"ಹೂವುಗಳು ಒಣಗುತ್ತಿವೆ."
ಅದು ಮಾರ್ಚ್ 2023ರ ಬೆಚ್ಚಗಿನ ಬಿಸಿಲಿನಿಂದ ಕೂಡಿದ್ದ ಬೆಳಗಿನ ಹೊತ್ತು. ಅಂದು ಮರುಡುಪುಡಿ ನಾಗರಾಜು ಪೋಮುಲಾ ಭೀಮಾವರಂ ಗ್ರಾಮದಲ್ಲಿನ ತಮ್ಮ ಮೂರು ಎಕರೆ ಮಾವಿನ (ಮಂಗಿಫೆರಾ ಇಂಡಿಕಾ) ತೋಟವನ್ನು ಸಮೀಕ್ಷೆ ಮಾಡುತ್ತಿದ್ದಾರೆ.
ಆಂಧ್ರಪ್ರದೇಶದ ಅನಕಪಲ್ಲಿ ಜಿಲ್ಲೆಯ ಅವರ ತೋಟದಲ್ಲಿ ದೊಡ್ಡ ಗಾತ್ರದ ಬಂಗನಪಲ್ಲಿ, ರಸಭರಿತ ಚೆರುಕು ರಸಲು, ಸಾಮಾನ್ಯವಾಗಿ ಕಾಯಿಯಿರುವಾಗಲೇ ತಿನ್ನಲ್ಪಡುವ ತೋತಾಪುರಿ ಮತ್ತು ಪ್ರಸಿದ್ಧ ಪಾಂಡುರಂಗಿ ಮಾಮಿಡಿಯಂತಹ ಸ್ಥಳೀಯ ಪ್ರಭೇದಗಳ 150 ಮರಗಳಿವೆ.
ಅವರ ಜಮೀನಿನಲ್ಲಿನ ಮರಗಳು ಕಂದು-ಹಳದಿ ಮಾವಿನ ಹೂವುಗಳಿಂದ ಆವೃತವಾಗಿದ್ದವು. ಆದರೆ 62 ವರ್ಷದ ಈ ರೈತನಿಗೆ ಅದು ಖುಷಿಯನ್ನೇನೂ ಕೊಟ್ಟಿಲ್ಲ. ಏಕೆಂದರೆ ಈ ಬಾರಿ ಮಾವಿನ ಹೂವುಗಳು ತಡವಾಗಿ ಅರಳಿವೆಯೆಂದು ಅವರು ಹೇಳುತ್ತಾರೆ. “ಸಂಕ್ರಾಂತಿ ವೇಳೆಗೆಲ್ಲ ಮಾವಿನ ಹೂವು ಆಗಬೇಕಿತ್ತು. ಆದರೆ ಈ ಸಲ ಫೆಬ್ರವರಿಯಲ್ಲಿ ಹೂವಾಗಿದೆ” ಎನ್ನುತ್ತಾರೆ ನಾಗರಾಜ್
ಅಲ್ಲದೆ ಮಾರ್ಚ್ ವೇಳೆಗೆ ಮಾವಿ ಮಿಡಿಗಳು ನಿಂಬೆ ಗಾತ್ರದಲ್ಲಿ ಬೆಳೆಯಬೇಕಿತ್ತು. “ಹೂವಾಗದೆ ಮಾವಿನ ಕಾಯಿ ಆಗುವುದಿಲ್ಲ. ಇದರರ್ಥ ಈ ಬಾರಿ ಯಾವುದೇ ಹಣ ಸಂಪಾದನೆಯೂ ಇಲ್ಲ.”
ನಾಗರಾಜು ಅವರ ಚಿಂತೆ ಅರ್ಥಮಾಡಿಕೊಳ್ಳುವಂತಹದ್ದು. ದಿನಗೂಲಿ ಕಾರ್ಮಿಕನಾಗಿರುವ ಅವರ ತೋಟವು ಅವರು ಕಷ್ಟಪಟ್ಟು ಗೆದ್ದ ಕನಸು. ಮಾದಿಗ ಸಮುದಾಯದ (ಆಂಧ್ರಪ್ರದೇಶದಲ್ಲಿ ಪರಿಶಿಷ್ಟ ಜಾತಿ ಎಂದು ಪಟ್ಟಿ ಮಾಡಲಾಗಿದೆ) ಸದಸ್ಯರಾಗಿರುವ ಅವರಿಗೆ ಸುಮಾರು 25 ವರ್ಷಗಳ ಹಿಂದೆ ರಾಜ್ಯ ಸರ್ಕಾರವು ಈ ಭೂಮಿಯನ್ನು ಮಂಜೂರು ಮಾಡಿತ್ತು. ಆಂಧ್ರಪ್ರದೇಶ ಭೂಸುಧಾರಣೆ (ಕೃಷಿ ಹಿಡುವಳಿಗಳ ಮೇಲಿನ ಮಿತಿ) ಕಾಯ್ದೆ, 1973ರ ಅಡಿಯಲ್ಲಿ ಪರಿಚಯಿಸಲಾದ ಭೂರಹಿತ ವರ್ಗಗಳಿಗೆ ಭೂಮಿಯನ್ನು ಮರುಹಂಚಿಕೆ ಮಾಡುವ ರಾಜ್ಯ ಸರ್ಕಾರದ ಕ್ರಮದಡಿ ಇದನ್ನು ಮಾಡಲಾಯಿತು.
