ್ಟೊತ್ತಿಗೆ ಅವರಿಗೆ ಗಂಭೀರ ಉಸಿರಾಟದ ತೊಂದರೆ ಆರಂಭವಾಗಿತ್ತು.

"ವೈದ್ಯರು ದಿನಕ್ಕೆ ಒಂದು ಬಾರಿ, ಮಧ್ಯರಾತ್ರಿ 12 ರ ಸುಮಾರಿಗೆ ಬರುತ್ತಿದ್ದರು. ಮತ್ತು ನಾವು ಎಷ್ಟೇ ಕರೆದರೂ ಆಸ್ಪತ್ರೆಯ ಸಿಬ್ಬಂದಿ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಏಪ್ರಿಲ್ 29ರಂದು ಸಂಜೆ 5.15ಕ್ಕೆ ಕೋವಿಡ್ ಜೊತೆಗಿನ ಅವರ ಹೋರಾಟ ಕೊನೆಗೊಂಡಿತು. ಅವರು ಬದುಕಿಗಾಗಿ ಸಾಕಷ್ಟು ಹೋರಾಟ ನಡೆಸಿದರು, ನಾವು ಕೂಡ ನಮ್ಮಿಂದ ಸಾಧ್ಯವಿರುವುದನ್ನೆಲ್ಲ ಮಾಡಿದೆವು, ಆದರೂ ನಮ್ಮ ಕಣ್ಣ ಮುಂದೆಯೇ ಇಲ್ಲವಾದರು,"

"ರಿತೇಶ್‌ ಅವರು ಅಪರ್ಣ, ಅವರ ಒಂದು ವರ್ಷದ ಮಗಳು ಮತ್ತು ಅವರ ಪೋಷಕರ ಐದು ಜನರ ಕುಟುಂಬದ ಏಕೈಕ ದುಡಿಮೆಯಿರುವ ಸದಸ್ಯರಾಗಿದ್ದರು. ಅಪರ್ಣಾ ಅವರೊಡನೆ ರೀತೇಶರ ವಿವಾಹ 2013ರಲ್ಲಿ ಜರುಗಿತ್ತು. ಎಪ್ರಿಲ್‌ 2020ರಲ್ಲಿ ಅವರ ಮೊದಲ ಮಗುವನ್ನು ಹೊಂದಿದ್ದರು. "ನಾವು ಮೇ 12ರಂದು ನಮ್ಮ ಎಂಟನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಬೇಕಿತ್ತು” ಎಂದು ಅಪರ್ಣಾ ದುಃಖಿಸುತ್ತಾ ಹೇಳಿದರು. "ಆದರೆ ಅವರು ಅದಕ್ಕೂ ಮೊದಲು ನನ್ನನ್ನು ಅಗಲಿದರು..." ಮುಂದೆ ಮಾತನಾಡಲು ಅವರಿಂದ ಸಾಧ್ಯವಾಗಲಿಲ್ಲ.

*****

ಕೋವಿಡ್‌ -19 ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ರಾಜಕೀಯ ರ‍್ಯಾಲಿಗಳಿಗೆ ಅವಕಾಶ ನೀಡಿದ್ದಕ್ಕಾಗಿ ಏಪ್ರಿಲ್ 26ರಂದು ಮದ್ರಾಸ್ ಹೈಕೋರ್ಟ್ ಭಾರತದ ಚುನಾವಣಾ ಆಯೋಗದ (ಇಸಿಐ) ವಿರುದ್ಧ ವಾಗ್ದಾಳಿ ನಡೆಸಿತ್ತು . ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಇಸಿಐನ ವಕೀಲರಿಗೆ ಹೀಗೆ ಹೇಳಿದರು: "ಕೊವಿಡ್‌ - 19 ಎರಡನೇ ಅಲೆಯ ಹರಡುವಿಕೆಗೆ ನಿಮ್ಮ ಸಂಸ್ಥೆ ಏಕೈಕ ಹೊಣೆಗಾರ." ಅಲ್ಲದೆ ಮುಖ್ಯ ನ್ಯಾಯಾಧೀಶರು ಮೌಖಿಕವಾಗಿ "ನಿಮ್ಮ ಅಧಿಕಾರಿಗಳ ಮೇಲೆ ಕೊಲೆ ಆರೋಪ ಹೊರಿಸಬೇಕು" ಎಂದು ಹೇಳುವಷ್ಟು ಆಕ್ರೋಶಗೊಂಡಿದ್ದರು.

ನ್ಯಾಯಾಲಯದ ಆದೇಶದ ಹೊರತಾಗಿಯೂ, ಚುನಾವಣಾ ಪ್ರಚಾರದ ಸಮಯದಲ್ಲಿ ಮಾಸ್ಕ್‌ಗಳು, ಸ್ಯಾನಿಟೈಜರ್‌ಗಳು ಮತ್ತು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಅಗತ್ಯವಾದ ಕಟ್ಟುನಿಟ್ಟಾದ ನಿಯಮಗಳನ್ನು ನಿರ್ವಹಿಸಲು ಆಯೋಗವು ವಿಫಲವಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿತು.

