ಅವರಿಗಿರುವ ಎಲ್ಲಾ ಆಯ್ಕೆಗಳು ಮುಗಿದ ನಂತರ, ಕೊನೆಗೆ ವಿಜಯ್ ಕೊರೆಟಿ ಮತ್ತು ಅವರ ಸ್ನೇಹಿತರು ಕಾಲ್ನಡಿಯಲ್ಲಿಯೇ ಊರಿಗೆ ಹೊರಡಲು ನಿರ್ಧರಿಸಿದರು.
ಅದು ಎಪ್ರಿಲ್ ತಿಂಗಳಿನ ಮಧ್ಯದ ಸಮಯ, ಆ ಸಂದರ್ಭದಲ್ಲಿ ಭಾರತದಾದ್ಯಂತ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಕಾರಣದಿಂದಾಗಿ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಯಲ್ಲಿತ್ತು, ಹೀಗಾಗಿ ಅವರು ತಮ್ಮ ದೂರದಲ್ಲಿರುವ ತಮ್ಮ ಸಣ್ಣ ಗುಡಿಸಲುಗಳಲ್ಲಿ ಇನ್ನೆಷ್ಟು ದಿನಗಳವರೆಗೆ ಹೀಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೋ ಎನ್ನುವುದರ ಬಗ್ಗೆ ಚಿಂತಿಸುತ್ತಿದ್ದರು.
“ನಮ್ಮ ಸ್ನೇಹಿತರು ಹೊರಡಲು ಯತ್ನಿಸುತ್ತಿದ್ದಾಗ ಪೊಲೀಸರು ಎರಡು ಬಾರಿ ಅವರನ್ನು ದಾರಿ ಮಧ್ಯದಲ್ಲಿಯೇ ತಡೆದು ವಾಪಸ್ ಕಳುಹಿಸಿದರು.ಆದರೆ ಕೊನೆಗೆ ಒಬ್ಬೊಬ್ಬರಂತೆ ಎಲ್ಲರನ್ನು ಊರಿಗೆ ತಲುಪಲು ಬಿಟ್ಟರು” ಎಂದು ಕೊರೆಟಿ ಸ್ಮರಿಸಿಕೊಳ್ಳುತ್ತಿದ್ದರು.
ಈಗ ಜಿಪಿಎಸ್ ನಂತಹ ಆಯ್ಕೆಯನ್ನು ಹೊಂದಿರುವ ಸ್ಮಾರ್ಟ್ಪೋನ್ ಇಲ್ಲದ ಸ್ನೇಹಿತರ ತಂಡವೊಂದು ಹೊಸ ಸಂಭವನೀಯ ಮಾರ್ಗವನ್ನು ಕಂಡುಕೊಂಡಿತ್ತು:
ಅವರು ತೆಲಂಗಾಣದ ಕೊಮಾರಂ ಭೀಮ್ ಜಿಲ್ಲೆಯ ಸಿರ್ಪುರ್-ಕಾಗಜ್‌ನಗರದಲ್ಲಿರುವ ಹತ್ತಿ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು, ಈ ಪ್ರದೇಶವು ಹೈದರಾಬಾದ್-ನಾಗ್ಪುರ ರೈಲ್ವೆ ವಿಭಾಗದಲ್ಲಿ ಬರುತ್ತದೆ.
ಅಲ್ಲಿಂದ ಅವರು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಅರ್ಜುನಿ ಮೋರ್ಗಾಂವ್ ತೆಹಸಿಲ್‌ನಲ್ಲಿರುವ ತಮ್ಮ ಗ್ರಾಮ ಝಶಿನಗರಕ್ಕೆ ಹಳಿಗಳುದ್ದಕ್ಕೂ ಪ್ರಯಾಣಿಸಿದರೆ ಸುಮಾರು 700-800 ಕಿಲೋಮೀಟರ್ ದೂರವಿದೆ. ಅದು ಕಷ್ಟಕರವಂತೂ ಹೌದು, ಆದರೆ ಪ್ರಯತ್ನಿಸಲಿಕ್ಕೆ ಅಡ್ಡಿಯಿಲ್ಲ.ಮತ್ತು ಇನ್ನು ಅವರು ರೈಲ್ವೆ ಹಳಿಗಳುದ್ದಕ್ಕೂ ಪ್ರಯಾಣಿಸಿದರೆ, ಅವರನ್ನು ಪೊಲೀಸರು ದಾರಿ ಮಧ್ಯದಲ್ಲಿ ತಡೆಯುವ ಸಾಧ್ಯತೆ ಕೂಡ ಕಡಿಮೆ ಎನ್ನಬಹುದು.
ಹಾಗಾಗಿ, ದೇಶಾದ್ಯಂತ ಲಕ್ಷಾಂತರ ಕಾರ್ಮಿಕರಂತೆ ಒಂದು ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಗೊಂಡ ಆದಿವಾಸಿ ರೈತ ಕೊರೆಟಿ ಮತ್ತು ಝಶಿನಗರಕ್ಕೆ ಸೇರಿದ ಇತರರು -ಕಾಗಜ್‌ನಗರದಿಂದ ಸಂಕಷ್ಟದ ಪ್ರಯಾಣವನ್ನು ಆರಂಭಿಸಿದರು, ಅವರು ತಮ್ಮೂರಿನಲ್ಲಿರುವ ಕುಟುಂಬಗಳನ್ನು ತಲುಪಲಿಕ್ಕೆ ಸುಮಾರು 13 ರಾತ್ರಿ ಮತ್ತು 14 ಹಗಲು ಹಿಡಿಯುತ್ತದೆ.
ಅದು ರೈಲು ಅಥವಾ ಬಸ್ಸಿನಲ್ಲಿ ಪ್ರಯಾಣಿಸಿದರೆ ಅರ್ಧ ದಿನದಲ್ಲಿ ತಲುಪುವಷ್ಟು ದೂರ, ಆದರೆ ಅವರೆಲ್ಲರೂ ಮಾತ್ರ ಕಾಲ್ನಡಿಗೆಯಲ್ಲಿಯೇ ತಮ್ಮೂರಿಗೆ ಪ್ರಯಾಣ ಬೆಳೆಸಿದ್ದರು.
ಅವರು ತಮ್ಮ ನಡುವೆಯೇ ಎರಡು ಗುಂಪುಗಳಾಗಿ ವಿಭಜಿಸಿಕೊಂಡರು. ಅವರಲ್ಲಿ 44 ವರ್ಷದ ಹುಮ್ರಾಜ್ ಭೋಯರ್ ಅವರ ನೇತೃತ್ವದಲ್ಲಿ ಹದಿನೇಳು ಜನರ ತಂಡವು, ಕೊರೆಟಿ ಮತ್ತು ಧನರಾಜ್ ಶಹಾರೆ (30), ಮತ್ತು ಗೆಂಡ್ಲಾಲ್ ಹೊಡಿಕರ್ (59) ಅವರಿಗಿಂತ ಒಂದು ವಾರ ಮುಂಚಿತವಾಗಿಯೇ ಏಪ್ರಿಲ್ 13ಕ್ಕೆ ಝಶಿನಗರಕ್ಕೆ ಪ್ರಯಾಣ ಬೆಳೆಸಿತು.
ಆ ಇಡೀ ರಾತ್ರಿ ಮತ್ತು ಹಗಲುಗಳೊಂದಿಗೆ ಕೊರೆಟಿ ತಮ್ಮ ಏಳು ವರ್ಷದ ಮಗಳು ವೇದಾಂತಿಯನ್ನು ಮತ್ತೆ ನೋಡಲು ಹಂಬಲಿಸುತ್ತಿದ್ದರು. ಇದೇ ಅವರನ್ನು ಮುಂದೆ ಸಾಗಲು ಪ್ರೇರೆಪಿಸಿತ್ತು. ಅವಳು ಕೂಡ ಅವರಿಗಾಗಿ ಕಾಯುತ್ತಿದ್ದಳು, ಅವರು ದಾರಿಯುದ್ಧಕ್ಕೂ ತಮಗೆ ತಾವೇ ಗೊಣಗುತ್ತಾ ಉರಿ ಬಿಸಿಲಿನಲ್ಲಿ ಕಾಲಡಿ ನೋವಿದ್ದರೂ ಸಹಿತ ಹಾಗೆಯೇ ಸಾಗುತ್ತಿದ್ದರು. “ಆಮ್ಹಲೆ ಫಕ್ತ್ ಘರಿ ಪೋಹ್ಚಯ್ಚೆ ಹೋತೆ "(ನಮಗೆ ಮನೆ ತಲುಪಬೇಕಷ್ಟೇ)" ಎಂದು ಕುಳ್ಳರಾಗಿದ್ದರೂ ಗಟ್ಟಿಮುಟ್ಟಾಗಿರುವ ಕೊರೆಟಿ ನಗುತ್ತಾ ಹೇಳುತ್ತಿದ್ದರು. ನಾವು ಬಿರು ಬೇಸಿಗೆಯ ದಿನದಂದು ಅವರನ್ನು ಮತ್ತು ಅವರ ಕೆಲವು ಸ್ನೇಹಿತರನ್ನು ಸುದೀರ್ಘ ನಡಿಗೆಯ ನಂತರ, ನವೆಗಾಂವ್ ವನ್ಯಜೀವಿ ಅಭಯಾರಣ್ಯಕ್ಕೆ ಹತ್ತಿರದಲ್ಲಿರುವ ಝಶಿನಗರದಲ್ಲಿ ಭೇಟಿಯಾದೆವು. ಗ್ರಾಮಕ್ಕೆ ಅನ್ಯರು ಪ್ರವೇಶಿಸದಂತೆ ನಿರ್ಮಿಸಿದ್ದ ಬ್ಯಾರಿಕೇಡ್‌ಗಳನ್ನು ಈಗ ತೆಗೆಯಲಾಗಿದೆ. ಆದರೆ ಕೊರೊನಾ ಮಹಾಮಾರಿಯ ಆತಂಕ ಮತ್ತು ಭಯ ಮಾತ್ರ ಇನ್ನೂ ಗಾಳಿಯಲ್ಲಿ ಹಾಗೆಯೇ ಇದೆ.
