ಮಂಜಿತ್ ಕೌರ್ ಎರಡೂ ಕೈಗಳಿಂದ ದನದ ಕೊಟ್ಟಿಗೆಯ ಮಣ್ಣು ಮತ್ತು ಇಟ್ಟಿಗೆ ನೆಲದಿಂದ ಎಮ್ಮೆಯ ಸಗಣಿಯನ್ನು ಹೊರತೆಗೆಯುತ್ತಾರೆ. 48 ವರ್ಷದ ಮಹಿಳೆ ಕುಳಿತು, ನೆಲಕ್ಕೆ ಅಂಟಿದ ಸಗಣಿಯನ್ನು ಕೆರೆದು ನಂತರ ತನ್ನ ತಲೆಯ ಮೇಲೆ ಹೊತ್ತು ಸಾಗಿಸುವ ಬಾಲ್ಟಾ (ಟಬ್)ದಲ್ಲಿ ತುಂಬುತ್ತಾರೆ. ತನ್ನ ತಲೆಯ ಮೇಲಿನ ಹೊರೆಯನ್ನು ಜಾಗರೂಕತೆಯಿಂದ ಸಮತೋಲನಗೊಳಿಸುತ್ತಾ, ಮನೆಯ ಮರದ ಗೇಟುಗಳನ್ನು ದಾಟಿ, ಸುಮಾರು 50 ಮೀಟರ್ ದೂರದಲ್ಲಿರುವ ಸಗಣಿಯ ರಾಶಿಗೆ ನಡೆದರು. ರಾಶಿಯು ಆಕೆಯ ಎದೆಯ ಎತ್ತರಕ್ಕೆ ನಿಂತಿದೆ, ಇದು ಅವರ ತಿಂಗಳುಗಳ ಸುದೀರ್ಘ ದುಡಿಮೆಯ ಪುರಾವೆಯಾಗಿದೆ.
ಅದು ಸುಡುವ ಬಿಸಿಲಿನ ಏಪ್ರಿಲ್ ತಿಂಗಳ ಮಧ್ಯಾಹ್ನ. 30 ನಿಮಿಷಗಳಲ್ಲಿ, ಮಂಜಿತ್ ಈ ಸಣ್ಣ ತಿರುಗಾಟವನ್ನು ಎಂಟು ಬಾರಿ ಪುನರಾವರ್ತಿಸುತ್ತಾರೆ. ಅಂತಿಮವಾಗಿ, ತನ್ನ ಬರಿಗೈಗಳನ್ನು ಬಳಸಿ ಟಬ್ಬನ್ನು ನೀರಿನಿಂದ ತೊಳೆಯುತ್ತಾರೆ. ದಿನಕ್ಕೆ ಹೊರಡುವ ಮೊದಲು, ಅವರು ಅಲ್ಲಿಂದ ದಿನದ ಕೆಲಸ ಮುಗಿಸಿ ಹೊರಡುವ ಮೊದಲು ಸ್ಟೀಲ್ ಪಾತ್ರೆಯಲ್ಲಿ ತನ್ನ ಮೊಮ್ಮಗನಿಗಾಗಿ ಎಮ್ಮೆಯ ಹಾಲನ್ನು ಪಡೆದುಕೊಳ್ಳುತ್ತಾರೆ.
ಪಂಜಾಬಿನ ತರ್ನ್ ತರಣ್ ಜಿಲ್ಲೆಯ ಹವೇಲಿಂಯಾ ಎಂಬ ಹಳ್ಳಿಯಲ್ಲಿ ಪ್ರಬಲ ಜಾತಿಯ ಭೂಮಾಲೀಕರಾದ ಜಾಟ್ ಸಿಖ್ಖರ ಒಡೆತನದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಅವರು ಕೆಲಸ ಮಾಡಿದ ಆರನೇ ಮನೆ ಇದಾಗಿದೆ.
"ಮಜಬೂರಿ ಹೈ" ಎಂದು ಅವರು ಹೇಳುತ್ತಾರೆ. ಅಸಹಾಯಕತೆಯು ಅವರನ್ನು ಜೀವನೋಪಾಯಕ್ಕಾಗಿ ದನದ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸಲು ಪ್ರೇರೇಪಿಸುತ್ತದೆ. ಅವರು ಒಂದು ದಿನದಲ್ಲಿ ತನ್ನ ತಲೆಯ ಮೇಲೆ ಎಷ್ಟು ಸಗಣಿಯನ್ನು ಹೊರುತ್ತಾರೆಂದು ನಿಖರವಾಗಿ ತಿಳಿದಿಲ್ಲ, ಆದರೆ "ಬಡ್ಡಾ ಸರ್ ದುಖ್ದಾ ಹೈ, ಚುಕೆ ಚುಕಿ ಭಾರ್ [ತಲೆಯ ಮೇಲೆ ಅಷ್ಟೊಂದು ಭಾರವನ್ನು ಹೊರುವುದರಿಂದ ನನ್ನ ತಲೆ ತುಂಬಾ ನೋಯುತ್ತದೆ]" ಎಂದು ಹೇಳುತ್ತಾರೆ.
ಅವರು ಮನೆಗೆ ನಡೆದು ಹೋಗುವ ದಾರಿಯಲ್ಲಿ, ಬಂಗಾರ ಹಳದಿ ಬಣ್ಣದ ಗೋಧಿ ಹೊಲಗಳು ದಿಗಂತದವರೆಗೆ ವಿಸ್ತರಿಸಿವೆ. ಪಂಜಾಬಿನಲ್ಲಿ ಸುಗ್ಗಿಯ ಋತುವಿನ ಪ್ರಾರಂಭವನ್ನು ಸೂಚಿಸುವ ಏಪ್ರಿಲ್ ನಲ್ಲಿ ನಡೆಯುವ ಬೈಸಾಖಿ ಹಬ್ಬದ ನಂತರ ಅವುಗಳನ್ನು ಶೀಘ್ರದಲ್ಲೇ ಕಟಾವು ಮಾಡಲಾಗುತ್ತದೆ. ಹವೇಲಿಂಯಾದ ಜಾಟ್ ಸಿಖ್ಖರು ಗಂಡಿವಿಂಡ್ ಬ್ಲಾಕ್ನಲ್ಲಿ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿದ್ದಾರೆ, ಮುಖ್ಯವಾಗಿ ಅಕ್ಕಿ ಮತ್ತು ಗೋಧಿಯನ್ನು ಉತ್ಪಾದಿಸುತ್ತಾರೆ.