At Lucknow’s Sarojini Nagar, May 2, counting day: Panchayat polls in UP are gigantic and this one saw nearly 1.3 million candidates contesting over 8 lakh seats
PHOTO • Jigyasa Mishra
At Lucknow’s Sarojini Nagar, May 2, counting day: Panchayat polls in UP are gigantic and this one saw nearly 1.3 million candidates contesting over 8 lakh seats
PHOTO • Jigyasa Mishra

ಲಕ್ನೋದ ಸರೋಜಿನಿ ನಗರ, ಮೇ 2, ಎಣಿಕೆಯ ದಿನ: ಉತ್ತರಪ್ರದೇಶದಲ್ಲಿ ಪಂಚಾಯತ್ ಚುನಾವಣೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತವೆ. ಈ ವರ್ಷ 8 ಲಕ್ಷಕ್ಕೂ ಹೆಚ್ಚು ಸ್ಥಾನಗಳಿಗೆ 13 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದರು

ಮರುದಿನ, ಏಪ್ರಿಲ್ 27 ರಂದು, ಅಲಹಾಬಾದ್ ಹೈಕೋರ್ಟ್‌ ನ್ಯಾಯಪೀಠವು ಯುಪಿ ರಾಜ್ಯ ಚುನಾವಣಾ ಆಯೋಗಕ್ಕೆ ನೋಟೀಸ್‌ ನೀಡಿ "ಇತ್ತೀಚೆಗೆ ನಡೆದ ಪಂಚಾಯತ್‌ ಚುನಾವಣೆಯ ಹಲವು ಹಂತಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿದ್ದನ್ನು ಪರಿಶೀಲಿಸುವಲ್ಲಿ ಆಯೋಗ ಯಾಕೆ ವಿಫಲವಾಯಿತು, ಮತ್ತು ಈ ವೈಫಲ್ಯಕ್ಕಾಗಿ ಅಧಿಕಾರಿಗಳ ವಿರುದ್ಧ ಯಾಕೆ ಕ್ರಮ ಕೈಗೊಳ್ಳಬಾರದು? ಮತ್ತು ಅಂತಹ ಉಲ್ಲಂಘನೆಗಳಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಏಕೆ ಜರುಗಿಸಬಾರದು.” ಎಂದು ಕೇಳಿದೆ.

ಒಂದು ಸುತ್ತಿನ ಮತದಾನ ಮತ್ತು ಮತಗಳ ಎಣಿಕೆ ಉಳಿದಿರುವಾಗ, ನ್ಯಾಯಾಲಯವು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿತು - "ಮುಂಬರುವ ಸುತ್ತಿನ ಮತದಾನದಲ್ಲಿ, ಮಾಸ್ಕ್ ಧರಿಸುವಿಕೆ ಮತ್ತು ದೈಹಿಕ ಅಂತರವನ್ನು ಕಾಪಾಡಲು ಕೋವಿಡ್ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು."

ಆ ಸಮಯದಲ್ಲಿ ಸಾವಿನ ಸಂಖ್ಯೆ 135 ಇತ್ತು, ಅಮರ್ ಉಜಾಲಾ ದೈನಿಕದಲ್ಲಿ ವರದಿಯಾದ ನಂತರ ಈ ವಿಷಯ ಹೊರಬಿದ್ದಿತು.

ಆದರೆ ಕೋರ್ಟ್‌ ನೋಟಿಸಿನಿಂದ ಅಂತಹ ಬದಲಾವಣೆಯೇನೂ ಕಂಡುಬರಲಿಲ್ಲ.

ಮೇ 1ರಂದು, ಮತ ಎಣಿಕೆಗೆ ಕೇವಲ 24 ಗಂಟೆಗಳ ಮೊದಲು, ಸುಪ್ರೀಂ ಕೋರ್ಟ್ ಸರ್ಕಾರವನ್ನು "ಈ ಚುನಾವಣೆಯಲ್ಲಿ ಸುಮಾರು 700 ಶಿಕ್ಷಕರು ಸಾವನ್ನಪ್ಪಿದ್ದಾರೆ. ಇದರ ಕುರಿತು ನೀವು ಕ್ರಮ ಕೈಗೊಂಡಿದ್ದೀರಿ?" ಎಂದು ಆಕ್ರೋಶದಿಂದ ಕೇಳಿತು.  (ಉತ್ತರ ಪ್ರದೇಶವು ಹಿಂದಿನ 24 ಗಂಟೆಗಳಲ್ಲಿ ಕೋವಿಡ್ -19 ಪ್ರಕರಣಗಳನ್ನು 34,372 ವರದಿ ಮಾಡಿದೆ).

ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರ ಉತ್ತರ ಹೀಗಿತ್ತು: "ಚುನಾವಣೆಗಳು ನಡೆಯದ ರಾಜ್ಯಗಳಲ್ಲಿಯೂ ಸಹ ಕೊರೋನಾ ಪ್ರಕರಣಗಳಲ್ಲಿ ಇದೇ ರೀತಿಯ ಹೆಚ್ಚಳ ಕಂಡುಬಂದಿದೆ. ದೆಹಲಿಯಲ್ಲಿ ಯಾವುದೇ ಚುನಾವಣೆಗಳು ನಡೆದಿಲ್ಲ ಆದರೆ ಅಲ್ಲಿ ಬೆಳವಣಿಗೆಯ ದರ ಇನ್ನೂ ಹೆಚ್ಚಾಗಿದೆ. ನಾವು ಚುನಾವಣೆ ಆರಂಭಿಸಿದ ಸಮಯದಲ್ಲಿ ಕೋವಿಡ್ ಎರಡನೇ ಅಲೆ ಪ್ರಾರಂಭಗೊಂಡಿರಲಿಲ್ಲ."

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಚುನಾವಣೆಗಳು ಮತ್ತು ಮತದಾನಗಳು ಸಾವಿಗೆ ಕಾರಣವಲ್ಲ.