****
ಕೊರೇಟಿಯವರು 9ನೇ ತರಗತಿಯ ನಂತರ ಹೈಸ್ಕೂಲ್ ನ್ನು ತೊರೆದರು ಮತ್ತು 2019 ರ ಮೊದಲು ಅವರು ಕೆಲಸಕ್ಕೆ ತಮ್ಮೂರನ್ನು ಬಿಟ್ಟು ಎಂದೂ ಹೊರಗಡೆ ಹೋಗಿರಲಿಲ್ಲ. ಅವರು ತಮ್ಮ ಒಂದು ಎಕರೆ ಭೂಮಿಯಲ್ಲಿ ಕೃಷಿ ಕೆಲಸ ಮಾಡುತ್ತಾ, ಅಕ್ಕಪಕ್ಕದ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುತ್ತಿದ್ದರು, ಅತ್ಯವಶ್ಯಕ ಸಂದರ್ಭಗಳಲ್ಲಿ ಕೃಷಿ ಕೂಲಿಯಾಗಿ ಅಥವಾ ಹತ್ತಿರದ ಸಣ್ಣ ಪಟ್ಟಣಗಳಲ್ಲಿ ಕೆಲಸ ಮಾಡುತ್ತಾ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರು.ಆದರೆ ಅವರೆಂದಿಗೂ ಕೂಡ ತಮ್ಮೂರಿನಲ್ಲಿರುವ ಉಳಿದ ಜನರ ಹಾಗೆ ದೂರದ ಪ್ರದೇಶಗಳಿಗೆ ವಲಸೆ ಹೋಗುತ್ತಿರಲಿಲ್ಲ.
ಆದರೆ 2016ರ ನೋಟು ಅಮಾನ್ಯೀಕರಣದ ನಂತರ, ಪರಿಸ್ಥಿತಿ ಹದಗೆಟ್ಟಿತು, ಮತ್ತು ಕೆಲವು ತಿಂಗಳುಗಳ ದುಡಿಮೆಯನ್ನು ಹೊರತುಪಡಿಸಿದರೆ ಅವರಿಗೆ ತಮ್ಮೂರಲ್ಲಾಗಲಿ ಅಥವಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೇರೆ ಯಾವುದೇ ಕೆಲಸ ಸಿಗದಿರುವುದರಿಂದಾಗಿ ಆರ್ಥಿಕ ಪರಿಸ್ಥಿತಿ ಇನ್ನೂ ಕಷ್ಟಕರವಾಯಿತು.
ಅವರ ಬಾಲ್ಯದ ಗೆಳೆಯ, ಭೂರಹಿತ ದಲಿತ ಮತ್ತು ಕಾರ್ಮಿಕ ವಲಸೆಯ ಅನುಭವಿಯಾಗಿರುವ 40 ವರ್ಷದ ಲಕ್ಷ್ಮಣ್ ಶಹಾರೆ ಅವರು ಅವರನ್ನು 2019ರಲ್ಲಿ ಕಾಗಜ್‌ನಗರಕ್ಕೆ ಹೋಗಲು ಮನವೊಲಿಸಿದ್ದರು.
ಶಹಾರೆ ಅವರು 18ನೇ ವಯಸ್ಸಿನಿಂದಲೂ ಕೆಲಸಕ್ಕಾಗಿ ಪ್ರತಿ ವರ್ಷ ತಮ್ಮೂರಿನಿಂದ ವಲಸೆ ಹೋಗುತ್ತಿದ್ದಾರೆ ( ವೀಡಿಯೊ ನೋಡಿ ). ಮಹಾಮಾರಿ ಬಂದಾಗ, ಅವರು ಕಾಗಜ್‌ನಗರದ ಉದ್ಯಮಿಯೊಬ್ಬರ ಬಳಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು, ಅಲ್ಲಿ ಮೂರು ಹತ್ತಿ ಜಿನ್ನಿಂಗ್ ಮತ್ತು ಪ್ರೆಸ್ಸಿಂಗ್ ಘಟಕಗಳಲ್ಲಿ ಸುಮಾರು 500 ಕಾರ್ಮಿಕರ ಉಸ್ತುವಾರಿಯನ್ನು ನಿರ್ವಹಿಸುತ್ತಿದ್ದರು – ಅಲ್ಲಿ ಹೆಚ್ಚಾಗಿ ಕಾರ್ಮಿಕರು ಅವರ ಸ್ವಂತ ಹಳ್ಳಿಯಿಂದ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಮತ್ತು ಛತ್ತೀಸ್‌ಗಢದಂತಹ ಇತರ ರಾಜ್ಯಗಳಿಂದ ವಲಸೆ ಬರುತ್ತಾರೆ.
ಶಹಾರೆ ಕಾಲ್ನಡಿಗೆಯಲ್ಲಿ ಮನೆಗೆ ಹೋಗಲಿಲ್ಲ, ಬದಲಾಗಿ ಅವರು ಜೂನ್ ಆರಂಭದಲ್ಲಿ ಗಾಡಿ ಮೂಲಕ ಅವರು ಮನೆಗೆ ಹಿಂದಿರುಗಿದರು. ಆದಾಗ್ಯೂ, ಅವರ ಜನರು ಸುದೀರ್ಘ ಕಾಲ್ನಡಿಗೆಯಲ್ಲಿ ಪ್ರಯಾಣ ಹೊರಟಿರುವುದನ್ನು ಅವರು ನೋಡುತ್ತಿದ್ದರು- ಅವರಲ್ಲಿ ಕೊರೆಟಿಯವರ ತಂಡದಲ್ಲಿದ್ದ ಅವರ ಸ್ವಂತ ಕಿರಿಯ ಸಹೋದರ ಧನರಾಜ್, ಅವರು ಗಿರಣಿಗಳಲ್ಲಿ ವೇತನವನ್ನು ಪಾವತಿಸುವುದು, ಮತ್ತು ರೇಷನ್ ಸಾಮಗ್ರಿಗಳನ್ನು ಪ್ಯಾಕ್ ಮಾಡುವುದಕ್ಕೆ ಅವರು ಸಮಯವನ್ನು ಹೊಂದಿಸಿಕೊಳ್ಳುತ್ತಿದ್ದರು. “ಅವರೆಲ್ಲರಿಗೂ ಅಗತ್ಯವಿರುವುದು ಸಿಕ್ಕಿದೆ ಎಂದು ಖಚಿತಪಡಿಸಿಕೊಳ್ಳಲಿಕ್ಕೆ ನನ್ನ ಕೈಯಲ್ಲಿ ಏನಾಗುತ್ತೂ ಅದೆನ್ನಲ್ಲವನ್ನೂ ಮಾಡುವೆ” ಎಂದು ಹೇಳುತ್ತಿದ್ದರು.
ಕೊರೇಟಿಯವರು ನವೆಂಬರ್ 2019ರಲ್ಲಿ ಕಾಗಜ್‌ನಗರಕ್ಕೆ ವಲಸೆ ಹೋಗಿದ್ದರು ಮತ್ತು 2020ರ ಜೂನ್‌ನಲ್ಲಿ ಖಾರಿಫ್ ಬಿತ್ತನೆಯ ಸಮಯದ ವೇಳೆ ಹಿಂತಿರುಗಬೇಕಾಗಿತ್ತು. ಇನ್ನೂ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಅವರ ಸಮಯದ ವ್ಯಯದ ಮೇಲೆ, ಅವರಿಗೆ ವಾರಕ್ಕೆ 3,000ದಿಂದ ಮತ್ತು 5,000 ರೂ.ಗಳವರೆಗೆ ವೇತನ ದೊರೆಯುತ್ತಿತ್ತು. ಏಪ್ರಿಲ್ 2020ರಲ್ಲಿ ಅವರು ಮನೆಗೆ ವಾಪಸ್ಸಾದಾಗ, ಕಾರ್ಖಾನೆಯಲ್ಲಿ ಕೇವಲ ಐದು ತಿಂಗಳು ದುಡಿದಿದ್ದಕ್ಕೆ ಅವರು 40,000 ರೂ.ಗಳವರೆಗೂ ಸಂಪಾದಿಸಿದ್ದರು.
ಇದು ಇಡೀ ವರ್ಷ ಪೂರ್ತಿ ತಮ್ಮೂರಿನಲ್ಲಿ ಸಂಪಾದಿಸುವುಕ್ಕಿಂತಲೂ ಹೆಚ್ಚು ಎಂದು ಹೇಳುತ್ತಾರೆ.
ಅವರು ಕಾಗಜ್‌ನಗರದಲ್ಲಿ 21 ದಿನಗಳ ಲಾಕ್‌ಡೌನ್ ಕೊನೆಗೊಳ್ಳಲು ಮತ್ತು ಸಾರಿಗೆ ಸೇವೆಗಳು ಪುನರಾರಂಭಗೊಳ್ಳಲು ತಾಳ್ಮೆಯಿಂದ ಕಾಯುತ್ತಿದ್ದರು. ಆದರೆ ಈಗ ಲಾಕ್ ಡೌನನ್ನು ವಿಸ್ತರಿಸಲಾಗಿದೆ.
ಗಿರಣಿಗಳ ಮಾಲೀಕರು ಅವರಿಗೆ ಪಡಿತರ ಸಾಮಗ್ರಿ ಮತ್ತು ನೆರವನ್ನು ನೀಡಿದರು, ಆದರೆ ಕೆಲಸ ಮಾತ್ರ ಸ್ಥಗಿತಗೊಂಡಿದೆ. “ಲಾಕ್‌ಡೌನ್ ಸಮಯದಲ್ಲಿ, ನಾವು ಬೇರೆ ಪ್ರದೇಶದಲ್ಲಿದ್ದೆವು. ಆಗ ನಮ್ಮ ಗುಡಿಸಲುಗಳೆಲ್ಲವೂ ಕೂಡ ಒಂದು ರೀತಿ ಅವ್ಯವಸ್ಥೆಯ ಆಗರಗಳಾಗಿದ್ದವು; ಎಲ್ಲರಿಗೂ ನಮ್ಮ ಯೋಗಕ್ಷೇಮದ್ದೇ ಚಿಂತೆಯಾಗಿತ್ತು; Covid-19 ನ ಭಯವೂ ನಮ್ಮ ಸುತ್ತಲೂ ಸುಳಿದಾಡುತ್ತಿತ್ತು. ಜೊತೆಗೆ ನಾವು ಇಲ್ಲಿಯೇ ಕಾಯಬೇಕೋ ಅಥವಾ ಹೊರಡಬೇಕೋ ಎನ್ನುವುದರ ಯೋಚನೆಯಲ್ಲಿದ್ದೆವು. ಇನ್ನೊಂದೆಡೆಗೆ ಭಯಭೀತಗೊಂಡಿರುವ ನನ್ನ ಹೆಂಡತಿ ಹಿಂತಿರುಗುವಂತೆ ನನಗೆ ಪುಸಲಾಯಿಸುತ್ತಿದ್ದಳು. ಆದರೆ ಕೊನೆಗೆ ಬಿರುಗಾಳಿಯಿಂದಾಗಿ ಕಾರ್ಖಾನೆಯ ಆವರಣದಲ್ಲಿದ್ದ ತಮ್ಮ ಗುಡಿಸಲುಗಳೆಲ್ಲವೂ ನಾಶವಾಗಿದ್ದರಿಂದಾಗಿ ಅವರು ಈ ನಿರ್ಧಾರಕ್ಕೆ ಬರಬೇಕಾಯಿತು.
