ಮೂರು ದಶಕಗಳ ಹಿಂದೆ, ಸಂಜಯ್‌ ಯುವಕರಿದ್ದ ಸಮಯದಲ್ಲಿ ಅವರಿಗೆ ಬಿದಿರು ಕೆಲಸವನ್ನು ಕಲಿಸಲು ಯಾರೂ ಸಿದ್ಧರಿರಲಿಲ್ಲ. ಆದರೆ ಈಗ ಅಳಿವಿನಂಚಿಗೆ ಸಾಗಿರುವ ಈ ಕರಕುಶುಲತೆಯನ್ನು ಕಲಿಸುತ್ತೇನೆಂದರೆ ಕಲಿಯುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ. “ಈ ರೀತಿ ಕಾಲ ಬದಲಾಗಿರುವುದು ನಿಜಕ್ಕೂ ವಿಪರ್ಯಾಸ” ಎಂದು 50 ವರ್ಷದ ಅವರು ಹೇಳುತ್ತಾರೆ.

ತಮ್ಮ ಒಂದು ಎಕರೆ ಹೊಲದಲ್ಲಿ ಬೆಳೆಯುವ ಬಿದಿರು ಬಳಸಿಕೊಂಡು ಕಾಂಬ್ಳೆ ಮುಖ್ಯವಾಗಿ ಇರ್ಲಾ ತಯಾರಿಸುತ್ತಾರೆ. ಇದೊಂದು ಭತ್ತದ ಗದ್ದೆಯಲ್ಲಿ ಬಳಸುವ ಮಳೆಯಿಂದ ರಕ್ಷಣೆ ನೀಡುವ ಉಪಕರಣ. ಹೆಚ್ಚಾಗಿ ಇದನ್ನು ಪಶ್ಚಿಮ ಮಹಾರಾಷ್ಟ್ರದ ಈ ಪ್ರದೇಶದ ರೈತರು ಬಳಸುತ್ತಾರೆ. "ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ನಮ್ಮ ಶಾಹುವಾಡಿ ತಾಲ್ಲೂಕಿನಲ್ಲಿ ಸಾಕಷ್ಟು ಮಳೆಯಾಗುತ್ತಿದ್ದ ಕಾರಣ ಪ್ರತಿಯೊಬ್ಬ ರೈತನೂ ಹೊಲಗಳಲ್ಲಿ ಕೆಲಸ ಮಾಡುವಾಗ ಇರ್ಲಾ ಬಳಸುತ್ತಿ" ಎಂದು ಕೆರ್ಲೆ ಗ್ರಾಮದ ಈ ನಿವಾಸಿ ಹೇಳುತ್ತಾರೆ. ಜಮೀನಿನಲ್ಲಿ ಕೆಲಸ ಮಾಡುವಾಗ ಅವರು ಅದನ್ನು ಬಳಸುತ್ತಿದ್ದರು. “ಒಂದು ಇರ್ಲಾ ಕನಿಷ್ಠ ಏಳು ವರ್ಷ ಬಾಳಿಕೆ ಬರುತ್ತದೆ. ನಂತರವೂ ಅದನ್ನು ಸುಲಭವಾಗಿ ದುರಸ್ತಿ ಮಾಡಬಹುದು” ಎಂದು ಅವರು ಹೇಳುತ್ತಾರೆ.

ಆದರೆ ಈಗ ಸಂಗತಿಗಳು ಬದಲಾಗಿವೆ.

ಕೊಲ್ಹಾಪುರ ಜಿಲ್ಲೆಯಲ್ಲಿ ಜುಲೈ ಮತ್ತು ಸೆಪ್ಟೆಂಬರ್ ನಡುವೆ ಬೀಳುವ ಮಳೆಯ ಪ್ರಮಾಣದಲ್ಲಿ ಕಳೆದ 20 ವರ್ಷಗಳಲ್ಲಿ ಕಡಿಮೆಯಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ಹೇಳುತ್ತವೆ – 2003ರಲ್ಲಿ  1,308 ಮಿ.ಮೀ ಇದ್ದ ಮಳೆ ಪ್ರಮಾಣ 2023ರಲ್ಲಿ 973 ಮಿ.ಮೀಗೆ ಇಳಿದಿದೆ.

“ಮುಂದೊಂದು ದಿನ ಇಲ್ಲಿ ಮಳೆ ಕಡಿಮೆಯಾಗಿ ನನ್ನ ಕಲೆಗೆ ಅದು ಎರವಾಗಬಹುದು ಎಂದು ಯಾರು ಯೋಚಿಸಿದ್ದರು? ಎಂದು ಇರ್ಲಾ ತಯಾರಕ ಸಂಜಯ್ ಕಾಂಬ್ಳೆ ಪ್ರಶ್ನಿಸುತ್ತಾರೆ.

