"ಟ್ರ್ಯಾಕ್ಟರ್ ಅನ್ನು ಹೇಗೆ ಓಡಿಸಬೇಕು ಎಂದು ನನಗೆ ತಿಳಿದಿದೆ" ಎಂದು ಸರಬ್ಜೀತ್ ಕೌರ್ ಹೇಳುತ್ತಾರೆ. ಅವರು ಹರಿಯಾಣ-ದೆಹಲಿ ಗಡಿಯಲ್ಲಿರುವ ಪಂಜಾಬ್‌ನ ಜಸ್ರೌರ್ ಗ್ರಾಮದಿಂದ ಸುಮಾರು 480 ಕಿಲೋಮೀಟರ್ ದೂರದಲ್ಲಿರುವ ಸಿಂಘುವಿಗೆ ತನ್ನ ಕುಟುಂಬದ ಬಿಳಿ ಟ್ರಾಕ್ಟರ್ ಅನ್ನು ಓಡಿಸಿಕೊಂಡು ಸುಮಾರು ಎರಡು ತಿಂಗಳ ಹಿಂದೆ ಸಿಂಘುವಿಗೆ ಬಂದಿದ್ದರು. "ನಾನು ನನ್ನದೇ ಟ್ರಾಕ್ಟರ್ ಮೇಲೆ ಬಂದಿದ್ದೇನೆ" ಎಂದು ಅವರು ಹೇಳುತ್ತಾರೆ, ಆದರೆ ಅವರ ಗ್ರಾಮದ ಇತರರು ತಮ್ಮ ರೈತ ಸಂಘವು ವ್ಯವಸ್ಥೆ ಮಾಡಿದ್ದ ಟ್ರಾಲಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದರು.
40 ವರ್ಷದ ಸರಬ್ ಜೀತ್ ಅವರು ಜಸ್ರೌರ್ ತೊರೆಯುವ ಮೊದಲು, ಸೆಪ್ಟೆಂಬರ್ 2020ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾದ ಕೃಷಿ ಕಾನೂನುಗಳ ಕುರಿತಾಗಿ ಮಾತನಾಡುತ್ತಿದ್ದರು ಮತ್ತು ಪ್ರತಿಭಟಿಸುತ್ತಿದ್ದರು. ಅವರು ಅಮೃತಸರ ಜಿಲ್ಲೆ ಅಜ್ನಾಲಾ ತಹಸಿಲ್‌ನಲ್ಲಿರುವ ತನ್ನ 2,169 ಜನ ಸಂಖ್ಯೆಯ ತನ್ನ ಊರಿನನಲ್ಲಿ ಕಾನೂನುಗಳ ವಿರುದ್ಧ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದರು. ನಂತರ, ನವೆಂಬರ್ 25ರಂದು, ಅವರು ಜಸ್ರೌರ್ ಮತ್ತು ಸುತ್ತಮುತ್ತಲಿನ ಹಳ್ಳಿಗಳಿಂದ ಪ್ರಯಾಣಿಸುತ್ತಿದ್ದ 14 ಟ್ರಾಕ್ಟರ್-ಟ್ರಾಲಿಗಳ ಗುಂಪಿನಲ್ಲಿ ಹೊರಟರು, ಇದನ್ನು ಜಮ್ಹೂರಿ ಕಿಸಾನ್ ಸಭಾ ಆಯೋಜಿಸಿತ್ತು (ಅಖಿಲ ಭಾರತ ರೈತರ ಹೋರಾಟ ಸಮನ್ವಯ ಸಮಿತಿಯ ಅಂಗಸಂಸ್ಥೆ, ದೇಶಾದ್ಯಂತದ 200ಕ್ಕೂ ಹೆಚ್ಚು ರೈತ ಸಂಘಟನೆಗಳ ಜಂಟಿ ವೇದಿಕೆ). ಅವರು ಮುಂಜಾನೆ ಹೊರಟು ನವೆಂಬರ್ 27ರಂದು ಸಿಂಘು ತಲುಪಿದರು.
