ನಾಮದೇವ್ ತರಾಳೆ ತಮ್ಮ ಜಮೀನಿಗೆ ಬಂದು ಸ್ವಲ್ಪ ಹೊತ್ತು ನಿಲ್ಲುತ್ತಾರೆ. ಹಸಿರು ಬೆಳೆಯನ್ನು ಯಾವುದೋ ಪ್ರಾಣಿ ತುಳಿದು ತಿಂದಂತೆ ಭಾಸವಾಗಿ ಬಾಗಿ ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತಾರೆ. 2022ರ ಫೆಬ್ರವರಿ ತಿಂಗಳು ಆಗಷ್ಟೇ ಪ್ರಾರಂಭವಾಗಿತ್ತು. ಚಳಿಯಿಂದ ಕೂಡಿದ ಉತ್ತಮ ವಾತಾವರಣವಿತ್ತು. ನೆತ್ತಿಯ ಮೇಲಿದ್ದ ಸೂರ್ಯನೂ ತಣ್ಣಗಿದ್ದನು.
"ಹಾ ಏಕ್ ಪ್ರಕಾರ್ಚಾ ದುಷ್ಕಳಾಚ್ ಆಹೆ [ಇದು ಹೊಸ ರೀತಿಯ ಬರಗಾಲ]" ಎಂದು ಅವರು ಬೇಸರದಿಂದ ಹೇಳುತ್ತಾರೆ.
ಈ ಒಂದು ವಾಕ್ಯದಲ್ಲಿ 48 ವರ್ಷದ ತರಾಳೆಯವರ ಹತಾಶೆ, ಭಯವನ್ನು ಅರ್ಥ ಮಾಡಿಕೊಳ್ಳಬಹುದಿತ್ತು. ಮೂರು ತಿಂಗಳ ಕಾಲ ಬೇಸಾಯ ಮಾಡಿ ಐದು ಎಕರೆಯಲ್ಲಿ ಬೆಳೆದಿರುವ ತೊಗರಿ ಮತ್ತು ಹೆಸರು ಬೆಳೆ ಕೈ ತಪ್ಪಿ ಹೋಗುತ್ತದೆಯೇ ಎಂಬ ಆತಂಕದಲ್ಲಿ ಅವರಿದ್ದಾರೆ. ಅವರು ಕಳೆದ 25 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಮತ್ತು ಈ ವರ್ಷಗಳಲ್ಲಿ ಅವರು ಅನೇಕ ವಿಧದ ಬರಗಳನ್ನು ಅನುಭವಿಸಿದ್ದಾರೆ - ಮಳೆ-ಸಂಬಂಧಿತ ಅಂದರೆ ಒಣ ಅಥವಾ ಆರ್ದ್ರ ಬರಗಳು, ನೀರಿಗೆ ಸಂಬಂಧಿಸಿದ, ಅಂತರ್ಜಲ ಮಟ್ಟವು ವೇಗವಾಗಿ ಕುಸಿದಾಗ ಮತ್ತು ಕೃಷಿಗೆ ಸಂಬಂಧಿಸಿದ, ಮಣ್ಣಿನಲ್ಲಿ ತೇವಾಂಶದ ಕೊರತೆಯಿಂದಾಗಿ ಬೆಳೆಗಳು ವಿಫಲವಾದಾಗ.
ಉತ್ತಮ ಬೆಳೆ ಬರುತ್ತಿದೆ ಎಂದು ಅನಿಸಿದಾಗಲೇ ಈ ಬಿಕ್ಕಟ್ಟು ನಮ್ಮ ಕಣ್ಣ ಮುಂದೆ ಬರುತ್ತದೆ ಎನ್ನುತ್ತಾರೆ ತರಾಳೆ. ಮತ್ತು ಬಿಕ್ಕಟ್ಟು ಕೆಲವೊಮ್ಮೆ ನಾಲ್ಕು ಕಾಲುಗಳ ಮೂಲಕ ನಡೆದು ಬಂದು, ಕೆಲವೊಮ್ಮೆ ಹಾರಿ ಬಂದು ಬೆಳೆಗಳನ್ನು ನಾಶಪಡಿಸುತ್ತದೆ.
"ಹಗಲಿನಲ್ಲಿ ನೀರು ಕೋಳಿಗಳು, ಕೋತಿಗಳು, ಮೊಲಗಳು; ಜಿಂಕೆ, ನೀಲ್ಗಾಯ್, ಸಾಂಬಾರ್, ಹಂದಿ, ರಾತ್ರಿಯಲ್ಲಿ ಹುಲಿಗಳು" ಎಂದು ಅವರು ಬೆದರಿಕೆಗಳನ್ನು ಪಟ್ಟಿ ಮಾಡುತ್ತಾರೆ.
"ಅಮ್ಹಾಲೆ ಪೆರ್ಟಾ ಯೇತೆ ಸಾಹೇಬ್, ಪಣ್ ವಚಾವ್ತಾ ಯೇತ್ ನಹೀ [ನಮಗೆ ಬಿತ್ತನೆ ಮಾಡುವುದು ಹೇಗೆಂದು ತಿಳಿದಿದೆ, ನಮ್ಮ ಬೆಳೆಯನ್ನು ರಕ್ಷಿಸುವುದು ಹೇಗೆನ್ನುವುದು ತಿಳಿದಿಲ್ಲ], ಎಂದು ಅವರು ಸೋತ ಧ್ವನಿಯಲ್ಲಿ ಹೇಳುತ್ತಾರೆ. ಅವರು ಸಾಮಾನ್ಯವಾಗಿ ಹತ್ತಿ ಅಥವಾ ಸೋಯಾಬೀನ್ ಗಳಂತಹ ವಾಣಿಜ್ಯ ಬೆಳೆಗಳನ್ನು ಹೊರತುಪಡಿಸಿ ಹೆಸರು ಕಾಳು, ಮೆಕ್ಕೆಜೋಳ, ಜೋಳ ಮತ್ತು ತೊಗರಿಯನ್ನು ಬೆಳೆಯುತ್ತಾರೆ.
ಚಂದ್ರಾಪುರ ಜಿಲ್ಲೆ ಸಮೃದ್ಧ ಕಾಡು ಮತ್ತು ಖನಿಜಗಳ ಭಂಡಾರ. ಇಲ್ಲಿನ ಧಮನಿ ಗ್ರಾಮದ ರೈತ ತರಾಳೆಯವರಂತೆಯೇ ಇಲ್ಲಿನ ಹಲವು ಗ್ರಾಮಗಳ ರೈತರು ಬೇಸತ್ತಿದ್ದಾರೆ. ಜಿಲ್ಲೆಯ ತಡೋಬಾ-ಅಂಧಾರಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಸುತ್ತಮುತ್ತಲಿನ ಹಲವು ಗ್ರಾಮಗಳ ರೈತರು ಇದೇ ರೀತಿ ಅಸಮಾಧಾನ ಮತ್ತು ಆತಂಕದಲ್ಲಿದ್ದಾರೆ. ರಾಜ್ಯದ ಇತರೆ ಜಿಲ್ಲೆಗಳಲ್ಲೂ ಇದೇ ಚಿತ್ರಣ ಕಂಡು ಬರುತ್ತಿದೆ.
ನಲವತ್ತು ವರ್ಷದ ಗೋಪಾಲ್ ಬೊಂಡೆ ಅವರು ತರಾಳೆಯವರ ಹೊಲದಿಂದ 25 ಕಿಲೋಮೀಟರ್ ದೂರದಲ್ಲಿರುವ ಚಪ್ರಲಾಲಾದಲ್ಲಿ (2011ರ ಜನಗಣತಿಯಲ್ಲಿ ಉಲ್ಲೇಖಿಸಿದಂತೆ) ಸಂಪೂರ್ಣವಾಗಿ ಹೈರಾಣಾಗಿದ್ದಾರೆ. 2022ರ ಫೆಬ್ರವರಿ ತಿಂಗಳಿನಲ್ಲಿ ಅವರ 10 ಎಕರೆ ಜಮೀನು ನಿಧಾನವಾಗಿ ಹೇಗೆ ಹಾನಿಗೊಳಗಾಗುತ್ತಿದೆ ಎಂಬುದನ್ನು ನಾವು ಸ್ಪಷ್ಟವಾಗಿ ನೋಡಬಹುದಿತ್ತು. ಈ ಪೈಕಿ ಕೇವಲ ಐದು ಎಕರೆಯಲ್ಲಿ ಮಾತ್ರ ಹೆಸರು ಕಾಳು ಇದೆ. ಮಧ್ಯದಲ್ಲಿ, ಬೆಳೆಗಳು ಕೆಲವು ಗದ್ದೆಗಳಲ್ಲಿ ಮಲಗಿವೆ. ಯಾರೋ ಸೇಡು ತೀರಿಸಿಕೊಂಡಂತೆ, ಬೆಳೆಯನ್ನು ಬೇರುಸಹಿತ ಕಿತ್ತು, ಕಾಳು ತಿಂದು, ಹೊಲಗದ್ದೆಗಳನ್ನು ನಾಶಪಡಿಸಿದಂತೆ ಹೊಲದಲ್ಲಿ ಪೈರುಗಳು ಅಡ್ಡಡ್ಡ ಮಲಗಿವೆ.
"ನಾನು ರಾತ್ರಿ ಮಲಗಲು ಹೋಗುವಾಗ, ನನ್ನ ಮನಸ್ಸನ್ನು ಒಂದು ಪ್ರಶ್ನೆ ಕಾಡತೊಡಗುತ್ತದೆ, ಬೆಳಗಿನ ಹೊತ್ತಿಗೆ ಹೊಲದಲ್ಲಿ ಬೆಳೆಗಳು ಇರುತ್ತವೆಯೇ ಎಂದು" ಎಂದು ಬೋಂಡೆ ಹೇಳುತ್ತಾರೆ. ನಾವು ಮೊದಲು ಭೇಟಿಯಾದ ಒಂದು ವರ್ಷದ ನಂತರ ಅವರು 2023ರ ಜನವರಿಯಲ್ಲಿ ನನ್ನೊಂದಿಗೆ ಮಾತನಾಡುತ್ತಿದ್ದರು. ಈ ಸಮಯದಲ್ಲಿ ಅವರು ರಾತ್ರಿ ಮಳೆ, ಚಳಿ ಎನ್ನದೆ ತಮ್ಮ ಜಮೀನಿಗೆ ಕನಿಷ್ಠ ಎರಡು ಸುತ್ತು ಹಾಕುತ್ತಾರೆ. ಹಲವಾರು ತಿಂಗಳುಗಳ ಕಾಲ ನಿದ್ರೆಯ ಕೊರತೆ ಮತ್ತು ಶೀತದಿಂದಾಗಿ, ಅವರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹೊಲದಲ್ಲಿ ಬೆಳೆ ಇಲ್ಲದಿದ್ದಾಗ ಮಾತ್ರ ಅವರಿಗೆ ಸ್ವಲ್ಪ ವಿಶ್ರಾಂತಿ ಸಿಗುತ್ತದೆ. ವಿಶೇಷವಾಗಿ, ಬೇಸಿಗೆಯಲ್ಲಿ. ಆದರೆ ಪ್ರತಿ ರಾತ್ರಿಯೂ ಅವರು ಹೊಲಗಳನ್ನು ಸುತ್ತಬೇಕು. ವಿಶೇಷವಾಗಿ ಬೆಳೆಗಳು ಕೊಯ್ಲಿಗೆ ಬಂದಾಗ. ಬೋಂಡೆ ತನ್ನ ಮನೆಯ ಅಂಗಳದಲ್ಲಿ ಕುರ್ಚಿಯ ಮೇಲೆ ಕುಳಿತು ಹೇಳುತ್ತಿದ್ದರು. ಬೀಸುತ್ತಿದ್ದ ಗಾಳಿಯಲ್ಲಿ ಚಳಿಗಾಲದ ಶೀತವಿತ್ತು.
ಕಾಡು ಪ್ರಾಣಿಗಳು ವರ್ಷವಿಡೀ ಹೊಲಗಳಲ್ಲಿ ಆಹಾರವನ್ನು ತಿನ್ನುತ್ತವೆ: ಚಳಿಗಾಲದಲ್ಲಿ ಹೊಲಗಳು ಹಸಿರಾಗಿರುತ್ತವೆ ಮತ್ತು ಮಳೆಗಾಲದಲ್ಲಿ ಅವು ಹೊಸ ಚಿಗುರುಗಳನ್ನು ಮೇಯುತ್ತವೆ. ಬೇಸಿಗೆಯಲ್ಲಿ, ಬೇಸಗೆಯಲ್ಲಿ ಹೊಲದಲ್ಲಿನ ನೀರು ಕುಡಿಯುವುದು ಸೇರಿದಂತೆ ಎಲ್ಲವನ್ನೂ ತಿನ್ನುತ್ತವೆ.
ಹೀಗಾಗಿಯೇ ಬೋಂಡೆಯವರು ರಾತ್ರಿಯೆಲ್ಲ ಹೊಲದಲ್ಲಿ ತಿರುಗಾಡಬೇಕು. "ಅವು ರಾತ್ರಿಯಲ್ಲಿ ಹೆಚ್ಚು ಹಾನಿ ಮಾಡುತ್ತವೆ." ಪ್ರಾಣಿಗಳು ಬೆಳೆ ನಾಶಪಡಿಸಿದರೆ ‘‘ದಿನಕ್ಕೆ ಕೆಲವು ಸಾವಿರ ರೂಪಾಯಿಗಳ ನಷ್ಟವಾಗುತ್ತದೆ." ಪರಭಕ್ಷಕ ಪ್ರಾಣಿಗಳಾದ ಹುಲಿ ಮತ್ತು ಚಿರತೆಗಳು ಹಸು ಮತ್ತು ದನಗಳ ಮೇಲೆ ದಾಳಿ ಮಾಡುತ್ತವೆ. ಅವರ ಗ್ರಾಮದಲ್ಲಿ ಪ್ರತಿ ವರ್ಷ ಸರಾಸರಿ 20 ಪ್ರಾಣಿಗಳು ಹುಲಿ ದಾಳಿಗೆ ಸಾಯುತ್ತವೆ. ಇನ್ನೂ ಗಂಭೀರವಾದ ಸಂಗತಿಯೆಂದರೆ ಕ್ರೂರ ಪ್ರಾಣಿಗಳ ದಾಳಿಯಲ್ಲಿ ಜನರು ಗಾಯಗೊಂಡು ಸಾಯುತ್ತಾರೆ.
ತಡೋಬಾ ರಾಷ್ಟ್ರೀಯ ಉದ್ಯಾನವನ, ಮಹಾರಾಷ್ಟ್ರದ ಅತಿದೊಡ್ಡ ಮತ್ತು ಹಳೆಯ ಅಭಯಾರಣ್ಯಗಳಲ್ಲಿ ಒಂದಾಗಿದೆ ಮತ್ತು ನೆರೆಯ ಅಂಧಾರಿ ಅಭಯಾರಣ್ಯವು ಚಂದ್ರಾಪುರ ಜಿಲ್ಲೆಯ ಮೂರು ತಾಲೂಕುಗಳಲ್ಲಿ 1,727 ಚದರ ಕಿ.ಮೀ. ಪ್ರದೇಶದಲ್ಲಿ ಹರಡಿದೆ. ಇಲ್ಲಿನ ಪರಿಸ್ಥಿತಿಯು ವನ್ಯಜೀವಿ-ಮಾನವ ಸಂಘರ್ಷದ ಕೇಂದ್ರವಾಗಿದೆ ಎಂದು ಹೇಳಲಾಗುತ್ತದೆ. ಮಧ್ಯ ಭಾರತದ ಎತ್ತರದ ಪ್ರದೇಶಗಳಲ್ಲಿ ನೆಲೆಗೊಂಡಿರುವ ತಡೋಬಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ, ಹುಲಿಗಳ ಸಂಖ್ಯೆ ಹೆಚ್ಚಾಗಿದೆ, 1,161 ಹುಲಿಗಳು ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿವೆ," ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) 2022ರಲ್ಲಿ ಪ್ರಕಟಿಸಿದ ವರದಿ ಹೇಳಿದೆ. ಈ ಸಂಖ್ಯೆ 2018ರಲ್ಲಿ 1033 ಇತ್ತು.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) 2018ರ ವರದಿಯ ಪ್ರಕಾರ, ರಾಜ್ಯದ 315ಕ್ಕೂ ಹೆಚ್ಚು ಹುಲಿಗಳಲ್ಲಿ 82 ತಡೋಬಾದಲ್ಲೇ ಇವೆ.
ಈ ಭಾಗದ ಹತ್ತಾರು ಹಳ್ಳಿಗಳಲ್ಲಿ, ವಿದರ್ಭದವರೆಗೆ, ಕೃಷಿಯನ್ನು ಹೊರತುಪಡಿಸಿ ಬೇರೆ ಜೀವನೋಪಾಯದ ಆಯ್ಕೆಗಳಿಲ್ಲದ ತರಾಳೆ ಅಥವಾ ಬೋಂಡೆಯಂತಹ ರೈತರು ಕಾಡು ಪ್ರಾಣಿಗಳನ್ನು ತಡೆಯಲು ವಿಲಕ್ಷಣ ತಂತ್ರಗಳನ್ನು ಪ್ರಯತ್ನಿಸುತ್ತಾರೆ. ಅವರು ಶಾಕ್ ನೀಡುವ ಸೌರ ಬ್ಯಾಟರಿ ಚಾಲಿತ ಬೇಲಿಗಳನ್ನು ಒಳಗೊಂಡಂತೆ ಹಲವು ರೀತಿಯ ಬೇಲಿಗಳನ್ನು ನಿರ್ಮಿಸುತ್ತಾರೆ, ತಮ್ಮ ಹೊಲಗಳನ್ನು ಅಗ್ಗದ ಮತ್ತು ವರ್ಣರಂಜಿತ ನೈಲಾನ್ ಸೀರೆಗಳಿಂದ ಅಲಂಕರಿಸುತ್ತಾರೆ, ಕಾಡುಗಳ ಗಡಿಯಲ್ಲಿ ಪಟಾಕಿ ಸಿಡಿಸುವುದು; ನಾಯಿಗಳ ಹಿಂಡುಗಳನ್ನು ನಿಲ್ಲಿಸುವುದು ಮತ್ತು ಪ್ರಾಣಿಗಳ ಶಬ್ದಗಳನ್ನು ಹೊರಡಿಸುವ ಇತ್ತೀಚಿನ ಚೀನೀ ಉಪಕರಣಗಳನ್ನು ಬಳಸುವುದನ್ನು ಕೂಡಾ ಮಾಡುತ್ತಾರೆ.
ಆದರೆ ಇದ್ಯಾವುದೂ ಕೆಲಸಕ್ಕೆ ಬರುವುದಿಲ್ಲ.
ಬೋಂಡೆಯವರ ಚಪ್ರಲಾ ಮತ್ತು ತರಾಳೆಯವರ ಧಮನಿ ತಡೋಬಾದ ಬಫರ್ ವಲಯದ ಅಡಿಯಲ್ಲಿ ಬರುತ್ತವೆ. ತಡೋಬಾ ಉದ್ಯಾನವನವು ಪತನಶೀಲ ಅರಣ್ಯವಾಗಿದ್ದು, ಈ ಅಭಯಾರಣ್ಯವು ಪ್ರವಾಸಿಗರಿಗೆ ಸ್ವರ್ಗವಾಗಿದೆ, ಇದು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶವಾಗಿದೆ. ಮೀಸಲು ಅರಣ್ಯದ ಕೋರ್ ಏರಿಯಾದ ಬಳಿ ಅವರು ಕೃಷಿ ಮಾಡುತ್ತಿರುವುದರಿಂದ, ಅವರ ಹೊಲಗಳು ನಿರಂತರವಾಗಿ ಕಾಡು ಪ್ರಾಣಿಗಳ ದಾಳಿಗೆ ಒಳಗಾಗುತ್ತವೆ. ಬಫರ್ ವಲಯವು ಮಾನವ ನೆಲೆಗಳನ್ನು ಒಳಗೊಂಡಿದೆ ಮತ್ತು ಸಂರಕ್ಷಿತ ಅರಣ್ಯದ ಸುತ್ತಲಿನ ಪ್ರದೇಶವನ್ನು ಬಫರ್ ವಲಯವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಒಳಾಂಗಣದಲ್ಲಿ ಯಾವುದೇ ಮಾನವ ಚಟುವಟಿಕೆಳಿಗೆ ಅನುಮತಿ ನೀಡಲಾಗುವುದಿಲ್ಲ ಮತ್ತು ಅದರ ನಿರ್ವಹಣೆಯು ಸಂಪೂರ್ಣವಾಗಿ ರಾಜ್ಯ ಅರಣ್ಯ ಇಲಾಖೆಯ ಜವಾಬ್ದಾರಿಯಾಗಿದೆ.
ವಿದರ್ಭದ 11 ಜಿಲ್ಲೆಗಳಲ್ಲಿ ವಿಶೇಷವಾಗಿ ಪರಿಸ್ಥಿತಿ ಹದಗೆಟ್ಟಿದೆ. ವಿದರ್ಭವು ಭಾರತದ ಕೆಲವು ಸಂರಕ್ಷಿತ ಅರಣ್ಯಗಳಿಗೆ ನೆಲೆಯಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ಹುಲಿಗಳು ಮತ್ತು ಕಾಡು ಪ್ರಾಣಿಗಳಿಗೆ ನೆಲೆಯಾಗಿದೆ. ಈ ಪ್ರದೇಶವು ರೈತರ ಆತ್ಮಹತ್ಯೆ ಮತ್ತು ಸಾಲಬಾಧೆಗೂ ಹೆಸರುವಾಸಿಯಾಗಿದೆ.
ಮಹಾರಾಷ್ಟ್ರದ ಅರಣ್ಯ ಸಚಿವ ಸುಧೀರ್ ಮುಂಗಂತಿವಾರ್ ಅವರ ಹೇಳಿಕೆಯ ಪ್ರಕಾರ, 2022ರಲ್ಲಿ ಚಂದ್ರಾಪುರ ಜಿಲ್ಲೆಯಲ್ಲಿ ಹುಲಿಗಳು ಮತ್ತು ಚಿರತೆಗಳು 53 ಜನರನ್ನು ಕೊಂದಿವೆ. ಕಳೆದ ಎರಡು ದಶಕಗಳಲ್ಲಿ, ಸುಮಾರು 2,000 ಜನರು - ಹೆಚ್ಚಾಗಿ ಟಿಎಟಿಆರ್ ಪ್ರದೇಶದಲ್ಲಿ - ರಾಜ್ಯದಲ್ಲಿ ಕಾಡು ಪ್ರಾಣಿಗಳ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ದಾಳಿಗಳು ಮುಖ್ಯವಾಗಿ ಹುಲಿಗಳು, ಕಪ್ಪು ಕರಡಿಗಳು, ಕಾಡು ಹಂದಿಗಳು ಮತ್ತು ಇತರವುಗಳಿಂದ ನಡೆಯುತ್ತವೆ. ಕನಿಷ್ಠ 15-20 'ಸಮಸ್ಯೆಯ ಹುಲಿಗಳನ್ನು' - ಮಾನವರೊಂದಿಗೆ ಸಂಘರ್ಷದಲ್ಲಿರುವ ಹುಲಿಗಳನ್ನು - ತಟಸ್ಥಗೊಳಿಸಬೇಕಾಗಿದೆ - ಇದು ಚಂದ್ರಾಪುರವು ಪ್ರಮುಖ ಹುಲಿ-ಮಾನವ ಸಂಘರ್ಷದ ತಾಣವಾಗಿದೆ ಎಂಬುದಕ್ಕೆ ಪುರಾವೆಯಾಗಿದೆ. ಪ್ರಾಣಿಗಳ ದಾಳಿಯಲ್ಲಿ ಗಾಯಗೊಂಡ ಜನರ ಔಪಚಾರಿಕ ಎಣಿಕೆ ಲಭ್ಯವಿಲ್ಲ.
ಕಾಡು ಪ್ರಾಣಿಗಳನ್ನು ಪುರುಷರಷ್ಟೇ ಎದುರಿಸುವುದಿಲ್ಲ, ಮಹಿಳೆಯರು ಸಹ ಅವುಗಳನ್ನು ಎದುರಿಸುತ್ತಾರೆ.
"ನಾವು ಭಯದಲ್ಲೇ ಕೆಲಸ ಮಾಡುತ್ತೇವೆ" ಎಂದು ನಾಗ್ಪುರ ಜಿಲ್ಲೆಯ ಬೆಲ್ಲರ್ಪರ್ ಗ್ರಾಮದ ಐವತ್ತು ವರ್ಷದ ಬುಡಕಟ್ಟು ಕೃಷಿಕರಾದ ಅರ್ಚನಾಬಾಯಿ ಗಾಯಕ್ವಾಡ್ ಹೇಳುತ್ತಾರೆ. ಅವರು ತನ್ನ ಹೊಲಗಳಲ್ಲಿ ಹುಲಿಯನ್ನು ಹಲವಾರು ಬಾರಿ ನೋಡಿದ್ದಾರೆ. "ಸಾಮಾನ್ಯವಾಗಿ, ಸುತ್ತಲೂ ಹುಲಿ ಅಥವಾ ಚಿರತೆ ಇದೆ ಎಂದು ನಮಗೆ ಅನಿಸಿದರೆ ನಾವು ಹೊಲದಿಂದ ಹೊರಬರುತ್ತೇವೆ" ಎಂದು ಅವರು ಹೇಳುತ್ತಾರೆ.
*****
“ಹೊಲದಲ್ಲಿ ಪ್ಲಾಸ್ಟಿಕ್ ಬೆಳೆದರೂ ಅವು [ಕಾಡು ಪ್ರಾಣಿಗಳು] ತಿನ್ನುತ್ತವೆ!”
ಗೊಂಡಿಯಾ, ಬುಲ್ಧಾನಾ, ಭಂಡಾರಾ, ನಾಗ್ಪುರ, ವಾರ್ಧಾ, ವಾಶಿಮ್ ಮತ್ತು ಯವತ್ಮಾಲ್ ಪ್ರದೇಶಗಳಲ್ಲಿನ ರೈತರೊಂದಿಗೆ ವಿಷಯವನ್ನು ಪ್ರಸ್ತಾಪಿಸಿದಾಗ ಸಂಭಾಷಣೆಯು ನಿಜವಾಗಿಯೂ ವಿಲಕ್ಷಣವಾಗಿ ಪ್ರಾರಂಭವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿದರ್ಭದಲ್ಲಿ ಸುತ್ತಾಡುತ್ತಿರುವಾಗ ಕಾಡು ಪ್ರಾಣಿಗಳು ಹತ್ತಿಯ ಬೀಜವನ್ನೂ ತಿನ್ನುತ್ತಿವೆ ಎಂಬ ಮಾತು ರೈತರಿಂದ ಕೇಳಿಬರುತ್ತಿದೆ.
“ಕೊಯ್ಲಿನ ಸಮಯದಲ್ಲಿ ನಮ್ಮ ಜೀವವನ್ನೇ ಪಣಕ್ಕಿಟ್ಟು ಹೊಲದಲ್ಲಿ ಉಳಿದು ಬೆಳೆ ಕಾಪಾಡಿಕೊಳ್ಳದೆ ಬೇರೆ ದಾರಿಯೇ ಇಲ್ಲ” ಎನ್ನುತ್ತಾರೆ ನಾಗ್ಪುರ ಜಿಲ್ಲೆಯ ಟಿಎಟಿಆರ್ ಪ್ರದೇಶದ ಅಂಚಿನ ಹಳ್ಳಿಯ ಬೆಲ್ಲರ್ಪರ್ನ ಮಾನಾ ಸಮುದಾಯದ 50 ವರ್ಷದ ರೈತ ಪ್ರಕಾಶ್ ಗಾಯಕ್ವಾಡ್.
‘‘ಅನಾರೋಗ್ಯ ಬಂದರೂ ಜಮೀನಿಗೆ ಬರಬೇಕು, ಬೆಳೆ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಕೊಯ್ಲಿಗೆ ಏನೂ ಉಳಿಯುವುದಿಲ್ಲ" ಎಂದು ಚಪ್ರಾಲದ 77 ವರ್ಷದ ದತ್ತೂಜಿ ತಾಜ್ನೆ ಹೇಳುತ್ತಾರೆ. ಇವರು ಗೋಪಾಲ್ ಬೋಂಡೆ ಅವರ ಊರಿನವರು. “ಹಿಂದೆ ನಾವು ಕಾಡಿನಲ್ಲಿ ನಿರಾತಂಕವಾಗಿ ಮಲಗುತ್ತಿದ್ದೆವು. ಆದರೆ ಈಗ ಸಾಧ್ಯವಿಲ್ಲ. ಅಲ್ಲಿ ಕಾಡು ಪ್ರಾಣಿಗಳು ಕಾಣಸಿಗುತ್ತವೆ.”
ಕಳೆದ ದಶಕದಲ್ಲಿ, ತರಾಳೆ ಮತ್ತು ಬೋಂಡೆಯವರ ಹಳ್ಳಿಗಳಲ್ಲಿ ಕಾಲುವೆಗಳು, ಬಾವಿಗಳು ಮತ್ತು ಕೊಳವೆಬಾವಿಗಳ ರೂಪದಲ್ಲಿ ನೀರಾವರಿ ಸೌಲಭ್ಯಗಳು ಅಭಿವೃದ್ಧಿಗೊಂಡಿವೆ. ಇದು ಸಾಂಪ್ರದಾಯಿಕ ಹತ್ತಿ ಅಥವಾ ಸೋಯಾಬೀನ್ ಜೊತೆಗೆ ವರ್ಷಪೂರ್ತಿ ಎರಡು ಅಥವಾ ಮೂರು ಬೇರೆ ಬೆಳೆಗಳನ್ನು ಅನುವು ಮಾಡಿಕೊಟ್ಟಿತು.
ಇದರೊಂದಿಗೆ ತೊಂದರೆಯೂ ಸೃಷ್ಟಿಯಾಗಿದೆ. ವರ್ಷವಿಡೀ ಹಸಿರಿನಿಂದ ಕೂಡಿದ ಹೊಲಗಳು ಜಿಂಕೆ, ನೀಲ್ ಗಾಯ್, ಮತ್ತು ಸಾಂಬಾರ್‌ಗಳಂತಹ ಸಸ್ಯಹಾರಿ ಪ್ರಾಣಿಗಳನ್ನು ಆಕರ್ಷಿಸುತ್ತವೆ. ಇವುಗಳನ್ನು ಹುಡುಕಿಕೊಂಡು ಬೇಟೆಗಾರ ಪ್ರಾಣಿಗಳು ಬರುತ್ತವೆ.
“ಒಂದು ದಿನ ಹೊಲದಲ್ಲಿ ಒಂದು ಮಂಗಗಳಿದ್ದರೆ ಇನ್ನೊಂದು ಕಡೆ ಕಾಡು ಹಂದಿಗಳಿದ್ದವು. ನನಗೆ ಅವು ನನ್ನನ್ನು ಪರೀಕ್ಷೆ ಮಾಡುತ್ತಿರುವಂತೆ, ನನ್ನನ್ನು ಅಣಕಿಸುತ್ತಿರುವಂತೆ ಭಾಸವಾಯಿತು” ಎಂದು ತರಾಳೆ ನೆನಪಿಸಿಕೊಳ್ಳುತ್ತಾರೆ.
2022ರ ಸೆಪ್ಟೆಂಬರ್ ತಿಂಗಳಿನ ಮೋಡ ಕವಿದ ದಿನದಂದು ಬೋಂಡೆ ಕೈಯಲ್ಲಿ ಒಂದು ಬಿದಿರಿನ ಕೋಲು ಹಿಡಿದು ನಮ್ಮನ್ನು ಹೊಲದತ್ತ ಕರೆದೊಯ್ದರು. ಅವರ ಹೊಲದಲ್ಲಿ ಸೋಯಾಬೀನ್, ಹತ್ತಿ ಮತ್ತಿತರ ಬೆಳೆಗಳು ಆಗಷ್ಟೇ ಮೊಳಕೆಯೊಡೆಯುತ್ತಿದ್ದವು. ಅವರ ಹೊಲ ಮನೆಯಿಂದ 2-3 ಕಿಮೀ ದೂರದಲ್ಲಿದೆ. ಸುಮಾರು ಹದಿನೈದು ನಿಮಿಷಗಳ ನಡಿಗೆಯ ದೂರ. ಅವರ ಹೊಲಕ್ಕೆ ತಾಗಿ ತೊರೆಯೊಂದಿದ್ದು ಅದು ಹೊಲವನ್ನು ಕಾಡಿನಿಂದ ಬೇರ್ಪಡಿಸುತ್ತದೆ. ಕಾಡು ದಟ್ಟ, ಪ್ರಶಾಂತ ಮತ್ತು ಭಯಂಕರವಾಗಿದೆ.
ಜಮೀನಿನ ಸುತ್ತಲೂ ನಡೆದುಕೊಂಡು ಹೋಗುವಾಗ, ಒದ್ದೆಯಾದ ಕಪ್ಪು ಭೂಮಿಯ ಮೇಲೆ ಮೊಲಗಳು ಸೇರಿದಂತೆ ಸುಮಾರು ಒಂದು ಡಜನ್ ಕಾಡು ಪ್ರಾಣಿಗಳ ಹೆಜ್ಜೆ ಗುರುತುಗಳನ್ನು ಅವರು ನಮಗೆ ತೋರಿಸಿದರು. ಅವು ಬೆಳೆಗಳನ್ನು ತಿಂದಿದ್ದವು. ಸೋಯಾಬೀನ್‌ಗಳನ್ನು ಹರಿದು ಹಾಕಿದ್ದವು. ಮತ್ತು ಹಸಿರು ಚಿಗುರುಗಳನ್ನು ಬುಡ ಸಮೇತ ಕಿತ್ತು ಹಾಕಿದ್ದವು.
“ಅತಾ ಕಾ ಕರ್ತಾ, ಸಾಂಗಾ? [ಇದಕ್ಕೆ ಏನು ಮಾಡುವುದು ಹೇಳಿ?]” ಎಂದು ಬೋಂಡೆ ನಿಟ್ಟುಸಿರಿಡುತ್ತಾರೆ.
*****
ಕೇಂದ್ರ ಸರ್ಕಾರದ ಹುಲಿ ಯೋಜನೆ ಕಾರ್ಯಕ್ರಮದ ಭಾಗವಾಗಿ ತಡೋಬಾದ ಕಾಡುಗಳು ಹುಲಿ ಸಂರಕ್ಷಣೆಗೆ ಪ್ರಮುಖ ಕೇಂದ್ರಬಿಂದುವಾಗಿದ್ದರೂ, ಈ ಪ್ರದೇಶವು ಹೆದ್ದಾರಿಗಳು, ನೀರಾವರಿ ಕಾಲುವೆಗಳು ಮತ್ತು ಹೊಸ ಗಣಿಗಳ ನಿರಂತರ ಬೆಳವಣಿಗೆಗೆ ಸಾಕ್ಷಿಯಾಗಿದೆ. ಇದು ಸಂರಕ್ಷಿತ ಅರಣ್ಯ ಪ್ರದೇಶಗಳು, ಸ್ಥಳಾಂತರಗೊಂಡ ಜನರು ಮತ್ತು ಅರಣ್ಯ ಪರಿಸರವನ್ನು ತೊಂದರೆಗೀಡುಮಾಡಿದೆ.
ಈ ಹಿಂದೆ ಹುಲಿ ಪ್ರದೇಶವಾಗಿದ್ದ ಪ್ರದೇಶಗಳನ್ನು ಗಣಿಗಾರಿಕೆ ಅತಿಕ್ರಮಿಸುತ್ತಿದೆ. ಚಂದ್ರಾಪುರ ಜಿಲ್ಲೆಯ 30ಕ್ಕೂ ಹೆಚ್ಚು ಸಕ್ರಿಯ ಸಾರ್ವಜನಿಕ ಮತ್ತು ಖಾಸಗಿ ವಲಯದ ಕಲ್ಲಿದ್ದಲು ಗಣಿಗಳಲ್ಲಿ ಸುಮಾರು ಎರಡು ಡಜನ್ ಗಣಿಗಳು ಕಳೆದ ಎರಡು ದಶಕಗಳಲ್ಲಿ ದಕ್ಷಿಣ ಮತ್ತು ಪಶ್ಚಿಮ ಭಾಗಗಳಲ್ಲಿ ತಲೆಯೆತ್ತಿವೆ.
"ಕಲ್ಲಿದ್ದಲು ಗಣಿ ಅಥವಾ ಚಂದ್ರಾಪುರ ಸೂಪರ್ ಥರ್ಮಲ್ ಪವರ್ ಸ್ಟೇಷನ್ ಆವರಣದಲ್ಲಿ ಹುಲಿಗಳು ಕಾಣಿಸಿಕೊಂಡಿವೆ. ಇದು ಈಗ ಮಾನವ-ವನ್ಯಜೀವಿ ಸಂಘರ್ಷದ ಹೊಸ ಕೇಂದ್ರವಾಗಿ ಮಾರ್ಪಟ್ಟಿದೆ. ನಾವು ಅವುಗಳ ಆವಾಸಸ್ಥಾನವನ್ನು ಅತಿಕ್ರಮಿಸಿದ್ದೇವೆ" ಎಂದು ಪರಿಸರ ಸಂರಕ್ಷಣೆ ಮತ್ತು ಸಂರಕ್ಷಣೆ ಕ್ಷೇತ್ರದಲ್ಲಿ ಕೆಲಸ ಮಾಡುವ ಬಂಡು ಧೋತ್ರೆ ಹೇಳುತ್ತಾರೆ. ಎನ್‌ಟಿಸಿಎ ಯ 2022ರ ವರದಿಯ ಪ್ರಕಾರ, ಮಧ್ಯ ಭಾರತದ ಕಾಡುಗಳಲ್ಲಿ ದೊಡ್ಡ ಪ್ರಮಾಣದ ಗಣಿಗಾರಿಕೆ ಮತ್ತು ಕಲ್ಲುಗಣಿಗಾರಿಕೆಯು ಹುಲಿ ಸಂರಕ್ಷಣೆಗೆ ಪ್ರಮುಖ ಸವಾಲಾಗಿದೆ.
ತಡೋಬಾ ಅಂಧಾರಿ ಹುಲಿ ಸಂರಕ್ಷಿತ ಪ್ರದೇಶವು ಮಧ್ಯ ಭಾರತದ ಕಾಡುಗಳಿಗೆ ಸೇರಿದೆ. ನೆರೆಯ ಜಿಲ್ಲೆಗಳಾದ ಯವತ್ಮಾಲ್, ನಾಗ್ಪುರ ಮತ್ತು ಭಂಡಾರಾ ಅರಣ್ಯ ಪ್ರದೇಶಗಳು ಈ ಯೋಜನೆಗೆ ಹೊಂದಿಕೊಂಡಿವೆ. "ಮನುಷ್ಯ-ಹುಲಿ ಸಂಘರ್ಷವು ಈ ಪ್ರದೇಶದಲ್ಲಿ ಅತಿ ಹೆಚ್ಚು" ಎಂದು ಎನ್‌ಟಿಸಿಎ ಯ 2018ರ ವರದಿ ಹೇಳುತ್ತದೆ.
"ಈ ವಿಷಯವು ರೈತರು ಮತ್ತು ರಾಜ್ಯದ ಸಂರಕ್ಷಣಾ ಅನಿವಾರ್ಯತೆಗಳ ಮೇಲೆ ಭಾರಿ ರಾಷ್ಟ್ರೀಯ ಆರ್ಥಿಕ ಪರಿಣಾಮಗಳನ್ನು ಬೀರುತ್ತದೆ" ಎಂದು ವನ್ಯಜೀವಿ ಜೀವಶಾಸ್ತ್ರಜ್ಞ ಮತ್ತು ಪುಣೆಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ (ಐಐಎಸ್ಇಆರ್) ನ ಮಾಜಿ ಪ್ರಾಧ್ಯಾಪಕ ಡಾ.ಮಿಲಿಂದ್ ವಟ್ವೆ ಹೇಳುತ್ತಾರೆ.
ಸಂರಕ್ಷಿತ ಅರಣ್ಯಗಳು ಮತ್ತು ವನ್ಯಜೀವಿಗಳ ರಕ್ಷಣೆ ಮತ್ತು ಸಂರಕ್ಷಣೆಗೆ ಕಾನೂನುಗಳಿವೆ, ಆದರೆ ಬೆಳೆಗಳ ನಷ್ಟ ಮತ್ತು ಪ್ರಾಣಿಗಳ ದಾಳಿಯಿಂದಾಗಿ ರೈತರು ಭಾರಿ ನಷ್ಟವನ್ನು ಅನುಭವಿಸುತ್ತಾರೆ. ಪ್ರಾಣಿಗಳಿಂದ ಬೆಳೆ ನಾಶವಾದಾಗ ರೈತರು ಸಹಜವಾಗಿಯೇ ಆತಂಕಕ್ಕೆ ಒಳಗಾಗುತ್ತಾರೆ ಮತ್ತು ಇದು ವನ್ಯಜೀವಿ ಸಂರಕ್ಷಣೆಯ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಡಾ. ವಟ್ವೆ ಹೇಳುತ್ತಾರೆ. ಅನುತ್ಪಾದಕ ಅಥವಾ ಸಂತಾನೋತ್ಪತ್ತಿಗೆ ಸೂಕ್ತವಲ್ಲದ ಹಿಂಡಿನಿಂದ ಅನಪೇಕ್ಷಿತ ಪ್ರಾಣಿಗಳನ್ನು ಕೊಲ್ಲುವ ಅಭ್ಯಾಸವನ್ನು ಕಾನೂನುಗಳು ತಡೆಯುತ್ತವೆ.
2015ರಿಂದ 2018ರ ಅವಧಿಯಲ್ಲಿ ಡಾ. ವಟ್ವೆ ತಡೋಬಾ ಸುತ್ತಮುತ್ತಲಿನ ಐದು ಗ್ರಾಮಗಳ 75 ರೈತರೊಡನೆ ಕ್ಷೇತ್ರ ಅಧ್ಯಯನ ನಡೆಸಿದರು. ವಿದರ್ಭ ಅಭಿವೃದ್ಧಿ ಮಂಡಳಿಯ ಆರ್ಥಿಕ ನೆರವಿನೊಂದಿಗೆ ಈ ಅಧ್ಯಯನ ನಡೆಸಲಾಗಿದೆ. ಇದರಲ್ಲಿ, ಅವರು ರೈತರಿಗಾಗಿ ಒಂದು ವ್ಯವಸ್ಥೆಯನ್ನು ರಚಿಸಿದರು, ಇದರಲ್ಲಿ ಅವರು ವರ್ಷದಲ್ಲಿ ಪ್ರಾಣಿಗಳ ದಾಳಿಯಿಂದ ಉಂಟಾಗುವ ಹಾನಿ ಅಥವಾ ನಷ್ಟದ ಮಾಹಿತಿಯನ್ನು ಒಟ್ಟಾಗಿ ತುಂಬಬಹುದು. 50ರಿಂದ 100ರಷ್ಟು ಬೆಳೆ ನಷ್ಟವಾಗುತ್ತಿದೆ ಎಂದು ಅಂದಾಜಿಸಿದರು. ಹಣದ ವಿಷಯದಲ್ಲಿ, ಈ ಅಂಕಿ ಬೆಳೆಯನ್ನು ಅವಲಂಬಿಸಿ ಎಕರೆಗೆ 25,000 ರಿಂದ 1,00,000 ರೂಪಾಯಿಗಳವರೆಗೆ ಹೋಗುತ್ತದೆ.
ಪರಿಹಾರ ನೀಡದಿದ್ದರೆ, ಅನೇಕ ರೈತರು ಸೀಮಿತ ಬೆಳೆ ಆಯ್ಕೆಗಳಿಗೆ ಅಂಟಿಕೊಳ್ಳುತ್ತಾರೆ ಅಥವಾ ತಮ್ಮ ಹೊಲಗಳನ್ನು ಬರಡಾಗಿ ಬಿಡುತ್ತಾರೆ.
ರಾಜ್ಯ ಅರಣ್ಯ ಇಲಾಖೆಯು ಬೆಳೆ ಹಾನಿ ಅಥವಾ ಕಾಡು ಪ್ರಾಣಿಗಳಿಂದ ಕೊಲ್ಲಲ್ಪಟ್ಟ ಜಾನುವಾರುಗಳಿಗೆ ರೈತರಿಗೆ ವಾರ್ಷಿಕ 80 ಕೋಟಿ ರೂ.ಗಳ ಪರಿಹಾರವನ್ನು ವಿತರಿಸುತ್ತದೆ. ಆಗಿನ ಅರಣ್ಯ ಪಡೆಯ ಮುಖ್ಯಸ್ಥರಾಗಿದ್ದ ಮಹಾರಾಷ್ಟ್ರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಲಿಮಾಯೆ ಅವರು ಮಾರ್ಚ್ 2022ರಲ್ಲಿ ಪರಿಗೆ ಈ ಮಾಹಿತಿಯನ್ನು ನೀಡಿದ್ದರು.
"ಪ್ರಸ್ತುತ ನಗದು ಪರಿಹಾರವು ಚಿಲ್ಲರೆ ಮೊತ್ತವಾಗಿದೆ" ಎಂದು ಭದ್ರಾವತಿ ತಾಲ್ಲೂಕಿನ ಹೋರಾಟಗಾರ ವಿಠ್ಠಲ್ ಬದ್ಖಾಲ್ ಹೇಳುತ್ತಾರೆ. "ರೈತರು ಸಾಮಾನ್ಯವಾಗಿ ಪರಿಹಾರವನ್ನು ಕೋರುವುದಿಲ್ಲ ಏಕೆಂದರೆ ಪ್ರಕ್ರಿಯೆಯು ತೊಡಕಿನಿಂದ ಕೂಡಿದೆ ಮತ್ತು ತಾಂತ್ರಿಕವಾಗಿ ಅರ್ಥಮಾಡಿಕೊಳ್ಳುವುದು ಕಷ್ಟ" ಎಂದು ಅವರು ವಿವರಿಸುತ್ತಾರೆ.
ಕೆಲವು ತಿಂಗಳ ಹಿಂದೆ ಬೋಂಡೆ ಹಸು ಸೇರಿದಂತೆ ಹೆಚ್ಚಿನ ಜಾನುವಾರುಗಳನ್ನು ಕಳೆದುಕೊಂಡರು. 2022 ರಲ್ಲಿ, ಅವರು ಸುಮಾರು 25 ಬಾರಿ ಪರಿಹಾರ ಕೋರಿಕೆಗಳನ್ನು ಸಲ್ಲಿಸಿದರು. ಪ್ರತಿ ಬಾರಿಯೂ ಅವರು ಅರ್ಜಿಯನ್ನು ಭರ್ತಿ ಮಾಡಬೇಕಾಗಿತ್ತು, ಸ್ಥಳೀಯ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗಿತ್ತು, ಸ್ಥಳೀಯ ಅಧಿಕಾರಿಗಳನ್ನು ಕಡ್ಡಾಯ ಸ್ಥಳ ಪಂಚನಾಮೆ (ಅಥವಾ ತಪಾಸಣೆ) ನಡೆಸುವಂತೆ ಮನವೊಲಿಸಬೇಕಾಗಿತ್ತು, ಅವರ ಖರ್ಚುವೆಚ್ಚಗಳ ದಾಖಲೆಗಳನ್ನು ನಿರ್ವಹಿಸಬೇಕಾಗಿತ್ತು ಮತ್ತು ಅವರ ಕ್ಲೈಮ್ ಸಲ್ಲಿಕೆಗಳನ್ನು ಅನುಸರಿಸಬೇಕಾಗಿತ್ತು. ಪರಿಹಾರ ಪಡೆಯಲು ತಿಂಗಳುಗಳು ಬೇಕಾಗುತ್ತವೆ ಎಂದು ಅವರು ಹೇಳುತ್ತಾರೆ. "ಮತ್ತು ಆ ಪರಿಹಾರದಿಂದ ಎಲ್ಲ ನಷ್ಟವೂ ಪರಿಹಾರವಾಗುವುದಿಲ್ಲ."
ಡಿಸೆಂಬರ್ 2022ರ ಚಳಿಗಾಲದ ಬೆಳಿಗ್ಗೆ, ಬೋಂಡೆ ನಮ್ಮನ್ನು ಮತ್ತೊಮ್ಮೆ ತನ್ನ ಜಮೀನಿಗೆ ಕರೆದೊಯ್ದರು, ಹೊಸದಾಗಿ ಬಿತ್ತನೆ ಮಾಡಿದ ಹೆಸರು ಬೆಳೆಯಿಂದ ಹೊಲ ಸಮೃದ್ಧವಾಗಿತ್ತು. ಕಾಡುಹಂದಿಗಳು ಈಗಾಗಲೇ ಕೋಮಲ ಚಿಗುರುಗಳನ್ನು ಅಗಿದು ತಿಂದಿವೆ ಮತ್ತು ಬೋಂಡೆಯವರಿಗೆ ಬೆಳೆಯ ಭವಿಷ್ಯದ ಬಗ್ಗೆ ಖಾತರಿಯಿಲ್ಲ.
ನಂತರದ ತಿಂಗಳುಗಳಲ್ಲಿ ಜಿಂಕೆಗಳ ಹಿಂಡು ತಿನ್ನುತ್ತಿದ್ದ ಕೆಲವು ಭಾಗಗಳನ್ನು ಹೊರತುಪಡಿಸಿ ಹೆಚ್ಚಿನ ಬೆಳೆಯನ್ನು ರಕ್ಷಿಸುವಲ್ಲಿ ಅವರು ಯಶಸ್ವಿಯಾದರು.
ಪ್ರಾಣಿಗಳಿಗೆ ಆಹಾರ ಬೇಕು. ಬೋಂಡೆ, ತರಾಳೆ ಮತ್ತು ಇತರ ರೈತರ ಕುಟುಂಬಗಳಿಗೂ ಸಹ ಆಹಾರ ಬೇಕು. ಅದು ಅವರ ಹೊಲಗಳಲ್ಲಿದೆ, ಅಲ್ಲಿ ಆಹಾರಕ್ಕಾಗಿ ಪರಸ್ಪರ ಸಂಘರ್ಷ ನಡೆಸಬೇಕು.
ಅನುವಾದ: ಶಂಕರ. ಎನ್. ಕೆಂಚನೂರು