ಅವರು ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲಿ ಮಾವಿನ ಹಂಗಾಮು ಮುಗಿದ ನಂತರ ಹತ್ತಿರದ ಹಳ್ಳಿಗಳ ಕಬ್ಬಿನ ಹೊಲಗಳಲ್ಲಿ ದಿನಗೂಲಿ ಕೆಲಸಕ್ಕೆ ಮರಳುತ್ತಾರೆ. ಕೆಲಸವಿರುವ ದಿನಗಳಲ್ಲಿ ಅವರು ದಿನಗೂಲಿಯಾಗಿ 350 ರೂಪಾಯಿಗಳನ್ನು ಗಳಿಸುತ್ತಾರೆ. ವರ್ಷದಲ್ಲಿ 70-75 ದಿನಗಳ ಕಾಲ ಕೆರೆಗಳ ಹೂಳು ತೆಗೆಯುವುದು, ಮಿಶ್ರಗೊಬ್ಬರ ತಯಾರಿಕೆಗಳಂತಹ ಹಲವು ಕೆಲಸಗಳನ್ನು ಸಹ ಅವರು ಮನರೇಗಾ ಅಡಿಯಲ್ಲಿ ಮಾಡುತ್ತಾರೆ. ಇದರಲ್ಲಿ ಅವರು ಒಂದು ದಿನದ ಕೆಲಸಕ್ಕೆ 230 ರಿಂದ 250 ರೂ.ಗಳವರೆಗೆ ಸಂಬಳ ಪಡೆಯುತ್ತಾರೆ.
ನಾಗರಾಜು ಭೂಮಾಲಿಕನಾದ ಮೊದಲಿಗೆ ಅವರ ಜಮೀನಿನಲ್ಲಿ ಅರಿಶಿನ ಬೆಳೆದರು. ಸುಮಾರು ಐದು ವರ್ಷಗಳ ನಂತರ ಉತ್ತಮ ಲಾಭ ಪಡೆಯುವ ನಿರೀಕ್ಷೆಯಲ್ಲಿ ಮಾವಿನ ಗಿಡಗಳನ್ನು ಹಾಕಿದರು. "[20 ವರ್ಷಗಳ ಹಿಂದೆ] ಆರಂಭದಲ್ಲಿ, ಪ್ರತಿ ಮರದಿಂದ ನನಗೆ 50-75 ಕಿಲೋ ಮಾವಿನಹಣ್ಣುಗಳು ಸಿಗುತ್ತಿದ್ದವು" ಎಂದು ಅವರು ಹೇಳುತ್ತಾರೆ. "ಮಾವಿನ ಹಣ್ಣುಗಳೆಂದರೆ ನನಗೆ ಇಷ್ಟ, ವಿಶೇಷವಾಗಿ ತೋತಾಪುರಿ" ಎಂದು ಅವರು ಹೇಳುತ್ತಾರೆ.
ಆಂಧ್ರಪ್ರದೇಶವು ದೇಶದ ಎರಡನೇ ಅತಿದೊಡ್ಡ ಮಾವು ಬೆಳೆಯುವ ರಾಜ್ಯವಾಗಿದೆ. ಈ ಹಣ್ಣನ್ನು ಸರಿಸುಮಾರು 3.78 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತದೆ ಮತ್ತು 2020-21ರಲ್ಲಿ ವಾರ್ಷಿಕ ಉತ್ಪಾದನೆ 49.26 ಲಕ್ಷ ಮೆಟ್ರಿಕ್ ಟನ್ ಎಂದು ರಾಜ್ಯ ತೋಟಗಾರಿಕೆ ಇಲಾಖೆ ತಿಳಿಸಿದೆ.