ಈಗ ಸರಬ್ಜೀತ್ ಜನವರಿ 26ರಂದು ಗಣರಾಜ್ಯೋತ್ಸವದಂದು ನಡೆಯಲಿರುವ ಅಭೂತಪೂರ್ವ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಭಾಗವಹಿಸಲು ಸಜ್ಜಾಗಿದ್ದು, ಇದು ಹರಿಯಾಣದ ಸೋನಿಪತ್ ಬಳಿಯ ಸಿಂಘುವಿನಿಂದ ಮೂರು ಕಿಲೋಮೀಟರ್ ಉತ್ತರದಲ್ಲಿರುವ ಕುಂಡಲಿ ಗಡಿಯಲ್ಲಿ ಪ್ರಾರಂಭವಾಗುತ್ತದೆ. "ನನ್ನ ಟ್ರಾಕ್ಟರಿನೊಂದಿಗೆ ನಾನು ಇದರಲ್ಲಿ ಭಾಗಿಯಾಗಲಿದ್ದೇನೆ" ಎಂದು ಅವರು ಹೇಳುತ್ತಾರೆ.
ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ 2020ರ ನವೆಂಬರ್ 26ರಿಂದ ಲಕ್ಷಾಂತರ ರೈತರು ಮತ್ತು ಹಲವಾರು ಕೃಷಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಪ್ರಮುಖ ತಾಣಗಳಲ್ಲಿ ಹರಿಯಾಣದ ಸಿಂಘು ಮತ್ತು ಟಿಕ್ರಿ ಮತ್ತು ಉತ್ತರ ಪ್ರದೇಶದ ಘಾಜಿಪುರ ಸೇರಿವೆ. "ಈ ಕಾನೂನುಗಳನ್ನು ರದ್ದುಗೊಳಿಸದಿದ್ದರೆ, ವಯಸ್ಸಾದವರು ಅಥವಾ ಯುವಕರು, ಪುರುಷರು ಅಥವಾ ಮಹಿಳೆಯರು ಯಾರೂ ಇಲ್ಲಿಂದ ಹಿಂತಿರುಗಿ ಹೋಗುವುದಿಲ್ಲ" ಎಂದು ಸರಬ್ಜೀತ್ ಹೇಳುತ್ತಾರೆ.
"ಯಾರೂ ಇಲ್ಲಿಗೆ ಬರಲು ಹೇಳಲಿಲ್ಲ. ಯಾರೂ ನನ್ನನ್ನು ಇಲ್ಲಿ 'ಹಿಡಿದಿಟ್ಟಿಲ್ಲ' ಎಂದು ಹೇಳುತ್ತಾರೆ, ಅವರು ಪ್ರತಿಭಟನಾ ಸ್ಥಳದಲ್ಲಿ ಇತರ ಜನರ ಟ್ರಾಕ್ಟರುಗಳ ಸಾಲಿನಲ್ಲಿ ತನ್ನ ಟ್ರ್ಯಾಕ್ಟರ್ ಬಳಿ ನಿಂತಿದ್ದರು. “ನನ್ನ ಟ್ರಾಕ್ಟರ್‌ನಲ್ಲಿ ಪ್ರತಿಭಟಿಸಲು ಅನೇಕ ಜನರು ಇಲ್ಲಿಗೆ ಬಂದಿದ್ದಾರೆ. ಹಾಗಾದರೆ ನಾನು ಅವರನ್ನು ಇಲ್ಲಿಗೆ ಕರೆತಂದೆ ಎಂದು ನೀವು ಹೇಳುತ್ತೀರಾ?" ಪ್ರತಿಭಟನೆಯಲ್ಲಿ ಮಹಿಳೆಯರು ಮತ್ತು ಹಿರಿಯರನ್ನು 'ಇರಿಸಿಕೊಳ್ಳಲಾಗುತ್ತಿದೆ' ಮತ್ತು ಅವರನ್ನು ಮರಳುವಂತೆ 'ಮನವೊಲಿಸಬೇಕು' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಜನವರಿ 11ರಂದು) ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿ ಹೇಳಿದರು.