“ನಮ್ಮ ಮಳೆ ಅವಲಂಬಿತ ಕೃಷಿಯಾಗಿರುವ ಕಾರಣ ನಾವು ಜೂನ್‌ ತಿಂಗಳಿನಿಂದ ಸೆಪ್ಟೆಂಬರ್‌ ತನಕವಷ್ಟೇ ಕೃಷಿ ಮಾಡುತ್ತೇವೆ” ಇತ್ತೀಚಿನ ವರ್ಷಗಳಲ್ಲಿ, ಮಳೆಯ ವೈಪರೀತ್ಯವು ಹೆಚ್ಚಿನ ಗ್ರಾಮಸ್ಥರನ್ನು ಮುಂಬೈ ಮತ್ತು ಪುಣೆಯಂತಹ ನಗರಗಳಿಗೆ ವಲಸೆ ಹೋಗುವಂತೆ ಮಾಡಿದೆ, ಅಲ್ಲಿ ಅವರುಹೋಟೆಲ್ಲುಗಳಲ್ಲಿ ಕೆಲಸ ಮಾಡುತ್ತಾರೆ, ಖಾಸಗಿ ಬಸ್ ಕಂಪನಿಗಳಲ್ಲಿ ಕಂಡಕ್ಟರುಗಳಾಗಿ, ಮೇಸ್ತ್ರಿಗಳಾಗಿ, ದಿನಗೂಲಿ ಕಾರ್ಮಿಕರಾಗಿ ಮತ್ತು ಬೀದಿ ಬದಿ ವ್ಯಾಪಾರಿಗಳಾಗಿ ದುಡಿಯುತ್ತಾರೆ ಅಥವಾ ಮಹಾರಾಷ್ಟ್ರದಾದ್ಯಂತ ಹೊಲಗಳಲ್ಲಿ ದುಡಿಯುತ್ತಾರೆ.

PHOTO • Sanket Jain
PHOTO • Sanket Jain

ಎಡಕ್ಕೆ: ಮಹಾರಾಷ್ಟ್ರದ ಕೆರ್ಲೆ ಗ್ರಾಮದ ನಿವಾಸಿ ಸಂಜಯ್ ಕಾಂಬ್ಳೆ ಅವರು ಹೊಲದಲ್ಲಿ ರೈತರು ಬಳಸುವ ಇರ್ಲಾ - ಬಿದಿರಿನ ರೇನ್ ಕೋಟ್ ತಯಾರಿಸುತ್ತಾರೆ. ಬಲ: 'ಉತ್ತಮ ಗುಣಮಟ್ಟದ ಇರ್ಲಾ ತಯಾರಿಸಲು, ಉತ್ತಮ ಗುಣಮಟ್ಟದ ಬಿದಿರನ್ನು ಗುರುತಿಸುವ ಕೌಶಲವನ್ನು ಸಹ ಕರಗತ ಮಾಡಿಕೊಳ್ಳಬೇಕು' ಎಂದು ಸಂಜಯ್ ತಮ್ಮ ಹೊಲದಲ್ಲಿನ ಬಿದಿರನ್ನು ಪರಿಶೀಲಿಸುತ್ತಾ ಹೇಳುತ್ತಾರೆ

ಮಳೆಯ ಪ್ರಮಾಣ ಕಡಿಮೆಯಾಗುತ್ತಿದ್ದಂತೆ, ಉಳಿದವರು ಭತ್ತದ ಕೃಷಿಯ ಬದಲು ಕಬ್ಬನ್ನು ಬೆಳೆಯತೊಡಗಿದ್ದಾರೆ. ಕಾಂಬ್ಳೆ ಹೇಳುತ್ತಾರೆ. "ಕೊಳವೆಬಾವಿಗಳನ್ನು ಹೊಂದಿರುವ ರೈತರು ವೇಗವಾಗಿ ಕಬ್ಬಿನ ಕೃಷಿಯತ್ತ ಹೊರಳುತ್ತಿದ್ದಾರೆ, ಇದು ಬೆಳೆಯಲು ತುಂಬಾ ಸುಲಭ." ಈ ಬದಲಾವಣೆ ಸುಮಾರು ಏಳು ವರ್ಷಗಳ ಹಿಂದೆ ಪ್ರಾರಂಭವಾಯಿತು.

ಸಾಕಷ್ಟು ಮಳೆಯಾದರೆ, ಕಾಂಬ್ಳೆ ಮಳೆಗಾಲದಲ್ಲಿ ಸುಮಾರು 10 ಇರ್ಲಾಗಳನ್ನು ಮಾರಾಟ ಮಾಡಬಲ್ಲರು, ಆದರೆ 2023ರಲ್ಲಿ, ಮೂರು ಇರ್ಲಾಗಳಿಗಷ್ಟೇ ಬೇಡಿಕೆ ಬಂದಿದೆ. "ಈ ವರ್ಷ ಬಹಳ ಕಡಿಮೆ ಮಳೆಯಾಗಿದೆ. ಹೀಗಿರುವಾಗ ಯಾರು ಇರ್ಲಾ ಖರೀದಿಸುತ್ತಾರೆ?" ಅವರ ಗ್ರಾಹಕರು ಹತ್ತಿರದ ಹಳ್ಳಿಗಳಾದ ಅಂಬಾ, ಮಸ್ನೋಲಿ, ತಲವಾಡೆ ಮತ್ತು ಚಂದೋಲಿಯಿಂದ ಬರುತ್ತಾರೆ.