ಪೊಮುಲಾ ಭೀಮಾವರಂ ಗ್ರಾಮವು ಕೃಷ್ಣ ಮತ್ತು ಗೋದಾವರಿ ನದಿಗಳ ನಡುವಿನ ಕೃಷಿ ವಲಯದಲ್ಲಿದೆ, ಇದು ಭಾರತದ ಪೂರ್ವ ಕರಾವಳಿಯ ಬಂಗಾಳಕೊಲ್ಲಿಯಲ್ಲಿ ಕೊನೆಯಾಗುವ ಸ್ಥಳದಿಂದ ಸ್ವಲ್ಪ ದೂರದಲ್ಲಿದೆ. ಮಾವಿನ ಹೂವುಗಳಿಗೆ ಅಕ್ಟೋಬರ್-ನವೆಂಬರ್ ತಿಂಗಳ ಚಳಿ ಮತ್ತು ತೇವಾಂಶದ ಅಗತ್ಯವಿರುತ್ತದೆ ಮತ್ತು ಹಣ್ಣುಗಳು ಸಾಮಾನ್ಯವಾಗಿ ಡಿಸೆಂಬರ್-ಜನವರಿಯಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಆದರೆ, "ಕಳೆದ ಐದು ವರ್ಷಗಳಲ್ಲಿ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಅಕಾಲಿಕ ಮಳೆ ಹೆಚ್ಚಾಗಿದೆ" ಎಂದು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ (ಐಐಎಚ್ಆರ್) ಪ್ರಧಾನ ವಿಜ್ಞಾನಿ ಡಾ.ಎಂ.ಶಂಕರನ್ ಹೇಳುತ್ತಾರೆ.
ಅಕಾಲಿಕ ಬಿಸಿಲಿನಲ್ಲಿ ಹೂವುಗಳು ಒಣಗುತ್ತಿರುವುದನ್ನು ಗಮನಿಸಿದ್ದೇನೆ, ಇದು ಕಟಾವಿನ ತೀವ್ರ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಈ ಮಾವಿನ ರೈತ ಹೇಳುತ್ತಾರೆ. "ಕೆಲವೊಮ್ಮೆ, ಒಂದು ಮರವು ಒಂದು ಪೆಟ್ಟಿಗೆಯನ್ನು [120- 150 ಮಾವಿನಹಣ್ಣುಗಳನ್ನು] ಸಹ ಉತ್ಪಾದಿಸುವುದಿಲ್ಲ" ಎಂದು ಅವರು ಹೇಳುತ್ತಾರೆ. "ಬೇಸಿಗೆಯಲ್ಲಿ ತೀವ್ರವಾದ ಗುಡುಗು ಮಿಂಚುಗಳು [ಬಹುತೇಕ ಸಿದ್ಧವಾದ] ಹಣ್ಣುಗಳನ್ನು ಹಾನಿಗೊಳಿಸುತ್ತವೆ."
ರಸಗೊಬ್ಬರಗಳು, ಕೀಟನಾಶಕಗಳು ಮತ್ತು ಕಾರ್ಮಿಕರ ಒಳಸುರಿ ವೆಚ್ಚಗಳನ್ನು ಸರಿದೂಗಿಸಲು, ನಾಗರಾಜು ಕಳೆದ ಎರಡು ವರ್ಷಗಳಿಂದ ನಿಯಮಿತವಾಗಿ ಒಂದು ಲಕ್ಷ ರೂ.ಗಳ ಸಾಲವನ್ನು ತೆಗೆದುಕೊಳ್ಳುತ್ತಿದ್ದಾರೆ. ಅವರು ಈ ಮೊತ್ತವನ್ನು ಖಾಸಗಿ ಲೇವಾದೇವಿಗಾರರಿಂದ ವಾರ್ಷಿಕ 32 ಪ್ರತಿಶತದಷ್ಟು ಬಡ್ಡಿಗೆ ಸಾಲ ಪಡೆಯುತ್ತಾರೆ. ಅವರ ವಾರ್ಷಿಕ ಗಳಿಕೆ ಸುಮಾರು 70,000ರಿಂದ 80,000 ರೂ. ಜೂನ್ ತಿಂಗಳಿನಲ್ಲಿ ಲೇವಾದೇವಿಗಾರನಿಗೆ ಮರುಪಾವತಿಸಲು ಅವರು ಇದರಲ್ಲಿ ಸ್ವಲ್ಪ ಭಾಗವನ್ನು ಖರ್ಚು ಮಾಡುತ್ತಾರೆ. ಆದರೆ ಇಳುವರಿ ಕುಸಿತದಿಂದ ಸಾಲ ತೀರಿಸುವುದು ಹೇಗೆನ್ನುವ ಚಿಂತೆಯಲ್ಲಿದ್ದಾರೆ; ಆದರೂ ಅವರು ಅವಸರದಲ್ಲಿ ಮಾವು ಬೆಳೆಯುವುದನ್ನು ನಿಲ್ಲಿಸಲು ಸಿದ್ಧರಿಲ್ಲ.