"ಈ ಚಳುವಳಿಯ ನಿರಂತರತೆಗೆ ಮಹಿಳೆಯರು ಕಾರಣ" ಎಂದು ಸರಬ್ಜೀತ್ ಹೇಳುತ್ತಾರೆ. “ಅಧಿಕಾರದಲ್ಲಿರುವ ಜನರು ನಮ್ಮನ್ನು ದುರ್ಬಲರು ಎಂದು ಭಾವಿಸುತ್ತಾರೆ, ಆದರೆ ನಾವು ಈ ಚಳವಳಿಯ ಶಕ್ತಿ. ನಾವು ಮಹಿಳೆಯರು ನಮ್ಮ ಹೊಲಗಳನ್ನು ನೋಡಿಕೊಳ್ಳುತ್ತೇವೆ. ಯಾರಾದರೂ ನಮ್ಮನ್ನು ದುರ್ಬಲರೆಂದು ಹೇಗೆ ಪರಿಗಣಿಸಲು ಸಾಧ್ಯ? ನನ್ನ ಬೆಳೆಗಳ ಬಿತ್ತನೆ, ಕೊಯ್ಲು, ಒಕ್ಕಣೆ ಮತ್ತು ಸಾಗಣೆಯನ್ನು ನಾನು ಮಾಡುತ್ತೇನೆ. ನನ್ನ ಜಮೀನು ಮತ್ತು ನನ್ನ ಕುಟುಂಬ ಎರಡನ್ನೂ ನಾನು ನೋಡಿಕೊಳ್ಳುತ್ತೇನೆ.”
ಸರಬ್ಜೀತ್ ಅವರಂತೆ, ಗ್ರಾಮೀಣ ಭಾರತದ 65 ಪ್ರತಿಶತ ಮಹಿಳೆಯರು ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿ ಕೆಲಸದಲ್ಲಿ ತೊಡಗಿದ್ದಾರೆ.
ಸರಬ್ಜೀತ್ ಅವರ ಪತಿಯ ಕುಟುಂಬವು ಜಸ್ರೌರ್‌ನಲ್ಲಿ ಐದು ಎಕರೆ ಭೂಮಿಯನ್ನು ಹೊಂದಿದೆ - ಈ ಭೂಮಿ ಅವರ ಮಾವನ ಮನೆಯವರ ಹೆಸರಿನಲ್ಲಿದೆ - ಅದರಲ್ಲಿ ಅವರು ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಾರೆ. ಅವರು ತಮ್ಮ ಬೆಳೆಗಳನ್ನು ಸ್ಥಳೀಯ ಮಂಡಿಗಳಲ್ಲಿ ಮಾರಾಟ ಮಾಡುವ ಮೂಲಕ ವಾರ್ಷಿಕ 50,000-60,000 ರೂ ಆದಾಯ ಗಳಿಸುತ್ತಾರೆ. ತಾನು ಕೃಷಿಕರಾಗಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರೂ, ಸರಬ್‌ಜೀತ್ ತನ್ನ ಹೆಸರಿನಲ್ಲಿ ಯಾವುದೇ ಭೂಮಿಯನ್ನು ಹೊಂದಿಲ್ಲ - ಭಾರತದಲ್ಲಿ ಶೇಕಡಾ 2ಕ್ಕಿಂತ ಕಡಿಮೆ ಮಹಿಳೆಯರು ತಾವು ಕೆಲಸ ಮಾಡುವ ಭೂಮಿಯ ಮಾಲಕತ್ವವನ್ನು ಹೊಂದಿದ್ದಾರೆ. (ಇದನ್ನು ಮತ್ತು ಕೃಷಿ ಆರ್ಥಿಕತೆಯ ಇತರ ನ್ಯೂನತೆಗಳನ್ನು ನಿವಾರಿಸಲು, ಎಂ.ಎಸ್. ಸ್ವಾಮಿನಾಥನ್ ಪ್ರಸ್ತಾಪಿಸಿದ ಮಹಿಳಾ ರೈತರ ಅರ್ಹತಾ ಮಸೂದೆ, 2011 ಕಾನೂನಿನ ರೂಪವನ್ನು ಪಡೆದುಕೊಳ್ಳಲೇ ಇಲ್ಲ.)