ಬೆಳೆ ಬದಲಾವಣೆ ಇನ್ನೊಂದು ಸಮಸ್ಯೆಯನ್ನೂ ಸೃಷ್ಟಿಸಿದೆ. “ಇರ್ಲಾ ಕಡಿಮೆ ಎತ್ತರದ ಬೆಳೆಗಳ ಹೊಲಗಳಿಗೆ ಸೂಕ್ತ. ಕಬ್ಬಿನ ಗದ್ದೆಗಳಲ್ಲಿ ಇರ್ಲಾ ಧರಿಸಿ ನಡೆಯಲು ಸಾಧ್ಯವಿಲ್ಲ. ಇರ್ಲಾದ ದೊಡ್ಡ ರಚನೆಯು ಕಬ್ಬಿನ ಗದ್ದೆಯಲ್ಲಿ ನಡೆಯದಂತೆ ತಡೆಯುತ್ತದೆ” ಎಂದು ಎಂದು ದಲಿತ ಬೌದ್ಧ ಸಂಜಯ್ ವಿವರಿಸುತ್ತಾರೆ. ಇರ್ಲಾದ ಗಾತ್ರವು ಅದನ್ನು ಧರಿಸುವ ರೈತನ ಎತ್ತರವನ್ನು ಅವಲಂಬಿಸಿರುತ್ತದೆ. "ಇದು ಒಂದು ಮಿನಿ ಮನೆಯಂತಿರುತ್ತದೆ" ಎಂದು ಅವರು ಹೇಳುತ್ತಾರೆ.

ಈಗ ಸುಲಭವಾಗಿ ಲಭ್ಯವಿರುವ ಪ್ಲಾಸ್ಟಿಕ್‌ ರೇನ್‌ ಕೋಟ್‌ಗಳು ಇರ್ಲಾವನ್ನು ಬಹುತೇಕ ಮೂಲೆಗೆ ತಳ್ಳಿವೆ. ಇಪ್ಪತ್ತು ವರ್ಷಗಳ ಹಿಂದೆ, ಕಾಂಬ್ಳೆ ಒಂದು ಇರ್ಲಾವನ್ನು 200-300 ರೂ.ಗಳಿಗೆ ಮಾರಾಟ ಮಾಡುತ್ತಿದ್ದರು, ಈಗ ಅವರು ಜೀವನ ವೆಚ್ಚವೂ ಹೆಚ್ಚಾದ ಕಾರಣ ಅದರ ಬೆಲೆಯನ್ನು 600 ರೂ.ಗೆ ಹೆಚ್ಚಿಸಿದ್ದಾರೆ.

*****

ಕಾಂಬ್ಳೆಯವರ ತಂದೆ ದಿವಂಗತ ಚಂದ್ರಪ್ಪ ಕೃಷಿಕ ಮತ್ತು ಕಾರ್ಖಾನೆಯ ಕಾರ್ಮಿಕರಾಗಿದ್ದರು. ಸಂಜಯ್ ಜನಿಸುವ ಮೊದಲು ನಿಧನರಾದ ಅವರ ಅಜ್ಜ ದಿವಂಗತ ಜ್ಯೋತಿಬಾ ಅವರು ಆ ಸಮಯದಲ್ಲಿ ತಮ್ಮ ಹಳ್ಳಿಯಲ್ಲಿ ಸಾಮಾನ್ಯ ಉದ್ಯೋಗವಾಗಿದ್ದ ಇರ್ಲಾ ತಯಾರಿಕೆಯ ಕೆಲಸವನ್ನು ಮಾಡುತ್ತಿದ್ದರು.

30 ವರ್ಷಗಳ ಹಿಂದೆ, ಈ ವಸ್ತುವಿಗೆ ಎಷ್ಟು ಬೇಡಿಕೆಯಿತ್ತು ಎಂದರೆ, ಬಿದಿರಿನ ಕೆಲಸವನ್ನು ಕಲಿಯುವುದರಿಂದ ಕೃಷಿ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಕಾಂಬ್ಳೆ ಭಾವಿಸಿದ್ದರು. "ನನಗೆ ಬೇರೆ ಆಯ್ಕೆ ಇರಲಿಲ್ಲ" ಎಂದು ಅವರು ಹೇಳುತ್ತಾರೆ. "ನನ್ನ ಕುಟುಂಬವನ್ನು ಪೋಷಿಸಲು ನಾನು ಹಣವನ್ನು ಸಂಪಾದಿಸಬೇಕಾಗಿತ್ತು."