ಆದಾಗ್ಯೂ, ಮಂಜಿತ್ ಗೆ, ಮಧ್ಯಾಹ್ನದ ಊಟಕ್ಕೆ ತಣಿದ ಚಪಾತಿ ಮತ್ತು ಚಹಾ ಮಾತ್ರ, ನಂತರ ಒಂದು ಗಂಟೆ ವಿಶ್ರಾಂತಿ ಪಡೆದರು. ಅವರಿಗೆ ಈಗ ಬಾಯಾರಿಕೆಯಾಗಿದೆ. "ಈ ಬಿಸಿಲಿನಲ್ಲಿಯೂ ಅವರು ನೀರನ್ನು ನೀಡುವುದಿಲ್ಲ", ಎಂದು ಮಂಜಿತ್ ತನ್ನ ಮೇಲ್ಜಾತಿಯ ಉದ್ಯೋಗದಾತರ ಬಗ್ಗೆ ಹೇಳುತ್ತಾರೆ.
ಮಂಜಿತ್ ಮಜಾಬಿ ಸಿಖ್ ದಲಿತ ಸಮುದಾಯಕ್ಕೆ ಸೇರಿದವರು. ಸುಮಾರು ಎರಡು ದಶಕಗಳ ಹಿಂದೆ, ಅವರು ಮತ್ತು ಅವರ ಕುಟುಂಬವು ಕ್ರಿಶ್ಚಿಯನ್ ಧರ್ಮವನ್ನು ಅಭ್ಯಾಸ ಮಾಡಲು ಪ್ರಾರಂಭಿಸಿತು. ಹಿಂದೂಸ್ತಾನ್ ಟೈಮ್ಸ್ನ 2019ರ ವರದಿಯ ಪ್ರಕಾರ , ಹವೇಲಿಂಯಾ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದ ಸಮುದಾಯಗಳನ್ನು ಒಳಗೊಂಡಿದ್ದಾರೆ, ಅವರು ಕೃಷಿ ಅಥವಾ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಉಳಿದವರು ಜಾಟ್ ಸಿಖ್. ಪಾಕಿಸ್ತಾನದೊಂದಿಗಿನ ಗಡಿಯು ಕೇವಲ 200 ಮೀಟರ್ ದೂರದಲ್ಲಿರುವ ಕಾನ್ಸರ್ಟಿನಾ ಬೇಲಿಯ ಆಚೆಗೆ ಸುಮಾರು 150 ಎಕರೆ ಜಾಟ್ ಸಿಖ್ಖರ ಕೃಷಿಭೂಮಿ ಇದೆ ಎಂದು ವರದಿ ತಿಳಿಸಿದೆ.
ಹವೇಲಿಂಯಾದ ದಲಿತ ಮಹಿಳೆಯರು ಒಂದೋ ಸಗಣಿಯನ್ನು ಸಂಗ್ರಹಿಸಿ ದನದ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸುತ್ತಾರೆ ಅಥವಾ ಜಾಟ್ ಸಿಖ್ ಮನೆಗಳಲ್ಲಿ ಮನೆಕೆಲಸ ಮಾಡುತ್ತಾರೆ.
"ಗರೀಬನ್ ದಾ ಸರ್ಕಾರಾ ನಹಿ ಸೋಚ್ದಿ ತಹಿ ತೇ ಗುಹಾ ಚಾಡ್ ದೇ ಹೈ ಆಸಿ [ಸರ್ಕಾರವು ಬಡವರ ಬಗ್ಗೆ ಯೋಚಿಸುವುದಿಲ್ಲ, ಅದಕ್ಕಾಗಿಯೇ ನಾವು ದನಗಳ ಸಗಣಿ ಎತ್ತಿ ಸ್ವಚ್ಛಗೊಳಿಸುತ್ತೇವೆ]" ಎಂದು ಮಂಜಿತ್ ಹೇಳುತ್ತಾರೆ.
ಕೆಲಸಕ್ಕೆ ಪ್ರತಿಯಾಗಿ ಏನು ಪಡೆಯುತ್ತಾರೆ?
"ಪ್ರತಿ ಹಸು ಅಥವಾ ಎಮ್ಮೆಗೆ, ನಾವು ಒಂದು ಮನ್ [ಅಥವಾ ಮೌಂಡ್] ಪಡೆಯುತ್ತೇವೆ; ಪ್ರತಿ ಆರು ತಿಂಗಳಿಗೊಮ್ಮೆ ಸುಮಾರು 37 ಕಿಲೋಗಳಷ್ಟು ಗೋಧಿ ಅಥವಾ ಅಕ್ಕಿಯನ್ನು ಬೆಳೆಯ ಋತುಮಾನಕ್ಕೆ ಅನುಗುಣವಾಗಿ ನೀಡಲಾಗುತ್ತದೆ" ಎಂದು ಮಂಜಿತ್ ಹೇಳುತ್ತಾರೆ.
ಮಂಜಿತ್ ಏಳು ಮನೆಗಳಲ್ಲಿ ಕೆಲಸ ಮಾಡುತ್ತಾರೆ, ಇದು ಒಟ್ಟು 50 ದಂಗರ್ಗಳನ್ನು [ಪಶುಗಳನ್ನು] ಹೊಂದಿದೆ. "ಒಂದು ಮನೆಯಲ್ಲಿ 15, ಇನ್ನೊಂದು ಮನೆಯಲ್ಲಿ ಏಳು. ಮೂರನೇ ಮನೆಯಲ್ಲಿ ಐದು ಇದೆ; ನಾಲ್ಕನೇ ಮನೆಯಲ್ಲಿ ಆರು ಇದೆ..." ಮಂಜಿತ್ ಎಣಿಸಲು ಪ್ರಾರಂಭಿಸುತ್ತಾರೆ.
15 ಪಶುಗಳನ್ನು ಹೊಂದಿರುವ ಕುಟುಂಬವನ್ನು ಹೊರತುಪಡಿಸಿ, ಉಳಿದವರೆಲ್ಲರೂ ಗೋಧಿ ಅಥವಾ ಅಕ್ಕಿಯ ಸರಿಯಾದ ಪಾಲನ್ನು ಪಾವತಿಸುತ್ತಾರೆ ಎಂದು ಅವರು ಹೇಳುತ್ತಾರೆ. "ಅವರು 15 ಪಶುಗಳಿಗೆ ಕೇವಲ 10 ಮಾನ್ [370 ಕಿಲೋ] ನೀಡುತ್ತಾರೆ" ಎಂದು ಅವರು ಹೇಳುತ್ತಾರೆ. "ನಾನು ಅವರ ಕೆಲಸವನ್ನು ಬಿಡುವ ಬಗ್ಗೆ ಯೋಚಿಸುತ್ತಿದ್ದೇನೆ."