“ನಾವು ಏಪ್ರಿಲ್ 20ರಿಂದ ಹೊರಟೆವು, ಎನಿಸುತ್ತೆ,” ಎಂದು ಕೊರೆಟಿ ತಾವೇ ನಿರ್ಮಿಸಿದ ಸುಂದರವಾದ ಮಣ್ಣಿನ ಮನೆಯಲ್ಲಿ ಕುಳಿತು ವಿವರಿಸುತ್ತಿದ್ದರು.
ಅವರು ಉತ್ತರ-ದಕ್ಷಿಣ ರೈಲ್ವೆ ಮಾರ್ಗದ ನಾಗ್ಪುರ-ಹೈದರಾಬಾದ್ ವಿಭಾಗದಲ್ಲಿ ಉತ್ತರದ ಕಡೆಗೆ ಪ್ರಯಾಣ ಬೆಳೆಸಿದರು. ಮಹಾರಾಷ್ಟ್ರವನ್ನು ದಾಟಿ, ಅವರು ಚಂದ್ರಾಪುರ ಜಿಲ್ಲೆಯನ್ನು ತಲುಪಿದರು ಮತ್ತು ನಂತರ ಗೊಂಡಿಯಾದಲ್ಲಿ ತಮ್ಮೂರಿನ ಮಾರ್ಗದಲ್ಲಿರುವ ಹೊಸ ಬ್ರಾಡ್-ಗೇಜ್ ಟ್ರ್ಯಾಕ್ ಮೂಲಕ ಪೂರ್ವಕ್ಕೆ ತಿರುಗಿ ನಡುವೆ ದಟ್ಟವಾದ ಕಾಡುಗಳ ಮೂಲಕ ಸಾಗಿದರು.
ದಾರಿ ಮಧ್ಯದಲ್ಲಿ, ಅವರು ವಾರ್ಧಾ ಮತ್ತು ಹಲವಾರು ಸಣ್ಣ ನದಿಗಳನ್ನು ದಾಟಿದರು. ಅವರು ಕಾಲ್ನಡಿಗೆಯಲ್ಲಿನ ಪ್ರಯಾಣ ಆರಂಭಿಸಿದ ಸ್ಥಳದಿಂದ ಅವರ ಗ್ರಾಮ ದೂರವಿತ್ತು ಎನ್ನುತ್ತಾರೆ ಕೋರೆಟಿ.
ಅವರು ಒಂದೊಂದೇ ಹೆಜ್ಜೆ ಇಟ್ಟರು.
ಝಶಿನಗರ ಗ್ರಾಮ ಪಂಚಾಯತ್‌ನ ದಾಖಲೆಗಳ ಪ್ರಕಾರ 17 ಪುರುಷರ ತಂಡವು ಎರಡು ಗುಂಪುಗಳ ಮೂಲಕ ಊರನ್ನು ತಲುಪಿತು, ಮೊದಲನೆಯದು ಏಪ್ರಿಲ್ 28ರಂದು ತಲುಪಿದರೆ. ಇತರ 12 ಜನರಿಂದ ಬೇರ್ಪಟ್ಟಿದ್ದ ಐವರು ಮೂರು ದಿನಗಳ ನಂತರ, ಮೇ 1ರಂದು ತಲುಪಿದರು. ಅವರು ತಮ್ಮ ದಣಿವನ್ನು ನಿವಾರಿಸಿಕೊಳ್ಳಲು ದಾರಿ ಮಧ್ಯದಲ್ಲಿಯೇ ವಿಶ್ರಾಂತಿಯನ್ನು ಪಡೆದರು.
ಕೊರೆಟಿ ಮತ್ತು ಅವರ ಇಬ್ಬರು ಸ್ನೇಹಿತರು ಮೇ 3ರಂದು ತಲುಪಿದರು, ಸುದೀರ್ಘ ಪ್ರಯಾಣದಿಂದಾಗಿ ಅವರ ಕಾಲುಗಳು ಊದಿಕೊಂಡಿದ್ದವು ಮತ್ತು ಅವರ ಆರೋಗ್ಯದಲ್ಲಿಯೂ ಕೂಡ ಏರುಪೇರಾಗಿತ್ತು.
ಝಶಿನಗರವನ್ನು ತಲುಪಿದಾಗ ಅವರ ಪಾದರಕ್ಷೆಗಳು ಆಗಲೇ ಸವೆದು ಹೋಗಿದ್ದವು. ಅವರ ಮೊಬೈಲ್ ಫೋನ್‌ಗಳು ಬಹಳ ಹಿಂದೆಯೇ ಸ್ಥಗಿತಗೊಂಡಿದ್ದವು; ಇನ್ನು ಅವರು ತಮ್ಮ ಕುಟುಂಬವಾಗಲಿ ಅಥವಾ ಸ್ನೇಹಿತರಾಗಲಿ ಅವರೊಂದಿಗೆ ಯಾವುದೇ ವರ್ಚುವಲ್ ಸಂಪರ್ಕವನ್ನು ಸಹಿತ ಹೊಂದಿರಲಿಲ್ಲ. ಅವರು ತಮ್ಮ ಪ್ರಯಾಣದ ವೇಳೆ ದಾರಿಯುದ್ಧಕ್ಕೂ ಮಾನವೀಯತೆಯ ಒಳ್ಳೆಯ ಮತ್ತು ಕೆಟ್ಟ ಮುಖದ ದರ್ಶನವಾಗಿರುವುದಾಗಿ ಹೇಳುತ್ತಾರೆ.-ಅವರು ರೈಲ್ವೆ ಅಧಿಕಾರಿಗಳನ್ನು ಭೇಟಿಯಾದರು, ಗ್ರಾಮಸ್ಥರು ಸಹ ಅವರಿಗೆ ಆಹಾರ, ನೀರು ಮತ್ತು ಆಶ್ರಯವನ್ನು ನೀಡಿದರು. ಆದರೆ ಅವರಿಗೆ ಗ್ರಾಮಗಳಿಗೆ ಪ್ರವೇಶಿಸಲು ನಿರಾಕರಿಸಿದವರೂ ಇದ್ದರು. ಬಹುತೇಕ ಜನರು ಇಡೀ ಪ್ರಯಾಣದುದ್ದಕ್ಕೂ ಬರಿಗಾಲಿನಲ್ಲಿಯೇ ನಡೆದರು, ಅವರ ಪಾದರಕ್ಷೆಗಳು ಆಗಲೇ ಹರಿದುಹೋಗಿದ್ದವು. ಜೊತೆಗೆ ಇದು ಬಿರು ಬೇಸಿಗೆಯಾಗಿದ್ದರಿಂದಾಗಿ ಅವರು ತಂಪೊತ್ತಿನಲ್ಲಿ ಸಾಗುತ್ತಿದ್ದರು ಮತ್ತು ಮತ್ತು ದಿನದ ಏರು ಬಿಸಿಲಿದ್ದಾಗ ಅವರು ದಾರಿ ಮಧ್ಯದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದರು.
ಕೊರೇಟಿ ಮತ್ತು ಅವರ ಸಹಚರರು ನಾಲ್ಕು ಗಂಟೆಗಳ ಬದಲು 48 ಗಂಟೆ ಮುಂಚಿತವಾಗಿಯೇ ಲಾಕ್ ಡೌನ್ ಜಾರಿಗೊಳಿಸುವ ಸೂಚನೆಯನ್ನು ನೀಡಿದ್ದರೆ ತಮಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎನ್ನುತ್ತಾರೆ.
"ದೋನ್ ದಿವಸಾಚಾ ಟೈಮ್ ಭೆಲ್ತಾ ಆಸ್ತಾ, ತರ್ ಆಮ್ಹಿ ಚುಪ್ಚಾಪ್ ಘರಿ ಪೊಹೊಚ್ಲೊ ಆಸ್ತೋ [ನಮಗೆ ಎರಡು ದಿನಗಳ ಸಮಯ ಸಿಕ್ಕಿದ್ದರೆ, ನಾವು ಶಾಂತವಾಗಿ ಮತ್ತು ಸುರಕ್ಷಿತವಾಗಿ ಮನೆಗೆ ಮರಳುತ್ತಿದ್ದೆವು]," ಎಂದು ಅವರು ಹೇಳುತ್ತಾರೆ.
****
ಮಾರ್ಚ್ 24, 2020ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿಯಿಂದ ಕೇವಲ ನಾಲ್ಕು ಗಂಟೆಗಳ ಸೂಚನೆಯಲ್ಲಿ ಇಡೀ ದೇಶಾದ್ಯಂತ ಲಾಕ್ ಡೌನ್ ಮಾಡಲು ಸೂಚಿಸಿದರು. ಈ ನಡೆಯನ್ನು ಕರೋನಾ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮವಾಗಿ ಜಾರಿಗೊಳಿಸಿದ್ದರೂ ಸಹಿತ, ನೀಡಿದ ಸಣ್ಣ ಕಾಲಾವಕಾಶ ಹಠಾತ್ ಭಯ ಮತ್ತು ಅರಾಜಕತೆಗೆ ಕಾರಣವಾಯಿತು.
ಭಾರತದಾದ್ಯಂತ ಲಕ್ಷಾಂತರ ವಲಸೆ ಕಾರ್ಮಿಕರು ಅಪಾಯಕಾರಿ ಪ್ರಯಾಣಗಳನ್ನು ಕೈಗೊಳ್ಳುವ ಮೂಲಕ ತಮ್ಮ ಹಳ್ಳಿಗಳನ್ನು ತಲುಪಲು ಸಾಕಷ್ಟು ಹರಸಾಹಸ ಪಡಬೇಕಾಯಿತು - ಅಸಂಖ್ಯಾತ ಜನರು ಹಾಗೆಯೇ ನಡೆದರು, ನೂರಾರು ಜನರು ಅಪಾಯಕಾರಿ ಮಾರ್ಗಗಳ ಮೂಲಕ ಪ್ರಯಾಣ ಬೆಳೆಸಿದರು, ಕೆಲವರು ಸೈಕಲ್ ಸವಾರಿ ಮಾಡಿದರೆ, ಕೆಲವೊಂದಿಷ್ಟು ಜನರು ತಮ್ಮ ಮನೆಗಳನ್ನು ತಲುಪಲು ಟ್ರಕ್ ಗಳು ಮತ್ತು ಇತರ ವಾಹನಗಳಿಗೆ ಮೊರೆ ಹೋದರು. ಈ ಸಂದರ್ಭದಲ್ಲಿ ಬಹುತೇಕ ಎಲ್ಲಾ ಸಾಮಾನ್ಯ ಸಾರ್ವಜನಿಕ ಸಾರಿಗೆ ವಿಧಾನಗಳು ಸ್ಥಗಿತಗೊಂಡಿದ್ದವು.