PHOTO • Sanket Jain
PHOTO • Sanket Jain

ಬಿದಿರನ್ನು ಗುರುತಿಸಲು ಸಂಜಯ್ ಯಾವುದೇ ಮಾಪಕ ಅಥವಾ ಅಳತೆ ಟೇಪ್ ಬಳಸುವುದಿಲ್ಲ. ಪಾರ್ಲಿ (ಎಡ) ಎಂಬ ಒಂದು ರೀತಿಯ ಕುಡಗೋಲನ್ನು ಬಳಸಿ, ಅವರು ಬಿದಿರನ್ನು (ಬಲ) ಎರಡು ಸಮಾನ ಭಾಗಗಳಾಗಿ ಚುರುಕಾಗಿ ಭಾಗ ಮಾಡುತ್ತಾರೆ

PHOTO • Sanket Jain
PHOTO • Sanket Jain

ಎಡ: ಪಾರ್ಲಿಗಳು ಸಾಕಷ್ಟು ತೀಕ್ಷ್ಣವಾಗಿರುತ್ತವೆ ಮತ್ತು ಆಗಾಗ್ಗೆ ಇರ್ಲಾ ತಯಾರಕರಿಗೆ ಗಾಯವನ್ನುಂಟುಮಾಡುತ್ತವೆ. ಬಲ: ಸಂಜಯ್ ಬಿದಿರನ್ನು ಒಡೆಯುತ್ತಿದ್ದಾರೆ

ಅವರು ಕರಕುಶಲತೆಯನ್ನು ಕಲಿಯಲು ನಿರ್ಧರಿಸಿದಾಗ, ಕಾಂಬ್ಳೆ ಕೆರ್ಲೆಯ ಕಾಂಬ್ಳೆವಾಡಿ ವಾಸತ್ (ಪ್ರದೇಶ) ದಲ್ಲಿನ ಅನುಭವಿ ಇರ್ಲಾ ತಯಾರಕರ ಬಳಿಗೆ ಹೋದರು. "ನನಗೆ ಕಲಿಸುವಂತೆ ಅವರನ್ನು ಬೇಡಿಕೊಂಡೆ, ಆದರೆ ಅವರಿಗೆ ಪುರುಸೊತ್ತು ಇರಲಿಲ್ಲ. ಅವರು ಎಂದೂ ನನ್ನ ಕಡೆ ನೋಡಲಿಲ್ಲ" ಎಂದು ಕಾಂಬ್ಳೆ ನೆನಪಿಸಿಕೊಳ್ಳುತ್ತಾರೆ. ಆದರೆ ಅವರೂ ಬಿಟ್ಟುಕೊಡಲು ಸಿದ್ಧರಿಲ್ಲ, ಪ್ರತಿದಿನ ಬೆಳಿಗ್ಗೆ ಕಲಾವಿದನನ್ನು ಗಮನಿಸುತ್ತಾ ಕರಕುಶಲತೆಯನ್ನು ಸ್ವತಃ ಕಲಿಯುತ್ತಿದ್ದರು.

ಸಣ್ಣ ವೃತ್ತಾಕಾರದ ಟೋಪ್ಲಿಗಳನ್ನು (ಬುಟ್ಟಿಗಳು) ತಯಾರಿಸುವುದರೊಂದಿಗೆ ಬಿದಿರಿನೊಂದಿಗಿನ ಕಾಂಬ್ಳೆಯವರ ಮೊದಲ ಪ್ರಯೋಗ ಆರಂಭಗೊಂಡಿತು. ಅದರ ಮೂಲಭೂತ ಅಂಶಗಳನ್ನು ಅವರು ಒಂದು ವಾರದೊಳಗೆ ಕಲಿಯುವಲ್ಲಿ ಯಶಸ್ವಿಯಾದರು. ದಿನವಿಡೀ ಅವರು ಬಿದಿರಿನೊಂದಿಗೆ ಆಟವಾಡುತ್ತಿದ್ದರು, ಮರಳು-ಕಂದು ಬಣ್ಣದ ಪಟ್ಟಿಗಳನ್ನು ಸರಿಯಾಗಿ ಬರೆಯುವವರೆಗೆ ನೇಯುತ್ತಿದ್ದರು.

"ಈಗ ನನ್ನ ಹೊಲದಲ್ಲಿ ಸುಮಾರು 1,000 ಬಿದಿರಿನ ಸಸ್ಯಗಳಿವೆ" ಎಂದು ಕಾಂಬ್ಳೆ ಹೇಳುತ್ತಾರೆ. "ಅವುಗಳನ್ನು ಕರಕುಶಲ ವಸ್ತುಗಳಿಗೆ ಬಳಸಲಾಗುತ್ತದೆ ಮತ್ತು ದ್ರಾಕ್ಷಿತೋಟಗಳಿಗೆ ಸರಬರಾಜು ಮಾಡಲಾಗುತ್ತದೆ [ದ್ರಾಕ್ಷಿ ಚಪ್ಪರಕ್ಕೆ ಬಳಸಲಾಗುತ್ತದೆ]."  ಅವರು ಮಾರುಕಟ್ಟೆಯಿಂದ ಚಿವಾ (ಸ್ಥಳೀಯ ವಿಧದ ಬಿದಿರು) ಖರೀದಿಸಿದರೆ, ಸಂಜಯ್ ಪ್ರತಿ ತುಂಡಿಗೆ ಕನಿಷ್ಠ 50 ರೂ.ಗಳನ್ನು ಪಾವತಿಸಬೇಕಾಗುತ್ತದೆ.

ಇರ್ಲಾ ತಯಾರಿಸುವುದು ಶ್ರಮದಾಯಕ ಕೆಲಸ ಮತ್ತು ಸಂಜಯ್ ಅವರಿಗೆ ಅದನ್ನು ಕಲಿಯಲು ಸುಮಾರು ಒಂದು ವರ್ಷ ಬೇಕಾಯಿತು.

