ಗಂಗೂ ಬಾಯಿ ಚೌಹಾಣ್ ಅವರು ತಮ್ಮ ಪಾಲಿನ ನೀರು ಪಡೆಯಲು ಬೇಡಬೇಕು. “ಸರ್ಕಾರ್, ವಾಚ್ಮನ್ ಸಾಹಿಬ್! ದಮ್ಮಯ್ಯ ಸ್ವಲ್ಪ ಕುಡಿಯಲು ಸ್ವಲ್ಪ ನೀರು ಕೊಡಿ. ನಾನು ಇಲ್ಲೇ ಇರುವುದು ಸರ್.”
ಆದರೆ ಹಾಗೆ ಬೇಡಿಕೊಳ್ಳುವುದಷ್ಟೇ ಸಾಕಾಗುವುದಿಲ್ಲ. ಅವರು “ನಾನು ಯಾವುದೇ ಕಾರಣಕ್ಕೂ ನಿಮ್ಮ ಪಾತ್ರೆ ಮುಟ್ಟುವುದಿಲ್ಲ” ಎನ್ನುವ ಭರವಸೆ ಕೊಡಬೇಕು.
ಗಂಗೂಬಾಯಿ (ಹೆಸರು ಬದಲಾಯಿಸಲಾಗಿದೆ) ನೀರಿಗಾಗಿ ಖಾಸಗಿ ಕೊಳಾಯಿಗಳು, ಟೀ ಅಂಗಡಿ, ಮತ್ತು ಮದುವೆ ಛತ್ರಗಳನ್ನು ಅವಲಂಬಿಸಿದ್ದಾರೆ. ನಾಂದೇಡ್ ನಗರದ ಗೋಕುಲನಗರ ಎನ್ನುವ ಏರಿಯಾದ ಫುಟ್ಪಾತ್ ಮೇಲೆ ʼಮನೆಯನ್ನುʼ ಹೊಂದಿರುವ ಅವರು ಅದರ ಎದುರಿಗಿರುವ ಹೋಟೆಲ್ಲಿನಂತಹ ಕಟ್ಟಡಗಳ ಕಾವಲುಗಾರರ ಬಳಿ ನೀರು ಕೊಡುವಂತೆ ಬೇಡುತ್ತಾರೆ. ಅವರು ನೀರು ಬೇಕಾದಾಗಲೆಲ್ಲ ಈ ರೀತಿ ಬೇಡಿಕೊಳ್ಳುತ್ತಾರೆ.
ಹೀಗೆ ನೀರು ಹುಡುಕುವುದು ಅವರ ಪಾಲಿಗೆ ದೈನಂದಿನ ಕೆಲಸ. ಒಂದು ಕಾಲದಲ್ಲಿ ʼಅಪರಾಧಿ ಬುಡಕಟ್ಟುಗಳʼ ಅಡಿ ಪಟ್ಟಿ ಮಾಡಲ್ಪಟ್ಟಿದ್ದ ಫಾನ್ಸೆ ಪಾರ್ಧಿ ಬುಡಕಟ್ಟಿನವರಾದ ಅವರಿಗೆ ತಮ್ಮ ಜಾತಿ ನೀರು ಹುಡುಕುವಲ್ಲಿ ದೊಡ್ಡ ತೊಡಕಾಗಿ ಪರಿಣಮಿಸಿದೆ. ವಸಾಹತುಶಾಹಿ ಕಾಲದಲ್ಲಿ ತಯಾರಿಸಲಾಗಿದ್ದ ಈ ಪಟ್ಟಿಯನ್ನು 1952ರಲ್ಲಿ ಭಾರತ ಸರ್ಕಾರ ರದ್ದುಪಡಿಸಿದೆ. ಆದರೆ ಈಗ ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಗಂಗೂಬಾಯಿಯವರಂತಹ ಮಹಿಳೆಯರು ಇಂದಿಗೂ ತಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಅವರು ತಾನು ಕಳ್ಳಿಯಲ್ಲ ಎಂದು ಜನರಿಗೆ ಮನವರಿಕೆ ಮಾಡಿದರಷ್ಟೇ ಅವರ ನೀರಿನ ಬಿಂದಿಗೆ ತುಂಬುತ್ತದೆ.
“ʼನಾವು ನೀವು ಇಲ್ಲಿಟ್ಟಿರುವ ಯಾವುದೇ ಪಾತ್ರೆ-ಪಡಗಗಳನ್ನು ಮುಟ್ಟುವುದಿಲ್ಲʼ ಎನ್ನುವ ಭರವಸೆ ಕೊಟ್ಟರೆ ಮಾತ್ರ ನೀರು ಕೊಡುತ್ತಾರೆ” ಎನ್ನುತ್ತಾರೆ ಗಂಗೂಬಾಯಿ. ಒಮ್ಮೆ ನೀರು ಹಿಡಿದುಕೊಳ್ಳಲು ಅನುಮತಿ ಸಿಕ್ಕರೆ ಗಂಗೂಬಾಯಿ ತನ್ನಿಂದ ಸಾಧ್ಯವಿರುವಷ್ಟು ನೀರನ್ನು ಸಣ್ಣ ಡಬ್ಬಿಗಳು, ಪ್ಲಾಸ್ಟಿಕ್ ಡ್ರಮ್ಮುಗಳು ಮತ್ತು ನೀರಿನ ಬಾಟಲಿಗಳಿಗೆ ತುಂಬಿಸಿಕೊಳ್ಳುತ್ತಾರೆ. ಒಮ್ಮೊಮ್ಮೆ ಅವರು ಕುಡಿಯಲು, ಅಡುಗೆಗೆ ಸೇರಿದಂತೆ ಮನೆಬಳಕೆಗೆ ಬೇಕಾಗುವಷ್ಟು ನೀರು ಪಡೆಯಲು ಕನಿಷ್ಟ ನಾಲ್ಕೈದು ಜನರ ಬಳಿ ಬೇಡಬೇಕಾಗುತ್ತಾದೆ.
