ಏಳು ಎಮ್ಮೆಗಳನ್ನು ಹೊಂದಿರುವ ಮನೆಯಿಂದ ಮಂಜಿತ್ ತನ್ನ ಪುಟ್ಟ ಮೊಮ್ಮಗನಿಗೆ ಬಟ್ಟೆಗಳನ್ನು ಖರೀದಿಸಲು ಮತ್ತು ಮನೆಯ ಖರ್ಚುವೆಚ್ಚಗಳಿಗಾಗಿ 4,000 ರೂ.ಗಳನ್ನು ಎರವಲು ಪಡೆದಿದ್ದರು. ಅಲ್ಲಿ ಆರು ತಿಂಗಳ ಕೆಲಸವನ್ನು ಪೂರ್ಣಗೊಳಿಸಿದ ನಂತರ, ಮೇ ತಿಂಗಳಲ್ಲಿ, ಗೋಧಿಯ ಪ್ರತಿ ಕಿಲೋ ಬೆಲೆಯನ್ನು ಬಳಸಿಕೊಂಡು ಲೆಕ್ಕಹಾಕಿದ ಅವರ ಬಾಕಿಯನ್ನು ಕಳೆದು ಗೋಧಿಯ ಬಾಕಿಯನ್ನು ಕಳೆಯಲು ಅವರಿಗೆ ಗೋಧಿಯ ಬಾಕಿಯನ್ನು ಪಾವತಿಸಲಾಯಿತು.
ಏಳು ಪಶುಗಳಿಗೆ ಅವರ ಸಂಬಳ ಏಳು ಮನ್, ಸುಮಾರು 260 ಕೆ.ಜಿ.
ಭಾರತೀಯ ಆಹಾರ ನಿಗಮದ ಪ್ರಕಾರ, ಈ ವರ್ಷ ಒಂದು ಕ್ವಿಂಟಾಲ್ (100 ಕಿಲೋ) ಗೋಧಿಗೆ ಕನಿಷ್ಠ ಬೆಂಬಲ ಬೆಲೆ 2,015 ರೂ.ಗಳಾಗಿದ್ದು, ಇದರ ಪ್ರಕಾರ 260 ಕಿಲೋಗಳ ಮೌಲ್ಯ ಸುಮಾರು 5,240 ರೂ.ಗಳಾಗುತ್ತದೆ. ತನ್ನ ಸಾಲವನ್ನು ಮರುಪಾವತಿಸಿದ ನಂತರ, ಮಂಜಿತ್ ಬಳಿ 1,240 ರೂ.ಗಳ ಮೌಲ್ಯದ ಗೋಧಿ ಉಳಿಯುತ್ತದೆ.
ನಗದು ರೂಪದಲ್ಲಿ ಪಾವತಿಸಬೇಕಾದ ಬಡ್ಡಿಯೂ ಇದೆ. "ಪ್ರತಿ 100 ರೂಪಾಯಿಗಳ [ಸಾಲದ] ಮೇಲೆ, ಅವರು ತಿಂಗಳಿಗೆ 5 ರೂಪಾಯಿಗಳನ್ನು ವಿಧಿಸುತ್ತಾರೆ" ಎಂದು ಅವರು ಹೇಳುತ್ತಾರೆ. ಇದು ವಾರ್ಷಿಕ 60 ಪ್ರತಿಶತದಷ್ಟು ಬಡ್ಡಿದರವಾಗಿದೆ.
ಏಪ್ರಿಲ್ ಮಧ್ಯಭಾಗದವರೆಗೆ ಅವರು 700 ರೂ.ಗಳನ್ನು ಬಡ್ಡಿಯಾಗಿ ಪಾವತಿಸಿದ್ದರು.
ಮಂಜಿತ್ ತನ್ನ ಏಳು ಜನರ ಕುಟುಂಬದೊಂದಿಗೆ ವಾಸಿಸುತ್ತಾರೆ - 50ರ ಹರೆಯದ ಕೃಷಿ ಕಾರ್ಮಿಕ ಪತಿ, 24 ವರ್ಷದ ಮಗ, ಕೃಷಿ ಕಾರ್ಮಿಕ, ಸೊಸೆ, ಇಬ್ಬರು ಮೊಮ್ಮಕ್ಕಳು ಮತ್ತು 22 ಮತ್ತು 17 ವರ್ಷದ ಇಬ್ಬರು ಅವಿವಾಹಿತ ಹೆಣ್ಣುಮಕ್ಕಳು. ಇಬ್ಬರೂ ಹೆಣ್ಣುಮಕ್ಕಳು ಜಾಟ್ ಸಿಖ್ ಮನೆಗಳಲ್ಲಿ ಮನೆಕೆಲಸ ಮಾಡುತ್ತಾರೆ, ಪ್ರತಿಯೊಬ್ಬರೂ ತಿಂಗಳಿಗೆ 500 ರೂ. ಗಳಿಸುತ್ತಾರೆ.
ಅವರು ಇನ್ನೊಬ್ಬ ಉದ್ಯೋಗದಾತರಿಂದ ಯಾವುದೇ ಬಡ್ಡಿಯಿಲ್ಲದೆ 2,500 ರೂ.ಗಳ ಸಾಲವನ್ನು ಸಹ ತೆಗೆದುಕೊಂಡಿದ್ದಾರೆ. ಮನೆ ಖರ್ಚುಗಳನ್ನು ನಿರ್ವಹಿಸಲು ಮೇಲ್ಜಾತಿಯ ಮನೆಗಳಿಂದ ಸಣ್ಣ ಸಾಲಗಳು ಅತ್ಯಗತ್ಯ ಎಂದು ಅವರು ಹೇಳುತ್ತಾರೆ, ದಿನಸಿ ಖರೀದಿ, ವೈದ್ಯಕೀಯ ಖರ್ಚುಗಳು, ಕುಟುಂಬದ ಮದುವೆಗಳು ಅಥವಾ ಇತರ ಸಂದರ್ಭಗಳು ಮತ್ತು ಜಾನುವಾರುಗಳನ್ನು ಖರೀದಿಸಲು ಅಥವಾ ಇತರ ವೆಚ್ಚಗಳಿಗೆ ಹಣದೊಂದಿಗೆ ಮಹಿಳೆಯರಿಗೆ ಸಹಾಯ ಮಾಡುವ ಸಣ್ಣ ಉಳಿತಾಯ ಗುಂಪುಗಳಿಗೆ ಕಟ್ಟುವ ಮಾಸಿಕ ಕಂತುಗಳು ಸೇರಿವೆ.