ಸಾಂಕ್ರಾಮಿಕ ರೋಗದಿಂದ ದೂರವಿರಲು ಉಳಿದವರೆಲ್ಲಾ ನಾವು ಮನೆಯಲ್ಲೇ ಇದ್ದೆವು.
ರಸ್ತೆಗಳಲ್ಲಿರುವ ಲಕ್ಷಾಂತರ ಜನರಿಗೆ ಇದು ನಿಜಕ್ಕೂ ದುಃಸ್ವಪ್ನವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಂತೂ ಅನೇಕ ಕಟುವಾದ ಕಥೆಗಳು ಹೊರಹೊಮ್ಮಿದವು ಮತ್ತು ಕೆಲವು ವರದಿಗಾರರು ತಮ್ಮ ವೃತ್ತಿಜೀವನದಲ್ಲಿ ಬಹುಶಃ ಮೊದಲ ಬಾರಿಗೆ ವಲಸಿಗರ ಹೋರಾಟಗಳನ್ನು ಚಿತ್ರಿಸಲು ಹೊರಟಿದ್ದರು. ಕೆಲವು ವಿಮರ್ಶಕರು ಈ ಬಿಕ್ಕಟ್ಟನ್ನು ‘ಹಿಮ್ಮುಖ ವಲಸೆ’ ಎಂದು ವಿವರಿಸುತ್ತಿದ್ದರು.ಆದರೆ ಬಹುತೇಕರು ಇದನ್ನು 1947ರಲ್ಲಿ ದೇಶದ ವಿಭಜನೆ ಸಮಯದಲ್ಲಿ ಭಾರತವು ಕಂಡಿರುವ ವಲಸೆಗಿಂತಲೂ ದೊಡ್ಡದು ಎನ್ನುವ ಸಂಗತಿಯನ್ನು ಒಪ್ಪಿಕೊಳ್ಳುತ್ತಾರೆ.
ಕೇಂದ್ರ ಸರ್ಕಾರವು ಲಾಕ್‌ಡೌನ್ ಘೋಷಿಸಿದಾಗ ಕೇವಲ 500 ಕೊರೊನಾ ಪ್ರಕರಣಗಳು ಮಾತ್ರ ವರದಿಯಾಗಿದ್ದವು. ಆಗ ಒಂದೇ ಒಂದು ಪ್ರಕರಣವನ್ನು ವರದಿ ಮಾಡದ ಜಿಲ್ಲೆಗಳು ಮತ್ತು ಪ್ರದೇಶಗಳು ಕೂಡ ಇದ್ದವು. ಆಗ ಕೋವಿಡ್ -19 ಪರೀಕ್ಷೆಯು ಇನ್ನೂ ಪ್ರಾರಂಭವಾಗಬೇಕಾಗಿತ್ತು, ಇನ್ನೊಂದೆಡೆಗೆ ಕೇಂದ್ರ ಸರ್ಕಾರಕ್ಕೂ ಒಂದು ರೀತಿ ನಿರ್ಣಾಯಕ ಸಮಯದ ಮಿತಿ ಎದುರಾಗಿತ್ತು, ಆಗ ಪ್ರೋಟೋಕಾಲ್ ಅನ್ನು ವಿಕಸನಗೊಳಿಸುವ ಮತ್ತು ಪರೀಕ್ಷಾ ಕಿಟ್‌ಗಳ ಖರೀದಿಗಾಗಿ ಟೆಂಡರ್‌ಗಳು ಮತ್ತು ಕರಾರಿನ ವಿಚಾರದಲ್ಲಿನ ಗೊಂದಲವು ಮಾತ್ರ ಹಾಗೆ ಮುಂದುವರೆದಿತ್ತು.
ಏಪ್ರಿಲ್ ಅಂತ್ಯದ ವೇಳೆಗೆ, ಕೋವಿಡ್ -19 ಪ್ರಕರಣಗಳು ಹಲವಾರು ಸಾವಿರದವರೆಗೆ ಏರಿಕೆಯಾಗಿದ್ದು, ಜೂನ್ ಅಂತ್ಯದ ವೇಳೆಗೆ ಅದು ಮಿಲಿಯನ್‌ಗೆ ತಲುಪಿತು. ಹೀಗಾಗಿ ಆಗ ಇಡೀ ಆರೋಗ್ಯ ವ್ಯವಸ್ಥೆಯೇ ಸಂಪೂರ್ಣ ಹದಗೆಟ್ಟಿತ್ತು. ಪ್ರಸ್ತುತ ವಾರದ ಅಂತ್ಯದ ವೇಳೆಗೆ, ಭಾರತವು 11 ಮಿಲಿಯನ್ ಕೋವಿಡ್ -19 ಪ್ರಕರಣಗಳನ್ನು ಮತ್ತು 150,000 ಕ್ಕೂ ಹೆಚ್ಚು ಸಾವುಗಳನ್ನು ದಾಖಲಿಸಿತು. ಇನ್ನೊಂದೆಡೆಗೆ ಆರ್ಥಿಕತೆಯು ಕೂಡ ಹದಗೆಟ್ಟಿತು - ಬಡವರಿಗೆ, ಅದರಲ್ಲೂ ಕಾಲ್ನಡಿಗೆ ಮೂಲಕ ವಲಸೆ ಹೊರಟ ಕಾರ್ಮಿಕರಿಗೆ ಬಲವಾದ ಪೆಟ್ಟನ್ನು ನೀಡಿತು, ಅದು ಈಗಾಗಲೇ ಕೊರೊನಾ ಮುಂಚಿನ ಮತ್ತು ಆ ವೇಳೆಯಲ್ಲಿ ಅತ್ಯಂತ ದುರ್ಬಲ ಪರಿಸ್ಥಿತಿಯನ್ನು ಹೊಂದಿರುವ ಗುಂಪುಗಳಲ್ಲಿ ಅದು ಕೂಡ ಒಂದಾಗಿದೆ.
****
ಕೊರೇಟಿಯವರು ಸಂಜೆ 4 ಗಂಟೆ ಸುಮಾರಿಗೆ ಕಾಗಜನಗರದಿಂದ ಹೊರಟಿದ್ದನ್ನು ನೆನಪಿಸಿಕೊಳ್ಳುತ್ತಾರೆ. ಮೊದಲ ದಿನ ಮತ್ತು ತಡರಾತ್ರಿಯವರೆಗೆ ನಡೆಯುವುದು. ಅವರ ಸಾಮಾನು ಸರಂಜಾಮುಗಳಲ್ಲಿ ಒಂದು ಜೊತೆ ಬಟ್ಟೆ, ಕೆಲವು ಕಿಲೋಗ್ರಾಂಗಳಷ್ಟು ಅಕ್ಕಿ ಮತ್ತು ಬೇಳೆ, ಉಪ್ಪು, ಸಕ್ಕರೆ, ಮಸಾಲೆಗಳು, ಕೆಲವು ಬಿಸ್ಕತ್ತು ಪ್ಯಾಕೆಟ್‌ಗಳು, ಕೆಲವು ಪಾತ್ರೆಗಳು ಮತ್ತು ನೀರಿನ ಬಾಟಲಿಗಳಿದ್ದವು.
ಅವರಿಗೆ ಈಗ ಸಮಯ, ದಿನಾಂಕಗಳು ಅಥವಾ ಸ್ಥಳಗಳೆಲ್ಲದರ ವಿವರಗಳು ನೆನಪಿಲ್ಲ – ಆದರೆ ಅವರಿಗೆ ನೆನಪಾಗುವುದು ಮಾತ್ರ ಆಯಾಸಗೊಳಿಸುವ ಈ ಪ್ರಯಾಣವೊಂದೇ.
ದಾರಿಯಲ್ಲಿ ಮೂವರೂ ಪರಸ್ಪರ ಮಾತನಾಡಿದ್ದೇ ಹೆಚ್ಚು ಎನ್ನಬಹುದು. ಕೆಲವೊಮ್ಮೆ ಕೊರೇಟಿ ಅವರು ಮುಂದೆ ನಡೆಯುತ್ತಿದ್ದರೆ, ಕೆಲವೊಮ್ಮೆ ಇಬ್ಬರ ಹಿಂದೆ ನಡೆಯುತ್ತಿದ್ದರು. ಅವರು ತಮ್ಮ ಸಾಮಾನುಗಳನ್ನು ಮತ್ತು ಪಡಿತರ ಸಾಮಾಗ್ರಿಯನ್ನು ತಮ್ಮ ತಲೆ ಮತ್ತು ಬೆನ್ನಿನ ಮೇಲೆ ಹೊತ್ತು ರಸ್ತೆಯುದ್ದಕ್ಕೂ ನಡೆದರು. ದಾರಿಯಲ್ಲಿ ಎಲ್ಲಿಯಾದರೂ ಅವರಿಗೆ ಬಾವಿ ಅಥವಾ ಬೋರ್‌ವೆಲ್ ಕಂಡರೆ ಸಾಕು, ಆಗ ಅವರು ತಮ್ಮನ್ನು ತಣಿಸಿಕೊಳ್ಳಲು ನೀರಿನ ಬಾಟಲಿಗಳನ್ನು ತುಂಬಿಕೊಳ್ಳುತ್ತಿದ್ದರು.
ಅವರ ಮೊದಲ ನಿಲುಗಡೆ ರೈಲ್ವೆ ಹಳಿಗಳ ಬದಿಯಲ್ಲಾಗಿತ್ತು, ಅವರು ಮೊದಲು ಸಂಜೆ ಸುಮಾರು ಐದು ಗಂಟೆಗಳ ಕಾಲ ಪ್ರಯಾಣಿಸಿದರು, ನಂತರ ಆಹಾರವನ್ನು ತಯಾರಿಸಿ ಅಲ್ಲಿಯೇ ಪಕ್ಕದಲ್ಲಿದ್ದ ಹುಲ್ಲುಗಾವಲಿನ ಭೂ ಪ್ರದೇಶದಲ್ಲಿ ನಿದ್ರೆಗೆ ಜಾರಿದ್ದರು.