'The arrangements for safety of the government staff arriving for poll duty were negligible', says Santosh Kumar
PHOTO • Jigyasa Mishra
'The arrangements for safety of the government staff arriving for poll duty were negligible', says Santosh Kumar
PHOTO • Jigyasa Mishra

"ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ ಸರ್ಕಾರಿ ಸಿಬ್ಬಂದಿಗೆ ಸುರಕ್ಷತಾ ವ್ಯವಸ್ಥೆ ಅಸಮರ್ಪಕವಾಗಿತ್ತು" ಎಂದು ಸಂತೋಷ್ ಕುಮಾರ್ ಹೇಳುತ್ತಾರೆ .

"ಯಾರು ಸೋಂಕಿಗೆ ಒಳಗಾಗಿದ್ದಾರೆ ಮತ್ತು ಯಾರು ಆಗಿಲ್ಲವೆನ್ನುವ ಕುರಿತು ನಮ್ಮ ಬಳಿ ಯಾವುದೇ ಅಧಿಕೃತ ಮಾಹಿತಿ ಇದ್ದಿರಲಿಲ್ಲ" ಎಂದು ಉತ್ತರ ಪ್ರದೇಶದ ಪ್ರಾಥಮಿಕ ಶಿಕ್ಷಣ ಸಚಿವ ಸತೀಶ್ ಚಂದ್ರ ದ್ವಿವೇದಿ ಪಿಟಿಐಗೆ ತಿಳಿಸಿದ್ದಾರೆ. "ನಾವು ಯಾವುದೇ ಆಡಿಟ್ ಮಾಡಿಲ್ಲ. ‌ಕೇವಲ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರು ಮಾತ್ರ ಪಾಸಿಟಿವ್‌ ಆಗಿಲ್ಲ. ಅಲ್ಲದೇ ಅವರಿಗೆ ಕರ್ತವ್ಯಕ್ಕೆ ಬರುವ ಮೊದಲೇ ಕೋವಿಡ್‌ ಸೋಂಕು ತಗುಲಿರಲಿಲ್ಲವೆಂದು ಹೇಗೆ ಹೇಳಬಲ್ಲಿರಿ?" ಎಂದು ಅವರು ಕೇಳುತ್ತಾರೆ.

ಆದಾಗ್ಯೂ, ಅಧಿಕೃತ ಅಂಕಿಅಂಶಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ, "ಜನವರಿ 30, 2020 ಮತ್ತು ಏಪ್ರಿಲ್ 4, 2021ರ ನಡುವೆ - 15 ತಿಂಗಳ ಅವಧಿಯಲ್ಲಿ, ಯುಪಿ ಒಟ್ಟು 6.3 ಲಕ್ಷ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ." ನಂತರದ 30 ದಿನಗಳಲ್ಲಿ ಏಪ್ರಿಲ್‌ ತಿಂಗಳಿನಲ್ಲಿ ಯುಪಿಯಲ್ಲಿ 8 ಲಕ್ಷ ಹೊಸ ಪ್ರಕರಣಗಳನ್ನು ಗುರುತಿಸಲಾಗಿದ್ದು, ಯುಪಿಯಲ್ಲಿ ಒಟ್ಟು ರೋಗಿಗಳ ಸಂಖ್ಯೆ 14 ಲಕ್ಷಕ್ಕೆ ತಲುಪಿದೆ. ಈ ಅವಧಿಯಲ್ಲಿ ಗ್ರಾಮೀಣ ಪ್ರದೇಶದಲ್ಲಿ ಚುನಾವಣೆಗಳು ನಡೆದಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ರಾಜ್ಯದಲ್ಲಿ ಚುನಾವಣೆಗೆ ಸಂಬಂಧಿಸಿದ ಚಟುವಟಿಕೆಳು ಪ್ರಾರಂಭಗೊಂಡ ಒಂದು ತಿಂಗಳೊಳಗೆ, ಸಾಂಕ್ರಾಮಿಕ ಪಿಡುಗಿನ ಅವಧಿಯಲ್ಲೇ ಅತಿ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ.

ನಿಧನರಾದ 706 ಶಿಕ್ಷಕರ ಪಟ್ಟಿಯನ್ನು ಏಪ್ರಿಲ್ 29ರಂದು ಸಿದ್ಧಪಡಿಸಲಾಗಿದೆ. ಅಜಮ್‌ಗಢದಲ್ಲಿ 34 ಶಿಕ್ಷಕರು ಸಾವನ್ನಪ್ಪಿದ್ದಾರೆ. ಅಲ್ಲದೆ, ಗೋರಖ್‌ಪುರದಲ್ಲಿ 28, ಜಾನ್‌ಪುರದಲ್ಲಿ 23 ಮತ್ತು ಲಕ್ನೋದಲ್ಲಿ 27 ಶಿಕ್ಷಕರು ಸಾವನ್ನಪ್ಪಿದ್ದಾರೆ. ಸಾವಿನ ಸಾಲು ಇನ್ನೂ ನಿಂತಿಲ್ಲ ಎಂದು ಯುಪಿ ಶಿಕ್ಷಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸುಧಾಂಶು ಮೋಹನ್ ಹೇಳಿದ್ದಾರೆ. ಮೇ 4ರಂದು ಅವರು "ಶಿಕ್ಷಕರು ಚುನಾವಣೆಯಿಂದ ಹಿಂದಿರುಗುತ್ತಿದ್ದಾರೆ ಮತ್ತು ಕಳೆದ ಐದು ದಿನಗಳಲ್ಲಿ ಇನ್ನೂ ಏಳು ಶಿಕ್ಷಕರು ಸಾವನ್ನಪ್ಪಿದ್ದಾರೆ" ಎಂದು ಹೇಳಿದರು.( ಈ ಏಳು ಹೆಸರುಗಳನ್ನು ಪರಿ ಲೈಬ್ರರಿಯಲ್ಲಿ ಸೇರಿಸಲಾಗಿರುವ ಪಟ್ಟಿಯಲ್ಲಿ ಸೇರಿಸಲಾಗಿದೆ.)