ಮಾರ್ಚ್ 2020ರಲ್ಲಿ ಬಿಡುಗಡೆಯಾದ 'ಗ್ರಾಮೀಣ ಪಂಜಾಬಿನಲ್ಲಿ ದಲಿತ ಮಹಿಳಾ ಕಾರ್ಮಿಕರು: ಒಳನೋಟದ ಸಂಗತಿಗಳು' ಎಂಬ ಅಧ್ಯಯನದಲ್ಲಿ, ಪಟಿಯಾಲದ ಪಂಜಾಬಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಮಾಜಿ ಪ್ರೊಫೆಸರ್ ಡಾ. ಗಿಯಾನ್ ಸಿಂಗ್, ಅವರ ತಂಡವು ನಡೆಸಿದ ಸಮೀಕ್ಷೆಯ ಪ್ರಕಾರ, ಗ್ರಾಮೀಣ ಪಂಜಾಬಿನಲ್ಲಿ 96.3 ಪ್ರತಿಶತದಷ್ಟು ದಲಿತ ಮಹಿಳಾ ಕಾರ್ಮಿಕರ ಕುಟುಂಬಗಳು ಸರಾಸರಿ 54,300 ರೂ.ಗಳಿಗೂ ಹೆಚ್ಚಿನ ಸಾಲದಲ್ಲಿವೆ. ಒಟ್ಟು ಸಾಲದ ಮೊತ್ತದ ಶೇಕಡಾ 80.40 ರಷ್ಟು ಸಾಂಸ್ಥಿಕವಲ್ಲದ ಮೂಲಗಳಿಂದ ಬಂದಿದೆ.
ಹವೇಲಿಂಯಾದ ಮತ್ತೊಬ್ಬ ದಲಿತ ಮಹಿಳೆ 49 ವರ್ಷದ ಸುಖಬೀರ್ ಕೌರ್, ಅನೇಕ ವರ್ಷಗಳ ಉದ್ಯೋಗದಾತರು ವೆಯಾಜ್ (ಬಡ್ಡಿ) ವಿಧಿಸುವುದಿಲ್ಲ ಎಂದು ವಿವರಿಸುತ್ತಾರೆ; ಹೊಸ ಉದ್ಯೋಗದಾತರು ಮಾತ್ರ ಹಾಗೆ ಮಾಡುತ್ತಾರೆ.
ಮಂಜಿತ್ ಅವರ ಕುಟುಂಬದ ಸಂಬಂಧಿಯಾದ ಸುಖ್ಬೀರ್ ತನ್ನ ಎರಡು ಕೋಣೆಗಳ ಮನೆಯಲ್ಲಿ ಪಕ್ಕದಲ್ಲಿ ವಾಸಿಸುತ್ತಿದ್ದು, ಅವರ ಪತಿ ಮತ್ತು 20ರ ಹರೆಯದ ಇಬ್ಬರು ಗಂಡು ಮಕ್ಕಳೊಂದಿಗೆ, ಅವರೆಲ್ಲರೂ ಕೆಲಸ ಲಭ್ಯವಿದ್ದಾಗ ದಿನಕ್ಕೆ 300 ರೂ.ಗಳಿಗೆ ಕೃಷಿ ಕಾರ್ಮಿಕರಾಗಿ ಅಥವಾ ದಿನಗೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಸುಖಬೀರ್ ಕಳೆದ 15 ವರ್ಷಗಳಿಂದ ಜಾಟ್ ಸಿಖ್ಖರ ಮನೆಗಳಲ್ಲಿ ಸಗಣಿ ಸಂಗ್ರಹಿಸಿ ದನದ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸುತ್ತಿದ್ದಾರೆ.
ಅವರು ಅಂತಹ ಎರಡು ಮನೆಗಳಲ್ಲಿ ಕೆಲಸ ಮಾಡುತ್ತಾರೆ, ಒಟ್ಟು 10 ಪಶುಗಳಿವೆ. ಮೂರನೆಯ ಮನೆಯಲ್ಲಿ, ಅವರು ತಿಂಗಳಿಗೆ 500 ರೂ.ಗಳಿಗೆ ಮನೆಕೆಲಸ ಮಾಡುತ್ತಾರೆ. ಬೆಳಿಗ್ಗೆ 9 ಗಂಟೆಯ ಮೊದಲು ಕೆಲಸಕ್ಕೆ ಹೊರಡುತ್ತಾರೆ, ಹಿಂತಿರುಗಲು ಯಾವುದೇ ನಿಗದಿತ ಸಮಯವಿಲ್ಲ. "ಕೆಲವು ದಿನ ನಾನು ಮಧ್ಯಾಹ್ನದ ವೇಳೆಗೆ, ಕೆಲವೊಮ್ಮೆ ಮಧ್ಯಾಹ್ನ 3 ಗಂಟೆಗೆ ಹಿಂದಿರುಗಬಹುದು. ಇದು ಸಂಜೆ 6 ಗಂಟೆಯವರೆಗೆ ತಡವಾಗಬಹುದು" ಎಂದು ಸುಖ್ಬೀರ್ ಹೇಳುತ್ತಾರೆ. "ಹಿಂದಿರುಗಿದ ನಂತರ, ಆಹಾರವನ್ನು ತಯಾರಿಸಬೇಕು ಮತ್ತು ಉಳಿದ ಕೆಲಸವನ್ನು ಪೂರ್ಣಗೊಳಿಸಬೇಕು. ನಾನು ಮಲಗುವ ಹೊತ್ತಿಗೆ ರಾತ್ರಿ 10 ಗಂಟೆಯಾಗುತ್ತದೆ."
ಮಂಜಿತ್ ಸ್ವಲ್ಪ ಉತ್ತಮ ಬದುಕು ಹೊಂದಿದ್ದಾರೆ, ಸುಖ್ಬೀರ್ ಹೇಳುತ್ತಾರೆ, ಏಕೆಂದರೆ ಅವರ ಸೊಸೆ ಹೆಚ್ಚಿನ ಮನೆಕೆಲಸಗಳನ್ನು ನಿರ್ವಹಿಸುತ್ತಾರೆ.
ಮಂಜಿತ್ ಅವರಂತೆ ಸುಖ್ಬೀರ್ ಕೂಡ ತನ್ನ ಉದ್ಯೋಗದಾತರ ಸಾಲದಿಂದ ತತ್ತರಿಸುತ್ತಿದ್ದಾರೆ. ಸುಮಾರು ಐದು ವರ್ಷಗಳ ಹಿಂದೆ, ಅವರು ತಮ್ಮ ಮಗಳ ಮದುವೆಗಾಗಿ ಒಂದು ಮನೆಯಿಂದ 40,000 ರೂ.ಗಳ ಸಾಲವನ್ನು ತೆಗೆದುಕೊಂಡರು. ಪ್ರತಿ ಆರು ತಿಂಗಳಿಗೊಮ್ಮೆ ಆಕೆಗೆ ಪಾವತಿಸಲಾಗುವ ಆರು ಮಾನ್ (ಸುಮಾರು 220 ಕಿಲೋ) ಗೋಧಿ ಅಥವಾ ಅಕ್ಕಿಯಿಂದ ಅವರ ಬಾಕಿಯ ಒಂದು ಭಾಗವನ್ನು ಕಡಿತಗೊಳಿಸಿದರೂ, ಸಾಲವನ್ನು ಮರುಪಾವತಿಸಲಾಗುವುದಿಲ್ಲ.
