“ನಾವು ಎಲ್ಲಿಗೆ ಹೋಗುವುದಿದ್ದರೂ ಒಟ್ಟಿಗೆ ಹೋಗುತ್ತೇವೆ” ಎನ್ನುತ್ತಾರೆ ಗೀತಾ ದೇವಿ. ಹಾಗೆ ಹೇಳುವಾಗ ಅವರು ತನ್ನ ಪಕ್ಕದಲ್ಲಿ ನಿಂತಿದ್ದ ಗೆಳತಿ ಸಕುನಿಯ ಕಡೆಗೆ ಪ್ರೀತಿಯಿಂದ ನೋಡುತ್ತಿದ್ದರು.
ಈ ಇಬ್ಬರು ಗೆಳತಿಯರು ಹತ್ತಿರದ ಕಾಡಿನಿಂದ ಸಾಲ್ (ಶೋರಿಯಾ ರೊಬಸ್ಟಾ) ಎಲೆಗಳನ್ನು ಸಂಗ್ರಹಿಸುತ್ತಾರೆ. ಈ ಎಲೆಗಳಿಂದ ಅವರು ದೋನಾ (ತಟ್ಟೆ) ಮತ್ತು ಪತ್ತಲ್ (ಬಟ್ಟಲು) ತಯಾರಿಸಿ ಅದನ್ನು ಹತ್ತಿರದ ಡಾಲ್ಟನ್ ಗಂಜ್ ಎನ್ನುವ ಪಟ್ಟಣದಲ್ಲಿ ಮಾರಾಟ ಮಾಡುತ್ತಾರೆ. ಈ ಪಟ್ಟಣ ಪಲಾಮು ಜಿಲ್ಲಾ ಕೇಂದ್ರವೂ ಹೌದು.
ಗೀತಾ ಮತ್ತು ಸಕುನಿ ಇಬ್ಬರೂ ಕೊಪ್ಪೆ ಗ್ರಾಮದ ನಾಡಿತೋಲಾ ಎನ್ನುವ ಸಣ್ಣ ಊರಿನವರು. ಇವರಿಬ್ಬರು ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಾರೆ. ಜಾರ್ಖಂಡ್ ರಾಜ್ಯದ ಇತರ ಪ್ರಜೆಗಳಂತೆ ಗೀತಾ ಮತ್ತು ಸಕುನಿ ಕೂಡಾ ಜೀವನೋಪಾಯಕ್ಕಾಗಿ ಅರಣ್ಯವನ್ನೇ ಅವಲಂಬಿಸಿದ್ದಾರೆ.
ಕಾಡಿನಲ್ಲಿ ದಿನಕ್ಕೆ ಸುಮಾರು ಏಳರಿಂದ ಎಂಟು ಗಂಟೆಗಳಷ್ಟು ಸಮಯವನ್ನು ಕಳೆಯುವ ಅವರು ದನಗಳು ಮನೆಗೆ ಮರಳುವುದನ್ನು ಕಂಡು ಅವುಗಳೊಂದಿಗೆ ಮನೆಗೆ ಮರಳುತ್ತಾರೆ. ಅವರಿಗೆ ಸಾಕಷ್ಟು ಎಲೆಗಳನ್ನು ಸಂಗ್ರಹಿಸಲು ಎರಡು ದಿನ ಬೇಕಾಗುತ್ತದೆ. ದಿನ ಬೇಗನೆ ಕಳೆದುಹೋಗುತ್ತದೆ. ಅವರು ಕೆಲಸದ ನಡುವೆ ಸಣ್ಣ ವಿರಾಮ ಪಡೆದು ತಮ್ಮ ಕುಟುಂಬ ಮತ್ತು ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡುತ್ತಾರೆ.
ಪ್ರತಿದಿನ ಬೆಳಗ್ಗೆ ಗೀತಾ ಸಕುನಿಯವರ “ನಿಕಾಲಿಹೇ” ಎನ್ನು ದನಿ ಕೇಳುವುದನ್ನೇ ಕಾಯುತ್ತಿರುತ್ತಾರೆ. ನಂತರ ಅವರಿಬ್ಬರೂ ಕಾಡಿಗೆ ಹೊರಡುತ್ತಾರೆ. ಇಬ್ಬರೂ ಸಿಮೆಂಟ್ ಚೀಲವನ್ನು ಕತ್ತರಿಸಿ ತಯಾರಿಸಿದ ಚೀಲದಲ್ಲಿ ಪ್ಲಾಸ್ಟಿಕ್ಕಿನ ನೀರಿನ ಬಾಟಲಿ, ಸಣ್ಣ ಕೊಡಲಿ ಮತ್ತು ಹಳೆಯ ತುಂಡು ಬಟ್ಟೆ ತುಂಬಿಕೊಂಡು ಹೊರಡುತ್ತಾರೆ. ಅವರು ಜಾರ್ಖಂಡ್ ರಾಜ್ಯದ ಪಲಾಮು ಹುಲಿ ಮೀಸಲು ಅರಣ್ಯ ಪ್ರದೇಶದ ಬಫರ್ ವಲಯದಲ್ಲಿರುವ ಹೆಹೆಗಢ ಎನ್ನುವ ಕಾಡಿನತ್ತ ಹೊರಡುತ್ತಾರೆ.
ಇವರಿಬ್ಬರು ಗೆಳತಿಯರು ಬೇರೆ ಬೇರೆ ಸಮುದಾಯಗಳಿಗೆ ಸೇರಿದವರು. ಗೀತಾ ಭುಯಿಯಾ ದಲಿತ ಸಮುದಾಯಕ್ಕೆ ಸೇರಿದವರಾದರೆ ಸಕುನಿ ಒರಾಣ್ ಆದಿವಾಸಿ ಸಮುದಾಯಕ್ಕೆ ಸೇರಿದವರು. ನಾವು ಕಾಡಿನತ್ತ ನಡೆಯುತ್ತಿದ್ದರೆ ಗೀತಾ ಎಚ್ಚರಿಕೆಯೊಂದನ್ನು ನೀಡಿದರು: “ಇಲ್ಲಿಗೆ ಒಬ್ಬರೇ ಬರಬೇಡಿ. ಕೆಲವೊಮ್ಮೆ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ. ನಾವು ಇಲ್ಲಿ ತೆಂಡುವಾಗಳನ್ನು [ಚಿರತೆ] ನೋಡಿದ್ದೇವೆ!” ಇದರ ಜೊತೆಗೆ ಇಲ್ಲಿ ಹಾವು ಮತ್ತು ಚೇಳಿನ ಭಯವೂ ಹೆಚ್ಚು ಎನ್ನುತ್ತಾರೆ ಸಕುನಿ. ಪಲಾಮು ಹುಲಿ ಮೀಸಲು ಪ್ರದೇಶದಲ್ಲಿ 73 ಚಿರತೆಗಳು ಮತ್ತು ಸುಮಾರು 267 ಆನೆಗಳಿವೆ (2021ರ ವನ್ಯಜೀವಿ ಗಣತಿ).






