ಮರುದಿನ ನಸುಕಿನಲ್ಲಿ, ಅವರು ಮತ್ತೆ ನಡೆಯಲು ಪ್ರಾರಂಭಿಸಿದರು ಮತ್ತು ಸೂರ್ಯನು ತನ್ನ ಉರಿ ಜ್ವಾಲೆಗಳನ್ನು ಹೊರಹಾಕುವವರೆಗೂ ತಮ್ಮ ಪ್ರಯಾಣವನ್ನು ಮುಂದುವರೆಸಿದರು. ಅವರು ಹೊಲಗಳಲ್ಲಿ, ಮರದ ಕೆಳಗೆ, ಹಳಿಗಳ ಪಕ್ಕದಲ್ಲಿ ಆಶ್ರಯವನ್ನು ಪಡೆದರು. ಅವರು ಮುಸ್ಸಂಜೆಯ ಸಮಯದಲ್ಲಿ ಮತ್ತೆ ನಡೆದರು, ತಾವೇ ಬೇಯಿಸಿದ ದಾಲ್-ರೈಸ್ ಅನ್ನು ಸೇವಿಸಿ ಕೆಲವು ಗಂಟೆಗಳ ಕಾಲ ಮಲಗಿ ಮತ್ತೆ ಬೆಳಿಗ್ಗೆ ತಮ್ಮ ಪ್ರಯಾಣವನ್ನು ಪುನರಾರಂಭಿಸಿದರು, ಸೂರ್ಯನು ನೇರವಾಗಿ ತಮ್ಮ ನೆತ್ತಿಯ ಮೇಲೆ ಬರುವವರೆಗೂ ಹಾಗೆಯೇ ತಮ್ಮ ಪ್ರಯಾಣವನ್ನು ಬೆಳೆಸಿದರು. ಮೂರನೇ ರಾತ್ರಿ ಅವರು ಮಹಾರಾಷ್ಟ್ರದ ಗಡಿಯ ಸಮೀಪವಿರುವ ಮಾಕೋಡಿ ಎಂಬ ಸ್ಥಳಕ್ಕೆ ಬಂದು ತಲುಪಿದರು.
2-3 ದಿನಗಳ ನಂತರ ಮನಸ್ಸು ಖಾಲಿಯಾಗಿ; ಅವರಿಗೆ ಯೋಚಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ, ಎಂದು ಕೊರೆಟಿ ಹೇಳುತ್ತಿದ್ದರು.
"ನಾವು ರೈಲ್ವೆ ಹಳಿಗಳ ಪಕ್ಕದಲ್ಲಿ ನಡೆಯುತ್ತಲೇ ಇದ್ದೆವು, ಹಳ್ಳಿಗಳು, ಕುಗ್ರಾಮಗಳು, ರೈಲು ನಿಲ್ದಾಣಗಳು, ನದಿಗಳು ಮತ್ತು ಕಾಡುಗಳ ಮೂಲಕ ಹಾದು ಹೋಗುತ್ತಿದ್ದೆವು" ಎಂದು 17 ಜನರ ಮೊದಲ ತಂಡವನ್ನು ಝಶಿನಗರಕ್ಕೆ ಮುನ್ನಡೆಸಿದ್ದ ರೈತ ಹುಮ್ರಾಜ್ ಭೋಯರ್ ಹೇಳುತ್ತಿದ್ದರು.
ಈ ಕಾರ್ಮಿಕರು ಹೆಚ್ಚಾಗಿ 18 ರಿಂದ 45 ವರ್ಷ ವಯಸ್ಸಿನವರಾಗಿದ್ದರಿಂದಾಗಿ ನಡೆಯಬಹುದು, ಆದರೆ ಅವರಿಗೆ ಕಡು ಬೇಸಿಗೆಯಿಂದಾಗಿ ಕಷ್ಟಕರವಾಗಿತ್ತು.
ಸಣ್ಣ ಮೈಲಿಗಲ್ಲುಗಳೇ ದೊಡ್ಡ ಸಾಧನೆಗಳೆನ್ನುವಂತೆ ಅವರಿಗೆ ಮರಾಠಿಯಲ್ಲಿ ಸೈನ್‌ಬೋರ್ಡ್‌ಗಳನ್ನು ಗುರುತಿಸಿದಾಗ ಅವರಿಗೆ ಸಂತೋಷ ಮತ್ತು ಸಮಾಧಾನವಾಗುತ್ತಿತ್ತು, ಆಗ ಅವರಿಗೆ ಮಹಾರಾಷ್ಟ್ರದಲ್ಲಿರುವುದು ಖಚಿತವೆನಿಸುತ್ತಿತ್ತು!
“ನಮಗೀಗ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಾವು ಭಾವಿಸಿದ್ದೆವು.” ಎಂದು ಹುಮ್ರಾಜ್ ನೆನಪಿಸಿಕೊಳ್ಳುತ್ತಾರೆ. ಕೊರೇಟಿ ಮತ್ತು ಅವರ ಇಬ್ಬರು ಸಹಚರರು ಕೆಲವು ದಿನಗಳ ಹಿಂದೆ ಹುಮ್ರಾಜ್ ತಂಡವು ಪ್ರಯಾಣಿಸಿದ ಮಾರ್ಗದಲ್ಲಿಯೇ ಸಾಗಿದ್ದಲ್ಲದೆ ಮತ್ತು ಅದೇ ಸ್ಥಳಗಳಲ್ಲಿ ವಸತಿ ಹೂಡಿದರು.
"ನಾವು ಮಹಾರಾಷ್ಟ್ರದ ಗಡಿಯಲ್ಲಿರುವ ವಿಹಿರ್‌ಗಾಂವ್ ಎಂಬ ಊರಿನಲ್ಲಿ ಮತ್ತು ಅದರ ಮರುದಿನ ಚಂದ್ರಾಪುರ ಜಿಲ್ಲೆಯ ಸಿಮೆಂಟ್ ಕಾರ್ಖಾನೆಗಳಿಗೆ ಹೆಸರುವಾಸಿಯಾದ ಮಾಣಿಕ್‌ಗಢದಲ್ಲಿ ವಿರಮಿಸಿದೆವು" ಎಂದು ಕೊರೇಟಿ ಹೇಳುತ್ತಿದ್ದರು.
ಅವರಿಗೆ ಪ್ರತಿ ರಾತ್ರಿಯ ಪ್ರಯಾಣಕ್ಕೆ ಚಂದ್ರ ಮತ್ತು ನಕ್ಷತ್ರಗಳೇ ಅವರ ಸಂಗಾತಿಗಳಾಗಿದ್ದರು.
ಚಂದ್ರಾಪುರ ಜಿಲ್ಲೆಯ ಬಲ್ಲಾರ್‌ಪುರ ರೈಲು ನಿಲ್ದಾಣದಲ್ಲಿ ಸ್ನಾನ ಮಾಡಿದ ಅವರು ಇಡೀ ದಿನ ಅಲ್ಲೇ ಮಲಗಿ ವಿಶ್ರಾಂತಿ ಪಡೆದರು, ಭರ್ಜರಿ ಊಟವನ್ನು ಸವಿದರು. ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ವಲಸಿಗರಿಗೆ ರೈಲ್ವೇ ಅಧಿಕಾರಿಗಳು ಮತ್ತು ಸ್ಥಳೀಯರು ಊಟದ ವ್ಯವಸ್ಥೆಯನ್ನು ಮಾಡಿಸಿದ್ದರು.
“ಅಸೆ ವಟತ್ ಹೋತೆ, ಪುರ್ರ ದೇಶ್ ಚಲುನ್ ರಹಿಲಾ ( ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರೆ ಇಡೀ ದೇಶವೇ ಹಾಗೆ ಹೊರಟಿದೆಯೇನೊ ಎನ್ನುವಂತಿತ್ತು),” ಎಂದು ಕೊರೆಟಿ ಹೇಳುತ್ತಾರೆ. “ನಾವು ಒಬ್ಬಂಟಿಯಾಗಿರಲಿಲ್ಲ.” ಆದರೆ ಅವರು ಪ್ರಯಾಣದಿಂದಾಗಿ ದಣಿದಿರುವ, ಬಳಲಿದ, ಅಸಹಾಯಕರಾಗಿರುವ ಮಹಿಳೆಯರು ಮತ್ತು ಮಕ್ಕಳನ್ನು ಕಂಡು ಮರುಗಿದರು. “ವೇದಾಂತಿ ಮತ್ತು ನನ್ನ ಹೆಂಡತಿ ಶಮಕಲಾ, ಅವರು ಮನೆಯಲ್ಲಿ ಸುರಕ್ಷಿತವಾಗಿರುವುದು ನಿಜಕ್ಕೂ ನನಗೆ ಸಂತೋಷವನ್ನುಂಟು ಮಾಡಿತ್ತು” ಎಂದು ಅವರು ನಮ್ಮೊಂದಿಗೆ ಮಾತನಾಡುವಾಗ ಅವರನ್ನು ನೋಡುತ್ತಾ ಹೇಳುತ್ತಿದ್ದರು.
ಮುಂದಿನ ನಿಲ್ದಾಣವು ಚಂದ್ರಾಪುರ ನಗರವಾಗಿತ್ತು. ಅಲ್ಲಿ, ಅವರು ರೈಲ್ವೆ ಸೇತುವೆಯ ಕೆಳಗೆ ವಿಶ್ರಾಂತಿ ಪಡೆದರು ಮತ್ತು ನಂತರ ಗೊಂಡಿಯಾಕ್ಕೆ ಹೋಗುವ ರೈಲ್ವೆ ಹಳಿಗಳುದ್ದಕ್ಕೂ ನಡೆದರು. ಹುಲಿ ಪ್ರದೇಶದಲ್ಲಿರುವ ಕೆಲ್ಜಾರ್ ಕುಗ್ರಾಮವನ್ನು ದಾಟಿ ನಂತರ ಮುಲ್ ಗೆ ತೆರಳಿದರು, ಈ ಎರಡು ಪ್ರದೇಶಗಳು ಚಂದ್ರಾಪುರ ಜಿಲ್ಲಾ ವ್ಯಾಪ್ತಿಯಲ್ಲಿಯೇ ಬರುತ್ತವೆ. “ಕೆಲ್ಜಾರ್ ಮತ್ತು ಮುಲ್ ನಡುವೆ ನಾವು ಚಿರತೆಯನ್ನು ನೋಡಿದ್ದೇವೆ. ಮಧ್ಯರಾತ್ರಿಯಲ್ಲಿ ನಾವು ನೀರಿನ ಕೊಳದ ಬಳಿ ಕುಳಿತಿದ್ದಾಗ ಅದು ಬಂದು ಅಲ್ಲಿ ನೀರು ಕುಡಿಯುತಿತ್ತು, ನಂತರ ಚಿರತೆ ಪೊದೆಯೊಳಗೆ ಓಡಿ ಹೋಯಿತು” ಎಂದು ಕೋರೆಟಿ ಹೇಳುತ್ತಿದ್ದರು. ಆಗ ಅವರು ಜೀವ ಭಯದಿಂದ ಅಲ್ಲಿಂದ ಬೇಗನೆ ಕಾಲ್ಕಿತ್ತರು. ತನ್ನ ಪತಿಯನ್ನು ಜೀವಂತವಾಗಿ ಮನೆಗೆ ಕಳುಹಿಸಿದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾ ಅವರ ಪತಿ ಮಾತನಾಡುವಾಗ ಪತ್ನಿ ಶಮಕಲಾ ಹಿಂದಿನಿಂದ ತೀಕ್ಷ್ಣನೋಟದಿಂದ ನೋಡುತ್ತಿದ್ದರು.