ಅದೇನೇ ಇದ್ದರೂ ರಿತೇಶ್‌ ಕುಮಾರ್ ಅವರ ದುರಂತದ ಕತೆಯು ಅಲ್ಲಿನ ಕನಿಷ್ಠ 713 ಕುಟುಂಬಗಳ ಬದುಕಿನಲ್ಲಿ ಏನಾಗುತ್ತಿದೆಯೆನ್ನುವುದರ ಒಂದು ನೋಟವನ್ನು ನಮಗೆ ನೀಡುತ್ತದೆ, ಆದರೆ ಅದು  ಪೂರ್ಣ ಚಿತ್ರಣವಲ್ಲ. ಅಲ್ಲಿ ಪ್ರಸ್ತುತ ಕೋವಿಡ್‌ ಜೊತೆ ಹೋರಾಡುತ್ತಿರುವವರು, ಟೆಸ್ಟ್‌ ಮಾಡಿಸಿ ವರದಿಗಾಗಿ ಕಾಯುತ್ತಿರುವವರು ಇದ್ದಾರೆ. ಅವರೊಂದಿಗೆ ಕರ್ತವ್ಯದಿಂದ ಹಿಂತಿರುಗಿ ಯಾವುದೇ ಲಕ್ಷಣಗಳಿಲ್ಲದಿದದ್ದರೂ ಸೆಲ್ಫ್ ಕ್ವಾರಂಟೈನ್‌ ಆದವರೂ ಇದ್ದಾರೆ.‌ ಅವರೆಲ್ಲರ ನೈಜ ಪರಿಸ್ಥಿತಿಯನ್ನು ನೋಡಿದರೆ, ಮದ್ರಾಸ್ ಮತ್ತು ಅಲಹಾಬಾದ್ ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟು ಯಾಕೆ ಆಕ್ರೋಶದ ಪ್ರತಿಕ್ರಿಯೆ ನೀಡಿದವೆನ್ನುವುದು ಅರ್ಥವಾಗಬಹುದು.

ಲಕ್ನೋದ ಗೋಸಾಯಿಗಂಜ್ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಸಂತೋಷ್ ಕುಮಾರ್ (43), ಚುನನಾವಣಾ ಕರ್ತವ್ಯಕ್ಕೆ ಆಗಮಿಸಿದ ಸರ್ಕಾರಿ ಸಿಬ್ಬಂದಿಗೆ ಭದ್ರತಾ ವ್ಯವಸ್ಥೆಗಳು ಸಮರ್ಪಕವಾಗಿರಲಿಲ್ಲ ಎಂದು ಹೇಳಿದರು. ನಾವೆಲ್ಲರೂ ಸಾಮಾಜಿಕ ಅಂತರ ಪರಿಗಣಿಸದೆ ಬಸ್ಸುಗಳು ಅಥವಾ ಇತರ ವಾಹನಗಳನ್ನು ಬಳಸಬೇಕಾಗಿತ್ತು. ನಂತರ, ಆಗಮಿಸಿದಾಗ, ಕೆಲಸದ ಸ್ಥಳದಲ್ಲಿ, ಮುನ್ನೆಚ್ಚರಿಕೆ ಕ್ರಮವಾಗಿ ನಮಗೆ ಯಾವುದೇ ಕೈಗವಸುಗಳು ಅಥವಾ ಸ್ಯಾನಿಟೈಜರ್‌ಗಳು ಸಿಗಲಿಲ್ಲ. ನಾವು ಕೊಂಡು ಹೋಗಿದ್ದ ವಸ್ತುಗಳನ್ನೇ ಬಳಸಬೇಕಾಯಯಿತು. ವಾಸ್ತವವಾಗಿ, ನಾವು ನಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದ ಹೆಚ್ಚುವರಿ ಮಾಸ್ಕಿನನಿಂದ ನಮ್ಮ ಮುಖವನ್ನು ಮುಚ್ಚಿಕೊಳ್ಳದೆ ಮತ ಚಲಾಯಿಸಲು ಬಂದ ಮತದಾರರಿಗೆ ನೀಡಿದೆವು."

ಚಿತ್ರ: ಅಂತರಾ ರಾಮನ್

ʼನನ್ನ ಅಡುಗೆಯವರು ಎರಡು ದಿನಕ್ಕೊಮ್ಮೆ ಕರೆ ಮಾಡುತ್ತಿದ್ದಾರೆ, ಆಕೆ ಹಳ್ಳಿಯಲ್ಲಿ ದಿನವೂ ಹದಗೆಡುತ್ತಿರುವ ಪರಿಸ್ಥಿತಿ ಕುರಿತು ವಿವರಿಸುತ್ತಿದ್ದಾರೆ. ಅಲ್ಲಿನ ಜನರಿಗೆ ಅವರು ಯಾಕೆ ಸಾಯುತ್ತಿದ್ದಾರೆಂದು ಸಹ ತಿಳಿದಿಲ್ಲ'

"ಡ್ಯೂಟಿ ರದ್ದುಗೊಳಿಸುವ ಆಯ್ಕೆ ನಮಗೆ ಇರಲಿಲ್ಲವೆಂಬುದು ನಿಜ" ಎಂದು ಅವರು ಹೇಳುತ್ತಾರೆ. “ರೋಸ್ಟರ್‌ನಲ್ಲಿ ನಿಮ್ಮ ಹೆಸರು ಬಂದ ನಂತರ, ನೀವು ಕರ್ತವ್ಯಕ್ಕೆ ಹೋಗಲೇಬೇಕು. ಗರ್ಭಿಣಿಯರು ಸಹ ಚುನಾವಣಾ ಕರ್ತವ್ಯಕ್ಕೆ ಹೋಗಬೇಕಾಗಿತ್ತು, ಅವರ ರಜೆ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು". ಕುಮಾರ್ ಅವರಲ್ಲಿ ಇಲ್ಲಿಯವರೆಗೆ ಯಾವುದೇ ರೋಗಲಕ್ಷಣಗಳು ಕಾಣಿಸಿಲ್ಲ - ಮತ್ತು ನಂತರ ಮೇ 2ರ ಮತ ಎಣಿಕೆಯಲ್ಲೂ ಭಾಗವಹಿಸಿದ್ದಾರೆ.