ಅವರ ಪತಿ ನಿರಂಜನ್ ಸಿಂಗ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಕೆಲವು ದಿನಗಳ ಹಿಂದೆ ತಮ್ಮ ಊರಿಗೆ ತೆರಳಿದ್ದರು. ಸರಬ್ಜೀತ್ ತನ್ನ ನಾಲ್ಕು ಮಕ್ಕಳನ್ನು - ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳನ್ನು ನೆನಪಿಸಿಕೊಳ್ಳುತ್ತಾರೆ, ಆದರೆ ಅವರ ಭವಿಷ್ಯಕ್ಕಾಗಿಯೇ ತಾನು ಇಲ್ಲಿದ್ದೇನೆ ಮತ್ತು ಪ್ರತಿಭಟನೆ ಮುಗಿಯುವವರೆಗೂ ಇಲ್ಲಿಯೇ ಇರುತ್ತೇನೆ ಎಂದು ಹೇಳುತ್ತಾರೆ. “ಮಂಡಿಗಳು ಮುಚ್ಚಿದರೆ, ನಾವು ನಮ್ಮ ಭೂಮಿಯಿಂದ ಹೇಗೆ ಆದಾಯ ಗಳಿಸುತ್ತೇವೆ? ನನ್ನ ಮಕ್ಕಳು ಹೇಗೆ ವಿದ್ಯೆ ಕಲಿಯುತ್ತಾರೆ? "ರಾಜ್ಯ-ನಿಯಂತ್ರಿತ ಎಪಿಎಂಸಿ ಮಂಡಿಗಳನ್ನು ಅಪ್ರಸ್ತುತಗೊಳಿಸುವ ಕಾನೂನನ್ನು ಉಲ್ಲೇಖಿಸಿ ಅವರು ಪ್ರಶ್ನಿಸುತ್ತಾರೆ. "ನನ್ನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ನಾನು ಬಯಸುತ್ತೇನೆ" ಎಂದು ಅವರು ಹೇಳುತ್ತಾರೆ. "ಈಗಲೇ ಮಂಡಿಗಳು ಮುಚ್ಚುವುದನ್ನು ನೋಡಲು ಸಾಧ್ಯವಿಲ್ಲ, ಆದರೆ ನಿಧಾನವಾಗಿ ಮಂಡಿಗಳು ಮುಚ್ಚಲ್ಪಡುತ್ತವೆ, ನಂತರ ನಾವು ಹೇಗೆ ಮತ್ತು ಎಲ್ಲಿ ಮಾರಾಟ ಮಾಡಬೇಕು?"
ರೈತರು ಪ್ರತಿಭಟಿಸುತ್ತಿರುವ ಕಾನೂನುಗಳು ಹೀಗಿವೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಇವುಗಳನ್ನು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತರಲಾಯಿತು.