*****
ಅವರ ನೆರೆಮನೆಯವರಾದ ಕಾಂತಮರೆಡ್ಡಿ ಶ್ರೀರಾಮಮೂರ್ತಿ ಅವರು ಕೈಯಲ್ಲಿ ಹಿಡಿದಿದ್ದ ತಿಳಿ ಹಳದಿ ಹೂವನ್ನು ಕುಲುಕುತ್ತಾರೆ. ಬಹುತೇಕ ಒಣಗಿದ ಅದು ತಕ್ಷಣ ತುಂಡುಗಳಾಗಿ ಉದುರುತ್ತದೆ.
ಅದೇ ಗ್ರಾಮದಲ್ಲಿ ಅವರ 1.5 ಎಕರೆ ಮಾವಿನ ತೋಟದಲ್ಲಿ ಬಂಗನಪಲ್ಲಿ, ಚೆರುಕು ರಸಲು ಮತ್ತು ಸುವರ್ಣರೇಖಾ ಪ್ರಭೇದಗಳ 75 ಮರಗಳಿವೆ. ಮಾವಿನ ಹೂವುಗಳು ಕ್ಷೀಣಿಸುತ್ತಿವೆ ಎಂಬ ನಾಗರಾಜು ಅವರ ಮಾತನ್ನು ಅವರು ಒಪ್ಪುತ್ತಾರೆ. "ಮುಖ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಆಗಾಗ್ಗೆ ಬೀಳುವ ಅಕಾಲಿಕ ಮಳೆಯಿಂದಾಗಿ ಕಳೆದ ಐದು ವರ್ಷಗಳಲ್ಲಿ ಈ ಪ್ರವೃತ್ತಿ ಹೆಚ್ಚಾಗಿದೆ" ಎಂದು ತುರುಪು ಕಾಪು ಸಮುದಾಯಕ್ಕೆ (ಆಂಧ್ರಪ್ರದೇಶದ ಇತರ ಹಿಂದುಳಿದ ವರ್ಗವೆಂದು ಪಟ್ಟಿ ಮಾಡಲಾಗಿದೆ) ಸೇರಿದ ಮತ್ತು ಪ್ರತಿವರ್ಷ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಸಂಬಂಧಿಕರ ಕಬ್ಬಿನ ತೋಟದಲ್ಲಿ ಕೆಲಸ ಮಾಡುವ ರೈತ ಹೇಳುತ್ತಾರೆ. ಅವರು ಅಲ್ಲಿ ಕೆಲಸ ಮಾಡುವ ಅವಧಿಯಲ್ಲಿ ತಿಂಗಳಿಗೆ ಸುಮಾರು 10,000 ರೂ.ಗಳನ್ನು ಗಳಿಸುತ್ತಾರೆ.
ಈ ವರ್ಷದ ಮಾರ್ಚಿಯಲ್ಲಿ (2023) ಶ್ರೀರಾಮಮೂರ್ತಿ ಅವರ ಮಾವಿನ ಮರದ ಹೂವುಗಳು ಮತ್ತು ಹಣ್ಣುಗಳು ಸಿಡಿಲು ಬಡಿದು ನಾಶವಾದವು. "ಮಾವಿನ ಮರಗಳಿಗೆ ಬೇಸಿಗೆ ಮಳೆ ಒಳ್ಳೆಯದು. ಆದರೆ ಈ ವರ್ಷ ಅದು ತುಂಬಾ ಹೆಚ್ಚಾಗಿದೆ" ಎಂದು ಅವರು ಮಳೆಯೊಂದಿಗೆ ಬಂದ ಬಲವಾದ ಗಾಳಿ ಹಣ್ಣುಗಳಿಗೆ ಹಾನಿ ಮಾಡಿದ ಕುರಿತು ಹೇಳಿದರು.