ಇದು ಪರಿಪೂರ್ಣ ಬಿದಿರು ಕಂಡುಹಿಡಿಯುವುದರೊಂದಿಗೆ ಪ್ರಾರಂಭವಾಗುತ್ತದೆ. ಗ್ರಾಮಸ್ಥರು ಇದಕ್ಕೆ ಚಿವಾ ಜಾತಿಯ ಮರವನ್ನು ಬಳಸಲು ಬಯಸುತ್ತಾರೆ ಏಕೆಂದರೆ ಅದು ಗಟ್ಟಿಮುಟ್ಟಾಗಿರುತ್ತದೆ ಮತ್ತು ಬಾಳಿಕೆ ಬರುತ್ತದೆ. ಕಾಂಬ್ಳೆ ತನ್ನ ಹೊಲದಲ್ಲಿನ ಸಸ್ಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ 21 ಅಡಿ ಎತ್ತರದ ಬಿದಿರನ್ನು ಆರಿಸುತ್ತಾರೆ. ಮುಂದಿನ ಐದು ನಿಮಿಷಗಳಲ್ಲಿ, ಅವರು ಅದನ್ನು ಮೇಲೆ ಕತ್ತರಿಸಿ ತನ್ನ ಭುಜದ ಮೇಲೆ ಹಾಕಿಕೊಳ್ಳುತ್ತಾರೆ.

PHOTO • Sanket Jain
PHOTO • Sanket Jain

ಇರ್ಲಾ ನೇಯ್ಗೆಗೆ ಬಳಸಲಾಗುವ ನಯವಾಗಿ ಕತ್ತರಿಸಿದ ಬಿದಿರಿನ (ಎಡ) ಪಟ್ಟಿಗಳನ್ನು ಸಮತಲವಾಗಿ (ಬಲ) ಜೋಡಿಸಲಾಗಿದೆ

PHOTO • Sanket Jain
PHOTO • Sanket Jain

ಎಡ: ಇರ್ಲಾದ ಮೂಲ ರಚನೆಯನ್ನು ರಚಿಸಲು ಬಿದಿರಿನ ಪಟ್ಟಿಗಳನ್ನು ಬಗ್ಗಿಸಲು ಸಾಕಷ್ಟು ಶಕ್ತಿ ಮತ್ತು ಸಮಯ ಬೇಕಾಗುತ್ತದೆ. ಬಲ: ಸಣ್ಣ ತಪ್ಪು ಸಹ ಕೆಲಸವನ್ನು ಪೂರ್ತಿಯಾಗಿ ಕೆಡಿಸಬಲ್ಲದು. ಹೀಗಾಗಿ ಅವರು ಅತ್ಯಂತ ಜಾಗರೂಕರಾಗಿರಬೇಕು

ಕೋಣೆ ಮತ್ತು ಅಡುಗೆಮನೆಯನ್ನು ಹೊಂದಿರುವ ತನ್ನ ಚಿರಾ (ಕೆಂಪು ಕಲ್ಲು) ಮನೆಗೆ ಹಿಂತಿರುಗುವ ಅವರು ತಾನು ಕೆಲಸ ಮಾಡುವ ಅಂಗಳದಲ್ಲಿ ಬಿದಿರನ್ನು ಇಡುತ್ತಾರೆ. ಏಕರೂಪದ ಆಕಾರದಲ್ಲಿಲ್ಲದ ಬಿದಿರಿನ ಎರಡು ತುದಿಗಳನ್ನು ಕತ್ತರಿಸಲು ಅವರು ಪಾರ್ಲಿಯನ್ನು (ಒಂದು ರೀತಿಯ ಕುಡಗೋಲು) ಬಳಸುತ್ತಾರೆ. ಮುಂದೆ, ಬಿದಿರನ್ನು ಎರಡು ಸಮಾನ ಭಾಗಗಳಾಗಿ ಸೀಳುತ್ತಾರೆ ಮತ್ತು ತನ್ನ ಪಾರ್ಲಿಯನ್ನು ಲಂಬವಾಗಿ ಬಳಸಿ ಮತ್ತೆ ಅವುಗಳನ್ನು ಸೀಳುತ್ತಾರೆ.

ಬಿದಿರಿನ ಹಸಿರು ಮಿಶ್ರಿತ ಹೊರ ಪದರವನ್ನು ಪಾರ್ಲಿಯನ್ನು ಬಳಸಿ ಸುಲಿದು ತೆಳುವಾದ ಪಟ್ಟಿಗಳನ್ನು ತಯಾರಿಸಲಾಗುತ್ತದೆ. ಅವರು ಅಂತಹ ಹಲವಾರು ಪಟ್ಟಿಗಳನ್ನು ತಯಾರಿಸಲು ಕನಿಷ್ಠ ಮೂರು ಗಂಟೆಗಳಷ್ಟು ಕೆಲಸ ಮಾಡುತ್ತಾರೆ, ನಂತರ ಅವುಗಳನ್ನು ಇರ್ಲಾ ತಯಾರಿಸಲು ನೇಯಲಾಗುತ್ತದೆ.