ಕೆಲ್ಜಾರ್ ನಂತರ, ಅವರು ರೈಲ್ವೆ ಹಳಿಗಳನ್ನು ಬಿಟ್ಟು ರಸ್ತೆಗೆ ಇಳಿದರು
ಮೂವರು ವ್ಯಕ್ತಿಗಳಲ್ಲಿ ವಿಶೇಷವಾಗಿ ಹಿರಿಯರಾಗಿರುವ ಹೊಡಿಕರ್, ಅವರು ಚಂದ್ರಾಪುರ ಜಿಲ್ಲೆಯ ತಹಸಿಲ್ ಪಟ್ಟಣವಾದ ಬ್ರಹ್ಮಪುರಿ ತಲುಪುವ ವೇಳೆಗೆ ದಣಿದಿದ್ದರು, ಅಲ್ಲಿಂದ ಅವರು ಗಡ್ಚಿರೋಲಿಯಲ್ಲಿನ ವಾಡ್ಸಾಗೆ ಹೊರಟರು ಮತ್ತು ನಂತರ ಝಶಿನಗರಕ್ಕೆ ತಲುಪಲು ಮಾರ್ಗವನ್ನು ಕಂಡುಕೊಂಡರು.ಸೆಪ್ಟೆಂಬರ್‌ನಲ್ಲಿ ನಾವು ಅವರನ್ನು ಭೇಟಿ ಮಾಡಿದಾಗ ಹೊಡಿಕರ್ ಅವರು ಗ್ರಾಮದಲ್ಲಿ ಇರಲಿಲ್ಲ.ಹಾಗಾಗಿ, ನಾವು ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೆವು.
“ನಾವು ಮುಲ್ ತಲುಪಿದ ನಂತರ, ಸ್ಥಳೀಯರು ನಮ್ಮಂತಹ ವಲಸಿಗರಿಗಾಗಿ ಆಶ್ರಯ ಶಿಬಿರಗಳಲ್ಲಿ ಇಟ್ಟಿದ್ದ ಒಳ್ಳೆಯ ಆಹಾರವನ್ನು ಸೇವಿಸಿದ್ದೇವೆ” ಎಂದು ಕೊರೆಟಿ ಹೇಳುತ್ತಾರೆ. ಕೊನೆಯದಾಗಿ ಮೇ 3 ರಂದು 14 ನೇ ದಿನ ಝಶಿನಗರವವನ್ನು ತಲುಪಿದಾಗ ಮತ್ತು ಆಗ ಅವರಿಗೆ ಇಡೀ ಗ್ರಾಮಸ್ಥರಿಂದ ಸಿಕ್ಕ ಸ್ವಾಗತವು ಇದೊಂದು ರೀತಿ ದೊಡ್ಡ ಸಾಧನೆಯಂತೆ ಭಾಸವಾಯಿತು.
ಅವರ ಊದಿಕೊಂಡ ಕಾಲುಗಳು ಚೇತರಿಕೆ ಕಾಣಲು ಹಲವು ದಿನಗಳೇ ಹಿಡಿದವು.
“ಜವಾ ಪರ್ಯಾಂತ್ ಹೆ ಲೋಕ್ ಘರಿ ಪೋಹೋಚ್ಲೆ ನವ್ತೇ, ಆಮ್ಹಲೆ ಲಗಿತ್ ಟೆನ್ಶನ್ ಹೋತೆ (ಇವೆರಲ್ಲಾ ಮನೆಗೆ ಹಿಂದಿರುಗುವವರೆಗೂ ನಾವು ಸಾಕಷ್ಟು ಚಿಂತೆಯಲ್ಲಿದ್ದೆವು).” ಎಂದು ಶಮಕಲಾ ಹೇಳುತ್ತಾರೆ.“ನಾವು ಹೆಂಗಸರು ಪ್ರತಿ ಬಾರಿ ಪರಸ್ಪರ ಮಾತನಾಡುತ್ತಿದ್ದೆವು ಮತ್ತು ಏನಾದರೂ ಅವರ ಸ್ಥಿತಿಗತಿ ಬಗ್ಗೆ ಅವರಿಗೆ ತಿಳಿದಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅವರ ಸ್ನೇಹಿತರಿಗೆ ಪೋನ್ ಮಾಡಲು ಪ್ರಯತ್ನಿಸುತ್ತಿದ್ದೆವು” ಎಂದು ಹೇಳುತ್ತಾರೆ.
“ನಾನು ವೇದಾಂತಿಯನ್ನು ನೋಡಿದಾಗ ಕಣ್ಣೀರು ಹಾಕಿದೆ.”ಎಂದು ಕೊರೇಟಿ ನೆನಪಿಸಿಕೊಳ್ಳುತ್ತಾರೆ.“ನಾನು ಅವಳನ್ನು ಮತ್ತು ನನ್ನ ಹೆಂಡತಿಯನ್ನು ದೂರದಿಂದ ನೋಡಿದಾಗ ಅವರಿಗೆ ಮನೆಗೆ ಹೋಗುವಂತೆ ಹೇಳಿದೆ. ಏಕೆಂದರೆ ನಾವು ಅವರ ಸಂಪರ್ಕವನ್ನು ತಪ್ಪಿಸಬೇಕಾಗಿತ್ತು. ಗ್ರಾಮಕ್ಕೆ ಮರಳಿ ಬರುವ ವಲಸಿಗರನ್ನು ಕಡ್ಡಾಯವಾಗಿ 14 ದಿನಗಳ ಪ್ರತ್ಯೇಕತೆಯಲ್ಲಿ ಇರಿಸಲು ಎರಡು ಶಾಲೆಗಳು, ಬೃಹತ್ ಸೆಂಟ್ರಲ್ ಗ್ರೌಂಡ್ ಮತ್ತು ಗ್ರಾಮ ಪಂಚಾಯತ್ ಕಟ್ಟಡಗಳನ್ನು ಮಿಸಲಿರಿಸಲಾಗಿತ್ತು. ಕೆಲವು ಸಂದರ್ಭದಲ್ಲಿ ಈ ಕ್ವಾರಂಟೈನ್ ಮಿತಿಯನ್ನು ಆಗಾಗ ಬದಲಾಗುತ್ತಿರುವ ಸರ್ಕಾರದ ನಿರ್ದೇಶನಗಳಿಗೆ ಅನುಗುಣವಾಗಿ 7-10 ದಿನಗಳಿಗೆ ಇಳಿಸಲಾಗಿದೆ, ಮತ್ತು ವಾಪಾಸ್ಸಾದವರಲ್ಲಿ ಕೆಲವರು ತಮ್ಮ ಏಕಾಂತದ ಪ್ರಯಾಣದಲ್ಲಿ ಇತರರೊಂದಿಗೆ ಕಡಿಮೆ ಸಂಪರ್ಕವನ್ನು ಹೊಂದಿದ್ದರು.
ಆ ರಾತ್ರಿ, ಊರಿನಲ್ಲಿರುವ ಶಾಲೆಯಲ್ಲಿ ಅವರು ಒಂದು ವಾರ ಪ್ರತ್ಯೇಕವಾಗಿ ಕಳೆದರು, ಕೊರೆಟಿ ಅನೇಕ ವಾರಗಳಲ್ಲಿ ಮೊದಲ ಬಾರಿಗೆ ನೆಮ್ಮದಿಯ ನಿದ್ರೆಗೆ ಜಾರಿದ್ದರು. ಅವರಿಗೆ ಅದೊಂದು ರೀತಿ ಮರಳಿ ಗೂಡಿಗೆ ಬಂದಂತಾಗಿತ್ತು.
****
ಮೂಲತಃ ಝಶಿನಗರಕ್ಕೆ ತಂಭೋರಾ ಎಂದು ಕರೆಯಲಾಗುತ್ತದೆ, ಇಂದು ಸುಮಾರು 2,200 ನಿವಾಸಿಗಳನ್ನು ಹೊಂದಿರುವ ದೊಡ್ಡ ಗ್ರಾಮವಾಗಿದ್ದು (2011 ರ ಜನಗಣತಿಯಲ್ಲಿ 1,928). 1970 ರಲ್ಲಿ ಇಟಿಯಾಡೋ ನೀರಾವರಿ ಯೋಜನೆಯಿಂದ ಮೂಲ ವಸಾಹತು ಹಾನಿಯಾದ ನಂತರ ಈ ಹೊಸ ಸ್ಥಳದಲ್ಲಿ ಇದಕ್ಕೆ ಪುನರ್ವಸತಿ ಕಲ್ಪಿಸಲಾಗಿದೆ. ಐದು ದಶಕಗಳ ನಂತರ, ಹೊಸ ತಲೆಮಾರುಗಳು ಇದಕ್ಕೆ ಹೊಂದಿಕೊಂಡಿರಬಹುದು, ಆದರೆ ಹಳೆಯ ನಿವಾಸಿಗಳು ಬಲವಂತದ ಸ್ಥಳಾಂತರದ ನಂತರ ಪುನರ್ವಸತಿ ಮತ್ತು ಪುನರ್ವಸತಿಯ ದೀರ್ಘಕಾಲದ ಸಮಸ್ಯೆಗಳೊಂದಿಗೆ ಇನ್ನೂ ಹೋರಾಡುತ್ತಿದ್ದಾರೆ.
ಗೊಂಡಿಯಾ ಜಿಲ್ಲೆಯ ಅರ್ಜುನಿ ಮೋರ್ಗಾಂವ್ ತಹಸಿಲ್‌ನಲ್ಲಿರುವ ನವೆಗಾಂವ್ ಅಭಯಾರಣ್ಯದ ಸುತ್ತಲಿನ ಕಾಡುಗಳಲ್ಲಿ ಝಶಿನಗರವು ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಕೊರತೆಯನ್ನು ಎದುರಿಸುತ್ತದೆ. ಇಲ್ಲಿನ ರೈತರು ಈಗ ಏತ ನೀರಾವರಿ ಯೋಜನೆ ಪೂರ್ಣಗೊಳ್ಳುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈ ಗ್ರಾಮದಲ್ಲಿ ಭತ್ತ, ದ್ವಿದಳ ಧಾನ್ಯಗಳು ಮತ್ತು ಕೆಲವು ಒರಟಾದ ಧಾನ್ಯಗಳನ್ನು ಬೆಳೆಯುತ್ತಾರೆ.