ರೈತರು ಈ ಕಾನೂನುಗಳು ತಮ್ಮ ಜೀವನೋಪಾಯಕ್ಕೆ ವಿನಾಶಕಾರಿ ಎಂದು ಹೇಳುತ್ತಾರೆ ಏಕೆಂದರೆ ಅವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ ಜಾಗವನ್ನು ಇನ್ನಷ್ಟು ವಿಸ್ತರಿಸುತ್ತವೆ ಮತ್ತು ರೈತರು ಮತ್ತು ಕೃಷಿಯ ಮೇಲೆ ಇನ್ನೂ ಹೆಚ್ಚಿನ ನಿಯಂತ್ರಣವನ್ನು ನೀಡುತ್ತವೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಸರಕಾರಿ ಖರೀದಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ಈ ಕಾನೂನುಗಳು ಕೃಷಿಕರಿಗೆ ನೀಡುವ ಬೆಂಬಲದ ಮುಖ್ಯ ರೂಪಗಳನ್ನು ಹಾನಿಗೊಳಿಸುತ್ತವೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
ಪ್ರತಿಭಟನಾ ಸ್ಥಳದಲ್ಲಿ, ಸರಬ್ಜೀತ್ ತನ್ನ ದಿನಗಳನ್ನು ಲಂಗರ್‌ಗಳಲ್ಲಿ ಅಡುಗೆ ಮಾಡುತ್ತಾ, ಬೀದಿಗಳನ್ನು ಸ್ವಚ್ಛಗೊಳಿಸುತ್ತಾ ಮತ್ತು ಬಟ್ಟೆ ಒಗೆಯುತ್ತಾ ಕಳೆಯುತ್ತಾರೆ. ಅವರ ಪಾಲಿಗೆ ಇದದೊಂದು ರೀತಿಯ ಸೇವೆಯಾಗಿದೆ. ಅವರು ತನ್ನ ಟ್ರಾಕ್ಟರ್ ಟ್ರಾಲಿಯಲ್ಲಿ ಮಲಗುತ್ತಾರೆ ಮತ್ತು ಹತ್ತಿರದ ಅಂಗಡಿಗಳಲ್ಲಿನ ಶೌಚಾಲಯಗಳನ್ನು ಬಳಸುತ್ತಾರೆ. “ಇಲ್ಲಿನ ಜನರು ತುಂಬಾ ಸಹಾಯ ನೀಡುವ ಮನೋಭಾವವನ್ನು ಹೊಂದಿದ್ದಾರೆ, ಅವರು ನಮ್ಮನ್ನು ತುಂಬಾ ನಂಬುತ್ತಾರೆ, ಅವರು ತಮ್ಮ ಅಂಗಡಿಗಳ ಕೀಲಿಗಳನ್ನು ನಮಗೆ ಹಸ್ತಾಂತರಿಸುತ್ತಾರೆ ಇದರಿಂದ ನಾವು ಯಾವಾಗ ಬೇಕಾದರೂ ಶೌಚಾಲಯವನ್ನು ಬಳಸಬಹುದಾಗಿದೆ. ನಾವು ವಿವಿಧ ಸಂಸ್ಥೆಗಳಿಂದ ಉಚಿತವಾಗಿ ವಿತರಿಸಲಾಗುತ್ತಿರುವ ಸ್ಯಾನಿಟರಿ ಪ್ಯಾಡ್ ಮತ್ತು ಔಷಧಿಗಳನ್ನು ಬಳಸಿಕೊಳ್ಳುತ್ತೇವೆ,” ಎಂದು ಅವರು ವಿವರಿಸುತ್ತಾರೆ. ಕೆಲವೊಮ್ಮೆ, ಯಾರಿಂದಲಾರೂ ಬೈಸಿಕಲ್ ಎರವಲು ಪಡೆದು ಸುತ್ತಲಿನ ಪ್ರದೇಶಗಳಲ್ಲಿ ಓಡಾಡುತ್ತಾರೆ.
"ನಾನಿಲ್ಲಿ ಬಹಳ ಸಂತೋಷವಾಗಿದ್ದೇನೆ. ನಾವೆಲ್ಲರೂ ದೊಡ್ಡ ಕುಟುಂಬದವರಂತೆ ಬದುಕುತ್ತಿದ್ದೇವೆ. ನಾವೆಲ್ಲರೂ ವಿಭಿನ್ನ ಪಿಂಡ್‌ಗಳಿಂದ [ಹಳ್ಳಿಗಳಿಂದ] ಬಂದಿದ್ದೇವೆ ಮತ್ತು ವಿವಿಧ ರೀತಿಯ ಬೆಳೆಗಳನ್ನು ಬೆಳೆಯುತ್ತೇವೆ, ಆದರೆ ಈ ಹೋರಾಟಕ್ಕಾಗಿ ಒಂದಾಗಿದ್ದೇವೆ. ಈ ಚಳುವಳಿಯಿಂದಾಗಿ ನಾನು ವಿಸ್ತೃತ ಕುಟುಂಬವನ್ನು ಗಳಿಸಿದ್ದೇನೆ. ಹಿಂದೆಂದಿಗಿಂತಲೂ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಈ ಏಕತೆ ಪಂಜಾಬ್ ಅಥವಾ ಹರಿಯಾಣಕ್ಕೆ ಸೀಮಿತವಾಗಿಲ್ಲ. ದೇಶದ ಎಲ್ಲಾ ಕಡೆಯ ರೈತರು ಇಂದು ಒಟ್ಟಾಗಿ ನಿಂತಿದ್ದಾರೆ. ಮತ್ತು ಯಾರೂ ನಮ್ಮನ್ನು ಸಂಘಟಿಸುತ್ತಿಲ್ಲ ಅಥವಾ ಮೇಲ್ವಿಚಾರಣೆ ಮಾಡುತ್ತಿಲ್ಲ. ಇಲ್ಲಿ ನಾವೆಲ್ಲರೂ ನಾಯಕರು.”