"ಪಟ್ಟಿಗಳ ಸಂಖ್ಯೆಯು ಇರ್ಲಾದ ಗಾತ್ರವನ್ನು ಅವಲಂಬಿಸಿರುತ್ತದೆ" ಎಂದು ಅವರು ವಿವರಿಸುತ್ತಾರೆ. ಸರಿಸುಮಾರು, ಪ್ರತಿ ಇರ್ಲಾಗೆ ತಲಾ 20 ಅಡಿ ಅಳತೆಯ ಮೂರು ಬಿದಿರಿನ ತುಂಡುಗಳು ಬೇಕಾಗುತ್ತವೆ.

ಕಾಂಬ್ಳೆ 20 ಪಟ್ಟಿಗಳನ್ನು ಸಮತಲವಾಗಿ ಜೋಡಿಸಿ, ಅವುಗಳ ನಡುವೆ ಆರು ಸೆಂಟಿಮೀಟರ್ ಅಂತರವನ್ನು ಬಿಡುತ್ತಾರೆ. ನಂತರ ಅವರು ಇನ್ನೂ ಕೆಲವು ಪಟ್ಟಿಗಳನ್ನು ಅವುಗಳ ಮೇಲೆ ಲಂಬವಾಗಿ ಇರಿಸಿ, ಚಟಾಯಿ (ಚಾಪೆ) ನೇಯ್ದಂತೆಯೇ ಅವುಗಳನ್ನು ಪರಸ್ಪರ ಜೋಡಿಸುವ ಮೂಲಕ ನೇಯ್ಗೆ ಮಾಡಲು ಪ್ರಾರಂಭಿಸುತ್ತಾರೆ.

ಈ ಪಟ್ಟಿಗಳನ್ನು ತಯಾರಿಸಲು ಅನುಭವಿ ಕುಶಲಕರ್ಮಿಗೆ ಮಾಪಕ ಅಥವಾ ಅಳತೆ ಟೇಪ್ ಅಗತ್ಯವಿಲ್ಲ, ಉಲ್ಲೇಖಕ್ಕಾಗಿ ಅವು ತನ್ನ ಅಂಗೈಗಳನ್ನು ಮಾತ್ರ ಬಳಸುತ್ತಾರೆ. "ಅಳತೆಗಳು ಎಷ್ಟು ಪರಿಪೂರ್ಣವಾಗಿರಬೇಕೆಂದರೆ, ಪಟ್ಟಿಯ ಯಾವುದೇ ಹೆಚ್ಚುವರಿ ಭಾಗ ಉಳಿಯಬಾರದು" ಎಂದು ಅವರು ಉಲ್ಲಾಸದಿಂದ ಹೇಳುತ್ತಾರೆ.

PHOTO • Sanket Jain
PHOTO • Sanket Jain

ಎಡ: ಸಂಜಯ್ ಇರ್ಲಾ ಮೂಲ ರಚನೆಯ ಸಣ್ಣ ಆವೃತ್ತಿಯನ್ನು ತೋರಿಸುತ್ತಿದ್ದಾರೆ. ಬಲ: ಒಮ್ಮೆ ಪೂರ್ಣಗೊಂಡ ನಂತರ, ಇರ್ಲಾವನ್ನು ಟಾರ್ಪಾಲಿನ್ ಶೀಟ್ ಬಳಸಿ ಮುಚ್ಚಲಾಗುತ್ತದೆ. 2023ರಲ್ಲಿ, ಈ ಪ್ರದೇಶದಲ್ಲಿ ಮಳೆಯ ಕೊರತೆಯಿಂದಾಗಿ ಸಂಜಯ್‌ ಅವರಿಗೆ ಸಾಕಷ್ಟು ಇರ್ಲಾ ತಯಾರಿಸುವಂತೆ ಬೇಡಿಕೆ ಬಂದಿಲ್ಲ

"ಈ ರಚನೆಯನ್ನು ಮಾಡಿದ ನಂತರ, ನೀವು ಬದಿಗಳಿಂದ ಅಂಚುಗಳನ್ನು ಬಗ್ಗಿಸಬೇಕು, ಇದಕ್ಕೆ ಸಾಕಷ್ಟು ಶಕ್ತಿ ಬೇಕು" ಎಂದು ಅವರು ಮಾತು ಮುಂದುವರಿಸುತ್ತಾರೆ. ರಚನೆ ಸಿದ್ಧವಾದ ನಂತರ, ಅವರು ಪಟ್ಟಿಗಳನ್ನು ಬಗ್ಗಿಸಲು ಸುಮಾರು ಒಂದು ಗಂಟೆ ಕಳೆಯುತ್ತಾರೆ, ಪ್ರತಿಯೊಂದಕ್ಕೂ ಮೇಲ್ಭಾಗದಲ್ಲಿ ಚೂಪಾದ ತುದಿಯನ್ನು ಇಡುತ್ತಾರೆ. ಇಡೀ ಪ್ರಕ್ರಿಯೆಯು ಸುಮಾರು ಎಂಟು ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಅವರು ಹೇಳುತ್ತಾರೆ.