ತೋಟಗಾರಿಕಾ ವಿಜ್ಞಾನಿ ಶಂಕರನ್ ಅವರ ಪ್ರಕಾರ ಮಾವಿನ ಹೂವುಗಳು ಅರಳಲು ಸೂಕ್ತವಾದ ತಾಪಮಾನವು 25-30 ಡಿಗ್ರಿ ಸೆಲ್ಸಿಯಸ್. "ಫೆಬ್ರವರಿ 2023ರಲ್ಲಿ, ಹಗಲು ಮತ್ತು ರಾತ್ರಿ ತಾಪಮಾನದ ನಡುವೆ ಗಮನಾರ್ಹ ವ್ಯತ್ಯಾಸ ಕಂಡುಬಂದಿದೆ. ಮರಗಳು ಇದನ್ನು ನಿಭಾಯಿಸಲು ಸಾಧ್ಯವಿಲ್ಲ" ಎಂದು ಅವರು ಹೇಳುತ್ತಾರೆ.
ಕಳೆದ ಕೆಲವು ವರ್ಷಗಳಿಂದ ಮಾವು ಕೃಷಿಯ ಪರಿಸ್ಥಿತಿಗಳು ವ್ಯತಿರಿಕ್ತವಾಗುತ್ತಿರುವುದರಿಂದಾಗಿ ಶ್ರೀರಾಮಮೂರ್ತಿ ಅವರು 2014ರಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ವಿಷಾದಿಸಲು ಪ್ರಾರಂಭಿಸಿದ್ದಾರೆ. ಆ ವರ್ಷ, ಅವರು ಅನಕಪಲ್ಲಿ ಪಟ್ಟಣದ ಬಳಿ 0.9 ಎಕರೆ ಭೂಮಿಯನ್ನು ಮಾರಾಟ ಮಾಡಿದರು ಮತ್ತು ಅದರಿಂದ ಬಂದ ಆರು ಲಕ್ಷ ರೂ.ಗಳನ್ನು ಪೋಮುಲಾ ಭೀಮಾವರಂನಲ್ಲಿ ಮಾವಿನ ತೋಟಕ್ಕೆ ಪೆಟ್ಟುಬಡಿ (ಹೂಡಿಕೆ) ಆಗಿ ಬಳಸಿದರು.
ಈ ಕ್ರಮವನ್ನು ವಿವರಿಸುತ್ತಾ, "ಪ್ರತಿಯೊಬ್ಬರೂ ಅವುಗಳೆಂದರೆ [ಮಾವಿನಹಣ್ಣುಗಳನ್ನು] ಇಷ್ಟ ಮತ್ತು ಅವುಗಳಿಗೆ ಬೇಡಿಕೆಯಿದೆ. ಮಾವು ಕೃಷಿಯು [ಅಂತಿಮವಾಗಿ] ನನಗೆ ಸಾಕಷ್ಟು ಹಣವನ್ನು ನೀಡುತ್ತದೆ ಎಂದು ನಾನು ಭಾವಿಸಿದೆ."
ಆದಾಗ್ಯೂ, ಅಂದಿನಿಂದ, ಅವರು ಲಾಭ ಗಳಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳುತ್ತಾರೆ. "2014 ಮತ್ತು 2022ರ ನಡುವೆ, [ಈ ಎಂಟು ವರ್ಷಗಳಲ್ಲಿ] ಮಾವು ಕೃಷಿಯಿಂದ ನನ್ನ ಒಟ್ಟು ಆದಾಯವು ಆರು ಲಕ್ಷಕ್ಕಿಂತ ಹೆಚ್ಚಿಲ್ಲ" ಎಂದು ಶ್ರೀರಾಮಮೂರ್ತಿ ಹೇಳುತ್ತಾರೆ. ತಮ್ಮ ಭೂಮಿಯನ್ನು ಮಾರಾಟ ಮಾಡುವ ತಮ್ಮ ನಿರ್ಧಾರದ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, "ನಾನು ಮಾರಾಟ ಮಾಡಿದ ಭೂಮಿ ಈಗ ಹೆಚ್ಚು ಮೌಲ್ಯಯುತವಾಗಿದೆ. ಬಹುಶಃ ನಾನು ಮಾವಿನ ಕೃಷಿಯನ್ನು ಪ್ರಾರಂಭಿಸಬಾರದಿತ್ತು."
