ಬೀಸುತ್ತಿರುವ ಚಳಿಗಾಲದ ಗಾಳಿ. ಮಳೆ ರಸ್ತೆಯ ಧೂಳನ್ನು ಕೆಸರಾಗಿ ಪರಿವರ್ತಿಸಿದೆ. ಸಿಂಘುವಿನಲ್ಲಿ ಪ್ರತಿಭಟನಾ ಸ್ಥಳದೆಡೆಗೆ ತೆರೆದುಕೊಂಡಿರುವ ಕಿರಿದಾದ ಹಾದಿಯ ಕೆಲವು ಭಾಗಗಳಲ್ಲಿ ನೀರು ಸಂಗ್ರಹವಾಗಿದೆ. ಜನರು ಒದ್ದೆಯಾದ ಹೊಂಡಗಳ ಮೂಲಕ ನಡೆಯುವುದನ್ನು ತಪ್ಪಿಸಲು ಸಾಧ್ಯವಿಲ್ಲ - ಮತ್ತು ಹಾಗೆ ನಡೆಯುವಾ ಅವರ ಬೂಟುಗಳು ಮತ್ತು ಸ್ಯಾಂಡಲ್ಗಳು ಮಣ್ಣಿನಿಂದ ಆವೃತವಾಗುತ್ತವೆ.
ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘು ಪ್ರತಿಭಟನಾ ಸ್ಥಳದಲ್ಲಿರುವ ವಿವಿಧ ರೈತ ಸಂಘಟನೆಗಳ ಸಾಮೂಹಿಕ ಕಿಸಾನ್ ಮೋರ್ಚಾದ ವೇದಿಕೆಯನ್ನು ದಾಟಿದ ನಂತರ ಅವರಿಗೆ ಸ್ವಲ್ಪ ಸಮಾಧಾನವಾಗುತ್ತದೆ. ಯಾಕೆಂದರೆ ಅಲ್ಲಿಂದ ಸುಮಾರು 100 ಮೀಟರ್ ಮುಂದೆ, ಜಸ್ವಿಂದರ್ ಸಿಂಗ್ ಸೈನಿ ಮತ್ತು ಪ್ರಕಾಶ್ ಕೌರ್ ತಮ್ಮ ಸೇವೆಯಲ್ಲಿದ್ದಾರೆ, ಅವರು ಶೂಗಳನ್ನು ಸ್ವಚ್ಛಗೊಳಿಸಿ ಪಾಲಿಶ್ ಮಾಡಿ ಕೊಡುತ್ತಾರೆ.
"1986ರಲ್ಲಿ ದೇವರು ನಮಗೆ ಮಗುವಿನ ರೂಪದಲ್ಲಿ ಆಶೀರ್ವದಿಸಿದ ದಿನ, ನಾನು ನನ್ನ ಬದುಕನ್ನು ಮಾನವೀಯ ಕೆಲಸಗಳಿಗೆ ಅರ್ಪಿಸಲು ನಿರ್ಧರಿಸಿದೆ" ಎಂದು ಕರಕುಶಲ ವಸ್ತುಗಳನ್ನು ರಫ್ತು ಮಾಡುವ ಉದ್ಯಮಿ 62 ವರ್ಷದ ಜಸ್ವಿಂದರ್ ಹೇಳುತ್ತಾರೆ.
ಹೀಗೆ ಸುಮಾರು 35 ವರ್ಷಗಳಿಂದ, ದಂಪತಿಗಳು ಸೇವೆ ಸಲ್ಲಿಸಲು ಗುರುದ್ವಾರಗಳಿಗೆ ಹೋಗುತ್ತಿದ್ದಾರೆ, ವಿಶೇಷವಾಗಿ ಅಲ್ಲಿಗೆ ಬರುವ ಭಕ್ತರ ಬೂಟುಗಳನ್ನು ಸ್ವಚ್ಛಗೊಳಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಈಗ ದೆಹಲಿಯಲ್ಲಿ ವಾಸಿಸುತ್ತಿರುವ ಅವರ ನಾಲ್ಕು ಸದಸ್ಯರ ಕುಟುಂಬ, ಹರಿಯಾಣದ ಅಂಬಾಲಾ ಜಿಲ್ಲೆಯ ನರೈನ್ಗಢದಲ್ಲಿ 20 ಎಕರೆ ಭೂಮಿಯನ್ನು ಹೊಂದಿದೆ.
ದಶಕಗಳಿಂದ ಸೇವಾದಾರ್ಗಳಾಗಿ (ಗುರುದ್ವಾರಗಳಲ್ಲಿ ಅಥವಾ ಸಮುದಾಯ ಕಾರ್ಯಕ್ರಮಗಳಲ್ಲಿ ಸೇವೆ ಸಲ್ಲಿಸುವ ಸ್ವಯಂಸೇವಕರು) ಸೇವೆ ಸಲ್ಲಿಸುತ್ತಿರುವುದರ ಕುರಿತಾಗಿ ಹೇಳುತ್ತಾ ಅವರು "ನನ್ನ ಪತ್ನಿ, ಸಂಗಾತಿ ಯಾರೂ ಊಹಿಸಲೂ ಸಾಧ್ಯವಿಲ್ಲದಷ್ಟು ಸೇವೆ ಸಲ್ಲಿಸಿದ್ದಾರೆ." ಎಂದು ಹೇಳುತ್ತಾರೆ. ಅವರು ಇದನ್ನು ಹೇಳುತ್ತಿರುವಾಗ ತನ್ನ 50ರ ಹರೆಯದಲ್ಲಿರುವ ಪ್ರಕಾಶ್, ಒಂದು ಜೋಡಿ ಶೂಗಳನ್ನು ಪಾಲಿಶ್ ಮಾಡುವುದರಲ್ಲಿ ಮಗ್ನರಾಗಿದ್ದರು.
ಅವರ ಸಹಾಯ ಹಸ್ತಗಳುದೆಹಲಿಯ ಗಡಿಗಳಲ್ಲಿ ನೀಡಲಾಗುತ್ತಿರುವ ಅಸಂಖ್ಯಾತ ಉಚಿತ ಸೇವಾ - ಮಾನವೀಯಯ ಸೇವೆ. ಈ ಸೇವೆಗಳನ್ನು ಪ್ರತಿಭಟನೆಗೆ ಬೆಂಬಲ ರೂಪದಂತೆಯೂ ನೀಡಲಾಗುತ್ತಿದೆ. ಇಂತಹ ಸೇವೆಗಳನ್ನು ರೈತರೂ ನೀಡುತ್ತಿದ್ದು ಜೊತೆಗೆ ಸೈನಿಗಳಂತಹ ಸ್ವಯಂ ಸೇವಕರು ಸಹ ನೀಡುತ್ತಿದ್ದಾರೆ.
ಸಿಂಘು ಮತ್ತು ದೆಹಲಿಯ ಸುತ್ತಮುತ್ತಲಿನ ಇತರ ಪ್ರತಿಭಟನಾ ಸ್ಥಳಗಳಲ್ಲಿ, ಲಕ್ಷಾಂತರ ಕೃಷಿಕರು ವಿರೋಧ ವ್ಯಕ್ತಪಡಿಸುತ್ತಿರುವ ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದಿದೆ. ಆ ಕಾನೂನುಗಳೆಂದರೆ:
ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020
;
ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ
; ಮತ್ತು
ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020.
ರೈತರು ಈ ಮಮೂರು ಕಾನೂನುಗಳನ್ನು ದೊಡ್ಡ ಕಾರ್ಪೊರೇಟ್ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಗೆಡವುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
ಈ ಕಾನೂನುಗಳ ಮೇಲಿನ ಸಿಟ್ಟಿನಿಂದ ರೈತರು ದೆಹಲಿಯ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಈಗ ಎರಡು ತಿಂಗಳು. ಮತ್ತು ಅವರು ಸ್ವಯಂ ನಿಯಂತ್ರಣದಲ್ಲಿ ಬೆರಗುಗೊಳಿಸುವ ಸಾಮರ್ಥ್ಯವನ್ನು ತೋರಿಸಿದ್ದಾರೆ, ಸರಕಾರದ ಸಹಾಯವನ್ನು ನಿರಾಕರಿಸಿ ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಹೆಚ್ಚು ಛಳಿಯಿರುವ ಛಳಿಗಾಲದಲ್ಲಿ ಆಹಾರ ಮತ್ತು ತಮ್ಮ ಆರೈಕೆ ನೋಡಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಇಲ್ಲಿ ಸಿಗುತ್ತಿರುವ ಅನೇಕ ಸೇವೆಗಳು ಅಮೂಲ್ಯವಾದವು.
“ಪ್ರತಿಯೊಬ್ಬರೂ ಜನರಿಗೆ ಏನಾದರೊಂದು ಸೇವೆಯನ್ನು ಒದಗಿಸುತ್ತಿದ್ದಾರೆ - ಲಂಗರ್ಗಳು, ವೈದ್ಯಕೀಯ ಆರೈಕೆ, ಡೇರೆಗಳು, ರೇನ್ಕೋಟ್ಗಳು ಮತ್ತು ಇನ್ನಷ್ಟು. ನಾವು ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಏನು ಮಾಡುತ್ತಿದ್ದೇವೆ ಮತ್ತು ಅವರಿಗೆ ಚೆನ್ನಾಗಿ ತಿಳಿದಿದೆ” ಎಂದು ಜಸ್ವಿಂದರ್ ಹೇಳುತ್ತಾರೆ.
“ನಾನು ರೈತರ ಮಗಳು. ನಾನು ಅವರು ನೋವಿನಲ್ಲಿರುವುದನ್ನು ನೋಡಲಾರೆ ” ಎಂದು ಪ್ರಕಾಶ್ ಹೇಳುತ್ತಾರೆ, ಅವರ ಹೆತ್ತವರ ಕುಟುಂಬ ಹರಿಯಾಣದ ಕುರುಕ್ಷೇತ್ರದವರು. "ನಾನು ಅವರ ಬೂಟುಗಳನ್ನು ಪಾಲಿಶ್ ಮಾಡುತ್ತೇನೆ."
ʼಸಾಮಾನ್ಯವಾಗಿ ನನಗೆ ಒಂದು ಗಂಟೆಯಷ್ಟು ಹೊತ್ತು ನೇರವಾಗಿ ಕೂರಲು ಸಾಧ್ಯವಾಗುವುದಿಲ್ಲ. ಆದರೆ ಒಮ್ಮೆ ನಾವು ಇಲ್ಲಿಗೆ ಬಂದರೆ, ನಾನು ಆರು ಗಂಟೆಗಳ ಕಾಲ ಬೂಟುಗಳನ್ನು ಸ್ವಚ್ಛಗೊಳಿಸುತ್ತೇನೆ ಮತ್ತು ಹಾಗೆ ಮಾಡುವಾಗ ಯಾವುದೇ ನೋವಿನ ಅನುಭವವಾಗುವುದಿಲ್ಲ 'ಎಂದು ದೀರ್ಘಕಾಲದ ಬೆನ್ನು ನೋವಿನಿಂದ ಬಳಲುತ್ತಿರುವ ಜಸ್ವಿಂದರ್ ಹೇಳುತ್ತಾರೆ.
ಜಸ್ವಿಂದರ್ ಅವರು ಹಾದುಹೋಗುವ ಜನರ ಬಳಿ ತಮ್ಮ ಬೂಟುಗಳನ್ನು ನೀಡುವಂತೆ ಕೇಳುತ್ತಲೇ ಇರುತ್ತಾರೆ, ಅವರಲ್ಲಿ ಕೆಲವರು ಆರಂಭದಲ್ಲಿ ಹಿಂಜರಿಯುತ್ತಾರೆ ಮತ್ತು ನಾಚಿಕೆಪಡುತ್ತಾರೆ - “ಓ! ಬನ್ನಿ! ಆ ಶೂಗಳನ್ನು ಇಲ್ಲಿ ಕೊಡಿ, ಅವುಗಳನ್ನು ಹೊಳೆಯುವಂತೆ ಮಾಡುತ್ತೇವೆ.
ಅವರು ಗೊಂದಲದಲ್ಲಿರುವ ಹಿರಿಯ ರೈತನನ್ನು ಕರೆಯುತ್ತಾರೆ: "ಬಾಬಾಜಿ, ಲಾವೊ ಜಿ ಲಾವೊ, ಕೊಯಿ ಗಾಲ್ ನಹಿ ಜಿ [ಬಾಬಾಜಿ, ಅದನ್ನು ನನ್ನ ಬಳಿ ತನ್ನಿ, ಯಾವುದೇ ಸಮಸ್ಯೆ ಇಲ್ಲ]." ನಂತರ ಆ ಹಿರಿಯ ವ್ಯಕ್ತಿ ತನ್ನ ಹೊಳೆಯುವ ಶೂಗಳೊಂದಿಗೆ ಅಲ್ಲಿಂದ ಮರಳುತ್ತಾರೆ.
“ನೀವೂ ಮನುಷ್ಯ, ನಾನು ಕೂಡ ಮನುಷ್ಯ. ಕೊಳಕು ಬೂಟುಗಳನ್ನು ಏಕೆ ಧರಿಸಬೇಕು?" ಜಸ್ವಿಂದರ್ ಇತರ ದಾರಿಹೋಕರನ್ನು ಕೇಳುತ್ತಾರೆ. ಅವರು ಸ್ವಲ್ಪ ಹಗುರವೆನಿಸಿ, ಅವರು ತಮ್ಮ ಬೂಟುಗಳನ್ನು ತೆಗೆದು ಕೊಟ್ಟಾಗ, ಜಸ್ವಿಂದರ್ ಮತ್ತು ಪ್ರಕಾಶ್ ಈ ಸಣ್ಣ ಯಶಸ್ಸಿನ ಬಗ್ಗೆ ಒಂದು ನಗು ವಿನಿಮಯ ಮಾಡಿಕೊಳ್ಳುತ್ತಾರೆ.
ಈ ಸೇವೆಯನ್ನು ನೀಡಲು ಕೆಲವು ರೈತರು ಸಹ ಅವರೊಂದಿಗೆ ಸೇರಿಕೊಳ್ಳುತ್ತಾರೆ. ಸಿಂಘುವಿನಲ್ಲಿ ಇಬ್ಬರು ಯುವಕರು ಮತ್ತು ಇತರ ವೃದ್ಧರು ಸಹ ಹೋರಾಟಕ್ಕೆ ಬೆಂಬಲದ ಸಂಕೇತವಾಗಿ ಬೂಟುಗಳನ್ನು ಕ್ಲೀನ್ ಮಾಡುತ್ತಿದ್ದಾರೆ.
ತನ್ನನ್ನು ಉದ್ಯಮಿ ಮತ್ತು ಕೃಷಿಕನಾಗಿ ನೋಡುವ ಜಸ್ವಿಂದರ್, “ನೋಟು ನಿಷೇದ, ಜಿಎಸ್ಟಿ [ಸರಕು ಮತ್ತು ಸೇವಾ ತೆರಿಗೆ] ಮತ್ತು ದೊಡ್ಡ ಉದ್ಯಮಗಳಿಗೆ ನೀಡುವಂತಹ ಕೊಡುಗೆಗಳನ್ನು ನೋಡುವಾಗ ಸರ್ಕಾರವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತದೆ ಎನ್ನುವುದು ಸಾಬೀತಾಗುತ್ತದೆ." ಎನ್ನುತ್ತಾರೆ. "ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಇತರರು ದೇಶದಿಂದ ಪರಾರಿಯಾಗಿದ್ದಾರೆ ಮತ್ತು ಈಗ ಅಂಬಾನಿಗಳು ಮತ್ತು ಅದಾನಿಗಳು ನಮ್ಮ ಜೀವನೋಪಾಯವನ್ನನು ಸ್ವಾಧೀನಪಡಿಸಿಕೊಳ್ಳಲು ಮೂರು ಕಾನೂನುಗಳನ್ನು ರೂಪಿಸಲಾಗಿದೆ" ಎಂದು ಮುಂದುವರೆದು ಹೇಳುತ್ತಾರೆ. “ಸರ್ಕಾರ ಮಾನವೀಯತೆ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನಾವು ರೈತರು, ನಾವು ಕಾಳಜಿ ವಹಿಸುತ್ತೇವೆ."
“ನಾವು ಸತ್ತ ನಂತರ, ನಮ್ಮ ಹಣವು ನಮ್ಮೊಂದಿಗೆ ನಮ್ಮೊಂದಿಗೆ ಬರುತ್ತದೆಯೇ? ಇಲ್ಲ. ನಾವು ಮಾಡಿದ ಕಾರ್ಯಗಳು ಮಾತ್ರ ನಮ್ಮೊಂದಿಗೆ ಪ್ರಯಾಣಿಸುತ್ತವೆ. ಆದ್ದರಿಂದ ಸೇವಾ ಮಾಡಬೇಕು,” ಪ್ರಕಾಶ್ ಹೇಳುತ್ತಾರೆ.
“ಮತ್ತು ಗುರು ಗೋಬಿಂದ್ ಸಿಂಗ್ ಅವರು ಯಾರ ಮೇಲಾದರೂ ಯಾವುದೇ ದೌರ್ಜನ್ಯ ನಡೆಯುತ್ತಿದ್ದರೆ ಅದನ್ನು ನಾವು ವಿರೋಧಿಸಬೇಕು ಎಂದು ನಮಗೆ ಕಲಿಸಿದ್ದಾರೆ. ನಮಗೆ ಅನ್ಯಾಯವಾಗಿದ್ದರೆ, ನಾವು ಅದರ ವಿರುದ್ಧ ಹೋರಾಡಬೇಕು. ರೈತರ ಪ್ರತಿಭಟನೆಯು ದಬ್ಬಾಳಿಕೆಯ ವಿರುದ್ಧದ ಹೋರಾಟವಾಗಿದೆ.”
“ಮತ್ತು ಗುರು ಗೋಬಿಂದ್ ಸಿಂಗ್ ಅವರು ಯಾರ ಮೇಲಾದರೂ ಯಾವುದೇ ದೌರ್ಜನ್ಯ ನಡೆಯುತ್ತಿದ್ದರೆ ಅದನ್ನು ನಾವು ವಿರೋಧಿಸಬೇಕು ಎಂದು ನಮಗೆ ಕಲಿಸಿದ್ದಾರೆ. ನಮಗೆ ಅನ್ಯಾಯವಾಗಿದ್ದರೆ, ನಾವು ಅದರ ವಿರುದ್ಧ ಹೋರಾಡಬೇಕು. ರೈತರ ಪ್ರತಿಭಟನೆಯು ದಬ್ಬಾಳಿಕೆಯ ವಿರುದ್ಧದ ಹೋರಾಟವಾಗಿದೆ.”
ಬೂಟುಗಳು ಸ್ವಚ್ಛಗೊಳ್ಳುತ್ತಿರುವಾಗ ಬೂಟುಗಳನ್ನು ನೀಡಿದವರು ರಟ್ಟಿನ ಹಾಳೆಗಳ ಮೇಲೆ ಕಾಲು ಗಲೀಜಾಗದ ಹಾಗೆ ನಿಂತುಕೊಳ್ಳುತ್ತಾರೆ. ಶೂ ಪಾಲಿಶ್ ಮಾಡಿ ಅದರ ಮಾಲೀಕರಿಗೆ ಮರಳಿಸುವಾಗ ಜಸ್ವಿಂದರ್ ಮತ್ತು ಪ್ರಕಾಶ್ ಗೌರವದಿಂದ ತಲೆ ಬಾಗುತ್ತಾರೆ.
ಅನುವಾದ: ಶಂಕರ ಎನ್. ಕೆಂಚನೂರು