ಲಖಿಂಪುರ ಜಿಲ್ಲೆಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯೆಯಾದ ಮಿತು ಅವಸ್ಥಿ ಅಷ್ಟು ಅದೃಷ್ಟಶಾಲಿಯಾಗಿರಲಿಲ್ಲ. ಅವರು ಪರಿಯೊಡನೆ ಹೇಳಿದಂತೆ; "ನಾನು ತರಬೇತಿ ಕೋಣೆಗೆ ಹೋಗಿ ನೋಡಿದರೆ ಅಲ್ಲಿ 60 ಜನರಿದ್ದರು. ಅವರೆಲ್ಲರೂ ಲಖಿಂಪುರ ಬ್ಲಾಕ್‌ನ ವಿವಿಧ ಶಾಲೆಗಳಿಂದ ಬಂದವರು. ಅವರೆಲ್ಲರೂ ಅಲ್ಲಿ ಒತ್ತೊತ್ತಾಗಿ ಕುಳಿತಿದ್ದರು. ಒಂದೇ ಮತಪೆಟ್ಟಿಗೆ ಬಳಸಿ ಎಲ್ಲರಿಗೂ ತರಬೇತಿ ನೀಡಲಾಗುತ್ತಿತ್ತು. ಒಟ್ಟಾರೆ ಅಲ್ಲಿನ ಸ್ಥಿತಿ ಕಲ್ಪನೆಗೂ ಮೀರಿ ಭಯಾನಕವಾಗಿತ್ತು."

ನಂತರ 38 ವರ್ಷದ ಅವಸ್ಥಿ ಕೋವಿಡ್ ಸೋಂಕಿಗೆ ಒಳಗಾದರು. ಅದೇ ಸಮಯದಲ್ಲಿ ಅವರು ತರಬೇತಿ ಪಡೆದಿದ್ದರು. ಅವರ ಪ್ರಕಾರ ಅವರು ಸೋಂಕಿಗೆ ಒಳಗಾಗಲು ಈ ತರಬೇತಿಯೇ ಕಾರಣ. ನಂತರ ಎಣಿಕೆಯ ಕರ್ತವ್ಯಕ್ಕೆ ಹೋಗಲಿಲ್ಲ. ಅದಕ್ಕೆ ಅವರ ಶಾಲೆಯ ಇನ್ನೊಬ್ಬರನ್ನು ನಿಯೋಜಿಸಲಾಯಿತು.

ನಮ್ಮ ಶಾಲೆಯ ಸಹಾಯಕ ಶಿಕ್ಷಕರಾಗಿರುವ ಇಂದ್ರಕಾಂತ್ ಯಾದವ್ ಇದುವರೆಗೂ ಚುನಾವಣಾ ಕರ್ತವ್ಯಕ್ಕೆ ಹೋಗಿರಲಿಲ್ಲ. ಆದರೆ ಈ ಬಾರಿ ಅವರನ್ನು ನಿಯೋಜಿಸಲಾಯಿತು.” ಎಂದರು. "ಯಾದವ್ ಅಂಗವಿಕಲರು. ಅವರಿಗೆ ಒಂದು ಕೈ ಮಾತ್ರ ಇದೆ. ಆದರೂ ಅವರನ್ನು ಕೆಲಸಕ್ಕೆ ಕಳುಹಿಸಲಾಯಿತು. ಹಿಂದಿರುಗಿದ ಒಂದೆರಡು ದಿನಗಳಲ್ಲಿ ಅನಾರೋಗ್ಯಕ್ಕೆ ಒಳಗಾದ ಅವರು ಕೊನೆಗೆ ನಿಧನರಾದರು." ಎಂದು ಅವಸ್ಥಿ ಹೇಳುತ್ತಾರೆ.

"ನಮ್ಮ ಶಾಲೆಯ ಅಡುಗೆಯವರಿಂದ ನನಗೆ ಪ್ರತಿದಿನ ಫೋನ್ ಕರೆ ಬರುತ್ತದೆ. ತನ್ನ ಹಳ್ಳಿಯಲ್ಲಿ ಪರಿಸ್ಥಿತಿ ಹೇಗೆ ಹದಗೆಡುತ್ತಿದೆ ಎಂದು ಆಕೆ ಹೇಳುತ್ತಾರೆ. ಅಲ್ಲಿನ ಜನರಿಗೆ ಅವರು ಯಾಕೆ ಸಾಯುತ್ತಿದ್ದಾರೆಂದು ಸಹ ತಿಳಿದಿಲ್ಲ. ಅವರಿಗೆ ಬಂದಿರುವ ಜ್ವರ ಅಥವಾ ಕೆಮ್ಮು ಕೋವಿಡ್ ಆಗಿರಬಹುದು ಎಂದು ಅವರಿಗೆ ತಿಳಿದಿಲ್ಲ.” ಎನ್ನುತ್ತಾರೆ ಅವಸ್ಥಿ.