ಕೆಲವೊಮ್ಮೆ ಸರಬ್ಜೀತ್ ಚಿಕ್ಕ ಮಕ್ಕಳು ಮತ್ತು ಇತರರನ್ನು ತಮ್ಮ ಟ್ರಾಕ್ಟರಿನಲ್ಲಿ ಕುಳ್ಳಿರಿಸಿಕೊಂಡು ಅವರನ್ನು ಸುತ್ತಾಡಿಸುತ್ತಾರೆ. ಅವರು ನಾಲ್ಕು ವರ್ಷಗಳ ಹಿಂದೆ ಟ್ರ್ಯಾಕ್ಟರ್ ಓಡಿಸಲು ಕಲಿತರು. “ಇದನ್ನು ನನ್ನ ಗಂಡ ಓಡಿಸುತ್ತಿದ್ದದರು ನನಗೆ ಯಾವಾಗಲೂ ಓಡಿಸುವ ಆಸಕ್ತಿ ಇತ್ತು. ಹೀಗಾಗಿ ನಾನು ಅವರಲ್ಲಿ ಕಲಿಸುವಂತೆ ಕೇಳಿಕೊಂಡೆ.. ಮತ್ತು ಅವರು ಕಲಿಸಿದರು. ನಮ್ಮ ಊರಿನ ಜನರು ಅಥವಾ ಸುತ್ತಮುತ್ತಲಿನ ಸ್ಥಳಗಳಲ್ಲಿ ಯಾರೂ ನಾನು ಟ್ರಾಕ್ಟರ್ ಓಡಿಸುವುದನ್ನು ನೋಡಿ ಏನನ್ನೂಹೇಳಲಿಲ್ಲ.
"ಟ್ರ್ಯಾಕ್ಟರ್ ಚಾಲನೆ ಮಾಡುವಾಗ ನಾನು ಹಾರುತ್ತಿರುವಂತೆ ಭಾಸವಾಗುತ್ತದೆ" ಎಂದು ಅವರು ಹೇಳುತ್ತಾರೆ. “ಒಬ್ಬ ಮಹಿಳೆ ತನ್ನ ಹಕ್ಕುಗಳಿಗಾಗಿ ತನ್ನ ಜೀವನದುದ್ದಕ್ಕೂ ಹೋರಾಡುತ್ತಾಳೆ. ಜನರು ಇನ್ನೂ ನಮ್ಮ ಪರವಾಗಿ ಹೋರಾಡಲು ನಮಗೆ ಬೇರೊಬ್ಬರು ಬೇಕು ಎಂದು ಭಾವಿಸುತ್ತಾರೆ. ಈ ಸಮಯದಲ್ಲಿ ನಾವು ಈ ಹೋರಾಟವನ್ನು [ಸಂಪ್ರದಾಯವಾದಿ] ಸಮಾಜದೊಂದಿಗಲ್ಲ, ಆದರೆ ಸರ್ಕಾರದೊಂದಿಗೆ ಮಾಡಬೇಕಾಗಿದೆ”
ಅನುವಾದ - ಶಂಕರ ಎನ್. ಕೆಂಚನೂರು