ಝಶಿನಗರದ 250ರಿಂದ 300 ಗಂಡಸರು ಮತ್ತು ಮಹಿಳೆಯರು ಪ್ರತಿ ವರ್ಷ ಕೆಲಸವನ್ನು ಅರಸುತ್ತಾ ದೂರದ ಸ್ಥಳಗಳಿಗೆ ವಲಸೆ ಹೋಗುತ್ತಾರೆ. ಏಪ್ರಿಲ್‌ನಲ್ಲಿ ಮೊದಲ ತಂಡದ ವಲಸಿಗರು ಹಿಂದಿರುಗಿದಾಗಿನಿಂದ ಗ್ರಾಮದ ಕೋವಿಡ್ ನಿರ್ವಹಣಾ ಸಮಿತಿಯು ನಿರ್ವಹಿಸಿದ ವಾಪಸಾತಿದಾರರ ಪಟ್ಟಿಯು ಅವರು ಸಾಮಾನ್ಯವಾಗಿ ಹೋಗುವ ಎರಡು ಡಜನ್ ವಿಭಿನ್ನ ಸ್ಥಳಗಳನ್ನು ದಾಖಲಿಸುತ್ತದೆ – ಗೋವಾದಿಂದ ಚೆನ್ನೈವರೆಗೂ ಮತ್ತು ಹೈದರಾಬಾದ್‌ನಿಂದ ಕೊಲ್ಲಾಪುರ ಮತ್ತು ಅದರಾಚೆಗೆ – ಒಟ್ಟು ಏಳು ರಾಜ್ಯಗಳುದ್ದಕ್ಕೂ ಹರಡಿದೆ. ಜನರು ಹೊಲಗಳಿಗೆ, ಕಾರ್ಖಾನೆಗಳಿಗೆ, ಕಚೇರಿಗಳಿಗೆ, ರಸ್ತೆಗಳ ಕೆಲಸಕ್ಕಾಗಿ ವಲಸೆ ಹೋಗುತ್ತಾರೆ ಮತ್ತು ಅಲ್ಲಿಂದ ಅವರು ಮನೆಗೆ ಹಣವನ್ನು ಕಳುಹಿಸುತ್ತಾರೆ.
ಪೂರ್ವ ವಿದರ್ಭದ ಭತ್ತ ಬೆಳೆಯುವ ಜಿಲ್ಲೆಗಳಾದ ಭಂಡಾರಾ, ಚಂದ್ರಾಪುರ, ಗಡ್ಚಿರೋಲಿ ಮತ್ತು ಗೊಂಡಿಯಾಗಳು ವಲಸೆ ಕೇಂದ್ರಗಳಾಗಿವೆ.ಗಂಡಸರು ಮತ್ತು ಮಹಿಳೆಯರು ಕೇರಳದ ಭತ್ತದ ಗದ್ದೆಗಳಲ್ಲಿ ಅಥವಾ ಪಶ್ಚಿಮ ಮಹಾರಾಷ್ಟ್ರದ ಕಬ್ಬು ಅಥವಾ ಹತ್ತಿ ಗಿರಣಿಗಳಲ್ಲಿ ಕೆಲಸ ಮಾಡಲು ದೂರದ ಸ್ಥಳಗಳವರೆಗೆ ವಲಸೆ ಹೋಗುತ್ತಾರೆ.ಅವರಲ್ಲಿ ಕೆಲವರು ಕಳೆದ 20 ವರ್ಷಗಳಲ್ಲಿನ ಕಾರ್ಮಿಕ ಗುತ್ತಿಗೆದಾರರ ಸಂಪರ್ಕದ ಮೂಲಕ ಅಂಡಮಾನ್ ನಂತಹ ದ್ವೀಪದ ಪ್ರದೇಶಗಳಿಗೂ ಕೂಡ ಹೋಗುತ್ತಾರೆ.
ಭಂಡಾರಾ ಮತ್ತು ಗೊಂಡಿಯಾದಂತಹ ಜಿಲ್ಲೆಗಳಲ್ಲಿ ವಲಸೆಗೆ ಕಾರಣವಾಗಿರುವ ಪ್ರಮುಖವಾಗಿರುವ ಅಂಶಗಳೆಂದರೆ ಏಕ-ಬೆಳೆ ಕೃಷಿ ವ್ಯವಸ್ಥೆ ಮತ್ತು ಕೈಗಾರಿಕೆಗಳ ಕೊರತೆ.ಖಾರಿಫ್ ಋತು ಮುಗಿದ ನಂತರ, ಬಹುಸಂಖ್ಯಾತರಾಗಿರುವ ಭೂರಹಿತ ಮತ್ತು ಸಣ್ಣ ರೈತರಿಗೆ, ವರ್ಷದ ಉಳಿದ ಅರ್ಧಸಮಯದವರೆಗೆ ಬದುಕಬೇಕೆಂದರೆ ಸ್ಥಳಿಯವಾಗಿ ಅಷ್ಟು ಪ್ರಮಾಣದಲ್ಲಿ ಕೆಲಸಗಳಿರುವುದಿಲ್ಲ.
"ಈ ಪ್ರದೇಶದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಾರೆ, ಕೊರೊನಾ ಮಹಾಮಾರಿಗೂ ಮೊದಲು ವರ್ಷಗಳುದ್ದಕ್ಕೂ ವಲಸೆಗಳು ಹೆಚ್ಚುತ್ತಿದ್ದವು.” ಎಂದು ಪಕ್ಕದ ಹಳ್ಳಿಯಾದ ಧಾಬೆ-ಪಾವೊನಿಯಲ್ಲಿ ದೊಡ್ಡ ಭೂಮಾಲೀಕರು ಮತ್ತು ವನ್ಯಜೀವಿ ಸಂರಕ್ಷಣಾಕಾರಾಗಿರುವ 44 ವರ್ಷದ ಭೀಮಸೇನ್ ಡೊಂಗರ್ವಾರ್ ಹೇಳುತ್ತಾರೆ. ವಲಸೆ ಹೋಗುವವರಲ್ಲಿ ಹೆಚ್ಚಿನವರು ಭೂರಹಿತರು, ಸಣ್ಣ ಮತ್ತು ಅತಿ ಸಣ್ಣ ರೈತರು, ಉದ್ಯೋಗದ ಅನಿವಾರ್ಯತೆ ಇರುವವರು- ಮತ್ತು ಹೊರಗಡೆ ಸಿಗುವ ಉತ್ತಮ ಸಂಬಳದಿಂದ ಅವರೆಲ್ಲರೂ ಆಕರ್ಷಿತರಾಗಿದ್ದಾರೆ.
ಗಮನಾರ್ಹ ಮತ್ತು ಒಂದು ರೀತಿಯಲ್ಲಿ ಅದೃಷ್ಟವಶಾತ್ ಎನ್ನುವಂತೆ ದೂರದ ಮತ್ತು ಸಮೀಪದ ಊರುಗಳಿಂದ ಎಲ್ಲಾ ವಲಸಿಗರು ಕೊರೊನಾ ಸಾಂಕ್ರಾಮಿಕ ಅವಧಿಯಲ್ಲಿ ತಮ್ಮೂರಿಗೆ ಹಿಂದಿರುಗಿದರೂ ಸಹ, ಇಲ್ಲಿಯವರೆಗೆ ಝಶಿನಗರವು ಒಂದೇ ಒಂದು ಕೋವಿಡ್ -19 ಪ್ರಕರಣವನ್ನು ದಾಖಲಿಸದೆ ಈಗ ಹೊಸ ವರ್ಷಕ್ಕೆ ಕಾಲಿಟ್ಟಿದೆ.
“ನಾವು ಏಪ್ರಿಲ್ ಅಂತ್ಯದಿಂದ ಹೋರಾಟವಿಲ್ಲದೆ ಒಂದು ದಿನವೂ ಕಳೆದಿಲ್ಲ.” ಎಂದು ಗ್ರಾಮ ಕೋವಿಡ್ ಸಮನ್ವಯ ಸಮಿತಿಯ ಸದಸ್ಯ ವಿಕ್ಕಿ ಅರೋರಾ ಹೇಳುತ್ತಾರೆ. ಅವರು ಮಾಜಿ ಸರಪಂಚರ ಮಗ ಮತ್ತು ಸಕ್ರಿಯ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಾಗಿದ್ದಾರೆ, ಅವರು ಲಾಕ್‌ಡೌನ್ ಸಮಯದಲ್ಲಿ ಹಿಂದಿರುಗಿರುವ ವಲಸಿಗರನ್ನು ಕಡ್ಡಾಯ ಕ್ವಾರೆಂಟೈನ್ ಅವಧಿಯಲ್ಲಿ ನೋಡಿಕೊಳ್ಳಲು ಗ್ರಾಮಸ್ಥರು ಹಣವನ್ನು ಸಂಗ್ರಹಿಸಿದ್ದಾರೆ ಎಂದು ಅವರು ನಮಗೆ ಹೇಳುತ್ತಾರೆ.
“ಹೊರಗಿನವರು ಯಾರೇ ಇರಲಿ ಅವರು ಅನುಮತಿಯಿಲ್ಲದೆ ಊರಿಗೆ ಪ್ರವೇಶಿಸದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ. ಗ್ರಾಮವು ವಲಸಿಗರ ಆಹಾರ ಮತ್ತು ಇತರ ಅವಶ್ಯಕತೆಗಳನ್ನು ನೋಡಿಕೊಂಡಿದೆ, ಅವರು ಉಳಿದುಕೊಳ್ಳುವ ವ್ಯವಸ್ಥೆಗಳು ಮತ್ತು ಅವರ ಆರೋಗ್ಯ ತಪಾಸಣೆ ಮತ್ತು ಕೋವಿಡ್ ಪರೀಕ್ಷೆಗಳು ಹೀಗೆ ಎಲ್ಲವನ್ನು ನಿಭಾಯಿಸಿದೆ. ಆದರೆ ಇದಕ್ಕೆ ಸರ್ಕಾರದಿಂದ ನಮಗೆ ಒಂದೇ ಒಂದು ರೂಪಾಯಿ ಕೂಡ ನೆರವು ಸಿಕ್ಕಿಲ್ಲ.” ಎಂದು ಅರೋರಾ ನಮಗೆ ಹೇಳುತ್ತಾರೆ.
