ನಾನು ಗಾಂಧಿನಗರ ಮತ್ತು ಅಳಗಾಪುರಿಗೆ ಬಂದು ತಲುಪುವ ಹೊತ್ತಿಗಾಗಲೇ ಊರು ದುಃಖದ ಕಡಲಿನಲ್ಲಿ ಮುಳುಗಿದ್ದ ಜನರಿಂದ ತುಂಬಿ ಹೋಗಿತ್ತು. ಈ ಎರಡು ದಲಿತ (ಪರಿಶಿಷ್ಟ ಜಾತಿ) ಸಮುದಾಯಕ್ಕೆ ಸೇರಿದ ಊರುಗಳನ್ನು ನಡುವೆ ಇರುವ ರಸ್ತೆ ಬೇರ್ಪಡಿಸುತ್ತಿತ್ತು. ಊರಿನ ತುಂಬಾ ಪೊಲೀಸರು ಮತ್ತು ವಾಹನಗಳ ಜಂಗುಳಿಯೂ ಇತ್ತು. ಶಿವಕಾಶಿಯಲ್ಲಿರುವ ಕನಿಷ್ಕಾ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಊರು ನೋವಿನಲ್ಲಿ ಅದ್ದಿ ತೆಗೆದಂತೆ ಕಾಣುತ್ತಿತ್ತು. ಗಾಂಧಿನಗರವೊಂದರಲ್ಲೇ ಆರು ಸಾವು ಸಂಭವಿಸಿತ್ತು ಮತ್ತು ಅವರೆಲ್ಲರೂ ದಲಿತರಾಗಿದ್ದರು.
ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಜನರು ಬೀದಿಗಳಲ್ಲಿ ನಿಂತು ಅಳುತ್ತಿದ್ದರು. ಇನ್ನೂ ಕೆಲವರು ತಮ್ಮ ಫೋನು ಹಿಡಿದು ವಿರುಧ ನಗರ ಜಿಲ್ಲೆಯ ಇತರ ಪಟ್ಟಣ ಮತ್ತು ಹಳ್ಳಿಗಳಲ್ಲಿರುವ ಜನರಿಗೆ ಮಾಹಿತಿ ನೀಡುತ್ತಿದ್ದರು.
ಸ್ವಲ್ಪ ಸಮಯದ ನಂತರ ಇದೀ ಊರು ಸ್ಮಶಾನದತ್ತ ಚಲಿಸತೊಡಗಿತು. ನಾನೂ ಅವರನ್ನು ಸೇರಿಕೊಂಡೆ. 2023ರ ಅಕ್ಟೋಬರ್ ತಿಂಗಳ 17ನೇ ತಾರೀಖಿನಂದು ನಡೆದ ಅವಘಡದಲ್ಲಿ ಮೃತರಾದ ಊರಿನ ಆರು ಕಾರ್ಮಿಕರಿಗೆ ಅಂತಿಮ ವಿದಾಯ ಸಲ್ಲಿಸಲು ಇಡೀ ಊರೇ ಒಂದಾಗಿ ಸಾಗುತ್ತಿತ್ತು. ಸುಟ್ಟ ದೇಹಗಳನ್ನು ಹೊರತೆಗೆಯುವ ಉಸ್ತುವಾರಿಯನ್ನು ಹೊತ್ತಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಮರಣೋತ್ತರ ಪರೀಕ್ಷೆಗಾಗಿ ಅವುಗಳನ್ನು ಪಡೆಯಲು ಪಟ್ಟ ಕಷ್ಟಗಳನ್ನು ವಿವರಿಸುತ್ತಿದ್ದರು.
ಕೊನೆಗೂ ರಾತ್ರಿ ಸುಮಾರು 8:30ರ ಹೊತ್ತಿಗೆ ಆರು ಆಂಬುಲೆನ್ಸ್ ವಾಹನಗಳು ಶವಾಗಾರದ ಎದುರು ಬಂದು ನಿಂತವು. ವಾಹನಗಳು ನಿಲ್ಲುತ್ತಿದ್ದಂತೆ ದುಃಖತಪ್ತ ಜನರು ಕೂಗುತ್ತಾ ವಾಹನದ ಸುತ್ತ ಜಮಾಯಿಸಿದರು. ಆ ಕ್ಷಣಕ್ಕೆ ನನಗೆ ನನ್ನ ಕೆಮೆರಾ ಹೊರತೆಗೆಯಲು ಸಾಧ್ಯವಾಗಲಿಲ್ಲ. ಆ ಹೊತ್ತಿಗೆ ನಾನು ನನ್ನ ಕರ್ತವ್ಯವನ್ನು ಮರೆತು ನಿಂತಿದ್ದೆ. ಸ್ಮಶಾನ ರಾತ್ರಿಯ ಕತ್ತಲೆಯಲ್ಲಿ ಮುಳುಗಿತ್ತು. ಅಲ್ಲಿಯೇ ಇದ್ದ ಸಣ್ಣ ಬೆಳಕಿನ ಸುತ್ತ ಹಾರುತ್ತಿದ್ದ ಗೆದ್ದಲು ಹುಳುಗಳು ನನಗೆ ಊರಿನ ಜನರಂತೆ ಕಾಣುತ್ತಿದ್ದವು…
ಶವಗಳನ್ನು ಹೊರತೆಗೆಯುತ್ತಿದ್ದಂತೆ ಜನಸಮೂಹ ಒಂದೇ ಸಲ ಹಿಂದೆ ಸರಿದಿತು - ಸುಟ್ಟ ಮಾಂಸದ ವಾಸನೆ ಸಹಿಸಲಸಾಧ್ಯವಾಗಿತ್ತು. ಕೆಲವರು ವಾಂತಿ ಮಾಡಿಕೊಂಡರು. ಶವಗಳಿಗೆ ಅವುಗಳ ಹೆಸರನ್ನು ಲೇಬಲ್ ಮಾಡಿ ನೇತು ಹಾಕಿದ್ದರಿಂದಾಗಿ ಗುರುತಿಸಲು ಸಾಧ್ಯವಾಯಿತು. ಅಲ್ಲಿದ್ದ ಜನಸಮೂಹ ದೂರ ಸರಿಯುತ್ತಿದ್ದಂತೆ, ಸ್ಮಶಾನ ಒಬ್ಬಂಟಿಯಾಗಿ ನಿಂತಿತು.






