ರಚನೆ ಪೂರ್ಣಗೊಂಡ ನಂತರ, ಇರ್ಲಾವನ್ನು ದೊಡ್ಡ ನೀಲಿ ಟಾರ್ಪಾಲಿನ್ ಶೀಟ್ ಬಳಸಿ ಮುಚ್ಚಲಾಗುತ್ತದೆ, ಅದು ನೀರು ಒಳ ಬಾರದಂತೆ ತಡೆಯುತ್ತದೆ. ಇದನ್ನು ಧರಿಸುವವರ ದೇಹಕ್ಕೆ ಪ್ಲಾಸ್ಟಿಕ್ ಹಗ್ಗವನ್ನು ಬಳಸಿ ಕಟ್ಟಿಕೊಳ್ಳಲಾಗುತ್ತದೆ. ಅದಕ್ಕಾಗಿ ಅವರು ಹಲವು ಕಡೆ ದಾರವನ್ನು ಇಡುತ್ತಾರೆ. ಕಾಂಬ್ಳೆ ಹತ್ತಿರದ ಪಟ್ಟಣಗಳಾದ ಅಂಬಾ ಮತ್ತು ಮಲ್ಕಾಪುರದಿಂದ ಟಾರ್ಪಾಲಿನ್ ಶೀಟುಗಳನ್ನು 50 ರೂ.ಗೆ ಒಂದರಂತೆ ಖರೀದಿಸುತ್ತಾರೆ.

*****

ಇರ್ಲಾಗಳನ್ನು ತಯಾರಿಸುವುದರ ಜೊತೆಗೆ, ಕಾಂಬ್ಳೆ ತನ್ನ ಭೂಮಿಯಲ್ಲಿ ಭತ್ತವನ್ನು ಸಹ ಬೆಳೆಯುತ್ತಾರೆ. ಫಸಲಿನ ಹೆಚ್ಚಿನ ಭಾಗವನ್ನು ಅವರ ಕುಟುಂಬವು ಬಳಸುತ್ತದೆ. 40ರ ದಶಕದ ಮಧ್ಯದಲ್ಲಿರುವ ಅವರ ಪತ್ನಿ, ಸ್ವಂತ ಜಮೀನಿನಲ್ಲಿ ಮತ್ತು ಇತರರ ಹೊಲಗಳಲ್ಲಿ ಕಳೆ ತೆಗೆಯುವುದು, ಭತ್ತ ಬಿತ್ತನೆ ಮತ್ತು ಕಬ್ಬನ್ನು ನೆಡಲು ಸಹಾಯ ಮಾಡುವುದು ಅಥವಾ ಬೆಳೆಗಳನ್ನು ಕೊಯ್ಲು ಮಾಡುವುದು ಮುಂತಾದ ಕೆಲಸಗಳಲ್ಲಿ ತೊಡಗುತ್ತಾರೆ.

"ಇರ್ಲಾಗಳಿಗೆ ಬೇಡಿಕೆಯಿಲ್ಲದ ಕಾರಣ ಮತ್ತು ಭತ್ತದ ಕೃಷಿಯಿಂದ ಮಾತ್ರ ಬದುಕಲು ಸಾಧ್ಯವಿಲ್ಲದ ಕಾರಣ, ನಾನು ಹೊಲಗಳಲ್ಲಿ [ಕೂಲಿ] ಕೆಲಸ ಮಾಡುತ್ತೇನೆ" ಎಂದು ಅವರು ಹೇಳುತ್ತಾರೆ. ಅವರ ಹೆಣ್ಣುಮಕ್ಕಳಾದ ಕರುಣಾ, ಕಾಂಚನ್ ಮತ್ತು ಶುಭಾಂಗಿ, ಎಲ್ಲರೂ ತಮ್ಮ 20ರ ದಶಕದ ಕೊನೆಯಲ್ಲಿದ್ದಾರೆ, ಅವರೆಲ್ಲರಿಗೂ ಮದುವೆಯಾಗಿದ್ದು ಮನೆವಾರ್ತೆ ನೋಡಿಕೊಳ್ಳುತ್ತಾರೆ. ಅವರ ಮಗ ಸ್ವಪ್ನಿಲ್ ಮುಂಬೈನಲ್ಲಿ ಓದುತ್ತಿದ್ದಾರೆ ಮತ್ತು ಅವರು ಇರ್ಲಾ ತಯಾರಿಕೆಯ ಕಲೆಯನ್ನು ಕಲಿತಿಲ್ಲ. "ಇಲ್ಲಿ ಜೀವನೋಪಾಯವಿಲ್ಲದ ಕಾರಣ ಅವನು ನಗರಕ್ಕೆ ಹೋದ" ಎಂದು ಸಂಜಯ್ ಹೇಳುತ್ತಾರೆ.