ಇದು ಕೇವಲ ಹವಾಮಾನದ ವಿಷಯವಲ್ಲ. ಮಾವಿನ ಮರಗಳು ನೀರಿನ (ನೀರಾವರಿ) ಮೇಲೆ ಅವಲಂಬಿತವಾಗಿವೆ, ಮತ್ತು ನಾಗರಾಜು ಅಥವಾ ಶ್ರೀರಾಮಮೂರ್ತಿ ತಮ್ಮ ಭೂಮಿಯಲ್ಲಿ ಕೊಳವೆಬಾವಿಗಳನ್ನು ಹೊಂದಿಲ್ಲ. 2018ರಲ್ಲಿ ಶ್ರೀರಾಮಮೂರ್ತಿ 2.5 ಲಕ್ಷ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರೂ ಒಂದು ಹನಿ ನೀರು ಸಿಗಲಿಲ್ಲ. ನಾಗರಾಜು ಮತ್ತು ಶ್ರೀರಾಮಮೂರ್ತಿ ಅವರ ತೋಟಗಳಿರುವ ಬುಚ್ಚಯ್ಯಪೇಟ ಮಂಡಲದಲ್ಲಿ ಅಧಿಕೃತವಾಗಿ 35 ಕೊಳವೆಬಾವಿಗಳು ಮತ್ತು 30 ತೆರೆದ ಬಾವಿಗಳಿವೆ.
ಮರಗಳಿಗೆ ನಿರಂತರವಾಗಿ ನೀರು ಹಾಯಿಸುವ ಮಾಡುವ ಮೂಲಕ ಒಣ ಹೂವುಗಳ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಶ್ರೀರಾಮಮೂರ್ತಿ ಹೇಳುತ್ತಾರೆ. ಅವರು ವಾರಕ್ಕೆ ಎರಡು ಟ್ಯಾಂಕರ್ ಲೋಡ್ ನೀರನ್ನು ಸಹ ಖರೀದಿಸುತ್ತಾರೆ, ಇದಕ್ಕಾಗಿ ಅವರು ತಿಂಗಳಿಗೆ 10,000 ರೂ.ಗಳನ್ನು ಖರ್ಚು ಮಾಡುತ್ತಾರೆ. "ಪ್ರತಿ ಮರಕ್ಕೆ ಪ್ರತಿದಿನ ಕನಿಷ್ಠ ಒಂದು ಲೀಟರ್ ನೀರು ಬೇಕಾಗುತ್ತದೆ. ಆದರೆ ನಾನು ವಾರಕ್ಕೆ ಎರಡು ಬಾರಿ ಮಾತ್ರ ನೀರು ಹಾಕುತ್ತೇನೆ; ನನ್ನಿಂದ ಭರಿಸಲು ಸಾಧ್ಯವಿರುವುದು ಅಷ್ಟು ಮಾತ್ರ" ಎನ್ನುತ್ತಾರೆ ಶ್ರೀರಾಮಮೂರ್ತಿ.
ತನ್ನ ಮಾವಿನ ಮರಗಳಿಗೆ ನೀರುಣಿಸಲು ನಾಗರಾಜು ತಲಾ 8,000 ರೂಗಳಂತೆ ವಾರಕ್ಕೆ ಎರಡು ಟ್ಯಾಂಕರ್ ನೀರನ್ನು ಖರೀದಿಸುತ್ತಾರೆ.
ವಲ್ಲಿವಿರೆಡ್ಡಿ ರಾಜು ನವೆಂಬರ್ ತಿಂಗಳಿನಿಂದ ವಾರಕ್ಕೊಮ್ಮೆ ತನ್ನ ಮರಗಳಿಗೆ ನೀರು ಹಾಕಲು ಪ್ರಾರಂಭಿಸುತ್ತಾರೆ ಮತ್ತು ಫೆಬ್ರವರಿಯಿಂದ ವಾರಕ್ಕೆ ಎರಡು ಬಾರಿಗೆ ಹೆಚ್ಚಿಸುತ್ತಾರೆ. ಹಳ್ಳಿಯಲ್ಲಿ ತುಲನಾತ್ಮಕವಾಗಿ ಹೊಸ ಮಾವು ಕೃಷಿಕರಾಗಿರುವ 45 ವರ್ಷದ ಅವರು 2021ರಲ್ಲಿ ತಮ್ಮ 0.7 ಎಕರೆ ಭೂಮಿಯಲ್ಲಿ ಕೃಷಿಯನ್ನು ಪ್ರಾರಂಭಿಸಿದರು. ಎರಡು ವರ್ಷಗಳ ನಂತರ ಮರಗಳು ರಾಜು ಅವರಿಗಿಂತ ಸ್ವಲ್ಪ ಎತ್ತರಕ್ಕೆ ಬೆಳೆದಿವೆ. "ಎಳೆಯ ಮಾವಿನ ಮರಗಳಿಗೆ ಹೆಚ್ಚಿನ ಆರೈಕೆಯ ಅಗತ್ಯವಿದೆ. ವಿಶೇಷವಾಗಿ ಬೇಸಿಗೆಯಲ್ಲಿ ಅವುಗಳಿಗೆ ಪ್ರತಿದಿನ ಸುಮಾರು ಎರಡು ಲೀಟರ್ ನೀರು ಬೇಕಾಗುತ್ತದೆ" ಎಂದು ಅವರು ಹೇಳುತ್ತಾರೆ.
