“ನಮ್ಮನ್ನು ಇಲ್ಲಿಗೆ ಕರೆತಂದವರಿಗೆ ನಾನು ಅಡುಗೆ ಮಾಡುತ್ತಿದ್ದೇನೆ. ನನ್ನ ಪತಿ ಅವರಿಗೆ ಇಟ್ಟಿಗೆಗಳನ್ನು ತಯಾರಿಸಲು ಸಹಾಯ ಮಾಡುತ್ತಿದ್ದಾರೆ,” ಎಂದು ಹೈದರಾಬಾದ್‌ನ ಇಟ್ಟಿಗೆ ಗೂಡಿನಲ್ಲಿ ನಮಗೆ ಪರಿಚಿತರಾದ ಊರ್ವಶಿ ಹೇಳುತ್ತಾರೆ.

ಇಟ್ಟಿಗೆ ಭಟ್ಟಿಯಲ್ಲಿ ಸುಮಾರು 61 ವರ್ಷದ ದೇಗು ಧಾರುವ ಮತ್ತು ಸುಮಾರು 58 ವರ್ಷದ ಊರ್ವಶಿ ಧಾರುವೆಯವರನ್ನು ನೋಡಿ ನಮಗೆ ಆಶ್ಚರ್ಯವಾಯಿತು. ಈ ಗಂಡ-ಹೆಂಡತಿ ಇಬ್ಬರೂ ಪಶ್ಚಿಮ ಒಡಿಶಾದ ಬೋಲಂಗಿರ್ ಜಿಲ್ಲೆಯ ಬೆಲ್ಪಾರಾ ಗ್ರಾಮ ಪಂಚಾಯತ್‌ನ ಪಂಡ್ರಿಜೋರ್ ಗ್ರಾಮದ ನಿವಾಸಿಗಳು. ಇದು ದೇಶದ ಅತ್ಯಂತ ಬಡ ಹಳ್ಳಿಗಳಲ್ಲಿ ಒಂದಾಗಿದೆ.

50 ವರ್ಷಗಳಿಗೂ ಹೆಚ್ಚು ಕಾಲ ವಲಸೆ ಹೋಗುತ್ತಿರುವ ಪಶ್ಚಿಮ ಒಡಿಶಾದ ಜನರ ಕುರಿತು ನಾನು ಇಪ್ಪತ್ತು ವರ್ಷಗಳಿಂದ ವರದಿ ಮಾಡುತ್ತಿದ್ದೇನೆ. ಈ ಪ್ರದೇಶವು ಹಸಿವು ಮತ್ತು ಅದರ ಪರಿಣಾಮದಿಂದ ಸಾವುಗಳು ಹಾಗೂ ಮಕ್ಕಳ ಮಾರಾಟಕ್ಕೆ ಕುಖ್ಯಾತವಾಗಿದೆ. ಇದು ಬಡತನ ಮತ್ತು ನೀತಿಗಳ ಕೆಟ್ಟ ಪರಿಣಾಮಗಳ ಕುರಿತಾಗಿ ಕೂಡ ಕುಖ್ಯಾತಿಯನ್ನು ಹೊಂದಿದ ಪ್ರದೇಶವಾಗಿದೆ.

1966-67ರಲ್ಲಿ ಬರಗಾಲದಂತಹ ಪರಿಸ್ಥಿತಿಯು ಜನರನ್ನು ವಲಸೆ ಹೋಗುವಂತೆ ಮಾಡಿತು. 90ರ ದಶಕದ ಹತ್ತರ ದಶಕದಲ್ಲಿ ಕಾಳಹಂಡಿ, ನುವಾಪರ, ಬೋಲಂಗೀರ್ ಮತ್ತಿತರ ಜಿಲ್ಲೆಗಳಲ್ಲಿ ಭೀಕರ ಬರಗಾಲ ಉಂಟಾದಾಗ ಮತ್ತೆ ಜನ ಇಲ್ಲಿಂದ ವಲಸೆ ಬರಲಾರಂಭಿಸಿದರು. ಆ ಸಮಯದಲ್ಲಿ, ದಿನಗೂಲಿ ಕೆಲಸ ಮಾಡುವವರು ಕೆಲಸ ಹುಡುಕಿಕೊಂಡು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ನಾವು ಗಮನಿಸಿದ್ದೇವೆ, ಆದರೆ ವಯಸ್ಸಾದವರು ಹಳ್ಳಿಗಳಲ್ಲಿ ಉಳಿಯುತ್ತಿದ್ದರು.

PHOTO • Purusottam Thakur

ಹೈದರಾಬಾದ್‌ನಲ್ಲಿ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ ಹೆಚ್ಚಿನ ವಲಸಿಗರು (ಎಡ) ದೇಗು ಧಾರುವ ಮತ್ತು ಅವರಿಗಿಂತ ಚಿಕ್ಕ ವಯಸ್ಸಿನ ಅವರ ಪತ್ನಿ ಊರ್ವಶಿ ಧಾರುವ

"ಅನೇಕ ಕಾರಣಗಳಿಂದಾಗಿ ಅವರನ್ನು ಊರಲ್ಲಿ ಬಿಡಲಾಗುತ್ತಿತ್ತು. ಊರನ್ನು ತೊರೆದವರು ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು. ಇಟ್ಟಿಗೆ ಗೂಡುಗಳಿಗೆ (ಅನೇಕ ವಲಸಿಗರು ಕೆಲಸ ಹುಡುಕುವ ಸ್ಥಳಗಳು) ಹಗಲು ರಾತ್ರಿ ಕೆಲಸದ ಅಗತ್ಯವಿರುತ್ತದೆ, ಮತ್ತು ವಯಸ್ಸಾದವರು ಅಷ್ಟು ಕಷ್ಟಪಟ್ಟು ಕೆಲಸ ಮಾಡಲು ಸಾಧ್ಯವಿಲ್ಲ" ಎಂದು ದಶಕಗಳಿಂದ ಒಡಿಶಾ ವಲಸೆಗಳನ್ನು ನಿಕಟವಾಗಿ ಗಮನಿಸುತ್ತಿರುವ ವಕೀಲ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತ ಬಿಷ್ಣು ಶರ್ಮಾ ಹೇಳುತ್ತಾರೆ. ಅವರು ಬೋಲಂಗೀರ್ ಜಿಲ್ಲೆಯ ಕಾಂತಾಬಂಜಿಯಲ್ಲಿ ನೆಲೆಸಿದ್ದಾರೆ - ಕಾಂತಬಂಜಿಯು ಪ್ರಮುಖ ರೈಲು ನಿಲ್ದಾಣವಾಗಿದೆ, ಅಲ್ಲಿಂದ ಜನರು ತೆಲಂಗಾಣ ಮತ್ತು ಆಂಧ್ರಪ್ರದೇಶದ ಇಟ್ಟಿಗೆ ಗೂಡುಗಳು ಸೇರಿದಂತೆ ವಿವಿಧ ಸ್ಥಳಗಳಿಗೆ ವಲಸೆ ಹೋಗಲು ರೈಲು ಹತ್ತುತ್ತಾರೆ. "ಆದ್ದರಿಂದ ಯಾವುದೇ [ಗೂಡಿನ] ಮಾಲೀಕರು [ವಯಸ್ಸಾದ ಕೆಲಸಗಾರರಿಗೆ] ಮುಂಗಡ ಹಣವನ್ನು ಪಾವತಿಸುವುದಿಲ್ಲ" ಎಂದು ಶರ್ಮಾ ಹೇಳುತ್ತಾರೆ. "ಅವರು ಮನೆಯನ್ನು ನೋಡಿಕೊಳ್ಳಲು, ಮಕ್ಕಳನ್ನು ಜೊತೆಗಿದ್ದು ನೋಡಿಕೊಳ್ಳಲು ಮತ್ತು ಪಡಿತರವನ್ನು ಸಂಗ್ರಹಿಸಲು ಊರಲ್ಲೇ ಉಳಿಯುತ್ತಿದ್ದರು. ಮತ್ತು ಯಾರೂ ಇಲ್ಲದ ಹಿರಿಯರು ಕಷ್ಟಗಳನ್ನು ಎದುರಿಸಬೇಕಿತ್ತು."

ಆದರೆ ಇತ್ತೀಚಿನ ದಿನಗಳಲ್ಲಿ 1966-2000 ರ ನಡುವೆ ಇದ್ದ ಸಮಸ್ಯೆಗಳು ಸಾಕಷ್ಟು ಸುಧಾರಿಸಿವೆ. ಮುಖ್ಯವಾಗಿ ಹಲವಾರು ಸಾಮಾಜಿಕ ಭದ್ರತಾ ಯೋಜನೆಗಳಿಂದಾಗಿ - ವಿಧವೆಯರಿಗೆ ಮತ್ತು ವೃದ್ಧಾಪ್ಯಕ್ಕೆ ಪಿಂಚಣಿ ಖಾತರಿ ಇತ್ಯಾದಿ. ಮತ್ತು ಕಳೆದ ದಶಕದಲ್ಲಿಯೂ ಸಹ, ಈ ಪ್ರದೇಶದಲ್ಲಿ ಹಸಿವಿನಿಂದ ಸಾವಿನ ಒಂದು ವರದಿಯೂ ಆಗಿಲ್ಲ. ಇದರ ಹಿಂದಿರುವ ಪ್ರಮುಖ ಕಾರಣವೆಂದರೆ 2008ರ ಆಗಸ್ಟ್‌ನಿಂದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಪ್ರತಿ ಕೆಜಿಗೆ 2 ರೂ.ಗಳಿಗೆ ನೀಡುತ್ತಿರುವುದು. 2013ರಿಂದ ಇದೇ ಅಕ್ಕಿಯನ್ನು ಕೆಜಿಗೆ 1 ರೂ.ನಂತೆ ನೀಡಲಾಗುತ್ತಿದೆ. (ಒಂದು ತಿಂಗಳಿಗೆ ಪ್ರತಿ ಕುಟುಂಬಕ್ಕೆ 25 ಕೆಜಿ ವರೆಗೆ).

ಹಾಗಾದರೆ ಊರ್ವಶಿ ಮತ್ತು ದೇಗು ಧಾರುವಾ ಅವರು ಗೂಡಿನಲ್ಲಿ ಕೆಲಸ ಹುಡುಕಿಕೊಂಡು ಹೈದರಾಬಾದಿಗೆ ಬರಲು ಕಾರಣವೇನು, ಕಷ್ಟದ ದಶಕಗಳಲ್ಲಿಯೂ ಸಹ ಅವರ ವಯಸ್ಸಿನ ಜನರು ಅಂತಹ ಕಠಿಣ ದೈಹಿಕ ದುಡಿಮೆಯನ್ನು ಮಾಡಲು ವಲಸೆ ಹೋಗದಿರುವಾಗ?

PHOTO • Purusottam Thakur

ಕಳಪೆ ಆರೋಗ್ಯ ಮತ್ತು ಗೂಡಿನಲ್ಲಿ ಕಠಿಣ ಪರಿಶ್ರಮದ ಕಾರಣ ಒಡಿಶಾದ ಬೋಲಂಗಿರ್ ಜಿಲ್ಲೆಯಿಂದ ವಲಸೆ ಹೋಗುವ ತಮ್ಮ ನಿರ್ಧಾರಕ್ಕೆ ಧರುವಾ ದಂಪತಿಗಳು ವಿಷಾದಿಸುತ್ತಿದ್ದಾರೆ

"ನಮಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಮತ್ತು ಇಬ್ಬರಿಗೂ ಮದುವೆಯಾಗಿದೆ. ಈಗ ನಾವು ಒಬ್ಬಂಟಿಯಾಗಿದ್ದೇವೆ... ನಾವು ಸಣ್ಣ ರೈತರು [ಭತ್ತ ಅಥವಾ ಹತ್ತಿಯನ್ನು ಬೆಳೆಯುತ್ತೇವೆ, ಮತ್ತು ಈ ವರ್ಷ ಬೆಳೆ ಉತ್ತಮ ಇಳುವರಿ ನೀಡಲಿಲ್ಲ]. ಮತ್ತು ನಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ..." ಎಂದು ಊರ್ವಶಿ ಹೇಳುತ್ತಾರೆ.

“ನಾವು ಯುವಕರಿದ್ದಾಗ ಬಹಳ ಹಿಂದೆ ಎರಡು ಬಾರಿ ಈ ಇಟ್ಟಿಗೆ ಭಟ್ಟಿಗೆ ಬಂದಿದ್ದೆವು. ಮತ್ತು ಈಗ ನಮ್ಮ ಸ್ಥಿತಿ ನಮ್ಮನ್ನು ಮತ್ತೆ ಇಲ್ಲಿಗೆ ಬರುವಂತೆ ಮಾಡಿದೆ,” ಎಂದು ದೇಗು ಹೇಳುತ್ತಾರೆ. “ಹಿಂದೆ, ನಾನು ಈ ಗೂಡುಗಳಲ್ಲಿ ಕೆಲಸ ಮಾಡಲು ಬಂದಾಗ, ನಮಗೆ ಮುಂಗಡವಾಗಿ ಗರಿಷ್ಠ 500-1,000 ರೂ. ನೀಡಲಾಗುತ್ತಿತ್ತು. ಈಗ ಮುಂಗಡವು ಪ್ರತಿ ವ್ಯಕ್ತಿಗೆ ರೂ 20,000 ಅಥವಾ ಅದಕ್ಕಿಂತ ಹೆಚ್ಚಾಗಿರುತ್ತದೆ. ಗೂಡಿಗೆ ಕರೆತಂದ ಸಂಬಂಧಿಕರು ಗೂಡಿನ ಮಾಲಿಕನಿಂದ 20 ಸಾವಿರ ಹಣ ಪಡೆದಿದ್ದರೂ ಅದರಲ್ಲಿ 10 ಸಾವಿರ ಮಾತ್ರ ನೀಡಿದ್ದಾರೆ ಎಂದು ದೇಗು ಹೇಳುತ್ತಾರೆ.

ಈ ಮುಂಗಡವು ಸಾಮಾನ್ಯವಾಗಿ ಐದರಿಂದ ಆರು ತಿಂಗಳ ಕೆಲಸಕ್ಕಾಗಿ ನೀಡಲಾಗುತ್ತದೆ - ಹಳ್ಳಿಗಳ ಜನರು ಸುಗ್ಗಿಯ ನಂತರ (ಜನವರಿ-ಫೆಬ್ರವರಿಯ ಸುಮಾರಿಗೆ) ಗೂಡುಗಳಿಗೆ ಬರುತ್ತಾರೆ ಮತ್ತು ಮಾನ್ಸೂನ್ ಪ್ರಾರಂಭವಾಗುವ ಮೊದಲು, ಜೂನ್ ವೇಳೆಗೆ ಊರಿಗೆ ಹಿಂದಿರುಗುತ್ತಾರೆ.

"ಇಲ್ಲಿಗೆ ಬಂದ ನಂತರ ಮತ್ತು ನನ್ನ ವಯಸ್ಸು ಮತ್ತು ಅನಾರೋಗ್ಯದ ಕಾರಣ, ನಾನು ನನ್ನ ಮನಸ್ಸನ್ನು ಬದಲಾಯಿಸಿದೆ" ಎಂದು ದೇಗು ಹೇಳುತ್ತಾರೆ. "ನಾನು ಕಾರ್ಮಿಕರ ಗುತ್ತಿಗೆದಾರನಿಗೆ ಮುಂಗಡ ಹಣವನ್ನು ಹಿಂದಿರುಗಿಸಲು ಮತ್ತು ನನ್ನ ಹಳ್ಳಿಗೆ ಹಿಂತಿರುಗಲು ಬಯಸುತ್ತೇನೆ, ಏಕೆಂದರೆ ಇಲ್ಲಿ ಕೆಲಸವು ತುಂಬಾ ಕಷ್ಟಕರವಾಗಿದೆ ಎಂದು ಹೇಳಿದೆ. ಆದರೆ ಇಟ್ಟಿಗೆ ಭಟ್ಟಿಯ ಮಾಲೀಕರು ನಮ್ಮ ಪ್ರಸ್ತಾಪವನ್ನು ಸ್ವೀಕರಿಸಲು ನಿರಾಕರಿಸಿದರು. ಬದಲಾಗಿ, ನನ್ನ ಜಾಗದಲ್ಲಿ ಇನ್ನೊಬ್ಬ ವ್ಯಕ್ತಿಗೆ ವ್ಯವಸ್ಥೆ ಮಾಡಲು ಕೇಳಲಾಯಿತು. ಅಂತಹ ಮನುಷ್ಯನನ್ನು ನಾನು ಎಲ್ಲಿಂದ ಕರೆತರಲಿ? ಹೀಗಾಗಿ ಇಲ್ಲಿ ಹೋರಾಟ ಮಾಡಬೇಕಾಗಿದೆ’ ಎಂದರು.

PHOTO • Purusottam Thakur

ಈ ಕಾರ್ಮಿಕರು ವಾಸಿಸುವ ತಾತ್ಕಾಲಿಕ ಮನೆಗಳು. ತಾವು ತೆಗೆದುಕೊಂಡ ಮುಂಗಡ ಹಣಕ್ಕೆ ಪ್ರತಿಯಾಗಿ ವರ್ಷದಲ್ಲಿ ಆರು ತಿಂಗಳು ಇಲ್ಲಿಯೇ ಕೆಲಸ ಮಾಡಬೇಕಾಗಿರುವುದರಿಂದ ಅನೇಕರು ಈ ಸ್ಥಳಗಳಲ್ಲಿ ಸಿಲುಕಿಕೊಂಡಿದ್ದಾರೆ

ನಮ್ಮೊಂದಿಗೆ ಮಾತನಾಡುವಾಗ, ದೇಗು ತನ್ನ ಹಳ್ಳಿಯ ಯುವ ಕಾರ್ಮಿಕರಿಗೆ ಇಟ್ಟಿಗೆಗಳನ್ನು ಒಣಗಿಸಲು ಸಹಾಯ ಮಾಡುತ್ತಿದ್ದರು, ಮತ್ತು ಕಾರ್ಮಿಕರು ಇಟ್ಟಿಗೆಗೂಡಿನ ಬಳಿ ನಿರ್ಮಿಸಿದ ತಾತ್ಕಾಲಿಕ ಮನೆಗಳ ಒಳಗೆ ಊರ್ವಶಿ ಸೌದೆ ಒಲೆಯ ಮೇಲೆ ಗುಂಪಿಗೆ ಮಧ್ಯಾಹ್ನದ ಊಟವನ್ನು - ಅನ್ನ ಮತ್ತು ತರಕಾರಿ - ಅಡುಗೆ ಮಾಡುತ್ತಿದ್ದರು. ಸುದೀರ್ಘ ಮಾತುಕತೆಯ ನಂತರ ಧಾರುವ ದಂಪತಿಗಳು ತಮ್ಮ ಕಷ್ಟಗಳ ಬಗ್ಗೆ ಹೇಳಿದರು.

ನಾವು ನಂತರ ತೆಲಂಗಾಣದ ಇನ್ನೂ ಕೆಲವು ಇಟ್ಟಿಗೆ ಗೂಡುಗಳಿಗೆ ಭೇಟಿ ನೀಡಿದೆವು, ಆದರೆ ಆ ಗೂಡುಗಳಲ್ಲಿ ಎಲ್ಲಿಯೂ ವೃದ್ಧ ದಂಪತಿಗಳು ಕಾಣಲಿಲ್ಲ. "ಅವರು ತುಂಬಾ ದುರ್ಬಲನಾಗಿ ಕಾಣುತ್ತಾರೆ," ಎಂದು ಧಾರುವ ದಂಪತಿಗಳ ಬಗ್ಗೆ ಶರ್ಮಾ ಹೇಳಿದರು, "ಮತ್ತು ಈಗ ಅವರು ಈ (ಮುಂಗಡ) ಬಲೆಗೆ ಸಿಲುಕಿದ್ದಾರೆ. ಇದು ನೋವು ತರುವ ವಿಷಯ ಮತ್ತು ವಲಸೆಯ ಸತ್ಯ.

ಅನುವಾದ: ಶಂಕರ. ಎನ್. ಕೆಂಚನೂರು

Purusottam Thakur

पुरुषोत्तम ठाकुर, साल 2015 के पारी फ़ेलो रह चुके हैं. वह एक पत्रकार व डॉक्यूमेंट्री फ़िल्ममेकर हैं और फ़िलहाल अज़ीम प्रेमजी फ़ाउंडेशन के लिए काम करते हैं और सामाजिक बदलावों से जुड़ी स्टोरी लिखते हैं.

की अन्य स्टोरी पुरुषोत्तम ठाकुर
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

की अन्य स्टोरी Shankar N. Kenchanuru