PHOTO • Sanket Jain
PHOTO • Sanket Jain

ಎಡ: ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು, ಸಂಜಯ್ ಮೀನು ಸಂಗ್ರಹಿಸಲು ಬಳಸುವ ಕರಂಡಾ ಸೇರಿದಂತೆ ಇತರ ಬಿದಿರಿನ ವಸ್ತುಗಳನ್ನು ಕೈಯಿಂದ ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ. ಬಲ: ಎಡಭಾಗದಲ್ಲಿ ಖುರುದ್ (ಕೋಳಿಗಳನ್ನು ಸಾಕಲು ಬಳಸಲಾಗುತ್ತದೆ), ಮತ್ತು ಬಲಭಾಗದಲ್ಲಿ ಸಂಜಯ್ ತಯಾರಿಸಿದ ಟೋಪ್ಲಿ (ಸಣ್ಣ ಬುಟ್ಟಿ) ಇದೆ

PHOTO • Sanket Jain
PHOTO • Sanket Jain

ಎಡ: ನೇಯ್ಗೆ ಮಾಡುವಾಗ ಸಂಜಯ್ ಅವರು ಸಮ್ಮಿತಿಯನ್ನು ಕಾಪಾಡಿಕೊಳ್ಳುತ್ತಾರೆ. ಬಲ: ಕಳೆದ ಮೂರು ದಶಕಗಳಲ್ಲಿ ಈ ಕರಕುಶಲತೆಯನ್ನು ಕಲಿಯಲು ಯಾರೂ ತಮ್ಮ ಬಳಿಗೆ ಬಂದಿಲ್ಲ ಎಂದು ಸಂಜಯ್ ಹೇಳುತ್ತಾರೆ

ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ, ಕಾಂಬ್ಳೆ ಇತರ ಬಿದಿರಿನ ವಸ್ತುಗಳ ಜೊತೆಗೆ ಕೈಯಿಂದ ಖುರುದ್ಗಳು (ಕೋಳಿ ಕವುಚಲು) ಮತ್ತು ಕರಂಡಾ (ಮೀನು ಸಾಕಣೆಗೆ) ತಯಾರಿಸುವ ಕೌಶಲವನ್ನು ಕರಗತ ಮಾಡಿಕೊಂಡಿದ್ದಾರೆ. ಅವುಗಳನ್ನು ಬೇಡಿಕೆಯ ಮೇರೆಗೆ ತಯಾರಿಸಲಾಗುತ್ತದೆ, ಮತ್ತು ಗ್ರಾಹಕರು ಅವುಗಳನ್ನು ತೆಗೆದುಕೊಳ್ಳಲು ಅವರ ಮನೆಗೆ ಬರುತ್ತಾರೆ. ಸುಮಾರು ಒಂದು ದಶಕದ ಹಿಂದೆ, ಅವರು ಟೋಪ್ಲಾ ಅಥವಾ ಕಾಂಗ್ಗಿಯನ್ನು ಸಹ ತಯಾರಿಸುತ್ತಿದ್ದರು - ಸಾಂಪ್ರದಾಯಿಕವಾಗಿ ಅಕ್ಕಿಯನ್ನು ಸಂಗ್ರಹಿಸಲು ಬಳಸುವ ಪಾತ್ರೆಗಳು. ಆದರೆ ಪತ್ರಚಾ ಡಬ್ಬಾಗಳು (ತಗಡಿನ ಪೆಟ್ಟಿಗೆಗಳು) ಸುಲಭವಾಗಿ ಲಭ್ಯವಿರುವುದರಿಂದ, ಈಗ ಅವುಗಳಿಗೆ ಬೇಡಿಕೆ ಬರುತ್ತಿಲ್ಲ. ಈಗ ಅವರು ಅವುಗಳನ್ನು ತಮ್ಮ ಸ್ವಂತ ಮನೆಯ ಬಳಕೆಗಾಗಿ ಮಾತ್ರ ತಯಾರಿಸುತ್ತಾನೆ.

" ಯಾರು ಈ ಕೌಶಲವನ್ನು ಕಲಿಯಲು ಬಯಸುತ್ತಾರೆ?" ಕಾಂಬ್ಳೆ ತಮ್ಮ ಸರಕುಗಳ ಫೋಟೋಗಳನ್ನು ನಮಗೆ ತೋರಿಸಲು ತಮ್ಮ ಫೋನ್ ಸ್ಕ್ರಾಲ್ ಮಾಡುತ್ತಾ, "ಇದಕ್ಕೆ ಯಾವುದೇ ಬೇಡಿಕೆಯಿಲ್ಲ ಮತ್ತು ಇದರಿಂದ ಸಂಪಾದನೆಯೂ ಇಲ್ಲ. ಕೆಲವೇ ವರ್ಷಗಳಲ್ಲಿ ಅದು ಕಣ್ಮರೆಯಾಗುತ್ತದೆ."

ಈ ಲೇಖನವು ಸಂಕೇತ್ ಜೈನ್ ಅವರ ಗ್ರಾಮೀಣ ಕುಶಲಕರ್ಮಿಗಳ ಕುರಿತಾದ ಸಂಶೋಧನಾ ಲೇಖನ ಸರಣಿಯ ಭಾಗವಾಗಿದೆ ಮತ್ತು ಇದಕ್ಕೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ ಸಹಾಯ ನೀಡಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Sanket Jain

Sanket Jain is a journalist based in Kolhapur, Maharashtra. He is a 2022 PARI Senior Fellow and a 2019 PARI Fellow.

Other stories by Sanket Jain
Editor : Shaoni Sarkar

Shaoni Sarkar is a freelance journalist based in Kolkata.

Other stories by Shaoni Sarkar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru