ಸರಿಯಾಗಿ ಮಾತನಾಡಲು ಬಾರದಿರುವುದು ಮತ್ತು ಆರೈಕೆದಾರರ ಮೇಲಿನ ಅವಲಂಬನೆಯಿಂದಾಗಿ ಮಾನಸಿಕ ಅಥವಾ ದೈಹಿಕ ಅಂಗವೈಕಲ್ಯ ಹೊಂದಿರುವ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಲೈಂಗಿಕ ಹಿಂಸಾಚಾರಕ್ಕೆ ಹೆಚ್ಚು ಒಳಗಾಗುತ್ತಾರೆ ಎಂದು ಈ ವರದಿ ಹೇಳುತ್ತದೆ. ಮಾನಸಿಕ ಅಂಗವೈಕಲ್ಯದೊಂದಿಗೆ ಬದುಕುತ್ತಿರುವ 21 ವರ್ಷದ ಕಜ್ರಿಯ ಪ್ರಕರಣದಂತೆ ದೂರುಗಳು ದಾಖಲಾದಾಗಲೂ, ಸಂತ್ರಸ್ತರ ಪಾಲಿಗೆ ಕಾನೂನು ಪ್ರಕ್ರಿಯೆಯೇ ಶಿಕ್ಷೆಯಾಗುತ್ತದೆ. ಕಜ್ರಿಯವರನ್ನು 2010ರಲ್ಲಿ ಅಪಹರಿಸಿ ಕಳ್ಳಸಾಗಣೆಗೆ ಒಳಪಡಿಸಲಾಯಿತು. ನಂತರ ಅವರು ಬಾಲಕಾರ್ಮಿಕೆಯಾಗಿ ದುಡಿಯುವುದರ ಜೊತೆಗೆ ಲೈಂಗಿಕ ದೌರ್ಜನ್ಯಕ್ಕೂ ಒಳಗಾಗುತ್ತ ಹತ್ತು ವರ್ಷ ಕಳೆದರು. “ಈ ಪ್ರಕರಣದಿಂದಾಗಿ ನನಗೆ ಒಂದೇ ಸ್ಥಳದಲ್ಲಿ ಕೆಲಸ ಮುಂದುವರೆಸುವುದು ಕಷ್ಟವಾಗುತ್ತಿದೆ. ಕಜ್ರಿಯನ್ನು ಪೊಲೀಸ್ ಬಳಿ ಹೇಳಿಕೆ ಕೊಡಿಸಲು, ಪರೀಕ್ಷೆಗಳಿಗೆ ಕರೆದುಕೊಂಡು ಹೋಗಲು ಪದೇ ಪದೇ ಹೋಗಬೇಕಾಗುತ್ತದೆಯಾದ ಕಾರಣ ಪದೇ ಪದೇ ರಜೆ ತೆಗೆದುಕೊಳ್ಳಬೇಕಾಗುತ್ತದೆ. ಹೆಚ್ಚು ರಜೆ ಹಾಕಿದಾಗ ನನ್ನನ್ನು ಕೆಲಸದಿಂದ ತೆಗೆದುಹಾಕುತ್ತಾರೆ” ಎಂದು ಕಜ್ರಿಯ ತಂದೆ ಹೇಳುತ್ತಾರೆ.
ಆರಂಭಿಕ ಭಾರತದಲ್ಲಿ ಬ್ರಾಹ್ಮಣವಾದಿ ಪಿತೃಪ್ರಭುತ್ವದ ಪರಿಕಲ್ಪನೆ ಎಂಬ ಪ್ರಬಂಧದಲ್ಲಿ, ಪ್ರೊಫೆಸರ್ ಉಮಾ ಚಕ್ರವರ್ತಿ ಅವರು "ಪರಿಣಾಮಕಾರಿ ನಿಯಂತ್ರಣ ವ್ಯವಸ್ಥೆಯನ್ನು ರಚಿಸುವ ನಿರಂತರ ಗೀಳು ಮತ್ತು ಅವರನ್ನು [ಮಹಿಳೆಯರನ್ನು] ನಿರಂತರವಾಗಿ ರಕ್ಷಿಸುವ ಅಗತ್ಯ" ಬಗ್ಗೆ ಬರೆಯುತ್ತಾರೆ. ಪ್ರಬಂಧವು ಹೇಳುವಂತೆ, ಪಿತೃಪ್ರಭುತ್ವದ ಕಟ್ಟುಪಾಡುಗಳಿಗೆ ಅಡಿಯಾಳಾಗಿರುವ ಮಹಿಳೆಯರಿಗೆ ಬಹುಮಾನ ನೀಡುವ ಈ ನಿಯಂತ್ರಣವನ್ನು ಹೆಚ್ಚಾಗಿ ಕೈಗೊಳ್ಳಲಾಗುತ್ತದೆ. ಮಹಿಳೆಯರ ಚಲನಶೀಲತೆಯನ್ನು ಹಿಂಸಾತ್ಮಕವಾಗಿ ಮಿತಿಗೊಳಿಸುವ ನಿಯಂತ್ರಕ ಮಾನದಂಡಗಳು ಹೆಚ್ಚಾಗಿ ಮಹಿಳೆಯರ ಲೈಂಗಿಕತೆ ಮತ್ತು ಆರ್ಥಿಕ ಸ್ವಾತಂತ್ರ್ಯದ ಭಯದಲ್ಲಿ ಬೇರೂರಿವೆ. "ಈ ಮೊದಲು ಅವರು [ಆಕೆಯ ಅತ್ತೆ ಮಾವಂದಿರು] ನಾನು ಹಳ್ಳಿಯ ಗರ್ಭಿಣಿ ಮಹಿಳೆಯರನ್ನು ನೋಡಲು ಹೋದಾಗ ಅಥವಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ನಾನು ಬೇರೆ ಪುರುಷರನ್ನು ಭೇಟಿಯಾಗಲು ಹೋಗುತ್ತಿದ್ದೇನೆ ಎಂದು ಹೇಳುತ್ತಿದ್ದರು. ಆಶಾ ಕಾರ್ಯಕರ್ತೆಯಾಗಿ ಇದು ನನ್ನ ಕರ್ತವ್ಯ" ಎಂದು 30 ವರ್ಷದ ಗಿರಿಜಾ ಹೇಳುತ್ತಾರೆ. ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ನಿವಾಸಿಯಾದ ಗಿರಿಜಾ, ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ (ಆಶಾ) ಕೆಲಸವನ್ನು ತ್ಯಜಿಸುವಂತೆ ತನ್ನ ಅತ್ತೆ ಮಾವಂದಿರಿಂದ ಒತ್ತಡವನ್ನು ಎದುರಿಸುತ್ತಿದ್ದಾರೆ. "ನಿನ್ನೆ ನನ್ನ ಗಂಡನ ಅಜ್ಜ ನನ್ನನ್ನು ಲಾಠಿಯಿಂದ ಹೊಡೆದರು ಮತ್ತು ಉಸಿರುಗಟ್ಟಿಸಲು ಸಹ ಪ್ರಯತ್ನಿಸಿದರು" ಎಂದು ಅವರು ಹೇಳುತ್ತಾರೆ.
ಮಹಿಳೆಯರು ಕೆಲಸ ಮಾಡಿ ಹಣವನ್ನು ಸಂಪಾದಿಸಲು ಯಶಸ್ವಿಯಾದಾಗ, ಕೆಲಸದ ಸ್ಥಳದಲ್ಲಿನ ಕಿರುಕುಳವು ಅವರಿಗೆ ಎದುರಾಗುವ ಮುಂದಿನ ಲಿಂಗತ್ವದ ಅಡಚಣೆಯಾಗಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ವಲಯದ ಕಾರ್ಮಿಕರ ಸಮೀಕ್ಷೆಯ ಪ್ರಕಾರ, ಶೇಕಡಾ 17ರಷ್ಟು ಮಹಿಳಾ ಕಾರ್ಮಿಕರು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳನ್ನು ಎದುರಿಸಿರುವುದಾಗಿ ಹೇಳಿದ್ದಾರೆ. "ಪುರುಷ ವ್ಯವಸ್ಥಾಪಕರು, ಮೇಲ್ವಿಚಾರಕರು ಮತ್ತು ಮೆಕ್ಯಾನಿಕ್‌ಗಳು - ನಮ್ಮನ್ನು ಮುಟ್ಟಲು ಪ್ರಯತ್ನಿಸುತ್ತಿದ್ದರು ಮತ್ತು ನಮಗೆ ದೂರು ನೀಡಲು ಯಾವುದೇ ವ್ಯವಸ್ಥೆ ಇರಲಿಲ್ಲ" ಎಂದು ಗಾರ್ಮೆಂಟ್ ಉದ್ಯಮದ ಕಾರ್ಖಾನೆ ಕಾರ್ಮಿಕ ಲತಾ ಹೇಳುತ್ತಾರೆ (ಓದಿ: ದಿಂಡಿಗಲ್: ದಲಿತ ಮಹಿಳೆಯರು ಒಗ್ಗೂಡಿದಾಗ). ಮಹಿಳಾ ಕಾರ್ಮಿಕರ ಸಾಮೂಹಿಕ ಚೌಕಾಸಿ ಶಕ್ತಿಯನ್ನು ಬಲಪಡಿಸುವ ಗುರಿಯೊಂದಿಗೆ, ವಿಶಾಖ ಮಾರ್ಗಸೂಚಿಗಳು (1997) ದೂರು ಸಮಿತಿಯನ್ನು ರಚಿಸಲು ಸಂಸ್ಥೆಗಳಿಗೆ ಶಿಫಾರಸು ಮಾಡುತ್ತದೆ, ಅದು ಮಹಿಳೆಯ ನೇತೃತ್ವದಲ್ಲಿರಬೇಕು ಮತ್ತು ಅದರ ಅರ್ಧಕ್ಕಿಂತ ಕಡಿಮೆಯಿಲ್ಲದ ಮಹಿಳಾ ಸದಸ್ಯರನ್ನು ಹೊಂದಿರಬೇಕು. ಕಾಗದದ ಮೇಲೆ ಅಂತಹ ನಿರ್ದೇಶನಗಳ ಅಸ್ತಿತ್ವದ ಹೊರತಾಗಿಯೂ, ಅವುಗಳ ಅನುಷ್ಠಾನ ದುರ್ಬಲವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಕೆಲಸದ ಸ್ಥಳ ಮತ್ತು ಮನೆಗಳಿಗೆ ವ್ಯಾಪಿಸಿದೆ.