ಅವರು ಸಂಗ್ರಹಿಸಿದ ನಿಧಿಯಿಂದ ಐಸೋಲೇಶನ್ ಕೇಂದ್ರಗಳಿಗಾಗಿ ಗ್ರಾಮಸ್ಥರು ಸ್ಯಾನಿಟೈಸರ್‌ಗಳು, ಸೋಪ್‌ಗಳು, ಟೇಬಲ್ ಫ್ಯಾನ್‌ಗಳು, ಹಾಸಿಗೆ ಮತ್ತು ಇತರ ವಸ್ತುಗಳನ್ನು ಹಿಂದಿರುಗಿದವರಿಗಾಗಿ ಖರೀದಿಸಿದರು.
ಝಶಿನಗರಕ್ಕೆ ನಾವು ಸೆಪ್ಟೆಂಬರ್ ನಲ್ಲಿ ನೀಡಿದ ಭೇಟಿಯ ಸಂದರ್ಭದಲ್ಲಿ, ಗೋವಾದಿಂದ ಮನೆಗೆ ಹಿಂದಿರುಗಿದ ನಾಲ್ಕು ಯುವ ವಲಸಿಗರ ತಂಡವನ್ನು ಗ್ರಾಮ ಪಂಚಾಯತ್ ಗ್ರಂಥಾಲಯದ ಹತ್ತಿರದಲ್ಲಿರುವ ಇರುವ ಬಯಲು ರಂಗಮಂದಿರದಲ್ಲಿ ಇರಿಸಲಾಯಿತು.
“ನಾವು ಮೂರು ದಿನಗಳ ಹಿಂದೆ ಹಿಂತಿರುಗಿದ್ದೇವೆ, ಈಗ ನಮ್ಮ ಪರೀಕ್ಷೆಗಳಿಗಾಗಿ ಕಾಯುತ್ತಿದ್ದೇವೆ.” ಎಂದು ಅವರಲ್ಲಿ ಒಬ್ಬರು ಉತ್ತರಿಸಿದರು.
ಪರೀಕ್ಷೆಗಳನ್ನು ಯಾರು ನಡೆಸುತ್ತಾರೆ, ಎಂದು ನಾವು ಕೇಳಿದೆವು.
“ಗೊಂಡಿಯಾ ಆರೋಗ್ಯ ಇಲಾಖೆಗೆ ತಿಳಿಸಲಾಗುತ್ತದೆ.” ಎಂದು ಅರೋರಾ ನಮಗೆ ತಿಳಿಸಿದರು. “ಗ್ರಾಮಸ್ಥರು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ ಅಥವಾ ಆರೋಗ್ಯ ಇಲಾಖೆಯು ಕೋವಿಡ್ -19 ಪರೀಕ್ಷೆಗಳನ್ನು ಮಾಡಲು ತಂಡವನ್ನು ಕಳುಹಿಸುತ್ತದೆ, ನಂತರ ಅವರು ತಮ್ಮ ಫಲಿತಾಂಶಗಳ ಆಧಾರದ ಮೇಲೆ ಮನೆಗೆ ಹೋಗಬಹುದು." ನಾಲ್ವರೂ ಮಾರ್ಗೋವ್‌ನಲ್ಲಿರುವ ಸ್ಟೀಲ್ ರೋಲಿಂಗ್ ಮಿಲ್‌ನಲ್ಲಿ ಕೆಲಸ ಮಾಡುತ್ತಾರೆ ಮತ್ತು ಈಗ ಒಂದು ವರ್ಷದ ನಂತರ ರಜೆಯ ಮೇಲೆ ಮನೆಗೆ ಮರಳಿದ್ದಾರೆ.ಲಾಕ್‌ಡೌನ್ ಸಮಯದಲ್ಲಿ, ಅವರು ತಾವು ಕೆಲಸ ಮಾಡುತ್ತಿದ್ದ ಕಾರ್ಖಾನೆ ಆವರಣದಲ್ಲಿಯೇ ವಾಸಿಸುತ್ತಿದ್ದರು.
****
ಪ್ರಸ್ತುತ, ಝಶಿನಗರವು ಕೆಲಸದ ಕೊರತೆಯಿಂದ ಹೆಣಗಾಡುತ್ತಿದೆ. ಪ್ರತಿ ದಿನ ಪಂಚಾಯಿತಿ ಸಭೆ ಸೇರುತ್ತದೆ. ಕಾಗಜನಗರದಿಂದ ಕೊರೆಟಿ ಮತ್ತು ಇತರ ವಲಸೆಗಾರರು ಹಿಂದಿರುಗಿದ ನಂತರ ಕಳೆದ ಹಲವು ತಿಂಗಳುಗಳ ನಂತರ ಕೆಲವೇ ಕೆಲವು ಕಾರ್ಮಿಕರು ಗ್ರಾಮದಿಂದ ಹೊರಗೆ ಹೋಗಿದ್ದಾರೆ ಎಂದು ಲಕ್ಷ್ಮಣ್ ಶಹಾರೆ ಹೇಳುತ್ತಾರೆ.
“ನಾವು ಕೆಲಸವನ್ನು ಸೃಷ್ಟಿಸಲು ಶ್ರಮಿಸುತ್ತಿದ್ದೇವೆ" ಎಂದು ಝಶಿನಗರದ ಗ್ರಾಮ ಸೇವಕ (ಗ್ರಾಮ ಕಾರ್ಯದರ್ಶಿ) 51 ವರ್ಷದ ಸಿದ್ಧಾರ್ಥ್ ಖಡ್ಸೆ ಹೇಳುತ್ತಾರೆ. “ಅದೃಷ್ಟವಶಾತ್, ಈ ವರ್ಷ, ಉತ್ತಮ ಮಳೆಯಾಗಿದೆ ಮತ್ತು ರೈತರು ಯೋಗ್ಯವಾದ ಫಸಲನ್ನು ಕಟಾವ್ ಮಾಡಿದ್ದಾರೆ” (ಆದರೂ, ಅನೇಕರಿಗೆ, ಕೀಟಗಳ ದಾಳಿಯಿಂದಾಗಿ ಯಶಸ್ವಿ ಖಾರಿಫ್ ಇಳುವರಿ ಹಾಳಾಗಿದೆ).ಆದರೆ ಗ್ರಾಮ ಪಂಚಾಯತಿಯು ಈಗ ಕೆಲಸವನ್ನು ಸೃಷ್ಟಿಸಬೇಕಾಗಿದೆ, ಒಂದು ವೇಳೆ ಹಾಗೆ ಮಾಡಿದಲ್ಲಿ, ಆಗ ಕೆಲವು ವಲಸಿಗರು ಊರಲ್ಲಿ ಉಳಿದುಕೊಂಡರೆ ಅವರಿಗೆ ಕೆಲಸವನ್ನಾದರೂ ನೀಡಬಹುದು” ಎನ್ನುತ್ತಾರೆ.
“ಶಹಾರೆ ಮತ್ತು ಕೊರೇಟಿ ಸೇರಿದಂತೆ ಕೆಲವು ಗ್ರಾಮಸ್ಥರು ಇತರ, ಸಾಮೂಹಿಕ ಆಯ್ಕೆಗಳನ್ನೆನೋ ಹುಡುಕಿದರು. ಅವರು ತಮ್ಮ ಭೂಮಿಯನ್ನು ಒಟ್ಟು 10 ಎಕರೆಗಳನ್ನು ರಾಬಿ ಬಿತ್ತನೆಗಾಗಿ ಸಂಗ್ರಹಿಸಿದರು. ಇದು ಒಂದು ರೀತಿ ಸಹಾಯವಾದರೂ ಸಹಿತ, ಗ್ರಾಮದಲ್ಲಿ ಇನ್ನೂ ಅಗತ್ಯಕ್ಕಿಂತ ಕಡಿಮೆ ಕೆಲಸವಿದೆ - ಮತ್ತು 2021 ರ ಚಳಿಗಾಲಕ್ಕೂ ಮೊದಲು ಮಾಡಿದಂತೆ ಈಗ ಆ ಸಾಹಸಕ್ಕಿಳಿಯುವುದು ನಿಜಕ್ಕೂ ಅಸಂಭವದ ಸಂಗತಿಯಾಗಿದೆ.
“ನಾನು ಈ ವರ್ಷ ಅತಿ ನಿಷ್ಕೃಷ್ಟವಾಗಿ ಬದುಕಿದರೂ ಚಿಂತೆ ಇಲ್ಲ, ಆದರೆ ಹೊರಗೆ ಮಾತ್ರ ಹೋಗುವುದಿಲ್ಲ,”ಎಂದು ಕೊರೆಟಿ ಹೇಳುತ್ತಾರೆ. ಸಾಂಕ್ರಾಮಿಕ ರೋಗದ ಭೀತಿಯು ಇನ್ನೂ ದೊಡ್ಡದಾಗಿದೆ, ಇದು ಝಶಿನಗರದಲ್ಲಿರುವ ಎಲ್ಲಾ ವಲಸಿಗರ ಭಾವನೆಯು ಹೌದು, ಅವರಲ್ಲಿ ಹೆಚ್ಚಿನವರು ಅಕ್ಟೋಬರ್ 2020ರ ವೇಳೆಗೆ ಹೊರಡಲು ಪ್ರಾರಂಭಿಸುತ್ತಾರೆ.
“ಈ ವರ್ಷವೂ ಯಾರೂ ಹೊಗುವುದಿಲ್ಲ, ನಾವು ಈಗ ನಮ್ಮಲ್ಲಿರುವ ಉಳಿತಾಯ ಮತ್ತು ಸ್ಥಳೀಯ ಕೃಷಿ ಕೆಲಸದಿಂದ ಬದುಕುತ್ತೇವೆ.” ಎಂದು ತಮ್ಮ ಕುರ್ಚಿಗೆ ಅಂಟಿಕೊಂಡೇ ಶಹಾರೆ ಘೋಷಿಸಿದರು. ಕಳೆದ ಬೇಸಿಗೆಯ ಗಾಯಗಳು ಇನ್ನೂ ನೋವುಂಟುಮಾಡುತ್ತವೆ. “ಗಿರಣಿ ಮಾಲೀಕರು ಕಾರ್ಮಿಕರನ್ನು ಮರಳಿ ಕರೆ ತರಲು ನನಗೆ ಕರೆ ಮಾಡುತ್ತಿದ್ದಾರೆ, ಆದರೆ ನಾವು ಮಾತ್ರ ಹೋಗುತ್ತಿಲ್ಲ.” ಎಂದು ಅವರು ಹೇಳುತ್ತಾರೆ.
ಅನುವಾದ: ಎನ್.ಮಂಜುನಾಥ್