ತನ್ನ ಜಮೀನಿನಲ್ಲಿ ಬೋರ್ವೆಲ್ ಇಲ್ಲದ ಕಾರಣ ರಾಜು ವಿವಿಧ ನೀರಾವರಿ ಚಟುವಟಿಕೆಗಳಿಗಾಗಿ ಸುಮಾರು 20,000 ರೂ.ಗಳನ್ನು ಖರ್ಚು ಮಾಡುತ್ತಾರೆ, ಅದರಲ್ಲಿ ಅರ್ಧದಷ್ಟು ಹಣವನ್ನು ತನ್ನ ಜಮೀನಿಗೆ ಟ್ಯಾಂಕರುಗಳಲ್ಲಿ ನೀರು ಹೊಡೆಸಲು ಖರ್ಚು ಮಾಡುತ್ತಾರೆ. ಪ್ರತಿದಿನ ಮರಗಳಿಗೆ ನೀರುಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳುತ್ತಾರೆ. "ನಾನು ಪ್ರತಿದಿನ ಎಲ್ಲಾ 40 ಮಾವಿನ ಮರಗಳಿಗೆ ನೀರು ಹಾಕಿದರೆ, ನನ್ನ ಬಳಿಯಿರುವ ಎಲ್ಲವನ್ನೂ ಮಾರಾಟ ಮಾಡಬೇಕಾಗಬಹುದು."
ಅವರು ತಮ್ಮ ಮೂರು ವರ್ಷಗಳ ಹೂಡಿಕೆಗೆ ಪ್ರತಿಫಲ ಸಿಗುತ್ತದೆ ಎಂದು ಆಶಿಸುತ್ತಿದ್ದಾರೆ. "ಲಾಭವಾಗುವುದಿಲ್ಲ ಎಂದು ನನಗೆ ತಿಳಿದಿದೆ ಆದರೆ ಯಾವುದೇ ನಷ್ಟವಾಗದು ಎಂದು ಭಾವಿಸುತ್ತೇನೆ" ಎಂದು ಅವರು ಹೇಳುತ್ತಾರೆ.
*****
ಕಳೆದ ತಿಂಗಳು (ಏಪ್ರಿಲ್ 2023) ನಾಗರಾಜು ಸುಮಾರು 3,500 ಕಿಲೋಗ್ರಾಂ ಅಥವಾ ಸರಿಸುಮಾರು 130-140 ಬಾಕ್ಸ್ ಮಾವಿನ ಹಣ್ಣುಗಳನ್ನು ಕೊಯ್ಲು ಮಾಡುವಲ್ಲಿ ಯಶಸ್ವಿಯಾಗಿದ್ದರು. ವಿಶಾಖಪಟ್ಟಣಂನ ವ್ಯಾಪಾರಿಗಳು ಪ್ರತಿ ಕೆ.ಜಿ.ಗೆ 15 ರೂ.ಗಳಂತೆ ನೀಡಿದ್ದರಿಂದ ಮೊದಲ ಕಟಾವಿಗೆ 52,500 ರೂ.ಗಳನ್ನು ಸಂಗ್ರಹಿಸಲು ಸಾಧ್ಯವಾಯಿತು.
"ಎರಡು ದಶಕಗಳ ಹಿಂದೆ ನಾನು ಕೃಷಿಯನ್ನು ಪ್ರಾರಂಭಿಸಿದಾಗಿನಿಂದ [ಮಾರಾಟ] ದರವು ಕಿಲೋಗೆ 15 ರೂ.ಗಳಷ್ಟಿದೆ" ಎಂದು ಅವರು ಗಮನಸೆಳೆಯುತ್ತಾರೆ. "ವಿಶಾಖಪಟ್ಟಣಂನ ಮಧುರ್ವಾಡಾ ರೈತ ಬಜಾರಿನಲ್ಲಿ ಪ್ರಸ್ತುತ ಒಂದು ಕೆಜಿ ಬಂಗನಪಲ್ಲಿ ಮಾವಿನ ಹಣ್ಣಿನ ಬೆಲೆ 60 ರೂ. ಬೇಸಿಗೆಯಲ್ಲಿ ಬೆಲೆ 50-100 ರೂಪಾಯಿಗಳ ನಡುವೆ ಬದಲಾಗುತ್ತದೆ" ಎಂದು ಬಜಾರಿನ ಎಸ್ಟೇಟ್ ಅಧಿಕಾರಿ ಪಿ.ಜಗದೀಶ್ವರ ರಾವ್ ಹೇಳುತ್ತಾರೆ.