ಪ್ರತಿ ಆರು ತಿಂಗಳಿಗೊಮ್ಮೆ ಬಾಕಿ ಇರುವ ಮೊತ್ತದ ಲೆಕ್ಕಾಚಾರವನ್ನು ಮಾಡಲಾಗುತ್ತದೆ, ಆದರೆ ಅವರು ಕುಟುಂಬದ ಕಾರ್ಯಗಳಿಗಾಗಿ ಅಥವಾ ಇತರ ತುರ್ತು ಪರಿಸ್ಥಿತಿಗಳಿಗಾಗಿ ಹೆಚ್ಚಿನ ಹಣವನ್ನು ಸಾಲ ಪಡೆಯುತ್ತಾರೆ. "ತೇ ಚಲ್ದಾ ಹಿ ರೆಹಂದಾ ಹೈ [ಇದು ಹೀಗೆಯೇ ಮುಂದುವರಿಯುತ್ತದೆ]. ಅದಕ್ಕಾಗಿಯೇ ನಾವು ಈ ಸಾಲದ ಚಕ್ರದಿಂದ ಹೊರಬರಲು ಸಾಧ್ಯವಿಲ್ಲ" ಎಂದು ಸುಖ್ಬೀರ್ ಹೇಳುತ್ತಾರೆ.
ಸಾಂದರ್ಭಿಕವಾಗಿ, ಅವರು ಸಾಲ ಪಡೆದ ಕುಟುಂಬವು ಅವರಿಗೆ ಕೆಲವು ಹೆಚ್ಚುವರಿ ಕೆಲಸವನ್ನು ಮಾಡಲು ಆದೇಶಿಸುತ್ತದೆ. "ನಾವು ಅವರಿಂದ ಸಾಲ ಪಡೆದಿರುವುದರಿಂದ, ನಾವು ಯಾವುದಕ್ಕೂ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ" ಎಂದು ಸುಖ್ಬೀರ್ ಹೇಳುತ್ತಾರೆ. "ಒಂದು ದಿನ ನಾವು ಕೆಲಸಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಅವರು ನಮ್ಮನ್ನು ನಿಂದಿಸುತ್ತಾರೆ, ಅವರ ಹಣವನ್ನು ಮರುಪಾವತಿಸಿ ಮನೆಯಲ್ಲಿ ಕುಳಿತುಕೊಳ್ಳಲು ಹೇಳುತ್ತಾರೆ."
ವಕೀಲ-ಕಾರ್ಯಕರ್ತ ಮತ್ತು 1985ರಿಂದ ಪಂಜಾಬಿನಲ್ಲಿ ಗುಲಾಮಗಿರಿ ಮತ್ತು ಜಾತಿ ತಾರತಮ್ಯವನ್ನು ತೊಡೆದುಹಾಕಲು ಶ್ರಮಿಸುತ್ತಿರುವ ದಲಿತ ದಸ್ತಾನ್ ವಿರೋಧಿ ಆಂದೋಲನದ ಅಧ್ಯಕ್ಷ ಗಗನದೀಪ್, ಈ ಕೆಲಸದಲ್ಲಿ ತೊಡಗಿರುವ ಹೆಚ್ಚಿನ ದಲಿತ ಮಹಿಳೆಯರು ಕಡಿಮೆ ವಿದ್ಯಾವಂತರಾಗಿದ್ದಾರೆ ಎಂದು ಹೇಳುತ್ತಾರೆ. "ಅವರು ಪಾವತಿಸಿದ ಧಾನ್ಯದಿಂದ ಸಾಲದ ಮೊತ್ತವನ್ನು ಕಡಿತಗೊಳಿಸುವ ಬಗ್ಗೆ ಮಾಡಿದ ಲೆಕ್ಕಾಚಾರಗಳನ್ನು ಗಮನಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ."
ಮಾಳ್ವ (ದಕ್ಷಿಣ ಪಂಜಾಬ್) ಮತ್ತು ಮಾಝಾ (ತರ್ನ್ ತರಣ್ ಇರುವ ಪಂಜಾಬಿನ ಗಡಿ ಪ್ರದೇಶಗಳು) ಪ್ರದೇಶಗಳಲ್ಲಿ ಈ ಮಹಿಳೆಯರ ಶೋಷಣೆ ಸಾಮಾನ್ಯವಾಗಿದೆ ಎಂದು ಗಗನದೀಪ್ ಹೇಳುತ್ತಾರೆ, ಅವರು ತಮ್ಮ ಮೊದಲ ಹೆಸರಿನಿಂದ ಮಾತ್ರ ಗುರುತಿಸಿಕೊಳ್ಳುತ್ತಾರೆ. "ದೋಬಾ ಪ್ರದೇಶದಲ್ಲಿ (ಪಂಜಾಬಿನ ಬಿಯಾಸ್ ಮತ್ತು ಸಟ್ಲೆಜ್ ನದಿಗಳ ನಡುವೆ ಇರುವ) ಪರಿಸ್ಥಿತಿ ಉತ್ತಮವಾಗಿದೆ, ಏಕೆಂದರೆ ಅಲ್ಲಿ ಅನೇಕರು ವಿದೇಶದಲ್ಲಿ ನೆಲೆಸಿದ್ದಾರೆ."
ಪಂಜಾಬಿ ವಿಶ್ವವಿದ್ಯಾಲಯದ ತಂಡವು ನಡೆಸಿದ ಅಧ್ಯಯನವು ಸಮೀಕ್ಷೆಗೆ ಒಳಗಾದ ದಲಿತ ಮಹಿಳಾ ಕಾರ್ಮಿಕರಲ್ಲಿ ಯಾರಿಗೂ ಕನಿಷ್ಠ ವೇತನ ಕಾಯ್ದೆ, 1948ರ ಬಗ್ಗೆ ಏನೂ ತಿಳಿದಿಲ್ಲ ಎಂದು ಹೇಳಿದೆ.
ಜಾನುವಾರು ಸಗಣಿಯನ್ನು ಸಂಗ್ರಹಿಸುವ ಮಹಿಳೆಯರಿಗೆ ಕನಿಷ್ಠ ವೇತನ ಕಾಯ್ದೆಯಡಿ ಅಧಿಸೂಚಿತ ಶೆಡ್ಯೂಲ್ ಅಡಿಯಲ್ಲಿ ಸೇರಿಸುವ ಮೂಲಕ ಕಾರ್ಮಿಕರ ಸ್ಥಾನಮಾನವನ್ನು ನೀಡಲಾಗುವುದಿಲ್ಲ ಎಂದು ಗಗನದೀಪ್ ಹೇಳುತ್ತಾರೆ. ಮನೆ ಕೆಲಸಗಾರರನ್ನು ಸರ್ಕಾರವು ಶೆಡ್ಯೂಲ್ ಅಡಿಯಲ್ಲಿ ಸೇರಿಸಿದೆಯಾದರೂ, ಮನೆಗಳ ಹೊರಗೆ ಇರುವ ದನದ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸುವ ಈ ಮಹಿಳೆಯರು ಸಹ ಪ್ರತಿ ಗಂಟೆಗೆ ಕನಿಷ್ಠ ವೇತನವನ್ನು ನೀಡಬೇಕಾಗಿದೆ, ಏಕೆಂದರೆ ಅವರು ದಿನಕ್ಕೆ ಒಂದಕ್ಕಿಂತ ಹೆಚ್ಚು ಮನೆಗಳಲ್ಲಿ ಸಗಣಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ ಮತ್ತು ಸಂಗ್ರಹಿಸುತ್ತಿದ್ದಾರೆ" ಎಂದು ಗಗನದೀಪ್ ಹೇಳುತ್ತಾರೆ.
ಸುಖಬೀರ್ ತನ್ನ ಮಗಳ ಅತ್ತೆ-ಮಾವನೊಂದಿಗೆ ಇದ್ಯಾವುದನ್ನೂ ಹಂಚಿಕೊಳ್ಳಲು ಸಾಧ್ಯವಿಲ್ಲ. "ಅವರಿಗೆ ಈ ವಿಷಯ ತಿಳಿದರೆ ಅವರು ನಮ್ಮನ್ನು ದ್ವೇಷಿಸುತ್ತಾರೆ. ತಮ್ಮ ಮಗನನ್ನು ಬಡ ಕುಟುಂಬಕ್ಕೆ ಕೊಟ್ಟೆವೆಂದು ಭಾವಿಸುತ್ತಾರೆ" ಎಂದು ಹೇಳುತ್ತಾರೆ. ಅವರ ಅಳಿಯ ಗಾರೆ ಕೆಲಸ ಮಾಡುತ್ತಾರೆ, ಆದರೆ ಅವರ ಕುಟುಂಬವು ಸುಶಿಕ್ಷಿತವಾಗಿದೆ. ಸುಖಬೀರ್ ಅವರು ಕೆಲವೊಮ್ಮೆ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ ಎಂದು ಅವರಿಗೆ ಹೇಳಿದ್ದಾರೆ.
ತನ್ನ 17ನೇ ವಯಸ್ಸಿನಲ್ಲಿ ಹೊಸ ವಧುವಾಗಿ ಹವೇಲಿಂಯಾಗೆ ಬರುವ ಮೊದಲು ಮಂಜಿತ್ ಕೆಲಸ ಮಾಡಿರಲಿಲ್ಲ, ಅಲ್ಲಿ ಹಣಕಾಸಿನ ಪರಿಸ್ಥಿತಿಗಳು ಅವರನ್ನು ಉದ್ಯೋಗ ಹುಡುಕುವಂತೆ ಒತ್ತಾಯಿಸಿದವು. ಅವರ ಹೆಣ್ಣುಮಕ್ಕಳು ಮನೆಕೆಲಸದವರಾಗಿ ದುಡಿಯುತ್ತಾರೆ, ಆದರೆ ಅವರು ಎಂದಿಗೂ ಜೀವನೋಪಾಯಕ್ಕಾಗಿ ಜಾನುವಾರುಗಳ ಸಗಣಿಯನ್ನು ಸಂಗ್ರಹಿಸುವುದಿಲ್ಲ ಎಂದು ದೃಢನಿಶ್ಚಯ ಹೊಂದಿದ್ದಾರೆ.
ಮಂಜಿತ್ ಮತ್ತು ಸುಖಬೀರ್ ಇಬ್ಬರೂ ತಮ್ಮ ಗಂಡಂದಿರು ತಮ್ಮ ಸಂಪಾದನೆಯನ್ನು ಮದ್ಯಕ್ಕಾಗಿ ಖರ್ಚು ಮಾಡುತ್ತಾರೆ ಎಂದು ಹೇಳುತ್ತಾರೆ. "ಅವರು ತಮ್ಮ ದೈನಂದಿನ ಕೂಲಿಯ 300 ರೂ.ಗಳಲ್ಲಿ 200 ರೂ.ಗಳನ್ನು ಮದ್ಯವನ್ನು ಖರೀದಿಸಲು ತೆಗೆದುಕೊಳ್ಳುತ್ತಾರೆ. ಉಳಿದ ಹಣದಲ್ಲಿ ಬದುಕು ನಡೆಸುವುದು ಕಷ್ಟವಾಗುತ್ತದೆ" ಎಂದು ಸುಖಬೀರ್ ಹೇಳುತ್ತಾರೆ. ಕೆಲಸವಿಲ್ಲದಿದ್ದಾಗ, ಅವರು ಮಹಿಳೆಯರ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಸಹ ತೆಗೆದುಕೊಳ್ಳುತ್ತಾರೆ. "ನಾವು ಅವರನ್ನು ತಡೆದರೆ, ಅವರು ನಮ್ಮನ್ನು ಹೊಡೆಯುತ್ತಾರೆ, ತಳ್ಳುತ್ತಾರೆ ಮತ್ತು ನಮ್ಮ ಮೇಲೆ ಪಾತ್ರೆಗಳನ್ನು ಎಸೆಯುತ್ತಾರೆ" ಎಂದು ಸುಖಬೀರ್ ಹೇಳುತ್ತಾರೆ.
ಪಂಜಾಬಿನಲ್ಲಿ, 18-49 ವರ್ಷ ವಯಸ್ಸಿನ ವಿವಾಹಿತ ಮಹಿಳೆಯರಲ್ಲಿ 11 ಪ್ರತಿಶತದಷ್ಟು ಮಹಿಳೆಯರು ತಮ್ಮ ಪತಿಯಿಂದ ಕೆಲವು ರೀತಿಯ ದೈಹಿಕ ಹಿಂಸೆಯನ್ನು ಅನುಭವಿಸಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2019-21 (ಎನ್ಎಫ್ಎಚ್ಎಸ್ -5) ತಿಳಿಸಿದೆ. ಸುಮಾರು 5 ಪ್ರತಿಶತದಷ್ಟು ಜನರು ತಳ್ಳಲ್ಪಟ್ಟಿದ್ದಾರೆ, ಅಲುಗಾಡಿಸಲ್ಪಟ್ಟಿದ್ದಾರೆ ಅಥವಾ ಅವರ ಮೇಲೆ ಏನನ್ನಾದರೂ ಎಸೆಯಲ್ಪಟ್ಟಿದ್ದಾರೆ ಎಂದು ವರದಿಯಾಗಿದೆ; ಶೇ.10ರಷ್ಟು ಗಂಡಂದಿರು ಕಪಾಳಮೋಕ್ಷ ಮಾಡಿದ್ದರು. ಶೇ.3ರಷ್ಟು ಜನರನ್ನು ಮುಷ್ಟಿಯಿಂದ ಅಥವಾ ಅವರಿಗೆ ನೋವನ್ನುಂಟುಮಾಡುವ ಯಾವುದಾದರೂ ವಸ್ತುವಿನಿಂದ ಚುಚ್ಚಲಾಗಿತ್ತು, ಮತ್ತು ಅದೇ ಪ್ರತಿಶತದಷ್ಟು ಒದೆತವನ್ನು ಕೂಡಾ ತಿಂದಿದ್ದಾರೆ, ಎಳೆದಾಡುವದು ಅಥವಾ ಥಳಿಸುವುದು ಕೂಡಾ ನಡೆಯುತ್ತದೆ. ಮತ್ತು 38 ಪ್ರತಿಶತದಷ್ಟು ಮಹಿಳೆಯರು ತಮ್ಮ ಗಂಡಂದಿರು ಆಗಾಗ್ಗೆ ಮದ್ಯವನ್ನು ಸೇವಿಸುತ್ತಾರೆ ಎಂದು ವರದಿ ಮಾಡಿದ್ದಾರೆ.
15 ಮತ್ತು 12 ವರ್ಷದ ಮಗ ಮತ್ತು ಮಗಳು ಮತ್ತು 60ರ ಹರೆಯದ ಮಾವನೊಂದಿಗೆ ಒಂದೇ ನೆರೆಹೊರೆಯಲ್ಲಿ ವಾಸಿಸುವ ದಲಿತ ಮಜಾಬಿ ಸಿಖ್ 35 ವರ್ಷದ ಸುಖ್ವಿಂದರ್ ಕೌರ್, ತಾನು ಚಿಕ್ಕವರಿದ್ದಾಗ ಸಗಣಿ ಸಂಗ್ರಹಿಸುವ ಕೆಲಸವನ್ನು ಮಾಡುತ್ತೇನೆ ಎಂದು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳುತ್ತಾರೆ. ಆದಾಗ್ಯೂ, ತನ್ನ ಮಗನ ಜನನದ ನಂತರ, ಅವರ ಅತ್ತೆ (ಐದು ವರ್ಷಗಳ ಹಿಂದೆ ನಿಧನರಾದರು) ತನ್ನ ಪತಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೂ ಸಹ, ಕುಟುಂಬದ ಖರ್ಚುವೆಚ್ಚಗಳನ್ನು ಸ್ವತಃ ನಿರ್ವಹಿಸಲು ಕೆಲಸ ಮಾಡಲು ಪ್ರಾರಂಭಿಸಲು ಅವರಿಗೆ ಹೇಳಿದರು.
ಮದುವೆಯಾದ ಐದು ವರ್ಷಗಳ ನಂತರ, ಅವರು ಸಗಣಿಯನ್ನು ಸಂಗ್ರಹಿಸಲು ಮತ್ತು ದನದ ಕೊಟ್ಟಿಗೆಗಳನ್ನು ಸ್ವಚ್ಛಗೊಳಿಸಲು ಮತ್ತು ಮೇಲ್ಜಾತಿಯ ಮನೆಗಳಲ್ಲಿ ನೆಲವನ್ನು ಸ್ವಚ್ಛಗೊಳಿಸಲು ಮತ್ತು ಒರೆಸಲು ಪ್ರಾರಂಭಿಸಿದರು. ಇಂದು, ಅವರು ಐದು ಮನೆಗಳಲ್ಲಿ, ಎರಡು ಮನೆಗಳಲ್ಲಿ ತಿಂಗಳಿಗೆ 500 ರೂ.ಗಳಿಗೆ ಮನೆಕೆಲಸದಾಳಾಗಿ ಕೆಲಸ ಮಾಡುತ್ತಾರೆ. ಇತರ ಮೂರು ಮನೆಗಳಲ್ಲಿ 31 ಪಶುಗಳಿವೆ, ಅವುಗಳ ಸಗಣಿಯನ್ನು ಅವರು ಸಂಗ್ರಹಿಸುತ್ತಾರೆ.
ಈ ಮೊದಲು, ಅವರು ಈ ಕೆಲಸವನ್ನು ದ್ವೇಷಿಸುತ್ತಿದ್ದರು. "ಇದು ನನ್ನ ತಲೆಯ ಮೇಲೆ ಹೊರೆಯಾಗಿತ್ತು," ಎಂದು ಅವರು ಹೇಳುತ್ತಾರೆ, ಅವರು ಒಮ್ಮೆಗೆ ಒಯ್ಯುವ 10 ಕಿಲೋ ಸಗಣಿ ಟಬ್ ಬಗ್ಗೆ. ಮತ್ತು ವಾಸನೆ ಕುರಿತು ಉದ್ಗರಿಸುತ್ತಾರೆ. "ಓ ದಿಮಾಗ್ ದಾ ಕಿಡ್ಡಾ ಮಾರ್ ಗಯಾ [ನನ್ನ ಮೆದುಳು ಗುರುತಿಸಲು ಸಾಧ್ಯವಿಲ್ಲ ಅದನ್ನು]" ಎಂದು ಅವರು ಹೇಳುತ್ತಾರೆ.
ಅಕ್ಟೋಬರ್ 2021ರಲ್ಲಿ, ಅವರ ಕೃಷಿ-ಕಾರ್ಮಿಕ ಪತಿ ಅನಾರೋಗ್ಯಕ್ಕೆ ಒಳಗಾದರು, ಅಂತಿಮವಾಗಿ ವಿಫಲವಾದ ಮೂತ್ರಪಿಂಡದಿಂದ ಬಳಲುತ್ತಿದ್ದರು. ಅವರು ಪತಿಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು ಆದರೆ ಮರುದಿನ ಬೆಳಿಗ್ಗೆ ಅವರು ನಿಧನರಾದರು. "ವೈದ್ಯಕೀಯ ವರದಿಗಳಿಂದ, ಅವರಿಗೆ ಏಡ್ಸ್ ಇರುವುದು ಕಂಡುಬಂದಿದೆ" ಎಂದು ಸುಖ್ವಿಂದರ್ ಹೇಳುತ್ತಾರೆ.