ಶಿಕ್ಷಕರಾಗಿ ಕೇವಲ ಒಂದು ವರ್ಷ ಕಳೆದಿರುವ ಶಿವ ಕೆ., 27, ಚಿತ್ರಕೂಟ್‌ನ ಮೌ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. "ಸುರಕ್ಷತೆಗಾಗಿ, ಚುನಾವಣಾ  ಕೆಲಸಕ್ಕೆ ಹೋಗುವ ಮೊದಲು ನಾನು ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಿಸಿದ್ದೆ ಮತ್ತು ಎಲ್ಲವೂ ಸರಿಯಿತ್ತು." ನಂತರ ಅವರು ಏಪ್ರಿಲ್ 18 ಮತ್ತು 19ರಂದು ಅದೇ ಬ್ಲಾಕ್‌ನ ಬಿಯಾವಾಲ್ ಗ್ರಾಮದಲ್ಲಿ ಚುನಾವಣಾ ಕರ್ತವ್ಯಕ್ಕೆ ವರದಿ ಮಾಡಿಕೊಂಡರು. "ಆದರೆ ಕರ್ತವ್ಯದಿಂದ ಮರಳಿದ ಬಳಿಕ ಮತ್ತೆ ಪರೀಕ್ಷೆ ಮಾಡಿಸಿದಾಗ ವರದಿ ಪಾಸಿಟಿವ್‌ ಬಂದಿತ್ತು." ಎಂದು ಅವರು ಪರಿಗೆ ತಿಳಿಸಿದರು.

Bareilly (left) and Firozabad (right): Candidates and supporters gathered at the counting booths on May 2; no distancing or Covid protocols were in place
PHOTO • Courtesy: UP Shikshak Mahasangh
Bareilly (left) and Firozabad (right): Candidates and supporters gathered at the counting booths on May 2; no distancing or Covid protocols were in place
PHOTO • Courtesy: UP Shikshak Mahasangh

ಬರೇಲಿ (ಎಡ) ಮತ್ತು ಫಿರೋಜಾಬಾದ್ (ಬಲ): ಮೇ 2ರಂದು ಮತದಾನ ಕೇಂದ್ರಗಳಲ್ಲಿ ಜಮಾಯಿಸಿದ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು, ಕೋವಿಡ್‌ನ ಸುರಕ್ಷತಾ ನಿಯಮಗಳಾದ ಸಾಮಾಜಿಕ ಅಂತರ ಅಥವಾ ಇತರ ನಿಯಮಗಳನ್ನು ಪಾಲಿಸಲಿಲ್ಲ .

"ಚಿತ್ರಕೂಟ ಜಿಲ್ಲಾ ಕೇಂದ್ರದಿಂದ ಮತಗಟ್ಟೆಗೆ ಕರೆದೊಯ್ಯುವ ಬಸ್‌ನಲ್ಲಿ ನನಗೆ ಸೋಂಕು ತಗುಲಿದೆಯೆಂದು ನನ್ನ ಅನಿಸಿಕೆ. ಪೊಲೀಸ್ ಸಿಬ್ಬಂದಿ ಸೇರಿದಂತೆ ಬಸ್‌ನಲ್ಲಿ ಸುಮಾರು 30 ಜನರಿದ್ದರು." ಶಿವ ಪ್ರಸ್ತುತ ಏಕಾಂತ ವಾಸದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಎಲ್ಲ ದುರಂತಗಳ ನಡುವೆ ಒಂದು ವಿಷಯ ಗಮನ ಸೆಳೆಯುತ್ತದೆ. ಅದೆಂದರೆ, ಮತದಾನ ಕೇಂದ್ರಕ್ಕೆ ಆಗಮಿಸುವ ಅಧಿಕಾರಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಅದನ್ನು ಪರೀಕ್ಷಿಸಲು ಯಾರೂ ಇರಲಿಲ್ಲ. ಮತ ಎಣಿಕೆ ಕರ್ತವ್ಯದಲ್ಲಿರುವ ಸಂತೋಷ್ ಕುಮಾರ್, ಇದು ಮತ್ತು ಇತರ ಮಾರ್ಗಸೂಚಿಗಳನ್ನು ಸಹ ಕೇಂದ್ರಗಳಲ್ಲಿ ಗಾಳಿಗೆ ತೂರಲಾಗಿತ್ತೆಂದು ಹೇಳಿದರು.

*****

"ಎಪ್ರಿಲ್ 28ರಂದು ನಾವು ಯುಪಿ ರಾಜ್ಯ ಚುನಾವಣಾ ಆಯೋಗಕ್ಕೆ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಮತ ಎಣಿಕೆಯನ್ನು ಮುಂದೂಡಬೇಕೆಂದು ಮನವಿ ಮಾಡಿದ್ದೆವು" ಎಂದು ಶಿಕ್ಷಕರ ಒಕ್ಕೂಟದ ಅಧ್ಯಕ್ಷ ದಿನೇಶ್ ಚಂದ್ರ ಶರ್ಮಾ ಹೇಳಿದರು. "ಮರುದಿನ ನಾವು 700ಕ್ಕೂ ಹೆಚ್ಚು ಸಾವುಗಳ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಮತ್ತು ಮುಖ್ಯಮಂತ್ರಿಗೆ ಸಲ್ಲಿಸಿದ್ದೆವು, ಈ ಪಟ್ಟಿಯನ್ನು ನಮ್ಮ ಒಕ್ಕೂಟದ ಬ್ಲಾಕ್ ಮಟ್ಟದ ಶಾಖೆಗಳ ಮೂಲಕ ಸಂಗ್ರಹಿಸಲಾಗಿತ್ತು."

ಮದ್ರಾಸ್ ಹೈಕೋರ್ಟ್ ಭಾರತದ ಚುನಾವಣಾ ಆಯೋಗಕ್ಕೆ ಛೀಮಾರಿ ಹಾಕಿರುವುದು ಶರ್ಮಾರಿಗೆ ತಿಳಿದಿದೆ, ಆದರೆ ಆ ಕುರಿತು ಅವರು ಪ್ರತಿಕ್ರಿಯಿಸಲು ಬಯಸಲಿಲ್ಲ. ಅವರು ಬಹಳ ವಿಷಾದದ ದನಿಯಲ್ಲಿ "ನಮ್ಮ ಜೀವಕ್ಕೆ ಬೆಲೆಯಿಲ್ಲ ಏಕೆಂದರೆ ನಾವು ಸಾಮಾನ್ಯ ಜನರು, ಶ್ರೀಮಂತರಲ್ಲ, ಸರಕಾರಕ್ಕೆ ಚುನಾವಣೆಯನ್ನು ಮುಂದೂಡಿ ದೊಡ್ಡ ಮನುಷ್ಯರಿಗೆ ಬೇಸರ ತರಿಸುವುದು ಇಷ್ಟವಿರಲಿಲ್ಲ. ಏಕೆಂದರೆ ಆ ಜನರು ಈಗಾಗಲೇ ಚುನಾವಣೆಗೆ ದೊಡ್ಡ ಮೊತ್ತವನ್ನು ಖರ್ಚು ಮಾಡಿದ್ದಾರೆ. ನಮ್ಮ ಸಹಾಯಕ್ಕೆ ನಿಲ್ಲುವ ಬದಲು ನಾವು ನೀಡಿದ ಅಂಕಿ-ಸಂಖ್ಯೆಗಳನ್ನು ಎದುರಿಗಿಟ್ಟುಕೊಂಡು ನಮ್ಮ ಮೇಲೆಯೇ ಆರೋಪ ಹೊರಿಸಲಾಗುತ್ತಿದೆ.

"ಇಲ್ಲಿ ನೋಡಿ, ನಮ್ಮದು 100 ವರ್ಷಗಳಷ್ಟು ಹಳೆಯ ಒಕ್ಕೂಟ, ಇದು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ 300,000 ಸರ್ಕಾರಿ ಶಿಕ್ಷಕರನ್ನು ಪ್ರತಿನಿಧಿಸುತ್ತದೆ. ಸುಳ್ಳು ಮತ್ತು ವಂಚನೆಯ ಆಧಾರದ ಮೇಲೆ ಯಾವುದೇ ಒಕ್ಕೂಟವು ಇಷ್ಟು ದಿನಗಳ ಕಾಲ ಬದುಕುಳಿಯಬಹುದೆಂದು ನಿಮಗನ್ನಿಸುತ್ತದೆಯೇ?

"ಅವರು ನಮ್ಮ ಅಂಕಿಅಂಶಗಳನ್ನು ಪರಿಗಣಿಸಿ ಸ್ವೀಕರಿಸಲು ನಿರಾಕರಿಸಿದ್ದಲ್ಲದೆ, ನಮ್ಮ ಅಂಕಿಅಂಶಗಳ ವಿರುದ್ಧ ತನಿಖಾ ತಂಡವನ್ನು ರಚಿಸುತ್ತಿದ್ದಾರೆ. ಆದರೆ ಮೊದಲ 706 ಜನರ ಪಟ್ಟಿಯಲ್ಲಿ ಅನೇಕ ಹೆಸರುಗಳು ಸೇರಿಲ್ಲವೆನ್ನುವುದು ಈಗ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ನಾವು ಈಗ ಅದನ್ನು ಸರಿಪಡಿಸಬೇಕಾಗಿದೆ.”

ಚಿತ್ರ: ಜಿಗ್ಯಾಸ ಮಿಶ್ರಾ

ಅವರು ಬಹಳ ನೋವಿನಿಂದ ಹೇಳುತ್ತಾರೆ "ನಮ್ಮ ಜೀವಕ್ಕೆ ಬೆಲೆಯಿಲ್ಲ ಏಕೆಂದರೆ ನಾವು ಸಾಮಾನ್ಯ ಜನರು, ಶ್ರೀಮಂತರಲ್ಲ, ಸರಕಾರಕ್ಕೆ ಚುನಾವಣೆಯನ್ನು ಮುಂದೂಡಿ ದೊಡ್ಡ ಮನುಷ್ಯರಿಗೆ ಬೇಸರ ತರಿಸುವುದು ಇಷ್ಟವಿರಲಿಲ್ಲ. ಏಕೆಂದರೆ ಅವರು ಚುನಾವಣೆಗೆಂದು ದೊಡ್ಡ ಮೊತ್ತವನ್ನು ಖರ್ಚು ಮಾಡಿದ್ದಾರೆ.

ಪರಿಯೊಂದಿಗೆ ಮಾತನಾಡಿದ ಎಫ್‌ಎನ್‌ಸಿಸಿಐ ಲಖನೌ ಜಿಲ್ಲಾಧ್ಯಕ್ಷ ಸುಧಾಂಶು ಮೋಹನ್ ಅವರು, “ಎಣಿಕೆಯಿಂದ ಹಿಂದಿರುಗಿದ ನಂತರ ಕೋವಿಡ್ ಪಾಸಿಟಿವ್‌ ಹೊಂದಿರುವ ಶಿಕ್ಷಕರ ಪಟ್ಟಿಯನ್ನು ಸಹ ನಾವು ಸಂಗ್ರಹಿಸುತ್ತಿದ್ದೇವೆ. ರೋಗಲಕ್ಷಣಗಳ ಕಾರಣದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಅನೇಕರು 14 ದಿನಗಳ ಕಾಲ ಕ್ವಾರಂಟೈನ್‌ ಆಗಿದ್ದಾರೆ, ಅವರನ್ನು ಇನ್ನೂ ಪರೀಕ್ಷಿಸಲಾಗಿಲ್ಲ.” ಎಂದು ಹೇಳಿದರು

ದಿನೇಶ್ ಶರ್ಮಾ ಅವರ ಪ್ರಕಾರ, "ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಎಲ್ಲ ಉದ್ಯೋಗಿಗಳನ್ನು ಕೋವಿಡ್-19ನಿಂದ ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಯೂನಿಯನ್ ಮೊದಲ ಪತ್ರದಲ್ಲಿ ಒತ್ತಾಯಿಸಿತ್ತು. ಆದರೆ ಆ ಬೇಡಿಕೆ ಈಡೇರಿಸಿರಲಿಲ್ಲ.

“ನಾನು ನನ್ನ ಗಂಡನನ್ನು ಈ ರೀತಿ ಕಳೆದುಕೊಳ್ಳುತ್ತೇನೆಂದು ನನಗೆ ತಿಳಿದಿದ್ದರೆ, ನಾನು ಅವರನ್ನು ಹೋಗಲು ಬಿಡುತ್ತಿರಲಿಲ್ಲ. ಹೆಚ್ಚೆಂದರೆ, ಅವರು ತನ್ನ ಕೆಲಸವನ್ನು ಕಳೆದುಕೊಳ್ಳುತ್ತಿದ್ದರು, ಆದರೆ ಅವರ ಜೀವ ಉಳಿದಿರುತ್ತಿತ್ತು” ಎಂದು ಅಪರ್ಣ ಮಿಶ್ರಾ ಹೇಳುತ್ತಾರೆ.

ಶಿಕ್ಷಕರ ಒಕ್ಕೂಟವು ಅಧಿಕಾರಿಗಳಿಗೆ ಕಳುಹಿಸಿದ ಮೊದಲ ಪತ್ರದಲ್ಲಿ "ಕೋವಿಡ್ -19 ಸೋಂಕಿಗೆ ಒಳಗಾದ ಯಾವುದೇ ವ್ಯಕ್ತಿಗೆ ಚಿಕಿತ್ಸೆಯ ವೆಚ್ಚವಾಗಿ 20 ಲಕ್ಷ ರೂ. ಹಾಗೂ ಅಪಘಾತ ಅಥವಾ ಸಾವಿನ ಸಂದರ್ಭದಲ್ಲಿ, ಸತ್ತವರ ಕುಟುಂಬಕ್ಕೆ 50 ಲಕ್ಷ ರೂ. ನೀಡಬೇಕು" ಎಂದು ಒತ್ತಾಯಿಸಿತ್ತು.

ಅದು ಸಾಧ್ಯವಾದಲ್ಲಿ, ಅಪರ್ಣಾರಂತಹ ತಮ್ಮ ಸಂಗಾತಿ ಅಥವಾ ಕುಟುಂಬದ ದುಡಿಮೆಯ ಮುಖ್ಯ ವ್ಯಕ್ತಿಯನ್ನು ಕಳೆದುಕೊಂಡಂತಹ ಅನೇಕರಿಗೆ ಸಹಾಯವಾಗಲಿದೆ.

ಟಿಪ್ಪಣಿ: ಇದೀಗ ಬಂದ ಸುದ್ದಿಯ ಪ್ರಕಾರ, ಚುನಾವಣಾ ಅಧಿಕಾರಿಗಳ ಕುಟುಂಬ ಸದಸ್ಯರಿಗೆ ರೂ. 30,00,000 / - ಪರಿಹಾರ ನೀಡಲು ನಿರ್ಧರಿಸಿರುವುದಾಗಿ ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ. ಆದಾಗ್ಯೂ, ರಾಜ್ಯ ಚುನಾವಣಾ ಆಯೋಗದ ವಕೀಲರು ಸರಕಾರವು 28 ಜಿಲ್ಲೆಗಳ 77 ಸಾವಿನ ವರದಿಗಳನ್ನು ಮಾತ್ರ ಹೊಂದಿದೆಯೆಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅನುವಾದ: ಶಂಕರ ಎನ್. ಕೆಂಚನೂರು

पी. साईनाथ, पीपल्स ऑर्काइव ऑफ़ रूरल इंडिया के संस्थापक संपादक हैं. वह दशकों से ग्रामीण भारत की समस्याओं की रिपोर्टिंग करते रहे हैं और उन्होंने ‘एवरीबडी लव्स अ गुड ड्रॉट’ तथा 'द लास्ट हीरोज़: फ़ुट सोल्ज़र्स ऑफ़ इंडियन फ़्रीडम' नामक किताबें भी लिखी हैं.

की अन्य स्टोरी पी. साईनाथ
Illustration : Antara Raman

अंतरा रमन, सामाजिक प्रक्रियाओं और पौराणिक कल्पना में रुचि रखने वाली एक इलस्ट्रेटर और वेबसाइट डिज़ाइनर हैं. उन्होंने बेंगलुरु के सृष्टि इंस्टिट्यूट ऑफ़ आर्ट, डिज़ाइन एंड टेक्नोलॉजी से स्नातक किया है और उनका मानना है कि कहानी और इलस्ट्रेशन की दुनिया सहजीविता पर टिकी है.

की अन्य स्टोरी Antara Raman
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru