“ಅಸ್ಸಾಮ್ ನಮ್ಮ ಒಳಗಿದೆ,” ಎಂದು ಹಾಡುವ 25 ವರ್ಷದ ಸಾಂತೊ ತಾಂತಿ ಸಂಗೀತ ಮತ್ತು ಸಾಹಿತ್ಯ ನೀಡಿ ಝುಮುರ್ ಶೈಲಿಯ ಹಾಡೊಂದರ ವಿಡೀಯೋ ಮಾಡಿದ್ದಾರೆ. ಈ ಹಾಡಿನಲ್ಲಿ ಅವರು ಅಸ್ಸಾಮಿನ ಸುತ್ತಮುತ್ತಲಿನ ಬೆಟ್ಟ, ಪರ್ವತಗಳನ್ನು ಉಲ್ಲೇಖಿಸಿ ಅದನ್ನು ನಮ್ಮ ಮನೆಯೆನ್ನುತ್ತಾರೆ. ಅಸ್ಸಾಂನ ಜೋರ್ಹತ್ ಜಿಲ್ಲೆಯ ಸೈಕೋಟಾ ಚಹಾ ಎಸ್ಟೇಟಿನ ಧೇಕಿಯಾಜುಲಿ ವಿಭಾಗದಲ್ಲಿ ವಾಸಿಸುತ್ತಿರುವ ಅವರು ಸೈಕಲ್ ರಿಪೇರಿ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ; ಜೊತೆಗೆ ನಿಯಮಿತವಾಗಿ ತಮ್ಮ ಸಂಗೀತವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಾರೆ.
ಝುಮುರ್ ಎನ್ನುವುದು ಒಂದು ಜನಪ್ರಿಯ ಸ್ಥಳೀಯ ಸಂಗೀತ ಶೈಲಿ ಮತ್ತು ತಾಂತಿ ಹಾಡಿನಲ್ಲಿ ಡ್ರಮ್ ಬಡಿತ ಮತ್ತು ಕೊಳಲಿನ ಮಾಧುರ್ಯವನ್ನು ಬೆರೆಸುತ್ತಾರೆ. ಈ ಹಾಡುಗಳನ್ನು ಸದ್ರಿ ಭಾಷೆಯಲ್ಲಿ ಹಾಡಲಾಗುತ್ತದೆ ಮತ್ತು ಅಸ್ಸಾಂನ ಚಹಾ ತೋಟಗಳಲ್ಲಿ ಕೆಲಸ ಮಾಡಲು ಮಧ್ಯ, ದಕ್ಷಿಣ ಮತ್ತು ಪೂರ್ವ ಭಾರತದಿಂದ - ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ತೆಲಂಗಾಣದಿಂದ ವಲಸೆ ಬಂದ ಅನೇಕ ಆದಿವಾಸಿ ಗುಂಪುಗಳು ಈ ಕಲೆಯನ್ನು ಪ್ರದರ್ಶಿಸುತ್ತವೆ.
ಗುಳೆ ಹೋದ ಆದಿವಾಸಿ ಗುಂಪುಗಳು ಪರಸ್ಪರ ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ಬೆರೆಯತೊಡಗಿದವು. 'ಟೀ ಟ್ರೈಬ್ಸ್' ಎಂದು ಕರೆಯಲ್ಪಡುವ, ಅಸ್ಸಾಂನಲ್ಲಿ ಅಂದಾಜು ಆರು ಮಿಲಿಯನ್ ಜನರು ವಾಸಿಸುತ್ತಿದ್ದಾರೆ. ಅವರ ಮೂಲ ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಎಂದು ಗುರುತಿಸಲ್ಪಟ್ಟಿದ್ದರೂ, ಆ ಸ್ಥಾನಮಾನವನ್ನು ಇಲ್ಲಿ ಅವರಿಗೆ ನಿರಾಕರಿಸಲಾಗಿದೆ. ಅವರಲ್ಲಿ ಸುಮಾರು 12 ಲಕ್ಷ ಜನರು ರಾಜ್ಯದ 1,000ಕ್ಕೂ ಹೆಚ್ಚು ಚಹಾ ತೋಟಗಳಲ್ಲಿ ಕೆಲಸ ಮಾಡುತ್ತಾರೆ.
ಈ ವೀಡಿಯೊದಲ್ಲಿನ ನರ್ತಿಸಿರುವ ನರ್ತಕಿಯರು ಚಹಾ ತೋಟದ ಕೆಲಸಗಾರರು: ಸುನೀತಾ ಕರ್ಮಾಕರ್, ಗೀತಾ ಕರ್ಮಾಕರ್, ರೂಪಾಲಿ ತಾಂತಿ, ಲಖಿ ಕರ್ಮಾಕರ್, ನಿಕಿತಾ ತಂತಿ, ಪ್ರತಿಮಾ ತಂತಿ ಮತ್ತು ಅರೋತಿ ನಾಯಕ್.
ಶಾಂತೊ ತಾಂತಿ ಅವರ ಇತರ ವೀಡಿಯೊಗಳನ್ನು ವೀಕ್ಷಿಸಲು ಮತ್ತು ಅವರ ಜೀವನದ ಬಗ್ಗೆ ಓದಲು ಸೆಪ್ಟೆಂಬರ್ 2021ರಲ್ಲಿ ಪರಿಯಲ್ಲಿ ಪ್ರಕಟವಾದ ಶಾಂತೊ ತಾಂತಿಯ ದುಃಖ, ಕೆಲಸ ಮತ್ತು ಭರವಸೆಯ ಹಾಡುಗಳು ಎನ್ನುವ ವರದಿಯನ್ನು ನೋಡಿ.
ಅನುವಾದ: ಶಂಕರ. ಎನ್. ಕೆಂಚನೂರು