ಈ ವರ್ಷದ ಮೊದಲ ಫಸಲನ್ನು ಪಡೆದ ಶ್ರೀರಾಮಮೂರ್ತಿ ಅವರಿಗೆ 1,400 ಕಿಲೋ ಮಾವಿನಹಣ್ಣು ಸಿಕ್ಕಿದೆ. ಅವರು ತಮ್ಮ ಹೆಣ್ಣುಮಕ್ಕಳಿಗಾಗಿ ಎರಡು-ಮೂರು ಕಿಲೋಗಳನ್ನು ಮೀಸಲಿಟ್ಟಿದ್ದಾರೆ. ಉಳಿದದ್ದನ್ನು ಅವರು ವಿಶಾಖಪಟ್ಟಣಂನ ವ್ಯಾಪಾರಿಗಳಿಗೆ ಕಿಲೋಗೆ ಸರಿಸುಮಾರು 11 ರೂ.ಗೆ ಮಾರಾಟ ಮಾಡುತ್ತಿದ್ದಾರೆ. "ಹತ್ತಿರದ ಮಾರುಕಟ್ಟೆ 40 ಕಿ.ಮೀ ದೂರದಲ್ಲಿದೆ" ಎನ್ನುವ ಅವರು, ಚಿಲ್ಲರೆ ಮಾರಾಟವನ್ನು ಸ್ವತಃ ಮಾಡಲು ಸಾಧ್ಯವಿಲ್ಲ ಎಂದು ವಿವರಿಸುತ್ತಾರೆ.
ಪೋಮುಲಾ ಭೀಮಾವರಂನ ಮಾವು ಬೆಳೆಗಾರರು ತಮ್ಮ ವಾರ್ಷಿಕ ಆದಾಯವನ್ನು ಲೆಕ್ಕಹಾಕಲು ಜೂನ್ ತಿಂಗಳಿನ ಎರಡನೇ ಇಳುವರಿಗಾಗಿ ಕಾಯುತ್ತಿದ್ದಾರೆ. ಆದರೆ ನಾಗರಾಜು ಆ ಕುರಿತು ಹೆಚ್ಚು ಭರವಸೆ ಹೊಂದಿಲ್ಲ. "ಯಾವುದೇ ಲಾಭವಿಲ್ಲ, ನಷ್ಟ ಮಾತ್ರ" ಎಂದು ಅವರು ಹೇಳುತ್ತಾರೆ.
ಹೂವುಗಳಿಂದ ತುಂಬಿದ ಮರದ ಕಡೆಗೆ ತಿರುಗಿ, "ಈ ಹೊತ್ತಿಗೆ ಈ ಮರವು ಈ ಗಾತ್ರದ [ಬೊಗಸೆ ಗಾತ್ರದ] ಹಣ್ಣುಗಳನ್ನು ಹೊಂದಿರಬೇಕಿತ್ತು" ಎಂದು ಅವರು ಹೇಳುತ್ತಾರೆ. ಇದು ಅವರ ನೆಚ್ಚಿನ ಮಾವಿನಹಣ್ಣು - ಪಾಂಡೂರಿ ಮಾಮಿಡಿ - ಹಸಿರು ಮತ್ತು ದುಂಡು ಆಕಾರದಲ್ಲಿದೆ.
ಮರದಲ್ಲಿದ್ದ ಕೆಲವೇ ಹಣ್ಣುಗಳಲ್ಲಿ ಒಂದನ್ನು ಕಿತ್ತು ತೋರಿಸುತ್ತಾ ಹೇಳುತ್ತಾರೆ, "ಬೇರೆ ಯಾವುದೇ ಮಾವಿನಹಣ್ಣು ಇದಕ್ಕಿಂತ ಸಿಹಿಯಿರುವುದಿಲ್ಲ. ಹಸಿರು ಬಣ್ಣದ್ದಾಗಿದ್ದರೂ ಸಹ ಸಿಹಿಯಾಗಿರುತ್ತದೆ; ಅದೇ ಇದರ ವಿಶೇಷತೆ."
ಇದು ರಂಗ್ ದೇ ಅನುದಾನ ಬೆಂಬಲಿತ ವರದಿ .
ಅನುವಾದ : ಶಂಕರ . ಎನ್ . ಕೆಂಚನೂರು