ಆಗ ಅವರು ವೈದ್ಯಕೀಯ ಪರೀಕ್ಷೆಗಳಿಗಾಗಿ ಉದ್ಯೋಗದಾತನಿಂದ 5,000 ರೂ.ಗಳ ಸಾಲವನ್ನು ಪಡೆದರು. ಅಂತ್ಯಸಂಸ್ಕಾರ ಮತ್ತು ಇತರ ವಿಧಿವಿಧಾನಗಳಿಗಾಗಿ 10,000 ಮತ್ತು 5,000 ರೂ.ಗಳ ಸಾಲವನ್ನು ಪಡೆಯಲಾಯಿತು.
ತನ್ನ ಪತಿಯ ಮರಣಕ್ಕೆ ಮುಂಚಿತವಾಗಿ ಅವರು ತೆಗೆದುಕೊಂಡ ಒಂದು ಸಾಲಕ್ಕೆ ಪ್ರತಿ 100 ರೂ.ಗಳ ಮೇಲೆ ಮಾಸಿಕ 10 ರೂ.ಗಳ ಬಡ್ಡಿಯಿತ್ತು, ಇದು ವರ್ಷಕ್ಕೆ 120ರ ಬಡ್ಡಿದರವನ್ನು ಹೊಂದಿತ್ತು. ಅದೇ ಕುಟುಂಬವು ಅವರು ತಮ್ಮ ಮನೆಯಿಂದ ಆಭರಣಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದರು. "ಆದ್ದರಿಂದ ನಾನು ಅವರ ಕೆಲಸವನ್ನು ತೊರೆದು, ಅವರ ಹಣವನ್ನು ಬಡ್ಡಿಯೊಂದಿಗೆ ಮರುಪಾವತಿಸಲು ಇತರರಿಂದ 15,000 ರೂ.ಗಳ ಮತ್ತೊಂದು ಸಾಲವನ್ನು ತೆಗೆದುಕೊಂಡೆ. ಕೊನೆಗೆ ಕಳೆದುಹೋದ ಆಭರಣ ಅವರ ಮನೆಯಲ್ಲೇ ಇತ್ತು" ಎಂದು ಸುಖ್ವಿಂದರ್ ಹೇಳುತ್ತಾರೆ.
ಅವರು ಇನ್ನೂ 15,000 ರೂ.ಗಳನ್ನು ಮರುಪಾವತಿಸಬೇಕಾಗಿದೆ.
ದಲಿತ್ ದಸ್ತಾನ್ ವಿರೋಧಿ ಆಂದೋಲನದ ಜಿಲ್ಲಾ ಅಧ್ಯಕ್ಷ ರಂಜಿತ್ ಸಿಂಗ್, ತಾರ್ನ್ ತರಣ್, ಹೆಚ್ಚಿನ ಬಡ್ಡಿದರಗಳು ಈ ಮಹಿಳೆಯರ ಸಾಲವನ್ನು ಎಂದಿಗೂ ಪೂರ್ಣವಾಗಿ ಮರುಪಾವತಿಸದಂತೆ ನೋಡಿಕೊಳ್ಳುತ್ತದೆ ಎಂದು ಹೇಳುತ್ತಾರೆ. "ಬಡ್ಡಿಯ ಮೊತ್ತವು ಎಷ್ಟು ಹೆಚ್ಚಾಗಿರುತ್ತದೆಯೆಂದರೆ, ಒಬ್ಬ ಮಹಿಳೆ ತನ್ನ ಸಾಲವನ್ನು ತೀರಿಸಲು ಸಾಧ್ಯವಾಗುವುದಿಲ್ಲ. ಅಂತಿಮವಾಗಿ, ಅವಳನ್ನು ಬಂದೂವಾ ಮಜ್ದೂರಿ (ಜೀತದಾಳು) ಕಡೆಗೆ ತಳ್ಳಲಾಗುತ್ತದೆ" ಎಂದು ಅವರು ಹೇಳುತ್ತಾರೆ. ಉದಾಹರಣೆಗೆ, ಸುಖ್ವಿಂದರ್ 10,000 ರೂ.ಗಳ ಸಾಲದ ಮೇಲೆ ತಿಂಗಳಿಗೆ 1,000 ರೂ.ಗಳನ್ನು ಬಡ್ಡಿಯಾಗಿ ಪಾವತಿಸುತ್ತಿದ್ದಾರೆ.
ನಲವತ್ತೈದು ವರ್ಷಗಳ ಹಿಂದೆ, ಭಾರತವು 1976ರ ಜೀತ ಕಾರ್ಮಿಕ ಪದ್ಧತಿ (ನಿರ್ಮೂಲನೆ) ಕಾಯ್ದೆಯನ್ನು ಜಾರಿಗೆ ತಂದಿತು. ಈ ಕಾಯ್ದೆಯಡಿ ಯಾವುದೇ ಉಲ್ಲಂಘನೆಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 2,000 ರೂ. ದಂಡ ವಿಧಿಸಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ, 1989ರ ಅಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯು ಜೀತದಾಳುಗಳಾಗಿ ಕೆಲಸ ಮಾಡಲು ಬಲವಂತಪಡಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗಿದೆ.
ರಂಜಿತ್ ಅವರ ಪ್ರಕಾರ, ಜಿಲ್ಲಾಡಳಿತವು ಈ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸಲು ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ.
"ಅವರು [ಅವರ ಪತಿ] ಜೀವಂತವಾಗಿದ್ದರೆ ಮನೆಯನ್ನು ನಡೆಸುವುದು ಸುಲಭವಾಗುತ್ತಿತ್ತು" ಎಂದು ಸುಖ್ವಿಂದರ್ ತನ್ನ ಅಸಹಾಯಕತೆಯ ಬಗ್ಗೆ ಪ್ರತಿಕ್ರಿಯಿಸುತ್ತಾ ಹೇಳುತ್ತಾರೆ. "ನಮ್ಮ ಜೀವನವು ಸಾಲಗಳನ್ನು ತೆಗೆದುಕೊಳ್ಳುವುದು ಮತ್ತು ಅವುಗಳನ್ನು ಮರುಪಾವತಿ ಮಾಡುವುದರಲ್ಲೇ ಕಳೆಯುತ್ತದೆ."
ಅನುವಾದ: ಶಂಕರ. ಎನ್. ಕೆಂಚನೂರು